Thursday, October 11, 2007

ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

ಬಹುಷಃ ಇವತ್ತು ಕನ್ನಡ ಪತ್ರಿಕೆಗಳಲ್ಲಿ ಸಣ್ಣಕತೆಗಳ ಸ್ಥಾನವನ್ನು ಕ್ರಮೇಣ ಅಂಕಣಗಳು, ಕಾಲಮ್ಮುಗಳು ಮತ್ತು ಬ್ಲಾಗುಗಳು ಆಕ್ರಮಿಸುವಂತೆ ಕಾಣುತ್ತದೆ. ಅನುಭವವನ್ನು ಒಂದು ಚೌಕಟ್ಟಿನಲ್ಲಿ, ಯುಕ್ತ ವಿವರಗಳ ಹಂದರದಲ್ಲಿ, ಆಕರ್ಷಕವಾಗಿ ಮತ್ತು ಸಾರ್ಥಕವಾಗಿ ಕಟ್ಟಿಕೊಡುವುದು ಶ್ರಮದ ಕೆಲಸ. ಕೆಲವೊಮ್ಮೆ ಎಲ್ಲ ಸರಿಯಿದ್ದೂ ಬಯಸಿದ್ದು ಕೈಗೂಡಿರುವುದಿಲ್ಲ. ಅಲ್ಲದೆ ವಿಮರ್ಶಕರ, ಸಂಪಾದಕರ ಮರ್ಜಿ ಕಾಯುವ, ಅವರಿಗೆ ಹಲ್ಲುಗಿಂಜಿ, ಅವರಿಗೆ ಸಿಟ್ಟುಬರದ ಹಾಗೆ ಮಾತನಾಡಿ....

ಇನ್ನೊಂದು ಕಾರಣವೂ ಇದೆ. ಹೇಳಿಕೊಳ್ಳುವ ಅನುಭವವೇ ಇಲ್ಲದವರೂ ಕಾಲಮ್ಮು ಬರೆಯಬಹುದು! ನನ್ನ ಹಾಗೆ ಓದಿದ ಪುಸ್ತಕಗಳ ಬಗ್ಗೆಯೇ ಬರೆಯುತ್ತ, ಅದನ್ನೇ ಬಂಡವಾಳ ಮಾಡಿಕೊಂಡು ಅಷ್ಟಿಷ್ಟು ರಾಮಾಯಣ, ಮಹಾಭಾರತ ಅಂತೆಲ್ಲ ಉದ್ಧರಿಸುತ್ತ ಓದುಗರನ್ನು ಆಕರ್ಷಿಸಿ ನಮ್ಮ ಬರೆಯುವ ತೀಟೆ ತೀರಿಸಿಕೊಳ್ಳುವುದಕ್ಕೂ ಬ್ಲಾಗು, ಕಾಲಮ್ಮು ಅನುಕೂಲಕರ. ಆಗೊಮ್ಮೆ ಈಗೊಮ್ಮೆ ಬೇಕಾದರೆ ಯಾರೋ ಸತ್ತವರ ಬಗ್ಗೆ, ಇನ್ಯಾರದ್ದೋ ಹುಟ್ಟಿದ ಹಬ್ಬದ ಬಗ್ಗೆ ಬರೆದು ವರೈಟಿ ಮೇನ್‌ಟೇನ್ ಮಾಡಬಹುದು. ಇನ್ನು ರಾಜಕೀಯದ ಉದಾಹರಣೆಗಳನ್ನೂ ಸೇರಿಸಿದರೆ ಎಂಥವರೂ ಏನ್ ಬರೀತಾನ್ ಬಿಡಮ್ಮ ಎನ್ನುವುದು ಖಾತರಿ! ಪುಸ್ತಕ ಅಚ್ಚುಹಾಕುವುದಕ್ಕೆ ಇನ್ನೇನು ಬೇಕು?

ಆದರೆ ಇದೆಲ್ಲ ಹೆಚ್ಚು ಕಾಲ ನಡೆಯುವುದಿಲ್ಲ. ನಾಲಗೆ ಸುಳ್ಳು ಹೇಳಬಹುದು, ಕಣ್ಣು ಸುಳ್ಳು ಹೇಳುವುದಿಲ್ಲ ಎನ್ನುವುದು ಒಂದು ಹಳೆಯ ನಂಬುಗೆ. ನಾಲಗೆಯನ್ನು ಬಿಟ್ಟರೆ ಇಡೀ ದೇಹವೇ ಸುಳ್ಳಿಗೆ ಒಗ್ಗುವುದಕ್ಕೆ ಹೊತ್ತು ತೆಗೆದುಕೊಳ್ಳುವುದಂತೆ! ಹಾಗೆಯೇ ಬರೆಯುವವನ ಪ್ರಾಮಾಣಿಕತೆ ಹೆಚ್ಚು ಕಾಲ ಓದುಗನಿಂದ ಮರೆಯಾಗಿರುವುದು ಸಾಧ್ಯವಿಲ್ಲದ ಮಾತು. ಓದುತ್ತಿದ್ದ ಬಹು ಜನಪ್ರಿಯ ಅಂಕಣ ಸಂಕಲನವೊಂದನ್ನು ಅರ್ಧಕ್ಕೇ ನಿಲ್ಲಿಸಿ ನಮ್ಮಲ್ಲಿ ಅನೇಕರು ಓದುಗನನ್ನು ಟೇಕನ್ ಫರ್ ಗ್ರಾಂಟೆಡ್ ಅಂದುಕೊಂಡು ಬಿಟ್ಟಿರುವುದರ ಬಗ್ಗೆ ಅಸಹ್ಯ, ಆಶ್ಚರ್ಯಪಡುತ್ತಿರುವಾಗಲೇ ಈ ಪುಸ್ತಕ ಕಣ್ಣಿಗೆ ಬಿತ್ತು.

ಶಿರಸಿಯ ಸ್ತ್ರೀರೋಗ ತಜ್ಞರಾದ ಡಾಕ್ಟರ್ ಜಿ.ಎಂ.ಹೆಗಡೆಯವರ ಪತ್ನಿ, ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾದರೂ ಪತಿಯ ಕಾಯಕದಲ್ಲಿ ಸಾಕಷ್ಟು ಜೊತೆಜೊತೆಯಾಗಿ ತೊಡಗಿಕೊಂಡಂತಿರುವ ಶ್ರೀಮತಿ ಕುಮುದ ಜಿ.ಎಂ. ಅವರು ಬರೆದ "ಪ್ರಸೂತಿ ಗೃಹದ ಸ್ಮರಣೀಯ ಪ್ರಸಂಗಗಳು" ಎಂಬ ಪುಸ್ತಕ ಅದು. ಇಲ್ಲಿನ ಬರಹಗಳಲ್ಲಿ ತಾನು ಗಹನವಾದುದೇನನ್ನೋ ಹೇಳುತ್ತಿದ್ದೇನೆಂಬ ಪ್ರಜ್ಞೆ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿಲ್ಲ. ಭಾಷೆಯ ಆಡಂಬರವಿಲ್ಲ. ತನಗೊಬ್ಬನಿಗೇ ಹೊಳೆದ ಸತ್ಯಗಳನ್ನು ಹೇಳುತ್ತಿದ್ದೇನೆಂಬ ಅಹಂಮಿಕೆಯ ಧಾಟಿಯಿಲ್ಲ. ಮೇಲಾಗಿ ಯಾವುದೇ ಪುಸ್ತಕಗಳ ಬಗ್ಗೆ, ಅನಂತಮೂರ್ತಿ, ಚಿತ್ತಾಲ, ರಾಮಾಯಣ, ಮನುಷ್ಯನ ಸ್ವಭಾವದ ಬಗ್ಗೆ ಕುತೂಹಲಕರ ಟಿಪ್ಪಣಿ ಯಾವುದೂ ಇಲ್ಲ. ಇರುವುದು ಪ್ರಾಮಾಣಿಕವಾದ ಅನುಭವಗಳು, ನೆನಪುಗಳು ಮತ್ತು ಅವು ಸಾಮಾನ್ಯರಲ್ಲಿ ಸಾಮಾನ್ಯಳಾದ ಒಬ್ಬ ಮಹಿಳೆಯ ಮನಸ್ಸಿನಲ್ಲಿ ಹುಟ್ಟಿಸಿದ ಭಾವ, ಚಿಂತನೆ, ಬದುಕಿನ ವೈಚಿತ್ರ್ಯಗಳ ಕುರಿತ ಮುಗ್ಧ ಅಚ್ಚರಿ ಮಾತ್ರ. ಇದನ್ನು ಓದಿದಾಗಲೇ ಬಹುಷಃ ನಮ್ಮ ಅನೇಕ ಸೆಲೆಬ್ರಿಟಿ ಕಾಲಮ್ಮಿಷ್ಟರ ಟೊಳ್ಳುತನ, ನನ್ನನ್ನೂ ಸೇರಿಸಿ, ನನ್ನ ಅರಿವಿಗೆ ಬಂದಿದ್ದು.

ಅಸಾಹಿತ್ಯಿಕ ವಾತಾವರಣದಿಂದಲೇ ಇವತ್ತು ಸಾಹಿತ್ಯ ಹೊಸ ಜೀವ ಚೈತನ್ಯವನ್ನು ಮರಳಿ ಪಡೆಯಬೇಕಿದೆ ಎನ್ನುವುದರ ಹಿಂದಿನ ಸತ್ಯ ಗೋಚರಿಸುವುದು ಕೂಡ ಇಲ್ಲೇ. ಇಲ್ಲಿ ಯಾವುದೇ ಗಿಮ್ಮಿಕ್ ಇಲ್ಲದೆ, ಸರಳವಾಗಿ, ಪುಟ್ಟದಾಗಿ, ಪ್ರಾಮಾಣಿಕವಾಗಿ ಘಟನೆಗಳು ಒಂದರ ನಂತರ ಒಂದರಂತೆ ನಿರೂಪಿಸಲ್ಪಟ್ಟಿವೆ. ಕೆಲವು ನಮ್ಮನ್ನು ಆತಂಕದಿಂದ ಉಸಿರು ಬಿಗಿಹಿಡಿಯುವಂತೆ ಮಾಡಿದರೆ ಇನ್ನು ಕೆಲವು ಸಿನಿಮಾ ಕತೆಗಿಂತ ಹೆಚ್ಚು ಕುತೂಹಲಕರ ತಿರುವುಗಳನ್ನು, ಅನಿರೀಕ್ಷಿತಗಳನ್ನು ತೋರಿಸಿ ಬದುಕಿನ ರೀತಿಯ ಬಗ್ಗೆ ಅಚ್ಚರಿ, ಕೌತುಕ ಮೂಡಿಸುತ್ತವೆ. ಕೆಲವು ಪ್ರಸಂಗಗಳು ನಮ್ಮ ಭಾವವಲಯವನ್ನು ನುಗ್ಗಿ ಕಲಕಿದರೆ ಇನ್ನು ಕೆಲವು ಮುಗುಳ್ನಗೆಯಲ್ಲಿ ಮುಗಿಯುತ್ತವೆ.

ನಮ್ಮೆಲ್ಲರ ಹುಟ್ಟಿನ ಸ್ವಲ್ಪವೇ ಮುನ್ನ ನಡೆದಿರಬಹುದಾದ ಗಡಿಬಿಡಿಯ ಹಲವು ಮುಖಗಳನ್ನು ಎಳೆ ಎಳೆಯಾಗಿ ಇಲ್ಲಿ ಕುಮುದಾ ನಮ್ಮೆದುರು ತೆರೆದಿಡುತ್ತಾರೆ. ತಾವು ಎದುರಿಸಿದ ಧರ್ಮಸಂಕಟಗಳನ್ನು, ಹೃದಯ ಕರಗಿಸುವ ಮುಗ್ಧರ ಪ್ರಾಮಾಣಿಕತೆಯನ್ನು ಅವರು ಯಾವ ತಂತ್ರಗಾರಿಕೆಯಿಲ್ಲದೆ, ಸಹಜವಾಗಿ, ಅದರೆಲ್ಲ ವಿವರಗಳೊಂದಿಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕತೆಕಟ್ಟುವುದಿಲ್ಲ. ಅಂಥ ಆಮಿಷಕ್ಕೆ ಬಲಿಯಾಗದೆ ಅನುಭವವನ್ನು ಅನುಭವವನ್ನಾಗಿಯೇ ನಿರೂಪಿಸುತ್ತ ನಮ್ಮ ಜೊತೆ ತಾನೂ ನಿಂತು ಅದನ್ನು ನೋಡುತ್ತಾರೆಯೇ ಹೊರತು ಅದರಲ್ಲಿ ತನ್ನದೇನೋ ಇದೆಯೆಂಬ ಅಂಟು-ನಂಟು ಮುಂದೆ ಮಾಡುವುದಿಲ್ಲ.
ನೂರ ಅರವತ್ತಾರು ಪುಟಗಳಲ್ಲಿ ಒಟ್ಟು ನಲವತ್ತು ಪ್ರಸಂಗಗಳನ್ನು ಬರೆದಿರುವ ಕುಮುದಾರ ಪುಸ್ತಕವನ್ನು ಅವನಿ ರಸಿಕರ ರಂಗ ಪ್ರಕಾಶನ, ೨ನೇ ಮುಖ್ಯ ರಸ್ತೆ, ೩ನೇ ಅಡ್ಡ ರಸ್ತೆ, ನಾರಾಯಣಪುರ, ಧಾರವಾಡ - ೫೮೦ ೦೦೮ ಇವರು ಪ್ರಕಟಿಸಿದ್ದಾರೆ. ಬೆಲೆ ಎಂಭತ್ತು ರೂಪಾಯಿ. ಪ್ರಕಟನೆಯ ಹಿಂದೆ ನಮ್ಮ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾದ ಶ್ರೀಧರ ಬಳಗಾರ ಇದ್ದಾರೆ. ಜಿ.ಎಂ. ಬೊಮ್ನಳ್ಳಿಯವರದೂ ಸೇರಿದಂತೆ ಉತ್ತಮ ಕಲಾವಿದರ ರೇಖಾ ಚಿತ್ರಗಳ ಸೊಗಸಿದೆ. ಜಯಂತ್ ಕಾಯ್ಕಿಣಿಯವರ ಬೆಚ್ಚನೆಯ ಮುನ್ನುಡಿಯಿದೆ.

ಸಿಟಿಗಳಲ್ಲಿ ಸಹಜವಾದ ಬದುಕಿನಿಂದ ದೂರಾಗಿ, ಹಣದ ಹಿಂದೆ ಹೂಡಿದ ಓಟದಲ್ಲಿ ಎಲ್ಲೋ ಕಳೆದುಹೋದಂತಿರುವ ನಮ್ಮೊಳಗೆ ನಾವು ಕಳೆದುಕೊಳ್ಳುತ್ತಿರುವುದರ ಒಂದು ತುಣುಕನ್ನಾದರೂ ಈ ಹೊತ್ತಗೆ ತೋರಿಸಿಕೊಡುತ್ತದೆ ಎಂಬ ಪುಟ್ಟ ಕಾರಣಕ್ಕಾಗಿಯಾದರೂ ಹೆತ್ತ ತಾಯ ನೆನಪಲ್ಲಿ ಓದಬೇಕಾದ ಪುಸ್ತಕವಿದು.

No comments: