Thursday, February 14, 2008

ಕುಲು ಕಣಿವೆಯ ಹಾದಿಯಲ್ಲಿ...


ತಮ್ಮ ಹೊಸ ಪುಸ್ತಕ 'ಕುಲು ಕಣಿವೆಯಲ್ಲಿ' ಮೂಲಕ ಜಿ.ಪಿ.ಬಸವರಾಜು ತುಂಬ ಅಭಿನಂದನಾರ್ಹ ಕೆಲಸ ಮಾಡಿದ್ದಾರೆ. ಇನ್ನೊಂದು ಪ್ರವಾಸ ಕಥನವೋ, ಚಾರಣ ಎಂಬ ಒಂದೇ ಕಾರಣಕ್ಕೆ ವಿಶಿಷ್ಟವೆನ್ನಬಹುದಾದ್ದೋ ಆಗಬಹುದಾಗಿದ್ದ ಈ ಅನುಭವ ಕಥನವನ್ನು ವಿಶಿಷ್ಟವಾದ ಒಳನೋಟಗಳಿಂದ ಜೀವನಾನುಭವದ ಕಥನವನ್ನಾಗಿಸಿ ಬಿಟ್ಟಿದ್ದಾರವರು.


ಹಿಮಾಲಯದ ತಪ್ಪಲಿನ ನಿವಾಸಿಗಳ ವಿವರ ನೀಡುತ್ತ ಅವರ ಬದುಕಿನ ಕಷ್ಟ-ನಷ್ಟ-ಬವಣೆಗಳತ್ತ ಒಂದು ಸೂಕ್ಷ್ಮ ನೋಟ ಹರಿಸಿಯೇ ಎಲ್ಲ ಸೌಂದರ್ಯಾನುಭೂತಿ, ಚಾರಣದ ನೋವು-ನಲಿವುಗಳು, ಪ್ರಕೃತಿ-ಪರಿಸರದ ಏರುಪೇರುಗಳು, ಹಕ್ಕಿಪಿಕ್ಕಿಗಳು, ಹಿಮ-ಮಳೆ-ಗುಡುಗು-ಮಿಂಚು-ಬಿಸಿಲು, ಹೂವು ಹುಲ್ಲುಗಳ ಕಡೆ ನಮ್ಮ ಮನಸ್ಸು ಕೊಂಡೊಯ್ಯುತ್ತಾರೆ ಬಸವರಾಜು. ಚಾರಣಿಗನಾಗಿ ತಮ್ಮ ಅನುಭವ, ಉತ್ಸಾಹ, ಸಡಗರ ಅದೇನೇ ಇರಲಿ, ಬಸವರಾಜು ಅವರು ತಮ್ಮ ಸೂಕ್ಷ್ಮವಾದ ಅವಲೋಕನ ಪ್ರಜ್ಞೆಯಿಂದ ಅಲ್ಲಿಯೇ ಬದುಕು ಭವಿಷ್ಯ ಅರಸುತ್ತಿರುವ ಬಡ ಮಂದಿಯ ನೋವು ನಲಿವಿನ, ಬವಣೆಯ ಕುರಿತು ಸ್ಪಂದಿಸದೇ ಮುಂದಡಿಯಿಡುವುದಿಲ್ಲ ಎನ್ನುವಲ್ಲೇ ಈ ಚಾರಣ ಕಥನದ ಹೆಚ್ಚುಗಾರಿಕೆಯಿದೆ. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮೊಳಗಿನ ಮನುಷ್ಯನನ್ನು ಜೀವಂತಗೊಳಿಸುತ್ತ ಸಾಗುವ ಈ ಕಥನ ಈ ಕಾರಣಕ್ಕೇ ಹೆಚ್ಚು ಆಪ್ತವಾಗುತ್ತದೆ.


ಚಾರಣಿಗರಿಗೇ ಬೇಕಾಗುವ ಮಾಹಿತಿಗಳಲ್ಲಿ ಎಷ್ಟನ್ನು ಈ ಹೊತ್ತಿಗೆ ನೀಡಬಲ್ಲುದೋ ಅಥವಾ ಇಲ್ಲವೋ ತಿಳಿಯದು. ಆದರೆ ಇದನ್ನು ಓದಿದ ಯಾರಿಗೇ ಆದರೂ ತಾವೂ ಅಲ್ಲಿಗೆಲ್ಲ ಹೋಗಬೇಕು ಅನಿಸದೇ ಇರುವುದಿಲ್ಲ. ಈಗಾಗಲೇ ಹೋಗಿ ಬಂದಿರುವ ಬಸವರಾಜು ಬಗ್ಗೆ ಹೊಟ್ಟೆಯುರಿಯದೆಯೂ ಇರುವುದಿಲ್ಲ! ಅವರ ಸ್ಪಂದನ ಓದುಗನ ಸ್ಪಂದನವೂ ಆಗುವಂತೆ, ಇನ್ನಷ್ಟು ಬರೆಯಬಹುದಿತ್ತು, ಕೊಂಚ ವಿವರವಾಗಿ ಎಲ್ಲವನ್ನೂ ಬರೆಯಬಹುದಿತ್ತು ಎನ್ನುವ ಅಸಮಾಧಾನ ಉಳಿಯುವಂತೆ, ಉಳಿಯುವಷ್ಟು ಆಪ್ತವಾಗಿ ಬಿಡುವ ಈ ಕಥಾನಕ ಬಿಡಿ ಬಿಡಿ ಅಧ್ಯಾಯಗಳಲ್ಲಿ ತುಂಡರಿಸಲ್ಪಡುವ ಲಹರಿಯಿಂದ ಕಾಡುತ್ತದೆ.


ಒಂದು ಖುಶಿಗೆ ಕಾರಣವಾಗುವ ಇಂಥ ವಿವರಗಳನ್ನು ಒಂದಿಷ್ಟು ಗಮನಿಸಿ:
"ಅನ್ಯ ಮಾರ್ಗವಿಲ್ಲದೆ ನೊಣಗಳ ನಡುವೆ ಜಾಗ ಹಿಡಿದು ಕುಳಿತೆವು. ಹೋಟೇಲಿನಾತ ನಡು ಮಧ್ಯಾಹ್ನದಲ್ಲಿ ದಿನದ ಪ್ರಥಮ ಗಿರಾಕಿಗಳನ್ನು ಕಂಡು ಪ್ರಸನ್ನನಾದ. ಹುಮ್ಮಸ್ಸಿನಿಂದಲೇ ಲಸ್ಸಿ ತಯಾರಿಕೆಗೆ ತೊಡಗಿದ. ಆತನ ಒಂದೊಂದು ಕ್ರಿಯೆಯೂ ದೈವಾರಾಧನೆಯಂತೆ ನಡೆಯುತ್ತಿತ್ತು. ನಾವು ಅದನ್ನು ಶ್ರದ್ಧೆಯಿಂದ ನೋಡುತ್ತ ಕುಳಿತೆವು. ಆತನ ಉಡುಗೆ ತೊಡುಗೆ, ಲಸ್ಸಿ ತಯಾರಿಕೆಯಲ್ಲಿ ಆತ ತೋರುತ್ತಿದ್ದ ಉತ್ಸಾಹ, ಬಳಸುತ್ತಿದ್ದ ಪರಿಕರಗಳು... ಆಹಾ! ಲಸ್ಸಿಯಂತೂ ದೇವಲೋಕದ ಪಾನೀಯವೇ ಆಗಿರಬೇಕು. ಆಗಿರಲೇ ಬೇಕು, ನಾವು ಇದ್ದದ್ದು ದೇವ ಕಣಿವೆ ಕುಲುವಿನಲ್ಲಿ."


ಬಸ್ಸಿನಲ್ಲಿ ಕುಳಿತಿರುವಾಗ ಕಣ್ಣಿಗೆ ಬಿದ್ದ ಇಬ್ಬರು ಮುದುಕರು ಸುಡು ಬಿಸಿಲಿನಲ್ಲಿ ಕೈಯಲ್ಲಿದ್ದ ಛತ್ರಿಯನ್ನು ಬಿಡಿಸಬೇಕೆಂಬ ಪರಿವೆಯೂ ಇಲ್ಲದೆ, ನೆರಳಿಗೂ ಹೋಗದೆ ನಿರಂತರ ಮಾತನಾಡುತ್ತಿರುವ ಚಿತ್ರವೇ ಬಸವರಾಜು ಅವರಲ್ಲಿ ಯೋಚನಾ ತರಂಗಗಳನ್ನು ಎಬ್ಬಿಸುತ್ತದೆ. ಇದು ಹಿಮಾಲಯದ ಹಾದಿ, ಚಾರಣ ನಮ್ಮ ಗುರಿ, ಈ ಚಾರಣ ಒಂದು ಮನಸ್ಸಿನ ಖುಶಿಗಾಗಿ ಇರುವ ಹವ್ಯಾಸ, ಈ ಕ್ಷಣದ ಸತ್ಯವಾಗಿರುವ ಈ ಹಾದಿಯ ಜಗತ್ತು ತನ್ನದಲ್ಲ, ತನ್ನದೇ ಆದ ಜಗತ್ತೊಂದು ಬೆಂಗಳೂರಿನಲ್ಲೋ ಮೈಸೂರಿನಲ್ಲೋ ಈ ಎಳೆ ಬಿಸಿಲಿಗೆ ಸಿಮೆಂಟು ಕಾಂಕ್ರೀಟಿನಂತೆ ಬೆಚ್ಚಗಾಗುತ್ತಿದೆ ದೂರದಲ್ಲಿ ಎಂಬ ಯಾವ ಮಿತಿಗಳೂ ಇಲ್ಲದೆ ಬಸವರಾಜು ಇಲ್ಲಿನ ಜಗತ್ತಿನ ಶಾಶ್ವತ ನಿವಾಸಿಗಳ ಬದುಕಿಗೆ ಸ್ಪಂದಿಸುವ ರೀತಿಯೇ ಮನಸ್ಸಿಗೆ ಹಿತವಾಗುತ್ತ ಆಪ್ತವಾಗುತ್ತ ಹೋಗುತ್ತದೆ.
ಅಲ್ಲಿ ಒಬ್ಬ ಭಾವುಕ ಕವಿ ಇದ್ದಾನೆ, ಆಧ್ಯಾತ್ಮದ ಎತ್ತರಕ್ಕೇರಬಲ್ಲ ಅನುಭಾವಿ ಇದ್ದಾನೆ, ಹುಡುಗಾಟದ ಹುಡುಗರ ಗೌಜಿ, ಗದ್ದಲ, ತಿನ್ನುವ ಸ್ಪರ್ಧೆ, ಕಡು ಚಳಿಯ ಮುಂಜಾನೆ ಕಂಬಳಿ ಲಪಟಾಯಿಸುವ ಕಲೆ ಎಲ್ಲವನ್ನು ಕಂಡು, ಅನುಭವಿಸಿ ಪೇಚಿಗೆ ಬಿದ್ದರೂ ಸಮಾಧಾನದಿಂದ ಸ್ವೀಕರಿಸಬಲ್ಲ ಪ್ರಬುದ್ಧನಿದ್ದಾನೆ, ಗುಡ್ಡ ಬೆಟ್ಟ ಜಿಗಿದು ಜಯಿಸುವ ಹಮ್ಮೀರನಿದ್ದಾನೆ, ಕಾಯಿ ಸೇಬನ್ನು ಕಿತ್ತಬಗ್ಗೆ ನೋಯುವ, ಉರುಳಿ ಬಿದ್ದ ಮರಗಳ ಬಗ್ಗೆ ಯೋಚಿಸುವ ಆತ್ಮೀಯನಿದ್ದಾನೆ, ಎಷ್ಟೇ ಎತ್ತರಕ್ಕೆ ಏರಿದರೂ ಆರಂಭದಿಂದ ಕೊನೆತನಕ ಪದೇ ಪದೇ ನದಿ ಬಿಯಾಸ್ ಎಲ್ಲಿದೆ ಎಂದು ಹುಡುಕುವ ನದಿಯ ನೆನಪಿನ ಹಂಗಿನಲ್ಲಿರುವ ಪಯಣಿಗನಿದ್ದಾನೆ.


ಉತ್ತರದವರ ಊಟ ಮಾಡುವ, ಸಮೂಹ ಭೋಜನದ ವಿವರಗಳು, ಕ್ಯಾಂಪ್ ಫಯರಿನ ಹಾಡು, ಕುಣಿತ, ಚಿರತೆಯ ಭೀತಿ, ಹಿರೇಮಠರಂಥವರು ಹುಟ್ಟುಹಾಕಿದ `ಮೇಲೆ ಎಂತೋ ಏನೋ' ಭೀತಿ, ಕೊನೆಯ ದಿನಗಳಲ್ಲಿ ಮನದ ತುಂಬ ಕವಿದುಕೊಳ್ಳುವ ಒಬ್ಬ ಚಾರಣಿಗನ ಸಾವಿನ ನೆರಳು, ಹಾದಿಯುದ್ದಕ್ಕೂ ಚಾರಣಿಗರನ್ನೇ ಕಾಯುತ್ತ ಹಣ್ಣು, ತಿನಿಸು ಒದಗಿಸಿ ಸಂಪಾದಿಸುವ ಹಿಮದ ಮಡಿಲಲ್ಲಿ ಬದುಕುತ್ತಿರುವ ಮಂದಿಯ ಚಿತ್ರಗಳು, ದಿನದಿನವೂ ದಿನದ ಕೊನೆಯಲ್ಲಿ ಸಿಗುವ ಶಿಬಿರ, ಆ ಶಿಬಿರದ ನಾಯಕರ ವಿಭಿನ್ನವೂ ವಿಶಿಷ್ಟವೂ ಆದ ಶಿಸ್ತು, ಮೇಲ್ವಿಚಾರಣೆ, ಜವಾಬ್ದಾರಿ ನಿರ್ವಹಣೆಯ ರೀತಿ ನೀತಿಗಳು.....ಈ ಅನುಭವ ಅನನ್ಯ, ವಿಶಿಷ್ಟ.


ಈ ಚಾರಣದ ಉದ್ದಕ್ಕೂ, ಪ್ರತಿದಿನವೂ ಎಂಬಂತೆ ಬಸವರಾಜು ನಮ್ಮನ್ನು ಕೇವಲ ನಡೆಯಿಸಿ, ಅದೂ ಇದೂ ತೋರಿಸಿ ದಣಿಸುವುದಿಲ್ಲ. ಒಂದಷ್ಟು ಹೊತ್ತು ಏಕಾಂತಕ್ಕೆ, ಅವರ ಅಂತರಂಗದ ಧ್ಯಾನಕ್ಕೆ ಕೊಂಡೊಯ್ಯುತ್ತಾರೆ. ಕಣ್ಣಿಗೆ ಕಾಣಿಸುವುದು ಯಾವುದೋ ಮರವೋ, ಹಕ್ಕಿಗಳ ಆಟವೋ, ಗರಿ ಬಿಚ್ಚಿದ ಅತಿದೊಡ್ಡ ಹಿಮಾಲಯದ ಹದ್ದೋ, ಚಿತ್ತಾರದಂಥ ಮೋಡವೋ, ನಡುರಾತ್ರಿಯಲ್ಲಿ ಕಂಡ ಚಿಕ್ಕೆಗಳ ಆಗಸ ಬೊಗಸೆಯಲ್ಲೇ ಇರುವಂತೆ ಕಂಡಿದ್ದೋ... ಏನೂ ಆದೀತು. ಅಥವಾ ರಾತ್ರಿ ಗಾಢಾಂಧಕಾರದಲ್ಲಿ ವಿಚಿತ್ರವಾಗಿ ನರಳಿದಂತೆ ಕೂಗುವ ಇನ್ಯಾವುದೋ ಅಗೋಚರ ಪಕ್ಷಿಯ ಕೂಗೇ ಇದ್ದರೂ ಆದೀತು. ಅವರು ಎಲ್ಲೋ ಯಾವುದೋ ಲಹರಿಯಲ್ಲಿ ಕಳೆದು ಹೋಗುತ್ತಾರೆ. ಬದುಕಿನ ಅಗಮ್ಯ, ಅಮೂರ್ತ, ಅವ್ಯಕ್ತಗಳ ತೆಕ್ಕೆಗೆ ನಮ್ಮನ್ನು ಒಯ್ಯುತ್ತಾರೆ. ಅಲ್ಲಿ ಕೆಲವೇ ಕ್ಷಣ ವಿರಮಿಸಿ ಮತ್ತೆ ಚುಮುಚುಮು ಮಂಜಿನ ಬೆಚ್ಚಗಿನ ಬಿಸಿಲಿನ ಹಿಮದ ಹಾದಿಯ ನಡುವೆ ನಮ್ಮನ್ನು ಕೈ ಹಿಡಿದು ನಿಲ್ಲಿಸುತ್ತಾರೆ. ಇದು ಬರಿಯ ಬೆಡಗಲ್ಲೋ ಅಣ್ಣಾ ಎನಿಸುವಂತಿರುವ ಈ ಕಥನ ಬರಿಯ ಚಾರಣವೆ? ಅಲ್ಲವೇ ಅಲ್ಲ.

"ಹಿಮಾಲಯದ ಬದುಕು ಮಾತ್ರ ಎಂದಿನಂತೆಯೇ ಚುರುಕಾಗಿತ್ತು. ಅವತ್ತು ಪೋಲೀಯೋ ಹಾಕಿಸುವ ಕಾರ್ಯಕ್ರಮ. ಮಹಿಳೆಯರೆಲ್ಲ ತಮ್ಮ ಮಕ್ಕಳನ್ನು ಹೊತ್ತುಕೊಂಡು ಪರ್ವತ ಇಳಿಯುತ್ತಿದ್ದರು. ಕುಲು-ಮನಾಲಿಯ ಹೆದ್ದಾರಿಗೆ ಅವರು ಬರಬೇಕು. ಈ ಹಿಮಾಲಯದ ಮಕ್ಕಳು ಎಷ್ಟು ಸುಂದರ. ನಿತ್ಯ ಕೊಳಕರಾಗಿರುವ ಈ ಮಕ್ಕಳನ್ನು ತಾಯಂದಿರು ಇಂದು ಮಾತ್ರ ವಿಶೇಷವಾಗಿ ಅಲಂಕರಿಸಿದ್ದರು; ತಾವೂ ಅಲಂಕೃತರಾಗಿದ್ದರು. ಮುದ್ದು ಮುದ್ದಾಗಿರುವ ಈ ಮಕ್ಕಳನ್ನು ನೋಡುತ್ತ ನಮ್ಮ ಉತ್ಸಾಹ ಮತ್ತೆ ಚಿಗುರೊಡೆಯಿತು. ನಮ್ಮ ಚಾರಣದ ಕೊನೆಯ ಘಟ್ಟಕ್ಕೆ ಕಳೆತುಂಬಿಕೊಂಡಿತು. ಈ ಮಕ್ಕಳ, ಈ ಮಹಿಳೆಯರ ಜೊತೆ ನಾವೂ ಉತ್ಸಾಹದಿಂದ ನಡೆದೆವು."

ಪುಸ್ತಕದ ಹೆಸರು : ಕುಲು ಕಣಿವೆಯಲ್ಲಿ
ಲೋಹಿಯಾ ಪ್ರಕಾಶನ, ಬಳ್ಳಾರಿ.
ಬೆಲೆ: ೬೦, ಪುಟ ೧೪೨.

No comments: