Sunday, April 17, 2016

ಜಾಗತೀಕರಣ ಮತ್ತು ಸಂಗೀತ

ಭಾಸ್ಕರ ಚಂದಾವರ್ಕರ್ ಅವರ ಉಪನ್ಯಾಸಗಳ ಅನುವಾದವನ್ನು ವೈದೇಹಿಯವರು "ಸಂಗೀತ ಸಂವಾದ" ಎಂಬ ಹೆಸರಿನಲ್ಲಿ (ಅಕ್ಷರ ಪ್ರಕಾಶನ) ಪ್ರಕಟಿಸಿದ್ದು ಸಂಗೀತಪ್ರಿಯರಿಗೆಲ್ಲ ಅದು ಅಚ್ಚುಮೆಚ್ಚಿನ ಪುಸ್ತಕವಾಗಿರುವುದು ಗೊತ್ತೇ ಇದೆ. ಇಲ್ಲಿ ಚಂದಾವರ್ಕರ್ ಅವರ ಒಂದು ಉಪನ್ಯಾಸದ ಸಂಗ್ರಹಾನುವಾದವಿದೆ. ಜಾಗತೀಕರಣ ಮತ್ತು ಸಂಗೀತ - ಈ ವಿಷಯ ಕುರಿತಂತೆ ಬ್ರಹ್ಮಾವರದ ಎಸ್ ಎಂ ಎಸ್ ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ (ಜನವರಿ 22ರಿಂದ 27, 2005) ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ||ಭಾಸ್ಕರ ಚಂದಾವರ್ಕರ್ ಮಾತನಾಡಿದ್ದರ ನನ್ನ ಗ್ರಹಿಕೆ ಇದು. ಪ್ರಜಾವಾಣಿಗಾಗಿ ಒಂದು ಲೇಖನ ಬರೆಯುತ್ತ ಇದರ ನೆನಪಾಗಿ ಕೈಬರಹದಲ್ಲಿದ್ದ ಲೇಖನವನ್ನು ಓದುತ್ತಿದ್ದಂತೆ ಮತ್ತೆ ಇದನ್ನು ಆಸಕ್ತರೊಂದಿಗೆ ಹಂಚಿಕೊಳ್ಳಬೇಕು ಎನಿಸತೊಡಗಿತು. ಹೀಗಾಗಿ ಇದೀಗ ಇಲ್ಲಿ ಕಾಣಿಸಿಕೊಳ್ಳುತ್ತಿದೆ.

ಜಾಗತೀಕರಣ ಆ ದಿನಗಳಲ್ಲಿ (ಸುಮಾರು ದಶಕದ ಹಿಂದೆ) ಹುಟ್ಟಿಸಿದ ಆತಂಕ, ನಿರೀಕ್ಷೆಗಳೆಲ್ಲ ಇವತ್ತು ನಮಗೆ ಕಾಣಿಸುವ ಬಗೆ ಬೇರೆ. ಅದು ನಿಜಕ್ಕೂ ನಮ್ಮ ಬದುಕು ಮತ್ತು ಜೀವನ ಶೈಲಿಯನ್ನು ಆವರಿಸಿದ, ಒಂದಾದ ಸ್ವರೂಪ ಕಲ್ಪಿಸಿದ್ದಕ್ಕಿಂತ ಭಿನ್ನವಾಗಿರುವಂತೆಯೇ ಆದಿನಗಳಲ್ಲಿ ನಮ್ಮ ವಿಚಾರವಾದಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ವ್ಯಕ್ತಪಡಿಸಿದ ವಿಚಾರಗಳು ಇವತ್ತು ನಮಗೆ ಕಾಣಿಸುವ ಬಗೆ ಕೂಡ ವಿಭಿನ್ನವಾಗಿರುವುದು ಸಾಧ್ಯ. ಈ ಒಂದು ಎಚ್ಚರವನ್ನು ಇರಿಸಿಕೊಂಡೇ ಇಲ್ಲಿನ ಮಾತುಗಳನ್ನು ಕೇಳಿಸಿಕೊಂಡರೆ ಮುಂಗಂಡಿದ್ದು, ನಿಜವಾದದ್ದು ಎರಡರ ನಡುವಿನ ಅಂತರ್ ಸಂಬಂಧ ಕಾಣುವುದು ಸಾಧ್ಯವಾಗಬಹುದು.

******

ಈ ಜಾಗತೀಕರಣ ತೆರೆದಿರಿಸಿದ ಅವಕಾಶಗಳು ಮತ್ತು ಇದರಿಂದ ಸಂಕಟಕ್ಕೆ ಒಳಗಾದವರು - ಎರಡನ್ನೂ ಗಮನಿಸಬೇಕಾಗುತ್ತದೆ. ಇಲೆಕ್ಟ್ರಾನಿಕ್ ಮಾಧ್ಯಮದ ಅಭೂತಪೂರ್ವ ಬೆಳವಣಿಗೆ ಮತ್ತು ಡಂಕೆಲ್, ಗ್ಯಾಟ್, ಡಬ್ಲ್ಯೂಟಿಒಗಳಿಂದೆಲ್ಲ ಬೆಳೆದುಕೊಂಡು ಬಂದಿರುವ ವ್ಯಾಪಾರೀಕರಣ ಈ ಎರಡು ಈ ಜಾಗತೀಕರಣ ಪ್ರಕ್ರಿಯೆಯಲ್ಲಿ ಪ್ರಮುಖ ಅಂಶಗಳು.

ಒಂದು ಕಲೆಯನ್ನು ವ್ಯಾಪಾರೀಕರಣಕ್ಕೆ ಒಡ್ಡುವಾಗ ಮಾರಾಟಗಾರ ದೇಶದ ಸಂಸ್ಕೃತಿ ಮತ್ತು ಖರೀದಿಗಾರ ದೇಶದ ಸಂಸ್ಕೃತಿಗಳ ನಡುವಿನ ಸಂಘರ್ಷ ಪ್ರಮುಖ ತೊಡಕಾಗುತ್ತದೆ. ಅದಕ್ಕೇನು ಮಾಡಬೇಕು? ಖರೀದಿಗಾರದ ದೇಶದ ಸಂಸ್ಕೃತಿಯನ್ನು ಮಾರಾಟಗಾರ ದೇಶದ ಸಂಸ್ಕೃತಿಗೆ ಹೊಂದುವಂತೆ ಬದಲಾಯಿಸಬೇಕಾಗುತ್ತದೆ. ಯಾಕೆ ಖರೀದಿಗಾರ ದೇಶದ ಸಂಸ್ಕೃತಿಯನ್ನೆ ಮಾರಾಟಗಾರ ದೇಶ ತನ್ನ ವ್ಯಾಪಾರದ ಸರಕನ್ನಾಗಿಸಿಕೊಳ್ಳಬಾರದು ಎಂಬ ಪ್ರಶ್ನೆಗೆ ಆಮೇಲೆ ಬರೋಣ. ಮಾರುವವ ತನ್ನ ದೇಶದ ಕಲೆಯನ್ನೆ ಭಿನ್ನ ದೇಶದ ಕೊಳ್ಳುಗ ಕೊಂಡುಕೊಳ್ಳುವಂತೆ ಮಾಡಬೇಕಾದರೆ ತನ್ನ ದೇಶದ ಸಂಸ್ಕೃತಿಯನ್ನೆ ಕೊಳ್ಳುಗನ ಮನಸ್ಸಿನ ಮೇಲೆ ಭವ್ಯವಾಗಿ ಬಿಂಬಿಸಿ ಮೇಲುಗೈ ಸಾಧಿಸಬೇಕಾಗುತ್ತದೆ. ಇದಕ್ಕೆ ಜಾಹೀರಾತು ಅಗತ್ಯವಾಗುತ್ತದೆ. ಟೀವಿಯಂಥ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಇದು ಸುಲಭ ಮತ್ತು ಪರಿಣಾಮಕಾರಿಯಾಗಿ ಸಾಧಿಸಲ್ಪಡುತ್ತದೆ.

ಪ್ರಪಂಚದಾದ್ಯಂತ ವ್ಯಾಪಕವಾಗಿ ಜನರನ್ನು ತಲುಪುತ್ತಿರುವ ಹಾಲಿವುಡ್ ಸಿನಿಮಾಗಳ ಜನಪ್ರಿಯತೆ ಇದಕ್ಕೆ ಒಂದು ಉತ್ತಮ ಉದಾಹರಣೆ. ವಿಪರ್ಯಾಸವೆಂದರೆ ಮಹಾರಾಷ್ಟ್ರದ ಸಂಸ್ಕೃತಿ ರಕ್ಷಕ ವೇದಿಕೆ ಫ್ಯಾಸಿಸ್ಟ್ ವಿರೋಧಿ ನಿಲುವನ್ನು ಬಿಂಬಿಸಲು ಬಳಸಿಕೊಂಡ ಚಾರ್ಲಿಚಾಪ್ಲಿನ್ ಚಿತ್ರ ಕೂಡ ನಮಗೆ ಪರಿಚಿತಗೊಂಡಿರುವುದು ಅಮೆರಿಕನ್ ಸಿನಿಮಾಗಳಿಂದಲೇ ಆಗಿರುವುದು. ಇದೆಲ್ಲ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲೇ ಆದ ಬೆಳವಣಿಗೆಗಳು. ನಂತರ, ಐವತ್ತರ ದಶಕದಲ್ಲಿ ಉಪಗ್ರಹಗಳ ಬಳಕೆ ಸುರುವಾಯಿತು. ಅರವತ್ತರ ದಶಕದಲ್ಲಿ ಅರ್ಲಿಬರ್ಡ್‌ನಂಥ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನಕ್ಕೇ ಮೀಸಲಾದ ಉಪಗ್ರಹಗಳು ಬಂದವು. 1992ರಲ್ಲಂತೂ ಈ ಜಾಗತೀಕರಣದ ಪ್ರಕ್ರಿಯೆಗಳು ಎಲ್ಲ ಬಗೆಯಲ್ಲೂ ಚುರುಕುಗೊಂಡಿದ್ದವು.

ಆದರೆ ನಾವೇಕೆ ಜಾಗತೀಕರಣದ ಬಗ್ಗೆ ಚಿಂತಿತರಾಗಬೇಕು? ಜಾಗತೀಕರಣದಿಂದ ನಮಗೂ ಕೆಲವಾದರೂ ಲಾಭವಿಲ್ಲವೆ, ಒಳಿತು ಸಾಧ್ಯವಿಲ್ಲವೆ? ಯಾಕೆ ಈ ಪ್ರತಿರೋಧ? ಎಂಬ ಪ್ರಶ್ನೆಗಳೂ ಇವೆ.

ಈ ಜಾಗತೀಕರಣ ತೆರೆದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೇವಲ ವಸ್ತುಗಳ ಮತ್ತು ಸೇವೆಗಳ ವ್ಯಾಪಾರವಷ್ಟೇ ನಡೆಯುವುದಲ್ಲ. ಇಲ್ಲಿ ಯೋಜನೆಗಳ, ಚಿಂತನೆಗಳ, ಅಭಿವ್ಯಕ್ತಿವಾಹಿನಿಗಳ, ಕಲೆ-ಸಂಸ್ಕೃತಿಯ ಪ್ರತಿಬಿಂಬಗಳ ವ್ಯಾಪಾರ ನಡೆಯುತ್ತದೆ. ಇದು ಒಂದು ಹಂತದಲ್ಲಿ ಸ್ವತಂತ್ರವಾಗಿ ಚಿಂತಿಸುವ, ಯೋಚಿಸುವ ಅಗತ್ಯವನ್ನು ಸಹ ನಿವಾರಿಸುವುದರಿಂದ ನಮ್ಮನ್ನೆಲ್ಲ ನಮ್ಮ ಅರಿವಿಗೇ ಬರದಂತೆ ಬದಲಾಯಿಸಿ ಬಿಟ್ಟಿರುತ್ತದೆ.

ಮದರ್ಸ್‌ಡೇಯಂಥ ಒಂದು ಸಂದರ್ಭಕ್ಕೆ ನೀವು ಈ ಹಾಲ್‌ಮಾರ್ಕ್ ಗ್ರೀಟಿಂಗ್ಸ್ ಕಾರ್ಡ್ಸ್‌ಕೊಳ್ಳಲು ಹೋದರೆ ಏನನ್ನು ನೋಡಿ ಆಯ್ಕೆ ಮಾಡುತ್ತೀರಿ? ವರ್ಡಿಂಗ್ಸ್. ಅಲ್ಲಿ ಎಂಥಾ ವರ್ಡಿಂಗ್ಸ್ ನಿಮಗಾಗಿ ತಯಾರಾಗಿ ಕಾದಿರುತ್ತದೆಂದರೆ ಅದನ್ನು ಓದಿದ್ದೇ ನಿಮಗೆ, ಓಹ್, ಸ್ಥೂಲವಾಗಿ ನಾನು ನನ್ನ ಅಮ್ಮನಿಗೆ ಇದನ್ನೇ ಹೇಳಬೇಕೆಂದಿರುವುದಲ್ಲವೆ ಎನಿಸಿಬಿಡುತ್ತದೆ. ಅಂದರೆ, ಯಾರದೋ ಒಂದು ರೆಡಿಮೇಡ್ ಮಾತು ನಿಮ್ಮ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ಎನಿಸುತ್ತದೆ ನಿಮಗೆ. ಅದೇ ರೀತಿ ಒಂದು ಸಂಗೀತ ಕೇಳಿದಾಗ ಅದೇ ನಿಮಗೆ ಬೇಕೆನಿಸಿದ್ದ, ನೀವು ಬಯಸಿದ್ದ, ಹುಡುಕುತ್ತಿದ್ದ, ಸ್ವತಃ ಸೃಜಿಸಲು ಬಯಸಿದ್ದ ಸಂಗೀತ ಎನಿಸತೊಡಗುತ್ತದೆ. ಹೀಗೆ ಎಲ್ಲೋ ಒಂದು ಕಡೆ ನಮಗೆ ಮಾರಲ್ಪಡಲು ಸಿದ್ಧವಾಗಿ ಕೂತ ಒಂದು ವಸ್ತುವೇ ನಮ್ಮನ್ನು ಬದಲಾಯಿಸಿಬಿಟ್ಟಿರುತ್ತದೆ, ನಮಗೇ ತಿಳಿಯದ ಹಾಗೆ. ಇದು ನಮ್ಮ ಪರಾವಲಂಬಿತನಕ್ಕೆ ಕಾರಣವಾಗುವುದು ಹೀಗೆ. ಇಲ್ಲಿ ಪ್ರತಿರೋಧದ ಅಗತ್ಯವಿದೆ ಅನಿಸುವುದಿಲ್ಲವೆ? ಡಾ||ಯು.ಆರ್.ಅನಂತಮೂರ್ತಿಯವರು ಹೇಳಿದಂತೆ ನಮ್ಮ ಅಭಿರುಚಿ ಬದಲಾಗುವಾಗಲೂ ಅದು ತನ್ನ ಪ್ರಶ್ನಿಸುವ ಪ್ರಜ್ಞೆ ಮತ್ತು ಶಕ್ತಿಯನ್ನು ಕಳೆದುಕೊಂಡು ಮೊಂಡಾಗಬಾರದಲ್ಲವೆ?

ಸಾವರ್ಕರ್ ಒಂದು ಸಂಸ್ಕೃತ ಶ್ಲೋಕದಲ್ಲಿ ಕೋರುತ್ತಿದ್ದ ಸ್ವಾತಂತ್ರ್ಯ, ತಿಳಿವಿನ, ಅರಿವಿನ ಸ್ವಾತಂತ್ರ್ಯ, ನಮ್ಮ ಯೋಗಿಗಳು ಬಯಸುತ್ತಿದ್ದ ಮುಕ್ತಿ ಎಂದರೆ ಇದೇ ಎಂದು ನಾನು ತಿಳಿದಿದ್ದೇನೆ. ಇದು ಫ್ರೀಡಮ್, ಇದು ಇಂಡಿಪೆಂಡೆನ್ಸ್.

ಈಗ ಸಂಗೀತಕ್ಕೆ ಬರುತ್ತೇನೆ. ಏನು ಸಂಗೀತವೆಂದರೆ? ಅದು ಶಬ್ದದಿಂದ, ಸ್ವರದಿಂದ, ನಾದದಿಂದ ಸಂಪೂರ್ಣ ಭಿನ್ನವಾದ ಯಾವುದೋ ಒಂದು ಅದ್ಭುತದ ನಿರಂತರ ಹುಡುಕಾಟ, ಶೋಧ ಮತ್ತು ಸೃಷ್ಟಿಯ ಪ್ರಯತ್ನ. ನಾದ, ಸ್ವರ ಅದರ ಒಂದೊಂದು ವಿಭಿನ್ನ ಲಯದಲ್ಲೂ ಇಂಥ ಸಾಧನೆಯ ಪಥ ಕಾಣುತ್ತದೆ. ನಾವೇಕೆ ಸಂಗೀತವನ್ನು ಸೃಜಿಸುತ್ತೇವೆ? ಅದರಿಂದ ನಾವು ಏನೊಂದು ಅರ್ಥಪೂರ್ಣ ಸಂವಹನಕ್ಕೆ ಯತ್ನಿಸುತ್ತಿದ್ದೇವೆಯೆ? ನಾವು ಎಷ್ಟೋ ಬಾರಿ ಒಬ್ಬರೇ, ನಮ್ಮಷ್ಟಕ್ಕೆ ನಾವೇ ಏನನ್ನೋ ಗುನುಗುತ್ತಿರುತ್ತೇವಲ್ಲ? ಹಾಗಾದರೆ ಅದು ಯಾರೊಂದಿಗೆ ನಡೆಸುತ್ತಿರುವ ಸಂವಾದ? ನಮ್ಮೊಳಗೆ ನಾವು ಒಬ್ಬರೇ ಆಗಿರದೆ ಇಬ್ಬರಾಗಿದ್ದೇವೇನು? ಅವರಲ್ಲೊಬ್ಬ ತನ್ನ ತಳಮಳ, ತುಮುಲ, ಒಳತೋಟಿಗಳಿಗೆ ಸಂಗೀತದ ನೆರವು ಪಡೆದು ಅವನ್ನೆಲ್ಲ ಆ ಇನ್ನೊಬ್ಬನೊಂದಿಗೆ ಹಂಚಿಕೊಂಡು ಸಮಾಧಾನ ಪಡೆಯುತ್ತಿದ್ದಾನೇನು?

ಕುತೂಹಲಕರ. ನಾದಕ್ಕಿರುವ ಶಕ್ತಿಯೇ ಅಂಥದು. ಅದಕ್ಕೆ ಸಾರ್ವಜನಿಕವಾದ, ಸಾರ್ವತ್ರಿಕವಾದ ಅರ್ಥಸಾಧ್ಯತೆಗಳಿಲ್ಲದಿರಬಹುದು. ಅದು ಯಾರೊಬ್ಬನೊಂದಿಗೂ ನಡೆಸುತ್ತಿರುವ ಸಂವಾದ ಆಗಿಲ್ಲದಿರಬಹುದು. ಯಾರೊಬ್ಬನನ್ನೂ ಉದ್ದೇಶಿಸಿಯೂ ಅದು ಹೊರಟಿದ್ದಲ್ಲದಿರಬಹುದು. ಆದಾಗ್ಯೂ ಅದು ತನ್ನೊಂದಿಗೇ ನಡೆಯುತ್ತಿರಬಹುದು. ತನ್ನನ್ನೇ ಅರಿಯುವುದು ಅದರ ಗಮ್ಯವಿರಬಹುದು.

ಭಾಷೆಗೂ ನಿಲುಕದ ಅಮೂರ್ತ ಭಾವವೊಂದರ, ಯೋಚನೆಯೊಂದರ ಅಭಿವ್ಯಕ್ತಿಯಾಗಿಯೂ, ಭಾಷೆಯಲ್ಲಿ ವ್ಯಕ್ತಪಡಿಸಲಾರದ ಒಂದು ಲೋಕದ ಮಾತುಗಳಾಗಿ ಸಂಗೀತ ಹೊರಹೊಮ್ಮುತ್ತಿರಬಹುದು. ಭಾಷಾ ಜಗತ್ತಿಗೆ ಅನೂಹ್ಯವೂ, ಅಗಮ್ಯವೂ ಆದ ಸುಪ್ತ ಲೋಕವೊಂದರ ಅನಾವರಣ ಸಂಗೀತದಿಂದ ಸಾಧ್ಯವಾಗಬಹುದು. ಪ್ರತಿ ಶಿಶುವೂ ಈ ಜಗತ್ತಿಗೆ ಬಂದ ಪ್ರಥಮತಃ ತನ್ನ ಮೊದಲ ಉಸಿರೆಳೆದುಕೊಳ್ಳುವುದು ಒಂದು ಶಬ್ದದ ಮೂಲಕ. ಅದರ ಮುಖೇನ ಅದು ಈ ಜಗತ್ತಿಗೇ ತನ್ನ ಮೊದಲ ಸಂದೇಶ, ತಾಯ್ತಂದೆಗೆ, ಬಳಗಕ್ಕೆ ಎಲ್ಲ "ನಾನು ಬಂದಿದ್ದೇನೆ" ಎಂಬ ದಿವ್ಯವಾದ ಸಂದೇಶವನ್ನು ನೀಡುತ್ತದೆ. ನಮ್ಮ ಧ್ವನಿಲೋಕದ ಪದರಗಳ ಸ್ಪಂದನದೊಂದಿಗೇ ನಮ್ಮ ಬದುಕು ಈ ಭುವಿಯಲ್ಲಿ ಆರಂಭಗೊಳ್ಳುತ್ತದೆ. ಮಗು ತನ್ನ ಭಾಷೆಯನ್ನು ಕಲಿಯುವುದಕ್ಕೂ ಮುನ್ನ ತನ್ನ ಬೇಕು ಬೇಡಗಳನ್ನು ತಿಳಿಸಲು, ತನ್ನ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಈ ಶಬ್ದಲೋಕದ ಸ್ವರ-ಅನುಸ್ವರಗಳನ್ನೇ ಬಳಸುತ್ತದೆ. ಅದರ ಲಯ, ನಾದ, ವೈವಿಧ್ಯಮಯ ವಿನ್ಯಾಸಗಳನ್ನರಿತೇ ತಾಯಿ ಅದರೊಂದಿಗೆ ವ್ಯವಹರಿಸುತ್ತಾಳೆ. ಶಬ್ದದ ಎಲ್ಲಾ ಮಜಲುಗಳಲ್ಲಿ ಮಗು ತನ್ನದೇ ಆದ ಭಾಷೆಯನ್ನು ರೂಪಿಸಿಕೊಳ್ಳುತ್ತದೆ. ಅದರ ನಾದವನ್ನು, ಲಯವನ್ನು, ಮಾಧುರ್ಯವನ್ನು ಗಮನಿಸಿ. ಹೀಗೆ ಸಂಗೀತ ಭಾಷೆಗಿಂತ ಮೊದಲೇ ನಮ್ಮ ಬದುಕಿಗೆ ಬಂದಿರುತ್ತದೆ. ಅದರಲ್ಲಿ ನಮ್ಮ ವ್ಯಕ್ತಿಗತ ಅಂಶಗಳೆಲ್ಲ ಇದ್ದು ವ್ಯಕ್ತಿತ್ವದ ಅಚ್ಚು ಅಲ್ಲಿಯೇ ರೂಪುಗೊಂಡಿರುತ್ತದೆ. ಹಾಗಿರುತ್ತ ನಮ್ಮನ್ನು ನೀವು ನಮ್ಮ ಸಂಗೀತದಿಂದ ಬೇರ್ಪಡಿಸಿದರೆ ಅದು ನಮ್ಮನ್ನು ನಮಗೇ ವಿಶಿಷ್ಟವಾದ ನಮ್ಮತನದಿಂದ ಬೇರ್ಪಡಿಸಿದಂತಾಗುವುದಿಲ್ಲವೆ?

ವರ್ಷಗಟ್ಟಲೆ ಎಲ್ಲೋ ಬೇರೆ ದೇಶದಲ್ಲಿ ನೆಲೆಗೊಂಡು, ಜೀವನ ನಡೆಸಿದವರಿಗೂ ತಮ್ಮದೇ ನೆಲದ ಒಂದು ಸಂಗೀತದ ಪಲಕು ಕಿವಿಗೆ ಬಿದ್ದಾಗ ಅದು ಅವರನ್ನು ರೋಮಾಂಚನಗೊಳಿಸಬಲ್ಲದು. ಅದು ಕಿವಿಯ ಮೇಲೆ ಬಿದ್ದಾಗ ಇಡೀ ದೇಹ-ಮನಸ್ಸು ಸಂಚಲನಗೊಳಿಸಬಲ್ಲದು. ಅದ್ಯಾವ ಶಕ್ತಿ ಸಂಗೀತದ್ದು!

ಸಂಗೀತ ಮತ್ತು ಸಂಗೀತದಿಂದ ಮಾತ್ರವೇ ಸೃಜಿಸಬಹುದಾದ ಅತ್ಯಂತ ಸುಂದರವಾದ ಅವೆಷ್ಟೋ ಸಾಧ್ಯತೆಗಳನ್ನೇ ನಾವು ಅಪಾಯಕ್ಕೊಡ್ಡಿದ್ದೇವೆ ಇವತ್ತು. ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ನಾವು. ಇದು ಪ್ರತಿರೋಧದ ನೆಲೆ.

ನಿಮಗೆ ಗೊತ್ತೆ, ಇವತ್ತು ಸಂಗೀತ ಒಬ್ಬ ಹಾಡುಗಾರ, ಸಂಗೀತಗಾರ ತನ್ನ ಶ್ರೋತೃವರ್ಗದೆದುರು ಸೃಜಿಸುವ ಕಲೆಯಾಗಿ ಉಳಿದೇ ಇಲ್ಲ. ಸಂಗೀತ ಕಚೇರಿಗಳ, ಕಾರ್ಯಕ್ರಮಗಳ ಕಾಲ ಸರಿದು ಹೋಗುತ್ತಿದೆ. ನಾವು ಇವತ್ತು ಕೇಳುವ ಸಂಗೀತದ ಶೇಕಡಾ 95ರಷ್ಟು ಸಂಗೀತ ರೆಕಾರ್ಡ್ ಮಾಡಲ್ಪಟ್ಟಿದ್ದು. ಕ್ಯಾಸೆಟ್ಟುಗಳಲ್ಲಿ, ಸೀಡಿಗಳಲ್ಲಿ ಸಂಗೀತ ಸುಲಭ ಲಭ್ಯವಾಗಿದ್ದೇ ನಾವೆಲ್ಲ ಸಂಗೀತವನ್ನು, ಅದರ ಜೀವಂತಿಕೆಯ ಹಂಗು ತೊರೆದವರಂತೆ ಕಚೇರಿಗಳನ್ನು, ಸಂಗೀತಗಾರರ ಪ್ರಾಯೋಗಿಕ ಸಾಧ್ಯತೆಗಳನ್ನು, ಅದು ನೀಡಬಹುದಾದ ಹೊಸಹೊಸ ಒಳನೋಟಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಟ್ಟಿದ್ದೇವೆ. ಸಂಗೀತ ಒಂದು ಸಮುದಾಯದ ವಿದ್ಯಮಾನವಾಗಿ ಪರಿಗಣಿಸಲ್ಪಡುತ್ತಿದ್ದ ಕಾಲ ಇತಿಹಾಸಕ್ಕೆ ಸೇರುತ್ತಿದೆ. ವ್ಯಕ್ತಿಗತ ಜಗತ್ತು ತನ್ನ ಇನ್ನೊಂದು ಅರ್ಥದಲ್ಲಿ ವಿಪರೀತ ಸ್ವಾರ್ಥಮಯ ಜಗತ್ತು ಕೂಡ ಆಗಿರಲು ಸಾಧ್ಯವಿದೆ. ವ್ಯಕ್ತಿ ಇವತ್ತು ಹೆಚ್ಚು ಹೆಚ್ಚು ಸ್ವ-ಕೇಂದ್ರಿತನಾಗುತ್ತ ಸಮುದಾಯದೊಂದಿಗೆ ಬೆರೆತು, ಕೂತು ಸಂಗೀತವನ್ನು ಆಸ್ವಾದಿಸುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ. ಕಿವಿಗಳಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಒಬ್ಬನೇ ಆಸ್ವಾದಿಸುವ ಒಂದು ಸರಕಾಗಿ ಸಂಗೀತ ಪರಿಗಣಿಸಲ್ಪಡುತ್ತಿದೆ. ಅವನಿಗೆ ತನ್ನ ಸಂತೋಷವನ್ನು ಸಮುದಾಯದೊಂದಿಗೆ ಹಂಚಿಕೊಳ್ಳುತ್ತ ಆಸ್ವಾದಿಸುವುದು ಬೇಡವಾಗುತ್ತಿದೆ. ಇದರಿಂದಾಗಿ ಸಂಗೀತಗಾರನಿಗೆ ಭಿನ್ನ ರುಚಿಯ ವಿಭಿನ್ನ-ವಿಶಿಷ್ಟ ಶ್ರೋತೃವರ್ಗ ಕಾಣಿಸುತ್ತಿಲ್ಲ, ಆ ಮುಖಾಮುಖಿ ಸಾಧ್ಯವಾಗುತ್ತಿಲ್ಲ. ಇದು ತನ್ನದೇ ಆದ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದಾಗಿದೆ.

ಕಂಪೆನಿಗಳ ಪ್ರಾಥಮಿಕ ಕಾಳಜಿ ಲಾಭವೇ ಆಗಿರುವುದು ಸಹಜ. ಹಾಗಾಗಿ ಅವು ಹೆಚ್ಚು ಹೆಚ್ಚು ಲಾಭಗಳಿಸುವುದಕ್ಕೆ ಏನೇನು ಮಾಡಬೇಕು ಎಂಬುದರತ್ತವೇ ತಮ್ಮ ಕೇಂದ್ರಗಮನ ಹರಿಸುತ್ತವೆ. ಜನಪ್ರಿಯವಾದ ಸಂಗತಿಗಳನ್ನೇ ಇವು ಆಯ್ಕೆ ಮಾಡಿಕೊಂಡು, ಟೀವಿಯಂಥ ಪ್ರಬಲ ಆಕರ್ಷಕ ಮಾಧ್ಯಮವನ್ನು ಬಳಸಿಕೊಂಡು ತಮ್ಮ ಉದ್ದೇಶ ಈಡೇರಿಕೆಗೆ ಅಗತ್ಯವಾದುದನ್ನು ಮಾಡುತ್ತಿವೆ. ಆಗಸ್ಟ್ 1982ರಲ್ಲಿ ರೇಗನ್ ಅಮೆರಿಕದ ಅಧ್ಯಕ್ಷನಾಗಿದ್ದಾಗ ಅಂತರ್ರಾಷ್ಟ್ರೀಯ ಉಪಗ್ರಹ ಚಾನೆಲ್ ಒಂದರ ಉಗಮವಾಯಿತು. ಅದು ಅಮೆರಿಕದ ಮೇಲ್ಮೈಯನ್ನು ಸಾರುವುದಕ್ಕಾಗಿಯೇ ಹುಟ್ಟಿಕೊಂಡ ಎಂಟೀವಿ. ಅದೀಗ ಏನೇನೆಲ್ಲ ಮಾಡಿಬಿಟ್ಟಿದೆ ಎಂದು ನಾವೆಲ್ಲ ಬಲ್ಲೆವು. ಸಂಗೀತ ಇವತ್ತು ಕೇವಲ "ಕೇಳುವ" ಕಲಾಭಿವ್ಯಕ್ತಿಯಾಗಿ ಉಳಿದೇ ಇಲ್ಲ. ಸಾಧ್ಯವಾದಷ್ಟೂ ಕಡಿಮೆ ಬಟ್ಟೆತೊಟ್ಟ ನೃತ್ಯಗಾತಿಯರು, ಜಗಮಗಿಸುವ ಸದಾ ಅಕರಾಳ ವಿಕರಾಳ ಚಲಿಸುವ ಬಣ್ಣಬಣ್ಣದ ಸ್ಪಾಟ್‌ಲೈಟುಗಳು, ಕಣ್ಣು ನೋಡಿ ಮನಸ್ಸು ಪೂರ್ತಿಯಾಗಿ ಗ್ರಹಿಸುವ ಮೊದಲೇ ತೆರೆಯಿಂದ ಚಕಚಕನೆ ಮಾಯವಾಗುವ ಶಾಟ್‌ಗಳು, ದೇಹವನ್ನು ಚಿತ್ರವಿಚಿತ್ರವಾಗಿ ಕುಲುಕಿಸುವ ಪ್ರಚೋದನಕಾರಿ ನೃತ್ಯದ ಒಂದು ಮಾಯಾಲೋಕದ ದೃಶ್ಯಗಳಲ್ಲಿ ದಿನದ ಇಪ್ಪತ್ತನಾಲ್ಕು ತಾಸೂ ಬಿತ್ತರಗೊಳ್ಳುತ್ತಲೇ ಇರುವುದೆಲ್ಲ ಸಂಗೀತ. ಈ ಚಾನೆಲ್‌ನ ಸಂಗೀತದ ವ್ಯಾಖ್ಯಾನ ಇದು. ಇದನ್ನೆ ಅನುಸರಿಸುತ್ತಿರುವವರಿಗೆ ಲೆಕ್ಕವಿಲ್ಲ ಬಿಡಿ. ಅಮೆರಿಕದ ಸಂಗೀತವನ್ನು ಮಾರುವುದಕ್ಕೆ ಇದೆಲ್ಲ ಅಗತ್ಯ. ಅದನ್ನು ಬಿಟ್ಟು ನಮ್ಮ ಖ್ಯಾತಿವೆತ್ತ ರಾಷ್ಟ್ರೀಯ ಸಂಗೀತಗಾರರನ್ನು ಹೀಗೆ ಅಲ್ಲಲ್ಲಿ ತೇಪೆ ಹಾಕಿಕೊಂಡಂತಿರುವ, ವಿಲಕ್ಷಣ ವಸ್ತ್ರಗಳಲ್ಲಿ ಕಣ್ಣುಕುಕ್ಕುವಂತೆ ತೋರಿಸಲು ಸಾಧ್ಯವಿದೆಯೆ? ಅಥವಾ ಕುಮಾರ ಗಂಧರ್ವರ, ಇಲ್ಲವೆ ಭೀಮಸೇನ ಜೋಶಿಯವರ ಒಂದು ತಾನನ್ನು ಹೀಗೆ ತುಂಡು ತುಂಡಾಗಿ ಅರ್ಧ ಮುಕ್ಕಾಲು ಸೆಕೆಂಡುಗಳ ಶಾಟ್‌ಗಳಲ್ಲಿ ತೋರಿಸಲು ಸಾಧ್ಯವಿದೆಯೆ? ಜಾಹೀರಾತಿಗೂ ಇವೆಲ್ಲ ಹೊಂದಲಾರದ ಸರಕುಗಳಾಗಿ ಕಾಣುವುದಿಲ್ಲವೆ?

ಹೇಗೆ ಐದು ದಿನಗಳ ಆಟವಾಗಿದ್ದ ಇಂಗ್ಲೆಂಡಿನ ಕ್ರಿಕೆಟನ್ನು ಇವರು ಒಂದು ದಿನದ, ಅಲ್ಲಿಂದ ಇಪ್ಪತ್ತು ಓವರುಗಳ ಆಟವನ್ನಾಗಿ ಪರಿವರ್ತಿಸಿಬಿಟ್ಟು ಇಂಗ್ಲೆಂಡ್ ಕೂಡ ಅದನ್ನು ಒಪ್ಪಿಕೊಳ್ಳುವಂತೆ, ಆಟದ ನಿಯಮಾವಳಿಗಳನ್ನೆಲ್ಲ, ರೂಢಿಗತ ಕ್ರಮಗಳನ್ನೆಲ್ಲ ಬದಲಾಯಿಸಿಕೊಳ್ಳುವಂತೆ ಮಾಡಿದರು ನೋಡಿ.

ಯಶಸ್ಸನ್ನು ಜನಪ್ರಿಯತೆಯೊಂದಿಗೆ ತಳುಕು ಹಾಕಿದ ಪರಿಣಾಮವೆಂದರೆ ಯಶಸ್ವಿಯಾಗುವುದೆಂದರೆ ಜನಪ್ರಿಯವಾಗುವುದು ಅಥವಾ ಜನಪ್ರಿಯವಾದದ್ದೆಲ್ಲ ಯಶಸ್ವಿ ಎಂಬ ನಿರ್ಣಯಕ್ಕೆ ಬಂದಂತಿದೆ ನಾವೆಲ್ಲ. ಇದು ಜಾಗತೀಕರಣದ ಕೇಂದ್ರ ಆಸಕ್ತಿಯನ್ನು ಸೆಳೆಯುವ ಅಂಶ. ಹೀಗೆ ಇವತ್ತು ಇಟಾಲಿಯನ್ ಪಿಜ್ಜಾವನ್ನ ಅದರ ತಯಾರಿಯಲ್ಲಿ ಅಗ್ರಗಣ್ಯರಾಗಿದ್ದ ಇಟಾಲಿಯನ್ನರಿಗೇ ಮಾರುತ್ತಾ ಇವೆ ಅಮೆರಿಕನ್ ಕಂಪೆನಿಗಳು. ಮಾತ್ರವಲ್ಲ ಜಗತ್ತಿಗೇ ಈ ಪಿಜ್ಜಾ ಪ್ರಚುರಗೊಂಡಿದೆ. ಒಬ್ಬ ರೆಡಿಮೇಡ್ ಪ್ಯಾಂಟುಕೊಳ್ಳಲು ಹೋಗುತ್ತಾನೆ. ಅವನಿಗೆ ಹೊಂದಿಕೆಯಾಗದ ನಾಲ್ಕಾರು ಪ್ಯಾಂಟುಗಳ ಟ್ರಯಲ್ ನಡೆಸಿ ಕೊನೆಗೂ ಒಂದು ಪ್ಯಾಂಟು ಹೇಳಿ ಮಾಡಿಸಿದ ಹಾಗೆ ಹೊಂದಿಕೊಳ್ಳುತ್ತದೆ. ಅದಕ್ಕಾತ ಹಣ ಪಾವತಿಸಿ ಹೊರಬಂದ ಮೇಲೆ ತಿಳಿಯುತ್ತದೆ, ತಾನು ತನ್ನ ಹಳೆಯ ಪ್ಯಾಂಟನ್ನೇ (ಟ್ರಯಲ್‌ಗಾಗಿ ಕಳಚಿದ್ದು) ಹಣ ಕೊಟ್ಟು ಕೊಂಡುಕೊಂಡಿದ್ದೇನೆ ಎಂಬ ಪರಮಸತ್ಯ! ಜಾಗತೀಕರಣ ನಮ್ಮನ್ನು ಇಂಥ ಭ್ರಾಂತಿಗೆ ತಳ್ಳುತ್ತಿದೆಯೆ?

ಇದು ಕೇವಲ ಸಾಂಸ್ಕೃತಿಕ ವಿಸ್ಮೃತಿಯಾಗಿರದೆ ಅದರಾಚೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿಲ್ಲವೆ?

ನಾವು ನಮ್ಮ ಭೌತಿಕ ವ್ಯಾಪ್ತಿಯನ್ನು ಸವಿಸ್ತಾರವಾಗಿ ಹೆಚ್ಚಿಸಿಕೊಂಡಿದ್ದೇವೆ ನಿಜ. ಆದರೆ ನಮ್ಮ ಸಮಯಾವಕಾಶ ಮಾತ್ರ ಬಹಳಷ್ಟು ಕುಗ್ಗಿಬಿಟ್ಟಿದೆ. ಇವತ್ತು ನಮಗೆ ಯಾವುದಕ್ಕೂ ಸಮಯವಿಲ್ಲವಾಗಿಬಿಟ್ಟಿದೆ. ನಮಗೆ ಇವತ್ತು ಅಮೆರಿಕದಲ್ಲಿ ಏನಾಗುತ್ತಿದೆ ಎಂಬುದು ಗೊತ್ತು. ಆದರೆ ನಮ್ಮ ಆಸುಪಾಸಿನಲ್ಲಿ, ನಮ್ಮದೇ ಸಮುದಾಯದಲ್ಲಿ ಏನಾಗುತ್ತಿದೆ ಎಂಬುದರ ಅರಿವೂ ಇಲ್ಲ, ಗಮನಹರಿಸುವಷ್ಟು ವೇಳೆ, ವ್ಯವಧಾನಗಳೂ ಇಲ್ಲ.

ಇದೆಲ್ಲ ಸರಿ, ಆದರೆ ಈ ಎಲ್ಲ ಜಾಗತೀಕರಣದ ಪ್ರಕ್ರಿಯೆಯಿಂದ ಒಳ್ಳೆಯದೂ ಇದೆ ಎನ್ನುತ್ತಾರಲ್ಲ? ಅವರು ಹೇಳುತ್ತಾರೆ, ಉತ್ಕೃಷ್ಟ ವಸ್ತುಗಳು, ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ, ಅಂತಿಮವಾಗಿ ಗ್ರಾಹಕನಿಗೆ ಒಳ್ಳೆಯದೇ ಅಲ್ಲವೆ ಇದೆಲ್ಲ? ಸಂಗೀತದಿಂದಲೇ ಏನಿಲ್ಲವೆಂದರೂ ಐದು ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ಇದೆ ಇವತ್ತು. ಇದು ನಕಲಿ ಸೃಷ್ಟಿಗಳ ಹೊರತಾಗಿಯೂ ಸಾಧ್ಯವಾಗಿದೆ. ಅಲ್ಲದೆ ಇವತ್ತಿನ ಘೋಷವಾಕ್ಯ ಕೂಡ ವ್ಯಾಪಾರದಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುತ್ತದೆ. ಹಿಂದೆ ಅದು ಯುದ್ಧ ಮತ್ತು ಪ್ರೀತಿಯಲ್ಲಿ ಎಂದಿತ್ತು.

ಆದರೆ ನನ್ನ ಸಂಕಟ, ನೋವು ಇರುವುದು ಸಂಗೀತ ಎಂಬ ಸಜೀವವಾದ, ಒಂದು ವಿಶಿಷ್ಟ ಶ್ರೋತೃವರ್ಗದ ಎದುರು ಅಲ್ಲಿ ಮತ್ತು ಆಗಲೇ ಮೂರ್ತವಾಗುವ, ನಾದ ಸಾಮ್ರಾಜ್ಯದ ಒಂದು ನವ್ಯ ಭವ್ಯ ಕಲಾನಿರ್ಮಾಣದ ರಸಾನುಭೂತಿ ಏನಿದೆ, ಅದು ಶ್ರೋತೃವರ್ಗಕ್ಕೂ, ಕಲಾವಿದನಿಗೂ ಶಾಶ್ವತವಾಗಿ ನಿರಾಕರಿಸಲ್ಪಡುವ ಪರಿಸ್ಥಿತಿಗೆ ಈ ಪ್ರಕ್ರಿಯೆ ಕಾರಣವಾಗುತ್ತಿದೆ ಎಂಬಲ್ಲಿ. ಸಾವಿರದೈನೂರ ಎಂಭತ್ತರಿಂದ ಸಾವಿರದಾರುನೂರ ಇಪ್ಪತ್ತೇಳರ ಕಾಲಘಟ್ಟದಲ್ಲಿ ಬಿಜಾಪುರದ ಇಬ್ರಾಹಿಂ ಆದಿಲ್ ಶಾ ರಚಿಸಿದ ಮಖಾಂಗಳು, ಅದೇ ರೀತಿ ಇಂಡೋ ಪರ್ಷಿಯನ್ ಸಂಗೀತ, ಶಾರದೆ ಮತ್ತು ಗಣಪತಿಯ ಸ್ತೋತ್ರಗಳನ್ನೂ ಒಳಗೊಂಡಿತ್ತು. ಆರ್ಯರು, ಗ್ರೀಕರು, ಮೊಗಲರು, ಪೋರ್ಚುಗೀಸರಾದಿಯಾಗಿ ಆಂಗ್ಲರು - ಹೀಗೆ ಎಲ್ಲರ ಅತಿಕ್ರಮಣ, ಪ್ರಭುತ್ವ, ದಾಳಿ, ದಬ್ಬಾಳಿಕೆಗಳ ಹೊರತಾಗಿಯೂ ಅಷ್ಟೇನೂ ಲುಪ್ತವಾಗದೆ ಉಳಿದ ಜೈಪುರದ ಘರಾಣೆಗಳು, ಇಂದೋರಿನ ಘರಾಣೆಗಳು, ಈ ದೇಶ, ಇಲ್ಲಿನ ಸಂಸ್ಕೃತಿಯ ಅವಿನಾಭಾವ ಸಂಬಂಧದಲ್ಲಿ ಮಿಳಿತವಾಗಿರುವ ನಮ್ಮ ಸಂಗೀತ, ಅದರ ಪರಂಪರೆ ಇದೀಗ ಬೇರೆ ಬೇರೆ ನೆಲೆಗಳಲ್ಲಿ ನಾಶವಾಗುತ್ತಿರುವ ಸಂಕಟ.

ಇಲ್ಲೀಗ ಅವರ ಸಂಸ್ಕೃತಿಯನ್ನು, ಅವರ ಕಲೆಯನ್ನು, ಅವರ ಪರಂಪರೆಯನ್ನು ನಮ್ಮದರ ಹೆಸರಿನಲ್ಲಿ ನಮಗೇ ನೀಡುವ ವಿಪರ್ಯಾಸವಿದೆ. ನೀವು ಸಸ್ಯಾಹಾರಿಯಾಗಿದ್ದರೆ ನಿಮಗಾಗಿ ಸಸ್ಯಾಹಾರಿ ಪಿಜ್ಜಾಗಳು, ಬರ್ಗರ್‌ಗಳು ತಯಾರಾಗುತ್ತವೆ. ಏಷ್ಯಾದವರಿಗಾಗಿಯೇ ಏಶಿಯನ್ ಎಂಟೀವಿ ಮತ್ತದರ ರಾಗಾ ಮ್ಯೂಸಿಕ್‌ಗಳು ಜನ್ಮತಳೆಯುತ್ತವೆ. ಆದರೆ ಅದೆಲ್ಲ ನಮ್ಮದಾಗುವುದು ಹೇಗೆ? ಆದರೆ ನಾವು ಒಪ್ಪಿಕೊಂಡಿಲ್ಲವೆ?

ಇನ್ನು ಸಂಗೀತದ ಶಿಕ್ಷಣದ ವಿಚಾರಕ್ಕೆ ಬರೋಣ. ಮೆಕಾಲೆ ಸೃಷ್ಟಿಸಿದ ನೂರೈವತ್ತು ವರ್ಷಗಳ ಹಿಂದಿನ ಬ್ರಿಟಿಷ್ ಶಿಕ್ಷಣ ಕ್ರಮ ಹಳೆಯದು, ಇಂದಿನ ಪರಿಸ್ಥಿತಿಗಳಿಗೆ ಅದು ಸಾಲುತ್ತಿಲ್ಲ ಎನ್ನುವ ವಾದವಿದೆ. ಗುರುಕುಲ ಮಾದರಿಯನ್ನು ಒಪ್ಪಿಕೊಳ್ಳುವುದೆಂದರೆ ಮೆಕಾಲೆಗಿಂತ ಹಿಂದಿನದ್ದಾದ ಎರಡು ಸಾವಿರ ವರ್ಷಗಳಷ್ಟು ಹಿಂದಿನ ಆ ಕ್ರಮ ಹೇಗೆ ಇಂದಿನ ಪರಿಸ್ಥಿತಿಗಳಿಗೆ ತಕ್ಕುದಾದೀತು ಎಂಬ ಪ್ರಶ್ನೆ ಇಲ್ಲವೆ? ಹೊಸ ಮಾರ್ಗಗಳ ಅನ್ವೇಷಣೆಯ ಅಗತ್ಯವಿದೆ. ಅದೇ ಕಾಲಕ್ಕೆ ಪ್ರವಾಹದೊಂದಿಗೆ ಸಲೀಸು ಈಜು ಹಾಕುವ ಅಪಾಯದ ಕುರಿತ ಜಾಗೃತಿ, ಎಚ್ಚರಗಳ ಅಗತ್ಯವೂ ಇದೆ. ಸಂಗೀತದ ಕಲಿಕೆಗೆ ದೈಹಿಕವಾಗಿ ಕೆಲವೊಂದು ಅರ್ಹತೆ, ಸಾಮರ್ಥ್ಯ ಅಥವಾ ಪೂರ್ವತಯಾರಿಯ ಅಗತ್ಯ ಇರುತ್ತದೆ. ಸ್ವರವಿರಬಹುದು, ಕೈಬೆರಳುಗಳ ಕೌಶಲವಿರಬಹುದು, ಅದಕ್ಕೊಂದು ಹದ ಬೇಕು. ನಿರ್ದಿಷ್ಟ ಮಟ್ಟದಲ್ಲಿ ಅವು ಪಳಗಬೇಕು. ಹಾಗೆಯೇ ನಾವು ಸಂಗೀತ ಎಂಬುದು ಭಾಷೆಗೆ ಅತೀತವಾದದ್ದು, ಅದು ಭಾಷಾತೀತವಾದ, ಅಮೂರ್ತ ‘ಕಂಡುಕೊಳ್ಳುವಿಕೆ’ಎನ್ನುವುದು ಅರ್ಥವಾಗಬೇಕು. ಅಮೂರ್ತದ ಮೂಲಕವೇ, ಅಂದರೆ ಆರಂಭಿಕ ದೆಸೆಯಲ್ಲಿಯೇ ಭಾಷೆ, ರಾಗ, ಶಾಸ್ತ್ರಗಳ ಹಂಗಿಲ್ಲದೆಯೇ ಸಂಗೀತವನ್ನು ಅರಿತುಕೊಳ್ಳಲು ಪೂರಕವಾಗಬಲ್ಲ, ನಿರ್ದಿಷ್ಟವಾದ ಒಂದು ಪ್ರಬುದ್ಧತೆಯ ಅಗತ್ಯವೂ ಬಹಳವಿದೆ. ಅದಕ್ಕೆ ತೀರ ಎಳೆಯ ವಯಸ್ಸಿನ ಪುಟಾಣಿಗಳಿಗೆ ರಾಗವನ್ನು, ಶಾಸ್ತ್ರವನ್ನು ಕಲಿಸುವುದು, ಅವರ ಎಳೆಯ ಬೆರಳುಗಳಿಂದ ಸಂಗೀತದ ಪರಿಕರಗಳನ್ನು ನುಡಿಸುವುದು ಸಂಗೀತ ಕಲಿಕೆಯ ಮೂಲ ಉದ್ದೇಶಗಳನ್ನೆ ಹಾಳುಗೆಡಹಬಲ್ಲದು. (ಡಾ||ಕೆ.ಶಿವರಾಮ ಕಾರಂತರು ಮಗು ಮೊದಲು ತನ್ನ ಮಾತಿನಲ್ಲಿ ವಿಭಿನ್ನ ಶಬ್ದಗಳ ಬಳಕೆ ಮತ್ತು ಅವುಗಳ ತತ್ಸಂಬಂಧಿ ವಸ್ತುಗಳ ಗುರುತಿಸುವಿಕೆಯನ್ನು ಕಲಿಯಬೇಕು; ತದನಂತರವೇ ಅದು ಅಕ್ಷರಮಾಲೆ ಮತ್ತು ಬರವಣಿಗೆ ಕಲಿಯಬೇಕು ಎನ್ನುತ್ತಿದ್ದರಲ್ಲವೆ?)

1986ರಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ ಹೊಸ ಶಿಕ್ಷಣನೀತಿಯ ಪ್ರಕಾರ ಎಲ್ಲ ಸಾಮುದಾಯಿಕ ಪ್ರದರ್ಶನ ಕಲೆಗಳನ್ನೂ ಐದನೆಯ ತರಗತಿಯಿಂದಲೇ ಕಲಿಸಬೇಕೆಂಬ ಸೂಚನೆ ನೀಡಿತ್ತು. ಮಹಾರಾಷ್ಟ್ರ ಸರಕಾರ ಅದನ್ನು ಒಪ್ಪಿಕೊಂಡು, ಆ ಸಲಹೆಯನ್ನು ಕಾರ್ಯಗತಗೊಳಿಸುವುದಕ್ಕಾಗಿ ಕೆಲವೊಂದು ಪ್ರಕ್ರಿಯೆಗಳನ್ನಾರಂಭಿಸಿತು ಕೂಡ. ಆಗ ಹೊಸ ಮಾರ್ಗಾನ್ವೇಷಣೆಯ ಅಗತ್ಯ ನಮಗೆಲ್ಲ ಕಾಣಿಸತೊಡಗಿತು. ರಾಜ್ಯದಲ್ಲಿದ್ದ 68000 ಶಾಲೆಗಳಲ್ಲಿ ಶೇಕಡಾ ಮುವ್ವತ್ತು ಏಕೋಪಾಧ್ಯಾಯ ಶಾಲೆಗಳು. ಸರಿಸುಮಾರು 25% ಶಾಲೆಗಳಲ್ಲಿ ಕರಿಹಲಗೆಯಾಗಲಿ, ಪೀಠೋಪಕರಣಗಳಾಗಲೀ ಇರಲಿಲ್ಲ. ಇಂಥಲ್ಲಿ ವಾರವೊಂದರಲ್ಲಿ ಎರಡು ದಿನ ಒಂದೆರಡು ಗಂಟೆ ಕಾಲ ನೀವು ಕಲಿಸುವುದು ಸಂಗೀತ ಹೇಗಾದೀತು ನನಗರ್ಥವಾಗುವುದಿಲ್ಲ. ದೆಹಲಿಯ NCRT ಹೀಗೆ ಸಂಗೀತವನ್ನು ಗುರುಕುಲ ಮಾದರಿಯಲ್ಲೇ ಬಹಳ ದೀರ್ಘವಾಗಿ ಕಲಿಸುವ ವ್ಯವಸ್ಥೆ ಹೊಂದಿದೆ. ಆದರೆ ಅದು ಹದಿನೈದು ವರ್ಷಗಳಷ್ಟು ದೀರ್ಘವಾದ ಕೋರ್ಸು. ಸಂಗೀತವನ್ನೇ ವೃತ್ತಿ-ಪ್ರವೃತ್ತಿಯಾಗಿ ಸ್ವೀಕರಿಸುವವರಿಗಷ್ಟೇ ಸ್ವೀಕಾರಾರ್ಹವಾದದ್ದು. ಕ್ಲಾಸ್‌ರೂಮುಗಳಲ್ಲಿ, ಅದೂ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳಲ್ಲಿ ಕಲಿಸುವ ಸಂಗೀತ ಈ ಬಗೆಯದ್ದಾಗಿರಲು ಸಾಧ್ಯವೆ?

ಅನಂತಮೂರ್ತಿಯವರು ಹೇಳಿದಂತೆ ಪ್ರಶ್ನಿಸುವ ಶಕ್ತಿ ಮತ್ತು ಸ್ಥೈರ್ಯ ಒಡಮೂಡಿ ಬರುವುದು ಉತ್ತಮ ಅಭಿರುಚಿಯಿಂದ, ಕಲೆಯ, ಸಂಸ್ಕೃತಿಯ ಆಳ ಅರಿವಿನಿಂದ, ಅಧ್ಯಯನದಿಂದ. ತಾರುಣ್ಯ ಮನುಷ್ಯನ ಬಾಳಿನಲ್ಲಿ ಮೌಲ್ಯಗಳನ್ನು ದೃಢೀಕರಿಸಿಕೊಳ್ಳುವ ಒಂದು ಸಂಕ್ರಮಣದ ಘಟ್ಟ. ಆ ವಯಸ್ಸು ಕಲೆಯ ಕಲಿಕೆಗೆ ಅತ್ಯಂತ ಸೂಕ್ತ ಮತ್ತು ಸಮರ್ಪಕ. ಮೌಲ್ಯಗಳ ದೃಢೀಕರಣವೋ, ಅವುಗಳ ವಿರುದ್ಧ ಪ್ರತಿರೋಧದ ದೃಢೀಕರಣವೋ ಕಲಿಕೆಯ ಮೂಲಕ, ಸಂಸ್ಕೃತಿಯ ಶಿಕ್ಷಣದ ಮೂಲಕ ನಮಗೆ ಬರುತ್ತದೆ. ಹಾಗಾಗಿಯೇ ನಮ್ಮನ್ನಾಳಿದ, ನಮ್ಮ ಶಿಕ್ಷಣಕ್ರಮ ರೂಪಿಸಿದ ಬ್ರಿಟಿಷರು ಎಂದೂ ಕಲೆಯ ವಿದ್ಯಾಭ್ಯಾಸದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನಿಸುತ್ತದೆ.

ಜಪಾನೀಯರು ಕಂಡುಕೊಂಡ, ಪ್ರೀತಿಯಿಂದ ಸಂಗೀತ, ಮಾತೃಭಾಷೆಯ ಶಿಕ್ಷಣಕ್ರಮ ಈ ದಿಸೆಯಲ್ಲಿ ಮುಖ್ಯವಾದದ್ದು. ಇದು ಮೂಲಭೂತವಾಗಿ ಮಗುವಿನ ಭಾಷೆಯ ಕಲಿಕೆಗೂ ಹಿಂದಿನ ಸಂವಹನ ಪ್ರಕ್ರಿಯೆಯನ್ನೇ ಆಧರಿಸಿ ರೂಪಿಸಿಕೊಂಡಂಥ ಕ್ರಮ. ಬಹುಶಃ ಇದು ಸೂಕ್ತವಾಗಬಹುದೇನೊ ಎನಿಸುತ್ತದೆ.

ವ್ಯಾಪಾರಕ್ಕೆ ಜನಪ್ರಿಯವಾದ ಸಂಕೇತಗಳ, ಮೂರ್ತಿ ನಿರ್ಮಾಣದ, ಏಕಸ್ವಾಮ್ಯದ ಅನಿವಾರ್ಯಗಳೆಲ್ಲ ಇರುತ್ತವೆ. ವ್ಯಾಪಾರೀ ಸಂಸ್ಕೃತಿಯ ಅವಿಭಾಜ್ಯ ಅಂಗಗಳವು. ಜಾಹೀರಾತಿನ ಮೂಲಕ ಇದನ್ನು ವ್ಯಾಪಾರೀ ಜಗತ್ತು ಸಾಧಿಸಿಕೊಳ್ಳುತ್ತದೆ. ಅದಕ್ಕೆ ಎಲ್ಲರೂ ಜನಪ್ರಿಯವಾಗುವುದು, ಆ ರಂಗ ಸಾರ್ವತ್ರಿಕವಾಗುವುದು ಬೇಕಾಗಿಲ್ಲ. ಹಾಗಾದಲ್ಲಿ ಅದಕ್ಕೆ ತನ್ನ ಸರಕನ್ನು ಬೇಗನೆ ಬಿಕರಿ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಅದು ಕೆಲವೇ ಕೆಲವರನ್ನು ಜನಪ್ರಿಯ ವ್ಯಕ್ತಿಗಳನ್ನಾಗಿ, ವಸ್ತುಗಳನ್ನಾಗಿ, ಸಂಗತಿಗಳನ್ನಾಗಿ ಬಿಂಬಿಸುತ್ತದೆ. ಒಂದು ಸರಕಿನ ಸಂಕೇತವಾಗಿ ಅದು ಮೂರ್ತಿಗಳನ್ನು ನಿರ್ಮಿಸಿಕೊಡುತ್ತದೆ. ಇದರಿಂದ ಅದು ಮಾರುಕಟ್ಟೆಯಲ್ಲಿ ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಿಕೊಳ್ಳಲು ಸದಾ ಕಾತರವಾಗಿರುತ್ತದೆ. ಇದಕ್ಕಾಗಿ ಈ ವ್ಯಾಪಾರೀ ಸಂಸ್ಕೃತಿಗೆ ನೀವು ಒಬ್ಬ ಗ್ರಾಹಕನಾಗಿ ಇರುವುದು ಮತ್ತು ಗ್ರಾಹಕನಾಗಿಯೇ ಉಳಿಯುವುದು ಮುಖ್ಯ ಮತ್ತು ಹೆಚ್ಚು ಇಷ್ಟ. ನೀವು ಕೂಡಾ ಕಲಾವಿದನಾಗಿ, ಜನಪ್ರಿಯರಾಗಿ, ಶ್ರೇಷ್ಠ ಎನಿಸಿಕೊಳ್ಳುವ ಪ್ರಯತ್ನಕ್ಕಿಳಿಯುವುದು ಸಹಜವಾಗಿಯೇ ಅದಕ್ಕೆ ಬೇಕಾಗಿಲ್ಲ. ಇದು ನಮ್ಮ ಸೃಜನಶೀಲತೆಯನ್ನು ಹಿಂಡುತ್ತದೆ, ನಾಶ ಮಾಡುತ್ತದೆ. ಜನಪ್ರಿಯತೆಯೇ ಯಶಸ್ಸು ಅಥವಾ ಯಶಸ್ಸು ಬೇಕಾದರೆ ಜನಪ್ರಿಯವಾಗಲೇ ಬೇಕು ಎಂಬ ಒತ್ತಡದ ಈ ವ್ಯಾಪಾರೀ ಸಂಸ್ಕೃತಿಯಿಂದ ಕಲೆ ನಾಶವಾಗುತ್ತದೆ. ಐದು ನೂರಕ್ಕೂ ಹೆಚ್ಚು ಪ್ರಾದೇಶಿಕ, ಸಣ್ಣಪುಟ್ಟ ಭಾಷೆಗಳು ವಿಶ್ವದಿಂದ ಈಗಾಗಲೇ ಕಣ್ಮರೆಯಾಗಿವೆ. ಈ ಭಾಷೆಗಳನ್ನಾಡುವ ಜನಾಂಗಗಳೇನೂ ನಾಮಾವಶೇಷವಾಗಿಲ್ಲ. ಅವರಿಗೆಲ್ಲ ಸಂವಹನಕ್ಕೆ ಅನ್ಯ ಭಾಷೆಗಳೇ ಅನಿವಾರ್ಯವಾಗಿದ್ದರಿಂದ ಹೀಗಾಗಿದೆ. ಅವರಿಗೆ ಅವರದೇ ಭಾಷೆ ಕೆಲಸಕ್ಕೆ ಬಾರದ ಸರಕಾಗಿ ಬಿಟ್ಟಿದ್ದರಿಂದ ಹೀಗಾಗಿದೆ. ಇದೇ ರೀತಿ ನಮ್ಮ ಘರಾಣೆಗಳು, ಜೈಪುರದ ಘರಾಣೆಗಳಿವೆ, ಇಂದೋರಿನ ಘರಾಣೆಗಳಿವೆ......ಅವೆಲ್ಲ ಕಣ್ಮರೆಯಾದರೆ?

ಭೌತಿಕ ಜಗತ್ತಿನ ಯಾವುದೋ ಒಂದು ಸ್ಮಾರಕ, ನಮ್ಮ ಸಂಸ್ಕೃತಿಯ ಭೌತ ಪ್ರತೀಕಗಳು ನಾಶವಾಗುವುದಷ್ಟೇ ಸಾಂಸ್ಕೃತಿಕ ನಾಶವಲ್ಲ. ತಾಲಿಬಾನರು ಬೌದ್ಧ ಪ್ರತಿಮೆಗಳನ್ನು ನಾಶಗೊಳಿಸಿದಾಗ ನಮಗೆಲ್ಲ ದುಃಖವಾಗುತ್ತದೆ. ಹಾಗೆಯೇ ನಮ್ಮ ತಾಜಮಹಲಿಗೆ ಏನಾದರೂ ಆದರೆ ಅದು ನಮ್ಮನ್ನೆಲ್ಲ ಕಲಕುತ್ತದೆ. ಹಾಗೇ ಅಲ್ಲವೆ ಒಂದು ಭಾಷೆಯ, ಕಲೆಯ, ಸಂಸ್ಕೃತಿಯ ಅಭೌತಿಕ ಅಂಶಗಳ ನಾಶವು ಕೂಡ? ಅದೂ ನಮ್ಮನ್ನು ಕಲಕುವುದು ಬೇಡವೆ?

ಈಚೆಗೆ ಯುನೆಸ್ಕೊ ಇಂಥ ಅಭೌತ ಕಲೆ ಸಂಸ್ಕೃತಿಯ ರಕ್ಷಣೆ ಕುರಿತಂತೆ ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು ಕೊಂಚ ಸಮಾಧಾನದ ವಿಷಯವಾದರೂ ಇದು ನಮ್ಮನ್ನೆಲ್ಲ ತಟ್ಟದೇ ಹೋದರೆ ಅದೊಂದು ದುರಂತವೆಂದೇ ಹೇಳಬೇಕಾಗುತ್ತದೆ.
******
ಸಂಗೀತದ ಕುರಿತು ಮತ್ತೊಂದು ಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದ ಡಾ||ಭಾಸ್ಕರ ಚಂದಾವರ್ಕರ್ ಅವರಿಗೆ ಪ್ರಸ್ತಾವನೆ ಒದಗಿಸುತ್ತ ಡಾ||ಮನು ಚಕ್ರವರ್ತಿಯವರು:

ಸಂಗೀತ ಮತ್ತು ಜಾಗತೀಕರಣದ ಬಗ್ಗೆ ಮಾತನಾಡುತ್ತ ಭಾಸ್ಕರ ಚಂದಾವರ್ಕರ್ ಅವರು ಪುಟ್ಟ ಮಕ್ಕಳಿಗೆ ಕ್ಲಾಸ್ ರೂಂ ಮಾದರಿಯಲ್ಲಿ ಸಂಗೀತ ಹೇಳಿಕೊಡುವುದು ಸರಿಯಾದ ಕ್ರಮವಲ್ಲ ಅಂತ ಹೇಳಿದರು. ಈ ಬಗ್ಗೆ ಇಲ್ಲಿ ಬಂದ ಪ್ರಶ್ನೆಗಳಿಂದ ಕೆಲವು ತಪ್ಪು ಕಲ್ಪನೆಗಳು ಹುಟ್ಟಿಕೊಂಡಿವೆ ಎನಿಸಿದ್ದರಿಂದ ಎರಡು ಮಾತು ಹೇಳ್ತೇನೆ.

ಸಂಗೀತ ಅನ್ನುವುದು ಜ್ಞಾನಗ್ರಹಿಕೆಯಾಗದೆ, ಮಾಹಿತಿಯ ಶೇಖರಣೆಯಾಗಿರದೆ ತನ್ನೊಳಗಿನ ಅರಿವಾಗಿ ಅರಳಿಕೊಳ್ಳಬೇಕಾದ ಒಂದು ಕಲೆ. ಅದು ಕೆಲವು ರಾಗ ಜ್ಞಾನ ಅಲ್ಲ. ಈ ರಾಗ ಹೀಗೆ ಆಲಾಪ, ಆರೋಹ, ಅವರೋಹ, ಆವರ್ತನ ಅಂತೆಲ್ಲ ನೆನಪಿಟ್ಟುಕೊಳ್ಳುವ ಮಾಹಿತಿ ಅಲ್ಲ. ಮಲ್ಲಿಕಾರ್ಜುನ ಮನ್ಸೂರರಂಥ ಮಹಾನ್ ಸಂಗೀತಗಾರರು ಕೂಡ ಹತ್ತು ಹದಿನೈದು ವರ್ಷಗಳ ಸಂಗೀತ ಸಾಧನೆಯ ನಂತರವೂ ಸಂಗೀತದಲ್ಲಿ, ರಾಗಗಳಲ್ಲಿ ತಮಗಿನ್ನೂ ಆಳವಾಗಿ ಅರ್ಥವಾಗದೇ ಇರುವುದೂ ಇದೆ ಅಂತ ಹೇಳಿದ್ದೂ ಉಂಟು. ಭಾಸ್ಕರ ಚಂದಾವರ್ಕರ್ ಅವರು ಜೈಪುರ ಘರಾಣೆ, ಗ್ವಾಲಿಯರ್‌ನ ಘರಾಣೆಗಳ ಬಗ್ಗೆ ಹೇಳಿದ್ದನ್ನು ಗಮನಿಸಬೇಕು. ಇದನ್ನು ಸಿಲೆಬಸ್‌ನ ಮಿತಿಗಳಿಗೆ ಒಳಪಟ್ಟ ಒಂದು ಪಠ್ಯದ ಮೂಲಕ ಹೇಳಿಕೊಡುವುದು ಹೇಗೆ?

ರಾಗ ಅನ್ನುವುದು ನಮ್ಮ ಪ್ರಜ್ಞೆಯ ಆಳದಲ್ಲಿ ನಿರಂತರವಾಗಿ ಆವಿಷ್ಕಾರಗೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಅದು ಸಂಗೀತಾಭಿರುಚಿಯ ಶ್ರೋತೃವರ್ಗದ ಎದುರಿನಲ್ಲೆ ಸ್ವತಃ ಸಂಗೀತಗಾರನಲ್ಲೂ, ಶ್ರೋತೃವಿನಲ್ಲೂ ಸಂಭವಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯ ಸಂಕೀರ್ಣತೆಯನ್ನು, ಕಚೇರಿ ಕಾರ್ಯಕ್ರಮಗಳ ಜೀವಂತಿಕೆಯ ಸಂಕೀರ್ಣತೆಯನ್ನು ಅರಿಯಲಾರದೇ ಹೋದರೆ ಸಂಗೀತದ ಕಲಿಕೆಗೆ ತಯಾರಾದ ಪಠ್ಯಗಳಲ್ಲಿ ಸಂಗೀತ ಪಠ್ಯವಾಗಿಯಷ್ಟೇ ಉಳಿಯುವುದು ಸಾಧ್ಯ, ಜೀವಂತಿಕೆಯುಳ್ಳ ಕಲೆಯಾಗಿ ಅಲ್ಲ.

ಬಿಟುವನ್ ಬಗ್ಗೆ ಯಹೂದಿ ಸಂಗೀತಗಾರ ಮೆನುಹಿನ್ ಹೇಳಿದ ಮಾತುಗಳು ನೆನಪಾಗುತ್ತವೆ. ಆತ ತನ್ನ ಎಪ್ಪತ್ತನೆಯ ವಯಸ್ಸಿನಲ್ಲೂ ಬಿಟುವನ್ ನುಡಿಸುತ್ತಿದ್ದ. ಅದಕ್ಕೂ, ಅವನೇ ತನ್ನ ಬಾಲ್ಯದಲ್ಲಿ ನುಡಿಸುತ್ತಿದ್ದ ಬಿಟುವನ್ನಿಗೂ ಏನು ವ್ಯತ್ಯಾಸ ಎಂದರೆ, ಆಗ, ಎಂಟನೆಯ ವಯಸ್ಸಿನಲ್ಲಿ ಅದು ತನ್ನ ಒಳಗೇ ಇತ್ತಾದರೂ ಆಗ ಅದೇನೆಂದು ತಿಳಿಯುತ್ತಿರಲಿಲ್ಲ, ಅರ್ಥವಾದರೂ ಅವ್ಯಕ್ತವಾಗಿಯೇ ಉಳಿದಿತ್ತು; ಆದರೆ ಈಗ ಎಪ್ಪತ್ತನೆಯ ವಯಸ್ಸಿನಲ್ಲಿ ಅದು ತನಗೆ ಅರ್ಥವಾಗಿದೆ ಮತ್ತು ಹಾಗಾಗಿ ಇವತ್ತು ಅದು ಅದನ್ನು ವಿವರಿಸಬಲ್ಲ ಅರಿವಾಗಿ ಪರಿವರ್ತನೆಗೊಂಡಿದೆ ಎಂದನಂತೆ. ಸಂಗೀತ ಅರಿವಾಗಿ ಅರಳುವುದೆಂದರೆ ಹೀಗೆ. ಒಂದು ಜೀವಮಾನದ ಸಾಧನೆಯಲ್ಲಿ ಸಾಧ್ಯವಾಗಬಹುದಾದಂಥ ಕಲೆ ಅದು, ಕ್ಲಾಸ್ ರೂಮ್ ಶಿಕ್ಷಣದಿಂದ, ಅದೂ ಒಂದು ಮಟ್ಟದ ಪ್ರಬುದ್ಧತೆ ಬರುವುದಕ್ಕೂ ಮೊದಲ ಘಟ್ಟದಲ್ಲಿ ಸಿದ್ಧಿಸಬಹುದಾದ್ದಲ್ಲ ಎಂಬ ಅರ್ಥದಲ್ಲಿ ಭಾಸ್ಕರ್ ಚಂದಾವರ್ಕರ್ ಹೇಳಿದ್ದರೆ ಹೊರತು ಬೇರೆ ಯಾವುದೇ ಅರ್ಥದಲ್ಲಿ ಅಲ್ಲ.

ಭಾಸ್ಕರ್ ಚಂದಾವರ್ಕರ್:

ತಂತ್ರಜ್ಞಾನ ಬೆಳೆದಿದೆ, ಅದರಿಂದ ಕಲೆಗೂ ಒಂದಲ್ಲ ಒಂದು ರೀತಿ ಲಾಭ ಕೂಡಾ ಆಗಿದೆ. ಅಲ್ಲದೆ ಬೆಳವಣಿಗೆ ಎನ್ನುವುದು ಚಲನಶೀಲತೆಯ ಲಕ್ಷಣ. ಅದು ಬೇಡ ಎನ್ನುವುದು ಸರಿಯಲ್ಲ. ಯಾಕೆ ಇದನ್ನು ನಾವು ಶಾಪ ಎಂತಲೋ, ಕೆಡುಕು ಅಂತಲೋ ತಿಳಿಯಬೇಕು? ವರ ಅಂತ ಅಥವಾ ಒಂದು ಸದವಕಾಶ ಅಂತ ಯಾಕೆ ತಿಳಿಯಬಾರದು ಎನ್ನುವ ಪ್ರಶ್ನೆಗಳೆಲ್ಲ ಇವೆ.

ನಮ್ಮ ದೇಶದ ಮೇಲೆ ಎಂತೆಂಥಾ ದಾಳಿಗಳು, ಲೂಟಿಗಳು ಎಲ್ಲ ನಡೆದಿವೆ, ಯಾವೆಲ್ಲ ಧರ್ಮದ ದೊರೆಗಳು ಈ ದೇಶವನ್ನು ಆಳಿದ್ದಾರೆ, ನಿಯಂತ್ರಿಸಿದ್ದಾರೆ. ಆದರೂ ನಮ್ಮ ಧರ್ಮ, ಕಲೆ, ಸಂಸ್ಕೃತಿ, ಸಂಗೀತ ಎಲ್ಲ ಉಳಿದುಕೊಂಡು ಬಂದಿಲ್ಲವೇ. ಈಗೇನಿದು ಈ ಬಗೆಯ ಆತಂಕ! ಯಾಕೆ ಎಲ್ಲರೂ ಇಷ್ಟೊಂದು ನಿರಾಶಾವಾದದ ಮಾತನ್ನಾಡುತ್ತಿದ್ದಾರೆ ಎಂಬ ವಾದವೂ ಇದೆ.

ಜಾಗತೀಕರಣ ಮತ್ತು ಆಧುನಿಕ ತಂತ್ರಜ್ಞಾನ ಭಯ ಹುಟ್ಟಿಸಿರುವುದು ಯಾಕೆಂದರೆ ಅದು ನಮ್ಮ ಸಂಗೀತದಿಂದ ಅದರ ಜೀವಂತಿಕೆಯನ್ನೇ ತೆಗೆದುಬಿಟ್ಟಿದೆ. ಯಾವುದೇ ವಿದೇಶೀ ಆಕ್ರಮಣ, ಪ್ರಭುತ್ವ ಅಥವಾ ನಿಯಂತ್ರಣ ಮಾಡದಿದ್ದ ಕೆಲಸ ಇದು. ಯಾರೂ ನಮ್ಮ ಸಂಗೀತದ ಅಂತಃಸ್ಸತ್ವವನ್ನೇ ಯಾಂತ್ರೀಕೃತಗೊಳಿಸಿ ಅದನ್ನು ನಿಸ್ತೇಜಗೊಳಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಇದರ ಬೆನ್ನ ಹಿಂದಿರುವ ಜಾಗತೀಕರಣ ಈ ಕೆಲಸ ಮಾಡುತ್ತಿದೆ. ಇದು ನಮ್ಮ ತುರ್ತು ಗಮನವನ್ನು ಬಯಸುವ ವಿದ್ಯಮಾನ.

ಇವತ್ತಿನ ಡಿಜಿಟಲ್ ರೆಕಾರ್ಡಿಂಗ್ ವ್ಯವಸ್ಥೆ ಎಲ್ಲವನ್ನೂ ಸೀಡಿಗಳಿಗೆ ಇಳಿಸಿಬಿಟ್ಟಿದೆ. ವಿದೇಶಗಳಲ್ಲಿ ಸಂಧ್ಯಾವಂದನೆಗೂ ಸೀಡಿಗಳ ಬಳಕೆಯಾಗುತ್ತಿದೆ. ನೂರೆಂಟು ಬಾರಿ ಪಠಿಸುವ ಗಾಯತ್ರೀಮಂತ್ರದ ಪುಣ್ಯ ಸಂಪಾದನೆ ಕೂಡ ಒಮ್ಮೆ ಹೇಳಿದ ಮಂತ್ರವನ್ನೆ ಮತ್ತೆ ಮತ್ತೆ ಕಾಪಿ ಮಾಡಿದ ಸೀಡಿಗಳಿಂದ ಸುಲಭದಲ್ಲಿ ಸಾಧ್ಯ. ಇನ್ನು ಸಂಗೀತದ ಬಗ್ಗೆ ಹೇಳಬೇಕಾದ್ದಿಲ್ಲ.

ಸಂಗೀತಕ್ಕೆ ಕೆಲವು ವಿಶಿಷ್ಟ ಶಕ್ತಿ ಇದೆ ಮತ್ತು ಅದರಿಂದಾಗಿ ಸಂಗೀತಕ್ಕೆ ಕೆಲವು ವಿಶಿಷ್ಟ ಸಾಧ್ಯತೆಗಳು ಲಭ್ಯವಾಗಿವೆ. ಉದಾಹರಣೆಗೆ ದೃಶ್ಯ ಮಾಧ್ಯಮ ನಮ್ಮ ವ್ಯಕ್ತಿತ್ವವನ್ನು ಬಹಿರಂಗಕ್ಕೆ ತೆರೆಯುತ್ತದೆ. ಸಂಗೀತ ಅಥವಾ ಶಬ್ದ ಮಾಧ್ಯಮ ವ್ಯಕ್ತಿತ್ವವನ್ನು ಅಂತರ್ಗತಕ್ಕೆ ಏಕಾಗ್ರಗೊಳಿಸುತ್ತದೆ. ದೃಶ್ಯ ನಮ್ಮ ದೃಷ್ಟಿ ವೈಶಾಲ್ಯ ಬಯಸಿದರೆ ನಾದ ನಮ್ಮ ಹೃದಯವೈಶಾಲ್ಯ ಬಯಸುತ್ತದೆ. ನಾನು ಯಾವುದು ಹೆಚ್ಚು ಯಾವುದು ಕಡಿಮೆ ಎಂದು ಹೇಳುತ್ತಿಲ್ಲ. ಸಂಗೀತದ ಒಗ್ಗೂಡಿಸಬಲ್ಲ ಶಕ್ತಿಯ ಬಗ್ಗೆ ನಿಮ್ಮ ಗಮನಸೆಳೆಯುವುದಷ್ಟೇ ನನ್ನ ಉದ್ದೇಶ. ನಮ್ಮ ಸೂಫಿಗಳು, ಸಿಖ್ ಗುರು ಗುರುನಾನಕ್, ನಮ್ಮ ಮಹಾತ್ಮಾಗಾಂಧಿ ಎಲ್ಲರೂ ಸಂಗೀತವನ್ನು ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಅವರಿಗೆ ಸಂಗೀತದ ಈ ಶಕ್ತಿಯ ಬಗ್ಗೆ ಅರಿವಿತ್ತು. ಬಹುಶಃ ವಿನೋಬಾ ಭಾವೆ ತಮ್ಮ ಭೂದಾನಕ್ಕಾಗಿ ಕೈಗೊಂಡ ಪಾದಯಾತ್ರೆಗಳಲ್ಲಿ ಸಂಗೀತವನ್ನು ಬಳಸಿಕೊಂಡಿದ್ದರೆ ಅದು ಇನ್ನಷ್ಟು ಯಶಸ್ವಿಯಾಗುತ್ತಿತ್ತೇನೋ ಅನಿಸುತ್ತದೆ.

ಆದರೆ ಧ್ವನಿಮುದ್ರಿತ ಸಂಗೀತ ಹಲವಾರು ಕೊರತೆಗಳಿಂದ ಸೊರಗುತ್ತದೆ. ನಮ್ಮ ಭಾರತೀಯ ಸಂಗೀತದಲ್ಲಿ ಸಂಗೀತಗಾರನ ವ್ಯಕ್ತಿಗತ ಛಾಪು ಇರುತ್ತದೆ. ಸುಬ್ಬುಲಕ್ಷ್ಮಿ ಹಾಡುವ ಒಂದು ರಾಗ ಅದು ಎಂಎಸ್ ಅವರದೇ ರಾಗ. ಅದನ್ನೇ ಮನ್ಸೂರ್ ಹಾಡಿದರೆ ಅದು ಮನ್ಸೂರರ ಸೃಷ್ಟಿಯಾಗಿರುತ್ತದೆ. ಒಂದೇ ರಾಗ ಬೇರೆ ಬೇರೆ ಸಾಧಕರ ಕೈಯಲ್ಲಿ ತನ್ನದೇ ಆದ ವಿಶಿಷ್ಟ, ವಿಭಿನ್ನ ಕೋನದಿಂದ ರಾಗ ಭಾವ ಪುನಃಸೃಷ್ಟಿಯನ್ನು ಸಾಧ್ಯವಾಗಿಸುವ ವಿದ್ಯಮಾನವೇನಿದೆ ಅದನ್ನು ಬಲ್ಲವರೇ ಬಲ್ಲರು. ಅದು ಒಬ್ಬ ಸಂಗೀತಗಾರನಿಗೆ ನಿರಂತರವಾದ ಹುಡುಕಾಟವಾಗಿರುತ್ತದೆ. ಅದು ಪ್ರತಿಬಾರಿಯೂ ನವೀನ, ವಿಶಿಷ್ಟ ಮತ್ತು ತಾಜಾ ಆಗಿರುತ್ತದೆ. ರಾಗವೊಂದು ಸಂಗೀತಗಾರನಿಗೆ ನಿಬಿಡಾರಣ್ಯದಲ್ಲಿ ತನ್ನದೇ ದಾರಿಯಲ್ಲಿ ಸಾಗಿ ಗಮ್ಯವನ್ನು ಸೇರಲು ಇರುವ ದೀವಟಿಗೆಯಂತೆ. ನಮಗೆ ಗೊತ್ತೇ ಇಲ್ಲದ, ನಾವೆಂದೂ ಕಲ್ಪಿಸಿರದ, ನಾವೇಕೆ, ಎಷ್ಟೋ ರೂಢಿಗತ ಕ್ರಮಗಳಿಗೆ ಬದ್ಧರಾದ ಸಂಗೀತಗಾರರು ಕೂಡ ಕಾಲಿಡಲು ಹೆದರುವ ಹಾದಿಗಳಲ್ಲಿ ಅವರು ರಾಗಗಳ ಮೂಲಕ ನಮ್ಮಂಥ ಶ್ರೋತೃವನ್ನು ಕೈಹಿಡಿದು ನಡೆಸುತ್ತಾರೆ. ನಾವೆಂದೂ ಕಂಡಿರದ ಅಮೂರ್ತ ಜಗತ್ತಿನ ವೈಭವವನ್ನು, ವೈರುಧ್ಯವನ್ನು, ವೈಶಿಷ್ಟ್ಯವನ್ನು ರಾಗದ ಆರೋಹ ಅವರೋಹಗಳಲ್ಲಿ ಕಣ್ಣಿಗೆ ಕಾಣಿಸುತ್ತಾರೆ. ಎಲ್ಲ ಮುಗಿಸಿದಾಗ ಯಾವುದೋ ಕಿನ್ನರ ಗಂಧರ್ವ ಲೋಕದಿಂದ ಹಠಾತ್ತನೆ ಕಡಿದುಕೊಂಡು ಭುವಿಗಿಳಿದಂಥ, ಗಾನಸುಧೆಯಲ್ಲಿ ಮಿಂದು ಬಂದ ಸುಖದ, ಹಿತದ ಅನುಭವವನ್ನು ಪಡೆಯುತ್ತೇವೆ. ಇದು ಪ್ರತಿಬಾರಿಯೂ, ಅದೇ ಗಾಯಕನ ಅದೇ ರಾಗ ಮತ್ತೆ ಕೇಳುವಾಗಲೂ ಹೊಸತೇ ಆಗಿರುತ್ತದೆ. ಆದರೆ ಈ ಅನುಭವವನ್ನು ರೆಕಾರ್ಡೆಡ್ ಸಂಗೀತ ಕೇಳುವಾಗ ಕಳೆದುಕೊಳ್ಳುತ್ತೇವೆ. ಒಂದು ವಿಶಿಷ್ಟ ಸನ್ನಿವೇಶದಲ್ಲಿ ಒಂದು ವಿಶಿಷ್ಟ ರಾಗದ ಒಂದೇ ಸಾಧ್ಯತೆಯನ್ನು ಅದು ನಮಗೆ ಹಿಡಿದಿಟ್ಟುಕೊಡಬಲ್ಲದು. ಅದರಲ್ಲಿ ಜೀವಂತಿಕೆ ಇಲ್ಲ.

ಸಂಗೀತದ ಈ ಒಳನೋಟಗಳನ್ನು ನೀಡಬಲ್ಲ ಶಕ್ತಿ ಸಂಗೀತಗಾರ ಬೆಳೆದಂತೆಲ್ಲ ಹೆಚ್ಚುತ್ತದೆ. ಸಂಗೀತಗಾರ ಆಳಕ್ಕಿಳಿದ ಹಾಗೆಲ್ಲ ಆತ ರಾಗದ ಸುಪ್ತ ಅಗಮ್ಯ ಸಾಧ್ಯತೆಗಳನ್ನೆಲ್ಲ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಆತ ಬೆಳೆದಂತೆಲ್ಲ ಆತನ ಸಂಗೀತವೂ ಬೆಳೆಯುತ್ತದೆ ಮತ್ತು ಆತನ ಸಂಗೀತದ ಕಾಣ್ಕೆ ಏನಿದೆ, ಅದೂ ಬೆಳೆಯುತ್ತದೆ. ಸ್ವರದ ಮಾರ್ಗ ಇರುವುದೇ ಹಾಗೆ. ಸ್ವ ಎಂದರೆ (ಸ್ವಯಂ) ವ್ಯಕ್ತಿ ಮತ್ತು ರ ಎಂದರೆ ಬೆಳಕಿನ ಹಾದಿ. ಬೆಳಕಿನ ಹಾದಿಯಲ್ಲಿ ನನ್ನನ್ನು ಕರೆಯೊಯ್ಯುವುದು ಸ್ವರ. ಆದರೆ ಧ್ವನಿಮುದ್ರಿತ ಸಂಗೀತ ಮಾರುಕಟ್ಟೆಯಲ್ಲಿ ಮೀನು ಕಟ್ಟುವುದಕ್ಕಷ್ಟೇ ಬಳಸಬಹುದಾದ ನಿನ್ನೆಯ ರದ್ದಿ ಪೇಪರಿನಂತೆ, ಹಳಸಲಾಗಿರುತ್ತದೆ.

ಸಾವಿರಾರು ವರ್ಷಗಳ ಹಿಂದೆಯೇ ಆನೆಯ ದಂತದಿಂದ ಕೊಳಲು ನಿರ್ಮಿಸಿದ ಪುರಾವೆಗಳು ಪುರಾತತ್ವ ಇಲಾಖೆಯವರಿಗೆ ಸಿಕ್ಕಿದೆ. ಮನುಷ್ಯನಿಗೂ ಸಂಗೀತಕ್ಕೂ ಎಷ್ಟು ಹಿಂದಿನಿಂದ ಬಂದ ನಂಟಿದೆ. ಹಕ್ಕಿಗಳು ಹಾಡುತ್ತವೆ ಎನ್ನುತ್ತೇವಾದರೂ ಸ್ವರ-ರಾಗ-ನಾದದ ಪರಿಜ್ಞಾನ ಇರಿಸಿಕೊಂಡು ಹಾಡಬಲ್ಲ ಏಕಮಾತ್ರ ಜೀವಿ ಮನುಷ್ಯ. ಮನುಷ್ಯ ಸ್ವರ ವಿಸ್ತಾರದ ಪರಿಕಲ್ಪನೆಗಳನ್ನು ಮಾಡಿದ್ದೇ ಒಂದು ಮಹತ್ ಸಾಧನೆ. ಅದರಿಂದ ಆತ ಸ್ವರ ನಿರ್ಮಿತ ರಾಗಗಳ ಸ್ವತಂತ್ರ ವಿನ್ಯಾಸಗಳನ್ನೇ ನಿರ್ಮಿಸಿದ್ದು ನಿಜಕ್ಕೂ ಅದ್ಭುತವಾದ ಸಾಧನೆ. ಅದನ್ನೂ ಮೀರಿ ಸಾಗಿದ ಆತ ತನಗೆ ಬೇಕಾದ ಸ್ವರ - ನಾದ - ರಾಗಗಳನ್ನು ಸೃಜಿಸಬಲ್ಲ ಉಪಕರಣಗಳನ್ನು ತಯಾರಿಸಲು ಕಲಿತ. ಆನೆಯ ದಂತದಿಂದ ಕೊಳಲು ನಿರ್ಮಿಸುವುದು, ನಿರ್ದಿಷ್ಟ ಅಂತರದ ರಂಧ್ರಗಳಿಂದ ನಿರ್ದಿಷ್ಟ ಸ್ವರ ಹೊರಡಿಸಬಹುದೆಂಬ ಅರಿವು ಪಡೆದುಕೊಳ್ಳುವುದು ಎಲ್ಲ ಸಾಧ್ಯವಾಗಬೇಕಾದರೆ ಆತ ಎಂಥೆಂಥ ಪ್ರಯೋಗಗಳನ್ನೆಲ್ಲ ಮಾಡಿರಬಹುದು ಯೋಚಿಸಿ! ಎಷ್ಟು ವಿಫಲ ಯತ್ನಗಳು, ತಪ್ಪು ತಯಾರಿಗಳು, ಹೃದಯ ಭಗ್ನಗೊಳಿಸುವಂಥ ಸೋಲುಗಳಿದ್ದಿರಬಹುದು ಈ ಯಶಸ್ಸಿನ ಹಿಂದೆ!

ಹುಟ್ಟಿನಿಂದ ಹಿಡಿದು ಶ್ರೋತೃವಿನ ಕಿವಿಯ ಮುಖೇನ ಮನಸ್ಸು ಹೃದಯಗಳನ್ನಾಕ್ರಮಿಸಿ ನೆಲೆಯೂರುವ ತನಕ ನಿರಂತರ ಮನುಷ್ಯನ ಉಸಿರಿನೊಂದಿಗೇ ಬೆರೆತುಕೊಂಡಿರುವ ಸಂಗೀತವನ್ನು ಜೀವರಹಿತ ಯಾಂತ್ರೀಕರಣಕ್ಕೆ ದೂಡಿಬಿಟ್ಟಿದ್ದೇವೆ ಅನಿಸುತ್ತದೆ. ಇವತ್ತು ಸಂಗೀತ ಕಚೇರಿಗೆ ಬರುವವರೇ ಇಲ್ಲ. ಅದರ ಜೀವಂತಿಕೆಯ ಸ್ವಾದವನ್ನು ಆಸ್ವಾದಿಸುವ ಸಂಗೀತಪ್ರಿಯರೇ ಇಲ್ಲವಾಗುತ್ತಿದ್ದಾರೆ. ಎಲ್ಲರೂ ತಮ್ಮ ಬಿಡುವಿನ ವೇಳೆಯಲ್ಲಿ, ತಮಗೆ ಬೇಕಾದಲ್ಲಿ, ಬೇಕಾದ ಸಂಗೀತ ಕೇಳಲು ಅನುಕೂಲವಿರುವಾಗ ಯಾಕೆ ಸಂಗೀತ ಕಚೇರಿಗಳಿಗೆ ಬಂದು, ಕೂತು, ಕೇಳಿ ಮತ್ತೆ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗುವ ಕಷ್ಟ ತೆಗೆದುಕೊಳ್ಳಬೇಕು ಎಂದು ಯೋಚಿಸುವವರೇ. ಹೀಗೆ ಕ್ರಮೇಣ ಒಂದು ಸಾಮುದಾಯಿಕ ಆಸ್ವಾದನೆಯ ವಸ್ತುವಾಗಿದ್ದ ಸಂಗೀತ , ಜನಸಮುದಾಯಕ್ಕೆ ನೀಡುವ ಕಲಾ ಅಭಿವ್ಯಕ್ತಿಯ ಮಾಧ್ಯಮವಾಗಿದ್ದ ಸಂಗೀತ ವೈಯಕ್ತಿಕ ಆಸ್ವಾದನೆಯ ಮಟ್ಟಕ್ಕೆ ಇವತ್ತು ಬಂದಿದೆ. ಇದು ಎಷ್ಟರಮಟ್ಟಿಗೆ ಎಂದರೆ ನನ್ನ ಸಂಗೀತ ನಾನು ಕೇಳುತ್ತೇನೆ ಮತ್ತು ನಾನು ಮಾತ್ರ ಕೇಳುತ್ತೇನೆ ಎಂಬ ಮಟ್ಟಕ್ಕೆ. ಇಂಥದ್ದನ್ನು ಸಾಧ್ಯವಾಗಿಸಿದ ವಾಕ್‌ಮನ್‌ಗಳಿಗೆ ಈ ಕೀರ್ತಿ ಸಲ್ಲಬೇಕು. ಕಲೆ ನಮ್ಮನ್ನು ಸಮುದಾಯಕ್ಕೆ ತರುತ್ತಿತ್ತು. ಸಾಮುದಾಯಿಕ ನೆಲೆಯಲ್ಲಿ ಪ್ರದರ್ಶನಗಳು, ಕಚೇರಿಗಳು ನಡೆಯುತ್ತಿದ್ದವು. ಇವತ್ತು ನಮ್ಮ ಸಮಾಜದಲ್ಲಿ ಇಂಥ ಸಾಮುದಾಯಿಕ ಆಸ್ವಾದನೆಯ ಪರಿಕಲ್ಪನೆಯೇ ನಾಶವಾಗುವಂತೆ ಮಾಡುವಲ್ಲಿ ರೆಕಾರ್ಡೆಡ್ ಸಂಗೀತದ್ದು ಸಿಂಹಪಾಲು. ಇದು ಮನುಷ್ಯ ಸಮುದಾಯದಿಂದ ಪ್ರತ್ಯೇಕಗೊಂಡು, ಅದರಿಂದ ತನ್ನ ಸುಖ ಎಂಬ ಸೀಮಿತ ನೆಲೆಯಲ್ಲಿ ಸಂಗೀತವನ್ನು, ಕಲೆಯನ್ನು ಆಸ್ವಾದಿಸುವಂತೆ ಮಾಡಿದೆ. ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ ಎಂಬ ಮಾತಿದೆಯಲ್ಲ, ಹಾಗೆಯೇ ಇದೆ ಇದು ಕೂಡ. ಅಲ್ಲಿ ಸುನಾಮಿಯಿಂದಾಗಿ ಸಹಸ್ರಗಟ್ಟಲೆ ಮಂದಿ ಸತ್ತು, ಕಣ್ಮರೆಯಾಗಿ ಅಲ್ಲೋಲಕಲ್ಲೋಲ ನಡೆದಿದ್ದಾಗ ಇಲ್ಲಿ, ನಮ್ಮ ಡೆಲ್ಲಿ, ಮುಂಬಯಿಗಳಂಥ ಮಹಾನಗರಗಳಲ್ಲಿ ಅದು ನಮ್ಮ ಲೋಕದ ಸಂಗತಿಯೇ ಅಲ್ಲವೇನೊ ಎಂಬಂತೆ ಅಬ್ಬರದ ಸಂಗೀತದ ಜೊತೆ ಹೊಸವರ್ಷಾಚರಣೆ ನಡೆಯುತ್ತಾ ಇತ್ತು. ಮನುಷ್ಯರು ಮಾತ್ರಾ ಹೀಗೆ ಮಾಡಬಲ್ಲರೇನೊ!

ಇನ್ನು ಸಂಗೀತದ ಕಲಿಕೆಗೆ ಬಂದರೆ ಇಲ್ಲಿ ಕೂಡ ತಂತ್ರಜ್ಞಾನ ಕೀಬೋರ್ಡ್ ಕಲ್ಚರ್ ತಂದು ಬಿಟ್ಟಿರುವುದನ್ನು ಕಾಣುತ್ತೇವೆ. ರೆಡಿಮೇಡ್ ರಾಗಗಳನ್ನು ನುಡಿಸಬಲ್ಲ, ಬೇಕಾದ ಟ್ಯೂನ್ಸ್ ನೀಡಬಲ್ಲ ಉಪಕರಣಗಳೆಲ್ಲ ಈಗ ಲಭ್ಯ. ನಿಮಗೆ ಬೇಕಾದ, ನಿಮ್ಮ ಅಗತ್ಯಕ್ಕೆ ಹೊಂದುವ ಕೀಬೋರ್ಡ್‌ಗಳಿವೆ. ಇದನ್ನು ಬಾರಿಸಬಲ್ಲ ಮಕ್ಕಳ ಬಗ್ಗೆ ಹೆತ್ತವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ನಮ್ಮ ಮಗ ಎಷ್ಟು ಚೆನ್ನಾಗಿ ಸಂಗೀತ ನುಡಿಸಬಲ್ಲ! ನಮ್ಮ ಮಗ ಸಂಗೀತದಲ್ಲಿ ಎಕ್ಸ್‌ಪರ್ಟ್ ಎಂದೆಲ್ಲ. ಆತ ನುಡಿಸಿದ್ದೆ ಆ ಸಂಗೀತ? ಅದು ಸಂಗೀತಗಾರನ ಹೃದಯಕ್ಕೆ ತೃಪ್ತಿ, ಸಾರ್ಥಕತೆಗಳನ್ನು ನೀಡುವುದು ಸಾಧ್ಯವೆ? ಮನುಷ್ಯನಿಂದ ಸಂಗೀತ ದೂರವಾಗುತ್ತಿರುವುದರಲ್ಲಿ ಇದೂ ಒಂದು ಬಗೆ.

ಆದರೆ ಇದರಲ್ಲಿ ತಂತ್ರಜ್ಞಾನದ ತಪ್ಪೇನಿದೆ? ತಂತ್ರಜ್ಞಾನ ನಿರ್ಲಿಪ್ತ ಸಂಗತಿಯೆ? ಅಥವಾ ತಂತ್ರಜ್ಞಾನ ಬಂಡವಾಳಶಾಹಿ ಧೋರಣೆಯ ಸಂಕೇತವೆ? ತಂತ್ರಜ್ಞಾನ ನಿಜಕ್ಕೂ ನಾವು ಹೇಳಿದಂಥ ಅಪಾಯಗಳನ್ನು ತರುವಂಥದ್ದೆ? - ಈ ಪ್ರಶ್ನೆಗಳೆಲ್ಲ ಇವೆ. ಇಲ್ಲಿ ಅಗತ್ಯಕ್ಕೆ ತಕ್ಕ ತಂತ್ರಜ್ಞಾನದ ಪ್ರಸ್ತಾಪ ಮಾಡುತ್ತಾರೆ. ಯಾವ ಯಾವ ಘಟ್ಟದಲ್ಲಿ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಾ ಇದೆ ಮತ್ತು ಯಾವ ಯಾವ ವ್ಯವಸ್ಥೆಗಳನ್ನು ತಂತ್ರಜ್ಞಾನದ ಮಡಿಲಿಗೆ ಒಪ್ಪಿಸ್ಸಲಾಗುತ್ತಿದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ತಂತ್ರಜ್ಞಾನ ಕೇವಲ ಶ್ರಮ, ಸಮಯದ ಉಳಿತಾಯ, ಗುಣಮಟ್ಟದ ನಿರ್ವಹಣೆಗಳನ್ನಷ್ಟೇ ಮಾಡುವುದಿಲ್ಲ. ಅದು ಬಹುಮುಖೀ ಪರಿಣಾಮದ ಸಾಧ್ಯತೆಗಳನ್ನು ತನ್ನೊಳಗಿರಿಸಿಕೊಂಡಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಪಾಶ್ಚಾತ್ಯ ಸಂಗೀತ ಮತ್ತು ಅದರ ಅನುಕರಣೆಯಿಂದ ಹುಟ್ಟಿದ ಸಂಗೀತ ಯಾಕೆ ಜನಪ್ರಿಯವಾಗುತ್ತದೆ ಮತ್ತು ಯಾಕೆ ನಮ್ಮದೇ ಶಾಸ್ತ್ರೀಯ ಸಂಗೀತ ಅಷ್ಟು ಬೇಗನೆ ಮತ್ತು ವಿಪುಲವಾಗಿ ಜನಪ್ರಿಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸರಳವಿಲ್ಲ. 1980ರಲ್ಲಿ ಎಚ್ ಎಂ ವಿ ಕಂಪೆನಿ ಹೊರತರುತ್ತಿದ್ದ ಕ್ಯಾಸೆಟ್ಟುಗಳಲ್ಲಿ ಕೂಡಾ ಶೇಕಡಾ 89ರಷ್ಟು ಸಿನಿಮಾ ಸಂಗೀತವಿತ್ತು. ಹತ್ತು ಶೇಕಡಾದಷ್ಟು ಭಕ್ತಿಗೀತೆಗಳು, ಭಾವಗೀತೆ, ಜನಪದ ಸೇರಿದ್ದರೆ ಕೇವಲ ಒಂದು ಶೇಕಡಾದಷ್ಟು ಮಾತ್ರ ನಮ್ಮ ಶಾಸ್ತ್ರೀಯ ಸಂಗೀತ ಬರುತ್ತಿತ್ತು. ಬಹುಶಃ ಪಾಶ್ಚಾತ್ಯ ಸಂಗೀತ ಸರಳವಾಗಿ ಹಾಡಲು ಸಾಧ್ಯವಿರುವುದು, ಅದರ ಶಾಸ್ತ್ರೀಯ ಹಿನ್ನೆಲೆ ಸಂಕೀರ್ಣವಿಲ್ಲದಿರುವುದು, ಅದು ಥಟ್ಟನೆ ಮನಸ್ಸನ್ನು ಆಕರ್ಷಿಸಬಲ್ಲ ಸೆಳೆತ ಹೊಂದಿರುವುದು, ಅದು ತನ್ನ ವೇಗ ಮತ್ತು ಲಯಗಳಿಂದ ಸಂತಸದ, ಉತ್ಸಾಹದ ಪ್ರತೀಕವಾಗಿಯೇ ಬಿಂಬಿಸಲ್ಪಟ್ಟಿರುವುದು ಇದಕ್ಕೆ ಕಾರಣವಿರಬಹುದೇನೊ. ಪರ್ಯಾಯವಾಗಿ ನಮ್ಮ ಶಾಸ್ತ್ರೀಯ ಸಂಗೀತ ನಿಧಾನಗತಿಯದ್ದು, ಆಕರ್ಷಣೆಯೇ ಪ್ರಧಾನ ಆಯಾಮವಾಗಿ ಹೊಂದಿಲ್ಲದೇ ಇರುವಂಥಾದ್ದು, ಅಂತರ್ಮುಖಿಯಾದದ್ದು ಮತ್ತು ಶಾಸ್ತ್ರೀಯವಾಗಿ ಸರಳ-ಸುಲಭಸಾಧ್ಯವಲ್ಲದ್ದು ಕೂಡ ಆಗಿದೆ. ಸಾಧಾರಣವಾಗಿ ಯಾರಾದರೂ ಗಣ್ಯರ ಸಾವಿನ ಶೋಕಾಚರಣೆಗೆ ನಿಮ್ಮ ರೇಡಿಯೋ, ಟೀವಿಗಳೆಲ್ಲ ಶಾಸ್ತ್ರೀಯ ಸಂಗೀತವನ್ನು ಬಳಸಿಕೊಂಡು ಬಂದಿರುವುದನ್ನು ಕಾಣುತ್ತೇವೆ. ಆಕರ್ಷಣೆ, ಜನಪ್ರಿಯತೆಗಳನ್ನೆ ಮಾನದಂಡವನ್ನಾಗಿರಿಸಿಕೊಂಡು ನೋಡುವಾಗ ಇದು ಸಹಜ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, March 3, 2016

ಎರಡು ಅನುವಾದಗಳು

ಪುಸ್ತಕಗಳ ಅವಲೋಕನ, ವಿಮರ್ಶೆಯ ಮೂಲಕ ಆಯಾ ಕೃತಿಯ ಕುರಿತು ಓದುಗರಲ್ಲಿ ಆಸಕ್ತಿ ಕುದುರಿಸುವುದು ಒಂದು ವಿಧಾನವಾದರೆ, ಒಂದು ಕೃತಿಯ ಆಯ್ದ ಭಾಗವನ್ನು ಕಾಣಿಸುವ, ಭಾಗಶಃ ಅನುವಾದವನ್ನು ಪ್ರಕಟಿಸುವ ಮೂಲಕ ಅದನ್ನು ಮಾಡುವುದು ಕೂಡ ಒಂದು ವಿಧಾನ. ಪ್ರಸ್ತುತ ಇಲ್ಲಿರುವ ಎರಡು ಪುಟ್ಟ ಅನುವಾದಗಳ ಉದ್ದೇಶವಿಷ್ಟೇ. ಈ ಅಪೂರ್ವ ಕೃತಿಗಳತ್ತ ನಿಮ್ಮ ಗಮನ ಹರಿಯಲಿ ಎಂಬುದೇ.

J.M. Coetzee ಬಗ್ಗೆ ನಿಮಗೆಲ್ಲ ಗೊತ್ತು. ಅವರ ಒಂದು ಕೃತಿ Doubling the Point. ಇದು ಸಂದರ್ಶನ, ಲೇಖನ ಎಲ್ಲ ಒಳಗೊಂಡ ಒಂದು ಕೃತಿ. ಇದರ ಸಂಪಾದಕ David Attwell. ಪುಸ್ತಕದ ಮೊದಲಿಗೇ ವಿಸ್ತೃತವಾದ ಒಂದು ಸಂದರ್ಶನವಿದೆ. ಅದರ ಮೊದಲ ಪ್ರಶ್ನೆ ಮತ್ತು ಉತ್ತರ ಇಲ್ಲಿದೆ. ಇದನ್ನು ಓದುತ್ತ ಓದುತ್ತ ನನಗೆಷ್ಟು ಖುಶಿಯಾಯಿತೆಂದರೆ ಇದನ್ನು ಈ ಹಂತದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ನಿಮಗೂ ಕುತೂಹಲಕರ ಎನಿಸಿದರೆ ಈ ಪುಸ್ತಕವನ್ನು ನೀವೂ ಕೊಂಡುಕೊಳ್ಳಿ.

============================================================================
David Attwell: ಮೊದಲಿಗೆ ನಾನು ಆತ್ಮಕಥಾನಕದ ಪ್ರಶ್ನೆಯೊಂದಿಗೆ ಆರಂಭಿಸುತ್ತೇನೆ. ಮಾತನಾಡ್ತ ಇರುವ ವಿಷಯದ ಅಥೆಂಟಿಸಿಟಿ ಮತ್ತು ಅಥಾರಿಟಿ ಎರಡರ ಕುರಿತೂ ಪರೀಕ್ಷಕ ದೃಷ್ಟಿಯಿಂದ ನೋಡೋ ಹಾಗೆ ಮಾಡುವ, ತೀವ್ರವಾದ ಒಂದು ಒತ್ತಡವನ್ನು ಉಂಟುಮಾಡುವ ವಿಷಯಕ್ಕೆ ಬಂದ್ರೆ, ನಿಮ್ಮ ಕೃತಿಗಳು ನಮ್ಮನ್ನ ಎಷ್ಟು ತೀವ್ರವಾಗಿ ಒತ್ತಾಯಿಸ್ತಾವೋ ಅಷ್ಟೇ ತೀವ್ರವಾಗಿ ಒತ್ತಾಯಿಸೋ ಸಮಕಾಲೀನ ಕೃತಿಕಾರರು ಇಲ್ಲ.Duskland ನಿಂದ ತೊಡಗಿ ಈ ಪ್ರಶ್ನೆ ಪ್ರತಿಯೊಂದು ಕೃತಿಯಲ್ಲೂ ಸುಪ್ತವಾಗಿ ಕಾಡುತ್ತಲೇ ಇತ್ತು ಮತ್ತದು Foe ಕೃತಿಯಲ್ಲಿ ವ್ಯಕ್ತವಾಗಿಯೇ ನಿರ್ವಹಿಸಲ್ಪಟ್ಟಿದೆ. ವಿಮರ್ಶೆಗಳಲ್ಲಿ ನೀವು ಟಾಲ್ಸ್ಟಾಯ್, ರೂಸೊ ಮತ್ತು ದಾಸ್ತೊವಸ್ಕಿಯವರ ಆತ್ಮಚರಿತ್ರಾತ್ಮಕ "ಸತ್ಯ" ಮತ್ತು ಆತ್ಮನಿವೇದನಾತ್ಮಕ ಬರಹಗಳತ್ತ ಬಹಳ ಆಳವಾದ ವಿಶ್ಲೇಷಣೆ ನಡೆಸಿದ್ದಿದೆ. ನಿಮ್ಮ ಕೃತಿಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನೀವು ನೀಡಿರುವ ಮಹತ್ವವನ್ನು ಗಮನಿಸುವಾಗ, ನಿಮ್ಮ ಗದ್ಯದಲ್ಲಿ ಸಾಮಾನ್ಯ ಅರ್ಥದ ಆತ್ಮಕಥಾನಕದಂಥ ಅಂಶ ಅತ್ಯಂತ ಕಡಿಮೆ ಇರುವುದು ಆಶ್ಚರ್ಯದ ವಿಷಯವೇನಲ್ಲ. ಈ ಹಿನ್ನೆಲೆಯಲ್ಲಿ, ನಿಮ್ಮ ವಿಮರ್ಶಾತ್ಮಕ ಬರವಣಿಗೆ ಮತ್ತು ಕಾದಂಬರಿ ಪ್ರಕಾರದ ಬಗ್ಗೆ ನೀವಾಡೋ ಮಾತುಗಳಿಗೆ ಇರುವ ಪ್ರೇರಣೆಗಳೇನು?

J.M.Coetzee: ಈ ನಿಮ್ಮ ಪ್ರಶ್ನೆಯನ್ನು ಆತ್ಮಕಥಾನಕ ಕುರಿತ ಪ್ರಶ್ನೆ ಅಂತ ಕಾಣೋದಕ್ಕಿಂತ ಸತ್ಯವನ್ನು ಹೇಳುವ ಕುರಿತ ಪ್ರಶ್ನೆಯನ್ನಾಗಿ ನೋಡಲು ನನಗೆ ಇಷ್ಟ. ಯಾಕೆಂದರೆ, ವಿಶಾಲಾರ್ಥದಲ್ಲಿ ಎಲ್ಲಾ ಬರವಣಿಗೇನೂ ಆತ್ಮಕಥಾನಕವೇ. ನೀವೇನೇ ಬರೆದರೂ, ಅದು ವಿಮರ್ಶೆಯಾಗಿರ್ಲಿ, ಕಥಾನಕವಿರ್ಲಿ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ. ನಿಜವಾದ ಪ್ರಶ್ನೆಯೇನಂದ್ರೆ, ಒಂದು ಬದುಕನ್ನು ಕಟ್ಟಿ ಕೊಡುವ ಈ ಮಹಾನ್ ಆತ್ಮಕಥನುದ್ದಿಪ್ತ ಬರವಣಿಗೆಯ ವಿದ್ಯಮಾನವೇನಿದೆ, ಈ ಸ್ವ-ನಿರ್ಮಾಣದ ಪ್ರಕ್ರಿಯೆ ( Tristram Shandy ಯ ಛಾಯೆ!) ಏನಿದೆ, ಅದು ಕೇವಲ ಕಥಾನಕಗಳನ್ನಷ್ಟೇ ಕೊಡುತ್ತಿದೆಯೆ? ಅಥವಾ, ಇದಕ್ಕೆ ಬದಲಾಗಿ, ಬೇರೆ ಬರವಣಿಗೆಗಿಂತ ಸತ್ಯಕ್ಕೆ ಹೆಚ್ಚು ಹತ್ತಿರವಾದ ಬರಹಗಳು ಹೀಗೆ ಹುಟ್ಟುತ್ತಿರುವ ಸ್ವ ಕುರಿತ ಕಥಾನಕಗಳಲ್ಲಿ, ಸ್ವ ದ ವಿಭಿನ್ನ ಆವೃತ್ತಿಯ ಕಥಾನಕಗಳಲ್ಲಿ ಹುಟ್ಟುತ್ತಿರಬಹುದೆ? ನನ್ನವೇ ಸತ್ಯಗಳ ಜೊತೆ ನಾನು ನಿಂತಿರುತ್ತ ನಾನೀ ಪ್ರಶ್ನೆಯನ್ನು ಹೇಗೆ ಬಗೆಹರಿಸಿಕೊಳ್ಳಲಿ?

ನನ್ನ ಮೊತ್ತಮೊದಲ ಪ್ರತಿಕ್ರಿಯೆ ಏನೆಂದರೆ, ನಾವು ಎರಡು ಬಗೆಯ ಸತ್ಯಗಳ ನಡುವೆ ಒಂದು ವ್ಯತ್ಯಾಸವನ್ನು ಗುರುತಿಸಬೇಕು. ಮೊದಲನೆಯದು, ವಸ್ತುನಿಷ್ಠವಾದ ಸತ್ಯ್. ಎರಡನೆಯದು ಇದರಾಚೆಗಿನದ್ದು, ಸ್ವಲ್ಪ ಭಿನ್ನವಾದ್ದು. ಮತ್ತಿದು, ಇವತ್ತಿನ ಸಂದರ್ಭದಲ್ಲಿ, ನಾವು ವಸ್ತುನಿಷ್ಠತೆಯ ಸತ್ಯವನ್ನು ದತ್ತ ಅಂತ ತಿಳಿದುಕೊಂಡು, ಅದಕ್ಕಿಂತ ಹೆಚ್ಚಿನದ್ದಾದ, ನಮ್ಮನ್ನು ವಿಪರೀತ ಕಾಡುವ ಒಂದು "ಮೇಲ್ಸ್ತರದ" ಸತ್ಯದ ಕಡೆಗೇ ಹೆಚ್ಚು ಗಮನ ಕೇಂದ್ರೀಕರಿಸಬೇಕು.

ಆದರೆ, ವಸ್ತುನಿಷ್ಠತೆಯ ಸತ್ಯ ಎಂದರೇನು? ನೀವು ನಿಮ್ಮ ನೆನಪುಗಳ ಗಣಿಯಿಂದ ಏನೋ ಒಂದಿಷ್ಟನ್ನು ಆರಿಸಿ ನಿಮ್ಮ ಜೀವನದ ಕತೆಯನ್ನು ಹೇಳುತ್ತೀರಿ ಮತ್ತು ಈ ಆರಿಸುವ ಪ್ರಕ್ರಿಯೆಯೇನಿದೆ, ಅದರಲ್ಲಿ ನೀವು ಬಹಳಷ್ಟನ್ನು ಬಿಟ್ಟುಬಿಡುತ್ತೀರಿ. ನೀವು ಮಗುವಾಗಿದ್ದಾಗ ನೊಣಗಳಿಗೆ ಹಿಂಸೆ ಕೊಡುತ್ತಿದ್ದಿರಿ ಎನ್ನುವ ಒಂದು ಸಂಗತಿಯನ್ನು ಹೇಳದೇ ಬಿಟ್ಟುಬಿಡಲು ನೀವು ಯೋಚಿಸಿದರೆ, ತಾರ್ಕಿಕವಾಗಿ ನೀವು ನಿಜವಾಗಿ ನೊಣಗಳಿಗೆ ಹಿಂಸೆ ಕೊಡದಿದ್ದಾಗ್ಯೂ ಕೊಟ್ಟಿರಿ ಎಂದು ಹೇಳಿದಷ್ಟೇ ಇದು ವಸ್ತುನಿಷ್ಠತೆಯ ಸತ್ಯಕ್ಕೆ ಅಪಚಾರವೆಸಗಿದಂತೆ. ಹೀಗಾಗಿ, ಆತ್ಮಚರಿತ್ರೆಯನ್ನು ಅಥವಾ ವಾಸ್ತವವಾಗಿ ಚರಿತ್ರೆಯನ್ನೇ ಸತ್ಯ ಎಂದು ಹೇಳುವಾಗ, ಎಲ್ಲಿಯವರೆಗೆ ಅದು ಸುಳ್ಳುಗಳನ್ನ ಹೇಳುತ್ತಿಲ್ಲವೋ ಅಲ್ಲಿಯವರೆಗೆ ಅದು ಸ್ಥೂಲವಾದ ಸತ್ಯದ ಒಂದು ಪರಿಕಲ್ಪನೆಯನ್ನು ಕೊಡುತ್ತದೆ ಎನ್ನಲು ಅಡ್ಡಿಯೇನಿಲ್ಲ.

ಹೀಗಾಗಿ, ಸತ್ಯದ ವಿಭಿನ್ನ ಪ್ರಕಾರಗಳ ನಡುವೆ ವ್ಯತ್ಯಾಸ ಗುರುತಿಸುವುದಕ್ಕಿಂತ ಈ ಪ್ರಶ್ನೆಯನ್ನು ಬೇರೆಯೇ ಒಂದು ಕೋನದಿಂದ ನೋಡೋಕೆ ಪ್ರಯತ್ನಿಸ್ತೇನೆ.

ನೀವು ಬರೀತಿರೋವಾಗ - ನಾನಿಲ್ಲಿ ಹೇಳ್ತಿರೋದು ಯಾವುದೇ ಪ್ರಕಾರದ ಬರವಣಿಗೇನೂ ಆಗಬಹುದು - ನಿಮಗೆ ನೀವು "ಅದರ" ಜೊತೆ ಎಷ್ಟರ ಮಟ್ಟಿಗೆ ತಾದ್ಯಾತ್ಮ ಕಂಡ್ಕೋತಾ ಇದ್ದೀರಿ ಅಥವಾ ಇಲ್ಲ ಅನ್ನೋದು ನಿಮಗೇ ತಿಳಿತಾ ಇರುತ್ತೆ. ನಿಮ್ಮಲ್ಲೊಂದು ಸೆನ್ಸರ್ ಇರುತ್ತೆ, ಸದಾ ಪ್ರತಿಸ್ಪಂದಿಸ್ತಾ ಇರೋ ಒಂದು ಚೇತನ ಇರುತ್ತೆ. ಅಂಥದ್ದೊಂದು ಇಲ್ದೇನೇ ನೀವು ಬರಿಯೋಕೇ ಸಾಧ್ಯ ಇಲ್ಲ. ಬರೆಯೋದು ಅಂದ್ರೆ ಸುಮ್ನೆ ನೀವು ಮೊದಲಿಗೆ ಏನನ್ನ ಬರೀಬೇಕು ಅಂತ ನಿರ್ಧರಿಸ್ತೀರಿ ಮತ್ತೆ ಆಮೇಲೆ ಅದನ್ನ ಹೇಳ್ತೀರೀ ಅನ್ನೋ ತರದ ಎರಡು ಸ್ತರದ ಒಂದು ಪ್ರಕ್ರಿಯೆ ಅಂತ ತಿಳಿಯೋದು ತೀರಾ ಹುಂಬತನ ಅಷ್ಟೆ. ಬದಲಿಗೆ, ನಮಗೆಲ್ಲರಿಗೂ ಗೊತ್ತಿರೋ ಹಾಗೆ, ನೀವು ಯಾಕೆ ಬರೀತೀರಿ ಅಂತಂದ್ರೆ ನಿಮಗೆ ನೀವು ಏನನ್ನ ಬರೀಲಿಕ್ಕಿದ್ದೀರಿ ಅನ್ನೋದು ಗೊತ್ತಿಲ್ದೇ ಇರೋದ್ರಿಂದ್ಲೇ. ಬರೆಯೋವಾಗ್ಲೆ, ಬರೆಯೋದ್ರಿಂದ್ಲೇ ನಿಮಗೆ ನೀವು ಏನನ್ನ ಹೇಳಬೇಕಂತಿದ್ರಿ ಅನ್ನೋದು ಸ್ಪಷ್ಟವಾಗುತ್ತಾ ಆಗುತ್ತಾ ಹೋಗುತ್ತೆ. ಅದೇ ಎಷ್ಟೋ ಸಲ ನಿಮಗೆ ಏನು ಹೇಳೋದಿತ್ತು ಅಥವಾ ಹೇಳಬೇಕಿತ್ತು ಅನ್ನೋದನ್ನ ಕಟ್ಟಿಕೊಡುತ್ತೆ. ಅದೇನನ್ನ ಹೇಳುತ್ತೋ ಅಥವಾ ಸ್ಪಷ್ಟಪಡಿಸುತ್ತೋ ಅದು ನೀವು ಯೋಚಿಸಿದ್ದಕ್ಕಿಂತ ಅಥವಾ ಅರೆಬರೆ ಕಲ್ಪಿಸಿದ್ದಕ್ಕಿಂತ ತೀರ ಭಿನ್ನವಾಗಿರಲೂ ಬಹುದು. ಈ ಅರ್ಥದಲ್ಲಿ ನಾನು ಹೇಳಿದ್ದು, ಬರವಣಿಗೆ ನಮ್ಮನ್ನ ಬರೆಯುತ್ತೆ ಅಂತ. ಒಂದೇ ಒಂದು ಕ್ಷಣದ ಹಿಂದೆ ನಮ್ಮ ನಿರೀಕ್ಷೆ ಏನಿತ್ತು ಅನ್ನೋದನ್ನ ಬರವಣಿಗೆ ನಮಗೆ ತೋರಿಸಿಕೊಡುತ್ತೆ ಅಥವಾ ಸೃಷ್ಟಿಸಿಕೊಡುತ್ತೆ. ಮತ್ತೆ, ಇಲ್ಲೂ ನಾವೇನೂ ಯಾವಾಗ್ಲೂ ಈ ಬಗ್ಗೆ, ಯಾವುದು ಯಾವುದನ್ನ ಹೇಳುತ್ತೆ ಅನ್ನುವ ಬಗ್ಗೆ ಗ್ಯಾರಂಟಿ ಕೊಡೋಕ್ಕಾಗಲ್ಲ.

ಬರವಣಿಗೆ ಅನ್ನೋದು, ಈ ತರ ನಮ್ಮನ್ನ ಒಂದು ಖಾಲೀ ಹಾಳೆಗೆ ಕೊಂಡೊಯ್ಯುವ, ‘ಅನ್ಯ’ಕ್ಕೆ ನಮ್ಮನ್ನು ದೂಡುತ್ತಲೇ ಇರುವ ಒಂದು ಒತ್ತಡ ಮತ್ತು ಅದಕ್ಕೆ ಒಲ್ಲದಿರುವ ಒಂದು ಪ್ರತಿರೋಧದ ನಡುವಿನ ಆಟ ಇದ್ದ ಹಾಗೆ. ಈ ಪ್ರತಿರೋಧದ ಒಂದು ಭಾಗ ಮನಸ್ಸಿಗೆ ಸಂಬಂಧಿಸಿದ್ದು. ಆದರೆ ಅದರ ಇನ್ನೊಂದು ಭಾಗ ಒಂದು ಭಾಷೆಯ ಒಳಗೇ ನಿರ್ಮಾಣವಾಗಿರುವಂಥಾ ಅಂತಃಸ್ಪೂರ್ತ ನೆಲೆಯದ್ದು. ಒಂದು ಶಬ್ದ ಅತ್ಯಂತ ಸಹಜವಾಗಿ ಇನ್ನೊಂದು ಶಬ್ದವನ್ನ ತನ್ನೆಡೆಗೆ ಸೆಳೆದುಕೊಳ್ಳುವಂಥ ಬಗೆಯದ್ದು. ತಮ್ಮಷ್ಟಕ್ಕೆ ತಾವೇ ವೈವಿಧ್ಯಮಯವಾದ, ಚಿತ್ರವಿಚಿತ್ರವಾದ ಒಂದು ವಿನ್ಯಾಸಕ್ಕೆ ಬದ್ಧವಾಗುತ್ತ, ನಿಷಿದ್ಧವಾಗುತ್ತ ಹೋಗುವ ಲಾಲಿತ್ಯದ್ದು. ಈ ಎಲ್ಲ ಬಗೆಯ ಅಂತರ್ ಕ್ರೀಡೆಯ ಫಲವಾಗಿ, ನೀವು ನಿಜಕ್ಕೂ ಅದೃಷ್ಟಶಾಲಿಯೇ ಆಗಿದ್ದರೆ, ನೀವು ಗುರುತಿಸುವಂಥ ಅಥವಾ ನೀವು ಗುರುತಿಸಲು ಬಯಸುವಂಥಾ ಒಂದು ಸತ್ಯ ನಿಮಗೆ ಪ್ರತ್ಯಕ್ಷವಾಗುತ್ತೆ.

"ನೇರವಾದ" ಆತ್ಮಕಥಾನಕದ ನಿರೂಪಣೆ ಅನ್ನೋದು ವಸ್ತುಶಃ ನಾನಿಲ್ಲಿ ವಿವರಿಸ್ತಾ ಇರೋದಕ್ಕೆ ವಿರುದ್ಧವಾದದ್ದು, ಭಿನ್ನವಾದದ್ದು ಅಂತೇನೂ ನಾನು ತಿಳಿದಿಲ್ಲ. ಸತ್ಯ ಅನ್ನೋದು ಬರೆಯುವ ಪ್ರಕ್ರಿಯೆಯಲ್ಲಿ ಸಿದ್ಧಿಸೋದು ಅಥವಾ ಬರೆಯುವ ಪ್ರಕ್ರಿಯೆಯ ಮೂಲಕ ಸಿದ್ಧಿಸುವಂಥಾದ್ದು.

ಸೊ ನಾವು ಸುಳ್ಳುಗಳ ಮೂಲ ಪ್ರಶ್ನೆಗೆ ಮರಳಬಹುದು. ಆತ್ಮಕಥಾನಕಗಳ ಬಗ್ಗೆ ಇಂಥಾ ಒಂದು ವ್ಯಾಖ್ಯಾನವನ್ನ ರೂಪಿಸೋದಕ್ಕೆ ನನಗೆ ಇಷ್ಟ; ಅದೆಂದ್ರೆ, ಅದೊಂದು ಬಗೆಯ ಸ್ವ-ನಿವೇದನೆ. ಅಲ್ಲಿ ನಿಮ್ಮ ಇತಿಹಾಸದ ವಾಸ್ತವಗಳಿಗೆ ನೀವು ಸಲ್ಲಿಸುವುದು ಅನಿವಾರ್ಯವಾಗಿದೆ. ಆದರೆ ಪ್ರಶ್ನೆ ಇರುವುದು ಯಾವ ವಾಸ್ತವ? ಎಲ್ಲಾ ವಾಸ್ತವಗಳೆ? ಅಲ್ಲ. ಎಲ್ಲಾ ವಾಸ್ತವವೆಂದರೆ ಸಿಕ್ಕಾಪಟ್ಟೆಯಾಯ್ತು. ನೀವೀಗ ನಿಮ್ಮನ್ನು ಉದ್ದೇಶಪೂರ್ವಕ ರೂಪಿಸುತ್ತ ಬಂದ ಸಂಗತಿಗಳನ್ನು ಗುರುತಿಸುತ್ತ ಆರಿಸುತ್ತೀರಿ. ಈ ಪ್ರಸ್ತುತ ಪ್ರಕ್ರಿಯೆಯಲ್ಲಿ ನಿಮ್ಮನ್ನು ಉದ್ದೇಶಪೂರ್ವಕ ರೂಪಿಸುತ್ತ ಬಂದ ಎಂದರೆ ಯಾವ ಉದ್ದೇಶ? ತಕ್ಷಣಕ್ಕೆ ನಾನು ಸೂಚಿಸುವುದೆಂದರೆ: ನಾನು 1970 ರಿಂದ 1990 ರ ವರೆಗೆ (ಕಾದಂಬರಿಗಳನ್ನು ಹೊರತುಪಡಿಸಿ, ಯಾಕೆಂದರೆ ಅವು ಸ್ವತಃ ತಮ್ಮ ಶೋಧವನ್ನು ಕೈಗೊಳ್ಳಲು ಬೇಕಾದ ಎಲ್ಲವನ್ನೂ ಸ್ವಯಂ ಹೊಂದಿರುವಂಥವು) ಏನನ್ನು ಬರೆದೆನೊ, ಎಲ್ಲ, ವಿಮರ್ಶಾತ್ಮಕ ಪ್ರಬಂಧಗಳು, ಅವಲೋಕನ ಮುಂತಾಗಿ - ಅವುಗಳ ಪ್ರಕಾರ ಏನಿದೆ, ಅದೇ ಅವುಗಳ ಬಗ್ಗೆ ಸಾಮಾನ್ಯಾರ್ಥದಲ್ಲಿ ಎಲ್ಲವನ್ನು ಹೇಳುವಂಥ ಅವಕಾಶವಿಲ್ಲದವುಗಳು - ಅದನ್ನು ಬರೆಯಲು ನನ್ನನ್ನು ಪ್ರೇರೇಪಿಸಿದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು.

ಅದೇ ನನ್ನ ನಿಜವಾದ ಉದ್ದೇಶವೆ? ಸತ್ಯ ಏನೆಂದರೆ, ನಮ್ಮ ಈ ಮಾತುಕತೆಯ ಹಂತದಲ್ಲಿ ಬಹುಶಃ ಆಗ ನನಗೆ ಇವತ್ತು ಹೇಗಿರಬೇಕು ಎಂಬುದರ ಹಿಂದೆ ನನಗಿದ್ದ ನನ್ನವೇ ಪ್ರೇರಣೆಗಳು, ನಿರೀಕ್ಷೆಗಳು ಏನಿದ್ದವು, ಇವತ್ತು ಹಿಂದಿರುಗಿ ನೋಡಿದರೆ, ಆ ಉದ್ದೇಶದ ಬಗ್ಗೆ ಏನೇನೂ ಗೊತ್ತಿಲ್ಲ. ನಿರೀಕ್ಷೆ ಮತ್ತು ಉದ್ದೇಶ ಎರಡೂ ಒಂದೇ ಪಾತಳಿಯವು: ಒಂದು ಇನ್ನೊಂದರ ಮೇಲೆ ಯಜಮಾನಿಕೆ ತೋರಿಸುವುದಿಲ್ಲ. ಬಹುಶಃ ಅದಕ್ಕೇ ನಾನು ಸಂಭಾಷಣೆಯ ಒಂದು ವಿಧಾನದತ್ತ ಹೊರಳಿದ್ದೇನೆ ಅನಿಸುತ್ತದೆ. ನನ್ನದೇ ಸ್ವಗತದ ಸ್ಥಾಗಿತ್ಯದಿಂದ ಅತ್ತಿತ್ತ ಜರುಗುವ ಒಂದು ಉಪಾಯವಾಗಿ ಅಂತನೂ ಹೇಳಬಹುದು.

************************************************************************************************************************************************
ಇದು Adil Jussawalla ಅವರ Maps for a Mortal Moon ಎಂಬ ಕೃತಿಯ (ಸಂಪಾದಕರು ಕವಿ, ಕಾದಂಬರಿಕಾರ ಜೆರ್ರಿ ಪಿಂಟೊ) ಒಂದು ಪ್ರಬಂಧ. ಅಂಜಲಿ ರಾಮಣ್ಣ ಮತ್ತು ಮಮತಾ ಅರಸೀಕೆರೆಯವರಿಬ್ಬರೂ ಈ ಲೇಖನದ ಪೂರ್ಣಪಠ್ಯ ಓದುವ ಆಸೆ ವ್ಯಕ್ತಪಡಿಸಿದಾಗ ಅನುವಾದಿಸುವ ಹುಮ್ಮಸ್ಸಿಗೆ ಬಿದ್ದು ಬರೆದಿದ್ದು. ಅವರಿಬ್ಬರಿಗೂ ನನ್ನ ಕೃತಜ್ಞತೆ ಸಲ್ಲಬೇಕು. ಇಡೀ ಪುಸ್ತಕದ ಒಂದೊಂದು ಬರಹವೂ ಆಪ್ತವಾಗಿ, ನಮ್ಮನ್ನು ಕೈಹಿಡಿದು ನಡೆಸುತ್ತಾ ಬೆಳೆಸುತ್ತಾ ಹೋಗುವಂಥವು. ಪುಸ್ತಕವನ್ನೇ ನೀವು ಓದಬೇಕು, Adil Jussawalla ಅವರ ಇಂಗ್ಲೀಷಿನ ಸೊಗಡಿನಲ್ಲೇ ಅದನ್ನು ನಿಮ್ಮದಾಗಿಸಿಕೊಳ್ಳಬೇಕು ಎಂಬ ಅಪೇಕ್ಷೆಯಿಂದಷ್ಟೇ ಇದನ್ನಿಲ್ಲಿ ಕಾಣಿಸುತ್ತಿದ್ದೇನೆ.
-------------------------------------------------------------------------------------------------------------------------------------------------
ಯಾರು ನನ್ನ ಓದುಗ?

ಮುಂಬಯಿಯ ಮೂವರು ಲೇಖಕರು ತಮ್ಮ ಬದುಕಿನ ಒಂದು ಮಹತ್ತರ ಘಟ್ಟ ತಲುಪಿದ ವರ್ಷವಿದು. ಇದಕ್ಕೂ ಯಾವುದೇ ದಾಳಿ, ಬಾಂಬ್ ಸ್ಫೋಟ ಅಥವಾ ಆಘಾತದ ನಂತರದ ಆತಂಕದಂಥ ಸಂಗತಿಗೂ ಏನೇನೂ ಸಂಬಂಧವಿಲ್ಲ ಬಿಡಿ. ಅವರು ಸಹಜವಾಗಿ ಬದುಕಿನ ಗತಿಗೆ ತಕ್ಕಂತೆ ಒಂದು ವರ್ಷ ಹೆಚ್ಚು ಹಳಬರಾದರು ಅಷ್ಟೇ. ಆದರೆ ಮಾಧ್ಯಮದವರಿಗೆ ಇದೊಂದು ವಿಶೇಷ. ಮರಾಠಿ ಕವಿ ವಿಂದಾ ಕರಣ್ದಿಕರ್ ಅವರಿಗೆ ಎಪ್ಪತ್ತೈದಾಯಿತು. ಅದೇ ರೀತಿ ಮರಾಠಿ ನಾಟಕಕಾರ ಪಿ ಎಲ್ ದೇಶಪಾಂಡೆಯವರಿಗೂ ಆಯಿತು. ಮತ್ತೆ ಉರ್ದು ಕವಿ ಅಲಿ ಸರ್ದಾರ್ ಜಫ್ರಿ ಅವರಿಗೆ ಎಂಭತ್ತು ತುಂಬಿತು. ಅವರ ಸಾಧನೆಗಳ ಬಗ್ಗೆ ಮತ್ತು ಮಹತ್ವದ ಕುರಿತು ನಮಗೆಲ್ಲ ತಿಳಿಸಿದ್ದಾಯಿತು.

ಇದೆಲ್ಲದರಿಂದ ನಾನೇನು ಮಾಡಲಿ? ಏನು ಮಾಡಬಹುದಿತ್ತು ನಾನು? ಸರಳವಾಗಿ ಏನೂ ಇಲ್ಲ. ವಿಂದಾಜಿ ಮತ್ತು ಜಫ್ರಿ ಸಾಬ್ ನನಗೆ ವೈಯಕ್ತಿಕವಾಗಿ ಗೊತ್ತಿರುವವರು. ಅವರಿಗೊಂದು ಕರೆ ಮಾಡಿ ಶುಭ ಕೋರಬಹುದಾಗಿತ್ತು. ನಾನದನ್ನ ಮಾಡಲಿಲ್ಲ ಎಂದರೆ ಅದರರ್ಥ ಇಷ್ಟೇ, ಅವರಿಗೆ ತಮ್ಮ ಜನ್ಮದಿನದ ಕುರಿತು ನೆನಪಿಸುವುದು ಹಿಡಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕೆಲವರಿಗೆ ಅದೆಲ್ಲ ಅಷ್ಟು ಹಿಡಿಸುವುದಿಲ್ಲ. ಮತ್ತೆ, ಬಹುಶಃ ವರ್ಷಗಟ್ಟಲೆ ನಾನೇಕೆ ಅವರನ್ನು ಭೇಟಿಯಾಗಲಿಲ್ಲ ಎನ್ನುವುದಕ್ಕೆ ಸರಿಯಾದ ವಿವರಣೆ ನನ್ನ ಬಳಿಯಿರಲಿಲ್ಲ ಎಂತಲೂ ಇದ್ದೀತು. ಮತ್ತೇನೆಂದರೆ, ನಾನು ಎದ್ದು ಹೋಗಿ ಅವರ ಪುಸ್ತಕಗಳನ್ನ ಕೊಂಡುಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಿದ್ದರೂ ನಾನು ಅವುಗಳನ್ನು ಓದುವುದಂತೂ ಸಾಧ್ಯವಿರಲಿಲ್ಲ.

ಹೇಗೆ ಮತ್ತು ಯಾವಾಗ ನಾನು ಉರ್ದು ಓದಬಲ್ಲ ನನ್ನ ಶಕ್ತಿಯನ್ನು ಕಳೆದುಕೊಂಡೆನೋ ನನಗೇ ಖಚಿತವಿಲ್ಲ, (ಅದು ನಾನು ಹಿಂದೆ ಒಂದನೇ ತರಗತಿಯಲ್ಲಿ, ಕಲಿತ ಭಾಷೆಗಳಲ್ಲಿ ಒಂದಾಗಿತ್ತು. ಈಗದನ್ನು ಮೂರನೆಯ ತರಗತಿಯಲ್ಲಿ ಕಲಿಸಲಾಗುತ್ತಿದೆ.) ಅಂತೂ ಎಲ್ಲೋ ನಡುವೆ ಅದು ಕೈತಪ್ಪಿ ಹೋಗಿದೆ. ಮರಾಠಿ ನನಗೆ ಇನ್ನೊಂದೇ ತರದ ಸಮಸ್ಯೆಯನ್ನೊಡ್ಡುತ್ತದೆ. ಅದರ ಲಿಪಿಯನ್ನು ನಾನು ಓದಬಲ್ಲೆ, ಆದರೆ ಕವಿತೆ ಅರ್ಥವಾಗುವುದು ಅಷ್ಟರಲ್ಲೇ ಇದೆ. ಯಾರಾದರೂ ಒಂದು ಕವಿತೆಯನ್ನು ಉರ್ದುವಿನಲ್ಲಿ ಓದಿ ಮತ್ತೆ ಅದನ್ನೇ ಮರಾಠಿಯಲ್ಲಿ ಓದಿದರೆ ನನಗೆ ಉರ್ದು ಆವೃತ್ತಿಯನ್ನೇ ಪೂರ್ತಿಯಾಗಿ ಅನುಭವಿಸುವುದು ಸಾಧ್ಯ.

ಇದು ನಾನು: ಭಾರತದ ಅತಿದೊಡ್ಡ ನಗರದಲ್ಲಿರುವ, ಪ್ರತಿನಿತ್ಯ ಕಿವಿಯ ಮೇಲೆ ಬೀಳುವ ಐದು ಭಾಷೆಗಳನ್ನು (ಮುಂಬೈ ಇಂಗ್ಲೀಷ್, ಮುಂಬೈ ಹಿಂದಿ, ಮರಾಠಿ, ಪಾರ್ಸಿ ಗುಜರಾತಿ, ಮತ್ತು ಫ್ರೆಂಚ್) ಕೇಳಿಸಿಕೊಳ್ಳುತ್ತಲೇ ಇರುವ, ಓದಲು ಬರದಿದ್ದರೂ ಒಂದು ಭಾಷೆಯ(ಉರ್ದು) ಕವಿತೆಗಳನ್ನು ಸುಮಾರಾಗಿ ಅರ್ಥಮಾಡಿಕೊಳ್ಳಬಲ್ಲ ಮತ್ತು ಓದಲು ಬರುವ ಭಾಷೆಯ(ಮರಾಠಿ) ಕವನಗಳನ್ನು ಅರ್ಥಮಾಡಿಕೊಳ್ಳಲಾರದ ಒಬ್ಬ ಓದುಗ. ನನ್ನ ಮಿಲಿಯಗಟ್ಟಲೆ ಕ್ಲೋನ್ ತಯಾರಿಸಿ (ಓ ದೇವರೆ!) ನೋಡಿ, ನಿಮಗೆ ಭಾರತದ ಪ್ರತಿಯೊಂದು ನಗರ ಪಟ್ಟಣಗಳಲ್ಲಿ ನನ್ನ ಚಿತ್ರ ಕಾಣಸಿಗುತ್ತದೆ. ತಮಿಳಿಗೆ ತೆಗೆದುಕೊಂಡು ಹೋಗಿ ಹಾಕಿ, ಉರ್ದುವನ್ನ ಹೊರಗೆ ತೆಗೆಯಿರಿ, ಬಂಗಾಳಿಯನ್ನು ಒಳಗೆ ತುರುಕಿ, ಇಲ್ಲಿ ಅಸ್ಸಾಮೀ ಹೊರಗೆ ತೆಗೆಯಿರಿ ಮತ್ತು ಸರಳವಾದ ನೆಲೆಯಲ್ಲಿ ನಿಮಗೊಂದು ಸಂಕೀರ್ಣವಾದ ಚಿತ್ರ, ಭಾರತೀಯ ಓದುಗನದ್ದು ಸಿಗುತ್ತದೆ. ಸರಳವಾದ ನೆಲೆಯಲ್ಲಿ ಎಂದೆ. ಭಾಷಿಕ ಚರ್ವಿತ ಚರ್ವಣವಾದ, ಒಂದು ಭಾಷೆಯ ಛಾಯೆ ಇನ್ನೊಂದು ಭಾಷೆಯ ಮೇಲೆ ಪಸರಿಸಿಕೊಂಡಂತಿರುವ, ಒಂದು ಜಿಗ್ಜಾಗ್ ವರ್ಣಗಳ ತೇಪೆ ಹಚ್ಚಿದಂಥ ಚರ್ಮವುಳ್ಳ ಬಾರ್ಬಿ ಬೊಂಬೆ ಅಥವಾ ಹುಚ್ಚುಚ್ಚು ವರ್ಣವಿನ್ಯಾಸಗಳ, ಜಗತ್ತಿನ ಇನ್ಯಾವುದೇ ಭಾಗದಲ್ಲಿ ಕಾಣಸಿಗದ ಒಂದು ವಿಲಕ್ಷಣ ಚಿತ್ರವದು.

ಗೊತ್ತು, ಈ ಬಗೆಯ ಹೇಳಿಕೆ ಕೊಂಚ ಉತ್ಪ್ರೇಕ್ಷೆಯದೇ. ನಮಗೆ ನಮ್ಮದೇ ವೈಶಿಷ್ಟ್ಯವನ್ನು ತುಸು ಹೆಮ್ಮೆಯೊಂದಿಗೆ ಹೇಳಿಕೊಂಡು ಅಭ್ಯಾಸ. ಜಗತ್ತಿನ ಇತರೆಡೆಗಳಲ್ಲಿರುವ ವೈವಿಧ್ಯಮಯ ಭಾಷೆಯ, ಹಲವು ಸಂಸ್ಕೃತಿಗಳ ಮಂದಿಯನ್ನು ಮರೆತು ಮಾತನಾಡುತ್ತೇವೆ. ಆದಾಗ್ಯೂ ಇರಲಿ. ಮುಖ್ಯವಾದದ್ದೆಂದರೆ, ನಾವು ವಿಶಿಷ್ಟ ಅಂತ ತಿಳಿದುಕೊಳ್ಳುತ್ತೇವಲ್ಲ, ಆ ಭಾವನೆಯನ್ನು ಇಲ್ಲಿ ಗಮನಿಸಬೇಕು. ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಒಂದು ಕವಿತಾ ವಾಚನ ಕಾರ್ಯಕ್ರಮದಲ್ಲಿ ಇದನ್ನು ತುಂಬ ಪರಿಣಾಮಕಾರಿಯಾಗಿ ಗಮನಿಸುವಂತಾಯಿತು.

ಸೈಂಟ್ ಕ್ಸೇವಿಯರ್ ಕಾಲೇಜಿನ ಇಂಗ್ಲೀಷ್ ಡಿಪಾರ್ಟ್ಮೆಂಟಿನ ವಾರ್ಷಿಕ ಸಾಹಿತ್ಯ ಸಂಭ್ರಮದ ಸಂದರ್ಭ. ಕವಿತಾ ವಾಚನಕ್ಕೆ ಬಂದವರು ಗುಜರಾತಿ ಕವಿ ಸಿತಾಂಶು ಯಶಸ್ಚಂದ್ರ. ಅವರ ಕೆಲವು ಕವನಗಳ ಇಂಗ್ಲೀಷ್ ಅನುವಾದವನ್ನು ಓದಿದ ಬಳಿಕ ಮತ್ತು ಮೂಲ ಕವನಗಳನ್ನೇ ಓದಿದ ಬಳಿಕ ಅವರು ಗುಜರಾತಿ ಕವಿತೆಗಳ ಬಗ್ಗೆ ಮಾತನಾಡಿದರು.

ಯು ಆರ್ ಅನಂತಮೂರ್ತಿಯವರ ಮಾತುಗಳಲ್ಲಿ ಹೇಳುವುದಾದರೆ, ಅವರು ಎರಡು ಬಗೆಯ ಭಾಷೆಗಳಿವೆ ಎನ್ನುತ್ತಿದ್ದರು: ಮಾತೃಭಾಷೆ ಮತ್ತು ಪಿತೃಭಾಷೆ. ಗುಜರಾತಿ ಒಂದು ಮಾತೃಭಾಷೆ. ಹಾಗೆಯೇ ಮರಾಠಿ ಕೂಡ. ಇಂಗ್ಲೀಷ್ ಮತ್ತು ಹಿಂದಿ ಪಿತೃಭಾಷೆಗಳು. ಹಿಂದೆ ಇದರಲ್ಲಿ ಒಂದೋ ಎರಡೋ ಅಪಭ್ರಂಶಗಳಿದ್ದಿರಬಹುದು, ಆದರೆ ಇವತ್ತಿನ ಗುಜರಾತಿ ಕವಿಗಳಿಗೆ ರಾಷ್ಟ್ರೀಯ ಮಟ್ಟದ ಕವಿಯೆನ್ನಿಸಿಕೊಳ್ಳುವ, ಮಹಾಕವಿಯಾಗುವ ಉದ್ದೇಶಗಳಿಲ್ಲ. ಅವರು ತಮ್ಮ ನೆರೆಯವನೊಂದಿಗೆ ಮಾತನಾಡುವಷ್ಟೇ ಸಹಜವಾಗಿ, ಪಕ್ಕದಲ್ಲಿ ಕುಳಿತವನೊಂದಿಗೆ ಹಂಚಿಕೊಳ್ಳುವಷ್ಟೇ ಸಹಜವಾಗಿ ಬರೆಯುತ್ತಾರೆ.

ಇದಂತೂ ನಿಶ್ಚಯವಾಗಿ ಹೆಮ್ಮೆಪಡಬೇಕಾದ ವಿಚಾರ, ಅದು ನಿಜವಾಗಿದ್ದರೆ. ರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಳ್ಳಬಯಸುವ ಚಟದಿಂದ ಆರೋಗ್ಯಕರ ಅಂತರವನ್ನು ಕಾಯ್ದುಕೊಂಡು, ಸಾರ್ವಜನಿಕ ವೇದಿಕೆಗಳಲ್ಲಿ ಕಳೆದೇ ಹೋಗುತ್ತಿರುವಂಥ, ಒಳ್ಳೆಯ ಕಾವ್ಯದ ಆಪ್ತವಾದ ಸಂವೇದನೆಗಳನ್ನುಳಿಸಿಕೊಳ್ಳುವ ಒಂದು ಸ್ವಸ್ಥ, ಅನುಕರಣೀಯ ಕ್ರಮ ಇದಾಗಿದೆ. ಆದರೆ, ಸಿತಾಂಶು ಅವರ ಈ ನೆರೆಯ ವ್ಯಕ್ತಿ, ಪಕ್ಕದಲ್ಲಿ ಕುಳಿತ ವ್ಯಕ್ತಿ ಯಾರು? ವಿಂದಾಜಿಯವರಿಗೆ ಯಾರು? ನನಗೆ ಯಾರು?

ಕವಿತಾ ವಾಚನದ ಬಳಿಕ ಅವರು ಆಡಿದ ಮಾತುಗಳನ್ನು ಗಮನಿಸಿದರೆ ಈ ಪ್ರಶ್ನೆ ಬಹಳ ಮಹತ್ವದ್ದಾಗಿ ಕಾಣಿಸುತ್ತದೆ. ಚಿನುವಾ ಅಚಿಬೆಯನ್ನು ಕುರಿತು ಮಾತನಾಡುತ್ತ ಅವರು ಹೇಳುತ್ತಾರೆ, ಆತ ಯುವ ನೈಜೀರಿಯನ್ನರಿಗೆ ಬಹಳ ಕಟ್ಟು ನಿಟ್ಟಾಗಿ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದನಂತೆ, ನೀವು ನಿಮ್ಮ ಅಜ್ಜಂದಿರನ್ನು ಹೀಗಳೆಯುವುದಕ್ಕೂ ಮುನ್ನ ನಿಮ್ಮ ನಿಮ್ಮ ತಂದೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಅಂದರೆ, ನೀವು ವಸಾಹತುಶಾಹಿಯ ವಿರುದ್ಧ ಮತ್ತು ಗುಲಾಮಗಿರಿಯ ವಿರುದ್ಧ ಪ್ರತಿಗಾಮಿ ಧೋರಣೆಯಿಂದ ಮಾತನಾಡುವುದಕ್ಕೂ ಮುನ್ನ ನನ್ನನ್ನು ಓದಿಕೊಳ್ಳಿ. ಓದಿಕೊಳ್ಳಲೇ ಬೇಕೆ? ಬಹುಶಃ ಹೌದು. ಓದಿಕೊಳ್ಳುವರೆ? ಇಲ್ಲ ಎಂದೇ ಅನಿಸುತ್ತದೆ. ನನಗೆ ಬಾಲ್ಡ್ವಿನ್ ಅವರ ಬರವಣಿಗೆಗೆ ಹೆಮ್ಮಿಂಗ್ವೇ ಅವರ ಬರಹಗಳಷ್ಟು ತಮ್ಮ ಬರವಣಿಗೆ ರಿಲೆವಂಟ್ ಎನಿಸದೇ ಹೋದ ಬಗ್ಗೆ ಹಿರಿಯ ರಿಚರ್ಡ್ ರೈಟ್ಸ್ ಅವರಿಗಿದ್ದ ನೋವಿನ ಬಗ್ಗೆ ಸ್ವತಃ ಜೇಮ್ಸ್ ಬಾಲ್ಡ್ವಿನ್ ಅವರ ಮರೆಯಲಾಗದ ಪ್ರತಿಕ್ರಿಯೆ ನೆನಪಿಗೆ ಬಂತು. ಕಿರಿಯ ಕರಿಯರು ಹಿರಿಯ ಕರಿಯರಿಗೆ ಋಣಿಯಾಗಿರಬೇಕು. ಇಲ್ಲವಾದಲ್ಲಿ ಪರಂಪರೆಯನ್ನು ಹೇಗೆ ಕಟ್ಟುತ್ತೀರಿ? ರೈಟ್ ಅವರಿಗೆ ಖಂಡಿತವಾಗಿ ನೋವುಂಟು ಮಾಡುವಂತಿದ್ದ ಬಾಲ್ಡ್ವಿನ್ ಅವರ ಪ್ರತಿಕ್ರಿಯೆ ಹೀಗಿತ್ತು: "ನಮ್ಮ ಪಿತೃಗಳನ್ನು ನಾವೇ ಆರಿಸಿಕೊಳ್ಳುತ್ತೇವೆ."

ಎಳೆಯ ನೈಜೀರಿಯನ್ನರು, ಅವರು ಬರಹಗಾರರಾಗಿದ್ದರೇ ಇಲ್ಲವೇ ಎಂಬುದು ಸಿತಾಂಶು ಅವರ ಮಾತುಗಳಿಂದ ಸ್ಪಷ್ಟವಾಗಲಿಲ್ಲ, ಅಚಿಬೆಯವರ ಎಚ್ಚರಿಕೆಗೆ ಕೂಡ ಅಷ್ಟೇ ಚೆನ್ನಾಗಿ ಪ್ರತಿಕ್ರಿಯಿಸಿರಬೇಕು. ಆತ ಅವರ ಪಿತೃಗಳಲ್ಲೊಬ್ಬನಾಗಿರಲಿಲ್ಲ. ಅವರು ಬೇರೆಯವರನ್ನೇ ಆರಿಸಿಕೊಂಡರು. ಆದರೆ ಅವರು ತಮ್ಮ ನೆರೆಯವರನ್ನು ಆರಿಸಿಕೊಳ್ಳಬಹುದಿತ್ತೆ, ಯಾರಾದರೊಬ್ಬನನ್ನು?

ನಿಶ್ಚಯವಾಗಿಯೂ ನಮ್ಮ ದೈನಂದಿನ ಬದುಕಿನಲ್ಲಿ ನಾವು ಹಾಗೆ ಮಾಡಲಾರೆವು. ಆದರೆ, ಅಕ್ಷರ ಪ್ರಪಂಚದಲ್ಲಿ ಸದಾ ಕಾಲ ಅದು ಸಾಧ್ಯ. ಮತ್ತೆ, ಸಿತಾಂಶು ಅವರು ಹೇಳಿದ ಈ ‘ನೆರೆಯವ’ ಎಂಬ ಶಬ್ದವನ್ನು, ನಾವು ಅವರ ಮಾತಿನ ಅಂತರಾರ್ಥವನ್ನು ಕಂಡುಕೊಳ್ಳಬೇಕಿದ್ದಲ್ಲಿ, ಅಕ್ಷರ ಪ್ರಪಂಚದ ಸಂದರ್ಭದಲ್ಲಿಟ್ಟೇ ಅದನ್ನು ಪರಿಗಣಿಸಬೇಕಿದೆ. ಅವರು ಆ ಮಾತನ್ನಾಡಿದ ಸಂದರ್ಭದಲ್ಲಿ ಅವರದನ್ನು ಬಳಸಿದ ರೀತಿಯ ಅಂತರಾರ್ಥವೇನಿತ್ತೆಂದರೆ, ಪರಸ್ಪರ ಸಂವಹನ ಸಾಧ್ಯವುಳ್ಳ ಒಂದು ಭಾಷೆ ಉತ್ತಮ ನೆರೆಯಾತನನ್ನು ನೀಡುತ್ತದೆ ಮತ್ತು ಪರಸ್ಪರ ಸಂವಹನದ ಸಾಧ್ಯತೆಯನ್ನು ತೆರೆದಂಥ ಒಂದು ಕಾವ್ಯದ ಭಾಷೆ ಅತ್ಯುತ್ತಮ ನೆರೆಯಾತನನ್ನು ಕೊಡುತ್ತದೆ.

ನನಗೆ ಗೊತ್ತು, ನನಗೆ ಸಿತಾಂಶು ಅವರ ಕವನ ದಕ್ಕಿದ್ದು ಅವರದ್ದಲ್ಲದ ಒಂದು ಭಾಷೆಯಲ್ಲಿ ಎಂಬುದು ನಿಜವಾದರೂ ಅವರು ತಮ್ಮ ಕಾವ್ಯವನ್ನು ಹೀಗೆ ನನ್ನೊಂದಿಗೆ ಹಂಚಿಕೊಳ್ಳುವುದು ಸಾಧ್ಯವಾಗಿದೆ ಎನ್ನುವುದು ನನಗೆ ಗೊತ್ತು. ಹಾಗೆಯೇ ನನಗೆ ಗೊತ್ತು, ಅವರದೇ ಭಾಷೆಯನ್ನಾಡುವ ಅನೇಕರಿಗೆ ಅವರ ಕಾವ್ಯದ ಭಾಷೆ ದಕ್ಕುವುದಿಲ್ಲ ಎನ್ನುವುದು ಕೂಡ ನನಗೆ ಅಷ್ಟೇ ಚೆನ್ನಾಗಿ ಗೊತ್ತು. ಅವರಿಗೆ ಸರಳವಾದ ಸಂಗತಿಗಳು ಬೇಕು, ಅಥವಾ ಕಾವ್ಯದ ಗೊಡವೆಯೇ ಬೇಡ. ಅವರು ಸಿತಾಂಶು ಅವರ ತತ್ಕ್ಷಣದ ನೆರೆಯವರು. ನಾನಾದರೋ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದ್ದೇನೆ. ಆದರೂ ಯಾರು ನನ್ನ ನೆರೆಯವರು? ಸಿತಾಂಶು. ಅವರು ಅಧ್ಯಾಪನದಲ್ಲಿ ತೊಡಗಿಕೊಂಡಿರುವಂಥ ಬರೋಡಾಕ್ಕೆ ಹಿಂದಿರುಗಿದಾಗಲೂ ಅವರು ನನ್ನ ನೆರೆಯವರಾಗಿಯೇ ಉಳಿಯುವವರು. ಅವರು ವಿದೇಶದಲ್ಲಿ ನೆಲೆಯಾಗಲು ಬಯಸಿದರೂ ಅವರು ನನಗೆ ನೆರೆಯವರಾಗಿಯೇ ಇರುತ್ತಾರೆ. ನಮಗೆಲ್ಲ ಒಂದು ಕಾಲಕ್ಕೆ ಚಿಕಾಗೋದಲ್ಲಿದ್ದ ಎ.ಕೆ.ರಾಮಾನುಜನ್ ನೆರೆಯವರಾಗಿದ್ದರು. ದೂರ (ಅಂತರ) ಯಾವತ್ತೂ, ಈಗ ಸಿತಾಂಶು ಅವರು ಹೇಳಿದ, ಗುಜರಾತಿ ಕವಿಗಳು ಯಾರಿಗಾಗಿ ತಮ್ಮ ಕವನಗಳನ್ನು ಬರೆಯುತ್ತಾರೋ ಅಂಥ, ನೆರೆಹೊರೆಯನ್ನು ನಿರ್ಧರಿಸುವ ಸಂಗತಿಯಾಗಿರಲೇ ಇಲ್ಲ.

ಅಂದರೆ, ನಾವು ನಮ್ಮ ನೆರೆಯಾತನನ್ನು ಆಯ್ದುಕೊಳ್ಳುವುದು ಸಾಧ್ಯವಿದೆ ಇಲ್ಲಿ ಮತ್ತು ನಾವು ಅದನ್ನು ಮಾಡುವವರೇ. ದಿಲೀಪ್ ಚಿತ್ರೆಯವರು ತಮ್ಮ ಇಬ್ಬರು ನೆರೆಯವರ ಕುರಿತು ದ ಸಂಡೇ ಅಬ್ಸರ್ವರ್ ನಲ್ಲಿ ಬರೆದರು: ಕವಿ Daniel Weissbort ಮತ್ತು Kazuko Shiraishi. ಮೊದಲನೆಯವರು ಲೋವಾ ಸಿಟಿಯಲ್ಲಿ ಅಧ್ಯಾಪನ ನಡೆಸುತ್ತಾರೆ ಮತ್ತು ಇನ್ನೊಬ್ಬರು ಟೋಕಿಯೋದಲ್ಲಿ ನೆಲೆಸಿದ್ದಾರೆ. ದಿಲೀಪರು ಅನುವಾದಿಸಿದ ತುಕಾರಾಮರ ಹಾಡುಗಳು ಈ ಎರಡೂ ನಗರಗಳನ್ನು ತಲುಪಿವೆ ಎಂದಾದಲ್ಲಿ, ನಿಶ್ಚಯವಾಗಿಯೂ ಅವುಗಳನ್ನೋದಿದ ಕೆಲವಾದರೂ ಓದುಗರು ದಿಲೀಪರನ್ನು ತಮ್ಮ ನೆರೆಯವನನ್ನಾಗಿ ಆರಿಸಿಕೊಂಡಿರುವುದು ಖಂಡಿತ. ದಿಲೀಪ್ ಅವರು ನೆರೆಯಾತ ಮತ್ತು ತುಕಾರಾಮನೇ ಪಾರಂಪರಿಕೆ ಪಿತೃ? ಅದೂ ಅಮೆರಿಕ ಮತ್ತು ಜಪಾನ್ನಲ್ಲಿ?! ಕಾವ್ಯದಲ್ಲಿ ಇದೆಲ್ಲವೂ ಸಹಜ, ಸಾಧ್ಯ. ಕೇವಲ ಕಲ್ಪನಾಶಕ್ತಿಯಿಲ್ಲದ ರಾಷ್ಟ್ರೀಯತೆಯ ಪರಿಕಲ್ಪನೆಯೊಂದೇ ನಮ್ಮಈ ದೃಷ್ಟಿಕೋನವನ್ನು ಮೊಟಕುಗೊಳಿಸಲು ಸಾಧ್ಯವಿರುವುದು. ಕೆಲವು ಬ್ರಿಟಿಷ್ ಕವಿಗಳು ಪೆಟ್ರಾರ್ಕ್ನನ್ನು ತಮ್ಮ ಪಾರಂಪರಿಕೆ ಪಿತೃವಾಗಿ ಕಾಣುತ್ತಾರೆ ಮತ್ತು ಸಮಕಾಲೀನ ಇಟಾಲಿಯನ್ ಕವಿಗಳನ್ನು ತಮ್ಮ ನೆರೆಯವನನ್ನಾಗಿ ಕಾಣುತ್ತಾರೆ. ವ್ಯತ್ಯಾಸವಿಷ್ಟೇ, ಲ್ಯಾಟಿನ್ ಮತ್ತು ಇಂಗ್ಲೀಷಿಗೆ ನೇರವಾದ ಒಂದು ಸಂಬಂಧವಿದ್ದರೆ ಮರಾಠಿ ಮತ್ತು ಇಂಗ್ಲೀಷಿನ ಮಧ್ಯೆ ಅಥವಾ ಮರಾಠಿ ಮತ್ತು ಜಪಾನೀ ಭಾಷೆಯ ನಡುವೆ ಕೂಡ, ಅಂಥ ಒಂದು ತಂತು ಇಲ್ಲ.

ಸ್ವತಃ ನಾನು ಇಂಥ ನೇರ ತಂತುಗಳ ಅಗತ್ಯವನ್ನು ನೀಗಲು ತಕ್ಕ ಪರ್ಯಾಯ ಸೃಷ್ಟಿಸುವ ಶಕ್ತಿ ಅನುವಾದಕ್ಕೆ ಇದೆ ಎಂಬ ಆಶಾವಾದವುಳ್ಳವನು. ಅನುವಾದಕರಿಗೆ ನಮ್ಮ ವೈಮಾನಿಕರು ಹೊಸಹೊಸ ಆಕಾಶಮಾರ್ಗಗಳನ್ನು ಕಂಡುಕೊಂಡಷ್ಟೇ ಸುಲಭಸಾಧ್ಯವಾದ ಕಾರ್ಯ ಇದಲ್ಲ ಎನ್ನುವುದನ್ನು ನಾನು ಬಲ್ಲೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವ ಈ ಅನುವಾದದ ಭೂಪಟದಲ್ಲಿ ಗೋಚರಿಸತೊಡಗಿರುವ ಭೂಖಂಡಗಳ ನಡುವಿನ ಹೊಸಹೊಸ ಮಾರ್ಗಗಳು ಅಂತರ್ರಾಷ್ಟ್ರೀಯ ವಾಯುಮಾರ್ಗಗಳ ಭೂಪಟವನ್ನೇ ಹೋಲತೊಡಗಿರುವಂಥ ದಿನಗಳಿವು. ನಾವು ಈ ಭೂಪಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ವಾಯುಮಾರ್ಗಕ್ಕಿಂತಲೂ ಹೆಚ್ಚು ಹೆಚ್ಚು ತಂತುಗಳು , ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ನೆಲೆಯವು, ನಮಗೆ ಗೋಚರಿಸುತ್ತವೆ ಎನ್ನುವುದು ಸುಳ್ಳಲ್ಲ. ಈ ಬಗೆಯ ಅನುವಾದದ ಪ್ರಕ್ರಿಯೆ ಸುದೀರ್ಘ ಕಾಲದಿಂದಲೂ ನಡೆಯುತ್ತಿದೆ.

ಈ ಕಾರಣಕ್ಕಾಗಿಯೇ ಸಿತಾಂಶು ಅವರು ತಮ್ಮಕಾವ್ಯವಾಚನದ ಕೊನೆಯಲ್ಲಿ ತಮ್ಮ ಕವನಗಳು ಕುಟುಂಬದೊಳಗಿನ ಭಾಷೆಗೆ ಅನುವಾದಗೊಂಡಾಗ ಖುಶಿಯಾಗುವಷ್ಟು ಕುಟುಂಬದ ಹೊರಗಿನ ಭಾಷೆಗೆ ಅನುವಾದಗೊಂಡಾಗ ಆಗುವುದಿಲ್ಲ ಎಂಬ ಮಾತನ್ನಾಡಿದಾಗ ನನಗೆ ಕೊಂಚ ಇರಿಸುಮುರಿಸಾಯಿತು. ಬೇರೆ ಮಾತುಗಳಲ್ಲಿ, ಅವರು ತಮ್ಮದೊಂದು ಕವನ ಗುಜರಾತಿಯಿಂದ ಮರಾಠಿಗೆ ಹೋದಾಗ ಆಗುವಷ್ಟು ತೃಪ್ತಿ ಗುಜರಾತಿಯಿಂದ ಇಂಗ್ಲೀಷಿಗೆ ಹೋದಾಗ ಸಿಗುವುದಿಲ್ಲ ಎನ್ನುತ್ತಾರೆ. ಹಾಗಾದಲ್ಲಿ ಅವರು ತಮ್ಮದೊಂದು ಕವನವನ್ನು ಉತ್ತರ ಜರ್ಮನ್ನರ ಭಾಷೆಗೋ, ಕೆನ್ಯಾದ ಭಾಷೆಗೋ ಅನುವಾದಗೊಳ್ಳುವುದರಲ್ಲಿ ಇರುವ ಖುಶಿಯನ್ನು ಕಳೆದುಕೊಂಡಂತೆಯೇ. ಹಾಗೆಯೇ ಕುಟುಂಬದ ಹೊರಗಿನ ಭಾಷೆಗಳಲ್ಲಿಯೂ ಅವರು ಅದ್ಯತೆಗಳನ್ನಿರಿಸಿಕೊಂಡು ಭಾವೀ ಅನುವಾದಕರಲ್ಲಿ ಹಿಂಜರಿಕೆ ಹುಟ್ಟಿಸಿಯಾರು. ಇರಲಿ, ಅದೊಂದು ಪ್ರಾಮಾಣಿಕವಾದ ಇಷ್ಟಾನಿಷ್ಟ; ನಾನದನ್ನು ಪ್ರಾಮಾಣಿಕವಾಗಿ ಇಷ್ಟಪಡಲಾರೆ ಅಷ್ಟೆ. ಈ ಬಗೆಯ ಇಷ್ಟಾನಿಷ್ಟದಲ್ಲೂ ಒಂದು ಅಡಿಟಿಪ್ಪಣಿಯಂಥದ್ದು ಇದ್ದೇ ಇರುತ್ತದೆ: ನನ್ನ ಕವಿತೆಗಳನ್ನು ಕುಟುಂಬದ ಹೊರಗಿನ ಭಾಷೆಯಲ್ಲಿ ಸಮರ್ಪಕವಾಗಿ ಅನುವಾದಿಸಲಾಗದು.

ನೆರೆಹೊರೆ ಎಂಬುದು ಬೇರೆ, ಕುಟುಂಬದ ಸಂಗತಿ ಬೇರೆ. ಬೇರೆ ಬೇರೆ ಕಾರಣಗಳಿಗಾಗಿ ಇವೆರಡರಲ್ಲೂ ನನಗೆ ಅರೆಕೊರೆಗಳು ಕಂಡಿರಬಹುದು. ಸಿತಾಂಶು ಅವರ ಮಾತುಗಳನ್ನು ಕೇಳಿದ್ದರಿಂದ ನನಗೆ ಕಾವ್ಯದಲ್ಲಿ ನೆರೆಯವರ ಪಾತ್ರದ ಕುರಿತು ಬರೆಯುವುದು ಸಾಧ್ಯವಾಯಿತೆಂಬ ಬಗ್ಗೆ ಖುಶಿಯಾಗಿದೆ. ಕುಟುಂಬದ ಬಗ್ಗೆ ಮುಂದೆಂದಾದರೂ ಬರೆಯಲು ಉಳಿಸಿಕೊಳ್ಳೋಣ.
(ಫೋಟೋ ಅಂತರ್ಜಾಲದ್ದು)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, March 1, 2016

ಎಳೆಯ ಕಾದಂಬರಿಕಾರನೊಬ್ಬನ ನಿವೇದನೆ

ಉಂಬರ್ಟೊ ಇಕೊ ತಮ್ಮ ಕಾದಂಬರಿಗಳಿಂದ, ಕಥನೇತರ ಬರವಣಿಗೆಗಳಿಂದ ಪ್ರಖ್ಯಾತರಾಗಿರುವ, ಮೂಲತಃ ಮಧ್ಯಯುಗೀನ ಚರಿತ್ರೆಯಲ್ಲಿ ಅತೀವ ಆಸಕ್ತಿ ತಳೆದಂಥ, ಅಪೂರ್ವ ಪ್ರಾಚೀನ ಕೃತಿಗಳ ಸಂಗ್ರಹದ ಹವ್ಯಾಸವುಳ್ಳಂಥ ವ್ಯಕ್ತಿ. ತಮ್ಮ ಐವತ್ತನೇ ವಯಸ್ಸಿನಲ್ಲಿ ಮೊದಲ ಕಾದಂಬರಿ, `ದ ನೇಮ್ ಆಫ್ ದ ರೋಸ್’ (1980) ಬರೆದ ಉಂಬರ್ಟೊ, 2011ರಲ್ಲಿ ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಬರೆದ ಕೃತಿಯ ಹೆಸರು `ಕನ್‌ಫೆಶನ್ಸ್ ಆಫ್ ಅ ಯಂಗ್ ನಾವೆಲಿಸ್ಟ್’! ಈ ಎಳೇ ಕಾದಂಬರಿಕಾರನ ಮನೋಗತವನ್ನು ನಾಲ್ಕು ಸುದೀರ್ಘ ಉಪನ್ಯಾಸಗಳಲ್ಲಿ ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ್ದು ಅವುಗಳನ್ನು `ಆಲಿಸುವ’ ಅವಕಾಶ ನಮಗೆ ಸಿಗುವಂತಾಗಿದೆ. ಇಲ್ಲಿನ `ಎಡದಿಂದ ಬಲಕ್ಕೆ ಬರೆವ ಪರಿಕ್ರಮ’, `ಲೇಖಕ-ಲೇಖನ ಮತ್ತು ಅವಲೋಕನ’, `ಕಲ್ಪಿತವಾಸ್ತವದ ಕೆಲವು ಪಾತ್ರಗಳ ಕುರಿತು’ ಮತ್ತು `ನನ್ನ ಪಟ್ಟಿಗಳು’ ಎಂಬ ನಾಲ್ಕು ಪ್ರಬಂಧಗಳು ಅತ್ಯಂತ ಕುತೂಹಲಕರ ವಸ್ತು ವಿನ್ಯಾಸ ಹೊಂದಿದ್ದು ಕೆಲವು ಅಪೂರ್ವ ಸಂಗತಿಗಳನ್ನು ಗಮನಿಸುತ್ತ ಹೋಗುವ ಬಗೆ ವಿನೂತನವಾಗಿದೆ. ಬರಹಗಾರರಿಗೆ ಹೇಗೋ ಓದುಗರಿಗೂ ಇವು ಚಿಂತನ ಮಂಥನಕ್ಕೆ ಸಾಕಷ್ಟು ಗ್ರಾಸ ಒದಗಿಸುವಂತಿವೆ ಎನ್ನುವುದೇ ಈ ಕೃತಿಯ ಹೆಚ್ಚುಗಾರಿಕೆ.

ನಮ್ಮಲ್ಲಿ ಜಯಂತ ಕಾಯ್ಕಿಣಿ ಒಂದೆಡೆ ಹೇಳುತ್ತಾರೆ, ನಿಮಗೆ ಈಗಾಗಲೇ ಗೊತ್ತಿರುವ ಕತೆಯನ್ನೇನು ಬರೆಯುವುದು, ಗೊತ್ತಿಲ್ಲದೇ ಇರುವ ಕತೆಯನ್ನು ಬರೆಯತೊಡಗಿ ಅಂತ. ತಾನು ಪ್ರತೀ ಕತೆಯನ್ನು ಕಣ್ಣೆದುರಿನ ಖಾಲೀ ಹಾಳೆಯಷ್ಟೇ ಶೂನ್ಯದಿಂದ ತೊಡಗುತ್ತೇನೆ, ಏನನ್ನು ಬರೆಯಲಿದ್ದೇನೆ ಎಂಬುದನ್ನು ಪ್ಲ್ಯಾನ್ ಮಾಡಿರುವುದಿಲ್ಲ ಎಂದೂ ಅವರು ಹೇಳುತ್ತಾರೆ. ಜಯಂತರ ಕತೆಗಳ ಹಿನ್ನೆಲೆಯಲ್ಲಿ ಈ ಮಾತನ್ನು ಒರೆಗೆ ಹಚ್ಚುವ ಉದ್ದೇಶ ಇಲ್ಲಿ ನನಗಿಲ್ಲ. ಉಂಬರ್ಟೊ ತಮ್ಮ ಬರವಣಿಗೆಯ ಒಂದು ಪ್ರಮುಖ ಗುಣವನ್ನು ಗುರುತಿಸಿಕೊಳ್ಳುತ್ತ ಹೇಳಿರುವ ಮಾತುಗಳಲ್ಲಿರುವ ಸಾಮ್ಯದತ್ತ ನನ್ನ ಗಮನವಿದೆ. ಉಂಬರ್ಟೊ ತಮ್ಮ ಡಾಕ್ಟರೇಟ್ ಪ್ರಬಂಧದ ಅನುಭವವನ್ನು ಹೇಳಿಕೊಳ್ಳುವ ಸಂದರ್ಭವನ್ನು ಇಲ್ಲಿ ಗಮನಿಸಬಹುದು. ಈ ಪ್ರಬಂಧವನ್ನೋದಿದ ಉಂಬರ್ಟೊ ಅವರ ಪರೀಕ್ಷಕರಲ್ಲೊಬ್ಬರು "ಒಬ್ಬ ಪ್ರಬುದ್ಧ ವಿದ್ವಾಂಸ ಒಂದು ಸಂಶೋಧನೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಸಹಜವಾಗಿಯೇ ತನ್ನ ಪ್ರತಿಯೊಂದು ಪ್ರಯತ್ನದಲ್ಲೂ ಎಡವುತ್ತ, ತಡವುತ್ತ ಯಶಸ್ಸಿನತ್ತ ಸಾಗಬೇಕಾಗುತ್ತದೆ; ಹೊಸ ಹೊಸ ಪ್ರಮೇಯಗಳನ್ನು ತನ್ನ ಮುಂದಿಟ್ಟುಕೊಂಡು ಸತ್ಯ ಶೋಧಿಸಬೇಕಾಗುತ್ತದೆ. ಆ ಮಾರ್ಗದಲ್ಲಿ ಅಂಥ ಹಲವು ಪ್ರಮೇಯಗಳನ್ನು ಬಿಟ್ಟುಕೊಡಬೇಕಾಗುತ್ತದೆ, ಹೊಸದವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ ತನ್ನೆಲ್ಲಾ ಸಂಶೋಧನೆಯ ಕಟ್ಟಕೊನೆಯಲ್ಲಿ ಆತ ಈ ಎಲ್ಲಾ ಪ್ರಾಣಾಯಾಮಗಳ ಫಲಶ್ರುತಿಯನ್ನು ಜೀರ್ಣಿಸಿಕೊಂಡಿರುತ್ತಾನೆ ಮತ್ತು ಆತ ಕೇವಲ ತಾನು ಕಂಡುಕೊಂಡ ಸತ್ಯಗಳನ್ನು, ಅಂತಿಮ ಫಲಿತಾಂಶವನ್ನು ಪ್ರಕಟಿಸುತ್ತಾನೆ. ಅದಕ್ಕೆ ಬದಲಾಗಿ, ನಿಮ್ಮ ಸಂಶೋಧನಾ ಪ್ರಬಂಧವು ಒಂದು ಪತ್ತೇದಾರಿ ಕಾದಂಬರಿಯೋ ಎಂಬಂತೆ ವಿವರಿಸಲ್ಪಡುತ್ತದೆ." ಎಂದರಂತೆ. ಇದನ್ನು ಸ್ನೇಹಪೂರ್ವಕವಾಗಿ ಮತ್ತು ಎಲ್ಲಾ ಸಂಶೋಧನಾ ಪ್ರಬಂಧಗಳೂ ಇರಬೇಕಾದುದು ಹೀಗೆಯೇ ಎಂಬ ಧಾಟಿಯಲ್ಲೇ ಹೇಳಿದ್ದಾಗಿತ್ತು ಎನ್ನುತ್ತಾರೆ ಉಂಬರ್ಟೊ. ಮುಂದಿನ ತಮ್ಮ ಸಂಶೋಧನಾ ಪ್ರಕಟನೆಗಳಲ್ಲೂ, ಸಾಹಿತ್ಯಿಕ ಬರವಣಿಗೆಗಳಲ್ಲೂ ತಾವು ಇದೇ ಬಗೆಯಲ್ಲಿ ಮುಂದುವರಿದಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಒಮ್ಮೆ ತಮ್ಮ ಸಾಹಿತ್ಯಗರ್ಭಧಾರಣೆ ಖಚಿತವಾದದ್ದೇ, ತಮ್ಮ ಮುಂದಿನ ಕಾರ್ಯಚಟುವಟಿಕೆ ಏನು, ಅದು ಯಾವ ಬಗೆಯದ್ದಾಗಿರುತ್ತದೆ ಎಂಬ ತಮ್ಮದೇ ಪ್ರಶ್ನೆಗೆ ಉತ್ತರಿಸುತ್ತ ದಾಖಲೆಗಳನ್ನು ಒಟ್ಟುಗೂಡಿಸುತ್ತೇನೆ, ಆಯಾ ಸ್ಥಳಗಳಿಗೆ ಭೇಟಿ ನೀಡುತ್ತೇನೆ, ನಕ್ಷೆಗಳನ್ನು ಬಿಡಿಸುತ್ತೇನೆ, ಕಟ್ಟಡಗಳ ವಿನ್ಯಾಸ, ಅಥವಾ ಒಂದು ಹಡಗಿನದ್ದಾಗಿರಬಹುದು, ಕಟ್ಟೋಣದ ವಿವರಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತೇನೆ, ತನ್ನ ಕಾದಂಬರಿಯ ಒಂದೊಂದೂ ಪಾತ್ರಗಳ ಮುಖಚರ್ಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವಂಥ ಚಿತ್ರಗಳನ್ನು ಬಿಡಿಸುತ್ತೇನೆ ಎನ್ನುತ್ತಾರೆ. ಇವುಗಳಲ್ಲಿ ಕೇವಲ ಸ್ಥಳ ಭೇಟಿಯ ವಿವರಕ್ಕೆ ಬಂದರೂ, ಒಂದು ಸ್ಥಳ ತನ್ನ ಕಾದಂಬರಿಯಲ್ಲಿ ಹೇಗೆ ಬರುತ್ತದೆ, ಅದು ಬರುವ ದಿನಮಾನದ ವೇಳೆ ಯಾವುದು, ರಾತ್ರಿಯಾದರೆ ರಾತ್ರಿ, ಮಟಮಟ ಮಧ್ಯಾಹ್ನವಾದರೆ ಮಧ್ಯಾಹ್ನ ಆ ಸ್ಥಳ ಹೇಗಿರುತ್ತದೆ, ಅಲ್ಲಿನ ಚಲನವಲನ, ಜನಜೀವನ, ಸದ್ದುಗದ್ದಲ, ವಾಸನೆ ಇತ್ಯಾದಿ, ಸೂರ್ಯ ಎತ್ತಕಡೆಯಿಂದ ಎತ್ತ ವಾಲುತ್ತಾನೆ, ಎಲ್ಲಿ ನೆರಳಿರುತ್ತದೆ, ಎಲ್ಲಿ ಕತ್ತಲು, ಮಳೆಗಾಲವಾದರೆ ಅದರ ಚಿತ್ರ ಹೇಗಿದೆ - ಹೀಗೆ ವಿವರಗಳನ್ನು ಕಲೆಹಾಕುತ್ತಾರೆ ಉಂಬರ್ಟೊ. ಇದನ್ನು ತಮ್ಮದೇ ಕಾದಂಬರಿಯ ಸನ್ನಿವೇಶದ ನೆರಳಿನಲ್ಲಿ ವಿವರವಾಗಿಯೇ ವಿವರಿಸಿದ್ದಾರೆ ಕೂಡ. ರಾತ್ರಿಪಾಳಿಯ ಗಸ್ತಿನ ಪೋಲೀಸ್ ಪೇದೆ ಹಾದು ಹೋಗುವ ನಿಖರ ಸಮಯವನ್ನು ಕೂಡ ಅವರು ನೋಟ್ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅಲ್ಲಿ ಒಂದು ಪಾತ್ರ ಅಡಗಿಕೊಳ್ಳಬೇಕಾಗಿ ಬಂದರೆ, ಆ ಸ್ಥಳದ ಸೂಕ್ಷ್ಮಾತಿಸೂಕ್ಷ್ಮ ವಿವರ ತಿಳಿಯದೇ ಇದ್ದರೆ ತಮಗದನ್ನು ಯಥಾವತ್ ಕಟ್ಟಿಕೊಡುವುದು ಸಾಧ್ಯವಾಗದು ಎಂಬುದು ಅವರ ಮಾತಿನ ತಾತ್ಪರ್ಯ. ಈ ಬಗೆಯ ಅಥೆಂಟಿಸಿಟಿಯಿಂದ ಕೃತಿಗೆ ತೂಕಬರುವುದೇ, ಬರೆಯುವ ತಮ್ಮ ಪ್ರಾಮಾಣಿಕತೆ ತಮಗೆ ಮತ್ತೂ ಹೆಚ್ಚಿನ ಪುಷ್ಟಿಯನ್ನೊದಗಿಸುವುದೇ, ಇದೆಲ್ಲ ಓದುಗನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದಾದ ಒಂದು ಆಯಾಮ ಇರಬಹುದೇ ಎಂಬೆಲ್ಲ ಜಿಜ್ಞಾಸೆ ನಮಗೆ ಬಿಟ್ಟಿದ್ದು. ಉಂಬರ್ಟೊ ಅವರ ಕನ್‌ವಿಕ್ಷನ್ ಇದು ಅಷ್ಟೆ. ನಟನೊಬ್ಬ ಸಿನೆಮಾ ಒಂದರಲ್ಲಿ ನಟಿಸುವಾಗ ಆಭರಣಗಳ ಒಂದು ಪೆಟ್ಟಿಗೆಯನ್ನು ಹಿಡಿದಿರಬೇಕಾಗಿ ಬಂದಲ್ಲಿ, ಚಿತ್ರದಲ್ಲಿ ಆತ ಎಂದೂ ಆ ಪೆಟ್ಟಿಗೆಯನ್ನು ತೆರೆಯುವ ದೃಶ್ಯ ಇಲ್ಲದಿದ್ದಾಗ್ಯೂ ಪೆಟ್ಟಿಗೆಯೊಳಗೆ ನಿಜವಾದ ಆಭರಣಗಳೇ ಇರಬೇಕಾದ್ದು ಅತ್ಯಗತ್ಯ, ಇಲ್ಲವಾದಲ್ಲಿ ನಟನಾಗಿ ತನ್ನ ತನ್ಮಯತೆ ಪರಿಪೂರ್ಣವಾಗಿರಲಾರದು ಎಂದು ತಿಳಿಯುತ್ತಿದ್ದ ನಟ Luchino Visconti ಯನ್ನು ಇಲ್ಲಿ ಅವರು ನೆನೆಯುತ್ತಾರೆ. ಪುಟ್ಟಣ್ಣ ಕಣಗಾಲ್ ಒಮ್ಮೆ ತಮ್ಮ ಒಂದು ಚಿತ್ರದಲ್ಲಿ, ಚಿತ್ರೀಕರಣಕ್ಕೂ ಮುನ್ನ ದೇವರ ಕೋಣೆಯಲ್ಲಿ ಬೆಳ್ಳಿಯ ಪೂಜಾಪಾತ್ರೆಗಳಿರಬೇಕು ಎಂದು, ಚಿತ್ರದಲ್ಲಿ ಅವುಗಳಿಗೆ ಕೆಲಸವೇನೂ ಇಲ್ಲದಿದ್ದರೂ ಹಠ ಹಿಡಿದಿದ್ದರು ಎಂದು ಕೇಳಿದ್ದೇನೆ. ಇಂಥ ಸೂಕ್ಷ್ಮ ವಿವರಗಳ ಅಥೆಂಟಿಸಿಟಿ ಇವತ್ತಿನ ಗ್ರಾಫಿಕ್ ತಂತ್ರಜ್ಞಾನದ ದಿನಗಳಿಗೆ ಒಗ್ಗುವ ಮಾತಲ್ಲದಿದ್ದರೂ ಅದರ ಹಿಂದಿನ ಒಂದು ಕನ್ವಿಕ್ಷನ್ ಗಮನಾರ್ಹವಾದದ್ದೇ.

ಬರವಣಿಗೆಯೆಂಬುದು ಒಂದು ಲ್ಯಾಟಿನ್ ನಾಣ್ನುಡಿಗೆ ಅನುಗುಣವಾಗಿರುತ್ತದೆ ಎನ್ನುತ್ತ ಗದ್ಯ ಬರೆಯುವಾಗ ವಸ್ತುವಿಗೆ ನೆಚ್ಚಿಕೊಂಡಿರು, ಪದಗಳು ತನ್ನಿಂತಾನೇ ಬರುತ್ತವೆ; ಪದ್ಯ ಬರೆಯುವಾಗ ಪದಕ್ಕೆ ನೆಚ್ಚಿಕೊಂಡಿರು, ವಸ್ತು ತನ್ನಿಂತಾನೇ ಒದಗುವುದು ಎನ್ನುತ್ತಾರೆ. ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯ ಕಡೆಗೆ ಗಮನ ಕೊಡುವಲ್ಲಿ ದೇಶ-ಕಾಲ ಪ್ರಜ್ಞೆಯನ್ನು ದಕ್ಕಿಸಿಕೊಳ್ಳುವ ವಿಚಾರಕ್ಕೆ ಬಂದರೆ ಉಂಬರ್ಟೊ ಅತ್ಯಂತ ನಿಖರವಾದ ಮತ್ತು ಶಿಸ್ತಿನ ನಿಯಮಪಾಲಕ ಎಂದೇ ಹೇಳಬೇಕು. ಉಂಬರ್ಟೊ ಅವರ ಹೆಚ್ಚಿನ ಕಾದಂಬರಿಗಳೂ ಮಧ್ಯಯುಗೀನ ಚರಿತ್ರೆಯೊಂದಿಗಿನ ಯಾವುದೋ ಒಂದಕ್ಕೆ ಹೇಗೋ ತಳುಕು ಹಾಕಿಕೊಂಡಿರುತ್ತವೆ ಎಂಬುದೂ ಇಲ್ಲಿ ಗಮನಾರ್ಹವಾದ ಅಂಶವೇ. ಆಯಾ ಕಾಲದ ಭಾಷೆ, ಜೀವನ ಮೌಲ್ಯ, ಆಹಾರ ಪದ್ಧತಿ, ಸಮಯಾನುಸಂಧಾನ, ದೈನಂದಿನದಲ್ಲಿ ಮಹತ್ವ ಪಡೆದುಕೊಂಡಿದ್ದ ಸಂಗತಿಗಳು, ಆಯಾ ಪಾತ್ರಗಳ ತಕ್ಷಣದ ಜಗತ್ತಿನಲ್ಲಿನ ಸಮಕಾಲೀನ ವಿದ್ಯಮಾನಗಳು ಎಲ್ಲದರ ಅಧ್ಯಯನ ಅವರಿಗೆ ಮುಖ್ಯವೆನಿಸಿದೆ. ತಾನು ಎಂದೂ ನೋಡದಿರುವ ಒಂದು ಚಿತ್ರವನ್ನೊ, ಪ್ರತಿಮೆಯನ್ನೊ ಕೂಡ ಓದುಗನೊಬ್ಬನಿಗೆ ಇದೀಗ ಅದು ತನ್ನ ಕಣ್ಣಮುಂದೆಯೇ ಇದೆಯೋ ಎಂಬಂತೆ ಕಾಣಿಸುವ, ಸೂಕ್ಷ್ಮ ವಿವರಗಳಲ್ಲಿ ಕಟ್ಟಿಕೊಡುವ, ಕ್ಲಾಸಿಕ್ ಎನ್ನಬಹುದಾದ ಒಂದು ಸಾಹಿತ್ಯ ಪ್ರಬೇಧ, ekphrasis ಬಗ್ಗೆ ಹೇಳುತ್ತ 1712 ರಲ್ಲಿ Joseph Addison ಬರೆದ `ದ ಪ್ಲೆಷರ್ಸ್ ಆಫ್ ಇಮ್ಯಾಜಿನೇಶನ್’ ಕೃತಿಯ ಮಾತನ್ನು ಅವರಿಲ್ಲಿ ಉಲ್ಲೇಖಿಸುತ್ತಾರೆ.

"ಪದಗಳನ್ನು ನೀವು ಸಮರ್ಪಕವಾಗಿ ಆಯ್ದುಕೊಂಡಾಗ, ಅವುಗಳಿಗೆ ಒಂದು ವಿಶೇಷ ಶಕ್ತಿ ಪ್ರಾಪ್ತವಾಗಿ ಬಿಡುತ್ತದೆ. ಹಾಗಾದಾಗ, ವಿವರಗಳು, ವಸ್ತುಶಃ ಅದನ್ನು ಕಂಡಾಗ ನೀಡಬಹುದಾದ ಅನುಭವಕ್ಕಿಂತ ಹೆಚ್ಚಿನ ಜೀವಂತ ಅನುಭವವನ್ನು ದಕ್ಕಿಸುವಷ್ಟು ಸಶಕ್ತವಾಗಿ ಬಿಡುತ್ತವೆ." ಮಾತು ಮಂತ್ರವಾಗುವ ಈ ವಿದ್ಯಮಾನವನ್ನು ಕನ್ನಡದಲ್ಲಿಯೂ ಹಲವರು ವಿವರಿಸಿದ್ದಿದೆ. ಇಂಥ ವಿಚಾರಗಳು ನಮಗೆ ಭರ್ತೃಹರಿಯಿಂದಲೂ ಒದಗಿ ಬಂದಿವೆ.

ಡಬಲ್ ಕೋಡಿಂಗ್ ಎಂಬುದು ಉಂಬರ್ಟೊ ವಿವರಿಸುವ ಇನ್ನೊಂದು ಅತ್ಯಂತ ಮಹತ್ವದ ಅಂಶ. ಇದು ಪನ್ ಅಥವಾ ಚತುರೋಕ್ತಿಗೆ ಸಮಾನವಾದದ್ದಾದರೂ ಅದಷ್ಟೇ ಅಲ್ಲ. ಎಲ್ಲಾ ಕಲೆಯೂ (Art is to Connect) "ಪರಸ್ಪರ ತಂತುಗಳನ್ನು ಬೆಸೆಯುತ್ತ ಸಾಗುವಂಥಾದ್ದು" ಎನ್ನುವ ಹಿನ್ನೆಲೆಯದ್ದು. ಕೆ ವಿ ತಿರುಮಲೇಶರು ಒಮ್ಮೆ ತಮ್ಮ ಒಂದು ಕವನವನ್ನು ಓದುತ್ತ, ಇದು ಅರ್ಥವಾಗಬೇಕಾದರೆ ಇದನ್ನು ಯಾವ ಹಿನ್ನೆಲೆಯಲ್ಲಿ ಬರೆದೆ, ಇಲ್ಲಿ ಬಳಸಿದ ಪದಗಳ ಚಾರಿತ್ರಿಕ ಮರ್ಮವೇನು ಎಂಬುದೆಲ್ಲ ಗೊತ್ತಿರಲೇ ಬೇಕಾಗುತ್ತದೆ; ಅದನ್ನೆಲ್ಲ ಅಡಿಟಿಪ್ಪಣಿಯಾಗಿಯೋ, ಪೂರಕ ಪಠವನ್ನಾಗಿಯೋ ಕೊಡುವುದು ಯಾಕೊ ಮನಸ್ಸಿಗೆ ಬರಲಿಲ್ಲ. ಹೀಗಾದಾಗ ಓದುಗನಲ್ಲಿ ಇದಕ್ಕೆ ಬೇಕಾದ ಪೂರ್ವಸಿದ್ಧತೆಯೊಂದು ಇಲ್ಲದೇ, ಬರೆದಿದ್ದು ಅವನನ್ನು ತಲುಪುವುದೇ ಅನುಮಾನವಾಗುತ್ತದೆ ಎಂದಿದ್ದರು. (ನಿರಂಜನ ಪ್ರಶಸ್ತಿಯನ್ನು ಸ್ವೀಕರಿಸುತ್ತ, ಪುತ್ತೂರಿನಲ್ಲಿ.) ಅಡಿಗರ ಎಷ್ಟೋ ಕವಿತೆಗಳನ್ನು ಅರಿಯಲು ನಮ್ಮ ಮಹಾಕಾವ್ಯದ ಪಾತ್ರಪರಿಚಯ ಇರಬೇಕಾಗುತ್ತದೆ. ಅನುವಾದಗಳಲ್ಲಿ ಅಡಿಗರಂಥ ಲೇಖಕರನ್ನು ಓದುವವರಿಗೆ ಇದು ದೊಡ್ಡ ಸಮಸ್ಯೆಯನ್ನೇ ಒಡ್ಡುತ್ತದೆ. ಉದಾಹರಣೆಗೆ "ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು" ಎಂಬ ಪದಪ್ರಯೋಗ. ಅಥವಾ, "....ಚಿಪ್ಪೊಡೆದು | ಬರಲಿ ಪರಿಪೂರ್ಣಾವತಾರಿ ವಿನತಾ ಪುತ್ರ-| ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು,| ನಿನ್ನ ತೊಡೆಹೊರೆ ಕೆಳಗೆ ಮೆತ್ತೆ -ಸಡಿಲು." ಅಡಿಗರನ್ನು ಡಾ||ಯು.ಆರ್.ಅನಂತಮೂರ್ತಿ, ಬೇಂದ್ರೆಯವರನ್ನು ಕುರ್ತುಕೋಟಿಯಂಥವರು ನಮಗೆ ತೆರೆದು ತೋರದೇ ಇದ್ದಿದ್ದರೆ ಬಹುಶಃ ಸಾಮಾನ್ಯ ಓದುಗರು ನಾವೇ ನಾವಾಗಿ ದಕ್ಕಿಸಿಕೊಳ್ಳುತ್ತಿದ್ದುದು ನಿಶ್ಚಯವಾಗಿ ಕಡಿಮೆಯಾಗಿರುತ್ತಿತ್ತು. ಇಂಥ ಡಬಲ್ ಕೋಡಿಂಗನ್ನು ಬಹುವಾಗಿ ಇಷ್ಟಪಡುವ ಮತ್ತು ಬಳಸುವ ಉಂಬರ್ಟೊ ಇದರ ಮಹತ್ವ, ಇದನ್ನು ದಕ್ಕಿಸಿಕೊಳ್ಳಲಾರದೇ ಹೋದವರೂ ಕಳೆದುಕೊಳ್ಳದ ಆಯಾಮ ಎರಡನ್ನೂ ವಿವರಿಸಿರುವುದು ಗಮನಾರ್ಹವಾಗಿದೆ. ಕೊನೆಗೂ ಇದು ಓದುಗನ ಜಾಣ್ಮೆ ಮತ್ತು ಆತ ಲೇಖಕನಲ್ಲಿರಿಸಿದ ವಿಶ್ವಾಸಕ್ಕೆ ಗೌರವವನ್ನರ್ಪಿಸುವ ಒಂದಾನೊಂದು ವಿಧಾನವಷ್ಟೇ ಆಗಿದೆ ಎನ್ನುತ್ತಾರೆ ಉಂಬರ್ಟೊ!

ಲೇಖಕನ ಮನೋಗತ (ನಿರ್ದಿಷ್ಟ ಬರಹದ ಪ್ರಾಮಾಣಿಕ ಉದ್ದೇಶ), ಓದುಗನ ಮನೋಗತ (ನಿರ್ದಿಷ್ಟ ಬರಹದಿಂದ (ಓದಿನಿಂದ) ಅವನಲ್ಲಿ ಉದ್ದೀಪ್ತವಾದ ನಿರೀಕ್ಷೆ), ಪಠ್ಯದ ಮನೋಗತ (ನಿರ್ದಿಷ್ಟ ಬರಹ ನಿರ್ದಿಷ್ಟ ಸಂದರ್ಭದಲ್ಲಿ ಸ್ಫುರಿಸುವ ಸಹಜ ಅರ್ಥ) - ಈ ಮೂರರ ನಡುವಿನ ಅಂತರದ ಕುರಿತೇ ಉಂಬರ್ಟೊ ವಿವರಿಸಿದ್ದಾರೆ. ತಮ್ಮದೇ ಕೃತಿಗೆ ಬಂದ ವಿಮರ್ಶೆ, ಹುಟ್ಟಿಕೊಂಡ ಹೊಸ ಅರ್ಥಗಳು, ಕಾಕತಾಳೀಯವಾಗಿ ಹೊಂದಿಕೊಂಡು ಕೃತಿಗೆ ಅನಿರೀಕ್ಷಿತ ಹೊಳಪು, ಆಯಾಮ ದೊರಕಿಸಿದ ವಿದ್ಯಮಾನಗಳು ಹೀಗೆ, ಒಂದು ಕೃತಿಗೆ ಅದರ ಕರ್ತೃ ಉದ್ದೇಶಪೂರ್ವಕವಾಗಿ ಒದಗಿಸುವ ಅರ್ಥಸಾಧ್ಯತೆಗಳು (ಅರ್ಥಗಳಲ್ಲ), ಓದುಗ ತನ್ನ ಅನುಭವ, ಸಂವೇದನೆ ಮತ್ತು ಗ್ರಹಿಕೆಗಳಿಗನುಗುಣವಾಗಿ ಆರೋಪಿಸುವ ಅರ್ಥಸಾಧ್ಯತೆಗಳು ಮತ್ತು ದೇಶ-ಕಾಲ ಸಂದರ್ಭಗಳಿಗನುಗುಣವಾಗಿ ಕೃತಿಯೊಂದಕ್ಕೆ ಒದಗಿಬರುವ ಹೊಸ ಹೊಸ ಅರ್ಥಸಾಧ್ಯತೆಗಳು ಸೇರಿ ಒಟ್ಟಾರೆ ಕೃತಿಯ ಘನತೆ ಹೆಚ್ಚುವ ಒಂದು ಸಂಭವನೀಯತೆಯ ಕುರಿತೇ ವಿವರಿಸುತ್ತ ವಿಮರ್ಶೆ ಅಥವಾ ಕೃತಿಯೊಂದರ ಅವಲೋಕನದ ಇತಿಮಿತಿಗಳತ್ತ ಅವರಿಲ್ಲಿ ಬೊಟ್ಟು ಮಾಡುತ್ತಾರೆ.

ಇದುವರೆಗೂ ಎಲ್ಲಿಯೂ ಒಬ್ಬ ವಿಮರ್ಶಕನ ಒಟ್ಟು ವಿಮರ್ಶೆಯನ್ನು ತೌಲನಿಕವಾಗಿಟ್ಟುಕೊಂಡು ಆತ ವಸ್ತುನಿಷ್ಠವಾಗಿ ಬರೆದಿದ್ದಾನೆಯೇ, ವ್ಯಕ್ತಿನಿಷ್ಠವಾಗಿ ಬರೆದಿದ್ದಾನೆಯೇ, ತನ್ನ ವಿಮರ್ಶೆಯಲ್ಲಿ ಕಾಲಾಂತರದಲ್ಲಿ ಆತ ಪಟ್ಟಿ ಮಾಡಿದ "ಇಲ್ಲಗಳು" ಮತ್ತು "ಇದೆಗಳು" ಮಾದರಿಯ ಎಲ್ಲ ಸಾಮಾನ್ಯ ಮಾನದಂಡಗಳು ಎಷ್ಟರ ಮಟ್ಟಿಗೆ ಸಮಾನ ಬಳಕೆಗೆ ಒಳಪಟ್ಟಿವೆ, ಆತ ಬಳಸುತ್ತ ಬಂದ ಮಾನದಂಡಗಳು ಬೇರೆ ಬೇರೆ ಒತ್ತಡ/ಪ್ರಭಾವಗಳಿಗೆ ಮತ್ತು ತನ್ನದೇ ಸಾಮರ್ಥ್ಯದ ಮಿತಿಗಳಿಗೆ ಎಷ್ಟರಮಟ್ಟಿಗೆ ಪಕ್ಕಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ, ಯಾವುದೇ ನಿರ್ದಿಷ್ಟ ದೇಶ-ಕಾಲದಲ್ಲಿ ಏಕಸೂತ್ರಕ್ಕನುಗುಣವಾಗಿ ಇವು ಸಮಾನ ಪಾತಳಿಯ ಕೃತಿಗಳೆಂದು ವಿಂಗಡಿಸಲಾಗದಂಥ ಒಂದು ಪರಿಸ್ಥಿತಿ ಸಹಜವಾಗಿಯೇ ಇರುತ್ತ, ವಿಮರ್ಶಕನ ವಿಮರ್ಶನ ಪ್ರಕ್ರಿಯೆಯಲ್ಲಿನ ವ್ಯತ್ಯಸ್ಥ ಮನೋಧರ್ಮವನ್ನು ಗುರುತಿಸುವುದು ಮತ್ತು ಕ್ವಾಂಟಿಫೈ ಮಾಡುವುದು, ದಾಖಲಿಸುವುದು ಹೇಗೆ ಎಂಬ ಬಗ್ಗೆ ನಮ್ಮಲ್ಲಿ ಚರ್ಚೆ, ಜಿಜ್ಞಾಸೆ ನಡೆದುದೇ ಇಲ್ಲ. ಆದರೆ ಅದರ ಅಗತ್ಯ ತೀವ್ರವಾಗಿಯೇ ಇದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತೇವೆ. ಇಂಥದ್ದರ ಗೈರಿನಲ್ಲಿಯೇ ವಿಮರ್ಶಕರು, ಬಹುಮಾನ/ಪ್ರಶಸ್ತಿ ವಿಜೇತರನ್ನು ನಿರ್ಧರಿಸುವವರು ಸದಾ ಟೀಕೆಗೆ, ತಿರಸ್ಕಾರಕ್ಕೆ (ಹೆಚ್ಚಾಗಿ ತೆರೆಮರೆಯಲ್ಲಿ) ಗುರಿಯಾಗುತ್ತಿರುವುದೂ ಸುಳ್ಳಲ್ಲ. ಹೊಸಬರಿಗೆ ಒಂದು, ನುರಿತವರಿಗೆ ಒಂದು, ಮುನ್ನುಡಿ/ಬೆನ್ನುಡಿಗೆ ಒಂದು, ವಿಮರ್ಶೆಗೆ ಒಂದು, ಪ್ರಶಸ್ತಿ-ಬಹುಮಾನದ ಪ್ರಶ್ನೆ ಬಂದಾಗ ಒಂದು, ಇತರೆ ಸಂದರ್ಭಕ್ಕೆ (ಅಭಿನಂದನೆ/ಸನ್ಮಾನ) ಇನ್ನೊಂದು, ತನ್ನ ಭಾಷೆಯ ಚೌಕಟ್ಟಿನೊಳಗಿನ ಸ್ಪರ್ಧೆಗೆ ಒಂದು, ಬೇರೆ ಭಾಷೆಗಳೊಂದಿಗೆ ಸ್ಪರ್ಧೆಗೆ ನಿಂತಾಗ ಇನ್ನೊಂದು, ಪುರುಷವರ್ಗಕ್ಕೊಂದು, ಸ್ತ್ರೀವರ್ಗಕ್ಕೊಂದು, ಜಾತಿಬದ್ಧ ನೀತಿ, ಜಿಲ್ಲಾವಾರು ನೀತಿ, ದಲಿತ-ಬ್ರಾಹ್ಮಣ ನೀತಿ ಇಂಥವು ಸಾವಿರ ನಮ್ಮ ವಿಮರ್ಶಕರಲ್ಲಿ ಹಲವರನ್ನು ಹೆಬ್ಬಾವಿನಂತೆ ಸುತ್ತಿಕೊಂಡಿರುವುದು ತೀರ ಸುಳ್ಳಲ್ಲ. ವ್ಯಕ್ತಿಗತ ಪರಿಚಯ, ಸ್ನೇಹ - ಸಂಬಂಧ, ಕೊಟ್ಟು ತಗೊಂಡ ಋಣಾನುಬಂಧದ ಸಂಬಂಧ ಕೂಡ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದೂ ಸುಳ್ಳಲ್ಲ. ಇವುಗಳಲ್ಲಿ ಹೆಚ್ಚಿನವುಗಳನ್ನು ನಾವೆಲ್ಲ ಒಪ್ಪಿಕೊಂಡು, ಸ್ವೀಕರಿಸಿ, ಅದೆಲ್ಲ ಇದ್ದದ್ದೇ ಎಂದು ಮಾನ್ಯತೆ ನೀಡಿರುವುದು ಕೂಡ ಅಷ್ಟೇ ಸತ್ಯ. ಇಂಥ ದರಿದ್ರ ಸ್ಥಿತಿಯಲ್ಲಿ ವಿಮರ್ಶೆ ತನ್ನ ಗುಣಗೌರವವನ್ನೆಲ್ಲ ಕಳೆದುಕೊಂಡಿರಬೇಕಾದರೆ ಉಂಬರ್ಟೊ ಬರೆದ ಸಂವಹನ-ಗ್ರಹಿಕೆ-ಸ್ಪಂದನ-ಅವಲೋಕನ (Conception-Communication-Perception-Analysis) ಪ್ರಕ್ರಿಯೆಯಲ್ಲಿ ಕಂಡುಬರುವ ಅಂತರವನ್ನು ಅರ್ಥಮಾಡಿಕೊಳ್ಳುವುದು ವಿಮರ್ಶೆಯ ಅಗತ್ಯವಲ್ಲ. ಬರಹಗಾರ ಮತ್ತು ಸಾಮಾನ್ಯ ಓದುಗನ ಅಗತ್ಯ ಅಷ್ಟೇ. ಆದರೆ ಇಲ್ಲೇ ಏಳುವ ವಿಮರ್ಶೆಯ ಕುರಿತ ಜಿಜ್ಞಾಸೆ ಮಾತ್ರ ವಿಮರ್ಶೆಯಲ್ಲಿ ಗಂಭೀರ ಆಸಕ್ತಿಯುಳ್ಳವರಿಗೆ, ಅದರ ಫಲಾನುಭವಿಗಳಿಗೆ ಮತ್ತು ಮುಖ್ಯವಾಗಿ ಅದರ ಬಲಿಪಶುಗಳಿಗೆ ಮಹತ್ವದ ಪ್ರಶ್ನೆ ಆಗಿದೆ.

ತದನಂತರ ಉಂಬರ್ಟೊ ಮುಖ್ಯವಾಗಿ ಹೊರಳಿದ್ದು ಕೆಲವು ಕಾದಂಬರಿಗಳ ಪಾತ್ರಗಳ ಸಾತತ್ಯವನ್ನು ಅರಿಯುವುದರತ್ತ. ಅಂದರೆ ಅನ್ನಾ ಕರೆನಿನಾ ಇದ್ದಳೆ, ಇಲ್ಲವೆ, ಇರುವುದು ಅನ್ನುವುದಕ್ಕೆ (ಈ ಮಿಥ್ಯಾಜಗತ್ತಿನಲ್ಲಿ) ಏನರ್ಥ, ಇಲ್ಲಾ ಎನ್ನುವುದಾದರೆ ಒಬ್ಬ ತನ್ಮಯಿ ಓದುಗನ ಭಾವಕೋಶದ ತಲ್ಲಣಗಳಿಗೇನರ್ಥ ಇತ್ಯಾದಿ. ಇದನ್ನು ಉಂಬರ್ಟೊ ಹಂತ ಹಂತವಾಗಿ ಮಾಡುವ ರೀತಿ ಅನನ್ಯವಾಗಿದೆ. ಅನ್ನಾ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಳೆ? ಮಾಡಿದ್ದು ಸರಿಯೆ, ಅವಳ ಆತ್ಮಹತ್ಯೆಗೆ ಸಾಕ್ಷಿ ಇದೆಯೆ, ಅದು ಸುಳ್ಳಿರಬಹುದಲ್ಲವೆ, ಟಾಲ್‌ಸ್ಟಾಯ್ ಬೇಕಂತಲೇ ಅಂಥ ಒಂದು ತಿರುವು ಕೊಟ್ಟಿರಬಾರದೇಕೆ, ಅವಳು ಮತ್ತೂ ಬದುಕಿರಬಹುದಲ್ಲವೆ...ಹೀಗೆ. ನೀವು ಎಸ್ ದಿವಾಕರ್ ಅವರ `ಚೋಮ’ ಹೆಸರಿನ ಕತೆಯನ್ನು ಓದಿದ್ದರೆ ಇದೆಲ್ಲ ಸರಳವಾಗಿ ಅರ್ಥವಾಗುತ್ತದೆ. `ಚೋಮನದುಡಿ’ಯ ವಿವಿಧ ಹಂತಗಳಲ್ಲಿ ದಿವಾಕರ್ ಕತೆಯನ್ನು ಅದರ ಪ್ರಕಟಿತ ಕೃತಿಯ ಸ್ಥಾಪಿತ ನೆಲೆಯಿಂದ ಬೇರೆ ದಿಕ್ಕಿಗೆ ಹರಿಯಬಿಟ್ಟು ಹಾಗಾಗಿದ್ದರೆ, ಹೀಗಾಗಿದ್ದರೆ ಎಂದೆಲ್ಲ `ಚೋಮನದುಡಿ’ಯ ಹಲವಾರು ಆವೃತ್ತಿಗಳನ್ನು (ಸಾಧ್ಯತೆಗಳನ್ನು) ನಮ್ಮೆದುರು ತೆರೆದಿಟ್ಟು ನಮ್ಮನ್ನು ದಂಗಾಗಿಸುತ್ತಾರೆ! ದಿವಾಕರ್ ಅವರು `ಭಾರತೀಪುರ’ದ ಜಗದೀಶನ ಮೇಲೂ ಒಂದು ಕತೆ ಬರೆದಿದ್ದಾರೆ. ಇದೆಲ್ಲ ಒಂದು ಬಗೆಯಲ್ಲಿ ಕಲ್ಪಿತ ಜಗತ್ತಿನ ಪಾತ್ರ, ಪರಿಸರದೊಂದಿಗೆ ತನ್ಮಯರಾಗಿ ಅವರನ್ನೆಲ್ಲ ನಿಜವೆಂದೇ ಅನುಭವಿಸುವ ಪರಿ. ಈ ಕಲ್ಪಿತ ವಾಸ್ತವ ಹಲವಾರು ಪ್ರಶ್ನೆಗಳನ್ನು, ಜಿಜ್ಞಾಸೆಗಳನ್ನು, ಸವಾಲನ್ನು, ಸಮಸ್ಯೆಯನ್ನು, ಕಿರಿಕಿರಿಯನ್ನು, ಖುಶಿಯನ್ನು, ಅಲ್ಲಿಗೇ ಹೋಗಿ ಇದ್ದು ಬಿಡಬೇಕೆಂಬಂಥ ಮೋಹವನ್ನು ಹುಟ್ಟಿಸುತ್ತಿರುತ್ತದೆ. ಅವುಗಳಿಗೆಲ್ಲ ಎದೆಗೊಟ್ಟು ಮೀರಿ ನಿಲ್ಲುವುದಕ್ಕೆ ಕಾಲಾವಕಾಶವೂ ಬೇಕಾಗುತ್ತದೆ. ಜೊತೆಗೇ ಅದೆಲ್ಲ ಕಲ್ಪನೆಯ ಜಗತ್ತು ಎಂಬ ಅರಿವು ಮತ್ತು ವಾಸ್ತವದೊಂದಿಗೆ ಹೊಂದಿರುವ ನಂಟಿನ ಅಂಟಿನ ಬಗ್ಗೆ ಒಂದು ಮೂಲೆಯ ಆಸೆ ಎರಡೂ ಜೀವಂತವಾಗಿರುತ್ತವೆ.

ಮತ್ತೆ ನಮ್ಮಲ್ಲಿ ಚಾರಿತ್ರಿಕ, ಪೌರಾಣಿಕ ಪಾತ್ರಗಳೆಲ್ಲ ಇವೆಯಲ್ಲ. ಶ್ರೀರಾಮ ನಿಜಕ್ಕೂ ಇದ್ದನೆ, ಕಲ್ಪನೆಯೆ ಎಂಬಲ್ಲಿಂದ ಹಿಡಿದು, ಟಿಪ್ಪೂ ಮತಾಂಧನಿದ್ದನೆ ಅಥವಾ ಪರಮತಸಹಿಷ್ಣುವಾಗಿದ್ದನೆ ಎಂಬಂಥ ಜಿಜ್ಞಾಸೆಗಳೂ ಸಾಕಷ್ಟಿವೆ. ಡಾ||ಯು.ಆರ್.ಅನಂತಮೂರ್ತಿಯವರೇ ಹೇಳಿರುವಂತೆ ಭಾರತೀಯ ಸಮಾಜ ಏಕಕಾಲಕ್ಕೆ ಹಲವು ಸಂಸ್ಕೃತಿ/ಕಾಲಧರ್ಮಗಳನ್ನು ಬದುಕುತ್ತಿರುವ ಸಮಾಜವೇ. ಜೊತೆಗೇ ವಿನ್‌ಸ್ಟನ್ ಚರ್ಚಿಲ್ ಮತ್ತು ಗಾಂಧಿ ಕಾಲ್ಪನಿಕ ಪಾತ್ರಗಳೆಂದೂ ಶೆರ್ಲಾಕ್ ಹೋಮ್ಸ್ ನಿಜಕ್ಕೂ ಇದ್ದನೆಂದೂ ಬ್ರಿಟನ್ನಿನ ಹದಿಹರಯದವರಲ್ಲಿ ಹಲವರು ನಂಬಿದ್ದರು ಎಂಬ ವಿಚಾರವನ್ನೂ ಉಂಬರ್ಟೊ ಉಲ್ಲೇಖಿಸುತ್ತಾರೆ. ಮುಂದಿನ ತಲೆಮಾರು ಗಾಂಧಿಯಂಥ ಒಬ್ಬ ವ್ಯಕ್ತಿ ಬದುಕಿದ್ದ ಎಂಬುದನ್ನು ನಂಬುವುದಿಲ್ಲ ಎಂದು ಐನ್‌ಸ್ಟೀನ್ ಬಹುಹಿಂದೆಯೇ ಹೇಳಿದ್ದು ನಮ್ಮ ಕಾಲದಲ್ಲೇ ನಿಜವಾಗುತ್ತಿದೆ!

ಕಳೆದ ವರ್ಷ(2015) ತೀರಿಕೊಂಡ ಅಮೆರಿಕನ್ ಕಾದಂಬರಿಕಾರ E L Doctorow ಬಗ್ಗೆ ನೀವು ಕೇಳಿರುತ್ತೀರಿ. ಈತ ಐತಿಹಾಸಿಕ ವ್ಯಕ್ತಿಗಳನ್ನು ತನ್ನ ಕೃತಿಗಳೊಳಗೆ ಎಳೆತಂದು ಅವರನ್ನು ಇತಿಹಾಸದ ವಾಸ್ತವಿಕ ವಿವರಗಳ ಜೊತೆ ಜೊತೆಗೇ, ತನ್ನ ಕಲ್ಪನೆಯನ್ನೂ ಹರಿಯಬಿಟ್ಟು, ಅವರನ್ನು, ಅವರು ಎದುರಿಸಿದ ಸನ್ನಿವೇಶಗಳನ್ನು ತನಗೆ ಬೇಕಾದಂತೆ ಚಿತ್ರಿಸುತ್ತ ಓದುಗರಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬ ಪ್ರಶ್ನೆ ಬಗೆಹರಿಯದಂತೆ ಮಾಡಿಡುತ್ತಿದ್ದರು! ತಮ್ಮನ್ನು ಪ್ರಶ್ನಿಸಿದವರಿಗೆ, ಎಲ್ಲಾ ಇತಿಹಾಸವೂ ಫಿಕ್ಷನ್ನೇ ಎಂದು ಹೇಳುತ್ತಿದ್ದರಂತೆ. ಎಷ್ಟು ನಿಜವಲ್ಲವೆ? ಒಬ್ಬ ವ್ಯಕ್ತಿ ಸತ್ತ ತಕ್ಷಣವೇ ಆತ ಫಿಕ್ಷನ್ ಆಗಿ ಬಿಡುವ, ವಾಸ್ತವಕ್ಕಿಂತ ಹೆಚ್ಚು ದಂತಕತೆಗಳು, ಕಲ್ಪನೆಗಳು, ರೊಮಾಂಟಿಸಂ ಬೆರಕೆಯಾಗಿಬಿಡುವುದರ ದುಷ್ಪರಿಣಾಮಗಳು ಕೂಡ ನಮ್ಮ ಕಣ್ಣೆದುರಿಗೇ ಇವೆಯಲ್ಲವೆ? ವಾಸ್ತವ ಎಂದುಕೊಂಡಿದ್ದನ್ನು ಅಕ್ಷರಕ್ಕಿಳಿಸಿದ ಕ್ಷಣದಲ್ಲೇ ಅದು Fact ನಿಂದ ಕಳಚಿಕೊಂಡು Fiction ಆಗಿ ಬಿಡುತ್ತದೆ ಎಂಬ ನಿಲುವನ್ನು ಪ್ರತಿಪಾದಿಸಿದವರಲ್ಲಿ ಡಾಕ್ಟರೊವ್ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಆಸಕ್ತರು Joanne Brown ಅವರ "Historical Fiction or Fictionalized History? Problems for Writers of Historical Novels for Young Adults." ಪ್ರಬಂಧವನ್ನು ಗಮನಿಸಬಹುದು.

ಉಂಬರ್ಟೊ ಇಲ್ಲಿ ನಮಗೆ ಒಂದು ಪ್ರಮೇಯವನ್ನು ಮಂಡಿಸಿ ಈ ಪಾತ್ರಪ್ರಪಂಚದ ವೈಚಿತ್ರ್ಯವನ್ನು ಮನಗಾಣಿಸುತ್ತಾರೆ. ಒಂದು ವಸ್ತುವಿನ ಗುಣಲಕ್ಷಣಗಳನ್ನು ಸೂಚಿಸಲು ಮೊದಲಿಗೆ ಕೇವಲ ಕೆಲವು ಸ್ಯಾಂಪಲ್ಲುಗಳನ್ನು ಒಬ್ಬ ವಿಜ್ಞಾನಿ ಪರೀಕ್ಷೆಗೊಳಪಡಿಸಿದರೂ, ಒಮ್ಮೆ ಆತ ಸಾಮಾನ್ಯ ಗುಣಲಕ್ಷಣಗಳು ಎಂದು ಘೋಷಿಸಿದ್ದು ಸಹಜವಾಗಿಯೇ ಆ ವಸ್ತುವಿನ ಇಡೀ ಗುಂಪಿಗೆ ಸಲ್ಲುವ ಮಾತಾಗಿ ನಿಲ್ಲುತ್ತದೆ, ಸ್ವೀಕರಿಸಲ್ಪಡುತ್ತದೆ. ಇದೇ ರೀತಿ ಘೋಷಿತ ಗುಣಲಕ್ಷಣಗಳ ವಿಚಾರವನ್ನು ನಾವು ವ್ಯಕ್ತಿಗಳಿಗೆ ಅನ್ವಯಿಸುವಾಗ ಈಗ ಭೂಮಿಯ ಮೇಲಿಲ್ಲದ ವ್ಯಕ್ತಿಯ ಬಗ್ಗೆ ಅದು ಉಂಟು ಮಾಡುವ ಪರಿಣಾಮ ಮತ್ತು ಇನ್ನೂ ಜೀವಂತವಾಗಿರುವ ವ್ಯಕ್ತಿಯ ಬಗ್ಗೆ ಅದು ಉಂಟು ಮಾಡುವ ಪರಿಣಾಮ ಎರಡೂ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಟಿಪ್ಪೂ ಧರ್ಮಾಂಧನಾಗಿದ್ದನೆ, ಇಲ್ಲವೆ ಎಂಬ ಪ್ರಶ್ನೆ ತೆಗೆದುಕೊಂಡರೆ, ಈ ಮಾತಿನ ನಿಜವಾದ ಮರ್ಮ ಅರಿಯಲು ನಾವು ಟೈಮ್ ಮಶೀನಿನಲ್ಲಿ ಕೂತು ಟಿಪ್ಪುವಿನ ಕಾಲಕ್ಕೆ ಮರಳಿ ಆತನ ರೀತಿ ನೀತಿ ಗಮನಿಸಿ ಒಂದು ಸ್ವತಂತ್ರ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ. ಆತನ ಬಗ್ಗೆ ಬಂದಿರುವ ಇತಿಹಾಸವನ್ನೆಲ್ಲ ಓದಿದರೆ ಅದು ಫಿಕ್ಷನ್ ಎಂಬುದು ಮನವರಿಕೆಯಾಗುತ್ತದೆ, ಅಷ್ಟೆ. ಆದರೆ, ಟಿಪ್ಪೂ ಸತ್ತ ದಿನಾಂಕದ ಬಗ್ಗೆ ಅಂಥಾ ವಿವಾದ ಇರಲು ಸಾಧ್ಯವಿಲ್ಲ; ಇದ್ದರೆ ತಿದ್ದಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಬದಲಾಗಿ, ಈಗ ನಮ್ಮೆದುರು ಇರುವ ಒಬ್ಬ ವ್ಯಕ್ತಿಯ ಬಗ್ಗೆ ಏನಾದರೂ ಹೇಳಿದರೆ ನೀವು ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ತಿಳಿದುಕೊಳ್ಳಲು ಇರುವ ಅವಕಾಶ ಹೆಚ್ಚು. ಎಂ ಎಂ ಕಲಬುರ್ಗಿಯವರು ಎಂಥ ವ್ಯಕ್ತಿಯಾಗಿದ್ದರು, ನಿಜಕ್ಕೂ ಅವರ ಕೊಲೆ ನಡೆಯಿತೆ ಎನ್ನುವ ವಿಚಾರ ನಮಗೆ ಗೊತ್ತಿದೆ ಅಥವಾ ಗೊತ್ತು ಮಾಡಿಕೊಳ್ಳಲು ಸಾಧ್ಯ. ಇದನ್ನೇ ಶಿವರಾಮ ಕಾರಂತರ ಚೋಮನಿಗೆ ಅನ್ವಯಿಸಿ ನೋಡಿದರೆ ಚೋಮ ಎಂಥವನಾಗಿದ್ದ, ಅವನ ವ್ಯಕ್ತಿತ್ವ ಎಂಥದ್ದು, ಅವನು ಹೃದಯಾಘಾತದಿಂದ ಸತ್ತನೆ ಅಥವಾ ಆತ್ಮಹತ್ಯೆ ಮಾಡಿಕೊಂಡನೆ ಎಂಬ ಬಗ್ಗೆ ಹೇಳುವುದು ಸಾಧ್ಯವಿದೆಯೆ? ಕಾರಂತರ ಮನೋಭೂಮಿಕೆಯನ್ನು ಹೊಕ್ಕು, ಚೋಮ ಎಂಬವನು ಬದುಕಿದ್ದ ಮತ್ತು ಒಂದು ನಿರ್ದಿಷ್ಟ ದೇಶ-ಕಾಲದಲ್ಲಿ ಅಂಥ ಘಟನೆಗಳು ನಿಜಕ್ಕೂ ನಡೆದವು ಎಂದು ಪರಿಭಾವಿಸಿ ನೋಡಿದಲ್ಲಿ ಮಾತ್ರ ಅದು ಸಾಧ್ಯ. ಅದಕ್ಕೆ ಒಂದು ವಿಧದ ತನ್ಮಯತೆ ಬೇಕಾಗುತ್ತದೆ. ಅದು ಸಿದ್ಧಿಸಿದಾಗ, ಸಿದ್ಧಿಸಿದ್ದಷ್ಟು ಹೊತ್ತು ಚೋಮ ನಿಜ ಮತ್ತು ಅವನ ಸಾವಿಗೆ ನಾವು ಕಣ್ಣೀರು ಮಿಡಿಯಬಹುದು. ಇದೊಂದು ತರದ ಹಗಲುಗನಸು ಕಂಡಂತೆ. ಕನಸು ಮುಗಿದದ್ದೇ ಓಹ್! ಚೋಮ ಸತ್ತಿದ್ದು ಒಂದು ಕನಸು ಎಂದು ಅರಿವಾಗಿ ಸಮಾಧಾನ ಮೂಡಬಹುದು ಮತ್ತು ಇನ್ನೂ ಒಂದಿಷ್ಟು ಕಾಲ ನಾವು ಚೋಮನಿಗಾಗಿ ಮರುಗುತ್ತಲೇ ಇರಬಹುದು ಕೂಡ. ಆದರೆ ಆಗ ನಮಗೆ ಅರಿವಾಗಿರುತ್ತದೆ, ಚೋಮ ಕಾದಂಬರಿಯಲ್ಲಿ ನಿಜ ಮತ್ತು ಸದ್ಯದಲ್ಲಿ ಅಲ್ಲ ಎಂಬ ಒಂದು ಸತ್ಯ. ಆದರೂ ಆಗಲೂ ನಾವು ಎಸ್ ದಿವಾಕರರಂತೆ ಹಾಗಾಗದೆ ಹೀಗಾಗಿದ್ದರೆ, ಚೋಮನ ಮಗಳು ಅತ್ಯಾಚಾರಕ್ಕೊಳಗಾಗದೇ ಇರುತ್ತಿದ್ದರೆ, ಅವನ ಮಗ ಸಾಯದೇ ಉಳಿಯುತ್ತಿದ್ದರೆ ಇತ್ಯಾದಿ ಕಲ್ಪನೆಗಳನ್ನು ಹರಿಯಬಿಟ್ಟು ಗಂಭೀರವಾಗಿಯೇ ಚೋಮನ ಬದುಕು ಹಳಿತಪ್ಪಿದ್ದೆಲ್ಲಿ ಎಂದು ತಲೆಕೆಡಿಸಿಕೊಳ್ಳುವುದಕ್ಕೂ ಅವಕಾಶವಿದ್ದೇ ಇದೆ! ಇದಕ್ಕೆ ಬೇಕಾಗುವ ತನ್ಮಯತೆ, ಪಾತ್ರದಲ್ಲಿ, ಪಾತ್ರದ ದೇಶ-ಕಾಲದಲ್ಲಿ ತಾವೂ ಸೇರಿಕೊಳ್ಳುವ ಸಾಮರ್ಥ್ಯ ಇಬ್ಬಗೆಯದು. ನಮ್ಮದೇ ಬದುಕಿನಲ್ಲಿ ನಾವು ತೆಗೆದುಕೊಂಡ ನಿರ್ಧಾರ, ಇಟ್ಟ ಹೆಜ್ಜೆ, ಬದುಕಿದ ರೀತಿ ನಮಗೆ ಸರಿಯಲ್ಲ ಅನಿಸುವ ಹಾಗೆ, ಇವಾನ್ ಇಲಿಚ್ಯ ತನಗೆ ಮತ್ತೊಂದು ಅವಕಾಶ ಸಿಕ್ಕಿದರೆ ತಾನು ಇದುವರೆಗೆ ಬದುಕಿದ್ದಕ್ಕಿಂತ ಭಿನ್ನವಾಗಿ ಬದುಕುತ್ತಿದ್ದೆ ಎಂದು ತನ್ನ ಮರಣಶಯ್ಯೆಯಲ್ಲಿ ಅಂದುಕೊಳ್ಳುವಂತೆ ನಾವು, ನಾವು ಓದಿದ ಪಾತ್ರಗಳ ಬದುಕಿನ ಕುರಿತು ಯೋಚಿಸುವಾಗ ನಮ್ಮ ಬದುಕಿನ ಕುರಿತೂ, ನಮ್ಮ ಬದುಕಿನ ಕುರಿತು ಯೋಚಿಸುವಾಗ ಈ ಪಾತ್ರಗಳ ಬದುಕಿನ ಕುರಿತೂ ಚಿಂತಿಸುತ್ತಿರುತ್ತೇವೆ ಅನಿಸದೆ? ಯಶಸ್ವಿ ಕಾಲ್ಪನಿಕ ಪಾತ್ರಗಳು ವಾಸ್ತವಿಕ ಬದುಕಿನ ಪಾತ್ರಗಳಾಗುವ ಅನನ್ಯ ಉದಾಹರಣೆಗಳು ಇವು ಎನ್ನುತ್ತಾರೆ ಉಂಬರ್ಟೊ.

ಒಟ್ಟಿನಲ್ಲಿ ಈ ಕೃತಿಯಲ್ಲಿ ನಮಗೆ ಸಿಗುವ ಉಪನ್ಯಾಸಗಳು ಬರವಣಿಗೆಯ ಒಳಮರ್ಮಗಳನ್ನು, ಅದರ ಕಷ್ಟಗಳನ್ನು, ಒಬ್ಬ ಬರಹಗಾರನಿಗಿರಬೇಕಾದ ಪರಿಶ್ರಮವನ್ನು ಕುರಿತು ಹೇಳುತ್ತಿರುವಾಗಲೇ ಬರವಣಿಗೆಯ ಮಟ್ಟು-ಪಟ್ಟುಗಳ ಕುರಿತೂ ಸಾಕಷ್ಟು ಒಳನೋಟಗಳನ್ನು, ಅಭ್ಯಾಸಯೋಗ್ಯ ಗುಟ್ಟುಗಳನ್ನೂ ತಿಳಿಸಿಕೊಡುವಂತಿದೆ. ಅಷ್ಟು ಮಾತ್ರವಲ್ಲ ನಾವೆಲ್ಲ ತುಂಬ ಪ್ರೀತಿಸುವ ಒಬ್ಬ ಲೇಖಕನ ಬರೆವ ಬದುಕಿನ (Making of a Novel?)ಕೆಲವು ಖಾಸಗಿ ಚಿತ್ರಗಳನ್ನೂ ಒದಗಿಸುವ ಅಪೂರ್ವ ಆಕರ್ಷಣೆಯನ್ನೂ ಹೊಂದಿದೆ.

(ಈ ಲೇಖನದ ಆಯ್ದ ಭಾಗ ವಿಶ್ವವಾಣಿಯ ಸಾಪ್ತಾಹಿಕ ಪುರವಣಿ ‘ವಿರಾಮ’ ದಲ್ಲಿ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಸಮೃದ್ಧ ಕಥಾಜಗತ್ತೊಂದನ್ನು ಕಟ್ಟುವ ಕತೆಗಳು

ಈ ಸಂಕಲನದ ಒಟ್ಟು ಹನ್ನೆರಡು ಕತೆಗಳಲ್ಲಿ ಕೆಲವೊಂದು ಸಾಮಾನ್ಯ ಅಂಶಗಳಿದ್ದು ಈ ಕತೆಗಳನ್ನು ಒಟ್ಟಾಗಿ ಓದುವಾಗ ಆಗುವ ಒಂದು ವಿಶಿಷ್ಟ ಅನುಭವಕ್ಕೆ ಅವು ಬಹುಮಟ್ಟಿಗೆ ಕಾರಣವಾಗಿವೆ. ಅವುಗಳಲ್ಲಿ ಮೊದಲನೆಯದು ಇಲ್ಲಿನ ಹೆಚ್ಚಿನ ಕತೆಗಳಲ್ಲಿ ಬರುವ ಪಾತ್ರ ಪ್ರಪಂಚದಲ್ಲಿನ ಸಾಮ್ಯತೆ. ಅದು ಉಡುಪಿ-ದಕ್ಷಿಣಕನ್ನಡ ಜಿಲ್ಲೆಯ ಕೊಂಚ ಒಳನಾಡಿಗೆ ಸೇರಿದ ಯಾವುದಾದರೊಂದು ಪುಟ್ಟ ಊರು. ಕೃಷಿಕರು, ಗೇಣಿಗೆ ಭೂಮಿ ಪಡೆದ ಒಕ್ಕಲುಗಳು, ಅಂಗಡಿ ಅಥವಾ ಹೋಟೇಲು ಇಟ್ಟು ಸಂಸಾರ ತೂಗಿಸುವ ಗಂಡಸರು, ಊರನ್ನು ನಡೆಸಿಕೊಂಡು ಹೋಗುವ ಪಟೇಲರು-ಶಾನುಭಾಗರು, ಬೀಡಿ ಕಟ್ಟಿ ಬದುಕಿಗೆ ಆಧಾರ ಮಾಡಿಕೊಂಡ ಹೆಣ್ಣುಗಳು, ಸಂಸಾರದಲ್ಲಿ ಆರ್ಥಿಕವಾಗಿಯೂ, ಕೌಟುಂಬಿಕವಾಗಿಯೂ ಗಂಡಿಗಿಂತ ಹೆಚ್ಚು ಸಮರ್ಥರೂ, ಮುಂದಾಲೋಚನೆಯುಳ್ಳವರೂ ಆದ ಹೆಂಡಿರು, ತಮ್ಮನ ಯಶಸ್ಸನ್ನೂ ಸೋಲನ್ನೂ ಬಳಸಿಕೊಳ್ಳುವ ಅಣ್ಣಂದಿರು ಮತ್ತು ಹಿರಿಯ ಜೀವದ ಬಗ್ಗೆ ಮಮಕಾರದಿಂದ ಮಿಡಿಯುವ ಯುವ ತಲೆಮಾರು - ಇಲ್ಲಿನ ಪಾತ್ರಪ್ರಪಂಚದ ಒಟ್ಟಾರೆ ಲಕ್ಷಣವೆಂದರೆ ತಪ್ಪಾಗಲಾರದು.

ಇನ್ನು ಎರಡನೆಯದು ಇಲ್ಲಿ ಅನುಬೆಳ್ಳೆಯವರು ಬಳಸುವ ಭಾಷೆಯ, ನುಡಿಕಟ್ಟಿನ ದೇಸೀತನ. ಅವರಿಗೇ ವಿಶಿಷ್ಟವಾದ ಒಂದು ಭಾಷೆಯ ಹದವನ್ನು ಅವರು ಕಂಡುಕೊಂಡಂತಿದೆ. ಅದರಲ್ಲಿ ಈ ಭಾಗದ ಜನ ತಮ್ಮ ದೈನಂದಿನ ಆಗುಹೋಗುಗಳಲ್ಲಿ ಬಳಸುವ, ಬಹುಷಃ ತುಳು-ಕನ್ನಡ ಎರಡರ ಹದವಾದ ಒಂದು ಮಿಶ್ರಣದಂತಿರುವ, ಬೇರೆ ಭಾಗದ ಕನ್ನಡಿಗರಿಗೆ ಎಲ್ಲಿಯೂ ಕಷ್ಟಕೊಡದೆ ಆಪ್ತವಾಗುವ ಒಂದು ಭಾಷೆಯಿದು. ಈ ಭಾಷೆಯನ್ನು ಬಳಸಿದ್ದರಿಂದಲೇ ಈ ಕತೆಗಳಿಗೆ ಒಂದು ಬಗೆಯಾದ ಅಥೆಂಟಿಕ್ ಆದ ವಾತಾವರಣ ನಿರ್ಮಾಣಗೊಂಡು ಬಿಡುತ್ತದೆ ಮತ್ತು ಇದು ಇಲ್ಲಿನ ಬಹುತೇಕ ಎಲ್ಲಾ ಕತೆಗಳಲ್ಲೂ ಮರುಕಳಿಕೆಯಾಗುವುದರಿಂದ ನಾವು ಕತೆಗಳನ್ನು ಓದುತ್ತಿರುವಾಗಲೇ ಕಾದಂಬರಿಯೊಂದನ್ನು ಓದುತ್ತಿರುವ ಅನುಭವಕ್ಕೂ ಕಾರಣವಾಗುತ್ತದೆ. ಬಹುಷಃ ಈ ನೆಲೆಯ ಒಂದು ಕಾದಂಬರಿಯನ್ನೂ ನಾವು ಅನುಬೆಳ್ಳೆಯವರಿಂದ ನಿರೀಕ್ಷಿಸಬಹುದೇನೋ ಎನಿಸುತ್ತದೆ.

ಮೂರನೆಯದು ಇಲ್ಲಿನ ಕಥಾನಕಗಳ ಆಕೃತಿಯ ಕುರಿತಾದ ವೈಶಿಷ್ಟ್ಯ. ಇಲ್ಲಿನ ಹೆಚ್ಚಿನ ಕತೆಗಳಿಗೆ ನಾವು ಸಾಮಾನ್ಯವಾಗಿ ನಿರೀಕ್ಷಿಸುವಂಥ ಒಂದು ಪಂಚಿಂಗ್ ಎಂಡ್ ಎನ್ನುವುದಿಲ್ಲ. ಮುಕ್ತಾಯದಲ್ಲಿ ಓದುಗನಿಗೆ ಶಾಕ್ ಕೊಡುವ, ಯಾವುದೋ ಒಂದು ವಿಶಿಷ್ಟ ಅರ್ಥದ ಛಾಪು ನೀಡುವ, ಇಷ್ಟು ಹೊತ್ತು ‘ನಾನು ಹೇಳಲು (ಹೊಳೆಯಿಸಲು) ಹೊರಟಿದ್ದು ಇದನ್ನೇ’ ಎಂದು ಮನಗಾಣಿಸುವ ಪೂರ್ವ ನಿರ್ಧಾರಿತ ಉದ್ದೇಶದಿಂದ ಒಂದು ನಿರ್ದಿಷ್ಟ ಗಮ್ಯವನ್ನು ಅರಸಿ ಹೊರಟ ಕತೆಗಳಲ್ಲ ಇವು. ಬದುಕಿನ ಒಂದು ನಿಟ್ಟಿನ ನೋಟವನ್ನಷ್ಟೇ ದಯಪಾಲಿಸುತ್ತ ಇದು ಮುಂದುವರಿಯಲಿದೆ ಎನ್ನುವಂಥ ಒಂದು ಧಾಟಿಯಲ್ಲೇ ಇಲ್ಲಿನ ಬಹುತೇಕ ಕತೆಗಳು ಮುಗಿದು ಬಿಡುತ್ತವೆ. ಕೆಲವೊಮ್ಮೆ ಇನ್ನೊಂದು ಕತೆಯಲ್ಲಿ ಹಿಂದಿನ ಯಾವುದೋ ಕತೆಯ ಪಾತ್ರಗಳೋ, ಅವುಗಳನ್ನು ಹೋಲುವ ಛಾಯೆಗಳೋ ಎದುರಾಗುವುದೂ ಇದೆ. ಇದರಿಂದಾಗಿಯೂ ಈ ಓದು ಒಂದು ಕಥಾಜಗತ್ತಿನಲ್ಲಿ ಒಂದಷ್ಟು ಹೊತ್ತು ಓಡಾಡಿ ಬಂದ ಅನುಭವವನ್ನು ನೀಡುತ್ತದೆ.

ನಾಲ್ಕನೆಯದು ಅನುಬೆಳ್ಳೆಯವರಿಗೆ ಗೃಹಿಣಿಯರ ಮತ್ತು ಊರ ಕೃಷಿಕರ ಬದುಕಿನ ಸೂಕ್ಷ್ಮ ವಿವರಗಳ ಬಗ್ಗೆ ಇರುವ ಸಮಾನ ಆಸಕ್ತಿ ಮತ್ತು ಜ್ಞಾನ ಇಲ್ಲಿನ ಕತೆಗಳಲ್ಲಿ ಮೈತಳೆದಿರುವುದು. ಅಡುಗೆಮನೆಯ ಕೆಲಸ-ತಾಪತ್ರಯಗಳು, ಗಂಡಸರ ಕೃಷಿ, ಉದ್ಯಮದ ಸೋಲು-ಗೆಲುವುಗಳು, ಕಾಯಿಲೆ ಬಿದ್ದ ಹಿರಿಯರ ಶುಶ್ರೂಷೆ, ಮಕ್ಕಳಾಗದ, ಮದುವೆಯಾಗದ ನೋವು, ಸಂಬಂಧಿಕರಲ್ಲಿ ಯಾರದೋ ಸಾವು - ಇವೆಲ್ಲವೂ ಅತ್ತೆ-ಸೊಸೆ, ಗಂಡ-ಹೆಂಡತಿ, ಅಪ್ಪ-ಮಗಳು ಮುಂತಾದ ಸಂಬಂಧಗಳ ನಡುವೆ ಕಂಡೂ ಕಾಣದಂತೆ ಬೀರುವ ಪ್ರಭಾವವನ್ನು ಮತ್ತು ಅದರಾಚೆಗೂ ಈ ಸಂಬಂಧಗಳಲ್ಲಿ ಸುಪ್ತವಾಗಿ ಮಿಡಿಯುವ ತಂತುಗಳನ್ನು ಅನುಬೆಳ್ಳೆಯವರು ಸೊಗಸಾಗಿ ತಮ್ಮ ಕತೆಗಳಲ್ಲಿ ತರಬಲ್ಲವರು.

‘ಋಣಮುಕ್ತಿ’ ಕತೆಯ ಪ್ರಾಮಾಣಿಕ್ ಮತ್ತು ಹೃದಯಿ ದಂಪತಿಗಳ ಅನ್ಯೋನ್ಯತೆ ಮತ್ತು ಬದುಕಿನ ವಿವರಗಳು ತುಂಬ ನೈಜವಾಗಿವೆ. ಆದರೆ ಕತೆ ನೆಚ್ಚಿಕೊಂಡಿರುವುದು ಭಾವುಕತೆಯನ್ನೇ ಆಗಿರುವುದರಿಂದ ಈ ಪಾತ್ರಗಳ ಹೆಸರುಗಳಂತೆಯೇ ಇಲ್ಲಿನ ಸಂಭಾಷಣೆ ಕೊಂಚ ಡ್ರಮಾಟಿಕ್ ಆಗಿದೆ. ‘ಸುಡುಗಾಡ ಕಾಯ’ ಕತೆಯಲ್ಲಿಯೂ ಚೀತಕ್ಕನ ಬಾಯಿಂದ ಮಾತುಗಳನ್ನು ಹೊರಡಿಸುವುದಕ್ಕೆಂದೇ ಹೆಣ ಸುಡಲು ಬಂದಾತನ ಬಾಯಲ್ಲಿ ಕತೆಗಾರರೇ ಆಡಿಸುವ ಕೆಲವು ಮಾತುಗಳು ಸಂದರ್ಭಕ್ಕೆ ಅಷ್ಟೊಂದು ಹೊಂದಾಣಿಕೆಯಾಗುವುದಿಲ್ಲ ಎಂದು ಅನಿಸದಿರದು. ಆದರೆ ಇವೆರಡು ಕತೆಗಳನ್ನು ಬಿಟ್ಟರೆ ಉಳಿದ ಎಲ್ಲಾ ಕತೆಗಳೂ ವಾಸ್ತವಕ್ಕೆ ಹೆಚ್ಚು ನೆಚ್ಚಿಕೊಂಡು ನಿಲ್ಲುವಂಥವು. ‘ಸೋಲು ಗೆಲುವಾಗದೆ’, ‘ಪಯಣದ ಕೊನೆ’ ಮತ್ತು ‘ಅಸ್ತಿತ್ವ’ ಕತೆಗಳಲ್ಲಿ ಅಣ್ಣ ತಮ್ಮಂದಿರ ನಡುವಣ ಆಸ್ತಿ ವಿಚಾರದ ಗೊಂದಲ ಸಾಮಾನ್ಯ ಅಂಶವಾಗಿ ಕಂಡುಬಂದರೂ ಪ್ರತಿಯೊಂದು ಕತೆಯೂ ತನ್ನ ದಟ್ಟವಾದ ವಿವರಗಳು ಮತ್ತು ವಿಭಿನ್ನ ಕಥಾನಕದಿಂದಾಗಿ ಬೇರೆಯಾಗಿ ನಿಲ್ಲುತ್ತದೆ. ‘ಸೋಲು ಗೆಲುವಾಗದೆ’ ಕತೆಯ ಗೋಪಾಲಯ್ಯ ತಾನೇ ಗದ್ದೆಗಳನ್ನು ಗೇಣಿಗೆ ಕೊಟ್ಟು ಕಷ್ಟಕ್ಕೆ ಸಿಲುಕಿದರೆ ‘ಅಸ್ತಿತ್ವ’ ಕತೆಯ ವಿಠಲ ಗೇಣಿಗೆ ಭೂಮಿ ಪಡೆದೂ ಕಷ್ಟಕ್ಕೆ ಬಿದ್ದವನು. ಅಲ್ಲದೆ ಇಲ್ಲಿ ಅಣ್ಣ ತಮ್ಮಂದಿರ ಬದಲಾಗಿ ಅಕ್ಕ ತಂಗಿಯರ ಆಸ್ತಿ ಹಿಸ್ಸೆಯ ಸಮಸ್ಯೆಯಿದೆ. ‘ಪಯಣದ ಕೊನೆ’ ಕತೆಯಂತೂ ಮೂರು ತಲೆಮಾರಿನ ಗೋಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಹರಹು ಹೊಂದಿರುವ ಕತೆ. ಹೀಗಾಗಿಯೂ ಇಲ್ಲಿ ಮದುವೆಗೆ ಬೆಳೆದು ನಿಂತ ಹೆಣ್ಣುಮಕ್ಕಳ ಸಮಸ್ಯೆ, ದಾಂಪತ್ಯದ ಸಿಕ್ಕುಗಳು, ಉಳ್ಳವರ ದರ್ಪ, ಇಲ್ಲದವರ ಬವಣೆ ಎಲ್ಲವೂ ಕತೆಯ ಚೌಕಟ್ಟಿನೊಳಗೆ ಸೇರಿಕೊಳ್ಳುತ್ತ ಒಂದು ಊರು-ಬದುಕು ಹೆಚ್ಚು ಮುಖ್ಯವಾಗುತ್ತ ಕಥಾನಕಕ್ಕಿಂತ ನಿರೂಪಣೆಯ ಲಯ, ವಿವರಗಳ ದಟ್ಟಣೆ ಮತ್ತು ನೈಜತೆ ಹೆಚ್ಚು ಆಪ್ತವಾಗುತ್ತ ಹೋಗುತ್ತದೆ.

‘ಸತ್ಯವೆಂಬ ಸುಳ್ಳು’ ಒಂದು ವಿಶಿಷ್ಟವಾದ ವಸ್ತುವನ್ನು ಹೊಂದಿರುವ ಕತೆ. ಇಲ್ಲಿಯೂ ಕಥಾನಕದ ಬೆಳವಣಿಗೆ, ಕುತೂಹಲವನ್ನು ಒಡೆಯುವ ಕ್ಲೈಮ್ಯಾಕ್ಸ್ ಇಲ್ಲ. ಆದರೆ ಸ್ಕೆಚೀ ಆಗಿಯೇ ಕಾಣಿಸಿಕೊಳ್ಳುವ ಒಂದು ವಿಶಿಷ್ಟ ಪಾತ್ರದ ವಿವರಗಳು ಓದುಗನಲ್ಲಿ ಹುಟ್ಟಿಸಬಹುದಾದ ಕೌತುಕ ಮತ್ತು ಒಗಟನ್ನು ಒಡೆಯುವ ತವಕ - ಇವನ್ನು ಅವನಿಗೇ ಕಾಣಿಸುವಂಥ ತಂತ್ರವನ್ನು ಈ ಕತೆ ದುಡಿಸಿಕೊಳ್ಳುತ್ತಿದೆ. ‘ಮದುವೆಯೆಂಬ ಕನಸು ವಾಸ್ತವ’ ಹಾಗೂ ‘ಕಾರಣ ಬೇಕಾಗಿಲ್ಲ’ ಎರಡೂ ಕತೆಗಳು ಕೂಡ ನಾನು ಮೇಲೆ ಹೇಳಿದಂಥ ಒಂದು ಊರು-ಬದುಕು ಮತ್ತು ಕಥಾಜಗತ್ತನ್ನು ಮತ್ತಷ್ಟು ಶ್ರೀಮಂತಗೊಳಿಸುವ ಮತ್ತು ತನ್ನದೇ ಆದ ಸ್ವತಂತ್ರ ಕಥಾನಕವನ್ನೂ ಹೊಂದಿರುವ ಕತೆಗಳು. ಒಂದು ಮನೆಯ ಹೊರಜಗತ್ತನ್ನು ನಿರ್ಮಿಸಿಕೊಡುವ ವಿವರಗಳ ಶ್ರೀಮಂತಿಕೆಯನ್ನು ಹೊಂದಿದ್ದರೆ ಇನ್ನೊಂದು ಮನೆಯ ಒಳಜಗತ್ತನ್ನು ಕಟ್ಟಿಕೊಡುವ ವಿವರಗಳನ್ನು ಹೊಂದಿದೆ. ‘ಅಜ್ಜಿಯ ಶಾರ್ಧ’ ಕತೆಯನ್ನು ಗಮನಿಸಿದರೂ ಇದೇ ಅಂಶ ವೇದ್ಯವಾಗುತ್ತದೆ. ಇಲ್ಲಿಯೂ ವಿಶೇಷವಾದ ಕಥಾನಕದ ಚೌಕಟ್ಟು ಎದ್ದು ಕಾಣುವಂತಿಲ್ಲ. ಆದರೆ ಪುಟ್ಟ ಊರೊಂದರ ಜೀವನಕ್ರಮದ ವಿವರಗಳು ದಟ್ಟವಾಗಿ ಹರಡಿಕೊಂಡಿವೆ. ಹಾಗೆಯೇ ‘ಸೋಲು ಗೆಲುವಾಗದೆ’, ‘ಪಯಣದ ಕೊನೆ’ ಮತ್ತು ‘ಅಸ್ತಿತ್ವ’ ಕತೆಗಳಲ್ಲಿ ಬರುವ ಅದೇ ಅಣ್ಣ ತಮ್ಮಂದಿರು ಇಲ್ಲಿಯೂ ಮುಂದುವರಿದಿದ್ದಾರೆಯೇ ಎನಿಸಿದರೂ ಅಚ್ಚರಿಯಿಲ್ಲ. ಈ ಕತೆ ಒಂದು ಊರಿನ ಎಷ್ಟೆಲ್ಲ ಆಯಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆಯೆಂಬುದೇ ಅಚ್ಚರಿಯನ್ನು ಹುಟ್ಟಿಸುವಂತಿದೆ. ‘ಕಲ್ಲಲಾಂಬು’ ಕತೆ ಕೊಂಚ ಲಘುಧಾಟಿಯನ್ನು ನೆಚ್ಚಿಕೊಂಡು ಸಾಗಿದರೂ ಜಾತಿ, ಅದಕ್ಕೆ ಹೊಂದಿಕೊಂಡ ಆಹಾರ ಪದ್ಧತಿ ಮತ್ತು ಆಧುನಿಕತೆಯ ಎದುರು ಈ ಗೆರೆಗಳೆಲ್ಲ ಅಳಿಸಿ ಹೋಗುತ್ತಿರುವುದು ಕೂಡ ಕತೆಯ ಚೌಕಟ್ಟಿನಲ್ಲೇ ಅತ್ಯಂತ ಸಹಜವಾಗಿ ಬಂದಿದೆ. ಪಮ್ಮಟ್ಟು ಹೇಳುವ ಹಕ್ಕಿಯ ಕತೆ ಕೂಡ ಕತೆಯ ಆಕರ್ಷಕ ಅಂಶಗಳಲ್ಲಿ ಒಂದು.

‘ದಾರಿಯಲ್ಲದ ದಾರಿ’ ಕತೆಯ ಬಾಜು ಒಂದು ಪ್ರಾತಿನಿಧಿಕ ಪಾತ್ರ. ಬದುಕಿನ ಯಶಸ್ಸು ಎಂದು ನಾವು ಪರಿಗಣಿಸುವ ಭೌತಿಕ ಜೀವನಮಟ್ಟಕ್ಕೆ ಏರಲಾಗದೇ ಹೋದ ಮತ್ತು ಸಮಾಜ ಯಾವ ಸ್ತರದಲ್ಲಿಯೂ ಸ್ವೀಕರಿಸಲು ಸಿದ್ಧವಿಲ್ಲದ ನಿಷ್ಪಾಪಿ ಜೀವಗಳು ಎಲ್ಲ ಊರಿನಲ್ಲಿಯೂ ಇದ್ದೇ ಇರುತ್ತವೆ. ಇಂಥ ಒಂದು ಪಾತ್ರವನ್ನು ಅನುಬೆಳ್ಳೆಯವರು ಇಲ್ಲಿ ಸಮೃದ್ಧವಾಗಿ ಚಿತ್ರಿಸಿದ್ದಾರೆ. ‘ಅಂತಃಸಾಕ್ಷಿ’ ಬಹುಷಃ ಹೆಚ್ಚು ಕೌತುಕದ ನಡೆಗಳಿರುವ, ಸಾವೊಂದರ ನಿಗೂಢತೆಯನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ಕತೆಯಾದರೂ ಕಥಾನಕದ ಗಮ್ಯ ಮಾತ್ರ ಈ ಕೌತುಕವನ್ನು ಒಡೆಯುವುದಲ್ಲ. ಒಂದು ವಿಧದಲ್ಲಿ ಇದು ಕೂಡ ‘ಸತ್ಯವೆಂಬ ಸುಳ್ಳು’ ಕತೆಯ ಹಾಗೆ ಸತ್ಯ ಮತ್ತು ಸುಳ್ಳುಗಳ, ನ್ಯಾಯ ಮತ್ತು ಅನ್ಯಾಯಗಳ ನಡುವಿನ ತೆಳುವಾದ ಗೆರೆಯ ಜಾಡುಗಳನ್ನು ಅರಸುವುದರಲ್ಲಿಯೇ ರಮಿಸುವ ಕತೆ.

ಸಂಕಲನದ ಅತ್ಯಂತ ಸಮೃದ್ಧವಾದ ಕತೆ ‘ಅಸ್ತಿತ್ವ’. ಈ ಕತೆಯ ವಿಠಲ, ಪ್ರಮೀಳ, ರಮಣಿ, ದೆಚ್ಚ, ಪಟೇಲರು, ಶಾನುಭೋಗರು - ಹೀಗೆ ಎಲ್ಲಾ ಪಾತ್ರಗಳೂ, ಆಯಾ ಪಾತ್ರಗಳ ಹಿನ್ನೆಲೆಯೂ ಬಹಳ ಸುಪುಷ್ಟವಾದ ಆರೈಕೆ ಪಡೆದಿವೆ. ಹೀಗಾಗಿ ಕತೆಯ ಒಡಲು ಸಮೃದ್ಧವಾಗಿ ಮೂಡಿದೆ ಮಾತ್ರವಲ್ಲ ಕಥಾನಕವೂ ಗಟ್ಟಿಯಾಗಿದ್ದು ಬದುಕಿನ ವಿವಿಧ ಆಯಾಮಗಳತ್ತ ಯಾವುದೇ ನಿರ್ಧಾರಗಳಿಲ್ಲದ ನೋಟವೊಂದನ್ನು ಅತ್ಯಂತ ಸಹಜವಾಗಿ ದೊರಕಿಸುತ್ತ ಹೋಗುತ್ತದೆ.

ಕೇವಲ ಕತೆಗಾಗಿ ಕತೆಯಾಗದೆ, ಮನೋರಂಜನೆಯೊಂದೇ ಉದ್ದೇಶವಾಗಿರದ ಮಹತ್ವಾಕಾಂಕ್ಷಿ ಬರಹಗಳಾಗಿದ್ದೂ, ನುರಿತ ಕತೆಗಾರರಲ್ಲೂ ಇವತ್ತು ಕಾಣಲು ಸಿಗದಂಥ, ಜೀವನಾನುಭವದಿಂದಲೂ, ಸೂಕ್ಷ್ಮ ಅವಲೋಕನದಿಂದಲೂ ದಕ್ಕಿದ ಅನೇಕ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಇಲ್ಲಿನ ಕತೆಗಳು ನಳನಳಿಸುತ್ತಿದ್ದರೂ ಪ್ರಸ್ತುತ ಕನ್ನಡದ ಸಣ್ಣಕತೆಯ ಪ್ರಕಾರ ಪ್ರಯತ್ನಿಸಿ ಬಿಟ್ಟ ಹತ್ತು ಹಲವು ಪ್ರಯೋಗಗಳ ಹಿನ್ನೆಲೆಯಲ್ಲಿ ಈ ಎಲ್ಲ ಕತೆಗಳಲ್ಲಿ ಒಂದು ಕೊರತೆ ಕಾಣುತ್ತದೆ. ಅದು, ಈ ಕತೆಗಳಲ್ಲಿ ಎಲ್ಲವೂ ಸದ್ದಿನಲ್ಲಿ ಹುಟ್ಟಿ ಸದ್ದಿನಲ್ಲಿಯೇ ಮುಗಿಯುತ್ತದೆ. subtle ಎಂದು ನಾವು ಕರೆಯುವ, ಕೇವಲ ಸಂವೇದನೆಗಳಲ್ಲಷ್ಟೇ ಒಬ್ಬರಿಂದ ಇನ್ನೊಬ್ಬರನ್ನು ತಲುಪಬಲ್ಲ ಸೂಕ್ಷ್ಮಗಳು ಈ ಕತೆಗಳ ಒಡಲಿನಿಂದ ಮೂಡುತ್ತಿಲ್ಲ. ಇಲ್ಲಿನ ವಿವರಗಳು ಭೌತಿಕ ಜಗತ್ತನ್ನು ನಿರ್ಮಿಸಿಕೊಡುವಷ್ಟು ಸಲೀಸಾಗಿ ಮಾತುಗಳಾಗಲೀ, ಪಾತ್ರ ನಿರ್ಮಿತಿಯಾಗಲಿ, ಸನ್ನಿವೇಶದ ಪರಿಕಲ್ಪನೆಯಲ್ಲಾಗಲೀ, ಒಂದು ಭಾವಲೋಕವನ್ನು ನಿರ್ಮಿಸಿಕೊಡುತ್ತಿಲ್ಲ. ಪ್ರೀತಿ, ದುಃಖ ಮುಂತಾದ ಭಾವನೆಗಳು ಇಲ್ಲಿವೆ, ಅದಲ್ಲ. ಇಲ್ಲಿನ ‘ದಾರಿಯಲ್ಲದ ದಾರಿ’ ಕತೆಯ ಬಾಜು ಓದುಗನಲ್ಲಿ ಹುಟ್ಟಿಸುವಂಥದೇ ತಲ್ಲಣಗಳನ್ನು ಇಲ್ಲಿನ ಬೇರೆ ಬೇರೆ ಕತೆಗಳ ಪಾತ್ರಗಳು ಕೂಡ ಹುಟ್ಟಿಸುವಲ್ಲಿ ಸಫಲವಾಗುತ್ತಿಲ್ಲ ಎಂದರೆ ನಾನು ಹೇಳುತ್ತಿರುವುದೇನನ್ನು ಎನ್ನುವುದು ಅರ್ಥವಾದೀತು. ಈ ಅಂಶದತ್ತ ಅನುಬೆಳ್ಳೆಯವರು ಕೊಂಚ ಗಮನ ಹರಿಸಿದರೆ ಕನ್ನಡಕ್ಕೊಬ್ಬ ಮಹತ್ವದ ಕತೆಗಾರ ದೊರಕಿದಂತಾಗುವುದರಲ್ಲಿ ಸಂಶಯವಿಲ್ಲ.

(ಈ ಲೇಖನ ಕನ್ನಡ ಕನೆಕ್ಟ್ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ನಿಂತು ಹೋದ ತಿಗರಿಯ ಚಕ್ರ

ಆವಿಗೆ ಕಾದಂಬರಿ ಮೂಲತಃ ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್ ಅವರ ಹಾವಠಣ ಎಂಬ ಕಾದಂಬರಿಯ (ಶಾ.ಮಂ.ಕೃಷ್ಣರಾಯರ) ಅನುವಾದ. ಇದು ಕರ್ನಾಟಕ-ಗೋವಾ ಗಡಿಭಾಗದ ಕುಂಬಾರರ ಬದುಕಿನಲ್ಲಿ ಅಲ್ಯುಮಿನಿಯಂ, ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆ ಪಗಡಿಗಳ ಸುರಳೀತ ಬಳಕೆ ಹೆಚ್ಚುತ್ತ ಬಂದಂತೆಲ್ಲ ಉಂಟಾದ ಸ್ಥಿತ್ಯಂತರ ಮತ್ತು ಪಲ್ಲಟಗಳನ್ನು ಚಿತ್ರಿಸುವ ಕಾದಂಬರಿ. ಇಲ್ಲಿ ಒಂದೇ ಕೇರಿಯಲ್ಲಿ ಕುಂಬಾರರ ಒಂದಷ್ಟು ಕುಟುಂಬಗಳು ಜೊತೆಯಾಗಿ, ಒಂದೇ ಕುಟುಂಬವೋ ಎಂಬಂತೆ ಬದುಕುತ್ತ ಬಂದಿವೆ. ಒಂದೊಂದು ಮನೆಯಲ್ಲೂ ಲೋಕಾಚಾರಕ್ಕೆ ಹೊಂದಿಕೊಂಡಂತೆ ಏನಾದರೂ ಒಂದೊಂದು ಸಮಸ್ಯೆಯಿದ್ದೇ ಇದೆ. ಸ್ವಾಭಾವಿಕವಾಗಿ ಇವರು ಬಡವರು. ಇವರ ವೃತ್ತಿ ಕುಂಬಾರಿಕೆ. ಆ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಮಣ್ಣಿನ ಲಭ್ಯತೆ, ಮಳೆಗಾಲವೊಡ್ಡವ ಸವಾಲುಗಳು, ವ್ಯಾಪಾರದ ಉಬ್ಬರ-ಇಳಿತಗಳು ಇದ್ದಿದ್ದೇ. ಇದರ ಜೊತೆಗೆ ಮನೆಯೊಳಗೆ ಮೈನೆರೆದ ಹುಡುಗಿಯರು, `ಹೊರಗಿನ’ ಹುಡುಗಿಯರ ಪ್ರೇಮಕ್ಕೆ ಬೀಳುವ ಹುಡುಗರು, ನೈತಿಕ ಆಯಾಮ ಪಡೆಯುವ ವಿವಾಹೇತರ ಸಂಬಂಧದ ಸೆರಗು ಹಿಡಿದ/ಹಾಸಿದ ಗಂಡಸರು, ಹೆಂಗಸರು, ಕುಂಬಾರಿಕೆ ಬಿಟ್ಟು ಶಿಕ್ಷಣ-ಉದ್ಯೋಗ ಎಂದು ಊರುಬಿಟ್ಟು ಹೊರಡುವ ಹುಡುಗರು, ಕುಂಬಾರಿಕೆಯ ಹೊರತು ಅನ್ಯ ಜೀವನೋಪಾಯಕ್ಕೆ ಹೊರಳಿಕೊಳ್ಳುವ ಸಾಧ್ಯತೆಯನ್ನು ಕಳೆದುಕೊಂಡ ನಡುವಯಸ್ಸಿನವರು, ನಿಂತ ನೆಲೆ, ವೃತ್ತಿಗೆ ಅವಶ್ಯವಾದ ಮಣ್ಣು ಕಸಿಯಲು ಹಾತೊರೆವ ಶಕ್ತಿಗಳು ಇವರ ಬದುಕಿನ ಹೊಸ ಸವಾಲುಗಳು. ಇವೆಲ್ಲಕ್ಕೆ ಕಲಶವಿಟ್ಟಂತೆ ಇವರ ವೃತ್ತಿಯ ಬುಡಕ್ಕೇ ಕೊಡಲಿ ಪೆಟ್ಟು ನೀಡುವ, ಸುಲಭ ಬೆಲೆಗೆ ಲಭ್ಯವಾಗುವ ಅಲ್ಯುಮಿನಿಯಂ, ಸ್ಟೀಲ್, ಪಿಂಗಾಣಿ ಮತ್ತು ಪ್ಲಾಸ್ಟಿಕ್ ಪಾತ್ರೆಪಗಡಿಗಳ ವ್ಯಾಪಕ ಬಳಕೆಯಿಂದ ಒಂದು ವೃತ್ತಿ ಮತ್ತು ತಲೆಮಾರು ಅವನತಿಯ ಹಾದಿ ಹಿಡಿದ ಚಿತ್ರ ಇಲ್ಲಿನ ಕೇಂದ್ರಬಿಂದು.

ಹೀಗೆ ಇದು ಒಂದು ಕಾದಂಬರಿಯ ಚೌಕಟ್ಟಿಗೆ ಸರಳವಾಗಿ ಒಗ್ಗದ ವಸ್ತುವೆಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ. ಸಹಜವಾಗಿಯೇ ಕಾದಂಬರಿಕಾರರು ಒಂದು ಸಮುದಾಯವನ್ನೇ ಒಟ್ಟಾರೆಯಾಗಿ ತಮ್ಮ ವ್ಯಾಪ್ತಿಯಲ್ಲಿರಿಸಿಕೊಂಡು ಕಥಾನಕವನ್ನು ವಿಸ್ತರಿಸಬೇಕಾದ ಅನಿವಾರ್ಯ ಇಲ್ಲಿಯದು. ಹಾಗಾಗಿ ಇಲ್ಲಿ ಏಕಕಾಲಕ್ಕೆ ಹಲವು ಕುಟುಂಬಗಳ ವಿಭಿನ್ನ ಆಯಾಮದ ಸಮಸ್ಯೆಗಳತ್ತ ಅವರ ಗಮನ ಹರಿಯುತ್ತಿರಬೇಕಾಗಿದೆ. ಬಡತನ, ಕೌಟುಂಬಿಕ ಸಮಸ್ಯೆ, ವೃತ್ತಿಬದುಕಿನ ಸವಾಲುಗಳು, ಹೊಸದಾಗಿ ಎದುರಾದ ಆಣೆಕಟ್ಟು, ಪ್ಲಾಸ್ಟಿಕ್ ಇತ್ಯಾದಿ ಸವಾಲುಗಳು ಬದುಕನ್ನು ಸಂಕಷ್ಟಕ್ಕೀಡಾಗಿಸಿದ ಪರಿಸ್ಥಿತಿ - ಇಷ್ಟನ್ನಿಟ್ಟುಕೊಂಡು ಸಂಭ್ರಮಿಸಲು ಹೆಚ್ಚೇನೂ ಇಲ್ಲದ ಒಂದು ಊರು-ಕೇರಿಯಲ್ಲಿ ಕಥಾನಕದ ಓಘಕ್ಕೆ ಭಂಗ ಬರದಂತೆ ಹಾಸ್ಯ, ಹಬ್ಬ, ಜಾತ್ರೆ, ರಾಜಕೀಯ, ಸಣ್ಣತನ, ಭಾವನಾತ್ಮಕ ಬಂಧ ಎಲ್ಲವನ್ನೂ ನವಿರಾಗಿ ಸ್ಪರ್ಶಿಸುತ್ತ ಸೈಲ್ ಅವರು ಚಿತ್ರಿಸಿರುವ ಬದುಕು ಗಹನವಾಗಿದೆ, ಸೂಕ್ಷ್ಮಸಂವೇದಿಯಾಗಿದೆ ಮತ್ತು ಮನಕಲಕವಂಥದ್ದೂ ಆಗಿದೆ. ಇಲ್ಲಿ ನಿರಾಶಾವಾದವಿಲ್ಲ. ಬದುಕುವ ಛಲವಿದೆ, ಕೈಚೆಲ್ಲಿ ಕೂರುವ ಹತಾಶೆಯಿಲ್ಲ. ಕಾಲದ ತಾಳಕ್ಕೆ ತಕ್ಕಂತೆ ಹೊಸ ಬಗೆಯ ಬದುಕಿಗೆ ಹೊರಳಿಕೊಳ್ಳುವ ಜೀವಂತಿಕೆಯಿದೆ. ಆದರೆ ಇದೆಲ್ಲ ಸುಲಭವೂ ಅಲ್ಲ, ಸಹಜವೂ ಅಲ್ಲ. ಮನೆಯ ಒಂದು ಎಳೆ ಚಿಗುರು ಊರು-ಕೇರಿ ಬಿಟ್ಟು ಪಟ್ಟಣಕ್ಕೆ ವಲಸೆ ಹೋಯಿತೆಂದರೆ ಇಲ್ಲಿ ಉಳಿದವರ ಒಂದು ಊರುಗೋಲು ಕಿತ್ತು ಹಾಕಿದಂತೆಯೇ. ಹೊಸ ಹಾದಿ ಹುಡುಕಿ ಹೊರಹೋದವರ ದಶಕಗಳ ಹೋರಾಟ ಫಲಪ್ರದವಾಗುವ ಹೊತ್ತಿಗೆ ಒಂದು ತಲೆಮಾರು ಅಳಿದು ಹೊಸ ತಲೆಮಾರು ತಲೆಯೆತ್ತುವುದು ಕಾಲಧರ್ಮ. ಈ ಸಂಕ್ರಮಣ ಘಟ್ಟದ ಅನಿವಾರ್ಯ ಬಲಿಪಶುಗಳು ಅವರು. ಇದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಿರುವ ಸೈಲ್ ಅವರು ಮೂರು ತಲೆಮಾರಿನತ್ತ ತಮ್ಮ ಗಮನವನ್ನು ಏಕತ್ರ ಹರಿಸಿದ್ದಾರೆ. ಅಕಾಲದಲ್ಲಿ ವಿಧವೆಯವರಾದವರು, ಗತಿಗೋತ್ರವಿಲ್ಲದ ವೃದ್ಧರು, ಬದುಕು-ಭವಿಷ್ಯದ ಬಗ್ಗೆ ಗಂಭೀರ ತರ್ಕ ಸಾಧ್ಯವಿಲ್ಲದ ವಯಸ್ಸಿನ ಮಕ್ಕಳು ಮತ್ತು ನಿಟ್ಟುಸಿರಿನ ಹರಿಕಾರರಾದ ನಡುವಯಸ್ಸಿನ ಅತಂತ್ರರು ಇಲ್ಲಿ ಓದುಗರೆದುರು ಸಾಲಾಗಿ ನಿಲ್ಲುತ್ತಾರೆ.

ಒಬ್ಬ ಸೃಜನಶೀಲ ಲೇಖಕನಿಗೆ ಎದುರಾಗುವ ಸವಾಲು ಇದೆಲ್ಲ ಕೆಲವೊಮ್ಮೆ ಡಾಕ್ಯುಮೆಂಟರಿಯಾಗುವ, ಬಿಡಿಬಿಡಿ ಕಥಾನಕಗಳಾಗಿ ನಿಲ್ಲುವ, ಏಕಸೂತ್ರವನ್ನು ಕಳೆದುಕೊಂಡಂತಾಗುವ ಸಮಸ್ಯೆ. ಎಷ್ಟೋ ಕಡೆ ತಾನು ಚಿತ್ರಿಸುತ್ತಿರುವ ಸಮಸ್ಯೆಯ ಮೂಲ ಯಾವುದು ಎಂಬುದು ಸ್ಪಷ್ಟವಾಗದ, ಬದುಕಿನ ಸಂಕೀರ್ಣತೆಗೆ ಕಾರಣ ವೃತ್ತಿಯೇ, ಬಡತನವೇ, ಮಾರುಕಟ್ಟೆಯ ಪಲ್ಲಟಗಳೇ ಎಂದು ಬೊಟ್ಟು ಮಾಡಿ ಹೇಳಲಾಗದ ಸ್ಥಿತಿ ಎದುರಾಗುವುದೇ. ಹಾಗಾಗದೇ ಹೋದಲ್ಲಿ ಎಲ್ಲವೂ ಸಿದ್ಧಮಾದರಿಯ ಸಿಲೆಬಸ್ ಆಧಾರಿತ ಚಿತ್ರಗಳಾಗಿ ಬಿಡುವ ಅಪಾಯವಿತ್ತು. ಸೈಲ್ ಅವರ ನುರಿತ ಕೈಗಳಲ್ಲಿ ಹಾಗಾಗುವುದಿಲ್ಲ ಎನ್ನುವುದು ಗಮನಾರ್ಹ. ಹಾಗಾಗಿಯೇ ಇದು ಕೇವಲ ಒಂದು ವೃತ್ತಿಯ, ಸಮುದಾಯದ ಪತನದ ಅವನತಿಯ ಕತೆಯಷ್ಟೇ ಆಗದೆ ಒಟ್ಟು ಒಂದು ನಿರ್ದಿಷ್ಟ ಸ್ಥಿತಿಗೆ ಬಿದ್ದ ಮನುಷ್ಯನ ಬದುಕಿನ ಕತೆಯಾಗಿಯೇ ಉಳಿಯುತ್ತದೆ.

ಅನುವಾದ ಅಷ್ಟೇನೂ ಖುಶಿಕೊಡುವುದಿಲ್ಲ. ತಪ್ಪುಗಳು ಸಾಕಷ್ಟು ಉಳಿದಿವೆ ಎಂದರೆ ಎಲ್ಲೋ ಕಾರಕೂನಿ ಅನುವಾದ ಮಾತ್ರ ಸಾಧ್ಯವಾಗಿದೆ ಎನಿಸುವುದು ಸಹಜ. ಈ ಕಥನದ ಒಂದು ಬಗೆಯ ಜಡ ಧ್ವನಿಗೆ ಕಾರಣ ಅಂಥ ಅನುವಾದದ ನಿರುತ್ಸಾಹವೇ ಇರಬಹುದೇನೊ ಎನಿಸಿದ್ದು ಬಾಯಜಾ ಪ್ರಕರಣದ ನಿರೂಪಣೆಯಲ್ಲಿ. ಈ ಬಾಯಜಾ ಸೀತಾರಾಮನ ಹೆಂಡತಿ. ಸೀತಾರಾಮ ಲಂಪಟ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವಳೂ ಮೊದ್ದು, ದಢೂತಿ. ಘನಶ್ಯಾಮನ ಆಶ್ರಯಕ್ಕೆ ಹಠ ಹಿಡಿದು ಬಂದು ಬೀಳುವ ಈ ಕುಟುಂಬ ಬಹುಬೇಗ ಒಡೆದು ಸೀತಾರಾಮ ಇನ್ನೆಲ್ಲೊ ಇನ್ಯಾರನ್ನೋ ಇಟ್ಟುಕೊಂಡು ಬಾಯಜಾಳನ್ನು ಬಿಟ್ಟೇ ಬಿಡುತ್ತಾನೆ. ಹೇಳುವವರು ಕೇಳುವವರಿಲ್ಲದ ಬಾಯಜಾಳನ್ನು ಬೇಕಾದಂತೆ ಬಳಸಿಕೊಳ್ಳುವ ಇಡೀ ಊರು ತನ್ನ ತೆವಲು ತೀರಿಸಿಕೊಳ್ಳುತ್ತದೆ. ಬಾಯಜಾಗೆ ಅದು ಬೇಕಿತ್ತೇ, ಬೇಡವಿತ್ತೇ, ಆ ಮಟ್ಟದ ಮೊದ್ದು ಅವಳಾಗಿದ್ದಳೇ ಎನ್ನುವುದಕ್ಕಿಂತ ಅದನ್ನು ಊರಿನ ಪ್ರಬುದ್ಧರು, ಹೆಂಗಸರು ಸ್ವೀಕರಿಸುವ ರೀತಿ ವಿಶಿಷ್ಟವಾಗಿದೆ. ಅವರೆಲ್ಲ ಸ್ವಲ್ಪ ಅನುಕಂಪದಿಂದ, ಸ್ವಲ್ಪ ಸಿಟ್ಟಿನಿಂದ, ಸ್ವಲ್ಪ ಅಸಹಾಯಕತೆಯಿಂದ ಇದನ್ನು ಗಮನಿಸುತ್ತಲೇ ತಮ್ಮ ಮನೆಯಲ್ಲಿ ಇಂಥದ್ದು ಸಂಭವಿಸದಿರಲಿ ದೇವರೇ ಎಂದು ಎಚ್ಚರವಹಿಸುತ್ತ ದಿನಗಳೆಯುತ್ತಾರೆ. ಇದ್ದಕ್ಕಿದ್ದಂತೆ ತಿರಿದು ತಿನ್ನುತ್ತಿದ್ದ ಒಬ್ಬ ಹಣ್ಣುಹಣ್ಣು ಮುದುಕಿ ಈಕೆಯ ರಕ್ಷಣೆಗೆ ನಿಂತು, ಈಕೆಯ ಗುಡಿಸಲಿಗೆ ನುಗ್ಗುತ್ತಿದ್ದ ಗಂಡಸರನ್ನೆಲ್ಲ ದೊಣ್ಣೆ ಹಿಡಿದು ಓಡಿಸತೊಡಗುತ್ತಾಳೆ. ಬಾಯಜಾಳ ಮುಗ್ಧತೆ ಅಥವಾ ಮೊದ್ದುತನದಲ್ಲೂ ತನ್ನ ಗಂಡ ಯಾಕೆ ತನ್ನನ್ನು ಹೀಗೆ ಬಿಟ್ಟು ಹೋಗಿದ್ದು, ಅದರಿಂದಲ್ಲವೇ ಹೀಗೆಲ್ಲ ಆಗಿದ್ದು ಎಂಬ ಪರಿಜ್ಞಾನವಿದೆ. ಜನರಲ್ಲೂ ಅವಳೂ ಹೆಣ್ಣಲ್ಲವೇ, ಅವಳಲ್ಲೂ ಬೇಕು ಬೇಡ ಆಸೆಗಳಿಲ್ಲವೇ ಎಂಬ ಪ್ರಜ್ಞೆಯಿದೆ. ಆದರೆ ನೈತಿಕ ನೆಲೆಯಲ್ಲಿ ಇದನ್ನು ಯಾರೂ ಒಪ್ಪುವುದಿಲ್ಲ ಮತ್ತು ತೆವಲಿನ ನೆಲೆಯಲ್ಲಿ ಹೀಗೆ ಸುಲಭವಾಗಿ ಸಿಗುವ ಹೆಣ್ಣು ಎಲ್ಲರಿಗೂ ಬೇಕು! ಇದಕ್ಕೆಲ್ಲ ಒಂದು ಅಂತ್ಯ ವಿಶಿಷ್ಟ ರೀತಿಯಲ್ಲಿ ಒದಗುತ್ತದೆ. ಅದು ಸಾಂಕೇತಿಕವಾಗಿಯೂ ಇದೆ, ರೌದ್ರವಾಗಿಯೂ ಇದೆ.

ಇದನ್ನು ಓದುತ್ತ, ಇಡೀ ಕಾದಂಬರಿಯಲ್ಲಿ ಸೈಲ್ ಅವರು ಇಂಥ ಇನ್ನಷ್ಟು ರೂಪಕಗಳನ್ನು ಜೋಡಿಸುತ್ತ ಬಂದಿದ್ದರೆ ಎಂಬ ಅನುಮಾನ ಕಾಡತೊಡಗುತ್ತದೆ. ಸೈಲ್ ಅವರ ನಿರೂಪಣೆಯಲ್ಲಿ ಒಂದು ಹೊಸತನವಿದೆ. ಅವರು ಒಂದು ನಿರ್ದಿಷ್ಟ ಘಟನೆಯಲ್ಲಿ ಒಂದು ಪಾತ್ರದ ವರ್ತನೆಯನ್ನು ಚಿತ್ರಿಸುತ್ತಲೇ ಅವನು ಅಥವಾ ಅವಳು ಆ ರೀತಿ ವರ್ತಿಸಲು ಇರುವ ಒಂದು ಹಿನ್ನೆಲೆಯನ್ನು ಕಥಾನಕಕ್ಕೆ ಜೋಡಿಸುತ್ತಾರೆ. ಅದು ಹಿಂದೆಂದೋ ನಡೆದ ಇನ್ನೊಂದು ಘಟನೆ. ಅದು ಈ ಕಥಾನಕದ ಚೌಕಟ್ಟಿನ ಇನ್ಯಾವುದೋ ಒಂದು ಪಾತ್ರವನ್ನು ಕೂಡ ನಮಗೆ ಮತ್ತಷ್ಟು ನಿಕಟಗೊಳಿಸುವ ವಿವರಗಳನ್ನು ಒದಗಿಸುತ್ತ ಹೋಗುತ್ತದೆ. ಹೀಗೆ ಇಲ್ಲಿನ ಒಂದು ಅಂತರ್ ಸಂಬಂಧವನ್ನು ವಿವರಿಸುತ್ತಲೇ ಸೈಲ್ ಅವರು ದುಡಿಸಿಕೊಂಡ ಉದ್ದೇಶ ಕೇವಲ ಕುಂಬಾರರ ವೃತ್ತಿ ಬದುಕಿನ ಅವನತಿಯನ್ನು ಚಿತ್ರಿಸುವುದಷ್ಟೇ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಂಥ ಇನ್ನಷ್ಟು ಸಂದರ್ಭ, ಸನ್ನಿವೇಶಗಳನ್ನಿಲ್ಲಿ ಉದಾಹರಿಸಬಹುದು. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಬರುವಂಥದೇ (ಪಾರೋತಿ-ಸರಸೋತಿ)ಅತ್ತೆ ಸೊಸೆಯರ ಒಂದು ಜುಗಲ್ಬಂದಿ ಇಲ್ಲಿದೆ. ಸೀತವ್ವ ಮತ್ತು ತಾರಾ ಆ ಅತ್ತೆ ಸೊಸೆಯರು. ಸೀತವ್ವ ಮತ್ತು ತಾರಾ ಇಬ್ಬರೂ ವಿಧವೆಯರು. ತಾರಾಳ ಮಗ, ಸೀತವ್ವನ ಮೊಮ್ಮಗ ವಸಂತ. ಅವನಿಗೆ ಹದಿನಾರು-ಹದಿನೇಳು ಎನ್ನುವಾಗ ಅವನು ಶೀಲಾ ಜೊತೆ ಗೋವೆಗೆ ಹೊರಡಬೇಕಾಗುತ್ತದೆ, ಹೊಟ್ಟೆಪಾಡು ಅರಸಿ. ಈ ಸೀತವ್ವ ಮಹಾ ದಿಟ್ಟೆ. ಇವಳ ದಿಟ್ಟತನದ ಹಲವು ಕತೆಗಳು ಇಲ್ಲಿವೆ. ಶೀಲಾ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತ ಕುಂಬಾರರ ಸಖಾರಾಮನನ್ನು ಪ್ರೀತಿಸಿ ಮದುವೆಯಾದಾಕೆ. ಸೀತವ್ವ ಮತ್ತು ಶೀಲಾ ಇಬ್ಬರಲ್ಲೂ ಕೆಲವೊಂದು ಸಾಮ್ಯತೆಗಳಿವೆ. ಬಹುಶಃ ಕುಂಬಾರರಲ್ಲಿ ಅತ್ಯಂತ ವಿವೇಚನಾಯುತವಾದ ನಿರ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿ ಈ ಸೀತವ್ವನೇ ಎಂದರೆ ತಪ್ಪಾಗಲಾರದು. ಈಕೆ ಸ್ಪಷ್ಟವಾಗಿ ತಮ್ಮ ವೃತ್ತಿಬಾಂಧವರ ಭವಿಷ್ಯದ ದಿನಗಳನ್ನು ಮುಂಗಾಣಬಲ್ಲಳು. ಸೊಸೆಯ ಹತಾಶೆಯನ್ನು ಅರ್ಥಮಾಡಿಕೊಂಡೂ ಅದನ್ನು ಒಪ್ಪಲಾರಳು. ಈಕೆಯ ಜೀವನಾಸಕ್ತಿ ಮತ್ತು ಅದಮ್ಯ ಜೀವನೋತ್ಸಾಹ ಬೆರಗು ಹುಟ್ಟಿಸುವಂಥಾದ್ದು. ಕಾದಂಬರಿಯ ಕೊನೆಯಲ್ಲಿ ಇದೇ ಸೀತವ್ವ ತನ್ನ ಮೊಮ್ಮಗನ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ, ಮೊಮ್ಮಗಳ ಮದುವೆಯ ಕನಸಿನಲ್ಲಿ, ಸಾವು ಇನ್ನೇನು ಬಂದು ಹೊಸ್ತಿಲಿನಾಚೆ ಕಾದು ಕೂತಿರಬಹುದೇ ಎಂಬ ಆತಂಕದಲ್ಲಿ ಕಳೆಯುವ ದಿನಗಳ ಅತ್ಯಂತ ನವಿರಾದ ಒಂದು ಚಿತ್ರವಿದೆ. ಜೀವನದ ಕೊನೆಯ ಘಟ್ಟದಲ್ಲಿ ಈ ಭಯ ಮತ್ತು ಆತಂಕಗಳ ಕರಾಳ ನೆರಳು ಒಂದೆಡೆ, ಇನ್ನೂ ಬದುಕಬೇಕು, ಮಕ್ಕಳ, ಮೊಮ್ಮಕ್ಕಳ ಬದುಕು ಅರಳುವುದನ್ನು ತಾನು ಕಣ್ಣಾರೆ ಕಾಣಬೇಕು ಎಂಬ ಆಸೆ ಇನ್ನೊಂದೆಡೆ. ಇವೆರಡರ ನಡುವಿನ ಒಂದು ಯುದ್ಧ ಹುಟ್ಟಿಸುವ ವಿಷಣ್ಣಭಾವವೇನಿದೆ, ಅದನ್ನು ಬಲ್ಲವರೇ ಬಲ್ಲರು. ಸೈಲ್ ಅವರು ಅದನ್ನು ಇಲ್ಲಿನ ಒಂದು ಅಧ್ಯಾಯದಲ್ಲಿ ಚಿತ್ರಿಸಿರುವ ಬಗೆ ಕೂಡ ರೂಪಕಶಕ್ತಿಯದು, ಕಾವ್ಯಾತ್ಮಕವಾದುದು.

ಹಾಗೆಯೇ ಇಡೀ ಕುಂಬಾರ ಕೇರಿಗೆ ತಾಯಿಯಂತೆ ಇದ್ದ, ಸದಾ ತನ್ನ ನೆರಳಿನ ಮಡಿಲನ್ನು ಎಲ್ಲರಿಗೂ ತೆರೆದಿಟ್ಟ ಬೃಹತ್ ಮಾವಿನ ಮರವನ್ನು ಹಣಕ್ಕೆ ಮಾರುವ ದುರ್ಧರ ನಿರ್ಧಾರಕ್ಕೆ ಬರುವ ಸಂದರ್ಭವೂ ಮಹತ್ವದ್ದು. ವಿವರಗಳು, ನಿರೂಪಣೆ ಎಲ್ಲವೂ ಅನುವಾದದಲ್ಲಿ ಬಂದಿದ್ದೂ ಏನೋ ಒಂದು ನಿರುತ್ಸಾಹ, ಜಡತ್ವ ಉಳಿದುಬಿಟ್ಟಿರುವಂತಿದೆ. ಮೂಲವನ್ನು ಓದದೇ ಹೇಳಲಾಗದ ಮಾತಾದರೂ ಇಂಥ ಒಂದು ಭಾವ ಕಾಡುತ್ತದೆ ಎಂಬುದು ನಿಜ. ಆವಿಗೆ ಎಂದರೆ ಕುಂಬಾರರು ಹಲವು ಹತ್ತು ಒಣಗಿದ ಮಡಕೆಗಳನ್ನಿಟ್ಟು ಸುಡುವ ಕುಲುಮೆಯಂಥದು. ಮುಖಪುಟದಲ್ಲಿ ನಾವು ಕಾಣುವಂಥ ಒಲೆಯಲ್ಲ. ಅನುವಾದಕ್ಕೆ ಇದು ಸಾಂಕೇತಿಕತೆಯನ್ನೊದಗಿಸುತ್ತಿದೆಯೆ!

ಕುಂಬಾರರ ವೃತ್ತಿ ಮತ್ತು ಬದುಕಿನ ಸ್ಥಿತ್ಯಂತರವನ್ನು ಕಾಣಿಸುವ ಒಂದು ಸಿನಿಮಾ ಕನ್ನಡದಲ್ಲೂ ಬಂದಿದೆ. ಪಿ.ಆರ್.ರಾಮದಾಸ ನಾಯ್ಡು ಅವರ ಪ್ರವಾಹ ಚಲನಚಿತ್ರ ಕುಂಬಾರರ ಬದುಕು ಪ್ರವಾಹಕ್ಕೆದುರಾಗಿ ಈಜುವುದಕ್ಕೆ ಸಮನಾದ ಹಂತಕ್ಕೆ ತಲುಪಿದ್ದು ಮತ್ತು ಅವರು ಬೇರೆ ಜೀವನ ವ್ಯಾಪ್ತಿಯತ್ತ ಹೊರಳಿಕೊಂಡಿದ್ದು - ಈ ಸಂಕ್ರಮಣ ಘಟ್ಟದ ದಾರುಣತೆಯನ್ನು ಚಿತ್ರಿಸುತ್ತದೆ. ಆದರೆ ಆವಿಗೆ ಕಾದಂಬರಿಯ ಮಹತ್ವಾಕಾಂಕ್ಷೆಯಾಗಲಿ, ಆಳ-ವಿಸ್ತಾರಗಳಾಗಲಿ ಆ ಚಲನಚಿತ್ರಕ್ಕಿಲ್ಲದಿದ್ದರೂ ಅದು ಕೂಡ ಸಾಕಷ್ಟು ಪರಿಣಾಮಕಾರಿಯಾಗಿಯೇ ಸಮಸ್ಯೆಯನ್ನು ಮಂಡಿಸುತ್ತದೆ ಎನ್ನುವುದು ನಿಜ. ನಿರೂಪಣೆ/ಪ್ರಸ್ತುತಿಯ ಎರಡು ವಿಭಿನ್ನ ವಿಧಾನಗಳಿಗಾಗಿ ಇದನ್ನು ಗಮನಿಸಿಕೊಳ್ಳಬಹುದಾಗಿದೆ.

(ಈ ಲೇಖನದ ಆಯ್ದ ಭಾಗ ವಿಶ್ವವಾಣಿಯ ಸಾಪ್ತಾಹಿಕ ಪುರವಣಿ ‘ವಿರಾಮ’ದಲ್ಲಿಯೂ, ಕನ್ನಡ ಕನೆಕ್ಟ್ ಅಂತರ್ಜಾಲ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡದ ಹಸಿವು

ಕಳೆದ ವರ್ಷಕ್ಕೆ ಹೋಲಿಸಿದರೆ 2015ರಲ್ಲಿ ಕನ್ನಡಿಗರು ಭಾಗ್ಯವಂತರೆಂದೇ ಹೇಳಬೇಕು. ವರ್ಷದ ಅತ್ಯುತ್ತಮ ಪುಸ್ತಕಗಳೆಂದು ಹೇಳಿಕೊಳ್ಳುವುದಕ್ಕೆ ಈ ಬಾರಿ ಸಾಕಷ್ಟು ಕೃತಿಗಳು ಕಾಣಿಸುತ್ತವೆ. ಹಿಂದಿನ ಎರಡು ವಾರಗಳಲ್ಲಿ ಇಲ್ಲಿ ಕಾಣಿಸಿಕೊಂಡ ಎಲ್ಲ ಕೃತಿಗಳನ್ನು ಬಿಟ್ಟು ನೋಡಿದರೂ ನನಗೆ ಇಷ್ಟವಾದ ಆರೇಳು ಪುಸ್ತಕಗಳು ಇನ್ನೂ ಇದ್ದವು. ಲಕ್ಷ್ಮೀಶ ತೋಳ್ಪಾಡಿಯವರ "ಆನಂದಲಹರಿ", ಕೆ ವಿ ತಿರುಮಲೇಶರ "ವಾಗರ್ಥವಿಲಾಸ", ಡಾ. ಎಸ್.ಶ್ರೀಕಂಠಶಾಸ್ತ್ರೀಯವರ "ಭಾರತೀಯ ಸಂಸ್ಕೃತಿ", ರಾಗಮಾಲಾ ಹೊರತಂದ, ಪಂಡಿತ್ ರಾಜೀವ ತಾರಾನಾಥರ ಸಂಗೀತವನ್ನು ಕುರಿತ ಚಿಂತನೆಗಳ "ವಾದಿ ಸಂವಾದಿ", ರಾಘವೇಂದ್ರ ಪಾಟೀಲರ "ಎಷ್ಟು ಕಾಡತಾವ ಕಬ್ಬಕ್ಕೀ", ಬೊಳುವಾರರ ಕಾದಂಬರಿ "ಓದಿರಿ" ಅಲ್ಲದೆ ಅನುವಾದಿತ ಕೃತಿ, ರಾಹುಲ ಪಂಡಿತರ "ಕದಡಿದ ಕಣಿವೆ" ಎಲ್ಲವೂ ಒಂದಲ್ಲಾ ಒಂದು ಕಾರಣಕ್ಕೆ ಮಹತ್ವದ ಕೃತಿಗಳೇ. ಇವುಗಳಲ್ಲಿ ಒಂದನ್ನು ಆರಿಸಬೇಕಾದ ಸ್ಪರ್ಧೆ ನನಗೆ ಎದುರಾಗಿದ್ದನ್ನು ಖುಶಿಯಿಂದಲೇ ಇಲ್ಲಿ ಹೇಳಬೇಕು. ಇವುಗಳಲ್ಲಿ ನಾನು ಆರಿಸಿದ್ದು ಕೆ.ವಿ.ತಿರುಮಲೇಶರ "ವಾಗರ್ಥವಿಲಾಸ" ಎನ್ನುವಲ್ಲೇ ಈ ಕೃತಿಯ ಮಹತ್ವವೂ ಇದೆ.

ತಿರುಮಲೇಶರ "ವಾಗರ್ಥವಿಲಾಸ" ಕೇವಲ ಈ ವರ್ಷದ ಅತ್ಯುತ್ತಮ ಕೃತಿ ಮಾತ್ರವಲ್ಲ, ಮುಂದಿನ ಕನಿಷ್ಠ ಐದು ವರ್ಷಗಳ ಕಾಲವಾದರೂ ಈ ಕೃತಿ ನಮ್ಮ ಪದವಿಪೂರ್ವ ವಿದ್ಯಾರ್ಥಿಗಳ ಕನ್ನಡ ಭಾಷೆಯ ಪ್ರಧಾನ ಪಠ್ಯವಾಗಬೇಕು ಎಂದೂ ನನಗೆ ತೀವ್ರವಾಗಿ ಅನಿಸಿದೆ. ಇದು ಅಂಥ ಒಂದು ಅದ್ಭುತವಾದ ಮತ್ತು ಮಹತ್ವದ ಕೃತಿ.

ಮೇಲ್ನೋಟಕ್ಕೆ ಇದು ಅಂಕಣಗಳ ಸಂಕಲನದಂತೆಯೇ ಕಾಣುತ್ತದೆ. ಆದರೆ ಅದಲ್ಲ ಇದು. ಇಲ್ಲಿ ತಿರುಮಲೇಶರು ಯಕ್ಷಗಾನದ ಪ್ರಸಂಗಕರ್ತರ ಬಗ್ಗೆ ಮಾತನಾಡುತ್ತಾರೆ. ಅವರು ರಚಿಸಿದ ಯಕ್ಷಗಾನದ ಪದ್ಯಗಳ ವೈಶಿಷ್ಟ್ಯದ ಬಗ್ಗೆ ನಮಗೆ ವಿವರಿಸುತ್ತಾರೆ. ಅಲ್ಲಿಂದ ಕಾವ್ಯದ ಲಯ, ಛಂದಸ್ಸು, ಪ್ರಾಸಗಳ ಬಗ್ಗೆ ಹೇಳುತ್ತ ಶಾಸನಗಳು, ಜಾನಪದ ಹಾಡುಗಳು, ಗೋವಿನ ಹಾಡು, ಶರಣರ ವಚನಗಳು, ಯಕ್ಷಗಾನದ ಹಾಡುಗಳು, ಶ್ರೀಯವರ ಇಂಗ್ಲೀಷ್ ಗೀತಗಳು ಮತ್ತು ಅಡಿಗರ ಕಾವ್ಯದ ತನಕ ತಮ್ಮ ವೈಚಾರಿಕ ಹರಹನ್ನು ಹರಡುತ್ತಾರೆ. ಮುಂದಿನ ಲೇಖನದಲ್ಲಿ ಕನ್ನಡದ ಮನಸ್ಸಿನ ಕುರಿತು ಮಾತನಾಡುತ್ತ ಅವರು ಕೈಯಿಕ್ಕುವುದು ಸೋಮೇಶ್ವರ ಶತಕಕ್ಕೆ. ಮುಂದೆ ಸಹಜವಾಗಿಯೇ ಪಂಪ, ಕವಿರಾಜಮಾರ್ಗ, ಲಕ್ಷ್ಮೀಶ, ರಾಘವಾಂಕ, ವಚನ ಸಾಹಿತ್ಯ, ದಾಸರ ಪದಗಳು ಮತ್ತು ಸಂಸ್ಕೃತದ ವಾತಾಪಿ ಗಣಪತಿಂ ಭಜೇಹಂ ತನಕ ವಿಹರಿಸುವ ಅವರು ಈ ವಿಹಾರವನ್ನು ತೊಡಗುವುದು ಕನ್ನಡದ ಮತ್ತು ಇಂಗ್ಲೀಷಿನ ಮಕ್ಕಳ ಹಾಡುಗಳಿಂದ ಎನ್ನುವುದನ್ನು ಅಗತ್ಯ ಗಮನಿಸಬೇಕು. ಇಷ್ಟರಿಂದಲೇ ನಮಗೆ ಅರ್ಥವಾಗಬೇಕು, ತಿರುಮಲೇಶರ ಉದ್ದೇಶವೇನು ಎಂಬುದು. ಅವರು ಆಲೂರ ವೆಂಕಟರಾಯರ "ಕರ್ನಾಟಕ ಗತವೈಭವ"ದ ಬಗ್ಗೆ ಅದರ ಇತಿಮಿತಿಗಳ ಅರಿವಿನೊಂದಿಗೇ ಹೇಳುತ್ತಿರುವುದರಲ್ಲೇ ಇದರ ಎಲ್ಲ ತಥ್ಯವಿದೆ. ಕನ್ನಡದ ಮನಸ್ಸು, ಕನ್ನಡದ ಪ್ರಜ್ಞೆ ಅಥವಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮಕಾಲೀನ ಅಗತ್ಯದ ಬಗ್ಗೆ ತಿರುಮಲೇಶರಷ್ಟು ತಲೆಕೆಡಿಸಿಕೊಂಡ ಇನ್ನೊಬ್ಬ ಲೇಖಕ ಇರಲಾರ. ಇವತ್ತಿಗೂ ಅಂತರ್ಜಾಲ ತಾಣಗಳಲ್ಲಿ ಹೊಸ ತಲೆಮಾರಿನ ಎಲ್ಲ ಅಸಹನೆ, ತರಲೆ, ಅಭಿಮಾನ ಮತ್ತು ಕಾಲೆಳೆವ ತುಂಟಾಟಗಳಿಗೆ ತಮ್ಮದೇ ಗಂಭೀರ ನೆಲೆಯಿಂದ ಪ್ರತಿಸ್ಪಂದನ, ಪ್ರತಿಕ್ರಿಯೆ ತಮ್ಮ ಧರ್ಮ ಎಂಬಂತೆ ಕ್ರಿಯಾಶೀಲರಾಗಿರುವ ಏಕೈಕ ಹಿರಿಯ ಸಾಹಿತಿ ತಿರುಮಲೇಶರು ಎಂದರೆ ಖಂಡಿತ ಅದು ಅತಿಶಯೋಕ್ತಿಯಲ್ಲ. ಇದೆಲ್ಲವೂ ತೋರಿಸುವುದು ಅವರ ಕನ್ವಿಕ್ಷನ್, ಬದ್ಧತೆ.

ಕನ್ನಡ ಭಾಷೆಯ ಆಂತರಿಕ ಪ್ರಭೇದಗಳ ಬಗ್ಗೆ ಅವರು ನಮ್ಮ ಗಮನಸೆಳೆಯುತ್ತ ಅಂಥ ಒಂದು ವೈವಿಧ್ಯದ ಅಗತ್ಯ ಮತ್ತು ಜೀವಂತಿಕೆಯ ಕುರಿತು ಹೇಳುತ್ತಾರೆ. ಪುರಂದರದಾಸರಿಗೆ ಪತ್ರ ಬರೆಯುತ್ತಲೇ ನಾವೆಲ್ಲ ದಿನನಿತ್ಯ ಅನುಭವಿಸಿಯೂ ಎಂದೂ ಆಡಿಕೊಳ್ಳದೇ ಉಳಿದ ಬೆರಗಿನ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ತಿಳಿಹೇಳುತ್ತಾರೆ. ಕುವೆಂಪು, ಬಿಎಂಶ್ರೀ ಮತ್ತು ಗೋಕಾಕರ ಬಗ್ಗೆ ಬಹುಶಃ ಈ ನೆಲೆಯ ಪ್ರೀತಿ ಮತ್ತು ಆಸಕ್ತಿಯಿಂದ ಇನ್ಯಾರೂ ಬರೆಯಲಾರರೇನೊ ಎನಿಸುವಂತೆ ತಿರುಮಲೇಶರು ಬರೆದಿದ್ದಾರೆ. ಇದಕ್ಕಿಂತ ಮುಖ್ಯವಾದ ಮತ್ತು ಇಡೀ ಕೃತಿಗೆ ಅನ್ವಯಿಸುವಂಥ ಮಾತೆಂದರೆ, ಇಲ್ಲಿನ ಎಲ್ಲಾ ಲೇಖನಗಳೂ ಎಂಥಾ ಎಳೆಯ ಮತ್ತು ಸಾಹಿತ್ಯಾಭ್ಯಾಸದ ಹಿನ್ನೆಲೆಯಿಲ್ಲದವರಿಗಾದರೂ ಸರಿ, ಸರಳವಾಗಿ ತಿಳಿಯುವಂತೆ, ಅವುಗಳ ಕುರಿತು ಓದಬೇಕು, ತಿಳಿದುಕೊಳ್ಳಬೇಕು ಎಂಬ ರುಚಿ ಹತ್ತುವಂತೆ ಅವರು ಬರೆದಿದ್ದಾರೆ. ಈ ಕಾರಣಕ್ಕಾಗಿಯೇ ಈ ಕೃತಿ ಪಠ್ಯಪುಸ್ತಕವಾಗಬೇಕು, ತಿರುಮಲೇಶರ ಶ್ರಮ ವ್ಯರ್ಥವಾಗದೆ, ಎಳೆಯ ಮನಸ್ಸುಗಳ ಅಧ್ಯಯನಕ್ಕೆ ಪಕ್ಕಾಗಬೇಕು ಮತ್ತು ಅದರಿಂದ ಕನ್ನಡದ ಭವಿಷ್ಯ ಉಜ್ವಲವಾಗಬೇಕು ಎಂದು ತೀವ್ರವಾಗಿ ಅನಿಸುವುದು, ಇದನ್ನು ಓದಿದ ಯಾರಿಗಾದರೂ ಹೀಗೆಯೇ ಅನಿಸುವುದು.

ಮುಂದೆ ನಿಘಂಟು ಮತ್ತು ಭಾಷಾಂತರದ ಕುರಿತ ಎರಡು ಪ್ರಬಂಧಗಳಿವೆ. ಇವುಗಳ ಮಹತ್ವದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ತದನಂತರ ವಿಲಿಯಂ ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್ ಮತ್ತು ಟಿ ಎಸ್ ಎಲಿಯೆಟ್ ಒಂದೆಡೆ ನಮಗೆ ಸಿಕ್ಕಿದರೆ ಇತ್ತ ಶಿಶುನಾಳ ಷರೀಫ್, ಗೊರೂರು, ಪಂಜೆ, ಗೋವಿಂದ ಪೈ,ರಾಮಚಂದ್ರ ಶರ್ಮ ಮತ್ತು ಎ.ಕೆ.ರಾಮಾಜುನ್ ಇದ್ದಾರೆ. ಇಷ್ಟಾಗಿ ತಿರುಮಲೇಶರಿಗೆ ಕನ್ನಡದ ಮನಸ್ಸಿನ ಶ್ರೀಮಂತಿಕೆಗೆ ಇಷ್ಟೇ ಪೋಷಣೆ ದೊರೆತರೆ ಸಾಲದು ಅನಿಸಿರಬೇಕು. ಅದಕ್ಕಾಗಿಯೇ ಗೋಲ್ಡನ್ ಟ್ರೆಷರಿ ಒಂದನ್ನು ಅವರು ಕಾಣಿಸಿದ್ದಾರೆ! ಒಳ್ಳೆಯ ಗುರು ಅಥವಾ ಮಾರ್ಗದರ್ಶಕ ದಾರಿ ತೋರಿಸುವಾಗ ಗುರಿ ತಲುಪಲು ಹೇಗೆ ಹೇಗೆ ಮುಂದುವರಿಯಬೇಕು ಎಂಬ ನಿರ್ದೇಶನ ನೀಡಿ ಹಾದಿ ತೋರುವುದಿಲ್ಲವಂತೆ. ಅವನು ನಮಗೆ "ನೋಡು"ವ ದೃಷ್ಟಿಯನ್ನಷ್ಟೇ ನೀಡಿ ಮುಂದಿನ ಹಾದಿ ತೆರೆಯುವನಂತೆ! ಕಾಣುವುದನ್ನು ನೋಡುವುದಕ್ಕೂ ಅದೃಷ್ಟ ಬೇಕು ಎಂದರು ರಾಮಾನುಜನ್. ಸಾಹಿತ್ಯವು ಕಂಡಿದ್ದನ್ನು ನೋಡುವಂತೆ ಮಾಡುತ್ತದೆ ಎನ್ನುತ್ತಾರೆ ತಿರುಮಲೇಶ್. ತಿರುಮಲೇಶರು ಈ ಕೃತಿಯ ಮೂಲಕ ಮಾಡಿರುವುದು ಅದನ್ನೇ. ಅವರು ಇದನ್ನು ಅಂಕಣ ಲೇಖನಗಳ ಸಂಗ್ರಹವೆಂದರೂ ಇದು ತುಂಬ ಯೋಜಿತ ಪ್ರಬಂಧಗಳ ಒಂದು ಸಂಕಲನವೇ ಎನ್ನುವುದನ್ನು ಯಾರೇ ಆದರೂ ಕಂಡುಕೊಳ್ಳಬಹುದು. ಇಲ್ಲಿ ತಿರುಮಲೇಶರು ಬಹಳಷ್ಟು ಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತಾರೆ, ರುಚಿ ಹತ್ತಿಸುತ್ತಾರೆ, ಆಸಕ್ತಿ ಕೆರಳಿಸುತ್ತಾರೆ, ನಿಜವೇ. ಆದರೆ ಅಷ್ಟಕ್ಕೇ ತೃಪ್ತಿ ಹುಟ್ಟದಂತೆ ಎಚ್ಚರವಹಿಸುತ್ತಾರೆ, ಅತೃಪ್ತಿಯಲ್ಲಿ ಕನ್ನಡದ ಮನಸ್ಸು ಬೇಯುತ್ತಿರಬೇಕು ಎಂದು ಸಂಕಲ್ಪಿಸಿದಂತೆ ಮಾತು ಮುಗಿಸಿ ಮೌನವಾಗುತ್ತಾರೆ. ಅದು ಕೆ.ವಿ.ತಿರುಮಲೇಶ್.

(ಈ ಲೇಖನ ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಮುಕ್ತಛಂದಕ್ಕಾಗಿ ಬರೆದುದು)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, February 9, 2016

ಪುಟ್ಟಲಕ್ಷ್ಮಿಯ ಗೆಳೆತನದ ಸುಖ

ಪುಟ್ಟಲಕ್ಷ್ಮಿ ಕಥೆಗಳು ಸ್ವತಃ ರಘುನಾಥ ಚ.ಹ. ಅವರು ತಮ್ಮ ಮಕ್ಕಳಿಗೆ, ಬಂಧುಗಳ ಮಕ್ಕಳಿಗೆ ಹೇಳಿ, ಅವುಗಳ ಸತ್ವವನ್ನು ಪರೀಕ್ಷೆಗೊಡ್ಡಿರುವಂಥ ಕತೆಗಳು. ಅಲ್ಲದೆ, ಈ ಕತೆಗಳನ್ನು ಬರೆಯುತ್ತ ಅವರು ಸ್ವತಃ ಕತೆಗಾರಿಕೆಯ ಮಟ್ಟುಗಳನ್ನು, ಪಟ್ಟುಗಳನ್ನು ಕಲಿತುಕೊಳ್ಳುವಂಥ ಒಂದು ಪ್ರಾಯೋಗಿಕ ವ್ಯಾಯಾಮವನ್ನು ಅನುಭವಿಸಿದ್ದಾರೆ ಮತ್ತು ಅದರ ಖುಶಿಯನ್ನೂ ಕಂಡುಕೊಂಡಿದ್ದಾರೆ. ಸಾಕಷ್ಟು ಮಂದಿ ಹಿರಿಯರು ಈ ಕತೆಗಳನ್ನು ಪ್ರಕಟನೆಗೂ ಮುನ್ನ ಓದಿದ್ದಾರೆ, ಓದಿ ಖುಶಿಪಟ್ಟಿದ್ದಾರೆ. ಅಂಕಿತ ಪ್ರಕಾಶನ ಈ ಸಂಕಲನವನ್ನು ಪ್ರಕಟಿಸಿದ್ದು ಅಂದವಾದ ಮುದ್ರಣ, ವೆಂಕಟ್ರಮಣ ಭಟ್ ಅವರ ಚಿತ್ರಗಳು ಎಲ್ಲ ಸೇರಿ ಈ ಪುಸ್ತಕದ ಮೌಲ್ಯವನ್ನು ಬಹಳ ಹೆಚ್ಚಿಸಿವೆ. ಮಕ್ಕಳಿಗೆಂದು ಕೊಂಡುಕೊಂಡರೂ, ಸ್ವತಃ ಹಿರಿಯರು ತಪ್ಪದೇ ಓದುವ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದಂಥ ಕತೆಗಳು ಇಲ್ಲಿವೆ.

ಅಜ್ಜಿ ಮತ್ತು ಹಿರಿಯರು ಬಾಯ್ದೆರೆಯಾಗಿ ಹೇಳಿದ ಕತೆಗಳನ್ನು ಬಿಟ್ಟರೆ ನಮಗೆ ಸಾಧಾರಣವಾಗಿ ಓದಲು ಸಿಕ್ಕ ಕತೆಗಳೆಂದರೆ ಚಂದಮಾಮದ ಕತೆಗಳು, ಆಗ ಬರುತ್ತಿದ್ದ ಬೊಂಬೆಮನೆ, ಬಾಲಮಿತ್ರದ ಕತೆಗಳು, ಪುಟಾಣಿಯಂಥ ಪುಟ್ಟ ಪುಸ್ತಕದಲ್ಲಿ ಕಾಣಿಸಿಕೊಂಡ ಮಕ್ಕಳ ಸಾಹಸದ ಕತೆಗಳು, ಪಂಚತಂತ್ರ, ಅಮರಚಿತ್ರಕತೆ, ಈಸೋಪನ ಕತೆಗಳು ಮತ್ತು ಅರೇಬಿಯನ್ ನೈಟ್ಸ್ ಕತೆಗಳು. ಮಕ್ಕಳ ಕತೆಗಳು ಎಂಬ ಪ್ರಕಾರಕ್ಕೆ ಸೇರಬಹುದಾದ ಕೆಲವು ಹಿರಿಯರ ಪುಸ್ತಕಗಳೂ ಕ್ರಮೇಣ ಓದಿಗೆ ದಕ್ಕಿದ್ದವು. ಬಿಟ್ಟರೆ ಸುಧಾ, ಪ್ರಜಾಮತದಂಥ ಪತ್ರಿಕೆಗಳಲ್ಲಿ ಬರುತ್ತಿದ್ದ ಅಜಾದ್, ಶೂಜ, ಡಾಬೂ, ಫ್ಯಾಂಟಮ್ ಇತ್ಯಾದಿ ಕಾಮಿಕ್ಸ್.

ಇವತ್ತು ಮಕ್ಕಳು ಟೀವಿ ನೋಡುತ್ತಾರೆ, ವೀಡಿಯೋ ಗೇಮ್ಸ್ ಮೂಲಕ ತಾವೇ ಆಟ ಸೃಷ್ಟಿಸಿಕೊಂಡು ಆಡುತ್ತಾರೆ ಮತ್ತು ಅದರಲ್ಲೇ ಕತೆಗಳನ್ನು ಕಟ್ಟಿಕೊಳ್ಳುತ್ತಾರೆ. ನಾನು ಇತ್ತೀಚೆಗೆ ಭೇಟಿಕೊಟ್ಟ ಮನೆಯೊಂದರಲ್ಲಿ ಏಳನೆಯ ತರಗತಿಯ ಹುಡುಗನೊಬ್ಬ ಕಂಪ್ಯೂಟರಿನಲ್ಲಿ ಆಡುತ್ತಿದ್ದ ಸಾಹಸಮಯ (?!) ಆಟವೊಂದರಲ್ಲಿ ಅವನು ಮೊದಲನೇ ರೌಂಡ್ ಗೆದ್ದಾಗ ಅವನಿಗೊಂದು ಕಂಪ್ಯೂಟರ್ ಬಹುಮಾನ ಸಿಗುತ್ತಿತ್ತು. ಎರಡನೇ ರೌಂಡ್ ಗೆದ್ದಾಗ ಒಂದು ಮಾಯಕ ಬೈಸಿಕಲ್. ಮೂರು ಮತ್ತು ಹೆಚ್ಚಿನ ರೌಂಡ್ಸ್ ಗೆದ್ದಂತೆಲ್ಲ ಸೂಪರ್ ಬೈಕು, ಫ್ಲೈಯಿಂಗ್ ಜಾಕೆಟ್ಟು, ದೊಡ್ಡ ಕಾರು, ಬಂಗಲೆ ಮತ್ತು ಕೊನೆಗೆ ಒಬ್ಬ ಸುಂದರ ಯುವತಿ! ಇದನ್ನು ಕಂಡು ನನಗೆ ನಿಜಕ್ಕೂ ಗಾಭರಿಯಾಗಿ ನಾನು ಆತನ ತಾಯಿಯ ಜೊತೆ ಈ ಬಗೆಯ ಆಟ ಹುಡುಗನ ಮನಸ್ಸಿನಲ್ಲಿ ಬದುಕಿನ ಯಶಸ್ಸಿನ ಸೂತ್ರಗಳ ಬಗ್ಗೆ ಒಂದು ಬಗೆಯ ಸಿದ್ಧ ಮಾದರಿಯ ಆದರ್ಶವನ್ನು ಅಚ್ಚು ಹಾಕಬಹುದಲ್ಲವೇ ಎಂದು ಚರ್ಚಿಸಿದ್ದಿದೆ. ಇದು ಒಂದು ಪುಟ್ಟ ಉದಾಹರಣೆ. ಮಾಲ್‌ಗಳಲ್ಲಿ ಇವತ್ತು ಮಕ್ಕಳು ಎಂಥೆಂಥ ಆಟಗಳನ್ನು ಆಡುತ್ತಾರೆ, ಅವುಗಳಲ್ಲೇ ಇರುವ ಕತೆಯ ಚೌಕಟ್ಟು ಎಂಥದ್ದು ಎನ್ನುವುದನ್ನೆಲ್ಲ ನೀವು ಗಮನಿಸಿದರೆ ಅಪ್‌ಟುಡೇಟ್ ಆಗುತ್ತೀರಿ ಮಾತ್ರವಲ್ಲ ಅಪ್ಸೆಟ್ ಕೂಡ ಆಗುತ್ತೀರಿ. ಆದರೆ ನಮ್ಮ ನಡುವೆ ಸಾಕಷ್ಟು ಮಂದಿ ಹೆಮ್ಮೆ ಪಡುವ ತಂದೆ ತಾಯಂದಿರಿದ್ದಾರೆ.

ಈ ಕಾಲಘಟ್ಟದಲ್ಲಿ ಬಂದ ಪುಟ್ಟಲಕ್ಷ್ಮಿ ಪರಂಪರೆಯ ಸತ್ವವನ್ನೂ, ಆಧುನಿಕತೆಯ ರಂಗನ್ನೂ ಪಡೆದುಕೊಂಡೇ ಬಂದಿರುವುದು ಗಮನಾರ್ಹವಾಗಿದೆ. ಆದರೆ ಇಲ್ಲಿ ಮಷೀನ್ ಗನ್ನು, ಬಾಂಬು, ಅದ್ಭುತ ಸಾಹಸಗಳ ರಂಗು ಇಲ್ಲ. ಅಂದಮಾತ್ರಕ್ಕೆ ಈ ಪುಟ್ಟಲಕ್ಷ್ಮಿ ಸಾಮಾನ್ಯ ಬಾಲಕಿಯೇನೂ ಅಲ್ಲ. ಅವಳಿಗೂ ಕೆಲವು ಅತೀಂದ್ರಿಯ ಶಕ್ತಿಗಳಿರುವಂತಿದೆ. ಆದರೆ ಅದಕ್ಕೆ ಕಾರಣ ಅವಳ ಸತ್ಯದ ಮೇಲಿನ ಪ್ರೀತಿ ಮತ್ತು ಒಳ್ಳೆಯತನ. ಇದು ಇಲ್ಲಿನ ತಿರುಳು. ಈ ಪುಟ್ಟಲಕ್ಷ್ಮಿಯ ಎಲ್ಲ ಕತೆಗಳ ಪ್ರಧಾನ ಎಳೆ ಅವಳು ಪ್ರತಿಪಾದಿಸುವ ಜೀವನಪ್ರೀತಿ. ಇಲ್ಲಿನ ದೆವ್ವಗಳು, ಕ್ರೂರ ಮೃಗಗಳು, ದುಷ್ಟರು ಕೊನೆಗೂ ಹೊರಳುವುದು ಸತ್ ನ ಕಡೆಗೇ ಎನ್ನುವುದು ಗಮನಾರ್ಹವಾದ ಒಂದು ಅಂಶ. ಹಾಗಾಗಿ "ಒಳ್ಳೆಯದನ್ನು ಕಾಪಾಡುವ ಮತ್ತು ಕೆಟ್ಟದ್ದನ್ನು ಶಿಕ್ಷಿಸುವ" ಅವಳದೇ ಆದ ವಿಧಾನದಲ್ಲಿ ಪ್ರವಹಿಸುವುದು ಪ್ರೀತಿ ಎನ್ನುವುದು ನೇರವಾಗಿ ಹೃದಯಕ್ಕೆ ತಟ್ಟುವ ಅಂಶ.

ಹಾಗೆಯೇ ನಮಗೆಲ್ಲ ತಿಳಿದಿರುವಂತೆ ಮಕ್ಕಳ ಕತೆಗಳೆಂದರೆ ಸಾಮಾನ್ಯವಾಗಿ ಅವು ನೀತಿ ಕತೆಗಳಂತೆಯೇ ಇರುತ್ತವೆ ಎನ್ನುವುದು. ಈ ತತ್ವಕ್ಕೆ ರಘುನಾಥ ಚ.ಹ. ಅವರ ಪುಟ್ಟಲಕ್ಷ್ಮಿಯ ಕತೆಗಳು ಹೊರತಾಗಿಲ್ಲ. ಆದರೆ ಗಮನಿಸತಕ್ಕ ಅಂಶಗಳಿವೆ ಇಲ್ಲಿ. ಈ ಕತೆಗಳಲ್ಲಿನ ತಾತ್ವಿಕ ನೆಲೆ ಎಷ್ಟೊಂದು subtle ಆಗಿದೆ ಎಂದರೆ, ಅವು ಹೌದೋ ಅಲ್ಲವೋ ಎಂಬಷ್ಟು, ರುಚಿಗೆ ತಕ್ಕಷ್ಟು ಎಂಬಂತೆ. ಕತೆಯ ನಡೆಯೇ ಪ್ರಧಾನ ಭೂಮಿಕೆಯಾಗಿ ಉಳಿಯುವಂತೆ, ಅದರಲ್ಲಿ ಕಂಡುಕೊಂಡ ಬೈಪ್ರಾಡಕ್ಟ್ ಈ ತಾತ್ವಿಕತೆಯೆಂಬಂತೆ ಅವರು ಅದನ್ನು ನಿಭಾಯಿಸಿದ ಹದ ನಿಜಕ್ಕೂ ಸುಲಭಸಾಧ್ಯವಾದದ್ದಲ್ಲ. ಇಲ್ಲಿ ಕೊಂಚ ಹದ ತಪ್ಪಿದ್ದರೂ ಎಲ್ಲ ಕತೆಗಳನ್ನು ನಮ್ಮ ಕಾಲದ ಮಕ್ಕಳು ಬದಿಗೆ ಸರಿಸುವ, ಸ್ವತಃ ಮಗಳು “ಡಬ್ಬಾಕತೆ” ಎಂದು ಯಾವ ದಾಕ್ಷಿಣ್ಯವಿಲ್ಲದೆ ವಜಾ ಮಾಡಿದಂತೆಯೇ ಆಗಿಬಿಡುವ ಸಾಧ್ಯತೆಗಳಿದ್ದವು. ರಘುನಾಥರ ಶ್ರಮ ಇಲ್ಲಿ ಗಮನಾರ್ಹವಾಗಿದೆ ಎನ್ನುವುದು ತಿಳಿಯುತ್ತದೆ.

ಕತೆಗಳಲ್ಲಿ ಧಾರಾಳವಾದ ರಂಜಕ ಅಂಶಗಳು, ಸ್ವಾಭಾವಿಕವಾಗಿ ಮಕ್ಕಳ ಕಲ್ಪನೆ ಗರಿಗೆದರುವಂಥ ಪಾತ್ರ-ಪರಿಸರ ನಿರ್ಮಾಣ, ಚುರುಕುತನ-ಚುಟುಕುತನ ಎಲ್ಲ ರಘುನಾಥರ ಕತೆಗಳ ಇನ್ನಿತರ ಗುಣಾತ್ಮಕ ಅಂಶಗಳು. ಒಂದೊಂದು ಕತೆಯೂ ಅದರ ಹಿಂದಿನ ಚಿಂತನೆಯನ್ನು ಈ ಕತೆಗಳನ್ನು ಓದುವ ಹಿರಿಯರಿಗೆ ಮನದಟ್ಟು ಮಾಡಿಕೊಟ್ಟೂ ಪುಟ್ಟಲಕ್ಷ್ಮಿಯ ವಯೋಮಾನದವರಿಗೆ ಅದರ ರಂಜಕ ಸೊಗಡನ್ನಷ್ಟೇ ಕಾಣಿಸುವ ಹದವನ್ನು ಕಾಯ್ದುಕೊಂಡಿರುವುದರಿಂದ ಇವು ಹಿರಿಯರೂ ಕಿರಿಯರೂ ಬೇರೆ ಬೇರೆ ನೆಲೆಯಲ್ಲಿ ಓದಿ ಆಸ್ವಾದಿಸಬಲ್ಲ ಒಂದು ಆಯಾಮವನ್ನುಳಿಸಿಕೊಂಡಿವೆ. ಹೀಗಾಗಿ ಇವತ್ತು ಇವುಗಳನ್ನು ಓದುವ ಮಕ್ಕಳು ಮುಂದೆ ಬೆಳೆದ ಮೇಲೂ ಇವುಗಳನ್ನು ಓದಿ ಹೊಸಬಗೆಯ ಸುಖವೊಂದನ್ನು ಅನುಭವಿಸುವುದಕ್ಕೆ ಅವಕಾಶವಿದೆ.

ರಘುನಾಥ ಚ.ಹ. ಅವರು ಕತೆ ಬರೆಯಬೇಕೆಂದು ಆಶಿಸುತ್ತಿದ್ದವರಲ್ಲಿ ನಾನೂ ಒಬ್ಬ. ಈ ಸಂಕಲನವನ್ನು ಓದಿದ ಬಳಿಕ ಅವರು ಇನ್ನಷ್ಟು ಇಂಥ ಮಕ್ಕಳ ಕತೆಗಳನ್ನೇ ಬರೆದು ನಮ್ಮ ಕನ್ನಡದ ಮಕ್ಕಳ ಅಭಿರುಚಿ, ಸಂಸ್ಕಾರ, ಸಮಾಜಮುಖಿ ಧೋರಣೆ ಮತ್ತು ಜೀವನಪ್ರೀತಿಯನ್ನು ಬಾಲ್ಯದಲ್ಲೇ ತಿದ್ದುವಂಥ ಗುರುತರ ಹೊಣೆಗಾರಿಕೆಯನ್ನು ಮುಂದೆಯೂ ನಿಭಾಯಿಸುವತ್ತ ಗಮನ ನೀಡಿದರೇ ಒಳ್ಳೆಯದು ಎನಿಸಿದೆ. ಬಹುಶಃ ಇದು ಎಲ್ಲರಿಂದ ಸಾಧ್ಯವಿಲ್ಲ. ರಘುನಾಥ ಚ.ಹ. ಅವರು ಸಾಬೀತು ಪಡಿಸಿರುವ ಸಾಮರ್ಥ್ಯ ಇದು. ಈ ಸಂಕಲನ ಎಲ್ಲ ಭಾಷೆಗಳಿಗೆ ಅನುವಾದಗೊಂಡರೆ ಅದು ನಮ್ಮ ಕಾಲದ ಎಲ್ಲ ಮಕ್ಕಳ ಭಾಗ್ಯ ಎಂದು ಯಾವ ಸಂಕೋಚವಿಲ್ಲದೆ ಹೇಳಬಹುದಾಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ