Wednesday, November 21, 2007

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'ಬದುಕಿನ ಅರ್ಥ ಶೋಧಿಸ ಹೊರಟ ಕಥಾನಕವನ್ನು ಹೊಂದಿದ ಅನೇಕ ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಬಹುಷಃ ಶಾಂತಿನಾಥ ದೇಸಾಯಿ, ಕುಸುಮಾಕರ ದೇವರಗೆಣ್ಣೂರು ತಮ್ಮ ಎಲ್ಲಾ ಕಾದಂಬರಿಗಳಲ್ಲಿ ಇಂಥ ಶೋಧ ನಡೆಸಿದ್ದರೆ ಇತರ ಪ್ರಮುಖ ಕಾದಂಬರಿಕಾರರೆಲ್ಲರೂ ತಮ್ಮ ಒಂದಲ್ಲಾ ಒಂದು ಕೃತಿಯಲ್ಲಿ ಈ ಶೋಧವನ್ನೇ ವಸ್ತುವಾಗಿಸಿಕೊಂಡಿರುವುದುಂಟು. ನವ್ಯರು ಅದನ್ನು ವಿಭಿನ್ನವಾಗಿ ಪ್ರವೇಶಿಸಿದ್ದರೂ ಮೂಲ ಶೋಧದ ಸ್ವರೂಪ ಮಾತ್ರ ಅದೇ ಆಗಿರುವುದು ಒಳ್ಳೆಯ ಅಧ್ಯಯನಕ್ಕೆ ವಸ್ತುವಾಗಬಲ್ಲದು. ಚಿತ್ತಾಲರ ಹಾದಿ ಬೇರೆ, ಕಾರಂತರದ್ದು ಬೇರೆ. ಆಲನಹಳ್ಳಿ ಅದನ್ನು ಆಗಗೊಡುವ ಬಗೆ ಬೇರೆ ಪುಣೇಕರರ ರೀತಿ ಬೇರೆ. ಟಾಲ್‌ಸ್ಟಾಯ್‌ರ ಇವಾನ್ ಇಲಿಚ್ಯ ನಡೆಸುವ ಅವಲೋಕನ ಕೂಡ ಇಂಥ ಸುಪ್ತ ಉದ್ದೇಶವುಳ್ಳದ್ದೇ. ಲಂಕೇಶರ ಅಕ್ಕ, ತೇಜಸ್ವಿಯವರ ಸ್ವರೂಪ, ಮಾಯಾಲೋಕ ಕೂಡ ಬದುಕಿನ ನಿರರ್ಥಕತೆ ಮತ್ತು ಸಾರ್ಥಕತೆಯನ್ನು, ಅರ್ಥಹೀನತೆ ಮತ್ತು ಅರ್ಥಪೂರ್ಣತೆಯನ್ನು ಗ್ರಹಿಸುವ ಪ್ರಯತ್ನಗಳೇ. ಹಾಗೆ ನೋಡಿದರೆ ಉತ್ತಮ ಸಾಹಿತ್ಯದ ಮೂಲಭೂತ ತುಡಿತ ಅದೇ. ನಮಗೆ ಸಿಕ್ಕ ಈ ಒಂದೇ ಒಂದು ಬದುಕನ್ನು ಹೆಚ್ಚು ಸಂಪನ್ನ ಮತ್ತು ಸಮೃದ್ಧವಾಗಿಸುತ್ತ ಬದುಕುವ ಒಂದು ಶ್ರೇಷ್ಠ ವಿಧಾನದ ಶೋಧವೇ ನಮ್ಮ ಎಲ್ಲಾ ಸಾಹಿತ್ಯ ಸೃಷ್ಠಿಯ ಹಿಂದಿರುವ ಪ್ರೇರಣೆಯೆಂದರೂ ತಪ್ಪಾಗಲಾರದು.


ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಈ ಸಂಘರ್ಷ ಸಂನ್ಯಾಸವನ್ನು ಪರ್ಯಾಯವಾಗಿ ಸ್ವೀಕರಿಸದ ಆದರೆ ಬದುಕಿನಲ್ಲಿ ತನ್ಮಯತೆಯಿಂದ ತೊಡಗಿಕೊಳ್ಳಲಾರದ, ಎಡಬಿಡಂಗಿಗಳೆಂದು ಸುಲಭವಾಗಿ ಕರೆದುಬಿಡಬಹುದಾದ ಎಲ್ಲಾ ಮಧ್ಯಮವರ್ಗದ ಸಾಮಾನ್ಯ ಗ್ರಹಸ್ಥನೊಬ್ಬನ ಮನಸ್ಸಿನಲ್ಲೂ ಬದುಕಿನ ಒಂದಲ್ಲಾ ಒಂದು ಘಟ್ಟದಲ್ಲಿ ನಡೆದೇ ಇರುವಂಥದ್ದು. ಇದರ ಮೂಲ ಇರುವುದು ಭಗವದ್ಗೀತೆಯಲ್ಲೇ. ಕರ್ಮಣ್ಯೇವ ಅಧಿಕಾರಸ್ತೇ ಮಾ ಫಲೇಶು ಕದಾಚನ ಎನ್ನುವ ವಾಕ್ಯದಲ್ಲೇ ಇರುವ ಒಂದು ವೈರುಧ್ಯವಿದು. ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡು ಎನ್ನುವಲ್ಲಿ ಅಂಥ ಕರ್ಮ ತನಗೆ ಬೇಕಾದ ಸ್ಫೂರ್ತಿಯನ್ನು, ಉತ್ತೇಜನವನ್ನು, ಉತ್ಕಟತೆಯನ್ನು ಎಲ್ಲಿಂದ ಪಡೆಯುತ್ತದೆ ಎನ್ನುವುದು ಪ್ರಶ್ನೆ. ಒಂದು ಯಂತ್ರ ಇದನ್ನು ಅತ್ಯಂತ ನಿಜವಾಗಿ ಮಾಡಬಲ್ಲದು. ಆದರೆ ಮನುಷ್ಯ ಮಾತ್ರದವನಿಗೆ ಅದು ಸಾಧ್ಯವೆ? ಅಂಥ ಒಂದು ಬದುಕಿನ ಸಾರ್ಥಕ್ಯ ಮತ್ತು ಅರ್ಥವೇನು? ಅದನ್ನು ಬದುಕಲೇ ಬೇಕಾದ ಅನಿವಾರ್ಯ ಯಾವುದು? ಎಲ್ಲವನ್ನೂ ಕೃಷ್ಣನಿಗೆ ಅರ್ಪಿಸಬಹುದು, ಅರ್ಜುನನಿಗೆ ಅದು ಸಾಧ್ಯ ಯಾಕೆಂದರೆ ಕೃಷ್ಣ ಅವನಿಗೆ ಒಂದು ಅಮೂರ್ತ ಸತ್ಯವಲ್ಲ. ನಾವು, ಅಲ್ಲಲ್ಲಿ ಅವನನ್ನು ನಂಬುತ್ತ ಅಲ್ಲಲ್ಲಿ ಅವನಿಲ್ಲ ಎನ್ನುವುದನ್ನು ಅನುಭವಿಸುತ್ತ ಬದುಕುತ್ತಿರುವವರು!


ಕುಸನೂರರು ಇದನ್ನು ಪರಿಮಿತ ವಲಯದಲ್ಲಿ ತಾನು ಸಂಚರಿಸಬೇಕಿದೆ ಎಂಬ ಅರಿವು ಇದ್ದೂ ತಮ್ಮ ಕಥಾನಕದಲ್ಲಿ ಸಾಧಿಸಿರುವ ಬಗೆ ಅದ್ಭುತವಾಗಿದೆ. ಕುಸನೂರರ ಹಿಂದಿನ ಕಾದಂಬರಿ ಕೆರೂರುನಾಮಾಕ್ಕೆ ಇದ್ದ ಹಲವಾರು ಅನುಕೂಲಗಳು ಇಂಥ ಕಥಾನಕಕ್ಕೆ ಇರುವುದಿಲ್ಲ. ಇಲ್ಲಿ ವೈಯಕ್ತಿಕವನ್ನು ಸಾಮಾಜಿಕಕ್ಕೆ ರಿಲೇಟ್ ಮಾಡುವ ಹೊಸ ಸವಾಲು ಇರುತ್ತ ಕಾದಂಬರಿ ಪ್ರಕಾರಕ್ಕೆ ಜೀವನಾಡಿಯಂತಿರುವ ಒಂದು ವಾತಾವರಣ ಸೃಷ್ಟಿಯ ಕೆಲಸ ಹೊಸ ಸವಾಲುಗಳನ್ನು ಒಡ್ಡುವಂಥದ್ದು. ಏನು ಹೇಳುವುದಿದ್ದರೂ ಅದು ತಮ್ಮ ಕಥಾನಕದ ಪಾತ್ರಗಳ ಮನೋಭಿತ್ತಿಯ ಚಿತ್ರ ಕೊಡುವಂತಿರ ಬೇಕಾಗುತ್ತದೆ. ಆದರೆ ಹೊರಗಿನ ಜಗತ್ತು ಮತ್ತು ಒಳಗಿನ ಜಗತ್ತು ಎಲ್ಲಿ ಸಂಧಿಸುತ್ತದೆ ನಮ್ಮ ನಿತ್ಯ ಜೀವನದಲ್ಲಿ? ಇನ್ನು ಇಲ್ಲಿನ ನಾಯಕ ಅನಿವಾರ್ಯವಾಗಿ ಒಂದು ಊರು, ಒಂದು ಪರಿಸರಕ್ಕೆ ಬದ್ಧನಾಗಿರುವಂಥವನಲ್ಲ. ಅವನನ್ನು ಯಾವುದಕ್ಕೂ ಬದ್ಧನಾಗಿಸದೇ ಇರುವುದು ಕುಸನೂರರ ಧ್ಯೇಯ! ಹಾಗಾಗಿ ಇಲ್ಲಿನ ಕಥಾನಕ ಕೂಡ ಅಂಥ ಬದ್ಧತೆಯಿಂದ ಮುಕ್ತವಾಗಿರುವುದು ಅನಿವಾರ್ಯ. ಇಲ್ಲಿ ಒಂದು ಊರಿನ, ಪರಿಸರದ ವಾತಾವರಣ ನಿರ್ಮಿತಿ ಅಸಾಧ್ಯ. ಮನೋವ್ಯಾಪಾರದ ವಿವರಗಳಿಂದಲೇ ಅಂಥ ಒಂದು ವಾತಾವರಣವನ್ನು ನಿರ್ಮಿಸಿ ಅದನ್ನು ಓದುಗನಿಗೆ ಆಪ್ತವಾಗಿಸುವ ಸವಾಲು ಕ್ಲಿಷ್ಟಕರವಾದದ್ದು. ಇದರ ಅರಿವು ಕುಸನೂರರಿಗಿದ್ದೇ ಇದೆ. ಹಾಗಾಗಿಯೇ ಅವರು ಇದನ್ನು ಒಂದು ಮನೋವಿಶ್ಲೇಷಕ ಕಥಾನಕವೆನ್ನಿಸದ ರೀತಿಯಲ್ಲಿ ಕೊಂಡೊಯ್ಯುತ್ತಾರೆ. ಇದು ಹೊಸದಾರಿ. ಇಲ್ಲಿ ಕುಸನೂರರು ನಡೆಸಿದ ಪ್ರಯೋಗಗಳು ಕುತೂಹಲಕರ. ಹಾಗೆಯೇ ಈ ಕಾದಂಬರಿಯನ್ನು ಪ್ರವೇಶಿಸಲು ಒಂದು ಬಗೆಯ ಮಾನಸಿಕ ಸಿದ್ಧತೆ ಕೂಡ ಓದುಗನಲ್ಲಿ ಅಗತ್ಯವೆನಿಸುತ್ತದೆ. ಇದು ಎಲ್ಲ ಒಳ್ಳೆಯ ಕತೆ, ಕಾದಂಬರಿಗಳ ವಿಚಾರದಲ್ಲೂ ನಿಜವಾದರೂ ಇಲ್ಲಿ ಮತ್ತೊಮ್ಮೆ ನೆನಪಿಸಬೇಕು.


ಪ್ರಮುಖವಾಗಿ ನಾರಾಯಣ ಭಟ್ಟನ ಒಂದು ಪಾತ್ರವನ್ನು ಕುಸನೂರರು ಕಟ್ಟಿಕೊಡುವ ವಿಧಾನವೇ ನಾವು ಇದುವರೆಗೆ ಕಂಡ, ನಮಗೆ ಅಭ್ಯಾಸವಾಗಿರುವ ರೀತಿಗೆ ಭಿನ್ನವಾದದ್ದು. ಈತನಲ್ಲಿ ತೀವೃವಾದ ಯಾವುದೇ ಜಿಜ್ಞಾಸೆಗಳಿಲ್ಲ. ಬದುಕನ್ನು ಅದು ಬಂದ ಹಾಗೆ ಸ್ವೀಕರಿಸುತ್ತ, ತತ್‌ಕ್ಷಣದ ಪ್ರತಿಕ್ರಿಯೆಯನ್ನಷ್ಟೇ ತೋರುತ್ತ ಸಾಗುವ ಆತ ನಮಗೆ ಅರ್ಥವಾಗುವುದು ಕಷ್ಟ. ಒಂದು ದೃಷ್ಟಿಯಿಂದ ಈ ಕಾದಂಬರಿ ಕಥಾನಕ ಕೇಂದ್ರಿತವಲ್ಲ. ಇಲ್ಲಿ ಕುತೂಹಲ ಕೆರಳಿಸಬಲ್ಲ ಚಲನೆ, ತಿರುವು, ಏಳು ಬೀಳುಗಳು ಸಾಕಷ್ಟಿದ್ದರೂ ನಾರಾಯಣಭಟ್ಟನ ತಣ್ಣನೆಯ ಸ್ಪಂದನದಿಂದಾಗಿ ಅವು ಪಡೆಯಬಹುದಾದ, ಓದುಗನ ನಿರೀಕ್ಷೆಯ ಮಟ್ಟಕ್ಕೆ ಲಂಘನ ಪಡೆಯುವುದಿಲ್ಲ. ಇದಕ್ಕೆ ಓದುಗ ಹೊಂದಿಕೊಳ್ಳಬೇಕಾಗುತ್ತದೆ.


ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಇಲ್ಲಿ ನಾರಾಯಣಭಟ್ಟ ಜಂಗಮನಂತೆ ನಿಂತಲ್ಲಿ ನಿಲ್ಲದೆ, ಸಂಬಂಧಗಳಿಂದ, ಭಾವನೆಗಳಿಂದ, ಯೋಚನೆಗಳಿಂದ, ವೇಷ-ವೃತ್ತಿ, ಜಾತಿ-ಧರ್ಮಗಳಿಂದ ಕೊನೆಗೆ ಎಲ್ಲದರಿಂದ ಕಳಚಿಕೊಳ್ಳುತ್ತ ಸಾಗುವ ವ್ಯಕ್ತಿಯಾಗಿದ್ದರೂ ಈತನನ್ನು ಕುಸನೂರರು ತನ್ನ ಸ್ಮೃತಿಗಳಿಂದಲೂ ಮುಕ್ತನನ್ನಾಗಿಸಿರುವುದು. ಈತನಿಗೆ ಬಾಲ್ಯವಿಲ್ಲ. ತಂದೆ-ತಾಯಿ, ಒಡಹುಟ್ಟು, ಪತ್ನಿ ಅಥವಾ ಮಗುವಿನ ಕುರಿತ ಮೋಹ, ನೆನಪುಗಳು ಈತನನ್ನು ಕಾಡುವುದೇ ಇಲ್ಲ. ಎಲ್ಲಿಯೂ ಈತ ತನ್ನ ಭೂತದೊಂದಿಗೆ ಮುಖಾಮುಖಿಯಾಗುವುದಿಲ್ಲ. ಇದು ಈ ಬಗೆಯ ಕತೆ, ಕಾದಂಬರಿಗಳ ಪರಂಪರೆಯಲ್ಲಿ ಇರದಿದ್ದ ಹೊಸಬಗೆ. ನಾವು ಕಂಡಂತೆ ಇಂಥ ಪಾತ್ರ ತನ್ನ ಭೂತಕಾಲದ ಸ್ಮೃತಿಗಳಿಂದ ತನ್ನದೇ ಬದುಕನ್ನು, ಕ್ರಿಯೆಯನ್ನು ತೂಗುವುದಕ್ಕೆ ತೊಡಗುವುದು, ಮತ್ತು ಅದರಿಂದಾಗಿ ಮಾಗುತ್ತ ಸಾಗುವುದು, ಒಟ್ಟಾರೆಯಾಗಿ ಕಥಾನಕ ನಮಗೆ ಒಂದು ಜೀವನ ದರ್ಶನ ನೀಡುವುದು. ಆದರೆ ಕುಸನೂರರ ನಾರಾಯಣಭಟ್ಟ ಹುಟ್ಟಿದಾರಭ್ಯ ಹೀಗೇ ಇದ್ದನೇನೋ ಅನಿಸುವಂತೆ ಮಾಡುತ್ತದೆ. ಜನಪ್ರಿಯ ಮಾಧ್ಯಮವಾದ ಕಾದಂಬರಿಯನ್ನು ಕಟ್ಟುವಲ್ಲಿ ಇದೂ ಕುಸನೂರರಿಗೆ ಹೊಸದಾದ ಸವಾಲುಗಳನ್ನು ಒಡ್ಡಿದೆ ಎನ್ನುವುದು ಸ್ಪಷ್ಟ. ಕಥಾನಕವನ್ನು ಹೆಚ್ಚು ಚಂದಗೊಳಿಸಲು ಸಾಧ್ಯವಿದ್ದ ಎಲ್ಲವನ್ನೂ ತಮ್ಮ ಕಥಾನಕದ ಪರಿಧಿಯಿಂದ ಹೊರಗಿಡುವ ಸಾಹಸ ಕುಸನೂರರು ಮಾಡಿರುವುದು ಅಚ್ಚರಿ ಹುಟ್ಟಿಸುತ್ತದೆ.


ಈ ನಾರಾಯಣಭಟ್ಟ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಆತ ಸಂತನಲ್ಲ, ಮಹಾತ್ಮನಲ್ಲ ಮತ್ತು ಅದೇ ಕಾಲಕ್ಕೆ ಆತನೊಬ್ಬ ಚೆನ್ನಿಗರಾಯನೋ, ಉಢಾಳನೋ, ಮೈಗಳ್ಳನೋ ಅಲ್ಲ. ಹೆಂಡತಿ ಸತ್ತಾಗ ಮಗುವನ್ನು ತಂಗಿಯ ಆರೈಕೆಯಲ್ಲಿ ಬಿಟ್ಟು ಕಾಶಿಗೆ ತೆರಳುವ ಆತ ಅಲ್ಲಿಂದ ಹಿಂದಿರುಗುತ್ತ ನೇರ ಊರಿಗೆ ಬರದೆ ಯಾತ್ರಾರ್ಥಿಗಳೊಂದಿಗೆ ಭಜನೆ, ಹರಿಕತೆ, ಜಾತ್ರೆ, ಕ್ಷೇತ್ರ ಎಂದು ಅಲೆದಾಡುತ್ತಾನೆ. ಹಾಗೆ ಸಾಗುವ ಅವನ ಸೆಳೆತ ಅವನ ವ್ಯಕ್ತಿತ್ವದಲ್ಲೇ ಇರುವಂಥದ್ದು ಎನ್ನಲು ಬೇಕಾದ ಪುರಾವೆಗಳು ಮುಂದೆಯೂ ನಮಗೆ ಸಿಗುತ್ತವೆ. ಇಲ್ಲಿ ಗಮನಿಸಬೇಕಾದದ್ದೆಂದರೆ ನಾರಾಯಣಭಟ್ಟ ಭಕ್ತಿರಸದಲ್ಲಿ ತೇಲುತ್ತಿರುವಾಗಲೂ ಒಂದು ಬಗೆಯ ಸಾಕ್ಷೀ ಪ್ರಜ್ಞೆಯನ್ನು ಕಳೆದುಕೊಳ್ಳದೇ ಇರುವುದು. ಒಬ್ಬ ಅಪ್ಪಣ್ಣಭಟ್ಟನಾಗಲೀ ವಾರಕರಿ ಭಟ್ಟನನ್ನು ಅವನು ಸರಿಯಾಗಿಯೇ ಗ್ರಹಿಸಬಲ್ಲವನು, ಜಾತ್ರೆಯ ಎಲ್ಲ ಮೋಹಕ ಸೆಳೆತಗಳನ್ನೂ ಆಸ್ವಾದಿಸಬಲ್ಲವನು. ಆಧ್ಯಾತ್ಮದ ತನ್ಮಯತೆ ನೀಡುವ ಸುಖವನ್ನೂ ಅದರಾಚೆಯ ಭವದ ಸೌಂದರ್ಯಾನುಭೂತಿಯನ್ನೂ ಕಾಣಬಲ್ಲ ಅವನಿಗೆ ಧರ್ಮದ ಸೋಗುಗಳು, ವ್ಯಾಪಾರೀ ಬುದ್ಧಿ ಮತ್ತು ಹೆಣ್ಣು, ಸಂಸಾರ ಎಲ್ಲ ಹೊರೆಯೆಂಬ ಪ್ರಜ್ಞೆಯೂ ಇದೆ! ಇದೆಲ್ಲ ಕಥಾನಕದ ಉದ್ದಕ್ಕೂ ನಮಗೆ ಕಾಣಿಸುತ್ತದೆ.


ನಾರಾಯಣಭಟ್ಟನ ತಂಗಿ ಕಮಲಮ್ಮ ಸಾಯುವ ಸಂದರ್ಭದಲ್ಲಿ ದೇವರೇ ಇಲ್ಲ, ಅದೆಲ್ಲ ಒಂದು ಭ್ರಮೆ ಎನ್ನುವಂಥ ಒಂದು ಮಾತನ್ನಾಡಿ ಸಾಯುತ್ತಾಳೆ. ಇದು ನಾರಾಯಣಭಟ್ಟನಲ್ಲಿ ಹೊಸದಾದ ಯಾವುದೇ ಪರಿವರ್ತನೆಗೆ ಕಾರಣವಾಗುವ ಸಂದರ್ಭದಂತೆ ಕಾಣಿಸದಿದ್ದರೂ ಓದುಗನ ದೃಷ್ಟಿಯಿಂದ ಗಮನಿಸಬೇಕಾದ ಸನ್ನಿವೇಶವೇ. ಇದುವರೆಗೆ ಬಹುಷಃ ಯಾವ ಹೆಣ್ಣು ಮಗಳೂ ತನ್ನ ಮೃತ್ಯುಶಯ್ಯೆಯಲ್ಲಿ ಇಂಥ ನಾಸ್ತಿಕವಾದವನ್ನು ಹೂಡುವ ಒಂದು ಚಿತ್ರ ನಮಗೆ ಕಾದಂಬರಿಗಳಲ್ಲಿ ಸಿಕ್ಕಿದ್ದಿಲ್ಲ. ಕುಸನೂರರ ಕಮಲಾ ಬಾಯಲ್ಲಿ ಬರುವ ಮಾತುಗಳಿಗೆ ಆಕೆ ಅದುವರೆಗಿನ ತನ್ನ ಇಪ್ಪತ್ತು ವರ್ಷಗಳ ಬಾಳ್ವೆಯಲ್ಲಿ ಅನುಭವಿಸಿದ ಸಂಕಷ್ಟಗಳೇ ಕಾರಣವಿದ್ದಿರಬಹುದಾದರೂ ನಾರಾಯಣಭಟ್ಟನ ಎಳೆವಯಸ್ಸಿನ ಪತ್ನಿ ವಿಯೋಗ, ನಂತರದ ಅವನ ತೀರ್ಥಯಾತ್ರೆ, ಅದಾಗುತ್ತಲೇ ಸಾಹುಕಾರ ಅಂಜನಪ್ಪನ ಮೋಸ ಮತ್ತು ತನಗಿಂತಲೂ ಕಿರಿಯ ವಯಸ್ಸಿನ ತಂಗಿ ಸಾವಿನೆದುರು ನಿಂತು ಆಡುವ ಮಾತು ಮತ್ತು ಅದರೊಂದಿಗೇ ಎರಗುವ ಆಕೆಯ ಮೃತ್ಯು - ಯಾವುದನ್ನೂ ಕಾದಂಬರಿ ತೀವೃವಾಗಿ ಅಭಿನಯಿಸದೇ ಮುಂದುವರಿಯುತ್ತದೆ. ಕಾದಂಬರಿಯ ಮೊದಲ ಹತ್ತಿಪ್ಪತ್ತು ಪುಟಗಳಲ್ಲಿ ಇದೆಲ್ಲವೂ ಮುಗಿದುಬಿಡುತ್ತದೆ ಕೂಡ.


ಕಾದಂಬರಿಯ ಉದ್ದಕ್ಕೂ ಕುಸನೂರರು ನಾಯಿ, ಗುಬ್ಬಿ, ಕಾಗೆ, ಹುಂಜ, ಕೋತಿ, ಮರಕುಟ್ಟಿಗಗಳಿಗೆ ಮಾತು ಕೊಟ್ಟಿದ್ದಾರೆ! ಇದು ಕಾದಂಬರಿಯ ತಂತ್ರವಾಗಿ ಎಷ್ಟು ಅಗತ್ಯವೋ ಅಷ್ಟೇ ಕಥಾನಕದ ಸೂಕ್ಷ್ಮ ಅಗತ್ಯ ಕೂಡ ಆಗಿರುವುದನ್ನು ಗಮನಿಸದಿದ್ದರೆ ನಾರಾಯಣಭಟ್ಟನ ವ್ಯಕ್ತಿತ್ವ, ನಡವಳಿಕೆ ಸೇರಿ ಆ ಪಾತ್ರ ಚಿತ್ರಣದ ಮರ್ಮವೂ ಮನಸ್ಸಿಗಿಳಿಯುವುದಿಲ್ಲ. ಮನುಷ್ಯನ ಹೊರತಾಗಿ ಯಾವುದೇ ಜೀವಿ ಈ ಭೂಮಿಯ ಮೇಲೆ ತನ್ನ ಬದುಕನ್ನು ವಿಶೇಷತಃ plan ಮಾಡುವುದಿಲ್ಲ. ತತ್ವ, ಆದರ್ಶ, ನೀತಿ, ನಿಲುವು, ಜಾತಿ, ಪಂಗಡ, ಆಸ್ತಿ, ದುಡ್ಡು, ಘನತೆ, ಗೌರವ, ಅಂತಸ್ತು ಎಂದು ತನ್ನ ಸುತ್ತಲೇ ತನಗೊಂದು ಬಲೆ ನೇಯ್ದುಕೊಳ್ಳುವುದಿಲ್ಲ. ಸಹಜೀವನಕ್ಕೆ ಅಗತ್ಯವಾದ ಕನಿಷ್ಠ ರೀತಿ ನೀತಿಗಳಾಚೆ ಅವುಗಳಿಗೆ ಯಾವುದೇ ಕಟ್ಟುಪಾಡಿಲ್ಲ. ಅವುಗಳ ಕಣ್ಣಿಗೆ ಮನುಷ್ಯ ಹೇಗೆ ಕಾಣಿಸುತ್ತಿರಬಹುದು ಎನ್ನುವುದನ್ನು ಕಾಣಿಸುತ್ತಲೇ ನಾರಾಯಣಭಟ್ಟನನ್ನು ನೀವು ಕಾಣಬೇಕಾದ ದೃಷ್ಟಿಯೊಂದು ಬೇರೆಯೇ ಇದೆ, ರೂಢಿಗತ ದೃಷ್ಟಿ ಮತ್ತು ಮೌಲ್ಯಗಳ ಮಾಪನದಿಂದ ಅವನನ್ನು ಕಾಣಬೇಡಿ ಎಂಬ ಒಂದು ಸೂಚನೆಯೂ ಇಲ್ಲಿದೆ. ಅಲ್ಲದೆ ತಾಂತ್ರಿಕವಾಗಿ ಒಬ್ಬಂಟಿಯಾದ ನಾರಾಯಣಭಟ್ಟ ಮಾತನಾಡುವುದಾದರೂ ಯಾರೊಂದಿಗೆ? ಈ ಪಶುಪಕ್ಷಿಗಳ ಸಂಭಾಷಣೆ ಅಲ್ಲಲ್ಲಿ ಕಾದಂಬರಿಗೆ ಅನಿವಾರ್ಯ ಅಗತ್ಯವಾದ ಒಂದು ಹಗುರು ದಯಪಾಲಿಸಿದೆ.


ಹೆಂಡತಿಯ ಸಾವು, ಆಧ್ಯಾತ್ಮದ ಇನ್ನೊಂದು ಮುಖ, ಸಾಹುಕಾರ ಅಂಜನಪ್ಪನ ಮೋಸ, ತಂಗಿಯ ಸಾವಿನಲ್ಲಿ ಸಿಗುವ ಮಾತು ಎಲ್ಲವೂ ನಾರಾಯಣಭಟ್ಟನನ್ನು ಲಿಬರೇಟ್ ಮಾಡುತ್ತ ಬರುತ್ತವೆ. ಕೊನೆಗೆ ಮುಸ್ಲಿಮರ ದರ್ಗಾದ ಗೋರಿಯ ಮೇಲೆ ಮಗುವನ್ನು ಮಲಗಿಸಿ ಹೊರಟುಬಿಡುವಲ್ಲಿಗೆ ಹಿಂದೂ-ಮುಸ್ಲಿಂ, ಬ್ರಾಹ್ಮಣ ಅನ್ಯ ಎಂಬ ತೊಡಕನ್ನೂ ಆತ ಮೀರುತ್ತಾನೆ. ತುಂಗಾಳ ಸ್ವೀಕೃತಿಯಲ್ಲೂ ವಿಜೃಂಭಿಸುವುದು ಕಾಮವಾಗಲೀ ಮೋಹವಾಗಲೀ ಅಲ್ಲ. ನಾರಾಯಣಭಟ್ಟ ಒಬ್ಬ ಪರಿತ್ಯಾಗಿಯ ಪಟ್ಟಕ್ಕೇರುವುದು ಕುಸನೂರರಿಗೆ ಬೇಕಿರಲಿಲ್ಲ. ಸಂನ್ಯಾಸದಿಂದ ನಾರಾಯಣಭಟ್ಟನನ್ನು ಈ ರೀತಿಯಾಗಿ ಲಿಬರೇಟ್ ಮಾಡುವ ಕುಸನೂರರು ಅವನನ್ನು ಸಾಮಾನ್ಯನ ಬದುಕಿನೊಂದಿಗೇ ಉಳಿಸಿ ಬದುಕನ್ನು ಶೋಧಿಸುವ ಪ್ರಯತ್ನ ಮಾಡುತ್ತಲೇ ಬದುಕಿನಿಂದಲೂ ಅವನನ್ನು ಲಿಬರೇಟ್ ಮಾಡಲು ಪ್ರಯತ್ನಿಸುತ್ತಾರೆ. ಹಾಗಾಗಿ ಮತ್ತೆ ತುಂಗಾ ತನ್ನ ಪ್ರಿಯಕರ, ಪತಿ ಶಂಕರನೊಂದಿಗೇ ಹೋಗಲು ಬಯಸಿದಾಗ ವಿಷಾದದ ಎಳೆ ಕೂಡ ಇಲ್ಲದೆ ಅವಳನ್ನು ಕಳುಹಿಸಿಕೊಡಬಲ್ಲವನಾಗುತ್ತಾನೆ ಆತ.


ನಾರಾಯಣಭಟ್ಟನ ವ್ಯಕ್ತಿತ್ವ ತೀರಾ ವಿಶಿಷ್ಟವಾದುದರಿಂದ ಮತ್ತು ಆತ ಮಾತುಗಳಲ್ಲಿ ತತ್ವಜ್ಞಾನದ ಭಾಷಣ ಸ್ಫುರಿಸುವುದು ಕುಸನೂರರಿಗೆ ಬೇಕಿಲ್ಲದಿರುವುದರಿಂದ ಬೇರೆಯವರೊಂದಿಗೆ ಆತನ ಸಂವಾದ, ಸಂಭಾಷಣೆಗಳೆಲ್ಲ ಸೀಮಿತಗೊಂಡಂತೆ ಕಾಣಿಸುತ್ತದೆ. ವಿಶೇಷತಃ ತುಂಗಾಳ ಜೊತೆ ಕೂಡ ಆತನ ಮಾತುಕತೆ, ಒಡನಾಟಗಳ ವಿವರ ನಮಗೆ ಸಿಗುವುದಿಲ್ಲ. ಇದರಿಂದಾಗಿಯೇ ಕಾದಂಬರಿಯ ಹರಹಿನೊಳಗೇ ಬರುವ ಆದರೆ ಕಥಾನಕದ ಕೇಂದ್ರಕ್ಕೆ ವಿಶೇಷ ಪೋಷಣೆಯನ್ನೇನೂ ನೀಡಲಾರದ ಹಿಂದೂ-ಮುಸ್ಲಿಂ ದಂಗೆಗಳು, ಸಾವು-ನೋವು ಯಾವುದೂ ಮನುಷ್ಯನನ್ನು ಅವನು ಹೊಂಚಿಕೊಂಡ ಲಫಡಾಗಳಿಂದ ಲಿಬರೇಟ್ ಮಾಡುವ ಹೊಳಹು ನೀಡುವುದರಾಚೆ ಇಲ್ಲಿ ಮುಖ್ಯವಾಗುವುದೇ ಇಲ್ಲ. ಹೀಗಾಗಿ ನಾರಾಯಣಭಟ್ಟನ ಬದುಕು ಬರೆಯುವ ಕೈಫಿಯತ್ ಎಲ್ಲ ಸಾಮಾನ್ಯ ಜನರಿಗೂ ಅನ್ವಯಿಸಬಹುದಾದ ಸರಳ ಸಹಜ ಬಗೆಯದಾಗದೇ ಮತ್ತೆ ಕೆಲವೇ ವಿಶಿಷ್ಟ ವ್ಯಕ್ತಿತ್ವದವರ ಮಟ್ಟಿಗೇ ಸೀಮಿತವಾಗಿ ಬಿಡುವುದು ಇಲ್ಲಿನ ದುರಂತ.


ತುಂಗಾ ಪಾತ್ರ ಕೂಡ ನಾರಾಯಣಭಟ್ಟನಂತೆಯೇ ಅನಗತ್ಯವಾಗಿ ಬಹುಮಟ್ಟಿಗೆ ಅನೂಹ್ಯ ವಿವರಗಳಲ್ಲೇ ಉಳಿಯುವುದಾದರೂ ಅವಳು ಮತ್ತೆ ಶಂಕರನನ್ನು ಅರಸಿ ಹೋಗುವುದು ಮತ್ತು ನಾರಾಯಣಭಟ್ಟ ವಿಷಾದವಿಲ್ಲದ ನಿರ್ಲಿಪ್ತಿಯಿಂದ ಅವಳನ್ನು ತಡೆಯದಿರುವುದು ಕಾದಂಬರಿಯ ಒಂದು ಕ್ಲೈಮ್ಯಾಕ್ಸ್. ಅಲ್ಲೇ ತುಂಗಾ ಅಭಿಮಾನ, ಗೌರವ ಮತ್ತು ಅಚ್ಚರಿಯಿಂದ "ಯಾರರೀ ನೀವು? ಯಾರು? ನೀವು, ಯಾರೆಂದು ಹೇಳೀ...?" ಎಂದು ಪ್ರಶ್ನಿಸುವಲ್ಲೇ ನಾರಾಯಣಭಟ್ಟನೆಂಬೋ ನಾರಾಯಣಭಟ್ಟನ ವ್ಯಕ್ತಿತ್ವ ತನ್ನ ಚೌಕಟ್ಟು ಪಡೆಯುವುದಾದರೂ ಇದರಲ್ಲಿರುವ ನಾಟಕೀಯತೆಯೇ ಇಲ್ಲಿನ ವೈರುಧ್ಯವನ್ನೂ ಕಾಣಿಸುವುದು ವಿಶೇಷ.


ತುಂಗಾಗೆ ತಾನು ಏನಿದ್ದರೂ ನಾರಾಯಣಭಟ್ಟನಿಗೆ ಒಂದು ದೈಹಿಕ ಅಗತ್ಯವಷ್ಟೇ ಆಗಿರಬಹುದೆ ಎಂಬ ಅನುಮಾನ ಇದೆ. ಹಾಗೆಯೇ ಆಕೆ ಮತ್ತೆ ಶಂಕರನ ಬಳಿಗೆ ತಾನಾಗಿ ಹೋಗುವ ನಡೆಯಲ್ಲೂ ತುಂಗಾಳ ಅಗತ್ಯಗಳನ್ನು ನಾರಾಯಣಭಟ್ಟ ಸಮರ್ಥವಾಗಿ ಪೂರೈಸಲು ಶಕ್ತನಲ್ಲವೇನೋ ಎಂಬ ಅನುಮಾನದ ಸುಳಿಗಳಿವೆ. ತುಂಗಾಗೆ ಶಂಕರನ ಮೈಯ ಮೋಹವಿರುವುದರಲ್ಲಿ ಇದನ್ನು ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ನಾರಾಯಣಭಟ್ಟನ ಗೆಲುವಿನಂತೆ ಕಾಣುವ ಸೋಲು ಕೂಡ ಆಗಬಹುದಾದ ಈ ಘಟನೆ ಆತ ಪ್ರತಿನಿಧಿಸುವ ಎರಡು ವಿಶಿಷ್ಟ ಸಂಗತಿಗಳ ಸೋಲಾಗಿ ಕೂಡ ಕಾಣುವುದು ಸಾಧ್ಯವಿದೆ.


ಒಂದು, ನಾರಾಯಣಭಟ್ಟನ ಜೀವನಪ್ರೀತಿಯ ಸೋಲು. ಬದುಕಿನಲ್ಲಿರುತ್ತ ಬದುಕಿಗೆ ಹೊರಗಾಗಿ ಬದುಕುವ ಒಂದು ಹೊಸ ಕರ್ಮಣ್ಯೇವ ತತ್ವದ ಹಾದಿ ಏನಿದೆ ಅದು ಲೈಂಗಿಕ ಸವಾಲಿಗೆ ಎದುರಾದಾಗ ನಾರಾಯಣಭಟ್ಟನ ಲೈಂಗಿಕ ಸೋಲು ನಮಗೆ ಆತ ತನ್ನ ಜೀವನಪ್ರೀತಿಯ ನಿರ್ವಹಣೆಯಲ್ಲಿ ಸೋತು ವಿರಕ್ತಿಯಲ್ಲಿ ಗೆದ್ದಂತೆ ಕಾಣಿಸುತ್ತದೆ. ಇನ್ನೊಂದು ಇದು ಅವನ ವಿಶಿಷ್ಟ ನಿರ್ಲಿಪ್ತಿಯ ಸೋಲು ಕೂಡ. ಈ ವಿಶಿಷ್ಟ ನಿರ್ಲಿಪ್ತಿಯ ಗೆಲುವು ಯಾವಾಗ ಸಾಧ್ಯವಾಗುತ್ತದೆಂದರೆ ಆತನ ಜೀವನ ಪ್ರೀತಿಯ ಗೆಲುವಿನೊಂದಿಗೆ ಮಾತ್ರ. ಅದು ಸೋತರೆ ಇದು ಗೆದ್ದಂತೆ ಮತ್ತು ಇದರ ಗೆಲುವು ಯಥಾವತ್ ಸೋಲಿನಂತೆ. ನಾರಾಯಣಭಟ್ಟನ ನಿರ್ಲಿಪ್ತಿ ಸಂನ್ಯಾಸವಲ್ಲ; ನಿರಾಕರಣವಲ್ಲ. ಆದರೆ ಅದೇ ಕಾಲಕ್ಕೆ ಅದು ತೀವೃ ವ್ಯಾಮೋಹವೂ ಆಗಲಾರದ್ದು; ತನ್ಮಯತೆಯನ್ನು ನೀಡಲಾರದ್ದು. ಇದರಲ್ಲೇ ವೈರುಧ್ಯವಿದೆ ಎಂಬುದನ್ನು ಗಮನಿಸಿದರೆ ಈ ಕರ್ಮಣ್ಯೇವ ತತ್ವದ ಪ್ರಾಯೋಗಿಕ ನಿಷ್ಪ್ರಯೋಜಕತೆ ಕಣ್ಣಿಗೆ ಹೊಡೆಯುತ್ತದೆ. ಇದರಿಂದಾಗಿಯೇ ನಮ್ಮ ಆಧ್ಯಾತ್ಮ ಋಣಾತ್ಮಕ ನಿಲುವನ್ನು ಹೊಂದಿರುವುದು; ಇಹಕ್ಕಿಂತ ಹೆಚ್ಚು ಪರವನ್ನು ಮೈಮೇಲೆಳೆದುಕೊಂಡಿರುವುದು. ಫಲಾಪೇಕ್ಷೆಯಿಲ್ಲದ ಪ್ರಯತ್ನವೇನಿದ್ದರೂ ಅದು ವೀರ್ಯವತ್ತಾಗಿರಲು ಸಾಧ್ಯವಿಲ್ಲ. ಹಾಗಾಗಿಯೇ ಇಲ್ಲಿ ತುಂಗಾಗೆ ನಾರಾಯಣಭಟ್ಟನಿಗಿಂತ ಶಂಕರ ಆಗಬಹುದೆನ್ನಿಸುತ್ತದೆಯೇ ಹೊರತು ಪಾತಿವೃತ್ಯದ ದೃಷ್ಟಿಯಿಂದೇನೂ ಅಲ್ಲ. ಹೀಗೆ ತುಂಗಾಳನ್ನು ಸಂತುಷ್ಟವಾಗಿರಿಸಿ ಉಳಿಸಿಕೊಳ್ಳಲಾಗದೇ ಹೋಗುವ ನಾರಾಯಣಭಟ್ಟನ ನಿರ್ಮಮ ಶೈಲಿಯ ಬದುಕು ಹಳೆಯ ಟ್ರ್ಯಾಕಿಗೇ ಮರಳುತ್ತದೆ.


ಎಲ್ಲದರಿಂದ ಲಿಬರೇಟ್ ಆಗಲು ಹೊರಡುವ ಮನುಷ್ಯ ಲಿಬರೇಟ್ ಆಗುವ ಆಸೆಗೆ ಜೋತುಬೀಳುತ್ತಾನೆ ಮತ್ತು ಅದೇ ಅವನ ಹೊಸ ವ್ಯಸನವಾಗಿ ಬಿಡುತ್ತದೆ. ಅವನಿಗೆಲ್ಲಿಯ ಬಿಡುಗಡೆ? ನಿಜವಾದ ಬಿಡುಗಡೆ ಲಿಬರೇಟ್ ಆಗಬೇಕೆನ್ನುವ, ಆಗುವುದಕ್ಕಾಗಿಯೇ ದೇಶಾಂತರ ಹೋಗುವ, ಸಂಬಂಧಗಳಿಂದ ಕಳಚಿಕೊಳ್ಳುವ, ಹೋರಾಟಕ್ಕೆ ಬೆನ್ನುಹಾಕುವ, ಜೀವನವಿಮುಖಿಯಾಗುವ ಆಸೆಗಳಿರುವವನಿಗೆ ಸಿಗುವುದಿಲ್ಲ. ಅದನ್ನು ಒಳಗಾಗುತ್ತ ಪಡೆಯಬೇಕಾಗುತ್ತದೆ ಎಂಬಲ್ಲಿಗೆ ನಾರಾಯಣಭಟ್ಟ ಕೊನೆಗೂ ತಲುಪದೇ ಹೋಗುವುದರ ಅರಿವು ಹುಟ್ಟುವುದು ಕೂಡ ಈ ನಾಟಕೀಯವಾದ ಸನ್ನಿವೇಶದ ಅಂತ್ಯದಲ್ಲೇ.


ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ, ಹೊಸತನದಿಂದ ಕೂಡಿದ ಕಾದಂಬರಿ.


ಕಾದಂಬರಿಯ ಹೆಸರು : ಒಂದು ಕೈಫಿಯತ್


ಪ್ರಕಾಶಕರು: ಪ್ರಗತಿ ಗ್ರಾಫಿಕ್ಸ್, ೧೧೯, ೩ನೆಯ ತಿರುವು, ೮ನೆಯ ಮುಖ್ಯ ರಸ್ತೆ, ಆರ್.ಪಿ.ಸಿ. ಬಡಾವಣೆ, ಬೆಂಗಳೂರು - ೫೬೦ ೦೪೦ (೦೮೦ ೨೩೪೦೯೫೧೨)


ಪುಟಗಳು :೧೨೦ ಬೆಲೆ: ೬೦.೦೦

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, November 1, 2007

ಕುಸುಮಾಕರ ದೇವರಗೆಣ್ಣೂರು

ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು ಮತ್ತೆ ಅದೇ ಶಾಲೆ ಬಿಟ್ಟು ಹೈಸ್ಕೂಲಿಗೋ ಕಾಲೇಜಿಗೋ ಬೇರೆ ಕಡೆ ಹೋಗಬೇಕಾದಾಗ ಬಿಟ್ಟು ಹೋಗಬೇಕಲ್ಲ ಎಂದು ಅತ್ತಿದ್ದು.....ಎಲ್ಲ ಹಳೆಯ ನೆನಪುಗಳು.

ಅಲ್ಲೆಲ್ಲೋ ನಮಗೆ ಬದುಕಿನ ಸ್ಪರ್ಧಾತ್ಮಕ ಗುಣದ ಅಸ್ಪಷ್ಟ ಪರಿಚಯವಾಗಿರುತ್ತದೆ. ಅದು ಮಾರ್ಕುಗಳ ಲೆಕ್ಕದಲ್ಲಿ, ಆಟದ ತೀರ್ಪುಗಳಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳಲ್ಲಿ ತನ್ನ ಕ್ರೂರ ಹಲ್ಲನ್ನು ಮಸೆದ ಶಬ್ದ ಕೇಳಿಸದಿದ್ದರೂ ಕೇಳಿಸಿದಂತಿರುತ್ತದೆ. ಮುಂದೆ ಉದ್ಯೋಗದ ಬೇಟೆಗೆ ತೊಡಗಿದಾಗ, ಅಲ್ಲಿ ಇಲ್ಲಿ ನಮ್ಮ ಜೊತೆಯವರು ನಮಗಿಂತ ಮುಂದೆ ಸಾಗಿ ಹೋದ ಸುದ್ದಿ ಕೇಳಿದಾಗ, ಕೊನೆಗೂ ಬದುಕಿನ ಹಾದಿ ಬದಲಿಸಲಾಗದ ಮಧ್ಯವಯಸ್ಸಿನಲ್ಲಿ ನಿಂತಿರುವಾಗ ನಮ್ಮದೇ ಓರಗೆಯ ಅವರಿವರ ಯಶಸ್ಸು, ಅಪಯಶಸ್ಸುಗಳನ್ನು ಕಾಣುವಾಗ....

ನಮ್ಮ ವಿದ್ಯಾಭ್ಯಾಸ, ಉದ್ಯೋಗ, ಉಳಿತಾಯ ಎಲ್ಲದರ ಹಿಂದಿರುವ ಸರಳ ಉದ್ದೇಶ ಒಂದೇ, ಚೆನ್ನಾಗಿ ಬದುಕುವುದು. ಆದರೆ ಎಷ್ಟೋ ಮಂದಿಗೆ ಈ ಉದ್ದೇಶವನ್ನು ಸಾಧಿಸುವ ಸಾಧನೆಯ ಹಾದಿಯಲ್ಲಿ ಅದೇ ಮರವೆಯಾಗಿ ಬಿಡುವುದಿದೆ. ಬರೇ ದುಡಿತ ದುಡಿತ ದುಡಿತ, ಅದನ್ನು ಬಿಟ್ಟರೆ ಎಲ್ಲಿ ಹೇಗೆ ಎಷ್ಟು ಹಣ ಹೂಡಿದರೆ ಸೇಫ್, ಎಲ್ಲಿ ಹೆಚ್ಚು ಸಿಗುತ್ತದೆ, ಸ್ವಲ್ಪ ಸಮಯವಿದ್ದರೆ ಬೇರೇನಾದರೂ ಗಳಿಕೆಗೆ ಸಾಧ್ಯವಿದೆಯೆ ಮುಂತಾಗಿ ಯೋಚನೆ. ತಪ್ಪೆಂದು ಹೇಳುತ್ತಿಲ್ಲ. ಇವರ ಪ್ರಕಾರ ಆ ಚೆನ್ನಾಗಿ ಬದುಕುವುದು ಇವತ್ತು, ಈಗ ಅಲ್ಲ. ಮುಂದೆಂದೋ ಒಂದು ದಿನ, ಈ ಸಾಹಸಗಳೆಲ್ಲ ಮುಗಿದ ಮೇಲೆ. ಆದರೆ ಆ ಒಂದು ದಿನ ಎಂದಾದರೂ ಬರುವುದೆ?

ಇವತ್ತು, ಈಗ ಮಾತ್ರ ಇವರು ಆ ಚೆನ್ನಾಗಿ ಬದುಕುವುದಕ್ಕೆ ವೇಳೆಯನ್ನೇ ಮಿಗಿಸುವುದಿಲ್ಲವಲ್ಲ. ಒಂದು ಮನೋರಂಜನೆ, ಓದು, ಸಿನಿಮಾ, ಪ್ರವಾಸ, ಮಾತುಕತೆ, ಸಭೆ, ಸಮಾರಂಭ, ಸರಸ, ವಿನೋದ ಯಾವುದೂ ಇಲ್ಲದ ಬಾಳನ್ನೂ ಕೆಲವರು ಬಾಳುತ್ತಿಲ್ಲವೆ? ಕೆಲವರಿಗೆ ಇದು ಅನಿವಾರ್ಯ. ಒಬ್ಬ ಬಸ್ಸು ಅಥವಾ ಲಾರಿ ಡ್ರೈವರ್, ಅಟೋ ರಿಕ್ಷಾ ಓಡಿಸುವವರು, ಸಣ್ಣಪುಟ್ಟ ವ್ಯಾಪಾರಕ್ಕೆ ಓಡಾಡುವವರು, ಹಗಲು ತೊಡಗುವ ಮುನ್ನ, ಕತ್ತಲು ಆವರಿಸಿದ ಮೇಲೆ ಹೊಸದಾದ ದುಡಿಮೆಯೊಂದರಲ್ಲಿ ವ್ಯಸ್ತರಾಗುವವರು, ಇಂತಿಷ್ಟು ಗಂಟೆಯ ಇಂಥದೇ ದುಡಿಮೆಯೆಂಬ ನಿಶ್ಚಿತವೇ ಇಲ್ಲದವರು....

ಇನ್ನು ಕೆಲವರಿಗೆ ಅನಿವಾರ್ಯ ಅಲ್ಲ ಎನಿಸುತ್ತದೆ, ನಮಗೆ. ಅವರಿಗೆ ಹಾಗನಿಸದಿರಬಹುದಲ್ಲ? ಇವರ ಉದ್ದೇಶವೂ ಅದೇ, ಈಗ ಸ್ವಲ್ಪ ಕಷ್ಟಪಟ್ಟರೇ ಅಲ್ಲವೆ ಮುಂದೆ ಚೆನ್ನಾಗಿ ಬದುಕುವುದಕ್ಕೆ ಸಾಧ್ಯ?

ಕುಸುಮಾಕರ ದೇವರಗೆಣ್ಣೂರರ ಕಾದಂಬರಿ ನಿರಿಂದ್ರಿಯದಲ್ಲಿ ಬರುವ ರೊಳ್ಳಿ ಇಂಥವನು. ಈ ಕಾದಂಬರಿಯನ್ನು ಮತ್ತೊಮ್ಮೆ ಓದಲು ಕಾರಣವಿದೆ. ಕನಸುಗಳು, ರೂಪಕಗಳು, ದೃಷ್ಟಾಂತಗಳು ಇಲ್ಲವೇ ತಮ್ಮ ಓದಿನ ನೆನಪುಗಳಿಂದಲೇ ತಾವು ಹೇಳಬೇಕಾದುದನ್ನು ಹೇಳುವ ಕುಸುಮಾಕರ ದೇವರಗೆಣ್ಣೂರರು ತಮ್ಮ ಇತ್ತೀಚಿನ ಸಂದರ್ಶನದಲ್ಲೂ (ದೇಶಕಾಲದ ಹನ್ನೊಂದನೆಯ ಸಂಚಿಕೆ) ಇದೇ ರೀತಿ ಮಾಡಿರುವುದು ಕುತೂಹಲಕರ. ಇವರ ಅಂತರಂಗವನ್ನು ಸುಮಾರು ಎಂಭತ್ತಕ್ಕೂ ಮಿಕ್ಕಿದ ಪ್ರಶ್ನೆಗಳಲ್ಲಿ ತೆರೆಯಲೆತ್ನಿಸಿದ ರಹಮತ್ ತರೀಕೆರೆಯವರಿಗೆ ಬೇಕಾದ ಉತ್ತರಗಳು ಸಿಕ್ಕಿದವೋ ಇಲ್ಲವೋ, ಜಗತ್ತಿನ ಸಾಹಿತ್ಯವನ್ನೆಲ್ಲ ಒಮ್ಮೆ ಹಾದು ಬಂದ ಅನುಭವವಂತೂ ಆಗಿರಬೇಕು! ಜಿಡ್ಡು ಕೃಷ್ಣಮೂರ್ತಿ, ಓಶೋ, ಮಹಾಭಾರತ, ಭವಭೂತಿ, ಮಹಾತ್ಮಗಾಂಧಿ, ಎರ್ರಿಕ್ ಫ್ರಾಮ್, ರೂಸ್‌ವೆಲ್ಟ್, ಕೆ.ಕೆ.ಹೆಬ್ಬಾರ್, ಹೆಲನ್ ಕೆಲರ್, ವಿಕ್ಟರ್ ಫ್ರ್ಯಾಂಕಲ್, ಬ್ರೆಕ್ಟ್, ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಹಾಬ್ಸ್, ಎರಿಕ್ ಎರಿಕ್‌ಸನ್, ಬೊಳುವಾರು, ವಿಕ್ಟರ್ ಫ್ರ್ಯಾಂಕಲ್, ಅಗಾಥ ಕ್ರಿಸ್ತಿ, ಕುವೆಂಪು, ಟಾಲ್‌ಸ್ಟಾಯ್, ಕಾರಂತ, ಬೇಂದ್ರೆ, ಅಡಿಗ, ಪಿಕಾಸೊ, ಸತ್ಯಕಾಮ, ಸ್ವಪ್ನಗಳು, ಸೂಡೋ ಕ್ಯಾರಕ್ಟರ್‍ಸ್, ಮನಃಶಾಸ್ತ್ರ, ಗೀತೆ, ಮತಾಂತರ.....ಏನು ಮತ್ತೇನಿಲ್ಲ!! ಬರೇ ಹೆಸರುಗಳಲ್ಲ, ಅಂಥವನ್ನು ಬಿಟ್ಟು, ಏನಾದರೊಂದು ಪ್ರಕರಣ, ಉಪಕತೆ, ಅನುಭವ ಹೇಳುವಾಗ ಅಲ್ಲಿ ಬಂದ ಹೆಸರುಗಳಿವು. ಇನ್ನು ಸಂದರ್ಭಾನುಸಾರ ಬಂದ ಹೆಸರುಗಳು, ಸಂಗತಿಗಳು ಪಟ್ಟಿಮಾಡಲಾಗದಷ್ಟಿವೆ!
ಈ ಸಂದರ್ಶನ ಓದಿದ ಮೇಲೆ ಇನ್ನೇನೂ ಓದಲಾಗಲಿಲ್ಲ. ಅಶೋಕ ಹೆಗಡೆಯವರ ಕತೆ ಓದುವುದಿತ್ತು. ಆಗಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೇ ಕೂತುಬಿಟ್ಟೆ. ಬದುಕೇ ಗೇಮ್ ಟ್ರುಥ್ ಎನ್ನುತ್ತಾರಲ್ಲ ಇವರು, ಹೌದಲ್ಲವ..... ಆದರೆ ಬದುಕುವಾಗ ಅದನ್ನು ಮರೆಯುವುದೇ ಒಳ್ಳೆಯದಲ್ಲವ...

ತುಂಬ ಹಿಂದೆ ಓದಿದ್ದ ಇವರ ಕಾದಂಬರಿಗಳು ಪರಿಘ, ನಿರಿಂದ್ರಿಯ, ಬಯಲ ಬಸಿರು ಎಲ್ಲವನ್ನೂ ಮತ್ತೊಮ್ಮೆ ಓದಬೇಕೆನಿಸಿತು. ನಿರಿಂದ್ರಿಯದ ಈ ಭಾಗವನ್ನು ಓದಿ:

ಕಿಟಕಿಯಿಂದ ಅವನಿಗೊಂದು ದೃಶ್ಯ ಕಂಡಿತು-

ನಾಲ್ಕೈದು ವರ್ಷದ ಮಕ್ಕಳು ಗುಂಪಾಗಿ ಆಟದಲ್ಲಿ ತೊಡಗಿವೆ. ಅವೆಲ್ಲ ಮಧ್ಯಮ ವರ್ಗದ ಮಕ್ಕಳೇ. ಮೈಮೇಲೆ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡಿವೆ. ಕಾಲಲ್ಲಿ ಸೊಗಸಾದ ಮೆಟ್ಟುಗಳಿವೆ. ಮೈ ಬಣ್ಣ ಕೆಂಪಾಗಿವೆ. ಹುಡುಗಿಯರ ತಲೆಗೂದಲನ್ನು ನೀಟಾಗಿ ಬಾಬ್ ಮಾಡಲಾಗಿದೆ. ಅವುಗಳದ್ದೇ ಒಂದು ಗುಂಪು. ಅವುಗಳ ಜತೆಯಲ್ಲಿಯೆ ಅವುಗಳ ಓರಗೆಯ ಮಗುವೊಂದಿದೆ. ಅದು ಮುಸುರೆ ತಿಕ್ಕುವವಳ ಮಗು. ಅದಕ್ಕೆ ಮೈಮೇಲೆ ಸೊಗಸಾದ ಬಟ್ಟೆಗಳಿಲ್ಲ. ಇದ್ದ ಬಟ್ಟೆಗಳೂ ತೀರ ಹಳೆಯದಾಗಿವೆ, ಕೊಳೆಯಾಗಿವೆ, ಜೀರ್ಣವಾಗಿವೆ. ಎಣ್ಣೆ ಕಾಣದ ತಲೆ, ಮೈ ಕೂಡ ಕೊಳೆಯಾಗಿದೆ. ಬರಿಗಾಲು. ಅವುಗಳ ಜತೆ ತಾನೂ ನಗುತ್ತಿದೆ. ಕೇಕೆ ಹಾಕುತ್ತಿದೆ. ಆದರೆ ಅವರಲ್ಲಿ ಯಾವ ಸಂಬಂಧವೂ ಇಲ್ಲವಾಗಿದೆ. ಅದರ ನಗುವನ್ನು ಯಾರೂ ಕೇಳುತ್ತಿಲ್ಲ. ಅದರ ಕೇಕೆಯನ್ನು ಯಾರೂ ಗಮನಿಸುತ್ತಿಲ್ಲ. ಅದರ ಮಾತನ್ನು ಯಾರೂ ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ. ಆ ಮಕ್ಕಳು ಓಟದ ಪಂದ್ಯವನ್ನಿಟ್ಟವು. ಈಗ ಅವು ಓಡುತ್ತಿವೆ. ಅವುಗಳ ಹಿಂದೆ ಮುಸುರೆಯವಳ ಮಗುವೂ ಓಡುತ್ತಿದೆ. ಎರಡರ ನಡುವೆ ಅಂತರ ಬೆಳೆಯುತ್ತಿದೆ. ಮುಸುರೆಯವಳ ಮಗು ತೀರ ಹಿಂದುಳಿಯಿತು. ಅದು ಏಕಾಕಿಯಾಗಿದೆ....

ಆ ಚಿತ್ರ ಮರೆಯಾಯಿತು. ಆದರೆ ಆ ದೃಶ್ಯ ಮನಸ್ಸಿನಲ್ಲಿ ಒಂದು ಚಿತ್ರವನ್ನು ಲೇಖಿಸಿತು. ಆ ಚಿತ್ರ ವಿಷಾದವನ್ನು ನೀಡಿತು. ಮುಂದೆ ಜನ ಓಡುತ್ತಿದೆ. ತಾನೂ ಓಡುತ್ತಿದ್ದಾನೆ. ತಾನು ದೂರ...ದೂರ...ಹಿಂದೆ....ಹಿಂದೆ ಉಳಿದ. ತನಗೆ ದಣಿವಾಗಿದೆ. ಆದರೂ ಓಡುತ್ತಿದ್ದಾನೆ. ತನ್ನ ಜತೆಯಲ್ಲಿ ಯಾರೂ ಇಲ್ಲ. ತಾನೊಬ್ಬನೇ. ಕಣ್ಣು ಕತ್ತಲಿಸುತ್ತಿವೆ. ಕಾಲು ನೋಯುತ್ತಿವೆ. ತೃಷೆಯಿಂದ ಬಾಯಿ ಒಣಗಿ ಬರುತ್ತಿದೆ. ಈ ಚಿತ್ರವೆಲ್ಲವೂ ಮರೆಯಾಯಿತು. ತಾನು ಮುಂದೆ ಹೊರಟಿದ್ದಾನೆ. ಹಿಂದೆ ಹೆಂಡತಿ, ಅವಳ ಜತೆ ಮೂವರು ತನ್ನ ಮಕ್ಕಳು. ಅವರೂ ತನ್ನನ್ನು ಅನುಸರಿಸುತ್ತಿದ್ದಾರೆ. ಆದರೆ ಅವರಿಗೂ ತನಗೂ ಯಾವ ಸಂಬಂಧವಿಲ್ಲವಾಗಿದೆ. ಅವರು ತನ್ನನ್ನು ದಾಟಿ ಮುಂದೆ ಬಂದರು. ಅವರು ತಮ್ಮ ಮಾತಿನಲ್ಲೇ ಇದ್ದಾರೆ. ತನ್ನನ್ನು ಯಾರೂ ಗಮನಿಸುತ್ತಿಲ್ಲ. ಅವರು ಏನೋ ಮಾತನಾಡಿದರು. ಆದರೆ ಕೇಳಿಸಲಿಲ್ಲ. ಅವರು ದಡದಡ ಹೆಜ್ಜೆ ಹಾಕಿದರು. ತಾನೂ ಹಾಕಿದ. ಆದರೆ ಅವರನ್ನು ಕೂಡಿಕೊಳ್ಳುವುದು ಆಗಲಿಲ್ಲ. ಅವರದೇ ಒಂದು ಗುಂಪು, ತಾನೆ ಒಬ್ಬ. ಇದೇ ಈಗ ಕಂಡ ಏಕಾಕಿಯಾದ ಮುಸುರೆಯವಳ ಮಗುವಿನ ಚಿತ್ರ ಕಣ್ಮುಂದೆ ಬಂತು. ಅದಕ್ಕೂ ತನಗೂ ಸಾಮ್ಯವನ್ನು ಸಂಬಂಧವನ್ನು ಮನಸ್ಸು ಕಲ್ಪಿಸಿತು.

'ನಾನು ಏಕಾಕಿಯಾದೆ, ನಾನು ಒಬ್ಬನೇ ಆದೆ. ನನಗೆ ಯಾರೂ ಜತೆಯಿಲ್ಲ.' ಎಂದು ರೊಳ್ಳಿಯ ಮನಸ್ಸು ಕೂಗಿಕೊಂಡಿತು.

ಬಯಲ ಬಸಿರು ಇದಕ್ಕಿಂತ ಚೆನ್ನಾಗಿರುವ ಕಾದಂಬರಿ. ವ್ಯಕ್ತಿ ತನ್ನ ಅಂತರಂಗದ ಅರಳುವಿಕೆಗೆ ತುಡಿಯುತ್ತ ಧರ್ಮ, ತಂತ್ರ ಮತ್ತು ಯೋಗ ಎಂದೆಲ್ಲ ತಾತ್ವಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ತೊಳಲುತ್ತಲೇ ಸುತ್ತ ನಡೆಯುವ ಧರ್ಮ ಮತ್ತು ಶ್ರದ್ಧೆಯ ವ್ಯಾಪಾರವನ್ನು ಗಮನಿಸುತ್ತಲೇ ತನ್ನದೇ ಅರಿವಿಗೆ ವ್ಯತಿರಿಕ್ತವಾಗಿ ವ್ಯಕ್ತಿ ಒಂದು ಸಂಸ್ಥೆಯಾಗುವ, ಅದೇ ಒಂದು ಚಕ್ರವ್ಯೂಹವಾಗುವ ಮತ್ತು ಬಯಲಾವುದು ಆಲಯಯಾವುದು ಎಂಬ ಭ್ರಮೆಯಾಗುವಂಥ ಒಂದು ವಿಲಕ್ಷಣ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಚಿತ್ರಿಸುವ ಕಾದಂಬರಿ ಇದು. ವಿಶ್ವಶಾಂತಿಯ ವಿಕೃತ ಪ್ರಯತ್ನವನ್ನು, ಅಮೆರಿಕ-ರಷ್ಯಾ ಜಿದ್ದಾಜಿದ್ದಿಯನ್ನು, ಜಾಗತೀಕರಣವನ್ನು ತನ್ನೊಡಲಲ್ಲಿ ಇರಿಸಿಕೊಂಡೇ ಈ ಕಾದಂಬರಿ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯ ಪ್ರಶ್ನೆಗಳನ್ನು ಎದುರಿಡುತ್ತದೆ. ಸ್ವಾಮಿ ಅನಿಕೇತಾನಂದ ಮತ್ತು ವಿನಯಾನಂದರ ಪಾತ್ರ ಸೃಷ್ಟಿ, ಅವುಗಳ ಪರಸ್ಪರ ಸಂಬಂಧ ಕೂಡ ತನ್ನ ವಿಲಕ್ಷಣ ಸ್ವರೂಪದಿಂದಲೇ ನೀಡುವ ವಿಡಂಬನೆ ಕುತೂಹಲಕರ. ಕಾದಂಬರಿ ತುಂಬ ಪುಟ್ಟದು, ನೂರು ಪುಟಗಳಷ್ಟು, ಆದರೆ ಇದರ ಹರಹು ಬಹುದೊಡ್ದದು.

ಇದೇ ಕಾದಂಬರಿಯನ್ನು ಕೇಶವ ಮಳಗಿಯವರ ಅಂಗದ ಧರೆ ಮತ್ತು ಪಾರ್ ಲಾಗರ್‌ಕ್ರಿಸ್ಟ್‌ರ ದ ಸಿಬಿಲ್ (ಪ್ರವಾದಿನಿ - ಅನುವಾದ ಡಿ ಆರ್ ಮಿರ್ಜಿ) ಜೊತೆಗೆ ಓದಬೇಕು. ಈ ಸಂಕೀರ್ಣವೂ, ಪರಸ್ಪರ ಸಂಬಂಧವಿದ್ದೂ ತೀರಾ ವೈರುಧ್ಯಮಯವೂ ಆಗಿರುವ ಕಾದಂಬರಿಗಳನ್ನು ಒಟ್ಟೊಟ್ಟಿಗೇ ಓದಿದಾಗ ಬದುಕಿನ ವಿರಾಟ್ ಸ್ವರೂಪವೊಂದು ಕಣ್ಣೆದುರು ನಿಲ್ಲುತ್ತದೆ. ಭಯವಾದರೂ ಅದನ್ನು ದಿಟ್ಟಿಸಿ ನೋಡುವುದರಲ್ಲಿ ಮೈ ಜುಮ್ಮೆನಿಸುವ ಅದ್ಭುತ ದರ್ಶನವಿದೆ! ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ