Monday, February 25, 2008

ಕಥೆಗಾರನೊಬ್ಬನ ರೂಪಕ ಲೋಕದ ಕಥನ, ನೇರಳೆ ಮರ


ಬದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ ಎಲ್ಲದರಲ್ಲೂ ಬಿಚ್ಚಿಕೊಳ್ಳುವ ಬಗೆ ವ್ಯಕ್ತಿಯಿಂದ ವ್ಯಕ್ತಿಗೆ ವಿಶಿಷ್ಟವಾದದ್ದು. ಆದಾಗ್ಯೂ ಅದರಲ್ಲಿ ಅಷ್ಟಿಷ್ಟು ಸಾಮ್ಯವಿದ್ದೆ ಇರುತ್ತದೆ. ನಿಮ್ಮ ಬಾಲ್ಯದ ಸವಿನೆನಪುಗಳಲ್ಲಿ ನನ್ನ ಬಾಲ್ಯದ ಸ್ಮೃತಿಗಳಿರುತ್ತವೆ. ನಿಮ್ಮ ಅಪಮಾನದ ಘಳಿಗೆಗಳಲ್ಲಿ ನನ್ನ ಕಣ್ಣಲ್ಲೂ ನೀರು ತುಂಬಿಕೊಳ್ಳುತ್ತದೆ. ನಿಮ್ಮ ನಡುವಯಸ್ಸಿನ ನೋಟ ನನಗೆ ದೀವಟಿಗೆಯ ಹಾಗಿರುತ್ತದೆ. ಅದಕ್ಕೇ ಓಶೋ ಹೇಳಿರಬೇಕು, ದೇಹಗಳು ಬೇರೆ ಬೇರೆ, ಮನಸ್ಸು ಅಲ್ಲಿಷ್ಟು ಇಲ್ಲಿಷ್ಟು ಒಂದೇ ತರ ಎನಿಸುತ್ತೆ, ಆತ್ಮ ಮಾತ್ರ ನನಗೂ ನಿನಗೂ ಒಂದೇ...


ಬರಹಗಾರನ ಬಾಲ್ಯ, ಕನಸು, ಯೌವನ, ಬದುಕು ಬೇರೆಯವರಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಆದರೂ ನಮಗೆ ಅದರಲ್ಲಿ ವಿಚಿತ್ರ ಕುತೂಹಲ ಇದ್ದೇ ಇರುತ್ತದೆ. ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಕಾಣುವ ಹಂಬಲ, ಲಂಕೇಶರ ಹುಳಿ ಮಾವಿನ ಮರದ ನೆರಳು, ಹಣ್ಣಿನ ಸಿಹಿ ಹುಳಿ ಒಗರು ತಿಂದು ನೋಡುವ ಬಯಕೆ, ಭೈರಪ್ಪನವರ ಚಿತ್ತ ಭಿತ್ತಿಯ ಕಡೆ ನೆಟ್ಟ ನೋಟವ ನೆಟ್ಟು ಕಾಣುವ ಕುತೂಹಲ, ಕುವೆಂಪುರವರ ನೆನಪಿನ ದೋಣಿಯಲ್ಲಿ ತೇಲುವ ಸುಖವನ್ನು ಅನುಭವಿಸುವ ಕಾತರ, ಅಮೃತಾಪ್ರೀತಮರ ರಸೀದಿ ಟಿಕೇಟು ಕೊಂಡು ನುಡಿಯ ನೆರಳಿನಲ್ಲಿ ಹಾಯಾಗಿ ಮಲಗುವ ಆಸೆ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆನೆಂದ ಬಿ.ವಿ. ಕಾರಂತರ ಜೊತೆ ಇನ್ನೊಂದಿಷ್ಟು ಹೊತ್ತು ಇರಬೇಕೆಂಬ ತಲ್ಲಣ, ಕತ್ತಾಲೆ ಬೆಳದಿಂಗಳಲ್ಲಿ ಸಿಜಿಕೆ ಜೊತೆ ನಿಲ್ಲುವ ಮನಸ್ಸು, ಊರುಕೇರಿಯ ಅಲೆಯುತ್ತ ಸಿದ್ಧಲಿಂಗಯ್ಯನವರ ಜೊತೆ ಸುತ್ತುವ ಚಪಲ.....ನಮಗಿದ್ದೇ ಇದೆ. ಇದೆಲ್ಲ ಆತ್ಮಕಥಾನಕದ ಮಾತಾಯಿತು. ಚಿತ್ತಾಲರು, ತೇಜಸ್ವಿ, ಗೊರೂರು, ಅನಂತಮೂರ್ತಿ, ಜಯಂತ ಕಾಯ್ಕಿಣಿ ಇನ್ನೂ ಹಲವರು ಇನ್ನೊಂದೇ ಬಗೆಯಲ್ಲಿ ತಮ್ಮ ಬಾಲ್ಯವನ್ನು, ನೆನಪುಗಳನ್ನು ಹಂಚಿಕೊಂಡಿದ್ದಿದೆ. ಇವರ ಅಂಕಣಗಳೋ, ಪ್ರಬಂಧಗಳೋ, ಲೇಖನಗಳೋ, ಪ್ರವಾಸಕಥನಗಳೋ ನಮಗೆ ಇವರನ್ನು ನಮ್ಮವರನ್ನಾಗಿಸಿದ ಬೆರಗು ಗೊತ್ತೇ ಇದೆ. ಕೆಲವೊಮ್ಮೆ ಇನ್ಯಾರೋ ಬರೆದ ಈ ಬರಹಗಾರರ ಬಾಲ್ಯ, ಬದುಕು ಕೂಡ ಅಷ್ಟೇ ಕುತೂಹಲ ಮೂಡಿಸುತ್ತದೆ.

ಏನಂಥ ವಿಶೇಷ ಈ ಬರಹಗಾರರ ಬದುಕಿನಲ್ಲಿ? ಅದು ಬದುಕಿಗೆ ಅವರು ಸ್ಪಂದಿಸಿದ ವಿಶಿಷ್ಟ ರೀತಿಯಲ್ಲಿದೆ. ಹಾಗೆ ಸ್ಪಂದಿಸಿ ಈ ಬದುಕಿನಿಂದ ಪಡೆದುಕೊಂಡ ವಿಶಿಷ್ಟ ಅರಿವಿನಲ್ಲಿದೆ. ಹಿಂದೆಲ್ಲ ತಪಸ್ವಿಗಳು ಕಾಡಿಗೆ ಹೋಗಿ ಮರದ ಕೆಳಗೆ ಕಣ್ಮುಚ್ಚಿ ಕೂತು ನಡೆಸಿದ ಧ್ಯಾನ, ಚಿಂತನೆ, ತಪಸ್ಸನ್ನು ಒಂದು ರೂಪಕವಾಗಿ ಕಾಣಬಲ್ಲಿರಾದರೆ ಬರಹಗಾರನ ಬರವಣಿಗೆಯೊಂದಿಗಿನ ಸಖ್ಯವನ್ನು ಹಾಗೆಂದೇ ತಿಳಿಯಬಹುದು. ಒಬ್ಬ ಬರಹಗಾರ ಇನ್ಯಾವುದೇ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಯಾರ ನಿರ್ದೇಶನವಿಲ್ಲದೆ, ಸಂಭಾಷಣೆಯ ಸ್ಕ್ರಿಪ್ಟ್ ಇಲ್ಲದೆ, ನೇಪಥ್ಯದ ಅನೂಹ್ಯ ಸಂದಿಯಿಂದ ಗುನುಗುವ ಪ್ರಾಮ್ಟ್ ಇಲ್ಲದೆ ದಿಢೀರನೆ ಯಾರೋ ತಳ್ಳಿದಂತೆ ನೂಕಲ್ಪಟ್ಟು ಪ್ರವೇಶಿಸಿದ ಈ ಬದುಕೆಂಬೋ ರಂಗಸ್ಥಳದ ಮೇಲೆ ನಡೆಸಿದ ಎಲ್ಲ ರಂಗಚಲನೆ, ಮಾತು, ನಟನೆ, ಕಪಟ, ಕಸರತ್ತು, ಕೊಟ್ಟಿದ್ದು ಪಡೆದದ್ದು ಆಯಾ ಕಾಲಕ್ಕೇ ಅವನನ್ನು ಏನು ಮಾಡಿತು ಎಂಬುದನ್ನು ಕಂಡುಕೊಳ್ಳುತ್ತಲೇ ಅವನ್ನೆಲ್ಲ ಮಾಡುತ್ತಾನೆ ಎನ್ನಬೇಕು. ಇನ್ನೆಂದೋ ಮುಂದೆ ಬೀರುವ ಹಿನ್ನೋಟವಲ್ಲ ಇದು. time present ನಲ್ಲೇ ದಕ್ಕಬೇಕಾದದ್ದು. ಸಾಕ್ಷಿಪ್ರಜ್ಞೆಯಿಂದ ಬದುಕುವುದು ಎಂದು ಸರಳವಾಗಿ ಇದನ್ನು ಹೇಳಿಬಿಡಬಹುದಿತ್ತೇನೋ. ಅಂಥ ಪೂರ್ಣಬದುಕು ಒಬ್ಬ ಬರಹಗಾರನದ್ದಾಗಿರುತ್ತದೆ ಎಂಬ ಒಂದು ನಿರೀಕ್ಷೆ ನಮ್ಮದು. ಹಾಗಾಗಿ ಅದನ್ನು ಇಣುಕಿ ನೋಡುವ ಕುತೂಹಲ, ಕಾತರ!

ಕೇಶವ ಮಳಗಿಯವರ ನೇರಳೆ ಮರ ಈ ಯಾವ ಬಗೆಯ ಕಥಾನಕವೂ ಅಲ್ಲ ಅಥವಾ, ಅವೆಲ್ಲವೂ ಹೌದಾಗಿರುವ ಒಂದು ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಇಲ್ಲಿ ಪ್ರಯತ್ನಿಸಿದ್ದಾರೆ. ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಡವುತ್ತ, ತದುಕುತ್ತ, ಸಂತೈಸುತ್ತ, ಪೊರೆಯುತ್ತ, ತೊರೆಯುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು ಕೈಹಿಡಿದೆತ್ತುತ್ತ ಕಥೆಗಾರನನ್ನು ಬೆಳೆಸುವ ಬಗೆಯೇ ವಿಲಕ್ಷಣವಾದದ್ದು. ಬರಹಗಾರನ ಸೂಕ್ಷ್ಮಪ್ರಜ್ಞ್ಮೆ ಅದನ್ನು ಗಮನಿಸುವ ಬಗೆ, ಅದಕ್ಕೆ ಸ್ಪಂದಿಸುವ ಬಗೆ ಮತ್ತು ಅದೆಲ್ಲ ತನ್ನ ಮೇಲೆ ಉಂಟು ಮಾಡುತ್ತಿರುವುದನ್ನು ಅರ್ಥೈಸಿಕೊಳ್ಳುತ್ತ, ಮುಂದೆ ತಾನು ಅವನ್ನು ತನ್ನ ಬರವಣಿಗೆಯಲ್ಲಿ ಮತ್ತೊಮ್ಮೆ ಉಂಟುಮಾಡಿಕೊಳ್ಳುವ ಪರಿಕರಗಳನ್ನು ಪಡೆದುಕೊಳ್ಳುತ್ತಲೇ ತನ್ನ ಬದುಕನ್ನು ಓದುಗನ ಮಡಿಲಿಗೆ ಒಡ್ಡುವುದಕ್ಕೆ ಸಜ್ಜಾಗುವ ಪ್ರಕ್ರಿಯೆ ಕುತೂಹಲಕರ ಅಂತ ನಿಮಗೆ ಅನಿಸಿದರೆ ಖಂಡಿತವಾಗಿಯೂ ಮಳಗಿಯವರ ಈ ಪುಸ್ತಕ ನಿಮಗಾಗಿಯೇ ಇರುವಂಥದ್ದು!

ಇಲ್ಲಿ ಭಾವ ಇದೀಗ ಅನುಭವಿಸಿದಷ್ಟೇ ಸ್ನಿಗ್ಧವಾಗಿವೆ. ಅನುಭವ ಮನಸ್ಸಿನಾಳದಲ್ಲಿ ಅಚ್ಚೊತ್ತಿದ ಚಿತ್ರಿಕೆಗಳಾಗುತ್ತವೆ. ಆಳದ ತಳಮಳ ಮನಸ್ಸಿಗಿಳಿಯುತ್ತದೆ. ಯಾಕೆಂದರೆ ಇಲ್ಲಿ ಮಳಗಿಯವರು ಪ್ರಾಮಾಣಿಕವಾಗಿ ಆಳವನ್ನು ತಡಕುತ್ತ ನಡೆಸಿದ ಶೋಧದಲ್ಲಿ ನಮ್ಮದು ಬರೇ ಅವರಿಗೆ ಜೊತೆಯಾಗುವ ಸರದಿ. ಜೊತೆಗೆ ನೀವೀದ್ದೀರೇ ಎಂಬ ಶಂಕೆಯ ಹಂಗೂ ಅವರಿಗಿದ್ದಂತಿಲ್ಲ! ಅಷ್ಟರಮಟ್ಟಿಗೆ ಇದೊಂದು ಸ್ವಗತ, ತನಗೇ ಬುದ್ಧಿ ಹೇಳಿಕೊಳ್ಳುವ, ಗದರುವ, ಉಪನ್ಯಾಸ ನೀಡುವ, ಲಲ್ಲೆಗರೆದು ಸಂತೈಸುವ, ಕಟುವಾಗಿ ಕೆಣಕಿ ಹಾದಿಗೆ ತರುವ ಮಳಗಿಯವರ ತತ್ವ ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬುದೇ. ಹಾಗಾಗಿ ಇದನ್ನು ಸ್ವೀಕರಿಸಲು ಕೂಡ ಒಂದು ಮನಸ್ಥಿತಿಯ ಸಿದ್ಧತೆಯ ಅಗತ್ಯ ಕೂಡ ಕೆಲವೆಡೆ ಇದ್ದೇ ಇದೆ. ರೂಪಕಗಳ ಹಾದಿಯಿದು ಹೌದಾದರೂ ಶೋಧ ಸತ್ಯದ್ದು, ದರ್ಶನ ಅವ್ಯಕ್ತ ಜಗತ್ತಿಗೆ ಸೇರಿದ್ದು. ಅನೂಹ್ಯಗಳ ಅಗಮ್ಯವನ್ನರಸಿ ಹೊರಟ ಅಮೂರ್ತ ಬಿಂಬಗಳನ್ನು ಕನಸು ಮನಸಿನಲ್ಲಿ ಹೊತ್ತ ಕಥೆಗಾರನ ಜೊತೆ ಅಷ್ಟು ದೂರ ಸಾಗಲು ಇದೊಂದು ಅವಕಾಶ.

ಇಲ್ಲಿನ ಬರಹಗಳಿಗೆ ಅದೇ ನೇರಳೆ ಮರದ ವಿಚಿತ್ರ ಸುವಾಸನೆಯಿದೆ. ಮಳೆ ಮೋಡ ಕವಿದ ಸಂಜೆ ಇನ್ನೂ ಮೈತುಂಬ ತೊಟ್ಟಿಕ್ಕುವ ಮಳೆನೀರ ಗೆಲ್ಲುಗಳನ್ನು ಹೊತ್ತಿರುವ ಮತ್ತು ಅದೇ ಕಾರಣಕ್ಕೆ ನಿಗೂಢವಾಗಿಯೂ ದಟ್ಟವಾಗಿಯೂ ಕಾಣುವ ನೇರಳೇ ಮರದ ಕಪ್ಪು ಜಾಂಬಳಿ ಹಣ್ಣಿನ ರುಚಿಯೂ ಸಿಹಿ, ಒಗರು, ಹುಳಿ ಎಲ್ಲ ಸೇರಿದ ಸಂಕೀರ್ಣ; ಇಲ್ಲಿನ ಬರಹಗಳೂ. ಬಹುಷಃ ನಮ್ಮೆಲ್ಲರ ಬಾಲ್ಯಕ್ಕೂ ಒಂದಲ್ಲಾ ಒಂದು ಬಗೆಯಲ್ಲಿ ನೇರಳೆ ಮರದ ನಂಟಿದೆ, ನೆನಪುಗಳ ಋಣವಿದೆ. ರುಚಿಯ ಮಾತೆತ್ತಿದರೆ ಅಂಥ ಚಪಲವನ್ನೇನೂ ಹುಟ್ಟಿಸದ ಒಗರು ಬಿಯರಿನಂಥ ಈ ನೇರಳೆ ಹಣ್ಣು ಅದು ಹೇಗೆ ಮಾಯಕದ ಬಲೆ ಬೀಸಿ ನಮ್ಮ ಬಾಲ್ಯದ ನಗೆಯ ಮಲ್ಲಿಗೆಯ ಹಲ್ಲನ್ನೆಲ್ಲ ನೀಲ ನೇರಳೆಗೊಳಿಸಿತೋ....

ಪುಸ್ತಕಗಳು, ಹಕ್ಕಿಮರಿ, ಪ್ರೇಮಪತ್ರದ ಸಂಭ್ರಮ, ಖಾಲೀಕೋಣೆಯಲ್ಲಿ ರೂಪುಗೊಳ್ಳುವ ಬದುಕು, ಗಿಲಿಗಿಲಿ ಎಕ್ಕಾ, ಯಾರಿಲ್ಲ ಸಂಗಡ, ಗುಡುಗುಡು ಗುಡುಗು....ಎಂದೆಲ್ಲ ಹಂತಹಂತವಾಗಿ ತಡಕಿದ ಬೆಚ್ಚನೆಯ ಸ್ಮೃತಿಗಳಿಂದ "ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿ"ಯ ಕಾಯಕಕ್ಕೆ ಮಳಗಿಯವರು ರೂಪಕಗಳ ಲೋಕದ ಕಥನ ಎಂಬ ವಿವರ ನೀಡಿದ್ದಾರೆ. ಹಿಂಸೆ, ಮಾರುಕಟ್ಟೆ, ಆತ್ಮಹತ್ಯೆ, ರೈತ, ನೀರಾವರಿ, ನೆಲ-ಜಲ-ಪ್ರಕೃತಿ, ಶಿಕ್ಷಣ, ಯುಗಾದಿ, ಚಳಿ, ಕತ್ತಲೆ, ಹೂವು ಎಲ್ಲವೂ ಇಲ್ಲಿ ಕಥನದ ಪರಿಕರಗಳಾಗುತ್ತವೆ, ಎಲ್ಲೋ ಎಂತೋ ಹೇಗೋ ಕಥೆಗಾರನ ಮನಸ್ಸು, ಹೃದಯಗಳ ರಕ್ತ ಮಾಂಸಗಳಾಗಿ ಜೀವ ತಳೆಯುತ್ತವೆ. ಕೆಲವು ನೋವನ್ನು ಮೀಟಿದರೆ ಇನ್ನುಳಿದವು ಇಲ್ಲಿನ ಬದುಕನ್ನು ಸಹ್ಯಗೊಳಿಸುತ್ತವೆ. ಅದಾಗಿ ಬರೆದ ಬರಹಗಳು, ಆ ಹಾದಿಯೊಂದೇ ತನಗೆ ಉಳಿದಿರುವುದು ಎಂದು ನಿರ್ಧರಿಸಿ ಆಯ್ದುಕೊಂಡು ಹೊರಟವನದ್ದು. ಅಂದರಾಯಿತೆ? ಆಮೇಲೂ ತಮ್ಮ ಕಥೆಯನ್ನೇ ಮುಗಿಸಿ ಅದಕ್ಕೊಂದು ಪುಟ್ಟ ಪೂರ್ಣವಿರಾಮವನ್ನಿಟ್ಟು ಕತ್ತಲೆಯ ಅನೂಹ್ಯ ಜಗತ್ತಿಗೆ ಸೇರಿಹೋದ ಮಂದಿ ಕಥೆಗಾರನನ್ನು ಕಾಡಿದಂತೆಯೇ ಟೀಕಾಚಾರ್ಯರ, ಅವಕಾಶವಾದಿಗಳ ಸಾಂಸ್ಕೃತಿಕ ರಾಜಕಾರಣವೂ ತಲ್ಲಣಗೊಳಿಸಿದೆ.

ಈ ಎಲ್ಲ ತವಕ ತಲ್ಲಣಗಳ ನಡುವೆಯೇ ಈ ಪೂರ್ತಾ ನೇರಳೆ ಬಣ್ಣದ ಮುಖಪುಟದೊಳಗೆ ಆನಂದ ಕಲರಿನ ಹಾಳೆಗಳು ಫಡಫಡಿಸಿ ರೆಕ್ಕೆ ಬಡಿಯುತ್ತಿವೆ, ಮೆಲ್ಲಗೆ ಮನದಾಳದಲ್ಲಿ ಮಿಡಿಯುತ್ತಿವೆ, ಹೃದಯದಿಂದ ಉಸಿರಾಡುತ್ತಿವೆ.

ಪ್ರಕಾಶಕರು: ಕಥನ ಪ್ರಕಾಶನ, ನಂ.15, 7ನೇ ಬಿ ಅಡ್ಡ ರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-560 072.
ದೂರವಾಣಿ: 080-23218118/Mobile:94483 34622.
ಪುಟಗಳು 96+X=106, ಬೆಲೆ: ರೂ. 60.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, February 24, 2008

ಕಾಡು ಅಲೆಯಲು ಹೊರಟು...

ಇದೇ ಚಾರಣ ಅಂದ್ರೆ ಅಂತ ಅನಿಸತೊಡಗಿದ್ದು ಮಾತ್ರ ಮಧ್ಯಾಹ್ನ ಮೂರೂವರೆ ಸುಮಾರಿಗೆ ಸುಡುಬಿಸಿಲಿನಲ್ಲಿ ಬಾಯಿ ಗಂಟಲು ಎಲ್ಲ ಒಣಗಿ, ಬಸಿಯುತ್ತಿರುವ ಬೆವರಿನಿಂದ ಇಡೀ ಮೈ ಒದ್ದೊದ್ದೆಯಾಗಿ ಹಿಂಸೆಯಾಗುತ್ತಿರುವಾಗ, ಕೈಕಾಲುಗಳೆಲ್ಲ ಬಚ್ಚುತ್ತಿರುವಾಗ, ಆ ನೀರವದಲ್ಲೂ ಮೌನವಾಗಿ ಮತ್ತು ಅದಕ್ಕೇ ನಿಗೂಢವಾಗಿ ಚಾಲೆಂಚ್ ಹಾಕುವ ಹಾಗೆ ಎದ್ದು ನಿಂತ ಏಳೆಂಟು ಅಡಿ ಎತ್ತರದ ಕಲ್ಲು ಬಂಡೆಗಳು ಬಾ ನಮ್ಮನ್ನು ಏರು, ಏರಿದರೆ ಉಂಟು ಇಲ್ಲದಿದ್ದರೆ ಇಲ್ಲ ಎಂಬಂತೆ ಪಿಸುಗುಟ್ಟಿದಾಗ!
ಇಲ್ಲ ಸ್ವಲ್ಪ ಸೌಖ್ಯವಿಲ್ಲ ಮಾರಾಯ್ರೇ ಎಂದರೆ ಹಾಗಿದ್ರೆ ನೀವು ಬರಲೇ ಬೇಕು, ಬಂದ್ರೆ ಎಲ್ಲ ಗುಣವಾಗುತ್ತೆ, ನೋಡಿ ಬೇಕಾದ್ರೆ ಎಂದವರು ಅತ್ರಿಯ ಅಶೋಕವರ್ಧನ. ಪ್ರತೀ ಸಲ ಏನಾದರೊಂದು ಕಾರಣ, ನೆವನ ಹೇಳಿ ನನಗೂ ಸಾಕಾಗಿತ್ತು, ಕರೆದೂ ಕರೆದೂ ಅವರಿಗೂ ಸಾಕಾಗಿತ್ತು ಅಂತ ಕಾಣಿಸುತ್ತೆ, ಈ ಬಾರಿ ತೆಪ್ಪಗೆ ಹೊರಟೆ. ಅವರದೇ ಆದ ರಾಜಗಾಂಭೀರ್ಯದ ಮೀಸೆಯೊಳಗಿನ ಕೆಣಕುವ ನಗೆ ಮತ್ತು ಜೋಕುಗಳ ಅಶೋಕರ ಜೊತೆ ಎಲ್ಲಿಗಾದರೂ ಪ್ರಯಾಣ ಹೋಗುವುದೆಂದರೆ ಯಾರಿಗಾದರೂ ಖುಶಿಯ ಕನಸೇ ಬಿಡಿ. ಹಾಗೆ ಭಾನುವಾರದ ಒಂದು ಬೆಳ್ಳಂಬೆಳಗು ನಮಗೆ ದಾರಿ ಬಿಟ್ಟುಕೊಟ್ಟಿದ್ದು ಬಿಸಿಲೆ ಹಳ್ಳಿಗೆ.
ಪುತ್ತೂರಿನ ಸಮೃದ್ಧಿ ತಂಡದ ಸುಮಾರು ಐವತ್ತಾರು ಮಂದಿ (ಅವರಲ್ಲಿ ನಾಲ್ಕು ಮಂದಿ ಮಕ್ಕಳು ಅಂತ ಅವರು ಹೇಳಿದರೂ ನಮಗೆ ಹತ್ತು ಹದಿನೈದು ಮಂದಿ ಮಕ್ಕಳ ತರವೇ ಕಾಣುತ್ತಿದ್ದರು!) ಈ ಚಾರಣಕ್ಕಾಗಿ ತುಂಬ ಯೋಜಿತ ರೀತಿಯಲ್ಲಿ ಸಜ್ಜಾಗಿ ನಮ್ಮನ್ನು ಸುಬ್ರಹ್ಮಣ್ಯದಲ್ಲಿ ಕೂಡಿಕೊಂಡರು. ಆಗ ಬೆಳಗ್ಗಿನ ಒಂಭತ್ತರ ಸಮಯ. ಬೆನ್ನಿಗೆ ಕುಮಾರಪರ್ವತ ನಿಧಾನವಾಗಿ ಮಂಜಿನ ಸ್ನಾನ ಮುಗಿಸುತ್ತಿತ್ತು. ಸುತ್ತಮುತ್ತೆಲ್ಲ ವಿಚಿತ್ರ ಆತಂಕ, ಸಂಭ್ರಮ, ಭಕ್ತಿಯಿಂದ ಓಡಾಡುವ ಭಕ್ತಾದಿಗಳು ತುಂಬಿದ್ದರು. ಸಾಪ್ತಾಹಿಕ ಪುರವಣಿಗಳನ್ನು ಮಗಚುತ್ತಾ ಇವರೆಲ್ಲರ ಟಿಫಿನ್ ಮುಗಿಯುವುದನ್ನು ಕಾಯುತ್ತ ನಿಂತಾಗಲೇ ಪರಿಸರವಾದಿ, ಕಾಡಿನ ಕುರಿತು ಅದಮ್ಯ ಕುತೂಹಲ, ಅಧ್ಯಯನದ ಶಿಸ್ತು ರೂಢಿಸಿಕೊಂಡಿರುವ ನಿರೇನ್ ಜೈನ್ ನಮ್ಮ ಜೊತೆಯಾದರು.
ಅಲ್ಲಿಂದ ಮುಂದೆ ರಸ್ತೆಯಲ್ಲದ ರಸ್ತೆಯಲ್ಲಿ ಸಕಲೇಶಪುರದ ಕಡೆಗೆ ಸಾಗುವ ಹಾದಿಯಲ್ಲಿ ಅಶೋಕರ ವಾಹನದಲ್ಲಿ ಇಡೀ ದೇಹವನ್ನು ನಮ್ಮದಲ್ಲ ಎನ್ನುವಂತೆ ಕುಲುಕುಲು ಅಲ್ಲಾಡಿಸುತ್ತ ಬಿಸಿಲೆ ಕಡೆಗೆ ಸಾಗಿದ್ದೇ ಒಂದು ಸಾಧನೆ! ಹರಿವ ನೀರಿಗೆ ಕಡಿದ ಮರದ ದಿಮ್ಮಿಗಳನ್ನು ತೇಲಿಬಿಟ್ಟು ಇನ್ನೆಲ್ಲೋ ರಸ್ತೆಗೆ ಹತ್ತಿರವಿರುವಲ್ಲಿ ಅದನ್ನು ಮರದ ದಿಮ್ಮಿಗಳಿಂದಲೇ ಅಡ್ಡಗಟ್ಟಿ ಹಿಡಿದು ಲಾರಿಗೆ ತುಂಬಿ ಕದಿಯುವ ಮರಗಳ್ಳರ ಚಾತುರ್ಯ, ಸದ್ಯಕ್ಕಂತೂ ಭೂತ ಬಂಗಲೆ ತರವೋ ಹಳೆ ಬಸ್‌ಸ್ಟ್ಯಾಂಡ್ ಕಟ್ಟಡದ ತರವೋ ಕಾಣುವ ಯಾವ್ಯಾವಾಗಲೋ ಏನೇನೋ ಕಾರಣಕ್ಕೆ ಅನುದಾನ ಪಡೆದು, ಪಡೆದ ಕರ್ಮಕ್ಕೆ ಕಟ್ಟಿ ಹಾಕಿದ ಸರ್ಕಾರೀ ರಚನೆಗಳು ಎಲ್ಲವನ್ನೂ ಯಥಾನುಶಕ್ತಿ ಕಾಣುತ್ತ ಸಾಗಿದೆವು. ಒಂದು ಕಡೆ ಕಳ್ಳರಗಂಡಿಯನ್ನೂ ಕಂಡೆವೆನ್ನಿ. ಈಗಿನ ಕಳ್ಳರ ಕಿಂಡಿಗಳಿಗೆ ಹೋಲಿಸಿದರೆ ಆಗಿನ ಕಳ್ಳರ ಕಿಂಡಿಗಳು ಹೆಚ್ಚು ಸೃಜನಾತ್ಮಕವಾಗಿದ್ದುವೆಂಬುದೇ ವಿಶೇಷ!
ಹಚ್ಚ ಹಸುರಿನ, ನೆರಳಿನಿಂದಾಗಿ ಕಡು ಹಸಿರಿನ ಚಪ್ಪರದ ಒಳಗೆ, ಐವತ್ತು ಅರವತ್ತು ಜನ ಸಾಲಾಗಿ ಕಾಲ ಕೆಳಗಿನ ಒಣಗಿದ ಎಲೆಗಳನ್ನು ತುಳಿಯುತ್ತ, ಬೆನ್ನ ಮೇಲಿನ ಚೀಲದಲ್ಲಿ ಉಪಾಹಾರ, ನೀರು ಹೊತ್ತು, ಶಿಸ್ತಿನಿಂದ ಚರ್ರ ಪರ್ರ ಸದ್ದು ಎಬ್ಬಿಸುತ್ತ ನಡೆದು ಹೋಗುವ ಒಂದು ಅಭ್ಯಾಸಕ್ಕೆ ಬಿದ್ದಿದ್ದೇ ಏರು ಬರಲಿ, ದಿಬ್ಬವೇ ಬರಲಿ ನಡೆಯುವುದೇ! ಬೆವರು ಬರಲಿ, ಕೈಕಾಲು ಸೋಲಲಿ, ನಡೆಯುವುದೇ! ಮುಂದಿನವರು ಮರೆಯಾದ ತಿರುವಿನಲ್ಲಿ ಕುತೂಹಲ, ಬಂತೋ ಶಿಖರ? ಇಲ್ಲ, ಇಲ್ಲಿ ಬರೀ ಬಿಸಿಲು! ತೆಗೆಯಿರಿ ಟೊಪ್ಪಿ. ಬಾಯಾರಿತೇ, ತೆಗಿಯಿರಿ ನೀರಿನ ಬಾಟಲು. ಅರೆ! ಈ ಮಕ್ಕಳಲ್ಲಿ ಎಂಥ ಉತ್ಸಾಹ ಎನ್ನುತ್ತೀರಿ? ಜಿಂಕೆ ಮರಿಗಳ ಹಾಗೆ ಆರು ವರ್ಷದಿಂದ ಹದಿನೈದು ಹದಿನಾರರ ಚಿಣ್ಣರ ನಡಿಗೆಯೇ ಓಟ! ಇವರು ಏರುತ್ತಿದ್ದಾರೆಯೇ ಹಾರುತ್ತಿದ್ದಾರೆಯೇ! ರಾಮಾ ರಾಮಾ, ಯಾರಿಗೆ ಬೇಕಿತ್ತಪ್ಪ ಇದು, ಪಿಕ್‌ನಿಕ್ ಅಂತ ಹೊರಟಿದ್ದು, ಇಲ್ಲಿ ನೋಡಿದರೆ ಮೈಯ ಕೊಬ್ಬೆಲ್ಲ ಕರಗುತ್ತಿದೆಯಲ್ಲಪ್ಪಾ!

"ನಡೆಯಿರಿ ನಡೆಯಿರಿ, ಮತ್ತೆ ತಡವಾಗ್ತದೆ ನಿಧಾನ ಮಾಡಿದರೆ..." ಹಾದಿ ಕಲ್ಲಗುಡ್ಡದ ಕಡೆಗೆ.
ಮತ್ತೆ ಸ್ವಲ್ಪ ಹೊತ್ತಿಗೆ ತಲೆಯೆತ್ತಿ ನೋಡಿದರೆ ಎಲ್ಲ ನಿಮ್ಮದೇ ಆಗಿ ಬಿಟ್ಟಿದೆ ಜಗತ್ತು! ನಿಮ್ಮ ಕಾಲ ಕೆಳಗೆ ಎಲ್ಲೋ ದೂರದಲ್ಲಿ ಊಂ ಎನ್ನುತ್ತ ಮರದ ದಿಮ್ಮಿಗಳನ್ನು ಹೊತ್ತ ಲಾರಿಯೊಂದು ಸುರಂಗದೊಳಗಿಂದಲೋ ಎಂಬಂತೆ ಸುಯ್ಲಿಡುತ್ತಿದೆ! ಅಗೋ ಅಲ್ಲಿ ರಸ್ತೆ, ಗೀರು ಎಳೆದ ಹಾಗೆ, ಅದರ ಮೇಲೆ ಹರಿಯುವ ಆಟಿಕೆಯ ಲಾರಿ! ಅಲ್ಲಿ ಒಳ ಹೋಯ್ತು, ಮತ್ತೀಗ ಇಲ್ಲಿ ಹೊರಬಂತು...ಎಂಥ ಕಣ್ಣಾಮುಚ್ಚಾಲೆ ಈ ಮರಸಾಗಿಸುವವರದ್ದು! ಮತ್ತಲ್ಲಿ ನೋಡಿ, ನದೀ ಪಾತ್ರೆಯ ಹಾದಿ ಅದು. ನದಿ ಕೂಡ ಈಗ ಬತ್ತಿ ಹೋಗಿ ಕಾಣುವುದು ಬರೀ ಬರಡು ಗೀರು, ಭೂಮಿ ತಾಯ ಬೋಳು ನೆತ್ತಿಯ ಮೇಲೆ ಅಡ್ಡಾದಿಡ್ಡಿ ಬೈತಲೆ!

ಹನ್ನೆರಡೂವರೆಗೆ ತಲುಪಿರಬೇಕು. ಸುತ್ತಲಿನ ಪ್ರಕೃತಿಯ ಸೊಬಗು ಕಾಣುತ್ತ ಎಷ್ಟೋ ಕಾಲದ ಮೇಲೆ ತಾಯ ಮಡಿಲಲ್ಲಿ ತಲೆಯಿಟ್ಟ ಮಕ್ಕಳಂತೆ ಆ ಸುಡು ಬಿಸಿಲಿನಲ್ಲೂ, ಬೋಳು ಗುಡ್ಡದ ಬಿಸಿಯಲ್ಲೂ, ಚುರುಗುಟ್ಟುವ ಹೊಟ್ಟೆಯ ಹಸಿವನ್ನೂ ಮರೆತು ಎಲ್ಲರೂ ಸಂಭ್ರಮಿಸಿದರು. ಮತ್ತೆ ಇದ್ದೇ ಇತ್ತು, ಊಟ. ವನಭೋಜನವದು. ಯಾರೂ ತಾವು ತಂದ ಪ್ಯಾಕೆಟು, ಪ್ಲಾಸ್ಟಿಕ್ ಚೀಲ, ಲೋಟ ಯಾವುದನ್ನೂ ಅಲ್ಲೇ ಎಸೆಯಬಾರದು. ಎಲ್ಲವನ್ನೂ ನೀಟಾಗಿ ಒಂದು ಕಡೆ ಕೂಡಿಸಿಟ್ಟು ನಮ್ಮೊಂದಿಗೇ ವಾಪಾಸು ಒಯ್ಯಬೇಕು...

ಮತ್ತೆ ಇಳಿಯುವುದು. ಇಳಿದದ್ದೇ ಇನ್ನೊಂದು ಹಾದಿ ಹಿಡಿದು ಕನ್ನಡಿ ಕಲ್ಲನ್ನು ಹತ್ತುವುದು. ಈ ಬೆಟ್ಟದ ಮೈ ಕಡಿದಾಗಿ ಹಲಗೆ ಯ ತರ ಇರುವುದರಿಂದಲೋ ಅಥವಾ ಈ ಬೆಟ್ಟದಲ್ಲಿರುವ ವಿಶಿಷ್ಟವಾದ ಯಾವುದೋ ಖನಿಜಾಂಶದಿಂದಲೋ ಸೂರ್ಯನ ಬೆಳಕಿಗೆ ಇದು ಫಳಫಳ ಪ್ರತಿಫಲಿಸಿದಂತೆ ಕಂಡಿರಬೇಕು! ಹಾಗಾಗಿ ಇದರ ಹೆಸರು ಕನ್ನಡಿಕಲ್ಲು. ಹಾಗೆ ನೋಡಿದರೆ ನಮ್ಮ ಜೊತೆಯ ಹುಡುಗಿಯರು ಹೆಂಗಸರಿಗೆ ಇದು ಪ್ರಿಯವಾಗಬೇಕಿತ್ತು. ಹಾಗಾಗಲಿಲ್ಲ! ಕೆಲವರು ಆಗಲೇ ಉರಿಮುಖದಿಂದಲೇ ಅವರವರ ಯಜಮಾನ್ರಿಗೆ ಹೇಳಿಬಿಟ್ಟಿದ್ದರು, ಇನ್ನು ಹತ್ತುವುದು ಬಸ್ಸು ಮಾತ್ರಾ! ಕನ್ನಡಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವವರಾರೂ ನಮ್ಮ ಜೊತೆ ಬರಲೇ ಇಲ್ಲ ಎನ್ನಿ.

ಸ್ವಲ್ಪ ಕಷ್ಟವಿತ್ತು ಕನ್ನಡಿಕಲ್ಲಿನ ನೆತ್ತಿಯ ಹತ್ತಿ ನಿಲ್ಲುವುದು. ಬಿಸಿಲೂ ತೀವೃವಾಗಿತ್ತು. ಕಾಡು ಬೋಳಾಗುತ್ತಿರುವುದರಿಂದಲೋ ಏನೋ ನೆರಳಿನ ಆಶ್ರಯ ಕಡಿಮೆ. ಕಾಲಕೆಳಗಿನ ಹಾದಿ ಕಡಿದಾದುದು ಮತ್ತು ಹೆಚ್ಚು ಕಲ್ಲು ಮುಳ್ಳು ಸೇರಿದ್ದು. ದಾರಿ ನೋಡುತ್ತ ನಡೆಯಬೇಕು, ಇಲ್ಲದಿದ್ದರೆ ಮುಂದೆ ದಾರಿ ನೋಡುವ ಅಗತ್ಯವೇ ಇರುವುದಿಲ್ಲ ಎನ್ನುವ ಪರಿಸ್ಥಿತಿ! ಹಾಗಿರುತ್ತ ಅತ್ತಿತ್ತ ನೋಡುವುದಾಗಲೀ, ಆಕಾಶಕ್ಕೇ ಗುರಿಯಿಟ್ಟಂತೆ ಬೆಳೆದು ನಿಂತ ಮರಗಳ ಅದಮ್ಯ ಛಲವನ್ನು, ಆ ನೆಟ್ಟ ನೇರ ಗುರಿಯ ಕುರಿತ ಧ್ಯಾನವನ್ನು ಕುರಿತು ಯೋಚಿಸುವುದಕ್ಕೂ ಸಮಯವಿಲ್ಲ. ಅಂತೂ ಈ ಬೆಟ್ಟವನ್ನು ಹತ್ತಿ ನಿಂತಾಗ ಸರಾಗವಾಗಿ ಹತ್ತಿ ಕುಳಿತ ಮಕ್ಕಳು, ಹುಡುಗಿಯರು ನಿಧಾನಕ್ಕೆ ಏರಿ ಬರುತ್ತಿದ್ದ ತಂಡಗಳಿಗೆ ಇವರು ಸೆಕೆಂಡ್ ಕ್ಲಾಸ್, ಇವರು ಜಸ್ಟ್ ಪಾಸ್ ಎಂದೆಲ್ಲ ಅಂಕಗಳನ್ನು ಕೊಡುತ್ತಿದ್ದರು! ಈ ಹುಡುಗಿಯರ ಪುಟ್ಟ ಬ್ಯಾಗುಗಳಲ್ಲಿ ಏನಿರುತ್ತೆ ಏನಿಲ್ಲ ಎನ್ನಲು ಬರುವಂತಿಲ್ಲ ಬಿಡಿ. ಯಾರೋ ಒಬ್ಬರು ಕೊಡೆ ಹೊರಗೆ ತೆಗೆದು ಆರಾಮಾಗಿ ಅದನ್ನು ಬಿಚ್ಚಿಕೊಂಡು ಕೂತರು. ತಲೆ ಮೇಲಿನ ಸೂರ್ಯ, ಕಾಲಕೆಳಗಿನ ಬಂಡೆ ಎರಡೂ ಉರಿಯುತ್ತಿರುವಾಗ ಹೊಟ್ಟೆ ಉರಿಯದಿರುತ್ತದೆಯೇ? ಉರಿಯಿತೆನ್ನಿ!


ಅಲ್ಲಿಂದ ನಾವು ಎಂಟೂ ದಿಕ್ಕಿನಲ್ಲಿ ಕಂಡ ದೃಶ್ಯವೈಭವವನ್ನು ಯಾವ ಕವಿಯೂ ಹಾಡಲಾರ ಬಿಡ್ರೀ. ಯಾವ ಕ್ಯಾಮೆರಾದ ಎಂಥಾ ಲೆನ್ಸು ಕೂಡಾ ಆ ಸೆನ್ಸು ತರಲಾರದು. ಅಲ್ಲಿಗೇ ಹೋಗಿ ನೋಡ ಬೇಕಾದ ದೃಶ್ಯವದು. ನಮಗೇ ಮತ್ತೆ ಮರಳಿ ಬರುವ ಹಾದಿಯಲ್ಲಿ ವಾಹನ ನಿಲ್ಲಿಸಿ ಇಳಿದು ರಸ್ತೆಯ ಮೇಲೇ ನಿಂತು ತಲೆಯೆತ್ತಿ ನೋಡಿದರೆ, ಅರೆರೆ ಅಲ್ಲಿಗಾ ನಾವು ಹೋಗಿದ್ದು ಹಾಗಾದರೆ ಅನಿಸಿತು ಅಂದರೆ ನೀವೇ ಲೆಕ್ಕ ಹಾಕಿ! ಮೇಲಿಂದ ಕೆಳಗೆ ನೋಡುವಾಗ ಕಂಡ ಹೇರ್‌ಪಿನ್ ತಿರುವು ಥೇಟ್ ಹೇರ್‌ಪಿನ್ ತರವೇ ಇತ್ತಲ್ಲವೇ ಮಾರಾಯ್ತಿ ಅಂತ ಯಾರೋ ಯಾರಿಗೋ ಹೇಳುತ್ತಿರುವಾಗ ಹತ್ತಿದ್ದು ಕನ್ನಡಿ ಕಲ್ಲು, ಕನ್ನಡಿಯನ್ನೇ ಅಲ್ಲವಲ್ಲ ಸದ್ಯ ಎಂಬ ತಮಾಷೆ!
ಬಿಸಿಲೆ ಹಳ್ಳಿಯಲ್ಲಿ ಹೆಚ್ಚೆಂದರೆ ಹತ್ತು ಹದಿನೈದು ಮನೆಗಳಿವೆಯಂತೆ. ಫಾರೆಸ್ಟ್ ಗೇಟಿನ ಸುತ್ತ ಎರಡು ಅಂಗಡಿಗಳೂ ಮೂರು ಹೋಟೆಲ್ಲುಗಳೂ ಇವೆ. ಅವು ಪಂಚತಾರಾ ಹೋಟೇಲುಗಳೇ ಇಲ್ಲಿನ ಮಟ್ಟಿಗೆ. ದೇವೇಗೌಡರ ತುಳಸೀ ಹೋಟೆಲ್ಲಿನ ಟೀಯಂತೂ ನಮಗೆ ಅಮೃತಪಾನದಂತಿತ್ತು. ಹೋಟೆಲ್ ಶೋಭ, ಹೋಟೆಲ್ ಪರಿಸರ ಎಲ್ಲವೂ ಸರಿ ಸುಮಾರು ಒಂದೇ ಆಕಾರ, ಗಾತ್ರ. ಗಂಟೆ ಅರ್ಧಗಂಟೆಗೊಂದರಂತೆ ಹರಿಯುವ ಲಾರಿ, ಕಾರುಗಳಿಗೆ ತೆವಳುತ್ತ ಬರುವ ಸರಕಾರೀ ಬಸ್ಸುಗಳಿಗೆ ತೆರೆಯಲೆಂದೇ ಹಾಕುತ್ತಿದ್ದಾರೆಯೇ ಎನಿಸುವಂತಿದ್ದ ಫಾರೆಸ್ಟ್ ಗೇಟು ಮತ್ತದನ್ನು ನಿರ್ವಹಿಸುತ್ತಿರುವ ವಯಸ್ಸಾದ ಗಾರ್ಡ್‌ಗೆ ಅಶೋಕರ ಬಾಯ್‌ಬಾಯ್ ಸುಪರಿಚಿತವಿರಬೇಕು, ಗೇಟು ಮಡಿಚುತ್ತಲೇ ಮುಗುಳ್ನಗೆ ನಕ್ಕು ಬೀಳ್ಕೊಟ್ಟ ರೀತಿಯೇ ಹಾಗಿತ್ತು.

ಅಶೋಕ ವರ್ಧನರೂ ನೀರೇನ್ ಜೈನ್ ಅವರೂ ತಮ್ಮ ಸುತ್ತ ಎಲ್ಲರನ್ನೂ ನಿಲ್ಲಿಸಿಕೊಂಡು ಈ ವಲಯದಲ್ಲಿ ನಡೆಯುತ್ತಿರುವ ಅರಣ್ಯನಾಶ, ಅದನ್ನೇ ಅವಲಂಬಿಸಿರುವ ಜೀವಸಂಕುಲದ ಅಳಿವು ಉಳಿವಿನ ಪ್ರಶ್ನೆ, ಎರಡನ್ನೂ ಕಾಪಾಡಿಕೊಂಡು ಬರಲು ತಾವು ಇಬ್ಬರೂ ಇನ್ನಿತರ ಕೆಲವರೊಂದಿಗೆ ಸೇರಿ ಮಾಡುತ್ತಿರುವ ಅಷ್ಟಿಷ್ಟು ಪ್ರಯತ್ನ, ಜನರಲ್ಲಿ ಇನ್ನಾದರೂ ಜಾಗೃತವಾಗಬೇಕಿರುವ ಪರಿಸರ ಪ್ರಜ್ಞೆ, ಕಾಡು ಯಾಕೆ ಬೇಕು, ಅಲ್ಲಿನ ಜೀವಸಂಕುಲ ಯಾಕೆ ಬೇಕು ಎಂಬುದೆಲ್ಲ ನಮ್ಮ ನಗರ, ಊರು, ಪಟ್ಟಣದ ದಿನನಿತ್ಯದ ನೀರು, ವಿದ್ಯುತ್, ಕೃಷಿ, ಆರೋಗ್ಯ ಎಲ್ಲಕ್ಕೂ ಹೇಗೆ ಸಂಬಂಧಿತ ಎಂಬ ಬಗ್ಗೆ ನೀಡಿದ ಪುಟ್ಟ ಪರಿಚಯ ನಿಜಕ್ಕೂ ಎಲ್ಲರನ್ನೂ ಎಲ್ಲೋ ಮೀಟುತ್ತಿತ್ತು, ಉದ್ದಕ್ಕೂ.

ಬೇಕಿದ್ದರೆ ಮೂಢನಂಬುಗೆ ಎಂದೇ ಹೇಳಿ, ಇಲ್ಲಿಗೆ ಹೋಗಿಬಂದ ನನಗೆ ಒಂದು ದಿನವೂ ಮೈಕೈ ನೋವು ಕಾಡಲಿಲ್ಲ. ಹೆಚ್ಚುವರಿ ನಿದ್ದೆ, ರೆಸ್ಟು ಬೇಕೆನಿಸಲಿಲ್ಲ. ಆವತ್ತೂ ಎಂದಿನಂತೆ ಹನ್ನೆರಡರ ನಂತರವೆ ಮಲಗಿದೆ. ಮರುದಿನ ಎಂದಿನಂತೆ ಆರಕ್ಕೇ ಎದ್ದೆ. ಹಾಕಿದ್ದ ರಜೆ ಕ್ಯಾನ್ಸಲ್ ಮಾಡಿ ಕೆಲಸಕ್ಕೆ ಹೋದೆ. ಹೋಗುವಾಗ ಇದ್ದ ಶೀತ ನೆಗಡಿ ಮಾಯವಾಗಿತ್ತು! ಅದೇನಿದ್ದರೂ ಮತ್ತೀಗ ಅದೇ ಮಂಗಳೂರಿನ ಕಾರ್ಬನ್ ಉಸಿರಾಡುತ್ತಿದ್ದೇನೆನ್ನಿ.

ನೀವೂ ಒಮ್ಮೆ ಬನ್ನಿ ಇಲ್ಲಿಗೆ ಎನ್ನುತ್ತಿದ್ದಾರೆ ಅತ್ರಿ ಬುಕ್ ಸೆಂಟರ್‌ನ ಅಶೋಕ್. ಅಂದಹಾಗೆ ಇಲ್ಲಿನ ಹದಿನೈದು ಎಕರೆ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬರಬೇಕೆನ್ನುವ ಒಂದೇ ಉದ್ದೇಶದಿಂದ ಖರೀದಿಸಿದವರು ಇವರು, ಇವರ ಇನ್ನೊಬ್ಬ ಗೆಳೆಯ ಡಾ. ಕೃಷ್ಣಮೋಹನರ ಜೊತೆ. (ಅಶೋಕವರ್ಧನ: 0824-2425161.
e-mail:athreebook@sify.com)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಸೂರ್ಯನನ್ನು ಕಂಡ ಮನುಷ್ಯಕತ್ತಲು ಅಭ್ಯಾಸವಾದವರಿಗೆ, ಕತ್ತಲಲ್ಲೇ ಹಿತ ಕಂಡುಕೊಂಡವರಿಗೆ ಸೂರ್ಯ ಶತ್ರು. ಕಣ್ಣಿದ್ದೂ ಕುರುಡರಾಗಿರುವುದು ಇವರಿಗೆ ಸುಖವೆನಿಸುತ್ತದೆ. ತಮ್ಮ ನಂಬುಗೆಗಳಿಗೆ ಹೊಂದದ ಹೊಸ ಯೋಚನೆ, ತತ್ವಗಳನ್ನು ಸಹಿಸುವುದು ಕೂಡ ಕಣ್ಣು ಕುಕ್ಕುವ ಬೆಳಕಿನಷ್ಟೇ ಕಷ್ಟವಾಗುತ್ತದೆ. ಆ ಅಸಹನೆಯ ಕಿಡಿಯನ್ನು ಗುರುತಿಸುವುದು ಬಹಳ ಸುಲಭ. ಅದು ಕಟಕಿ, ನಿಂದೆ, ವ್ಯಂಗ್ಯ, ಪರೋಕ್ಷವಾದ ಚುಚ್ಚುಮಾತು, ನೋಯಿಸಿ ಖುಶಿ ಪಡುವ ಸಣ್ಣತನಗಳ ರೂಪದಲ್ಲಿ ಹೊರಗೆ ಒಸರುತ್ತದೆ. ಇಂಥದ್ದನ್ನು ಇವತ್ತೂ ಕಣ್ತುಂಬ ಕಾಣುವುದು ಸಾಧ್ಯ.ಸಾಕ್ರೆಟೀಸ್‌ನ ಬದುಕಿನ ಸಾರವನ್ನು ನಾಟಕೀಯವಾಗಿ ಕೆಲವೇ ದೃಶ್ಯಗಳಲ್ಲಿ ಹಿಡಿದು ರಂಗಕ್ಕೆ ತರುವ ಸಾರ್ಥಕ ಪ್ರಯತ್ನವಾಗಿ ಈ ಮರಾಠಿ ನಾಟಕ 'ಸೂರ್ಯ ಪಾಹಿಲೆಲಾ ಮಾಣುಸ್' ಮೂಡಿ ಬಂದಿರುವುದು ಮಕರಂದ ಸಾಠೆಯವರಿಂದ. ಅದನ್ನು ಕಂಡು, ಮೆಚ್ಚಿ ಕನ್ನಡಕ್ಕೆ ತಂದವರು ಮಾರುತಿ ಶಾನಭಾಗ. ನೀನಾಸಂ ತಿರುಗಾಟದ ಚಿರೇಬಂದಿ ವಾಡೆ ನೋಡಿದ್ದವರಿಗೆ, (ದೂರದರ್ಶನದಲ್ಲೂ ಈ ನಾಟಕ ಹಲವು ಬಾರಿ ಮರುಪ್ರಸಾರವಾದ ನೆನಪು) ಅದರ ಧಾರವಾಡ ಕನ್ನಡ ಸೊಗಡಿನ ಸಂಭಾಷಣೆಯ ನೆನಪಿರುವವರಿಗೆ ಮಾರುತಿ ಶಾನಭಾಗರನ್ನು ಪರಿಚಯಿಸಬೇಕಿಲ್ಲ ಅನಿಸುತ್ತದೆ. ಮಹೇಶ ಎಲಕುಂಚವಾರ್ ಅವರ ಮರಾಠಿ ನಾಟಕ 'ವಾಡಾ ಚಿರೇಬಂದಿ'ಯ ಅನುವಾದ ಅದು.ಈ ನಾಟಕವೂ ಸಾಕ್ರೆಟೀಸ್‌ಗೆ ಸಿಕ್ಕಿದ ಫಲವನ್ನು ನಾಟಕೀಯವಾಗಿ ಚಿತ್ರೀಕರಿಸುತ್ತದೆ. ಕತ್ತಲೆಯ ಗವಿ, ಅಲ್ಲಿಂದ ಹೊರಬಂದ ಮನುಷ್ಯ ಬೆಳಕನ್ನು ಸಹಿಸಲು ಪಡುವ ಪಾಡು, ಅವನನ್ನು ಸಮಾಧಾನಿಸಿ ಬೆಳಕಿಗೆ ಹೊಂದಿಕೊಳ್ಳುವಂತೆ ಮಾಡಲು ಪ್ರಯತ್ನಿಸುವ ಸಾಕ್ರೆಟೀಸ್‌ನ ಅನುಯಾಯಿಗಳು ಹೇಳುವ ಸಾಕ್ರೆಟೀಸ್‌ನ ಕತೆ, ಉದ್ದಕ್ಕೂ ಆತ ಮತ್ತೆ ಬೆಳಕಿನಿಂದ ಕತ್ತಲೆಯ ಗವಿಗೇ ಮರಳುವ ಸಾಧ್ಯತೆಯನ್ನು ಜೀವಂತವಾಗಿರಿಸಿರುವ ರೀತಿ, ಪರೋಕ್ಷವಾಗಿ ಸಾಕ್ರೆಟೀಸ್‌ನನ್ನೂ ಅವನ ಸುತ್ತಲಿನವರನ್ನೂ ಇಂದಿಗೆ ಸಂಬದ್ಧಗೊಳಿಸುವ ಪರಿ ಎಲ್ಲ ಅಚ್ಚುಕಟ್ಟಾಗಿದೆ. ದೀಪದ ಅಡಿಯಲ್ಲೇ ಕತ್ತಲೆ ಇರುವಂತೆ, ಸೂರ್ಯನ ಬೆಳಕು ನೆರಳಿಗೂ ಕಾರಣವಾಗುವಂತೆ ಸಾಕ್ರೆಟೀಸ್‌ ಅಥವಾ ಅರಿವಿನ ಯಾವುದೇ ಹಾದಿ ಸರಳವಾದ ಮತ್ತು ವಿರೋಧಾಭಾಸಗಳೇ ಇಲ್ಲದ ದಾರಿಯಲ್ಲವೆಂಬುದನ್ನು ನಾಟಕ ಮರೆಯದೇ ಒಂದು ಸಂತುಲಿತ ಚಿತ್ರಣವನ್ನು ನೀಡುತ್ತದೆ. ಸಂಕೀರ್ಣ ವಸ್ತುವನ್ನು ಅಷ್ಟೇ ಕುಶಲವಾಗಿ, ನಾಟಕೀಯವಾಗಿ ತೆರೆದಿಡುವುದರಿಂದ ರಂಗದ ಮೇಲೆ ಇದು ಹೆಚ್ಚು ಪರಿಣಾಮಕಾರಿಯಾಗಿ, ಜೀವಂತವಾಗಿ ಪ್ರೇಕ್ಷಕನಿಗೆ ಅನುಭವವಾಗುವುದು ಸಾಧ್ಯವಾಗಿದೆ ಅನಿಸುತ್ತದೆ. ಗಂಭೀರವಾದ ಈ ನಾಟಕ ಮರಾಠಿ ರಂಗಭೂಮಿಯಲ್ಲಿ ಅತ್ಯಂತ ಜನಪ್ರಿಯವಾಗಿ ನೂರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿತು ಮತ್ತು ವಿಸಿಡಿ ರೂಪದಲ್ಲಿ ಮನೆಮನೆಗೆ ತಲುಪಿತು ಎಂದರೆ ಮರಾಠಿ ರಂಗಭೂಮಿ ಪರಂಪರೆಯ ಸಮೃದ್ಧಿಯನ್ನೂ, ಅಲ್ಲಿನ ಜನರ ಅಭಿರುಚಿಯ ಸಮೃದ್ಧಿಯನ್ನೂ ಅರ್ಥಮಾಡಿಕೊಳ್ಳಬಹುದಾಗಿದೆ.ಋಜುವಾತು ಪ್ರಕಾಶನ ಹೊರತಂದಿರುವ ಈ ಪುಟ್ಟ ನಾಟಕದ ಬಗ್ಗೆ ಸ್ವತಃ ಮಾರುತಿ ಶಾನಭಾಗರೇ ಬರೆದ ಮಾತುಗಳು ಹೀಗಿವೆ:
"ನಮ್ಮ ಜನಜೀವನದ ಸದ್ಯದ ಒಲವು ನಿಲುವುಗಳನ್ನು ಗಮನಿಸಿದಾಗ, ಅಥೆನ್ಸ್‌ನಲ್ಲಿ ಅಂದು ನಡೆದುಹೋದ ಸಾಮಾಜಿಕ ದುರವಸ್ಥೆ ಇನ್ನೊಮ್ಮೆ ಉಂಟಾಗಿದೆಯೆನ್ನುವುದು ಹೊಳೆಯಬಹುದು. ವಾಸ್ತವದಿಂದ ದೂರ ಸರಿದಿರುವ, ಕಿಲುಬುಗೊಂಡಿರುವ ನಮ್ಮ ವಿವೇಕ ದೃಷ್ಟಿ, ಉಪಯುಕ್ತತಾವಾದದ ವಜ್ರಮುಷ್ಟಿಯಲ್ಲಿ ಕ್ಷೀಣವಾಗುತ್ತಿರುವುದನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಆಚಾರ ವಿಚಾರಗಳಲ್ಲಿ ಅಸಹಿಷ್ಣುತೆ ತುಂಬಿಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಉಳಿದಿಲ್ಲ. ನೀತಿ ನಗೆಗೇಡಿಗೆ ತುತ್ತಾಗಿದೆ. ನ್ಯಾಯ ಸಂಸ್ಥೆಯ ಬಗ್ಗೆ ಪೀಡಿತರಲ್ಲಿ ಭರವಸೆ ಉಳಿದಿಲ್ಲ. ದೇಶ, ಧರ್ಮದಂಥ ಗೊಡ್ಡು ಮಠಗಳ ವೈಭವೀಕರಣ ನಡೆದಿದೆ. ಇಂತಹ ಸಮಯ ಪ್ಲೇಟೋನ ಗವಿಯ ಕತ್ತಲೆಯ ಅರಳು ಮರಳು ಪರಿಸ್ಥಿತಿಯಿಂದ ಹೊರಬರುವ ಒಬ್ಬ ದಿಟ್ಟನಂತೆ ಎಚ್ಚೆತ್ತವರ ತಂಡವೇ ನಮಗೆ ಈಗ ಬೇಕಾಗಿದೆ. ಸೊಕ್ರೆಟೀಸ್‌ನ ಸಿದ್ಧಾಂತಗಳ ಸ್ಪಷ್ಟ ಮಂಡನೆ ಮನವೊಲಿಸುವಂತಹುದು. ಇದು ಭಾವನೆಗಳ ವೈಭವೀಕರಣದಿಂದ ದೂರ. ಯಾವುದನ್ನೂ ವೈಭವೀಕರಿಸುವ ಹವ್ಯಾಸವಿಲ್ಲ. ಆದರೂ ಸವಾಲುಗಳು ಹಿಂಜರಿಯುವುದಿಲ್ಲ. ಬಾಳುವೆಯ ಸಂದಿಗೊಂದಿಗಳಿಂದ ಏಳುವ ಈ ಮುಖಾಮುಖಿಗೆ ಸೊಕ್ರೆಟೀಸೋತ್ತರ ಸಮಗ್ರದರ್ಶನದ ಅಗತ್ಯವಿದೆ. ಸಮಚಿತ್ತದಿಂದ ಇವುಗಳನ್ನೆಲ್ಲ ಅಳವಡಿಸಿಕೊಂಡಿರುವುದೇ ಈ ಕೃತಿಯ ಸಿದ್ಧಿ."ರಂಗಕೃತಿಯ ಹೆಸರು : ಸೂರ್ಯನನ್ನು ಕಂಡ ಮನುಷ್ಯ
ಋಜುವಾತು ಪ್ರಕಾಶನ, ೪೯೮, ಆರನೇ 'ಎ' ಮೈನ್, ಆರ್.ಎಂ.ವಿ. ಎರಡನೇ ಹಂತ, ಬೆಂಗಳೂರು - ೫೬೦೯೪.
ಬೆಲೆ: ಅರವತ್ತು ರೂಪಾಯಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, February 20, 2008

ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!


ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)
ಭಾಸ್ಕರ ಹೆಗಡೆ
ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019
ಪುಟಗಳು:105+6
ಬೆಲೆ:ರೂ.100
ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ ನುಂಗುತ್ತಿರುವ ಅವನ ಸ್ಮೃತಿಗಳು, ಭ್ರಷ್ಟನಾಗುತ್ತಿರುವ ಅವನ ಹಪಹಪಿ ಎಲ್ಲವೂ ಕಣ್ಣೆದುರು ಬರುತ್ತದೆ. ಹೀಗೆ ಬದುಕನ್ನು ಅದರ ವಿಶಿಷ್ಟತೆಯಲ್ಲಿ ಮತ್ತು ಸಮಗ್ರತೆಯಲ್ಲಿ ಒಟ್ಟಿಗೇ ಹಿಡಿಯಲು ಭಾಸ್ಕರ ಹೆಗಡೆಯವರು ಪ್ರಯತ್ನಿಸುತ್ತಾರೆ. ಹಾಗಾಗಿ ಒಂದೇ ಸಂಕಲನದಲ್ಲಿ ತೀರ ಭಿನ್ನವೆನಿಸುವ ಬಗೆಯ ರಚನೆಗಳನ್ನು ಅವರು ನಮ್ಮೆದುರು ಇಡುತ್ತಾರೆ.


ಮೊದಲಿಗೆ ಗಮನಸೆಳೆಯುವುದು ಇವರು ಬಳಸುವ ಆಧುನಿಕತೆಯ ಸ್ಪರ್ಶವಿರುವ ನುಡಿಕಟ್ಟುಗಳು, ರೂಪಕಗಳು. ಉದಾಹರಣೆಗೆ ಗಮನಿಸಿ:


"ಅಮೆರಿಕೆಗೆ ಹೋದಾಗಿನಿಂದ ತನ್ನ ಮನಸ್ಸಿನಲ್ಲಿ ಕುಳಿತಿದ್ದ ಅಪ್ಪನ ನೆನಪೆಂಬ ಕ್ಯಾಟ್ರೀನಾ ಪದೇ ಪದೇ ಸುಳಿಯುತ್ತಿತ್ತು."
"ಅಪ್ಪ ಅಮ್ಮನ ನೆನಪೆನ್ನುವ ಬ್ಯಾಟರಿಯ ಸೆಲ್ಲು ತೆಗೆದಿಟ್ಟಿದ್ದ."
"ಮೆಟಲ್ ಇಂಡಸ್ಟ್ರಿಯವನ ಫ್ಯಾಕ್ಟರಿಯ ಅಂಗಳದಲ್ಲಿ ಮಗುವೊಂದು ನಡೆದಂತಿತ್ತು."


ಎರಡನೆಯದಾಗಿ ಇಲ್ಲಿನ ಮಾತಿನ ಹರಿತ, ಮೊನಚು. ಇಲ್ಲಿನ ಹತ್ತೂ ಕಥೆಗಳ ಶೀರ್ಷಿಕೆಯಲ್ಲೇ ಆ ಕಿಚ್ಚು ಅಡಗಿದೆ ಅನಿಸುವಷ್ಟು ಈ ಕಥೆಗಳಲ್ಲಿ ನಂಜು, ನೋವು, ದುರಂತ ಎಲ್ಲ ಅಡಗಿವೆ. ಇಲ್ಲಿನ ಕಥೆಗಳಲ್ಲಿ ಬರುವ ವಿವರಗಳ ನವಿರು ಹೆಚ್ಚಾದಷ್ಟೂ ಆಳದ ವ್ಯಂಗ್ಯ, ವಿಪರ್ಯಾಸಗಳು ಹೆಚ್ಚುತ್ತವೆಯೋ ಎಂಬಂತಿವೆ. ಉದಾಹರಣೆಗೆ ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ ಕಥೆ ನಮ್ಮನ್ನು ಒಮ್ಮೆಗೇ ತಟ್ಟುವ, ಆಘಾತಕ್ಕೆ ತಳ್ಳುವ ಪರಿಯೇ ದಿಗ್ಭ್ರಮೆಗೊಳಿಸುವಂಥದ್ದು. ಅದನ್ನು ತಣ್ಣನೆಯ ಮಾತುಗಳಲ್ಲಿ, ವಿವರಗಳಲ್ಲಿ ನಿರೂಪಿಸಿರುವುದೇ ಕಥೆಯ ಯಶಸ್ಸಿಗೆ ಕಾರಣವೆನಿಸುತ್ತದೆ. ಆದರೆ ಹೀಗೆ ಓದುಗನ್ನು ಒಮ್ಮೆಗೇ ತಡಕುವುದರಿಂದ ಏನು ಅನ್ನುವುದು ಪ್ರಶ್ನೆ. ನಾಯಿಕೆಮ್ಮು ಕೂಡಾ ಇದೇ ಬಗೆಯ ಕಥೆ. ಮನುಷ್ಯನ ಆಳದ ಕ್ರೌರ್ಯ ಯಾವತ್ತೂ ಮೇಲ್ ಸ್ತರದಲ್ಲಿ ಗೋಚರಕ್ಕೆ ಬರುವುದಿಲ್ಲ. ಅದು ತಡವಿದಾಗ ಒಮ್ಮೆಗೇ ಬೆಚ್ಚಿಬೀಳುವುದು ತಪ್ಪುವುದಿಲ್ಲ. ಗೋಮುಖದ ಮನುಷ್ಯನ ಈ ಗುಪ್ತವಾದ ಇನ್ನೊಂದು ಮುಖವೇ ಕ್ರೌರ್ಯದ ವಿರುದ್ಧ ಮಾನವೀಯತೆಯ ಕುರಿತು ಇರುವ ಆಸೆ, ಭರವಸೆ, ಪ್ರೀತಿಗಳನ್ನು ಪೊರೆಯುತ್ತಿರುವ ಶಕ್ತಿಯಿದ್ದರೂ ಇದ್ದೀತು. ಈ ಎರಡೂ ಕಥೆಗಳ ಮಟ್ಟಿಗಂತೂ ಇಂಥ ಪರಿಣಾಮಕಾರತ್ವ ಇರುವುದು ಸತ್ಯ.


ಮೂರನೆಯದಾಗಿ ಮೇಲಿನ ಎರಡೂ ಅಂಶಗಳು ಸೇರಿಕೊಂಡೇ ರೂಪಿಸಲ್ಪಟ್ಟಿರುವ ಭಾಸ್ಕರ ಹೆಗಡೆಯವರ ಕಥೆ ಹೇಳುವ ಶೈಲಿ. ಒಂದೊಂದು ಕಥೆಯನ್ನೂ ಇಡಿಯಾದ ಒಂದು ರೂಪಕವನ್ನಾಗಿಸಲು ಭಾಸ್ಕರ ಹೆಗಡೆಯವರು ವಹಿಸಿರುವ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅದರಲ್ಲೂ ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ, ನಾಯಿ ಕೆಮ್ಮು, ಎರಡನೆಯ ವಿಶ್ವ, ಭಾವಚಿತ್ರ, ರಘುಪತಿ ಭಟ್ಟರ ಎಮ್ಮೆ ಕಥೆಗಳು ಬಹುಕಾಲ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಾಗಲು ಬಹುಮುಖ್ಯ ಕಾರಣವೇ ಭಾಸ್ಕರ ಹೆಗಡೆಯವರ ರೂಪಕ ಶೈಲಿ ಎಂದರೆ ತಪ್ಪಾಗಲಾರದು.


ಆದರೆ ಬ್ಯಾಡಗಿ ಮೆಣಸಿನ ಕಾಯಿ, ಮುಖವಿಲ್ಲದವನ ಹೆಜ್ಜೆಗುರುತು, ಶವ ಹೊತ್ತ ಗಾಡಿ ಕಥೆಗಳು ವಿಭಿನ್ನ ಕಾರಣಗಳಿಗಾಗಿ ಮನಸ್ಸನ್ನು ತಟ್ಟುವಲ್ಲಿ ಸೋತಿವೆ. ಮೊದಲಿಗೆ ಬ್ಯಾಡಗಿ ಮೆಣಸಿನ ಕಾಯಿ ಕಥೆ ಕೊನೆಗೂ ಒಂದು ಚೌಕಟ್ಟು ಪಡೆಯುವಲ್ಲಿ ಸಫಲವಾಗುವುದಿಲ್ಲ. ಸಣ್ಣ ಕಥೆಗೆ ವಿವರಗಳ ತಂಪು, ರೂಪಕದ ಬೆಡಗು, ಕಥಾನಕದ ಹರಹು ಎಲ್ಲ ಇದ್ದೂ ಇವಕ್ಕೆಲ್ಲ ಒಂದು ನಿರ್ದಿಷ್ಟ ಚೌಕಟ್ಟು ನಿರ್ಮಾಣವಾಗದೇ ಹೋದರೆ ಅದು ಎಲ್ಲ ಇದ್ದೂ ಏನೋ ಇಲ್ಲದ, ಹಾಗಾಗಿ ಇರುವ ಎಲ್ಲ ಗುಣಾತ್ಮಕ ಅಂಶಗಳು ಪೋಲಾದಂಥ ಒಂದು ಶೂನ್ಯವನ್ನು ಸೃಜಿಸುತ್ತದೆ.


ಶವ ಹೊತ್ತ ಗಾಡಿ ಕಥೆ ಭಾಸ್ಕರ ಹೆಗಡೆಯವರ ಎಂದಿನ ಶೈಲಿಗೆ ಒಂದು ಅಪವಾದದಂತೆ ಮೂಡಿ ಬಂದಿದೆ. ಇಲ್ಲಿನ ಕಥಾನಕದ ಹರಹು ದೊಡ್ಡದಾಗಿ ಅದರ ವಾಚ್ಯ ನಿರೂಪಣೆ ಅನಿವಾರ್ಯವಾದಂತಿದೆ. ಅದೂ ಅಲ್ಲದೆ ಭಾಸ್ಕರ ಹೆಗಡೆಯವರದೇ ಉಳಿದ ಕಥೆಗಳಲ್ಲಿ ಸಿಗುವ ಒಂದು ರೂಪಕದ ಆಕೃತಿ ಇಲ್ಲಿ ಕಂಡು ಬರದೆ ನೇರ ಸರಳ ವಿವರಗಳ ಅನಾಕರ್ಷಕ ನಿರೂಪಣೆಯಿದೆ.

ಮುಖವಿಲ್ಲದವನ ಹೆಜ್ಜೆಗುರುತು ಒಂದು ಹಂತದಲ್ಲಿ ಆಧುನಿಕ ಜೀವನ ಶೈಲಿ, ವೃತ್ತಿಜೀವನದ ಒತ್ತಡ ಅಥವಾ ನಗರದ ಬದುಕಿನ ಯಾಂತ್ರೀಕತೆಯ ಫಲಶೃತಿಗಳ ಚಿತ್ರಣಕ್ಕೆ ಹೊರಟ ಕಥಾನಕ ಎನಿಸಿದರೂ ಮುಂದೆ ಅದು ಹಾಗೆ ಸಾಗದೆ ಕೇವಲ ವ್ಯಕ್ತಿಗತ ಸಮಸ್ಯೆಯೊಂದರ ಹಂದರವಾಗಿ ಬಿಡುತ್ತದೆ. ಲೈಂಗಿಕ ವಸ್ತುವನ್ನು ಹೊಂದಿದೆ ಎಂಬ ಕಾರಣಕ್ಕೋ ಏನೋ ಭಾಸ್ಕರ ಹೆಗಡೆಯವರು ಮುಜುಗರದಿಂದಲೇ ಇದಕ್ಕೆ ಕೊಂಚ ಲಘುಧಾಟಿಯ ಹೂರಣ ಒದಗಿಸಲು ಹೋಗಿ ನಿರಾಸೆ ಹುಟ್ಟಿಸುತ್ತಾರೆ.

ಅಮ್ಮ ನನಗೆ ಗಿಳಿ ತಂದುಕೊಡು ಕಥೆ ಭಾಸ್ಕರ ಹೆಗಡೆಯವರ ಅತ್ಯಂತ ಸಾವಧಾನದ, ನಿರುದ್ವಿಗ್ನ ಶೈಲಿಯಲ್ಲಿ ಕಥೆ ಹೇಳುವ ವಿಶಿಷ್ಟ ವಿಧಾನದ ಅತ್ಯುತ್ತಮ ಉದಾಹರಣೆಯೆನ್ನಬಹುದು. ಅನುಭವವನ್ನು ಗ್ರಹಿಸುವ ರೀತಿ ಮತ್ತು ಅದನ್ನು ಕಥೆಯಾಗಿಸಿ ಆ ಮಾಧ್ಯಮದ ಮೂಲಕ ಸಂವಹನಕ್ಕೆ ಅಣಿಗೊಳಿಸುವ ಕ್ರಮ - ಈ ಅಣಿಗೊಳಿಸಿಕೊಳ್ಳುವ ಹಾದಿಯಲ್ಲಿ ಭಾಸ್ಕರ ಹೆಗಡೆಯವರು ಬಳಸಿಕೊಳ್ಳುವ ರೂಪಕಗಳು, ವಿವರಗಳು, ಆಕೃತಿಯ ಕುರಿತ ಅವರ ಯೋಜನೆಗಳು - ಮತ್ತು ಈ ಕ್ರಮದಲ್ಲಿ ಸಮರ್ಥವಾಗಿ ಅವರು ತಮ್ಮ ಅನುಭವವನ್ನು ಓದುಗನಿಗೆ ಮುಟ್ಟಿಸುವಲ್ಲಿ ಹೇಗೆ ಮತ್ತು ಎಷ್ಟು ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಈ ಕಥೆ, ಇದು ಸಂಕಲನದ ಅತ್ಯುತ್ತಮ ಕಥೆಯಲ್ಲದಿದ್ದಾಗ್ಯೂ, ಒಂದು ದೃಷ್ಟಾಂತದಂತಿದೆ.

ಎರಡನೆ ವಿಶ್ವದ ಸ್ಕೂಲ್ ಮಾಸ್ತರ್ ತನ್ನನ್ನು ಎಂದೂ ತಾನು ಈ ಊರಿನವನಲ್ಲ ಎಂದು ಭಾವಿಸುವುದಿಲ್ಲ. ಊರ ಸಮಸ್ಯೆಗಳಿಗೆಲ್ಲ ತಲೆಕೊಡುತ್ತ, ಪರಿಹಾರ ಹುಡುಕುತ್ತ ಓಡಾಡುವ ಈತನಿಗೆ ಶಿಕ್ಷಕನಾಗಿಯೂ, ಊರಿಂದೂರಿಗೆ ವರ್ಗವಾಗಿ ಹೋಗುವವನಾಗಿಯೂ ಇದೆಲ್ಲ ನಿಮ್ಮ ಕೆಲಸಗಳಲ್ಲ ಎಂದು ಹೇಳುವವರಿದ್ದಾರೆ. ಆದರೆ ಮನುಷ್ಯರನ್ನು ಬೆಸೆಯುವ ಕ್ರಿಯೆಯಲ್ಲಿ ಅಪಾರ ನಂಬುಗೆಯುಳ್ಳವನಾಗಿ ಕಾಣುವ ಈ ಪಾತ್ರ ಮತ್ತು ಅದರಿಂದಾಗಿ ಒಂದು ಘನತೆ ಪಡೆದುಕೊಳ್ಳುವ ಈ ಕಥೆ ಎರಡೂ ನೆನಪಿನಲ್ಲುಳಿಯುತ್ತವೆ.

ರಘುಪತಿ ಭಟ್ಟರ ಎಮ್ಮೆ ಅತ್ತೆ ಸೊಸೆಯರ ನಡುವಿನ ಬಾಂಧವ್ಯವನ್ನು ಬೆಸೆಯುವ, ಕಸಿಯುವ ಮತ್ತು ಕಸಿಕಟ್ಟುವ ಒಂದು ನಿರ್ಣಾಯಕ ಜೀವವಾಗಿ ಬಿಡುವ, ಭಾವನಾತ್ಮಕವಾಗಿ ಎಮ್ಮೆ ಒಂದು ಸ್ಥಾಯೀಭಾವವಾಗಿ ಮನದಲ್ಲಿ ನಿಲ್ಲುವ ಸುಂದರವಾದ ಚಿತ್ರಣವಿದೆ. ಕೆ.ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಕಥೆಯನ್ನು ನೆನಪಿಸುವ ಕಥೆಯಿದು.

ಭಾವಚಿತ್ರ ಕಥೆ ಕೆಲವೊಂದು ಕಾರಣಗಳಿಗಾಗಿ ವಿಶಿಷ್ಟವಾದದ್ದು. ದೈವೀಕಲೆಯು ಮಾನವನ ಭ್ರಷ್ಟಮುಖವನ್ನು ಒಳಗುಗೊಳ್ಳಲು ನಿರಾಕರಿಸುವ ಒಂದು ಹಂತ ಮತ್ತು ಕಲಾವಿದನ ವೈಯಕ್ತಿಕ ಭ್ರಷ್ಟತೆ ಅದನ್ನು ಸಾಧ್ಯಗೊಳಿಸುವ ಇನ್ನೊಂದು ಹಂತ ಇಲ್ಲಿ ಬಹಳ ನವಿರಾಗಿ ನಿರೂಪಿತವಾಗಿದೆ. ಈ ಎರಡೂ ಭ್ರಷ್ಟತೆ ಸ್ವರೂಪದಲ್ಲಿ ಭಿನ್ನವಾದುದಾದರೂ ತಾತ್ವಿಕವಾಗಿ ಒಂದೇ ಸ್ವರೂಪದ್ದೆನ್ನುವ ನಿಲುವನ್ನು ಕತೆಗಾರ ಒಪ್ಪಿಕೊಂಡಂತಿದೆ. ಕಲಾವಿದನ ವೈಯಕ್ತಿಕ ಪಾಪಪ್ರಜ್ಞೆ ರಾಜಕಾರಣಿಯೊಬ್ಬನ ಭ್ರಷ್ಟತನದ ಜೊತೆ ಕಲೆ ರಾಜಿ ಮಾಡಿಕೊಳ್ಳಲು ನೆಲೆ ಒದಗಿಸುವುದನ್ನು ಒಪ್ಪುತ್ತೇವೋ ಬಿಡುತ್ತೇವೋ ಎನ್ನುವುದು ಬೇರೆಯೇ ಪ್ರಶ್ನೆ. ಈ ಮುಖಾಮುಖಿಯೊಂದು ಎಬ್ಬಿಸುವ ತಳಮಳ ಏನಿದೆ ಅದು ಈ ಕಥೆಯಲ್ಲಿ ಮುಖ್ಯವಾಗುತ್ತದೆ.

ರೂಟ್ ಕೆನಾಲ್ ಥೆರಪಿ ಕೂಡ ಈ ಸಂಕಲನದ ಉತ್ತಮ ಕಥೆಗಳಲ್ಲಿ ಒಂದು. ಇಡೀ ಕಥೆಯೊಂದು ರೂಪಕದಂತೆ ನಮ್ಮ ವ್ಯಕ್ತಿತ್ವದ ಬೇರುಗಳಿಂದ, ಸ್ಮೃತಿಗಳಿಂದ ನಮ್ಮನ್ನು ಬೇರ್ಪಡಿಸುವ ಆಧುನಿಕತೆಯು ಇನ್ನೊಂದೆಡೆ ನಮ್ಮ ಮೇಲೇರುವ, ಗುರಿ ಸಾಧಿಸುವ ಉಪಕ್ರಮಗಳನ್ನು ಸಂಕೇತಿಸುವಂತಿರುವುದರ ಸಂಕೀರ್ಣ ಚಿತ್ರವನ್ನು ಕಟ್ಟಿಕೊಡಲು ಯತ್ನಿಸುತ್ತದೆ.

ಮೊದಲ ಸಂಕಲನದಲ್ಲೇ ಸಾಕಷ್ಟು ಭರವಸೆ ಹುಟ್ಟಿಸುವ ಕಥೆಗಳನ್ನು ನೀಡಿರುವ ಭಾಸ್ಕರ ಹೆಗಡೆ ತಮ್ಮ ಹತ್ತೂ ಕಥೆಗಳಲ್ಲಿ ಹಂಚಿಹೋದಂತಿರುವ ಹಲವಾರು ಉತ್ತಮ ಅಂಶಗಳನ್ನು ಮುಂದಿನ ಪ್ರತಿಯೊಂದು ಕಥೆಯಲ್ಲೂ ಮೈಗೂಡಿಸಿಕೊಂಡು ಬರುವ ಸಾವಧಾನ, ಪೋಷಣೆ, ಶ್ರಮ ವಹಿಸಿದರೆ ಕನ್ನಡಕ್ಕೆ ಕೆಲವು ಅತ್ಯುತ್ತಮವಾದ ಕಥೆಗಳನ್ನು ನೀಡಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, February 14, 2008

ಕುಲು ಕಣಿವೆಯ ಹಾದಿಯಲ್ಲಿ...


ತಮ್ಮ ಹೊಸ ಪುಸ್ತಕ 'ಕುಲು ಕಣಿವೆಯಲ್ಲಿ' ಮೂಲಕ ಜಿ.ಪಿ.ಬಸವರಾಜು ತುಂಬ ಅಭಿನಂದನಾರ್ಹ ಕೆಲಸ ಮಾಡಿದ್ದಾರೆ. ಇನ್ನೊಂದು ಪ್ರವಾಸ ಕಥನವೋ, ಚಾರಣ ಎಂಬ ಒಂದೇ ಕಾರಣಕ್ಕೆ ವಿಶಿಷ್ಟವೆನ್ನಬಹುದಾದ್ದೋ ಆಗಬಹುದಾಗಿದ್ದ ಈ ಅನುಭವ ಕಥನವನ್ನು ವಿಶಿಷ್ಟವಾದ ಒಳನೋಟಗಳಿಂದ ಜೀವನಾನುಭವದ ಕಥನವನ್ನಾಗಿಸಿ ಬಿಟ್ಟಿದ್ದಾರವರು.


ಹಿಮಾಲಯದ ತಪ್ಪಲಿನ ನಿವಾಸಿಗಳ ವಿವರ ನೀಡುತ್ತ ಅವರ ಬದುಕಿನ ಕಷ್ಟ-ನಷ್ಟ-ಬವಣೆಗಳತ್ತ ಒಂದು ಸೂಕ್ಷ್ಮ ನೋಟ ಹರಿಸಿಯೇ ಎಲ್ಲ ಸೌಂದರ್ಯಾನುಭೂತಿ, ಚಾರಣದ ನೋವು-ನಲಿವುಗಳು, ಪ್ರಕೃತಿ-ಪರಿಸರದ ಏರುಪೇರುಗಳು, ಹಕ್ಕಿಪಿಕ್ಕಿಗಳು, ಹಿಮ-ಮಳೆ-ಗುಡುಗು-ಮಿಂಚು-ಬಿಸಿಲು, ಹೂವು ಹುಲ್ಲುಗಳ ಕಡೆ ನಮ್ಮ ಮನಸ್ಸು ಕೊಂಡೊಯ್ಯುತ್ತಾರೆ ಬಸವರಾಜು. ಚಾರಣಿಗನಾಗಿ ತಮ್ಮ ಅನುಭವ, ಉತ್ಸಾಹ, ಸಡಗರ ಅದೇನೇ ಇರಲಿ, ಬಸವರಾಜು ಅವರು ತಮ್ಮ ಸೂಕ್ಷ್ಮವಾದ ಅವಲೋಕನ ಪ್ರಜ್ಞೆಯಿಂದ ಅಲ್ಲಿಯೇ ಬದುಕು ಭವಿಷ್ಯ ಅರಸುತ್ತಿರುವ ಬಡ ಮಂದಿಯ ನೋವು ನಲಿವಿನ, ಬವಣೆಯ ಕುರಿತು ಸ್ಪಂದಿಸದೇ ಮುಂದಡಿಯಿಡುವುದಿಲ್ಲ ಎನ್ನುವಲ್ಲೇ ಈ ಚಾರಣ ಕಥನದ ಹೆಚ್ಚುಗಾರಿಕೆಯಿದೆ. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮೊಳಗಿನ ಮನುಷ್ಯನನ್ನು ಜೀವಂತಗೊಳಿಸುತ್ತ ಸಾಗುವ ಈ ಕಥನ ಈ ಕಾರಣಕ್ಕೇ ಹೆಚ್ಚು ಆಪ್ತವಾಗುತ್ತದೆ.


ಚಾರಣಿಗರಿಗೇ ಬೇಕಾಗುವ ಮಾಹಿತಿಗಳಲ್ಲಿ ಎಷ್ಟನ್ನು ಈ ಹೊತ್ತಿಗೆ ನೀಡಬಲ್ಲುದೋ ಅಥವಾ ಇಲ್ಲವೋ ತಿಳಿಯದು. ಆದರೆ ಇದನ್ನು ಓದಿದ ಯಾರಿಗೇ ಆದರೂ ತಾವೂ ಅಲ್ಲಿಗೆಲ್ಲ ಹೋಗಬೇಕು ಅನಿಸದೇ ಇರುವುದಿಲ್ಲ. ಈಗಾಗಲೇ ಹೋಗಿ ಬಂದಿರುವ ಬಸವರಾಜು ಬಗ್ಗೆ ಹೊಟ್ಟೆಯುರಿಯದೆಯೂ ಇರುವುದಿಲ್ಲ! ಅವರ ಸ್ಪಂದನ ಓದುಗನ ಸ್ಪಂದನವೂ ಆಗುವಂತೆ, ಇನ್ನಷ್ಟು ಬರೆಯಬಹುದಿತ್ತು, ಕೊಂಚ ವಿವರವಾಗಿ ಎಲ್ಲವನ್ನೂ ಬರೆಯಬಹುದಿತ್ತು ಎನ್ನುವ ಅಸಮಾಧಾನ ಉಳಿಯುವಂತೆ, ಉಳಿಯುವಷ್ಟು ಆಪ್ತವಾಗಿ ಬಿಡುವ ಈ ಕಥಾನಕ ಬಿಡಿ ಬಿಡಿ ಅಧ್ಯಾಯಗಳಲ್ಲಿ ತುಂಡರಿಸಲ್ಪಡುವ ಲಹರಿಯಿಂದ ಕಾಡುತ್ತದೆ.


ಒಂದು ಖುಶಿಗೆ ಕಾರಣವಾಗುವ ಇಂಥ ವಿವರಗಳನ್ನು ಒಂದಿಷ್ಟು ಗಮನಿಸಿ:
"ಅನ್ಯ ಮಾರ್ಗವಿಲ್ಲದೆ ನೊಣಗಳ ನಡುವೆ ಜಾಗ ಹಿಡಿದು ಕುಳಿತೆವು. ಹೋಟೇಲಿನಾತ ನಡು ಮಧ್ಯಾಹ್ನದಲ್ಲಿ ದಿನದ ಪ್ರಥಮ ಗಿರಾಕಿಗಳನ್ನು ಕಂಡು ಪ್ರಸನ್ನನಾದ. ಹುಮ್ಮಸ್ಸಿನಿಂದಲೇ ಲಸ್ಸಿ ತಯಾರಿಕೆಗೆ ತೊಡಗಿದ. ಆತನ ಒಂದೊಂದು ಕ್ರಿಯೆಯೂ ದೈವಾರಾಧನೆಯಂತೆ ನಡೆಯುತ್ತಿತ್ತು. ನಾವು ಅದನ್ನು ಶ್ರದ್ಧೆಯಿಂದ ನೋಡುತ್ತ ಕುಳಿತೆವು. ಆತನ ಉಡುಗೆ ತೊಡುಗೆ, ಲಸ್ಸಿ ತಯಾರಿಕೆಯಲ್ಲಿ ಆತ ತೋರುತ್ತಿದ್ದ ಉತ್ಸಾಹ, ಬಳಸುತ್ತಿದ್ದ ಪರಿಕರಗಳು... ಆಹಾ! ಲಸ್ಸಿಯಂತೂ ದೇವಲೋಕದ ಪಾನೀಯವೇ ಆಗಿರಬೇಕು. ಆಗಿರಲೇ ಬೇಕು, ನಾವು ಇದ್ದದ್ದು ದೇವ ಕಣಿವೆ ಕುಲುವಿನಲ್ಲಿ."


ಬಸ್ಸಿನಲ್ಲಿ ಕುಳಿತಿರುವಾಗ ಕಣ್ಣಿಗೆ ಬಿದ್ದ ಇಬ್ಬರು ಮುದುಕರು ಸುಡು ಬಿಸಿಲಿನಲ್ಲಿ ಕೈಯಲ್ಲಿದ್ದ ಛತ್ರಿಯನ್ನು ಬಿಡಿಸಬೇಕೆಂಬ ಪರಿವೆಯೂ ಇಲ್ಲದೆ, ನೆರಳಿಗೂ ಹೋಗದೆ ನಿರಂತರ ಮಾತನಾಡುತ್ತಿರುವ ಚಿತ್ರವೇ ಬಸವರಾಜು ಅವರಲ್ಲಿ ಯೋಚನಾ ತರಂಗಗಳನ್ನು ಎಬ್ಬಿಸುತ್ತದೆ. ಇದು ಹಿಮಾಲಯದ ಹಾದಿ, ಚಾರಣ ನಮ್ಮ ಗುರಿ, ಈ ಚಾರಣ ಒಂದು ಮನಸ್ಸಿನ ಖುಶಿಗಾಗಿ ಇರುವ ಹವ್ಯಾಸ, ಈ ಕ್ಷಣದ ಸತ್ಯವಾಗಿರುವ ಈ ಹಾದಿಯ ಜಗತ್ತು ತನ್ನದಲ್ಲ, ತನ್ನದೇ ಆದ ಜಗತ್ತೊಂದು ಬೆಂಗಳೂರಿನಲ್ಲೋ ಮೈಸೂರಿನಲ್ಲೋ ಈ ಎಳೆ ಬಿಸಿಲಿಗೆ ಸಿಮೆಂಟು ಕಾಂಕ್ರೀಟಿನಂತೆ ಬೆಚ್ಚಗಾಗುತ್ತಿದೆ ದೂರದಲ್ಲಿ ಎಂಬ ಯಾವ ಮಿತಿಗಳೂ ಇಲ್ಲದೆ ಬಸವರಾಜು ಇಲ್ಲಿನ ಜಗತ್ತಿನ ಶಾಶ್ವತ ನಿವಾಸಿಗಳ ಬದುಕಿಗೆ ಸ್ಪಂದಿಸುವ ರೀತಿಯೇ ಮನಸ್ಸಿಗೆ ಹಿತವಾಗುತ್ತ ಆಪ್ತವಾಗುತ್ತ ಹೋಗುತ್ತದೆ.
ಅಲ್ಲಿ ಒಬ್ಬ ಭಾವುಕ ಕವಿ ಇದ್ದಾನೆ, ಆಧ್ಯಾತ್ಮದ ಎತ್ತರಕ್ಕೇರಬಲ್ಲ ಅನುಭಾವಿ ಇದ್ದಾನೆ, ಹುಡುಗಾಟದ ಹುಡುಗರ ಗೌಜಿ, ಗದ್ದಲ, ತಿನ್ನುವ ಸ್ಪರ್ಧೆ, ಕಡು ಚಳಿಯ ಮುಂಜಾನೆ ಕಂಬಳಿ ಲಪಟಾಯಿಸುವ ಕಲೆ ಎಲ್ಲವನ್ನು ಕಂಡು, ಅನುಭವಿಸಿ ಪೇಚಿಗೆ ಬಿದ್ದರೂ ಸಮಾಧಾನದಿಂದ ಸ್ವೀಕರಿಸಬಲ್ಲ ಪ್ರಬುದ್ಧನಿದ್ದಾನೆ, ಗುಡ್ಡ ಬೆಟ್ಟ ಜಿಗಿದು ಜಯಿಸುವ ಹಮ್ಮೀರನಿದ್ದಾನೆ, ಕಾಯಿ ಸೇಬನ್ನು ಕಿತ್ತಬಗ್ಗೆ ನೋಯುವ, ಉರುಳಿ ಬಿದ್ದ ಮರಗಳ ಬಗ್ಗೆ ಯೋಚಿಸುವ ಆತ್ಮೀಯನಿದ್ದಾನೆ, ಎಷ್ಟೇ ಎತ್ತರಕ್ಕೆ ಏರಿದರೂ ಆರಂಭದಿಂದ ಕೊನೆತನಕ ಪದೇ ಪದೇ ನದಿ ಬಿಯಾಸ್ ಎಲ್ಲಿದೆ ಎಂದು ಹುಡುಕುವ ನದಿಯ ನೆನಪಿನ ಹಂಗಿನಲ್ಲಿರುವ ಪಯಣಿಗನಿದ್ದಾನೆ.


ಉತ್ತರದವರ ಊಟ ಮಾಡುವ, ಸಮೂಹ ಭೋಜನದ ವಿವರಗಳು, ಕ್ಯಾಂಪ್ ಫಯರಿನ ಹಾಡು, ಕುಣಿತ, ಚಿರತೆಯ ಭೀತಿ, ಹಿರೇಮಠರಂಥವರು ಹುಟ್ಟುಹಾಕಿದ `ಮೇಲೆ ಎಂತೋ ಏನೋ' ಭೀತಿ, ಕೊನೆಯ ದಿನಗಳಲ್ಲಿ ಮನದ ತುಂಬ ಕವಿದುಕೊಳ್ಳುವ ಒಬ್ಬ ಚಾರಣಿಗನ ಸಾವಿನ ನೆರಳು, ಹಾದಿಯುದ್ದಕ್ಕೂ ಚಾರಣಿಗರನ್ನೇ ಕಾಯುತ್ತ ಹಣ್ಣು, ತಿನಿಸು ಒದಗಿಸಿ ಸಂಪಾದಿಸುವ ಹಿಮದ ಮಡಿಲಲ್ಲಿ ಬದುಕುತ್ತಿರುವ ಮಂದಿಯ ಚಿತ್ರಗಳು, ದಿನದಿನವೂ ದಿನದ ಕೊನೆಯಲ್ಲಿ ಸಿಗುವ ಶಿಬಿರ, ಆ ಶಿಬಿರದ ನಾಯಕರ ವಿಭಿನ್ನವೂ ವಿಶಿಷ್ಟವೂ ಆದ ಶಿಸ್ತು, ಮೇಲ್ವಿಚಾರಣೆ, ಜವಾಬ್ದಾರಿ ನಿರ್ವಹಣೆಯ ರೀತಿ ನೀತಿಗಳು.....ಈ ಅನುಭವ ಅನನ್ಯ, ವಿಶಿಷ್ಟ.


ಈ ಚಾರಣದ ಉದ್ದಕ್ಕೂ, ಪ್ರತಿದಿನವೂ ಎಂಬಂತೆ ಬಸವರಾಜು ನಮ್ಮನ್ನು ಕೇವಲ ನಡೆಯಿಸಿ, ಅದೂ ಇದೂ ತೋರಿಸಿ ದಣಿಸುವುದಿಲ್ಲ. ಒಂದಷ್ಟು ಹೊತ್ತು ಏಕಾಂತಕ್ಕೆ, ಅವರ ಅಂತರಂಗದ ಧ್ಯಾನಕ್ಕೆ ಕೊಂಡೊಯ್ಯುತ್ತಾರೆ. ಕಣ್ಣಿಗೆ ಕಾಣಿಸುವುದು ಯಾವುದೋ ಮರವೋ, ಹಕ್ಕಿಗಳ ಆಟವೋ, ಗರಿ ಬಿಚ್ಚಿದ ಅತಿದೊಡ್ಡ ಹಿಮಾಲಯದ ಹದ್ದೋ, ಚಿತ್ತಾರದಂಥ ಮೋಡವೋ, ನಡುರಾತ್ರಿಯಲ್ಲಿ ಕಂಡ ಚಿಕ್ಕೆಗಳ ಆಗಸ ಬೊಗಸೆಯಲ್ಲೇ ಇರುವಂತೆ ಕಂಡಿದ್ದೋ... ಏನೂ ಆದೀತು. ಅಥವಾ ರಾತ್ರಿ ಗಾಢಾಂಧಕಾರದಲ್ಲಿ ವಿಚಿತ್ರವಾಗಿ ನರಳಿದಂತೆ ಕೂಗುವ ಇನ್ಯಾವುದೋ ಅಗೋಚರ ಪಕ್ಷಿಯ ಕೂಗೇ ಇದ್ದರೂ ಆದೀತು. ಅವರು ಎಲ್ಲೋ ಯಾವುದೋ ಲಹರಿಯಲ್ಲಿ ಕಳೆದು ಹೋಗುತ್ತಾರೆ. ಬದುಕಿನ ಅಗಮ್ಯ, ಅಮೂರ್ತ, ಅವ್ಯಕ್ತಗಳ ತೆಕ್ಕೆಗೆ ನಮ್ಮನ್ನು ಒಯ್ಯುತ್ತಾರೆ. ಅಲ್ಲಿ ಕೆಲವೇ ಕ್ಷಣ ವಿರಮಿಸಿ ಮತ್ತೆ ಚುಮುಚುಮು ಮಂಜಿನ ಬೆಚ್ಚಗಿನ ಬಿಸಿಲಿನ ಹಿಮದ ಹಾದಿಯ ನಡುವೆ ನಮ್ಮನ್ನು ಕೈ ಹಿಡಿದು ನಿಲ್ಲಿಸುತ್ತಾರೆ. ಇದು ಬರಿಯ ಬೆಡಗಲ್ಲೋ ಅಣ್ಣಾ ಎನಿಸುವಂತಿರುವ ಈ ಕಥನ ಬರಿಯ ಚಾರಣವೆ? ಅಲ್ಲವೇ ಅಲ್ಲ.

"ಹಿಮಾಲಯದ ಬದುಕು ಮಾತ್ರ ಎಂದಿನಂತೆಯೇ ಚುರುಕಾಗಿತ್ತು. ಅವತ್ತು ಪೋಲೀಯೋ ಹಾಕಿಸುವ ಕಾರ್ಯಕ್ರಮ. ಮಹಿಳೆಯರೆಲ್ಲ ತಮ್ಮ ಮಕ್ಕಳನ್ನು ಹೊತ್ತುಕೊಂಡು ಪರ್ವತ ಇಳಿಯುತ್ತಿದ್ದರು. ಕುಲು-ಮನಾಲಿಯ ಹೆದ್ದಾರಿಗೆ ಅವರು ಬರಬೇಕು. ಈ ಹಿಮಾಲಯದ ಮಕ್ಕಳು ಎಷ್ಟು ಸುಂದರ. ನಿತ್ಯ ಕೊಳಕರಾಗಿರುವ ಈ ಮಕ್ಕಳನ್ನು ತಾಯಂದಿರು ಇಂದು ಮಾತ್ರ ವಿಶೇಷವಾಗಿ ಅಲಂಕರಿಸಿದ್ದರು; ತಾವೂ ಅಲಂಕೃತರಾಗಿದ್ದರು. ಮುದ್ದು ಮುದ್ದಾಗಿರುವ ಈ ಮಕ್ಕಳನ್ನು ನೋಡುತ್ತ ನಮ್ಮ ಉತ್ಸಾಹ ಮತ್ತೆ ಚಿಗುರೊಡೆಯಿತು. ನಮ್ಮ ಚಾರಣದ ಕೊನೆಯ ಘಟ್ಟಕ್ಕೆ ಕಳೆತುಂಬಿಕೊಂಡಿತು. ಈ ಮಕ್ಕಳ, ಈ ಮಹಿಳೆಯರ ಜೊತೆ ನಾವೂ ಉತ್ಸಾಹದಿಂದ ನಡೆದೆವು."

ಪುಸ್ತಕದ ಹೆಸರು : ಕುಲು ಕಣಿವೆಯಲ್ಲಿ
ಲೋಹಿಯಾ ಪ್ರಕಾಶನ, ಬಳ್ಳಾರಿ.
ಬೆಲೆ: ೬೦, ಪುಟ ೧೪೨.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, February 9, 2008

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ


ಸಾತ್ವಿಕ ಸಿಟ್ಟಿನ, ವ್ಯವಸ್ಥೆಯ ಹೆಳವಂಡಗಳ ವಿರುದ್ಧ ಸದಾ ಸಿಡಿಯುವ ನಾಯಕರು ಆಳದಲ್ಲಿ ಪುಟ್ಟ ಮಕ್ಕಳಂತಿರುತ್ತಾರೆಯೆ? ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ ನೆನಪುಗಳನ್ನು ದಾಖಲಿಸಿ ಎಲ್ಲಿ ಹೋದವೋ ಆ ದಿನಗಳು ಎಂದು ಯಾರಾದರೂ ಹಂಬಲಿಸುವಂತೆ ಅವುಗಳನ್ನು ಮತ್ತೆ ಕಟ್ಟಿಕೊಡುವುದರ ಮೂಲಕ. ಎಲ್ಲರಿಗೂ ಅವರವರ ಬಾಲ್ಯ ಸೊಗಸು. ಆ ನೆನಪುಗಳು ಯಾತಕ್ಕೆ ಮತ್ತೊಮ್ಮೆ ಬರಲಾರದೋ ಬಾಲ್ಯ ಎನಿಸುವಂಥವು. ರಾಮದಾಸ್‌ರ ಬಾಲ್ಯವೂ ಇದಕ್ಕೆ ಹೊರತಾದುದಲ್ಲ. ಹೊರತಾದುದು ಏನಾದರೂ ಇತ್ತೆ ಎನ್ನುವುದು ಇಲ್ಲಿನ ಶೋಧ. ಹಾಗಾಗಿ ಈ ಪುಸ್ತಕಕ್ಕೆ ಬಾಲ್ಯದ ಹಂಬಲಿಕೆ ಮೀರಿದ ಮಹತ್ವ.
ಸಾಗರದಲ್ಲಿ ತನ್ನ ಬಾಲ್ಯ ಕಳೆದ ರಾಮದಾಸನನ್ನು ಕುರಿತು ಬರೆಯಬೇಕೆನ್ನುವುದು ನನ್ನ ಬಹಳ ದಿನಗಳ ಕನಸು. ಆದರೆ ಪ್ರಿಯಮಿತ್ರ ತೀರಿಕೊಂಡ ಮೇಲೆ ಬರೆಯುತ್ತಿರುವುದು ತುಂಬ ನೋವಿನ ಸಂಗತಿ ಎನ್ನುತ್ತಾರೆ ವಿಲಿಯಂ. ನಿಜ, ಈ ಪುಟ್ಟ ಪುಸ್ತಕದ ಸುಮಾರು ಮುವ್ವತ್ತಾರು ಪುಟಗಳಲ್ಲಿನ ಪುಟ್ಟ ಪುಟ್ಟ ಹದಿನೈದು ಅಧ್ಯಾಯಗಳಲ್ಲಿ ಸುಳಿದಾಡುವ ಆ ಬಾಲ್ಯವನ್ನು ಹಾದು, ಮುಂದಿನ ಪುಟಗಳಲ್ಲಿರುವ ರಾಮದಾಸ್ ಅವರ ಐದಾರು ಪತ್ರಗಳನ್ನು ಓದಿ, ಬಣ್ಣದ ಫೋಟೋಗಳನ್ನೆಲ್ಲ ಕಂಡು ಆ ಧೀಮಂತ ಚೇತನ ಇನ್ನಿಲ್ಲವೆನ್ನುವುದನ್ನು ಅನಿವಾರ್ಯವಾಗಿ ನೆನೆಯುವಾಗ ಯಾರಿಗಾದರೂ ನಿಟ್ಟುಸಿರು ಬರುವುದೇ, ವಿಲಿಯಂರ ನೋವಿನ ಅರಿವಾಗುವುದೇ.
ಈ ಪುಸ್ತಕದ ಬಗ್ಗೆ ರವೀಂದ್ರ ರೇಷ್ಮೆ ಹೀಗೆನ್ನುತ್ತಾರೆ:"ವರದಾ ನದಿ ದಂಡೆಯ ಮೇಲಿನ ಹೊಳೆಬಾಗಿಲು ಕೇರಿ ಪರಿಸರದಲ್ಲಿ ನರ್ಸ್ ಮಂಜಮ್ಮನವರ ಮಗ ರಾಮದಾಸ್ ಹಾಗೂ ಸ್ಕೂಲ್ ಟೀಚರ್ ಜಲಜಾಕ್ಷಮ್ಮನವರ ಮಗ ವಿಲಿಯಂರ ಶಾಲಾದಿನಗಳ ಸ್ನೇಹದುದ್ದಕ್ಕೂ ಅವರುಗಳ ವಿನೋದ ಪ್ರಜ್ಞೆ, ಹುಡುಗಾಟಗಳಿಗೆ ತಾಣಗಳಾದ ಪಟಾಕಿ ಮಮ್ಮಿ ಸಾಹೇಬರ ಮನೆ, ಸೋಮಣ್ಣನ ಮಲ್ಲಿಗೆ ಮನೆ, ಅಜ್ಜ ವೆಂಕಟಾಚಲಪತಿಯವರ ಕುಲುಮೆ, ಚಿಕ್ಕಪ್ಪ ಲಕ್ಷ್ಮಣರಾಯರ ಸೈಕಲ್ ಶಾಪ್‌ಗಳ ಘಟನಾವಳಿಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರಿಸಿರುವ ವಿಲಿಯಂರ ಬರವಣಿಗೆಯ ಶೈಲಿಯೆ ಅವರು ಯಾಕೆ ರಾಮದಾಸರ 55 ವರ್ಷಗಳ ಮಿತ್ರರಾಗುಳಿದಿದ್ದರೆಂಬುದನ್ನು ಬಿಂಬಿಸುತ್ತದೆ.
"ಮುಂದೆ ಮೈಸೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ತಮ್ಮ ಬದುಕಿನ ಮಹತ್ವದ ದಿನಗಳನ್ನು ಅನುಭವಿಸಿದ ರಾಮದಾಸರನ್ನು ಸಾಗರದ ಆರಂಭಿಕ ವರ್ಷಗಳೆ ಅದು ಹೇಗೆ ಒಬ್ಬ ಕಠೋರ ಜಾತ್ಯತೀತವಾದಿಯನ್ನಾಗಿ, ಪ್ರಚಂಡ ಹೋರಾಟಗಾರನನ್ನಾಗಿ, ಪ್ರಗತಿಪರ ಚಿಂತಕನನ್ನಾಗಿ, ದಿಟ್ಟ ಕನ್ನಡಪ್ರೇಮಿಯನ್ನಾಗಿ, ಯುವಕರಿಗೆ ನಿರಂತರ ಸ್ಪೂರ್ತಿಯ ಚಿಲುಮೆಯನ್ನಾಗಿ, ಬುದ್ಧಿಜೀವಿ ಸ್ನೇಹಿತರಿಗೆ ‘ಸಾಕ್ಷಿ ಪ್ರಜ್ಞೆ’ಯನ್ನಾಗಿ ರೂಪಿಸಿದುವೆಂಬುದನ್ನು ಸಮರ್ಥವಾಗಿ ವಿವರಿಸುತ್ತದೆ ವಿಲಿಯಂರ ಈ ಪುಟ್ಟ ಕಥಾನಕ"(ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆ, 21 ಡಿಸೆಂಬರ್ 2007ರ ಸಂಚಿಕೆ)


ಪ್ರತಿಗಳಿಗೆ : ಅಭಿರುಚಿ ಪ್ರಕಾಶನ, ನಂ.386, 14ನೆಯ ಮುಖ್ಯ ರಸ್ತೆ, 3ನೆಯ ಅಡ್ಡ ರಸ್ತೆ, ಸರಸ್ವತೀಪುರ, ಮೈಸೂರು - 9. (94486 08926) abhiruchiprakashana@yahoo.co.inಬೆಲೆ: ನಲವತ್ತೈದು ರೂಪಾಯಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ