Sunday, February 24, 2008

ಕಾಡು ಅಲೆಯಲು ಹೊರಟು...

ಇದೇ ಚಾರಣ ಅಂದ್ರೆ ಅಂತ ಅನಿಸತೊಡಗಿದ್ದು ಮಾತ್ರ ಮಧ್ಯಾಹ್ನ ಮೂರೂವರೆ ಸುಮಾರಿಗೆ ಸುಡುಬಿಸಿಲಿನಲ್ಲಿ ಬಾಯಿ ಗಂಟಲು ಎಲ್ಲ ಒಣಗಿ, ಬಸಿಯುತ್ತಿರುವ ಬೆವರಿನಿಂದ ಇಡೀ ಮೈ ಒದ್ದೊದ್ದೆಯಾಗಿ ಹಿಂಸೆಯಾಗುತ್ತಿರುವಾಗ, ಕೈಕಾಲುಗಳೆಲ್ಲ ಬಚ್ಚುತ್ತಿರುವಾಗ, ಆ ನೀರವದಲ್ಲೂ ಮೌನವಾಗಿ ಮತ್ತು ಅದಕ್ಕೇ ನಿಗೂಢವಾಗಿ ಚಾಲೆಂಚ್ ಹಾಕುವ ಹಾಗೆ ಎದ್ದು ನಿಂತ ಏಳೆಂಟು ಅಡಿ ಎತ್ತರದ ಕಲ್ಲು ಬಂಡೆಗಳು ಬಾ ನಮ್ಮನ್ನು ಏರು, ಏರಿದರೆ ಉಂಟು ಇಲ್ಲದಿದ್ದರೆ ಇಲ್ಲ ಎಂಬಂತೆ ಪಿಸುಗುಟ್ಟಿದಾಗ!
ಇಲ್ಲ ಸ್ವಲ್ಪ ಸೌಖ್ಯವಿಲ್ಲ ಮಾರಾಯ್ರೇ ಎಂದರೆ ಹಾಗಿದ್ರೆ ನೀವು ಬರಲೇ ಬೇಕು, ಬಂದ್ರೆ ಎಲ್ಲ ಗುಣವಾಗುತ್ತೆ, ನೋಡಿ ಬೇಕಾದ್ರೆ ಎಂದವರು ಅತ್ರಿಯ ಅಶೋಕವರ್ಧನ. ಪ್ರತೀ ಸಲ ಏನಾದರೊಂದು ಕಾರಣ, ನೆವನ ಹೇಳಿ ನನಗೂ ಸಾಕಾಗಿತ್ತು, ಕರೆದೂ ಕರೆದೂ ಅವರಿಗೂ ಸಾಕಾಗಿತ್ತು ಅಂತ ಕಾಣಿಸುತ್ತೆ, ಈ ಬಾರಿ ತೆಪ್ಪಗೆ ಹೊರಟೆ. ಅವರದೇ ಆದ ರಾಜಗಾಂಭೀರ್ಯದ ಮೀಸೆಯೊಳಗಿನ ಕೆಣಕುವ ನಗೆ ಮತ್ತು ಜೋಕುಗಳ ಅಶೋಕರ ಜೊತೆ ಎಲ್ಲಿಗಾದರೂ ಪ್ರಯಾಣ ಹೋಗುವುದೆಂದರೆ ಯಾರಿಗಾದರೂ ಖುಶಿಯ ಕನಸೇ ಬಿಡಿ. ಹಾಗೆ ಭಾನುವಾರದ ಒಂದು ಬೆಳ್ಳಂಬೆಳಗು ನಮಗೆ ದಾರಿ ಬಿಟ್ಟುಕೊಟ್ಟಿದ್ದು ಬಿಸಿಲೆ ಹಳ್ಳಿಗೆ.
ಪುತ್ತೂರಿನ ಸಮೃದ್ಧಿ ತಂಡದ ಸುಮಾರು ಐವತ್ತಾರು ಮಂದಿ (ಅವರಲ್ಲಿ ನಾಲ್ಕು ಮಂದಿ ಮಕ್ಕಳು ಅಂತ ಅವರು ಹೇಳಿದರೂ ನಮಗೆ ಹತ್ತು ಹದಿನೈದು ಮಂದಿ ಮಕ್ಕಳ ತರವೇ ಕಾಣುತ್ತಿದ್ದರು!) ಈ ಚಾರಣಕ್ಕಾಗಿ ತುಂಬ ಯೋಜಿತ ರೀತಿಯಲ್ಲಿ ಸಜ್ಜಾಗಿ ನಮ್ಮನ್ನು ಸುಬ್ರಹ್ಮಣ್ಯದಲ್ಲಿ ಕೂಡಿಕೊಂಡರು. ಆಗ ಬೆಳಗ್ಗಿನ ಒಂಭತ್ತರ ಸಮಯ. ಬೆನ್ನಿಗೆ ಕುಮಾರಪರ್ವತ ನಿಧಾನವಾಗಿ ಮಂಜಿನ ಸ್ನಾನ ಮುಗಿಸುತ್ತಿತ್ತು. ಸುತ್ತಮುತ್ತೆಲ್ಲ ವಿಚಿತ್ರ ಆತಂಕ, ಸಂಭ್ರಮ, ಭಕ್ತಿಯಿಂದ ಓಡಾಡುವ ಭಕ್ತಾದಿಗಳು ತುಂಬಿದ್ದರು. ಸಾಪ್ತಾಹಿಕ ಪುರವಣಿಗಳನ್ನು ಮಗಚುತ್ತಾ ಇವರೆಲ್ಲರ ಟಿಫಿನ್ ಮುಗಿಯುವುದನ್ನು ಕಾಯುತ್ತ ನಿಂತಾಗಲೇ ಪರಿಸರವಾದಿ, ಕಾಡಿನ ಕುರಿತು ಅದಮ್ಯ ಕುತೂಹಲ, ಅಧ್ಯಯನದ ಶಿಸ್ತು ರೂಢಿಸಿಕೊಂಡಿರುವ ನಿರೇನ್ ಜೈನ್ ನಮ್ಮ ಜೊತೆಯಾದರು.
ಅಲ್ಲಿಂದ ಮುಂದೆ ರಸ್ತೆಯಲ್ಲದ ರಸ್ತೆಯಲ್ಲಿ ಸಕಲೇಶಪುರದ ಕಡೆಗೆ ಸಾಗುವ ಹಾದಿಯಲ್ಲಿ ಅಶೋಕರ ವಾಹನದಲ್ಲಿ ಇಡೀ ದೇಹವನ್ನು ನಮ್ಮದಲ್ಲ ಎನ್ನುವಂತೆ ಕುಲುಕುಲು ಅಲ್ಲಾಡಿಸುತ್ತ ಬಿಸಿಲೆ ಕಡೆಗೆ ಸಾಗಿದ್ದೇ ಒಂದು ಸಾಧನೆ! ಹರಿವ ನೀರಿಗೆ ಕಡಿದ ಮರದ ದಿಮ್ಮಿಗಳನ್ನು ತೇಲಿಬಿಟ್ಟು ಇನ್ನೆಲ್ಲೋ ರಸ್ತೆಗೆ ಹತ್ತಿರವಿರುವಲ್ಲಿ ಅದನ್ನು ಮರದ ದಿಮ್ಮಿಗಳಿಂದಲೇ ಅಡ್ಡಗಟ್ಟಿ ಹಿಡಿದು ಲಾರಿಗೆ ತುಂಬಿ ಕದಿಯುವ ಮರಗಳ್ಳರ ಚಾತುರ್ಯ, ಸದ್ಯಕ್ಕಂತೂ ಭೂತ ಬಂಗಲೆ ತರವೋ ಹಳೆ ಬಸ್‌ಸ್ಟ್ಯಾಂಡ್ ಕಟ್ಟಡದ ತರವೋ ಕಾಣುವ ಯಾವ್ಯಾವಾಗಲೋ ಏನೇನೋ ಕಾರಣಕ್ಕೆ ಅನುದಾನ ಪಡೆದು, ಪಡೆದ ಕರ್ಮಕ್ಕೆ ಕಟ್ಟಿ ಹಾಕಿದ ಸರ್ಕಾರೀ ರಚನೆಗಳು ಎಲ್ಲವನ್ನೂ ಯಥಾನುಶಕ್ತಿ ಕಾಣುತ್ತ ಸಾಗಿದೆವು. ಒಂದು ಕಡೆ ಕಳ್ಳರಗಂಡಿಯನ್ನೂ ಕಂಡೆವೆನ್ನಿ. ಈಗಿನ ಕಳ್ಳರ ಕಿಂಡಿಗಳಿಗೆ ಹೋಲಿಸಿದರೆ ಆಗಿನ ಕಳ್ಳರ ಕಿಂಡಿಗಳು ಹೆಚ್ಚು ಸೃಜನಾತ್ಮಕವಾಗಿದ್ದುವೆಂಬುದೇ ವಿಶೇಷ!
ಹಚ್ಚ ಹಸುರಿನ, ನೆರಳಿನಿಂದಾಗಿ ಕಡು ಹಸಿರಿನ ಚಪ್ಪರದ ಒಳಗೆ, ಐವತ್ತು ಅರವತ್ತು ಜನ ಸಾಲಾಗಿ ಕಾಲ ಕೆಳಗಿನ ಒಣಗಿದ ಎಲೆಗಳನ್ನು ತುಳಿಯುತ್ತ, ಬೆನ್ನ ಮೇಲಿನ ಚೀಲದಲ್ಲಿ ಉಪಾಹಾರ, ನೀರು ಹೊತ್ತು, ಶಿಸ್ತಿನಿಂದ ಚರ್ರ ಪರ್ರ ಸದ್ದು ಎಬ್ಬಿಸುತ್ತ ನಡೆದು ಹೋಗುವ ಒಂದು ಅಭ್ಯಾಸಕ್ಕೆ ಬಿದ್ದಿದ್ದೇ ಏರು ಬರಲಿ, ದಿಬ್ಬವೇ ಬರಲಿ ನಡೆಯುವುದೇ! ಬೆವರು ಬರಲಿ, ಕೈಕಾಲು ಸೋಲಲಿ, ನಡೆಯುವುದೇ! ಮುಂದಿನವರು ಮರೆಯಾದ ತಿರುವಿನಲ್ಲಿ ಕುತೂಹಲ, ಬಂತೋ ಶಿಖರ? ಇಲ್ಲ, ಇಲ್ಲಿ ಬರೀ ಬಿಸಿಲು! ತೆಗೆಯಿರಿ ಟೊಪ್ಪಿ. ಬಾಯಾರಿತೇ, ತೆಗಿಯಿರಿ ನೀರಿನ ಬಾಟಲು. ಅರೆ! ಈ ಮಕ್ಕಳಲ್ಲಿ ಎಂಥ ಉತ್ಸಾಹ ಎನ್ನುತ್ತೀರಿ? ಜಿಂಕೆ ಮರಿಗಳ ಹಾಗೆ ಆರು ವರ್ಷದಿಂದ ಹದಿನೈದು ಹದಿನಾರರ ಚಿಣ್ಣರ ನಡಿಗೆಯೇ ಓಟ! ಇವರು ಏರುತ್ತಿದ್ದಾರೆಯೇ ಹಾರುತ್ತಿದ್ದಾರೆಯೇ! ರಾಮಾ ರಾಮಾ, ಯಾರಿಗೆ ಬೇಕಿತ್ತಪ್ಪ ಇದು, ಪಿಕ್‌ನಿಕ್ ಅಂತ ಹೊರಟಿದ್ದು, ಇಲ್ಲಿ ನೋಡಿದರೆ ಮೈಯ ಕೊಬ್ಬೆಲ್ಲ ಕರಗುತ್ತಿದೆಯಲ್ಲಪ್ಪಾ!

"ನಡೆಯಿರಿ ನಡೆಯಿರಿ, ಮತ್ತೆ ತಡವಾಗ್ತದೆ ನಿಧಾನ ಮಾಡಿದರೆ..." ಹಾದಿ ಕಲ್ಲಗುಡ್ಡದ ಕಡೆಗೆ.
ಮತ್ತೆ ಸ್ವಲ್ಪ ಹೊತ್ತಿಗೆ ತಲೆಯೆತ್ತಿ ನೋಡಿದರೆ ಎಲ್ಲ ನಿಮ್ಮದೇ ಆಗಿ ಬಿಟ್ಟಿದೆ ಜಗತ್ತು! ನಿಮ್ಮ ಕಾಲ ಕೆಳಗೆ ಎಲ್ಲೋ ದೂರದಲ್ಲಿ ಊಂ ಎನ್ನುತ್ತ ಮರದ ದಿಮ್ಮಿಗಳನ್ನು ಹೊತ್ತ ಲಾರಿಯೊಂದು ಸುರಂಗದೊಳಗಿಂದಲೋ ಎಂಬಂತೆ ಸುಯ್ಲಿಡುತ್ತಿದೆ! ಅಗೋ ಅಲ್ಲಿ ರಸ್ತೆ, ಗೀರು ಎಳೆದ ಹಾಗೆ, ಅದರ ಮೇಲೆ ಹರಿಯುವ ಆಟಿಕೆಯ ಲಾರಿ! ಅಲ್ಲಿ ಒಳ ಹೋಯ್ತು, ಮತ್ತೀಗ ಇಲ್ಲಿ ಹೊರಬಂತು...ಎಂಥ ಕಣ್ಣಾಮುಚ್ಚಾಲೆ ಈ ಮರಸಾಗಿಸುವವರದ್ದು! ಮತ್ತಲ್ಲಿ ನೋಡಿ, ನದೀ ಪಾತ್ರೆಯ ಹಾದಿ ಅದು. ನದಿ ಕೂಡ ಈಗ ಬತ್ತಿ ಹೋಗಿ ಕಾಣುವುದು ಬರೀ ಬರಡು ಗೀರು, ಭೂಮಿ ತಾಯ ಬೋಳು ನೆತ್ತಿಯ ಮೇಲೆ ಅಡ್ಡಾದಿಡ್ಡಿ ಬೈತಲೆ!

ಹನ್ನೆರಡೂವರೆಗೆ ತಲುಪಿರಬೇಕು. ಸುತ್ತಲಿನ ಪ್ರಕೃತಿಯ ಸೊಬಗು ಕಾಣುತ್ತ ಎಷ್ಟೋ ಕಾಲದ ಮೇಲೆ ತಾಯ ಮಡಿಲಲ್ಲಿ ತಲೆಯಿಟ್ಟ ಮಕ್ಕಳಂತೆ ಆ ಸುಡು ಬಿಸಿಲಿನಲ್ಲೂ, ಬೋಳು ಗುಡ್ಡದ ಬಿಸಿಯಲ್ಲೂ, ಚುರುಗುಟ್ಟುವ ಹೊಟ್ಟೆಯ ಹಸಿವನ್ನೂ ಮರೆತು ಎಲ್ಲರೂ ಸಂಭ್ರಮಿಸಿದರು. ಮತ್ತೆ ಇದ್ದೇ ಇತ್ತು, ಊಟ. ವನಭೋಜನವದು. ಯಾರೂ ತಾವು ತಂದ ಪ್ಯಾಕೆಟು, ಪ್ಲಾಸ್ಟಿಕ್ ಚೀಲ, ಲೋಟ ಯಾವುದನ್ನೂ ಅಲ್ಲೇ ಎಸೆಯಬಾರದು. ಎಲ್ಲವನ್ನೂ ನೀಟಾಗಿ ಒಂದು ಕಡೆ ಕೂಡಿಸಿಟ್ಟು ನಮ್ಮೊಂದಿಗೇ ವಾಪಾಸು ಒಯ್ಯಬೇಕು...

ಮತ್ತೆ ಇಳಿಯುವುದು. ಇಳಿದದ್ದೇ ಇನ್ನೊಂದು ಹಾದಿ ಹಿಡಿದು ಕನ್ನಡಿ ಕಲ್ಲನ್ನು ಹತ್ತುವುದು. ಈ ಬೆಟ್ಟದ ಮೈ ಕಡಿದಾಗಿ ಹಲಗೆ ಯ ತರ ಇರುವುದರಿಂದಲೋ ಅಥವಾ ಈ ಬೆಟ್ಟದಲ್ಲಿರುವ ವಿಶಿಷ್ಟವಾದ ಯಾವುದೋ ಖನಿಜಾಂಶದಿಂದಲೋ ಸೂರ್ಯನ ಬೆಳಕಿಗೆ ಇದು ಫಳಫಳ ಪ್ರತಿಫಲಿಸಿದಂತೆ ಕಂಡಿರಬೇಕು! ಹಾಗಾಗಿ ಇದರ ಹೆಸರು ಕನ್ನಡಿಕಲ್ಲು. ಹಾಗೆ ನೋಡಿದರೆ ನಮ್ಮ ಜೊತೆಯ ಹುಡುಗಿಯರು ಹೆಂಗಸರಿಗೆ ಇದು ಪ್ರಿಯವಾಗಬೇಕಿತ್ತು. ಹಾಗಾಗಲಿಲ್ಲ! ಕೆಲವರು ಆಗಲೇ ಉರಿಮುಖದಿಂದಲೇ ಅವರವರ ಯಜಮಾನ್ರಿಗೆ ಹೇಳಿಬಿಟ್ಟಿದ್ದರು, ಇನ್ನು ಹತ್ತುವುದು ಬಸ್ಸು ಮಾತ್ರಾ! ಕನ್ನಡಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವವರಾರೂ ನಮ್ಮ ಜೊತೆ ಬರಲೇ ಇಲ್ಲ ಎನ್ನಿ.

ಸ್ವಲ್ಪ ಕಷ್ಟವಿತ್ತು ಕನ್ನಡಿಕಲ್ಲಿನ ನೆತ್ತಿಯ ಹತ್ತಿ ನಿಲ್ಲುವುದು. ಬಿಸಿಲೂ ತೀವೃವಾಗಿತ್ತು. ಕಾಡು ಬೋಳಾಗುತ್ತಿರುವುದರಿಂದಲೋ ಏನೋ ನೆರಳಿನ ಆಶ್ರಯ ಕಡಿಮೆ. ಕಾಲಕೆಳಗಿನ ಹಾದಿ ಕಡಿದಾದುದು ಮತ್ತು ಹೆಚ್ಚು ಕಲ್ಲು ಮುಳ್ಳು ಸೇರಿದ್ದು. ದಾರಿ ನೋಡುತ್ತ ನಡೆಯಬೇಕು, ಇಲ್ಲದಿದ್ದರೆ ಮುಂದೆ ದಾರಿ ನೋಡುವ ಅಗತ್ಯವೇ ಇರುವುದಿಲ್ಲ ಎನ್ನುವ ಪರಿಸ್ಥಿತಿ! ಹಾಗಿರುತ್ತ ಅತ್ತಿತ್ತ ನೋಡುವುದಾಗಲೀ, ಆಕಾಶಕ್ಕೇ ಗುರಿಯಿಟ್ಟಂತೆ ಬೆಳೆದು ನಿಂತ ಮರಗಳ ಅದಮ್ಯ ಛಲವನ್ನು, ಆ ನೆಟ್ಟ ನೇರ ಗುರಿಯ ಕುರಿತ ಧ್ಯಾನವನ್ನು ಕುರಿತು ಯೋಚಿಸುವುದಕ್ಕೂ ಸಮಯವಿಲ್ಲ. ಅಂತೂ ಈ ಬೆಟ್ಟವನ್ನು ಹತ್ತಿ ನಿಂತಾಗ ಸರಾಗವಾಗಿ ಹತ್ತಿ ಕುಳಿತ ಮಕ್ಕಳು, ಹುಡುಗಿಯರು ನಿಧಾನಕ್ಕೆ ಏರಿ ಬರುತ್ತಿದ್ದ ತಂಡಗಳಿಗೆ ಇವರು ಸೆಕೆಂಡ್ ಕ್ಲಾಸ್, ಇವರು ಜಸ್ಟ್ ಪಾಸ್ ಎಂದೆಲ್ಲ ಅಂಕಗಳನ್ನು ಕೊಡುತ್ತಿದ್ದರು! ಈ ಹುಡುಗಿಯರ ಪುಟ್ಟ ಬ್ಯಾಗುಗಳಲ್ಲಿ ಏನಿರುತ್ತೆ ಏನಿಲ್ಲ ಎನ್ನಲು ಬರುವಂತಿಲ್ಲ ಬಿಡಿ. ಯಾರೋ ಒಬ್ಬರು ಕೊಡೆ ಹೊರಗೆ ತೆಗೆದು ಆರಾಮಾಗಿ ಅದನ್ನು ಬಿಚ್ಚಿಕೊಂಡು ಕೂತರು. ತಲೆ ಮೇಲಿನ ಸೂರ್ಯ, ಕಾಲಕೆಳಗಿನ ಬಂಡೆ ಎರಡೂ ಉರಿಯುತ್ತಿರುವಾಗ ಹೊಟ್ಟೆ ಉರಿಯದಿರುತ್ತದೆಯೇ? ಉರಿಯಿತೆನ್ನಿ!


ಅಲ್ಲಿಂದ ನಾವು ಎಂಟೂ ದಿಕ್ಕಿನಲ್ಲಿ ಕಂಡ ದೃಶ್ಯವೈಭವವನ್ನು ಯಾವ ಕವಿಯೂ ಹಾಡಲಾರ ಬಿಡ್ರೀ. ಯಾವ ಕ್ಯಾಮೆರಾದ ಎಂಥಾ ಲೆನ್ಸು ಕೂಡಾ ಆ ಸೆನ್ಸು ತರಲಾರದು. ಅಲ್ಲಿಗೇ ಹೋಗಿ ನೋಡ ಬೇಕಾದ ದೃಶ್ಯವದು. ನಮಗೇ ಮತ್ತೆ ಮರಳಿ ಬರುವ ಹಾದಿಯಲ್ಲಿ ವಾಹನ ನಿಲ್ಲಿಸಿ ಇಳಿದು ರಸ್ತೆಯ ಮೇಲೇ ನಿಂತು ತಲೆಯೆತ್ತಿ ನೋಡಿದರೆ, ಅರೆರೆ ಅಲ್ಲಿಗಾ ನಾವು ಹೋಗಿದ್ದು ಹಾಗಾದರೆ ಅನಿಸಿತು ಅಂದರೆ ನೀವೇ ಲೆಕ್ಕ ಹಾಕಿ! ಮೇಲಿಂದ ಕೆಳಗೆ ನೋಡುವಾಗ ಕಂಡ ಹೇರ್‌ಪಿನ್ ತಿರುವು ಥೇಟ್ ಹೇರ್‌ಪಿನ್ ತರವೇ ಇತ್ತಲ್ಲವೇ ಮಾರಾಯ್ತಿ ಅಂತ ಯಾರೋ ಯಾರಿಗೋ ಹೇಳುತ್ತಿರುವಾಗ ಹತ್ತಿದ್ದು ಕನ್ನಡಿ ಕಲ್ಲು, ಕನ್ನಡಿಯನ್ನೇ ಅಲ್ಲವಲ್ಲ ಸದ್ಯ ಎಂಬ ತಮಾಷೆ!
ಬಿಸಿಲೆ ಹಳ್ಳಿಯಲ್ಲಿ ಹೆಚ್ಚೆಂದರೆ ಹತ್ತು ಹದಿನೈದು ಮನೆಗಳಿವೆಯಂತೆ. ಫಾರೆಸ್ಟ್ ಗೇಟಿನ ಸುತ್ತ ಎರಡು ಅಂಗಡಿಗಳೂ ಮೂರು ಹೋಟೆಲ್ಲುಗಳೂ ಇವೆ. ಅವು ಪಂಚತಾರಾ ಹೋಟೇಲುಗಳೇ ಇಲ್ಲಿನ ಮಟ್ಟಿಗೆ. ದೇವೇಗೌಡರ ತುಳಸೀ ಹೋಟೆಲ್ಲಿನ ಟೀಯಂತೂ ನಮಗೆ ಅಮೃತಪಾನದಂತಿತ್ತು. ಹೋಟೆಲ್ ಶೋಭ, ಹೋಟೆಲ್ ಪರಿಸರ ಎಲ್ಲವೂ ಸರಿ ಸುಮಾರು ಒಂದೇ ಆಕಾರ, ಗಾತ್ರ. ಗಂಟೆ ಅರ್ಧಗಂಟೆಗೊಂದರಂತೆ ಹರಿಯುವ ಲಾರಿ, ಕಾರುಗಳಿಗೆ ತೆವಳುತ್ತ ಬರುವ ಸರಕಾರೀ ಬಸ್ಸುಗಳಿಗೆ ತೆರೆಯಲೆಂದೇ ಹಾಕುತ್ತಿದ್ದಾರೆಯೇ ಎನಿಸುವಂತಿದ್ದ ಫಾರೆಸ್ಟ್ ಗೇಟು ಮತ್ತದನ್ನು ನಿರ್ವಹಿಸುತ್ತಿರುವ ವಯಸ್ಸಾದ ಗಾರ್ಡ್‌ಗೆ ಅಶೋಕರ ಬಾಯ್‌ಬಾಯ್ ಸುಪರಿಚಿತವಿರಬೇಕು, ಗೇಟು ಮಡಿಚುತ್ತಲೇ ಮುಗುಳ್ನಗೆ ನಕ್ಕು ಬೀಳ್ಕೊಟ್ಟ ರೀತಿಯೇ ಹಾಗಿತ್ತು.

ಅಶೋಕ ವರ್ಧನರೂ ನೀರೇನ್ ಜೈನ್ ಅವರೂ ತಮ್ಮ ಸುತ್ತ ಎಲ್ಲರನ್ನೂ ನಿಲ್ಲಿಸಿಕೊಂಡು ಈ ವಲಯದಲ್ಲಿ ನಡೆಯುತ್ತಿರುವ ಅರಣ್ಯನಾಶ, ಅದನ್ನೇ ಅವಲಂಬಿಸಿರುವ ಜೀವಸಂಕುಲದ ಅಳಿವು ಉಳಿವಿನ ಪ್ರಶ್ನೆ, ಎರಡನ್ನೂ ಕಾಪಾಡಿಕೊಂಡು ಬರಲು ತಾವು ಇಬ್ಬರೂ ಇನ್ನಿತರ ಕೆಲವರೊಂದಿಗೆ ಸೇರಿ ಮಾಡುತ್ತಿರುವ ಅಷ್ಟಿಷ್ಟು ಪ್ರಯತ್ನ, ಜನರಲ್ಲಿ ಇನ್ನಾದರೂ ಜಾಗೃತವಾಗಬೇಕಿರುವ ಪರಿಸರ ಪ್ರಜ್ಞೆ, ಕಾಡು ಯಾಕೆ ಬೇಕು, ಅಲ್ಲಿನ ಜೀವಸಂಕುಲ ಯಾಕೆ ಬೇಕು ಎಂಬುದೆಲ್ಲ ನಮ್ಮ ನಗರ, ಊರು, ಪಟ್ಟಣದ ದಿನನಿತ್ಯದ ನೀರು, ವಿದ್ಯುತ್, ಕೃಷಿ, ಆರೋಗ್ಯ ಎಲ್ಲಕ್ಕೂ ಹೇಗೆ ಸಂಬಂಧಿತ ಎಂಬ ಬಗ್ಗೆ ನೀಡಿದ ಪುಟ್ಟ ಪರಿಚಯ ನಿಜಕ್ಕೂ ಎಲ್ಲರನ್ನೂ ಎಲ್ಲೋ ಮೀಟುತ್ತಿತ್ತು, ಉದ್ದಕ್ಕೂ.

ಬೇಕಿದ್ದರೆ ಮೂಢನಂಬುಗೆ ಎಂದೇ ಹೇಳಿ, ಇಲ್ಲಿಗೆ ಹೋಗಿಬಂದ ನನಗೆ ಒಂದು ದಿನವೂ ಮೈಕೈ ನೋವು ಕಾಡಲಿಲ್ಲ. ಹೆಚ್ಚುವರಿ ನಿದ್ದೆ, ರೆಸ್ಟು ಬೇಕೆನಿಸಲಿಲ್ಲ. ಆವತ್ತೂ ಎಂದಿನಂತೆ ಹನ್ನೆರಡರ ನಂತರವೆ ಮಲಗಿದೆ. ಮರುದಿನ ಎಂದಿನಂತೆ ಆರಕ್ಕೇ ಎದ್ದೆ. ಹಾಕಿದ್ದ ರಜೆ ಕ್ಯಾನ್ಸಲ್ ಮಾಡಿ ಕೆಲಸಕ್ಕೆ ಹೋದೆ. ಹೋಗುವಾಗ ಇದ್ದ ಶೀತ ನೆಗಡಿ ಮಾಯವಾಗಿತ್ತು! ಅದೇನಿದ್ದರೂ ಮತ್ತೀಗ ಅದೇ ಮಂಗಳೂರಿನ ಕಾರ್ಬನ್ ಉಸಿರಾಡುತ್ತಿದ್ದೇನೆನ್ನಿ.

ನೀವೂ ಒಮ್ಮೆ ಬನ್ನಿ ಇಲ್ಲಿಗೆ ಎನ್ನುತ್ತಿದ್ದಾರೆ ಅತ್ರಿ ಬುಕ್ ಸೆಂಟರ್‌ನ ಅಶೋಕ್. ಅಂದಹಾಗೆ ಇಲ್ಲಿನ ಹದಿನೈದು ಎಕರೆ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬರಬೇಕೆನ್ನುವ ಒಂದೇ ಉದ್ದೇಶದಿಂದ ಖರೀದಿಸಿದವರು ಇವರು, ಇವರ ಇನ್ನೊಬ್ಬ ಗೆಳೆಯ ಡಾ. ಕೃಷ್ಣಮೋಹನರ ಜೊತೆ. (ಅಶೋಕವರ್ಧನ: 0824-2425161.
e-mail:athreebook@sify.com)

No comments: