Tuesday, October 30, 2007

ವಿವೇಕ್ ಶಾನಭಾಗ್ ಸಂದರ್ಶನ


ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ ಸ್ಥೂಲ ಪರಿಚಯ "ದೇಶಕಾಲಕ್ಕೆ ಮೂರುವರ್ಷ" ಎಂಬ ಲೇಖನದಲ್ಲಿ ಲಭ್ಯವಿದೆ.


ಬರಹಗಾರ ಮತ್ತು ದೇಶಕಾಲದ ಸಂಪಾದಕ ವಿವೇಕ್ ಶಾನಭಾಗ್ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ ಮತ್ತು ತನ್ನ ಪತ್ರಿಕೆ ಹೇಗೆ ತನ್ನದೇ ಆದ ಒಂದು ಸ್ಥಾನ ಕಲ್ಪಿಸಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ್ದಾರೆ:


ಪ್ರಶ್ನೆ: ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪತ್ರಿಕೆಗಳ ಒಂದು ಒಟ್ಟಾರೆ ಚಿತ್ರಣವನ್ನು ನಮ್ಮ ಓದುಗರಿಗೆ ನೀಡಬಹುದೆ?
ಸಾಹಿತ್ಯಿಕ ಪತ್ರಿಕೆಗಳ ಒಂದು ದೊಡ್ಡ ಪರಂಪರೆಯೇ ಕನ್ನಡಕ್ಕಿದೆ. ಮಾಸ್ತಿ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ ಮತ್ತು ಇನ್ನೂ ಹಲವು ಪ್ರಮುಖ ಬರಹಗಾರರು ಸಾಹಿತ್ಯಿಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಹೆಚ್ಚಿನವು ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ ಹೊಸ ಬರಹಗಾರರನ್ನು ಉತ್ತೇಜಿಸುವ ಮೂಲ ಉದ್ದೇಶವನ್ನು ಅವು ಈಡೇರಿಸಿವೆ. ನಮ್ಮ ಹೆಚ್ಚಿನ ಹೆಚ್ಚಿನ ಸಾಹಿತ್ಯಿಕ ಬೆಳವಣಿಗೆಗಳು, ಬದಲಾವಣೆಗಳು ಈ ವಲಯದಿಂದ ಸ್ಪೂರ್ತಿ ಪಡೆದಿವೆ.
ಇವತ್ತು ಕನ್ನಡದಲ್ಲಿ ಹಲವು ಸಾಹಿತ್ಯಿಕ ಪತ್ರಿಕೆಗಳು ಕ್ರಿಯಾಶೀಲವಾಗಿವೆ. ಉದಾಹರಣೆಗೆ ಸಂಚಯ, ಸಂಕಲನ, ಅಭಿನವ, ಸಂಕ್ರಮಣ, ಸಂವಾದ, ದೇಶಕಾಲ, ಗಾಂಧಿಬಜಾರ್ ಮತ್ತಿನ್ನೂ ಕೆಲವು. ಇವು ಗಂಭೀರವಾದ ಸಾಹಿತ್ಯಿಕ ಚರ್ಚೆಗೆ ಲಭ್ಯವಿರುವ ಒಂದೇ ಒಂದು ವೇದಿಕೆಯಾಗಿವೆ. ಉದಾಹರಣೆಗೆ ಜನಪ್ರಿಯ ವಾಣಿಜ್ಯೋದ್ದೇಶದ ಪತ್ರಿಕೆಗಳು ಮತ್ತು ಭಾನುವಾರದ ಪುರವಣಿಗಳು ಪುಸ್ತಕ ವಿಮರ್ಶೆಗೆ ಕೆಲವೇ ಇಂಚುಗಳ ಸ್ಥಳಾವಕಾಶ ನೀಡುತ್ತವೆ. ಅಲ್ಲದೆ ಇಲ್ಲಿನ ಅವಲೋಕನದ ಮಟ್ಟವೂ ತೀರ ಸಾಧಾರಣ. ಹಾಗಾಗಿ ಸಾಹಿತ್ಯ ವಿಮರ್ಶೆ ಮತ್ತು ಪೂರ್ಣಮಟ್ಟದ ಅವಲೋಕನಗಳು ಸಾಹಿತ್ಯಿಕ ಪತ್ರಿಕೆಗಳಲ್ಲಷ್ಟೇ ಅವಕಾಶ ಪಡೆಯುತ್ತವೆ. ಸುದೀರ್ಘ ಸಂದರ್ಶನಗಳು ಮತ್ತು ಕವನಗಳ ವಿಷಯದಲ್ಲೂ ಇದು ನಿಜ.
ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ಲಾಭೋದ್ದೇಶದ ವಾರಪತ್ರಿಕೆಗಳೂ, ಮಾಸ ಪತ್ರಿಕೆಗಳೂ ಇವೆ ಎನ್ನುವುದನ್ನು ಹೇಳಲೇ ಬೇಕು. ಇವುಗಳಲ್ಲಿ ಎಲ್ಲಾ ಬಗೆಯ ಕತೆ-ಕವನ-ಕಾದಂಬರಿಗಳಿಗೆ ಭಾರೀ ಪ್ರಮಾಣದ ಬೇಡಿಕೆಯಿದೆ. ಹಾಗಾಗಿ ಸಾಹಿತ್ಯಿಕ ಪತ್ರಿಕೆಗಳು ನೀಡುವ ಕತೆ-ಕವನಗಳಿಗೂ ಈ ಪತ್ರಿಕೆಗಳು ನೀಡುವ ಕತೆ ಕವನಗಳಿಗೂ ಅಂಥ ವ್ಯತ್ಯಾಸವಿಲ್ಲದಿದ್ದರೂ ಸಾಹಿತ್ಯಿಕ ಪತ್ರಿಕೆಗಳು ಒದಗಿಸುತ್ತಿರುವುದನ್ನು ಇವು ಸರಿಗಟ್ಟಲಾರವು. ಕನ್ನಡದ ಬರಹಗಾರರು ಮತ್ತು ಓದುಗರು ಸಾಹಿತ್ಯಿಕ ಪತ್ರಿಕೆಗಳು ನೀಡುತ್ತಿರುವುದೇನನ್ನು, ಜನಪ್ರಿಯ ಪತ್ರಿಕೆಗಳು ನೀಡುತ್ತಿರುವುದೇನನ್ನು ಎನ್ನುವ ವ್ಯತ್ಯಾಸವನ್ನು ಅರಿಯಬಲ್ಲವರು ಎಂದು ನಂಬಿದ್ದೇನೆ. ಈ ಅರಿವು, ಪ್ರಜ್ಞೆ ಯಾವುದೇ ಸಾಹಿತ್ಯಿಕ ವಾತಾವರಣಕ್ಕೆ ತೀರಾ ಅನಿವಾರ್ಯ ಅಗತ್ಯ. ಯಾಕೆಂದರೆ ಇದುವೇ ಸಾಹಿತ್ಯಿಕ ಪತ್ರಿಕೆಗಳಿಗೆ ಬೇಕಾದ ವಿಶಿಷ್ಟವಾದ ಉತ್ತೇಜನ, ಪ್ರೋತ್ಸಾಹ ಮತ್ತು ಒಂದು ಅವಕಾಶವನ್ನು ಸೃಷ್ಟಿಸುವಂಥದ್ದು. ಅವುಗಳ ಎಲ್ಲ ಪ್ರಯೋಗಶೀಲತೆ, ಸಂವಾದ ಇದನ್ನೇ ನೆಚ್ಚಿಕೊಂಡಿದೆ.
ಪ್ರಶ್ನೆ: ತಮಿಳುನಾಡಿನಲ್ಲಿ ಪ್ರಕಾಶಕ ಎಸ್ ರಾಮಕೃಷ್ಣನ್ ಇತ್ತೀಚೆಗೆ ಸ್ವತಂತ್ರ ಅಭಿವ್ಯಕ್ತಿ ಮತ್ತು ಬರವಣಿಗೆಯನ್ನು ಉತ್ತೇಜಿಸುವ, ಕೇವಲ ವ್ಯಾಪಾರೀ ಉದ್ದೇಶಗಳಿಗೆ ಹೊರತಾದ ಪ್ರಕಟನೆಗಳು- ಸಣ್ಣಪತ್ರಿಕೆಗಳು ಎಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು- ಬಹುತೇಕ ಕಣ್ಮರೆಯಾಗಿವೆ ಎಂಬ ಬಗ್ಗೆ ಗಮನಸೆಳೆದಿದ್ದರು. ಕರ್ನಾಟಕದಲ್ಲಿ ಹೇಗೆ?
ಸಂಕ್ರಮಣ, ಕನ್ನಡದ ಒಂದು ಸಾಹಿತ್ಯಿಕ ಪತ್ರಿಕೆ, ಕಳೆದ ನಲವತ್ತು ವರ್ಷಗಳಿಂದ ಬರುತ್ತಿದೆ. ಹಾಗೆಯೇ ಸಂವಾದ, ಗಾಂಧಿಬಜಾರ್ ಮತ್ತು ಸಂಚಯ ಎರಡು ದಶಕಗಳಿಗೂ ಮೀರಿ ಕ್ರಿಯಾಶೀಲವಾಗಿವೆ. ಈ ಯಾವ ಪತ್ರಿಕೆಗಳೂ ವ್ಯಾಪಾರೀ ಮನೋಧರ್ಮಕ್ಕೆ ಒಳಗಾಗಿಲ್ಲ. ಇನ್ನೂ ಬಹಳಷ್ಟು ಹೊಸ ಪತ್ರಿಕೆಗಳೂ ಇವೆ. ಕನ್ನಡದಲ್ಲಂತೂ ಸಣ್ಣ ಪತ್ರಿಕೆಗಳ ಕಾಲವೇ ಮುಗಿದು ಹೋಗಿದೆ ಎಂದು ಭಾವಿಸಲು ಯಾವುದೇ ಕಾರಣಗಳಿಲ್ಲ ಅನಿಸುತ್ತದೆ. ಸಾಹಿತ್ಯಿಕ ಪತ್ರಿಕೆಗಳ ಯಶಸ್ಸನ್ನು ಆ ಪತ್ರಿಕೆಗಳ ಪ್ರಭಾವವಲಯದ ಮೂಲಕ ಅಳೆಯಬೇಕೇ ಹೊರತು ಅದರ ಪ್ರಸಾರ ಸಂಖ್ಯೆಯಿಂದಲ್ಲ. ಹಾಗಾಗಿ ವಾಣಿಜ್ಯಿಕ ಅಂಶಗಳು ಯಾವತ್ತೂ ಇಂಥ ಪ್ರಕಟನೆಗಳಿಗೆ ಮುಖ್ಯವಾಗಿಲ್ಲ.
ಪ್ರಶ್ನೆ: ದೇಶಕಾಲದ ಕುರಿತು ನಿಮ್ಮ ಪರಿಕಲ್ಪನೆ ಏನು? ಅದು ಹೇಗೆ ಇತರ ಸಾಂಸ್ಕೃತಿಕ ಪತ್ರಿಕೆಗಳಿಂದ ಭಿನ್ನವಾಗಿದೆ?
ದೇಶಕಾಲ ಸಾಹಿತ್ಯ ಕೇಂದ್ರಿತ. ಪತ್ರಿಕೆಯ ಚಾಲನಶಕ್ತಿ ಅದೇ. ನಾವು ಒಪ್ಪುತ್ತೇವೋ ಇಲ್ಲವೋ, ಇವತ್ತಿನ ಕನ್ನಡ ಸಂವೇದನೆಗಳು ಕನ್ನಡ ಜಗತ್ತಿನ ಎಲ್ಲೆಕಟ್ಟುಗಳನ್ನು ಮೀರಿ ಹೊರಗಿನ ಹಲವಾರು ಅಂಶಗಳಿಂದ ರೂಪುಗೊಳ್ಳುತ್ತ ಇರುವುದಂತೂ ಸತ್ಯ. ಈ ಅಂಶವನ್ನು ನಾವು ಗುರುತಿಸಬೇಕಿದೆ ಮತ್ತು ಅದಕ್ಕೆ ಸ್ಪಂದಿಸಬೇಕಾಗಿದೆ. ಅದು ಇಂಗ್ಲೀಷ್ ಸಾಹಿತ್ಯವಿರಬಹುದು, ಜಾಗತೀಕರಣವಿರಬಹುದು ಅಥವಾ ಆಧುನಿಕೋತ್ತರ ನಿರೀಕ್ಷೆಗಳಿರಬಹುದು, ನಮಗೆ ಆಯ್ಕೆಗಳೇ ಇಲ್ಲ, ನಾವಿದನ್ನು ನಿಭಾಯಿಸಲೇ ಬೇಕಿದೆ. ಹಾಗೆಯೇ ಕಲೆಯ ಜಗತ್ತಿನಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ಇವೆಲ್ಲವೂ ಸೇರಿ ನಿಶ್ಚಯವಾಗಿಯೂ ಕನ್ನಡ ಬರವಣಿಗೆಯಲ್ಲಿ ಹೊಸತನ್ನು ಉದ್ದೀಪಿಸುತ್ತಿದೆ.
ದೇಶಕಾಲದ ಪ್ರತೀ ಸಂಚಿಕಯಲ್ಲೂ ನೇರ ಅನುವಾದದ ಮೂಲಕ ಬೇರೊಂದು ಭಾರತೀಯ ಭಾಷೆಯ ಲೇಖಕನನ್ನು ಪರಿಚಯಿಸಲಾಗುತ್ತಿದೆ. ಬೇರೆ ಬೇರೆ ಭಾಷೆಯ ಬರಹಗಾರರು ಸಮಕಾಲೀನ ವಿದ್ಯಮಾನಗಳಿಗೆ ಹೇಗೆ ಪ್ರತಿಸ್ಪಂದಿಸುತ್ತಿದ್ದಾರೆ, ಅವರ ಚಿಂತನೆಗಳೇನು ಎಂಬುದನ್ನು ತಿಳಿದುಕೊಳ್ಳಲು ಇಂಥ ಕೊಡುಕೊಳ್ಳುವಿಕೆ ತೀರಾ ಮುಖ್ಯವಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಇವತ್ತು ಬೇರೆ ಬೇರೆ ಭಾಷೆಯ ಭಾರತೀಯ ಲೇಖಕರು ಸರ್ವ ಸಮಾನವಾದ ಸಮಸ್ಯೆಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದ್ದಾರೆ. ಇದು ಅಂತರ್ಜಾಲದಿಂದ ಅಥವಾ ಜಾಗತೀಕರಣದಿಂದ ಇದ್ದಿರಬಹುದು.
ಇಂಗ್ಲೀಷಿನಲ್ಲಿ ಈಗಾಗಲೇ ಪ್ರಕಟವಾದ ಲೇಖನದ ಅನುವಾದ ದೇಶಕಾಲದಲ್ಲಿ ಸಿಗುವುದಿಲ್ಲ. ಆಧುನಿಕೋತ್ತರವಾದ ಮತ್ತು ಇಸ್ಲಾಂ ಕುರಿತ ಜಿಯಾವುದ್ದೀನ್ ಸರದಾರ್ ಅವರ ಒಂದೇ ಒಂದು ಲೇಖನ ಇದಕ್ಕಿರುವ ಅಪವಾದ. ಇದರರ್ಥ ನಾವು ಅನುವಾದಗಳನ್ನೇ ಹೊಂದಿಲ್ಲ ಅಂತೇನೂ ಅಲ್ಲ. ಬೇರಾವುದೇ ಕನ್ನಡ ಪತ್ರಿಕೆಗಳಂತಲ್ಲದೆ ನಾವು ಶಿವ ವಿಶ್ವನಾಥನ್, ಜೆರೆಮಿ ಸೀಬ್ರೂಕ್, ಡೇನಿಯಲ್ ಅಮಿಟ್, ಸುಂದರ್ ಸಾರುಕ್ಕೈ, ರೊದ್ದಂ ನರಸಿಂಹ, ಫ್ರಿಟ್ಸ್ ಸ್ಟಾಲ್, ಜಾನ್ ಪೆರಿ ಮತ್ತಿತರ ಇಂಥ ಬರಹಗಾರರಿಂದ ದೇಶಕಾಲಕ್ಕಾಗಿಯೇ ಬರೆಯಿಸಿದ್ದೇವೆ ಮತ್ತು ಇವರ ಈ ಬರಹಗಳು ಮೊಟ್ಟಮೊದಲು ಕನ್ನಡ ಅನುವಾದದಲ್ಲಿ ದೇಶಕಾಲದಲ್ಲಿ ಪ್ರಕಟವಾಗಿವೆ.
ಬೇರೆ ಬೇರೆ ವಿಚಾರಗಳ ಕುರಿತ ಸಂಕಿರಣ ಮಾದರಿಯ ಚರ್ಚೆ - ಸಂವಾದವನ್ನು ಪ್ರತಿ ಸಂಚಿಕೆಯಲ್ಲೂ ಪ್ರಕಟಿಸಿದ್ದೇವೆ. ಆಯಾ ರಂಗದಲ್ಲಿ ನುರಿತವರು, ಅನುಭವಿಗಳು, ಬರಹಗಾರರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ ಕಳೆದ ಸಂಚಿಕೆಯಲ್ಲಿ ನಾವು ಕರ್ನಾಟಕದಲ್ಲಿ ಪುಸ್ತಕ ಪ್ರಕಟನೆಯ ಕುರಿತು ತಳಸ್ಪರ್ಶಿ ಚರ್ಚೆಯನ್ನು ಸಂಯೋಜಿಸಿದ್ದೆವು.
ದೇಶಕಾಲವನ್ನು ವೃತ್ತಿಪರ ಕಲಾವಿದ ಚನ್ನಕೇಶವ ವಿನ್ಯಾಸಗೊಳಿಸುತ್ತಾರೆ ಮತ್ತು ಇಂದಿನ ತನಕ ಪ್ರತೀ ಸಂಚಿಕೆಯನ್ನೂ ಸಮಯಕ್ಕೆ ಸರಿಯಾಗಿ ಕೊಟ್ಟಿದ್ದೇವೆ. ಇದನ್ನು ಒತ್ತಿ ಹೇಳುತ್ತಿದ್ದೇನೆ ಯಾಕೆಂದರೆ ಸಣ್ಣ ಪತ್ರಿಕೆಗಳು ನಿಯಮಿತವಾಗಿ ನಿಯತಕಾಲಕ್ಕೆ ಸರಿಯಾಗಿ ಪ್ರಕಟವಾಗುವುದಿಲ್ಲ ಎಂಬ ಅಪಖ್ಯಾತಿಗೆ ತುತ್ತಾಗಿವೆ.
ಪ್ರಶ್ನೆ: ವಿತರಣೆ ಮತ್ತು ಪ್ರಸಾರದಂಥ ರಂಗಗಳಲ್ಲಿ ಕರ್ನಾಟಕದ ಸಣ್ಣ ಪತ್ರಿಕೆಗಳೆಲ್ಲ ಸೇರಿ ಯಾವುದಾದರೂ ನಿರ್ವಹಣಾಜಾಲವೊಂದನ್ನು ರೂಪಿಸಿಕೊಂಡಿವೆಯೆ? ಆರ್ಥಿಕ ಅಥವಾ ಬೇರಾವುದೇ ಬಗೆಯ ಹೊರಗಿನ ಬೆಂಬಲ ಇಂಥ ಪತ್ರಿಕೆಗಳಿಗೆ ಸಹಾಯಕವಾಗಬಹುದಾದ ಮಾರ್ಗಗಳು ಇವೆಯೆ?
ಅಂಥ ಯಾವುದೇ ಜಾಲ ಸಣ್ಣಪತ್ರಿಕೆಗಳಲ್ಲಿ ಇಲ್ಲ. ಆದರೆ ಅವು ಪರಸ್ಪರ ಪೂರವಾಗಿರುವಂಥವು, ಸ್ಪರ್ಧಾತ್ಮಕವಾಗಿ ಅಲ್ಲ ಎನ್ನುವ ಅರಿವಿನೊಂದಿಗೇ ಕೆಲಸ ಮಾಡುತ್ತಿವೆ. ಪರಸ್ಪರ ಸಹಕಾರದ ಮಾರಾಟ ಮತ್ತು ವಿತರಣೆಯ ಜಾಲ ಖಂಡಿತವಾಗಿಯೂ ಸಣ್ಣಪತ್ರಿಕೆಗಳಿಗೇ ಯಾಕೆ, ಕನ್ನಡ ಪುಸ್ತಕ ಪ್ರಕಟಣಾ ರಂಗಕ್ಕೂ ಬಹಳ ಸಹಾಯಕವಾಗುತ್ತದೆ.
ಹೆಚ್ಚಿನೆಲ್ಲಾ ಸಣ್ಣಪತ್ರಿಕೆಗಳು ವಾರ್ಷಿಕ ಚಂದಾ ಮೂಲಕ ವಿತರಿಸಲ್ಪಡುವುದರಿಂದ ಹಾಗೆ ಚಂದಾ ಒಗ್ಗೂಡಿಸಬಲ್ಲ, ಯಾವುದೇ ಬಗೆಯ ಒಂದು ಸುವ್ಯವಸ್ಥಿತ ಸೌಕರ್ಯ ನಿರ್ಮಿಸಿದರೆ ನಿಜಕ್ಕೂ ಅದರಿಂದ ಭಾರೀ ಸಹಾಯವಾಗುತ್ತದೆ. ಉದಾಹರಣೆಗೆ ಎಲ್ಲಾ ಸಣ್ಣಪತ್ರಿಕೆಗಳಿಗೂ ಏಕಕಿಂಡಿಯ ಚಂದಾ ಪಾವತಿ, ನವೀಕರಣ ಸವಲತ್ತು ಇರುವ ಒಂದು ವೆಬ್‌ಸೈಟ್ ಇದ್ದರೆ ಒಳ್ಳೆಯದು.
ಖಂಡಿತವಾಗಿಯೂ ಸೀಮಿತ ಪ್ರಸಾರದೊಂದಿಗೂ ಕನ್ನಡದಲ್ಲಿ ಒಂದು ಸಣ್ಣಪತ್ರಿಕೆಯನ್ನು ಆರ್ಥಿಕ ನಷ್ಟವಿಲ್ಲದೆಯೇ ನಿರ್ವಹಿಸಲು ಸಾಧ್ಯವಿದೆ ಎಂಬುದು ನನ್ನ ನಂಬಿಕೆ. ಆದರೆ ಹೀಗೆ ಒಂದು ಪತ್ರಿಕೆಯನ್ನು ನಡೆಸಲು ಭಾರೀ ಬದ್ಧತೆಯಿರಬೇಕಾಗುತ್ತದೆ. ಸಂಪಾದಕ ಮತ್ತು ಆತನ ಬಳಗ ತಮ್ಮ ಖಾಸಗಿ ವೇಳೆಯನ್ನು ಇದಕ್ಕೆಲ್ಲ ವಿನಿಯೋಗಿಸಲು ಸಿದ್ಧವಾಗಿರಬೇಕಾಗುತ್ತದೆ. ದೀರ್ಘಕಾಲ ಇಂಥ ಬದ್ಧತೆ ಮತ್ತು ತ್ಯಾಗವನ್ನು ಉಳಿಸಿಕೊಂಡು ಬರುವುದು ಕಷ್ಟ.

1 comment:

ksnayak20 said...

ನರೇಂದ್ರರೇ,
ನಿಮ್ಮ ನನ್ನ ಚಿತ್ರಗಳ ಬಗ್ಗೆ ಮೆಚ್ಚುಗೆಯ ಬರಹಕ್ಕೆ ಧನ್ಯವಾದ! ನನಗನ್ನಿಸ್ಸುತ್ತೆ ಯಾವೂದೇ ಕೆಲಸ ಸರಿಯಾಗಿ ಮಾಡಲು ಏಕಾಗ್ರತೆಬೇಕೇಬೇಕು.. ನೀವು ಬರೆಯುವುದಕ್ಕೂ ಬಹಳ ವಿಷಯ ಸಂಗ್ರಹ ಮಾಡಬೇಕು, ಓದಬೇಕು.. ಓದಿದನ್ನು ನೆನಪಿಟ್ಟು ಕೊಳ್ಳಬೇಕು.. ... ಹೀಗೆ ಪಟ್ಟಿಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ನಾನು ಮಾಡಿದ ಚಿತ್ರಗಳಿಗಳಿಗೇನೂ ವಿಷೇಶತೆಯಿಲ್ಲ...ಆದರೂ ನಿಮ್ಮ ಮೆಚ್ಚುಗೆ ಸಂತೋಷಕೊಟ್ಟಿತ್ತೆಂದರೆ ಸುಳ್ಳಲ್ಲ!

ನಾನು ಈಗ ಬರೆದುದು ಯಾಕೆಂದರೆ ನೀವು ನೇಮಿಚಂದ್ರರ ’ಯಾದ್ ವಶೇಮ್" ಓದಿದ್ದಿರಾ? ಎಂದು ಕೇಳಲು... ನಾನು ಇದನ್ನು ಸುಧಾ ಪುಸ್ತಕದಲ್ಲಿ ಧಾರವಾಹಿಯಾಗಿ ಬರುವಾಗ ಓದಿದ್ದು.. ನನಗೆ ಬಹಳ ಮೆಚ್ಚುಗೆಯಾಯಿತು.. ಅವರ ಶೈಲಿ ಬಹಳ ಹಿಡಿಸಿತು. ಈ ಪುಸ್ತಕ ಓದಿ ಇದರ ಬಗ್ಗೆ ಬರೆಯಿರಿ... ನೇಮಿ ಅವರು ಇದನ್ನು ಕಥೆಯ ರೂಪದಲ್ಲಿ ಹೇಳಿದ್ದರೂ ನಾಜಿಗಳ ನರಮೇದ, ಯಹೂದಿಗಳ ನರಕ ಯಾತನೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ..
ಹಾ.. ವಿವೇಕ್ ಶಾನುಭಾಗರ ಕಾದಂಬರಿಗಳನ್ನು ಓದಿದ್ದೇನೆ.. ನನ್ನ ಮೆಚ್ಚಿನ ಲೇಖಕರು.. ಆದರೆ ಈ ಸಂದರ್ಶನ ಓದಿಲ್ಲಾ.. ಬಹುಶಃ ನಾಳೆ....