Saturday, January 12, 2008

ಅಂಗ ಸಂಗಿಯಾಗದೆ ಹಂಗು ಹರಿಯುವುದೆ?ಧರ್ಮ ಕೂಡ ಎಲ್ಲ ಸದಾಶಯದ ಉದ್ದೇಶಗಳಂತೆಯೇ ಒಂದು ಸಂಸ್ಥೆಯ ಹಂತಕ್ಕೆ ಏರಿದಾಗ ಹೇಗೆ ಅದು ಒಳಗಿಂದೊಳಗೇ ನಾಶವಾಗುವ ಸಾಧ್ಯತೆಯನ್ನೂ ಸ್ವೀಕರಿಸುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುತ್ತದೆ ಕೇಶವ ಮಳಗಿಯವರ ಕಾದಂಬರಿ ಅಂಗದ ಧರೆ.
ಇಲ್ಲಿರುವ ಸವಾಲು ಕೂಡ ಅಷ್ಟೇ ಸೂಕ್ಷ್ಮವಾಗಿದೆ. ಸಾಂಸ್ಥಿಕ ನೆಲೆಗಟ್ಟಿನಲ್ಲೂ ವ್ಯಕ್ತಿಗತ ಆದರ್ಶವನ್ನು ಕಾಯ್ದುಕೊಂಡು ಬರುವುದು ಸಾಧ್ಯವೆ? ಬುದ್ಧ, ಗಾಂಧಿ, ಬಸವಣ್ಣನವರಂಥವರ ಹಿನ್ನೆಲೆಯಲ್ಲಿ ಇದನ್ನು ನಾವು ಯೋಚಿಸಬೇಕಿದೆ. ಇಂಥ ಮಹಾತ್ಮರ ವಿಚಾರದಲ್ಲಿ ಅವರ ನಂತರವೂ ಅವರ ಧ್ಯೇಯಗಳಿಗೆ, ಆದರ್ಶಗಳಿಗೆ, ತತ್ವಗಳಿಗೆ ಸಿಕ್ಕಿದ, ಸಿಗುತ್ತಿರುವ ಮನ್ನಣೆ ಎಂತಹುದು? ಅವರು ಹುಟ್ಟುಹಾಕಿದ ಅಥವಾ ಅವರ ಹೆಸರಿನಲ್ಲಿ ಹುಟ್ಟಿಕೊಂಡ ಸಂಸ್ಥೆ ಇವತ್ತು ಎಷ್ಟರ ಮಟ್ಟಿಗೆ ಅದನ್ನು ಸಾಧ್ಯವಾಗಿಸಿದೆ? ಎಂಬೆಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಕೇಶವ ಮಳಗಿಯವರ ಈ ಪುಟ್ಟ ಕಾದಂಬರಿ ಗಮನ ಸೆಳೆಯುತ್ತದೆ.

ಅಂಗದ ಧರೆಯ ಮೇಲೆ ಮೂರು ಬಾವಿಯುಂಟು:
ಮೊದಲ ಬಾವಿ ಮುಟ್ಟಿದಾತ ಅಂಗಸಂಗಿಯಾದನು.
ನಡುವಣ ಬಾವಿಯ ಮುಟ್ಟಿದಾತ ಉತ್ಪತ್ಯ -ಸ್ಥಿತಿ-ಲಯಕ್ಕೊಳಗಾದನು
ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು -
ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮವ ದಾಂಟಿ,
ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು!


ಅಲ್ಲಮನ ಈ ವಚನದಿಂದ ಹಂಗು ಹರಿದ ಶರಣನ ಕತೆ ತೊಡಗುವ ಕೇಶವ ಮಳಗಿಯವರ ಕಾದಂಬರಿಗೆ ಮನು ವಿ ದೇವದೇವನ್ ವಿಸ್ತೃತವಾದ ಮತ್ತು ಆಳ ಅಧ್ಯಯನದ ಮುನ್ನುಡಿಯನ್ನೂ ನೀಡಿದ್ದಾರೆ. ಈ ವಿವರ್ಶಾತ್ಮಕ ಮುನ್ನುಡಿಯ ಹಂಗಿಲ್ಲದೆ ಈ ಕಾದಂಬರಿಯನ್ನು ಕೇವಲ ಸಾಮಾನ್ಯ ಓದುಗನ ನೆಲೆಯಿಂದ ನೋಡುವ ಪ್ರಯತ್ನ ಇದು.
ಕೇಶವ ಮಳಗಿಯವರು ಈ ಕಾದಂಬರಿಯಲ್ಲಿ ಒಂದು ವಿನೂತನ ವಿನ್ಯಾಸದ ಪ್ರಯೋಗ ಮಾಡಿದ್ದಾರೆ. ಆ ವಿನ್ಯಾಸದಿಂದಲೇ ಅವರು ವ್ಯವಸ್ಥೆಯ ಅನಿವಾರ್ಯ ತೊಡಕುಗಳನ್ನು ಅವು ಇರುವಂತೆ ಇರುವಾಗಲೇ ಅವುಗಳ ನ್ಯೇತ್ಯಾತ್ಮಕ ಪ್ರಭಾವವನ್ನು ಮೀರುತ್ತ, ಸಾಧ್ಯವಾದಲ್ಲೆಲ್ಲ ಅದೇ ವ್ಯವಸ್ಥೆಯನ್ನು ಬಳಸಿಕೊಂಡು ಕೆಲವು ಮೂಲ ಉದ್ದೇಶಗಳನ್ನು ಸಾಧಿಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸ ಹೊರಡುತ್ತಾರೆ. ಸರಳವಾಗಿ ಹೇಳುವುದಾದರೆ ಕೆಸರಿನಲ್ಲಿ ಹುಟ್ಟುವ ಕಮಲ ಕೆಸರಿನಿಂದ ಚೂರೂ ಕೊಚ್ಚೆಯಾಗದ ಹಾಗೆ ಉಳಿಯುವುದಾದರೆ ಒಂದು ಸದುದ್ದೇಶದ ಕ್ರಿಯೆ ವ್ಯವಸ್ಥೆಯ ಕೊಚ್ಚೆಯನ್ನು ಅದರೊಳಗಿದ್ದೇ ಅದು ಸೋಕದಂತೆ ಇರುವುದು ಸಾಧ್ಯವೆ ಎಂಬುದರ ಪ್ರಯೋಗ. ಇದು ಆಶಯವಾಗಿ ಎಲ್ಲರಿಗೂ ಯಾಕೆ ಅಸಾಧ್ಯ, ಆದರ್ಶ ಇರಬೇಕಾದ್ದೇ ಹಾಗಲ್ಲವೆ ಎನಿಸುವಂತದ್ದು. ಆದರೆ ನಮ್ಮ ಮಠಪೀಠಗಳು ಇವತ್ತು ಏನಾಗಿವೆ ಎಂಬುದನ್ನು ನೋಡಿದರೆ ಆಶಯಕ್ಕೂ ವಾಸ್ತವಕ್ಕೂ ಇರುವ ಅಂತರ ಗೋಚರಿಸದೆ ಇರುತ್ತದೆಯೆ?
ಇಲ್ಲಿ ಗುರುಬಸವನಿಗೆ ಹೆರಸಾರಿ ಎಂಬ ಒಂದು ಶಬ್ದ ಹುಟ್ಟಿಸಿದ ಗೊಂದಲ ಅರಿವಿನ ಹಸಿವಾಗಿ ವಾಸ್ತವದಲ್ಲಿ ಅದು ಅನುಭವವಾಗಿ ಆತ ಅದನ್ನು ನಿಭಾಯಿಸುವ ಬಗೆಯೇ ಒಂದು ವಿಶೇಷ. ಕೇಶವ ಮಳಗಿಯವರು ಇದನ್ನು ಸಾಧ್ಯವಾಗಿಸುವುದು ರೇವಕ್ಕ ಎಂಬ ಒಬ್ಬ ಅದ್ಭುತವಾದ ಮತ್ತು ಅಸಾಧ್ಯ ಸ್ತ್ರೀಪಾತ್ರದ ಮೂಲಕ ಎಂಬುದನ್ನು ಗಮನಿಸಬೇಕು.
ಮಠ ಮಾನ್ಯ ಕಟ್ಟದೆ ತನ್ನ ಹುಡುಕಾಟದ ಹಾದಿ ಎಲ್ಲರ ಹಾದಿಯೂ ಆದಾಗಲೇ ಅದು ಸಾರ್ಥಕವಾಗುವುದು ಎನ್ನುವುದೇ ಒಂದು ಮಜಲಿನ ಅರಿವು. ಗುರುಬಸವ ಅದನ್ನು ಸಾಧಿಸಲೆಂದೇ ಜಂಗಮನಾಗದೆ ಒಂದೆಡೆ ನೆಲೆನಿಂತವನು. ಆದರೆ ಅಲ್ಲಿಗೆ ಅದು ಹೇಗೋ ಬಂದು ಸೇರುವ ರೇವಕ್ಕ ಇಂಥ ಒಂದು ಪ್ರಯತ್ನ ಸಾಂಘಿಕವಾಗಿ ಸಾಗಬೇಕಾದರೆ ಅದು ಸಂಸ್ಥೆಯಾಗುವುದು ಅನಿವಾರ್ಯವೇನೋ ಎಂಬಂತೆ ಗುರುಬಸವನ ನೆಲೆಯನ್ನು ಬೆಳೆಸುತ್ತಾಳೆ. ಒಂದು ಹಂತದಲ್ಲಿ ಅದು ಇವತ್ತು ನಾವು ಕಾಣುವ ಯಾವುದೇ ಮಠಗಳ ಹಾಗೆ ಅನ್ನದಾನ, ವನಮಹೋತ್ಸವ, ಶಿಕ್ಷಣ, ಆಸ್ಪತ್ರೆ, ಹಾಸ್ಟೆಲು ಎಂದು ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ ಗುರುಬಸವನಿಗೆ ಹೆರಸಾರುವುದರ ಅರ್ಥವನ್ನೂ, ಅದು ಪ್ರತಿಫಲಿಸುವ ಅವನ ಉದ್ದೇಶಗಳ ನಿರರ್ಥಕತೆಯನ್ನೂ ಕಾಣಿಸುತ್ತದೆ. ಆದರೆ ಗುರುಬಸವ ಅದನ್ನು ರೇವಕ್ಕನಂಥ ರೇವಕ್ಕನಿಂದಲೇ ನಿಭಾಯಿಸುವುದು ಕಾದಂಬರಿಯ ಸಂಕ್ರಮಣ ಘಟ್ಟ.
ಕೇಶವ ಮಳಗಿಯವರು ಸಾಂಸ್ಥಿಕ ಸದುದ್ದೇಶಗಳು ವಿಫಲವಾಗುವ ಘಟ್ಟವನ್ನು ಚಿತ್ರಿಸುತ್ತಲೇ ಅದನ್ನು ಎದುರಿಸುವ ಒಂದು ಪ್ರಯೋಗವನ್ನು ಸಾಧಿಸುವುದು ರೇವಕ್ಕನ ಸಾಪೇಕ್ಷ ಸಾಧ್ಯತೆಯಾಗಿ ಮತ್ತು ಗುರುಬಸವನೆಂಬ ಒಬ್ಬ ಮಠಾಧಿಪತಿ ಎನಿಸಬಹುದಾದರೂ ಸ್ವತಃ ಸಾಂಸ್ಥಿಕ ಧರ್ಮಪೀಠದ ವಿರೋಧಿಯಿಂದ ಎಂಬುದನ್ನು ಗಮನಿಸಿದಾಗಲೇ ಅದರ ಮಹತ್ವದ ಅರಿವು ನಮಗಾಗುವುದು. ಈ ಪ್ರಯೋಗದ ಯಶಸ್ಸಿನ ಬಗ್ಗೆಯೂ ಕಾದಂಬರಿ ವಿವರಿಸುವುದಿಲ್ಲ. ಸಿದ್ಧ ಮಾದರಿಯ ಪರಿಹಾರಗಳನ್ನು ಸೂಚಿಸುವುದು ಕಾದಂಬರಿಯ ಉದ್ದೇಶವೂ ಅಲ್ಲ. ಹಾಗೆ ಅನಿರೀಕ್ಷಿತ ಘಟ್ಟದಲ್ಲೇ ಕೊನೆಯಾಗುವ ಕಾದಂಬರಿ ಸಮಸ್ಯೆಯನ್ನು ಒಂದರ್ಥದಲ್ಲಿ ಜೀವಂತವಾಗಿಯೇ ಇರಿಸಿಬಿಡುತ್ತದೆ. ಬಹುಷಃ ಹಾಗೆ ಇರಿಸುವುದರಿಂದಲೇ ಗುರುಬಸವನ ಚಿಂತನೆಯ ಹಾದಿಗೆ ನಮ್ಮನ್ನು ತಂದು ನಿಲ್ಲಿಸಿ ಬಿಡುವ ಶಕ್ತಿಪಡೆಯುತ್ತದೆ. ಇದರಿಂದ ಕೆಲಕಾಲವಾದರೂ ಪ್ರಶ್ನೆಗಳು ಓದುಗರ ಮನಸ್ಸಿನಲ್ಲೂ ಅನುರಣಿಸುತ್ತ ಉಳಿಯುತ್ತವೆ.
ಹೆರಸಾರಿ ಎಂಬುದರ ಅರ್ಥ ಗುರುಬಸವನಿಗಾದಂತೆ ನಮಗೂ ಆಗುತ್ತದೆ, ಅದರಲ್ಲಿ ವಿಶೇಷವೇನಿಲ್ಲ. ಆದರೆ ಅದನ್ನು ಆತ ನಿಭಾಯಿಸುವ ಸವಾಲು ಸ್ವೀಕರಿಸಿದಂತೆ ಈ ದೇಶವೂ ನಿಭಾಯಿಸಲು ಸಾಧ್ಯವಾಗುವುದಾದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ಸಖ್ಯ, ರಾಜಕಾರಣದ ಧಾರ್ಮಿಕ ನಿಯಂತ್ರಣ, ಹಿಂದೂತ್ವದ ರಾಷ್ಟ್ರಪ್ರೇಮ ಎಲ್ಲ ನಮಗೆ ಬೇರೆಯೇ ಸ್ವರೂಪದಲ್ಲಿ ಕಾಣುವುದು ಸಾಧ್ಯವಾದೀತು.
ಪುಟ್ಟ ಕಾದಂಬರಿಯಾದರೂ ಪೂರ್ಣಪ್ರಮಾಣದ ಕಾದಂಬರಿಗಳಷ್ಟೇ ಮನಸ್ಸಿನಲ್ಲಿ ತುಂಬ ಹೊತ್ತು ಉಳಿಯಬಲ್ಲ ಪಾತ್ರ ಚಿತ್ರಣ, ವಿವರಗಳಿಂದಾಗಿ ಈ ಕಾದಂಬರಿಯ ಪಾತ್ರಗಳು, ಅಲ್ಲಿನ ವಾತಾವರಣ ಓದುಗನಿಗೆ ಆಪ್ತವಾಗುವ ಹದ ಪಡೆದುಕೊಂಡಿರುವುದು ವಿಶೇಷ.

ಕೃತಿಯ ಹೆಸರು: ಅಂಗದ ಧರೆ
ಕೃತಿಕಾರ : ಕೇಶವ ಮಳಗಿ
ಪ್ರಕಟನೆ: ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: ಐವತ್ತು ರೂಪಾಯಿ

(ಸಂಚಯ ಸಾಹಿತ್ಯ ಪತ್ರಿಕೆಯ ಎಪ್ಪತ್ತನಾಲ್ಕನೆಯ ಸಂಚಿಕೆಯಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ) ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ