Tuesday, October 30, 2007

ವಿವೇಕ್ ಶಾನಭಾಗ್ ಸಂದರ್ಶನ


ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ ಸ್ಥೂಲ ಪರಿಚಯ "ದೇಶಕಾಲಕ್ಕೆ ಮೂರುವರ್ಷ" ಎಂಬ ಲೇಖನದಲ್ಲಿ ಲಭ್ಯವಿದೆ.


ಬರಹಗಾರ ಮತ್ತು ದೇಶಕಾಲದ ಸಂಪಾದಕ ವಿವೇಕ್ ಶಾನಭಾಗ್ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ ಮತ್ತು ತನ್ನ ಪತ್ರಿಕೆ ಹೇಗೆ ತನ್ನದೇ ಆದ ಒಂದು ಸ್ಥಾನ ಕಲ್ಪಿಸಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ್ದಾರೆ:


ಪ್ರಶ್ನೆ: ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪತ್ರಿಕೆಗಳ ಒಂದು ಒಟ್ಟಾರೆ ಚಿತ್ರಣವನ್ನು ನಮ್ಮ ಓದುಗರಿಗೆ ನೀಡಬಹುದೆ?
ಸಾಹಿತ್ಯಿಕ ಪತ್ರಿಕೆಗಳ ಒಂದು ದೊಡ್ಡ ಪರಂಪರೆಯೇ ಕನ್ನಡಕ್ಕಿದೆ. ಮಾಸ್ತಿ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ ಮತ್ತು ಇನ್ನೂ ಹಲವು ಪ್ರಮುಖ ಬರಹಗಾರರು ಸಾಹಿತ್ಯಿಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಹೆಚ್ಚಿನವು ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ ಹೊಸ ಬರಹಗಾರರನ್ನು ಉತ್ತೇಜಿಸುವ ಮೂಲ ಉದ್ದೇಶವನ್ನು ಅವು ಈಡೇರಿಸಿವೆ. ನಮ್ಮ ಹೆಚ್ಚಿನ ಹೆಚ್ಚಿನ ಸಾಹಿತ್ಯಿಕ ಬೆಳವಣಿಗೆಗಳು, ಬದಲಾವಣೆಗಳು ಈ ವಲಯದಿಂದ ಸ್ಪೂರ್ತಿ ಪಡೆದಿವೆ.
ಇವತ್ತು ಕನ್ನಡದಲ್ಲಿ ಹಲವು ಸಾಹಿತ್ಯಿಕ ಪತ್ರಿಕೆಗಳು ಕ್ರಿಯಾಶೀಲವಾಗಿವೆ. ಉದಾಹರಣೆಗೆ ಸಂಚಯ, ಸಂಕಲನ, ಅಭಿನವ, ಸಂಕ್ರಮಣ, ಸಂವಾದ, ದೇಶಕಾಲ, ಗಾಂಧಿಬಜಾರ್ ಮತ್ತಿನ್ನೂ ಕೆಲವು. ಇವು ಗಂಭೀರವಾದ ಸಾಹಿತ್ಯಿಕ ಚರ್ಚೆಗೆ ಲಭ್ಯವಿರುವ ಒಂದೇ ಒಂದು ವೇದಿಕೆಯಾಗಿವೆ. ಉದಾಹರಣೆಗೆ ಜನಪ್ರಿಯ ವಾಣಿಜ್ಯೋದ್ದೇಶದ ಪತ್ರಿಕೆಗಳು ಮತ್ತು ಭಾನುವಾರದ ಪುರವಣಿಗಳು ಪುಸ್ತಕ ವಿಮರ್ಶೆಗೆ ಕೆಲವೇ ಇಂಚುಗಳ ಸ್ಥಳಾವಕಾಶ ನೀಡುತ್ತವೆ. ಅಲ್ಲದೆ ಇಲ್ಲಿನ ಅವಲೋಕನದ ಮಟ್ಟವೂ ತೀರ ಸಾಧಾರಣ. ಹಾಗಾಗಿ ಸಾಹಿತ್ಯ ವಿಮರ್ಶೆ ಮತ್ತು ಪೂರ್ಣಮಟ್ಟದ ಅವಲೋಕನಗಳು ಸಾಹಿತ್ಯಿಕ ಪತ್ರಿಕೆಗಳಲ್ಲಷ್ಟೇ ಅವಕಾಶ ಪಡೆಯುತ್ತವೆ. ಸುದೀರ್ಘ ಸಂದರ್ಶನಗಳು ಮತ್ತು ಕವನಗಳ ವಿಷಯದಲ್ಲೂ ಇದು ನಿಜ.
ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ಲಾಭೋದ್ದೇಶದ ವಾರಪತ್ರಿಕೆಗಳೂ, ಮಾಸ ಪತ್ರಿಕೆಗಳೂ ಇವೆ ಎನ್ನುವುದನ್ನು ಹೇಳಲೇ ಬೇಕು. ಇವುಗಳಲ್ಲಿ ಎಲ್ಲಾ ಬಗೆಯ ಕತೆ-ಕವನ-ಕಾದಂಬರಿಗಳಿಗೆ ಭಾರೀ ಪ್ರಮಾಣದ ಬೇಡಿಕೆಯಿದೆ. ಹಾಗಾಗಿ ಸಾಹಿತ್ಯಿಕ ಪತ್ರಿಕೆಗಳು ನೀಡುವ ಕತೆ-ಕವನಗಳಿಗೂ ಈ ಪತ್ರಿಕೆಗಳು ನೀಡುವ ಕತೆ ಕವನಗಳಿಗೂ ಅಂಥ ವ್ಯತ್ಯಾಸವಿಲ್ಲದಿದ್ದರೂ ಸಾಹಿತ್ಯಿಕ ಪತ್ರಿಕೆಗಳು ಒದಗಿಸುತ್ತಿರುವುದನ್ನು ಇವು ಸರಿಗಟ್ಟಲಾರವು. ಕನ್ನಡದ ಬರಹಗಾರರು ಮತ್ತು ಓದುಗರು ಸಾಹಿತ್ಯಿಕ ಪತ್ರಿಕೆಗಳು ನೀಡುತ್ತಿರುವುದೇನನ್ನು, ಜನಪ್ರಿಯ ಪತ್ರಿಕೆಗಳು ನೀಡುತ್ತಿರುವುದೇನನ್ನು ಎನ್ನುವ ವ್ಯತ್ಯಾಸವನ್ನು ಅರಿಯಬಲ್ಲವರು ಎಂದು ನಂಬಿದ್ದೇನೆ. ಈ ಅರಿವು, ಪ್ರಜ್ಞೆ ಯಾವುದೇ ಸಾಹಿತ್ಯಿಕ ವಾತಾವರಣಕ್ಕೆ ತೀರಾ ಅನಿವಾರ್ಯ ಅಗತ್ಯ. ಯಾಕೆಂದರೆ ಇದುವೇ ಸಾಹಿತ್ಯಿಕ ಪತ್ರಿಕೆಗಳಿಗೆ ಬೇಕಾದ ವಿಶಿಷ್ಟವಾದ ಉತ್ತೇಜನ, ಪ್ರೋತ್ಸಾಹ ಮತ್ತು ಒಂದು ಅವಕಾಶವನ್ನು ಸೃಷ್ಟಿಸುವಂಥದ್ದು. ಅವುಗಳ ಎಲ್ಲ ಪ್ರಯೋಗಶೀಲತೆ, ಸಂವಾದ ಇದನ್ನೇ ನೆಚ್ಚಿಕೊಂಡಿದೆ.
ಪ್ರಶ್ನೆ: ತಮಿಳುನಾಡಿನಲ್ಲಿ ಪ್ರಕಾಶಕ ಎಸ್ ರಾಮಕೃಷ್ಣನ್ ಇತ್ತೀಚೆಗೆ ಸ್ವತಂತ್ರ ಅಭಿವ್ಯಕ್ತಿ ಮತ್ತು ಬರವಣಿಗೆಯನ್ನು ಉತ್ತೇಜಿಸುವ, ಕೇವಲ ವ್ಯಾಪಾರೀ ಉದ್ದೇಶಗಳಿಗೆ ಹೊರತಾದ ಪ್ರಕಟನೆಗಳು- ಸಣ್ಣಪತ್ರಿಕೆಗಳು ಎಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು- ಬಹುತೇಕ ಕಣ್ಮರೆಯಾಗಿವೆ ಎಂಬ ಬಗ್ಗೆ ಗಮನಸೆಳೆದಿದ್ದರು. ಕರ್ನಾಟಕದಲ್ಲಿ ಹೇಗೆ?
ಸಂಕ್ರಮಣ, ಕನ್ನಡದ ಒಂದು ಸಾಹಿತ್ಯಿಕ ಪತ್ರಿಕೆ, ಕಳೆದ ನಲವತ್ತು ವರ್ಷಗಳಿಂದ ಬರುತ್ತಿದೆ. ಹಾಗೆಯೇ ಸಂವಾದ, ಗಾಂಧಿಬಜಾರ್ ಮತ್ತು ಸಂಚಯ ಎರಡು ದಶಕಗಳಿಗೂ ಮೀರಿ ಕ್ರಿಯಾಶೀಲವಾಗಿವೆ. ಈ ಯಾವ ಪತ್ರಿಕೆಗಳೂ ವ್ಯಾಪಾರೀ ಮನೋಧರ್ಮಕ್ಕೆ ಒಳಗಾಗಿಲ್ಲ. ಇನ್ನೂ ಬಹಳಷ್ಟು ಹೊಸ ಪತ್ರಿಕೆಗಳೂ ಇವೆ. ಕನ್ನಡದಲ್ಲಂತೂ ಸಣ್ಣ ಪತ್ರಿಕೆಗಳ ಕಾಲವೇ ಮುಗಿದು ಹೋಗಿದೆ ಎಂದು ಭಾವಿಸಲು ಯಾವುದೇ ಕಾರಣಗಳಿಲ್ಲ ಅನಿಸುತ್ತದೆ. ಸಾಹಿತ್ಯಿಕ ಪತ್ರಿಕೆಗಳ ಯಶಸ್ಸನ್ನು ಆ ಪತ್ರಿಕೆಗಳ ಪ್ರಭಾವವಲಯದ ಮೂಲಕ ಅಳೆಯಬೇಕೇ ಹೊರತು ಅದರ ಪ್ರಸಾರ ಸಂಖ್ಯೆಯಿಂದಲ್ಲ. ಹಾಗಾಗಿ ವಾಣಿಜ್ಯಿಕ ಅಂಶಗಳು ಯಾವತ್ತೂ ಇಂಥ ಪ್ರಕಟನೆಗಳಿಗೆ ಮುಖ್ಯವಾಗಿಲ್ಲ.
ಪ್ರಶ್ನೆ: ದೇಶಕಾಲದ ಕುರಿತು ನಿಮ್ಮ ಪರಿಕಲ್ಪನೆ ಏನು? ಅದು ಹೇಗೆ ಇತರ ಸಾಂಸ್ಕೃತಿಕ ಪತ್ರಿಕೆಗಳಿಂದ ಭಿನ್ನವಾಗಿದೆ?
ದೇಶಕಾಲ ಸಾಹಿತ್ಯ ಕೇಂದ್ರಿತ. ಪತ್ರಿಕೆಯ ಚಾಲನಶಕ್ತಿ ಅದೇ. ನಾವು ಒಪ್ಪುತ್ತೇವೋ ಇಲ್ಲವೋ, ಇವತ್ತಿನ ಕನ್ನಡ ಸಂವೇದನೆಗಳು ಕನ್ನಡ ಜಗತ್ತಿನ ಎಲ್ಲೆಕಟ್ಟುಗಳನ್ನು ಮೀರಿ ಹೊರಗಿನ ಹಲವಾರು ಅಂಶಗಳಿಂದ ರೂಪುಗೊಳ್ಳುತ್ತ ಇರುವುದಂತೂ ಸತ್ಯ. ಈ ಅಂಶವನ್ನು ನಾವು ಗುರುತಿಸಬೇಕಿದೆ ಮತ್ತು ಅದಕ್ಕೆ ಸ್ಪಂದಿಸಬೇಕಾಗಿದೆ. ಅದು ಇಂಗ್ಲೀಷ್ ಸಾಹಿತ್ಯವಿರಬಹುದು, ಜಾಗತೀಕರಣವಿರಬಹುದು ಅಥವಾ ಆಧುನಿಕೋತ್ತರ ನಿರೀಕ್ಷೆಗಳಿರಬಹುದು, ನಮಗೆ ಆಯ್ಕೆಗಳೇ ಇಲ್ಲ, ನಾವಿದನ್ನು ನಿಭಾಯಿಸಲೇ ಬೇಕಿದೆ. ಹಾಗೆಯೇ ಕಲೆಯ ಜಗತ್ತಿನಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ಇವೆಲ್ಲವೂ ಸೇರಿ ನಿಶ್ಚಯವಾಗಿಯೂ ಕನ್ನಡ ಬರವಣಿಗೆಯಲ್ಲಿ ಹೊಸತನ್ನು ಉದ್ದೀಪಿಸುತ್ತಿದೆ.
ದೇಶಕಾಲದ ಪ್ರತೀ ಸಂಚಿಕಯಲ್ಲೂ ನೇರ ಅನುವಾದದ ಮೂಲಕ ಬೇರೊಂದು ಭಾರತೀಯ ಭಾಷೆಯ ಲೇಖಕನನ್ನು ಪರಿಚಯಿಸಲಾಗುತ್ತಿದೆ. ಬೇರೆ ಬೇರೆ ಭಾಷೆಯ ಬರಹಗಾರರು ಸಮಕಾಲೀನ ವಿದ್ಯಮಾನಗಳಿಗೆ ಹೇಗೆ ಪ್ರತಿಸ್ಪಂದಿಸುತ್ತಿದ್ದಾರೆ, ಅವರ ಚಿಂತನೆಗಳೇನು ಎಂಬುದನ್ನು ತಿಳಿದುಕೊಳ್ಳಲು ಇಂಥ ಕೊಡುಕೊಳ್ಳುವಿಕೆ ತೀರಾ ಮುಖ್ಯವಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಇವತ್ತು ಬೇರೆ ಬೇರೆ ಭಾಷೆಯ ಭಾರತೀಯ ಲೇಖಕರು ಸರ್ವ ಸಮಾನವಾದ ಸಮಸ್ಯೆಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದ್ದಾರೆ. ಇದು ಅಂತರ್ಜಾಲದಿಂದ ಅಥವಾ ಜಾಗತೀಕರಣದಿಂದ ಇದ್ದಿರಬಹುದು.
ಇಂಗ್ಲೀಷಿನಲ್ಲಿ ಈಗಾಗಲೇ ಪ್ರಕಟವಾದ ಲೇಖನದ ಅನುವಾದ ದೇಶಕಾಲದಲ್ಲಿ ಸಿಗುವುದಿಲ್ಲ. ಆಧುನಿಕೋತ್ತರವಾದ ಮತ್ತು ಇಸ್ಲಾಂ ಕುರಿತ ಜಿಯಾವುದ್ದೀನ್ ಸರದಾರ್ ಅವರ ಒಂದೇ ಒಂದು ಲೇಖನ ಇದಕ್ಕಿರುವ ಅಪವಾದ. ಇದರರ್ಥ ನಾವು ಅನುವಾದಗಳನ್ನೇ ಹೊಂದಿಲ್ಲ ಅಂತೇನೂ ಅಲ್ಲ. ಬೇರಾವುದೇ ಕನ್ನಡ ಪತ್ರಿಕೆಗಳಂತಲ್ಲದೆ ನಾವು ಶಿವ ವಿಶ್ವನಾಥನ್, ಜೆರೆಮಿ ಸೀಬ್ರೂಕ್, ಡೇನಿಯಲ್ ಅಮಿಟ್, ಸುಂದರ್ ಸಾರುಕ್ಕೈ, ರೊದ್ದಂ ನರಸಿಂಹ, ಫ್ರಿಟ್ಸ್ ಸ್ಟಾಲ್, ಜಾನ್ ಪೆರಿ ಮತ್ತಿತರ ಇಂಥ ಬರಹಗಾರರಿಂದ ದೇಶಕಾಲಕ್ಕಾಗಿಯೇ ಬರೆಯಿಸಿದ್ದೇವೆ ಮತ್ತು ಇವರ ಈ ಬರಹಗಳು ಮೊಟ್ಟಮೊದಲು ಕನ್ನಡ ಅನುವಾದದಲ್ಲಿ ದೇಶಕಾಲದಲ್ಲಿ ಪ್ರಕಟವಾಗಿವೆ.
ಬೇರೆ ಬೇರೆ ವಿಚಾರಗಳ ಕುರಿತ ಸಂಕಿರಣ ಮಾದರಿಯ ಚರ್ಚೆ - ಸಂವಾದವನ್ನು ಪ್ರತಿ ಸಂಚಿಕೆಯಲ್ಲೂ ಪ್ರಕಟಿಸಿದ್ದೇವೆ. ಆಯಾ ರಂಗದಲ್ಲಿ ನುರಿತವರು, ಅನುಭವಿಗಳು, ಬರಹಗಾರರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ ಕಳೆದ ಸಂಚಿಕೆಯಲ್ಲಿ ನಾವು ಕರ್ನಾಟಕದಲ್ಲಿ ಪುಸ್ತಕ ಪ್ರಕಟನೆಯ ಕುರಿತು ತಳಸ್ಪರ್ಶಿ ಚರ್ಚೆಯನ್ನು ಸಂಯೋಜಿಸಿದ್ದೆವು.
ದೇಶಕಾಲವನ್ನು ವೃತ್ತಿಪರ ಕಲಾವಿದ ಚನ್ನಕೇಶವ ವಿನ್ಯಾಸಗೊಳಿಸುತ್ತಾರೆ ಮತ್ತು ಇಂದಿನ ತನಕ ಪ್ರತೀ ಸಂಚಿಕೆಯನ್ನೂ ಸಮಯಕ್ಕೆ ಸರಿಯಾಗಿ ಕೊಟ್ಟಿದ್ದೇವೆ. ಇದನ್ನು ಒತ್ತಿ ಹೇಳುತ್ತಿದ್ದೇನೆ ಯಾಕೆಂದರೆ ಸಣ್ಣ ಪತ್ರಿಕೆಗಳು ನಿಯಮಿತವಾಗಿ ನಿಯತಕಾಲಕ್ಕೆ ಸರಿಯಾಗಿ ಪ್ರಕಟವಾಗುವುದಿಲ್ಲ ಎಂಬ ಅಪಖ್ಯಾತಿಗೆ ತುತ್ತಾಗಿವೆ.
ಪ್ರಶ್ನೆ: ವಿತರಣೆ ಮತ್ತು ಪ್ರಸಾರದಂಥ ರಂಗಗಳಲ್ಲಿ ಕರ್ನಾಟಕದ ಸಣ್ಣ ಪತ್ರಿಕೆಗಳೆಲ್ಲ ಸೇರಿ ಯಾವುದಾದರೂ ನಿರ್ವಹಣಾಜಾಲವೊಂದನ್ನು ರೂಪಿಸಿಕೊಂಡಿವೆಯೆ? ಆರ್ಥಿಕ ಅಥವಾ ಬೇರಾವುದೇ ಬಗೆಯ ಹೊರಗಿನ ಬೆಂಬಲ ಇಂಥ ಪತ್ರಿಕೆಗಳಿಗೆ ಸಹಾಯಕವಾಗಬಹುದಾದ ಮಾರ್ಗಗಳು ಇವೆಯೆ?
ಅಂಥ ಯಾವುದೇ ಜಾಲ ಸಣ್ಣಪತ್ರಿಕೆಗಳಲ್ಲಿ ಇಲ್ಲ. ಆದರೆ ಅವು ಪರಸ್ಪರ ಪೂರವಾಗಿರುವಂಥವು, ಸ್ಪರ್ಧಾತ್ಮಕವಾಗಿ ಅಲ್ಲ ಎನ್ನುವ ಅರಿವಿನೊಂದಿಗೇ ಕೆಲಸ ಮಾಡುತ್ತಿವೆ. ಪರಸ್ಪರ ಸಹಕಾರದ ಮಾರಾಟ ಮತ್ತು ವಿತರಣೆಯ ಜಾಲ ಖಂಡಿತವಾಗಿಯೂ ಸಣ್ಣಪತ್ರಿಕೆಗಳಿಗೇ ಯಾಕೆ, ಕನ್ನಡ ಪುಸ್ತಕ ಪ್ರಕಟಣಾ ರಂಗಕ್ಕೂ ಬಹಳ ಸಹಾಯಕವಾಗುತ್ತದೆ.
ಹೆಚ್ಚಿನೆಲ್ಲಾ ಸಣ್ಣಪತ್ರಿಕೆಗಳು ವಾರ್ಷಿಕ ಚಂದಾ ಮೂಲಕ ವಿತರಿಸಲ್ಪಡುವುದರಿಂದ ಹಾಗೆ ಚಂದಾ ಒಗ್ಗೂಡಿಸಬಲ್ಲ, ಯಾವುದೇ ಬಗೆಯ ಒಂದು ಸುವ್ಯವಸ್ಥಿತ ಸೌಕರ್ಯ ನಿರ್ಮಿಸಿದರೆ ನಿಜಕ್ಕೂ ಅದರಿಂದ ಭಾರೀ ಸಹಾಯವಾಗುತ್ತದೆ. ಉದಾಹರಣೆಗೆ ಎಲ್ಲಾ ಸಣ್ಣಪತ್ರಿಕೆಗಳಿಗೂ ಏಕಕಿಂಡಿಯ ಚಂದಾ ಪಾವತಿ, ನವೀಕರಣ ಸವಲತ್ತು ಇರುವ ಒಂದು ವೆಬ್‌ಸೈಟ್ ಇದ್ದರೆ ಒಳ್ಳೆಯದು.
ಖಂಡಿತವಾಗಿಯೂ ಸೀಮಿತ ಪ್ರಸಾರದೊಂದಿಗೂ ಕನ್ನಡದಲ್ಲಿ ಒಂದು ಸಣ್ಣಪತ್ರಿಕೆಯನ್ನು ಆರ್ಥಿಕ ನಷ್ಟವಿಲ್ಲದೆಯೇ ನಿರ್ವಹಿಸಲು ಸಾಧ್ಯವಿದೆ ಎಂಬುದು ನನ್ನ ನಂಬಿಕೆ. ಆದರೆ ಹೀಗೆ ಒಂದು ಪತ್ರಿಕೆಯನ್ನು ನಡೆಸಲು ಭಾರೀ ಬದ್ಧತೆಯಿರಬೇಕಾಗುತ್ತದೆ. ಸಂಪಾದಕ ಮತ್ತು ಆತನ ಬಳಗ ತಮ್ಮ ಖಾಸಗಿ ವೇಳೆಯನ್ನು ಇದಕ್ಕೆಲ್ಲ ವಿನಿಯೋಗಿಸಲು ಸಿದ್ಧವಾಗಿರಬೇಕಾಗುತ್ತದೆ. ದೀರ್ಘಕಾಲ ಇಂಥ ಬದ್ಧತೆ ಮತ್ತು ತ್ಯಾಗವನ್ನು ಉಳಿಸಿಕೊಂಡು ಬರುವುದು ಕಷ್ಟ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, October 23, 2007

'ದೇಶ ಕಾಲ'ಕ್ಕೆ ಮೂರು ವರ್ಷ

ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಓದುಗರ ಕೈಗಿಡುವ ಕೆಲಸ ಸುಲಭವಲ್ಲದ್ದು. ಆದರೆ ವಿವೇಕ್ ಈ ಬಗ್ಗೆ ಮಾತನಾಡಿದ್ದೇ ಇಲ್ಲವೆನ್ನಬಹುದು. ತಮ್ಮಷ್ಟಕ್ಕೆ ಕೆಲಸ ಮಾಡುತ್ತ ಹೋಗುವುದು ಅವರ ಗುಣ.

ದೇಶಕಾಲ ಸುರುವಾದಾಗ ಕನ್ನಡದ ಉತ್ತಮ ಕತೆಗಾರ ಎಂ.ಎಸ್.ಶ್ರೀರಾಮ್ ತಮ್ಮ ಬ್ಲಾಗ್ ಕನ್ನಡವೇ ನಿತ್ಯದಲ್ಲಿ ಕನ್ನಡದ ಸಣ್ಣಪತ್ರಿಕೆಗಳ ಬಗ್ಗೆ ಬರೆದಿದ್ದರು. ಮಯೂರ(ಜೂನ್ ೨೦೦೬)ದಲ್ಲಿ ಕೂಡ ಅಂತಹುದೇ ಒಂದು ಲೇಖನವನ್ನು ಸಂಪಾದಕ ಜಿ.ಪಿ.ಬಸವರಾಜು ಬರೆದಿದ್ದರು. ಆದರೆ ಈಗ ಬರುತ್ತಿರುವ ಸಂಚಯ, ಸಂಕಲನ, ಸಂಕ್ರಮಣ, ಮಾತುಕತೆ, ಅಭಿನವ, ಕನ್ನಡ ಅಧ್ಯಯನ, ಗಾಂಧಿ ಬಜಾರ್ ಮುಂತಾದ ಇನ್ನೂ ಅನೇಕ ಸಣ್ಣಪತ್ರಿಕೆಗಳ ಕಾಣ್ಕೆ, ಸಮಸ್ಯೆಗಳ ಬಗ್ಗೆ ಹೇಳುವವರಿಲ್ಲ. ಆಸಕ್ತರಿಗೆ ಸರಿಯಾದ ಮಾಹಿತಿ ಕೂಡ ನೀಡುವವರಿಲ್ಲ. ಅವು ನಿಂತು ಹೋದರೆ, ಪುನರಾರಂಭಗೊಂಡರೆ ಸ್ವತಃ ಚಂದಾದಾರರಿಗೂ ತಿಳಿಯುವುದಿಲ್ಲ! ಯಾಕೆಂದರೆ, ಜೀವಂತ ಇರುವಾಗಲೂ ಇವು ನಿಯಮಿತ ಕಾಲಕ್ಕೆ ಮುಖ ತೋರಿಸುವುದು ಸ್ವಲ್ಪ ಅನುಮಾನವೇ! ವಾರದಾಗ ಒಂದು ಸರತಿ ಬಂದು ಹೋಗಾಂವ ಎಂದು ಖಚಿತವಾಗಿ ಹೇಳುವಂತಿಲ್ಲ!

ನಮ್ಮ ನಿಯತಕಾಲಿಕೆಗಳು, ಮಾಧ್ಯಮ ಕೂಡ ಮಾರ್ಕೆಟ್ ಇಲ್ಲದ ಯಾವುದರ ಕುರಿತೂ ಮಾತನಾಡುವ ಉತ್ಸಾಹ ತೋರಿಸುವುದಿಲ್ಲ. ಜಯಂತ ಕಾಯ್ಕಿಣಿ ಮುವ್ವತ್ತು ಕಂತುಗಳಲ್ಲಿ ನಮ್ಮ ನಾಡಿನ ಧೀಮಂತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತರ ಕುರಿತು ಈ ಟಿವಿಯಲ್ಲಿ ಒಂದು ಸ್ತುತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಯನ್ನು ಆತನ ಪರಿಸರದಿಂದ, ಅವನ ಒಡನಾಡಿಗಳಿಂದ, ಅವನ ಸಾಹಿತ್ಯದಿಂದ, ಅವನ ದೈನಂದಿನ ಬದುಕಿನಿಂದ ಜಯಂತ ಕಟ್ಟುತ್ತ ಹೋದರು. ಅದು ಕನ್ನಡಕ್ಕಂತೂ ತೀರ ಹೊಸದಾಗಿತ್ತು. ಈ ಕಾರ್ಯಕ್ರಮದಿಂದ ಸಾಹಿತಿಯ ಅಸಾಹಿತ್ಯಿಕ ಮುಖವನ್ನು ಪರಿಚಯಿಸುತ್ತಲೇ ಆತನ ಸಾಹಿತ್ಯವನ್ನು ಜನಸಾಮಾನ್ಯರತ್ತ ಒಯ್ದವರು ಜಯಂತ. ಇದು ಸರಿಯಾದ ಪೋಷಣೆ, ಉತ್ತೇಜನವಿಲ್ಲದೆ ಮೂರೇ ಮಂದಿ ಮಹನೀಯರ ಮಟ್ಟಿಗೆ ನಿಂತು ಹೋಯಿತು. ಹೆಚ್ಚೆಂದರೆ ಅಲ್ಲಿನ ಅಳಿದುಳಿದ ನೆನಪುಗಳ ಕುರಿತು ಅವರಿಂದಲೇ ಬರೆಯಿಸಿ ಅಚ್ಚು ಹಾಕುವುದರಾಚೆ ಯಾವುದೇ ಪತ್ರಿಕೆ ಇದನ್ನೆಲ್ಲ ಗಮನಿಸಲಿಲ್ಲ. ಸಂಪಾದಕರುಗಳಿಗೆ ಬರೆದರೂ ಆ ಈಮೇಲುಗಳೇನಾದವೋ ಬಲ್ಲವರಿಲ್ಲ! ಸಂಪಾದಕರುಗಳಿಗೆ ಈ ಜಯಂತ, ವಿವೇಕಗಳೆಲ್ಲ ನೆನಪಾಗುವುದು ದೀಪಾವಳಿ ಸಂಚಿಕೆಗಳ ಹೊಣೆ ಬಿದ್ದಾಗಲೇ ಅನಿಸುತ್ತದೆ!

ಈಗಲೂ ವಿವೇಕರ ಸಂದರ್ಶನವನ್ನು ಕನ್ನಡದವರು ನಡೆಸದಿದ್ದರೂ ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಎನ್ನುವ ಸಂಸ್ಥೆಯ ತ್ರೈಮಾಸಿಕವೊಂದು ಪ್ರಕಟಿಸಿದೆ. (http://www.indiaifa.org/newsletter/July-Sep-2007-IFA-Newsletter.htm)ದೇಶಕಾಲದಲ್ಲಿ ಕಳೆದ ಹನ್ನೊಂದು ಸಂಚಿಕೆಗಳಲ್ಲಿ ಪ್ರಕಟವಾದ ಸಾಹಿತ್ಯ-ಸಂಸ್ಕೃತಿ ಕುರಿತ ಬರಹಗಳ ಒಂದು ಪುಟ್ಟ ಪಟ್ಟಿ ಇಲ್ಲಿದೆ:

ಕತೆಗಳು: ಅಬ್ದುಲ್ ರಶೀದ, ಎಸ್.ದಿವಾಕರ್, ಗೋಪಿನಾಥ ತಾತಾಚಾರ್, ಎಸ್. ಸುರೇಂದ್ರನಾಥ್, ವಿವೇಕ ಶಾನಭಾಗ, ಸಂದೀಪ ನಾಯಕ, ಮೊಗಳ್ಳಿ ಗಣೇಶ್, ಶ್ರೀನಿವಾಸ ವೈದ್ಯ(೨), ಯಶವಂತ ಚಿತ್ತಾಲ, ಪ್ರಹ್ಲಾದ ಅಗಸನಕಟ್ಟೆ, ಸಚ್ಚಿದಾನಂದ ಹೆಗಡೆ, ಜೋಗಿ, ಜಯಂತ ಕಾಯ್ಕಿಣಿ, ಅಶೋಕ ಹೆಗಡೆ(೨), ಸುನಂದಾ ಪ್ರಕಾಶ ಕಡಮೆ, ಸುಕನ್ಯಾ ಕನಾರಳ್ಳಿ, ಶ್ರೀಧರ ಬಳಗಾರ, ನಾಡಿಸೋಜ.

ಅನುವಾದಿತ ಕತೆಗಳು: ರ್ಯುನೊಸುಕೆ ಅಕುತಗವ(ಜಪಾನ್), ಶೆರ್‌ವುಡ್ ಆಂಡರ್‌ಸನ್(ಅಮೆರಿಕ), ಜಯಮೋಹನ್(ಮಲಯಾಳಂ), ಶಿ ತೈಷೆಂಗ್(ಚೀನಾ), ಮೀನಾ ಕಾಕೋಡಕರ್(ಕೊಂಕಣಿ), ಹೈನ್ರಿಚ್ ಬೋಲ್(ಜರ್ಮನ್), ಆಂಟನ್ ಚೆಕಾಫ್(ಉಕ್ರೇನ್), ಶಶಿ ದೇಶಪಾಂಡೆ(ಇಂಗ್ಲೀಷ್), ಹುವಾನ್ ರುಲ್ಫೊ(ಲ್ಯಾಟಿನ್ ಅಮೆರಿಕ), ಡಯೋನ್ ಬ್ರಾಂಡ್(ಟ್ರಿನಿಡಾಡ್), ಮೇಘನಾ ಪೇಠೆ(ಮರಾಠಿ), ಫ್ಲ್ಯಾನೆರಿ ಒಕೋನರ್(ಅಮೆರಿಕ), ಉದಯ ಪ್ರಕಾಶ(ಹಿಂದಿ), ಹುಲಿಯೋ ಕೊರ್ತಾಜಾರ್(ಅರ್ಜೆಂಟೀನಾ), ನಯ್ಯರ್ ಮಸೂದ್(ಉರ್ದು), ಸೊಮರ್‌ಸೆಟ್ ಮಾಮ್(ಇಂಗ್ಲೀಷ್), ಎಸ್.ವೇಣುಗೋಪಾಲ್(ತಮಿಳು), ಕೆಂಜಬುರೊ ಒಎ(ಜಪಾನ್).

ಸಮಯ ಪರೀಕ್ಷೆ:(ಸಂಕಿರಣ ಮಾದರಿಯ ಪ್ರಬಂಧ ಮಂಡನೆ, ಚರ್ಚೆ, ಸಂವಾದ: ದೇಶದ ವಿವಿಧ ಭಾಗದಿಂದ ಆಯಾ ರಂಗದಲ್ಲಿ ನುರಿತವರು, ಅನುಭವಿಗಳು ಮತ್ತು ಬರಹಗಾರರು ಇಲ್ಲಿ ಬರೆಯುತ್ತಾರೆ) ಈ ದೇಶ ಈ ಕಾಲದಲ್ಲಿ ನಾನು, ಧರ್ಮಸಂಕಟ- ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ಹಿಂಸೆ, ಹಿಂಸೆಯ ಮೀಮಾಂಸೆ, ಕನ್ನಡ ಕಾವ್ಯದ ಹೊಸ ಬೆಳೆ(ಹದಿನೇಳು ಕವಿತೆಗಳ ಕುರಿತು ಹದಿನೇಳು ಮಂದಿ), ಅನಿವಾಸಿ ಕನ್ನಡ, ರಾಜಕೀಯದ ಪತನ, ರಂಗಭೂಮಿಯ ವರ್ತಮಾನ, ದೃಶ್ಯ ಕಲೆಗಳ ಅ-ದೃಶ್ಯ, ಕೃಷಿ ಸಂಸ್ಕೃತಿಯ ಪಲ್ಲಟಗಳು, ಕನ್ನಡಕ್ಕೊಂದು ಪುಸ್ತಕನೀತಿ, ಭೂಸ್ವಾಧೀನದ ಬಿಕ್ಕಟ್ಟುಗಳು.

ಲೇಖನ : ಯು.ಆರ್.ಅನಂತಮೂರ್ತಿ, ಕೆ.ವಿ.ತಿರುಮಲೇಶ್, ನಾಗರಾಜ ವಸ್ತಾರ್‍ಎ, ಡಾ.ಬಿ.ದಾಮೋದರ ರಾವ್, ಕ್ರಿಸ್ಟಫರ್ ವುರ್ಸ್ಟ್, ರಾಘವೇಂದ್ರ ರಾವ್, ಕೆ.ವಿ.ಸುಬ್ಬಣ್ಣ, ವೈದೇಹಿ, ರೊದ್ದಂ ಶ್ರೀನಿವಾಸ, ಸುಂದರ್ ಸಾರುಕ್ಕೈ, ಡೇನಿಯಲ್ ಅಮಿಟ್, ಎ.ಆರ್. ಉಷಾದೇವಿ, ಅಕ್ಷರ ಕೆ.ವಿ., ಜಿಯಾವುದ್ದೀನ್ ಸರದಾರ್, ಶಮೀಕ್ ಬಂದೋಪಾದ್ಯಾಯ, ಅರವಿಂದ ಚೊಕ್ಕಾಡಿ, ಮನು ಚಕ್ರವರ್ತಿ, ಗಿರೀಶ್ ವಿ ವಾಘ್, ಮುರಳೀಧರ ಉಪಾಧ್ಯ, ಟಿ.ಎನ್ ಕೃಷ್ಣರಾಜು, ಫ್ರಿಟ್ಸ್ ಸ್ಟಾಲ್ ಮತ್ತಿತರ.

ಕವಿತೆಗಳು : ಪಿ.ರಾಮನ್(ಮಲಯಾಳಂ), ಮಂದಾಕ್ರಾಂತಾ ಸೇನ್(ಬಂಗಾಲಿ), ಪ್ರತಿಭಾ ನಂದಕುಮಾರ್, ಎಸ್. ಮಂಜುನಾಥ್, ಸಂಧ್ಯಾದೇವಿ, ನಾ.ಮೊಗಸಾಲೆ.

ಹೊಸ ಪುಸ್ತಕದ ಕೆಲವು ಪುಟಗಳು: ಶಿಖರಸೂರ್ಯ(ಕಂಬಾರ), ಬಿಸಿಲ ಕೋಲು(ಉಮಾರಾವ್), ಉಧೋ ಉಧೋ (ಬಾಳಾಸಾಹೇಬ), ಮಿತ್ತಬೈಲ್ ಯಮುನಕ್ಕೆ(ಡಿ.ಕೆ.ಚೌಟ), ಕಾಲಜಿಂಕೆ(ಕೆ.ಸತ್ಯನಾರಾಯಣ), ಸ್ವರಾಧಿರಾಜ ಭೀಮಸೇನ(ಅರವಿಂದ ಮುಳಗುಂದ), ದಿಗಂಬರ(ಯಶವಂತ ಚಿತ್ತಾಲ), ಅಶ್ವಮೇಧ(ಅಶೋಕ ಹೆಗಡೆ), ಮಾರ್ಕ್ವೆಜ್(ಅನುವಾದಿತ-ಕತೆಗಾರನ ಮೊದಲ ದಿನಗಳು), ಬಿಳಿಯ ಚಾದರ(ಗುರುಪ್ರಸಾದ್ ಕಾಗಿನೆಲೆ), ಕಿರೀಟ(ಮೊಗಳ್ಳಿ ಗಣೇಶ್), ಮದುವೆಯ ಆಲ್ಬಂ(ಗಿರೀಶ ಕಾರ್ನಾಡ್), ಸಂಗೀತ ದಿವ್ಯ(ದತ್ತಾತ್ರೇಯ ಸದಾಶಿವ ಗರೂಡರ ಆತ್ಮಕತೆಯ ಆಯ್ದ ಭಾಗಗಳು), ಸ್ವಯಂವರ ಲೋಕ(ಕೆ.ವಿ.ಅಕ್ಷರ), ಎನ್ನ ಭವದ ಕೇಡು(ಎಸ್ ಸುರೇಂದ್ರನಾಥ್).

ವಿಮರ್ಶೆಗೆ ಒಳಗಾದ ಬರಹಗಾರರು: ಸುನಂದಾ ಪ್ರಕಾಶ್, ಎಸ್. ಮಂಜುನಾಥ್, ಸವಿತಾ ನಾಗಭೂಷಣ, ಎಸ್ ಸುರೇಂದ್ರನಾಥ್, ಜಯಂತ ಕಾಯ್ಕಿಣಿ, ಎಸ್. ದಿವಾಕರ್, ಗೋಪಾಲಕೃಷ್ಣ ಅಡಿಗ ಮತ್ತಿತರರು.

ದೇಶ ಕಾಲ ತನ್ನ ಸೀಮಿತ ವಲಯದಲ್ಲಿ ಉಸಿರಾಡುತ್ತಿದ್ದರೂ ತನ್ನದೇ ಆದ ಗುರುತ್ವವನ್ನು ಈಗಾಗಲೇ ರೂಢಿಸಿಕೊಂಡಿದೆ. ಇದು ಇನ್ನೂ ಬಹುಕಾಲ ಕನ್ನಡದ ಸಂವೇದನೆಗಳನ್ನು ಸರಿದಾರಿಯಲ್ಲಿ ಉದ್ದೀಪಿಸುತ್ತ, ಚಿಗುರಿಸುತ್ತ ನಮ್ಮ ಅರಿವಿನ ಬಳ್ಳಿಯನ್ನು ಸದಾ ಹೊಸದರತ್ತ ಹಬ್ಬಿಸುತ್ತದೆ ಎಂದು ನಿರೀಕ್ಷಿಸಬಹುದಾಗಿದೆ. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, October 15, 2007

ಮಹಿಳಾ ಸಾಹಿತ್ಯ ಯಾಕೆ ಹೀಗಿದೆ?

"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹೊಸ ಗುರುತ್ವವನ್ನೂ ಮೈಗೂಡಿಸಿಕೊಂಡು ಹೊರಬರುತ್ತಿದೆ. ಈಚಿನ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಬರಹಗಾರರ ಹೆಸರು ಗಮನಿಸಿದರೆ ಇದು ನಿಮಗೇ ಅರ್ಥವಾದೀತು: ನೀಲಾಂಜನ ಬಿಸ್ವಾಸ್, ಎಚ್ ಎಸ್ ದೊರೆಸ್ವಾಮಿ, ಡಾ.ಚಂದ್ರಮತಿ ಸೋಂದಾ, ಎನ್ ಎಸ್ ಶ್ರೀಧರ ಮೂರ್ತಿ, ಪ್ರತಿಭಾ ನಂದಕುಮಾರ್, ಮಲತಿ ಬೇಳೂರು, ಕೋ.ಚೆನ್ನಬಸಪ್ಪ, ಡಾ.ಪಿ.ಚಂದ್ರಿಕಾ, ಎಸ್ ಮಾಲತಿ ಸಾಗರ, ಡಾ. ನಿರಂಜನ ವಾನಳ್ಳಿ, ವಿ.ಗಾಯತ್ರಿ, ಪ್ರೊ.ಎಂ.ಎಚ್ ಕೃಷ್ಣಯ್ಯ, ಯು.ಮಹೇಶ್ವರಿ, ಸಿ.ಜಿ.ಮಂಜುಳಾ, ಬಿ.ಎಸ್.ಪೂರ್ಣಿಮಾ, ಕಮಲಾ ಭಾಸಿನ್, ಮಮತಾ ಜಿ.ಸಾಗರ, ಕೆ.ಸತ್ಯನಾರಾಯಣ ಇತ್ಯಾದಿ. ರಾಜೇಶ್ವರಿ ಎಚ್ ಎಸ್ ನಿರ್ವಹಿಸುತ್ತಿರುವ ಈ ಪತ್ರಿಕೆಯ ಹಿಂದೆ ಹಲವರಿದ್ದಾರೆ. ವೆಂ. ವನಜ ಬೇರೆ ಭಾಷೆಗಳ ಮಹತ್ವದ ಲೇಖನಗಳನ್ನು ಕನ್ನಡಕ್ಕೆ ತರುತ್ತಿದ್ದಾರೆ. (ವಾರ್ಷಿಕ ಚಂದಾ ಕೇವಲ ನೂರು ರೂಪಾಯಿ. ವಿಳಾಸ: ನಮ್ಮ ಮಾನಸ, ೧೧೪/೫, ೯ನೆಯ ತಿರುವು, ೨ನೆಯ ಮುಖ್ಯ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು- ೫೬೦ ೦೧೮)

ಈ ಬಾರಿಯ "ನಮ್ಮ ಮಾನಸ"ದಲ್ಲಿ ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಮಹಿಳಾ ಸಾಹಿತ್ಯದ ಕೆಲವು ಸಂಗತಿಗಳತ್ತ ಗಮನ ಸೆಳೆಯುವ ಒಂದು ಲೇಖನ ಬರೆದಿದ್ದಾರೆ. ಹೊಸ ಕಾಲದ ಬರಹಗಾರ್ತಿಯರಿಂದ ಹೂವಯ್ಯ, ರಾಮ, ಲಚ್ಚ, ಗುತ್ತಿ, ಚೋಮನಂಥ ಬಹುಕಾಲ ನೆನಪಿನಲ್ಲಿ ಉಳಿಯಬಲ್ಲ, ಹಾಗೆ ಉಳಿದು ಕ್ರಮೇಣ ನಮ್ಮ ನಡುವಿನ ಜೀವಂತ ವ್ಯಕ್ತಿಗಳೇ ಆಗಬಲ್ಲಂಥ ಗಟ್ಟಿ ಪಾತ್ರಗಳು ಸೃಷ್ಟಿಯಾಗಿಲ್ಲ - ಯಾಕಿರಬಹುದು ಎಂಬ ಒಂದು ಬಗೆಯ ಸ್ವಗತದ ಹಾಗೆ ಕೇಳಿಕೊಂಡ, ಮೆಲುದನಿಯ ಜಿಜ್ಞಾಸೆ ಇಲ್ಲಿದೆ. ಇದೇ ಸಂಚಿಕೆಯಲ್ಲಿ ಡಾ.ಪಿ. ಚಂದ್ರಿಕಾ ಈ ಜಿಜ್ಞಾಸೆಗೆ ತಮ್ಮ ಅನಿಸಿಕೆಗಳ ಸಾಥ್ ನೀಡಿದ್ದಾರೆ. ಅಭಿನವ ಹೊರತಂದ ಪುಸ್ತಕಗಳನ್ನು ಗಮನಿಸಿದವರಿಗೆ ಪಿ. ಚಂದ್ರಿಕಾ ಗೊತ್ತು. ಚಂದ್ರಿಕಾ ಅವರಿಗೆ ಮಹಿಳಾ ಸಾಹಿತ್ಯ ಎನ್ನುವುದು ಪುರುಷ ಸಾಹಿತ್ಯವನ್ನು ಮಾದರಿಯಾಗಿಟ್ಟುಕೊಂಡು, ಅದು ತುಳಿದ ಹಾದಿಯಲ್ಲೇ ಸಾಗಬೇಕೆಂಬ ಪುರುಷ- ನಿರೀಕ್ಷೆಯ ಕುರಿತೇ ಸಹಮತವಿಲ್ಲ. ಹೊಸ ಕಾಲದ ಬರಹಗಾರ್ತಿಯರು ಇಂಥ ಮಾದರಿಗಳಿಲ್ಲದೆ ಸ್ವತಂತ್ರವಾಗಿ ಸಾಕಷ್ಟು ಗಟ್ಟಿಯಾದ ಕೃತಿಗಳನ್ನು ಕೊಟ್ಟಿದ್ದಾರೆಂದು ಅವರು ಬರೆಯುತ್ತಾರೆ. ಈ ಚರ್ಚೆ ಕುತೂಹಲಕರವಾಗಿದೆ ಯಾಕೆಂದರೆ ಈ ಇಬ್ಬರ ಗಮನಿಸುವಿಕೆಯಲ್ಲೂ ಸತ್ಯಗಳಿವೆ, ತೀರ್ಮಾನಗಳಿಲ್ಲ. ಹಾಗೆಯೇ ಈ ಸಂವಾದ ಎಲ್ಲರಿಗೂ ಮುಕ್ತವಾಗಿರುವುದರಿಂದ ನಮ್ಮ ಸಂಪದದ ಓದುಗರು, ಸದಸ್ಯರು ಇದನ್ನು ಗಮನಿಸಲಿ, ಚರ್ಚಿಸಲಿ ಎಂದು ನನಗೆ ಆಸೆ.

ನಮ್ಮ ಮಹತ್ವದ ಕತೆಗಾರ ವಿವೇಕ ಶಾನಭಾಗ ತರುತ್ತಿರುವ "ದೇಶಕಾಲ" ತ್ರೈಮಾಸಿಕದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ ಅನಿಸುತ್ತದೆ. ಅದನ್ನು ಹಲವರು ಬೇರೆ ಬೇರೆ ಕಾರಣಗಳಿಗಾಗಿ ದೂರವಿಟ್ಟರೂ ವಿವೇಕ್ ಮಾತ್ರ ಅಕ್ಷರ ಮತ್ತು ಚನ್ನಕೇಶವರ ಜೊತೆ ಬಹಳ ಅಕ್ಕರಾಸ್ತೆಯಿಂದ ಅದನ್ನು ರೂಪಿಸುತ್ತ, ಏಕಾಂಗಿಯಾಗಿ ಹೆಣಗುತ್ತಲೇ ಇದ್ದಾರೆ. ಅದನ್ನು ಕಾರ್ಪೊರೇಟ್ ಪತ್ರಿಕೆ ಎಂದು ಮೂದಲಿಸುವವರು ದೇಶಕಾಲದ ಹಿಂದೆ ಇರುವುದು ಕೇವಲ ಸರಳ ಸಹಜ ವ್ಯಕ್ತಿತ್ವದ ಕೆಲವೇ ಮಂದಿಯ ತೆರೆದ ಮನಸ್ಸು ಎಂಬುದನ್ನು ಅರಿತರೆ ಬಹುಷಃ ಸ್ವಲ್ಪವಾದರೂ ಒಳ್ಳೆಯದಿತ್ತು. ಇರಲಿ. ಈ ಬಾರಿಯ "ದೇಶಕಾಲ"ದಲ್ಲಿ ಕುಸುಮಾಕರ ದೇವರಗೆಣ್ಣೂರರ ಸಂದರ್ಶನವಿದೆ. ಕೆಲವರಿಗಾದರೂ ಈ ಹೆಸರಿನ ಪರಿಚಯ ಇರಬಹುದು ಅಂತ ಆಸೆ. ನವ್ಯ ಕಾಲಘಟ್ಟದಲ್ಲೇ ಬರೆಯತೊಡಗಿದ, ಲಂಕೇಶ್, ಅನಂತಮೂರ್ತಿ ಸಾಲಿನಲ್ಲೇ ಬರಬೇಕಿದ್ದ ಹೆಸರಿದು. ಬಹು ಮುಖ್ಯವಾದ ಕೆಲವು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ನಾಲ್ಕನೆಯ ಆಯಾಮ, ನಿರಿಂದ್ರಿಯ, ಬಯಲ ಬಸಿರು ಮತ್ತು ಪರಿಘ. "ದೇಶಕಾಲ"ದ ಮುವ್ವತ್ತಕ್ಕೂ ಹೆಚ್ಚಿನ ಪುಟಗಳಲ್ಲಿ ಹರಡಿಕೊಂಡಿರುವ ಈ ವಿಸ್ತೃತ ಸಂದರ್ಶನ ಬಹುಷಃ ಈ ದಿನಗಳಲ್ಲಿ ಬಹಳ ಅಪರೂಪದ ವಿದ್ಯಮಾನವೇ ಸರಿ. ಹಿಂದೆಲ್ಲ ನಮ್ಮ ತರಂಗ, ಸುಧಾಗಳ ಮುಖಪುಟದಲ್ಲಿ ಹೆಸರಾಂತ ಸಾಹಿತಿಗಳು ಕಾಣಿಸಿಕೊಳ್ಳುವುದಿತ್ತು. ಅವರ ಸಂದರ್ಶನ, ಪರಿಚಯ ಇತ್ಯಾದಿಗಳು ಹತ್ತು ಹದಿನೈದು ಪುಟಗಳ ತುಂಬ, ಫೋಟೋಗಳ ಸಮೇತ ಇರುತ್ತಿದ್ದವು. ಆದರೆ ಈಗ ಪತ್ರಿಕೆಗಳಿಗೆ ಅಂಥ ವಿಚಾರಗಳಲ್ಲಿ ಆಸಕ್ತಿಯಿಲ್ಲ. ಯಾಕೆಂದರೆ ಅದಕ್ಕೆಲ್ಲ ಈಗ ಮಾರ್ಕೆಟ್ ಇಲ್ಲ! ಕಳೆದ ವರ್ಷ ನಮ್ಮ ಕುಂದಾಪುರದ ವಸಂತ ಬನ್ನಾಡಿಯವರು "ದೇಶಕಾಲ"ದ ಮಾದರಿಯಲ್ಲೇ "ಶಬ್ದಗುಣ" ಎಂಬ ಒಂದು ಅರೆ ವಾರ್ಷಿಕ ಪತ್ರಿಕೆ ತಂದರು. ಅದರಲ್ಲಿ ಇದೇ ತರ ಎಚ್ ಎಸ್ ಶಿವಪ್ರಕಾಶ್ ಮತ್ತು ತಿರುಮಲೇಶರ ವಿಸ್ತೃತ ಸಂದರ್ಶನಗಳ ಅರ್ಧಭಾಗ ಪ್ರಕಟವಾದ ನೆನಪು. ತುಂಬ ಮೌಲಿಕವಾದ ಸಂದರ್ಶನವಾಗಿತ್ತದು. ಆದರೆ ವಿಪರ್ಯಾಸವೆಂದರೆ ಅದರ ಮುಂದಿನ ಭಾಗ ಬರಲೇ ಇಲ್ಲ. ಅರೆವಾರ್ಷಿಕ ಪತ್ರಿಕೆ ಪೂರ್ಣಾಯುಸ್ಸು ಬರಲಿಲ್ಲ. ಇದನ್ನು ಕನ್ನಡದ ಶಬ್ದಗುಣವೆನ್ನಬೇಕೆ, ಕನ್ನಡಿಗರ ಅಭಿಮಾನ ಇಷ್ಟೇ ಎನ್ನಬೇಕೆ?

ಮತ್ತೆ ಕುಸುಮಾಕರರ ಸಂದರ್ಶನಕ್ಕೆ ಬರುತ್ತೇನೆ. ಇಲ್ಲಿ ಅವರು ತಮ್ಮ ತೀರಿ ಹೋದ ಪತ್ನಿಯ ಡಾಯರಿಯ ಆಧಾರದ ಮೇಲೆ "ಭಾವನಿ" ಎಂಬ ಹೆಸರಿನ ಒಂದು ಹೊಸ ಕಾದಂಬರಿಯನ್ನು ಬರೆಯುತ್ತಿರುವುದಾಗಿ ಹೇಳಿದ್ದಾರೆ. ಗಾಂಧಿ ಮತ್ತು ಕಸ್ತೂರಬಾ ನಡುವೆ ಆಹಾರ, ಒಡವೆ, ಬಟ್ಟೆಬರೆ, ದಿನಚರಿಗಳ ಬಗ್ಗೆ ಎಂಥೆಂಥ ಮನಸ್ತಾಪಗಳು, ಭಿನ್ನಾಭಿಪ್ರಾಯಗಳೆಲ್ಲ ಇದ್ದವೊ ಬಲ್ಲವರೇ ಬಲ್ಲರು. ಗಾಂಧಿಯ ನಿಕಟವರ್ತಿಯಾಗಿದ್ದ ತಮ್ಮ ತಂದೆಯಿಂದಲೂ ಸಾಕಷ್ಟು ವಿಚಾರ ತಿಳಿದಿದ್ದ ಕುಸುಮಾಕರರ ಕಾದಂಬರಿ ಆ ದಾಂಪತ್ಯದ ಕನ್ನಡಿ ಕೂಡ ಆಗಿ ಮೂಡುವುದು ಸಾಧ್ಯವಿದೆ! ಅದೇನೇ ಇದ್ದರೂ ಇಲ್ಲಿ, ಕುಸುಮಾಕರರು ತಮ್ಮ ಪತ್ನಿಯ ಕುರಿತೇ ಹೇಳಿರುವ ಕೆಲವು ಮಾತುಗಳು, ಅವರ ಆತ್ಮವಿಮರ್ಶೆ ಮತ್ತು ಈ ತರದ ಆತ್ಮವಿಮರ್ಶೆಯಿಂದೇನೂ ತಾವು ನಡೆದುಕೊಂಡ ರೀತಿಗೆ ಸಮಜಾಯಿಸಿ ಸಿಗದೆಂಬ ಅರಿವಿದ್ದೇ ಅವರು ತೆರೆದುಕೊಂಡಿರುವ ರೀತಿ ನಿಜಕ್ಕೂ ಕುತೂಹಲಕರವಾಗಿದೆ.

ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಾಹಿತ್ಯ ಎಂದೆಲ್ಲ ಯೋಚಿಸುವಾಗ ಈ ಸಂದರ್ಶನವನ್ನೂ ನಾವು ಗಮನಿಸಬೇಕು ಅನಿಸುತ್ತದೆ. ಯಾಕೆಂದರೆ ಇದು ನಾವು ನೀವು ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಹೆಂಡತಿಯನ್ನು, ಅಕ್ಕ, ತಂಗಿ, ತಾಯಿ, ಮಗಳು ಎಂದೆಲ್ಲ ಇರುವ ಸ್ತ್ರೀಯರನ್ನು ಹೇಗೆ ನಡೆಸಿಕೊಳ್ಳುತ್ತೇವೆ, ಎಷ್ಟನ್ನು ಅವರ ಜೊತೆ ಹಂಚಿಕೊಳ್ಳುತ್ತೇವೆ, ಎಷ್ಟರ ಮಟ್ಟಿಗೆ ನಮ್ಮ ಮನೋರಂಜನೆ, ತಿರುಗಾಟ, ದುಂದು, ಜ್ಞಾನಸಂಗ್ರಹಗಳ ವಿಚಾರದಲ್ಲಿ ಅವರನ್ನು ನಮ್ಮ ಜೊತೆಗೇ ಕೊಂಡೊಯ್ಯುತ್ತೇವೆ ಎಂಬೆಲ್ಲ ಪ್ರಶ್ನೆಗಳ ಎದುರು ನಮ್ಮನ್ನು ಕ್ಷಣಕಾಲವಾದರೂ ನಿಲ್ಲಿಸುತ್ತದೆ. ಅಲ್ಲೆಲ್ಲ ಅವರಿಗೆ ಸಲ್ಲಬೇಕಾದುದಕ್ಕೆ ನಾವೇ ತಿಳಿದೋ, ತಿಳಿಯದೆಯೋ, ಅಸಡ್ಡೆಯಿಂದಲೋ, ಧೂರ್ತತನದಿಂದಲೋ ಅಡ್ಡ ನಿಂತಿರುತ್ತ ಅವರ ಸಾಹಿತ್ಯದಲ್ಲಿ, ಕಲೆಯಲ್ಲಿ ಪರಿಪೂರ್ಣತ್ವವನ್ನು ನಿರೀಕ್ಷಿಸುವುದು ಕೂಡ ಒಂದು ಬಗೆಯ ಅನ್ಯಾಯವೇ. ಆದರೆ ಸ್ತ್ರೀ ಇದನ್ನು ಮೀರಿ ನಿಲ್ಲಬಲ್ಲವಳು, ನಿಂತವಳು. ಹಾಗಾಗಿ ಅವಳ ಸಾಧನೆ ಈ ಎಲ್ಲ ತೊಡಕಿನೆಡೆಯಿಂದ ಎದ್ದು ಬಂದಿರುವಂಥದ್ದು ಎಂಬುದನ್ನು ವಿಶೇಷತಃ ಗಮನಿಸಬೇಕಾಗುತ್ತದೆ. ಹಾಗಾಗಿಯೇ ಇಲ್ಲಿ ಅವಳ ಅಭಿವ್ಯಕ್ತಿಗೆ ಮಾನದಂಡಗಳನ್ನು, ಮಾದರಿಗಳನ್ನು ಹೇಳುವ ಹಕ್ಕು ಯಾರಿಗೂ ಇಲ್ಲ ಎನ್ನುವುದರಲ್ಲಿ ತಥ್ಯವಿದೆ. ಆದರೆ ಸತ್ಯನಾರಾಯಣ ಅದನ್ನು ಮಾಡಿಲ್ಲ ಎಂಬುದನ್ನು ಗಮನಿಸಬೇಕು. ಸತ್ಯನಾರಾಯಣರು ಎತ್ತಿರುವ ಜಿಜ್ಞಾಸೆಯಲ್ಲೂ ಹುರುಳಿದೆ ಮತ್ತು ಬರೇ ಅದರಲ್ಲಿನ ಪುರುಷ ಧ್ವನಿಯನ್ನು ಮುಂದೆ ಮಾಡುವುದರಿಂದ ಒಟ್ಟಾರ್‍ಎ ಸಾಹಿತ್ಯಕ್ಕೆ ಅನ್ಯಾಯವಾಗಬಾರದಲ್ಲ! ಕೆ. ಸತ್ಯನಾರಾಯಣ ಮತ್ತು ಪಿ. ಚಂದ್ರಿಕಾ ಇಬ್ಬರೂ ಸರಿಯಾಗಿಯೇ ಬರೆದಿದ್ದಾರೆ. ಯಾಕೆಂದರೆ, ಈ ವಿಚಾರಕ್ಕೇ ಮೂಲಭೂತವಾಗಿ ಹಲವು ಮುಖಗಳಿವೆ, ಎಲ್ಲವನ್ನೂ ಸಮಾಧಾನದಿಂದ ಗಮನಿಸುತ್ತ ಹೋಗಬೇಕಿದೆ. ಹಾಗೆ ಮಾಡುವುದರಿಂದ ಸಾಹಿತ್ಯಕ್ಕೆ ಮಾತ್ರವಲ್ಲ ಒಟ್ಟಾರೆಯಾಗಿ ಮನುಷ್ಯನೇ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಅದು ಸಹಾಯಕವಾಗುವುದು ಸಾಧ್ಯವಿದೆ. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 14, 2007

ಓ ಮನಸೇ...

ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ. ಒಮ್ಮೆ ಅವರ ಪ್ರೀತಿಯ ವ್ಯಕ್ತಿಯೊಬ್ಬರ ಜೊತೆ ಅವರ ಮನೆಗೆ ಹೋಗಿದ್ದೆ, ಒಂದು ರಾತ್ರಿ ಅವರಲ್ಲೇ ನಿಂತಿದ್ದೆ ಕೂಡ. ಹಬ್ಬದಡಿಗೆ ಮಾಡಿ, ಬಡಿಸಿ ಖುಶಿಪಟ್ಟಿದ್ದರು, ಆ ದಂಪತಿ ಮತ್ತು ಮಗ. ರಾತ್ರಿಯೆಲ್ಲ ಕೂತು ಅದೂ ಇದೂ ಹರಟಿದ್ದೆವು. ಅಂತರಂಗದಲ್ಲಿ ತೀರ ಒಂಟಿಯಾದ, ತುಂಬ ಸೂಕ್ಷ್ಮ ಸಂವೇದನೆಗಳ ಮನುಷ್ಯ, ಭಾವುಕ.

ಆನಂತರ ಹೀಗೇ, ಆಗಾಗ ಫೋನು ಮಾಡಿ ಮಾತನಾಡುವುದು, ಅವರು ಮಂಗಳೂರಿಗೆ ಬಂದಾಗ ನಾನು ಹೋಗಿ ಭೇಟಿಯಾಗುವುದು, ಮದುವೆ ಮುಂಜಿಗಳೆಂದರೆ, ಸಭೆ ಸಮಾರಂಭಗಳೆಂದರೆ ವಿಚಿತ್ರ ರೇಜಿಗೆಯಿದ್ದ ಅವರೂ ನಾನೂ ಹೊರಗೆ ಕಾರಿನಲ್ಲೇ ಕೂತು ಅದೂ ಇದೂ ಮಾತನಾಡಿ ಬರುವುದು ಎಲ್ಲ ಇತ್ತು. ಪ್ರತಿಸಲವೂ ವಿದಾಯ ಹೇಳುವ ಮೊದಲು ಕಾಗದ ಬರೆಯಿರಿ ಅಂತಲೋ ಬರೆಯುತ್ತೇನೆ ಅಂತಲೋ ಮಾತು ಮುಗಿಸುತ್ತಿದ್ದುದು ಅವರು. ಈಗ ಯಾರು ಕಾಗದ ಬರೆಯುತ್ತಾರೆ, ಅಲ್ಲವ? ಈಮೇಲ್ ಆದರೆ ಸ್ವಲ್ಪ ಸುಲಭ. ಆಫೀಸಿನ ಕೆಲಸದ ನಡುವೆಯೇ ಎರಡು ಸಾಲು ಎಳೆದು ಕಳಿಸಿಬಿಡಬಹುದು. ಪತ್ರ ಬರೆಯುವುದು ಕಷ್ಟ ಅನಿಸಹತ್ತಿದೆ. ಆದರೆ ಇವರ ಬಳಿ ಆಯ್ತು ಬರೆಯುತ್ತೇನೆ ಎಂದ ಮೇಲೆ ಬರೆಯದೇ ಇರುವುದು ಕೂಡ ಒಂದು ಸಂಕಟವಾಗಿ ಬಿಡುತ್ತದೆ. ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಬರೆಯಲು ಕೂರುತ್ತೇನೆ. ಆದರೆ ಎಂಥ ಕಷ್ಟ, ಬರೆಯಲಿಕ್ಕೆ ಏನೂ ಇಲ್ಲದೆ ಪತ್ರ ಬರೆಯುವುದು! ಕೊನೆಗೆ ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದ ಕತೆಗಳು, ಲೇಖನಗಳು, ಇಷ್ಟವಾದ ಕಾದಂಬರಿ, ಪುಸ್ತಕ ಎಂದೆಲ್ಲ ಬರೆಯಲು ತೊಡಗಿದರೆ ಅದು ಅನುದ್ದಿಶ್ಯ ಉದ್ದವಾಗಿ ಬಿಡುತ್ತದೆ! ಆದರೆ ಇಲ್ಲಿ ಸಂಪಾದಕರ "ಒಂದೇ ಪುಟದ ಮಿತಿಯಲ್ಲಿರಲಿ" ಎಂಬ ನಿರ್ದೇಶವಿಲ್ಲದಿರುವುದರಿಂದ ಮತ್ತು ಅವರಿಗೂ ಇದರಲ್ಲೆಲ್ಲ ಆಸಕ್ತಿ ಇರುವುದರಿಂದ ತೊಂದರೆಯೇನಿಲ್ಲ ಬಿಡಿ.

ಹೇಳಲು ಹೊರಟಿದ್ದು ಇದನ್ನೆಲ್ಲ ಅಲ್ಲ. ಮೊನ್ನೆ ಭಾನುವಾರ, ಇನ್ನೂ ಮುಂಜಾನೆ ಎನ್ನಬಹುದಾದ ರೀತಿ ಮೋಡ ಮುಸುಕಿದ್ದ ಬೆಳಗ್ಗೆ ಇವರು ಇದ್ದಕ್ಕಿದ್ದ ಹಾಗೆ ಫೋನ್ ಮಾಡಿದರು. ಅವರ ಆತ್ಮೀಯ ಮಿತ್ರರೊಬ್ಬರು, ಬಾಲ್ಯದ ಗೆಳೆಯ, ಸರಿ ಸುಮಾರು ಅವರದೇ ವಯಸ್ಸಿನವರು, ಎಲ್ಲೋ ವಿದೇಶದಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿ ಹೊರಟು ಹೋದ ವಿಷಯ ತಿಳಿಸಿದರು. ನನಗೇನೂ ಅನಿಸದಿದ್ದರೂ ಹೌದ ಎಂದೆ. ಇಲ್ಲೇ ಇರುವಾಗ ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತಿದ್ದರು, ಆಗಾಗ ಪತ್ರವನ್ನೂ ಬರೆಯುತ್ತಿದ್ದರು ಎಂದರು. ಮುಂದುವರಿದು, ಇನ್ನು ಮೇಲೆ ಅದೂ ಇಲ್ಲ ಎಂದರು. ಆ ಧ್ವನಿ ಸಣ್ಣದಾಗಿತ್ತು.

ಏನೆಲ್ಲ ಇತ್ತು ಆ ಕೊನೆಯ ಮಾತಿನಲ್ಲಿ ಎನ್ನುವುದು ನಮಗಿಬ್ಬರಿಗೇ ಗೊತ್ತು ಬಹುಷಃ. ಇನ್ನು ಮೇಲೆ ಅದೂ ಇಲ್ಲ! ಅದೊಂದೇ ಇದ್ದಿದ್ದು ಎನ್ನುವ ಅರ್ಥವಿಲ್ಲವೆ ಅದರಲ್ಲಿ? ಅಥವಾ ಆ ಮನುಷ್ಯನ ಅಸ್ತಿತ್ವ ಇವರ ಪ್ರಜ್ಞೆಗೆ ಬರುತ್ತಿದ್ದುದೇ ಅದೊಂದರಿಂದ ಎನ್ನಿ. ಇನ್ನು ಅದೂ ಇಲ್ಲವೆಂದರೆ ಏನರ್ಥ? ಇಷ್ಟಕ್ಕೂ ಇವರ ಆ ಮಿತ್ರ ಇದ್ದಿದ್ದು ಉತ್ತರ ಭಾರತದ ಒಂದು ನಗರದಲ್ಲಿ. ಆದರೂ ಅದು ಇವರಿಗೆ ಇಲ್ಲೇ ಅನಿಸಿತ್ತು! ವಿದೇಶ ಮಾತ್ರ ಇಲ್ಲೇ ಅನಿಸುವುದಿಲ್ಲ. ಯಾಕೆಂದರೆ, ಇನ್ನು ವಾರಕ್ಕೊಮ್ಮೆ ಫೋನ್ ಬರುವ ಸಂಭವವಿಲ್ಲ.

ತನ್ನ ಅಕ್ಕನನ್ನು ಕಳೆದುಕೊಂಡ ಮಧ್ಯವಯಸ್ಕರೊಬ್ಬರು ನನಗೆ ಎಸ್ಸೆಮ್ಮೆಸ್ ಬರೆದಿದ್ದರು, ಅಕ್ಕನ ಜೊತೆ ಕಳೆದ ಬಾಲ್ಯದ ಕ್ಷಣಗಳೆಲ್ಲ ಈಗ, ಬೆಂಗಳೂರಿಗೆ ಹೊರಟ ರಾತ್ರಿಯ ಸುವಿಹಾರಿ ಬಸ್ಸಿನಲ್ಲಿ ಒಬ್ಬನೇ ಕೂತ ಒಂಟಿ ಹೊತ್ತಿನಲ್ಲಿ ಮನಸ್ಸಿನ ಮೇಲೆ ಧಾಳಿ ಮಾಡುತ್ತಿವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಒಂದು ಮಾತನ್ನೇ ಆಧಾರವಾಗಿಟ್ಟುಕೊಂಡು ನಾವೆಲ್ಲ ಅವಳನ್ನು ಮರೆತೇ ಬಿಟ್ಟವರ ಹಾಗೆ ಇದ್ದುಬಿಟ್ಟೆವು ನೋಡು, ಅದೆಲ್ಲ ಈಗ ನೆನಪಾಗಹತ್ತಿದೆ....

ಆದರೆ ವಿಚಿತ್ರ ನೋಡಿ, ನಮ್ಮ ಎಷ್ಟೋ ಆತ್ಮೀಯರು ಸದಾ ಕಾಲ ನಮ್ಮೆದುರೇ ಇರುವುದಿಲ್ಲ. ಅವರು ಎಲ್ಲೋ ನಾವೆಲ್ಲೋ ಇರುವುದೇ ಹೆಚ್ಚು. ಮತ್ತೆ ತೀರ ಜೊತೆಗೇ ಇರುವವರ ಮೇಲೆ ನಮ್ಮ ಅವಲಂಬನ ನಮಗೆ ತಿಳಿಯುವುದೂ ನಾವು ಅವರಿಂದ ದೂರ ದೂರ ಹೊರಟು ನಿಂತಾಗಲೇ. ಆದರೂ ಆ ದೂರವಿರುವ ವ್ಯಕ್ತಿ, ನಮ್ಮ ನೆನಪುಗಳಲ್ಲಿ ನಮ್ಮನ್ನು ಕಾಡುತ್ತ ಇದ್ದರೆ, ಅವನೋ ಅವಳೋ ಸದ್ಯ ಹತ್ತಿರದಲ್ಲೇ ಇಲ್ಲ ಎಂಬುದೇ ಒಂದು ನೋವಾಗಿ ಬಿಟ್ಟರೆ ಹೊರತು, ಕಣ್ಣೆದುರಿಲ್ಲದ ವ್ಯಕ್ತಿಗಾಗಿಯೇ ನಾವು ಹಂಬಲಿಸುವುದು ಕಡಿಮೆ. ಇದ್ದಾರೆ ಎಲ್ಲೋ ಎಂಬ ಸಮಾಧಾನ ಅಥವಾ ಜೊತೆಯಲ್ಲೇ ಇಲ್ಲವಲ್ಲ ಎಂಬ ನೋವು ಇಲ್ಲದಿರುವುದೇ ಅಂಥ ನಿಶ್ಚಿಂತೆಗೆ ಕಾರಣ. ಹಾಗೆ ಬರೇ ಒಂದು ಹಲೋ ಎಂಬ ಧ್ವನಿಯಾಗಿ, ಪತ್ರದ ಅಕ್ಷರಗಳಾಗಿ ನಮ್ಮ ಮಟ್ಟಿಗೆ ಜೀವಂತ ಇರುವ ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಇಲ್ಲವೆ? ಆ ವ್ಯಕ್ತಿ ನಿಜಕ್ಕೂ ಈ ಕ್ಷಣ ಜೀವಂತವಾಗಿ ಉಸಿರಾಡುತ್ತ ಇದೆಯೇ ಎಂದರೆ ಪ್ರಮಾಣ ಮಾಡಿ ಹೇಳುವಷ್ಟು ಖಾತ್ರಿ ನಮಗಿಲ್ಲದಿದ್ದರೂ ಇದ್ದಾನೆ ಎಂಬ ವಿಶ್ವಾಸ ಹುಟ್ಟಲು ಕಾರಣ ಆ ಹಲೋ, ಅಥವಾ ಆ ಪತ್ರದಲ್ಲಿನ ಅಕ್ಷರಗಳು! ವಿಚಿತ್ರ ಅನಿಸುವುದಿಲ್ಲವೇ? ಅದೇ ವ್ಯಕ್ತಿ ಸತ್ತ ಎಂದು ತಿಳಿಯಿತೆನ್ನಿ. ಆಗ ನೋವು ತಪ್ಪಿದ್ದಲ್ಲ ಅಲ್ಲವೆ? ಕಣ್ಣೆದುರಿಗಿಲ್ಲದ ಆತ್ಮೀಯ ವ್ಯಕ್ತಿ ಇನ್ನೆಲ್ಲೋ ಇದ್ದಾನೆ ಅಥವಾ ಇಲ್ಲ ಎಂಬುದನ್ನು ನಮ್ಮ ಪ್ರಜ್ಞೆ ಗುರುತಿಸುವ, ಗುರುತಿಸಿ ಅದನ್ನು ನೋವಾಗಿಸುವ ಬಗೆ ಇದು.

ಇದನ್ನೂ ಬಿಡಿ. ಮನುಷ್ಯನ ಆಳದ ಒಂಟಿತನ ನನ್ನನ್ನು, ನಿಮ್ಮನ್ನು ತಟ್ಟುತ್ತದೆ. ಒಬ್ಬರೇ ಇರುತ್ತ ಎಲ್ಲವೂ (ಎಲ್ಲರೂ) ತನ್ನಲ್ಲೇ ಇದೆ ಎಂದುಕೊಳ್ಳುವುದು ಏಕಾಂತವಂತೆ. ಯಾರೂ ಇಲ್ಲ ಯಾರೂ ಇಲ್ಲ ಎಂದು ಗೈರು ಅನುಭವಿಸುತ್ತ ಕೊರಗುವುದು ಒಂಟಿತನವಂತೆ. ಎಲ್ಲ ಇದ್ದರೂ ಈ ಒಂಟಿತನ ಮನುಷ್ಯನನ್ನು ಕಾಡುತ್ತ ಇರುವುದು ಸಾಧ್ಯ. ವಯಸ್ಸಾದಂತೆ ಇದು ಹೆಚ್ಚಾಗುವುದೆ? ಬರೇ ಮದುವೆಯಾಗದವರಲ್ಲಿ, ಮದುವೆಯಾಗಿ ಸಂಗಾತಿಯನ್ನು, ಮಕ್ಕಳನ್ನು ಕಳಕೊಂಡವರಲ್ಲಿ ಇದು ಹೆಚ್ಚು ಅಂತೇನೂ ಭಾವಿಸಬೇಕಿಲ್ಲ. ಹೇಳಿದೆನಲ್ಲ, ಎಲ್ಲ ಇದ್ದೂ...

ಮನುಷ್ಯನ ಅಸ್ತಿತ್ವ ಇರುವುದೇ ನಮ್ಮ ಭಾವನೆಗಳಲ್ಲಿ, ನೆನಪುಗಳಲ್ಲಿ ಅನಿಸುವುದಿಲ್ಲವೆ? ನಿಮ್ಮ ಮನಸ್ಸಿನಲ್ಲಿ ಇಲ್ಲದ ಮೇಲೆ ಆ ವ್ಯಕ್ತಿ ನಿಮ್ಮ ಮಟ್ಟಿಗೆ ಇದ್ದೂ ಇಲ್ಲದ ಹಾಗೇ ಅಲ್ಲವೆ? ನಿಮ್ಮ ಮನಸ್ಸಿನಲ್ಲಿ ಇದ್ದ ಮೇಲೆ ಆ ವ್ಯಕ್ತಿ ಇಲ್ಲವಾಗುವುದು ಹೇಗೆ? ಇನ್ನೂ ಇದ್ದಾನೆಂದೇ ಅರ್ಥವಲ್ಲವೆ?

ಆ ಮನುಷ್ಯ ಕೇಳುತ್ತಿರುವುದೂ ಅದೇ, ನಿಮ್ಮ ಮನಸ್ಸಿನಲ್ಲಿ ಒಂದಷ್ಟು ಜಾಗ...ಸ್ವಲ್ಪ ಸೂಕ್ಷ್ಮವಾಗಿ ಆಲಿಸಿದರೆ ನಮ್ಮೊಳಗೂ ಅಂಥ ಒಂದು ಬೇಡಿಕೆ ಇರುವಂತೆ ಅನಿಸುವುದಿಲ್ಲವೆ? ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, October 11, 2007

ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

ಬಹುಷಃ ಇವತ್ತು ಕನ್ನಡ ಪತ್ರಿಕೆಗಳಲ್ಲಿ ಸಣ್ಣಕತೆಗಳ ಸ್ಥಾನವನ್ನು ಕ್ರಮೇಣ ಅಂಕಣಗಳು, ಕಾಲಮ್ಮುಗಳು ಮತ್ತು ಬ್ಲಾಗುಗಳು ಆಕ್ರಮಿಸುವಂತೆ ಕಾಣುತ್ತದೆ. ಅನುಭವವನ್ನು ಒಂದು ಚೌಕಟ್ಟಿನಲ್ಲಿ, ಯುಕ್ತ ವಿವರಗಳ ಹಂದರದಲ್ಲಿ, ಆಕರ್ಷಕವಾಗಿ ಮತ್ತು ಸಾರ್ಥಕವಾಗಿ ಕಟ್ಟಿಕೊಡುವುದು ಶ್ರಮದ ಕೆಲಸ. ಕೆಲವೊಮ್ಮೆ ಎಲ್ಲ ಸರಿಯಿದ್ದೂ ಬಯಸಿದ್ದು ಕೈಗೂಡಿರುವುದಿಲ್ಲ. ಅಲ್ಲದೆ ವಿಮರ್ಶಕರ, ಸಂಪಾದಕರ ಮರ್ಜಿ ಕಾಯುವ, ಅವರಿಗೆ ಹಲ್ಲುಗಿಂಜಿ, ಅವರಿಗೆ ಸಿಟ್ಟುಬರದ ಹಾಗೆ ಮಾತನಾಡಿ....

ಇನ್ನೊಂದು ಕಾರಣವೂ ಇದೆ. ಹೇಳಿಕೊಳ್ಳುವ ಅನುಭವವೇ ಇಲ್ಲದವರೂ ಕಾಲಮ್ಮು ಬರೆಯಬಹುದು! ನನ್ನ ಹಾಗೆ ಓದಿದ ಪುಸ್ತಕಗಳ ಬಗ್ಗೆಯೇ ಬರೆಯುತ್ತ, ಅದನ್ನೇ ಬಂಡವಾಳ ಮಾಡಿಕೊಂಡು ಅಷ್ಟಿಷ್ಟು ರಾಮಾಯಣ, ಮಹಾಭಾರತ ಅಂತೆಲ್ಲ ಉದ್ಧರಿಸುತ್ತ ಓದುಗರನ್ನು ಆಕರ್ಷಿಸಿ ನಮ್ಮ ಬರೆಯುವ ತೀಟೆ ತೀರಿಸಿಕೊಳ್ಳುವುದಕ್ಕೂ ಬ್ಲಾಗು, ಕಾಲಮ್ಮು ಅನುಕೂಲಕರ. ಆಗೊಮ್ಮೆ ಈಗೊಮ್ಮೆ ಬೇಕಾದರೆ ಯಾರೋ ಸತ್ತವರ ಬಗ್ಗೆ, ಇನ್ಯಾರದ್ದೋ ಹುಟ್ಟಿದ ಹಬ್ಬದ ಬಗ್ಗೆ ಬರೆದು ವರೈಟಿ ಮೇನ್‌ಟೇನ್ ಮಾಡಬಹುದು. ಇನ್ನು ರಾಜಕೀಯದ ಉದಾಹರಣೆಗಳನ್ನೂ ಸೇರಿಸಿದರೆ ಎಂಥವರೂ ಏನ್ ಬರೀತಾನ್ ಬಿಡಮ್ಮ ಎನ್ನುವುದು ಖಾತರಿ! ಪುಸ್ತಕ ಅಚ್ಚುಹಾಕುವುದಕ್ಕೆ ಇನ್ನೇನು ಬೇಕು?

ಆದರೆ ಇದೆಲ್ಲ ಹೆಚ್ಚು ಕಾಲ ನಡೆಯುವುದಿಲ್ಲ. ನಾಲಗೆ ಸುಳ್ಳು ಹೇಳಬಹುದು, ಕಣ್ಣು ಸುಳ್ಳು ಹೇಳುವುದಿಲ್ಲ ಎನ್ನುವುದು ಒಂದು ಹಳೆಯ ನಂಬುಗೆ. ನಾಲಗೆಯನ್ನು ಬಿಟ್ಟರೆ ಇಡೀ ದೇಹವೇ ಸುಳ್ಳಿಗೆ ಒಗ್ಗುವುದಕ್ಕೆ ಹೊತ್ತು ತೆಗೆದುಕೊಳ್ಳುವುದಂತೆ! ಹಾಗೆಯೇ ಬರೆಯುವವನ ಪ್ರಾಮಾಣಿಕತೆ ಹೆಚ್ಚು ಕಾಲ ಓದುಗನಿಂದ ಮರೆಯಾಗಿರುವುದು ಸಾಧ್ಯವಿಲ್ಲದ ಮಾತು. ಓದುತ್ತಿದ್ದ ಬಹು ಜನಪ್ರಿಯ ಅಂಕಣ ಸಂಕಲನವೊಂದನ್ನು ಅರ್ಧಕ್ಕೇ ನಿಲ್ಲಿಸಿ ನಮ್ಮಲ್ಲಿ ಅನೇಕರು ಓದುಗನನ್ನು ಟೇಕನ್ ಫರ್ ಗ್ರಾಂಟೆಡ್ ಅಂದುಕೊಂಡು ಬಿಟ್ಟಿರುವುದರ ಬಗ್ಗೆ ಅಸಹ್ಯ, ಆಶ್ಚರ್ಯಪಡುತ್ತಿರುವಾಗಲೇ ಈ ಪುಸ್ತಕ ಕಣ್ಣಿಗೆ ಬಿತ್ತು.

ಶಿರಸಿಯ ಸ್ತ್ರೀರೋಗ ತಜ್ಞರಾದ ಡಾಕ್ಟರ್ ಜಿ.ಎಂ.ಹೆಗಡೆಯವರ ಪತ್ನಿ, ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾದರೂ ಪತಿಯ ಕಾಯಕದಲ್ಲಿ ಸಾಕಷ್ಟು ಜೊತೆಜೊತೆಯಾಗಿ ತೊಡಗಿಕೊಂಡಂತಿರುವ ಶ್ರೀಮತಿ ಕುಮುದ ಜಿ.ಎಂ. ಅವರು ಬರೆದ "ಪ್ರಸೂತಿ ಗೃಹದ ಸ್ಮರಣೀಯ ಪ್ರಸಂಗಗಳು" ಎಂಬ ಪುಸ್ತಕ ಅದು. ಇಲ್ಲಿನ ಬರಹಗಳಲ್ಲಿ ತಾನು ಗಹನವಾದುದೇನನ್ನೋ ಹೇಳುತ್ತಿದ್ದೇನೆಂಬ ಪ್ರಜ್ಞೆ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿಲ್ಲ. ಭಾಷೆಯ ಆಡಂಬರವಿಲ್ಲ. ತನಗೊಬ್ಬನಿಗೇ ಹೊಳೆದ ಸತ್ಯಗಳನ್ನು ಹೇಳುತ್ತಿದ್ದೇನೆಂಬ ಅಹಂಮಿಕೆಯ ಧಾಟಿಯಿಲ್ಲ. ಮೇಲಾಗಿ ಯಾವುದೇ ಪುಸ್ತಕಗಳ ಬಗ್ಗೆ, ಅನಂತಮೂರ್ತಿ, ಚಿತ್ತಾಲ, ರಾಮಾಯಣ, ಮನುಷ್ಯನ ಸ್ವಭಾವದ ಬಗ್ಗೆ ಕುತೂಹಲಕರ ಟಿಪ್ಪಣಿ ಯಾವುದೂ ಇಲ್ಲ. ಇರುವುದು ಪ್ರಾಮಾಣಿಕವಾದ ಅನುಭವಗಳು, ನೆನಪುಗಳು ಮತ್ತು ಅವು ಸಾಮಾನ್ಯರಲ್ಲಿ ಸಾಮಾನ್ಯಳಾದ ಒಬ್ಬ ಮಹಿಳೆಯ ಮನಸ್ಸಿನಲ್ಲಿ ಹುಟ್ಟಿಸಿದ ಭಾವ, ಚಿಂತನೆ, ಬದುಕಿನ ವೈಚಿತ್ರ್ಯಗಳ ಕುರಿತ ಮುಗ್ಧ ಅಚ್ಚರಿ ಮಾತ್ರ. ಇದನ್ನು ಓದಿದಾಗಲೇ ಬಹುಷಃ ನಮ್ಮ ಅನೇಕ ಸೆಲೆಬ್ರಿಟಿ ಕಾಲಮ್ಮಿಷ್ಟರ ಟೊಳ್ಳುತನ, ನನ್ನನ್ನೂ ಸೇರಿಸಿ, ನನ್ನ ಅರಿವಿಗೆ ಬಂದಿದ್ದು.

ಅಸಾಹಿತ್ಯಿಕ ವಾತಾವರಣದಿಂದಲೇ ಇವತ್ತು ಸಾಹಿತ್ಯ ಹೊಸ ಜೀವ ಚೈತನ್ಯವನ್ನು ಮರಳಿ ಪಡೆಯಬೇಕಿದೆ ಎನ್ನುವುದರ ಹಿಂದಿನ ಸತ್ಯ ಗೋಚರಿಸುವುದು ಕೂಡ ಇಲ್ಲೇ. ಇಲ್ಲಿ ಯಾವುದೇ ಗಿಮ್ಮಿಕ್ ಇಲ್ಲದೆ, ಸರಳವಾಗಿ, ಪುಟ್ಟದಾಗಿ, ಪ್ರಾಮಾಣಿಕವಾಗಿ ಘಟನೆಗಳು ಒಂದರ ನಂತರ ಒಂದರಂತೆ ನಿರೂಪಿಸಲ್ಪಟ್ಟಿವೆ. ಕೆಲವು ನಮ್ಮನ್ನು ಆತಂಕದಿಂದ ಉಸಿರು ಬಿಗಿಹಿಡಿಯುವಂತೆ ಮಾಡಿದರೆ ಇನ್ನು ಕೆಲವು ಸಿನಿಮಾ ಕತೆಗಿಂತ ಹೆಚ್ಚು ಕುತೂಹಲಕರ ತಿರುವುಗಳನ್ನು, ಅನಿರೀಕ್ಷಿತಗಳನ್ನು ತೋರಿಸಿ ಬದುಕಿನ ರೀತಿಯ ಬಗ್ಗೆ ಅಚ್ಚರಿ, ಕೌತುಕ ಮೂಡಿಸುತ್ತವೆ. ಕೆಲವು ಪ್ರಸಂಗಗಳು ನಮ್ಮ ಭಾವವಲಯವನ್ನು ನುಗ್ಗಿ ಕಲಕಿದರೆ ಇನ್ನು ಕೆಲವು ಮುಗುಳ್ನಗೆಯಲ್ಲಿ ಮುಗಿಯುತ್ತವೆ.

ನಮ್ಮೆಲ್ಲರ ಹುಟ್ಟಿನ ಸ್ವಲ್ಪವೇ ಮುನ್ನ ನಡೆದಿರಬಹುದಾದ ಗಡಿಬಿಡಿಯ ಹಲವು ಮುಖಗಳನ್ನು ಎಳೆ ಎಳೆಯಾಗಿ ಇಲ್ಲಿ ಕುಮುದಾ ನಮ್ಮೆದುರು ತೆರೆದಿಡುತ್ತಾರೆ. ತಾವು ಎದುರಿಸಿದ ಧರ್ಮಸಂಕಟಗಳನ್ನು, ಹೃದಯ ಕರಗಿಸುವ ಮುಗ್ಧರ ಪ್ರಾಮಾಣಿಕತೆಯನ್ನು ಅವರು ಯಾವ ತಂತ್ರಗಾರಿಕೆಯಿಲ್ಲದೆ, ಸಹಜವಾಗಿ, ಅದರೆಲ್ಲ ವಿವರಗಳೊಂದಿಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕತೆಕಟ್ಟುವುದಿಲ್ಲ. ಅಂಥ ಆಮಿಷಕ್ಕೆ ಬಲಿಯಾಗದೆ ಅನುಭವವನ್ನು ಅನುಭವವನ್ನಾಗಿಯೇ ನಿರೂಪಿಸುತ್ತ ನಮ್ಮ ಜೊತೆ ತಾನೂ ನಿಂತು ಅದನ್ನು ನೋಡುತ್ತಾರೆಯೇ ಹೊರತು ಅದರಲ್ಲಿ ತನ್ನದೇನೋ ಇದೆಯೆಂಬ ಅಂಟು-ನಂಟು ಮುಂದೆ ಮಾಡುವುದಿಲ್ಲ.
ನೂರ ಅರವತ್ತಾರು ಪುಟಗಳಲ್ಲಿ ಒಟ್ಟು ನಲವತ್ತು ಪ್ರಸಂಗಗಳನ್ನು ಬರೆದಿರುವ ಕುಮುದಾರ ಪುಸ್ತಕವನ್ನು ಅವನಿ ರಸಿಕರ ರಂಗ ಪ್ರಕಾಶನ, ೨ನೇ ಮುಖ್ಯ ರಸ್ತೆ, ೩ನೇ ಅಡ್ಡ ರಸ್ತೆ, ನಾರಾಯಣಪುರ, ಧಾರವಾಡ - ೫೮೦ ೦೦೮ ಇವರು ಪ್ರಕಟಿಸಿದ್ದಾರೆ. ಬೆಲೆ ಎಂಭತ್ತು ರೂಪಾಯಿ. ಪ್ರಕಟನೆಯ ಹಿಂದೆ ನಮ್ಮ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾದ ಶ್ರೀಧರ ಬಳಗಾರ ಇದ್ದಾರೆ. ಜಿ.ಎಂ. ಬೊಮ್ನಳ್ಳಿಯವರದೂ ಸೇರಿದಂತೆ ಉತ್ತಮ ಕಲಾವಿದರ ರೇಖಾ ಚಿತ್ರಗಳ ಸೊಗಸಿದೆ. ಜಯಂತ್ ಕಾಯ್ಕಿಣಿಯವರ ಬೆಚ್ಚನೆಯ ಮುನ್ನುಡಿಯಿದೆ.

ಸಿಟಿಗಳಲ್ಲಿ ಸಹಜವಾದ ಬದುಕಿನಿಂದ ದೂರಾಗಿ, ಹಣದ ಹಿಂದೆ ಹೂಡಿದ ಓಟದಲ್ಲಿ ಎಲ್ಲೋ ಕಳೆದುಹೋದಂತಿರುವ ನಮ್ಮೊಳಗೆ ನಾವು ಕಳೆದುಕೊಳ್ಳುತ್ತಿರುವುದರ ಒಂದು ತುಣುಕನ್ನಾದರೂ ಈ ಹೊತ್ತಗೆ ತೋರಿಸಿಕೊಡುತ್ತದೆ ಎಂಬ ಪುಟ್ಟ ಕಾರಣಕ್ಕಾಗಿಯಾದರೂ ಹೆತ್ತ ತಾಯ ನೆನಪಲ್ಲಿ ಓದಬೇಕಾದ ಪುಸ್ತಕವಿದು. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, October 10, 2007

ಪ್ರೀತಿ ಇಲ್ಲದ ಮೇಲೆ...

ಕಾರಂತರು ಎಲ್ಲೋ ಹೇಳಿದ ಮಾತಿದು. ಅವರಿಗೆ ಕಿರಿಯ ಸಾಹಿತಿಗಳು, ಇನ್ನೂ `ಬರೆಯುವುದೋ ಬೇಡವೋ' ಅಂತ ಯೋಚಿಸುತ್ತಿರುವವರು ಪತ್ರ ಬರೆಯುವುದಿತ್ತಂತೆ. ಹೀಗೀಗೆ, ನಾನೊಂದು ಕತೆ ಬರೆಯಬೇಕಂತ ಇದ್ದೇನೆ, ತಮ್ಮ ಸಲಹೆ ಬೇಕು ಅಂತಲೋ, ನಾನೊಂದು ಕಾದಂಬರಿ ಬರೆಯಬೇಕಂತ ಇದ್ದೇನೆ ತಮ್ಮ ಆಶೀರ್ವಾದ ಬೇಕು ಅಂತಲೋ ಬರೆದ ಪತ್ರಗಳು. ಕಾರಂತರು ಅವರಿಗೆಲ್ಲ ಸಾಮಾನ್ಯವಾಗಿ ಬರೆಯುತ್ತಿದ್ದ ಮಾತೊಂದಿತ್ತಂತೆ. ಬೇರೆಯವರಿಗೆ ಹೇಳಬೇಕಾದಂಥ ವಿಚಾರ ನಿಮ್ಮಲ್ಲಿ ಇದೆಯೋ. ಅದನ್ನು ನೀವು ಯಾಕೆ ಬರೆಯಬೇಕು ಅಂತ ನಿಮಗೆ ಗೊತ್ತಿದೆಯೋ. ನೀವು ಬರೆದಿದ್ದನ್ನು ನಾನು ಯಾಕೆ ಓದಬೇಕು ಅಂತ ಯೋಚಿಸಿದ್ದೀರೋ.

ನಮ್ಮ ಅನೇಕ ಸಾಹಿತಿಗಳು ನಾನೇಕೆ ಬರೆಯುತ್ತೇನೆ ಎಂಬ ಬಗ್ಗೆ ಬರೆದಿದ್ದಾರೆ. ಬರೆಯುವ ಬಯಕೆ ಅದಮ್ಯವೂ, ಅದು ಅತ್ಯಂತ ಸೂಕ್ಷ್ಮವೂ, ಅದು ಆಯಾ ಭಾಷೆಯ ಅಮ್ಮನ ಸೇವೆಯೂ ಎಂದೆಲ್ಲ ಓದಿದ್ದೇವೆ. ಇರಬಹುದು ಅಂತ ಸುಮ್ಮನಿರುತ್ತೇವೆ. ಹಾಗೆಯೇ ನಾವೂ ನಾವೇಕೆ ಓದುತ್ತೇವೆ ಎಂಬ ಪ್ರಶ್ನೆಯನ್ನೂ ಹಾಕಿಕೊಂಡು ಇಂಥದ್ದೇ ಉತ್ತರಗಳನ್ನು ಕೊಟ್ಟುಕೊಂಡು ಬೇಕಿದ್ದರೆ ಇದೆಲ್ಲ ಕನ್ನಡಮ್ಮನ ಸೇವೆ ಎಂದುಕೊಂಡು ಖುಶಿಪಡಬಹುದು!

ನಮ್ಮ ದೇಶದ ಪುರಾತನ ಸಾಹಿತ್ಯಕೃತಿಗಳನ್ನು ಗಮನಿಸಿದರೆ ಅವುಗಳಲ್ಲಿ ಧರ್ಮ, ನ್ಯಾಯ, ನೀತಿ, ಆತ್ಮ, ಮೋಕ್ಷಗಳೆಲ್ಲ ತುಂಬಿಕೊಂಡಂತಿದೆ. ಎಲ್ಲ ದೇಶಗಳಿಗೂ ಇದು ನಿಜವಿರಬಹುದೇನೋ. ಹೌದೋ ಅಲ್ಲವೋ ಯೋಚಿಸಿ, ಸರಿ ಸುಮಾರು ಎಲ್ಲ ಪುರಾಣಗಳು, ವೇದ, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ, ಭಾಗವತ, ರಾಮಾಯಣ, ಮಹಾಭಾರತ ಎಲ್ಲವೂ ತಾನು ಯಾರು, ಎಲ್ಲಿಂದ ಬಂದೆ, ಯಾತಕ್ಕೆ ಬಂದೆ, ತಾನು ಏನು ಮಾಡಬೇಕಿಲ್ಲಿ, ಸಾವು ಎಂದರೆ ಏನು, ಸತ್ತ ನಂತರ ಏನು, ಅದೇನೇ ಇದ್ದರೂ ಇಲ್ಲಿನ ಬದುಕಿಗೂ ಅದಕ್ಕೂ ಏನಾದರೂ ಸಂಬಂಧ ಇದೆಯೆ, ಸತ್ತ ಜೀವಿ ಮತ್ತೆ ಹುಟ್ಟಿಬರುತ್ತದೆಯೆ, ಬಂದರೆ ಏನಾಗಿ ಬರುತ್ತದೆ, ಮತ್ತೆ ಮನುಷ್ಯನಾಗಿಯೇ ಬರುತ್ತದಾ, ಇಲ್ಲವಾದರೆ ಅದಕ್ಕೆಲ್ಲ ಒಂದು ಕಾರ್ಯಕಾರಣ ಸಂಬಂಧ ಇದ್ದೀತೆ, ಹಾಗಾದರೆ ಇಲ್ಲಿ ಬದುಕಬೇಕಾದ ಬಗೆಯ ಕುರಿತಂತೆ ಒಂದು ಅಗಮ್ಯ, ಅಮೂರ್ತ, ಅಸ್ಪಷ್ಟ, ಅಲಿಖಿತ ಆದೇಶ ಇದೆಯೆ? ಇದ್ದರೆ ಅದೇನಿರಬಹುದು ಎಂಬ ಕುರಿತು ಮನುಷ್ಯ ನಡೆಸಿದ ನಿರಂತರ ಶೋಧ ಇರಬಹುದೇ ಅನಿಸಿದೆ.

ಇದೇ ಶೋಧ ತಿಳಿದೋ ತಿಳಿಯದೆಯೋ ನಮ್ಮ ಎಲ್ಲ ಸಾಹಿತ್ಯದ ಹಿಂದಿನ ಪ್ರೇರಣೆ, ನಮ್ಮ ಎಲ್ಲ ಓದಿನ ಹಿಂದಿರುವ ಪ್ರೇರಣೆ ಎಂದು ನಾನು ತಿಳಿದಿದ್ದೇನೆ. ಅದು ಬರೇ ಇನ್ನೊಂದು ಜೀವಿಯ ಕಷ್ಟ ಸುಖ ತಿಳಿಯುವ ಕುತೂಹಲವಷ್ಟೇ ಇದ್ದಿರಲಾರದು. ಇಲ್ಲ, ನಿಮಗೆ ಬೇರೆ ಏನೋ ಹೊಸತು ಹೊಳೆದಿದ್ದರೆ, ಅದನ್ನು ನನಗೂ ಹೇಳಿ. ತುಂಬ ಹಿಂದೆ ಯಾರೋ ಹೇಳಿದ್ದರು, ಮನಸ್ಸು - ಈಶ ಮನುಷ್ಯ ಅಂತೆಲ್ಲ. ಮೊನ್ನೆ ಮೊನ್ನೆ ನೋಡಿದ ಯಕ್ಷಗಾನದಲ್ಲಿ ರಾಮ ಎಂದರೆ ನಾರಾಯಣನು ನರನಾಗಿ ಹುಟ್ಟಿಬಂದು ನರನು ನಾರಾಯಣನಾಗುವ ದಾರಿ ಯಾವುದು ಅಂತ ಜಗತ್ತಿಗೆ ತೋರಿಸಿಕೊಟ್ಟವ ಅಂತಲೇ ಅರ್ಥ ಎಂದಿದ್ದು ನೆನಪಿದೆ. ಉತ್ತರಾಯಣ, ದಕ್ಷಿಣಾಯಣ ಎಲ್ಲ ಇರುವಂತೆಯೇ ರಾಮಾಯಣ; ಸೂರ್ಯ ನಡೆಯುವ ದಾರಿ ಇರುವ ಹಾಗೆಯೇ ಇದು ರಾಮ ನಡೆದ ದಾರಿ ಎಂದೆಲ್ಲ ಅಲ್ಲಿ ವಿವರಣೆ ಬಂತು. ಇದು ಬರೇ ರಾಮನಿಗೆ, ರಾಮಾಯಣಕ್ಕೆ ಸಲ್ಲಬೇಕಾಗಿಲ್ಲ. ಸಮಸ್ತ ಸಾಹಿತ್ಯ ಇಂಥದೇ ಒಂದು `ದಾರಿ'ಯ ಮರು ಅನ್ವೇಷಣೆ, ಶೋಧ ಅನಿಸುವುದಿಲ್ಲವೆ?

ಅನಿಸುತ್ತದೆ ಮತ್ತು ಅನಿಸುವುದಿಲ್ಲ ಎಂದೇ ಭಾವಿಸುವ.

ಅನಿಸಿದರೆ ಅದು ಕ್ರಮೇಣ ಇನ್ನಷ್ಟು ಮತ್ತಷ್ಟು ಸಂಕೀರ್ಣವಾಗಿ ಮನುಷ್ಯ ಸ್ವಭಾವಗಳನ್ನು, ಮನುಷ್ಯ ಸಂಬಂಧಗಳನ್ನು, ಮನುಷ್ಯ ಅನಿವಾರ್ಯವಾಗಿ ಹೊರಬೇಕಾಗಿ ಬಂದ ಈ ಅನಿಶ್ಚಿತ ಮನಸ್ಸು ಮತ್ತು ಅಲ್ಲಿ ಹುಟ್ಟುವ ಅಸಂಖ್ಯ ಅತಿರೇಕಗಳನ್ನೆಲ್ಲ ಅರ್ಥೈಸುತ್ತ, ಅದರಲ್ಲೇ ಹಣ್ಣಾಗುತ್ತ, ಹಣ್ಣಾಗಿ ಸಿಕ್ಕ ಫಲಶ್ರುತಿಯನ್ನು ಅಂಥ ಶೋಧದ ಹಾದಿಯಲ್ಲಿರುವ ಉಳಿದ ಮಂದಿಗೆ ಒದಗಿಸುತ್ತ ಮುಂದೆ ಸಾಗಬೇಕಾಗುತ್ತದೆ. ನಮ್ಮ ಅನೇಕ ಚಿಂತಕರು, ಸಾಧಕರು, ತತ್ತ್ವಜ್ಞಾನಿಗಳು ಹೇಳಿದ್ದಾರೆ, ಪ್ರತಿಯೊಬ್ಬನೂ ತನ್ನ ಸಾಧನೆಯ ಹಾದಿಯನ್ನು ತಾನೇ ಕಂಡುಕೊಳ್ಳಬೇಕೇ ಹೊರತು ಇನ್ಯಾರೋ ಶೋಧಿಸಿದ ರೆಡಿಮೇಡ್ ಹಾದಿ ಅನ್ನುವಂಥದು ಒಂದು ಇಲ್ಲವೇ ಇಲ್ಲ ಅಂತ. ಆದರೆ ಇತರರು ನಡೆಸಿದ ಇದುವರೆಗಿನ ಶೋಧ ನಮಗೆ ಸಹಾಯಕವಾಗಬಹುದು, ಅಷ್ಟೇ. ಅದೇ ನಮ್ಮದೂ ಆಗಲಾರದು! ಕ್ರಿಸ್ತ ತನ್ನ ಶಿಲುಬೆಯನ್ನು ತಾನೇ ಹೊತ್ತಿದ್ದರ ಮರ್ಮ ಇದೇ ಅಂತೆ! ಸಾಹಿತ್ಯ ನಮಗೆ ಬದುಕನ್ನು, ಸಹಜೀವಿಗಳನ್ನು, ಅದೆಲ್ಲದರ ಮೂಲಕವೇ ಸ್ವತಃ ನಮ್ಮನ್ನೂ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ಮಾಡಿ ಇಲ್ಲಿ ಅರ್ಥಪೂರ್ಣವಾಗಿ ಬದುಕುವುದನ್ನು ಕಲಿಸುತ್ತದೆ. ಕಲಿತಿದ್ದು ಸಾರ್ಥಕವಾಗುವಂತೆ ಕೆಲವರಾದರೂ ಬದುಕಿರುವುದನ್ನೂ ಕಾಣುತ್ತೇವೆ. ಎಲ್ಲರಿಗೂ ಅದು ಸಾಧ್ಯವಾಗಲೇ ಬೇಕೆಂದಿಲ್ಲವಲ್ಲ. ತಿಳಿದುಕೊಳ್ಳುವುದೇ ಬದುಕಾಗಿಬಿಟ್ಟರೆ ನಮ್ಮ ಜ್ಞಾನವೇ ಬದುಕಬೇಕಿತ್ತು, ನಾವೇಕೆ ಇರಬೇಕು, ಅದನ್ನು ಬದುಕಲು!

ಅನಿಸುವುದಿಲ್ಲ ಎನ್ನುವವರು ಸಾಹಿತ್ಯದಿಂದ ಮನರಂಜನೆಯ ಆಚೆ ಏನನ್ನೂ ನಿರೀಕ್ಷಿಸುವುದಿಲ್ಲ ಅನ್ನಬಹುದೆ? ಮನರಂಜಿಸದ ಸಾಹಿತ್ಯ ಸಾಹಿತ್ಯ ಅನಿಸಿಕೊಳ್ಳುವುದಿಲ್ಲ ಎನ್ನುವುದು ಸತ್ಯವೇ. ದರ್ಶನ ಶಾಸ್ತ್ರಗಳನ್ನು ಉಪನಿಷತ್ತುಗಳಾಗಿ ಸಂಸ್ಕರಿಸಿದ ನಂತರವೂ ಅದು ಎಲ್ಲರನ್ನೂ ತಲುಪಲಿಲ್ಲ ಅಂತ ಭಾಗವತ, ಪುರಾಣಗಳು, ಮಹಾಕಾವ್ಯಗಳು ಹುಟ್ಟಿಕೊಂಡಿದ್ದಲ್ಲವೆ? ಗೀತೆ ಮಹಾಭಾರತದಲ್ಲಿದ್ದರೂ ಮಹಾಭಾರತದಿಂದ ಅಷ್ಟೋ ಇಷ್ಟೋ ಬೇರೆಯೇ ಆಗಿ ಉಳಿಯುವುದು ಸತ್ಯವಲ್ಲವೆ? ಈ ಕುರಿತ ಚರ್ಚೆ ಹಾಗಿರಲಿ. ಅದು ಸಾಹಿತ್ಯದ ಉದ್ದೇಶವೇನು, ಜನಪ್ರಿಯ ಸಾಹಿತ್ಯ ಎಂದು ಕೆಲವರು ಮೂಗು ಮುರಿಯುವುದೇಕೆ, ಶ್ರೇಷ್ಠ ಸಾಹಿತ್ಯ ಜನಪರವಾಗಿಲ್ಲ ಎಂಬುದು ಸುಳ್ಳೆ, ಜನಪ್ರಿಯ ಸಾಹಿತ್ಯವೂ ಶ್ರೇಷ್ಠವಾಗಿರಬಾರದೆಂದಿದೆಯೆ ಎಂಬೆಲ್ಲ ಪ್ರಶ್ನೆಗಳನ್ನು ಹುಟ್ಟಿಸಿ ನಾವೆಲ್ಲ ನಮಗಿಂತ, ನಮ್ಮ ಸಾಹಿತ್ಯಕ್ಕಿಂತ ದೊಡ್ಡದಾದ ಬದುಕನ್ನು ಮರೆತು, ಇವೆಲ್ಲಕ್ಕಿಂತ ಸಣ್ಣದಿದ್ದು ಇನ್ನೆರಡೇ ಕ್ಷಣದಲ್ಲೋ ನಾಳೆಯೋ ಮುಗಿದೇ ಬಿಡಬಹುದಾದಷ್ಟು ಸಣ್ಣದೂ ಅನಿಶ್ಚಿತವೂ ಆದ ಈ ಬದುಕಿನಲ್ಲಿ ಸುಮ್ಮನೇ ಒಣ ಜಗಳಕ್ಕಿಳಿಯುವಂತೆ ಮಾಡುತ್ತದೆ. ಅಷ್ಟು ಸಣ್ಣವರಾಗುವುದೇಕೆ?

ನನ್ನದೇನನ್ನೋ ನಿಮ್ಮ ಜೊತೆ ಹಂಚಿಕೊಳ್ಳಬೇಕು, ನಿಮ್ಮ ಜೊತೆ ಹಂಚಿಕೊಳ್ಳಬಹುದು ಎಂದು ಮೊತ್ತ ಮೊದಲಾಗಿ ನನಗೆ ಅನಿಸಬೇಕಾದರೆ ನನಗೆ ನಿಮ್ಮೆಲ್ಲರನ್ನೂ ತೆರೆದ ಮನಸ್ಸಿನಿಂದ ಪ್ರೀತಿಸುವುದು ಸಾಧ್ಯವಾಗಬೇಕು! ನಿಮ್ಮಲ್ಲಿ ಒಬ್ಬನೇ ಒಬ್ಬನ ಮೇಲೆ ನನ್ನ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕೂತು ಕೊರೆಯುವ ಕೆಟ್ಟ ಭಾವನೆ ಇದ್ದದ್ದೇ ಆದರೆ ನನಗೆ ಬರೆಯುವುದು ಕಷ್ಟವಾಗುತ್ತದೆ, ನನ್ನ ಬರವಣಿಗೆ ಕೃತಕವಾಗುತ್ತದೆ. ಇಡೀ ಜಗತ್ತಿಗೆ ಪ್ರೀತಿಯಿಂದ ತೆರೆದುಕೊಳ್ಳುವ ಕ್ರಿಯೆ ಅದು, ಬರೆಯುವುದು.

ಆದರೆ ಏನಾಗುತ್ತಿದೆ ನೋಡಿ. ಸಾಹಿತಿಯೊಬ್ಬ ಸ್ವಲ್ಪ ಹೆಸರು, ಖ್ಯಾತಿಗಳಿಸಿದ್ದೇ ಸಂಪಾದಕರ, ಬೇರೆ ಸಾಹಿತಿಗಳ ನಂಟು ಸಾಧಿಸುತ್ತಾನೆ. ಅಥವಾ ಮೊದಲು ಹಾಗೆ ನಂಟು ಸಾಧಿಸಿಯೇ ಹೆಸರು ಕೀರ್ತಿಗಳಿಸುತ್ತಾನೆ! ಕ್ರಮೇಣ ಬೇರೆ ಸಾಹಿತಿಗಳ ಬಗ್ಗೆ ವಿಷ ಕಕ್ಕುವುದಕ್ಕೆ ತೊಡಗುತ್ತಾನೆ. ಅವರಿವರ ಬಗ್ಗೆ ಬೇಕಾಗಿಯೋ ಬೇಡವಾಗಿಯೋ ಅಭಿಪ್ರಾಯಗಳನ್ನು ಹಂಚತೊಡಗುತ್ತಾನೆ. ಅಷ್ಟರಲ್ಲಿ ಅವನ ಅಭಿಪ್ರಾಯವನ್ನು ಮುಖಬೆಲೆಗೇ ಸ್ವೀಕರಿಸುವವರು, ಹಾಗೆ ಮಾಡದೆ ಉಪಾಯವಿಲ್ಲದವರು, ಸಮಯವಿಲ್ಲದವರು, ನೇರ ಸಂಪರ್ಕವಿಲ್ಲದವರು ಎಲ್ಲ ಹುಟ್ಟಿಕೊಂಡಿರುತ್ತಾರೆ. ಹೀಗೆ ಸಾಹಿತಿ ವ್ಯವಸ್ಥಿತವಾಗಿ ಕೆಲವಾದರೂ ಗೋಡೆಗಳನ್ನೆಬ್ಬಿಸುತ್ತ ಹೋಗುತ್ತಾನೆ. ತನ್ನ ಹೆಸರು ಮತ್ತೆ ಮತ್ತೆ ಅಚ್ಚಾಗಬೇಕೆಂಬ ಹಪಹಪಿಕೆಯಲ್ಲೇ ಬೇರೆಯವರ ಹೆಸರು ಬರದಂತೆ ಏನು ಮಾಡಬಹುದು ಎಂದೆಲ್ಲ ಯೋಚಿಸುವುದು, ಪ್ರಯತ್ನಿಸುವುದು ತೊಡಗುತ್ತದೆ. ನೀವೂ ಇಂಥವರನ್ನು ನೋಡಿರುತ್ತೀರಿ. ನಡುವೆ ಇವರು ಬೇರೆಯವರು ಬರೆದಿದ್ದನ್ನು ಓದುವ ಅಭ್ಯಾಸ ಬಿಟ್ಟಿರುತ್ತಾರೆ, ಅಂಥದ್ದು ಇದ್ದಿದ್ದರೆ. ಇನ್ನೂ ಕೆಲವರು, ಇವರ ಬಳಿ ಯಾರೋ ಸಂಪಾದಕರು ಅದೂ ಇದೂ ಕೇಳದೇ ಇದ್ದರೆ ಸ್ವತಃ ತಾವಾಗಿಯೇ ಏನಾದರೂ ಬರೆಯುವುದನ್ನೂ ಬಿಟ್ಟಿರುತ್ತಾರೆ! ಯಾಕೆಂದರೆ ತಾನು ಬದುಕುತ್ತಿರುವ ಜಗತ್ತನ್ನು ಅದರಲ್ಲಿರುವ `ತನ್ನಂಥ' ಕೆಲವೇ ಒಳ್ಳೆಯ ಅಂಶಗಳಿಗಾಗಿಯಾದರೂ ಮುಗ್ಧವಾಗಿ ಪ್ರೀತಿಸಬಲ್ಲ ಸಾಧ್ಯತೆಯಿಂದಲೇ ಇವರು ದೂರವಾಗಿರುತ್ತಾರೆ. ಇಂಥವರ ಸಾಹಿತ್ಯ ನಮಗಾದರೂ ಏನನ್ನು ಕೊಡುತ್ತದೆ ಎಂಬ ಮಾತು ಬಿಡಿ. ಸ್ವತಃ ಇವರು ಒಂದು ದಿನ ಏನಾಗಿರುತ್ತಾರೆ ಸ್ವಲ್ಪ ಯೋಚಿಸಿ!

ನಾನೇಕೆ ಬರೆಯುತ್ತೇನೆ, ನೀವೇಕೆ ಅದನ್ನು ಓದಬೇಕು ಎಂದು ಬರೆಯುವ ಪ್ರತಿಯೊಬ್ಬರೂ ಆಗಾಗ ಗುಟ್ಟಿನಲ್ಲಾದರೂ ಕೇಳಿಕೊಳ್ಳುವುದು ಒಳ್ಳೆಯದೇ. ಒಂದು ಹಂತದ ನಂತರ ಅದೂ ಸಾಧ್ಯವಾಗುವುದಿಲ್ಲ. ಅದು ಸಾಧ್ಯವಾಗದಿದ್ದರೂ ಬೇರೆಯವರು ಯಾಕೆ ಬರೆಯಬೇಕು, ಅದನ್ನು ಹೇಗೆ ನಿಲ್ಲಿಸಬಹುದು ಎಂದು ಯೋಚಿಸುವುದನ್ನಾದರೂ ನಿಲ್ಲಿಸಿದರೆ ಸ್ವತಃ ಸಾಹಿತಿಗೂ, ಅವನ ಸಾಹಿತ್ಯಕ್ಕೂ ಒಳ್ಳೆಯದಾಗುತ್ತದೆ ಅನಿಸುವುದಿಲ್ಲವೆ? ಒಂದು ಹಂತದ ನಂತರ ಅದೂ ಸಾಧ್ಯವಾಗುವುದಿಲ್ಲವೇನೋ! ಕಣ್ಣೆದುರೇ ಒಬ್ಬ `ಸಾಹಿತಿ' ತನ್ನ ಒಂದಾನೊಂದು ಕಾಲದ ಗೆಳೆಯನಾಗಿದ್ದ ಇನ್ನೊಬ್ಬನ ಮೇಲೆ ಹೀಗೇ ಗೋರಿ ಎಳೆದಿದ್ದನ್ನು ನೋಡಿ ಇಷ್ಟೆಲ್ಲ ಬರೆದೆ, ಸಂಕಟದಿಂದ; ನನ್ನ ಗೆಳೆಯ ಈ ಮಟ್ಟಕ್ಕಿಳಿದನಲ್ಲಾ ಅಂತ, ಆ ಇನ್ನೊಬ್ಬ ಪ್ರೀತಿಯಿಂದ ಈ ಜಗತ್ತಿನೊಂದಿಗೆ ಬೆರೆಯುವುದು, ಬರೆಯುವುದು ತೊಡಕಿನ ಹಾದಿಯಾಗುವುದಲ್ಲ ಅಂತ. ಇನ್ನೇನಿಲ್ಲ ಬಿಡಿ. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, October 1, 2007

ದೇವರು ಮತ್ತು ಪಾಪ

ಅದು ತೀರ ಹಳ್ಳಿಯೇನೂ ಅಲ್ಲ. ಉಡುಪಿಗೂ ಕುಂದಾಪುರಕ್ಕೂ ನಟ್ಟ ನಡುವೆ ಇದ್ದ ಊರು. ಗುಂಡ್ಮಿ, ಪಾಂಡೇಶ್ವರ, ಐರೋಡಿ ಎಂದೆಲ್ಲ ನಾಲ್ಕಾರು ಗ್ರಾಮಗಳು ಸೇರಿ ಒಂದು ಊರು ಆದ ಹಾಗಿತ್ತದು. ನನ್ನ ಬಾಲ್ಯದ ಬಹಳ ಮುಖ್ಯ ಎನ್ನಬಹುದಾದ ದಿನಗಳನ್ನೆಲ್ಲ ನಾನು ಕಳೆದಿದ್ದು ಇಲ್ಲೇ. ನಾನು ಹೈಸ್ಕೂಲಿಗೂ ಬರುವ ಮೊದಲಿನ ಕೆಲವು ನೆನಪುಗಳನ್ನು ಹೇಳುತ್ತೇನೆ. ನಮ್ಮ ಮನೆಗೆ ಹತ್ತಿರದಲ್ಲೇ ಅಮ್ಮನ ಮನೆ ಎಂದು ನಾವೆಲ್ಲ ಕರೆಯುತ್ತಿದ್ದ ಒಂದು ಮನೆಯಿತ್ತು. ಊರಿಗೇ ಬಹುಷಃ ಎರಡನೆಯ ಅಥವಾ ಮೂರನೆಯ ಶ್ರೀಮಂತ ಕುಟುಂಬ ಇದ್ದೀತದು. ಆದರೂ ಯಾರೂ ಆ ಮನೆಯ ಯಜಮಾನನ ಹೆಸರಿನಿಂದ ಆ ಮನೆಯನ್ನು ಗುರುತಿಸುತ್ತಿರಲಿಲ್ಲ. ಎಲ್ಲರಿಗೂ ಅದು ಅಮ್ಮನ ಮನೆ. ಯಜಮಾನರ ಮಡದಿಗೆ ಪ್ರತಿ ಶನಿವಾರ ಎಂದು ನೆನಪು, ದೇವಿ ಮೈಮೇಲೆ ಬರುತ್ತಿದ್ದಳು. ತೀರ ಮೊದಲು ಆಕೆ ಮನೆಯೆದುರಿನ ವಿಶಾಲವಾದ ಜಗಲಿಯಲ್ಲೇ ಅತ್ತಿತ್ತ ನಡೆದಾಡುತ್ತ ಹಳ್ಳಿಯ ಮುಗ್ಧ ಮಂದಿಯ ಸಮಸ್ಯೆ, ಕಷ್ಟ ನಷ್ಟಗಳಿಗೆ ತನಗೆ ತೋಚಿದ ಪರಿಹಾರ, ಉಪಶಮನ ಸೂಚಿಸುತ್ತಿದ್ದಳು. ಜಗಲಿಗೆ ಸಿಮೆಂಟು ಹಾಕಲಾಗಿತ್ತು. ಮೇಲೆ ಜಿಂಕ್ ಶೀಟುಗಳನ್ನು ಹೊದೆಸಲಾಗಿತ್ತು. ಮನೆಯೆದುರಿನ ದನಕರುಗಳಿದ್ದ ಹಟ್ಟಿಗೂ ಮನೆಗೂ ನಡುವಿನ ಜಾಗವನ್ನೆಲ್ಲ ಇದು ಆಕ್ರಮಿಸಿದ್ದರೂ ನೆರೆದ ಜನಜಂಗುಳಿಗೆ ಸಾಲುತ್ತಿರಲಿಲ್ಲ. ನಂತರ ಕ್ರಮೇಣ ಜನ ಹೆಚ್ಚಿ, ಅಮ್ಮನ ವಯಸ್ಸೂ ಹೆಚ್ಚಿ, ಆಕೆ ಒಳಗೆ ಕುರ್ಚಿಯ ಮೇಲೆ ಕೂತಿರುವುದು ಸುರುವಾಯಿತು. ಜೊತೆಗೆ ಇಬ್ಬರು ಮೂವರು ಬಂಟರು. ಪ್ರಸಾದ ಕೊಡಲು, ತೀರ್ಥ ಎರಚಲು, ಅಮ್ಮನ ನುಡಿಗಳನ್ನು ಬಿಡಿಸಿ ಹೇಳಲು ಇತ್ಯಾದಿ. ಒಳಗೆ ಇದೆಲ್ಲ ನಡೆಯುತ್ತಿರುವಾಗ ಅಮ್ಮನ ಗಂಡ, ಮನೆಯ ಯಜಮಾನ, ಬಿಳಿಯ ಸಿಲ್ಕಿನ ಪಂಚೆ, ಶರಟು ತೊಟ್ಟು, ಅದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಎಲೆ ಅಡಿಕೆ ಜಗಿಯುತ್ತ, ಬಂದವರಲ್ಲಿ ಅಕಸ್ಮಾತ್ ಪರಿಚಯದ ಯಾರಾದರೂ ಇದ್ದರೆ ಅವರ ನಮಸ್ಕಾರ ಸ್ವೀಕರಿಸುತ್ತ ಎಲ್ಲೋ ದೃಷ್ಟಿ ನೆಟ್ಟು ಕೂತಿರುತ್ತಿದ್ದುದು ನೆನಪಿದೆ. ಶನಿವಾರವೆಲ್ಲ ಆದಷ್ಟೂ ಆತ ಮನೆಯ ಹೊರಗೇ ಇರುತ್ತಿದ್ದರು ಅನಿಸುತ್ತದೆ. ಅವರಿಗೆ ಆಗ ಏನು ಅನಿಸುತ್ತಿತ್ತೋ. ಅವರ ದಾಂಪತ್ಯ ಅದು ಹೇಗಿತ್ತೋ, ಹೆಂಡತಿಯನ್ನು ಎಲ್ಲರೂ ದೇವರೆಂದೇ ತಿಳಿದಿದ್ದಂಥ ಸಂದರ್ಭದಲ್ಲಿ ಆಕೆಯ ಗಂಡನಾಗಿ ಆತನ ಮನೋಧರ್ಮ ಎಂಥದಿತ್ತೋ ನನಗೆ ಎಂದಿಗೂ ಕುತೂಹಲವೇ.

ಅವರಿಗೊಬ್ಬ ಮಗನಿದ್ದ. ಮನೆಯ ಪರಿಚಾರಿಕೆಗೆ, ಇತ್ಯಾದಿಗೆ ಎಂದು ಮನೆಯಲ್ಲೇ ಮನೆಯವರಂತೆಯೇ ಇರುತ್ತಿದ್ದ ಹಲವರ ಜೊತೆ ಅವನೂ ಇದ್ದ. ಕೊಂಚ ಪೆದ್ದನಂತೆ ಅವನು ಕಾಣಿಸುತ್ತಿದ್ದ. ಅದೇನೇ ಇದ್ದರೂ ಆಗಲೂ ನಮಗೆಲ್ಲ ಅಲ್ಲಿ ತುಂಬ ಮನರಂಜನೆ ಸಿಗುತ್ತಿತ್ತು. ಅಲ್ಲಿ ಮೈಮೇಲೆ ಬರುವವರು, ಭೂತ ಹಿಡಿದವರು, ತಲೆಕೆಟ್ಟವರು ಎಲ್ಲ ತುಂಬ ಮಂದಿ ಬರುತ್ತಿದ್ದುದರಿಂದ ಮತ್ತು ಅಮ್ಮನ ಸಹಾಯಕರಾಗಿ ನಿಲ್ಲುತ್ತಿದ್ದ ಇಬ್ಬರು ಮೂವರು ಬೇಕಾದ ಬೇಡದ ಪ್ರಶ್ನೆ, ಉಪಪ್ರಶ್ನೆ, ಚಿತಾವಣೆ ಎಲ್ಲ ಮಾಡುತ್ತಿದ್ದುದರಿಂದ ನಮಗಿಂತ ದೊಡ್ಡವರಿಗೂ ಅಲ್ಲಿ ಸಾಕಷ್ಟು ಮನರಂಜನೆ ಸಿಗುತ್ತಿದ್ದುದರಲ್ಲಿ ಅನುಮಾನವಿಲ್ಲ. ಇನ್ನೊಬ್ಬರ ಮನೆಯ ಗುಟ್ಟಿನ ಸಂಗತಿಗಳೆಲ್ಲ ಅಲ್ಲಿ ಗಟ್ಟಿಸ್ವರದಲ್ಲಿ ಬಯಲಾಗುತ್ತಿದ್ದುದು ಇನ್ನೊಂದು ಆಕರ್ಷಣೆ. ಆದರೆ ಪರರಿಗೂ ನಮ್ಮ ಹಾಗೇ ನೋವುಗಳು, ಸಂಕಟಗಳು ಇವೆ ಎಂಬ ಸತ್ಯ ಅವರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿತ್ತೆ, ಗೊತ್ತಿಲ್ಲ. ಇನ್ನೂ ವಿಚಿತ್ರವೆಂದರೆ ಈಚೆಗೆ ಸಿಕ್ಕಿದ ಬಾಲ್ಯದ ಗೆಳೆಯನೊಬ್ಬ ಅಲ್ಲಿ ನಾವೆಲ್ಲ ಲೈನ್ ಹೊಡೆಯುತ್ತಿತ್ತಲ್ಲವ, ಚಂದಚಂದದ ಹುಡುಗಿಯರು ಬರುತ್ತಿದ್ದರಲ್ಲವ ಎಂದೆಲ್ಲ ಹೇಳಿದ್ದು ಕೇಳಿ ವಿಸ್ಮಯವಾಯಿತು! ಆ ವಯಸ್ಸಿನಲ್ಲಿ ಅಂಥದ್ದೆಲ್ಲ ನಮ್ಮ ತಲೆಯಲ್ಲಿರಲು ಸಾಧ್ಯವೇ ಇರಲಿಲ್ಲ ಎಂದು ನಂಬಿದ್ದ ನನ್ನ ನಂಬುಗೆಗೇ ಆತ ಕೊಡಲಿ ಇಟ್ಟಿದ್ದ!

ಅಲ್ಲಿ ಕೊಡುತ್ತಿದ್ದ ಪ್ರಸಾದ, ವಿಧಿಸುತ್ತಿದ್ದ ಮತ್ತೆ ಬರಬೇಕಾದ ದಿನಾಂಕದ ವಾಯದೆ, ಕೊನೆಯಲ್ಲಿ ಹಂಚುತ್ತಿದ್ದ ವಿಧವಿಧವಾದ ಹೂವುಗಳಿಗೆ, ಪ್ರಸಾದಕ್ಕೆ ನಡೆಯುತ್ತಿದ್ದ ಸ್ಪರ್ಧೆ ಎಲ್ಲ ನೆನೆದರೆ ಅಚ್ಚರಿಯಾಗುತ್ತದೆ. ಬೀಡಿಯ ತುದಿಯನ್ನು ಗರ್ಭಗುಡಿಯಲ್ಲಿ ಸುಟ್ಟು ತಯಾರು ಮಾಡಿ ಇಡಲಾಗುತ್ತಿತ್ತು. ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಅದೇ ಪ್ರಸಾದ. ಇಂತಿಷ್ಟು ದಿನ, ದಿನಕ್ಕೆ ಒಂದಾವರ್ತಿಯೋ ಎರಡು ಬಾರಿಯೋ ಆ ಬೀಡಿಯನ್ನು ಸ್ವಲ್ಪ ಸ್ವಲ್ಪವೇ ಸುಟ್ಟು ಒಂದು ಕಾಗದದಲ್ಲಿ ಅದರ ಬೂದಿಯನ್ನು ಶೇಖರಿಸಿ ಅದನ್ನು ಸೇವಿಸುವುದು ಕ್ರಮ. ಇದೇ ಬೀಡಿಯನ್ನು ಮನೆಯ ಜಂತಿಗೆ ಕಟ್ಟಲು ಕೊಡುವುದೂ ಇತ್ತು. ಅದನ್ನು ಕಾಲಕಾಲಕ್ಕೆ ಹೊಸದಕ್ಕೆ ಬದಲಾಯಿಸಬೇಕಿತ್ತು. ಇನ್ನೊಂದು ಗೋಪೀಚಂದನದ ಹುಡಿ. ವೈಷ್ಣವರು ಇಂದಿಗೂ ಮೈಮೇಲೆ ಬರೆದುಕೊಳ್ಳುವ ನಾಮಕ್ಕೆ ಇದನ್ನು ಬಳಸುತ್ತಾರೆ. ಇದನ್ನು ಕೂಡಾ ಕ್ರಮಬದ್ಧವಾಗಿ ತಿನ್ನಬೇಕಾಗುತ್ತಿತ್ತು. ಉಳಿದಂತೆ ಪ್ರತಿ ಶನಿವಾರ ದಿನವೂ ಸುಮಾರು ಮೂರುಗಂಟೆಯಿಂದ ರಾತ್ರಿ ಏಳು, ಏಳೂವರೆಯ ವರೆಗೆ ನಡೆಯುತ್ತಿದ್ದ ದರ್ಶನ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ವಸಂತ (ತುಲಸೀ ಕಟ್ಟೆಗೆ ನಡೆಸುವ ಒಂದು ಪೂಜಾವಿಧಿ), ಕೊಣ್ಕಿ (ಆಹೋರಾತ್ರಿ ತುಲಸೀಕಟ್ಟೆಯ ಸುತ್ತ ಸುಮಾರು ಹದಿನೈದು ಮಂದಿ ವಿಧವಿಧವಾಗಿ ಕುಣಿಯುತ್ತ, ಆ ನರ್ತನಕ್ಕೆ ಬೇಕಾಗಿ ನುರಿತ ಹಾಡುಗಾರನೊಬ್ಬ ಕಥಾನಕವೊಂದನ್ನು ರಾಗವಾಗಿ ಹಾಡುತ್ತ, ಕೊನೆಯಲ್ಲಿ ಮೈ ಜುಂ ಎನ್ನಿಸುವ ಕೋಲಾಟವಾಡಿ ಮುಗಿಸುವ ಒಂದು ಹರಕೆ. ಮುಂಜಾವದಲ್ಲಿ ಊಟ ಇರುತ್ತದೆ), ಶನಿದೇವರ ಕತೆ (ಇದೂ ಆಹೋರಾತ್ರಿ ಮತ್ತು ಮುಂಜಾನೆ ಊಟ) ಆ ಮನೆಯನ್ನು ನಮ್ಮ ಜಾಗ್ರತ, ಸುಪ್ತ ಪ್ರಜ್ಞೆಗಳಲ್ಲಿ ಸಂಸ್ಕೃತಿಯ ಒಂದು ಕೇಂದ್ರವೇ ಆಗಿರುವಂತೆ ರೂಪಿಸಿತ್ತೆನ್ನಬೇಕು.

ಅಲ್ಲಿಗೆ ರೆಗ್ಯುಲರ್ ಆಗಿ ಬರುವ ಭಕ್ತರಿರುವಂತೆಯೇ ರೆಗ್ಯುಲರ್ ಆದ, ದೀರ್ಘಕಾಲೀನ ಸಮಸ್ಯೆ ಹೊತ್ತವರೂ ಇದ್ದರು. ಅವರು ಬರದಿದ್ದರೆ ಆವತ್ತು ಎಲ್ಲರಿಗೂ ಬೇಜಾರಾಗುವಷ್ಟು ಮಂದಿ ಅವರಿಗೆ ಹೊಂದಿಕೊಂಡು ಬಿಟ್ಟಿದ್ದರು.

ಇದನ್ನೆಲ್ಲ ಯಾಕೆ ಹೇಳಿದೆನೆಂದರೆ, ಇತ್ತೀಚೆಗೆ ಒಂದು ಕಾದಂಬರಿ ಓದಿದೆ. ಸ್ವೀಡಿಶ್ ಮೂಲದ ಈ ಸಿಬಿಲ್ ಎಂಬ ಹೆಸರಿನ (ಪ್ರವಾದಿನಿ ಎಂಬ ಅರ್ಥವಂತೆ) ಕಾದಂಬರಿಯನ್ನು ಕನ್ನಡಕ್ಕೆ ತಂದವರು ಡಿ.ಆರ್.ಮಿರ್ಜಿ. ೧೯೫೧ರ ನೊಬೆಲ್ ವಿಜೇತ ಕೃತಿಯ ಮೂಲ ಕೃರ್ತೃ ಪಾರ್ ಲಾಗರ್ಕ್ವಿಸ್ಟ್.

ಈ ಕಾದಂಬರಿಯಲ್ಲಿ ಏಸುವಿನ ಹುಟ್ಟು, ಬದುಕು ಮತ್ತು ಸಾವನ್ನು ಹೋಲುವ ವಿವರಗಳೇ ಬರುವುದು ಕುತೂಹಲಕರ. ಇವತ್ತು ನಮ್ಮ ದೇಶದಲ್ಲಿ ಇಂಥ ಒಂದು ಕಾದಂಬರಿಯನ್ನು ಶ್ರೀರಾಮನ ನೆರಳಿನಲ್ಲೋ, ಕೃಷ್ಣನ ಕುರಿತೋ ಬರೆದರೆ ಫತ್ವಾ ಹೊರಟೀತು! ಮುಟ್ಟುಗೋಲು, ಕ್ಷಮಾಯಾಚನೆ ಎಲ್ಲ ಅಗತ್ಯವಾದೀತು! ಪೋಲಂಕಿ ರಾಮಮೂರ್ತಿಯವರ ಸೀತಾಯಣದ ನೆನಪಿರಬಹುದು. ಮತ್ತೆ ಪೋಲಂಕಿಯವರು ಬರೆಯುವುದನ್ನೇ ಬಿಟ್ಟುಬಿಟ್ಟರು, ಇರಲಿ. ನಾವು ಬರಬರುತ್ತ ನಮ್ಮನ್ನು, ನಮ್ಮದೆನ್ನುವುದನ್ನು ನಮಗಾಗಿಯಾದರೂ ನಾವೇ ವಿಮರ್ಶಿಸಿಕೊಳ್ಳುವುದನ್ನೂ, ಆ ಮೂಲಕ ನಮ್ಮನ್ನು, ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವುದನ್ನೂ ತಪ್ಪು, ಅಪರಾಧ ಎಂದು ತಿಳಿಯುತ್ತೇವೆಯೆ?

ಶಿಲುಬೆಹೊತ್ತು ಬೆಟ್ಟವೇರುತ್ತಿದ್ದ, ಮರಣದಂಡನೆಗೆ ಗುರಿಯಾದ ಒಬ್ಬ ವ್ಯಕ್ತಿಗೆ ಹಾದಿಯಲ್ಲಿ ಆಯಾಸ ಪರಿಹಾರಕ್ಕೆಂದು ಒಂದು ಘಳಿಗೆ ತನ್ನ ಮನೆಯ ಗೋಡೆಗೆ ತಲೆಯಾನಿಸಲು ಬಿಡದೆ ಗದರಿದ ತಪ್ಪಿಗೆ ಆತ ಶಾಪ ಕೊಡುತ್ತಾನೆ. ನೀನು ಸಾವಿಲ್ಲದೆ ನಿರಂತರ ಅಶಾಂತಿಯಿಂದ ತೊಳಲಾಡುತ್ತ, ನಿಂತಲ್ಲಿ ನಿಲಲಾರದೆ ಜಗವೆಲ್ಲ ಸುತ್ತುತ್ತಿರುವಂತಾಗಲಿ ಎಂಬುದೇ ಶಾಪ. ಮುಂದೆ ಹಾಗೆ ಶಪಿಸಿದವನು ಸಾಧಾರಣ ಮನುಷ್ಯನಾಗಿರದೆ ದೇವರ ಮಗನಾಗಿದ್ದ ಎಂಬುದೂ ತಿಳಿಯುತ್ತದೆ. ದೇವರೂ ಸಿಟ್ಟಿಗೆ, ಅಸಹನೆಗೆ ಹೊರತಲ್ಲವಾದರೆ, ಅವನೂ ನಮ್ಮ ನಿಮ್ಮಂತೆ ಶಾಪಕೊಡುವವನಾದರೆ ನಮಗೂ ಅವನಿಗೂ ವ್ಯತ್ಯಾಸವೇನು? ಮನುಷ್ಯ ಸಹಜ ದೌರ್ಬಲ್ಯಗಳೇಕೆ ಅವನಿಗೆ ಅರ್ಥವಾಗುವುದಿಲ್ಲ ಎಂದು ನಾವು ತಿಳಿಯಬೇಕು? ಮನುಷ್ಯ ಸಹಜ ಆಸೆ, ಆಕಾಂಕ್ಷೆ, ಸಣ್ಣತನಗಳು ಅವನಲ್ಲೂ ಇದ್ದರೇ ಅವನು ದೇವರೆ? ಅವೆಲ್ಲ ಇಲ್ಲದವನು ಇರುವುದೇ ಸುಳ್ಳಿರಬಹುದೆ? ಆದರೂ ಇದ್ದಾನೆ ಎಂದು ಹೇಳುತ್ತ, ಮನುಷ್ಯ ಸಹಜವಲ್ಲದ ರೀತಿ ನೀತಿಗಳನ್ನು ನಮಗೆ ವಿಧಿಸಿದವರು ದೇವರಾಗಿರದೆ ಲಾಭಬಡುಕ ಪುರೋಹಿತರಿರಬಹುದೆ? ದೇವರಿಗೆ ಇದೆಲ್ಲ ಗೊತ್ತಿದೆಯೆ?

ತಕ್ಕ ಮಟ್ಟಿಗೆ ಸ್ವಂತ ಮನೆ, ಹೊಲ, ಚಂದದ ಹೆಂಡತಿ, ಮಗು ಎಂದು ಸುಖವಾಗಿಯೇ ಇದ್ದ ಆತನ ದೆಶೆ ಅಂದಿನಿಂದ ಬದಲಾಗುತ್ತದೆ. ಅವನನ್ನು ನೋಡಿದ ಮಂದಿ ಇದ್ದಕ್ಕಿದ್ದ ಹಾಗೆ ಆತನ ಕಣ್ಣುಗಳು ಮುದಿಯನ ಕಣ್ಣುಗಳಾಗಿರುವುದನ್ನು ಗುರುತಿಸುತ್ತಾರೆ. ಕ್ರಮೇಣ ಎಲ್ಲರೂ ಅವನಿಂದ ದೂರವಿರಲು ಬಯಸುತ್ತಾರೆ. ಹೆಂಡತಿ ತನ್ನ ಮಗುವಿನೊಂದಿಗೆ ಮಾಯವಾಗುತ್ತಾಳೆ. ಅಶಾಂತಿ, ಗೊಂದಲ, ತಳಮಳ ಅವನ ನಿತ್ಯ ಸಂಗಾತಿಗಳಾಗುತ್ತಾರೆ. ವಿಚಿತ್ರ ಗಮನಿಸಿ. ಇಲ್ಲಿ ಈತ ಮಾಡಿದ ತಪ್ಪು ತೀರ ಸಣ್ಣದು. ಬಸ್‌ಸ್ಟ್ಯಾಂಡಿನಲ್ಲೋ, ಮನೆಬಾಗಿಲಿನಲ್ಲೋ ಅನಪೇಕ್ಷಿತವಾಗಿ ಕಾಣಿಸಿಕೊಂಡ ಒಬ್ಬ ಭಿಕ್ಷುಕನಿಗೋ, ಹುಚ್ಚನಂತೆ ಕಾಣುವ ವ್ಯಕ್ತಿಗೋ ನಾವು ನೀವು ಹಚ ಹಚ ಎಂದಷ್ಟೇ ಸಣ್ಣದು, ಅಷ್ಟೇ ದೊಡ್ಡದು. ಆದರೆ ಅದು ಕೂಡ ನಮ್ಮದೇ ಸಿಟ್ಟಿನಂತೆ ಮನಸ್ಸಿಗೆ ಹಿತಕೊಡುವ ಅನುಭವವಲ್ಲ. ಇನ್ನೊಬ್ಬರನ್ನು ಬಯ್ದುಬಿಟ್ಟ ಬಳಿಕ ಮನಸ್ಸು ಮುದುಡುವಂತೆ, ಭಾರವಾದಂತೆ ಇದೆಲ್ಲ ಎಲ್ಲೋ ಕಾಡುತ್ತ, ಚುಚ್ಚುತ್ತ ಇರುತ್ತದೆ. ಅದೇ ಶಾಪ, ಹೊಸತೇನಲ್ಲ. ಆದರೆ ದೇವರ ಮಗ ಅದನ್ನೇ ಬಾಯಿಬಿಟ್ಟು ಹೇಳಿ ಅದನ್ನು ನಿರಂತರವಾಗಿ ಈತನ ಮೇಲೆ ಹೊರಿಸಿದ್ದಾನೆ. ಎಷ್ಟೋ ಕಾಲದ ನಂತರ ಈತನಿಗೆ ತಾನೇಕೆ ಅದನ್ನು ಮೌನವಾಗಿ ಸ್ವೀಕರಿಸಿದೆ, ಅಲ್ಲೇ ನಿರಾಕರಿಸಲಿಲ್ಲ ಎಂಬುದು ಹೊಳೆಯುತ್ತದೆ!!

ಪಾಪಪ್ರಜ್ಞೆಯನ್ನು ಕೂಡ ಸ್ವೀಕರಿಸುವುದು ಅಥವಾ ನಿರಾಕರಿಸುವುದು ಒಂದು ಮನಸ್ಥಿತಿ. ಮಾಡಿದ್ದು ಪಾಪವಾಗಿದ್ದೂ, ತಪ್ಪಾಗಿದ್ದೂ ಪಾಪಪ್ರಜ್ಞೆ ನಮ್ಮನ್ನು ಕಾಡದ ಹಾಗೆ ಜಡ್ಡುಗಟ್ಟಿಕೊಂಡಿರಲು ಸಾಧ್ಯವಿದೆ! ಹಾಗಿರುವುದು ಸಾಧ್ಯವಾದಾಗ ನಮಗೆ ಯಾವುದೂ ಪಾಪ ಅನಿಸುವುದಿಲ್ಲ. ಕಾಡುವುದಿಲ್ಲ. ನಿದ್ದೆಗೆಡುವ ಸಂದರ್ಭ ಬರುವುದಿಲ್ಲ. ಆದರೆ ನಮ್ಮ ನಾಯಕನಿಗೆ ಅದೇನೂ ಹೆಚ್ಚುಹೊತ್ತು ಸಾಧ್ಯವಾಗುವುದಿಲ್ಲ. ಆತ ಪ್ರವಾದಿನಿಯೊಬ್ಬಳ ಬಗ್ಗೆ ಕೇಳಿ ತಿಳಿದು ಅವಳನ್ನು ಹುಡುಕಿಕೊಂಡು ಹೊರಡುತ್ತಾನೆ.

ಆ ಪ್ರವಾದಿನಿಗೂ ನಾನು ಮೇಲೆ ಹೇಳಿದ ಅಮ್ಮನಿಗೂ ಮನಸ್ಸು ಹೋಲಿಸಿ ನೋಡುತ್ತದೆ. ಪ್ರವಾದಿನಿಯ ನೇಮ, ನಿಷ್ಠೆ, ಅವಳಿಗೆ ಪ್ರವಾದಿನಿಯಾಗಲು ನಿಜಕ್ಕೂ ಮನಸ್ಸಿತ್ತೇ, ಎಲ್ಲರಂತೆ ಒಬ್ಬ ಹೆಣ್ಣುಮಗಳಾಗಿ ಇದ್ದುಬಿಡುವುದು ಸುಖ ಎಂದು ಎಂದಾದರೂ ಅನಿಸಿತ್ತೇ, ಅವಳಿಗೇ ಸ್ವತಃ ತಾನು ಪ್ರವಾದಿನಿ ಮತ್ತು ದೇವರು ತನ್ನಲ್ಲಿ ಆವಾಹನೆಯಾಗುತ್ತಾನೆ ಎಂದು ಪ್ರಾಮಾಣಿಕವಾಗಿ ಅನಿಸಿತ್ತೇ, ಹಾಗೆಂದು ಅವಳು ಕೊನೆತನಕ ನಂಬಿದ್ದು ಇನ್ನೇನೋ ಅಗಿತ್ತೆಂದು ನಿಮಗೆ ಕಾಣುವುದೆ, ಎಲ್ಲವನ್ನೂ ಮುಗ್ಧವಾಗಿ ನಂಬಿಯೇ ವಿವರಿಸುವ ಅವಳಿಗೆ ಅವಳ ಹೆಣ್ತನ ಎಂದೂ ಅಡ್ಡಿಯಾಗಲಿಲ್ಲವೇ, ಅಂಥ ಪಾತ್ರ ನಿರ್ವಹಿಸುತ್ತ ಇದ್ದಾಗಲೂ ಅವಳಿಗೆ `ಪಾಪ' ಮಾಡುವುದು ಶಕ್ಯವಿತ್ತೇ....

`ಪಾಪ' ಮಾಡಿಯೂ ಉಳಿದವರಂತೆ, ಸಹಜ ಮನುಷ್ಯನಂತೆ ಇರಲು ದೇವರು, ದೇವರ ಮಗ ಬಿಡುತ್ತಿದ್ದರೇ ಎಂಬುದೇ ಇಲ್ಲಿ ಮುಖ್ಯವಾದ ಪ್ರಶ್ನೆ. ಅವಳು ಮಾಡಿದ್ದು ಪಾಪ ಎಂದು ಹೇಳಿದವರು ಕೊನೆಗೂ ಯಾರು, ದೇವರೆ ಅಥವಾ ದೇವರನ್ನು ಅರ್ಥೈಸುವ ಹೊಣೆಹೊತ್ತವರೆ? ಅಲ್ಲ ದೇವರಲ್ಲಿ ಅಚಲ ವಿಶ್ವಾಸವಿಟ್ಟಿರುವ ನಮ್ಮ ನಿಮ್ಮಂಥ ಸಾಮಾನ್ಯ ಜನರೆ? ಕಾದಂಬರಿ ಹಲವು ರೀತಿಗಳಲ್ಲಿ ನಮ್ಮನ್ನು ಕಾಡುತ್ತದೆ. ನಾವೂ ಇವತ್ತಿನ ರಾಮಸೇತು, ಅಯೋಧ್ಯೆಯ ರಾಮಮಂದಿರ, ಇವುಗಳ ಕುರಿತ ಗದ್ದಲ, ಸಾವುನೋವು, ಸ್ವತಃ ವಾಲ್ಮೀಕಿಗೆ, ಶ್ರೀರಾಮನಿಗೆ ಇದೆಲ್ಲ ಕಾಣಬಹುದು ಎಂದು ಕ್ಷಣಕಾಲ ಯೋಚಿಸಬಹುದು. ಯಾವುದೇ ನಿಲುವು, ತೀರ್ಮಾನಗಳಿಲ್ಲದ, ಪ್ರಾಮಾಣಿಕವಾಗಿ ಬದುಕಿನ ಸತ್ಯವನ್ನರಸುತ್ತ ಸಾಗುವ ಒಂದು ಹಾಡಿನಂತಿರುವ ಈ ಕಾದಂಬರಿ ಅನುವಾದಿತವಾದರೂ ಸೊಗಸಾಗಿದೆ. ಐಬಿಎಚ್ ನವರು ಪ್ರಕಟಿಸಿದ್ದಾರೆ. ಬೆಲೆ ಕೇವಲ ಎಪ್ಪತ್ತು ರೂಪಾಯಿ. ಪುಟಗಳೂ ಅಷ್ಟೇ, ನೂರ ಹದಿನಾರು. ಇದನ್ನು ಓದಿ. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ