Sunday, September 30, 2007

ಬದುಕಿನ ಕತೆ ಹೇಳುವ ಬಿಳಿಯ ಚಾದರ


ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ
ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
-ಭೂಮಿಗೀತ
ಸ್ವಲ್ಪ ವಿಡಂಬನೆಯ ಲೇಪವುಳ್ಳ ಆದರೆ ಸಂವೇದನೆಗಳಲ್ಲಿ ಯಾವ ರಸಕ್ಕೂ ಜಿಗಿಯಬಲ್ಲ ಸಾಧ್ಯತೆಯನ್ನು ಉಳಿಸಿಕೊಂಡೇ ಒಂದು ವಿಶಿಷ್ಟ ಧ್ವನಿಯಲ್ಲಿ ಕತೆ ನೇಯಬಲ್ಲ ಕಲೆಗಾರ ಗುರುಪ್ರಸಾದ್ ಕಾಗಿನೆಲೆ. ಉಢಾಫೆ, ವಿನೋದ, ವಿಡಂಬನೆಯ ಧಾಟಿಯಿಂದ ಅತ್ಯಂತ ಭಾವನಾತ್ಮಕ ಸಂವೇದನೆಯ ಸ್ತರಕ್ಕೆ ಒಂದರಿಂದ ಇನ್ನೊಂದಕ್ಕೆ ಜಿಗಿಯುವುದು, ಜಿಗಿದೂ ಪರಿಣಾಮಕಾರಿಯಾಗಿ ಬರೆಯುವುದು ಅಷ್ಟೇನೂ ಸುಲಭವಲ್ಲ. ಇದನ್ನೇ ಕಾಗಿನೆಲೆಯವರು ತಮ್ಮ ಕಾದಂಬರಿ 'ಬಿಳಿಯ ಚಾದರ'ದಲ್ಲೂ ಮಾಡಿದ್ದಾರೆ, ಮಾಡಿ ಯಶಸ್ವಿಯೂ ಆಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ ಎನಿಸುತ್ತದೆ.
ಈ ಕಾದಂಬರಿ ಕೆಲವು ವಿಲಕ್ಷಣ ಸಂಗತಿಗಳನ್ನು ಇಟ್ಟುಕೊಂಡು ಅವುಗಳನ್ನೇ ಕುರಿತು ಧೇನಿಸುತ್ತಿರುವಂತೆ ಸಾಗುತ್ತದೆ. ಅಷ್ಟೇನೂ ಸನಾತನಿಯಲ್ಲದ ಮಾಧವರಾಯರ ತಂದೆ ತಾಯಿಗಳಿಗೆ ಕಟ್ಟಾ ಸಂಪ್ರದಾಯನಿಷ್ಟ ಮಾಧವರಾಯರಂಥ ಮಗ ಹುಟ್ಟುತ್ತಾನೆ. ಸಂಪ್ರದಾಯದಿಂದ ಆಧುನಿಕತೆಯತ್ತ ಹೊರಳುತ್ತಿರುವ ಸುತ್ತಲಿನ ಜಗತ್ತಿಗೆ ಒಂದು ಅಚ್ಚರಿಯಾಗಿ, ಕೆಲವಂಶ ಅಪಭ್ರಂಶವಾಗಿ, ಇನ್ನು ಕೆಲವಂಶ ಕಿರಿಕಿರಿಯಾಗಿ ಮಾಧವರಾಯರು ಕಾಣುವಾಗಲೂ ಅವರ ಅವಳಿ ಮಕ್ಕಳಾದ ರಶ್ಮಿ ಮತ್ತು ಶ್ರೀಧರ ಸಾಫ್ಟ್‌ವೇರ್, ಮೆಡಿಕಲ್ ಎಂದು ತಮ್ಮದೇ ಮಾರ್ಗಗಳನ್ನು ಆಯ್ದುಕೊಳ್ಳಲು ಅಡ್ಡಿಯಾಗುವಷ್ಟು ಅದು ಬೆಳೆಯುವುದಿಲ್ಲ. ಈ ಮಾಧವರಾಯರ ಅವಳಿ ಮಕ್ಕಳ ಹೆರಿಗೆಯೂ ಕೊಂಚ ವಿಲಕ್ಷಣ ಸಂಗತಿಯೇ. ಮೊದಲಿಗೆ ಅದು ಒಂದು ಹೆಣ್ಣು, ಒಂದು ಗಂಡು. ಗಂಡು ಪೀಚು ಪೀಚಾಗಿದ್ದರೆ ಹೆಣ್ಣು ಕೆಂಪಗೆ ಗುಂಡುಗುಂಡಾಗಿ ಇರುವುದರಿಂದಲೇ ಗರ್ಭದಲ್ಲೇ ಹೆಣ್ಣು ತನ್ನ ಅವಳಿ ಗಂಡಿನ ಪಾಲನ್ನು ಕಬಳಿಸಿಕೊಂಡೇ ಹುಟ್ಟಿದೆ ಎನ್ನುವ ಭಾವನೆ ಮಾತ್ರ ಬದುಕಿನುದ್ದಕ್ಕೂ ಉಳಿದು ಬರುವುದು ಇಲ್ಲಿನ ವಿಶೇಷ. ಇಡೀ ಕಥಾನಕದ ಹೆಚ್ಚಿನ ಭಾಗ ಘಟಿಸುವುದು ಅಮೆರಿಕದಲ್ಲಾದರೂ ಒಂದೆರಡು ಪಾತ್ರಗಳನ್ನು ಬಿಟ್ಟರೆ ಉಳಿದೆಲ್ಲಾ ಪಾತ್ರಗಳು ಭಾರತೀಯ ಅಥವಾ ಭಾರತೀಯ ಮೂಲದವು. ಇನ್ನು ಇಲ್ಲಿ ಬರುವ ಒಂದು ಪ್ರಧಾನವಾದ ವಿದೇಶೀ ಪಾತ್ರ ಬೆಟ್ಟಿ ಮಗು ಹುಟ್ಟುವುದು ದೈವಕೃಪೆಯಿಂದ ಎಂದು ತಿಳಿಯುವ ಮಟ್ಟಿಗೆ ಸನಾತನಿ!ಭಾರತದ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ವಿಮೆಯ ಪರಿಕಲ್ಪನೆಯನ್ನಿಟ್ಟುಕೊಂಡೇ ಓದುವ ಕನ್ನಡದ ಓದುಗರಿಗೆ ಇಲ್ಲಿ ಸಿಗುವ ಶುದ್ಧ ಅಮೆರಿಕೆಯ ಆಸ್ಪತ್ರೆ, ಅರೋಗ್ಯ ವಿಮೆ ಇತ್ಯಾದಿ ಕುರಿತ ವಿವರಗಳು ಕೂಡ ಒಂದು ಬಗೆಯ ಅನುವಾದದ, ಅನಂತಮೂರ್ತಿಯವರು ಹೇಳುವಂತೆ ಒಂದಕ್ಕೊಂದು ಅನುವಾಗುವ, ಎದುರಾಗುವ ಅನಿವಾರ್ಯತೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲಿ ಬರುವ ಲಕ್ಕಿ ಅಲಿ, ಅಖ್ತರ್, ರಾಘವೇಂದ್ರ ಘೂಗೆ, ಮಿಸೆಸ್ ಬೆನೆಟ್, ಡ್ಯಾನ್ ದಾಮೋದರ ರೆಡ್ಡಿ, ಬೆಟ್ಟಿ, ಜಾನಕಮ್ಮ ಎಲ್ಲರಲ್ಲೂ ಎದ್ದು ಕಾಣುವ ವಿಲಕ್ಷಣ ಅಂಶಗಳಿವೆ, ಪರಸ್ಪರ ಹೊಂದಿಕೆಯಾಗದ ಯಾವುದರೊಂದಿಗೋ ಅನಿವಾರ್ಯವಾಗಿ ಏಗುತ್ತಿರುವವರಂತೆ ಇವರು ಕಾಣಿಸಿಕೊಳ್ಳುತ್ತಾರೆ. ವಾಸ್ತವವಾಗಿ ಈ ಎಲ್ಲ ವಿಲಕ್ಷಣ ಸಂಗತಿಗಳೇ ಇಡೀ ಕಥಾನಕದ ಅಂತರ್ಗತ ಇರಬಹುದೇ ಎನಿಸುವಂತೆ ಮಾಡುತ್ತವೆ ಪ್ರಮುಖವಾಗಿ ನಮ್ಮನ್ನು ಕಾಡುವ ಇಲ್ಲಿನ ಎರಡು ಸಂಗತಿಗಳು. ಒಂದು ವ್ಯಕ್ತಿಗತ ನೆಲೆಯದ್ದು, ಇನ್ನೊಂದು ಸಾಮಾಜಿಕ ನೆಲೆಯದ್ದು. ಒಂದು ಹುಟ್ಟಿನಿಂದ ತೊಡಗಿದರೆ ಇನ್ನೊಂದು ಸಾವಿನಿಂದ ತೊಡಗುವುದು ಗಮನಾರ್ಹ.
ಎಂಬಿಬಿಎಸ್, ಪಿಜಿ, ಇಂಟರ್ನ್ ಅಲ್ಲದೆ ಒಮ್ಮೆ ಫೇಲಾಗಿ ಹಾಳಾದ ಆರುತಿಂಗಳು ಎಂದು ಶ್ರೀಧರ ಸಂಪಾದನೆ ಮಾಡಬಲ್ಲ ಹಂತಕ್ಕೇರುವ ಮುನ್ನವೇ ಸಾಫ್ಟ್‌ವೇರ್ ಹಾದಿ ಹಿಡಿದ ರಶ್ಮಿ ಐದಂಕಿ ಸಂಬಳದಲ್ಲಿ ಸುರು ಹಚ್ಚಿಕೊಂಡು ಅಮೆರಿಕದಲ್ಲಿ ಸ್ವಂತ ಮನೆಕೂಡ ಮಾಡಿಕೊಂಡಿರುತ್ತಾಳೆ. ಇದು ಹುಟ್ಟಿನಿಂದ ಶ್ರೀಧರನ ರಕ್ತ ಹೀರಿಯೇ ಹುಟ್ಟಿದವಳೆಂಬ ಆಪಾದನೆ ಹೊತ್ತ ರಶ್ಮಿ ಮತ್ತು ಹುಟ್ಟಿನಿಂದ ಆರೋಗ್ಯ, ಯಶಸ್ಸು ಮತ್ತು ಛಲದ ನೆಲೆಯಲ್ಲಿ ಹಿಂದೆಯೇ ಉಳಿದುಬಿಟ್ಟ ಶ್ರೀಧರನ ನಡುವೆ ಬಹಳ ಮುಖ್ಯ ಸಂಗತಿಯಾಗಿ ನಿಲ್ಲುವುದೇ ಒಂದು ಅರ್ಥದಲ್ಲಿ ಕಾದಂಬರಿಯ ಬಹು ಮುಖ್ಯ ಎಳೆ. ಆದರೆ ಇದು ವೈಯಕ್ತಿಕ ನೆಲೆಯಲ್ಲಿ ಅಕ್ಕ ತಮ್ಮಂದಿರ ನಡುವಿನ ಹಣಾಹಣಿ, ಜಿದ್ದು, ಮೇಲಾಟವಾಗಿ ಕಂಡರೂ ಅಷ್ಟೇ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಇದು ಇವತ್ತು ಕಾಡುವ ಸ್ತರ ಕೇವಲ ಹಣದ್ದು, ಸಂಪಾದನೆಯದ್ದು ಮಾತ್ರವಾಗಿದ್ದರೆ ಅದರಲ್ಲಿ ವಿಶೇಷವೇನಿರಲಿಲ್ಲ. ಕಾಗಿನೆಲೆಯವರು ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ಅವಳಿಗಳನ್ನು ತರುತ್ತಾರೆ. ಅತ್ಯಂತ ಸೂಕ್ಷ್ಮ ಸಂವೇದನೆಯ ಪಾತಳಿಯಲ್ಲಿ ಈ ಸಮಸ್ಯೆಯನ್ನು ಮಂಡಿಸುವುದಕ್ಕಾಗಿಯೇ ಎಂಬಂತೆ ಈ ಅವಳಿಗಳಲ್ಲಿ ಒಂದನ್ನು ಗಂಡನ್ನಾಗಿಯೂ ಇನ್ನೊಂದನ್ನು ಹೆಣ್ಣನ್ನಾಗಿಯೂ ಚಿತ್ರಿಸುತ್ತಾರೆ. ಇದು ಇನ್ಯಾತರ ಈಡಿಪಸ್ ಕಾಂಪ್ಲೆಕ್ಸ್‌ಗೂ ಹೊರಳದಂತೆ ಸ್ವಲ್ಪ ಮುಂಚಿತವಾಗಿಯೇ ನಾಗೇಶನನ್ನು ರಶ್ಮಿಗೆ ತಗುಲಿಸಿ ಅಮೆರಿಕದಲ್ಲೂ ಅವರಿಬ್ಬರೇ ಜೊತೆಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇಬ್ಬರೂ ಅಮೆರಿಕೆಯಲ್ಲಿದ್ದರೂ ಎಂದೂ ರಶ್ಮಿ ಮತ್ತು ಶ್ರೀಧರ ಅಲ್ಲಿ ಜೊತೆಯಾಗಿ ಸೇರುವುದು, ಮಾತನಾಡುವುದು, ಹಂಚಿಕೊಳ್ಳುವುದು ನಡೆಯುವುದಿಲ್ಲ! ಬಹುಷಃ ಅವರಿಬ್ಬರೂ ಪರಸ್ಪರ ಭೇಟಿಯಾಗುವುದು ಭಾರತದಲ್ಲಿ ತಂದೆಯ ಅಪರಕರ್ಮಕ್ಕೆ ಬಂದಾಗಲೇ! ಇಷ್ಟಿರುತ್ತ ಇಲ್ಲಿ ವೈದ್ಯಕೀಯ ಜಗತ್ತಿನ ವಿದ್ಯಮಾನಗಳ ಒಂದು ಚಿತ್ರವೂ, ಸಾಫ್ಟ್‌ವೇರ್ ಜಗತ್ತಿನ ಎಲ್ಲವೂ ನಾವು ತಿಳಿದಷ್ಟು ಸಾಫ್ಟ್ ಅಲ್ಲವೆನ್ನುವ ಚಿತ್ರವೂ ಇದೆ. ಮನುಷ್ಯ ಸಂಬಂಧಗಳ ನೆಲೆಯಿಂದ ತೊಡಗಿ ಜಗತ್ತಿನ ವಿದ್ಯಮಾನದ ಕಡೆಗೆ ಚಾಚಿಕೊಂಡಿರುವಂತೆ ಸಾಗುವ ಈ ಕಥಾನಕಕ್ಕೆ ತಾನಾಗಿಯೇ ದಕ್ಕುವ ಆಯಾಮಗಳು, ಅವು ಒದಗಿಸುವ ಸಂಕೀರ್ಣ ನೋಟ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ.
ಒಂದಷ್ಟು ವಿಲಕ್ಷಣ ಸಂಗತಿಗಳನ್ನು ಒಂದಕ್ಕೊಂದು ಪೂರಕವಾಗಿಯೇ ಹೊಂದಿಸಿಕೊಂಡು ಧೇನಿಸಿದಂತೆ ಸಾಗುವ ಈ ಶೋಧದ ಗುರಿ ಏನು? ಕೊನೆಗೂ ಇದು ನಮ್ಮನ್ನು ಯಾವುದರ ಎದುರು ಕೊಂಡೊಯ್ದು ನಿಲ್ಲಿಸುತ್ತದೋ ಅದು ಕಥಾನಕದ ಎಲ್ಲ ವಿಲಕ್ಷಣ ಅಂಶಗಳನ್ನೂ ನಮ್ಮಲ್ಲೇ ಹುಡುಕಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಯಾಕೆಂದರೆ ಲಘುವಾಗಿ ತೆರೆದುಕೊಂಡು ಸರಳವಾಗಿ ಸಾಗುವ ಕಾದಂಬರಿ ಇದ್ದಕ್ಕಿದ್ದಂತೆ ಅಂಥ ಒಂದು ಅನುರಣನ ಶಕ್ತಿಯನ್ನು ಅದೆಲ್ಲಿಂದಲೋ ಪಡೆದುಕೊಂಡು ಬಿಟ್ಟಿರುವುದು ನಮ್ಮ ಗಮನಕ್ಕೆ ಬರುವುದು ಕಾದಂಬರಿ ಮುಗಿದ ಮೇಲೆಯೇ. ಹೀಗೆ ಈ ಕಾದಂಬರಿ ಓದುಗನಲ್ಲಿ ಬೆಳೆಯುವ ಸಾಧ್ಯತೆಗಳನ್ನು ಪಡೆದುಕೊಂಡಿರುವುದೇ ಕಾಗಿನೆಲೆಯವರ ಪ್ರಯತ್ನ ಯಶಸ್ವಿ ಎನಿಸಲು ಕಾರಣ.
ಕಾದಂಬರಿಯ ಎರಡು ಮುಖ್ಯ ಅಂಶಗಳು ನಮ್ಮ ಗಮನ ಸೆಳೆಯುತ್ತವೆ. ಒಂದು, ರಶ್ಮಿಯ ವ್ಯಕ್ತಿತ್ವ ಚಿತ್ರಣದಲ್ಲಿ ಕಾಗಿನೆಲೆಯವರು ವಹಿಸುವ ಎಚ್ಚರ ಮತ್ತು ಸಂಯಮ. ರಶ್ಮಿ ಹೆಚ್ಚು ಮಾತನಾಡುವವಳಲ್ಲ. ಅವಳ ಮಾತು, ಕ್ರಿಯೆ ಅವಳನ್ನು ಅರ್ಥಮಾಡಿಕೊಳ್ಳಲು ಸಹಕರಿಸುವಷ್ಟಿಲ್ಲ. ಆದರೂ ಅವಳ ವ್ಯಕ್ತಿತ್ವದಲ್ಲಿ ಅನೂಹ್ಯವಾದ ಕೆಲವು ಸಂಗತಿಗಳಿರುವುದು ಅಚ್ಚರಿ ಹುಟ್ಟಿಸುತ್ತದೆ. ಅವುಗಳಲ್ಲಿ ಒಂದು ಅವಳು ಕನ್ನಡದಲ್ಲೇ ಬರೆಯುವ ಕವನಗಳು, ಅವುಗಳಲ್ಲಿ ಅವಳಿಗೂ ಅಮೂರ್ತವಾಗಿಯೇ ಉಳಿಯುವ, ನಿಜಕ್ಕೂ ಇಲ್ಲದಿರಬಹುದಾದ ಸ್ತ್ರೀವಾದಿತ್ವ. ಇನ್ನೊಂದು ಅವಳು ತೀರ ತಣ್ಣಗೆ ತಾನು ಬೇಕಾದರೆ ಲೆವಿಂಸ್ಕಿಯಾಗಬಲ್ಲೆ ಎಂದು ಹೇಳಿ ನಾಗೇಶನಿಗೆ ದೊಡ್ಡ ಆಘಾತವನ್ನು ನೀಡುವುದು ಮತ್ತು ಅಷ್ಟೇ ತಣ್ಣಗೆ ಅದು ತನಗೆ ನಾಗೇಶನ ಮೇಲೆ ತಾನು ಪ್ರಯೋಗಿಸಿದ ಒಂದು ಅಸ್ತ್ರ ಮಾತ್ರವಾಗಿತ್ತು ಎಂದು ಯೋಚಿಸುವುದು. ರಶ್ಮಿಯ ವ್ಯಕ್ತಿತ್ವ ಇದೆಲ್ಲವೂ ಸೂಚಿಸುವುದಕ್ಕಿಂತ ಹೆಚ್ಚು ಸಂಕೀರ್ಣವಾದದ್ದು ಮತ್ತು ಹಾಗಾಗಿಯೇ ಇಡೀ ಕಾದಂಬರಿಯಲ್ಲಿ ಅದು ಇನ್ಯಾವುದೇ ಪಾತ್ರಕ್ಕಿಂತ ಹೆಚ್ಚು ಗುರುತ್ವ ಹೊಂದಿರುವಂಥದ್ದು. ಅವಳಲ್ಲಿ ಭಾವುಕತೆ ಇದೆ. ಅಷ್ಟೇ ತೀವೃವಾದ ಸೂಕ್ಷ್ಮಜ್ಞತೆಯೂ ಇದೆ. ಇರುತ್ತ ಅದೆಲ್ಲ ಇಲ್ಲದವಳಂತೆ ಕೇವಲ ಭೌತಿಕ ಜಗತ್ತಿಗಂಟಿಕೊಂಡವಳಂತೆ ಎಲ್ಲರಿಗೂ ಕಾಣಿಸಿಕೊಳ್ಳುವ ಅವಳು ಹೆಚ್ಚು ಹೆಚ್ಚು ನಿಗೂಢವೂ ಆಗುತ್ತ ಹೋಗುತ್ತಾಳೆ. ವೈದ್ಯಕೀಯ ಜಗತ್ತಿನ ವ್ಯಾಪಾರೀ ಮನೋಭಾವದ ಹಿಂದಿರುವ ಕ್ರೌರ್ಯ ಅವಳ ಅರಿವಿಗೆ ಬಂದಾಗ ಅವಳು ಅದರ ಬಗ್ಗೆ ಬರೆಯಲು ಹಿಂಜರಿಯುವುದಿಲ್ಲ ಎನ್ನುವುದು ಸರಿ. ಈ ಕ್ರಿಯೆಯಲ್ಲಿ ಅವಳಿಗೆ ಶ್ರೀಧರನೊಂದಿಗಿನ ಮೇಲಾಟ ಮುಖ್ಯವಿರಲಾರದು. ಅದೇ ರೀತಿ, ತನ್ನ ಗರ್ಭದ ಬಗ್ಗೆ ಅವಳು ವಿಚಲಿತಳಾಗುವುದು ನಾಗೇಶನ ಮೇಲಿನ ಯಾವುದೇ ಭಾವನೆಯಿಂದಲ್ಲ ಎನ್ನುವುದೂ. ಎರಡೂ ಕ್ರಿಯೆ ಅವಳ ಸ್ವತಂತ್ರ ಮನೋಭಾವವನ್ನು ತೋರಿಸುವಾಗಲೂ ಅದಕ್ಕೆ ಕಾರಣವಾದದ್ದು ಕೇವಲ ಆಧುನಿಕ ವಿದ್ಯಾಭ್ಯಾಸವೋ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗವೋ, ಬದುಕುತ್ತಿರುವ ಅಮೆರಿಕವೋ ಅಲ್ಲವೆನ್ನುವುದನ್ನು ನಾವು ಗಮನಿಸಬೇಕು. ಆಳದಲ್ಲಿ ರಶ್ಮಿ ಸನಾತನಿಯೆ? ಕಷ್ಟಪಟ್ಟು ಮುಚ್ಚುತ್ತಿದ್ದ ಕಣ್ಣುಗಳನ್ನು ತೆರೆದು ಕಾರಿನ ಕನ್ನಡಿಯಲ್ಲಿ ಮತ್ತೆ ನೋಡುವ ರಶ್ಮಿಗೆ ಅಲ್ಲಿ ತನ್ನ ಇಡೀ ಬದುಕಿನ ಆದ್ಯತೆಗಳೆಲ್ಲವೂ ಕಾಣುತ್ತ ಹೋಗುವುದು ಈ ನಿಟ್ಟಿನಲ್ಲಿ ಕುತೂಹಲಕರ. (ಪುಟ ೧೮೦-೧೮೧). ಆದರೆ ಇಲ್ಲೂ ಬರುವ ಹೈಸ್ಕೂಲಿನ ವಾರ್ಷಿಕ ಸ್ಪರ್ಧೆಯ ವಿವರ ಸಂದರ್ಭಕ್ಕೆ ಹೊಂದದಂತೆ, ತುರುಕಿದಂತೆ ಕಾಣುತ್ತದೆ. ಈಗ ಎರಡನೆಯ ಅಂಶಕ್ಕೆ ಬರಬಹುದು. ಅದೊಂದು ಫೋಟೋಗೆ ಸಂಬಂಧಿಸಿದಂತೆ ಬಿಚ್ಚಿಕೊಳ್ಳುವ ನೆನಪುಗಳಲ್ಲಿ ಇದೆ. ಮಂಡಿ ಮುಚ್ಚುವ ಸ್ಕರ್ಟ್ ಹಾಕಿ ಕುಂಟೇಬಿಲ್ಲೆ ಆಡುತ್ತಿದ್ದಾಗ ಶಿವೂಮಾಮ ತೆಗೆದ ಫೋಟೋ ಅದು. ಸುಮಾರು ಹನ್ನೆರಡರ ವಯಸ್ಸಿನಲ್ಲಿ.
"ಮೊದಲನೆಯ ಮನೆಯಿಂದ ನಾಲ್ಕನೆಯ ಮನೆಗೆ ಹಾರುತ್ತಿದ್ದಾಳೆ, ರಶ್ಮಿ. ಕಾಲುಗಳೆರಡೂ ನೆಲದ ಮೇಲಿಲ್ಲ. ಎರಡೂ ಗಾಳಿಯಲ್ಲಿ ಮಡಿಸಿಕೊಂಡಿವೆ. ಲಂಗ ಒಂದು ಚೂರೇ ತೊಡೆಯ ಮೇಲೆ ಹಾರಿದೆ. ಅದೂ ಹಾರದಿರಲಿ ಎಂದು ಅದನ್ನು ಕೈಯಲ್ಲಿ ಎರಡೂ ಮಂಡಿಗಳ ಬಳಿ ಹಿಡಿದು ಮುಂದಿನ ಮನೆಯನ್ನು ನೋಡಿ ನಗುತ್ತಿದ್ದಾಳೆ. ಎರಡೂ ಜಡೆಗಳೂ ಮೇಲೆ ಹಾರಿವೆ. ಬೆನ್ನು ಒಮ್ಚೂರು ಬಾಗಿದೆ. ಮುಖದಲ್ಲಿ ಮುಂದಿನ ಮನೆಗೆ ಹಾರುವೆನೋ ಇಲ್ಲವೋ ಎನ್ನುವ ಕಾತರ, ಖುಷಿ, ಆತಂಕ... ಎಲ್ಲವೂ ಇತ್ತು. ಆ ಚಿತ್ರದ ಹಿಂದೆ ದ ಬ್ಯೂಟಿ ಎಂದು ಒಂಕೊಂಕಿಯಾದ ಅಕ್ಷರಗಳಲ್ಲಿ ಬರೆದಿತ್ತು." (ಪುಟ ೧೯೩).
ಶಿವೂಮಾಮ ತೆಗೆದ ಕೆಲವು ಬೆತ್ತಲೆ ಚಿತ್ರಗಳನ್ನೂ ಕಂಡಿದ್ದ ಶ್ರೀಧರ ವಿಚಿತ್ರವಾಗಿ ಸಿಡಿಯುತ್ತಾನೆ, ಶಿವೂಮಾಮನಿಗೆ ಇನ್ನು ಮುಂದೆ ಬರಬೇಡಿ ಎನ್ನುವಂತೆ ನಿಮ್ಮ ಸಹವಾಸವೇ ಸಾಕು ಎಂದು ಬೈದು ಬಿಡುತ್ತಾನೆ. ಎಷ್ಟೋ ವರ್ಷಗಳ ಮೇಲೆ, ರಶ್ಮಿಯ ರೂಮಿನಲ್ಲಿ ಶ್ರೀಧರ ಅದೇ ಫೋಟೋವನ್ನು ಕಂಡು, ಚಿತ್ರವನ್ನು ಫ್ರೇಮಿನಿಂದ ತೆಗೆದು ಹಿಂಬದಿ ನೋಡುತ್ತಾನೆ. ಅಲ್ಲಿ ದ ಬ್ಯೂಟಿ ಎಂದಿದ್ದ ಕಡೆ ದ ಲೀಪ್ ಎಂದಿರುತ್ತದೆ. ಕೆಳಗೆ ರಶ್ಮಿ 'ಪುಟ್ಟ ತಮ್ಮ ನನಗಾಗಿ ಕೈಯೆತ್ತಿದಾಗ' ಎಂದೂ ಬರೆದಿರುತ್ತಾಳೆ. ಇದರಲ್ಲಿರುವ ವೈರುಧ್ಯವನ್ನು ಗಮನಿಸಿ. ಒಂದು ದ ಲೀಪ್, ರಶ್ಮಿಯ ಬದುಕೇ ಒಂದು ಲೀಪ್ ಆಗಿತ್ತು ಎನ್ನುವುದನ್ನು ಕಂಡ ಬಳಿಕ ಬರುವ ಸನ್ನಿವೇಶ ಇದು. ಅಲ್ಲೇ ಕೆಳಗೆ, ಪುಟ್ಟ ತಮ್ಮ ನನಗಾಗಿ ಕೈಯೆತ್ತಿದಾಗ ಎಂಬ ಬರಹ ಏನೆಲ್ಲವನ್ನು ಹೇಳುತ್ತದೆ! ಕೈಯೆತ್ತಿದ್ದು ತಂಗಿಯ ಮೇಲಿನ ಪ್ರೀತಿಯಿಂದ. ಅದು ರಶ್ಮಿಗೂ ಗೊತ್ತು. ಆದರೆ ಅದೇ ರಶ್ಮಿಯ ಲೀಪ್ ಕೂಡ ಆಗಿದ್ದಿರಬಹುದಾದ ಒಂದು ಸಾಧ್ಯತೆ ತಮ್ಮನಿಗೆ ಪ್ರೀತಿಯಿಂದಾಗಿಯೇ ಹೊಳೆಯದೇ ಹೋಗುವುದನ್ನು ಇದು ಸೂಚಿಸುವುದರೊಂದಿಗೇ ಈ ಪ್ರೀತಿಯೇ ಯಾವುದೋ ಒಂದು ಘಟ್ಟದಲ್ಲಿ ತಮ್ಮ ನಡುವಿನ ಬಿರುಕು ಕೂಡ ಆಗಿಬಿಟ್ಟಿರುವುದನ್ನು ಎಷ್ಟು ಧ್ವನಿಪೂರ್ಣವಾಗಿ ಇದು ಹೇಳುತ್ತಿದೆ!
ಕಾದಂಬರಿಯ ಕೊನೆಯಲ್ಲಿ ಇಡೀ ಕಥಾನಕಕ್ಕೇ ವಿಶಿಷ್ಟವಾದ ಒಂದು ಹೊಳಪನ್ನು, ತೇಜಸ್ಸನ್ನು ಕೊಡಮಾಡುವ ಒಂದು ಸಾವು ತನ್ನಲ್ಲಿ ವಿವರಿಸಲಾರದ ಅನುರಣನ ಶಕ್ತಿಯನ್ನು ಇರಿಸಿಕೊಂಡಿರುವುದು ತುಂಬ ಅಚ್ಚರಿ ಹುಟ್ಟಿಸುತ್ತದೆ. ಈ ಕೊಲೆಯನ್ನೇ ಎದುರಿಟ್ಟುಕೊಂಡು ಈ ಕಥಾನಕ ತೊಡಗಿದ್ದರೆ ಆಗ ಅದು ಇಷ್ಟೇ ಪರಿಣಾಮಕಾರಿಯಾಗಿರುತ್ತಿತ್ತೇ ಎಂಬುದು ಕೇವಲ ಒಂದು ತಾಂತ್ರಿಕ ಸಾಧ್ಯತೆಯ ಪ್ರಶ್ನೆಯಾಗಿ ಕೇಳುತ್ತಿಲ್ಲ, ಯಾಕೆಂದರೆ, ಈ ಸಾವು ಕೇವಲ ಈ ಕಥಾನಕದ ತಾಂತ್ರಿಕ ಅಂಶವಾಗಿ ಉಳಿದೇ ಇಲ್ಲ ಎಂಬುದೂ ಇಲ್ಲಿ ಬಹಳ ಮುಖ್ಯ. ವೈಯಕ್ತಿಕ ನೆಲೆಯಲ್ಲಿ ಈ ಸಾವು ಕಾಡುವ ಪಾತಳಿ ಯಾವುದೇ ಇರಲಿ, ಸಾಮಾಜಿಕ ನೆಲೆಯಲ್ಲೂ ಅದು ನಮ್ಮನ್ನು ಕಲಕದೇ ಇರಲಾರದ್ದಾಗಿಬಿಟ್ಟಿದೆ, ಆಗಲೇ. ಅದು ಇನ್ನಷ್ಟೇ ಪ್ರಕಟವಾಗಲಿರುವ ಕವನಗಳಿಂದ, ರೊಜಾಕ್ ಬಗ್ಗೆ ಲಿಟ್ಜರ್ ಕಂಪೆನಿಯ ವಿರುದ್ಧ ಶ್ರೀಧರನೂ ಘೂಗೆಯೂ ಬರೆದ ಹೊಸ ಲೇಖನದಿಂದ, ಮನುಷ್ಯ ಸಂಬಂಧಗಳನ್ನು ಹೊಸ ಅರ್ಥಬಂಧದಲ್ಲಿ ಕೂರಿಸಬಲ್ಲ ಸಾವಿನಿಂದ ಕೂಡ ಈ ಸಾವು ಇಲ್ಲಿನ ಎಲ್ಲ ವಿಲಕ್ಷಣ ವಿದ್ಯಮಾನಗಳನ್ನು ಒಂದು ಹೊಸ ಸಂಯೋಜನೆಗೆ ಒಳಪಡಿಸುವ ಹೊಣೆ ಹೊತ್ತಂತೆ ಕಂಡುಬರುತ್ತದೆ. ಇಲ್ಲಿ ಶ್ರೀಧರ ಒಬ್ಬ "ಪ್ರಾಣಪಾಲಕ". ಇದನ್ನು ಈ ಸಾವಿನ ಹಿನ್ನೆಲೆಯಲ್ಲಿ ನೋಡಬಹುದು. ಅಮೆರಿಕನ್ ಪ್ರಾಣಪಾಲಕಿಯ ಪ್ರಕಾರ ಶ್ರೀಧರ ಅಮೆರಿಕದಲ್ಲಿ ಕಲಿಯಬೇಕಾಗಿರುವುದಾದರೂ ಏನನ್ನು? ವ್ಯವಹಾರಸ್ಥನ ನಾಜೂಕು ಮತ್ತು ಸ್ಥಿತಪ್ರಜ್ಞತ್ವ. ಇಲ್ಲಿಯೇ ಶ್ರೀಧರನ ಲೀಪ್ ಇರುವುದು ಮತ್ತು ಅವನು ನಿಜವಾಗಿ ಕೈಯೆತ್ತ ಬೇಕಾಗಿದ್ದಲ್ಲಿ ಸೋಲುವುದು ನಮ್ಮನ್ನು ತಟ್ಟುತ್ತದೆ.
ಕಾಗಿನೆಲೆಯವರು ತಮ್ಮ ಕಾದಂಬರಿಯಲ್ಲಿ ಇಂಗ್ಲೀಷ್‌ಗೆ ಪರ್ಯಾಯವಾಗಿ ಕೆಲವು ಹೊಸ ಕನ್ನಡ ಶಬ್ದಗಳನ್ನು ಬಳಸಿದ್ದಾರೆ. ಹಾಗೆ ಮಾಡಿರುವುದಕ್ಕೆ ತಮಗಿರುವ ನಿರ್ದಿಷ್ಟ ಉದ್ದೇಶಗಳ ಕುರಿತೂ ಹೇಳಿದ್ದಾರೆ. ಹಾಗೆಯೇ ತಮ್ಮ ಮುನ್ನುಡಿಯಲ್ಲಿ ಅನಂತಮೂರ್ತಿಯವರು ಕಾದಂಬರಿಯ ಉಜ್ವಲ ಅಂಶಗಳತ್ತ ಗಮನ ಸೆಳೆಯುತ್ತಲೇ ಈ ಭಾಷಾಪ್ರಯೋಗದ ಪರಿಣಾಮದ ಕುರಿತೂ ಬರೆದಿದ್ದಾರೆ. ಕಾಗಿನೆಲೆಯವರು ಬಿಡುಗಡೆಗೂ ಪಲಾಯನಕ್ಕೂ ವ್ಯತ್ಯಾಸ ಅರಿಯದ, ಸಾವಧಾನದಿಂದ ಏರುವುದನ್ನು ಬಿಟ್ಟು ಹಾರಲೆಳಸುವ ಪೀಳಿಗೆಯ ಪ್ರಯತ್ನಗಳನ್ನು ದಾಖಲಿಸುವುದು ಮಾತ್ರ ತಮ್ಮ ಉದ್ದೇಶ ಎಂದು ಹೇಳಿಕೊಂಡಿದ್ದರೂ ಈ ಕಥಾನಕ ಅದಕ್ಕಿಂತ ಹೆಚ್ಚಿನದನ್ನು ಕುರಿತು ಹೇಳುತ್ತಿದೆ ಅನಿಸದಿರದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ