ಮಗುವೊಂದು ಅಕ್ಷರ ಕಲಿತ ಹೊಸದರಲ್ಲಿ ತಾನು ಬರೆದ ತನ್ನದೇ ಹೆಸರನ್ನು ನಮಗೆ ತೋರಿಸುವ ಉತ್ಸಾಹ, ಗತ್ತು ಗಮನಿಸಿದ್ದೀರಾ? ಆ ಅಕ್ಷರಗಳಲ್ಲಿ ಕೆಲವೊಂದು ದೊಡ್ಡವು, ಕೆಲವು ಚಿಕ್ಕವು, ಅವುಗಳ ನಡುವಿನ ಅಂತರ ಕೆಲವೊಮ್ಮೆ ತೀರ ಹೆಚ್ಚು, ಕೆಲವೊಮ್ಮೆ ತೀರ ಕಡಿಮೆ. ಆದರೂ ಆ ಮಗು ನಿಮ್ಮಿಂದ ಮೆಚ್ಚುಗೆ ನಿರೀಕ್ಷೆ ಮಾಡುತ್ತಿರುತ್ತದೆ, ಅದು ಜಗತ್ತಿನ ಅದ್ಭುತವಾದ ಏನನ್ನೋ ಸಾಧಿಸಿದ್ದೇನೆಂಬ ಹೆಮ್ಮೆಯಿಂದ ನಿಮಗೆ ತೋರಿಸಿ, ನಿಮ್ಮ ತಾರೀಫು ನುಡಿಗಳಿಗಾಗಿ ಕಾಯುತ್ತಿರುತ್ತದೆ.
ಎಲೆನಾ ಫರಾಂಟೆ ಇದನ್ನು ಪ್ರತಿಯೊಬ್ಬ ಸಾಹಿತಿಯ ಮನಸ್ಥಿತಿಗೆ ಹೋಲಿಸಿ ತಮ್ಮ ಉಪನ್ಯಾಸ ತೊಡಗುತ್ತಾರೆ. ಅವರ ಇತ್ತೀಚಿನ In the Margins ಕೃತಿಯಲ್ಲಿರುವುದು ಅವರ ಮೂರು ಉಪನ್ಯಾಸಗಳು. ಯೂನಿವರ್ಸಿಟಿ ಆಫ್ ಬೊಲೊನಿಯಾದಲ್ಲಿ ಬರವಣಿಗೆ ಮತ್ತು ಓದಿನ ಸುಖಕಷ್ಟಗಳ ಬಗ್ಗೆ ನೀಡಿದ ಈ ಉಪನ್ಯಾಸಗಳ ಪಠ್ಯ ರೂಪಕ್ಕೆ In the Margins ಎಂಬ ಹೆಸರು ನೀಡಿರುವುದು ಕೂಡ ಕುತೂಹಲಕರವೇ.
ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಕ್ಕಳು ಅಕ್ಷರಾಭ್ಯಾಸ ನಡೆಸುವುದಕ್ಕಾಗಿ ನಮ್ಮಲ್ಲಿ ಕಾಪಿ ಬರೆಯುವ ಕ್ರಮ ಇರುವ ಹಾಗೆಯೇ ಅವರಲ್ಲಿ ಕೊಡುವ ಪುಸ್ತಕದ ಪ್ರತಿ ಹಾಳೆಯಲ್ಲಿಯೂ ಬರೆಯುವ ಸಾಲಿನ ಎಡಬದಿಯಲ್ಲಿ ಕೆಂಪು ಬಣ್ಣದ ಮಾರ್ಜಿನ್ ಗೆರೆ ಇರುವಂತೆಯೇ ಬಲಬದಿಯಲ್ಲಿಯೂ ಒಂದು ಮಾರ್ಜಿನ್ ಗೆರೆ ಇರುತ್ತಿತ್ತಂತೆ. ಕೊನೆಯಲ್ಲಿ ಬರುವ ಯಾವುದೇ ಪದ ತುಂಡಾಗದಂತೆ (ನಮ್ಮಲ್ಲಿ ಒಂದು ಪದದ ‘ಅಂ’ ಕಾರ ತುಂಡಾಗದಂತೆ ಬರೆಯುತ್ತೇವಲ್ಲ, ಹಾಗೆ) ಮಾರ್ಜಿನ್ನಿನ ಹೊರ ಬರದಂತೆ ಬರೆಯಬೇಕಿತ್ತಂತೆ. ಬಲ ಮಾರ್ಜಿನ್ನಿನಿಂದ ಪದ ಹೊರ ಹರಿದರೆ ಶಿಕ್ಷೆ. ಈಗ ನಾವು ಕಂಪ್ಯೂಟರಿನಲ್ಲಿ ಟೈಪ್ ಮಾಡುವಾಗ ಅಲೈನ್ಮೆಂಟಿನ ಸಮಸ್ಯೆಯೇ ಬರುವುದಿಲ್ಲ. ಆದರೆ ಕೈಯಲ್ಲಿ ಬರೆಯುತ್ತಿದ್ದಾಗ ಇದೊಂದು ಕಷ್ಟದ, ಒತ್ತಡ ನಿರ್ಮಿಸುವ ಸಂಗತಿಯಾಗುತ್ತಿತ್ತು. ಶಾಲೆಯಲ್ಲಿ ನಾವಿದನ್ನು ಅನುಭವಿಸದಿದ್ದರೂ ಮುಂದೆ ಕೆಲಸಕ್ಕಾಗಿ ಅರ್ಜಿ ಬರೆಯುವಾಗಲೋ, ಬಯೊಡಾಟವನ್ನು ಕೈಯಲ್ಲಿ ಸಿದ್ಧಪಡಿಸುವಾಗಲೋ, ಕತೆ-ಕವಿತೆಯ ಪರಿಪೂರ್ಣ ಪ್ರತಿಯೊಂದನ್ನು ತಯಾರಿಸುವಾಗಲೋ ಖಂಡಿತ ಅನುಭವಿಸಿದ್ದೇವೆ. ಈ ಒಂದು ಒತ್ತಡದ ಬಗ್ಗೆ ವಿಶೇಷ ಗಮನ ಸೆಳೆಯುವ ಎಲೆನಾ, ಇದು ಒಬ್ಬ ಸಾಹಿತಿಯ ಒತ್ತಡಕ್ಕೆ ಕೊಡಬಹುದಾದ ಅತ್ಯುತ್ತಮ ರೂಪಕ ಎಂಬಂತೆ ಮಾತನಾಡುತ್ತಾರೆ.
ಒಂದು ಪುಸ್ತಕವನ್ನು ಓದುತ್ತ ಒಬ್ಬ ಓದುಗನ ಒಳಜಗತ್ತಿನಲ್ಲಿ ಉಂಟಾಗುವ ಪ್ರಕ್ರಿಯೆಯ ಬಗ್ಗೆ ಮಾತನಾಡುವ ಎಲೆನಾ, ಬರೆಯುವಾಗ ಬರಹಗಾರನ ಒಳಜಗತ್ತಿನ ವಿದ್ಯಮಾನವೇ ಯಥಾವತ್ ಪೆನ್ನಿನ ಮೂಲಕ ಹಾಳೆಯಲ್ಲಿ ಮೂಡುವ ಪ್ರಕ್ರಿಯೆ ಏನಿದೆ, ಅದರ ಕಷ್ಟನಷ್ಟಗಳ ಬಗ್ಗೆ ತುಂಬ ಸೂಕ್ಷ್ಮವಾದ ಕೆಲವು ಮಾತುಗಳನ್ನಾಡಿದ್ದಾರೆ. ಮೊದಲಿಗೆ, ಅವರು ಬಹುವಾಗಿ ಮೆಚ್ಚಿಕೊಳ್ಳುವ ಇತಾಲೊ ಸ್ವೇವೊನ (Italo Svevo) ಮಹತ್ವದ ಕೃತಿ "ಝೆನೊಸ್ ಕಾನ್ಷಿಯೆನ್ಸ್" ನಲ್ಲಿ ಬರುವ ನಿರೂಪಕ ಝೇನೊ ಕೊಸೀನಿಯ ಈ ಸಾಲುಗಳನ್ನು ಉಲ್ಲೇಖಿಸುತ್ತಾರೆ.
Now, having dined, comfortably lying in my over-stuffed lounge chair, I am holding a pencil and a piece of paper. My brow is unfurrowed because I have dismissed all concern from my mind. My thinking seems something separate from me. I can see it. It rises and falls... but that is its only activity. To remind it that it is my thinking and that its duty is to make itself evident, I grasp the pencil. Now my brow does wrinkle, because each word is made up of so many letters and the imperious present looms up and blots out the past.
(Translated by William Weaver)
ಇಲ್ಲಿ ನಿರೂಪಕ ತಾನು ಸುಮ್ಮನೇ ಆರಾಮಾಗಿ ಉಂಡು ಕೂತಿದ್ದಾಗ ತನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿರುವ ಯೋಚನೆಗಳು ಮತ್ತು ತಾನು ಎರಡೂ ಬೇರೆ ಬೇರೆ ಎಂದು ಕಂಡುಕೊಳ್ಳಬಲ್ಲ, ಹುಬ್ಬು ಗಂಟಿಕ್ಕದೇ ಕಣ್ಣೆದುರಿಗಿರುವ ಹಾಳೆಯನ್ನು ಹಿಡಿದು ಓದಬಲ್ಲ. ಆದರೆ ಒಮ್ಮೆ ಕಣ್ಣೆದುರಿನ ಪ್ರತಿಯೊಂದು ಶಬ್ದವೂ ಅವನ ವರ್ತಮಾನದೊಂದಿಗೆ ಭೂತವನ್ನು ಹೊರತಂದು ನೇಯತೊಡಗಿತೋ, ಅವನ ಹುಬ್ಬು ಗಂಟಿಕ್ಕಿದೆ, ಅವನಲ್ಲದ ಅವನ ಯೋಚನೆಗಳ ಮಹಾಪೂರವೊಂದು ತೊಡಗಿದೆ.
ಮನಸ್ಸಿನಲ್ಲಿ ಬಂದು ಹೋಗುವ ಸಾವಿರಾರು ಯೋಚನೆಗಳು, ಚಿತ್ರಗಳು, ಅದು ಕಾಣುವ ಕನಸುಗಳು, ಅನುಭವಿಸುವ ಭ್ರಮೆಗಳು, ಸುಮ್ಮನೇ ಹುಟ್ಟುವ ವಿಭಿನ್ನ ಅನುಭೂತಿಗಳು ಅಕ್ಷರ ರೂಪಕ್ಕೆ ಬರುವುದು, ಅವುಗಳಿಗೆಲ್ಲ ಒಂದು ಅರ್ಥಪೂರ್ಣತೆಯ ನಂಟನ್ನು ಕೊಟ್ಟು ಆಕೃತಿಗೆ ತರುವುದು ಸುಲಭದ ಪ್ರಕ್ರಿಯೆಯೇನಲ್ಲ. ಎಲೆನಾ ತಮ್ಮೆದುರಿಗಿದ್ದ ಸಂಕಟವನ್ನು ತಕ್ಕಮಟ್ಟಿಗೆ ಪರಿಹರಿಸಿದ್ದು ಗಾಸ್ಪರಾ ಸ್ಟಾಂಪಾ (Gaspara Stampa) ಅವರ ಒಂದು ಕವಿತೆ ಎಂದು ಹೇಳುತ್ತಾರೆ. ಆ ಕವಿತೆಯಲ್ಲಿ ಬಹುಮುಖ್ಯವಾಗಿ ಕವಿ ತನ್ನ ಬಗ್ಗೆ ಘನತೆಯ ಒಂದು ಪ್ರಭಾವಳಿಯನ್ನಿಟ್ಟುಕೊಳ್ಳದೆ, ತಾನು ಸಾಮಾನ್ಯರಲ್ಲಿ ಸಾಮಾನ್ಯಳು, ಕಳಂಕಿತೆ ಅಥವಾ ನೀಚ ಹೆಣ್ಣು ಎಂದೇ ಪರಿಗಣಿಸಿಕೊಂಡು, ತಾನು ಮಾಡಬೇಕಾದುದೆಲ್ಲ ತನ್ನ ನೋವು ಮತ್ತು ಪೆನ್ನು ಎರಡರ ನಡುವಿನ ಅಂತರವನ್ನು ಅಳಿಸುವುದಷ್ಟೇ, ಅಷ್ಟೂ ಸಾಧ್ಯವಿಲ್ಲವೆ ತನಗೆ ಎಂದು ಪ್ರಶ್ನಿಸಿಕೊಳ್ಳುತ್ತಾಳೆ.
ಆದರೆ ಬಹು ಸುಲಭದ, ಸರಳ ಕೆಲಸ ಅನಿಸುವ ಅದು ಅಷ್ಟು ಸರಳವೂ ಅಲ್ಲದ, ಸುಲಭವೂ ಅಲ್ಲದ, ಬಹುಶಃ ಬಹುಮಟ್ಟಿಗೆ ಅಸಾಧ್ಯವಾದ ಒಂದು ಕೆಲಸ ಎನ್ನುವುದು ಎಲೆನಾಗೆ ಬಹುಬೇಗ ಅರಿವಾಗುತ್ತದೆ. ಅದಕ್ಕೆ ತಾನು ಏನೂ ಅರಿಯದವಳಾಗಿರುವುದು, ತನಗೆ ಯಾವುದೇ ಅನುಭವ ಇಲ್ಲದಿರುವುದು, ತಾನು ಹೆಣ್ಣಾಗಿರುವುದು ಮತ್ತು ಹಾಗಾಗಿ ಭಾವುಕಳಾಗಿರುವುದು, ತಾನು ಪೆದ್ದಿಯಾಗಿರುವುದು, ತನ್ನಲ್ಲಿ ಪ್ರತಿಭೆಯೇ ಇಲ್ಲದಿರುವುದು ಕಾರಣವಾಗಿರಬಹುದು ಎಂದೆಲ್ಲ ಯೋಚಿಸತೊಡಗಿದ ಕಾಲವೂ ಇತ್ತೆನ್ನುತ್ತಾರೆ. ತಾನು ಬರೆದಿದ್ದು ತಾನು ಮೆಚ್ಚಿಕೊಂಡ ಕೃತಿಗಳ ಸಾಲಿಗೆ ಬರಲಿಲ್ಲ ಎನ್ನುವುದು ಅವರ ವೇದನೆ.
ಲೇಖಕನೊಬ್ಬನ ಪರಕಾಯ ಪ್ರವೇಶ ಅಥವಾ ತನ್ನ ಸಹಜೀವಿಯ ನೋವಿಗೆ ಸಹಾನುಭೂತಿಯಿಂದ ಸ್ಪಂದಿಸಿ ಅದನ್ನು ಇನ್ನೊಂದು ಜೀವಕ್ಕೆ ತಿಳಿಸುವ (ಮಾಸ್ತಿ)ಉತ್ಕಟ ಇಚ್ಛೆಯಿಂದ ಹುಟ್ಟುವ ಸಾಹಿತ್ಯದ ಪ್ರಕ್ರಿಯೆಗೆ ಅವಶ್ಯವೆಂದು ನಾವು ತಿಳಿಯುವ ಸೂಕ್ಷ್ಮಸಂವೇದನೆ, ಸ್ಪಂದಿಸುವ ಗುಣ, ಸೂಕ್ಷ್ಮಗ್ರಾಹಿ ಸಾಮರ್ಥ್ಯ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ವರ್ಜೀನಿಯಾ ವೂಲ್ಫ್ ಅವರ ಎರಡು ಮಾತುಗಳನ್ನು ಅವರು ನಮ್ಮ ಗಮನಕ್ಕೆ ತರುತ್ತಾರೆ. ವರ್ಜೀನಿಯಾ ವೂಲ್ಫ್ ಅವರ A Writer's Dairy ಯಿಂದ ಉಲ್ಲೇಖಿಸುವ ಈ ಮಾತುಕತೆ Lytton Strachey ಎಂಬಾಕೆಯ ಜೊತೆ ನಡೆಯುತ್ತದೆ:
"And your novel?"
"Oh, I put my hand and rummage in the bran pie"
"That's what's so wonderful. And it's all different"
"Yes, I'm 20 people."
ಇಷ್ಟೇ ಆ ಸಂಭಾಷಣೆ. ಬರೆಯುತ್ತಿರುವ ಕಾದಂಬರಿಯ ಬಗ್ಗೆ ಆಡುವ ಯಾವ ಮಾತೂ ಮುಖ್ಯವಲ್ಲ, ಕೊನೆಯ ಸಾಲನ್ನು ಬಿಟ್ಟರೆ. ಯೆಸ್, ಐಯಾಮ್ ಟ್ವೆಂಟಿ ಪೀಪಲ್ ಎನ್ನುತ್ತಾರಲ್ಲ ವೂಲ್ಫ್, ಅದು ಬಹಳ ಮುಖ್ಯವಾದದ್ದು ಎನ್ನುತ್ತಾರೆ ಎಲೆನಾ. ಹೇಗೆ ಒಬ್ಬ ಲೇಖಕ ಏಕಕಾಲಕ್ಕೆ ಹಲವು ಕಾಲಗಳಲ್ಲಿ ಬದುಕುತ್ತಿರುತ್ತಾನೋ ಹಾಗೆಯೇ ಅವನು ಹಲವು ಬದುಕುಗಳನ್ನು ಬದುಕುತ್ತಿರುತ್ತಾನೆ, ತಾತ್ಕಾಲಿಕವಾಗಿಯಾದರೂ. ಅದೊಂದು ತರದ ಆವಾಹಿಸಿಕೊಂಡಿರುವ ಸ್ಥಿತಿ. ಇದು "ದುರ್ಗಾಸ್ತಮಾನ" ಬರೆಯಲು ಕೂತ ತರಾಸು ಅವರಿಂದ ಹಿಡಿದು "ಸಖೀನಾಳ ಮುತ್ತು" ಬರೆಯಲು ಕೂತ ವಿವೇಕ ಶಾನಭಾಗ ಅವರವರೆಗೆ, ತಮ್ಮನ್ನು ತಾವು ಕಳೆದುಕೊಂಡು ತಮ್ಮ ಬರವಣಿಗೆಯಲ್ಲಿ ಸೇರಿ ಹೋಗುವ ಎಲ್ಲಾ ಬರಹಗಾರರಿಗೂ ಅನ್ವಯ.
ವರ್ಜೀನಿಯಾ ವೂಲ್ಫ್ ಅವರದೇ ಇನ್ನೊಂದು ಮಾತನ್ನೂ ಎಲೆನಾ ಉಲ್ಲೇಖಿಸುತ್ತಾರೆ. ಇದು ಹೆಚ್ಚು ಮುಖ್ಯವಾದದ್ದು ಮತ್ತು ಮಾತುಗಳನ್ನು ಮೀರಿ ಅರ್ಥ ಮಾಡಿಕೊಳ್ಳಬೇಕಾದುದು ಇಲ್ಲಿದೆ:
It is a mistake to think that literature can be produced from the raw. One must get out of life - yes, that's why I disliked so much the irruption of Sydney - one must become externalised; very, very concentrated, all at one point, not having to draw upon the scattered parts of one's character, living in the brain. Sydney comes and I'm Virginia; when I write I'm merely a sensibility. Sometimes I like being Virginia, but only when I'm scattered and various and gregarious. Now... I'd like to be only a sensibility.
ನಾನು ಎನ್ನುವುದು "ಇಪ್ಪತ್ತು ಮಂದಿ" ಯಾಗಿ ಇದ್ದುದು ಹೇಗೆ ಮತ್ತು ಯಾವಾಗ ಈ ‘ನಾನು’ ವರ್ಜೀನಿಯಾ ಕೂಡಾ ಹೌದು ಮತ್ತು ಯಾವಾಗ ಅದು "ಕೇವಲ ಸಂವೇದನೆ" ಎಂಬ ಕುರಿತ ಚರ್ಚೆಯೇ ಈ ಕೃತಿಯ ಮೊದಲ ಎರಡು ಉಪನ್ಯಾಸಗಳಲ್ಲಿ ಎಲ್ಲಿಲ್ಲದ ಪೋಷಣೆ ಪಡೆದಿದೆ. ಕೃತಿ ರಚನೆ ಕಾಲದಲ್ಲಿಯೂ ತಾನು ಅಷ್ಟಿಷ್ಟು ವರ್ಜೀನಿಯಾ ಆಗಿ ಬಿಡುವ, "ಏಕಾಗ್ರತೆ ಕಳೆದುಕೊಂಡ ಮತ್ತು ಚದುರಿಕೊಂಡು ಬಿಟ್ಟ" ಅವಧಿಯ ಸಂಭವದ ಕುರಿತು ಹೇಳುವ ವರ್ಜೀನಿಯಾ ಮೆದುಳಿನಲ್ಲಿ ಒಂದು ಬದುಕನ್ನು ಏಕ ಕಾಲದಲ್ಲಿ ಸಮಗ್ರವಾಗಿ ಮತ್ತು ಪರಿಪೂರ್ಣವಾಗಿ ಆವಾಹಿಸಿಕೊಳ್ಳುವುದರ ಕಷ್ಟದ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾರೆ.
ತಾನು ಬದುಕಿರುವುದೇ ಬರೆಯುವುದಕ್ಕಾಗಿ ಎಂಬಂತೆ ಬದುಕಿದ ಸಾಮ್ಯುಯೆಲ್ ಬೆಕೆಟ್ ಬರೆಯುವ ಹಂತದಲ್ಲಿ ಮೆದುಳಿನ ಯಾವುದೋ ಒಂದು ಮೂಲೆಯಲ್ಲಿ ಈ "ನಾನು" ಎನ್ನುವುದು ಹಠಮಾರಿಯಂತೆ ಕೂತು ಬಿಡುವ ವಿದ್ಯಮಾನದ ಬಗ್ಗೆ ಯಾಕೆ ಎಲ್ಲಿಯೂ ಏನೂ ಹೇಳಿಲ್ಲ ಎಂದು ಹುಡುಕುವ ಎಲೆನಾ ಕೊನೆಗೂ ಅದು ಬೆಕೆಟ್ ಬರೆದ "The Unnamable" ನಲ್ಲಿದೆ ಎಂದು ಕಂಡು ಹಿಡಿಯುತ್ತಾರೆ. ಆ ಸುದೀರ್ಘ ಪರಿಚ್ಛೇದ ಎಷ್ಟೊಂದು ಸುಂದರವೂ, ಘನವೂ, ಮಂತ್ರ ಸದೃಶ ರಚನೆಯೂ ಆಗಿ ಒಡಮೂಡಿದೆ ಎನ್ನುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ.
I'm in words, made of words, others' words, what others, the place too, the air, the walls, the floor, the ceiling, all words, the whole world is here with me, I'm the air, the walls, the walled-in one, everything yields, opens, ebbs, flows, like flakes, I'm all these flakes, meeting, mingling, falling asunder, wherever I go I find me, leave me, go towards me, come from me, nothing ever but me, a particle of me, retrieved, lost, gone astray, I'm all these words, all these strangers, this dust of words, with no ground for their settling, no sky for their dispersing, coming together to say, fleeing one another to say, that I am they, all of them, those that merge, those that part, those that never meet, and nothing else, yes, something else, that I'm something quite different, a quite different thing, a wordless thing in an empty place, a hard shut dry cold black place, where nothing stirs, nothing speaks, and that I listen, and that I seek, like a caged beast born of caged beasts born of caged beasts born of caged beasts born in a cage and dead in a cage, born and then dead, born in a cage and then dead in a cage, in a word like a beast, in one of their words, like such a beast, and that I seek, like such a beast, with my little strength, such a beast, with nothing of its species left but fear and fury, no, the fury is past, nothing but fear ...
ಒಂಥರಾ ಭಗವದ್ಗೀತೆಯ ಶ್ರೀಕೃಷ್ಣ ತೋರಿದ ವಿಶ್ವರೂಪವನ್ನು ಸಂಜಯ ವಿವರಿಸುತ್ತಿರುವಂತಿದೆ ಇದು ಅಲ್ಲವೆ? ನಮ್ಮೆಲ್ಲಾ ಕವಿಗಳಿಗೆ ತಮ್ಮದೇ ವಿಶ್ವರೂಪವನ್ನು ಕಾಣುವ, ಗ್ರಹಿಸುವ, ಸಹಿಸುವ, ಆವಾಹಿಸಿಕೊಂಡು ಬರೆಯುವ ದಿವ್ಯ ಚಕ್ಷುಗಳು ಸಿಗಲಿ! ಅವರು ಧೃತರಾಷ್ಟ್ರರಾಗದೇ ಇರಲಿ!!
ಈ ಕೃತಿಯ ಮೂರನೆಯ ಉಪನ್ಯಾಸದಲ್ಲಿ Ingeborg Bachmann ಅವರ ಫ್ರ್ಯಾಂಕ್ಫರ್ಟ್ ಉಪನ್ಯಾಸಗಳ ಸರಣಿಯನ್ನು ಬಹುವಾಗಿ ಉಲ್ಲೇಖಿಸುವ ಎಲೆನಾ ಫರಾಂಟೆ ಮೂರು ಮುಖ್ಯ ವಿಚಾರಗಳ ಬಗ್ಗೆ ಹೇಳುತ್ತಾರೆ:
01. ಹೆಣ್ಣಿನ ಧ್ವನಿ ಎಂದರೆ ಏನು ಮತ್ತು ಅದನ್ನು ಕೇಳಿಸಿಕೊಳ್ಳುವಂತೆ ಮಾಡಬೇಕು ಹೇಗೆ ಎನ್ನುವುದರ ಕುರಿತು;
02. ಭಾಷೆ ಯಾವಾಗ ಮತ್ತು ಹೇಗೆ ಕ್ಲೀಷೆಯಾಗುತ್ತದೆ ಎನ್ನುವುದರ ಕುರಿತು ಹಾಗೂ,
03. ಕವಿತೆಯನ್ನು ಹಿಡಿಯುವುದು ಹೇಗೆಂಬ ಕುರಿತು.
ಸರಳವಾಗಿ ಹೇಳುವುದಾದರೆ,
ಕವಿತೆಗಳಲ್ಲಿ, ಅದನ್ನು ಹೆಣ್ಣುಮಕ್ಕಳು ಬರೆದಿರಲಿ, ಹುಡುಗರು ಬರೆದಿರಲಿ, ಫೆಮಿನಿಸಮ್ ಎಂದು ಸಾಮಾನ್ಯವಾಗಿ ಆ ಪದ ಬಳಸಿ ಸದ್ದು ಮಾಡುವ ಮಂದಿ ಕೊಡುವ ಚಿತ್ರಕ್ಕೂ ಅದರ ಸಹಜ ಗತಿಗೂ ಇರುವ ಒಂದು ಸೌಮ್ಯ ವೈರುಧ್ಯದ ಕಡೆಗೆ ಇರುವ ದಿವ್ಯ ನಿರ್ಲಕ್ಷ್ಯ ಮೊದಲನೆಯದು. ಭಾಷೆ ಕ್ಲೀಷೆಯಾಗುವ ಹಂತ ಯಾವುದು ಎನ್ನುವ ಜಿಜ್ಞಾಸೆ ಎರಡನೆಯದು. ಮತ್ತು ಮೂರನೆಯದು, ಅಮೂರ್ತವಾದ ಒಂದು ಕವಿತೆ ಅಕ್ಷರ ರೂಪಕ್ಕೆ ಬರುವ ಮುನ್ನವೇ ಗಾಳಿಗೆ ಹಾರಿ ಹೋಗುವ ಅಪಾಯದ ಬಗ್ಗೆ ಕವಿಗೆ ಇರಬೇಕಾದ ಎಚ್ಚರ.
ನಮಗೆ ಓದಲು ಸಿಗುವ ಹೆಚ್ಚಿನ ಕವಿತೆಗಳು ಶಬ್ದಗಳಲ್ಲಿ, ಪದಗಳಲ್ಲಿ ಸದ್ದು ಎಬ್ಬಿಸುವಷ್ಟು ಓದುಗನ ಮೌನದಲ್ಲಿ ನೆನಪಾಗಿ ಉಳಿದು ಕಾಡುವ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ ನಮಗೆ ಸಿಗುವ ಹೆಚ್ಚಿನ ಕವಿಗಳ ಅಥವಾ ಕವಿತೆಗಳ ಬಗ್ಗೆ ಬೇರೆ ಬೇರೆಯಾಗಿ ಹೇಳುವುದಕ್ಕೆ ಏನೂ ಇರುವುದಿಲ್ಲ. ಸಾಮಾನ್ಯವಾಗಿ, ಜನರಲ್ ಆಗಿ ಕವಿತೆಗಳ ಕುರಿತು ಹೇಳಿದ್ದನ್ನು ಅವರು ತಮಗೂ ಇದು ಅನ್ವಯ ಎಂದುಕೊಂಡು ಓದುವುದಿಲ್ಲ. ಹಾಗೆ ಸಾರಾಸಗಟಾಗಿ ಎಲ್ಲಾ ಕವಿ ಅಥವಾ ಕವಿತೆಗಳ ಕುರಿತು ಏಕ ಪ್ರಕಾರವಾಗಿ ಹೇಳಲು ಸಾಧ್ಯವೆ ಎನ್ನಬಹುದು. ಅದು ಯಾವಾಗ ಸಾಧ್ಯ ಎಂದರೆ, ಕವಿತೆ ಅಥವಾ ಕವಿ ಶಬ್ದದೊಂದಿಗೆ ನಿಂತು ಬಿಡುವ ಹಂತದಲ್ಲಿದ್ದಾಗ ಸಾಧ್ಯ. ಅವರನ್ನು ಕೇಳಬಹುದಾದ ಪ್ರಶ್ನೆಯೊಂದೇ, ನಿಮ್ಮ ಕವಿತೆಯಲ್ಲಿ ನಿಜಕ್ಕೂ ನಿಮ್ಮ ಅದೇ ಮೌನ ಇದೆಯೆ?
ಇದಕ್ಕೆ ಮೂಲತಃ ಕವಿ ತನ್ನ ಮೌನದಲ್ಲಿ ಅನುಭವಿಸಿದ್ದನ್ನು ಹಾಳೆಯ ಮೇಲೆ ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಭಾಷಾ ಕೌಶಲವನ್ನು ಮೆರೆಯುವುದೇ ಎಂದು ತಿಳಿದಿರುವುದು ಅನಿಸುತ್ತದೆ. ಕವಿಯ ಮೌನ, ಕವಿಯ ಏಕಾಂತ, ಕವಿಯ ಭಾವಲೋಕ ಅಷ್ಟು ಸುಲಭವಾಗಿ ಸಂವಹನಕ್ಕೆ ಸಿಗುವಂಥದ್ದಲ್ಲ. ಇದು ಎಲ್ಲಾ ಕವಿಗಳಿಗೂ ಗೊತ್ತು. ಆದರೆ ಹಾಳೆಯ ಎದುರು ಪೆನ್ನು ಹಿಡಿದು ಕುಳಿತಾಗ ಅವನು ತಾನು ಬಳಸಿದ, ಕಷ್ಟಪಟ್ಟು, ಆಯ್ದು, ತಾಳ್ಮೆಯಿಂದ ಧೇನಿಸಿ ಬಳಸಿದ ಪದಗಳಲ್ಲಿ ಅದನ್ನು ಪುನರ್ ಸೃಷ್ಟಿಸಿದ್ದೇನೆ ಎಂದುಕೊಳ್ಳುತ್ತಾನೆ. ಆದರೂ ಅವನಲ್ಲಿ ಅನುಮಾನವಿದ್ದೇ ಇರುತ್ತದೆ. ಕ್ರಾಸ್ಚೆಕ್ ಮಾಡುವುದು ಹೇಗೆ? ಅದಂತೂ ಸಾಧ್ಯವಿಲ್ಲ. ಸಾಧ್ಯವಿದೆ ಎಂಬ ಭರವಸೆ ಹುಟ್ಟಿಸುವಂತಿವೆ ಎಲೆನಾ ಅವರ ಮಾತುಗಳು.
ಇಲ್ಲಿಯೇ ಸ್ಪಷ್ಟಪಡಿಸಬೇಕಾದ ಒಂದು ಸಂಗತಿ: ಒಬ್ಬ ಕವಿ ‘ಶಬ್ದಗಳೊಂದಿಗೆ ನಿಂತು ಬಿಡುವ ಕವಿ’ ಎಂದು ಯಾವುದೇ ರೇಟಿಂಗ್ ದೃಷ್ಟಿಯಿಂದ ಹೇಳುತ್ತಿಲ್ಲ. ಕವಿತೆ ಹಲವು ರೀತಿಗಳಲ್ಲಿ ಉದಿಸಬಹುದು. ದಾಸರು, ವಚನಕಾರರು, ಹಳೆಗನ್ನಡ ಕಾಲದ ಕವಿವರ್ಯರು, ನವೋದಯ, ನವ್ಯ, ಬಂಡಾಯ, ಆಧುನಿಕ ಎಂದು ಎಲ್ಲ ಬಗೆಯ ಕವಿಗಳನ್ನು, ಅವರಲ್ಲೇ ಅತ್ಯಂತ ಶ್ರೇಷ್ಠ ಅನಿಸಿಕೊಂಡವರನ್ನು ನಾವೆಲ್ಲ ಅಷ್ಟಿಷ್ಟು ಓದಿದ್ದೇವೆ, ಬೆರಗಾಗಿದ್ದೇವೆ, ದಕ್ಕಿದಷ್ಟನ್ನು ಪಡೆದು ಬೆಳೆದಿದ್ದೇವೆ.
ಕವಿತೆ ಮೊದಲಿಗೆ ಭಾಷೆಯಲ್ಲಿ ಮೂಡಿದ ಪದಗಳು, ಶಬ್ದಗಳಾಗಿದ್ದೂ, ಅಲ್ಲಿನ ಪದ-ಪದಸಮೂಹ-ವಾಕ್ಯ ಒಟ್ಟಾಗಿ ಹುಟ್ಟಿಸುವ ಒಂದು ಪ್ರತಿಮೆ ಮನಸ್ಸಿನಲ್ಲಿ ಉದ್ದೀಪಿಸುವ ಭಾವ, ಅದಕ್ಕೆ ಕನೆಕ್ಟ್ ಆಗುವ ನಮ್ಮದೇ ಬದುಕಿಗೆ ಸಂಬಂಧಿಸಿದ ಯಾವುದೋ ಅನುಭಾವ, ಅದನ್ನು ಮರುಸ್ಪರ್ಶಿಸಿದ್ದರಿಂದಲೇ ಈಗ ವರ್ತಮಾನದಲ್ಲಿ ಸಿಕ್ಕ ಅನುಭೂತಿ ಮತ್ತು ಒಟ್ಟು ಓದಿನ ರಸಾನುಭವ ಎಂದೆಲ್ಲ ಕೊಂಚ ಅಮೂರ್ತವಾಗಿಯೇ ನಾವು ವಿವರಿಸುವ ಈ ಎಲ್ಲಾ ಸಂಗತಿಗಳಿಗೆ ಮೂಲ ಭಾಷೆಯೇ. ಆದರೆ ಅಡುಗೆಗೆ ಹಾಕುವ ನಾನಾ ವಿಧದ ಮಸಾಲೆ, ಬೇಯಿಸುವ ಹದ ಎಲ್ಲ ಸರಿಯಿದ್ದೂ ಅದನ್ನು ಪ್ರೀತಿಯಿಂದ ಮಾಡದಿದ್ದರೆ ಹೇಗೆ ಅದಕ್ಕೆ ಬರಬೇಕಾದ ರುಚಿ ಬರುವುದಿಲ್ಲವೋ ಹಾಗೆಯೇ ಸಾಹಿತ್ಯ. ಭಾಷೆಯ ಮೇಲಿನ ಪ್ರಭುತ್ವ, ಸಮೃದ್ಧಿ ಮಾತ್ರ ಅದಕ್ಕೆ ಸಾಕಾಗುವುದಿಲ್ಲ. ಬಹುಶಃ ಇದೆಲ್ಲವನ್ನೂ ಒಂದೇ ಮಾತಿನಲ್ಲಿ ಕೀರಂ ಹೇಳಿಯಾಗಿದೆ, ಬೇಂದ್ರೆ ಕುರಿತು ಮಾತನಾಡುತ್ತ, ಭಾಷೆಯನ್ನು ಅರ್ಥದ ಹಂಗಿನಿಂದ ಪಾರು ಮಾಡಿದ ಕವಿ ಎಂದು ಅವರೇನು ಹೇಳಿದರೂ, ಅದನ್ನೇ ನಾವು ಭಾಷೆಯನ್ನು ಅರ್ಥದ ಹಂಗಿನಿಂದ ಪಾರು ಮಾಡುವವನೇ ಕವಿ ಎಂದು ಓದಿಕೊಂಡರೆ ಸಾಕು, ಹೇಳಬೇಕಾದುದೆಲ್ಲವನ್ನೂ ಹೇಳಿದಂತಾಗುವುದು.
ಕವಿಯ ನಿಟ್ಟಿನಿಂದ ಹೇಳುವ ಮಾತನ್ನು ಕವಿತೆಯ ಓದುಗನ ನಿಟ್ಟಿನಿಂದಲೂ ಹೇಳಬಹುದು. ಭಾಷೆ ನಮಗೆ ತಟ್ಟನೆ ಕಾಣುವ, ಓದಿಗೆ ಸಿಗುವ ವಸ್ತು. ಒಂದು ಪದ, ಬಳಿಕ ಪದ ಸಮೂಹ ಮತ್ತು ಕೊನೆಗೆ ಇಡಿಯ ವಾಕ್ಯ ತನ್ನ ಸದ್ದಿನಿಂದ, ಮನಸ್ಸಿನಲ್ಲಿ ತಕ್ಷಣಕ್ಕೆ ಮೂಡಿಸುವ ಚಿತ್ರದಿಂದ ಓದುಗನಲ್ಲಿ ಜೀವಂತಗೊಳ್ಳುವ ಒಂದು ಪ್ರಕ್ರಿಯೆ ಏನಿದೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮಾತ್ರವಲ್ಲ ಕಾಲ ಕಾಲಕ್ಕೆ ಒಬ್ಬನೇ ವ್ಯಕ್ತಿಗೂ ಅದು ವಿಭಿನ್ನವಾಗಿರುತ್ತದೆ. ಎಷ್ಟೋ ಬಾರಿ ತೀರ ಸಾಮಾನ್ಯವೆನಿಸಿದ ಒಂದು ಕವಿತೆಯ ಅಗಾಧತೆಯನ್ನು ಇನ್ಯಾರೋ ಗುರುತಿಸಿ ತೋರಿಸಿದಾಗಲೇ ನಮಗೆ ಅರಿವಾಗುವುದು ಅಪರೂಪದ ವಿದ್ಯಮಾನವಲ್ಲ.
ಹಾಗೆಯೇ, ಓದುಗರಾಗಿ ನಮಗೆ ನಮ್ಮದೇ ಆದ ಒಂದು ಹುಡುಕಾಟ ಇರುತ್ತದಲ್ಲ, ಇಷ್ಟಾನಿಷ್ಟಗಳಿರುತ್ತವಲ್ಲ, ಇತಿಮಿತಿಗಳಿರುತ್ತವಲ್ಲ, ಆಯ್ಕೆಗಳಿರುತ್ತವಲ್ಲ. ಆ ಬಗ್ಗೆ ಹೇಳುತ್ತಿದ್ದೇನೆ ಅಷ್ಟೆ. ಶಬ್ದಗಳೊಂದಿಗೆ ನಿಂತು ಬಿಡುವ ಕವಿ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಆರಂಭಿಕ ಆತ್ಮರತಿ ಮತ್ತು ಅತಿ ಭಾವುಕತೆಯಿಂದ ಕವಿ ಸಾಧ್ಯವಾದಷ್ಟೂ ಬೇಗ ಬಚಾವಾಗುವುದು ಎಷ್ಟು ಅಗತ್ಯವೋ ಹಾಗೆಯೇ ಭಾಷೆ ತನ್ನನ್ನೇ ಕಟ್ಟಿ ಹಾಕದಂತೆಯೂ ಅವನು ಎಚ್ಚರವಹಿಸಬೇಕಾಗುತ್ತದೆ. ಇದಕ್ಕೆ ಸಾಧ್ಯವಾದಲ್ಲಿ, ಮತ್ತು ಆಸಕ್ತಿ ಇದ್ದಲ್ಲಿ ಆಗಸ್ಟ್ 2012ರ ಕೆರವಾನ್ ಪತ್ರಿಕೆಯಲ್ಲಿ ಪ್ರಕಟವಾದ ಅಂಜುಂ ಹಸನ್ ಅವರ ಲೇಖನವನ್ನು ಗಮನಿಸಿ. ಈ ಬಗ್ಗೆ ನನ್ನ ಬ್ಲಾಗಿನಲ್ಲಿ ಒಂದಿಷ್ಟು ವಿವರಗಳಿವೆ. (https://narendrapai.blogspot.com/2015/11/blog-post_89.html)
ಕವಿತೆಯನ್ನು ಅದರ ಶೈಲಿ, ಅದರ ಆಕೃತಿ ಮತ್ತು ಅದರ ವಸ್ತು ಇತ್ಯಾದಿಯಾಗಿ ಹಲವು ನೆಲೆಗಳಲ್ಲಿ ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿದೆ. ಭಾಷೆಯನ್ನು ಬಳಸುವ ಬಗೆಯಲ್ಲೇ ಬೆಚ್ಚಿ ಬೀಳಿಸಬಲ್ಲ ಕವಿಗಳಿರುವಂತೆಯೇ ಇಡೀ ಕವಿತೆಯನ್ನು ಓದಿದ ಮೇಲೆ ಅದರ ಭಾಷೆ, ವಿವರ, ಕಥನ ಎಲ್ಲವನ್ನೂ ಮೀರಿ ಅದು ಬೇರೆಯೇ ಒಂದು ಕಾರಣಕ್ಕೆ ಎದೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವುದೂ ಸಾಧ್ಯವಿದೆ. ಎಲೆನಾರ ಮಾತುಗಳಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಬಹುದು ಎಂಬ ನಿರೀಕ್ಷೆಯೊಂದಿಗೆ ಮುಂದುವರಿಸುವೆ.
ಎಲೆನಾ ಫರಾಂಟೆಗೂ ಇದ್ದ ಪೂರ್ವಸೂರಿಗಳು ಪುರುಷ ಸಾಹಿತಿಗಳೇ. ಆಕೆಯೂ ಮೆಚ್ಚಿಕೊಂಡಿದ್ದು ಪುರುಷ ಬರಹಗಾರರ ಬರವಣಿಗೆಯನ್ನು, ಆಗ ಬಯಸಿದ್ದು ಅವರ ಹಾಗೆ ಮತ್ತು ಆಕೆಯ ಐಡಿಯಲ್ಸ್ ಬಂದಿದ್ದು ಅಲ್ಲಿಂದ. ಆದರೆ ಆಕೆಯೇ ತಾನು ಸಾಕಷ್ಟು ಪ್ರಬುದ್ಧ ಎಂದು ತಿಳಿದ ಅನೇಕ (ಪುರುಷ) ಸಾಹಿತಿಗಳು ಕೂಡಾ ಅವರಿವರನ್ನು ಬಿಡಿ, ಜೇನ್ ಆಸ್ಟಿನ್, ಬ್ರೊಂಟೆ ಸಹೋದರಿಯರು ಅಥವಾ ವರ್ಜಿನಿಯಾ ವೂಲ್ಫ್ ಅವರನ್ನು ಕೂಡಾ ಓದಿರಲಿಲ್ಲ ಎನ್ನುವ ಮಾತನ್ನು ದಾಖಲಿಸಿದ್ದಾರೆ. ಅದೇನಿದ್ದರೂ, ಈ ಹಿನ್ನೆಲೆಯಲ್ಲಿಯೇ ಎಲೆನಾ ಎತ್ತುವ ಸಮಸ್ಯೆ ಇಲ್ಲಿ ಮುಖ್ಯ. ಹೆಣ್ಣಿನ ಧ್ವನಿ ಎಂದು ಹೇಳಬಹುದಾದ ಒಂದು ವಿಶಿಷ್ಟ ಜಗತ್ತಿನ ಮಾತುಗಳಿಗೆ ಯಾವುದೇ ಮಾದರಿ, ಐಡಿಯಲ್ಸ್ ಇರಲಿಲ್ಲ ಎನ್ನುವುದು ಆ ಮಾತು. ಹೆಣ್ಣಿನ ಜಗತ್ತಿಗೆ ಸಲ್ಲುವ ಅನೇಕ ಸಂಗತಿಗಳಿವೆ, ಅವಳ ದೈನಂದಿನ, ನೋವು, ನಲಿವು, ಅವಳ ದೈಹಿಕ ಆಗುಹೋಗುಗಳು, ಬೆಳವಣಿಗೆಗಳು, ಅದಕ್ಕೊದಗುವ ಸಂಸ್ಕಾರಗಳು, ಬದಲಾವಣೆಗಳು ಯಾವುದನ್ನೂ ಪುರುಷ ವಿವರಿಸಲಾರ. ವಿವರಿಸಿದ್ದರೆ ಅದು ಅವನ ಸೀಮಿತ ತಿಳುವಳಿಕೆಯ ನೆಲೆಯಲ್ಲಿಯೇ ಹೊರತು ಹೆಣ್ಣಾಗಿ ಅನುಭವಿಸಿದ್ದಲ್ಲ, ಕಂಡಿದ್ದಲ್ಲ. ಹಾಗಾಗಿ ಹೆಣ್ಣೇ ಆ ಜಗತ್ತಿನ ಸಂಗತಿಗಳಿಗೆ ಮಾತಾಗುವಾಗ ಅವಳು ಅವಳದೇ ನುಡಿಗಟ್ಟುಗಳನ್ನು, ಭಾಷೆಯನ್ನು, ಲಯವನ್ನು, ವಸ್ತುವನ್ನು, ಒಂದರ್ಥದಲ್ಲಿ ಬರಹದ ಸಮಸ್ತ ಕೌಶಲವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬಹುಶಃ ಅದಾಗಲೇ ಸಿದ್ಧವಾಗಿ ಲಭ್ಯ ಇರುವ ಯಾವುದೂ ಅವಳ ಉಪಯೋಗಕ್ಕೆ ಬರದೇ ಇರಬಹುದು ಅಥವಾ ಬಳಸಿಕೊಂಡಲ್ಲಿ ಅದೇ ಅವಳ ಹಾದಿಯನ್ನು ಮತ್ತೊಮ್ಮೆ ತಪ್ಪಿಸಬಹುದಾದ ಅಪಾಯ ಬರಬಹುದು. ಹಾಗಾಗಿ, ಅವಳ ಧ್ವನಿ ಹೊಸತಾಗಿ ಮೂಡಬೇಕಾಗಿದೆ ಮತ್ತು ಆ ಹೊಸತನದ ಕೊಸರು ಕೊರತೆಯೇನಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಸಾಗಲು ಅವಳು ತಯಾರಿರಬೇಕಾಗುತ್ತದೆ.
ಹಾಗೆಯೇ ಇಲ್ಲಿ ವಾಸ್ತವ, ಕಲ್ಪಿತ ವಾಸ್ತವಗಳ ಚರ್ಚೆಯೂ ಇದೆ. ಚಿಕ್ಕಂದಿನಲ್ಲಿಯೇ ಎಲೆನಾ ಅವರಿಗೆ ಅವರ ಶಿಕ್ಷಕಿಯೊಬ್ಬರು ಹೇಳುತ್ತಾರೆ, ಸದಾ ಸತ್ಯವನ್ನು ಬರಿ, ಇದ್ದುದ್ದು ಇದ್ದ ಹಾಗೆ ಬರಿ. ಎಲೆನಾ ಮುಂದೆ ಬೆಳೆದು ಪ್ರಬುದ್ಧರಾದ ಮೇಲೆಯೂ ತಾವು ಏನೇ ಬರೆದರೂ ಅದು ವಾಸ್ತವದಿಂದಲೇ ಬಂದಿದ್ದಾಗಿರಬೇಕು ಎಂದು ನಿರ್ಧರಿಸುತ್ತಾರೆ. ಮಾಂತ್ರಿಕ ವಾಸ್ತವಿಕತೆಯ ಅಧ್ವರ್ಯು ಎಂದೇ ಪರಿಗಣಿಸಲ್ಪಡುವ ಮಾರ್ಕೆಸ್ ಕೂಡಾ ಒಂದೆಡೆ ತಾನು ತನ್ನ ಅನುಭವಕ್ಕೆ ಬರದ ಏನನ್ನೂ ಬರೆದಿಲ್ಲ ಎಂದೇ ಹೇಳುತ್ತಾನೆ. ಆದರೆ, ವಾಸ್ತವ ಎಂದರೆ ಘಟನೆಗಳು ಎಂದು ತಿಳಿಯುವವರಿಗೆ ವ್ಯಕ್ತಿಗಳು, ಘಟನೆಗಳು ಅಮುಖ್ಯ ಎನ್ನುವುದು ಅರ್ಥವಾಗುವುದಿಲ್ಲ.
But how can I explain, how can I explain to you?
You will understand less after I have explained it.
All that I could hope to make you understand
Is only events: not what has happened.
And people to whom nothing has ever happened
Cannot understand the unimportance of events.
( T S Eliot)
ಆದರೆ ಎಲೆನಾ ಅವರಿಗೆ ವಾಸ್ತವದ ಸತ್ಯವನ್ನೇ ಬರೆಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಮೊದಲನೆಯದಾಗಿ ಒಬ್ಬ ಹೆಣ್ಣಾಗಿ ಅವರ ಕಷ್ಟಗಳು ತುಸು ಹೆಚ್ಚೇ ಇದ್ದವು. ಎರಡನೆಯದಾಗಿ ಬೇರೆಯವರ ಬದುಕನ್ನು ಬಯಲಿಗಿಡುವ ಅಧಿಕಾರವೂ ತಮಗಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇದಕ್ಕೆ ಅವರು ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆ ಬರೆದವರು ಮಾಡಿಕೊಂಡ ರಾಜಿಸೂತ್ರಗಳ ಕುರಿತು ಇಲ್ಲಿ ವಿವರವಾಗಿಯೇ ಚರ್ಚಿಸಿದ್ದಾರೆ. ಒಂದು ಕಡೆ ದಾಸ್ತೊವಸ್ಕಿ ತನ್ನ ಪ್ರಸಿದ್ಧ ಕಾದಂಬರಿ "ನೋಟ್ಸ್ ಫ್ರಂ ಅಂಡರ್ಗ್ರೌಂಡ್" ನಲ್ಲಿ ಹೇಳಿದ ಒಂದು ಮಾತನ್ನೂ ಉಲ್ಲೇಖಿಸುತ್ತಾರೆ.
We've become so estranged that at times we feel some kind of revulsion for genuine "real life," and therefore we can't bear to be reminded of it. Why, we've reached a point where we almost regard "real life" as hard work, as a job, and we've all agreed in private that it's really better in books.
(Translated by Michael Katz)
ನಾವು ಆಗಾಗ ತಪ್ಪಾಗಿ ಇದು "ನನ್ನ ಅನುಭವ", ಇದು "ನನ್ನ ಯೋಚನೆ", ಇದು "ನನ್ನ ಐಡಿಯಾ" ಎನ್ನುತ್ತೇವೆ ಎನ್ನುವ ಎಲೆನಾ ಇಲ್ಲಿ "ನನ್ನದು" ಎಂಬ ವಾಸ್ತವ ಯಾವುದೂ ಇಲ್ಲ ಎನ್ನುತ್ತಾರೆ. ಇದೊಂದು ಸಮಷ್ಠಿಯ ಸಂವೇದನೆ, ಅದನ್ನು ಈಗಾಗಲೇ ನಮ್ಮ ಪೂರ್ವಸೂರಿಗಳು ಹೇಳಿಯಾಗಿದೆ ಮತ್ತು ಮುಂದಿನವರು ಹೇಳಲಿದ್ದಾರೆ, ನಮ್ಮದೇನಿದ್ದರೂ ಅದನ್ನೇ ನಮ್ಮ ಕಾಲಕ್ಕೆ ಸಲ್ಲುವ ನುಡಿಗಟ್ಟುಗಳಲ್ಲಿ, ನಮ್ಮ ನಮ್ಮ ಪ್ರಜ್ಞೆ, ವಿವೇಚನೆ ಮತ್ತು ಗ್ರಹಿಕೆಗೆ ನಿಷ್ಠರಾಗಿ ಪಾಠ ಒಪ್ಪಿಸುವ ಕೆಲಸವಷ್ಟೇ ಎಂರ್ಥದ ಮಾತುಗಳನ್ನಾಡುತ್ತಾರೆ.
ಇಲ್ಲಿ ಅವರು ಹೆಣ್ಣಿನ ಜಗತ್ತನ್ನು ಭಾಷೆಯಲ್ಲಿ ಕಟ್ಟಿಕೊಡುವ ತಮ್ಮದೇ ಆದ ಕಷ್ಟ, ಪೂರ್ವಸೂರಿಗಳ ಉದಾಹರಣೆಯಿಲ್ಲದ ಹಾದಿಯಲ್ಲಿ ಸಾಗುವ ಒಬ್ಬಂಟಿತನದ ಬಗ್ಗೆ ಹೇಳಿಕೊಂಡಿದ್ದಾರೆ. ಎಲೆನಾ ಉಲ್ಲೇಖಿಸುವ Ingeborg Bachmann ಅವರ ಮಾತುಗಳಿಗೆ ಬನ್ನಿ.
I believe that old images, like Morike's or Goethe's can no longer be used, that they shouldn't be used anymore, because in our mouths they would sound false. We have to find true sentences, which correspond to the condition of our conscience and to this changed world.
ಯಾವುದೇ ಒಂದು ಮಾತು ಮೊದಲಿಗೇ ಕ್ಲೀಷೆಯಾಗಿರುವುದಿಲ್ಲ. ಕ್ರಮೇಣ ಅದು ಕ್ಲೀಷೆಯಾಗುತ್ತದೆ. ಹಾಗಿದ್ದೂ ಅದನ್ನು ಹಿಂದೆ ಬಳಸಿದವರ ಕೈಯಲ್ಲಿ ಅದು ಯಾವತ್ತೂ ಕ್ಲೀಷೆಯಾಗಿ ಬದಲಾಗುವುದಿಲ್ಲ. ನಮ್ಮ ಕೈಲಿ ಮಾತ್ರ ಕ್ಲೀಷೆಯಾಗುತ್ತದೆ. ಹಾಗಾಗಿ ನಾವು ಹೇಳುತ್ತಿರುವ ಮಾತು ಹಳೆಯದೇ ಆಗಿದ್ದರೂ ಅದನ್ನು ಕ್ಲೀಷೆಯಾಗದ ಹಾಗೆ ಹೇಳುವುದಕ್ಕೆ, ನಮ್ಮ ಅನುಭವ, ಅನುಭೂತಿ, ಭಾವ ಮತ್ತು ಅನುಭಾವಕ್ಕೆ ನಿಷ್ಠವಾಗಿರುವಂತೆ ಹೇಳುವುದಕ್ಕೆ ನಿರಂತರವಾಗಿ ವ್ಯಾಯಾಮ ನಡೆಸುತ್ತಿರಬೇಕಾಗುತ್ತದೆ. Ingeborg Bachmann ಮಾತಿನ ಗುರುತ್ವ ಇರುವುದು ಭಾಷೆ ಎರಡು ಸಂಗತಿಗಳನ್ನು ಮೈಗೂಡಿಸಿಕೊಂಡು ಹರಿಯುವುದರಲ್ಲಿ. ಅದು ‘ನಮ್ಮ ವಿವೇಚನೆಯ ಒತ್ತಡ’ ಮತ್ತು ‘ಬದಲಾದ ಜಗತ್ತು ಒಡ್ಡುವ ಒತ್ತಡ’ ಎರಡಕ್ಕೂ ಸಂವಾದಿಯಾದ ಒಂದು ಲಯ ಕಂಡುಕೊಳ್ಳುವುದರಲ್ಲಿ. ಕವಿ ತನ್ನ ಭಾವಜಗತ್ತಿನಲ್ಲಿ ಕಂಡ ಅಮೂರ್ತ ಕವಿತೆಯೊಂದು ಅಕ್ಷರಕ್ಕಿಳಿಯುವ ವರೆಗೂ ಅನನ್ಯವೂ, ದಿವ್ಯವೂ, ಶ್ರೇಷ್ಠವೂ ಆಗಿರುತ್ತದೆ. ಆದರೆ ಮುಂದೇನಾಗುತ್ತದೆ ಎನ್ನುವುದೇ ಸೋಜಿಗ.
ಮ್ಯಾಕ್ಸಿಕನ್ ಕವಿ Maria Guerra ಅವರ ಕವಿತೆ: (ಎಲೆನಾ ಅವರ ಕೃತಿಯಿಂದಲೇ)
I lost a poem.
Already written
And ready on page
To put in the form of a book
I looked in vain.
It was a poem
With a vocation for Wind.
ಮನಸ್ಸಿನ ಹಾಳೆಯಿಂದ ಎತ್ತಿಕೊಂಡಿದ್ದನ್ನು ಬರೆಯಲು ಪೆನ್ನು ಹಿಡಿಯುವ ಮೊದಲೇ ಗಾಳಿ ಬೀಸಿದ್ದರಿಂದ ಅದು ಹಾರಿಯೇ ಹೋಗುತ್ತದೆ. ಇದು ಬಹುಶಃ ಪ್ರತಿಯೊಬ್ಬ ಕವಿಯ ಸಮಸ್ಯೆ. ಕವಿಯ ಸಮಸ್ಯೆ ಮಾತ್ರವಲ್ಲ, ಪ್ರತಿಯೊಬ್ಬ ಬರಹಗಾರನ ಸಮಸ್ಯೆ ಕೂಡಾ. ಅನುಭೂತಿಗೆ, ಭಾವಕ್ಕೆ, ಹೊಳಹುಗಳಿಗೆ ಭಾಷೆಯ ಹಂಗಿಲ್ಲ. ಆದರೆ ಅವನ್ನ ಭಾಷೆಯಲ್ಲಿ ಹಿಡಿದಿಡುವ ಪ್ರಯತ್ನ ಎಲ್ಲ ಬರಹಗಾರರು ಮಾಡುತ್ತಿರುತ್ತಾರೆ. ನಡುವೆ ಗಾಳಿ ಬೀಸಿದರೆ ಕಂಡಿದ್ದು ಮತ್ತೊಮ್ಮೆ ಕಾಣಲು ಸಿಗದ ಮಾಯಾಜಿಂಕೆ ಆಗಿ ಬಿಡುತ್ತದೆ. ಹಠ ಹಿಡಿದು ಬರೆದರೆ ಕಂಡಿದ್ದೇ ಒಂದು, ಕಾಣಿಸಿದ್ದೇ ಇನ್ನೊಂದು ಆಗಿರುತ್ತದೆ. ಸೀತೆ ಕಂಡಿದ್ದು ಬಂಗಾರದ ಜಿಂಕೆ. ರಾಮನಿಗೆ ಸಿಕ್ಕಿದ್ದು ಮಾರೀಚ. ರಾಮನಿಗೆ ಗೊತ್ತಿತ್ತೆ, ಅದು ಮಾಯಾಜಿಂಕೆ, ಬಂದಿರುವ ಉದ್ದೇಶ ದುರುದ್ದೇಶ ಎನ್ನುವುದು? ಸೀತೆಗೇ ಗೊತ್ತಿತ್ತೆ, ಅದರ ಬಯಕೆ ತನಗೆ ಉಚಿತವಲ್ಲದ್ದು ಎನ್ನುವುದು? ಕಣ್ಣೆದುರು ಇರುವುದನ್ನು ನೋಡುವುದಕ್ಕೆ ಬರೀ ಕಣ್ಣು ಸಾಲದು ಸ್ವಾಮೀ... ಎನ್ನುತ್ತಾರಲ್ಲ ಎ. ಕೆ. ರಾಮಾನುಜನ್, ಹಾಗೆ ಅದು. ಧೃತರಾಷ್ಟ್ರನಿಗೆ ಸಂಜಯನಿದ್ದ. ಸಂಜಯನಿಗೆ ಶ್ರೀಕೃಷ್ಣನೇ ದಿವ್ಯಚಕ್ಷುಗಳನ್ನು ನೀಡಿದ್ದ. ಸಾಹಿತ್ಯ ನಮಗೆ ಒದಗಿಸುವುದು ಅದನ್ನೇ. ಸಾಹಿತಿ ನಮಗೆ ಒದಗಿಸಬೇಕಾದ್ದು ಕೂಡಾ ಅದನ್ನೇ. ಆದರೆ ಇನ್ನೊಬ್ಬರಿಗೆ ಏನನ್ನಾದರೂ ಕೊಡುವುದಕ್ಕೆ ಮೊದಲು ಅದು ನಮ್ಮಲ್ಲಿ ಕೊಡುವಷ್ಟು ಇರಬೇಕಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ