Saturday, February 9, 2008

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ


ಸಾತ್ವಿಕ ಸಿಟ್ಟಿನ, ವ್ಯವಸ್ಥೆಯ ಹೆಳವಂಡಗಳ ವಿರುದ್ಧ ಸದಾ ಸಿಡಿಯುವ ನಾಯಕರು ಆಳದಲ್ಲಿ ಪುಟ್ಟ ಮಕ್ಕಳಂತಿರುತ್ತಾರೆಯೆ? ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ ನೆನಪುಗಳನ್ನು ದಾಖಲಿಸಿ ಎಲ್ಲಿ ಹೋದವೋ ಆ ದಿನಗಳು ಎಂದು ಯಾರಾದರೂ ಹಂಬಲಿಸುವಂತೆ ಅವುಗಳನ್ನು ಮತ್ತೆ ಕಟ್ಟಿಕೊಡುವುದರ ಮೂಲಕ. ಎಲ್ಲರಿಗೂ ಅವರವರ ಬಾಲ್ಯ ಸೊಗಸು. ಆ ನೆನಪುಗಳು ಯಾತಕ್ಕೆ ಮತ್ತೊಮ್ಮೆ ಬರಲಾರದೋ ಬಾಲ್ಯ ಎನಿಸುವಂಥವು. ರಾಮದಾಸ್‌ರ ಬಾಲ್ಯವೂ ಇದಕ್ಕೆ ಹೊರತಾದುದಲ್ಲ. ಹೊರತಾದುದು ಏನಾದರೂ ಇತ್ತೆ ಎನ್ನುವುದು ಇಲ್ಲಿನ ಶೋಧ. ಹಾಗಾಗಿ ಈ ಪುಸ್ತಕಕ್ಕೆ ಬಾಲ್ಯದ ಹಂಬಲಿಕೆ ಮೀರಿದ ಮಹತ್ವ.
ಸಾಗರದಲ್ಲಿ ತನ್ನ ಬಾಲ್ಯ ಕಳೆದ ರಾಮದಾಸನನ್ನು ಕುರಿತು ಬರೆಯಬೇಕೆನ್ನುವುದು ನನ್ನ ಬಹಳ ದಿನಗಳ ಕನಸು. ಆದರೆ ಪ್ರಿಯಮಿತ್ರ ತೀರಿಕೊಂಡ ಮೇಲೆ ಬರೆಯುತ್ತಿರುವುದು ತುಂಬ ನೋವಿನ ಸಂಗತಿ ಎನ್ನುತ್ತಾರೆ ವಿಲಿಯಂ. ನಿಜ, ಈ ಪುಟ್ಟ ಪುಸ್ತಕದ ಸುಮಾರು ಮುವ್ವತ್ತಾರು ಪುಟಗಳಲ್ಲಿನ ಪುಟ್ಟ ಪುಟ್ಟ ಹದಿನೈದು ಅಧ್ಯಾಯಗಳಲ್ಲಿ ಸುಳಿದಾಡುವ ಆ ಬಾಲ್ಯವನ್ನು ಹಾದು, ಮುಂದಿನ ಪುಟಗಳಲ್ಲಿರುವ ರಾಮದಾಸ್ ಅವರ ಐದಾರು ಪತ್ರಗಳನ್ನು ಓದಿ, ಬಣ್ಣದ ಫೋಟೋಗಳನ್ನೆಲ್ಲ ಕಂಡು ಆ ಧೀಮಂತ ಚೇತನ ಇನ್ನಿಲ್ಲವೆನ್ನುವುದನ್ನು ಅನಿವಾರ್ಯವಾಗಿ ನೆನೆಯುವಾಗ ಯಾರಿಗಾದರೂ ನಿಟ್ಟುಸಿರು ಬರುವುದೇ, ವಿಲಿಯಂರ ನೋವಿನ ಅರಿವಾಗುವುದೇ.
ಈ ಪುಸ್ತಕದ ಬಗ್ಗೆ ರವೀಂದ್ರ ರೇಷ್ಮೆ ಹೀಗೆನ್ನುತ್ತಾರೆ:"ವರದಾ ನದಿ ದಂಡೆಯ ಮೇಲಿನ ಹೊಳೆಬಾಗಿಲು ಕೇರಿ ಪರಿಸರದಲ್ಲಿ ನರ್ಸ್ ಮಂಜಮ್ಮನವರ ಮಗ ರಾಮದಾಸ್ ಹಾಗೂ ಸ್ಕೂಲ್ ಟೀಚರ್ ಜಲಜಾಕ್ಷಮ್ಮನವರ ಮಗ ವಿಲಿಯಂರ ಶಾಲಾದಿನಗಳ ಸ್ನೇಹದುದ್ದಕ್ಕೂ ಅವರುಗಳ ವಿನೋದ ಪ್ರಜ್ಞೆ, ಹುಡುಗಾಟಗಳಿಗೆ ತಾಣಗಳಾದ ಪಟಾಕಿ ಮಮ್ಮಿ ಸಾಹೇಬರ ಮನೆ, ಸೋಮಣ್ಣನ ಮಲ್ಲಿಗೆ ಮನೆ, ಅಜ್ಜ ವೆಂಕಟಾಚಲಪತಿಯವರ ಕುಲುಮೆ, ಚಿಕ್ಕಪ್ಪ ಲಕ್ಷ್ಮಣರಾಯರ ಸೈಕಲ್ ಶಾಪ್‌ಗಳ ಘಟನಾವಳಿಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರಿಸಿರುವ ವಿಲಿಯಂರ ಬರವಣಿಗೆಯ ಶೈಲಿಯೆ ಅವರು ಯಾಕೆ ರಾಮದಾಸರ 55 ವರ್ಷಗಳ ಮಿತ್ರರಾಗುಳಿದಿದ್ದರೆಂಬುದನ್ನು ಬಿಂಬಿಸುತ್ತದೆ.
"ಮುಂದೆ ಮೈಸೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ತಮ್ಮ ಬದುಕಿನ ಮಹತ್ವದ ದಿನಗಳನ್ನು ಅನುಭವಿಸಿದ ರಾಮದಾಸರನ್ನು ಸಾಗರದ ಆರಂಭಿಕ ವರ್ಷಗಳೆ ಅದು ಹೇಗೆ ಒಬ್ಬ ಕಠೋರ ಜಾತ್ಯತೀತವಾದಿಯನ್ನಾಗಿ, ಪ್ರಚಂಡ ಹೋರಾಟಗಾರನನ್ನಾಗಿ, ಪ್ರಗತಿಪರ ಚಿಂತಕನನ್ನಾಗಿ, ದಿಟ್ಟ ಕನ್ನಡಪ್ರೇಮಿಯನ್ನಾಗಿ, ಯುವಕರಿಗೆ ನಿರಂತರ ಸ್ಪೂರ್ತಿಯ ಚಿಲುಮೆಯನ್ನಾಗಿ, ಬುದ್ಧಿಜೀವಿ ಸ್ನೇಹಿತರಿಗೆ ‘ಸಾಕ್ಷಿ ಪ್ರಜ್ಞೆ’ಯನ್ನಾಗಿ ರೂಪಿಸಿದುವೆಂಬುದನ್ನು ಸಮರ್ಥವಾಗಿ ವಿವರಿಸುತ್ತದೆ ವಿಲಿಯಂರ ಈ ಪುಟ್ಟ ಕಥಾನಕ"(ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆ, 21 ಡಿಸೆಂಬರ್ 2007ರ ಸಂಚಿಕೆ)


ಪ್ರತಿಗಳಿಗೆ : ಅಭಿರುಚಿ ಪ್ರಕಾಶನ, ನಂ.386, 14ನೆಯ ಮುಖ್ಯ ರಸ್ತೆ, 3ನೆಯ ಅಡ್ಡ ರಸ್ತೆ, ಸರಸ್ವತೀಪುರ, ಮೈಸೂರು - 9. (94486 08926) abhiruchiprakashana@yahoo.co.inಬೆಲೆ: ನಲವತ್ತೈದು ರೂಪಾಯಿ.

No comments: