Thursday, December 25, 2008

ಸೂರ್ಯ ಶಿಕಾರಿಯ ಶಿಖರಸೂರ್ಯ

ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'. ಆದರೆ ಇಲ್ಲಿನ ಮಿಥಿಕ್ ಜಗತ್ತಿನ ಮೂಲಕ, ಒಂದು ಅದ್ಭುತರಮ್ಯ ಕಥಾನಕದ ಮೂಲಕ ಕಂಬಾರರು ರಾಜಕಾರಣದ ಭ್ರಷ್ಟಮುಖವನ್ನು, ಔದ್ಯಮೀಕರಣದ ದುಷ್ಟಮುಖವನ್ನು, ಸಾಮಾನ್ಯನ ಮಿತಿಯಿಲ್ಲದ ದುರಾಶೆ ತರುವ ದುರಂತವನ್ನು ಚಿತ್ರಿಸುತ್ತಲೇ ಇಂಥ ಚಿತ್ರಣಕ್ಕೆ ಅವರು ಆಯ್ದುಕೊಳ್ಳುವ ಪಾತ್ರಗಳ ಎದುರು ಅವೇ ಪಾತ್ರಗಳ ಪರ್ಯಾಯ ಸಾಧ್ಯತೆಗಳೋ ಎಂಬಂತೆ ಬೇರೆ ಬೇರೆ ಪಾತ್ರಗಳನ್ನು ಸಂಯೋಜಿಸುತ್ತ, ಒಟ್ಟಾರೆಯಾಗಿ ಬದುಕು ಪಡೆಯಬಹುದಾದ ಹಲವು ಆಯಾಮಗಳನ್ನು ನಮ್ಮೆದುರು ಇಡುತ್ತ ಹೋಗುತ್ತಾರೆ. ಎಲ್ಲಿಯೂ ಆಯ್ಕೆಗಳನ್ನು ಹೇರದ, ಯಾವುದೇ ಪಾತ್ರದ ವ್ಯಕ್ತಿತ್ವಕ್ಕೆ ಸರಳವಾದ ಬಣ್ಣ ಲೇಪಿಸದೆ ನೋಡುತ್ತ, ಹಾಗೆ ನೋಡುವುದನ್ನು ನಮಗೆ ಕಲಿಸುತ್ತ ಸಾಗುತ್ತಾರೆ.

ಮುನ್ನುಡಿಯಲ್ಲಿ ಕಂಬಾರರು ಈ ಕಾದಂಬರಿಯ ಕಾಲವನ್ನು ಆಧುನಿಕವಲ್ಲದ ಹಿಂದಿನ ಯಾವುದಾದರೂ ಕಾಲಮಾನದಲ್ಲಿ ನಡೆದದ್ದೆಂದು ಭಾವಿಸಬೇಕು ಎಂದು ವಿಧಿಸುತ್ತಾರೆ. ಕಾದಂಬರಿ ಸುರುವಾಗುವುದೇ `ನಾವು ಕನಕಪುರಿಯ ಇತಿಹಾಸಕಾರರು' ಎಂಬ ಸ್ಪಷ್ಟ ನುಡಿಯಿಂದ. ಹಾಗಾಗಿ ಇದು ನಡೆದು ಹೋದುದರ ವಿವರಣೆ. ಕಾದಂಬರಿಯ ಕಥಾನಕ ಸಂದು ಹೋದ ಕಾಲಕ್ಕೆ ಸೇರಿದ್ದು, ಸದ್ಯದ ಕಾದಂಬರಿ ಅದನ್ನು ನಮಗೆ ನಿರೂಪಿಸುತ್ತಿರುವುದರಿಂದ ಇಲ್ಲಿ ಆ ಕ್ಷಣದ `ಆಗುವಿಕೆ'ಯಿಲ್ಲ. ಈಗಾಗಲೇ ಆಗಿಹೋಗಿರುವುದರ ಮೇಲ್ಮಟ್ಟದ ವಿವರಗಳಿವೆ ಅಷ್ಟೆ. ಈ ಕಾರಣಕ್ಕೇ ನಿರೂಪಣೆಯ ಭಾಷೆಯನ್ನು ನಿರ್ಭಾವುಕ ಹಾಗೂ ನಿರ್ಲಿಪ್ತವಾಗಿಸುವ ಕಡೆ ಕಂಬಾರರು ಗಮನಕೊಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ ಹಾವೇರಿ ಬಳಿಯ ನಾಗಾವಿಯಲ್ಲಿ ಪ್ರಚಲಿತವಿರುವ ನಾಗಾರ್ಜುನನ ಕುರಿತ ಕಥೆಯ ಎಳೆಯನ್ನೂ ಕಂಬಾರರು ಉಲ್ಲೇಖಿಸುತ್ತಾರೆ.

ಕಾದಂಬರಿಯ ಮೂಲ ಮಿತಿಯೇ ಈ ಆಗಿಹೋದದ್ದರ ನಿರೂಪಣೆಯ ಧಾಟಿ ಎನಿಸುತ್ತದೆ. ಕಾದಂಬರಿ ತೊಡಗುವಾಗಲೇ ಅದರ ನಿರೂಪಕರಿಗೆ ಇತಿಹಾಸವಾಗಿಬಿಟ್ಟಿರುವ ಕಥಾನಕದ ಆದಿ ಅಂತ್ಯಗಳು ಗೊತ್ತು. ಗಮ್ಯ ಅರಿತ ಪಯಣ ಇದಾಗಿರುವುದರಿಂದಲೇ ಇದು ಈಗಾಗಲೇ ಗೊತ್ತಿಲ್ಲದ ಯಾವೊಂದರ ಶೋಧವನ್ನೂ ಕೈಗೊಳ್ಳದ ನೀರಸ ಪಯಣ ಕೂಡ ಆಗಿಬಿಡುತ್ತದೆ. ನಮ್ಮ ಇವತ್ತಿನ ಬದುಕಿಗೆ ಕಾದಂಬರಿಯೊಂದು ಚಾಚಿಕೊಳ್ಳುವ ಹಂತದ ಒಂದು ವಿದ್ಯಮಾನ ಕೂಡ ಈ ಓದಿನಲ್ಲಿ ಘಟಿಸುವುದಾದರೂ ಅದು ಹೊಸತೇ ಆದ ಏನನ್ನೂ ಕಾಣಿಸುವ ನೆಲೆಗೆ ಒಯ್ಯುವುದಿಲ್ಲ. ಕಂಬಾರರಂಥವರ ಕಾದಂಬರಿಯಿಂದ ಹೊಸ ಒಳನೋಟಗಳನ್ನು, ಬದುಕಿನ ಅವಗಣಿತ ಮಗ್ಗುಲುಗಳು ಕಾಣಿಸಬಹುದಾದ ಹೊಸ ಸತ್ಯಗಳ ಶೋಧವನ್ನು ನಿರೀಕ್ಷಿಸಿದ್ದವರಿಗೆ ನಾನೂರ ಹನ್ನೆರಡು ಪುಟಗಳ ಈ ಕಾದಂಬರಿ ಕೊಂಚ ನಿರಾಸೆ ಹುಟ್ಟಿಸಿದರೆ ಅಚ್ಚರಿಯಿಲ್ಲ.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಇಲ್ಲಿ ಮನುಷ್ಯನ ಅಧಿಕಾರದ, ಚಿನ್ನದ, ಪ್ರತಿಷ್ಠೆಯ, ಕೀರ್ತಿಯ ಹಂಬಲದ ಎಲ್ಲ ದುರಾಶೆಗಳಿಗೆ ಬಹುಮುಖ್ಯ ಸಂವಾದಿಯಾಗಿ ನಿಲ್ಲುವ ಶಿವಪುರದ ಜನ, ಅಲ್ಲಿನ ಶಿವಪಾದ, ಅವನಲ್ಲಿ ಸಿಗುವ ವಿದ್ಯೆ, ಅಲ್ಲಿನ ವಿದ್ಯಾದಾನದ ಕ್ರಮ, ಹೊಸ ಶಿವಪಾದನ ಆಯ್ಕೆಯ ಕ್ರಮ, ಮುಖ್ಯವಾಗಿ ಅಲ್ಲಿನ ಜನರ ಜೀವನದೃಷ್ಟಿ, ಅವರ ಬದುಕಿನ ಆದ್ಯತೆಗಳು, ಸಂಗ್ರಹ ನಿರಪೇಕ್ಷತೆ ಇತ್ಯಾದಿಗಳಾಚೆ ಹಣಿಕಿಕ್ಕುವ ಒಂದು ವಿದ್ಯಮಾನ, ಸನಾತನ ಮೌಲ್ಯಗಳು, ಧರ್ಮ ಮತ್ತು ಧಾರ್ಮಿಕತೆ. ಅದು ಶಿವನ ಕುರಿತಾದ ಭಕ್ತಿಯಾಗಿರಲಿ, ಕಣ್ಣೆದುರು ಬದುಕಿ ಸತ್ತ ಜಟ್ಟಿಗನಿಗೆ ಕಟ್ಟುವ ಗುಡಿಗೆ ನಡೆದುಕೊಳ್ಳುವುದಿರಲಿ, ಇವಕ್ಕೆಲ್ಲ ಸಂಬಂಧಿಸಿದಂತೆ ಇರುವ ಕೆಲವು ನಡಾವಳಿಗಳು, ನಂಬುಗೆಗಳಿರಲಿ ಅವು ಪ್ರತಿನಿಧಿಸುವುದು ಏನನ್ನು ಎಂಬ ಬಗ್ಗೆ ಕೊಂಚ ಸ್ಪಷ್ಟವಾಗಿರುವುದು ಅಗತ್ಯ. ಕಂಬಾರರು ಮಾತೃಸಂಸ್ಕೃತಿ ಮತ್ತು ಪಿತೃಸಂಸ್ಕೃತಿಯ ಬಗ್ಗೆ ಕಾದಂಬರಿಯಲ್ಲಿ ಅನೇಕ ಕಡೆ (ಚಕೋರಿಯಲ್ಲೂ ಸೇರಿದಂತೆ) ವಿವರಿಸುತ್ತಾರೆ. ಆದರೂ ಈ ಕಾದಂಬರಿಯನ್ನು ಅಮೆರಿಕೆಯ ಮತ್ತು ಅದರ ಹಿಂದಿರುವ ಅನೇಕ ಪಾಶ್ಚಾತ್ಯ ರಾಷ್ಟ್ರಗಳ ಅತ್ಯುತ್ಸಾಹದ ಜಾಗತೀಕರಣದ ಹಪಹಪಿಕೆಗಳನ್ನು ಮರೆತು ಓದುವುದು ಹೇಗೆ ಅಸಾಧ್ಯವೋ ಹಾಗೆಯೇ ಭಾರತದ ಧಾರ್ಮಿಕ ಮೂಲಭೂತವಾದಿಗಳು ಹಿಂದೂತ್ವದ ಪರಿಕಲ್ಪನೆಯನ್ನೇ ಹಾಳುಗೆಡವಿಟ್ಟಿದ್ದನ್ನೂ ಮರೆತು ಓದಲಾಗುವುದಿಲ್ಲ.

ಇವತ್ತು ಇಲ್ಲಿ ಲಭ್ಯವಿರುವ ಧಾರ್ಮಿಕ ಪರಿಕಲ್ಪನೆಯ ಹಿಂದೂತ್ವದಲ್ಲಿ ಧ್ಯಾನಕ್ಕೆ, ಅಂತರಂಗದ ಚಿಂತನ ಮಂಥನಗಳಿಗೆ, ಆತ್ಮಾನುಸಂಧಾನಕ್ಕೆ, ಆತ್ಮೋದ್ಧಾರಕ್ಕೆ ಯಾವುದೇ ಸ್ಥಾನವಿಲ್ಲ. ಈ ಹೊಸ ಹಿಂದೂತ್ವದ ಪರಿಕಲ್ಪನೆಯಲ್ಲಿ ವೇದ, ಉಪನಿಷತ್ತುಗಳಿಗಾಗಲಿ, ಬ್ರಹ್ಮಸೂತ್ರಗಳಿಗಾಗಲೀ, ಭಾರತೀಯ ದರ್ಶನ ಶಾಸ್ತ್ರಕ್ಕಾಗಲೀ ಯಾವುದೇ ಕೆಲಸವಿಲ್ಲ. ತೋರಿಕೆಯ ಆಚರಣೆಗಳು, ಸಾಂಕೇತಿಕವಾಗಿ ಹಣೆಯ ಮೇಲಿನ ಕುಂಕುಮದ ನಾಮ, ಕೇಸರಿ ಬಣ್ಣದ ಉತ್ತರೀಯ, ಪಂಚೆಗಳೇ ಅದು. ಇಂಥವನ್ನು ಸಮವಸ್ತ್ರದಂತೆ ತೊಟ್ಟವರು ನಡೆಸುವ ಎಲ್ಲ ಕಾರ್ಯಕ್ರಮಗಳು, ಉತ್ಸವಗಳಿಂದ ಹಿಡಿದು ಮುಸ್ಲಿಂ ದಮನದವರೆಗೆ ಎಲ್ಲವೂ ಅದೇ. ಇದನ್ನೇ ದೇಶಭಕ್ತಿಯನ್ನಾಗಿಯೂ, ರಾಜಕೀಯ ಪಕ್ಷನಿಷ್ಠೆಯನ್ನಾಗಿಯೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಂದರ್ಭ ಬಂದಾಗ ಅಲ್ಲಿ ಯಾವುದೇ ಪ್ರತಿರೋಧವಿರುವುದಿಲ್ಲ ಎಂಬುದು ಕೂಡ ಈ ಹೊಸ ಹಿಂದೂತ್ವದ ಪರಿಕಲ್ಪನೆಯ ಮತ್ತೊಂದು ಪ್ರಮುಖ ಲಕ್ಷಣವಾಗಿದೆ.

ಕಂಬಾರರ ಕಾದಂಬರಿಯಲ್ಲಿ ಆಧುನಿಕ ಅನಿಷ್ಟಗಳ ಪರ್ಯಾಯ ಪ್ರತಿಪಾದನೆಯೆಂಬಂತೆ ಬರುವ ಧಾರ್ಮಿಕತೆ, ಸನಾತನತ್ವವನ್ನು ಸ್ವಲ್ಪ ವಿಮರ್ಶಿಸುವ ಅಗತ್ಯ ಇಂಥ ಸಮಕಾಲೀನ ಪರಿಸ್ಥಿತಿ, ಪರಿಸರದಿಂದಾಗಿಯೇ ಹುಟ್ಟಿದ್ದು, ಅನ್ಯಥಾ ಅಲ್ಲ. ಇದನ್ನು ಜಾನಪದ ಅಥವಾ ಇತಿಹಾಸದ ಕಥಾನಕವನ್ನು ಇಂದು ನಮಗೆ ಹೇಳುತ್ತಿರುವಾಗಲೂ ನಮ್ಮ ಸಮಕಾಲೀನ ಕಾದಂಬರಿಕಾರರಾದ ಕಂಬಾರರು ಅರಿಯದವರಲ್ಲ.

ಕಂಬಾರರ ಶಿಖರಸೂರ್ಯನಾಗಲೀ, ಮಹಾರಾಣಿಯಾಗಲೀ ದೇವರಲ್ಲಿ ನಂಬುಗೆಯುಳ್ಳವರಲ್ಲ. ಅವರಿಗೆ ಶಿವಪಾದನಲ್ಲೂ ಪ್ರಾಮಾಣಿಕವಾದ ಗೌರವವಿಲ್ಲ. ಅಮ್ಮನಲ್ಲೂ ನಂಬುಗೆಯಿಲ್ಲ. ದೇವಾಲಯದೊಳಗೆ ಅವರು ಕಾಲಿಡುವುದು ಬದುಕಿನ ಕಟ್ಟಕೊನೆಗೆ ಎನ್ನಬಹುದು. ಅದೂ ನಂಬುಗೆಯಿಂದೇನೂ ಅಲ್ಲ. ಅಷ್ಟರಮಟ್ಟಿಗೆ ಅವರನ್ನು ಕಟ್ಟಾ ಎಡಪಂಥೀಯರೆನ್ನಲು ಅಡ್ಡಿಯಿಲ್ಲ. ಆದರೆ ಇಡೀ ಕಾದಂಬರಿಯ ಯಾವುದೇ ಘಟ್ಟದಲ್ಲಿ ರಾಜಕೀಯ ಲಾಭಕ್ಕಾಗಿಯಾಗಲೀ, ವ್ಯಾಪಾರೀ ಲಾಭಕ್ಕಾಗಿಯಾಗಲೀ, ಗಂಡುಹೆಣ್ಣು ಸಂಬಂಧ ಕುದುರಿಸಿ ಅಂಥವೇ ಲಾಭ ಹೊಡೆಯಲಿಕ್ಕಾಗಿಯೇ ಆಗಲೀ ಧರ್ಮದ ಬಳಕೆಯಾಗುವುದೇ ಇಲ್ಲ. ಒಂದೇ ಒಂದು ಅಪವಾದ ಎಂದರೆ ಶಿಖರಸೂರ್ಯ ಯುವರಾಜನನ್ನು ಮರಳಿ ರಾಜ್ಯಕ್ಕೆ ಕರೆತಂದ ಬಳಿಕ ಬೆಟ್ಟದಯ್ಯನಿಗೆ ನಡೆದುಕೊಂಡಂತೆ ತೋರಿಸಿಕೊಳ್ಳುವ ಪ್ರಸಂಗ. ಇದನ್ನು ಕಾದಂಬರಿಯ ಕಥಾನಕದ ದೇಶ-ಕಾಲ ಪರಿಕಲ್ಪನೆಯ ಸಮಕಾಲೀನ ಪ್ರಜ್ಞೆ ಎನ್ನಬೇಕೆ, ಅವಕ್ಕೆಲ್ಲ ಕಾದಂಬರಿಕಾರರಿಗಿರುವ ನಿಷ್ಠೆ ಎನ್ನಬೇಕೆ ಅಥವಾ ಇಂದಿನ ಸಮಕಾಲೀನ ಸಮಾಜದ ಪ್ರತಿಬಿಂಬವಾಗಲು ಕಾದಂಬರಿಗಿರುವ ಪ್ರಮುಖ ತೊಡಕೆನ್ನಬೇಕೆ? ಆಗಲೂ ಇವತ್ತಿನ ತಾತ್ಕಾಲಿಕವೇ ಇರಬಹುದಾದ ವಿಷಮಸ್ಥಿತಿ ಇಂಥ ಅನುಮಾನಗಳಿಗೆ ಕಾರಣವಾಗಿರುವುದರಿಂದ ಇದನ್ನು ನಿರ್ಲಕ್ಷಿಸುವುದು ಕಾದಂಬರಿಯ ಸುದೀರ್ಘ ಬಾಳ್ವೆಯ ಹಿನ್ನೆಲೆಯಲ್ಲಿ ಮತ್ತು ಸ್ವತಂತ್ರ ಕಲಾಕೃತಿಯನ್ನಾಗಿ ಇದನ್ನು ಕಾಣಬೇಕೆಂಬ ನೆಲೆಯಲ್ಲಿ ಸರಿಯಾದೀತೆ?

ಈ ಪ್ರಶ್ನೆಗಳಿರುತ್ತ ಕಂಬಾರರ ಶಿವಪುರ ಪ್ರತಿನಿಧಿಸುವ ಪರ್ಯಾಯ (ಕಾದಂಬರಿ ಇದನ್ನು ಒತ್ತುಕೊಟ್ಟು ಹೇಳುತ್ತದೆ ಎಂದೇನೂ ಅನಿಸದಿದ್ದಾಗ್ಯೂ) ಪ್ರಸ್ತುತ ಜಾಗತೀಕರಣ, ವ್ಯಾಪಾರೀಕರಣ ಮತ್ತು ತಾಂತ್ರಿಕ ಅಭಿವೃದ್ಧಿಯ ಅನಿಷ್ಟಗಳಿಗೆ ಉತ್ತರವಾಗಬಲ್ಲದೇ ಎಂಬುದು ಅನುಮಾನಾಸ್ಪದವಾಗಿಯೇ ಉಳಿಯುತ್ತದೆ ಎನ್ನದೆ ವಿಧಿಯಿಲ್ಲ. ಇದಕ್ಕೆ ಬಹುಮುಖ್ಯ ಕಾರಣ, ಇವತ್ತಿನ ಸಮಕಾಲೀನ ಸವಾಲು ಶಿಖರಸೂರ್ಯ ಪ್ರತಿನಿಧಿಸುವ ಒಂದು ವಿಶಿಷ್ಟ ಲಕ್ಷಣವನ್ನೇ ಹೊಂದಿಲ್ಲದಿರುವುದು. ಶಿಖರಸೂರ್ಯ ಅಷ್ಟರಮಟ್ಟಿಗೆ ಖುಲ್ಲಾಂಖುಲ್ಲಾ ಮನುಷ್ಯ. ಅವನ ದ್ವೇಷ, ಸೇಡು, ಅಧಿಕಾರದ ಹಪಹಪಿಕೆ, ಚಿನ್ನದ, ಸಂಪತ್ತಿನ ಸಂಗ್ರಹದ ದುರಾಶೆ, ಕೀರ್ತಿಯ ಹಂಬಲ ಯಾವುದನ್ನೂ ಅವನು ಮುಚ್ಚಿಡುವುದಿಲ್ಲ. ಅವನನ್ನು ಅರ್ಥಮಾಡಿಕೊಳ್ಳುವುದು ಅವನ ಜೊತೆಯವರಿಗೇ ಕಷ್ಟ ಎನಿಸಿದರೂ ಆ ವ್ಯಕ್ತಿತ್ವದ ಮೂಲಸೆಲೆ ತೀರಾ ಅನೂಹ್ಯವಾಗಿ ಉಳಿಯುವಂಥದ್ದಲ್ಲ ಅನಿಸುತ್ತದೆ. ಅರ್ಥಕೌಶಲ ಮತ್ತು ಮಹಾರಾಣಿ ಅದನ್ನು ಸರಿಯಾಗಿಯೇ (ಸ್ವಲ್ಪ ತಡವಾಗಿಯಾದರೂ) ಊಹಿಸಿದ್ದರು ಅನಿಸುತ್ತದೆ. ಆದರೆ ಇವತ್ತು ನಾವು ಎದುರಿಸುತ್ತಿರುವ ಸಮಕಾಲೀನ ಸವಾಲುಗಳು ಇದಕ್ಕಿಂತ ಹೆಚ್ಚು ನಿಗೂಢವೂ ಗುಪ್ತ ಅಜೆಂಡಾಗಳುಳ್ಳದ್ದೂ ಆಗಿ ಎದುರಾಗುತ್ತಿವೆ. ಹೆಚ್ಚು ಹೆಚ್ಚು ಸ್ಪಷ್ಟವಾಗಿ ಅವು ಶಿವಾಪುರದ ಪರಿಸರ ಪ್ರೀತಿಯ ಮುಖಹೊತ್ತು, ಸನಾತನ ಭಕ್ತಿ ಮತ್ತು ಧರ್ಮದ ಮುಖವಾಡ ಹೊತ್ತು ಎದುರಾಗುತ್ತವೆ. ಸಂಗೀತ, ನೃತ್ಯ, ಕಲೆಯ ಮುಸುಕುಹೊತ್ತು ಎದುರಾಗುತ್ತಿವೆ. ದಿನನಿತ್ಯದ ತಿಂಡಿತೀರ್ಥ, ಬಟ್ಟೆಬರೆಯಿಂದ ಹಿಡಿದು ಸರ್ವವ್ಯಾಪಿಯಾಗಿ ಮನುಷ್ಯನ ದೈನಂದಿನವನ್ನು ಇಂಚುಇಂಚಾಗಿ ನುಂಗುತ್ತಿದೆ. ಶಿಖರಸೂರ್ಯನಂತೆ ಅದು ಸರ್ವಾಧಿಕಾರಿಯ ಎಲ್ಲ ಚಹರೆ ಛಾಯೆ ಹೊತ್ತು ಎದುರಾಗುವುದೇ ಇಲ್ಲ ಇವತ್ತು. ಅದೇನಿದ್ದರೂ ಹಿಟ್ಲರನ ಕಾಲಕ್ಕೆ ಮುಗಿದು ಹೋಯಿತೆನ್ನಿಸುತ್ತದೆ. ಇವತ್ತಿನ ಆಧುನಿಕ ಮೂಲಭೂತವಾದಿಗಳ ರೂಪುರೇಷೆಯಲ್ಲಿ ಹಿಟ್ಲರನ ಕುರುಹೇ ಇಲ್ಲ. ಆದರೆ ಇವರಲ್ಲಿ ಅವನ ಕ್ರೌರ್ಯ ಎಷ್ಟೊಂದು ಸಾಚಾ ಎಂಬಂತೆ ಅಡಗಿಕೊಂಡಿದೆ ಎಂದರೆ ಅದನ್ನು ತಿಳಿದೂ ಅದನ್ನು ವಿರೋಧಿಸಿದರೆ ನೀವು ಬಹುಮತದ ವಿರುದ್ಧ ಮಾತನಾಡಿದ ಕಾರಣಕ್ಕೆ ಸಹಜೀವಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಪ್ರಭುತ್ವದ ಶಿಕ್ಷೆಗೆ ಬಲಿಪಶುವಾಗಬೇಕಾಗುತ್ತದೆ. ಆದರೆ ಕಂಬಾರರ ಕಾದಂಬರಿ ಶಿವಾಪುರ ಮತ್ತು ಶೇಷ ಜಗತ್ತಿನ ನಡುವೆ ಕೆಲವು ನಿರ್ದಿಷ್ಟವೂ ನಿಖರವೂ ಆದ ಗೆರೆಗಳನ್ನು ಎಳೆದು ಬಿಡುವುದರಿಂದ ಈ ಸಂಕೀರ್ಣ ವಸ್ತುಸ್ಥಿತಿಗೆ ಕಾದಂಬರಿ ಮುಖಾಮುಖಿಯಾಗುವುದೇ ಇಲ್ಲ.

ಮನುಷ್ಯ ತಿನ್ನುವ ಧಾನ್ಯವನ್ನು ಮತ್ತು ಕೃಷಿಯನ್ನು ಅತ್ಯಂತ ಧ್ವನಿಪೂರ್ಣವಾಗಿ ಸಮೀಕರಿಸುವ ಮೇವು ಎರಡನ್ನೂ ಚಿನ್ನವನ್ನಾಗಿಸುವ ವಿದ್ಯೆ ಮನುಷ್ಯನ ದುರಾಸೆ ಯಾವ ಮಟ್ಟಕ್ಕೆ ತಲುಪಬಹುದೆನ್ನುವುದನ್ನು ಹೇಳಲು ಕಂಬಾರರು ಬಳಸಿಕೊಂಡಿರುವುದು ಗಮನಾರ್ಹವಾಗಿದೆ. ಹಾಗೆಯೇ ತಿರುಮಂತ್ರದ ಪರಿಣಾಮವನ್ನು ಸೂಚ್ಯಗೊಳಿಸಿರುವುದು ಕೂಡ ಅಷ್ಟೇ ಚಾಣಾಕ್ಷ ತಂತ್ರವಾಗಿದೆ. ಆದರೆ ಸಾಕಷ್ಟು ಕಾಲದ ನಂತರವೂ ಚಿನ್ನ ಮತ್ತೆ ಧಾನ್ಯವಾಗಿ ಪರಿವರ್ತಿಸಲ್ಪಟ್ಟಾಗಲೂ ಅದು ಉಪಯೋಗಕ್ಕೆ ಬರುವಂತಿರುವುದು ವಿಪರ್ಯಾಸಕರ ಅನಿಸುತ್ತದೆಯಲ್ಲವೆ?

ರಣಹದ್ದಾಗಿ ಅನಿರ್ದಿಷ್ಟ ಕಾಲ ಎತ್ತರದ ಪರ್ವತದ ಮೇಲೆ ಜನಜೀವನದಿಂದ ದೂರದಲ್ಲಿದ್ದು ಶಪಿತ ಬದುಕನ್ನು ಅನುಭವಿಸುವುದರಲ್ಲಿರುವ ಸಾಂಕೇತಿಕತೆ ಕೂಡ ವಸ್ತುಸ್ಥಿತಿಯ ಪರಿಣಾಮಗಳೊಂದಿಗೆ ತುಲನಾತ್ಮಕವಾಗಿಯೇ ಇದೆ. ಮನುಷ್ಯನೊಳಗಿನ ರಣಹದ್ದನ್ನು ಬೇರೆ ಯಾವ ರೀತಿಯಲ್ಲಿ ಪರಿಕಲ್ಪಿಸಿದ್ದರೂ ಅದು ಪರಿಣಾಮಕಾರಿಯಾಗುತ್ತಿರಲಿಲ್ಲ ಅನಿಸುತ್ತದೆ.

ಕಂಬಾರರು ಶಿಖರಸೂರ್ಯನ ಪಾತ್ರ ನಿರ್ಮಿತಿ ಮತ್ತು ನಿರ್ವಹಣೆಯಲ್ಲಿ ತೋರಿದ ಸಂಯಮ ಗಮನಾರ್ಹವಾಗಿದೆ. ಎಲ್ಲೂ ಕಂಬಾರರು ಶಿಖರಸೂರ್ಯನನ್ನು ಮಿತಿಮೀರಿ ಬೆಳೆಸುವುದಿಲ್ಲ. ಅವನೊಬ್ಬ ಸಾಮಾನ್ಯ ಮನುಷ್ಯನನ್ನು ಪ್ರತಿನಿಧಿಸಲು ಅವಶ್ಯವಾದ ಸಾತತ್ಯವನ್ನು ಉಳಿಸಿಕೊಂಡೇ ವಜ್ರಕಾಯನಾಗಿ, ಸಸ್ಯಹೃದಯ ಅರಿತ ವೈದ್ಯನಾಗಿ, ಅಸಾಧ್ಯ ಸಾಧಿಸುವ ಛಲ ಉಳ್ಳ ಅದ್ಭುತ ಶಕ್ತಿಯಾಗಿ ಮೂಡಿಬಂದಿರುವುದು ಕಂಬಾರರ ಪ್ರತಿಭೆಯ ಅನನ್ಯ ಸಿದ್ಧಿಯೆನ್ನಬೇಕು. ಅವನು ಕದ್ದು ಸಂಗ್ರಹಿಸಿದ ಹಂಡೆಗಟ್ಟಲೆ ಚಿನ್ನ ಸುಲಭವಾಗಿ ಅರ್ಥಕೌಶಲನ ಕೈವಶವಾದಾಗ ಮಿಡುಕದ ಓದುಗನಿರಲಾರ! ಹಾಗೆಯೇ ಮಗಳಿಗೆ ವಿಷವಿಕ್ಕಿದ ಬಗ್ಗೆ ಕ್ಷಣಕಾಲವಾದರೂ ಮಿಡುಕುವ ಕರುಳು ಅವನಲ್ಲೂ ಇತ್ತೆನ್ನುವುದನ್ನು ಕಾಣಿಸದ ನಿಷ್ಕುರುಣಿಯಾಗುವುದಿಲ್ಲ ಕಂಬಾರರು!

ಶಿಖರಸೂರ್ಯನಿಗೊಬ್ಬ ಚಂಡೀದಾಸ, ಮತ್ತೊಬ್ಬ ನಾಗಾರ್ಜುನ, ಅರ್ಥಕೌಶಲನಿಗೊಬ್ಬ ಧನಪಾಲ, ಮತ್ತೊಬ್ಬ ಕುರುಮುನಿ, ಮೋಸದಿಂದ ಕೊಲೆಯಾಗುವ ಕನಕಪುರಿಯ ರಾಜನಿಗೊಬ್ಬ ಬಿಳಿಗಿರಿಯ ರಾಜ, ಮತ್ತೊಬ್ಬ ಆದಿತ್ಯಪ್ರಭ ಹೀಗೆ ಇಲ್ಲಿ ನಮಗೆ ಒಂದು ಸ್ತರದ ಬದುಕಿಗೆ ಹಲವು ಜೀವನದೃಷ್ಟಿಗಳು, ಅದರ ಸಂಭವನೀಯತೆಗಳು ಪರಪ್ರೇಕ್ಷ್ಯ ಒದಗಿಸುವಂತೆ ಒದಗಿಬರುತ್ತವೆ. ಮಹಾರಾಣಿ ಮತ್ತು ಅರ್ಥಕೌಶಲನ ಹಾದರದ ಫಲವಾದ ಆದಿತ್ಯಪ್ರಭನ ಕೈಯಿಂದಲೇ ಹತನಾಗುವ ಅರ್ಥಕೌಶಲ ಒಂದೆಡೆಯಾದರೆ ಪತ್ನಿಯ ಹಾದರಕ್ಕೆ ಘೋರ ಶಿಕ್ಷೆ ನೀಡುವ ಬದೆಗ ರಾಜಕುಮಾರನನ್ನೂ ಇರಿದು, ಅಪಹರಿಸಿ ಸೇಡು ತೀರಿಸಿಕೊಳ್ಳಬಲ್ಲ ಕೆಚ್ಚು ತೋರಿಸುತ್ತಾನೆ. ಆದರೆ ಎಲ್ಲ ಹಳ್ಳಿಗರಂತೆ, ಬುಡಕಟ್ಟಿನವರಂತೆ ಅವಕಾಶವಾದಿ ಶಿಖರಸೂರ್ಯನನ್ನು ನಂಬಿ ನಾಶವಾಗುತ್ತಾನೆ. ಇಂಥ ಉಜ್ವಲ ಪ್ರಸಂಗಗಳು ಕಾದಂಬರಿಯ ಉದ್ದಕ್ಕೂ ನಮಗೆ ಎದುರಾಗುತ್ತವೆ, ಬದುಕಿನ ಸಂಕೀರ್ಣ ಪ್ರಸಂಗಗಳೆದುರು ಮನುಷ್ಯನ ತಕ್ಷಣದ ಪ್ರತಿಕ್ರಿಯೆಯ ವಿಭಿನ್ನ ಮಾದರಿಗಳನ್ನು ನೀಡಿ ಕೆಣಕುತ್ತವೆ. ಹಾಗೆಯೇ ಮಹಾರಾಣಿಗೊಬ್ಬ ಬೆಳ್ಳಿ, ಮತ್ತೊಬ್ಬಳು ಗೌರಿ. ವಿಷಕನ್ಯೆಯಾದ ವಿದ್ದ್ಯುಲ್ಲತೆಗೆ ತನ್ನ ಅಕ್ಕ ಸ್ವರ್ಣಲತೆಯ ಕತೆಯ ಹಿನ್ನೆಲೆಯಿದೆ. ಒಂದೆಡೆ ಅವಳಿಗಾಗಿ ತಾನೇ ವಿಷಪುರುಷನಾಗುವ ಶಿಖರಸೂರ್ಯನ ಪ್ರೀತಿ ಸಿಕ್ಕಿದರೂ ಇನ್ನೊಂದೆಡೆ ಅವಳನ್ನು ಛಾಯಾದೇವಿಯ ಅರ್ಥಹೀನ ಪ್ರತಿಭಟನೆ, ಕ್ಷುದ್ರತೆ ಮಣಿಸುತ್ತದೆ. ಕೊನೆಗೆ ತನ್ನ ಪ್ರಿಯಕರ ಶಿಖರಸೂರ್ಯನ ಮಗ ರವಿಕೀರ್ತಿಯ ಸಾವಿಗೆ ಅವಳ ಸೌಂದರ್ಯವೇ, ಅದರೊಂದಿಗೇ ಇರುವ ವಿಷವೇ ಕಾರಣವಾಗುವುದು ಕೌತುಕಮಯವಾಗಿದೆ. ಅದೇ ರೀತಿ ಅತ್ಯಂತ ಚಾಣಕ್ಷತನದಿಂದ ಬದೆಗನನ್ನು, ಅರ್ಥಕೌಶಲನನ್ನು, ಧನಪಾಲನನ್ನು ಶಿಖರಸೂರ್ಯ ಸಮಯ ಸಂದರ್ಭ ನೋಡಿ ನಿವಾರಿಸಿಕೊಳ್ಳುವ ಭಾಗಗಳು ಕಥಾನಕಕ್ಕೆ ಅದ್ಭುತವಾದ ಓಟ, ನೋಟ ಎರಡನ್ನೂ ಒದಗಿಸಿವೆ.

ಚಕೋರಿಯಂತೆ ಇಲ್ಲೂ ಶಿಖರಸೂರ್ಯ ಮಾನವ ಪ್ರೀತಿಗೆ ವಿರೋಧಿ. ಅದಕ್ಕೆ ರವಿಕೀರ್ತಿಯಂಥ, ವಸಂತಿಯಂಥ, ಬದೆಗನಂಥ ಕೊನೆಗೆ ವಿದ್ದ್ಯುಲ್ಲತೆಯಂಥ ಜೀವಗಳು ಬಲಿಯಾಗುತ್ತಲೇ ಹೋಗುತ್ತವೆ. ಎದುರಿಸಿ ನಿಲ್ಲಬಹುದಾದ ಗಟ್ಟಿ ಪಾತ್ರಗಳಿಗಾಗಿ ಮತ್ತೆ ಶಿವಪುರದ ಕಡೆಗೇ ನೋಡಬೇಕು. ಅಲ್ಲಿನ ನಿನ್ನಡಿಯನ್ನು ಬಿಟ್ಟರೆ ಉಳಿಯುವ ಪ್ರಧಾನ ಪಾತ್ರ ಗೌರಿಯೇ. ಅವಳ ಹುಟ್ಟಿನಾರಭ್ಯ ಬೆಳವಣಿಗೆ, ಅವಳಲ್ಲಿ ಬಾಲ್ಯದಲ್ಲೇ ಮೂಡುವ ಶಿವಪಾದನ ಕುರಿತ, ಶಿವಪುರದ ಕುರಿತ ಕುತೂಹಲ, ಅವಳ ಕನಸುಗಳು, ಸರಿಸುಮಾರು ಒಂಭತ್ತು ದಿನಗಳ ಶಿವಪುರದ ಪ್ರಯಾಣ, ಹೊಟ್ಟೆಯೊಳಗೆ ವಿಷವನ್ನೂ ಕೂಸನ್ನೂ ಹೊತ್ತು ಅವಳು ನಡೆಯುತ್ತ ನರಳುತ್ತ ಇರುವಾಗಲೇ ಕೇಳುವ ಅರ್ಥಪೂರ್ಣ ಕತೆಗಳು ಇವೆಲ್ಲವೂ ಅತ್ಯಂತ ಸಂತುಲಿತವಾಗಿ ಮೂಡಿಬಂದಿವೆ. ಇವೆಲ್ಲವೂ ಕಾದಂಬರಿಯನ್ನು ಏಕಮುಖ ಬೆಳವಣಿಗೆಯಿಂದ ವಿಮುಖಗೊಳಿಸಿ ಶ್ರೀಮಂತಗೊಳಿಸಿವೆ ಕೂಡ.

ದೊಡ್ಡರೋಗ ಬಂದು ಅಕ್ಷರಶಃ ಬರಿದಾಗುವ ಕನಕಪುರಿಯನ್ನು ತನ್ನ ವೈದ್ಯದಿಂದ, ಸೇವೆಯಿಂದ, ಧಾನ್ಯದಿಂದ ಕಾಯುವ, ಚೊಕ್ಕಗೊಳಿಸುವ ಮತ್ತು ಪೊರೆಯುವ ನಿನ್ನಡಿ ಮತ್ತು ಅವನ ಬಳಗ, ಮಾತೃಸಂಸ್ಕೃತಿಯನ್ನು ಎತ್ತಿಹಿಡಿ, ಎಲ್ಲರನ್ನೂ ಪ್ರೀತಿಸು, ಎಲ್ಲ ದೇಶವೂ ನನ್ನದೇ ಎಂದು ತಿಳಿದು ಕಟ್ಟು, ನನ್ನದಲ್ಲ ಎಂದು ಕನಕಪುರಿಯನ್ನಾದರೂ ಕಟ್ಟದೇ ನಿರ್ಲಕ್ಷ್ಯದಿಂದ ಕಾಣಬೇಡ ಎನ್ನುವ ಶಿವಪುರದ, ಶಿವಪಾದನ ತತ್ವಗಳೆಲ್ಲ ಆಶಯಗಳಾಗಿ, ಆದರ್ಶಗಳಾಗಿ ತಲೆದೂಗುವಂತಿರುವಾಗಲೇ ಅಫ್ಘಾನಿಸ್ಥಾನ, ಇರಾಕ್ ಅಕಾರಣ ವಿಧ್ವಂಸಕ್ಕೊಳಗಾಗಿ ಮರುಭೂಮಿಗಳಾಗುವುದನ್ನು, ಅಂತರಿಕ್ಷದ ತುಂಬ ಒಂದು ದೇಶದ ಮೇಲೆ ಇನ್ನೊಂದು ದೇಶ ಕ್ಷಿಪಣಿಗಳನ್ನು ನೆಲೆಗೊಳಿಸಿ ಅಶಾಂತಿಯಿಂದ ಯುದ್ಧಭೀತಿಯಡಿ ಬಾಳುತ್ತಿರುವುದನ್ನು, ಅರವತ್ತು ಎಪ್ಪತ್ತು ವರ್ಷ ಪ್ರಜ್ಞಾಪೂರ್ವಕ ಬಾಳಬಹುದಾದ ಪುಟ್ಟ ಬದುಕನ್ನು ಅನಗತ್ಯ ಅರ್ಥಹೀನ ದ್ವೇಷ, ಸೇಡು, ವಿನಾಶದ ತುಡಿತಗಳಿಗೆ ಸಿಕ್ಕಿ ಬಲಿಗೊಡುತ್ತಿರುವುದನ್ನು ನಿತ್ಯ ಕಾಣುತ್ತ ಚಡಪಡಿಸುತ್ತಿರುವ ಮನುಷ್ಯನಿಗೆ "ಶಿಖರಸೂರ್ಯ" ತಟ್ಟುವುದೆ?
(ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಾಹಿತ್ಯ ಪತ್ರಿಕೆ ಸಂಕಲನದಲ್ಲಿ ಪ್ರಕಟಿತ ಲೇಖನ)

ಕೃತಿ : ಶಿಖರಸೂರ್ಯ (ಕಾದಂಬರಿ)
ಕೃತಿಕಾರ : ಚಂದ್ರಶೇಖರ ಕಂಬಾರ
ಪ್ರಕಾಶಕರು: .ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ. . ಅಂಕಿತ ಪ್ರಕಾಶನ, ಬೆಂಗಳೂರು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, December 21, 2008

ಈ ಓಟ ಬರಿಯ ಕಾಲದೊಂದಿಗೇನಾ?

ಕಾಲಜಿಂಕೆ ಕೆ.ಸತ್ಯನಾರಾಯಣರ ಐದನೆಯ ಕಾದಂಬರಿ. ಸನ್ನಿಧಾನ(೧೯೯೭) ಕಾದಂಬರಿ ಪ್ರಕಟವಾದ ಏಳೆಂಟು ವರ್ಷಗಳ ಬಳಿಕ ಬಂದ ಕಾಲಜಿಂಕೆ ಹಲವಾರು ಕಾರಣಗಳಿಗೆ ಮಹತ್ವದ ಕಾದಂಬರಿ.

ಸತ್ಯನಾರಾಯಣರ ಹಿಂದಿನ ಕಾದಂಬರಿಗಳನ್ನು, ಕತೆ ಪ್ರಬಂಧಗಳನ್ನು ಗಮನಿಸುತ್ತ ಬಂದವರಿಗೆ ಇಲ್ಲಿ ಅವರ ಬರವಣಿಗೆಯ ಸ್ವರೂಪದಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ಕಾಣದಿರಲು ಸಾಧ್ಯವಿಲ್ಲ. ಮೊದಲನೆಯದಾಗಿ ಸತ್ಯನಾರಾಯಣರು ಇದೇ ಮೊದಲ ಬಾರಿಯೆಂಬಂತೆ ಹೆಸರಿನಿಂದ ತೊಡಗಿ ಕಾದಂಬರಿಯ ಉದ್ದಕ್ಕೂ ರೂಪಕಗಳನ್ನು ಬಳಸಿಕೊಂಡಿರುವುದು ಗಮನಾರ್ಹ. ಹಾಗೆಯೇ ತಮ್ಮ ಕತೆಗಳಲ್ಲಿ ಬದುಕು ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಕತೆಗಳನ್ನೂ ಆ ಕತೆಗಳ ಒಡಲಿನಲ್ಲಿರುವ ಸತ್ಯಗಳನ್ನೂ ಶೋಧಿಸುವುದರತ್ತಲೇ ತಮ್ಮೆಲ್ಲಾ ಗಮನವಿಟ್ಟಿದ್ದಾರೇನೋ ಅನಿಸುತ್ತಿದ್ದ ಹೊತ್ತಿನಲ್ಲೇ ಸತ್ಯನಾರಾಯಣರ ಕಾಲಜಿಂಕೆ ಎತ್ತುವ ಪ್ರಶ್ನೆಗಳು ಎರಡು ತಲೆಮಾರಿನ ಮೌಲ್ಯಗಳ ಸಂಘರ್ಷವಾಗಿಯೂ, ಇದನ್ನು ಮೀರಿದ ಸತ್ಯದ ಶೋಧವಾಗಿಯೂ ನಿಲ್ಲುವುದು ಕೂಡ ಕಾಲಜಿಂಕೆಯ ವೈಶಿಷ್ಟ್ಯ. ಇಲ್ಲಿ ಕಳೆದ ಎರಡು ದಶಕಗಳಲ್ಲಿ ನಮ್ಮ ಯುವ ಜನಾಂಗದ ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಮದುವೆ, ವ್ಯವಹಾರ, ಪ್ರಾಶಸ್ತ್ಯಗಳು, ಯಶಸ್ಸನ್ನು ಅಳೆಯುವ ಮಾನದಂಡಗಳು ಎಲ್ಲವೂ ವ್ಯಾಪಾರೀಕರಣ, ಜಾಗತೀಕರಣಗಳ ಹೆಸರಿನಲ್ಲಿ ಬದಲಾಗುತ್ತಿರುವಾಗಲೇ ಈ ಎಲ್ಲದರಾಚೆ ತಣ್ಣಗಿರುವಂತೆ, ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಂತೆ ಕಾಣುವ ನಮ್ಮ ಹಳ್ಳಿಗಳು, ಅಲ್ಲಿನ ಪರಿಸರ, ಜಾನಪದ, ಅಲ್ಲಿನ ಸಾಲ-ಉದ್ಯೋಗ, ಅಭಿವೃದ್ಧಿ, ಸ್ವಾಯತ್ತತೆಯ ಹಂಬಲ, ಅಲ್ಲಿನ ಸಾಂಸಾರಿಕ ಅನುಬಂಧ ಮತ್ತು ಮಾನವ ಸಂಬಂಧಗಳು -ಎರಡರ ತೌಲನಿಕ ಚಿತ್ರವಿದೆ. ಆದರೂ ಇಲ್ಲಿ ತೀರ್ಮಾನಗಳಿಲ್ಲ, ಆದ್ಯತೆಗಳಿಲ್ಲ, ಒಲವುಗಳಿಲ್ಲ. ಇಲ್ಲದಿರುವುದೇ ಈ ಕಾದಂಬರಿ ಓದಿ ಮುಗಿಸಿದ ಮೇಲೂ ಓದುಗನ ಮನಸ್ಸಿನಲ್ಲಿ ಬೆಳೆಯುತ್ತಲೇ ಉಳಿಯುವುದರ ಹಿನ್ನೆಲೆಯಾಗಿದೆ ಅನಿಸುತ್ತದೆ. ರಂಗನಾಥನ ಮಗ ವಿಕ್ರಂ ಮತ್ತು ಮಗಳು ಪ್ರಾರ್ಥನಾ ಎತ್ತುವ ಪ್ರಶ್ನೆಗಳು ಹಾಗೆ ಸರಳವಾದ ಉತ್ತರಗಳಿಗೆ, ನಿಲುವುಗಳಿಗೆ ಬರಲು ಸಾಧ್ಯವಿರುವಂಥವುಗಳಲ್ಲ. ಕಾದಂಬರಿ ಇಂಥ ಪ್ರಶ್ನೆಗಳನ್ನು ಎತ್ತಬಲ್ಲ ಹಂತಕ್ಕೆ ತನ್ನ ಒಡಲಿನ ಸಂದರ್ಭದಲ್ಲೇ ಏರುವುದಿದೆಯಲ್ಲ, ಅದೇ ಸತ್ಯನಾರಾಯಣರ ಕಲೆಗಾರಿಕೆಯ ಯಶಸ್ಸು ಎಂದು ನಿರ್ವಿವಾದವಾಗಿ ಹೇಳಬಹುದು. ಹಾಗೆ ಸತ್ಯನಾರಾಯಣರ ಕತೆಯೊಳಗಿನ ಕತೆಗಳ, ಉಪಕತೆಗಳ ಹಂದರ ಇಲ್ಲಿ ಹದವಾಗಿ, ಕೇಂದ್ರದಿಂದ ದೂರಕ್ಕೆ ಸರಿಯದೆ, ವಿಕ್ರಂ ಮತ್ತು ಪ್ರಾರ್ಥನಾರ ಪ್ರಶ್ನೆಗಳಿಗೆ ಯಾವುಯಾವುದೋ ನಿಟ್ಟಿನಿಂದ ಪರಿಪ್ರೇಕ್ಷ್ಯಗಳನ್ನು ಒಡ್ಡುತ್ತಿರುವಂತೆ ಒಗ್ಗೂಡಿ ನಿಲ್ಲುತ್ತವೆ.

ಪವಿತ್ರಾ ಮತ್ತು ಸ್ವಾಮಿನಾಥ ಇಬ್ಬರ ವ್ಯಕ್ತಿಗತ ವಿವರಗಳೂ ವೈವಾಹಿಕವಾಗಿ ಅವರ ಯಶಸ್ಸೂ ಇಂಥ ಒಂದು ಕತೆಯಾದರೆ ಸ್ವಾಮಿನಾಥನ ತಂದೆ ನಾರಾಯಣ ಮೂರ್ತಿಗಳ ಡಾಯರಿ ಮೂಲಕ ಬಿಚ್ಚಿಕೊಳ್ಳುವ ಕತೆ ಮತ್ತು ಅದನ್ನು ಪ್ರಕಟಿಸುವ ಸ್ವಾಮಿನಾಥನ ಉದ್ದೇಶ ಎರಡೂ ಪರಂಪರೆಯ ಮಿತಿ ಮತ್ತು ಅದನ್ನು ಕೊಂಡಾಡುವರ ಭ್ರಮೆಗಳನ್ನು ತೆರೆದು ತೋರುವಂಥದು. ಇಲ್ಲಿ ವಿಕ್ರಂ ಎತ್ತುವ ಅನೇಕ ಆಪಾದನೆಗಳಿಗೆ ಪರೋಕ್ಷ ಉತ್ತರಗಳಿವೆ. ಶಂಕರ ಮತ್ತು ಭಾರತಿಯ ಕತೆ, ಅದಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಳ್ಳುವ ಮಂಜರಿ ಅಗರವಾಲ್ ಕೂಡ ಕೊನೆಯಲ್ಲಿ ಶಂಕರ ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಸ್ವತಃ ರಂಗನಾಥನಿಗೇ ತಾನು ಸವೆಸಿದ ಬದುಕಿನ ಕುರಿತು ಒಳನೋಟ ನೀಡಬಲ್ಲಷ್ಟು ಕಸುಹೊಂದಿರುವಂಥಾದ್ದು. ಪರೋಕ್ಷವಾಗಿಯಾದರೂ ಶಂಕರನ ನಿರ್ಧಾರಕ್ಕೆ ಕಾರಣರಾದವರು ಕೋಚಿಂಗ್ ಕೊಡುತ್ತಿದ್ದ ಮೇಷ್ಟ್ರು ಬೆಳವಾಡಿ ರಾಮಚಂದ್ರಪ್ಪ ಎನ್ನುವುದು ಇಲ್ಲಿ ಧ್ವನಿಪೂರ್ಣ. ಹಾಗೆಯೇ ನೇರವಾಗಿಯಲ್ಲದಿದ್ದರೂ ನೆರಳಿನಂತೆ ಸುಳಿಯುವ ಡೇನಿಯಲ್, ಗೂಗ್ಲಿ ಬೌಲರ್ ಚಂದ್ರಶೇಖರ್, ಶ್ರೀನಿವಾಸ‍, ಅವನ ತಂದೆ, ಪ್ರಭಾದೇವಿ ರೆಡ್ಡಿ ಕೂಡ ಕಥಾನಕದ ಕೇಂದ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾರೆ, ಸಾಂದರ್ಭಿಕವಾಗಿ. ಆದಾಗ್ಯೂ ಪರಮೇಶ್ವರಿಯ ನಾಗೇಂದ್ರನ ಜೊತೆಗಿನ ಮದುವೆ ಮತ್ತು ನಂತರ ನಾಗರಾಜನೊಂದಿಗಿನ ವೈಫಲ್ಯದ ಅನುಬಂಧ ಯಾವ ಬಗೆಯಲ್ಲೂ ಕಥಾನಕದ ಕೇಂದ್ರಕ್ಕೆ ಹೆಚ್ಚುವರಿಯಾಗಿ ಯಾವುದೇ ಕಾಣ್ಕೆ ನೀಡಬಲ್ಲ ಕಸು ಹೊಂದಿರುವ ಕತೆ ಎನಿಸುವುದಿಲ್ಲ.

ರಂಗನಾಥನ ಬದುಕಿನ ಮೂಲ ಎಳೆಗೆ ಮೇಲೆ ಹೇಳಿದ ಬಗೆಯಲ್ಲಿ ಹಲವು ಇತರ ಕತೆಗಳು ಬೇರೆ ಬೇರೆ ಆಯಾಮಗಳಿಂದ ಒಳನೋಟ ದೊರಕಿಸಿಕೊಡಲು ಪ್ರಯತ್ನಿಸುತ್ತವಾದರೂ ರಜನಿ ರಾಯ್ ಮತ್ತು ವಿನೋದ್ ಜೋಡಿಯ ವಿವರ, ಕತೆ ಮಾತ್ರ ಪ್ರಧಾನವಾದ ಇನ್ನೊಂದು ಎಳೆಯಾಗಿಯೇ ಮನಸ್ಸಿನಲ್ಲಿ ನಿಲ್ಲುತ್ತದೆ. ವಿಕ್ರಂ ಮತ್ತು ಪ್ರಾರ್ಥನಾ ಎತ್ತುವ ಪ್ರಶ್ನೆಗಳಿಗೂ ರಜನಿ ರಾಯ್ ಅವರ ಬದುಕಿಗೂ ಒಂದು ಕೊಂಡಿ ಏರ್ಪಡುವುದು ಗಮನಿಸಬೇಕಾದ ಅಂಶ.

ತನ್ನ ಆಶಯದಲ್ಲಿ ಈ ಕೃತಿ ಯು ಆರ್ ಅನಂತಮೂರ್ತಿಯವರ ದಿವ್ಯದೊಂದಿಗೆ ನಿಲ್ಲುತ್ತದೆ. ಆದರೆ ಅನಂತಮೂರ್ತಿಯವರು ಸಂಘರ್ಷದ ಪೂರ್ವಪಕ್ಷವಾಗಿ ಬಳಸಿಕೊಳ್ಳುವ ಆಧ್ಯಾತ್ಮ, ಮಿಥ್, ಜ್ಯೋತಿಷ್ಯ, ಅನೂಹ್ಯ ಜಗದ ನಾಟಕೀಯತೆ, ಪುರಾಣದ ಮಟ್ಟಕ್ಕೇರುವ ಒಂದು ಸರ್ರಿಯಲಿಸ್ಟಿಕ್ ಪಾತಳಿಯನ್ನು ಕಾಲಜಿಂಕೆ ಆಶ್ರಯಿಸುವುದಿಲ್ಲ ಎನ್ನುವುದನ್ನು ಬಿಟ್ಟರೆ ಎರಡೂ ಕಾದಂಬರಿಗಳು ಮುಖಾಮುಖಿಯಾಗುತ್ತಿರುವ ವಿದ್ಯಮಾನ ಒಂದೇ. ಅನಂತಮೂರ್ತಿಯವರು ದಿವ್ಯವನ್ನು ಅತಿಯಾಗಿ ಸಂಕೀರ್ಣಗೊಳಿಸಿದ್ದರ ಫಲ ಅದು ಹೆಚ್ಚಿನವರನ್ನು ತಲುಪಬೇಕಾದ ಸ್ತರದಲ್ಲಿ ತಲುಪಲೇ ಇಲ್ಲ. ದಿವ್ಯದ ಕುರಿತ ಬಂದ ವಿಮರ್ಶೆಗಳೂ ಸಿಕ್ಕ ಸಿಕ್ಕ ಜಾಡಿನಲ್ಲಿ ಹರಡಿ ಓದುಗರನ್ನು ಹಾದಿ ತಪ್ಪಿಸಿದ್ದು ಕೂಡ ಸತ್ಯ. ಹಾಗಿರುತ್ತ ಕಾಲಜಿಂಕೆ ಕಾದಂಬರಿ ಮತ್ತೆ ದಿವ್ಯ ಎತ್ತುವ ಸಂಘರ್ಷಗಳ ಚಿಂತನೆಗೆ ಕಾರಣವಾಗಬಹುದೇನೋ ಅನಿಸುವಂತೆ ಮಾಡಿದೆ.

ಕಾಲಜಿಂಕೆಯ ಪ್ರಧಾನ ಆಶಯ ಪಾತ್ರ ಪ್ರಾರ್ಥನಾಳ ಸ್ವಗತ, ಪತ್ರದ ಮಾತು ಗಮನಿಸಿ:

"ನಾಲ್ಕಾರು ವರ್ಷಗಳಿಂದ ಹೀಗೇ ಒಂದಲ್ಲ ಒಂದು ಪರೀಕ್ಷೆ, ಸಂದರ್ಶನಕ್ಕೆ ಅಂತ ಓದುತ್ತಲೇ ಇದೀನಿ. ನನ್ನ ಸಹಪಾಠಿಗಳು, ರೂಮ್‍ಮೇಟ್‍ಗಳೂ ಅಷ್ಟೇ. ನಾನು ಯಾರು, ನನಗೇನು ಬೇಕು, ನನ್ನ ವ್ಯಕ್ತಿತ್ವ ಎಂತಹುದು ಎಂಬುದು ಗೊತ್ತೇ ಇಲ್ಲ. ಮ್ಯಾನೇಜ್‍ಮೆಂಟ್ ಪರೀಕ್ಷೆಗಳು, ಸಿವಿಲ್ ಸರ್ವೀಸ್ ಕೋಚಿಂಗ್, ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳು - ಹೀಗೆ ಎಲ್ಲವನ್ನೂ ಹಚ್ಚಿಕೊಂಡು ಬರೆಯುತ್ತಿರುವ ನನ್ನ ಸಹಪಾಠಿಗಳನ್ನು ನೋಡಿದರೆ ಭಯವಾಗುತ್ತೆ. ಇವರೆಲ್ಲ ಎಲ್ಲಾದರೂ ಹೇಗಾದರೂ ಎಂದಾದರೂ ಗೆದ್ದೇ ಬಿಡುತ್ತಾರೆ - ನಿಜಕ್ಕೂ. ಆದರೆ ಮೂರು ನಾಲ್ಕು ವರ್ಷಗಳ ದೆಹಲಿ ಅನುಭವದಲ್ಲಿ, ಒಡನಾಟದಲ್ಲಿ ತಿಳಿದಂತೆ ಇವರಾರಿಗೂ ಇನ್ನೊಬ್ಬರ ಬಗ್ಗೆ ಪ್ರೀತಿಯಿಲ್ಲ. ಎಲ್ಲರೂ ಸ್ವಮಗ್ನರೇ. ನಾಲ್ಕಾರು ವರ್ಷ ಒಟ್ಟಿಗೇ ಕಳೆದರೂ ಒಬ್ಬರಿಗೊಬ್ಬರು ಸ್ನೇಹಿತರಾಗೋಲ್ಲ. ಯಾರಿಗೂ ಯಾರ ಸ್ನೇಹವೂ ಬೇಕಿಲ್ಲ. ಎಲ್ಲರ ಮುಖವೂ ಮುಗುಳ್ನಗೆಯೂ ಚೆನ್ನಾಗಿರುತ್ತೆ. ಯಾರು ಯಾರೊಡನೆಯೂ ತಮ್ಮ ಗುಟ್ಟುಗಳನ್ನು, ಆತ್ಮೀಯ ಅನುಭವಗಳನ್ನು ಹೇಳಿಕೊಳ್ಳುವುದಿಲ್ಲ. ಹಾಗೆ ಹೇಳಿಕೊಳ್ಳುವವರು ಮಾನಸಿಕವಾಗಿ ದುರ್ಬಲರಂತೆ. ಕೊಳ್ಳೇಗಾಲ, ಮಂಡ್ಯ, ಬೆಂಗಳೂರಿನ ಗಾಂಧಿಬಜಾರ್‌ಗಳಲ್ಲಿ ಬೆಳೆದ ನನಗೆ ಇಂತವರೊಡನೆ ಹೊಂದಿಕೊಳ್ಳಲಾಗದೆ, ಸ್ಪರ್ಧಿಸಲಾಗದೆ ಕೀಳಿರಿಮೆಯಿಂದ ಈ ಭಾವನೆ ಬಂದಿರಬಹುದೆ ಅಂತಾ ಅದೆಷ್ಟೋ ರಾತ್ರಿ ನಿದ್ದೆಗೆಟ್ಟು, ರೂಮಿನ ಪುಟ್ಟ ಹಾಸಿಗೆಯಲ್ಲಿ ಬೆನ್ನು ನೋವು ಬರುವ ತನಕ ಹೊರಳಾಡಿ, ದಿಂಬಿನ ಹತ್ತಿಯನ್ನೆಲ್ಲ ಹಿಸುಕಿ ಹಿಸುಕಿ ನನ್ನನ್ನು ನಾನೇ ಕೇಳಿಕೊಂಡಿದ್ದೀನಿ. ಇಲ್ಲ ಇಲ್ಲ ಇವರೆಲ್ಲ ಈ ದೇಶದ ದೊಡ್ಡ ದೊಡ್ಡ ಹುದ್ದೆ, ಸ್ಥಾನಮಾನಗಳನ್ನು ಅಲಂಕರಿಸುತ್ತಾರೆ. ನೂರಕ್ಕೆ ನೂರೊಂದರಷ್ಟು ಗ್ಯಾರೆಂಟಿಯಾಗಿ. ಉಹು. ಆದರೆ ಯಾರ ಮೇಲೂ ಪ್ರೀತಿಯಿಲ್ಲದೆ, ಯಾರೊಡನೆಯೂ ಬೆರೆಯಲಾಗದ ಇಂತವರಿಂದ ಸಮಾಜಕ್ಕೆ ಏನೂ ಆಗೋಲ್ಲ ಅಂತಾನೆ ಅನಿಸುತ್ತೆ. ಇಲ್ಲ, ಇಲ್ಲ ನನಗೆ ಗೆಲ್ಲುವ ಆಸೆಯಿಲ್ಲದ್ದರಿಂದ, ನನ್ನದು ಛಲಹೀನ ವ್ಯಕ್ತಿತ್ವವಾದ್ದರಿಂದ ಹೀಗನ್ನಿಸುತ್ತಿದೆಯೆ ಅನ್ನುವ ಅನುಮಾನವೂ ಬರುತ್ತೆ. ಏನೇ ಆದರೂ ಇದನ್ನೆಲ್ಲ ನಾನೇ ಕೂಲಂಕಷ ಯೋಚಿಸಿ ತಿಳಕೊಬೇಕು."

ಈ ಪ್ರಾರ್ಥನಾಳ ತಂದೆ ರಂಗನಾಥ ಸ್ವತಃ ತನ್ನ ಮಗಳ ಪತ್ರ ಸೂಚಿಸುವ ಸ್ಪರ್ಧಾತ್ಮಕ ಜಗತ್ತಿಗೆ ಇಂದಿನ ಯುವ ಜನಾಂಗ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಕಲಿಸುವ ಕೋಚಿಂಗ್ ಸೆಂಟರಿನ ಡೆಪ್ಯುಟಿ ಕರೆಸ್ಪಾಂಡೆಂಟ್. ತಾಯಿ ಕೂಡ ಶಿಕ್ಷಕಿ. ಹಾಗಾಗಿ ಮಗಳ ಈ ಆತ್ಮನಿರೀಕ್ಷೆಯ ಅವಧಿ ಎಂದರೆ ಅವರಿಗೆ ಅವಕಾಶಗಳಿಂದ ವಂಚಿತಳಾಗುವುದಷ್ಟೇ ಅನಿಸುತ್ತದೆ.

ಆದರೆ ಈ ಕಥಾನಕದ ಉದ್ದಕ್ಕೂ ತಾವು ಬದುಕಿ ಸವೆಸಿದ ಬದುಕಿನ ಕುರಿತ ಆತ್ಮನಿರೀಕ್ಷೆಯನ್ನು ಇಲ್ಲಿಯ ಪುಟ್ಟ ಕುಟುಂಬದ ಪ್ರತಿಯೊಂದು ಪಾತ್ರವೂ ತನ್ನದೇ ಆದ ರೀತಿಯಲ್ಲಿ ನಡೆಸುತ್ತದೆಂಬುದು ವಿಶೇಷ.

ರಂಗನಾಥನ ಇಡೀ ಬಂಧು ಬಳಗ ದಾಯಾದಿಗಳೆಲ್ಲ ಉಳಿದ ಅಣ್ಣತಮ್ಮಂದಿರ ಜೊತೆಗೇ ಮದ್ದೂರಿಗೆ ಹೋಗಿ ಮನೆ ದೇವರಾದ ಲಕ್ಷ್ಮೀ ನರಸಿಂಹಸ್ವಾಮಿ ದೇವರ ತೇರಿನ ದಿವಸ ಹಿರಿಯರ ಹೆಸರಿನಲ್ಲಿ ಸೇವೆ ಮಾಡಿಸುತ್ತಿದ್ದುದು, ದಾನ ಧರ್ಮ ಮಾಡುತ್ತಿದ್ದುದು ಎಲ್ಲ ಈಚೆಗೆ ಕಡಿಮೆಯಾಗಿದೆ. ಹೇಗಿದ್ದರೂ ಈಗ ಕೊರಿಯರ್‌ನಲ್ಲಿ ಪ್ರಸಾದ, ಕುಂಕುಮವೆಲ್ಲ ಬರುತ್ತದೆ. `ಎಲ್ಲರಿಗೂ ಏನೋ ಕೆಲಸ, ಏನೋ ತರದೂದು, ಎಲ್ಲೋ ಪ್ರಯಾಣ, ಏನೋ ನೆನಗುದಿ; ಯಾವುದಕ್ಕೋ ತಹತಹ. ಒಟ್ಟಿನಲ್ಲಿ ನೆಮ್ಮದಿಯಿಂಬುದು ಆಕಾಶ ಬುಟ್ಟಿ.'

ಕೊಡೈಕೆನಾಲ್‍ನಿಂದ ಕಾರಿನಲ್ಲಿ ವಾಪಾಸ್ಸು ಬರುತ್ತಿರುವಾಗ ಹಾದಿಯಲ್ಲಿ ಕರೂರ್ ಹತ್ತಿರ ನಡುಹಗಲಿನಲ್ಲೇ ನಡೆದ ಒಂದು ಅಪಘಾತದ ಸನ್ನಿವೇಶ ಎಲ್ಲರ ಮನಕಲಕುವಂತಿರುತ್ತದೆ. ಕಣ್ಣು ಬಿಡಲಾಗದ ಪ್ರಖರ ಬಿಸಿಲಿನಲ್ಲಿ ಬಿಸಿಲಿಗೆ ಹೊಳೆಯುತ್ತಿರುವ ಟಾರಿನ ಝಳದ ಹಿನ್ನೆಲೆಯಲ್ಲಿ ರುಂಡ ಮುಂಡವೆಲ್ಲ ಚೆಲ್ಲಾಪಿಲಿಯಾಗಿ ರಸ್ತೆ ತುಂಬಾ ಹರಡಿಕೊಂಡು ವಿಚಿತ್ರವಾಗಿ ಹೊಳೆಯುತ್ತಾ ಇರುವ ದೇಹಗಳು, ಐಬ್ಬರು ಪುಟ್ಟ ಹೆಣ್ಣುಮಕ್ಕಳ ಜಡೆ, ಝುಮಕಿ, ಉಂಗುರ...ಎಂದೆಲ್ಲ ವಿವರಿಸುವಾಗ ಇದೇ ಪ್ರಾರ್ಥನಾ ತಾನು ಈಗಲೇ ಹೋಗಿ ಆ ಮಕ್ಕಳನ್ನೆಲ್ಲ ನೋಡಬೇಕು ಎಂದು ಹಠ ಹಿಡಿಯುತ್ತಾಳೆ. ತಂದೆ ನೀನು ತುಂಬಾ ಚಿಕ್ಕವಳು, ಅದನ್ನೆಲ್ಲ ನೋಡಬಾರದು ಎಂದು ಗದರುತ್ತಾನೆ. ಈ ಸನ್ನಿವೇಶ ಅವಳ ಮನಸ್ಸಿನಲ್ಲಿ ಎಂಥಾ ಪರಿಣಾಮ ಬೀರುತ್ತದೆಂದರೆ ಅವಳು ಮುಂದೆ "Niether they were young" ಎನ್ನುವ ಪ್ರಬಂಧ ಬರೆಯುತ್ತಾಳೆ. ಪ್ರಾರ್ಥನಾಳ ವ್ಯಕ್ತಿತ್ವದಲ್ಲೇ ಇರುವ ಈ ಮಾನವೀಯ ಅನುಕಂಪದ ಸೆಲೆಯನ್ನು ಬಾಲ್ಯದ ಒಂದು ಘಟನೆಯಿಂದಲೇ ರಂಗನಾಥ ಕೂಡ ಗಮನಿಸುತ್ತಾನಾದರೂ ಅವನಿಗೆ ತನ್ನ ಮಗಳು ಯಾತಕ್ಕಾಗಿ ಆಧುನಿಕ ಜಗತ್ತಿನ ಸಹಜ ವಿದ್ಯಮಾನಗಳಿಂದ ವಿಮುಖಳಾಗುತ್ತಿದ್ದಾಳೆಂಬ ಸೂಕ್ಷ್ಮ ಅರಿವಿಗೆ ನಿಲುಕುವುದಿಲ್ಲ. ನಿಲುಕದಂತೆ ಬಹುಷಃ ರಂಗನಾಥ ತೊಡಗಿಕೊಂಡಿರುವ ಬದುಕು ಮಾಡಿರಬಹುದೆ ಎಂಬುದು ಇಲ್ಲಿನ ಹಲವಾರು ಅನುಮಾನಗಳೊಂದಿಗೇ ಉಳಿಯುವ ಒಂದಾನೊಂದು ಅನುಮಾನ. ಕಾದಂಬರಿ ಉದ್ದಕ್ಕೂ ಕೆಲವು ಅಂತಿಮ ತೀರ್ಮಾನಗಳಿಲ್ಲದ ಅನುಮಾನ, ಗೊಂದಲಗಳ ಎಳೆಯನ್ನು ಹಾಗೆಯೇ ಬಿಟ್ಟುಬಿಡುತ್ತದೆ. ಸಹಜವಾಗಿಯೇ ಇವುಗಳಿಗೆ ಉತ್ತರಿಸುವುದರಿಂದ ಕಾದಂಬರಿಯ ಪ್ರಶ್ನೆಗಳಿಗೆ ಮಿತಿ ತೊಡಿಸಿದಂತಾಗುತ್ತಿತ್ತು. ಹಾಗಾಗಿಯೂ ಇಲ್ಲಿನ ಪ್ರಶ್ನೆಗಳು ಜೀವಂತವಾಗಿ ಉಳಿದು ನಮ್ಮನ್ನು ಓದಿನ ನಂತರವೂ ಕಾಡುತ್ತ ಉಳಿಯುತ್ತವೆ.

ಕಾದಂಬರಿಯ ಹೆಸರು ಕಾಲಜಿಂಕೆ. ಜಿಂಕೆ ಎಂಬುದು ವೇಗವನ್ನು, ಮಾಯಾಮೃಗದ ಭ್ರಮೆಯನ್ನು, ಎಲ್ಲ ವೇಗ ಕೊನೆಯಾಗಬಹುದಾದ ಮೃಗಜಲದ ನಿರಾಶಾದಾಯತ್ವವನ್ನು ಪ್ರತಿನಿಧಿಸುತ್ತ ಮನಸ್ಸಿನಲ್ಲಿ ಕಾಲ ಎಂಬ ನಿಷ್ಠುರ ಸಂಗತಿ ಯಾವುದನ್ನು ಎದುರಿಸ ಬೇಕಾಗಿದೆ ಎಂಬುದರ ಕುರಿತ ಅಸ್ಪಷ್ಟ ಬಿಂಬವೊಂದನ್ನು ಮೂಡಿಸಿಬಿಡುತ್ತದೆ. ವಿಚಿತ್ರವೆಂದರೆ ಕಾಲಕ್ಕೆ ಮೂರು ಗತಿಗಳಿವೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತು ಅದರ ಗತಿ. ಮೂರೂ ಕಡೆ ಒಂದು ವಿಧವಾದ ವೇಗ, ಆವೇಗ ಇತ್ತು, ಇದೆ ಮತ್ತು ಇರುತ್ತದೆ ಕೂಡ. ಕಾದಂಬರಿ ಇದನ್ನು ಗುರುತಿಸಿರುವುದು ಮತ್ತು ಕಲಾಪೂರ್ಣವಾಗಿ ಚಿತ್ರಿಸಿರುವುದು ಮನಸ್ಸಿಗೆ ಬರುತ್ತದೆ. ಇಲ್ಲಿನ ನಾರಾಯಣಮೂರ್ತಿಗಳ ರಾಜಕೀಯ ಬದುಕಿನ ಏಳು ಬೀಳು, ಅವರ ಎದ್ದು ಕಾಣುವ ಮತ್ತು ಅಂತರಂಗದ ಅಜೆಂಡಾಗಳು, ಅವರ ಬದುಕಿನಲ್ಲಿ ಒಬ್ಬೊಬ್ಬರೇ ಹಿತೈಷಿಗಳೂ ಮತ್ತು ಹಿತಶತ್ರುಗಳೂ ಆಗಿ ಬದಲಾಗುತ್ತ ಕಲಿಸುವ ಪಾಠಗಳು ಒಂದು ಭೂತಕಾಲದ ಚಿತ್ರ ನೀಡಿದರೆ ಕೇವಲ ಇಪ್ಪತ್ತು ಸಾವಿರ ರೂಪಾಯಿಗೆ ಇನ್ನೂರು ಮುನ್ನೂರು ವರ್ಷಗಳಿಂದ ಹಿರಿಯರು ಬಾಳಿ ಬದುಕಿದ ಹಳ್ಳಿಯ ಮನೆಯನ್ನು ಮಾರಬಾರದಿತ್ತು ಎನ್ನುವ ಪ್ರರ್ಥನಾ ಮತ್ತು ದೇವರು, ದಿಂಡರು, ಜ್ಯೋತಿಷ್ಯ, ಹೋಮ, ಹವನ, ಪೂಜೆ, ಪುನಸ್ಕಾರ, ಜಾತಕ ಇವುಗಳಲ್ಲಿ ನಂಬಿಕೆ ಇರಲಿ, ಕುತೂಹಲ ಮೂಡುವಂತಹ ವಾತಾವರಣ ಕೂಡ ನಮ್ಮ ಮನೆಯಲ್ಲಿರಲಿಲ್ಲ ಎಂದು ಆಪಾದಿಸುವ ಮಗ ವಿಕ್ರಂ ಇಬ್ಬರನ್ನೂ ಇಬ್ಬರ ಆಪಾದನೆಗಳನ್ನೂ ಎದುರಿಸುವ ರಂಗನಾಥ ಅದೇ ಭೂತಕಾಲದ ಇನ್ನೊಂದು ಪಾತಳಿಯನ್ನು ಕಾಣಿಸುತ್ತಾನೆ ನಮಗೆ. ಇಲ್ಲಿಯೇ ಭೂವರಾಹ ಮೂರ್ತಿಯ ಪೂಜೆ ನಿಲ್ಲಿಸಿ ಅದನ್ನು ಕಿತ್ತು ಶೋಕೇಸಿನಲ್ಲಿಡುವ "ದಿವ್ಯ"ದ ಘನಶ್ಯಾಮನನ್ನೂ, ದೈವದ ಸೆಮಿ ಅವತಾರವೇ ಆದ ಮಂಗಳ ಗೌರಿಯನ್ನೂ ನೆನೆಯುವುದು ಉತ್ತಮ.

ವರ್ತಮಾನಕ್ಕೆ ಬಂದರೆ ಅಲ್ಲಿ ಎಷ್ಟೊಂದು ಚಿತ್ರಗಳಿವೆ! ಸ್ವತಃ ಯುವಜನಾಂಗವನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುತ್ತಿರುವ ರಂಗನಾಥ, ಜಗತ್ತನ್ನೇ ರಿಯಲ್ ಎಸ್ಟೇಟ್ ರಂಗಭೂಮಿಯನ್ನಾಗಿಸಿಬಿಟ್ಟಿರುವ ಸ್ವಾಮಿನಾಥ, ಪವಿತ್ರಾ, ಕೊನೆಯಲ್ಲಿ ಬದಲಾದರೂ ಅಂಥದೇ ಜೀವನಶೈಲಿಯಲ್ಲಿದ್ದ ಶಂಕರ, ಯಾವುದರಿಂದ ದೂರವಿರಬಯಸಿದ್ದನೋ ಅಂಥದ್ದಕ್ಕೇ ಬಲಿಯಾಗಲಿರುವ ವಿನೋದ್...

ಭವಿಷ್ಯತ್ತಿನ ಕಡೆ ಮುಖ ಮಾಡಿನಿಂತ ಪಾತ್ರ ಪ್ರಾರ್ಥನಾ. ಇವಳಿಗೆ ಪರಂಪರೆಯ ಮೌಲ್ಯಗಳ ಬಗ್ಗೆ ಮತ್ತು ಕಳಚಿಕೊಳ್ಳಬೇಕಾದ ಅದರ ಜಡತ್ವಗಳ ಬಗ್ಗೆ ಸ್ಪಷ್ಟ ಅರಿವಿದೆ. ಅವಳ ಮನಸ್ಸಿನಲ್ಲಿ ನಾರಾಯಣಮೂರ್ತಿಗಳ ಬಗ್ಗೆ, ಸ್ವಾಮಿನಾಥನ ಬಗ್ಗೆ ಮತ್ತು ರಜನಿ ರಾಯ್ ಬಗ್ಗೆ ನಿಖರವಾದ ಅಭಿಪ್ರಾಯಗಳಿವೆ. ಹಾಗೆಯೇ ಉದುರುವ ಎಲೆ, ಹರಿವ ನೀರು, ಚಲಿಸುವ ಮೋಡ ಮತ್ತು ಹಾರುವ ಹಕ್ಕಿಗಳನ್ನು ಗಮನಿಸಿ ಬದುಕಿಗೆ ಬೇಕಾದದ್ದೆಲ್ಲವನ್ನೂ ಕಲಿಯಬಹುದೆಂಬುದನ್ನು ಅಚ್ಚರಿಯಿಂದಲೇ ಅರಿತಿದ್ದಾಳೆ.

ಇಲ್ಲಿಯೇ ರಂಗನಾಥನ ಚಿಕ್ಕಮ್ಮನ ಕತೆ ಬರುತ್ತದೆ. ಪ್ರಾರ್ಥನಾ ಹುಡುಕಿಕೊಂಡು ಹೋಗುವ ಹಳ್ಳಿಯ ಮನೆ, ಆಸ್ತಿ ಮತ್ತು ಅದರ ಸಲುವಾಗಿಯೇ ಹುಟ್ಟಿಕೊಳ್ಳುವ ಜಗಳದಿಂದ ಶಾಪ ಹಾಕುತ್ತಲೇ ಬೇರೆ ಹೋದ ಚಿಕ್ಕಮ್ಮ, ಅಂದಿನಿಂದಲೂ ಅರ್ಧ ಮರದಲ್ಲಿ ಮಾತ್ರ ಹಣ್ಣು ಬಿಡುವ ದಾಳಿಂಬೆ ಮರ, ಮನೆ, ಆಸ್ತಿ ಮಾರಿದ ಮೇಲೆ ಪೂರ್ತಿ ಮರದ ತುಂಬ ಬಿಡುವ ಹೂ ಹಣ್ಣುಗಳ ರೂಪಕ ಎಲ್ಲ ಇಲ್ಲಿದೆ. ಕಾದಂಬರಿಯ ಕೊನೆಯಲ್ಲಿ ಆಕಾಶದಿಂದ ಇಳಿಯುವ ರಂಗನಾಥನ ತಂದೆ ತಾಯಿ ಕೂಡ ಕೇಳುವ ಪ್ರಶ್ನೆಗಳು ರಂಗನಾಥನ ಚಿಕ್ಕಮ್ಮನ ಕುರಿತಾಗಿ, ಅವಳ ಮಗ, ಸೊಸೆಯ ಕುರಿತಾಗಿಯೇ ಇರುವುದನ್ನು ಗಮನಿಸಬೇಕು. ಪ್ರಾರ್ಥನಾ ಕೂಡ ಆ ಹಳ್ಳಿ ಮನೆಯಲ್ಲಿ ಸಿಕ್ಕಿದ ಕಾಗದ ಪತ್ರಗಳನ್ನಿಟ್ಟುಕೊಂಡು ಕಾದಂಬರಿ ಬರೆಯಲು ತೊಡಗುತ್ತಾಳೆ. ಬರೆಯುತ್ತ ಬರೆಯುತ್ತ ಅವಳಿಗೆ ಸ್ಪಷ್ಟವಾಗುವ ಒಂದು ವಿಚಾರ ಬಹಳ ಮುಖ್ಯವಾದದ್ದು. ಅವಳು ನೇರವಾಗಿ ರಂಗನಾಥನನ್ನು ದೂರುತ್ತಾಳೆ. "ನೀನು ಅಮ್ಮನನ್ನು ತುಂಬಾ ಎಕ್ಸ್‌ಪ್ಲಾಯಿಟ್ ಮಾಡಿದ್ದೀಯೆ". ಇದು ಎಲ್ಲರೂ ತಿಳಿದಂಥ ಶೋಷಣೆಯಲ್ಲ. ಆದರೆ ಎಲ್ಲರೂ ತಿಳಿದೋ ತಿಳಿಯದೆಯೋ ಮಾಡುತ್ತಲೇ ಬಂದ ಶೋಷಣೆ ಎಂಬುದಂತೂ ಖಂಡಿತ. ಹಾಗಾಗಿಯೇ ರಂಗನಾಥನಿಗೆ ಪತ್ರ ಓದಿ ಮುಗಿಸುತ್ತಲೇ ಹೊಟ್ಟೆಯಲ್ಲಿ ಕಲಸಿದಂತಾಗಿ ನೀನು ಸಾಯಿ, ನೀನು ಸಾಯಿ ಎಂದು ಕೂಗಿ ಕೂಗಿ ಹೇಳಿದಂತಾಗುವುದು. ರಂಗನಾಥನಿಗೆ ಅರಿಯುವ ಸೂಕ್ಷ್ಮ ಇದೆ, ಆದರೆ ಅರ್ಥಮಾಡಿಕೊಳ್ಳಬಲ್ಲ ವ್ಯವಧಾನ ಕಡಿಮೆ. ನಿಧಾನಗತಿಯದ್ದು. ಪ್ರಾರ್ಥನಾಳ ಮುಂದಿನ ಮಾತುಗಳು ಹೀಗಿವೆ.

"ಇದರಿಂದೆಲ್ಲ ಮುಖ್ಯವಾಗಿ ನಿನ್ನ ಬೆಳವಣಿಗೆಗೆ, ಆರೋಗ್ಯಕ್ಕೇ ತೊಂದರೆಯಾಗಿದೆ. ಯಾವಾಗಲೂ ಜೊತೆಯಲ್ಲಿರುವವರು, ಆತ್ಮೀಯರಾಗಿರುವವರು ನಮ್ಮಷ್ಟೇ ಅಥವಾ ನಮಗಿಂತ ಹೆಚ್ಚಿಗೆ ಬೆಳೆದಿದ್ದರೆ ಮಾತ್ರ ನಾವು ಅಂತರಂಗದಲ್ಲಿ ಗಟ್ಟಿಯಾಗಬಹುದು. ಇಂತಹ ಅವಕಾಶವನ್ನು ಇಬ್ಬರೂ ಕಳೆದುಕೊಂಡಿರುವಿರಿ."

ಪ್ರಾರ್ಥನಾ ಹೇಳುವ ಶೋಷಣೆ ಇದು. ಇದು ಬರಿಯ ಗಂಡ ಹೆಂಡಿರ ಸಂಬಂಧಕ್ಕೆ ಮಾತ್ರ ಅನ್ವಯಿಸುವುದಲ್ಲ ಮತ್ತೆ ಎಂಬುದೇ ಈ ಮಾತಿನ ಅರ್ಥವನ್ನು ವಿಸ್ತರಿಸುವಂಥಾದ್ದು. ಇಂಥ ಕಾರಣಗಳಿಗಾಗಿಯೇ ಸತ್ಯನಾರಾಯಣರ ಈ ಕಾದಂಬರಿ ಕೇವಲ ಜಾಗತೀಕರಣ ಅಥವಾ ಸಮಕಾಲೀನ ಕುಟುಂಬದೊಳಗಿನ ತಲೆಮಾರಿನ ಅಂತರ ಸೃಷ್ಟಿಸುವ ಸಮಸ್ಯೆಗಳಾಚೆ ಬೆಳೆಯುತ್ತದೆ, ಬೆಳೆಯುತ್ತಲೇ ಉಳಿಯುತ್ತದೆ. ವಿಕ್ರಂ ಎತ್ತುವ ಪ್ರಶ್ನೆಗಳಿಗಾಗಲೀ, ಪ್ರಾರ್ಥನಾ ಎತ್ತುವ ಪ್ರಶ್ನೆಗಳಿಗಾಗಲೀ ಕಾದಂಬರಿ ನೇರವಾಗಿ ಪ್ರತಿಕ್ರಿಯಿಸುವುದೇ ಇಲ್ಲ. ಆ ಪ್ರಶ್ನೆಗಳಿಗೆ ರಂಗನಾಥ ಅಥವಾ ಅವನ ಹೆಂಡತಿ ಸುಧಾ ಮುಖಾಮುಖಿಯಾಗುವುದು ಕೂಡ ಕೇವಲ ಭಾವನಾತ್ಮಕ ನೆಲೆಯಲ್ಲಿಯೇ ಹೊರತು ವೈಚಾರಿಕವಾಗಿ ಅಥವಾ ತಾರ್ಕಿಕವಾಗಿ ಅವರು ಏನನ್ನೂ ಸಮರ್ಥಿಸಿಕೊಳ್ಳುವುದೂ ಇಲ್ಲ, ನಿರಾಕರಿಸುವುದೂ ಇಲ್ಲ ಎಂಬುದನ್ನು ಕಾಣಬಹುದು. ಬದಲಿಗೆ ಬೇರೆ ಕೆಲವು ಹೊರಗಿನ ಕಥಾನಕಗಳು, ಘಟನೆಗಳು ಈ ಸಂಘರ್ಷದ ಇನ್ನೊಂದು ಮುಖವನ್ನು ನಮಗೆ ಕಾಣಿಸುತ್ತ ಓದುಗನನ್ನು ಮುನ್ನಡೆಸುವಂತಿವೆ.

ರಜನಿ ರಾಯ್ ಈ ಕಾದಂಬರಿಗೆ ಒದಗಿಸುವ ಬಹುಮುಖ್ಯ ಆಯಾಮ ವಿಭಿನ್ನವಾದದ್ದು. ರಂಗನಾಥ ಮತ್ತು ಅವನ ಓರಗೆಯವರ ಬದುಕಿನೊಂದಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳ ವಕ್ತಾರರಾಗಿ ಸಂಘರ್ಷಗಳನ್ನೊಡ್ಡುವ ಅನೇಕ ಪಾತ್ರಗಳಿಗೆ ಹೋಲಿಸಿದರೆ ರಜನಿ ರಾಯ್ ನಿರ್ವಹಿಸುವ ಭೂಮಿಕೆ ಅವಕ್ಕೆಲ್ಲ ತೀರ ಹೊರತಾದದ್ದು. ಆದರೂ ಇದೆಲ್ಲದ್ದಕ್ಕೆ ಹೇಗೋ ಸಂಬಂಧಿಸಿದ್ದು.

ತುಂಬ ಪ್ರಭಾವ-ಸಂಪರ್ಕವೆಲ್ಲ ಇದ್ದ, ದೊಡ್ಡ ಅಭಿವೃದ್ಧಿ ಬ್ಯಾಂಕೊಂದರ ಅಂಗ ಸಂಸ್ಥೆಯಲ್ಲಿ ದುಡಿಯುತ್ತಿದ್ದ ರಜನಿ ಕ್ರಮೇಣ ಸಾಮಾಜಿಕ ಕಾರ್ಯಕರ್ತೆಯಾಗಿ ರೈಟ್ ಟು ಲೈವ್ಲಿಹುಡ್ ಪ್ರಶಸ್ತಿ ಪಡೆಯುವವರೆಗೆ ಬೆಳೆದವರು. ಅವರ ಚಿಂತನಾ ಕ್ರಮ, ಬದುಕಿನಲ್ಲಿ ಅವರು ಯಾವುದಕ್ಕೆ ಮಹತ್ವ ನೀಡುತ್ತಾರೆಂಬ ಅವರ ಜೀವನ ದೃಷ್ಟಿ, ಇಂದಿನ ಯುವ ಜನಾಂಗದ ಆಸಕ್ತಿ, ಅವರ ಸ್ಪರ್ಧಾ ಮನೋಭಾವ, ಅದಕ್ಕಾಗಿ ಅವರು ನಡೆಸುವ ಕಸರತ್ತು ಮತ್ತು ಕ್ರಮೇಣ ಅವರು ಈ ಬಗೆಯ ಜೀವನ ಶೈಲಿಯಿಂದಲೇ ಸುಸ್ತಾಗಿ ಬಿಡಬಹುದಾದ ಆತಂಕ ಎಲ್ಲ ಸ್ವಲ್ಪ ವಿವರವಾಗಿಯೇ ಕಾದಂಬರಿಯಲ್ಲಿ ಬಂದಿದೆ. "ಪ್ರತಿಯೊಬ್ಬರಿಗೂ ಅವರವರ ವೃತ್ತಿಗೂ ಸಮಾಜಕ್ಕೂ ಏನು ಸಂಬಂಧ, ತನಗೂ ಸಮಾಜದ ಒಟ್ಟು ಒಳಿತಿಗೂ ಏನು ಸಂಬಂಧ ಅಂತ ಗೊತ್ತಾಗಿದ್ದರೆ ಸಾಕು" ಎಂಬ ಅವರ ಮಾತುಗಳಿಗೂ "ಯಾವುದೇ ವೃತ್ತಿ ಆಗಲಿ, ಆಸಕ್ತಿ ಆಗಲೀ ನಲವತ್ತು-ಐವತ್ತು ವರ್ಷ ನಮ್ಮ ಗಮನವನ್ನೆಲ್ಲ ಉಳಿಸಿಕೊಳ್ಳುತಾ? ಹಾಗಲ್ಲದೇ ಹೋದರೆ ನಾವು ಮೊದಲು ಏನೋ ಒಂದು ಆಯ್ಕೆ ಮಾಡಿ ಕ್ರಮೇಣ ಅದರಲ್ಲಿ ಆಸಕ್ತಿ ಕಳೆದುಕೊಂಡು, ಅಮೇಲೂ ಅದಕ್ಕೆ ಗಂಟು ಹಾಕಿಕೊಂಡು ಬದುಕಬೇಕಾ?" ಎಂಬ ಪ್ರಾರ್ಥನಾಳ ಪ್ರಶ್ನೆಗೂ ಸಂಬಂಧ ಇದೆ ಅನಿಸುತ್ತದೆ. ಆರಂಭದಲ್ಲೇ ಗಮನಿಸಿದ ಪ್ರಾರ್ಥನಾಳ ಪತ್ರದಲ್ಲಿ ಬರುವ "ಆದರೆ ಯಾರ ಮೇಲೂ ಪ್ರೀತಿಯಿಲ್ಲದೆ, ಯಾರೊಡನೆಯೂ ಬೆರೆಯಲಾಗದ ಇಂತವರಿಂದ ಸಮಾಜಕ್ಕೆ ಏನೂ ಆಗೋಲ್ಲ ಅಂತಾನೆ ಅನಿಸುತ್ತೆ" ಎಂಬ ಮಾತುಗಳನ್ನು ನೋಡಿ. ರಜನಿ ಮೇಡಂಗೆ ತನ್ನ ಕೆಲಸದಲ್ಲಿರುವ ಬದ್ಧತೆಗಾಗಿಯಾದರೂ ಪ್ರಾರ್ಥನಾ ಅವರನ್ನು ಮೆಚ್ಚುತ್ತಾಳೆ, ಅವರ ವಿಪರೀತ ಬುದ್ಧಿವಾದ ಇಷ್ಟವಾಗದಿದ್ದರೂ.

ಕಾದಂಬರಿಯಲ್ಲಿ ಎರಡು ಕಡೆ ಜಿಂಕೆಯ ಪ್ರವೇಶವಿದೆ. ರಜನಿ ಮೇಡಮ್ಮನ್ನು ರಂಗನಾಥ ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಒಂದು ಜಿಂಕೆ ಕಂಡಿತೇ ಅಥವಾ ಅದನ್ನು ಕಂಡ ಭ್ರಮೆ ತಮಗಾಯಿತೇ ಎಂಬುದೂ ತಿಳಿಯದ ಹಾಗೆ, ತೀರ ದೂರದಲ್ಲಿ, ಬಿಸಿಲಿನ ಝಳದಲ್ಲಿ ಮಿಂಚಿನ ವೇಗದಲ್ಲಿ ನೆಗೆನೆಗೆದು ಓಡುತ್ತ, ಇಗೋ ನೋಡಿದೆ ಎನ್ನುವಷ್ಟರಲ್ಲಿ ಮಾಯವಾಗುತ್ತ, ಮಾಯವಾಯಿತೆನ್ನುವಾಗ ಇನ್ನೆಲ್ಲೊ ಮಿಂಚುತ್ತ ಭ್ರಮೆಯೋ ನಿಜವೋ ತಿಳಿಯದ ಹಾಗೆ ಜಿಂಕೆಯ ಪ್ರವೇಶವಿದೆ. ಮುಂದೆ ರಂಗನಾಥ ಇದೇ ರಜನಿ ಮೇಡಂ ಜೊತೆ ಮೇಸನಾದ ಅವರ ಮನೆಯಲ್ಲೇ ಮಾತನಾಡುತ್ತ ಕುಳಿತಿದ್ದ ಸಂದರ್ಭದಲ್ಲಿ ಕುರಿಯೊಂದನ್ನು ಓಡಿಸಿಕೊಂಡು ಜಿಂಕೆಯೊಂದು ಪ್ರವೇಶಿಸುತ್ತದೆ. ಇಲ್ಲಿ ಜಿಂಕೆ ಮನೆವಾರ್ತೆಯ ಪ್ರಾಣಿಗಳು, ಜಾನುವಾರುಗಳ ಹಾಗೆ ಎಂಬ ವಿವರಣೆಯೂ ಸಿಗುತ್ತದೆ. ಇಲ್ಲಿನ ಬಿಷ್ಣೋಯಿಗಳಿಗೆ ಜಿಂಕೆಗಳು ಶಿವ, ವಿಷ್ಣು, ಗಣೇಶ ಎಲ್ಲವೂ, ಅಷ್ಟು ಪೂಜ್ಯ ಎಂಬ ವಿವರವೂ. ಎರಡೂ ಘಟನೆಗಳಿಗೆ ನಾಲ್ಕು ವರ್ಷಗಳಷ್ಟು ಅಂತರವಿದೆ. ಮೊದಲ ಘಟನೆಯ ವೇಳೆಗೆ ರಜನಿ ಮೇಡಂ ಸಮಾಜ ಸೇವಾ ಕಾರ್ಯಕರ್ತೆಯಾಗಿ ಹೆಚ್ಚೇನೂ ಪ್ರಸಿದ್ಧಿ ಪಡೆದಿರುವಂತೆ ಕಾಣುವುದಿಲ್ಲ. ಆದರೆ ಎರಡನೆಯ ಘಟನೆಯ ವೇಳೆ ಆಕೆ ತುಂಬ ಮಾಗಿದಂತೆ, ತನ್ನ ಕಾರ್ಯಕ್ಷೇತ್ರದಲ್ಲಿ ಬಹಳ ಮುಂದೆ ಸಾಗಿಬಿಟ್ಟಿರುವಂತೆ, ನಡುವಿನ ಕಾಲಮಾನ ಕೇವಲ ನಾಲ್ಕು ವರ್ಷ ಅಲ್ಲವೇನೋ ಎಂಬಂತಿದೆ. ಆಕೆಗೆ ರೈಟು ಲೈವ್ಲಿಹುಡ್ ಪ್ರಶಸ್ತಿ ಕೂಡಾ ಬಂದಿರುತ್ತದೆ. ಇಂಥಲ್ಲಿ ಸತ್ಯನಾರಾಯಣರು, ಕಾಲ ಮತ್ತು ಬದುಕಿನ ಸಾರ್ಥಕತೆಯನ್ನು ಎರಡೂ ಒಂದು ಮಿಂಚಿನ, ಮಾಯಕದ ಜತೆಯೋಟದಲ್ಲಿ ತೊಡಗಿರುವಂತೆ ಕಾದಂಬರಿಯ ಉದ್ದಕ್ಕೂ ತೋರಿಸುತ್ತ, ಈ ಓಟದಲ್ಲಿ ಒಂದು ಇನ್ನೊಂದನ್ನು ಎಲ್ಲಿ ಹೇಗೆ ಸಂಧಿಸುವುದೋ ಎಂಬ ಉದ್ವೇಗವನ್ನೆ ಚಿತ್ರಿಸುವುದನ್ನು ಗುರುತಿಸಬಹುದಾಗಿದೆ. ಕಾದಂಬರಿಯ ಅಂತಃಸ್ಸತ್ವ ಹೀಗೆ ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ದುಡಿಯುತ್ತ, ಓದುಗನನ್ನು ಬಹುಕಾಲ ಕಾಡುತ್ತ ಉಳಿಯುತ್ತದೆ. ಇಂಥ ಒಂದು ವಿಶಿಷ್ಟ ಅನುಭವಕ್ಕೆ ಎದುರಾಗುವುದಕ್ಕಾಗಿಯಾದರೂ ಇದೊಂದು ಓದಲೇ ಬೇಕಾದ ಕಾದಂಬರಿ.
(ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ ಲೇಖನ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, December 18, 2008

ಅಶೋಕ ಹೆಗಡೆಯವರ `ಅಶ್ವಮೇಧ'

ಉತ್ತರಕನ್ನಡದ ಬಹುತೇಕ ಎಲ್ಲ ಕತೆಗಾರರಲ್ಲಿ ಕಾಣಸಿಗುವ ಗ್ರಾಮೀಣ ಬದುಕಿನ ತಾಜಾತನ, ಸೂಕ್ಷ್ಮ ಸಂವೇದನೆ ಮತ್ತು ಪರಿಸರದ್ದೇ ಕಾಣ್ಕೆಯಾದ ವೈಶಿಷ್ಟಗಳು ಇಲ್ಲಿನ ಕತೆಗಾರರ ಕತೆಗೆ ವಿಶೇಷ ಸೊಗಡು, ಆಪ್ತ ಧಾಟಿ ಒದಗಿಸಿಕೊಟ್ಟಿದೆ. ಮೂಲಭೂತವಾಗಿ ಅಶೋಕರ ಬರವಣಿಗೆಯ ಜಾಡು ಕೂಡ ಇದೇ ಸೊಗಡು ಪಡೆದು ಬಂದಿರುವಂಥದ್ದು. ಅಶೋಕರ ಮೊದಲ ಕಥಾ ಸಂಕಲನದಲ್ಲಿನ(`ಒಂದು ತಗಡಿನ ಚೂರು') ಬಹುತೇಕ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ ಪ್ರತಿ ಸಂಕಲನದಲ್ಲೂ ಅಶೋಕರು ವಿಭಿನ್ನ ಪಾತಳಿಯಲ್ಲಿನ ಕತೆಗಳನ್ನು ಕೊಟ್ಟಿರುವುದು ಗಮನಾರ್ಹ. `ಒಂದು ತಗಡಿನ ಚೂರು' ಸಂಕಲನದ ಒಂದು ವರ್ಗದ ಕತೆಗಳು ಉತ್ತರಕನ್ನಡದ ಜನಜೀವನ, ಸಾಂಸಾರಿಕತೆ, ಪ್ರೇಮ, ಕಾಮ, ತಲೆಮಾರು ಮತ್ತು ನಗರ ಜೀವನ ತರುವ ತಲ್ಲಣಗಳ ಸುತ್ತ ಇದ್ದರೆ ಇಲ್ಲಿನ ದೂರ ಸಮುದ್ರದ ಕಾಡು, ಗಡಿಯಾರ ಗೋಪುರದ ಇತಿಹಾಸವು, ಒಂದು ತಗಡಿನ ಚೂರು ಕತೆಗಳಲ್ಲಿ ಅಶೋಕರು ತಮ್ಮ ಕತೆಗಾರಿಕೆಯ ಬೇರೆಯೇ ಮಜಲಿನ ಸಾಧ್ಯತೆಗಳತ್ತ ಹೊರಳಿರುವುದನ್ನು ಕಾಣುತ್ತೇವೆ. ಅದೇ ರೀತಿ ತಮ್ಮ ಎರಡನೆಯ ಕಥಾ ಸಂಕಲನಕ್ಕೆ (ಒಳ್ಳೆಯವನು) ಬರುವಾಗ ನಮಗೆ ಎದುರಾಗುವುದು ವಿಭಿನ್ನ ಬಗೆಯ ಕತೆಗಳು. ಇಲ್ಲೂ ವಸ್ತು, ಶೈಲಿ, ತಂತ್ರ ಮತ್ತು ಆಶಯಗಳಲ್ಲಿ ವೈವಿಧ್ಯ ಇದೆ. ಅನೇಕ ಕಡೆ ಇವರು ತಮ್ಮದೇ ಹಳೆಯ ಮಾರ್ಗದಿಂದ ಹೊರಳಿ ನಡೆದುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಆಲಿಕಲ್ಲು, ನೀಲಿ ಬಾನಿನಲ್ಲಿ ನಗುವ ಚಂದಿರ, ಹೊಳೆದದ್ದೆ ತಾರೆ, ನಿನ್ನ ಹೆಸರಿನಲ್ಲಿ ಒಂದು ತೆರೆ ಹುಟ್ಟಲಿ, ಉಳಿದಿದ್ದೆ ದಾರಿ ಕತೆಗಳು ಅಂಥ ಹಂಬಲವನ್ನು ತಮ್ಮೊಳಗೆ ಹೊಂದಿದ್ದ ಕತೆಗಳೇ. ಆದರೆ ಅವು ಪೂರ್ತಿಯಾಗಿ ತಾತ್ವಿಕ ಆಯಾಮಗಳಿಗೆ ಶರಣಾಗುವುದಿಲ್ಲ. ಬಹುಷಃ ಈ ಹೆಸರುಗಳೇ ಅದನ್ನೆಲ್ಲ ಸೂಚಿಸುತ್ತಿರುವಂತಿದೆ! ಹಾಗೆಯೇ ಈ ಕತೆಗಳು ಕೇವಲ `ಭಾವ' ನಿರ್ಮಿತಿಯೊಂದಿಗೆ ನಿಲ್ಲುವುದೂ ಇಲ್ಲ.ಅಶೋಕರ ಅತ್ಯುತ್ತಮ ಕತೆಗಳು ಈ ಎರಡು ಬಗೆಯ ಕತೆಗಳಲ್ಲೇ ಸಿಗುತ್ತವೆ. ಅಂತರದಂಗೆಯಂಥ ಕತೆಯಲ್ಲಿ ಸಮಕಾಲೀನ ವಸ್ತು, ವಿವರಗಳಿಂದ ಜಾಗತೀಕರಣ, ಮುಕ್ತ ವ್ಯಾಪಾರ ನೀತಿ, ಕ್ಷಿಪ್ರ ಆರ್ಥಿಕತೆಗಳೆಲ್ಲಾ ಸೇರಿ ಸಾಮಾನ್ಯ ಮನುಷ್ಯನೊಬ್ಬನ ಭ್ರಮಾತ್ಮಕ ಹೊಸ ಜಗತ್ತೊಂದು ಏಕಾಎಕಿ ತೆರೆದುಕೊಳ್ಳುವುದನ್ನೂ ಮತ್ತು ಅದು ಅಷ್ಟೇ ಬೇಗ ಬಿಳಿಚಿಕೊಂಡು ಯೂಸ್ ಎಂಡ್ ಥ್ರೋ ತರದ ಬದುಕನ್ನೆ ಅವನ ಪಾಲಿಗೆ ನಿರ್ಮಿಸಿಕೊಡುವುದನ್ನೂ ಅದ್ಭುತವಾಗಿ ಚಿತ್ರಿಸಿದೆ. ಆದರೆ ಅಂತರದಂಗೆ, ಒಳ್ಳೆಯವನು, ಕೈಹಿಡಿದವರು ಕತೆಗಳು ಅಶೋಕರ ಎಂದಿನ ಶೈಲಿಯಿಂದ ತೀರ ಭಿನ್ನವಾಗಿಯೇ ನಿಲ್ಲುತ್ತವೆ.

ಈ ಹಿನ್ನೆಲೆಯನ್ನು ಗಮನಿಸಿಯೇ ಅಶೋಕರ ಕಾದಂಬರಿ 'ಅಶ್ವಮೇಧ'ವನ್ನು ಕುರಿತು ಮಾತನಾಡುವುದು ಸೂಕ್ತ. ಯಾಕೆಂದರೆ ಮೇಲ್ನೋಟಕ್ಕೆ ಸುಮಾರು ಮೂರು ನಾಲ್ಕು ದಶಕದಷ್ಟು ಹಿಂದಿನ ಕಾಲಮಾನದ ಒಂದು ಕತೆಯನ್ನು ಅಶೋಕರು ಇಲ್ಲಿ ನಮಗೆ ಹೇಳುತ್ತಿದ್ದಾರೆ. ಇವತ್ತಿಗೆ ಇದು ಹೇಗೆ ಮತ್ತು ಯಾಕೆ ಪ್ರಸ್ತುತ ಎಂಬ ಪ್ರಶ್ನೆಯ ಜೊತೆಗೇ ಅಶೋಕರ ಸಾಹಿತ್ಯಕ್ಕೆ ಕಾಲಕಾಲಕ್ಕೆ ದಕ್ಕಿದ ವಸ್ತು ವೈವಿಧ್ಯ, ನಿರೂಪಣೆಯ ವಿಧಾನದಲ್ಲಿ ಅವರು ನಡೆಸಿದ ಪ್ರಯೋಗ ಮತ್ತು ಅವರ ದೃಷ್ಟಿಕೋನದಲ್ಲಿ ಸಮಕಾಲೀನ ಸಂಗತಿಗಳಿಗೆ ಸಿಕ್ಕುತ್ತ ಬಂದ ಪ್ರಾಧಾನ್ಯಗಳು ಸರಿ ಸುಮಾರು ಈ ಒಂದು ದಶಕದಲ್ಲಿ ಅವು ಪಡೆದುಕೊಂಡ ತಿರುವುಗಳನ್ನು ಕೂಡ ಗಮನಿಸುವುದು ಆಗ ಮಾತ್ರ ನಮಗೆ ಸಾಧ್ಯವಾಗಬಹುದು.

ಸುಬ್ರಾಯ ಹೆಗಡೆ, ಸೀತಾರಾಮ ಭಟ್ಟ, ಅಷ್ಟಾಗಿ ಕತೆಯ ಮುಖ್ಯ ಭೂಮಿಕೆಗೆ ಬರದ ಚಂದ್ರಹಾಸ ಭಟ್ಟ, ಶಂಭು ಹೆಗಡೆ, ಪುರುಷೋತ್ತಮ, ಮಠದ ಸ್ವಾಮಿ ಒಂದು ಕಡೆ, ಬಹುತೇಕ ಒಂಟಿಯಾಗಿಯೇ ರಾಮಾನಾಯ್ಕ ಇನ್ನೊಂದು ಕಡೆ ಇದ್ದರೂ, ಸುಬ್ರಾಯ ಹೆಗಡೆಯನ್ನು ಉಪಾಯವಾಗಿ ಮಣಿಸುವ ಅವರದೇ ಗುಂಪು, ರಾಮಾನಾಯ್ಕನನ್ನು ಬಳಸಿಕೊಳ್ಳುವ ಅವನದೇ ಗುಂಪು (ರಾಜಕಾರಣಿ), ಎರಡೂ ಪಕ್ಷಗಳಲ್ಲಿ ಆಂತರಿಕವಾಗಿ ಈ ಸಂಕೀರ್ಣ ಪರಿಸ್ಥಿತಿಯಲ್ಲೇ ಉಗಮವಾಗುವ ಚರ್ಚು ಮತ್ತು ಬೇರೊಂದು ಮಠ ಸ್ಥಾಪನೆಯ ಯೋಜನೆ, ಅಂಥವುಗಳ ತಯಾರಿಯಲ್ಲೇ ತಮ್ಮ ತಮ್ಮ ಅಜೆಂಡಾ ವಿಸ್ತರಣೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲು ಕಾದಿರುವ ಮಂದಿ ಮತ್ತು ಅವರೇ, ಅಂದರೆ ಈ ಎರಡೂ ಕಡೆಯ ಮಂದಿಯೇ ತಮಗೇ ತಿಳಿಯದ ಹಾಗೆ ಅದಕ್ಕೆ ಬಲಿಬೀಳುವುದು ಎಲ್ಲವೂ ಕತೆಗೆ ಅಗತ್ಯವಾದ ಸಂಕೀರ್ಣತೆಯನ್ನು ತಂದುಕೊಡುವಲ್ಲಿ ಸಫಲವಾಗಿದೆ. ನಡುವಲ್ಲಿ ನಿಂತಂತೆ ಕಾಣುವ ರಾಜೀವ ಗಾಯತೊಂಡೆ ಕೂಡ ಇಲ್ಲಿ ನಾಯಕನಲ್ಲ. ಒಂದು ರೀತಿ ಹಳ್ಳಿಗೆ ಬರುವ ಆದರ್ಶವಾದಿ ಪಟ್ಟಣಿಗನಂತೆ ಈ ರಾಜೀವ ಗಾಯತೊಂಡೆ ಓದುಗರ ಮನದಲ್ಲಿ ಮೂರ್ತಿಯಾಗುವ ಮೊದಲೇ ಅವನನ್ನೂ ಒಬ್ಬ ಸಾಧಾರಣ ಅವಕಾಶವಾದಿಯೆಂಬಂತೆ ಚಿತ್ರಿಸಿ, ಅದು ಅಳಸಿಹೋಗುವ ಮೊದಲೇ ಅವನನ್ನು ಮತ್ತೆ ಮೊದಲಿನ ಚಿತ್ರಕ್ಕೆ ತಂದಿರುವುದರಲ್ಲಿ ತುಂಬ ಔಚಿತ್ಯಕಾಣುತ್ತದೆ. ಈ ಪಾತ್ರ ಊರಿನ ಜಡ, ಚಲಿಸದ ನೀರಿನಂತಿದ್ದ ಜೀವಂತಿಕೆಗೆ ಚಲನೆಯನ್ನು ತರುವುದಂತೂ ಸತ್ಯ. ಹಾಗೆಯೇ ಇಲ್ಲಿನ ನಿಜವಾದ ಅಶ್ವಮೇಧದ 'ಕುದುರೆ' ಕೂಡಾ ಇವನೇ ಎಂಬುದೂ ಸತ್ಯ. ಕಥಾನಕದ ಕೊನೆಯಲ್ಲಿ ಬರುವ ಮಠದ ಸ್ವಾಮಿಯ 'ಸಾಮ್ರಾಜ್ಯ' ವಿಸ್ತರಣೆಯ ದಾಹ ಬ್ರಾಹ್ಮಣರ ದಾಹ ಕೂಡ ಆಗಿ ಅಶ್ವಮೇಧದ ತಯಾರಿ ಸುರುವಾದರೂ ಅಲ್ಲಿ ಪೂರ್ಣಾಹುತಿ ನಡೆಯುವುದಕ್ಕೂ ಮುನ್ನ ರಾಜೀವ ಗಾಯತೊಂಡೆಯ ವಧೆಯಾಗಬೇಕೆಂಬ ಸಂಚು ರೂಪುಗೊಂಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಮಠದ ಸಾಮ್ರಾಜ್ಯ ವಿಸ್ತರಣೆಯ ದಾಹ ಹೇಗೆ ಊರ ಬ್ರಾಹ್ಮಣ ಭೂಮಾಲೀಕರ ದಾಹ ಕೂಡಾ ಆಗಿತ್ತೆಂಬುದನ್ನೂ ಮತ್ತೆ ರಾಜೀವ ಗಾಯತೊಂಡೆ ಅದನ್ನು ಎದುರಿಸುವ ನೇರ ಮಾರ್ಗವನ್ನೂ ಕಾದಂಬರಿಕಾರರು ಬೀಜ ರೂಪದಲ್ಲಿ ಕೊಡಲು ಸುಬ್ರಾಯ ಹೆಗಡೆಯ ಕಪಾಳ ಮೋಕ್ಷದ ಪ್ರಕರಣವನ್ನು ಬಳಸಿಕೊಳ್ಳುತ್ತಾರೆ. ಇಡೀ ವ್ಯವಸ್ಥೆಯಲ್ಲಿ ಹೊಸತನ, ಬದಲಾವಣೆ ಮತ್ತು ಅಭಿವೃದ್ದಿಗಳನ್ನು ವಿರೋಧಿಸುವ ಒಂದು ಪಂಗಡ ಮತ್ತು ಅಂಥ ಪ್ರತಿರೋಧವನ್ನು ಮೆಟ್ಟಿನಿಂತು ಮುನ್ನೆಡೆವ ಛಾತಿ ಪ್ರದರ್ಶಿಸಲೇ ಬೇಕಾದ ಆದರೆ ತೀರ ದುರ್ಬಲವಾದ ಇನ್ನೊಂದು ಪಂಗಡ ಇಲ್ಲಿರುತ್ತ ಪರಿಸ್ಥಿತಿ ಅಂಥ ಒಂದು ಸಾಧ್ಯತೆಯನ್ನೇ ಅನುಮಾನಿಸುವಂತಿರುತ್ತದೆ. ರಾಮಾನಾಯ್ಕನಂಥವರ ನಾಯಕತ್ವದ ಗುರುತ್ವ ಅಡಗಿರುವುದು ಈ ಹಿನ್ನೆಲೆಯಲ್ಲಿ. ಪ್ರತಿರೋಧದ ಮೊದಲ ಸ್ವರ ಏಳುವುದಕ್ಕೆ ಸಜ್ಜುಗೊಂಡಿರುವ ಒಂದು ವಿಸ್ಫೋಟಕ ವಸ್ತುಸ್ಥಿತಿ ಮತ್ತು ಅದನ್ನು ಅನಿವಾರ್ಯಗೊಳಿಸುವಂಥ ಅದೇ ಸಮಾಜದ ಅಂತರ್ಗತವೂ ಸಂಘರ್ಷಕವೂ ಆದ ಅಂಶಗಳು ಅನೇಕ ಬಾರಿ ಯಾರ ಗಮನಕ್ಕೂ ಬರದೆ ಹೋಗುತ್ತವೆ. ಇದು ಒಂದು ಸಂಕ್ರಮಣದ ಘಟ್ಟ. ಅದು ರೂಪುಗೊಂಡ ಚರಿತ್ರೆ ಹಾಗಾಗಿ ಬಹಳ ಮುಖ್ಯ ಮತ್ತು ಯಾವ ಕಾರಣಕ್ಕೂ ಅವಜ್ಞೆಗೆ ತುತ್ತಾಗಬಾರದ ಸಂಗತಿ. ಕಾದಂಬರಿಯ ಗಮ್ಯ ಮತ್ತು ಮಹತ್ವ ಇರುವುದು ಇಲ್ಲಿ.

ರಾಮಾನಾಯ್ಕನ ಕುದುರೆ ಕಟ್ಟುವ ಕ್ರಿಯೆ ಹಲವಾರು ಸಂಗತಿಗಳನ್ನು ಧ್ವನಿಸುವುದು ಗಮನಾರ್ಹ. ಅಶ್ವಮೇಧದ ಕುದುರೆಯನ್ನು ಕಟ್ಟುವುದು ಸಾರ್ವಭೌಮತ್ವವನ್ನು ಪ್ರಶ್ನಿಸುವುದರ ಜೊತೆಜೊತೆಗೇನೆ ಕುದುರೆಗೆ ರಕ್ಷಣೆ ಕೊಡುವ ಕ್ರಿಯೆ ಕೂಡ. ಹಾಗಾಗಿಯೇ ವೈರಿಗಳ ಕೊಲೆಯ ಸಂಚಿಗೆ ಗುರಿಯಾಗಿರುವ ರಾಜೀವ ಗಾಯತೊಂಡೆಯನ್ನು ರಾಮಾನಾಯ್ಕ ರಕ್ಷಿಸಿಕೊಳ್ಳುವನೆ ಅಥವಾ ಅವನ ಸಾವು ಇಡೀ ಹೋರಾಟಕ್ಕೆ ನೀಡಬೇಕಾದ ಬಲಿಯಾಗುವುದೆ ಎಂಬ ಪ್ರಶ್ನೆಗಳು ಓದುಗನನ್ನು ಕಾಡುತ್ತ ಉಳಿಯುತ್ತವೆ.

ಫ್ಯೂಡಲ್ ಅನಿಸದ ಬ್ರಾಹ್ಮಣ ಭೂಮಾಲೀಕ ವರ್ಗ ನಡೆಸುತ್ತ ಬಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಶೋಷಣೆ ಅದರ ಒಟ್ಟಾರೆ ಸ್ವರೂಪ ಮತ್ತು ಅದರ ದೂರಗಾಮಿ ಪರಿಣಾಮಗಳು ಅಷ್ಟಾಗಿ ತಟ್ಟದಂತಿರುವ ಅಥವಾ ತಟ್ಟಿಯೂ ಅದರ ಅರಿವಿಲ್ಲದ ಈ ಪುಟ್ಟ ಹಳ್ಳಿಯಲ್ಲಿಯಂಥ ಹಳ್ಳಿಯಲ್ಲಿ ಚಲನೆ ಹೀಗೆಯೇ ಬರಬೇಕೆ, ನಮ್ಮ ಸಮುದಾಯಗಳು ಪರ ವಿರೋಧಿ ನೆಲೆಗಳನ್ನು ಮೀರಿ ನಡೆಯಬೇಕಾಗಿರುವಲ್ಲಿಯೂ ಯಾಕೆ ಸಣ್ಣತನ, ಭೇದ, ಹುನ್ನಾರುಗಳಿಂದ ಛಿದ್ರಗೊಳ್ಳುತ್ತವೆ ಮತ್ತು ಅದೆಲ್ಲದರಿಂದ ವಿನಾಶದ ಹಾದಿಯನ್ನು ತುಳಿಯುತ್ತವೆ ಎಂಬ ಬಹಳ ಪ್ರಸ್ತುತವೂ ಗಹನವೂ ಆದ ಪ್ರಶ್ನೆಗಳೆದುರು ನಮ್ಮನ್ನು ಕಾದಂಬರಿ ನಿಲ್ಲಿಸುವುದು ಕೂಡಾ ಈ ರಾಜೀವನ ಪಾತ್ರದ ಮೂಲಕವೇ. ಇಲ್ಲಿ ಕಾದಂಬರಿ ಸಮಕಾಲೀನ ಸಮಸ್ಯೆಯೊಂದಿಗೆ ಮೂಖಾಮುಖಿಯಾಗ ಬೇಕಾಗುತ್ತದೆ. ಕಾದಂಬರಿಯ ಕಾಲಮಾನದಲ್ಲಿ ಬಹಳ ಮುಖ್ಯವಾಗಿದ್ದ ಜಾತಿ ಸಮಸ್ಯೆಗೆ ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಮುಖಗಳಿದ್ದವೋ ಹಾಗೆಯೇ ಇವತ್ತಿನ ಕೋಮುವಾದಕ್ಕೂ ಈ ಬಗೆಯ ಸಂಕೀರ್ಣ ಸಮಸ್ಯೆಗಳ ಕೊಂಡಿ ಇದ್ದೇ ಇದೆ. ಇವೆರಡೂ ಪ್ರಶ್ನೆಗಳು ಏಕಕಾಲಕ್ಕೆ ಭಿನ್ನ ಬಗೆಯ ನಿಲುವನ್ನು ನಮ್ಮ ಜಾತೀವಾದಿಗಳಲ್ಲೂ ಕೋಮುವಾದಿಗಳಲ್ಲೂ ತರುತ್ತಿರುವುದು ಕುತೂಹಲಕರ. ಆದರೆ ಕಾದಂಬರಿಯಲ್ಲೇ ಬರುವ ಚರ್ಚಿನವರ ಶಾಲೆ ಇಂಥ ಯಾವುದೇ ಪ್ರಶ್ನೆಗಳ ಎದುರು ನಿಲ್ಲುವುದಿಲ್ಲ. ದೇವಸ್ಥಾನಗಳು, ಮಠ ಸ್ಥಾಪನೆ ಮುಂತಾದ ಕ್ರಿಯೆಯಲ್ಲಿ ಇರುವ ಆರ್ಥಿಕ, ರಾಜಕೀಯ ಒಳ ಉದ್ದೇಶಗಳೇ ಇಲ್ಲಿ ಶಾಲೆಯೊಂದಿಗೆ ಬರುವ ಚರ್ಚು ಅಥವಾ ಚರ್ಚಿನೊಂದಿಗೆ ಬರುವ ಶಾಲೆಗೂ ಇರುವುದನ್ನು ಕಾದಂಬರಿ ಪ್ರಶ್ನಿಸದೇ ಬಿಟ್ಟಂತಿದೆ. ಅದಕ್ಕೆ ಆ ಕಾಲ ಎಷ್ಟು ಕಾರಣವೋ ಕಾದಂಬರಿಕಾರರ ಕೃತಿನಿಷ್ಠ ನಿಲುವು ಕೂಡಾ ಅಷ್ಟೇ ಕಾರಣವಿರಬಹುದೇ? ಯಾಕೆಂದರೆ ಅಶೋಕರು ಇಲ್ಲಿ ಶಾಲೆಯೊಂದಿಗೇ ಚರ್ಚು ಕೂಡಾ ಬರುವುದನ್ನು ಗಮನಿಸಿದ್ದಾರೆ!

ಜಾತಿಯ ನೆಲೆಯಲ್ಲಿ ಹುಟ್ಟುವ ಸಂಘರ್ಷಗಳು ಧರ್ಮದ ನೆಲೆಯ ಪ್ರಶ್ನೆಗಳ ಎದುರು ಹೆಚ್ಚು ಸಂಕೀರ್ಣವೂ, ವೈರುಧ್ಯಮಯ ನಿಲುವಿಗೆ ಕಾರಣವಾಗುವಂಥದ್ದೂ ಆಗಿರುತ್ತ, ಪ್ರಸ್ತುತ ಸಮಕಾಲೀನ ಜಗತ್ತಿನಲ್ಲೇ ವರ್ಗ ಸಂಘರ್ಷ ಮತ್ತು ಜಾತೀವಾರು ಸಂಘರ್ಷಗಳು ಈ ಧಾರ್ಮಿಕ ನೆಲೆಯಲ್ಲಿ ಪಡೆದುಕೊಳ್ಳುತ್ತಿರುವ ವಿಚಿತ್ರ ನೆಲೆಗಳನ್ನು ನಾವು ಪ್ರತಿನಿತ್ಯ ಕಾಣುತ್ತಿರುವಾಗಲೂ (ಉದಾ: ಕನಕ ಗೋಪುರದ ವಿಚಾರದಲ್ಲಿ ನಮ್ಮ ಕುರುಬರು ಮತ್ತು ಉಡುಪಿಯ ವೈದಿಕ ಬ್ರಾಹ್ಮಣರು ತಳೆಯುವ ನಿಲುವು ಮತ್ತು ಧೋರಣೆಗಳು ಆಂತರಿಕ ಭಿನ್ನತೆಯಿಂದ ಇರುತ್ತ ಹಿಂದೂ ಮುಸ್ಲಿಂ ಪ್ರಶ್ನೆಯ ಎದುರು ಎರಡೂ ವರ್ಗದವರಲ್ಲಿ ಅದು ತಳೆಯುವ ರೂಪಾಂತರ; ಅಮೆರಿಕದ ಆಕ್ರಮಣಕಾರೀ ಧೋರಣೆಯ ಬಗ್ಗೆ ಸಾಮಾನ್ಯವಾಗಿ ಸಿಗುವ ಮುಸ್ಲಿಂ ವಿರೋಧಿ ಸಮರ್ಥನೆ ಮತ್ತು ಅಮೆರಿಕದಿಂದ ಅಂಥದೇ ಆಕ್ರಮಣವನ್ನು ಎದುರಿಸುತ್ತಿರುವ ಕೆಲವು ಕರಿಯ ಮತ್ತು ತೈಲ ಉತ್ಪಾದಿಸುತ್ತಿರುವ ರಾಷ್ಟ್ರಗಳ ಸಂದರ್ಭದಲ್ಲಿ ಅದು ಪಡೆಯುತ್ತಿರುವ ವಿರೋಧ ಇತ್ಯಾದಿ) ಅಂಥ ಸಂದರ್ಭಗಳೆದುರು ಕಾದಂಬರಿ ಕಾಲಾತೀತವಾಗಲಾರದ ನಿಷ್ಠುರತೆಯನ್ನೂ ಬದ್ಧತೆಯನ್ನೂ ಕಾಪಾಡಿಕೊಂಡು ಬಂದಿರುವುದು ಕೃತಿಯ ಹೆಚ್ಚುಗಾರಿಕೆಯನ್ನಾಗಿಯೂ ಮಿತಿಯನ್ನಾಗಿಯೂ ಕಾಣುವುದು ಸಾಧ್ಯವಿದೆ. ಕೃತಿಯ ಸಮಕಾಲೀನತೆಯ ಪ್ರಶ್ನೆಯನ್ನು ಚರ್ಚಿಸುವಾಗ ಕೃತಿ, ಕೃತಿಯ ಕಾಲಮಾನಕ್ಕೆ ಸಮಕಾಲೀನವಾಗಿರಬೇಕೆ, ಓದುಗನ ಓದಿನ ಕಾಲಕ್ಕೆ (ಅಥವಾ ಅದು ಪ್ರಕಟವಾದ ಕಾಲಕ್ಕೆ) ಸಮಕಾಲೀನವಾಗಿರಬೇಕೆ ಎನ್ನುವ ಪ್ರಶ್ನೆ ಇದೆ. ಈ ಪ್ರಶ್ನೆಯನ್ನು ಇವತ್ತು ಪ್ರಕಟವಾಗುತ್ತಿರುವ ಇತರ ಕಾದಂಬರಿ, ಸಣ್ಣಕತೆಗಳನ್ನು ಗಮನದಲ್ಲಿಟ್ಟುಕೊಂಡು ನೋಡುವಾಗ ಇನ್ನೂ ಕೆಲವು ಹೊಸ ಆಯಾಮಗಳೂ ನಮ್ಮ ಚಿಂತನೆಗೆ ಒದಗಿ ಬರಬಹುದಾಗಿದೆ. ಇವತ್ತು ಕಾರಂತರಾದಿಯಾಗಿ ಅಡಿಗರ, ಶಾಂತಿನಾಥ ದೇಸಾಯರ ಕಾದಂಬರಿಗಳು ಮತ್ತೆ ಮುದ್ರಣಗೊಳ್ಳುತ್ತಿವೆ. ಹಿಂದೆಂದಿಗಿಂತ ಹೆಚ್ಚಾಗಿ ಹಲವಾರು ಪ್ರಮುಖ ಅನ್ಯಭಾಷಾ ಕೃತಿಗಳು ಕನ್ನಡಕ್ಕೆ ಬರುತ್ತಿವೆ. ಆತ್ಮ ಚರಿತ್ರೆಗಳು, ಜೀವನ ಚರಿತ್ರೆಗಳು ಹೆಚ್ಚು ಹೆಚ್ಚಾಗಿ ಅಚ್ಚಾಗುತ್ತಿವೆ. ತೇಜಸ್ವಿ(ಮಾಯಾಲೋಕ), ಕೆ ಸತ್ಯನಾರಾಯಣ (ಕಾಲಜಿಂಕೆ), ಕುಸುಮಾಕರ ದೇವರಗೆಣ್ಣೂರು (ಬಯಲ ಬಸಿರು), ಬಾಳಾಸಾಹೇಬ ಲೋಕಾಪುರ(ಉಧೋಉಧೋ), ಚಂದ್ರಕಾಂತ ಕುಸನೂರು (ಕೆರೂರುನಾಮಾ), ವಿವೇಕ ಶಾನಭಾಗ(ಇನ್ನೂಒಂದು ಮತ್ತು ಒಂದು ಬದಿ ಕಡಲು), ಶ್ರೀನಿವಾಸ ವೈದ್ಯ (ಹಳ್ಳ ಬಂತು ಹಳ್ಳ), ಎಸ್ ಸುರೇಂದ್ರನಾಥ್ (ಎನ್ನ ಭವದ ಕೇಡು) ಮುಂತಾಗಿ ವಿಭಿನ್ನವೂ ವಿಶಿಷ್ಟವೂ ಆದ ಕೆಲವು ಮಹತ್ವದ ಕಾದಂಬರಿಗಳು ಹೊಸದಾಗಿ ನಮ್ಮೆದುರಿಗಿವೆ.

ಹೊಸ ಕಾದಂಬರಿಗಳನ್ನಷ್ಟೇ ಗಮನಿಸಿದರೂ ಪ್ರಸ್ತುತ ಕನ್ನಡ ಕಾದಂಬರೀ ಲೋಕ ಏಕಕಾಲಕ್ಕೆ ಮುವ್ವತ್ತು ನಲವತ್ತು ವರ್ಷಗಳಷ್ಟು ಹಿಂದಕ್ಕೂ ವರ್ತಮಾನಕ್ಕೂ ತುಯ್ಯುವ ಜಾಯಮಾನ ಹೊಂದಿರುವುದು ಕಾಣಿಸುತ್ತದೆ. ಈ ಹಿನ್ನೆಲೆಯಲ್ಲೂ ನಾವು ಸಮಕಾಲೀನ ಪ್ರಶ್ನೆ ಎತ್ತುವಾಗ ಏನನ್ನು ಧ್ವನಿಸುತ್ತಿದ್ದೇವೆ ಅಥವಾ ನಿರೀಕ್ಷಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ಬಹಳ ಮುಖ್ಯ.

ಇಡೀ ಕಾದಂಬರಿಯ ಆಶಯ ಕರ್ನಾಟಕದ ಮತ್ತು ಅದರಂತೆ ದೇಶದ ಉಳಿದ ಅನೇಕ ಭಾಗಗಳಿಂದ ಸರಿಸುಮಾರು ಇದೇ ಕಾಲಘಟ್ಟದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಅಸ್ಪೃಶ್ಯ ಮತ್ತು ಅರೆ ಅಸ್ಪೃಶ್ಯ ಕೆಳವರ್ಗದಿಂದ ನಾಯಕರಾಗಿ ಹೊರಹೊಮ್ಮಿದ ಕೆಲವರ ದಿಟ್ಟತನ ಪ್ರಕಟಗೊಂಡ ಸಂದರ್ಭ ಮತ್ತು ಅದರ ಸಂದಿಗ್ಧಗಳನ್ನು ದಾಖಲಿಸುವುದೇ ಆಗಿತ್ತು ಅನಿಸುತ್ತದೆ. ಇದೇ ಅರ್ಥದಲ್ಲಿ ಇಲ್ಲಿನ ನಿರ್ಮಲೆ ಮತ್ತು ಕೃಷ್ಣನ ಪ್ರೇಮ(?) ಪ್ರಕರಣವನ್ನು ನೋಡುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ನಿರ್ಮಲೆಯ ನಿರ್ಧಾರಗಳು ತೀರ ಅಪಕ್ವ ಎನಿಸುತ್ತವೆ. ಅವಳು ತನ್ನ ತಪ್ಪುಗಳನ್ನು ಗುರುತಿಸಿಕೊಳ್ಳುವಲ್ಲಿ ಮತ್ತು ಅದರಿಂದಾದ ವಿಪರೀತ ಪರಿಣಾಮಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವಿಫಲಳಾಗುತ್ತಾಳೆ ಮಾತ್ರವಲ್ಲ ಈ ಪಾತ್ರದ ನಡೆ ಕಾದಂಬರಿಕಾರರ ನಿಯಂತ್ರಣದಿಂದ ಹೊರಗೆ ಸ್ವತಂತ್ರವಾಗಿತ್ತು ಎಂದು ಕೂಡ ಮನಸ್ಸು ಒಪ್ಪುವುದಿಲ್ಲ.

ತನ್ನ ಮನೆಗೆಲಸದ ಕೃಷ್ಣನೊಂದಿಗೆ ನಿರ್ಮಲೆಯದು ಬಾಲ್ಯದಿಂದಾರಂಭವಾದ ಸಖ್ಯ. ಅವಳು ತಾಲೋಕಿನಲ್ಲೆಲ್ಲಾ ಸಂಪ್ರದಾಯಸ್ಥ ಕುಟುಂಬದವರೆಂದು ಹೆಸರಾದ ಗಣೇಶ ಹೆಗಡೆಯವರ ಮಗಳಾದರೆ ಅವನು ಅಸ್ಪೃಶ್ಯ. ಶುದ್ಧಾಚಾರಕ್ಕೆ ತನ್ನ ಬಟ್ಟೆ ಬಿಚ್ಚಿಟ್ಟು ಅವಳೊಂದಿಗೆ ಆಡಿ ಬೆಳೆದ ಅವನಿಗೆ ಮುಂದೆ ತನ್ನನ್ನು ಪ್ರೇಮಿಸಿ, ಮದುವೆಯ ದಿನದಂದು ಕದ್ದು ಓಡಿ ಬಂದು ಸಂಸಾರ ಹೂಡುವ ಧೈರ್ಯ ಮಾಡಿದ ಇದೇ ನಿರ್ಮಲೆ ತನ್ನೆದುರು ಬೆತ್ತಲಾದಾಗ ಅವಳನ್ನು ಎದುರಿಸುವುದು ಸಾಧ್ಯವಾಗುವುದಿಲ್ಲ. ಪ್ರೇಮದಿಂದ ತನ್ನ ಹಿಂದೆ ಬಂದು ಇದೀಗ ಬೆತ್ತಲಾಗಿ ತನ್ನೆದುರು ನಿಂತು ಆಹ್ವಾನಿಸುತ್ತಿರುವ ನಿರ್ಮಲೆಯೆದುರು ಭಕ್ತಿಭಾವದಿಂದ ಗುಡ್ದೆಯಾಗಿ ಬೀಳುವ ಕೃಷ್ಣನಲ್ಲಿ ಮೈಲಿಗೆ ಮಾಡಿದೆ ಎನ್ನುವ ತಪ್ಪಿನ ಅನಿಸಿಕೆ ಹುಟ್ಟುಹಾಕಿದ್ದು ಬೇರೇನಲ್ಲ, ಶತಶತಮಾನದ ಪರಂಪರಾನುಗತ ಸ್ವೀಕೃತ ಮೌಲ್ಯಗಳಾದ ಹಿಂಜರಿಕೆ, ಭಯ, ಹೇಡಿತನ. ಇದನ್ನೇ ರಾಮಾನಾಯ್ಕ ಮುಂದೆ ಮೀರಲಿರುವುದು. ರಾಮಾನಾಯ್ಕನ ನಿಜವಾದ ಲಂಘನದ ಪ್ರಾಮುಖ್ಯತೆ ಇರುವುದೇ ಇಲ್ಲಿ. ಕಾದಂಬರಿಯಲ್ಲಿ ಮುಂದೆಂದೂ ಕಾಣಬರದ ಕೃಷ್ಣ ರಾಮಾನಾಯ್ಕನ ಪೂರ್ವಾಶ್ರಮದಂತೆ ಗೋಚರವಾಗುತ್ತಾನೆ ಮತ್ತು ಕಾದಂಬರಿ ರಾಮಾನಾಯ್ಕನ ಆಂತರಿಕ ವಿಕಾಸದ ಹೆಜ್ಜೆಗುರುತುಗಳನ್ನು ಇಲ್ಲಿಂದಲೇ ದಾಖಲಿಸುತ್ತದೆ, ಸುಪ್ತವಾಗಿ.

ಆದರೆ ನಿರ್ಮಲೆ ಕಾದಂಬರಿಯ ಉದ್ದಕ್ಕೂ ತರ್ಕಾತೀತವೆನಿಸುವ ನಡೆಯನ್ನೇ ತೋರುತ್ತಾಳೆ. ನಿರ್ಮಲೆಯ ಒಂದು ದುಡುಕಿನದ್ದಾಗಿಯೇ ಕಾಣುವ ನಿರ್ಧಾರ ಕೃಷ್ಣನ ಮತ್ತು ಅವನ ತಾಯಿಯ ಬದುಕನ್ನು ಗಣೇಶ ಹೆಗಡೆಯ ಬದುಕಿನೊಂದಿಗೇ ದುರಂತಕ್ಕೆ ತಳ್ಳುತ್ತದೆ. ಇಷ್ಟೆಲ್ಲ ಆದ ಮೇಲೂ ನಿರ್ಮಲೆ ಮತ್ತೆ ಊರಿಗೇ ಬರುವುದು ವಿಚಿತ್ರ ಎನಿಸುತ್ತದೆ. ಆದರೆ ಕತೆಯ ದೃಷ್ಟಿಯಿಂದ ಅವಳ ಪುನರಾಗಮನ ಅನಿವಾರ್ಯ. ಮನೋಭ್ರಾಂತಿಗೆ ಒಳಗಾದ ಅಪ್ಪ 'ನೀನು ಬೆಳ್ಳಿ' ಎಂದದ್ದೇ ಅದನ್ನು ಒಪ್ಪಿಕೊಳ್ಳುವ ಅವಳು ಕೃಷ್ಣನ ತಾಯಿ ದೇವಿಯೊಂದಿಗೇ ನೆಲೆಸುತ್ತಾಳೆ. ಅಂದರೆ ಆಗಲೂ ಅವಳು ಕೃಷ್ಣನ ಕುರಿತು ತಾನು ತನ್ನಷ್ಟಕ್ಕೇ ಕಟ್ಟಿಕೊಂಡ ಒಂದು ಭ್ರಾಂತಿಯಿಂದ ಮುಕ್ತಳಾಗುವುದಿಲ್ಲ. ಮುಕ್ತಿ ಸಿಗದಂತೆ ಸ್ವತಃ ಅವಳೇ ಇದ್ದಳು ಮತ್ತು ಹಾಗಿರು ಎಂದು ಅವಳ ಸನಾತನಿ ಅಪ್ಪ ನೀಡಿದ ನಿರ್ದೇಶವನ್ನು ಪ್ರಶ್ನಿಸದೇ ಒಪ್ಪಿಕೊಂಡು ಬಿಡುವುದಕ್ಕೆ ಅದೇ ಅವಳನ್ನು ಪ್ರೇರೇಪಿಸಿತು ಎಂದು ನಾವು ತಿಳಿಯಬೇಕಾಗುತ್ತದೆ. ಅದೇ ರೀತಿ ಗಣೇಶ ಹೆಗಡೆ ಅರೆ ಭ್ರಾಂತಿಯಲ್ಲಿರುವಾಗ ಆತ ಹಾಗಿರುವುದೇ ಸರಿ ಎಂದು ಅವಳನ್ನೂ ಸೇರಿ ಊರವರೆಲ್ಲ ತಿಳಿದುಕೊಂಡಂತೆ ವರ್ತಿಸುತ್ತಾರೆ. ಇದು ಅವಳಲ್ಲಿ ಅದುವರೆಗೆ ಕಾಣಬರುವ ಕ್ರಾಂತಿಕಾರಕ ನಿಲುವನ್ನು ಪೇಲವಗೊಳಿಸುತ್ತದೆ. ಅವಳು ಬೆಳ್ಳಿಯಾಗಿ ಶೂದ್ರರ ಕೇರಿಯಲ್ಲಿ ನೆಲೆಯಾಗುವುದಾಗಲೀ, ಮತ್ತೆ ನಿರ್ಮಲೆಯಾಗಿ ಬ್ರಾಹ್ಮಣರ ಕೇರಿಗೆ ಶೂದ್ರಳ ಸಹಿತವಾಗಿ ಬಂದು ನೆಲೆ ನಿಲ್ಲುವುದಾಗಲೀ ಅಂತಹುದಕ್ಕೆ ವಿರೋಧವಿದೆ ಎಂಬ ಕಾರಣಕ್ಕೇ (ಕೊಟ್ಟ) ಮಾಡಿದ ನಡೆ ಎನಿಸುತ್ತದೆಯೇ ಹೊರತು ಅಂಥ ನಿರ್ಧಾರಗಳ ಹಿಂದೆ ನಿರ್ಮಲೆಯ ಪ್ರಜ್ಞಾಪೂರ್ವಕ ಸಿದ್ಧಾಂತ ಒಂದಿದೆ ಅನಿಸುವುದೇ ಇಲ್ಲ. ಇದ್ದಿದ್ದರೆ ಯಾಕೆ ಅವಳು ಅದೇ ಕ್ರಿಯೆಯನ್ನು ಗಣೇಶ ಹೆಗಡೆ ಸಾಯುವ ಮೊದಲೇ ಮಾಡುವುದಿಲ್ಲ ಎಂಬ ಪ್ರಶ್ನೆಯೂ ಇದೆ. ಸರಳ ಉತ್ತರ ತಂದೆಯ ಕೈಯಲ್ಲಿದ್ದ ಬೆಣ್ಣೆ ಹೂವಿನ ಎಸಳು ಅವಳನ್ನು ಕ್ಷಮಿಸಿದ್ದರ ಪ್ರತೀಕವಾಗಿರುವುದರಿಂದ ಅವಳಿಗೆ ಆ ಧೈರ್ಯ ಬಂತು ಎಂಬುದಾದರೂ ಆಕೆ ಅತ್ತ ಸನಾತನಿಯೂ ಅಲ್ಲದ ಇತ್ತ ವೈಚಾರಿಕ ಸ್ಪರ್ಶವೂ ಇಲ್ಲದ ಪಾತ್ರವಾಗಿಯೆ ಉಳಿಯುತ್ತಾಳೆ. ಮುಂದೆಲ್ಲೋ ಅವಳ ಮತ್ತು ಅವಳ ತಂದೆಯ ಭ್ರಮೆಗಳು ಒಟ್ಟಿಗೇ ಹರಿದಂತೆ ಕಂಡರೂ ಅದಕ್ಕೂ ತಾರ್ಕಿಕ ನೆಲೆ ಇಲ್ಲ. ರಾಜೀವ ಗಾಯತೊಂಡೆಯಿಂದ ನಿರ್ಮಲೆಗೆ ಅದು ಬಂತೆ? ಗಣೇಶ ಹೆಗಡೆಗೆ ಎಲ್ಲಿಂದ ಬಂತು ಎನ್ನುವುದಕ್ಕೆ ಉತ್ತರವಿಲ್ಲ. ಈ ಎಲ್ಲ ಕಾರಣಗಳಿಂದ ಅವಳ ಇಡೀ ವ್ಯಕ್ತಿತ್ವವನ್ನು ಗ್ರಹಿಸಿದ ಬಳಿಕವಂತೂ ಅವಳ ಪ್ರೇಮ ಮತ್ತು ಅನಂತರದ ಎಲ್ಲ ನಡೆಗಳು ಕಾಣಿಸಬಹುದಾಗಿದ್ದ ಕ್ರಾಂತಿಕಾರಕತೆಯ ವಿಚಾರದಲ್ಲಿ ಸೋಲುತ್ತದೆ. ಹಾಗಿದ್ದೂ ಈ ಕಾದಂಬರಿ ಕೇವಲ ಒಂದು ಸಾಮಾಜಿಕ ಕ್ರಾಂತಿ ಅಥವಾ ಪರಿವರ್ತನೆಯ ದಾಖಲೆಯಾಗದೆ ತನ್ನ ಸಂದರ್ಭ ಮತ್ತು ಪರಿಸರದಲ್ಲಿ ಸಾಧ್ಯವಿರಬಹುದಾದ ಅನನ್ಯ ಸ್ವಾಭಾವಿಕತೆಯನ್ನು ಪಡೆದುಕೊಂಡು ಕಲಾಕೃತಿಯಾಗುವುದಕ್ಕೆ ಕಾರಣವಾದ ಸಂಗತಿಗಳು ಇಂಥವೇ ಆಗಿವೆ! ನಿರ್ಮಲೆಯ ನಡೆಯನ್ನು ನಮ್ಮ ನಿರೀಕ್ಷೆಗಳ ಮಾನದಂಡಗಳಿಂದ ನಿರ್ದೇಶಿಸದೆ ನೋಡಿದಾಗ ಇದು ನಮಗೆ ಗೋಚರವಾಗದಿರದು.

ತನ್ನ ಮಗಳು ಅಸ್ಪೃಶ್ಯ ಮನೆಗೆಲಸದವಳ ಮಗನೊಂದಿಗೆ ಮದುವೆಯ ದಿನವೇ ಓಡಿ ಹೋದುದು ಅರಿವಿಗಿಳಿಯುತ್ತಲೇ ಅರೆಹುಚ್ಚನಂತಾಗುವ ಗಣೇಶ ಹೆಗಡೆ ಧಾರ್ಮಿಕ ಜಿಜ್ಞಾಸೆಗೆ ತೊಡಗುವುದಾಗಲೀ ತನಗಿರುವ ಆರ್ಥಿಕ, ರಾಜಕೀಯ ಗುರುತ್ವಗಳನ್ನು ಬಳಸಿಕೊಂಡು ದಲಿತನನ್ನು ಕೊಚ್ಚಿಹಾಕುವ ಹೆಜ್ಜೆ ಇಡುವ ಪ್ರಮೇಯವಾಗಲೀ ಬರುವುದೇ ಇಲ್ಲ. ಆದರೆ ಇದೆಲ್ಲಕ್ಕಿಂತ ಹೆಚ್ಚಿನದನ್ನು ಈ ಪಾತ್ರದ ಮೂಲಕ ಅಶೋಕರು ಆಗಗೊಡುವುದನ್ನು ಗಮನಿಸಬೇಕು. ಅದು, ತಾನು ನೆಚ್ಚಿ ಓಡಿ ಹೋದ ಕೃಷ್ಣನಿಂದ ಏನನ್ನೂ ಪಡೆಯಲಾರದ ನಿರ್ಮಲೆ ಮತ್ತೆ ಊರಿಗೇ ಹಿಂದಿರುಗಿ ಬಂದ ಸಂದರ್ಭದಲ್ಲಿ ಈ ಗಣೇಶ ಹೆಗಡೆ ಮತ್ತು ಊರಿನ ಹತ್ತು ಸಮಸ್ತರು (ಬ್ರಾಹ್ಮಣರೇ ಎಂದು ಹೇಳಬೇಕಾದ್ದಿಲ್ಲ ಅನಿಸುತ್ತದೆ) ಅವಳನ್ನು ಎದುರಿಸುವ ರೀತಿ. ಗಣೇಶ ಹೆಗಡೆ ನಿರ್ಮಲೆಯನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಸಂದರ್ಭ ಒಂದು. ಊರಿನ ಇತರ ಪ್ರಭಾವೀ ಬ್ರಾಹ್ಮಣರಿಗೆ ಇದು ಕೇವಲ ಗಣೇಶ ಹೆಗಡೆಯವರ ತೋಟದ ಪ್ರಶ್ನೆಯಾಗಿ ಮಾತ್ರ ಕಾಡುವುದು ಇನ್ನೊಂದು. ಇವೆರಡರ ನಡುವೆ ಒಂದಕ್ಕೊಂದು ಸಂಬಂಧ ಇದೆ. ಗಣೇಶ ಹೆಗಡೆಯ ಅರೆ ಹುಚ್ಚು ನಿಗೂಢವಾಗುವುದು ಇಂಥಲ್ಲೇ. ಇಂಥ ಇನ್ನೊಂದು ಸಂದರ್ಭ, ಸಾಯುವ ಮುನ್ನ ಆತ ನಿರ್ಮಲೆಯ ಕೈಗೆ ಕೊಡಲೆಂದೇ ಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಬೆಣ್ಣೆ ಹೂವು. ಮಗಳನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಗಣೇಶ ಹೆಗಡೆಗೆ ತನ್ನ ಮಗಳು ನಿರ್ಮಲೆಗೆ ಬೆಣ್ಣೆ ಹೂವೆಂದರೆ ಪಂಚಪ್ರಾಣ ಎಂಬುದು ತಿಳಿದಿತ್ತು! ತನ್ನ ದೇಶ ಕಾಲದ ಪರಿಮಿತಿಯಲ್ಲಿ ಸನಾತನಿಯಾದ, ಬ್ರಾಹ್ಮಣನಾದ ಮತ್ತು ಮನುಷ್ಯನೂ ಆದ ಗಣೇಶ ಹೆಗಡೆ ವರ್ತಿಸುವ ರೀತಿ ಎಷ್ಟು ಸೂಕ್ಷ್ಮವಾಗಿದೆ, ಅರ್ಥಪೂರ್ಣವಾಗಿದೆ ಎಂಬುದನ್ನು ಗಮನಿಸಿದರೆ ಗಣೇಶ ಹೆಗಡೆಯ ಈ ಅರೆಹುಚ್ಚಿಗೆ ಬೇರೆಯೇ ಒಂದು ಅರ್ಥಪರಂಪರೆ ಇದ್ದಿರಬಹುದಾದ ಸಾಧ್ಯತೆ ನಮಗೆ ಗೋಚರಿಸದೇ ಇರುವುದಿಲ್ಲ. ಬ್ರಾಹ್ಮಣ ಸನಾತನಿಗಳ ಕ್ರೌರ್ಯದಿಂದ ಗಣೇಶ ಹೆಗಡೆ ತನ್ನನ್ನು ಮತ್ತು ತನ್ನ ಮಗಳನ್ನು ರಕ್ಷಿಸಲು ಹೀಗೆ ಮಾಡಿರಬಹುದೆ? ಅದು ನಿರ್ಮಲೆಗೂ ಸ್ಪಷ್ಟವಾಗಿ ಅಲ್ಲದಿದ್ದರೂ ಸುಪ್ತವಾಗಿಯಾದರೂ ತತ್ಕಾಲಕ್ಕೆ ಸರಿಯಾದ ನಡೆ ಅನಿಸಿರಬಹುದೆ?

ಕಾದಂಬರಿಯಲ್ಲಿ ತುಂಬ ಇಷ್ಟವಾಗುವುದು ಖಾಸಿಂ ಸಾಬಿಯ ಕತೆ. ತೇಜಸ್ವಿಯವರ, ಕುವೆಂಪುರವರ ಕಾದಂಬರಿಯೊಂದರ ಪಾತ್ರ ಧುತ್ತನೆ ಇಲ್ಲಿ ಎದುರಾದಂತೆ ಅನಿಸಿದರೆ ಅಚ್ಚರಿಯಿಲ್ಲ. ಕಾದಂಬರಿಯ ಕತೆಗೆ ಒಂದು ಓಟ ಮತ್ತು ಲಾಲಿತ್ಯ ಒದಗುವುದೇ ಈ ಪಾತ್ರ ಬಂದ ನಂತರ. ಅಲ್ಲಿಯ ತನಕ ಕಾದಂಬರಿಯಲ್ಲಿ ಕತೆ ತೊಡಗುವುದು ತೀರ ನಿಧಾನ ಅನಿಸುತ್ತಿರುತ್ತದೆ. ಊರಿನ ವಿವರಗಳು, ಜಾತ್ರೆಯ ನಡಾವಳಿಯ ವಿವರಗಳು, ಅಲ್ಲಿನ ಮಂದಿಯ ಕುರಿತಾದ ವಿವರಗಳು ಕತೆಯ ನಿರೀಕ್ಷೆಯಲ್ಲಿರುವ ಓದುಗರಿಗೆ ಕೊಂಚ ಭಾರ ಅನಿಸಿದರೆ ಅಚ್ಚರಿಯಿಲ್ಲ. ಯಾಕೆಂದರೆ ಕತೆಯ ಒಂದು ನಡೆ, ಗೊತ್ತು, ಗುರಿಗಳ ಹೊಳಹು ಕೂಡಾ ಅಲ್ಲಿಯ ತನಕ ನಮಗೆ ಸಿಗುವುದಿಲ್ಲವಾಗಿ, ಅಷ್ಟು ಹೊತ್ತಿಗೆ ಓದುಗನನ್ನು ಮುಂದಿನ ಓದಿಗೆ ಹಿಡಿದಿಟ್ಟುಕೊಳ್ಳಲು ಬೇಕಾದ ಅಂಶಗಳ ಕೊರತೆ ಕಾಣಿಸುತ್ತದೆ. ಆದರೆ ಸಾಬಿಯ ಪ್ರವರಗಳೆಲ್ಲ ಕತೆಯ ಮೂಲ ಎಳೆಗೆ ಹೊರಗಿನದಾಗಿ ನಿಂತರೂ ಕಾದಂಬರಿಯನ್ನು ಆಪ್ತವಾಗಿಸಿಬಿಡುವ ಕಸು ಹೊಂದಿದೆ.

ರಾಮಾನಾಯ್ಕ ಊರ ಬ್ರಾಹ್ಮಣರಿಗೆ ಸೆಡ್ಡು ಹೊಡೆದು ನಿಲ್ಲುವ ನಿರ್ಧಾರಕ್ಕೆ ಬರಲು ಸಹ ರಾಜೀವ ಗಾಯತೊಂಡೆ, ಕ್ರೈಸ್ತ ಪಾದರಿಗಳ ಪರೋಕ್ಷ ಬೆಂಬಲವೇ ಕಾರಣವೆನಿಸಿದರೂ ಅಂಥ ಒಂದು ನಡೆಗೆ ಬೇಕಾದ ಎಲ್ಲ ಮೂಲದ್ರವ್ಯವೂ ರಾಮಾನಾಯ್ಕನಲ್ಲಿತ್ತು ಮತ್ತು ಅವನ ಪರಿಸರದಿಂದಲೇ ಅವನದನ್ನು ಪಡೆದುಕೊಂಡಿದ್ದ ಎಂಬುದನ್ನು ಕಾದಂಬರಿ ಅದ್ಬುತವಾಗಿ ಚಿತ್ರಿಸಿದೆ. ನಿಜವಾದ ಕತೆ ತೊಡಗುವುದು ಇಲ್ಲಿಂದಲೇ ಎನ್ನಬಹುದೇನೊ.

ಅಷ್ಟೇ ಗಮನ ಸೆಳೆಯುವ ಇನ್ನೊಂದು ಅಂಶವೂ ಈ ಕಾದಂಬರಿಯ ಹೆಚ್ಚುಗಾರಿಕೆ ಎನ್ನಬೇಕು. ಅದು ಅಶೋಕರು ಇಡೀ ಕಾದಂಬರಿಯಲ್ಲಿ ಕಾಲಮಾನವನ್ನು, ವಯೋಮಾನವನ್ನು ಮತ್ತು ದೇಶಮಾನವನ್ನು (ಸ್ಥಳ, ಸನ್ನಿವೇಶ ಅಥವಾ ಪರಿಸರ) ಬಳಸಿಕೊಳ್ಳುವ ರೀತಿ. ಇಲ್ಲಿ ಕೆಲವೊಂದು ಘಟನೆಗಳು ಇಬ್ಬನಿ ಮುಸುಕಿದ ಮುಂಜಾನೆಯ ಮಬ್ಬಿನಲ್ಲಿ ನಡೆಯುತ್ತವೆ. ಇನ್ನು ಕೆಲವು ಬಿಸಿಲೇರಿದ ಪೂರ್ವಾಹ್ನ. ಮತ್ತೆ ಕೆಲವು ಮಟಮಟ ಮಧ್ಯಾಹ್ನದ ರಣರಣ ಬಿಸಿಲಿನಲ್ಲಿ. ಇಳಿಹೊತ್ತಿನಲ್ಲಿ ಮುಸ್ಸಂಜೆಗೂ ಮುನ್ನ ಕೆಲವು ನಡೆದರೆ ತೀರ ಮುಸ್ಸಂಜೆಯ ಚಿತ್ರಗಳು ಇನ್ನು ಕೆಲವು. ರಾತ್ರಿ ಕವಿಯುವ ಮುನ್ನ ಇನ್ನು ಕೆಲವು ನಡುರಾತ್ರಿಯಲ್ಲಿ ನಡೆಯುವ ಸಂಗತಿಗಳು ಉಳಿದ ಒಂದಷ್ಟು. ಅಷ್ಟೇ ಯಾಕೆ, ಅಶೋಕರು ದಿನದ ಯಾವ ಜಾವವನ್ನೂ ಬಿಡದಂತೆ ನಟ್ಟಿರುಳು ಕಾಡಿನ ಗಾಢಾಂಧಕಾರದಲ್ಲೂ ಕುಳ್ಳು ಗಡ್ಡದ ಭೂತಗಳನ್ನು ತಂದಿಡುತ್ತಾರೆ! ದಿನದ ವಿಭಿನ್ನ ವೇಳೆಗಳಲ್ಲಿ ಮನುಷ್ಯನ ಮನಸ್ಸು, ಭಾವನೆ ವಿಭಿನ್ನವಾಗಿರುವುದರ ಸೂಕ್ಷ್ಮದೊಂದಿಗೇ ಇಲ್ಲಿನ ಪಾತ್ರಗಳು, ಸನ್ನಿವೇಶ ನಮ್ಮ ಮನಸ್ಸಿನಲ್ಲಿ ಊರಿ ನಿಲ್ಲುತ್ತವೆ. ಈ ಸಣ್ಣಪುಟ್ಟ ವಿವರಗಳಲ್ಲೇ ನಮ್ಮ ಚಿತ್ತದಲ್ಲಿ ಉತ್ತರಕರ್ನಾಟಕದ ಹಳ್ಳಿಯೊಂದರ ಸಮಗ್ರ ಚಿತ್ರವನ್ನು ಅಶೋಕರು ಬಿಡಿಸುತ್ತಾರೆ, ನಿರುದ್ದಿಶ್ಯ ಎನಿಸುವಂತೆ!

ಇದರೊಂದಿಗೇ, ಇಲ್ಲಿ ಪುಟಾಣಿಗಳಿಂದ ಹಿಡಿದು ಮೃತ್ಯುಶಯ್ಯೆಯಲ್ಲಿರುವ ವೃದ್ಧರವರೆಗೆ ಎಲ್ಲರೂ ಒಳಗೊಂಡು ಕಥಾನಕವನ್ನು ಕೊಂಡೊಯ್ಯುವ ಪರಿ ಕೂಡ ಅನನ್ಯವಾಗಿ ಪಡಿಮೂಡಿದೆ. ಅದೇ ರೀತಿ, ಈ ಕಥಾನಕದ ವಿದ್ಯಮಾನಗಳು ನಡೆಯುವ ಸ್ಥಳ, ಸನ್ನಿವೇಶಗಳೂ ಅಷ್ಟೇ ವಿಶಿಷ್ಟ ಮತ್ತು ಸಮಗ್ರ. ಮನೆಯ ಅಡುಗೆ ಕೋಣೆ, ಮಲಗುವ ಕೋಣೆ, ಪಡಸಾಲೆ, ಉಪ್ಪರಿಗೆ, ದನದ ಕೊಟ್ಟಿಗೆ, ಅಂಗಳ, ದೊಡ್ಡ ದೊಡ್ಡ ಮರದ ಬೇರುಗಳು ಎದ್ದು ನಿಂತ ಕಾಲು ದಾರಿ, ಗದ್ದೆ ಬಯಲು, ಕೆರೆಯ ದಂಡೆ, ತೋಟ, ಹಿತ್ತಿಲು, ಕಾಡಿನ ಸೆರಗು, ದಟ್ಟ ಕಾಡಿನ ಮರಗಳು, ಮಠದ ವಿವಿಧ ಪ್ರಾಂಗಣಗಳು, ಓಡುತ್ತಿರುವ ಕಾರು, ನಿಂತು ಬಿಟ್ಟ ಒಂದು ಜೀಪು ಎಲ್ಲವೂ ಇಲ್ಲಿನ ಕಥಾನಕದ ಅನಿವಾರ್ಯ ಮತ್ತು ಸನ್ನಿವೇಶದಿಂದ ಪ್ರತ್ಯೇಕಿಸಲಾರದ ಪಾತ್ರಗಳೇ ಆಗಿ ಬಿಡುವುದನ್ನು ಅಧ್ಭುತ ಎನಿಸುವಂತೆ ಚಿತ್ರಿಸಿದ್ದಾರೆ. ಎಲ್ಲವನ್ನೂ ಸಹಜ ಸ್ವಾಭಾವಿಕ ಸೌಂದರ್ಯದೊಂದಿಗೆ ಕಣ್ಮುಂದೆ ಬರುವಂತೆ ಸೂಕ್ಷ್ಮ ವಿವರಗಳಲ್ಲಿ ಕಟ್ಟಿಕೊಟ್ಟಿರುವುದು ಮನಸೆಳೆಯುತ್ತದೆ.

ಕೃತಿಕಾರನ ಪ್ರಜ್ಞಾಪೂರ್ವಕವಾದ ಈ ಸೂಕ್ಷ್ಮ ಸಂಯೋಜನೆ ಸಂತುಲಿತ ಕಥಾನಕಕ್ಕೆ ಪರೋಕ್ಷವಾಗಿ ನೀಡುವ ಕಾಣ್ಕೆಯ ಕುರಿತು ಯೋಚಿಸಬೇಕೆನಿಸುತ್ತದೆ. ಅಶೋಕರು ತಮ್ಮ ಕಾದಂಬರಿಯಲ್ಲಿ ಇಂಥ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ. ಅದು ಮಂಜ ಮತ್ತು ದೀಕ್ಷಿತರ ಪ್ರಸಂಗ ಇರಬಹುದು, ಮಠದ ಜೀಪಿನ ವ್ಯವಹಾರ ಇರಬಹುದು, ಖಾಸಿಂ ಸಾಬಿಯ ಡಾಲರ್ ವ್ಯವಹಾರವೇ ಇರಬಹುದು ಎಲ್ಲವೂ ಒಂದರೊಳಗೊಂದು ಸೇರಿಕೊಂಡಂತಿದ್ದೂ ಮುಖ್ಯ ಕಥಾನಕದ ಪೋಷಣೆ ಮಾಡುವ ರೀತಿ ನಮ್ಮ ಸಾಹಿತ್ಯಾಭ್ಯಾಸಿಗಳು ಗಮನಿಸ ಬೇಕಾದ ಪ್ರಯೋಗ ಎಂಬುದಂತೂ ನಿಶ್ಚಯ.

ಅತ್ಯಂತ ನವಿರಾದ ನಿರೂಪಣೆಯಲ್ಲಿ ಆಪ್ತವಾಗುವ ಶ್ರೀಧರ ಕುಸುಮಾರ ಸಂಬಂಧ ಕಾದಂಬರಿಯ ಆಶಯದ ದೃಷ್ಟಿಯಿಂದ ಬಹಳ ಮುಖ್ಯವಾದ ವಿವರವಾಗಿ ನಿಲ್ಲುತ್ತದೆ. ಶ್ರೀಧರನಿಗೆ ಕಾಡಿನಲ್ಲಿ ರಾತ್ರಿಹೊತ್ತಿನಲ್ಲಿ ಕನಸೋ ಭ್ರಮೆಯೋ ತಿಳಿಯದ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಬಿಳೀ ಗಡ್ಡದ ಕುಳ್ಳು ಭೂತಗಳು, ಅವು ಆಡಿಕೊಳ್ಳುವ ಮಾತುಗಳು ಅಶೋಕರ ಕುಶಲ ತಂತ್ರಗಾರಿಕೆಯನ್ನು ಕಾಣಿಸುವುದರೊಂದಿಗೇ ಕಥನಗಾರಿಕೆಗೆ ಒಂದು ಮೆರುಗನ್ನು ತಂದಿವೆ. ಗ್ರಾಮಾಯಣದ ಪಡದಯ್ಯನನ್ನು ನೆನಪಿಸುವ ಮಠದ ಸ್ವಾಮಿ ಮತ್ತವನ ಪಟಾಲಂ, ವದಂತಿಗಳಿಂದ ದಂತಕತೆಯಾದಂತಿರುವ ಮಂಜ, ವಿಶಿಷ್ಟ ಸಂದರ್ಭಗಳಲ್ಲಿ ಕಾಣಿಸಿಕೊಂಡು 'ಕೆಂಪು ನೀರು... ಭೋರ್ಗರೆತ....ಕೆಂಪುನೀರು' ಎನ್ನುವ ಗಣೇಶ ಹೆಗಡೆ, ರೂಪಕದಂತಿರುವ ಕೋರ್ಟ್ ತಿಮ್ಮಪ್ಪ ಮತ್ತು ವಿಪರ್ಯಾಸದಂತಿರುವ ಅವನ ನ್ಯಾಯಾಲಯದ ನ್ಯಾಯದ ಕುರಿತ ನಿಷ್ಠೆ, ಪರೀಕ್ಷೆಯ ಭೀತಿಯ ಸುಬ್ರಾಯಹೆಗಡೆಯ ಮುದಿತಂದೆ, ಕಾದಂಬರಿಯ ಕೇಂದ್ರ ಬಿಂದುವೇ ಆಗಿರುವ ಅಶ್ವಮೇಧದ ಪರಿಕಲ್ಪನೆ, ಕಾದಂಬರಿಯ ಉದ್ದಕ್ಕೂ ಇಂಥ ಪ್ರತಿಮೆಗಳನ್ನು ಅತ್ಯಂತ ವಿವೇಚನಾ ಯುಕ್ತವಾಗಿ ಅಶೋಕ್ ಬಳಸುತ್ತಾರೆ. ಕಾದಂಬರಿಗೆ ತನ್ನ ಕೇಂದ್ರ ಕಾಳಜಿಯನ್ನು ಮೀರಿದ ವಿಭಿನ್ನ ಆಯಮಗಳನ್ನು ಇಂಥ ಸೂಕ್ಷ್ಮ ವಿವರಗಳು ಅಲ್ಲಲ್ಲಿ ದೊರಕಿಸಿಕೊಡುತ್ತ ಕಾದಂಬರಿ ತನ್ನ ಒಡಲಲ್ಲಿ ಹೊಸ ಒಳನೋಟಗಳನ್ನು ಒಳಗೊಳ್ಳುವುದು ಸಾಧ್ಯವಾಗಿದೆ. ಇದು ಇಡೀ ಕಾದಂಬರಿಗೆ ಒಂದು ಗುರುತ್ವವನ್ನೂ ಆಕರ್ಷಣೆಯನ್ನೂ ತಂದಿದೆ. ಹಾಗೆಯೇ ಅಮೂರರು ಹೇಳುವ ತನ್ನದೆ ಆದ ವಿಶ್ವಸನೀಯ ಜಗತ್ತನ್ನು ಸೃಷ್ಟಿಸುವ ಕೆಲಸಕ್ಕೂ ಇದೆಲ್ಲ ಪೂರಕವಾಗಿದೆ.
(ಸಂಕ್ರಮಣ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, December 12, 2008

ಜೀವನ್ಮುಖೀ ಧೋರಣೆಯ ಕೆರೂರುನಾಮಾ

ಚಂದ್ರಕಾಂತ ಕುಸನೂರರ ಕೆರೂರುನಾಮಾ ಹಲವಾರು ಕಾರಣಗಳಿಗಾಗಿ ಒಂದು ಪ್ರಮುಖ ಕಾದಂಬರಿ.

ಮೊದಲಿಗೆ ಈ ಕಾದಂಬರಿಗೆ ಯಾವುದೇ ಒಂದು ನಿಶ್ಚಿತ ಪ್ರಣಾಳಿಕೆ ಇಲ್ಲ. ಇದು ಶುದ್ಧ ಬದುಕನ್ನು ಕುರಿತು ಹಂಚಿಕೊಳ್ಳುವ ಸಹಜ ಆಸೆಯಿಂದ ಹೊರಟಂತೆ ತೊಡಗುವ ಕಾದಂಬರಿ. ಹಾಗಾಗಿಯೇ ಇದರ ಓದು ನಮಗೆ ಕಾರಂತರ ಕಾದಂಬರಿಗಳು ಕೊಡುವಂಥ ಒಂದು ಅಪ್ಪಟವಾದ ಜೀವನಾನುಭವವನ್ನು ಕೊಡುತ್ತದೆ. ಅದು ನಮ್ಮದಲ್ಲದ ಒಂದು ಬದುಕನ್ನು ನಾವು ಬದುಕಿ ಬಂದ ಅನುಭವ. ಹಾಗೆಯೇ ಕಾದಂಬರಿ ಓದಿ ಮುಗಿಸಿದರೂ ಇಲ್ಲಿನ ತುಳಸಕ್ಕ, ಅಂಬಕ್ಕ, ಮೌಲಾಲಿ, ಕಿಶನರಾಯ, ಪಂಢರಿ, ನಾನ್ಯಾ, ಮಠದ ಸ್ವಾಮಿ, ಊರ ಗೌಡ, ರಾಮಾಚಾರಿಗಳೆಲ್ಲ ಓಡಾಡಿದ ಕೆರೂರಿನಿಂದ ಹೊರಬರಲು ಮನಸ್ಸೇ ಬರುವುದಿಲ್ಲ. ಅಂಥ ಒಂದು ಗುಂಗು ಹಿಡಿಸಬಲ್ಲ ವಾತಾವರಣವನ್ನೇ ಕುಸನೂರರು ನಿರ್ಮಿಸಿದ್ದಾರೆ. ಕಾದಂಬರಿ ತನ್ನ ಅಂತಃಸ್ಸತ್ವದಲ್ಲಿ ಹೇಳುವ ಅಥವಾ ಹೇಳಬಯಸುವ ತಾತ್ವಿಕ ಆಯಾಮಗಳ ಕುರಿತೆಲ್ಲ ತಲೆ ಕೆಡಿಸಿಕೊಳ್ಳದೆಯೂ ಕೇವಲ ಓದುವ ಮಜಕ್ಕಾಗಿಯಾದರೂ ಓದಲು ಈ ಕಾದಂಬರಿ ಅತ್ಯುತ್ತಮವಾಗಿದೆ. ಅದು ಇದೆಲ್ಲದರ ಜೊತೆಜೊತೆಗೇ ಇಂಟೆಲಿಜೆಂಟ್ ಎಂಟರ್ಟೈನ್‌ಮೆಂಟ್ ಕೂಡ ಆಗಿರುವುದು ಕುತೂಹಲಕರ.

ಈ ಕಾದಂಬರಿಗೆ ಹಲವು ಪಾತಳಿಗಳಲ್ಲಿ ಸತ್ಯದ ವಿಭಿನ್ನ ಆಯಾಮಗಳನ್ನು ಮುಟ್ಟುವ ಶಕ್ತಿ ಇದೆ. ಉದಾಹರಣೆಗೆ ತುಳಸಕ್ಕ, ಅಂಬಕ್ಕ ಮತ್ತು ನಿಂಗಿ - ಈ ಮೂವರ ಬದುಕನ್ನೇ ನೋಡಿ. ಇವರ ಜೀವನದೃಷ್ಟಿ, ನಡವಳಿಕೆಗಳು, ಅಂತರಂಗದ ಸತ್ಯಗಳು ಮತ್ತು ಅವುಗಳೊಂದಿಗೆ ಇವರು ಮುಖಾಮುಖಿಯಾಗುವ ಸನ್ನಿವೇಶ ಎಲ್ಲವನ್ನೂ ಗಮನಿಸಿದರೆ ಈ ಮೂರೂ ಪ್ರಮುಖ ಸ್ತ್ರೀಪಾತ್ರಗಳು ಪ್ರತಿನಿಧಿಸುವ ಬದುಕು ಒಂದೇ ಆಗಿರುತ್ತ, ಅಂಥ ಒಂದು ಬದುಕಿನ ವಿಭಿನ್ನ ಸಾಧ್ಯತೆಗಳನ್ನು ಪರೀಕ್ಷಿಸುವುದಕ್ಕಾಗಿಯೇ ಅವುಗಳ ರಚನೆಯಾದಂತಿದೆ. ಆದರೆ ಅದು ನಿಜವಲ್ಲ. ಈ ಮೂವರೂ ಮೂವರಾಗಿ ಇದ್ದಾಗಲೇ ಕೆರೂರು ನಮ್ಮಲ್ಲಿ ಉದ್ದೀಪಿಸುವ ಚಿಂತನೆ ಸಾಧ್ಯವಾಗುವುದು.

ತುಳಸಕ್ಕ ಒಂದು ವಿಧದಲ್ಲಿ ಬಾಲವಿಧವೆ. ಅಂಬಕ್ಕನ ಗಂಡ ಗಂಡಸುತನವಿಲ್ಲದವನು. ನಿಂಗಿಗೆ ಉಕ್ಕುವ ಹರೆಯ, ಮದುವೆ ದೂರದ ಕನಸು. ಇವರ ಬದುಕು ಮೂರು ರೀತಿಯಲ್ಲಿ ತನಗೆ ದಕ್ಕಿದ ಸ್ಥಿತಿಗೆ ಸ್ಪಂದಿಸುತ್ತದೆ.

ತುಳಸಕ್ಕ ಸೆಟೆದು ನಿಲ್ಲುತ್ತಾಳೆ, ದೈಹಿಕ ಅಗತ್ಯಗಳಿಗೆ ಬೆನ್ನುಹಾಕಿ ಸನಾತನಿಯಾಗುತ್ತಾಳೆ ಅಥವಾ ಆಗಲು ಬಯಸುತ್ತಾಳೆ ಅನಿಸುತ್ತದೆ. ಪ್ರಯತ್ನಿಸಿದರೆ ಅವಳಿಗೆ ಬಯಸಿದ್ದನ್ನು ಪಡೆಯುವುದು ಸಾಧ್ಯವಿತ್ತು. ಪ್ರಯತ್ನಿಸುವುದಿಲ್ಲ. ಮುಂದೆ ರಾಮಾಚಾರಿಯಿಂದ ಅತ್ಯಾಚಾರಕ್ಕೆ ಒಳಗಾದ ಅವಳು ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಗಂಡ ಸತ್ತ ಮೇಲೂ ಸಕೇಶಿಯಾಗಿ ನಿಲ್ಲುವ ಅವಳ ದಿಟ್ಟ ನಿರ್ಧಾರ ಗಮನಿಸಿದರೆ ಪಾಲು ಪಡೆದು, ತೋಟ ಮಾಡಿ, ಪೇಟೆ ಸುತ್ತಿ, ಸ್ವಶಕ್ತಿಯಿಂದ ಬದುಕನ್ನು ನೇರ್ಪುಗೊಳಿಸಿಕೊಂಡು, ಸಂಗೀತ ಕಲಿಯುವ ಮಟ್ಟಿಗೆ ಜೀವನಾಸಕ್ತಿ ಪ್ರದರ್ಶಿಸುವ ತುಳಸಕ್ಕ ತನ್ನ ತೀರ ಅಂತರಂಗದಲ್ಲಿ ಗೊಡ್ಡು ಸನಾತನಿಯಾಗಿಯೇ ಇದ್ದಳು ಎನಿಸುತ್ತದೆ. ಇದನ್ನು ನಿಂಗಿಯ ಪಾತ್ರ ಮತ್ತು ಅಂಬಕ್ಕನ ಪಾತ್ರ ಪರಸ್ಪರ ವಿರುದ್ಧವಾದ ಎರಡು ವಿಭಿನ್ನ ನೆಲೆಗಳಲ್ಲಿ ಪ್ರಶ್ನಿಸುತ್ತವೆ.

ಈ ನಿಂಗಿಯನ್ನು ನೋಡಿ. ಹುಚ್ಚು ಹರೆಯದ ರತಿ ರೂಪಿನ ಹುಡುಗಿ ಒಲಿಯುವುದು ಮದುವೆಯಾಗಿ ಮಕ್ಕಳಿಲ್ಲದ ಶಾಂತಾರಾಮನಿಗೆ. ನಿಂಗಿಯನ್ನು ನಮಗೆ ಪರಿಚಯಿಸುವ ಕುಸನೂರರ ಭಾಷೆ ಎಷ್ಟು ಸಶಕ್ತ ಎಂದು ತಿಳಿಯಲಿಕ್ಕಾದರೂ ಅವರ ಮಾತುಗಳನ್ನೇ ನಾವು ನೋಡಬೇಕು, ಅದರ ಕಾವ್ಯಶಕ್ತಿ ಮತ್ತು ಧ್ವನಿಶಕ್ತಿಗಾಗಿಯೂ.

"ತಾಮ್ರ ಬಣ್ಣದ ನಿಂಗಿ, ಭರಮಶಾನ ಮಗಳು. ನಡೆದರೆ ರಬ್ಬರ ಚೆಂಡು ಪುಟದ್ಹಾಂಗ ಪುಟೀತಿದ್ದಳು. ನಕ್ಕರೆ ಎಡಗಲ್ಲದ ಮ್ಯಾಲಗುಳಿ ಬೀಳತಿತ್ತು. ಕಣ್ಣು ಹ್ಯಾಂಗಿದ್ವಪಾಂದ್ರ, ಅಗದಿ ಸೌಂದತಿ ಯಲ್ಲಮ್ಮನ ಜಾತ್ರ್ಯಾಗ ಖರೀದಿಸಿದ ದೊಡ್ಡ ಕವಡಿ ಹಾಂಗಿದ್ದವು. ಭಲೇ, ಭಾಳ ಅಂದರ ಅಪರಂಪಾರ `ಬ್ಯೂಟಿ' ಆಗಿದ್ದಳು. ಇದೀಗೇ ಇಳಿಸಿದ ಜೇನಗೂಡಿನೊಳಗಿನ ತುಪ್ಪದ್ಹಾಂಗ ಮೈಬಣ್ಣ ಥಳಥಳಾ ಅಂತಿತ್ತು......ಭಾರಿ ಮಳೆ ಬಂದು, ಎರಡೂ ದಡಕ್ಕೆ ಡಿಕ್ಕಿ ಹೊಡಕೊಂಡು ಹೋಗೋ ಹಳ್ಳಕ್ಕ ಅಡ್ಡಗಾಲ ಹಾಕಿ ನಿಲ್ಲಸ್ತೀನಿ ಅಂದ್ರ ಹ್ಯಾಂಗಾದೀತು? ನಿಂಗೀ ಹಾಂಗ ಹರಿಬಂದ ಹಳ್ಳದ್ಹಾಂಗ ಹರೀಲಿಕತ್ತಿದ್ದಳು. ಆಯ್ತು, ಶಾಂತಾರಾಮನ ತ್ವಾಟಾದಾಗ ಹರಕೋತ ಮಡುವುಗಟ್ಟಿ ನಿಂತಂತೆ, ನಿಂಗೀ ನಿಂತು ಬಿಟ್ಟಿತ್ತು. ಶಾಂತಾರಾಮ ಆ ನೀರಿನ್ಯಾಗ ಕೈಕಾಲು ತೊಳಕೊಂಡು ಮಕಾ ತೊಳಕೊಂಡ, ಮೈನೂ ತೊಳಕೊಂಡ."

ಈ ನಿಂಗಿಗೆ ಮದುವೆಯೂ ಆಗುತ್ತದೆ. ಆದರೆ ಗಂಡ ಅವಳ ಅಪ್ಪನಂತೆಯೆ ಫಕೀರನಾಗುವುದರಲ್ಲೇ ಹೆಚ್ಚು ಆಸಕ್ತನಾಗುವುದರಿಂದ ಶಾಂತಾರಾಮ ನಿಂಗಿಯೆಂಬ ಹಳ್ಳದಲ್ಲೇ ಕೈಕಾಲು ಮಕ ಮತ್ತು ಮೈ ಕೂಡ ತೊಳೆದುಕೊಳ್ಳುತ್ತ ಇರುವುದು ತಪ್ಪುವುದಿಲ್ಲ. ಆದರೆ ಈ ನಿಂಗಿಗೆ ಕೆಲವು ನಿಯಮಗಳಿವೆ, ಅವಳದೇ ನಿಯತಿಗೆ ಅವಳ ಬದ್ಧತೆಯಿದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವಳ ಬಳಿ ಅವಳದೇ ಆದ ಒಂದು ತರ್ಕ, ಅಧ್ಯಾತ್ಮ ಮತ್ತು ತತ್ವ ಇದೆ. ಇದಾದರೆ ನಿಜವಾದ ಅಚ್ಚರಿ!

ತನ್ನನ್ನು ಕಂಡು ಜೊಲ್ಲುಸುರಿಸಿದ ಹೋಟೆಲಿನ ಮಾಣಿಕರಾವ ಫುಲಂಬರೇಕರನನ್ನು ನಾಯಿಗೆ ಹೋಲಿಸುವ ಅವಳು ತನ್ನ ಗಂಡ, ಬದುಕು, ದೇಹದ ಅಗತ್ಯಗಳು, ದೇವರು ಎಲ್ಲದರ ಕುರಿತು ಹೇಳುವ ಮಾತು ನೋಡಿ:

"ಕಿಟ್ಟಕ್ಕಾ, ನಿಂಗೇನ್ ಗೊತ್ತು. ಅಂವಾ ದೇವರ ಬೆನ್ನು ಹತ್ಯಾನ. ಛಂದನ ಸಂಸಾರ ಮಾಡಿಕೊಂಡಿದ್ದರ ಅಂಥಲ್ಲಿ ದೇವರಿರತಾನಂತ ಆ ಕಸಮೂಳಗ ಗೊತ್ತೇ ಇಲ್ಲ. ಹುಡುಕ್ಕೋಂತ ಹೊಂಟಾನ, ಹುಡಕಲಿ. ಇನ್ನ ನಂದ ಸ್ವಭಾವ ಹ್ಯಾಂಗಂತ ನಿಮ್ಗ ಗೊತ್ತೇ ಐತಿ. ಸಿಕ್ಕಿದ ಒಂದು ಸಲದ ದೇಹಕ್ಕ ಸಾಯೋದಕಿಂತ ಮುಂಚೆನೇ ಸುಡಗಾಡ ಕಾಣಿಸೋ ಸ್ವಭಾವ ನಂದಲ್ಲ. ಹೀಂಗ ಮಾಡೋದಂದ್ರ ದೇವರಿಗೇ ಅಪಚಾರ ಮಾಡದ್ಹಾಂಗತೈತಿ. ಅಂವಾ ಕೊಟ್ಟ ವಸ್ತು ಇದು. ಈ ಜಿಂವಾ, ಇದ್ಕ ಮರ ಮರಾಂತ ಮರಗಿಸೋದಂದ್ರ ಪಾಪ - ಪಾಪ ಮಾಡದ್ಹಾಂಗೇ. ತುಳಸಕ್ಕಾ, ನಿಮ್ಮ ಶಾಸ್ತ್ರ ಏನ್ ಹೇಳತೈತೀ ನನಗ ಗೊತ್ತಿಲ್ಲ. ಅದು ಮನುಷ್ಯನ ಸುಖಕ್ಕ ಅಡ್ಡಿ ಮಾಡುತ್ತಿತ್ತೂ ಅಂದ್ರ ಅಂಥ ಶಾಸ್ತ್ರ ನನಗ ಬೇಕಾಗಿಲ್ಲ. ಬೀಸುವ ಗಾಳಿಗಿ, ಹರಿಯೋ ನದಿಗಿ ನಿಂದ್ರಂದರ ಹ್ಯಾಂಗ ನಿಂತಾವು? ಹಕ್ಕಿಗಿ ಹಾರಬ್ಯಾಡಂತೀರ್ಯಾ? ಇದು, ಇದುರೀ, ಈ ಬದುಕು, ಇದನ್ನ ಛಂದ ಮಾಡ್ಕೊಂಡಿರಬೇಕರೀ ತಾಯಿ. ಮೈತುಂಬ ಬೂದಿ ಬಡಕೊಂಡು ಬೇವಾರ್ಸಿ ನಾಯಿ ಹಾಂಗ ತಿರಗತಿದ್ದರ ದೇವರು ಸಿಗ್ತಾನಂತ ನಂಬಿದರ, ದೇವರು ಸಿಗಾಣಿಲ್ಲ ಅಕ್ಕ, ದೆವ್ವೂ ಸಿಗಾಣಿಲ್ಲ, ಅಂಥವರ ಕೈಗೆ ಸಿಗೋದು ಬರೀ ಸುಡಗಾಡದ ಮಣ್ಣು"

ಆದರೆ ತನ್ನ ಹಾಗೇ ಎಲ್ಲರೂ ಯೋಚಿಸಿದರೆ ಸಮಾಜ ವ್ಯವಸ್ಥೆಯೇ ಸತ್ಯನಾಶವಾಗಿ ಹೋಗಬಹುದು ಎನ್ನುವ ತರ್ಕದ ಅರಿವೂ ನಿಂಗಿಗೆ ಇದೆ. ಅದಕ್ಕವಳು ಹೇಳುತ್ತಾಳೆ, ನಾವು ನಾವಾಗೇ ಉಳಿದಾಗ ನಿಮ್ಮ ಸಮಾಜ ಅಲ್ಲಿಗೇಕೆ ಬರುತ್ತದೆ, ಬರುತ್ತದೆಯೆ? ಈ ತರ್ಕದ ಹಿನ್ನೆಲೆಯಲ್ಲೇ ಅವಳಿಗೆ ಮಾಣಿಕರಾವ ಒಂದು ತರದ ನಾಯಿ, ವಿರಕ್ತನಾಗಿ ಮೈತುಂಬ ಬೂದಿಬಡಕೊಂಡವ ಇನ್ನೊಂದು ತರದ ನಾಯಿ!

ಇನ್ನು ಅಂಬಕ್ಕ ತನ್ನ ಹಾದರ ಊರ ಬಾಯಿಗೆ ಬಿದ್ದು ತಾನು ಬೀದಿಪಾಲಾಗುವ ಭಯಕ್ಕೇ ತನ್ನ ಮೈಮೇಲೆ ದೇವಿ ಬರುತ್ತಾಳೆ ಎಂಬ ಆಟ ಹೂಡುತ್ತಾಳೆ. ಇವಳಲ್ಲಿ ತುಳಸಕ್ಕನ ಸೆಟೆದುಕೊಳ್ಳುವ ಸನಾತನತ್ವವೂ ಇಲ್ಲ, ತೆರೆದುಕೊಳ್ಳುವ ನಿಂಗಿಯ ಸರಳತೆಯೂ ಇಲ್ಲ.

ಈ ಮೂರು ಸ್ತ್ರೀ ಪಾತ್ರಗಳಂತೆಯೇ ಮುಖ್ಯವಾದ ಇನ್ನೊಂದು ಸ್ತ್ರೀ ಪಾತ್ರ ಅಮರಾಂಬಿಕೆ. ಮಠದ ಸ್ವಾಮಿಯನ್ನು ಮದುವೆಯ ನಿರ್ಧಾರಕ್ಕೆ ಅಣಿಯಾಗಲು ಇವಳು ಹೂಡುವ ವಾದ, ಇವಳ ನಿರ್ಧಾರದ ಸ್ಪಷ್ಟ ಮತ್ತು ನಿಖರವಾದ ಗುರಿ, ಮುಂದಿನ ಯೋಜನೆ ಎಲ್ಲವೂ ಸೂಕ್ಷ್ಮವಾಗಿ ಕಾದಂಬರಿಗೆ ನೀಡುವ ಮೆರುಗು ಕುಸನೂರರ ತಂತ್ರ ಕೌಶಲಕ್ಕೆ ಉತ್ತಮ ಉದಾಹರಣೆ.

ಎರಡನೆಯದಾಗಿ ನಾನ್ಯಾ, ಶೇಷಾಚಲ, ಕಿಶನರಾಯ, ಪುಲಂಬ್ರೇಕರ, ಮೌಲಾಲಿಯಂಥವರ ವ್ಯಾವಹಾರಿಕ ಚಾಣಾಕ್ಷತೆಯೂ ಕಾಲಕ್ಕೆ ತಕ್ಕಂತೆ ಕೋಲಕಟ್ಟುವ ಬುದ್ಧಿಯೂ ಕೆರೂರಿನಂಥ ಗ್ರಾಮ್ಯ ಪರಿಸರದಲ್ಲಿ ಪಡೆದುಕೊಳ್ಳುವ ರೂಪವಿನ್ಯಾಸ ಮತ್ತು ಅದು ಕಾದಂಬರಿಯ ಶಿಲ್ಪಕ್ಕೆ ಒದಗಿಸುವ ವಿಶಿಷ್ಟ ತಿರುವುಗಳು ಗಮನಾರ್ಹ. ಇವರಿಗೆ ಹೊಟ್ಟೆಪಾಡು, ಊರಿನ ರಾಜಕೀಯ, ಗುಸುಗುಸು ಎಲ್ಲವೂ ಸಮಾನವಾಗಿ ಅನಿವಾರ್ಯ. ಅವಕಾಶ ಸಿಕ್ಕಿದರೆ ಸ್ವಲ್ಪ ಮಹತ್ವ ಪಡೆದುಕೊಳ್ಳುವ, ಅಷ್ಟಿಷ್ಟು ಗಂಟುಕಟ್ಟುವ ಆಸೆಯೂ ಉಂಟು. ಆದರೆ ದುಷ್ಟರಲ್ಲ. ಈ ಎಲ್ಲರಲ್ಲೂ ಮತ್ತು ಈ ಎಲ್ಲರನ್ನು ಸಹಿಸಿಕೊಳ್ಳುವ ಕೆರೂರಿನಲ್ಲೂ ಇರುವ ಮಾನವೀಯ ಒರತೆ ಕುಸನೂರರ ಪ್ರಮುಖ ಕಾಳಜಿಗಳಲ್ಲಿ ಒಂದು. ಜಯಂತ ಕಾಯ್ಕಿಣಿ ಮತ್ತು ಚಿತ್ತಾಲರ ಕತೆಗಳಲ್ಲಿ ಬಿಟ್ಟರೆ ಇತರೆಡೆ ಈ ಸಾಮಾನ್ಯನ ಅಸಾಮಾನ್ಯ ಔದಾರ್ಯದ ಚಿತ್ರಣ ಬಹಳ ಅಪರೂಪ. ಚಂದ್ರಕಾಂತ ಕುಸನೂರರಿಗೆ ಮನುಷ್ಯನ ನೀಚತನದ ಬೇರಿನಲ್ಲೂ ಸತ್ ಎಂಬುದರ ಒರತೆಯೊಂದು ಸದಾ ಸೆಲೆಯೊಡೆದು ಬತ್ತದ ಗಂಗೆಯಂತೆ ಜೀವಂತವಾಗಿರುತ್ತದೆ ಎಂಬುದರಲ್ಲಿ ಅಚಲವಾದ ವಿಶ್ವಾಸ. ಈ ಜೀವನ್ಮುಖೀ ಧೋರಣೆ, ಆಶಾವಾದದ ಚಿಗುರು ಅವರ ಕಾದಂಬರಿಯ ಉದ್ದಕ್ಕೂ ಲವಲವಿಕೆಯಿಂದ ಹರಿಯುವುದನ್ನು ಕಾಣಬಹುದು.

ಮುನ್ನುಡಿಯಲ್ಲಿ ಡಾ. ರಾಜಶೇಖರ ನೀರಮಾನವಿಯವರು ಹೇಳುವ ಮಾತುಗಳನ್ನು ಗಮನಿಸಿ:

"ಊರಿನ ಜನಗಳು ಸೇರಿಕೊಂಡು ಇಂದಮ್ಮ ಎನ್ನುವವಳ ಮದುವೆ ಮಾಡುತ್ತಾರೆ. ಆಗ ಶಂಕರಣ್ಣನೆಂಬಾತ "ಕೆರೂರಿನ ಜನಗಳ ಮನಸ್ಸು ಶ್ರೀಮಂತವಾಗಿದೆ, ನೀನು ಲಗ್ನ ನಿಶ್ಚಯ ಮಾಡಿದರೆ ನಿನ್ನ ಮಗಳ ಮದುವೆಯನ್ನು ಊರವರು ನಿಂತು ಮಾಡುತ್ತೇವೆ" ಎಂದು ಮೌಲಾಲಿಗೆ ಹೇಳುತ್ತಾನೆ. ಊರಿನ ಜನಗಳ ಸಮಷ್ಟಿ ಮನಸ್ಸು ಮೌಲಾಲಿಯ ಬದುಕಿಗೆ ಹೊಸದೊಂದು ಆಯಾಮ ನೀಡುತ್ತದೆ. ತನ್ನ ಜಾತಿ, ತನ್ನ ಧರ್ಮ, ತನ್ನ ಮುಲ್ಲಾ ಮಸೀದಿಗಳಿಂದ ಮುಕ್ತವಾದ ಪರಿಸರದಲ್ಲಿ ಪ್ರೀತಿಯಿಂದ ಬದುಕುವೆಡೆ ನಿಜ ಧರ್ಮವೆಂದು ಮೌಲಾಲಿಗೆ ಅನುಭವವಾಗುತ್ತದೆ."

ಕುಸನೂರರ ಜೀವನದೃಷ್ಟಿ ಇದಕ್ಕಿಂತ ಹಿರಿದಾದುದನ್ನು ಒಳಗೊಳ್ಳುವಂಥದ್ದು. ಯಾಕೆಂದರೆ ಅವರಿಗೆ ಕೆರೂರಿನ ಇನ್ನೊಂದು ಮುಖವೂ ಗೊತ್ತು. ಕಾದಂಬರಿಯಲ್ಲಿ ಈ ಊರಿನಲ್ಲೂ ಕೋಮುಗಲಭೆಯಂಥ ವಿದ್ಯಮಾನ ನಡೆಯುವ ಸಾಧ್ಯತೆಗಳಿವೆ ಎಂಬುದು ಸಿದ್ಧವಾಗುತ್ತದೆ. ಇಲ್ಲೂ ಮಾಟ ಮಂತ್ರ ಮಾಡಿಸುವುದು, ಬಿಡಿಸುವುದು, ದೇವಿ ಮೈಮೇಲೆ ಬರುವುದು ಎಲ್ಲ ನಡೆಯುತ್ತಿರುತ್ತದೆ. ಸ್ವಾಮೀಜಿಗಳ ಅಸೂಯೆ, ಒಳಜಗಳದ ಬಹಿರಂಗ ಪ್ರದರ್ಶನ, ಭಾಷಣ ಇದೆ. ಸರಕಾರೀ ದಾಖಲೆಗಳಲ್ಲಿ ಮಾತ್ರ ಇರುವ ಐದು ಕೊಳವೆ ಬಾವಿಗಳು, ಒಂದು ಸಮಾಜಮಂದಿರ, ನಾಲ್ಕು ಟಾರ್ ರಸ್ತೆಗಳು, ಒಂದು ಪಶುವೈದ್ಯಕೀಯ ಆಸ್ಪತ್ರೆ, ಸಣ್ಣ ಮತ್ತು ಏತ ನೀರಾವರಿ ವ್ಯವಸ್ಥೆ, ಹಳ್ಳಕ್ಕೆ ದೊಡ್ಡದೊಂದು ಸೇತುವೆ, ಅರಣ್ಯ ಇಲಾಖೆಯಿಂದ ಎರಡು ಲಕ್ಷ ಸಸಿ ನೆಟ್ಟಿದ್ದು ಹಾಗೂ ಐದು ವರ್ಷಗಳಿಂದಲೂ ಸ್ವಾಮಿಗಳ ಮಠದಲ್ಲಿ ನಡೆಯುವ ಸರಕಾರಿ ಗಂಡು ಮತ್ತು ಹೆಣ್ಣುಮಕ್ಕಳ ಶಾಲೆ ಯಾವುದೂ ವಾಸ್ತವದಲ್ಲಿ ಇಲ್ಲದ ಕಟು ಭ್ರಷ್ಟಾಚಾರದ ಬಲಿಪಶು ಕೆರೂರು. ಹೀಗಿರುತ್ತ ಕುಸನೂರರ ಆದರ್ಶ ಕೆಲಸ ಮಾಡಬೇಕಿದೆ ಮತ್ತು ಆದರ್ಶ ವಾಸ್ತವದಲ್ಲಿ ತನ್ನ ಜೀವಂತಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಈ ಕಾದಂಬರಿ ತನ್ನ ಸಾಮಾಜಿಕ ಅರ್ಥಪೂರ್ಣತೆಯನ್ನು ಅದರ ತಾತ್ವಿಕ ಆಯಾಮದೊಂದಿಗೇ ಇಲ್ಲಿ ಹೇಗೆ ಸಾಧಿಸುತ್ತದೆ ಎನ್ನುವುದೇ ಕಾದಂಬರಿಯ ಎದುರಿಗಿರುವ ಸವಾಲು ಮತ್ತು ಸಾಧನೆ.

ಬದುಕಿನ ಅನನ್ಯ ಜೀವನ್ಮುಖೀ ಧೋರಣೆ ಮತ್ತು ಅದರ ಸಾರ್ಥಕತೆ ಎಂದೂ ಸಹಜ ಸರಳ ಮಾರ್ಗಗಳಲ್ಲಿರುತ್ತದೆ ಎನ್ನುವ ಕುಸನೂರರ ಜೀವನದೃಷ್ಟಿಯನ್ನು ಪುಷ್ಟೀಕರಿಸುವ ಈ ಮಾತುಗಳನ್ನು ಗಮನಿಸಿ:

"ಸೃಷ್ಟಿ ಎಂದೂ ವೈರಾಗ್ಯದ ಮಾತು ಆಡಿಲ್ಲ. ದುಃಖ, ಸಾವು ನೋವಿನ ಮಾತುಗಳನ್ನೂ ಆಡಿಲ್ಲ. ಮನುಷ್ಯನ ಎಲ್ಲ ತರಹದ ಆಶೆ ಆಮಿಷಗಳಿಗೆ ಬಲಿಯಾದರೂ, ತನಗೆ ಹೀಗಾಯಿತೆಂದು ಹೇಳಿಲ್ಲ. ದಂಗೆಯಾಗುತ್ತವೆ, ಯುದ್ಧಗಳಾಗುತ್ತವೆ, ಬಾಂಬುಗಳ ಸುರಿಮಳೆಯಾಗುತ್ತದೆ. ನೆಲಸುಟ್ಟು ಬೂದಿಯಾಗುತ್ತದೆ, ಜೀವ ನಷ್ಟವಾಗಿ ಹೋಗುತ್ತದೆ. ಪಶುಪಕ್ಷಿಗಳು ಕಂಗಾಲಾಗುತ್ತವೆ, ಸತ್ತು ಹೋಗುತ್ತವೆ. ಮನುಷ್ಯನ ಮೂರ್ಖತನ, ಅವನ ಅಹಂಕಾರ, ಅವನ ದರ್ಪದಿಂದ ನೆಲ ತತ್ತರಿಸಿ ಹೋಗುತ್ತದೆ. ಬೆಳೆಸಿದ ಸಂಸ್ಕೃತಿ, ಕಟ್ಟಿದ ಧರ್ಮ, ಬಯಸಿದ ಉತ್ಸಾಹ ಎಲ್ಲವೂ ಇಲ್ಲದಂತೆಯಾಗುತ್ತವೆ. ಇದೆಲ್ಲವನ್ನು ಸಹಿಸಿಕೊಂಡೇ ಈ ಸೃಷ್ಟಿ ಮತ್ತೆ ಮತ್ತೆ ತನ್ನ ಜೀವನೋತ್ಸಾಹವನ್ನು ಪ್ರಕಟಗೊಳಿಸುತ್ತ, ಮತ್ತೆ ಅನಶ್ವರ ಆನಂದದ ಕಡೆಗೆ ಬೆರಳು ಮಾಡಿತೋರಿಸುತ್ತದೆ."

ಕುಸನೂರರ ಜೀವನದೃಷ್ಟಿಯೂ ಇದೇ ಆಗಿದೆ. ತೇಜಸ್ವಿಯವರ ಚಿದಂಬರ ರಹಸ್ಯ ಕೆಸರೂರಿನಂತೆ, ರಾವ್ ಬಹದ್ದೂರರ ಗ್ರಾಮಾಯಣ ಪಾದಳ್ಳಿಯಂತೆ ಅವನತಿಯ ಕಡೆಗೆ ಸಾಗುತ್ತಿದೆಯೇನೋ ಅನಿಸುವ ಕೆರೂರು ಅಲ್ಲಲ್ಲಿ ತನ್ನ ಅವನತಿಯ ಹಾದಿಯನ್ನು ತಿದ್ದಿಕೊಂಡು ಕೆಲವೇ ಪಾತ್ರಗಳ ಮಾಗುವಿಕೆಯ ಹೊಳಹಿನಲ್ಲೇ ಅದರ ಚಿಗುರುವಿಕೆಯನ್ನು ಕಾಣಿಸುತ್ತ ಜೀವನ್ಮುಖಿಯಾಗುವುದು ಇಲ್ಲಿನ ವಿಶೇಷ.

ಮೂರನೆಯದಾಗಿ ಊರಿನ ಮಠದ ಸ್ವಾಮಿ, ವೆಂಕಟರಮಣನ ಪೂಜಾರಿ ಶೇಷಾಚಲ, ಅಂಬಕ್ಕನ ಸಂಗದಿಂದಲೇ ಹಣ್ಣಾಗುವ ಕಿಶನರಾಯರ ಮುಖೇನ ವಿಕಾಸಗೊಳ್ಳುವ ಒಂದು ಉದಾತ್ತ ವೈಚಾರಿಕತೆ. ಇಲ್ಲಿ ನಿಂಗಿಯನ್ನೂ ಹಿನ್ನೆಲೆಯಲ್ಲಿಟ್ಟುಕೊಂಡೇ ನೋಡಬಹುದು. ಮಠದ ಸ್ವಾಮಿಗೆ ತಾನು ತನ್ನಂತೆ ಇರದೆ ನಾಟಕದ ಪಾತ್ರಧಾರಿಯಂತಿರುವುದರ ಅರಿವಿದೆ. ಈ ಅರಿವು ಅವರನ್ನು ಸಂನ್ಯಾಸತ್ಯಾಗದ ಮೂಲಕವೇ ಸಹಜ ಮನುಷ್ಯನಾಗುವತ್ತ ಸೆಳೆಯುತ್ತದೆ. ಶೇಷಾಚಲನಿಗೆ ತನ್ನ ಮೂರ್ತಿ ಪೂಜೆಯ ನಿರರ್ಥಕತೆ ಮತ್ತು ಅದರ ಸಂಭಾವ್ಯ ಸಾರ್ಥಕತೆಯ ಸಾಧ್ಯತೆಗಳ ಅರಿವಿದೆ. ಆದರೂ ತಾನು ಬದುಕುತ್ತಿರುವ ದೈನಂದಿನದ ಕ್ಷುದ್ರತೆಯಿಂದ, ತನ್ನದೇ ದೌರ್ಬಲ್ಯಗಳಿಂದ ಪಾರಾಗಲಾರದ ಅಸಹಾಯಕತೆ ಅವನಲ್ಲಿದೆ. ಇದೆಲ್ಲ ಇರುತ್ತ ಮಾಗುವ ಒಂದು ಹಾದಿಯಲ್ಲಿ ಅವನಿದ್ದಾನೆ. ಇನ್ನು ಕಿಶನರಾಯ ಗಂಡು ಹೆಣ್ಣು ಸಂಬಂಧವನ್ನು ಕೇವಲ ಕಾಮತೀವೃತೆಯ ಅಗತ್ಯವೆನ್ನುವ ಹಂತದಿಂದ ಮೇಲೇರಿ ಅದನ್ನು ತನ್ನ ಮಾಗಿದ ಮನಸ್ಸಿನಿಂದ ಹಿಂತಿರುಗಿ ನೋಡಬಲ್ಲವನಾಗುತ್ತಾನೆ. ಅವನ ಜನ್ಮಾಂತರದ ನಂಬುಗೆಗಳೇನಿದ್ದರೂ ಬದುಕನ್ನು ಮತ್ತು ಕ್ಷಣಭಂಗುರವಾದ ಬದುಕಿನ ಸುಖ, ಆನಂದ, ಇಂದ್ರಿಯಗಮ್ಯ ಅನುಭವ, ನೋವು, ನಲಿವು ಇವುಗಳನ್ನು ಅವುಗಳ ವ್ಯಕ್ತಿ-ಪರಿಸರ ಸಂಬಂಧಗಳ ನಿಟ್ಟಿನಿಂದ ಕಾಣಬಲ್ಲವನಾಗುತ್ತಾನೆ ಎಂಬುದೇ ಒಂದು ಮಹತ್ವದ ಘಟ್ಟ.

ಇದು ಕಾದಂಬರಿಗೆ ಒಂದು ಗುರುತ್ವವನ್ನು ಖಂಡಿತವಾಗಿಯೂ ಕೊಟ್ಟಿದೆ. ಆದರೂ, ನಿಂಗಿಯಂಥ ನಿಂಗಿಯ ಬಾಯಲ್ಲಿ, ಕಿಶನರಾಯನಂಥ ಕಿಶನರಾಯನ ಬಾಯಲ್ಲಿ ಬರುವ ಕೆಲವು ಪ್ರಬುದ್ಧ ಮತ್ತು ಗ್ರಾಂಥಿಕ ತತ್ವದ ಮಾತುಗಳು (`ಇರಲಿ ಬಿಡು ಈ ತಲೆಹರಟೆ' ಎಂದು ಒಂದು ಕಡೆ ಕಿಶನರಾವನೇ ತನ್ನ ವಾಚ್ಯ ತಾತ್ವಿಕತೆಗೆ ನಾಚಿದವನಂತೆ ಮಾತು ಮುಗಿಸುವುದನ್ನು ಗಮನಿಸಿ) ಕಾದಂಬರಿಯ ಸಹಜಸ್ಫೂರ್ತ ಆಯಾಮದ ಹೊರಗಿನವಾಗಿಯೇ ಉಳಿಯುವುದೂ, ಸನ್ನಿವೇಶಕ್ಕೆ ಕೊಂಚ ಭಾರವಾಗಿ ಬಿಡುವುದೂ ಸುಳ್ಳಲ್ಲ. ಕೆಲವು ಕಡೆ ಕಥಾನಕ ಮತ್ತು ಅದನ್ನು ಹೇಳುವ ವಿನ್ಯಾಸದಿಂದಲೇ ಓದುಗನಿಗೆ ತಲುಪಿಸಬಹುದಾದದ್ದನ್ನು (ಅಂಥ ಅದ್ಭುತ ಭಾಷೆ ಮತ್ತು ತಾಂತ್ರಿಕ ಕೌಶಲ ಕುಸನೂರರಲ್ಲಿ ಇದ್ದೂ) ವಾಚ್ಯವಾಗಿಯೇ ಹೇಳುವ ಶಬ್ದಮೋಹಕ್ಕೆ ಕುಸನೂರರು ಒಳಗಾಗಿರುವುದನ್ನು ಕಾಣಬಹುದಾಗಿದೆ.

ಕಾದಂಬರಿಯ ಮೂಲ ಸೆಲೆ ಇರುವುದೇ ಅದು ಈ ಎಲ್ಲ ತಾತ್ವಿಕ ಭಾರಗಳಿಂದ ಮುಕ್ತವಾಗಿ ನಿಲ್ಲಬಲ್ಲ ಕಸು ಮತ್ತು ಹೊಸತನದ ಚೈತನ್ಯ ಹೊಂದಿರುವುದರಲ್ಲೇ. ಕುಸನೂರರು ಕಾದಂಬರಿಯ ಆರಂಭದಲ್ಲೇ ಒಂದು ಮಾತು ಹೇಳುತ್ತಾರೆ. `ಕೆರೂರನಾಮಾ ಹೆಸರು ದೆಸೆ ಇಲ್ಲದ ಒಂದು ಕುಗ್ರಾಮದಲ್ಲಿ ವಾಸಿಸುವ ತುಂಬ ನಗಣ್ಯ ಜನರ ಜೀವ ಸ್ಪಂದನದ ಒಂದು ಕತೆ ಮಾತ್ರ. ಆದರೆ ಈ ತರದ ಕತೆ ಕಾದಂಬರಿಗಳು ಅವರ ತನಕ ತಲುಪುವುದೇ ಇಲ್ಲ.' ಹಾಗಿದ್ದಾಗ್ಯೂ ಇದು ಒಂದು ಇಂಟೆಲೆಕ್ಚುವಲ್ ಎಂಟರ್ಟೇನರ್ ಆಗಬೇಕೆನ್ನುವ ಉದ್ದೇಶ ಕುಸನೂರರಿಗೆ ಇದ್ದೇ ಇದೆ. ಬಹುಷಃ ಹಾಗಾಗಿಯೇ ಕುಸನೂರರಿಗೆ ಕಿಶನರಾಯ, ನಿಂಗಿಯ ತತ್ವಗಳೆಲ್ಲ ವಾಚ್ಯವಾಗಿ ಬರುವುದು ಕೂಡ ವಿಶೇಷವಾಗಿ ಗಮನಿಸಬೇಕಾದ ಸಂಗತಿಯಾಗಿ ಕಾಣಿಸದೇ ಹೋಗಿರಬಹುದು ಅನಿಸುತ್ತದೆ. ಅದೇನಿದ್ದರೂ ಅವರ ದೃಷ್ಟಿ ಇರುವುದು ಬದುಕನ್ನು ಅದರ ಸಮಗ್ರತೆಯಲ್ಲಿ ಹಿಡಿಯುವುದು ಅಥವಾ ಅಂಥ ಒಂದು ಪ್ರಯತ್ನ ಮಾಡುವುದು. ಅಂಥ ಪ್ರಯತ್ನದ ಖುಶಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದು. ಅಷ್ಟರಮಟ್ಟಿಗಂತೂ ಈ ಕಾದಂಬರಿ ಒಂದು ಅನನ್ಯ ಅನುಭವದ ಪಯಣ. ಕಾದಂಬರಿಯಲ್ಲೇ ಒಂದೆಡೆ ಬರುವ ಈ ಮಾತುಗಳು ಅದನ್ನೇ ಧ್ವನಿಸುವಂತಿವೆ.

"ಯಾವ ನಿಟ್ಟಿನಿಂದ ನೋಡಿದರೂ ಈ ಬದುಕಿನ ಸಮಗ್ರ ರೂಪ ಕಾಣಿಸುವುದೇ ಇಲ್ಲ. ಬಳೆ ಚೂರುಗಳನ್ನು ಹಾಕಿ ತಯಾರಿಸಿದ ಕಿಲಿಡಿಯಾಸ್ಕೋಪದಂತೇ ಈ ಜೀವನ. ತಿರುತಿರುಗಿಸಿ ನೋಡಿದಂತೆ, ತರತರದ ರಂಗುರಂಗಿನ ಪ್ಯಾಟರ್ನ್‌ಗಳು ಕಾಣಿಸುತ್ತವೆ. ಎಲ್ಲ ಭ್ರಮೆ."
(ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, December 7, 2008

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ ಪಾತಳಿಗಳಲ್ಲೇ ಅರ್ಥೈಸಿಕೊಳ್ಳಲು ಮಾತ್ರ ಈ ಕಾದಂಬರಿಯ ಪ್ರತಿಯೊಂದು ಪಾತ್ರದ ಪ್ರಜ್ಞೆ ಹರಿಯುವ ಬಗೆಯನ್ನು ಮತ್ತು ಆ ಪ್ರಜ್ಞೆ ಒಟ್ಟಾರೆಯಾಗಿ ಊರಿನ ಸಮಷ್ಟಿಪ್ರಜ್ಞೆಯೊಂದಿಗೆ ಚಲಿಸುವ ಬಗೆಯನ್ನು ಒಟ್ಟಾಗಿಯೇ ಗ್ರಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುತ್ತಿರುತ್ತಾನೆ ಮತ್ತು ಸಮಾಜ ಎಂದು ನಾವು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎನ್ನುವುದು ಇಲ್ಲಿ ಸಾಕಾರಗೊಂಡಿರುವ ಬಗೆ ಅನನ್ಯವಾಗಿದೆ.

ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ.

ನಂದೋವಾಡಿಯನ್ನು ಅದರ ಮನೋಧರ್ಮಕ್ಕೆ ತಕ್ಕಂತೆ ಅಲ್ಲಿನ ಪ್ರಕೃತಿಯೇ ಒಂದು ರೀತಿಯಲ್ಲಿ ಸೃಜಿಸಿದೆ. ಹೊಲಗೇರಿಗೂ ಊರಿಗೂ ನಡುವೆ ಹರಿಯುವ ನದಿ ದೇವೀರಿ ಹಳ್ಳ. ಅಗತ್ಯ, ಅನುಕೂಲಗಳಿಗೆ ತಕ್ಕಂತೆ ಬದಲಾಗುವ ಊರವರ ಮಡಿ ಮೈಲಿಗೆಯ ಪ್ರಜ್ಞೆಯಂತೆಯೇ ಈ ನದಿಯೂ ಒಣಗುತ್ತ, ಹರಿಯುತ್ತ, ಹರಿಯುವಾಗ ಮೈಲಿಗೆಯನ್ನು ಮೀರಿದವಳಾಗಿಯೂ ನಿಂತಲ್ಲಿ ಹೊಲೆತನದ ಕುರುಹಾಗಿಯೂ ಊರನ್ನು ಹೊಲೆಯರ ಕೇರಿಯಿಂದ ಬೇರ್ಪಡಿಸುವವಳು. ಅವಳ ಹೆಸರು ದೇವೀರಿ. ಆದರೆ ಊರಿಗೇ ಕುಡಿಯುವ ನೀರು ನೀಡುವ ಗುಂಡೋಪಂತ ಕಟ್ಟಿಸಿದ ಬಾವಿ ಇರುವುದು ಮಾತ್ರ ಊರೊಳಗೆ. ಹೊಲೆಯರು ಕೂಡಾ ಅದೇ ಬಾವಿಯನ್ನು ನೆಚ್ಚಿದವರು. ಮಧ್ಯಾಹ್ನ ಬಾರಾದ ತನಕ ಅಲ್ಲಿಗೆ ಹೊಲಗೇರಿಯವರು ಬರುವಂತಿಲ್ಲ. ಅನುಕೂಲಕ್ಕೆ ತಕ್ಕಂತೆ ಹಿಂದೆ ಚಾಲ್ತಿಯಲ್ಲಿದ್ದ, ಹೊಲೆಯರಿಗೆ ಮೇಲ್ಜಾತಿಯವರೇ ನೀರು ಎತ್ತಿ ಕೊಡುವ ವ್ಯವಸ್ಥೆ ಹೋಗಿ ಈಗ ಅವರವರೇ ಎತ್ತಿ ಕೊಂಡೊಯ್ಯುವ, ಆ ನಂತರ ಶುದ್ಧಿ ನಡೆಸಿ ಬಾವಿಗೆ ಕೀಲಿ ಹಾಕುವ ವ್ಯವಸ್ಥೆ ಜಾರಿಯಾಗಿದೆ. ಕೊಡಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಇಳಿಬಿಟ್ಟು ಜಗ್ಗುವುದರಿಂದ ಮೈಲಿಗೆ ನೀರಿಗೆ ತಗಲದೆ ಬಾವಿಯ ಕಟ್ಟೆಯ ಮೇಲೆಯೇ ಕುಳಿತಿರುತ್ತದೆ ಎಂಬುದು ಊರವರ ಆಧುನಿಕ ತರ್ಕ.

ಈ ಊರಿಗೆ ಒಂದು ವಿಚಿತ್ರ ಜೀವಶಕ್ತಿಯೂ ಇದೆ. ಅದು ಗಂಡು ಹೆಣ್ಣು ಸಂಬಂಧದ ಅತಿರೇಕವಾದ ಹಾದರವನ್ನು, ಆಧುನಿಕತೆಯ ಸಂಕೇತವಾದ ವಿದ್ಯುತ್ತನ್ನು, ಪ್ರಗತಿಯ ಮೂಲವಾದ ವಿದ್ಯೆಯನ್ನು, ಇವೆಲ್ಲವೂ ಒಂದೇ ಊರಿನಲ್ಲಿ ಒಳಗೊಳಗೇ ಹುಟ್ಟಿಸಿದ ಪ್ರತಿರೋಧವನ್ನು, ಇವು ಒಂದಲ್ಲ ಒಂದು ರೀತಿಯಲ್ಲಿ ಪೋಷಿಸುವ ಶೋಷಣೆಯನ್ನು ಒಂದು ಬಗೆಯ ಸೋಜಿಗದಿಂದಲೇ ಕಂಡು ಕೊನೆಗೆ ಅದು ಸಹಜವೇ ಏನೋ ಎಂಬ ಬೆರಗಿನಲ್ಲೇ ಸ್ವೀಕರಿಸಿ ತಣ್ಣಗೆ ಬದುಕುತ್ತಿರುವ ಊರಿದು.

ಕಾದಂಬರಿಯ ಪ್ರಧಾನವೆನ್ನಬಹುದಾದ ಕೆಲವು ಪಾತ್ರಗಳಲ್ಲಿ ರಾಜವ್ವ, ಕಾಲೇಜು ಕಲಿಯಲು ಹೋಗಿ ಅರ್ಧಕ್ಕೆ ಬಿಟ್ಟು ಬಂದ ಅವಳ ಮಗ ಮಲ್ಲು, ಶಿವಬಸವ್ವ, ಅವಳ ಗಂಡ ಚಿನ್ನಪ್ಪ, ಏಕತಾರೀ ಬಾಬಾ, ತನ್ನದೇ ಆದ ತತ್ವ, ನೀತಿ, ಮೌಲ್ಯಗಳೆಲ್ಲ ಇರುವ, ಸಿಂದೀ ಮಾರುವ ಮೀರಾಸಾಬ, ಆಗಾಗ ಊರಿಗೆ ಇರಿಸು ಮುರಿಸು ಉಂಟುಮಾಡುವ ಗಾಂಧೀವಾದಿಯಾದ ಕಾಂಗ್ರೆಸ್ ದೇವಪ್ಪ, ಸೂಳೆಯರಾದ ಚಂಪವ್ವ, ರತ್ನಮಾಲಾ, ತಾರವ್ವ ಮತ್ತು ಅವಳ ಮಗಳು ನಾಗೂ, ಮಾಣಿಕ ಪೂಜಾರಿ, ಪರಪ್ಪ ಸಾವಕಾರ, ವಿದ್ಯಾವಂತನೂ ಕ್ರಾಂತಿಕಾರಿ ದಲಿತನೂ ಆದ ದೇವೇಂದ್ರ ಮತ್ತು ಅವನನ್ನು ಆದರಿಸುವ ಮೇಲ್ಜಾತಿಯ ಪಾರ್ವತಿ ಮುಖ್ಯ. ಇಲ್ಲಿ ಬಾಳಾ ಸಾಹೇಬರು ಕೆಲವೊಂದು ಬಿಂಬ ಪ್ರತಿಬಿಂಬಗಳ ಪ್ರತೀಕವನ್ನೂ ಒದಗಿಸುವಂಥ ಪಾತ್ರ ನಿರ್ಮಿತಿ ಮಾಡಿದಂತಿದೆ.

ಎರಡು ದಿನಗಳಿಂದಲೂ ಕರೆಂಟಿಲ್ಲದೆ ಇಡೀ ಊರು ಕತ್ತಲೆಯಲ್ಲಿ ಅದ್ದಿ ಕೂತಿದ್ದಂಥ ಒಂದು ಕಗ್ಗತ್ತಲ ರಾತ್ರಿಯಲ್ಲಿ ಮಳೆ ಬೇರೆ ಸುರಿಯುತ್ತಿರ ಬೇಕಾದರೆ ಫಳ್‌ನೆ ಮಿಂಚು ಮಿಂಚುತ್ತಿರುವ ಹೊತ್ತಿನಲ್ಲಿ ಬರುವ ಏಕತಾರೀ ಬಾಬಾ ಪ್ರತಿನಿಧಿಸುವ ಮೌಲ್ಯಗಳು; ಊರ ಮುಂದಿನ ನೀರಿನ ಬಾವಿಯಷ್ಟೇ ಮಹತ್ವ ಪಡೆದಿರುವ ಭಜನಾದ ಮೂಲಕ ಆತ ಮಂದಿಯ ನಾಡಿಯನ್ನು ತನ್ನ ಏಕತಾರಿಯಲ್ಲಿ ಮೀಟುವ ರೀತಿ; ನಂದೋವಾಡಿಯ ಸಂಘರ್ಷದಲ್ಲಿ ಆತ ವಹಿಸುವ ಪಾತ್ರ; ಅವನ ಸೋಲಿನೊಂದಿಗೇ ತೆರೆದು ಕೊಳ್ಳುವ ಅವನ ಹಿನ್ನೆಲೆ ಎಲ್ಲವೂ ಕಟ್ಟಿ ಕೊಡುವ ಚಿತ್ರ ಅತ್ಯಂತ ಸಂಕೀರ್ಣವಾದುದು ಮತ್ತು ಧ್ವನಿಪೂರ್ಣವಾದದ್ದು. ಪ್ರತಿಯೊಬ್ಬ ಸಂತನಿಗೂ ಒಂದು ಗತಕಾಲವಿರುತ್ತದಂತೆ; ಪ್ರತಿಯೊಬ್ಬ ಭ್ರಷ್ಟನಿಗೂ ಭವಿಷ್ಯವಿರುವುದಂತೆ! ನಮ್ಮ ದೇಶದಲ್ಲಿ ಇದು ತದ್ವಿರುದ್ಧವಾಗುತ್ತಿರುವುದನ್ನು ಕಾಣುತ್ತಿರುವಾಗಲೇ ಇಲ್ಲಿ ಗಾಂಧೀವಾದಿ ದೇವಪ್ಪನಿದ್ದಾನೆ. ಅವನ ಸತ್ಯಾಗ್ರಹ, ಮೌನ, ಊರಿನವರಿಗೆ ಅವನ ಕುರಿತು ಇರುವ ಗೌರವ, ಪ್ರೀತಿ ಎಲ್ಲದರಾಚೆ ಮುಖ್ಯವಾಗುವ ಅವರವರ ಸ್ವಾರ್ಥ, ಈ ಎಲ್ಲದರ ಫಲವಾಗಿ ಕೊನೆಗೂ ಅವನಿಗೆ ದಕ್ಕುವುದೇನು ಎಂಬಲ್ಲಿ ಗಾಂಧೀವಾದ ಎಂಬುದರ ಕುರಿತು ನಮ್ಮಲ್ಲಿ ಇವತ್ತು ಇರುವ ಪರಿಕಲ್ಪನೆಯೇ ಸಾರ್ವತ್ರಿಕವಾಗಿ ಬದಲಾದ ಮನೋಧರ್ಮದ ಎದುರು ನಿಕಷಕ್ಕೆ ಒಡ್ದಲ್ಪಟ್ಟಿದೆ ಅನಿಸುತ್ತದೆ.

ಚಂಪವ್ವ, ರತ್ನಮಾಲಾ ಇಬ್ಬರೂ ಸೂಳೆಯರು. ತಾರವ್ವ ಕೂಡ ನಾಗೂ ಎಂಬ ವೇಶ್ಯೆಯ ತಾಯಿ. ಇವರಿಗೆ ಒಂದು ಹಂತದಲ್ಲಿ ಹಣವೇ ಮುಖ್ಯ. ಅದಕ್ಕಾಗಿಯೇ ಇವರು ತಮ್ಮ ಬದುಕನ್ನು ಪಣಕ್ಕೊಡ್ಡಲು ಮಾನಸಿಕವಾಗಿ ಸಜ್ಜುಗೊಂಡವರು. ಆದರೆ ಇವರ ಆಳದ ಭಾವುಕ ತಲ್ಲಣಗಳನ್ನು, ದ್ವಂದ್ವಗಳನ್ನು, ಹಪಹಪಿಕೆಗಳನ್ನು ಬಾಳಾಸಾಹೇಬರು ಅನೇಕ ಸಂದರ್ಭಗಳಲ್ಲಿ ಮರೆಯದೇ ಗಮನಿಸುತ್ತಾರೆ. ಒಬ್ಬಳು ಒಂದು ಅನಾಥ ಮಗುವಿನ ಎದುರು ಕರಗುತ್ತಾಳೆ. ಎಂದೋ ಜನ್ಮಕ್ಕೆ ಕಾರಣನಾಗಿ ದೂರವಾದ ತಂದೆ ಎಂಬ ಕರುಳಿನ ಸೆಳೆತದ ಎದುರು ಮಿಡಿಯುತ್ತಾಳೆ. ಸಾವಿನ ಎದುರು, ಹೃದಯದ ಕರೆಯಾದ ಪ್ರೀತಿಯ ಎದುರು ಮುಂತಾಗಿ ಮನುಷ್ಯತ್ವದ ವಿವಿಧ ಮುಖಗಳ ಎದುರು ಹಾಗೂ ಅವಕ್ಕೆ ಸಂವಾದಿಯಾಗಿ ನಿಲ್ಲುವ ದುಡ್ಡಿನ ಎದುರು ಇವರು ವರ್ತಿಸುವ ರೀತಿ, ಅವರ ಆದ್ಯತೆಗಳು ನಿಚ್ಚಳಗೊಳ್ಳುವ ರೀತಿ ಇಲ್ಲಿ ಅತ್ಯಂತ ಸಹಜವಾಗಿ ತೆರೆದುಕೊಳ್ಳುವುದೇ ಒಂದು ವಿಶೇಷ.

ಹಾಗೆಯೇ ಇಂಥ ಒಬ್ಬ ಸೂಳೆಯಾದ ಚಂಪವ್ವನ ಆಸ್ತಿ ಪಾಸ್ತಿಯನ್ನೂ ಅವಳ ಸಾವಿನ ಬೆನ್ನಿಗೇ ನುಂಗಿ ಗುಳುಂ ಮಾಡುವ ನೀಚ ಪರಪ್ಪ ಸಾವಕಾರ ಇಲ್ಲಿದ್ದಾನೆ. ಮತ್ತೀತ ಊರಿನವರೇ ಹೇಳುವಂತೆ ಜೈನರ ಜಾತಿಯಲ್ಲಿ ಹುಟ್ಟಿಯೂ ಹೀಗೆ ನಡೆದುಕೊಳ್ಳುತ್ತಾನೆ. ಅದೇ ಚಂಪವ್ವಳ ಮಗನ ಕತೆಯೂ ಕುತೂಹಲಕರ. ಗಂಡು ಜೋಗಿಯಾಗಿ ಅವಮಾನಿತನಾದ ಈತ ವ್ಯಾವಹಾರಿಕವಾಗಿ ಹೆಚ್ಚು ಮರ್ಯಾದೆಯ ಕಾಯಕ ಎಂಬ ಕಾರಣಕ್ಕೇ ಪೂಜಾರಿಯಾಗುವ, ಅದಕ್ಕಾಗಿಯೇ ಒಂದು ದೇವಸ್ಥಾನ, ಉತ್ಸವ ಎಲ್ಲ ಸೃಷ್ಟಿಸಿಕೊಳ್ಳುವ ಅವಕಾಶವಾದಿ! ಈ ಪರಪ್ಪ, ಮಾಣಿಕ ಪೂಜಾರಿಯ ಪಾತ್ರಗಳಿಗೆ ಸಂವಾದಿಯಾಗಿ ನಿಲ್ಲುವ ಏಕತಾರೀ ಬಾಬಾ, ಮೀರಾಸಾಬ ಅಥವಾ ಕಾಂಗ್ರೆಸ್ ದೇವಪ್ಪ ಮುಂತಾದವರ ಪಾತ್ರಗಳು ಇಲ್ಲಿ ನಮಗೆ ಎದುರಾಗುತ್ತವೆ. ಇಲ್ಲಿಯೇ ಒಂದು ಸಂಕೀರ್ಣ ಸಮಾಜದ ವಿಭಿನ್ನ ಸ್ತರಗಳಾಗಿ ನಮಗೆ ಒಬ್ಬ ಚಿನ್ನಪ್ಪ, ಒಬ್ಬ ದೇವೇಂದ್ರ ಕೂಡ ಸಿಗುತ್ತಾರೆ. ಇಬ್ಬರಿಗೂ ವಿಭಿನ್ನವಾದ ಅಮಲುಗಳು, ಭ್ರಾಂತಿಗಳು ತಗುಲಿವೆ. ಒಬ್ಬನಿಗೆ ಭಜನಾದ ಅಮಲಾದರೆ ಇನ್ನೊಬ್ಬನಿಗೆ ಕ್ರಾಂತಿಯ ಅಮಲು. ದೇವೇಂದ್ರ - ಪಾರ್ವತಿಯರ ಸಂಭಾವ್ಯ ರೂಪಾಂತರವನ್ನು ಇವರೇ ಸೂಚಿಸ್ತುತ್ತಾರೆಯೇ ಎಂಬಂತೆ ಮಲ್ಲು ಮತ್ತು ನಾಗೂ ಕೂಡ ಕಾಣಸಿಗುತ್ತಾರೆ.

ಅದೇ ರೀತಿ ಶಿವಬಸವ್ವ ಮತ್ತು ರಾಜವ್ವ ಕೂಡ ಒಂದು ಬಗೆಯ ಬೇಜವಾಬ್ದಾರಿಯ ಗಂಡಂದಿರ ಹೊರತಾಗಿಯೂ ಸಂಸಾರದ ಹೊಣೆಯನ್ನು, ಗಂಡಂದಿರ ಅತಿ-ಮಿತಿಗಳನ್ನು ತಮ್ಮದೇ ಜಾಣತನದಿಂದ ನಿರ್ವಹಿಸುವ ಬಗೆಯನ್ನು ಕಾಣಿಸುತ್ತಲೇ ಪಾರ್ವತಿಯ ಪಾತ್ರದ ಕಸುವನ್ನು, ಮುಂದೆ ಅವಳು ನಿಭಾಯಿಸಬೇಕಾದ ಸವಾಲನ್ನು ಪರೋಕ್ಷವಾಗಿ ಕಾಣಿಸಬಲ್ಲವರಾಗುತ್ತಾರೆಂಬುದೂ ಕೃತಿಯ ಧ್ವನಿಶಕ್ತಿಯನ್ನು ಸೂಚಿಸುತ್ತದೆ.

ಭಜನಾದ ಗುಂಗಿಗೆ ಸಿಲುಕಿ ಮಮತೆಯ ತಾಯಿ, ಹೆಂಡತಿ, ಮಕ್ಕಳು ಎಲ್ಲವನ್ನೂ ಮರೆಯಬಲ್ಲ ಚಿನ್ನಪ್ಪನಿಗೆ ಅಧ್ಯಾತ್ಮ ಹುಟ್ಟಿಸುವ ಭಯ ಕುತೂಹಲಕಾರಿ. ಮುತ್ಯಾನ ಪಾಲಕಿಯ ಮೆರವಣಿಗೆಯ ಸದ್ದು ಗದ್ದಲದಿಂದ ಬೆದರಿದ ಎಮ್ಮೆ ಓಟಕಿತ್ತು ಅದೇ ತನ್ನ ಮಗನ ದಾರುಣ ಸಾವಿಗೆ ಕಾರಣವಾದಾಗ, ಆ ಸಾವಿನ ಆಘಾತದಿಂದ ಚೇತರಿಸಿಕೊಳ್ಳದ ಹೆಂಡತಿ ಶಿವಬಸವ್ವ ಎಲ್ಲಿ `ತನುವಿನ ಆಶೆಯನ್ನು ಅಳಿದು ವಿರಕ್ತಿಗೆ' ಜಾರುತ್ತಿದ್ದಾಳೋ ಎನಿಸಿ ಚಿನ್ನಪ್ಪನಿಗೆ ಭಯವಾಗುತ್ತದೆ. ಮಗನ ಸಾವಿಗಿಂತಲೂ ಹೆಂಡತಿಯ ಈ ಬಗೆಯ ವಿರಕ್ತಿ ಅವನನ್ನು ವಿಚಲಿತಗೊಳಿಸುತ್ತದೆ. ಹಾಡುಗಳು ಹಾಡಲು ಮಾತ್ರ ಚಂದ, ಅವುಗಳಲ್ಲಿಯ ಭಾವಾರ್ಥ ಸಂಸಾರದಲ್ಲಿ ಸೇರಿಕೊಳ್ಳುವಷ್ಟು ಮುಂದೆ ಹೋಗಬಾರದು ಅನಿಸುತ್ತದೆ. ಅವನ ಮತ್ತು ಊರವರ ಶ್ರದ್ಧೆ, ನಂಬುಗೆಯ ಕೇಂದ್ರವಾದ ದೈವ ಎಲ್ಲಮ್ಮನ ಮೇಲೆ ಬಿದ್ದ ಕಲ್ಲುಗಳು ಮತ್ತು ಅವಳ ಪವಿತ್ರ ಜಗಕ್ಕೆ ಆದ ಗತಿ ಅವನನ್ನು ವೇದಾಂತಿಯ ಸ್ಥಾನದಿಂದ ಸಂಸಾರಕ್ಕೆ ಎಳೆಯತೊಡಗುತ್ತದೆ.

ಚಿನ್ನಪ್ಪನಲ್ಲಾದಂಥ ಪರಿವರ್ತನೆಯ ಪ್ರಕ್ರಿಯೆ ಊರ ಹಲವರಲ್ಲಿ ಹಲವು ಬಗೆಯಲ್ಲಿ ಸರಿಸುಮಾರು ಅವೇ ಘಟನೆಗಳ ಹಿನ್ನೆಲೆಯಲ್ಲಿ ನಡೆಯುವುದನ್ನು ಕಾದಂಬರಿ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ದೇವೇಂದ್ರನ ಹಸಿಹಸಿಯಾದ ಕ್ರಾಂತಿಯ ನಿಲುವುಗಳನ್ನೂ ಪಕ್ವಗೊಳಿಸುವ ಕಸು ಹೊಂದಿದವಳಂತೆ ತೋರಿಸಿಕೊಳ್ಳುವ ಪಾರ್ವತಿ ಮಾತ್ರ ಓದುಗನಲ್ಲಿ ಅಂಥ ವಿಶ್ವಾಸವನ್ನು ಸಮರ್ಥವಾಗಿ ಮೂಡಿಸುವಲ್ಲಿ ವಿಫಲವಾದರೂ ಈ ಅಂಶವನ್ನು ಕಡೆಗಣಿಸಲಾಗದು.

ಅಷ್ಟೇ ಅಲ್ಲ, ಇಲ್ಲಿನ ನದಿ, ಬಾವಿ, ಸತ್ತ ಎಮ್ಮೆ, ಎಲ್ಲಮ್ಮನ ಹಿತ್ತಾಳೆಯ ಜಗ, ಏಕತಾರೀ, ಚೌಡಿಕಿ ಎಲ್ಲವೂ ರೂಪಕಗಳಾಗುವ, ಕಾದಂಬರಿಗೆ ಹೊಸತೇ ಆದ ಒಂದು ಧ್ವನಿ ನೀಡುವ ಶಕ್ತಿ ಪಡೆಯುವುದು ಕೂಡ ಗಮನಾರ್ಹವಾದ ಸಂಗತಿಯೇ ಆಗಿದೆ.

ಕಾದಂಬರಿಯಲ್ಲಿ ಒಂದೆಡೆ ಶಿವಬಸವ್ವ ಮತ್ತು ರೇಣವ್ವ ಕೂಡಿ ಹೊಲಕ್ಕೆ ಹೋಗುವ, ಹೊಲತಿಯಾದ ರೇಣವ್ವ ಶಿವಬಸವ್ವನ ಕೂಸಿಗೆ ಮೊಲೆಯೂಡಿಸುವ ಸಂದರ್ಭದ ಚಿತ್ರಣವಿದೆ. ಶಿವಬಸವ್ವ ಕಂಡುಬಿಟ್ಟಳಲ್ಲ ಎಂದು ಭಯದಿಂದ ರೇಣುಕಮ್ಮ ತಟ್ಟನೆ ಮಗುವಿಗೆ ಮೊಲೆಬಿಡಿಸುವುದು ಮತ್ತು ಸ್ವತಃ ಶಿವಬಸವ್ವನೇ ರೇಣವ್ವ ಹಾಗೆ ಮಾಡಬಾರದಿತ್ತೆಂದು ಹಾಲೂಡಿಸುವುದನ್ನು ಮುಂದುವರಿಸಲು ಹೇಳುವುದು ಇಲ್ಲಿಯೇ. ಆದರೆ ಈ ಒಂದು ಹೃದಯಸ್ಪರ್ಶಿ ವಿವರಗಳ ಅಧ್ಯಾಯ ಕಾದಂಬರಿಯ ಮೂಲ ಎಳೆಗೆ ಸರಿಯಾಗಿ ಜೋಡಿಸಲ್ಪಡದೆ ಅದರ ಹಂದರದ ಹೊರಗೇ ಉಳಿದುಬಿಡುತ್ತದೆ. ಹೊಲೆಯರ ಮತ್ತು ಊರವರ ನಡುವಿನ ಸಂಬಂಧದ ಆರ್ಥಿಕ ಪಾತಳಿಯನ್ನು, ಅವರಲ್ಲಿನ ಪರಸ್ಪರ ಅವಲಂಬನದ ಅರಿವನ್ನು ಮರೆತು ಯಾವುದೇ ಕ್ರಾಂತಿಯಾಗಲೀ, ಸಾಮಾಜಿಕ ಪರಿವರ್ತನೆಯಾಗಲೀ ಸಾಧ್ಯವೂ ಅಲ್ಲ, ಸಾಧುವೂ ಅಲ್ಲ ಎಂಬ ಬಹಳ ಆಳವಾದ ವಿಚಾರವನ್ನು ಹೊಂದಿರುವ ಪಾರ್ವತಿ ಕೂಡ ಗಮನಿಸದೇ ಹೋಗುವ ಈ ಮಾನವೀಯ ಸಂಬಂಧದ ಪಾತಳಿಯನ್ನು ಸ್ವತಃ ಕಾದಂಬರಿಕಾರರು ಮುಂದಿನ ಕಥಾನಕದ ಯಾವುದೇ ಹಂತದಲ್ಲೂ ಬಳಸಿಕೊಳ್ಳುವುದಿಲ್ಲ ಎಂಬುದು ಅಚ್ಚರಿಯನ್ನು ಮೂಡಿಸುತ್ತದೆ. ಜೀವಸೆಲೆಯಾದ ನೀರಿನ ಕುರಿತೇ ವ್ಯಾಜ್ಯ, ಜಗಳ ಎಲ್ಲ ನಡೆಯುತ್ತಿರುವಾಗಲೂ ಮಲ್ಲು ನಾಗೂರ ಪ್ರೀತಿಯ ಸೆಲೆ ಬತ್ತುವುದಿಲ್ಲ ಎಂಬುದು ನಿಜವಾದರೂ ಬಾಳಾಸಾಹೇಬರು ಗಮನಿಸಿದ ಮನುಷ್ಯ ಸಂಬಂಧದ ಒಂದು ಮೂಲ ಎಳೆ, ಎದೆಹಾಲಿನಂಥ ಒಂದು ಸೆಲೆ ಮತ್ತೊಮ್ಮೆ ಇಲ್ಲಿ ಪ್ರಧಾನ ಭೂಮಿಕೆಗೆ ಬರುವುದಿಲ್ಲ. ಪಾರ್ವತಿಯ ವೈಚಾರಿಕತೆಗಿಂತ ಮಾನವೀಯ ಸಂವೇದನೆಗಳೂ ದಲಿತರ ಸಮಸ್ಯೆಗಳಿಗಿರುವ ಪರಿಹಾರಗಳನ್ನು ರೂಪಿಸುವಲ್ಲಿ ಪ್ರಧಾನಪಾತ್ರವಹಿಸಬೇಕು ಎಂಬ ಕಾದಂಬರಿಯ ಮೂಲ ಆಶಯವೇ ತೆಳ್ಳಗಾಗಲು ಇದು ಪರೋಕ್ಷವಾಗಿ ಕಾರಣವಾಗುತ್ತದೆ.

ವೈಚಾರಿಕತೆ ಮತ್ತು ಮಾನವೀಯ ಅನುಬಂಧ ಎರಡೂ ಇಂಥ ಸಮಸ್ಯೆಗಳನ್ನು ಮುಖಾಮುಖಿಯಾಗುವಾಗ ನಮಗೆ ಮುಖ್ಯವಾಗುತ್ತವೆ ಎಂಬುದು ಕಾದಂಬರಿಯ ಉದ್ದಕ್ಕೂ ಕಂಡು ಬರುವ ನಿಲುವಾದರೂ ಪಾರ್ವತಿಯ ಪಾತ್ರ ಅದನ್ನು ಪರಿಪೂರ್ಣವಾಗಿ ಮೈದುಂಬಿಕೊಂಡು ಬಂದಿಲ್ಲ ಎನ್ನುವುದನ್ನು ಗಮನಿಸಬೇಕು. ಬಹುಷಃ ಪಾರ್ವತಿಯ ಪಾತ್ರಕ್ಕೆ ಅಗತ್ಯವಾದ ಪೋಷಣೆ ಸಿಗದೇ ಹೋದುದು ಹೀಗಾಗಲು ಕಾರಣವಿದ್ದೀತು. ದೇವೇಂದ್ರನ ಕ್ರಾಂತಿಕಾರಕ ನಿಲುವು ಅದರ ದುಡುಕುತನ ಮತ್ತು ತಕ್ಷಣದ ಫಲಿತಾಂಶದ ಬಯಕೆ ಒಂದು ಮಿತಿಯುಳ್ಳದ್ದು ಮತ್ತು ಮಾನವೀಯ ಸಂಬಂಧಗಳ ಅಸ್ತಿತ್ವವನ್ನೇ ಮರೆತು ರಟ್ಟೆಯೇರಿಸುವ ಬಗೆಯದ್ದು ಎಂಬುದು ಪಾರ್ತತಿಗೆ ಗೊತ್ತಾದರೂ ಅವಳು ಬಯಸುವ ಮಾನವೀಯ ನೆಲೆಯ ವೇದಿಕೆಯೊಂದನ್ನು ಅವಳೇ ಸೃಜಿಸಿಕೊಳ್ಳುವಷ್ಟು ನಂದೋವಾಡಿಯಲ್ಲಿ ಅವಳ ಸಂವೇದನೆಗಳು ಪಕ್ವಗೊಂಡಿವೆಯೇ ಎಂಬುದು ಓದುಗರ ಊಹೆಗೆ ಬಿಟ್ಟ ವಿಚಾರವಾಗಿಯೇ ಉಳಿದಿರುವುದಂತೂ ಸತ್ಯ.

ಮೆರವಣಿಗೆಯೊಂದು ಆಡುವ ಕೂಸಿನ ಸಾವಿಗೆ ಕಾರಣವಾದ ದಾರುಣ ಘಟನೆಗೆ ಕವಳ್ಳಿ ಮುತ್ಯಾ ಪ್ರತಿಕ್ರಿಯಿಸುವ ಬಗೆ ಬಹಳ ಮಹತ್ವದ್ದಾಗಿದೆ. "ಭೂಮಿ ಮ್ಯಾಲಿನ ನೀರೆಲ್ಲಾ ಒಂದ. ಅದೆಲ್ಲಾ ದೇವರು ಕೊಟ್ಟದ್ದು. ಇದನ್ನ ತಿಳಿಕೊಲಾಕ ನನ್ನ ಮುಂದೆ ಒಂದ ಸಾವ ಬೇಕಾಗಿತ್ತಾ.... ಕರಿಸಿದ್ಧಾ ಯಾನ ನಿನ್ನ ಆಟಾ!"

ಈ ಮಾತು ಆಡುವ ಹೊತ್ತಿಗೆ ಊರಲ್ಲಿ ನೀರಿಗಾಗಿ ಜಗಳ, ದ್ವೇಷ, ಜಿದ್ದು ಎಲ್ಲ ಸುರುವಾಗಿರಲಿಲ್ಲ. ಆದರೆ ದೇವರ ಜಳಕಕ್ಕಾಗಿಯೇ ಈ ಊರಿಗೆ ಬರುವ ಅಗತ್ಯವಿರಲಿಲ್ಲ, ಹಾಗೆ ಬರಲು ಹೂಡಿದ ಮೆರವಣಿಗೆ ಮಗುವಿನ ಸಾವಿಗೆ ಮೂಲವಾಯಿತು ಎಂಬುದಷ್ಟೇ ಮುತ್ಯಾನ ಹಳಹಳಿಕೆಯಾದರೂ ಕಾದಂಬರಿಯ ಕಥಾನಕದ ಸಂದರ್ಭದಲ್ಲಿ ಈ ಸಾವು, ಈ ಮಾತು ಎರಡೂ ಬಹಳ ಧ್ವನಿಪೂರ್ಣವಾಗುತ್ತವೆ. ಸಾವಿರಾರು ಮಂದಿಯ ಮಾರಣಹೋಮಕ್ಕೆ ಕಾರಣವಾದ ರಥಯಾತ್ರೆಯ ನೆನಪನ್ನೂ ಇದು ತರುತ್ತದೆ. ಇಲ್ಲಿಯೂ ಗುಡಿಕಟ್ಟುವ, ಸ್ವಾರ್ಥಕ್ಕಾಗಿ ದೇವರನ್ನು ಬಳಸಿಕೊಳ್ಳುವ ಪಂಗಡಗಳಿರುತ್ತ ಇದು ಹೆಚ್ಚು ಪ್ರಾಸಂಗಿಕವಾಗಿದೆ. ಉಧೋ ಉಧೋ ಎಂಬ ಕೊಂಚ ಉನ್ಮಾದವನ್ನೂ, ಭಕ್ತಿರಸದ ಉತ್ತುಂಗದ ಮನಸ್ಥಿತಿಯನ್ನೂ ಪ್ರತಿನಿಧಿಸುವ ಶಬ್ದಗಳು ಜೊತೆಜೊತೆಗೇ ಅದರ ಅಡ್ಡ ಪರಿಣಾಮಗಳನ್ನೂ, ವಿವೇಚನಾ ರಹಿತ ಸಮೂಹಸನ್ನಿಯನ್ನೂ ಪ್ರತಿನಿಧಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕಾದಂಬರಿ ಇದನ್ನು ಯಶಸ್ವಿಯಾಗಿ ಚಿತ್ರಿಸಿದೆ.

ರತ್ನಮಾಲಾಳ ಕರುಳಿನ ಕಕ್ಕುಲಾತಿ ಮತ್ತು ದುಡ್ಡಿನ ಲೆಕ್ಕಾಚಾರದೆದುರು ಅದು ಹಿಡಿಯುವ ವಿಲಕ್ಷಣ ಹಾದಿಯನ್ನು ಈ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಊರ ಹೊಲೆಯರಿಗಾಗಿ ಬಾವಿ ತೋಡಿಸುವ, ಅವರ ಜಾನುವಾರುಗಳಿಗೆ ಮೇವು ತಿನ್ನಿಸುವ, ಅವರಿಗೆ ಅನ್ನ ಉಣಿಸುವ ಔದಾರ್ಯ ಮೆರೆದ ಬೆನ್ನಿಗೇ ತನ್ನ ಕ್ರಿಯೆಯ ಅರ್ಥಹೀನತೆಯನ್ನೂ, ಹಣದ ದುಂದನ್ನೂ ಗುರುತಿಸಿ ವಿಲಕ್ಷಣವಾಗಿ ವರ್ತಿಸುವ ರತ್ನಮಾಲಾ ದಲಿತರ ಸಮಸ್ಯೆಗಳಿಗಿರುವ ಸಾಮಾಜಿಕ ಮುಖದಾಚೆಗಿನ ಆರ್ಥಿಕ ಆಯಾಮವನ್ನು ನುರಿತ ರಾಜಕಾರಣಿಯಂತೆ ಬಳಸಿಕೊಳ್ಳಲು ತೊಡಗುವುದು ಮತ್ತು ಅದರ ಸದ್ಯದ ಮೂಲ ನೀರೇ ಆಗುವುದು ವಿಪರ್ಯಾಸ.

ಇಷ್ಟೆಲ್ಲ ಇದ್ದೂ ಕಾದಂಬರಿಯ ಓದು ಒಂದು ಅನುಭವವಾಗಿ ಮೈತಳೆಯುವುದಿಲ್ಲ ಅನಿಸುತ್ತದೆ. ಈ ಎಲ್ಲ ಪಾತ್ರಗಳು ಪರಸ್ಪರ ಹೆಣೆದುಕೊಂಡು ಕಥಾನಕದ ಚಲನೆಯೊಂದಿಗೇ ಸಂತುಲಿತವಾಗಿ, ಸಹಜವಾಗಿ ಒಳಗುಗೊಳ್ಳುವುದಿಲ್ಲ. ಬದಲಿಗೆ, ಬಿಡಿಬಿಡಿಯಾಗಿಯೇ ಉಳಿದುಬಿಟ್ಟಂತನಿಸುತ್ತದೆ. ಬಾಳಾಸಾಹೇಬರು ಹಲವಾರು ಪಾತ್ರ, ಚಿತ್ರಗಳ ಮೂಲಕ ಹಲವು ಸ್ತರಗಳಲ್ಲಿ ಒಂದು ನಂದೋವಾಡಿಯನ್ನು ನಮಗೆ ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಅಷ್ಟರಮಟ್ಟಿಗೆ ಅವರು ಯಶಸ್ವಿಯಾಗುತ್ತಾರೆ ಕೂಡ. ಆದರೆ ಎಲ್ಲೋ ಒಂದುಕಡೆ ಕಥಾನಕದ ಎಲ್ಲ ಎಳೆಗಳೂ ಊರ ಒಂದೇ ಬಾವಿ ಎರಡಾಗುವುದು ಮತ್ತು ಊರನ್ನು ಆರೋಗ್ಯಕರವಾಗಿ ಬೆಸೆದು-ಬಿರಿದು ಹರಿಯುತ್ತಿದ್ದ ದೇವೀರಿ ಹಳ್ಳದಲ್ಲಿ ಅನಾಥವಾಗಿ ಬಿದ್ದ ದೈವದ ಜಗ ಊರನ್ನು ಎರಡಾಗಿಸುವುದು - (ಅದರ ಕಾರ್ಯ-ಕಾರಣ-ಪರಿಣಾಮ ಎಲ್ಲದರೊಂದಿಗೇ) ಎಂಬಲ್ಲಿಗೇ ಬಂದು ನಿಲ್ಲುವುದು ಕಾದಂಬರಿಯ ಗಮ್ಯ ಆಗಿರುವುದರಿಂದ ಆ ಸಂದರ್ಭದಲ್ಲಿ ಓದುಗನಿಗೆ ಅದು ಕಾದಂಬರಿಯಲ್ಲಿ ಸಹಜವಾಗಿ ಆಗಿದೆ ಎಂದು ಅನಿಸುವುದಿಲ್ಲ.

ವಿನಾಶದ ಹಂತದಲ್ಲಿರುವ ನಂದೋವಾಡಿಗೆ ಎರಡು ಭರವಸೆಗಳ ಆಶಾವಾದ ಉಳಿದಿದೆ. ಒಂದು ಮಲ್ಲು ಮತ್ತು ನಾಗೂ ಹಣಕ್ಕೆ ಬೆನ್ನು ಹಾಕಿ ಹಿಡಿದ ಮನುಷ್ಯ ಪ್ರೀತಿಯನ್ನು ಪೊರೆಯಬಲ್ಲ ಹಾದಿ. ಅದು ಊರಿನಿಂದ ದೂರ ಹೋಗಿ ನಿಂತು ಚಿಗುರಿಸಬೇಕಾದ್ದು. ಇನ್ನೊಂದು ಪಾರ್ವತಿ. ಅವಳೀಗ ಹೊಲೆಯರ ಕೇರಿಗೆ, ಮೊದಲ ಬಾರಿಗೆ ದೇವೀರಿ ಹಳ್ಳ ದಾಟಿ ಕಾಲಿಟ್ಟಿದ್ದಾಳೆ. ಅಲ್ಲಿ ಅರೆಬೆಂದ ವಿಚಾರಗಳ ಕ್ರಾಂತಿಕಾರಿ ದೇವೇಂದ್ರ ಇದ್ದಾನೆ. ಹಾಗೆ ನೋಡಿದರೆ ಅವಳು ಹೊರಟಿದ್ದೇ ಅವನನ್ನು ಭೇಟಿಯಾಗಲಿಕ್ಕೆ. ಇದು ಶಾಬ್ದಿಕವಾಗಿ ಎಂತೋ ಅಂತೆಯೇ ಧ್ವನಿಯಾಗಿಯೂ ಒಂದು ಅಪೂರ್ವ ಭೇಟಿ. ಒಂದು ಸಾಮಾಜಿಕ ಕ್ರಾಂತಿಗೆ ಅಗತ್ಯವಾದ ಪರಸ್ಪರ ಪೂರಕವಾದ ಆದರೂ ವಿಭಿನ್ನ ವಿಚಾರಧಾರೆಗಳ ಒಂದು ಸಂಕಲನ. ಮತ್ತೆ ಅಲ್ಲಿ ಮೂರ್ತಿಯೇ ಇಲ್ಲದ ಎಲ್ಲಮ್ಮನ ಖಾಲಿ ಗುಡಿ ಇದೆ. ಕೀಲಿ ಜಡಿದ ರತ್ನಮಾಲಾಳ ಬಾವಿ ಇದೆ. ಎಲ್ಲಕ್ಕಿಂತ ಹೆಚ್ಚು ಹಿಂದೆ ಹೇಳಿದ ಉನ್ಮಾದವನ್ನೂ ಸಮೂಹ ಸನ್ನಿಯನ್ನೂ ಅದರ ಎಲ್ಲ ಸಾಧಕ ಬಾಧಕಗಳ ಜೊತೆಯಲ್ಲೇ ಗುರುತಿಸಬೇಕಾದ ಉಧೋ ಉಧೋ ಎಂಬ ಏರುತ್ಸಾಹದ ಮಂದಿ ಇದ್ದಾರೆ. ಆದರೆ ಪಾರ್ವತಿ ದೇವೇಂದ್ರನ ಅನುಸಂಧಾನದೊಂದಿಗೆ ಸಾಧಿಸ ಬೇಕಾದುದು ಬಹಳವಿದೆ ಮತ್ತು ಅದನ್ನೆಲ್ಲ ಕಾಂಗ್ರೆಸ್ ದೇವಪ್ಪ, ಏಕತಾರೀ ಬಾಬಾ ಮತ್ತು ಮೀರಾಸಾಬನಂಥವರ ಅನುಪಸ್ಥಿತಿಯಲ್ಲಿ ಸಾಧಿಸ ಬೇಕಾದ ಸವಾಲಿದೆ. ಕಾದಂಬರಿ ಈ ದಾಟುವಿಕೆಯಲ್ಲೇ ಮುಗಿಯುತ್ತದೆ.

ಬಾಳಾ ಸಾಹೇಬರು ಬಳಸುವ ಭಾಷೆ, ನುಡಿಕಟ್ಟು ಮತ್ತು ವಿವರಗಳಲ್ಲಿ ಕಟ್ಟಿಕೊಡುವ ಚಿತ್ರಗಳು ಈ ಕಾದಂಬರಿಯ ಓದು ಆಪ್ತವಾಗಿಸಲು, ಓದುಗನನ್ನು ತನ್ನೊಂದಿಗೆ ಸೆಳೆದೊಯ್ಯಲು ಸಹಕರಿಸುವುದರ ಜೊತೆಗೇ ಕೃತಿಗೆ ಒಂದು ವಿನೂತನ ಲಯವನ್ನೂ ದೊರಕಿಸಿಕೊಡುತ್ತವೆ. ಅದು ದೇವನೂರ ಮಹದೇವ ಕುಸುಮಬಾಲೆಯಲ್ಲಿ ಸಾಧಿಸಿದ ಲಯದ ನೆನಪನ್ನು ಅಲ್ಲಲ್ಲಿ ಮೂಡಿಸಿದರೆ ಅಚ್ಚರಿಯಿಲ್ಲ. ಆದರೆ ಈ ಲಯದ ಮೋಹದಲ್ಲಿ ಬಾಳಾಪುರ ಕಳೆದು ಹೋಗುವುದಿಲ್ಲ ಎನ್ನುವುದು ಮುಖ್ಯ.

ವಿಭಿನ್ನ ಕಾರಣಗಳಿಗಾಗಿ ರಾವ್ ಬಹದ್ದೂರರ ಗ್ರಾಮಾಯಣವನ್ನೂ, ರಾಘವೇಂದ್ರ ಪಾಟೀಲರ ತೇರು ಕಾದಂಬರಿಯನ್ನೂ, ಅನಂತಮೂರ್ತಿಯವರ ದಿವ್ಯವನ್ನೂ ನೆನಪಿಸುವ ಉಧೋ ಉಧೋ ಒಂದು ಅಗತ್ಯ ಓದ ಬೇಕಾದ ಕಾದಂಬರಿ.

ಕೃತಿಯ ಹೆಸರು: ಉಧೋ! ಉಧೋ!
ಕೃತಿಕಾರ : ಬಾಳಾಸಾಹೇಬ ಲೋಕಾಪುರ
ಪುಟಗಳು : viii+143
ಬೆಲೆ : 90.00
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ.ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, November 30, 2008

ವಿವೇಕ್ ಶಾನಭಾಗರೊಡನೆ....(ಉತ್ತರಾರ್ಧ)

ಈಗ ನಿಮ್ಮ ಕತೆಗಳ ಜಗತ್ತಿಗೆ ಬರುವ. ಅಂಕುರ ಸಂಕಲನ ಬರುವ ಹೊತ್ತಿಗೆ ತಮ್ಮ ಮೇಲೆ ಚಿತ್ತಾಲರ ಪ್ರಭಾವ ಇತ್ತೆ? ಮುಂದೆ ನೀವು ಅದರಿಂದ ಹೇಗೆ ಹೊರಬಂದಿರಿ? ಹೊರಬರುವುದಕ್ಕಾಗಿಯೇ ಏನಾದರೂ ಮಾಡಬೇಕಾಯಿತೋ ಹೇಗೆ?

ನಾನು ಚಿತ್ತಾಲರನ್ನ ಅಕಸ್ಮಾತ್ತಾಗಿ ಓದಿದೆ. ಅಂದ್ರೆ, ನಾನು ಸಾಹಿತ್ಯಾನ ಓದ್ಲಿಕ್ಕೆ ಸುರುಮಾಡಿದಾಗ ನನ್ಗೆ ಈ ನವ್ಯ ಅಥವಾ ನವೋದಯ ಅಥವಾ ಈ ಪ್ರಗತಿಶೀಲ .. ಆತರದ ಯಾವ ಒಂದು ಸಾಹಿತ್ಯದಲ್ಲಿ ಪಂಥಗಳಿದ್ದಾವೆ ಅನ್ನೋದು ಗೊತ್ತಿರಲಿಲ್ಲ. ನಾನು ನನ್ನ ಕೈಗೆ ಸಿಕ್ಕಿದ ಪುಸ್ತಕಗಳನ್ನ ಓದ್ತಾ ಬಂದೆ. ಆಮೇಲೆ ಓದ್ತಾ ಓದ್ತಾ ಓದ್ತಾ ನಂಗೆ ಇಷ್ಟವಾದದ್ದನ್ನ ಹೆಚ್ಚು ಓದಿದೆ. ಅದೇ ರೀತಿ ಆವಾಗ ನಾನು ಯಶವಂತ ಚಿತ್ತಾಲರನ್ನ ಮೊಟ್ಟಮೊದಲ್ನೆ ಸಲ ಓದ್ದಾಗ ನನಗೆ, ಅವರ ಆಟ ಸಂಕಲನ ನಾನು ಮೊದ್ಲು ಓದಿದ್ದು, ಆವಾಗ ನನ್ಗೆ ತುಂಬ ಆಶ್ಚರ್ಯ ಆಯ್ತು. ಆಶ್ಚರ್ಯ ಯಾಕಂದ್ರೆ ನಾನು, ಆವಾಗ ನಾನು ಉತ್ತರಕನ್ನಡದಿಂದ ಬಂದವ್ನು, ಅವ್ರೂ ಉತ್ತರಕನ್ನಡದವ್ರು, ಆವಾಗ ನನ್ನ ಸುತ್ತಲಿನ ಪರಿಸರ ಇಷ್ಟು ಚೆನ್ನಾಗಿ, ಇಷ್ಟು ಬೇರೆಯಾಗಿ ಅವ್ರ ಕತೆಗಳಲ್ಲಿ ಕಾಣಿಸ್ತಾ ಇರ್ಬೇಕಾದ್ರೆ, ಏನು ಅದನ್ನ ಅವರು ನೋಡಿರುವ ರೀತಿಯಲ್ಲಿ ಏನು ಭಿನ್ನತೆ ಇದೆ ಅಂತ ಅನಿಸ್ತು ನನಗೆ. ನನಗೆ ಮೊಟ್ಟ ಮೊದಲ್ನೆ ಸಲ ಈ ನನ್ನೊಳಗೂ ಇನ್ನೊಂದು ಉತ್ತರ ಕನ್ನಡ ಇದೆ, ನನ್ನೊಳಗೂ... ನಾವು ಒಂದೇ ನೆಲವನ್ನ ಹಂಚಿಕೊಂಡಿದ್ರು, ಒಂದೇ ಊರಲ್ಲಿ ನಾವು ಬೆಳೆದಿದ್ರು ನನಗೆ ನಾನು ಕಾಣುವ ಜಗತ್ತು ಬೇರೆ, ಅವ್ರು ಕಾಣುವ ಜಗತ್ತು ಬೇರೆ ಅಂತನ್ನುವಂಥ ಒಂದು... ಅನ್ನೋದು ನನ್ಗೆ ಹೊಳೀತು ಆವಾಗ. ಅದ್ರಿಂದಾಗಿ ನನಗೆ ಹೆಚ್ಚು ಸ್ಫೂರ್ತಿ ಬಂತು ಅಂತ ನಾನು ಹೇಳ್ಬಹುದು. ಅಂದ್ರೆ, ಈ ತರದ, ಅದ್ರಲ್ಲು ಅವರ ಸಂದರ್ಶನ, ಅಬೋಲಿನ್, ಆ ಕತೆಗಳನ್ನ ಓದ್ದಾಗ ನಮ್ಮ ಸುತ್ತಮುತ್ತಲಿನ ಜಗತ್ತು, ಸುತ್ತಮುತ್ತಲಿನ ಕಥೆಗಳು, ಅವುಗಳನ್ನೆ ಕಥೆಯಾಗಿ ನಾನು ಕೂಡ ಹೇಳಬಲ್ಲೆ ಮತ್ತು ಭಿನ್ನವಾಗಿ ಹೇಳಬಲ್ಲೆ ಅಂತ ನನಗೆ ಅನಿಸ್ತು.

ಆಮೇಲೆ ಅವರ ಪ್ರಭಾವದ ಬಗ್ಗೆ ಹೇಳ್ಬೇಕಂದ್ರೆ, ಮೊದ್ಲು ಅದ್ರಿಂದ ನಾನು ತುಂಬ ಪ್ರಜ್ಞಾಪೂರ್ವಕವಾಗಿ ತಪ್ಪಿಸ್ಕೊಂಡೆ. ಅದೂ ನನ್ನ ಮೊದಮೊದಲು ಕೆಲವು ಕತೆಗಳಲ್ಲಿ. ಯಾಕಂದ್ರೆ ಅದು ನನಗೆ, ನಾನು ಉತ್ತರಕನ್ನಡದ ಬಗ್ಗೆ ಬರೀಲಿಕ್ಕೆ ಸುರು ಮಾಡ್ದಾಗ ಅವ್ರು ಉತ್ತರಕನ್ನಡದವ್ರಾಗಿರೋದ್ರಿಂದ ಮತ್ತು ಆಗಲೇ ಅಂದ್ರೆ ನಾನು ಬರೆಯೋ ಹೊತ್ತಿಗಾವಾಗ್ಲೇ ಅವ್ರು ಪ್ರಸಿದ್ಧ ಲೇಖಕರು ಆಗಿದ್ರಿಂದ, ಅವ್ರ ಬರವಣಿಗೆ ಬಗ್ಗೆ, ಅವರು ಉಪಯೋಗಿಸೋ ಕೆಲವು ನುಡಿಗಟ್ಟುಗಳ ಬಗ್ಗೆ, ಅವರು ಉಪಯೋಗಿಸುವ ಕೆಲವು ಶಬ್ದಗಳ ಬಗ್ಗೆ, ಅವೆಲ್ಲವೂ ಜನ್ರಿಗೆ ಅವಾಗ್ಲೇ ಗೊತ್ತಿತ್ತು. ಆಮೇಲೆ ಉತ್ತರಕನ್ನಡ ಅಂದ್ರೆ ಚಿತ್ತಾಲರ ಉತ್ತರಕನ್ನಡ ಅನ್ನೋದು ಮಾತ್ರ ಜನರ ಮನಸ್ಸಲ್ಲಿತ್ತು. ಹಾಗಾಗಿ ನಾನು ಅದನ್ನ ಪ್ರಜ್ಞಾಪೂರ್ವಕವಾಗಿ ಕೆಲವು ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಲಿಲ್ಲ. ಯಾಕಂದ್ರೆ ನನಗೆ ಅವ್ರಿಗಿಂತ ನನ್ನದು ಬೇರೆ ಉತ್ತರಕನ್ನಡ, ನಾನು ನೋಡಿದ ಉತ್ತರಕನ್ನಡ ಬೇರೆ, ನನ್ನ, ನಾನು ನೋಡಿದ ಜಗತ್ತು ಬೇರೆ ಅನ್ನೊದನ್ನ ನನಗೆ ಹೇಳ್ಬೇಕಿತ್ತು. ಆ ಅದೇ ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಿದ್ರೆ, ಜನ ಅದನ್ನ, ಅಥವಾ ಓದುಗರಿಗೆ ಅದು, ಬೇರೆಯಾಗಿ ಅನಿಸದೇ ಹೋಗಬಹುದು. ಭಿನ್ನವಾದ ಒಂದು ಕತೆಯನ್ನ ನಿಮಗೆ ಹೇಳ್ಬೇಕಾದ್ರೆ, ಬೇರೆ ರೀತಿಯಲ್ಲಿ ನಿಮಗೆ ಹೇಳ್ಬೇಕಾದ್ರೆ ಅದಕ್ಕೆ ಬೇರೆದೇ ಒಂದು ಭಾಷೆ ಬೇಕು. ಅಂದ್ರೆ ಕೆಲವನ್ನು ನೀವು ಎತ್ತರದ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ, ಕೆಲವನ್ನ ನೀವು ಕಡಿಮೆ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ. ಕೆಲವನ್ನ ಹೇಳ್ದೇ ಇರ್ಬೇಕಾಗುತ್ತೆ. ಸೊ, ಈ ಎಲ್ಲ ಕೌಶಲ್ಯಗಳೇನಿದಾವೆ, ಅದನ್ನೆಲ್ಲ ನಾನು ಬರಬರುತ್ತ ರೂಢಿಸಿಕೊಂಡೆ. ಆದ್ರೆ, ನಾನು ಪ್ರಜ್ಞಾಪೂರ್ವಕವಾಗಿ ಮಾಡಿದ್ದೆಂದ್ರೆ, ಚಿತ್ತಾಲರಿಗೇ ವಿಶಿಷ್ಟವಾದ ಕೆಲವನ್ನ ಪ್ರಜ್ಞಾಪೂರ್ವಕವಾಗಿ ಉಪಯೋಗಿಸದೇ ಬಿಟ್ಟೆ.

ಒಂದು ರೀತಿ ನೋಡಿದರೆ ಒಂದು ಸಂಕಲನದಿಂದ ಇನ್ನೊಂದಕ್ಕೆ ಹೋಗುವಾಗ ನೀವು ಮಹತ್ವದ ಬದಲಾವಣೆಗಳನ್ನು, ಬೆಳವಣಿಗೆಯನ್ನು ದಾಖಲಿಸುತ್ತ ಬಂದವರು. ಅಂದರೆ ಪ್ರತಿ ಮೂರನೆಯ ಸಂಕಲನದಲ್ಲಿ ಮೊದಲ ಎರಡರ ಸಮನ್ವಯತೆ, ಹಿಂದಿನದ್ದರ ಅತಿಗಳಿಂದ ಮುಕ್ತಿ ಎದ್ದು ಕಾಣುತ್ತದೆ. ಅಂಕುರದ ಕಾಮ ಮುಂದೆ ತನ್ನ ಜಾಗ ಕಂಡುಕೊಂಡ ಹಾಗೇ, ಲಂಗರುವಿನಲ್ಲಿ ಮನುಷ್ಯ ಸಂಬಂಧಗಳ ತಲ್ಲಣಗಳ ಕುರಿತಾದ ಶೋಧ ನಡೀತು. ಹುಲಿಸವಾರಿ ಸಂಕಲನಕ್ಕೆ ಬರುವ ಹೊತ್ತಿಗೆ ತಮ್ಮ ಕಥಾಲೋಕದ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿದ್ದಂತೆ, ಮನುಷ್ಯ ಸಂಬಂಧಗಳ ಒಂದು ಭಾವನಾತ್ಮಕ ಜಗತ್ತಿನಿಂದ ತಾವು ಕಾರ್ಪೋರೇಟ್ ಜಗತ್ತು ಅವನ ಭಾವವಲಯವನ್ನು ಅತಿಕ್ರಮಿಸುತ್ತಿರುವುದರ ಬಗ್ಗೆ ಆಸಕ್ತರಾದ ಹಾಗೆ ಕಾಣಿಸುತ್ತದೆ. ಬಗೆಯ ಬದಲಾವಣೆಗೆ ಕಾಲಘಟ್ಟದ ಸ್ಥಿತ್ಯಂತರಗಳು ಕಾರಣವೇ ಅಥವಾ ಸಾಹಿತ್ಯ ಸಮಕಾಲೀನವಾಗಿರಬೇಕೆಂದು ತಮಗೆ ಅನಿಸಿತ್ತೇ? ಯಾಕೆಂದರೆ ಮುಂದೆ ನೀವು ಸಾಧಿಸಿದ ಸಮನ್ವಯತೆಯ ದೃಷ್ಟಿಯಿಂದ, ಮತ್ತೊಬ್ಬನ ಸಂಸಾರ ಗಮನಿಸಿದರೆ ತಿಳಿಯುವ ಹಾಗೆ, ಇದು ಬಹಳ ಮುಖ್ಯವಾದ ಬೆಳವಣಿಗೆ ಅಂತ ಅನಿಸುತ್ತದೆ. ಇದನ್ನು ಸ್ವಲ್ಪ ವಿಶ್ಲೇಷಿಸಬಹುದೆ?

ಅಂದ್ರೆ ಈ ಸಮಕಾಲೀನತೆ ಅನ್ನೋದು ಅದು, ವಸ್ತುವಿನ ಸಮಕಾಲೀನತೆ ಬೇರೆ, ಸಾಹಿತ್ಯದ ಸಮಕಾಲೀನತೆ ಬೇರೆ. ನಾವು ಬರೀಬೇಕಾದ್ರೆ ಪ್ರತಿಯೊಂದು, ಇವತ್ತು ಸೃಷ್ಟಿಯಾದ ಎಲ್ಲಾ ಸಾಹಿತ್ಯವೂ ಸಮಕಾಲೀನವೇ. ಯಾಕಂದ್ರೆ ಬರೆಯುವ ಲೇಖಕನಿಗೆ ಅವನ ಸುತ್ತ ಮುತ್ತಲು ನಡೀತಾ ಇರುವ ವಿದ್ಯಮಾನಗಳು, ಅಲ್ಲಿ ನಡೀತಾ ಇರುವ ಸ್ಥಿತ್ಯಂತರಗಳು, ಅವೆಲ್ಲವೂ ಅವನ ಮೇಲೆ ಪರಿಣಾಮ ಮಾಡೇ ಮಾಡುತ್ತೆ. ಈಗ ರಾಮಾಯಣ ಬರೆದ್ರು ಅದು ಸಮಕಾಲೀನ ಅಂತ್ಲೆ ನಾನು ತಿಳಕೊಂಡಿದೇನೆ. ಯಾಕಂದ್ರೆ ಅದು ವಸ್ತು ಎಷ್ಟೇ ಹಳೇದಿರ್ಬೋದು ಅಥವಾ ವಸ್ತು ಒಂದು ಐತಿಹಾಸಿಕ ಕಾದಂಬರಿಗೆ ಒಂದು ಐನೂರು ವರ್ಷ ಹಳೇದಿರ್ಬೋದು. ಆದ್ರೆ ಇವತ್ತು ಬರೆದಾಗ ಯಾವ್ದನ್ನ ನಾವು ಹೇಳ್ತೀವಿ-ಹೇಳೋದಿಲ್ಲ ಅನ್ನೋದಿದ್ಯಲ್ಲ; ಆಮೇಲೆ, ಯಾವ ರೀತಿಯಿಂದ ಅದನ್ನ ಹೇಳ್ತೀವಿ, ಯಾವುದರ ಮೇಲೆ ಹೆಚ್ಚು ಒತ್ತು ಕೊಡ್ತೀವಿ ಅನ್ನೋದು ನಮ್ಮ ಸುತ್ತಲಿನ ಸ್ಥಿತ್ಯಂತರಗಳಿಂದ, ಸುತ್ತಲಿನ ಸಮಕಾಲೀನ ಘಟನೆಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತೆ. ಅಂದ್ರೆ ಒಬ್ಬ ಲೇಖಕನಿಗೆ ತನ್ನ ಕಾಲವನ್ನ ಬಿಟ್ಟು ಬರೀಲಿಕ್ಕೇ ಶಕ್ಯ ಇಲ್ಲ. ಹಂಗಾಗಿ ಎಲ್ಲವೂ ಸಮಕಾಲೀನ ಅಂತ್ಲೇ ನನ್ನ ಅನಿಸಿಕೆ. ವಸ್ತುಗಳು ಬೇರೆ ಬೇರೆ ಕಾಲಘಟ್ಟದಲ್ಲಿರಬಹುದು. ಕೆಲವು ಒಂದು ನೂರು ವರ್ಷ ಹಳೇದಿರ್ಬೋದು, ಕೆಲವು ಐವತ್ತು ವರ್ಷ ಹಳೇದಿರ್ಬೋದು. ಅದು ಒಂದು, ಯಾವುದನ್ನ ಲೇಖಕ ಹೆಚ್ಚು ಪರಿಣಾಮಕಾರಿಯಾಗಿ ಹೇಳಲಿಕ್ಕೆ ಸಾಧ್ಯ ಅನ್ನೋದರ ಮೇಲಿಂದ ಆಯ್ದುಕೊಂಡಂಥ ಒಂದು, ಅದೊಂದು ಅವನ ಆಯ್ಕೆ ಅದು. ಹೊರತು ಅವನ ಸೆನ್ಸಿಬಿಲಿಟಿಯೇನಿದೆ, ಅದು ಸಮಕಾಲೀನವೇ ಮತ್ತು ಇವತ್ತಿಂದೇ ಅಂತ ನನಗನಿಸುತ್ತೆ. ಹಾಗಾಗಿ ನನ್ನ ಎಲ್ಲ ಕತೆಗಳಲ್ಲೂ ನಾನು ಬರೆದಾಗ ನಾನು ಆಯಾ ಸಮಕಾಲೀನತೆಗೆ ಸ್ಪಂದಿಸುತ್ತಾ ಇದ್ದೇನೆ ಅಂತ್ಲೆ ನಾನು ತಿಳ್ಕೊಂಡು ಬರೆದಿದ್ದೇನೆ. ಅದ್ಕೇನೆ ಕೆಲವು ವಸ್ತುಗಳ ಆಯ್ಕೆಯಲ್ಲಿ ಯಾಕೆ ನಾವು ಎಲ್ಲವನ್ನೂ ಹೇಳುವುದಿಲ್ಲ ಅಥವಾ ಯಾಕೆ ನಾವು ಕೆಲವನ್ನ ಬಿಡ್ತೀವಿ ಅನ್ನೋದು ಒಬ್ಬ ಲೇಖಕನಿಗೆ ಇದು ಸಮಕಾಲೀನ ಅಲ್ಲ ಅಂತ ಅನಿಸ್ತಾ ಇರುತ್ತೆ. ಅಂದ್ರೆ, ಇವತ್ತಿನ ಕಾಲಕ್ಕೆ ಈ ಕತೇನ, ಈ ವಸ್ತುವನ್ನ ಎತ್ತಿಕೊಳ್ಳೋದು ಪ್ರಸ್ತುತವಲ್ಲ ಅಂತ ಅನ್ಸುತ್ತೆ. ಆದ್ರಿಂದ ಅವನದನ್ನ ಬಿಡ್ತಾನೆ. ಹಾಗಾಗಿ ಅವನ ಆಯ್ಕೆ ಏನಿದೆ, ಅದು ಎಲ್ಲವೂ ಸಮಕಾಲೀನವೇ.

ನಿಲುಕು, ಇನ್ನೂಒಂದು, ಮತ್ತೊಬ್ಬನ ಸಂಸಾರ ಮತ್ತು ಥೂ ಕೃಷ್ಣ ಕಥೆಗಳಲ್ಲಿ ವಿಶಿಷ್ಟವಾದ ಒಂದು ಶೋಧವಿದೆ. ಪರಸ್ಪರ ಸಂಬಂಧವಿಲ್ಲವೆಂದು ನಾವು ಮೇಲ್ನೋಟಕ್ಕೆ ಗ್ರಹಿಸುವ ಅನೇಕ ಸಂಬಂಧಗಳಲ್ಲಿ, ಘಟನೆಗಳಲ್ಲಿ, ವ್ಯಕ್ತಿಗಳ ನಡುವೆ ಸುಪ್ತವಾದ-ಗುಪ್ತವಾದ ಏನೋ ಒಂದು ತಂತು ಕೆಲಸ ಮಾಡುತ್ತಿರಬಹುದೆ ಎಂಬ ಅನುಮಾನವೆ ಶೋಧವಾಗಿ ವಿಸ್ತರಿಸಿದಂಥ ಕಥಾನಕಗಳು ಇವು. ನಿಮ್ಮ ಒಟ್ಟಾರೆ ಕತೆಗಳಿಂದ ಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುವಂಥವು. ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಬಹುದೆ?

ಇದನ್ನ ಹೇಳೋದು ಕಷ್ಟ. ಯಾಕಂದ್ರೆ, ಇದನ್ನ ನಾನು ತುಂಬ, ಈ ತರದ್ದ, ಈ ತರದ ಕೆಲವು ಕತೆಗಳಿದ್ದಾವೆ. ಈಗ ನೀವು ಹೇಳಿದ ಉದಾಹರಣೆಗಳನ್ನೆಲ್ಲ ನಾನು ಒಪ್ತೇನೆ. ಆದ್ರೆ, ಇದನ್ನ ನಾನು... ಈಗ ನೀವು ಮುಂದೆ ಇದಕ್ಕಿನ್ನು ಜೋಡಣೆಯಾಗುವಂತೆ ಬರೀತೇನೆ ಅಂತ ಹೇಳೋದಿಕ್ಕು ನನಗೆ ಸಾಧ್ಯವಿಲ್ಲ. ಆದ್ರೆ ಯಾವಾಗ್ಲು ನನಗೆ, ಈ ನೀವು ಕೆಲವು ಉದಾಹರಣೆಗಳನ್ನ ಕೊಟ್ರಿ, ಅದು ಒಂದು ಅವ್ಯಕ್ತಕ್ಕೆ, ಏನೋ ಒಂದನ್ನ ಮುಟ್ಲಿಕ್ಕೆ, ಅಥವಾ ಅವ್ಯಕ್ತದ ಜೊತೆಗೆ ಏನೋ ಒಂದು ಸಂಬಂಧ ಕಲ್ಪಿಸುವುದು ಏನಿದೆ, ಅದು ಯಾವಾಗ್ಲು ನನಗೊಂದು ಸ್ವಲ್ಪ, ತುಂಬಾ ಒಂದು ಆಸಕ್ತಿಕರವಾಗಿ ಕಾಣುವಂಥ ಕ್ಷೇತ್ರ ನನಗದು. ಯಾಕಂದ್ರೆ, ಕಣ್ಣಿಗೆ ಕಾಣಿಸದೇ ಇರುವಂಥದು, obviously ಯಾವ್ದು ಇಲ್ವೋ, ಅದು ಯಾವಾಗ್ಲೂ ತುಂಬ ನನಗೆ ಕುತೂಹಲದ ವಿಷ್ಯ. ಅಲ್ಲೇನೋ ಆಗ್ತಾ ಇದೆ, ಅದೇನೋ ಆಗ್ತಾ ಇದೆ...ಅಂತ. ಆಮೇಲೆ ಅಲ್ಲಿ ಏನೋ ಆಗ್ತಾ ಇರೋದು ಇದ್ಯಲ್ಲ, ಅದನ್ನ ನಮಗೆ ನಮ್ಮ ಐಂದ್ರಿಕ ಜಗತ್ತನ್ನ ಬಿಟ್ರೆ ಬೇರೆ ಯಾವ ರೀತಿಯಿಂದ್ಲೂ ನಮಗೆ ಅದನ್ನ ಮುಟ್ಲಿಕ್ಕೆ ಸಾಧ್ಯ ಇಲ್ಲ. ಆದ್ರಿಂದ ನನ್ನ ಕತೆಗಳಲ್ಲು ಅಷ್ಟೆ, ನಾನು ಐಂದ್ರಿಕ ಜಗತ್ತಿಂದ್ಲೇ ಅದನ್ನ ಗ್ರಹಿಸ್ಲಿಕ್ಕೆ ನಾನು ಪ್ರಯತ್ನ ಪಟ್ಟಿದೀನಿ. ಕೆಲವು ಕತೆಗಳಿಗೆ ಕೆಲವು ತಂತ್ರಗಳಿದ್ದಾವೆ. ಉದಾಹರಣೆಗೆ ನೀವು, ಫ್ಯಾಂಟಸಿಯನ್ನ ತುಂಬಾ ಜನ ಉಪಯೋಗಿಸ್ತಾರೆ, ಕೆಲವು ರೀತಿಯ ಕೆಲವು ಸಂಗತಿಗಳನ್ನ ಹೇಳ್ಲಿಕ್ಕೆ. ಆಮೇಲೆ ಜಗತ್ತಿನ ಸಾಹಿತ್ಯದಲ್ಲು ಎಷ್ಟೋ ದೊಡ್ಡ ದೊಡ್ಡ ಉದಾಹರಣೆಗಳು ಇದ್ದಾವೆ. Metamorphisis, for example, ಭಾಳ ಒಂದು ದೊಡ್ಡ ಕತೆ. ಆದ್ರೆ ನನ್ನ ರೀತಿಯ ಬರವಣಿಗೆಗೆ ನಾನು ಈ ಫ್ಯಾಂಟಸಿ ಅಥವಾ ಆ ತರದ ಒಂದು ತಂತ್ರಗಳನ್ನ ಉಪಯೋಗಿಸೋದು ನನಗೆ, ನಾನು ಇದುವರೆಗು ಉಪಯೋಗಿಸಿಲ್ಲ. ಉಪಯೋಗಿಸಲಾರೆ ಅಂತಲ್ಲ, ಅದನ್ನು ಉಪಯೋಗಿಸುವುದಿಲ್ಲ ಅಂತಲ್ಲ ನಾನು ಹೇಳಿದ್ದು. ಆದ್ರೆ ನನ್ನ ವಿಧಾನ ನಾನು ನನಗೆ ಗೊತ್ತಿರೋ ಸಂಗತಿಗಳ ಮೂಲಕ ಅವ್ಯಕ್ತವನ್ನ ಮುಟ್ಲಿಕ್ಕೆ ಸಾಧ್ಯವಾ ಅಂತ ಒಂದು ಪರಿಶೀಲನೆ ಇದ್ಯಲ್ಲ, ಅದು ನನಗೆ ಯಾವಾಗ್ಲೂ ತುಂಬ ಆಸಕ್ತಿಕರವಾಗಿ ಕಂಡಿದೆ, as a writer. ನನಗೆ ಯಾವಾಗ್ಲೂ ಅದು excite ಮಾಡುತ್ತೆ.

ನಿಮ್ಮ ಕತೆಗಳಲ್ಲಿ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳ ಬಗ್ಗೆ ತುಂಬ ಕುತೂಹಲಕರ ಅನಿಸುವಂಥ ಕೆಲವು ಸಂಗತಿಗಳಿವೆ. ಸ್ತ್ರೀ ಪಾತ್ರಗಳು ವಿಶಿಷ್ಟವಾದವು. ಅದು ಪ್ರೇಮಕ್ಕ(ಪರಸ್ಪರ, ನಿಲುಕು) ಇರಲಿ, ಸರೋಜಿನಿ (ಸುಧೀರನ ತಾಯಿ)ಯಿರಲಿ, ಮುಕ್ತಾ(ಕಾರಣ) ಅಥವಾ ಗೋದಾವರಿ,ಪಂಡರಿ, ಯಮುನೆ, ಕಾವೇರಿ(ಒಂದು ಬದಿ ಕಡಲು) ಯಾರೇ ಇರಲಿ, ಅವರಲ್ಲಿ ವಿಶಿಷ್ಟವಾದ ಒಂದು ತೇಜಸ್ಸಿದೆ. ಕಾರಂತರ ಕಾದಂಬರಿಗಳಲ್ಲಿ ಕಾಣುವಂಥ ಒಂದು ಕೆಚ್ಚು, ಏಕಾಂಗಿಯಾಗಿಯೂ ಬದುಕನ್ನು ಎದುರಿಸಬಲ್ಲ ಮನಸ್ಥಿತಿ ಅವರ ವ್ಯಕ್ತಿತ್ವದಲ್ಲಿ ಸಹಜವಾಗಿಯೇ ಎಂಬಂತೆ ಇದೆ. ವೈವಾಹಿಕ ಬದುಕಿನ ವೈಫಲ್ಯವೋ, ಮದುವೆಯೇ ಇಲ್ಲದೆ ಕಳೆಯಬೇಕಾಗಿ ಬಂದುದೋ, ಸಾಂಸಾರಿಕ ಬದುಕಿಗೆ ಎಲ್ಲೋ ಹೇಗೋ ಎರವಾದ ನೋವೋ ಇವರ ಬದುಕನ್ನು ಆವರಿಸಿದಾಗ್ಯೂ ಇವರು ಅಂಥ ಬದುಕನ್ನು ಜೀವನ್ಮುಖಿಯಾಗಿ, ವಿಶಿಷ್ಟ ಚೈತನ್ಯದಿಂದ ಎದುರಾಗುತ್ತಾರೆ. ಇದು ನೀವು ನೋಡಿದ ನಿಮ್ಮ ಉತ್ತರಕನ್ನಡದ ಪರಿಸರದ ಕೊಡುಗೆ ಅನಿಸುತ್ತದೆಯೇ ಅಥವಾ ತಾಂತ್ರಿಕ ನೆಲೆಗಟ್ಟಿನಲ್ಲಿ ನೀವು ಇಂಥ ಪಾತ್ರಗಳನ್ನ ಸೃಷ್ಟಿಸಿದ್ದೀರ?

ನಾನು ಬೆಳೆದು ಬಂದಾಗ, ತುಂಬ ಕಾಲ ನಾನು ಅಡಿಗೆ ಮನೇಲಿ ಕಳೆದಿದೀನಿ. ನನಗೆ ತುಂಬ ಇಷ್ಟ. ಅಂದ್ರೆ, ನಿಮಗಿನ್ನು ಬಹುಷಃ ಗೊತ್ತಿಲ್ಲದಿರೋ ವಿಷ್ಯ ಏನಂದ್ರೆ ನಾನು ತುಂಬ ಚೆನ್ನಾಗಿ ಅಡುಗೆ ಮಾಡ್ತೇನೆ. ನನಗದರಲ್ಲಿ ತುಂಬ ಆಸಕ್ತಿ. ನನಗೆ ಭಾಳ ಒಂದು ಆಸಕ್ತಿಯ ವಿಷಯ ಅದು. ನಾನು ಬೇರೆ ಊರಿಗೆ, ಬೇರೆ ದೇಶಕ್ಕೆ ಹೋದ್ರೆ ನಾನು ಅಲ್ಲಿಯ ಕಿರಾಣಿ ಅಂಗಡಿಗೆ ಹೋಗಿ, ಅಲ್ಲಿಯ ಸಾಮಾನು ತಂದು, ಅಲ್ಲಿ ಅಡಿಗೆ ಮಾಡಿ, ತುಂಬ...ನನಗದರಲ್ಲಿ ಭಾಳ ಒಂದು ಆಸಕ್ತಿಯ ಕ್ಷೇತ್ರ ಅದು ನಂದು. ಮತ್ತೆ ನಾನು ಚಿಕ್ಕಂದಿನಿಂದ ನಾನು ತುಂಬ ಈ ಹೆಂಗಸರ ಮಧ್ಯೆ ಬೆಳೆದವನು. ನನ್ಗೆ ನೂರಾರು ಕತೆಗಳಿದಾವೆ ಅವರ ಜೊತೆ ಮಾಡೋದಿಕ್ಕೆ, ಹೇಳೋದಿಕ್ಕೆ. ಆಮೇಲೆ ತುಂಬ ನನಗದು, ಭಾಳ ಒಂದು fascinating ಆಗಿತ್ತದು. ಯಾಕೆ ಅಂದ್ರೆ, ತುಂಬ ಕಾರಣಗಳಿವೆ ಅಲ್ಲಿ. ಒಂದು, ನಾನು ತುಂಬ ಬಡತನದಲ್ಲಿದ್ದ, ಕಷ್ಟದಲ್ಲಿದ್ದ ಹೆಂಗಸರನ್ನು ನೋಡಿದ್ದೇನೆ. ಆಮೇಲೆ ಅವ್ರು, ಯಾವ್ದೇ ಒಂದು, ಅಂದ್ರೆ...ಆದ್ರೂ ಅವ್ರು ಅಂಥ ಕಷ್ಟದಲ್ಲು ಅವ್ರು ಒಂದು ಕುಟುಂಬಕ್ಕೆ ಅಡಿಗೆ ಮಾಡಿ ಹಾಕ್ತಾ ಇದ್ರು...ಯಾಕಂದ್ರೆ ಅವ್ರಿಗೊಂದು ಅದು ಸಲಹುವ ಗುಣ ಇತ್ತು. ಸೊ, ಅದು ನನ್ಮೇಲೆ ಭಾಳ ಪರಿಣಾಮ ಮಾಡಿದೆ. ಅಂಥ ತುಂಬ ಜನ ಹೆಂಗಸ್ರನ್ನ ನಾನು ನೋಡಿದೇನೆ. ಆಮೇಲೆ ನನ್ನ ಸಂಬಂಧಿ ಒಬ್ರು ಹೆಂಗಸಿದ್ರು. ಅವ್ರು ಯಾವಾಗ್ಲು, ನಾವವ್ರಿಗೆ ಭಾಳ ಕತೆ ಹೇಳಿ ಅಂತ ನಾನು ತುಂಬ ಅವ್ರನ್ನ ಪೀಡಿಸ್ತಾ ಇದ್ದೆ. ಆದ್ರೆ ಅವ್ರು ಒಂದೇ ಕತೆ ಹೇಳ್ತ ಇದ್ರು ಯಾವಾಗ್ಲು. ಅದನ್ನ ಇದು ನಾನು ಎಲ್ಲೋ ಬೇರೆ ಕಡೆ ಮಾತನಾಡಿದ್ದೇನೆ ಇದ್ರ ಬಗ್ಗೆ, ಅವ್ರು ಒಂದೇ ಕತೆಯನ್ನ , ಅವ್ರು ನೆರಳಿನ ಕಳ್ಳ ಅಂತ ಒಂದು ಕತೆಯನ್ನ ಹೇಳ್ತಾ ಇದ್ರು ನಮಗೆ ಅವ್ರು. ಆ ಕತೆಯನ್ನ ಹತ್ತು ಸರ್ತಿ ನೂರು ಸರ್ತಿ ಸಾವಿರ ಸರ್ತಿ ನಾನದನ್ನ ಕೇಳಿರ್ಬೋದು. ಕೇಳಿದಾಗ್ಲೆಲ್ಲ ಅವ್ರು ಅದೇ ಕತೇನ ಹೇಳ್ತಾ ಇದ್ರು. ಆದ್ರೆ, ಅವ್ರದ್ದು ಏನು ವಿಶೇಷ ಅಂದ್ರೆ, ಪ್ರತೀ ಸಲಾನು ಅವ್ರದನ್ನ ಬೇರೆ ತರ ಹೇಳ್ತಿದ್ರವ್ರು. ಅಂದ್ರೆ ಕತೆ ಅದೇನೆ, ಆದ್ರೆ ನಾನು ಅವ್ರು ಕೊಟ್ಟಿಗೇಲಿದ್ರೆ, ಅವ್ರ ಆ ಕತೆ ಕೊಟ್ಟಿಗೆಯಿಂದ್ಲೇ ಸುರುವಾಗ್ತಿತ್ತು. ಅಂದ್ರೆ ಅವ್ರಲ್ಲಿ ಅವ್ರೇನೋ ಮಾಡ್ತಿದ್ರು, ಅವ್ರಮ್ಮ ಬಂದಿದ್ರು... ಅವ್ರು ಅಡಿಗೆ ಮನೇಲಿದ್ರೆ, ಆ ಕತೆ, ಆ ಕಳ್ಳ ಏನಿದಾನೆ ಅವ್ನು ಆ ಅಡಿಗೆ ಮನೇಲೆ ತಿಂಡಿ ತಿನ್ತಾ ಇರ್ತಿದ್ದ, ಅಲ್ಲಿಂದ ಸುರುವಾಗ್ತಿತ್ತು. ಹೀಗೆ ಅವ್ರು ಪ್ರತಿಯೊಂದು, ಅವ್ರು ಎಲ್ಲಿ ಯಾವ ಜಾಗದಲ್ಲಿರ್ತಿದ್ರೋ ಅಲ್ಲಿಂದ ಆ ಕತೆ ಸುರು ಮಾಡಿ, ಆವತ್ತಿನ ದಿನಕ್ಕೆ ಅದನ್ನ ಹೊಂದಿಸಿ ಒಟ್ಟಲ್ಲಿ ಆ ಒಂದು way of ಅವ್ರದ್ದೊಂದು ಆ ಕತೆಯನ್ನು ಹೇಳೊದಿದ್ಯಲ್ಲ, ಅದು ನನ್ನ ಮೇಲೆ ಭಾಳ ಪರಿಣಾಮ ಮಾಡಿದೆ. ಕಥನ ಕ್ರಮಕ್ಕೆ ಭಾಳ ಒಂದು ಒಳ್ಳೆಯ ಉದಾಹರಣೆ ಅಂತ ನನಗನಿಸುತ್ತೆ. ಆಮೇಲೆ ಅಷ್ಟಲ್ದೆ ಅವ್ರಿಗೆ ಊಟಕ್ಕೆಲ್ಲ ಆವಾಗ ತುಂಬ ಕಷ್ಟ ಇತ್ತು. ತುಂಬ ಬಡತನದಲ್ಲಿ ಇದ್ದವ್ರು ಅವರು. ಅವರ ಮನೆಗೆ ಬರೇ ಅಕ್ಕಿ ಮಾತ್ರ ಬರ್ತಿತ್ತು. ಸೊ, ಹಂಗಾಗಿ ಅವ್ರು ಅಕ್ಕಿಯ ನಾನಾ ರೀತಿಯ ಖಾದ್ಯಗಳನ್ನ ಮಾಡ್ತಿದ್ರು. ಅಂದ್ರೆ ಹೆಂಗೆ ಅವ್ರು ಒಂದೇ ಕತೇನ ನಾನಾ ರೀತಿಯಾಗಿ ಹೇಳ್ತಾ ಇದ್ರೊ, ಅದೇ ರೀತಿ ಅವ್ರು, ಬರೇ ಅಕ್ಕಿಯಿಂದ ಅವ್ರತ್ರ ನಾನು ಎಷ್ಟೊಂದು ರೀತಿಯ ಅಡುಗೆ ವಿಧಾನಗಳನ್ನ ಅಕ್ಕಿಯಿಂದ ಮಾಡುವ ನಾನಾ ರೀತಿಯ, ಬೆಳಿಗ್ಗೆಯಿಂದ ಸಂಜೆಯಿಂದ - ರಾತ್ರಿವರೆಗೂ ಯಾಕಂದ್ರೆ ಬೇರೆ ಏನೂ ಅವ್ರಿಗೆ income ಇರ್ಲಿಲ್ಲ, ಬೇರೆ ಏನೂ ಅವ್ರಿಗೆ ಆದಾಯ ಇರ್ಲಿಲ್ಲ. ಒಂದಷ್ಟು ಅಕ್ಕಿ ಬರ್ತಿತ್ತವ್ರಿಗೆ ಅಷ್ಟು ಬಿಟ್ರೆ. ಸೊ, ಈ ರೀತಿಯ ಪಾತ್ರಗಳು, ಇದು ನನಗೆ ನನ್ನ ಬಾಲ್ಯವನ್ನು ತುಂಬ ತುಂಬಿಕೊಂಡಿವೆ ಇವು. ಹಿಂಗಾಗಿ ಅದು ಸಹಜವಾಗಿ ಅದು ನನ್ನ ಕತೆ ಕಾದಂಬರಿಗಳಲ್ಲಿ ಬರುತ್ತೆ.

ಆಮೇಲೆ ಇದನ್ನ ನಾನು ಯಾವುದೇ ತಂತ್ರವಾಗಿ ಉಪಯೋಗಿಸ್ಲಿಲ್ಲ. ಅಂದ್ರೆ ನಾನು ಈ ಕಥನ ಕೌಶಲ್ಯ ಏನಿದೆ, ಈ craftsmenship ಏನಿದೆಯಲ್ಲ, ಅದು, ಒಂದು ಕತೆಯನ್ನ ಪರಿಣಾಮಕಾರಿಯಾಗಿ ಹೇಳ್ಲಿಕ್ಕೆ ತುಂಬ ಮಹತ್ವದ್ದದು. ಅಂದ್ರೆ ನೀವು ಒಂದು ಕುರ್ಚಿ ಮಾಡಿದ್ರೆ, ಅದಕ್ಕೆ ಮೊಳೆ ಹೊಡೆದ್ಹಾಂಗದು. ಆದ್ರೆ, ಆ ಮೊಳೆ ಕಾಣಿಸ್ಬಾರ್ದು, ಮತ್ತೆ ಚುಚ್ಬಾರ್ದು. ಹಂಗಿರ್ಬೇಕು ತಂತ್ರ. ಅದು, ತಂತ್ರ ನಿಮ್ ಕಣ್ಣಿಗೆ ಹೊಡೆದ್ರೆ, ಆಮೇಲೆ ಅದು bad carpentry ಅದು. ಅಂದ್ರೆ ನಿಮ್ಗೆ ಕತೆ ಹೇಳ್ಲಿಕ್ಕೆ ಬರೋದಿಲ್ಲ ಅಂತ ಅದರರ್ಥ. ಅಥವಾ ನೀವು ಪ್ರಯೋಗಕ್ಕಾಗಿ ಪ್ರಯೋಗಶೀಲತೆ ಮಾಡಿದ್ರೆ, ಏನು ಹೊಸದನ್ನು ಹೊಸಾ ರೀತಿ ಹೇಳ್ಬೇಕಂತ ಮಾಡಿದ್ರೆ, ಆವಾಗ್ಲೂ ಅದು ಕುರ್ಚಿಗೆ ಮೊಳೆ ಕಂಡ್ಹಾಂಗೇನೆ ಅದು. ಅದು ಇರ್ಬೇಕು, ಅದು ಅತ್ಯಗತ್ಯ, ಆದ್ರೆ ಅದು ಕಣ್ಣಿಗೆ ಕಾಣಿಸ್ಬಾರ್ದು, ಕೈಗೆ ತಾಗ್ಬಾರ್ದು. ಆ ತರ ತಂತ್ರ ಇರ್ಬೇಕು.

ನಿಮ್ಮ ಕತೆಗಳನ್ನು ಗಮನಿಸುವಾಗ ಇದೇ ರೀತಿ ಒಬ್ಬ ಪಬ್ಬನ ಪಾತ್ರ ಇರಬಹುದು, ಜನ್ನ ಇರಬಹುದು, ಕ್ರಮೇಣ ಅವನು ಬುಗುರಿಯಾಗ್ತಾನೆ, ಕ್ರಮೇಣ ಒಬ್ಬ ಉಪ್ಪ, ಒಬ್ಬ ಶರವಣ ಆಗ್ತಾನೆ ಅನಿಸ್ತದೆ. ಒಂದು ವ್ಯಕ್ತಿತ್ವ ಇದೆಯಲ್ಲ, ಒಂದು ರೀತಿಯಲ್ಲಿ ಅವನು ಅಸಹಾಯಕ, ಸ್ವಲ್ಪ ಮೂರ್ಖ, ಸ್ವಲ್ಪ ಮುಗ್ಧ, ಮತ್ತೆ ಸಮಾಜ ಅವನನ್ನು ಬಳಸಿಕೊಳ್ಳುತ್ತ ಇರುವಾಗ್ಲೂ ಅವನು ನಮಗೆ ಬೇರೆ ಇನ್ನೇನನ್ನೋ ತೋರಿಸ್ತಾ ಇರ್ತಾನೆ. ಪಾತ್ರ ಕೂಡ ನಿಮ್ಮ ಕತೆಯಿಂದ ಕತೆಗೆ ಬೆಳೀತಾ ಬಂದಿದೆ ಅನಿಸ್ತದೆ. ಇದನ್ನ ಸ್ವಲ್ಪ ವಿವರಿಸಬಹುದೆ?

ಅಂದ್ರೆ ಇದು, ಒಂದು ಕಥಾ ಪ್ರಪಂಚ ಇದ್ಯಲ್ಲ, ನನಗೆ ನನ್ನ ಎಲ್ಲ ಕತೆಗಳು, ಕಾದಂಬರಿಗಳು ಇದೆಲ್ಲ ಸೇರಿ ಒಂದು ಜಗತ್ತಿದೆ. ಆಮೇಲೆ ಅದು ಆ ಜಗತ್ತಿನಲ್ಲಿ ಇದೆಲ್ಲ, ಈ ಎಲ್ಲ ಪಾತ್ರಗಳು ಬೇರೆ ಬೇರೆ ರೀತಿಯಿಂದ ಆಗ್ತಾ ಇವೆ. ಇದು ನಾನು ಹೊಸ್ತಾಗಿ ಬರೀಲಿಕ್ಕೆ ಸುರು ಮಾಡಿದಾಗ ನನಗೆ ಈ ತರದ್ದೊಂದು ಇರ್ಲಿಲ್ಲ. ಅಥವಾ ನನಗದು ...ಒಂದೆರಡು ಕತೆ ಬರ್ದಾಗ ನನಗೇನನ್ಸಲ್ಲ. ಅಥವಾ ಐದು ಕತೆ ಬರ್ದಾಗ ನನಗೇನು ಅನ್ಸೋದಿಲ್ಲ. ಆದ್ರೆ, ನೀವು ಮತ್ತೆ ಬರವಣಿಗೆ ಮುಂದುವರಿಸ್ತ ಹೋದ್ಹಾಗೆ, ಕೆಲವು ಸಂಗತಿಗಳು ಮತ್ತೆ ಮತ್ತೆ ಅಥವಾ ಅದೇ ಪಾತ್ರಗಳು ನಿಮಗೆ ಹೊಸ ಅರ್ಥಗಳನ್ನ ಕೊಡ್ತವೆ. ಅಂದ್ರೆ ಉದಾಹರಣೆಗೆ, ಕೆಲವೀಗ ನೀವು ಪಾತ್ರಗಳ ಹೆಸರುಗಳನ್ನ ಹೇಳಿದ್ರಿ, ಅದು ಮೊದಲ ಕತೆಗಳಲ್ಲಿ ಮೊದಲ ಕೆಲವು ಕತೆಗಳಲ್ಲಿ ಅವುಗಳಿಗೆ ಇರುವ ವ್ಯಾಪ್ತಿಯೇನಿದೆ, ಆ ವ್ಯಕ್ತಿತ್ವಗಳ ವ್ಯಾಪ್ತಿ ಅಥವಾ ಆ ಪಾತ್ರಗಳ ವ್ಯಾಪ್ತಿ ಅದು ನಮಗೆ, ಇನ್ನೂ ನಮ್ಮ ಅನುಭವ, ಇನ್ನೂ ಹೆಚ್ಚಾಗ್ತ ಹೋದಂಗೆ ಅದ್ರ ವ್ಯಾಪ್ತೀನೂ ಹೆಚ್ಚೆಚ್ಚು ಆಗ್ತ ಹೋಗುತ್ತೆ. ಹಂಗಾಗಿ ಆ ಪಾತ್ರಗಳು ಬೇರೆ ಬೇರೆ ರೂಪದಲ್ಲಿ ಕಾಣಿಸೋ ಸಾಧ್ಯತೆ ಇದೆ ಮತ್ತದು ಸಾಮಾನ್ಯವಾಗಿ ನೀವು ಬೇರೆ ಕತೆಗಾರರಲ್ಲೂ ನೀವದನ್ನ ಕಾಣ್ತೀರಿ. ಅಂದ್ರೆ, ಒಂದೇ ರೀತಿಯ ಕಾಳಜಿ, ಒಂದೇ ರೀತಿ ಪಾತ್ರಗಳು, ಒಂದೇ ರೀತಿಯಂತಲ್ಲ ಅದು, ಒಂದೇ ಮೂಲದಿಂದ ಬಂದಂಥ ಕೆಲವು ಪಾತ್ರಗಳು ಮತ್ತು ಕೆಲವು ಕಾಳಜಿಗಳು ಮತ್ತೆ ಮತ್ತೆ... ಅದು ಲೇಖಕನಿಗೆ ತುಂಬಾ ಸಹಜ ಅಂತ್ಲೆ ನಾನು ತಿಳ್ಕೊಂಡಿದೀನಿ. ಯಾಕಂದ್ರೆ, ನಾನು ಮತ್ತೆ ಬೇರೆ ಬೇರೆ ಕಾಲಘಟ್ಟದಲ್ಲಿ ಅದನ್ನ ನೋಡ್ತ ಇದ್ದಂಗೆ, ಬೇರೆ ಬೇರೆ ವಿವರಗಳು ಅದಕ್ಕೆ ಸೇರಿಕೊಳ್ತವೆ, ಬೇರೆ ಬೇರೆ ಅರ್ಥಗಳದಕ್ಕೆ ಸೇರ್ಕೊಳ್ತವೆ. ನಾವು ನೋಡದೆ ಇರೋದು, ನಾವು ಆಗ ಅಮುಖ್ಯ ಅಂತ ತಿಳ್ಕೊಂಡಿದ್ದಂಥ, ಅದು ಈಗ ನಮಗೆ ಹೆಚ್ಚು ಮುಖ್ಯವಾಗಿ ಕಾಣ್ಸತ್ತೆ, ಪರಿಣಾಮಕಾರಿಯಾಗಿ ಕಾಣ್ಸತ್ತೆ, ನಾವ್ಯಾಕೆ ಅದನ್ನ ಅಷ್ಟು ಗಮನ ಇಟ್ಟು ನೋಡ್ಲಿಲ್ಲ ಆವಾಗ, ಇದಕ್ಕೆ ಬೇರೆ ಏನೋ ಅರ್ಥ ಇತ್ತಲ್ಲ ಅಂತ ನಮಗೆ ಈಗ ಅನ್ಸುತ್ತೆ. ಸೊ, ಅದು ಒಂದು ಕಥಾಪ್ರಪಂಚದಲ್ಲಿ, ಒಂದು ಕಥಾಲೋಕದಲ್ಲಿ ಇದು ಹೆಚ್ಚು ಸಹಜವಾದುದು ಅಂತ್ಲೆ ನಾನು ತಿಳ್ಕೊಂಡಿದೀನಿ.

ನಿಮ್ಮ ಒಂದು ಬದಿ ಕಡಲು ಕಾದಂಬರಿಯಲ್ಲಿ ಮೊದಲಿಗೆ ಒಂದು ಮಾತು ಹೇಳಿದ್ದೀರಿ, 'ಬರೆಯುವ ಹೊತ್ತಿಗೆ ಮಹತ್ವದ್ದೆಂದು ಅನಿಸಿದ ಹಲವು ಸಂಗತಿಗಳು ಕಾಲಾಂತರದಲ್ಲಿ ಅದೇ ತೀವೃತೆಯಲ್ಲಿ ಕಾಣಿಸದೇ ಇರುವುದರಿಂದ ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈಹಚ್ಚಲು ಅಳುಕಾಗುತ್ತದೆ' ಅಂತ. ನಿಮ್ಮ ಅಂಕುರದ ಕಥೆಗಳು ಕೂಡ ಇವತ್ತು ಮಸುಕಾಗಿವೆ ಅನಿಸದಿರುವ ಸಂದರ್ಭದಲ್ಲಿ ತಮಗೆ ಇಂಥ ಅನುಮಾನ ಯಾಕೆ ಕಾಡಿತು?

ನಾನು ಆ ಮಾತನ್ನು ಬರ್ದಿದ್ದು ಈ ಕಾದಂಬರಿಯ ಪರಿಷ್ಕರಣೆಯ ಬಗ್ಗೆ. ಅಂದ್ರೆ, ಈ ದೀರ್ಘ ಕಾದಂಬರಿಯನ್ನ ಬರ್ದು ಅದ್ಮೇಲೆ ಅದ್ರ ಒಳ್ಗಡೆ, ಅದು ತುಂಬ ಒಂದು ಸಂಕೀರ್ಣವಾದ ಒಂದು ಕಟ್ಟಡ ಇದೆ ಅದ್ರ ಒಳ್ಗಡೆ. ಅಂದ್ರೆ ಅದಕ್ಕೆ ನೀವು ಆ ಸಂದರ್ಭಗಳನ್ನ, ಅದ್ರ ಅಧ್ಯಾಯಗಳನ್ನ ನೋಡಿದ್ರೆ ಅದು ಬೇರೆ ಬೇರೆ, ವರ್ಷದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಬೆಳಕಿನಲ್ಲಿ, ದಿನದ ಬೇರೆ ಬೇರೆ ಜಾಗದಲ್ಲಿ ಜರಗುವಂಥದ್ದು. ಸೊ, ಅಷ್ಟೊಂದು ಕಾಂಪ್ಲೆಕ್ಸನ್ನ ನಾನು ಮತ್ತೆ, ಅದನ್ನ ಬರೆದು ಒಂದೆರಡು ವರ್ಷ ಬಿಟ್ಟು ಮತ್ತೆ ಅದನ್ನ ಪರಿಷ್ಕರಣೆ ಮಾಡೋದಿದ್ಯಲ್ಲ, ಆವಾಗ ಅದು, ಅದ್ರೊಳಗೆ ಹೋಗ್ಲಿಕ್ಕೇನೇ ಒಂದ್ವಾರ ಬೇಕಾಗುತ್ತೆ. ಅಂದ್ರೆ, ಅದೇ ಮನಸ್ಥಿತಿಯಲ್ಲಿ ಅದ್ನೆಲ್ಲ ನೋಡ್ಲಿಕ್ಕೆ ಆ ಪರಿಸ್ಥಿತಿ, ಅಂಥಾ ಒಂದು process ಇದ್ಯಲ್ಲ, ಅದನ್ನ ಮತ್ತೊಂದ್ಸಲ ಇಂಥಾ ಒಂದು ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈ ಹಚ್ಚಲಿಕ್ಕೆ ಅಳಕಾಗ್ತದೆ ಅಂತ ನಾನು... ಅದು ನನ್ನ ಉದ್ದೇಶ. ಅಂದ್ರೆ ಅದು ಆ ತೀವೃತೆಯಲ್ಲಿ ಕಾಣ್ಸೋದಿಲ್ಲ, ಆ ತೀವೃತೆಯಲ್ಲಿ ಆವಾಗ ನಾವು ಅದು ಅನಗತ್ಯ ಅಂತ ತಿಳ್ಕೊಂಡಿರ್ತೀವಿ, ಅಥವಾ ಬರೆಯುವಾಗ ಏನೋ ಒಂದು ಮನ್ಸಲ್ಲಿರುತ್ತೆ, ಬರೆಯುವಾಗ ಯಾವ್ದಾದರೂ ಕೆಲವು ಮುಖ್ಯ ಅಂತ ಅನ್ಸಿರುವ ಸಂಗತಿಗಳಿರ್ತಾವಲ್ಲ, ಅಂದ್ರೆ ಮುಖ್ಯ ಅಂತ ಕಾದಂಬರಿ ಒಳ್ಗಡೆ; ಅದು ಕಾಲಾಂತರದಲ್ಲಿ, ಈ ಎಲ್ಲ ಬದ್ಲಾವಣೆಗಳಿಂದ ಅದು ಅಷ್ಟು... ಅದು ನಾನು ಬರೆದ ಮಾತು ಆ ಒಟ್ಟು process ಬಗ್ಗೆ, ಅಂದ್ರೆ, process of editing ಬಗ್ಗೆ. ಪರಿಷ್ಕರಣೆಯ ಪ್ರಕ್ರಿಯೆ ಬಗ್ಗೆ ನಾನು ಬರೆದಿದ್ದೆ ಹೊರತು ಒಟ್ಟು ಬರವಣಿಗೆಯ ಬಗ್ಗೆ ಅಲ್ಲ. ಸೊ, ಹಾಗಾಗಿ ಅದು ಅಪಾರ್ಥಕ್ಕೆ ಎಡೆ ಮಾಡಿ ಕೊಡ್ಬಾರ್ದು.

ನಾಟಕ ರಚನೆಯ ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಿ. ರಂಗಸಾಧ್ಯತೆಗಳ ಕುರಿತು ನಿಮ್ಮ ಪರಿಕಲ್ಪನೆಗಳು, ರಂಗಕೃತಿ (ಟೆಕ್ಸ್ಟ್)ಯಾಗಿ ಮತ್ತು ರಂಗದಲ್ಲಿ ಅದು ಒಂದು ರಂಗ-ಕೃತಿಯಾಗಿ ಬರುವಾಗ ಅದರ ತಾತ್ವಿಕತೆ ಮತ್ತು ಎರಡರ ಸಂತುಲನ ಮಾಡುವಾಗ ನಿಮ್ಮ ಯೋಜನೆಗಳು ಯಾವ ತರ ಇರ್ತವೆ?

ಅಂದ್ರೆ ನನಗೆ ನಾಟಕ ಮಾಧ್ಯಮದಲ್ಲಿ ಯಾವಾಗ್ಲು ಮೊದ್ಲಿಂದ್ಲು ಆಸಕ್ತಿಯಿದೆ. ನನಗೆ ಅದ್ರ ಬಗ್ಗೆ ಇರೋ ಆಕರ್ಷಣೆ ಏನು ಅಂದ್ರೆ, ಬರೆದ ಕೂಡ್ಲೆ ತಕ್ಷಣ ಅದಕ್ಕೊಂದು interpretation ಸಿಗುತ್ತೆ. ಅಂದ್ರೆ, ಆ ನಾಟಕ ಆಡ್ದಾಗ, ಅದೇನು ನನ್ನ ಮನಸ್ಸಿನಲ್ಲಿ ಒಂದು ನಾಟಕ - ಒಂದು ಕೃತಿ ಮತ್ತು ಅದಕ್ಕೆ ಸಾಧ್ಯತೆಗಳಿರ್ತಾವಲ್ಲ, ಆ ಸಾಧ್ಯತೆಗಳ ಅನ್ವೇಷಣೆ immediately ಆಗುತ್ತೆ. ತಕ್ಷಣ ನಾವದನ್ನ ರಂಗದ ಮೇಲೆ ನೋಡ್ಬಹುದು. ಇದು ಒಬ್ಬ ಲೇಖಕನಿಗೆ ತುಂಬ ಅವ್ನನ್ನ ತುಂಬ ಆಕರ್ಷಿಸುವಂಥ ವಿಷ್ಯ ಇದು. ಯಾಕಂದ್ರೆ, ನಾವು ಒಂದು ಕಾದಂಬರಿಯನ್ನು ಬರೆದ್ರೆ, ಒಂದು ಕತೆಯನ್ನು ಬರೆದ್ರೆ ಅದು ಇನ್ನೊಬ್ರ ಮನಸ್ಸಿನಲ್ಲಿ ರೂಪಾಂತರ ಆಗ್ಲಿಕ್ಕೆ ಅಥವಾ ಅದು ರೂಪಾಂತರ ಆದದ್ದು ನಮ್ಮ ಅನುಭವಕ್ಕೆ ಬರ್ಲಿಕ್ಕೆ ಸ್ವಲ್ಪ ಕಾಲ ತಗೊಳುತ್ತೆ. ಆದ್ರೆ ಇದು ತಕ್ಷಣ ರಂಗದ ಮೇಲೆ ಬರುವಂಥ ಒಂದು ಅನುಭವ ಇದ್ಯಲ್ಲ, ಅದು ತುಂಬ ಭಿನ್ನವಾದದ್ದು ಮತ್ತು ತುಂಬ ಅದಕ್ಕೊಂದು ವಿಚಿತ್ರವಾದ ಒಂದು ಸೆಳೆತ ಇದೆ. ಅಂದ್ರೆ ನನಗಂತು ಇದೆ ಅದು. ಸೊ, ಹಂಗಾಗಿ ನಾನು ಅದಕ್ಕೆ, ಆ ಕ್ಷೇತ್ರದ ಬಗ್ಗೆ ನನಗೆ ಮೊದ್ಲಿಂದ್ಲು ಆಸಕ್ತಿ. ನಾನು ಯಾವಾಗ್ಲು ಅದ್ರ ಕುರಿತು ಯೋಚ್ನೇನೂ ಮಾಡ್ತಿರ್ತೇನೆ. ಆಮೇಲೆ, ನನ್ನ ಓದಲ್ಲು ಕೂಡ ನಾನು ಹೆಚ್ಚು ನಾಟ್ಕದ ಬಗ್ಗೆ, ನನಗೆ ನೋಡೋದ್ ಮಾತ್ರ ಅಲ್ಲ, ಓದೋದ್ರಲ್ಲು ನನಗೆ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಸಾಹಿತ್ಯಕೃತಿಯಾಗಿನು ನಾಟ್ಕ ನನಗೆ ಒಂದು ಆಕರ್ಷಣೆಯ ಒಂದು ಕ್ಷೇತ್ರವಾಗಿದೆ. ಇದೆಲ್ಲಾ ಬಿಟ್ಟು ಸುಮ್ನೆ ಒಂದು, ನಿಮ್ಮ craftsmenship ದೃಷ್ಟಿಯಿಂದ ನೋಡಿದ್ರು ಕೂಡ ನಾಟ್ಕ ಅನ್ನೋದು, ಅದು ನಿಮ್ಮ ಬರವಣಿಗೆಗೊಂದು ಬೇರೆಯೇ ರೀತಿಯ ಒಂದು ಆಯಾಮವನ್ನು ಕೊಡುತ್ತೆ. ಕತೆಗಳನ್ನು ಬರೆದು, ಕಾದಂಬರಿಗಳನ್ನು ಬರೆದು ಇದ್ದವ್ರಿಗೆ ನೀವು ನಾಟ್ಕ ಬರೀಲಿಕ್ಕೆ ಇರೋ ಒಂದು ತಯಾರಿ, ಒಂದು ಮನಸ್ಥಿತಿ ಮತ್ತೆ ಅದಕ್ಕಿಂತ ಹೆಚ್ಚಾಗಿ ಆ ಬರವಣಿಗೆಯದೇ ಒಂದು ಕ್ರಮ ಇದ್ಯಲ್ಲ, ಅಂದ್ರೆ ನೀವು ಎಲ್ಲವನ್ನು ಮಾತಿನಲ್ಲಿ ಹೇಳ್ಬೇಕಾದದ್ದು, ಆಮೇಲೆ, ಒಂದಿಷ್ಟೇ ತೋರ್ಸಿ ಬಹಳಷ್ಟನ್ನ ಅದನ್ನ ನಿಮ್ಮ ಮನಸ್ಸಿನಲ್ಲಿ ಬಿಡುವಂಥಾದ್ದು, ಅಥ್ವಾ ಅದನ್ನ ನಟರಿಗೆ, ದಿಗ್ದರ್ಶಕರಿಗೆ ಬಿಡುವಂಥಾದ್ದು - ಎಲ್ಲ, ಒಂದ್ರೀತಿಯ ಆ craftsmenship ಅಥವಾ ಆ ಕಲಾತ್ಮಕ ಕೌಶಲ್ಯ, ಅದು ಕೂಡ ಒಂದು ರೀತಿಯ, ಭಾಳ ದೊಡ್ಡ ಸವಾಲು ಅಂತ ನನಗನಿಸುತ್ತೆ. ಸೊ, ಇದೆಲ್ಲದ್ರಿಂದ ನಾನು ಅದಕ್ಕೆ ಆಕರ್ಷಿತನಾದೆ.

ಒಂದು ಕತೆ ಬರೆಯುವುದು ಇನ್ನೊಂದು ಕಾದಂಬರಿ ಬರೆಯೋದು. ಎರಡರಲ್ಲಿ ಬರವಣಿಗೆಯ ಪ್ರಕ್ರಿಯೆಯ ದೃಷ್ಟಿಯಿಂದ ಏನು ವ್ಯತ್ಯಾಸ? ನಿಮಗೆ ಯಾವುದು ಹೆಚ್ಚು ಇಷ್ಟ?

ಈ ಕತೆ ಅನ್ನೋದು ನಾನು ಯಾವಾಗ್ಲು ಈ ಉದಾಹರಣೆಯನ್ನ ಕೊಡ್ತ ಇರ್ತೇನೆ; ಅದನ್ನು ಶಾಂತಿನಾಥ ದೇಸಾಯಿ ಹೇಳಿದ್ರು. ಅದೇನಂದ್ರೆ, ಕತೆಯಂದ್ರೆ ಒಂದು ಮರದ ಮೇಲೆ ಹತ್ತಿ ಅದ್ರ ಹಣ್ಣು ತಿಂದ್ಹಂಗೆ, ಕಾದಂಬರಿ ಅಂದ್ರೆ ಇಡೀ ತೋಟದಲ್ಲೆ ಓಡಾಡಿ, ನಿಮ್ಗೆ ಬೇಕಾದ ಹಣ್ಣು ಕಿತ್ಹಂಗೆ ಅಂತ. ಅಂದ್ರೆ ನಿಮಗೆ ಹೇಳ್ಬೇಕಾಗಿದ್ದೇನಂದ್ರೆ, ಒಟ್ಟು ಎರಡೂ ಮಾಧ್ಯಮ ಇದ್ಯಲ್ಲ, ಅದಕ್ಕದಕ್ಕೆ ಭಿನ್ನವಾದ ಒಂದು ಜೀವನದೃಷ್ಟಿ ಬೇಕಾಗತ್ತೆ. ಎರಡನ್ನು ಬರೀಬೇಕಾದ್ರೆ ನಮ್ಮ ಮನಸ್ಥಿತಿ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಅದಕ್ಕೆ ಬೇಕಾದ ಲೋಕದೃಷ್ಟಿ ಎಲ್ಲವೂ ತುಂಬ ಭಿನ್ನವಾದದ್ದು. ಆದ್ರಿಂದ ಒಂದು ಕತೆ ಬರೀತ ಬರೀತ ಕಾದಂಬರಿಯಾಗೋದಿಲ್ಲ ಅಥ್ವಾ ಒಂದು ಉದ್ದ ಕತೆ ಕಾದಂಬರಿಯಾಗೋದಿಲ್ಲ. ಕಾದಂಬರಿಗೆ ಬೇಕಾದ, ಕಾದಂಬರಿಗೆ ತುಂಬ ಆಳ ಬೇಕು. ಅಂದ್ರೆ, it is about total experience... ಅಂಥ ಒಂದು ಅನುಭವದ, ಒಂದು ಪೂರ್ಣ ಅನುಭವದ ಅಂಥ ಒಂದು ಮಾಧ್ಯಮ ಅದು. ಆದ್ರೆ ಕತೆ ಅಂದ್ರೆ ಹಾಗಲ್ಲ. ಕತೆ ಅದರ ಅಳತೆ ಚಿಕ್ಕದು, ಆಮೇಲೆ ಅದ್ರಲ್ಲಿ ನೀವು ಹೇಳಬೇಕಾದ ಸಂಗತಿಗಳನ್ನ ಚುರುಕಾಗಿ ಹೇಳ್ಬೇಕು, ಆಮೇಲೆ ಹೀಗೆ... ಅದ್ರಲ್ಲೊಂದು ಇಡೀ ಮಾಧ್ಯಮಾನೇ ಅದು ಬೇರೆ. ಹಾಗಾಗಿ ಕತೆಗಾರನಿಗೆ ಮತ್ತು ಕಾದಂಬರಿಕಾರನಿಗೆ ಇರಬೇಕಾದ ಮನಸ್ಥಿತಿ ಎರಡೂ ಬೇರೆ ಬೇರೆ. ಆಮೇಲೆ ಕಾದಂಬರಿ ಬರೆಯುವಾಗ ಹೆಚ್ಚು ಸಾವಧಾನ ಬೇಕು ಅಂತ ನನಗನಿಸುತ್ತೆ. ಅಂದ್ರೆ ಸಾವಧಾನ ಅನ್ನೋದು ನಾನು ನಿಮಗೆ ಒಂದನ್ನ ತಿಳ್ಕೊಂಡು, ಒಂದನ್ನ ಅರಗಿಸಿಕೊಂಡು, ಒಂದನ್ನ ಸಮಾಧಾನವಾಗಿ ಹೇಳುವ ರೀತಿ. ಸಮಾಧಾನ ಅನ್ನೋದನ್ನ ನೀವು ತುಂಬ metaphoricalಆದ ಅರ್ಥದಲ್ಲಿ ನೀವದನ್ನ ತಗೊಳ್ಬೇಕು. ಸಮಾಧಾನಕರವಾದ ರೀತಿಯಲ್ಲಿ ಅದನ್ನ ಹೇಳ್ಬೇಕು. ಸೊ, ಈ ಎಲ್ಲ ರೀತಿಯಿಂದ ಎರಡೂ ಸಂಪೂರ್ಣ ಭಿನ್ನವಾದ ಮಾಧ್ಯಮಗಳಂತ್ಲೆ ನನಗೆ ಅನ್ಸುತ್ತೆ. ಆಮೇಲೆ ನಾನು ಈ ಕಾದಂಬರಿಗಳನ್ನ ಬರೀತಾ ಇರೋದಿಕ್ಕೂ ಮತ್ತೆ ಆ ತರ ಈ ಕ್ಷೇತ್ರದಲ್ಲಿ ನಾನು ಈಗ ಎರಡು ಕಾದಂಬರಿಗಳನ್ನ ಬರೆಯೋದಿಕ್ಕು ಇದೇ ಒಂದು ಕಾರಣ; ಯಾಕಂದ್ರೆ ಅದು ನನಗೆ ಅದು ಹೆಚ್ಚು space ಕೊಡುತ್ತೆ ಅಂತ ನನಗನಿಸಿದೆ.

ಒಂದು ಸಾಹಿತ್ಯ ಪತ್ರಿಕೆಯನ್ನು ದೀರ್ಘಕಾಲ ನಡೆಸಿಕೊಂದು ಬರುವುದು ಮತ್ತು ಸರಿಯಾಗಿ ನಡೆಸಿಕೊಂಡು ಬರುವುದು; ಸಮಯಕ್ಕೆ ಸರಿಯಾಗಿ ಅದನ್ನ ಓದುಗರಿಗೆ ತಲುಪಿಸಿ, ಬದ್ಧತೆಯನ್ನ ಉಳಿಸಿಕೊಂಡು ನಡೆಸಿಕೊಂಡು ಬರುವುದು ಎರಡೂ ತುಂಬ ಕಷ್ಟ ಎನ್ನುವಂಥ ಒಂದು ಸಾಮಾನ್ಯ ಆಭಿಪ್ರಾಯ ಇದೆ. ಈಗಾಗಲೇ ಮೂರುವರ್ಷಗಳನ್ನ ಪೂರೈಸಿರುವ ದೇಶಕಾಲದಂಥ ಪತ್ರಿಕೆ ನಡೆಸುವ ಅನುಭವ ಹೇಗಿತ್ತು ಮತ್ತು ದೇಶಕಾಲದ ಸಂಪಾದಕರಾಗಿ ಪತ್ರಿಕೆಯನ್ನು ಮುಂಬರುವ ದಿನಗಳಲ್ಲಿ ವಿಭಿನ್ನವಾಗಿ ರೂಪಿಸುವ ಬಗ್ಗೆ ಯೋಜನೆಗಳೇನಾದರೂ ಇವೆಯೆ?

ಇದು ಕಷ್ಟ ಅಂದ್ರೆ ನಿಜವಾಗ್ಲು ಅದಕ್ಕೆ ತುಂಬ ಕೆಲ್ಸ ಇದೆ. ಕೆಲ್ಸ ಇಲ್ದೆ ಅದ್ಯಾವುದು ಆಗೋದಿಲ್ಲ. ಯಾಕಂದ್ರೆ ಒಂದು ಪತ್ರಿಕೆ ನಡೆಸೋದು ಅಂದ್ರೆ ಅದಕ್ಕೆ ಮೊದ್ಲಿಂದ ಕೊನೇವರೆಗೂ ನಮ್ಮ ಒಂದು ಸಣ್ಣ ತಂಡ ಇದೆ. ಆ ತಂಡದಿಂದ್ಲೆ ನಾವದನ್ನ ಮಾಡ್ತೀವಿ. ಚನ್ನಕೇಶವ ಅಂತ ಅದಕ್ಕೆ ವಿನ್ಯಾಸಕಾರರಿದ್ದಾರೆ. ಸೊ, ಹೀಗೆ... ಆಮೇಲೆ ಅಕ್ಷರ, ಕೆ.ವಿ.ಅಕ್ಷರ ಅವರು ನನ್ಜೊತೆಗಿದಾರೆ. ಸೊ ಅದಷ್ಟೆ ಅಲ್ದೇನೆ ಇನ್ನೂ ತುಂಬ ಜನ ಸ್ನೇಹಿತರಿದಾರೆ. ಇದೆಲ್ಲ ಒಬ್ನೇ ಮಾಡ್ಲಿಕ್ಕಾಗುವಂಥ ಕೆಲ್ಸ ಅಲ್ಲ ಇದು. ಆದ್ರಿಂದ ಇದು ಒಂದು ಈ ನನ್ನ ಸಾಹಿತ್ಯ ಸ್ನೇಹಿತರು, ಲೇಖಕ ಮಿತ್ರರು, ಆಮೇಲೆ ಓದುಗರು, ಚಂದಾದಾರರು, ಇವ್ರೆಲ್ಲ ಎಲ್ಲ ಒಂದು ದೊಡ್ಡ ಬಳಗ ಅಂತ ತಿಳ್ಕೊಂಡು ನಾವು ಮಾಡ್ತಿದೀವಿ. ಆಮೇಲೆ ಅದು.....ನನಗೆ ಈ ವರೆಗೆ ತುಂಬ ಸಹಕಾರ ಎಲ್ಲ ಸಿಕ್ಕಿದೆ. ಅದು, ಇನ್ನು ಅದರ ಸಮಯದ ಬಗ್ಗೆ ಕೇಳಿದ್ರೆ, ಅದು, ಮಾಡ್ಬೇಕಂತ ಒಂದು ನಿಮಗೆ ಅನಿಸಿದ್ರೆ ಮತ್ತು ಅದಕ್ಕೆ ನೀವು ಪ್ರಾಮುಖ್ಯತೆಯನ್ನ ಕೊಟ್ರೆ ಆವಾಗ ಅದು ಅದೆಲ್ಲವೂ ಸಮಯಕ್ಕೆ ಸರಿಯಾಗಿ ಬರುತ್ತೆ. ಅದೇನು ತೊಂದ್ರೇನೆ ಆಗ್ಬಾರ್ದು ಯಾಕಂದ್ರೆ ಅದೊಂದು ರೀತಿಯ commitmentಉ. ನಾವು ನಮ್ಮ ಚಂದಾದಾರರಿಗೆ, ಓದುಗರಿಗೆ ನಾವು ಪ್ರತಿ ತಿಂಗಳು ತರ್ತೀವಿ ಅಂದ್ರೆ ಪ್ರತಿ ತಿಂಗ್ಳು ತರ್ಬೇಕು ಅದನ್ನ. ದುರದೃಷ್ಟವಶಾತ್ ನಮ್ಮಲ್ಲಿ ಹೆಚ್ಚು ಸಾರಿ ಹೆಚ್ಚು ಪಾಲು ಸಾಹಿತ್ಯ ಪತ್ರಿಕೆಗಳು ಸಮಯಕ್ಕೆ ಸರಿಯಾಗಿ ಬರದೇ ಇರೋದ್ರಿಂದ, ಸಮಯಕ್ಕೆ ಸರಿಯಾಗಿ ಬರೋದೇ ಒಂದು ದೊಡ್ಡ ಭಾಗ್ಯ ಅನ್ನುವಂಗಾಗಿದೆ. ಅದು actually ನೀವದು basic ಆದ ಒಂದು commitment ಅದು. ಅಂದ್ರೆ ಅದನ್ನ ಕನಿಷ್ಠವಾದ ಒಂದು - ಒಬ್ಬ ಚಂದಾದಾರನಿಗೆ ನಾವು ಪ್ರತಿತಿಂಗ್ಳು ತರ್ತಿವಂದ್ರೆ ನಾವು ಪ್ರತಿತಿಂಗ್ಳು ಒಂದು ಪತ್ರಿಕೆಯನ್ನ ಕೊಡೋದು ಒಂದು ಕನಿಷ್ಠವಾದ ಒಂದು ಧರ್ಮ. ಆದ್ರೆ ಈ ವರೆಗು ಲೇಖಕರ ಸಹಕಾರ ಇರೋದ್ರಿಂದ, ಆಮೇಲೆ ತುಂಬ ಜನ ಅದನ್ನ ನಾನು ಕೇಳ್ದಾಗ ಸಮಯಕ್ಕೆ ಸರಿಯಾಗಿ ಬರೆದು ಕೊಡೋದ್ರಿಂದ ಇದ್ನೆಲ್ಲ ಮಾಡೋದು ಸಾಧ್ಯವಾಗಿದೆ.

ನಿಮ್ಮ ಆರಂಭದ ಸಂಚಿಕೆಯಲ್ಲಿ ನೀವು ನಿಮ್ಮ ಸಂಪಾದಕೀಯದಲ್ಲಿ ಒಂದು ಒಳ್ಳೆಯ ಮಾತನ್ನ ಹೇಳಿದ್ರಿ. "ಯಶಸ್ಸು, ಪ್ರಗತಿ, ಜ್ಞಾನ, ಕುಟುಂಬ ಸಂಬಂಧಗಳ ಸಹಜ ಅರ್ಥಗಳನ್ನು ನಮ್ಮಿಂದ ಕಸಿದುಕೊಳ್ಳ ತೊಡಗಿರುವ ಸಂಗತಿಗಳ ಬಗ್ಗೆ ತತ್ಕ್ಷಣದ ಆಸೆ ಮತ್ತು ದೌರ್ಬಲ್ಯಗಳನ್ನು ಮೀರಿದ ಆಳವಾದ ಆಲೋಚನೆ ಇಂದಿನ ಅಗತ್ಯವಾಗಿದೆ." ಅಂತ. ಅಂಥ ಉದ್ದೇಶಗಳನ್ನೆಲ್ಲ ಇಟ್ಟುಕೊಂಡೇ ನೀವು ದೇಶಕಾಲವನ್ನ ಆರಂಭ ಮಾಡಿದ್ರಿ ಅಂತೇನೂ ಅಲ್ಲ, ಆದ್ರೆ, ಮೊದಲ್ನೆ ಉತ್ತರದಲ್ಲಿ ನೀವು ಹೇಳಿದ ಹಾಗೆ, ಮನಸ್ಸಿನ ಒಂದು spaceನ್ನ ವಿಸ್ತರಿಸುವ ನಿಮ್ಮ ಸತತವಾದ ಪರಿಶ್ರಮದಲ್ಲಿ, ದೇಶಕಾಲ ವರೆಗೆ ಮಾಡಿರೋದ್ರಲ್ಲಿ ನಿಮಗೆ ಸಮಾಧಾನ ಇದೆಯ? ಅಥವಾ ಅದಕ್ಕೆ ಒಳ್ಳೆಯ ಒಂದು ಪ್ರತಿಸ್ಪಂದನ ಜನರಿಂದ ಸಿಕ್ಕಿದೆ ಅಂತನಿಸುತ್ತದೆಯೆ?

ಸಮಾಧಾನ ಇದೆ ನನಗೆ. ಆದ್ರೆ ಇನ್ನೂ ಹೆಚ್ಚಿನ ಕೆಲಸ ಮಾಡ್ಲಿಕ್ಕೆ ಸಾಧ್ಯ ಅಂತ ನನಗನಿಸುತ್ತೆ. ಅಂದ್ರೆ ಕೆಲವು ಸಂಗತಿಗಳನ್ನ ನಾವು, ಅಂದ್ರೆ ಕೆಲವು ಲೇಖನಗಳನ್ನ ನಾವು ಪ್ರಕಟಿಸಿದ್ದೇವೆ. ಕೆಲವು ಕತೆಗಳನ್ನ ಮಾಡಿದ್ದೀವಿ. ಅದು, ಬೇರೆ ಎಲ್ಲೂ ಯಾವ್ದೇ ಒಂದು ಪತ್ರಿಕೆಯಲ್ಲೂ ಪ್ರಕಟವಾಗಲಿಕ್ಕೆ ಸಾಧ್ಯ ಇಲ್ದೇ ಇರುವಂಥದ್ದನ್ನ ಮಾಡುವುದು ಕೂಡ ನಮ್ಮದೊಂದು ಉದ್ದೇಶ ಇತ್ತು. ಅಂದ್ರೆ ಈಗ ಎಷ್ಟೋ ಕಡೆಗಳಲ್ಲಿ ದೀರ್ಘವಾದ ಲೇಖನಗಳನ್ನ ಹಾಕೋದಿಲ್ಲ. ದೀರ್ಘವಾದ ಕತೆಗಳನ್ನ ನಿಮಗೆ ಓದ್ಲಿಕ್ಕೆ ಸಿಗೋದಿಲ್ಲ. ಪುಸ್ತಕಗಳಲ್ಲಿ ಬಿಟ್ರೆ ಬೇರೆ ಎಲ್ಲೂ ಅದೆಲ್ಲ ಸಿಗೋದಿಲ್ಲ. ಆ ತರದ ಕೆಲವು ಅವಕಾಶಗಳು ನಮ್ಮಲ್ಲಿದ್ವು. ಆಮೇಲೆ, ಯಾವಾಗ್ಲು ಅದು, ಹೊಸಬ್ರು ಈ ಪತ್ರಿಕೆಗೆ ಸೇರ್ಕೊಂಡಾಗ, ಹೊಸ ಬರಹಗಾರರು ಬರೀಲಿಕ್ಕೆ ಸುರುಮಾಡ್ದಾಗ ಅವ್ರಿಗೆ ಇದು ನಮ್ದು ಅಂತ ಅನಿಸಿದಾಗ, ಅವ್ರಿಗಿದ್ರಲ್ಲಿ ಒಂದು ಜಾಗ ಇದೆ ಅಂದಾಗ್ಲೇ ಅದಕ್ಕೊಂದು ಜೀವಕಳೆ ಇರುತ್ತೆ. ಯಾವಾಗ್ಲು ಒಂದು ಪತ್ರಿಕೆಗೆ, ಒಂದು ಲೈವ್ಲಿನೆಸ್ ಇರುತ್ತೆ. ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗ್ಬೇಕು ಅಂತನ್ನೋದು ನನ್ನ ಇಷ್ಟ. ಅದಾಗಿಲ್ಲ ಅಂತಲ್ಲ, ಆಗಿದೆ. ಆದ್ರೆ ಇನ್ನೂ ಆಗ್ಬೇಕು. ಆದ್ರೆ ಹಾಗಂತ ಅದನ್ನ ಕೇವಲ ಒಂದು ಅವ್ರನ್ನ ಒಳಗೊಳ್ಳಬೇಕು ಅನ್ನೋ ಕಾರಣಕ್ಕೆ ಎಲ್ಲವನ್ನೂ ಪ್ರಕಟಮಾಡೋದು ಅಂತ ಅಲ್ಲ. ಆದ್ರೆ ಅವ್ರು, ಹೆಚ್ಚು ಹೆಚ್ಚು ಹೊಸಬರು ಬರೀಲಿಕ್ಕೆ ಸುರುಮಾಡ್ದಾಗ, ಹೆಚ್ಚು ಹೆಚ್ಚು ಹೊಸ ರೀತಿಯ ಬರಹಗಳು ಬಂದಾಗ್ಲೆ ಇದಕ್ಕೊಂದು ಸಾರ್ಥಕತೆ ಇದೆ. ಇಲ್ದಿದ್ರೆ ಇದನ್ನ ಸುಮ್ನೆ ಒಂದು ಪತ್ರಿಕೆಯನ್ನ ನಡೆಸೋದ್ರಲ್ಲಿ ಯಾವ ಒಂದು ಹೊಸ ಅರ್ಥವೂ ಇರೋದಿಲ್ಲ. ಆಮೇಲೆ ಎಲ್ಲ ಪತ್ರಿಕೆಗೂ, ನಾನಿದನ್ನ ಆರಂಭಿಸುವಾಗ್ಲೆ ಹೇಳ್ದೆ, ಎಲ್ಲ ಪತ್ರಿಕೆಗಳಿಗೂ ಒಂದು ಅದಕ್ಕು ಒಂದು ಆಯುಷ್ಯ ಅಂತ ಒಂದಿರುತ್ತೆ. ನೀವು ಯಾವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರು. ಯಾಕಂದ್ರೆ ಅದನ್ನ ಒಂದು ಸಣ್ಣ ಗುಂಪು ನಡೆಸ್ತಾ ಇರುತ್ತೆ. ಆಮೇಲೆ ಅದಕ್ಕೊಂದು ಅದ್ರ intensity ಇದ್ಯಲ್ಲ, ಅದು ತುಂಬಾ ವರ್ಷಗಳ ಕಾಲ ಆ intensityಯನ್ನ ಕಾಯ್ದುಕೊಂಡು ಬರೋದು ಕಷ್ಟ. ಯಾಕೆ ಕಷ್ಟ ಅಂದ್ರೆ ಅದ್ಕೆ ತುಂಬ personal ಆದ timeನ್ನ ನಾವು invest ಮಾಡ್ತಿರ್ತೀವಿ. ಈಗ ನಾನು ಕೂಡ ಅಷ್ಟೆ, ನಾನು ಅಥ್ವಾ ನಮ್ಮ ತಂಡ, personal timeನ್ನ ಅಂದ್ರೆ, ನಾವು personal ಆಗಿ ಬೇರೆ ಏನೋ ಮಾಡ್ಬೇಕಾಗಿರೋ ಹೊತ್ತಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ನಮ್ಮ ಕುಟುಂಬದ ಜೊತೆ ಕಳೀ ಬೇಕಾದ ಕಾಲದಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ಅಂದ್ರೆ ಏನೋ ನಮ್ಮ personal ಆದ ಏನೋ ಒಂದನ್ನ ಕೊಡ್ತಾ ಇರ್ತೀವಿ. ಇದನ್ನ ದೀರ್ಘ ಕಾಲ ಮಾಡೋದು ಭಾಳ ಕಷ್ಟ. ಇದನ್ನ ಕೆಲವು ವರ್ಷಗಳ ವರೆಗೆ ಮಾಡ್ಬೋದು. ಇನ್ನೊಂದು ಏನಂದ್ರೆ, ಈ ಹೊತ್ತಿಗೆ ಬರೀತಾ ಇದಾರಲ್ಲ, ಇವ್ರೆಲ್ಲ ಇದ್ರಲ್ಲಿ ಒಳಗೊಂಡಾಗ, ಅವ್ರದ್ದೂ ಒಂದು intensive ಆದ ಒಂದು period ಇರುತ್ತೆ. ಒಂದು intense ಆದ ಒಂದು ಕಾಲ ಇರುತ್ತೆ. ಈಗಿನ ಲೇಖಕರಿಗೂ. ಅವ್ರು ಬರೀಲಿಕ್ಕಿರ್ಲಿ, respond ಮಾಡೋದಿರ್ಲಿ ಅಥವಾ ಯಾವ ರೀತಿದಿರ್ಲಿ; ಆ ಕಾಲಕ್ಕೂ ಇದಕ್ಕೂ ಒಂದ್ರೀತಿಯ ಸಂಬಂಧ ಇದೆ. ಆದ್ರಿಂದ ನೀವು ಸಾಕ್ಷಿಯನ್ನ ನೋಡಿ, ಅಥವಾ ಋಜುವಾತು ನೋಡಿ. ಅವೆಲ್ಲವೂ ಒಂದು ಉಚ್ಛ್ರಾಯವನ್ನು ತಲುಪಿ, ಆ ಕಾಲಕ್ಕೆ ಅದು ತುಂಬ useful ಆಗಿತ್ತು. ಎಲ್ರು ನಾವಿನ್ನು ಅದನ್ನ ನೆನಸ್ಕೋತೀವಿ, ಅದಿನ್ನು ಎಷ್ಟೋ ಹೊಸ ರೈಟರ್ಸ್‌ನ್ನು ಬೆಳಕಿಗೆ ತಂದಿತ್ತು. ಲಂಕೇಶ್ ಪತ್ರಿಕೆಯನ್ನು ನೋಡಿ. ಅದಕ್ಕೂ ಒಂದು ಉಚ್ಛ್ರಾಯ ಇತ್ತು. ಹಾಗೆ ಈ ತರ ಅದು ಹೊಸ ಹೊಸ, ಲಂಕೇಶ್ ಪತ್ರಿಕೆ ಸಾಹಿತ್ಯ ಪತ್ರಿಕೆ ಅಂತಲ್ಲ, but, ಈ ರೀತಿಯ ಒಂದು ಸಾಹಿತ್ಯದ ಪತ್ರಿಕೆಯ ಒಂದು ಉಚ್ಛ್ರಾಯ ಇರುತ್ತೆ, ಕೆಲವು ಕಾಲ ಇರುತ್ತೆ. ಅದನ್ನ, ಅದ್ರಿಂದ ಈ ಪತ್ರಿಕೆಗೆ ಕೂಡ ಆ ತರದ್ದೊಂದು ಯಾವ್ದೋ ಒಂದು ಆಯುಷ್ಯ ಇದೆ ಅಂತ ನಾನು ತಿಳ್ಕೊಂಡಿದೀನಿ. ಹಾಗಾಗಿ ಅದೊಂದು eternal, ಆದೊಂದು ಎಲ್ಲ ಕಾಲಕ್ಕು ಇರುತ್ತೆ ಆ ತರದ ಯಾವ್ದೇ ಒಂದು ಕಲ್ಪನೆಗಳಾಗ್ಲಿ ಅಥವಾ ಭ್ರಮೆಗಳಾಗ್ಲಿ ನನ್ಗಿಲ್ಲ.
(ಮೂಲ ಆಡಿಯೋ ಸಂದರ್ಶನವನ್ನು ಕೇಳಲು ದಯವಿಟ್ಟು sampada.net ತಾಣದ podcast ವಿಭಾಗವನ್ನು ಭೇಟಿ ಮಾಡಿ.)
ಕೃತಜ್ಞತೆಗಳು : ಶ್ರೀ ಹರಿಪ್ರಸಾದ್ ನಾಡಿಗ್, ಸಂಪದ ತಾಣದ ಸಂಚಾಲಕರು.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ