Sunday, March 30, 2008

ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!


ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.
ಈ ಸಂಕಲನದ ಮೊದಲ ಕತೆ ಮಸೀದಿಯ ಅಂಗಳ ಬಹುಷಃ ಕತೆಯಾಗುವ ಅಥವಾ ಕಾದಂಬರಿಯಾಗುವ ಒಂದು ಸುಪ್ತ ಉದ್ದೇಶ ಇಟ್ಟುಕೊಂಡೇ ಹೊರಟ ಕಥಾನಕದಂತಿಲ್ಲ. ಬಾಲ್ಯದ ನೆನಪುಗಳ, ಸ್ಮೃತಿಗಳ ಮೆಲುಕಾಟದಂತೆ ತೊಡಗುವ ಈ ಎಲ್ಲ ವಿವರಗಳು ಕ್ರಮೇಣ ಹಲವು ಕತೆಗಳ ಒಡಲಾಗುತ್ತ, ಬೆಳೆಯುತ್ತ ಹೋಗುತ್ತದೆ. ಮಗುವಿನ ಕಣ್ಣುಗಳಿಂದ ಹಿರಿಯರ ಬದುಕಿನ ದುರಂತಗಳನ್ನು ಮುಗ್ಧವಾಗಿ ಕಟ್ಟಿಕೊಡುವ ಕತೆಗಳು ಕನ್ನಡಕ್ಕೆ ಹೊಸತೇನಲ್ಲ. ಆದರೆ ಇಲ್ಲಿ ಅಂಥ ಯೋಜಿತ ಉದ್ದೇಶ, ಕ್ರಿಯೆ ಎರಡೂ ಇಲ್ಲ. ಕತೆಯ ಕೊನೆಗೆ (ಕೊನೆಯೆಂಬುದು ಇದೆಯೆ, ಇಂಥ ಕತೆಗಳಿಗೆ?) ಈ ವಿವರಗಳಿಗೆಲ್ಲ ಒಂದು ಆಕಾರ ನೀಡಲು ಬಶೀರ್ ಪ್ರಯತ್ನಿಸಿದಂತಿದೆ. ಈ ಪ್ರಯತ್ನ ಕೂಡ ಅತ್ಯಂತ ಸಹಜವಾಗಿ, ಅಪ್ರಯತ್ನ ಎಂಬಂತಿರುವುದು ವಿಶೇಷ. ತಮ್ಮ ಪ್ರೀತಿಯ ಆಟದ ಅಂಗಳವಾಗಿದ್ದ, ಮದರಸಾದ ಕಠಿಣ ಕಲಿಕೆಯ ಶಿಸ್ತಿನಿಂದ ಆಚೆ ಒಂದಿಷ್ಟು ಸ್ವಾತಂತ್ರ್ಯದ ಆಕಾಶವನ್ನು ಒದಗಿಸುತ್ತಿದ್ದ ಮೈದಾನವಾಗಿದ್ದ, ಪ್ರೀತಿಯ ನೇರಳೆ ಮರದ ನೆರಳ ತಾವಾಗಿದ್ದ ಜಾಗ ಕ್ರಮೇಣ ಕಬರಸ್ಥಾನವಾಗುವುದನ್ನು, ಅದಕ್ಕಾಗಿ ಸವಿ-ಒಗರು ನೆನಹುಗಳ ಹಲವಾರು ಕಲರವಗಳನ್ನು ಹೊತ್ತ ನೇರಳೆ ಮರವನ್ನೂ ಕಡಿಯಬೇಕಾಗಿ ಬರುವುದನ್ನು, ಒಂದಲ್ಲಾ ಒಂದು ಕಾಲಕ್ಕೆ ಚಟುವಟಿಕೆಯ ಬುಗ್ಗೆಗಳಂತೆ ಅಲ್ಲೇ ಓಡಾಡಿಕೊಂಡಿದ್ದ ಪುಟ್ಟ ಮಕ್ಕಳೇ ಅಲ್ಲಿ ಹೆಣವಾಗಿ ಮಲಗುವುದನ್ನು, ಅದನ್ನು ಉಳಿದವರು ಕಾಣಬೇಕಾಗುವುದನ್ನು ಹಂತ ಹಂತವಾಗಿ ಚಿತ್ರಿಸುತ್ತ ಮಸೀದಿಯ ಅಂಗಳ ಸವಿನೆನಪುಗಳ ಪೊರೆ ಕಳಚಿಕೊಂಡು ವಿಷಾದದ ಕಹಿ ನೆನಪುಗಳ ಮೈತೋರುತ್ತದೆ.
ಉಮ್ಮಾ ಕತೆ ಅತ್ಯಂತ ಕೌಶಲದ, ಕತೆಗಾರರ ಪ್ರಾಮಾಣಿಕ ಪೋಷಣೆ ಪಡೆದ ಒಂದು ಉತ್ತಮ ಕತೆ. ವಸ್ತುವಿನ ಮಟ್ಟಿಗೆ ಅಂಥ ವಿಶೇಷ ಇಲ್ಲಿದೆ ಎನ್ನಲಾಗದಾದರೂ ಇದೇ ಬಗೆಯ ವಸ್ತು ಕನ್ನಡದ ಅನೇಕ ಕಥೆಗಾರರಲ್ಲಿ ಹೇಗೆಲ್ಲ ಅಭಿವ್ಯಕ್ತಿ ಪಡೆದಿದೆ ಎನ್ನುವುದನ್ನು ಗಮನಿಸುವಾಗ ವಿಶೇಷ ಮಹತ್ವ ಪಡೆಯುತ್ತದೆ. ಹೆತ್ತ ಮಗನ ಸಾವಿನ ನಂತರ ಮಗನ ಮಡದಿಯ ವಿಷಯದಲ್ಲಿ ಮಾವನಾದವ ನಡೆದುಕೊಳ್ಳುವ ಬಗೆಯನ್ನು ಕುರಿತೇ ನಮ್ಮಲ್ಲಿ ಹಲವು ಕತೆಗಳು ಬಂದಿವೆ. ಮಗನಿಗಿಂತ ಕಿರಿಯಳಾದ ಎರಡನೆಯ ಹೆಂಡತಿಯನ್ನು ಮನೆತುಂಬಿಸಿಕೊಂಡ ತಂದೆ ಅಥವಾ ಬೆಳೆದ ಮಗನ ಎದುರೇ ಇನ್ನೊಬ್ಬಳನ್ನು ಇಟ್ಟುಕೊಂಡು ಊರೆಲ್ಲ ಗುಲ್ಲು ಮಾಡಿಕೊಂಡ ತಂದೆಯ ಕತೆ - ತಂದೆ ಮಗನ ಸಂಬಂಧವನ್ನು ಒರೆಗೆ ಹಚ್ಚುವುದನ್ನು ಕಂಡಿದ್ದೇವೆ. ಇದೇ ರೀತಿ ತಾಯಿ ಮಗಳ ಅಥವಾ ತಂದೆ ಮಗಳ ನಡುವಿನ ಒಳತೋಟಿಗಳನ್ನು ಮೀಟುವ ಕತೆಗಳೂ ಕನ್ನಡದಲ್ಲಿವೆ. ಇಲ್ಲಿ ಅಪ್ಪ ಎರಡನೆ ಮದುವೆ ಮಾಡಿಕೊಂಡು ಮನೆತುಂಬಿಸಿಕೊಳ್ಳುವ ಹುಡುಗಿ, ಚಿಕ್ಕಮ್ಮ ಎನಿಸಿಕೊಳ್ಳಲು ತಯಾರಾದ ಹುಡುಗಿ, ಮಗನ ಪತ್ನಿಯಾಗಲು ಯೋಗ್ಯಳಾದ ಒಬ್ಬಳು ಕನ್ಯೆ. ಇದು ತೀರಿಕೊಂಡ ತನ್ನ ಪ್ರೀತಿಯ ಉಮ್ಮಾಳ ನೆನಪಿನಲ್ಲಿ ಇನ್ನೂ ಹೊಯ್ದಾಡುತ್ತಿರುವ ಯುವಕನಲ್ಲಿ ಉಂಟು ಮಾಡುವ ತಲ್ಲಣಗಳು, ಅಪ್ಪ ಮಗನ ಸಂಬಂಧದಲ್ಲಿ ಕಾಣಿಸಿಕೊಳ್ಳುವ ಮೌನದ ಗೋಡೆಗಳು, ಅದರ ನಡುವಿನ ಬಿರುಕುಗಳು ಎಲ್ಲ ಕತೆಯಲ್ಲಿ ನವಿರಾಗಿ, ಅತ್ಯಂತ ಸಾವಧಾನವಾಗಿ ಮೂಡಿರುವುದು ಗಮನಾರ್ಹ.
ಬಾಳೆಗಿಡ ಗೊನೆಹಾಕಿತು ಕೊಂಚ ವಾಗ್ ವೈಭವಕ್ಕೆ ಅಗತ್ಯಕ್ಕಿಂತ ಹೆಚ್ಚೇ ಮನಸೋತಿದೆ ಅನಿಸಿದರೂ ಕತೆಯ ಉತ್ತರಾರ್ಧ ಅಗತ್ಯವಾದ ಬಿಗಿಯನ್ನು ಮೈಗೂಡಿಸಿಕೊಂಡು ಮನಸ್ಸಿಗಿಳಿಯುವ ಅಂತ್ಯದಿಂದ ಮನಗೆಲ್ಲುತ್ತದೆ. ಕೆ ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಮಾದರಿ ನಮ್ಮ ಬಹುತೇಕ ಎಲ್ಲ ಯುವ ಕತೆಗಾರರನ್ನು ಸೆಳೆದಿರುವುದು ಕುತೂಹಲಕರ!
ಗೋಡೆ ಕಪಾಟು ಒಂದು ಬಗೆಯ ವಿಡಂಬನೆಯನ್ನೇ ಗುರಿಯಾಗಿರಿಸಿಕೊಂಡಂತೆ ಕಾಣುವ ಕತೆ. ಸಾಹಿತಿಯ ಸಾಹಿತ್ಯ ಮತ್ತು ಬದುಕಿನ ನಡುವಿನ ಕಂದಕವನ್ನು ಲೇವಡಿಯಿಲ್ಲದೆ, ಸಾಧ್ಯವಾದ ಮಟ್ಟಿಗೆ ಕೊಂಕು ಇಲ್ಲದೆ ನೋಡುವ ಕತೆಯಿದು ಎಂದರೂ ಒಟ್ಟಾರೆಯಾಗಿ ಇದು ವಿಡಂಬನೆಯ ಲೇಪದಿಂದ ಮುಕ್ತವಾಗುವುದಿಲ್ಲ.
ರಣರಂಗದಲ್ಲಿ ಮುಸ್ಸಂಜೆ, ತಮಸೋಮಾ ಮತ್ತು ಹಲೋ ಹಲೋ ಕತೆಗಳು ಬಶೀರರಲ್ಲಿರುವ ಕತೆಗಾರನ ನಿಜವಾದ ಅಂತಃಸ್ಸತ್ವವನ್ನು ತೆರೆದು ತೋರುವಂಥ ಕತೆಗಳು. ರಣರಂಗದಲ್ಲಿ ಮುಸ್ಸಂಜೆ ಕತೆಯ ವಸ್ತು ತುಂಬ ಸೂಕ್ಷ್ಮದ್ದು. ಕೊಂಚ ಅವಾಸ್ತವಿಕ ಎನಿಸುವ ಒಂದು ನೆಲೆಯಿಂದಲೇ ಹೊರಟರೂ ಇಲ್ಲಿನ ನಿರೂಪಣೆಯ ಬಿಗಿ, ಮಿತಿಯಲ್ಲಿರುವ ಮಾತುಗಳು, ಕಥಾನಕದ ಹೆಚ್ಚಿನ ಹೊಣೆಯನ್ನು ತಾವೇ ಹೊತ್ತಂತಿರುವ ವಿವರಗಳು ಈ ಕತೆಯನ್ನು ಯಶಸ್ವಿಯಾಗಿಸಿವೆ. ವಸ್ತುವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಅದೇ ರೀತಿ ತಮಸೋಮಾದ ವಸ್ತು ಕೂಡ ತುಂಬ ಹೊಸತನದಿಂದ ಕೂಡಿದ್ದು ನಿರೂಪಣೆಯ ಹದ ನಿಜಕ್ಕೂ ಅದ್ಭುತವಾಗಿದೆ. ಇಂಥ ವಸ್ತು ಮತ್ತು ಕಥಾನಕವನ್ನು ಆಕರ್ಷಕವಾಗಿ, ಸಂಯಮದಿಂದ ನಿರ್ವಹಿಸುವುದು ನಿಜಕ್ಕೂ ಒಂದು ರೀತಿಯ ಸವಾಲು. ಇದನ್ನು ಬಶೀರ್ ತುಂಬ ತಾಳ್ಮೆಯಿಂದ ನಿಭಾಯಿಸುತ್ತಾರೆ. ಹಲೊ ಹಲೊ ಕತೆ ಮೇಲ್ನೋಟಕ್ಕೆ ವಿಶೇಷವಾದುದೇನನ್ನೂ ತನ್ನೊಡಲೊಳಗೆ ಇರಿಸಿಕೊಂಡಂತೆ ಕಾಣುವುದಿಲ್ಲವಾದರೂ ಈ ಕತೆ ಎಂಥವರನ್ನೂ ತಲ್ಲಣಗೊಳಿಸಿಬಿಡುವ ಪರಿಯೇ ಒಂದು ಅಚ್ಚರಿ. ಐದೇ ಐದು ಶಬ್ದಗಳ ಕೊನೆಯ ಒಂದು ಸಾಲು ಸಾಧ್ಯವಾಗಿಸುವ ಈ ಪವಾಡಕ್ಕೆ ಬೆರಗಾಗಿದ್ದೇನೆ. ಹಾಗೆಯೇ ಈ ಮೂರೂ ಕತೆಗಳ ಬಗ್ಗೆ ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲದ ಒಂದು ಕಥಾನಕವನ್ನು ಮೀರಿದ ವ್ಯಾಪ್ತಿಯನ್ನು ಈ ಮೂರೂ ಕಥೆಗಳು ಪಡೆದಿರುವುದು ಗಮನಿಸ ಬೇಕಾದ ಅಂಶವಾಗಿದೆ. ಬಶೀರ್ ಇನ್ನಷ್ಟು ಕತೆಗಳನ್ನು ಬರೆಯಬೇಕಿತ್ತು ಅನಿಸುವಾಗಲೇ ಸುದ್ದಿಮನೆಯ ಕತೆಗಳ ನಡುವೆ ಅವರು ಕಳೆದೇ ಹೋದಂತಿದ್ದಾರೆ. ಅವರು ಮತ್ತೆ ಕತೆಗಳನ್ನು ಬರೆಯಬೇಕು, ಅವರ ಸಂಕಲನ ಬರಬೇಕು ಅನಿಸುವಂತೆ ಮಾಡುತ್ತದೆ ಈ ಬಾಳೇ ಗಿಡ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, March 23, 2008

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...


ಬದುಕು ಕೊಡುವುದು ಅನುಭವವನ್ನು ಮಾತ್ರ ಎನ್ನುವುದನ್ನು ಒಪ್ಪಿದರೂ, ಈ ಅನುಭವವೇ ನಮ್ಮನ್ನೆಲ್ಲ ಕಾಲ ಸಂದಂತೆ ಪ್ರಬುದ್ಧರನ್ನಾಗಿಸುವ ಸಂಗತಿ ಎನ್ನುವುದನ್ನು ಒಪ್ಪಿದರೂ, ಈ ಒಟ್ಟು ಪ್ರಕ್ರಿಯೆಯ ಉದ್ದೇಶವೇನೆಂಬುದು ಗೂಢವಾಗಿಯೇ ಉಳಿಯುತ್ತದೆ. ಸಾವಿನೊಂದಿಗೆ ಎಲ್ಲವೂ ಮುಗಿದು ಹೋಗುತ್ತದೆ, ದೇಹ ಪಂಚಭೂತಗಳಲ್ಲಿ ಲೀನವಾಗಿ ಪ್ರಕೃತಿಗೆ ಸಲ್ಲುತ್ತದೆ; ಅಲ್ಲಿಗೇ ಎಲ್ಲವೂ ಮುಗಿದು ಹೋಗುವುದಾದರೆ ಈ ಅನುಭವಗಳಿಗೆ ತೆರೆದುಕೊಂಡು ಪ್ರಬುದ್ಧರಾಗುವ ನಿರಂತರವೂ ಅಂತ್ಯವಿಲ್ಲದ್ದೂ ಆದ ಪ್ರಕ್ರಿಯೆಯ ಉದ್ದೇಶವಾದರೂ ಏನು? ಈಗ ಪುನರ್ಜನ್ಮದ ಪರಿಕಲ್ಪನೆ ತುಂಬ ಆಪ್ತವಾಗುತ್ತದೆ, ಆತ್ಮಕ್ಕೆ ಸಮಾಧಾನ ನೀಡಬಲ್ಲ ಸಂಗತಿಯಾಗುತ್ತದೆ.


ಅದೆಲ್ಲ ಇರಲಿ. ಈ ಪಕ್ವವಾಗುವುದಕ್ಕೆ ಎಷ್ಟೆಲ್ಲ ಹಾದಿಗಳಿವೆ. ಜಗತ್ತು ಮಿಥ್ಯೆ, ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಮಾಯೆ, ಈ ಭವದ ಮಾಯಾಜಾಲಕ್ಕೆ ಸಿಲುಕಿಕೊಳ್ಳದೆ, ನಿರ್ಮಮ, ನಿರ್ಲಿಪ್ತ, ನಿರ್ಗುಣ, ನಿರ್ವಿಕಾರ ಬದುಕನ್ನು ಸಾಧಿಸುವುದೇ ಭಗವಂತನನ್ನು ಸೇರುವುದಕ್ಕೆ ಇರುವ ಸರಿಯಾದ ಮಾರ್ಗ ಎನ್ನುತ್ತದೆ ಧಾರ್ಮಿಕ ಪರಂಪರೆ. ಇಲ್ಲ, ಜಗತ್ತು ಅದೇ ಭಗವಂತನ ಸೃಷ್ಟಿ, ಅದನ್ನು ನಿರಾಕರಿಸುವುದು ಅವನನ್ನೇ ನಿರಾಕರಿಸಿದಂತೆ, ಮನುಷ್ಯನ ದೇಹದ ರಚನೆಯೇ ಎಲ್ಲದರಿಂದಲೂ ದೂರವಾಗಿ, ನಿಸ್ಸಂಗತ್ವ, ಸಂಯಮ, ಸಂನ್ಯಾಸ, ತ್ಯಾಗಗಳಿಂದ ಅಲಂಕೃತಗೊಳ್ಳಲು ಆಗಿರುವಂಥದ್ದಲ್ಲ, ಎಲ್ಲವನ್ನೂ ಅನುಭವಿಸಿ ಮಾಗಬೇಕು, ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪುರುಷಾರ್ಥಗಳೇ, ವೈರಾಗ್ಯ-ನಿರಾಕರಣ ಪ್ರಕೃತಿವಿರೋಧಿ ನೀತಿ ಎನ್ನುತ್ತದೆ ಇನ್ನೊಂದು ಪರಂಪರೆ. ಎಲ್ಲವನ್ನೂ ಅನುಭವಿಸು, ನಿಜವಾದ ಅರ್ಥದಲ್ಲಿ ಬದುಕು. ಅದೇ ಬದುಕಿನ ಸಫಲತೆ ಎಂಬುದು ಇಲ್ಲಿನ ತತ್ವ. ಯಾವುದು ಸರಿ? ಯಾವುದು ತಪ್ಪು? ಯಾಕೆ?


ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಓದಿದಾಗ ಇಂಥ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ ತೆರೆಗಳಂತೆ ಏಳುತ್ತವೆ.


ನಮ್ಮ ಕಾಳಿದಾಸನ ಕತೆಯಲ್ಲೂ ಇಂಥ ಒಂದು ದ್ವಂದ್ವದ ಕುರಿತ ಚರ್ಚೆ ಇದೆ. ಕಾಳಿದಾಸ ಕುರಿಗಳನ್ನು ಕಾಯುವ ಕುರುಬರಲ್ಲಿ ಸೇರಿಕೊಂಡು ಮಂದಬುದ್ಧಿಯವನಾಗುವುದಕ್ಕೂ ಮೊದಲು ಒಬ್ಬ ಅಧಿಕಪ್ರಸಂಗಿ ಆದರೆ ಜಾಣ ವಿದ್ಯಾರ್ಥಿಯಾಗಿದ್ದ. ಒಮ್ಮೆ ಗುರುಗಳು ಆಧ್ಯಾತ್ಮಿಕ ಸಾಧನೆಯ ಮಾರ್ಗ ಎಂದಿಗೂ ಕಲಾರಾಧಕರಿಗೆ ಎಟುಕುವಂಥದ್ದಲ್ಲ, ಹಾಗಾಗಿ ಅದು ಅವರಿಗೆ ನಿಷಿದ್ಧ ಎಂಬಂಥ ಮಾತನ್ನಾಡಿದಾಗ ಈತ ವಾದಿಸುತ್ತಾನೆ. ಒಬ್ಬ ಕಲಾವಿದ ಬದುಕಿನ ಎಲ್ಲ ಸುಂದರವಾದದ್ದರ, ಆನಂದಮಯವಾದದ್ದರ ಆರಾಧಕನಾಗಿ ಎಲ್ಲವನ್ನೂ ಅನುಭವಿಸಿ ಬದುಕಿನ ಮರ್ಮವನ್ನೂ, ಸೌಂದರ್ಯ, ಸುಖ ಮತ್ತು ರಸಗಳ ಕ್ಷಣಭಂಗುರತೆಯನ್ನೂ ಅರಿತು ಮಾಗುತ್ತಾನೆ. ಅದಕ್ಕಾಗಿ ಅವನಿಗೆ ವಿರಕ್ತಿಯನ್ನು ಬೋಧಿಸುವುದು ತರವಲ್ಲ ಎಂಬ ಅಭಿಪ್ರಾಯವಿದ್ದೀತೇ ಹೊರತು ಆಧ್ಯಾತ್ಮವೇ ಅಂಥವನಿಗೆ ನಿಷಿದ್ಧ ಎಂಬ ನೀತಿ ಶಾಸ್ತ್ರಕಾರರದ್ದಿರಲಿಕ್ಕಿಲ್ಲ ಎನ್ನುತ್ತಾನೆ. ಮುಂದೆ ಮಾತಿಗೆ ತನ್ನ ಸಹಪಾಠಿಗಳ ಜೊತೆ ಗುರುಗಳು ಹೇಳಿದ್ದನ್ನು ಕೇಳಿಕೊಂಡಿರುವ ಶಿಷ್ಯರು ಕುರುಬನ ಹಿಂದೆ ಹೋಗುವ ಕುರಿಗಳಂತೆ ಎನ್ನುತ್ತಾನೆ. ಈ ಮಾತಿನಿಂದ ಕುಪಿತನಾದ ಗುರು ಇವನಿಗೆ ತಾನು ಕಲಿತ ವಿದ್ಯೆಯನ್ನೆಲ್ಲ ಮರೆತುಹೋಗಿ ಒಬ್ಬ ದಡ್ಡ ಕುರುಬನಾಗಿರು ಎಂದು ಶಪಿಸುತ್ತಾನೆ. ಮುಂದಿನ ಕತೆ ಬಿಡಿ, ಎಲ್ಲರಿಗೂ ಗೊತ್ತಿರುವಂಥದೇ.


ಇಲ್ಲಿನ ನಾರ್ಸಿಸಸ್ ಆಯ್ದುಕೊಂಡ ಅಥವಾ ಅವನದ್ದೆಂದು ಅವನಿಗೆ ನೀಡಲಾದ ಬದುಕು ಸಂನ್ಯಾಸಿಯದ್ದು. ಗೋಲ್ಡಮಂಡ್ ತನ್ನದೂ ಅದೇ ಹಾದಿ ಎಂದು ತಪ್ಪು ತಿಳಿದು ಮಠಕ್ಕೆ ಬಂದಿರುತ್ತಾನೆ. ಆದರೆ ಇದೇ ನಾರ್ಸಿಸಸ್ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಗೋಲ್ಡಮಂಡ್‌ನನ್ನು ಪ್ರಣಯದ, ಪ್ರೀತಿ-ಪ್ರೇಮದ, ಕಲೆ-ಸಂಗೀತದ, ಸಾವು-ನೋವಿನ, ಅನ್ಯಾಯ-ಅಕ್ರಮಗಳ ಬದುಕಿಗೆ ಅವನನ್ನು ದೂಡುತ್ತಾನೆ. ಇಬ್ಬರ ಬದುಕಿನ ಹಾದಿಗಳೂ ಬೇರೆಬೇರೆಯಾದರೂ ಅವು ಸಮಾನಾಂತರ ರೇಖೆಗಳಂತೆ ಸಾಗುತ್ತವೆ. ಗೋಲ್ಡಮಂಡ್ ತನ್ನ ಎಲ್ಲ ಲೋಲುಪತೆಯ ನಡುವೆಯೂ ಸಾಕ್ಷಿಪ್ರಜ್ಞೆಯನ್ನು ಕಳೆದುಕೊಳ್ಳುವುದಿಲ್ಲ. ತನ್ನದೇ ಉನ್ಮಾದವನ್ನು, ಅಶಾಂತಿಯನ್ನು, ಸುಖವನ್ನು, ದುಃಖವನ್ನು ಗಮನಿಸಬಲ್ಲ ಸೂಕ್ಷ್ಮಜ್ಞ್ತತೆಯನ್ನು ಸದಾ ಎಚ್ಚರವಾಗಿಟ್ಟುಕೊಂಡೇ ನಾರ್ಸಿಸಸ್‌ನ್ನು ಇನ್ನಿಲ್ಲದಂತೆ ಪ್ರೀತಿಸುತ್ತ ಬೆಳೆಯುತ್ತಾನೆ. ಇತ್ತ ನಾರ್ಸಿಸಸ್‌ಗೂ ಗೋಲ್ಡಮಂಡ್ ಕಲಿಸುತ್ತಿರುತ್ತಾನೆ, ತನ್ನ ಬದುಕಿನ ರೀತಿ-ನೀತಿಗಳಿಂದ. ಇಬ್ಬರೂ ಒಂದು ವಿಚಿತ್ರ ಸನ್ನಿವೇಶದಲ್ಲಿ ಮತ್ತೆ ಭೇಟಿಯಾಗುತ್ತಾರೆ. ವಿರಕ್ತಿಯ ಮತ್ತು ಮೋಹದ ಬದುಕನ್ನು ಅಳೆದು ತೂಗುತ್ತಾರೆ. ಕಲೆ ತನ್ನ ಅಭಿವ್ಯಕ್ತಿಗೆ ನೆಚ್ಚಿಕೊಳ್ಳುವ ಪ್ರತಿಮೆಗಳ ಬಗ್ಗೆ, ಬುದ್ಧಿ ನೆಚ್ಚಿಕೊಳ್ಳುವ ಶಬ್ದಗಳ ಬಗ್ಗೆ; ತಾಯಿ ಪ್ರೀತಿಯೂ, ಮೋಹವೂ, ಬದುಕೂ ಮತ್ತು ಸಾವೂ ಆಗಿರುವ ವಿಚಿತ್ರದ ಬಗ್ಗೆ; ತಂದೆ ಕೇವಲ ಬುದ್ಧಿ, ಜಾಣ್ಮೆ, ಮರುಭೂಮಿಯಾಗಿರುವುದರ ಬಗ್ಗೆ; ಹಕ್ಕಿಯಂತೆ ಹಾಡಲಾರದ-ಹಾರಲಾರದ ಮನುಷ್ಯನ ಮಿತಿಗಳ ಬಗ್ಗೆ, ಕಲ್ಪನೆಯ ಸ್ವಾತಂತ್ರ್ಯದ ಬಗ್ಗೆ; ಜಗತ್ತು ದಯಾಮಯ ದೇವರ ಸೃಷ್ಟಿಯಾಗಿರಬಹುದಾದ ಬಗ್ಗೆ ಅಥವಾ ಆಗಿಲ್ಲದಿರುವುದರ ಬಗ್ಗೆ; ದೇವರು ಇರುವ ಅಥವಾ ಇರದಿರುವ ಬಗ್ಗೆ ಚರ್ಚೆಯಾಗುತ್ತದೆ - ಯಾವುದೂ ನೇರವಾಗಿಯಲ್ಲ, ಒಣ ವಿದ್ವತ್ತಿನ ಪ್ರದರ್ಶನವಾಗಿಯಲ್ಲ. ಇಲ್ಲಿರುವುದು ನಿಶ್ಚಯವಾಗಿಯೂ ಒಂದು ಕಾದಂಬರಿ, ಪ್ರಬಂಧವಲ್ಲ.


ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!


ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.


ಅನೇಕ ಒಳನೋಟಗಳಿಂದ ಬದುಕನ್ನು ಕೆಣಕುವ ಈ ಕೃತಿ ಓದಿ ಮುಗಿದ ಮೇಲೂ ಕಾಡಬಲ್ಲಷ್ಟು ಆಪ್ತ ವಿವರಗಳಲ್ಲಿ, ಆಕರ್ಷಕ ಘಟನೆಗಳಲ್ಲಿ ಮೈತಳೆದಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, March 16, 2008

ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...


ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆಯಲ್ಲಿ (15 ಮಾರ್ಚ್ 2008) ಬಂದಿರುವ ಈತನ ಸಂದರ್ಶನ. ನಸ್ರೀನ್ ಮುನ್ನಿ ಕಬೀರ್ ನಡೆಸಿದ ಈ ಸಂದರ್ಶನದಲ್ಲಿ ಪ್ರಸೂನ್ ತನ್ನ ರಕ್ತದ ಕಣಕಣದಲ್ಲೂ ತಾನು ಕವಿ ಎನ್ನುತ್ತಾನೆ! ನಮ್ಮ ಜಯಂತ್ ಕಾಯ್ಕಿಣಿ ಆಗಾಗ ಕವಿತೆಯ ಬಗ್ಗೆ ಆಡುತ್ತ ಬಂದ ಮಾತುಗಳನ್ನೇ ಹೋಲುವಂತಿರುವ ಈತನ ಮಾತುಗಳು ಬರಹಗಾರರಿಗೆ ಕುತೂಹಲ ಹುಟ್ಟಿಸುವಂತಿವೆ.


"ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ." (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ - ಜಯಂತ ಕಾಯ್ಕಿಣಿ).


"ಕೆಲವೊಮ್ಮೆ ಒಂದು ಶಬ್ದ ಪೇಪರ್ ವ್ಹೈಟ್ ಇದ್ದ ಹಾಗೆ. ಅದನ್ನು ತೆಗೆದುಬಿಟ್ಟರೆ ಎಲ್ಲವೂ ಹಾರಿ ಹೋಗುತ್ತದೆ!"


"ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ."


ಪ್ರಸೂನ್ ಬರೇ ಕವಿಯಲ್ಲ. ಹಾಡಿನ ಚಿತ್ರೀಕರಣದ ದೃಶ್ಯ ಜಗತ್ತಿನ ಕುರಿತೂ ಸಲಹೆ ನೀಡಿದ್ದಿದೆ. (ಜಯಂತರೂ ಇದನ್ನು ಮಾಡಿದ್ದಾರೆ). ರಂಗ್ ದೇ ಬಸಂತಿಯ ಒಂದು ಸನ್ನಿವೇಶ. ಮಗನನ್ನು ಕಳೆದುಕೊಂಡ ತಾಯಿಯ ದುಃಖವನ್ನು ಚಿತ್ರಿಸಬೇಕು. ಅಲ್ಲಿ ತಾಯಿ ಮಗ ಕಣ್ಣಾಮುಚ್ಚಾಲೆಯಾಡುತ್ತಿರುವ ದೃಶ್ಯ ತೋರಿಸಿದ್ದು ನೆನಪಿರಬಹುದು ನಿಮಗೆ. ರೆಹಮಾನ್ ಮತ್ತು ಪ್ರಸೂನ್ ಐಡಿಯಾವಂತೆ ಇದು. ಆದರೆ ಇಲ್ಲಿ ಈಗ ಮಗ ಶಾಶ್ವತವಾಗಿ ಅಡಗಿ ಕುಳಿತಿರುವುದು ಮಾತ್ರ ದುರಂತ ಎನ್ನುತ್ತಾರೆ ಪ್ರಸೂನ್. ಹಾಗೆಯೇ ತಾರೇ ಜಮೀನ್ ಪರ್ ಚಿತ್ರದ ಸಂದರ್ಭ. ಮಗನನ್ನು ಬೋರ್ಡಿಂಗ್ ಸ್ಕೂಲ್‌ನಲ್ಲಿ ಬಿಟ್ಟು ಹೋಗುವ ತಾಯಿ. ಮಗು ತಾಯಿಯನ್ನು ನೋಡುತ್ತದೆ...ತಾಯಿಯ ಕಂಗಳಲ್ಲಿ ನೀರು. ಯಾರ ಭಾವನೆಯನ್ನು ಹಾಡಾಗಿಸಲಿ ನಾನು? ತಾಯಿಯದೋ ಮಗುವಿನದೋ? ನೀ ನನ್ನ ಕಂಗಳ ನಕ್ಷತ್ರದಂತೆ, ಬಹು ಪ್ರೀತಿ ನನಗೆ ನೀ ಎನಗೆ ಎಂದು ಬರೆಯಬಹುದಿತ್ತು. ಆದರೆ ಈ ಭಾವಗಳೆಲ್ಲ ಆ ದೃಶ್ಯದಲ್ಲೇ ಇವೆ. ಸೊ, ನಾನು ಆ ಕಂದನ ಹೇಳಲಾಗದ ಭಯಗಳಿಗೆ ಮಾತು ಕೊಡಲು ಬಯಸಿದೆ. ತನ್ನನ್ನು ತೊರೆಯಲಾಗುತ್ತಿದೆ ಎನ್ನುವಾಗಿನ ಭಯ...ಅಮ್ಮ ನಿನಗೆ ಗೊತ್ತೇನಮ್ಮ, ಕತ್ತಲೆಂದರೆ ಹೆದರುತ್ತೇನಮ್ಮ...


ನಿಮಗೆ ಗೊತ್ತಿದೆ, ಈ ಹಾಡು ಏನು ಮಾಡಿತು ಎಂಬುದೆಲ್ಲ.


ಈ ಸಂದರ್ಶನವನ್ನು ದಯವಿಟ್ಟು ಓದಿ. ಪುಸ್ತಕ ಸಿಗದಿದ್ದರೆ ಸೈಟಿಗೆ ಹೋಗಿ, (tehelka.com) ಇಡೀ ಸಂದರ್ಶನ ಅಲ್ಲಿ ಲಭ್ಯವಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, March 11, 2008

ಬದುಕು ಮತ್ತು ಮನುಷ್ಯ ಸಂಬಂಧಗಳ ವಿಶ್ಲೇಷಣೆ


ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ.

ಪ್ರಮುಖವಾಗಿ ಇಲ್ಲಿನ ಎಲ್ಲ ಕಥೆಗಳಲ್ಲಿ ಭಾವನೆಗಳ ಸ್ತರದಲ್ಲಿ ಮನುಷ್ಯ ಸಂಬಂಧಗಳನ್ನು ವಿಶ್ಲೇಷಿಸುವ ಮತ್ತು ಆ ಮೂಲಕ ಬದುಕನ್ನು ಅರಿಯುವ ಪ್ರಯತ್ನವೊಂದು ನಡೆಯುತ್ತದೆ. ಮನುಷ್ಯ ಸಂಬಂಧಗಳ ವಿಚಾರ ಬಂದಾಗ ಹೆಚ್ಚಿನ ಸಂಬಂಧಗಳು ಸುತ್ತುವುದು ಗಂಡು ಹೆಣ್ಣು ಸಂಬಂಧದ ಸುತ್ತವೇ ಎಂಬುದು ನಿಜವಾದರೂ ರಾಮಚಂದ್ರರು ಇದರಾಚೆಗೂ ತಮ್ಮ ಹರಹು ಚಾಚಿರುವುದು ಗಮನಾರ್ಹ. ಗಂಡು-ಹೆಣ್ಣು ಸಂಬಂಧವಿರಲಿ, ಬದುಕಿನ ಅಸಹಾಯಕ ಘಳಿಗೆಗಳಿರಲಿ, ಮನಸ್ಸನ್ನು ಕಾಡುವ, ಚುಚ್ಚುವ ಇನ್ಯಾವುದೇ ಹಳೆಯ ಸಂಗತಿಯಿರಲಿ ಅವು ಇಲ್ಲಿನ ನಿರೂಪಕ ಅಥವಾ ನಾಯಕ ಪಾತ್ರವನ್ನು ತನ್ನ ಇಡೀ ಬದುಕಿನ ತುಲನೆಗೆ ಹಚ್ಚುವುದು ಮತ್ತು ಆ ಮೂಲಕ ಒಂದು ವಿಶ್ಲೇಷಣೆಗೆ ಕಾರಣವಾಗುವುದು ಇಲ್ಲಿನ ಹೆಚ್ಚಿನ ಕಥೆಗಳ ಸಾಮಾನ್ಯ ಅಂಶ. ಈ ರೀತಿ ಈ ಕಥೆಗಳು ವರ್ತಮಾನದಿಂದ ಭೂತದತ್ತ ಸಾಗುತ್ತ, ಭಾವನೆಗಳನ್ನು, ನೋವುಗಳನ್ನು ತೋಡಿಕೊಳ್ಳುತ್ತ, ಸಂಬಂಧಗಳ ಅನೇಕ ಗೋಜಲುಗಳನ್ನು ಬಿಡಿಸಿಡಲು ಪ್ರಯತ್ನಿಸುತ್ತವೆ.

ಸಂಗತ(ರಘು, ಅವನ ಹೆಂಡತಿ ಮತ್ತು ನಿರೂಪಕ), ನಾ ನಿನ್ನ ಧ್ಯಾನದೊಳಿರಲು...(ರಾಮಚಂದ್ರ, ನಳಿನಿ ಮತ್ತು ರಮೇಶ), ಯಾರು ಹಿತವರು (ಅವಿನಾಶ್, ಮಾನಸಿ ಮತ್ತು ಮನು) ಕಥೆಗಳು ಸಂಬಂಧದ ತ್ರಿಕೋನವನ್ನು ಮೂಲ ಆಧಾರವಾಗಿಸಿಕೊಂಡು ಭಾವನೆಗಳನ್ನು ತಡಕುತ್ತ ದಕ್ಕದೇ ಹೋಗುವ ಸಂಬಂಧದ ಸಾತತ್ಯದ ಕೊರಗನ್ನು ತೋಡಿಕೊಳ್ಳುವ ಕಥೆಗಳು. ಇಲ್ಲಿ ಬರುವ ನಳಿನಿ, ಮಾನಸಿ ಮತ್ತು ಆಸರೆ ಕಥೆಯ ಅನಾಥೆ ಮೂವರೂ ಒಂದೇ ಬಗೆಯ ವ್ಯಕ್ತಿತ್ವವನ್ನು ಹೊಂದಿದವರು ಎಂಬ ಅಂಶ ಕುತೂಹಲಕರ. ಇವರ ಮೂಲ ಆಕರ್ಷಣೆ ಇರುವುದೇ ಗಂಡು ಹೆಣ್ಣು ಸಂಬಂಧದ ಕುರಿತು ಈ ಹೆಣ್ಣುಗಳಲ್ಲಿರುವ ವಿಶಿಷ್ಟ ಮತ್ತು ಕೊಂಚ ಕ್ರಾಂತಿಕಾರಕ ಅನಿಸುವ ನಿಲುವಿನಲ್ಲಿ. ಈ ಅಸಹಜ ಧೈರ್ಯ ಮತ್ತು ಮುನ್ನುಗ್ಗುವ ಗುಣಗಳ ಎದುರು ರಾಮಚಂದ್ರರ ನಿರೂಪಕ/ನಾಯಕ ಪಾತ್ರಗಳೇ ಸೊರಗಿದಂತಿರುವುದು ಮತ್ತು ಈ ನಿರೂಪಕ/ನಾಯಕ ಪಾತ್ರಗಳಿಗೆ ಇಂಥ ಸ್ವತಂತ್ರ ಮನೋಧರ್ಮದ, ವಿಶಿಷ್ಟ ವ್ಯಕ್ತಿತ್ವದ ನಾಯಕಿಯರ ಸುಪ್ತ ಆಕರ್ಷಣೆ ಕೂಡ ಇರುವುದು ಇಲ್ಲಿನ ಭಾವುಕ ಸ್ತರದ ನೋವುಗಳ ಮೂಲ ಎಳೆ. ಅಸಹಾಯಕ ಸ್ಥಿತಿ, ಸಂದಿಗ್ಧಗಳು, ಸಂಬಂಧಗಳ ನಡುವಿನ ಬಿಟ್ಟಪದಗಳ ಗೊಂದಲ ಇಲ್ಲಿ ಪ್ರಧಾನವಾದ ಸಮಾನ ಅಂಶಗಳು.

ಇಲ್ಲಿ ಇನ್ನೊಂದು ಬಗೆಯ ಕಥೆಗಳಿವೆ. ಇವು ವೃದ್ಧಾಪ್ಯದಿಂದಲೋ, ಕಾಯಿಲೆಯಿಂದಲೋ, ಪಾರ್ಶ್ವವಾಯುವಿನಂಥ ಪೀಡೆಯಿಂದಲೋ, ಸಾವಿನಿಂದಲೋ ಅಸಹಾಯಕರಾದ ಜೀವಗಳನ್ನಿಟ್ಟುಕೊಂಡು ಸಂಬಂಧಗಳನ್ನು, ಭಾವನೆಗಳ ಲೋಕವನ್ನು ತಡಕುವ ಕಥೆಗಳು. ಮೊತ್ತ (ರಾಮರಾಯರ ಪಾರ್ಶ್ವವಾಯು), ಸಮಾಧಿಯ ಮೇಲೊಂದು ಹೂವು (ಡಾ.ವಿಲಾಸ್ ಅಗಡಿಯ ಸಾವು), ಯಾತ್ರೆ (ಲಲಿತಕ್ಕನ ಆಸ್ಪತ್ರೆ ಪ್ರಕರಣ) ಕಥೆಗಳಲ್ಲಿ ಮನುಷ್ಯ ಸಂಬಂಧಗಳು ಈ ಆಕಸ್ಮಿಕ ವಿದ್ಯಮಾನಗಳೊಂದಿಗೆ ಪಡೆದುಕೊಳ್ಳುವ ಪಲ್ಲಟಗಳನ್ನು ಗಮನಿಸುವ ಮೂಲಕ ಇವು ಭಾವನೆಗಳ ಸಾಚಾತನವನ್ನು ಒರೆಗೆ ಹಚ್ಚುತ್ತವೆ.

ನೆನಪುಗಳು ಮತ್ತು ಪ್ರಾಪ್ತಿ ಕಥೆಗಳಲ್ಲಿ ಸಾಕಿ ಸಲಹಿದವರನ್ನು ಮರೆತು ಬಿಡುವ ಹೊಸ ತಲೆಮಾರಿನ ಕುರಿತು ವಿಭಿನ್ನ ಬಗೆಯ ಎರಡು ನೋಟಗಳಿವೆ. ಪ್ರಾಪ್ತಿಯಲ್ಲಿ ದತ್ತು ಮಗ ದೂರಾದ ನೋವು ಇಡೀ ಬದುಕಿನ ತುಲನೆಗೆ ಕಾರಣವಾದರೆ ನೆನಪುಗಳು ಕಥೆಯಲ್ಲಿ ತಾನು ಮರೆತುಬಿಟ್ಟ ತನ್ನನ್ನು ಸಾಕಿ ಸಲಹಿದವರ ನೆನಪುಗಳು ನಿರೂಪಕನನ್ನು ಹಿಂಡುವ, ಆ ಮೂಲಕ ಬದುಕಿನ ಹಿನ್ನೋಟಕ್ಕೆ ಕಾರಣವಾಗುವ ಚಿತ್ರಣವಿದೆ.

ಈ ಎಲ್ಲ ಬಗೆಯ ಕಥೆಗಳ ಅಂತಃಸ್ಸತ್ವವನ್ನೂ ತನ್ನ ಒಡಲಿನಲ್ಲಿ ಸ್ವಲ್ಪಮಟ್ಟಿಗೆ ಹೊಂದಿರುವ ಕಥೆ ನಿಕ್ಷೇಪ. ಗಣಿಗಾರಿಕೆಯ ವೃತ್ತಿಯನ್ನು ಇಲ್ಲಿ ಒಂದು ಸಾರ್ಥಕ ರೂಪಕವನ್ನಾಗಿ ಬಳಸಿದಂತೆ ಕಂಡರೂ ಕಥೆಯನ್ನು ಹೇಳುವ ವಿಧಾನದಲ್ಲಿ ನುಸುಳಿದಂತಿರುವ ಯಾಂತ್ರಿಕತೆ, ವರದಿಯ ಧಾಟಿ, ಎಲ್ಲವನ್ನೂ ಸಣ್ಣಕಥೆಯ ಮಿತಿಯೊಳಗೆ ತಂದಿಡುವ ಧಾವಂತ ಈ ಕಥೆಯ ಸೌಂದರ್ಯವನ್ನು ಸ್ವಲ್ಪಮಟ್ಟಿಗಾದರೂ ಮುಕ್ಕಾಗಿಸಿದಂತೆ ಕಾಣುತ್ತದೆ. ರಾಮಚಂದ್ರರು ತಮ್ಮ ಕಥೆಯ ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ವಿಧಾನ ಈ ಕಥೆಯಲ್ಲಿ ಸಾಕಷ್ಟು ಪೋಷಣೆ ಪಡೆಯದಿರಲು ಇಲ್ಲಿನ ಕಥಾನಕದ ಹರಹು ದೊಡ್ಡದಿರುವುದೇ ಕಾರಣವಿದ್ದೀತು.

ಪ್ರಾಪ್ತಿ ಕಥೆಯನ್ನು ಗಮನಿಸಿದರೆ ರಾಮಚಂದ್ರರು ಎಷ್ಟು ಚೆನ್ನಾಗಿ ತಮ್ಮ ಪಾತ್ರಗಳನ್ನು, ಸನ್ನಿವೇಶಗಳನ್ನು ವಿವರಗಳಲ್ಲಿ ಕಟ್ಟಬಲ್ಲರು ಎಂಬುದು ಅರ್ಥವಾಗುತ್ತದೆ. ಇಲ್ಲಿನ ಮುಖ್ಯ ಕಥಾನಕ ಮತ್ತು ವಸ್ತು ಸದ್ಯದ ಸನ್ನಿವೇಶಕ್ಕೆ ಮತ್ತು ಅಲ್ಲಿನ ಮನಸ್ಥಿತಿಗೆ ಸಂಬಂಧವೇ ಇಲ್ಲದಂಥ ಸಂದರ್ಭದಲ್ಲೂ ಎಲ್ಲ ಭಾವ ತೀವೃತೆಯೊಂದಿಗೆ ಹೇಳಬೇಕಿರುವುದನ್ನು ಹೇಳುವುದು ರಾಮಚಂದ್ರರಿಗೆ ಸಾಧ್ಯವಾಗಿದೆ.

ಸಮಾಧಿಯ ಮೇಲೊಂದು ಹೂವು ಕಥೆಯಲ್ಲಿ ಕಾಣುವ ಕಥೆ ಹೇಳುವ ವಿಧಾನವನ್ನು ರಾಮಚಂದ್ರರ ಅಸಂದಿಗ್ಧ, ನಿರುದ್ವೇಗದ ಬರವಣಿಗೆಯ ಉದಾಹರಣೆಯನ್ನಾಗಿ ಪರಿಗಣಿಸಬಹುದು, ಅಷ್ಟು ನಿರಾಳವಾಗಿ ಅವರು ಒಂದು ಹೆಣವನ್ನಿಟ್ಟುಕೊಂಡು ಕಥಾನಕವನ್ನು ಕಟ್ಟುತ್ತ ಹೋಗಿದ್ದಾರೆ. ಕೊನೆಯಲ್ಲಿ ಹಲವು ವ್ಯಕ್ತಿಗಳ ನಾಟಕೀಯ ವರ್ತನೆಯ ಹೊರತಾಗಿಯೂ ಈ ಕಥಾನಕದ `ಚಲನೆ' ಮನಸ್ಸಿನಲ್ಲಿ ನಿಲ್ಲುವಂತಿದೆ. ಹಾಗೆ ಇಲ್ಲಿ ವಿವರಗಳಲ್ಲಿ ಆ ಸಂದರ್ಭವನ್ನು ಅತ್ಯಂತ ಸಹಜವಾಗಿ ರಾಮಚಂದ್ರರು ಕಟ್ಟಿಕೊಡುತ್ತಾರೆ. ಆದರೆ ಮೊತ್ತ ಕಥೆಯ ಹಾಗೆಯೇ ಇಲ್ಲಿ ಕೂಡಾ ಕಥೆಯ ಮುಕ್ಕಾಲು ಭಾಗದ ಚಲನೆಗೆ ವ್ಯತಿರಿಕ್ತವಾಗಿ ಕೊನೆಯನ್ನು ಪೂರ್ವಯೋಜಿತ ದಿಕ್ಕಿಗೆ ಒಂದು ಬಗೆಯ ಉದ್ವೇಗಯುತ ಧಾವಂತದಲ್ಲಿ ಕೊಂಡೊಯ್ದ ಅನುಭವವಾಗುತ್ತದೆ. ಆದರೆ ಮೊತ್ತ ಕಥೆ ತೀರ ಸಾಧಾರಣವಾದ ಅಂತ್ಯದತ್ತ ಹೊರಳುವುದು ನಿರಾಸೆ ಹುಟ್ಟಿಸಿದರೆ ಈ ಮಿತಿಯನ್ನು ಮೀರುವಂತೆ ಸಮಾಧಿಯ ಮೇಲೊಂದು ಹೂವು ಕಥೆಯನ್ನು ಕಟ್ಟಿದ ವಿಧಾನ ಮನಸ್ಸಿನಲ್ಲಿ ಉಳಿಯುತ್ತದೆ.

ಸಂಗತ ಕಥೆ ಬಹಳಷ್ಟನ್ನು ಓದುಗರ ಊಹೆಗೆ ಬಿಟ್ಟುಕೊಟ್ಟೇ ತನ್ನ ಪರಿಣಾಮಕಾರತ್ವವನ್ನು ಪ್ರಯೋಗಕ್ಕೊಡ್ಡಿರುವಂತೆ ಕಾಣುತ್ತದೆ. ಈ ಪ್ರಯೋಗ ಯಶಸ್ವಿಯಾದರೂ ಒಟ್ಟಾರೆಯಾಗಿ ಈ ಪ್ರಯೋಗ ಯಾವ ಹೊಸ ಒಳನೋಟವನ್ನಾಗಲೀ, ಕಾಣ್ಕೆಯನ್ನಾಗಲೀ ದಕ್ಕಿಸುವುದಿಲ್ಲ.

ಯಾತ್ರೆ ಕಥೆ ಕೂಡ ಹಲವಾರು ಕಾರಣಗಳಿಗಾಗಿ ಮನಸೆಳೆಯುತ್ತದೆ. ಬಹಳಮಟ್ಟಿಗೆ ರಾಮಚಂದ್ರರು ಇಲ್ಲಿ ತಾವು ಸರಿದುನಿಂತು ಕಥೆಯನ್ನು ವಿವರಗಳಲ್ಲಿ ಹಿಡಿದಿಡುತ್ತಾ ಹೋಗುತ್ತಾರೆ. ಹಿತಮಿತವಾದ ವಿವರಗಳಲ್ಲಿ ಇಲ್ಲಿನ ಕಥೆ ಮೂಡಿಬಂದಿದೆ ಕೂಡ. ಹಾಗಾಗಿ ಈ ಕಥೆ ವಸ್ತು, ತಂತ್ರ, ಪರಿಣಾಮಕಾರತ್ವ ಎಲ್ಲ ವಿಚಾರದಲ್ಲೂ ಉತ್ತಮವಾಗಿ ಬಂದಿದೆ. ಆದರೂ "ನೊ, ನೊ, ವಿ ಡೋಂಟ್ ನೋ ಎನಿಥಿಂಗ್, ವಿ ಡೋಂಟ್ ಬಾದರ್ ಟೂ" ಎನ್ನುವಂಥ ಮಾತುಗಳಿಗೆ ತಮ್ಮ ಅರ್ಥ/ವಿವರಣೆಯನ್ನು ಸೇರಿಸುವ ಮೋಹಕ್ಕೆ ವಶವಾಗದ ಸಂಯಮವನ್ನು ರಾಮಚಂದ್ರರು ಇನ್ನೂ ಸಾಧಿಸಬೇಕಿದೆ ಅನಿಸುತ್ತದೆ. ಸೂಚ್ಯವಾಗಿ ಹೇಳಿರುವುದನ್ನೆ ಮತ್ತೆ ವಾಚ್ಯವಾಗಿಸುವುದು ಹಾಗಲ್ಲದೇ ಅದನ್ನು ಸಮರ್ಥವಾಗಿ ಸಂವಹನ ಮಾಡಿದಂತಾಗದೇನೋ ಎಂಬ ಅನುಮಾನ ರಾಮಚಂದ್ರರಲ್ಲಿರುವುದನ್ನು ಕಾಣಿಸುತ್ತದೆ.

ಸಹಜವಾಗಿಯೇ ಈ ಕಥೆಗಳು ಭಾವಲೋಕದ ಸೃಷ್ಟಿಯಾಗಿರುವುದರಿಂದ ಕೆಲವು ಕಲ್ಪನೆಗಳು, ಸನ್ನಿವೇಶದ ಪರಿಕಲ್ಪನೆಗಳು ಫ್ಯಾಂಟಸಿಯ ಲೇಪದಿಂದಲೂ, ಆತ್ಮರತಿಯ ಅತಿಯಿಂದಲೂ ಸೊರಗಿವೆ. ಇಲ್ಲಿನ ನಾಯಕಿಯರ ಪಾತ್ರ ಚಿತ್ರಣದಲ್ಲಿ ನುಸುಳಿರುವ ಸ್ವಲ್ಪಮಟ್ಟಿನ ನಾಟಕೀಯತೆ, ಅಸಹಜತೆ ಕಥೆಯ ಪ್ರಾಮಾಣಿಕತೆಯನ್ನು ಕುಗ್ಗಿಸುವಂತಿವೆ. ಕೆಲವು ಕಡೆ ವಿವರಗಳು ಭಾಷೆಯಲ್ಲಿ ಪರಿಪೂರ್ಣ ಬಿಂಬಗಳಾಗಿ ಮೈತಾಳುವ ಮೊದಲೇ ಇನ್ನೊಂದಕ್ಕೆ ಜಿಗಿಯುವುದರಿಂದ ಓದುಗರ ಮನಸ್ಸಿನಲ್ಲಿ ಅವು ಯಾವುದೇ ವಾತಾವರಣವನ್ನು ಸೃಜಿಸುವುದಾಗದೇ ಪರಿಣಾಮದಲ್ಲಿ ಯಶಸ್ವಿಯಾಗುವುದಿಲ್ಲ. ರಚನೆಯ ಹಂತದ ಈ ಸಣ್ಣಪುಟ್ಟ ದೋಷಗಳನ್ನು ಮೀರಬಲ್ಲ ಅರಿವು, ಸಾಮರ್ಥ್ಯ ಎರಡೂ ರಾಮಚಂದ್ರರಲ್ಲಿ ಇದೆ ಎನ್ನುವುದಕ್ಕೆ ಸಂಕಲನದಲ್ಲೇ ನಮಗೆ ಸಾಕ್ಷಿಗಳು ಸಿಗುತ್ತವೆ ಎನ್ನುವುದು ಕೂಡ ನಿಜ.

ಅನೇಕ ಉತ್ತಮ ಅಂಶಗಳು ಇಲ್ಲಿನ ಬೇರೆ ಬೇರೆ ಕಥೆಗಳಲ್ಲಿ ಕಂಡುಬಂದರೂ ಅವುಗಳೆಲ್ಲ ಒಂದು ಹದವಾದ ಪಾಕವಾಗಿ ಎಲ್ಲ ಕಥೆಗಳಲ್ಲೂ ಕಾಣಿಸಿಕೊಂಡಿದ್ದರೆ ಎಂಬ ಆಸೆ, ನಿರೀಕ್ಷೆಯನ್ನು ಹುಟ್ಟಿಸುವ ರಾಮಚಂದ್ರರ ಈ ಕಥೆಗಳು ಮುಂದೆ ಬರಬೇಕಿರುವ ಅವರ ಹೊಸ ಕಥೆಗಳ ಬಗ್ಗೆ ಹೆಚ್ಚಿನ ಒಂದು ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಸಫಲವಾಗಿವೆ ಎಂದು ಖಂಡಿತವಾಗಿ ಹೇಳಬಹುದಾಗಿದೆ.

ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ)

ಲೇಖಕರು: ಸಿ.ಎನ್.ರಾಮಚಂದ್ರ

ಪ್ರಕಾಶಕರು: ಸುಮುಖ ಪ್ರಕಾಶನ, 174ಇ/28,1ನೆಯ ಮಹಡಿ, 1ನೆಯ ಮುಖ್ಯ ರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ಗೇಟ್ ಸರ್ಕಲ್, ಬೆಂಗಳೂರು-560 023. ಪುಟ ಸಂಖ್ಯೆ: 120 ಬೆಲೆ: ಅರವತ್ತು ರೂಪಾಯಿ.

(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, March 1, 2008

ಮನದ ಮುಂದಣ ಮಾಯೆ

ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿರುವ ಕೃತಿಯ ಕುರಿತು ಒಂದು ಟಿಪ್ಪಣಿ ಇಲ್ಲಿದೆ.

ಪ್ರಹ್ಲಾದ ಅಗಸನಕಟ್ಟೆ ನಿಜವಾದ ಅರ್ಥದಲ್ಲಿ ಒಬ್ಬ ಸಹಜ ಕಥೆಗಾರ. ಅವರ ಮನದ ಮುಂದಣ ಮಾಯೆ ಕಥೆಯಲ್ಲಿ ಒಂದು ಮಾತು ಬರುತ್ತದೆ. "ಹಿಂಗಲ್ರಿ, ಕತಿನ ಹಿಂಗ ಶುರು ಮಾಡ್ರಿ... ಕತಿ ಅಂದರ ಏನ್ ತಿಳ್ಕಂಡ್ರಿ...ಕಂಡದ್ದನ್ನ ಕಂಡಾಂಗ ಬರೆಯೋದಲ್ಲ...ಕಂಡದ್ದರ ಬೆನ್ನತ್ತಿ ಕಾಣದ್ದನ್ನ ಹುಡ್ಕೋದು. ಕತಿ ಬರೆಯಾಕ ನೀವು ಹೋಗಬ್ಯಾಡ್ರಪ್ಪ...ಕತಿನಾ ನಿಮ್ಮನ್ನ ಬರೆಸಬೇಕು..." ಅಗಸನ ಕಟ್ಟೆಯವರ ಕಥೆಗಳ ಆಶಯ ಮತ್ತು ಅವರ ಕಥಾವಿಧಾನದ ತಂತ್ರಗಾರಿಕೆಯನ್ನು ಈ ಮಾತುಗಳು ಸೂಚಿಸುವಂತಿವೆ.

ಅಗಸನಕಟ್ಟೆಯವರ ಕಥೆಗಳನ್ನು ಓದುತ್ತ ಹೋದಂತೆಲ್ಲ ಇವರ ಕೈಯಲ್ಲಿ ಏನಿಟ್ಟರೂ ಅದೊಂದು ಕಥೆಯಾಗುವ ಮಾಯಕಕ್ಕೆ ಬೆರಗು ಹುಟ್ಟದಿರದು. ಅದಕ್ಕೆ ಒಂದು ಕಾರಣ ಅವರ ಚಿತ್ರಕ ಶೈಲಿಯ ಬರವಣಿಗೆ. ಹುಬ್ಬಳ್ಳಿ, ಧಾರವಾಡ ಮತ್ತು ಬಳ್ಳಾರಿಯ ಕನ್ನಡದ ಸೊಗಡು ಹೊಂದಿದ ಅವರ ಆಕರ್ಷಕ ಭಾಷೆ. ಹಾಗೆಯೇ, ಅಗಸನಕಟ್ಟೆಯವರು ತಮ್ಮ ಎಲ್ಲಾ ಕಥೆಗಳಲ್ಲೂ ಸಾಧಿಸುವ ಒಂದು ಆಪ್ತ ಸ್ತರದ ಸಂವಹನ ಸಾಧ್ಯತೆ. ನಮ್ಮ ನಿಮ್ಮ ನಡುವಿನ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಬಗ್ಗೆ ಹೇಳಹೊರಡುವ ಮುನ್ನ ಇವರು ನಮ್ಮನ್ನು ತಮ್ಮ ಜೊತೆ ಕೊಂಡೊಯ್ಯುವ ಒಂದು ವಿಶಿಷ್ಟ ತಂತ್ರ ಇದು. ಕಥೆ ತೊಡಗುವ ಮುನ್ನವೇ ಅದಕ್ಕೆ ಬೇಕಾದ ಒಂದು ಆಪ್ತ ವಲಯವನ್ನು ಕಥೆಯ ಆರಂಭದಲ್ಲೇ ನಿರ್ಮಿಸಿಕೊಂಡು ಬಿಡುವ ಅಗಸನಕಟ್ಟೆಯವರು ಮುಂದೆ ಬರೆದಿದ್ದೆಲ್ಲ ಸುಂದರ ಕಥೆಯಾಗುವ ವಿಧಾನ ಅಚ್ಚರಿ ಹುಟ್ಟಿಸುವಂಥದು.

ಇವೆಲ್ಲ ಸೇರಿ ಅಗಸನಕಟ್ಟೆಯವರ ಕಥೆಗಳಲ್ಲಿನ ಚಿತ್ರಕ ವಿವರಗಳನ್ನು ಜೀವಂತಗೊಳಿಸಿವೆ. ಅತ್ಯಂತ ಸಂಯಮದಿಂದ, ಸೂಕ್ಷ್ಮಾತಿಸೂಕ್ಷ್ಮ ವಿವರಗಳಲ್ಲಿ ಅವರು ಒಂದು ವಾತಾವರಣವನ್ನೇ ಕಟ್ಟಿಕೊಡಬಲ್ಲವರು. ಮಾಸ್ತಿಯವರ ಕಥೆಗಳಲ್ಲಿ, ಕಾರಂತರ ಕಾದಂಬರಿಗಳಲ್ಲಿ ಕಂಡುಬರುವ ಈ ದೇಶೀ ಅಂಶ ಅಗಸನಕಟ್ಟೆಯವರಿಗೆ ಸಹಜವಾಗಿ ಸಿದ್ಧಿಸಿದೆ. ಅವರ ಎಲ್ಲಾ ಕಥೆಗಳಲ್ಲಿ ಈ ಅಂಶ ಗಾಢವಾಗಿ ನಮ್ಮ ಅನುಭವಕ್ಕೆ ಬರುತ್ತದೆ. ಕಥೆಯಾಗಿ ಅದು ಪರಿಣಾಮಕಾರಿಯಾಗಿರಲಿ, ಆಗದಿರಲಿ, ಅಗಸನಕಟ್ಟೆಯವರು ಕಟ್ಟಿಕೊಡುವ ಜಗತ್ತು ಮಾತ್ರ ನಮಗೆ ಆಪ್ತವಾಗುವಷ್ಟು ನಿಜವಾಗಿ ಮೂಡಿರುತ್ತದೆ.

ಅಗಸನಕಟ್ಟೆಯವರ ಕಥೆಗಳು ಮಹತ್ವಾಕಾಂಕ್ಷೆಯ ರಚನೆಗಳೇ. ತಮ್ಮ ಕಥೆಗಳ ಆಕೃತಿಯ ಕಡೆಗೆ ಅವರು ಕೊಡುವ ಗಮನ ಕಡಿಮೆಯದಲ್ಲ. ಅವರ ಕಥೆಗಳಲ್ಲಿ ಒಂದು ಸಾಮಾಜಿಕ ಅರ್ಥಪೂರ್ಣತೆ, ತಾತ್ವಿಕವಾದೊಂದು ಆಯಾಮ ಸಹಜವಾಗಿಯೇ ದಕ್ಕಿದಂತಿದ್ದರೂ ಅವು ಅಗಸನಕಟ್ಟೆಯವರು ಸಾಕಷ್ಟು ಯೋಚಿಸಿ, ಯೋಜಿಸಿ ಸೃಜಿಸಿದವುಗಳೇ. ಆದರೂ ಈ ಕಥೆಗಳಿಗೆ ಅಜರಾಮರವಾಗಿ ನಿಲ್ಲುವ, ಶ್ರೇಷ್ಠ ಕಥೆಗಳೆನಿಸಿಕೊಳ್ಳುವ ಧಾವಂತವಿಲ್ಲದಿರುವುದನ್ನು ಗಮನಿಸಬೇಕಿದೆ. ಹಾಗಾಗಿ ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಬಿಡಿಬಿಡಿಯಾಗಿ ಓದಿದಾಗ ಅಗಸನಕಟ್ಟೆಯವರ ಕಥೆಗಳ, ಕಥಾಲೋಕದ ಶಕ್ತಿಯ ಪೂರ್ಣ ಪರಿಚಯ ಸಿಗುವುದಿಲ್ಲ. ಅವು ವಿಶೇಷವಾಗಿ ನಮ್ಮನ್ನು ಕಲಕುವ, ಹಲವು ದಿನಗಳ ಕಾಲ ಕಾಡುವ ಕಸು ಹೊಂದಿರುವ ಕಥೆಗಳೆಂದು ಅನಿಸುವುದಿಲ್ಲ. ಮೆಲುದನಿಯ, ಯಾವುದನ್ನೂ ವಿಶೇಷವಾಗಿ ಒತ್ತಿ ಹೇಳದ ಈ ಕಥೆಗಳು ಒಟ್ಟಾಗಿ ನಿರ್ಮಿಸುವ ಒಂದು ಲೋಕವನ್ನು ಅರಿಯಲು ಇವುಗಳನ್ನು ಸಂಕಲನದಲ್ಲಿಯೇ ಓದಬೇಕು. ಆಗ ಅಗಸನಕಟ್ಟೆಯವರ ಕಥೆಗಳ ಶಕ್ತಿ ಅಥವಾ ಅದಕ್ಕಿಂತ ಅವರ ಕಥಾಜಗತ್ತಿನ ಮಾಯಕತೆ ನಮ್ಮ ಅರಿವಿಗೆ ಬರುತ್ತದೆ. ನಮ್ಮ ನಿಮ್ಮ ನಡುವಿನ ಸಾಮಾನ್ಯರ ಸಾಮಾನ್ಯ ಸಂಗತಿಗಳ ಬಗ್ಗೆ ಬರೆಯುತ್ತಲೇ, ವಿವರಿಸುತ್ತಲೇ ಯಾವುದೋ ಒಂದು ಒಳನೋಟ, ಯಾವುದೋ ಅನೂಹ್ಯ ತೊಳಲಾಟ, ಅಮೂರ್ತ ಕಾಣ್ಕೆಗಳ ಮಿಂಚು ಹರಿಸಬಲ್ಲ ಕಥೆಗಳನ್ನು ಅಗಸನಕಟ್ಟೆಯವರು ಕೊಡುತ್ತ ಬಂದಿದ್ದಾರೆ. ಅದೃಶ್ಯದ ಹಾದಿಯಲ್ಲಿ, ವಿಶ್ವನೆಂಬ `ವಿಶ್ವ', ತಾಜ್‌ಮಹಲ್, ಪ್ರಕ್ಷುಬ್ಧ ಅಲೆಗಳು, ಪಾರಿವಾಳ ಮತ್ತು ಪಿಶಾಚಿಯ ಪ್ರಶ್ನೆ, ನಾನು, ನನ್ನ ಗೆಳೆಯ ಮತ್ತು ಅಂಬೇಡ್ಕರ್, ಯಾದವಾಡನ ಪಾದುಕಾ ಪ್ರಕರಣ ಹೀಗೆ ಅನನ್ಯವಾದ ಕಥೆಗಳನ್ನು ಗಮನಿಸಿದರೆ ಅಗಸನಕಟ್ಟೆಯವರ ಕಥೆಗಳ ಶಕ್ತಿಯ ಅರಿವು ನಮಗಾಗುತ್ತದೆ.

ತಮ್ಮ ಅತ್ಯುತ್ತಮ ಎನ್ನಬಹುದಾದ ಕಥೆಗಳಲ್ಲಿ ಅಗಸನಕಟ್ಟೆಯವರು ಬಳಸಿದ ಸಾರ್ಥಕ ಪ್ರತಿಮೆಗಳು ನಮ್ಮ ಗಮನ ಸೆಳೆಯುತ್ತವೆ. ಆದರೆ ಹೀಗೆ ಪ್ರತಿಮೆಗಳನ್ನು, ರೂಪಕಗಳನ್ನು ಬಳಸಿಕೊಂಡು ಕಥೆ ಹೇಳುವುದರಲ್ಲಿ ಅಗಸನಕಟ್ಟೆಯವರಿಗೆ ಹೆಚ್ಚಿನ ಒಲವಿರುವಂತೆ ಕಾಣುವುದಿಲ್ಲ. ಕೆಲವೊಂದು ಕಥೆಗಳಲ್ಲಂತೂ ಅವರೇ ಅಂಥ ಪ್ರತಿಮಾ ವಿಧಾನವನ್ನು ವಾಚ್ಯಗೊಳಿಸಿ ಒಡೆದಿರುವುದೂ ಇದೆ. ಉದಾಹರಣೆಗೆ ಈ ಸಂಕಲನದ ಮೊದಲ ಕಥೆ ಪಾರಿವಾಳ ಮತ್ತು ಪಿಶಾಚಿಯ ಪ್ರಶ್ನೆ ಕಥೆಯನ್ನು ಗಮನಿಸಬಹುದು. ಭಾವಕ್ಕಿಂತ ಬುದ್ಧಿಯನ್ನು, ತರ್ಕವನ್ನು ನೆಚ್ಚುವ ಇವರು ಸತ್ಯವನ್ನು ಭಾವಸ್ತರದಲ್ಲಿ ಕಾಣಿಸಿ ಕೈತೊಳೆದುಕೊಳ್ಳುವವರಲ್ಲ. ಅದನ್ನು ವಾಸ್ತವದ ಸುಡುಬಿಸಿಲಿನಲ್ಲಿಟ್ಟು ಬಾ ನೋಡಿಲ್ಲಿ ಎನ್ನುವವರು.

ಇದ್ದುದರಲ್ಲಿ ಎನ್ಕೌಂಟರ್ ಕಥೆ ಭಾವುಕ ನೆಲೆಯಲ್ಲೇ ಮುಗಿಯುತ್ತ ಓದುಗನನ್ನು ತಟ್ಟಲು ಯತ್ನಿಸುವ ಕಥೆ. ಅಗಸನಕಟ್ಟೆಯವರ ಕಥೆಗಳಲ್ಲಿ ಸ್ವಲ್ಪ ವಿಶಿಷ್ಟವಾದ ಬಗೆಯ ಸ್ವಗತದಂಥ, ಆತ್ಮನಿವೇದನೆಯಂಥ ಧಾಟಿಯಲ್ಲಿರುವ ಕಥೆ ಎನ್ಕೌಂಟರ್. ಇಲ್ಲಿ ಇಬ್ಬರು ಗೆಳೆಯರ ಮುಖಾಮುಖಿ ಇದೆ. ಒಬ್ಬ ಕ್ರಿಯೆಯಲ್ಲಿ ಕ್ರಾಂತಿಯನ್ನು ಕಾಣುವವನು, ಇನ್ನೊಬ್ಬ ಮಾತಿನಲ್ಲಷ್ಟೇ ಕ್ರಾಂತಿಯ ಬಣ್ಣಗಾರಿಕೆಯನ್ನು ತೋರಿಸಿದವನು. ಈತನ ಆದರ್ಶ, ಆಶಯ ಅಪ್ರಾಮಾಣಿಕವಲ್ಲ, ಆದರೆ ತನ್ನ ಮಿತ್ರನಂತೆ ಎಲ್ಲವನ್ನೂ ತೊರೆದು ಕ್ರಾಂತಿಯ ಹಂಬಲಕ್ಕಾಗಿ ಬದುಕನ್ನು ಸಮರ್ಪಿಸಲಾರದವನು. ಅಷ್ಟರಮಟ್ಟಿಗೆ ಒಬ್ಬನಿಗೆ ತನ್ನ ಸ್ವಂತದ ಸುಖ ಮುಖ್ಯ, ಅದು ದಕ್ಕಿದರೆ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಕೊಳ್ಳಬಲ್ಲ. ಆದರೆ ಮಿತ್ರನಿಗೆ ಹಾಗಲ್ಲ. ಅವನಿಗೆ ಬೇಕಾದುದೆಲ್ಲವೂ ಇತ್ತು, ಆತ ಶ್ರೀಮಂತ. ಆದರೆ ತನ್ನ ಸುತ್ತಲಿನವರ ಬದುಕಿನ ನೋವು, ಸಂಕಷ್ಟ, ಶೋಷಣೆ, ಬಡತನ ಅವನನ್ನು ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಕೊಳ್ಳಲು ಬಿಡುತ್ತಿಲ್ಲ. ಮೇಲ್ನೋಟಕ್ಕೆ ನಕ್ಸಲ್ ಚಳುವಳಿಯ ಪರವಾಗಿರುವ ವಸ್ತುವಿದು ಅನಿಸಿದರೂ ಇದನ್ನು ಹಾಗೆ ಸೀಮಿತಗೊಳಿಸಿಕೊಂಡು ನೋಡುವುದೇ ಓದಿನ ಒಂದು ಮಿತಿಯಾದೀತು. ಆದರೂ ಸದ್ಯದ ವಸ್ತುಸ್ಥಿತಿ ಇದನ್ನು ತೆರೆದ ಮನಸ್ಸಿನಿಂದ ಕಾಣಲು ಬೇಕಾದ ಮನಸ್ಥಿತಿಯನ್ನು ಉಳಿಸಿದೆಯೆ ಎನ್ನುವುದು ಪ್ರಶ್ನೆ ಇದ್ದೇ ಇದೆ.

ನಾನು, ನನ್ನ ಗೆಳೆಯ ಮತ್ತು ಅಂಬೇಡ್ಕರ್ ಕಥೆಯ ಸಹಜ-ಪ್ರಾಮಾಣಿಕ-ಸಂಯಮದ ನಿರೂಪಣೆಯೇ ಮೂಲಾಧಾರವಾಗಿ ವಿವರಗಳು ಕಥೆಗೆ ದಕ್ಕಿಸಿಕೊಡುವ ಹಲವು ಆಯಾಮಗಳ ವಿಶಾಲ ವ್ಯಾಪ್ತಿ ಮತ್ತು ಇಷ್ಟಿದ್ದೂ ಈ ಸುಂದರ ಕಥೆಯ ಉದ್ದೇಶರಾಹಿತ್ಯದ ಧಾಟಿ - ಈ ಕಥೆಯನ್ನು ವಿಶಿಷ್ಟವಾಗಿಸಿದೆ. ಈ ಕಥೆಯಲ್ಲಿ ಬರುವ ನಿರೂಪಕನ ಭಾಷಣ, ಎಂ.ಎಲ್.ಎ. ಸಾಹೇಬರ ಭಾಷಣ ಮತ್ತು ಗೆಳೆಯನ ಭಾಷಣ ಮೂರರಲ್ಲೂ ಬರುವ ದಲಿತರ ಬದುಕಿನ ಚಿತ್ರಗಳು; ಎದುರೇ ಇರುವ ಆಲದ ಮರ ಇವುಗಳಿಗೆಲ್ಲ ಸಾಕ್ಷಿಯೋ ಎಂಬಂತೆ ನಿಂತಿರುತ್ತ ಆ ಇಡೀ ವಾತಾವರಣ ಹುಟ್ಟಿಸುವ ಸೂಕ್ಷ್ಮ ವಿಷಣ್ಣತೆಗೆ ಓದುಗ ಮುಖಾಮುಖಿಯಾಗುವಾಗ ಹುಟ್ಟುವ ತಲ್ಲಣಗಳಿಗೆ ಅನುಕೂಲಕರವಾದ ಒಂದು ನಿಧಾನಗತಿ ಕಥಾನಕದ ಓಟದಲ್ಲಿರುವುದು ಕಥೆಯ ಯಶಸ್ಸಿಗೆ ಪ್ರಮುಖ ಕಾರಣ ಎನಿಸುತ್ತದೆ. ಮೈಕುಗಳ ಮುಂದೆ ಆಡುವ ಮಾತು ಮತ್ತು ರಾತ್ರಿಯ ಗುಂಡು ಪಾರ್ಟಿಯಲ್ಲಿ ನಡೆಯುವ ಅವೇ ಮಾತುಗಳ ಅನಧಿಕೃತ ವಿಶ್ಲೇಷಣೆಯಲ್ಲಿ ತೆರೆದುಕೊಳ್ಳುವ ಆ ಮಾತುಗಳ ಹಿಂದಿರುವ ಸಂಕೀರ್ಣತೆ ಇಲ್ಲಿನ ವಸ್ತುವಿಗೆ ಹಲವು ಆಯಾಮಗಳ ಒಳನೋಟವನ್ನು ದಕ್ಕಿಸಿದೆ. ಹಾಗೆಯೇ ಮೂರನೆಯ ಭಾಗದ ಸರಳ ಪ್ರಸಂಗ ಕೊಡುವ ಹೊಸ ದರ್ಶನ ಎಲ್ಲವನ್ನೂ ಹೊಸದಾಗಿ ವಿಶ್ಲೇಷಿಸ ಬೇಕಾದ, ಮರು ವ್ಯಾಖ್ಯಾನಿಸ ಬೇಕಾದ ಅಗತ್ಯವಿದೆಯೇನೋ ಎನಿಸುವಂತಿದೆ. ಒಂದು ವೇದಿಕೆಯ ಮೇಲೆ, ಇನ್ನೊಂದು ರಾತ್ರಿಯ ನಿಶೆಯ ಅಮಲಿನಲ್ಲಿ ಮತ್ತು ಕೊನೆಯಲ್ಲಿ ಕೇವಲ ಮನುಷ್ಯರ ಮನೆವಾರ್ತೆಯ ನೆಲೆಯಲ್ಲಿ ನಡೆಯುವ ಪ್ರಸಂಗಗಳು ಒಂದೇ ವಿಚಾರಕ್ಕೆ ಸಂಬಂಧಿಸಿಯೂ ಅಲ್ಲವೇನೋ ಎಂಬಂತಿರುವುದು ಕಥೆಗೆ ವಿಶೇಷ ಸಂಕೀರ್ಣತೆಯನ್ನೂ, ತೇಜಸ್ಸನ್ನೂ ನೀಡಿರುವುದು ವಿಶೇಷ. ಇಂಥ ಹದ ಕಥೆಗೆ ದಕ್ಕುವುದು ಯಾತರಿಂದ ಎಂಬುದನ್ನು ವಿವರವಾಗಿ ಗಮನಿಸುವ ಅಗತ್ಯವಿದೆ.

ಅಂದಣದ ಮ್ಯಾಲ ಹಾರ್ಯಾವ ಕಥೆ ಕೂಡ ಹಲವು ದಿಶೆಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುವ ಪ್ರಯತ್ನ ಮಾಡುವುದಾದರೂ ಅದು ಇಲ್ಲಿ ಯಶಸ್ಸು ಕಂಡಿಲ್ಲ. ಒಂದು ಸ್ತರದಲ್ಲಿ ಇವತ್ತು ನಮ್ಮ ಹಳ್ಳಿಗಳಲ್ಲೇ ಬೇಡವಾಗುತ್ತಿರುವ ಗುಡಿಕೈಗಾರಿಕೆಗಳು, ಆಧುನಿಕತೆಯ ಸ್ಪರ್ಶವಿಲ್ಲದ ಸಣ್ಣಪುಟ್ಟ ಕರಕುಶಲಿಗರ ಅಪ್ರಸ್ತುತತೆಯನ್ನು ತಡವುತ್ತ, ಅಡುಗೆ ಮಾಡುವ - ಅನ್ನವಿಕ್ಕುವ ಕಾರ್ಯದ ಘನತೆ, ಆಶಯವನ್ನು ಮನಗಾಣಿಸುತ್ತ, ಜಾತಿ-ಧರ್ಮ-ಪಂಗಡಗಳ ಮಟ್ಟದಲ್ಲಿ ಸಮಾಜವನ್ನು ಒಡೆಯಲೆತ್ನಿಸುವ ಮಂದಿಯ ನೀಚತನವನ್ನು ಅದರ ಪರ್ಯಾಯವಾದ ಒಳ್ಳೆಯತನದಿಂದ ಮುಖಾಮುಖಿಯಾಗಿಸುವುದು ಕಥೆಯ ಪ್ರಯತ್ನವಾದರೂ ಅದು ಇಲ್ಲಿ ಅಷ್ಟು ಪರಿಣಾಮಕಾರಿಯಾಗಿ ಘಟಿಸಿಲ್ಲ. ಕಥೆಯ ಕೊನೆಯ ಹಂತದ ಪ್ರಸಂಗಕ್ಕೆ ಇರುವ ರಂಗು ಪೂರ್ವಾರ್ಧದ ವಿವರಗಳಿಗೆ ಇಲ್ಲದಿರುವುದು ಮತ್ತು ಇವೆರಡರ ನಡುವೆ ಇರಬೇಕಿದ್ದ ಒಂದು ಅಗತ್ಯ ಸಂತುಲನ ಕಥೆಯಲ್ಲಿ ಇಲ್ಲದೇ ಹೋದುದು ಇದಕ್ಕೆ ಕಾರಣ ಎನಿಸುತ್ತದೆ. ಇಂಥ ಸೂಕ್ಷ್ಮ ಸಂತುಲನವನ್ನು ಅಗಸನಕಟ್ಟೆಯವರು ತಾಜ್‌ಮಹಲ್‌ನಂಥ ಕಥೆಯಲ್ಲಿ ಸಾಧಿಸಿದವರೇ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಕಥೆಯೊಂದು ತನ್ನ ಆಕೃತಿಯ ಹೊರತಾಗಿಯೂ ಓದುಗನ ಮನಸ್ಸಿನಲ್ಲಿ ಹೊಂದಬೇಕಾದ ಕವಿಭಾವ ಪ್ರತಿಮಾ ಪುನರ್ಸೃಷ್ಟಿಯ ಸಂಕಟಗಳು ಎಂಥವು ಎಂಬುದು ಅರ್ಥವಾದೀತು.

ಶಿವನೂರಿನ ಹೊಸತೇರು ಕಥೆ ಕೂಡ ಸೆಳೆಯುವುದು ಅಗಸನಕಟ್ಟೆಯವರ ಚಿತ್ರಕ ಶೈಲಿಯ ವಿವರಗಳಿಂದಲೇ. ಆಧುನಿಕತೆ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಸರಳವಾದ ಸಣ್ಣಪುಟ್ಟ ಸುಖ, ಆಸೆ, ಖುಶಿಗಳನ್ನು ಇಲ್ಲವಾಗಿಸಿಬಿಟ್ಟಿರುವುದನ್ನು ಕಥೆ ಕೊಂಚ ಬಣ್ಣಿಸಿಯೇ ಹೇಳುವುದಾದರೂ ಅದೇನೂ ಮನಸ್ಸನ್ನು ಅಷ್ಟಾಗಿ ತಟ್ಟುವುದಿಲ್ಲ. ಮಠದ ಸ್ವಾಮೀಜಿಯ ವಿಡಂಬನೆ ಕೊಂಚ ಹೆಚ್ಚೇ ಆಗಿರುವುದು ಇದಕ್ಕೆ ಕಾರಣವಿದ್ದರೂ ಇರಬಹುದು. ಬಹಳಷ್ಟು ಆಧುನಿಕವಾದ ಮತ್ತು ಸಹಜ ಖುಶಿಯನ್ನು ಇಲ್ಲವಾಗಿಸಿದ ತಂತ್ರಜ್ಞಾನವನ್ನು ಹಳ್ಳಿ-ನಗರಗಳೆಂಬ ಬೇಧವಿಲ್ಲದಂತೆ ಸ್ವಾಗತಿಸುವ, ಸ್ವೀಕರಿಸುವ ಪರಿಪಾಠವನ್ನೆ ಎಲ್ಲೆಲ್ಲೂ ಕಾಣುತ್ತಿರುವಾಗ ಕಥೆಯ ವಿಡಂಬನೆ ಮುಖ್ಯವೆನಿಸದೇ ಹೋದರೂ ಅದನ್ನು ಹೇಳುತ್ತಿರುವ ರೀತಿ ಹೆಚ್ಚು ಆಪ್ತವಾದದ್ದು, ವಿಶಿಷ್ಟವಾದದ್ದು ಎಂಬ ಕಾರಣಕ್ಕೇ ಈ ಕಥೆ ಇಷ್ಟವಾಗುತ್ತದೆ.

ಕಥೆ ಹೇಳುವ ವಿಧಾನವೇ ಅಗಸನಕಟ್ಟೆಯವರ ಕಥೆಗಳ ಪ್ರಧಾನವಾದ, ಎದ್ದು ಕಾಣುವ ಅಂಶ. ಅವರದ್ದು ಸಹಜವಾದ ಧಾಟಿ. ಬಣ್ಣಗಾರಿಕೆಯಿಲ್ಲದ ವಿವರಗಳು. ಒತ್ತಡವಿಲ್ಲದ ತಿರುವುಗಳು. ತಮ್ಮ ಕೆಲವೇ ಕಥೆಗಳಲ್ಲಿ ಸಣ್ಣಕಥೆಗಳ ಮಾದರಿ ಗುಣವಾದ 'ಕೊನೆಯ ಪಂಚ್' ಕೊಡುವ ಪರಿಣಾಮಕಾರತ್ವವನ್ನು ಅಗಸನಕಟ್ಟೆಯವರೂ ಪ್ರಯತ್ನಿಸಿದ್ದುಂಟು. ಆದರೆ ಅಗಸನಕಟ್ಟೆಯವರ ಕಥೆಯ ಜಾಯಮಾನಕ್ಕೆ ಅಂಥ ಪಂಚ್‌ಗಳು ಕೃತಕವಾಗಿ ಕಾಣುವಷ್ಟು ಅವರ ಕಥೆಗಳು ಸಹಜತೆಯನ್ನು, ನಿರಾಳತನವನ್ನು ಮೈಗೂಡಿಸಿಕೊಂಡಿವೆ. ಡೆತ್ ಟ್ರ್ಯಾಪ್‌ನಂಥ ಕಥೆಯನ್ನು ಇಲ್ಲಿ ಗಮನಿಸಬಹುದು. ಅಂದಣದ ಮ್ಯಾಲ ಕಥೆಯ ಮಿತಿಗೆ ಕೂಡ ಇಂಥ ಪ್ರಯತ್ನದ ಕೊಡುಗೆಯಿದೆ ಅನಿಸುತ್ತದೆ.

ಮನದ ಮುಂದಣ ಮಾಯೆ ಕಥೆ ಕೂಡ ಹೇಳುವ ವಿಧಾನವೇ ಪ್ರಧಾನವಾಗಿರುವ, ಆ ಕಾರಣಕ್ಕಾಗಿಯೇ ಮುಖ್ಯವಾಗುವ ಕಥೆ. ಇಲ್ಲಿನ ಕಥಾನಕದಲ್ಲಿ ಅಂಥ ವಿಶೇಷವೇನೂ ಇಲ್ಲ. ಅದೇ ದೇವದಾಸನ ಕತೆಯದೇ ಒಂದು ಆವೃತ್ತಿ ಇಲ್ಲಿರುವುದಾದರೂ ಅದು ಓದುಗನ ಮುಂದೆ ತೆರೆದುಕೊಳ್ಳುತ್ತ ಹೋಗುವ ವಿಧಾನವೇ ಹೊಸತನದಿಂದ ಕೂಡಿದೆ. ಅಗಸನಕಟ್ಟೆಯವರು ಅಸಹಜವಾಗಿ ತಮ್ಮ ಕಥೆಗಳಿಗೆ ತಿರುವುಗಳನ್ನು ನೀಡುವವರಲ್ಲ, ಹಾಗೆ ಮಾಡಿ ಕಥಾನಕವನ್ನು ಬೆಳೆಸುವವರಲ್ಲ. ಆದರೂ ಇಲ್ಲಿ ಈ ಕಥೆಯ ಮೂರನೆಯ ಭಾಗದಲ್ಲಿ ಅಂಥ ಒಂದು ಚಲನೆಯ ಪ್ರಯೋಗವನ್ನೂ ಅವರು ಮಾಡಿ ನೋಡುತ್ತಾರೆ. ಕಥೆಯೊಂದರ ವಾಸ್ತವದ ಬದುಕಿನೆದುರು ಈ ಕಲ್ಪನೆಯ ಸಾಧ್ಯತೆಯನ್ನಿಟ್ಟು ಕತೆಗಾರನ ಎದುರಿನ ಸವಾಲುಗಳನ್ನು ಮತ್ತು ಬದುಕಿನ ಅನನ್ಯತೆಯನ್ನು ತೋರುವ ಯತ್ನ ಇಲ್ಲಿದೆ. ಕಥೆ ಒಂದು ಸೀಮಿತ ಪರಿಧಿಯಲ್ಲಿ ಪರಿಹಾರಗಳನ್ನು, ಅಂತ್ಯಗಳನ್ನು, ಅರ್ಥವಂತಿಕೆಯನ್ನು ನಿರೀಕ್ಷಿಸುತ್ತದೆ. ಆದರೆ ಬದುಕಿಗಾದರೋ ಇಂಥ ಚೌಕಟ್ಟಿನ ಹಂಗಿಲ್ಲ. ಪ್ರೇಮದ, ಕಾಮದ ಸಂಬಂಧಗಳು ಇಡೀ ಬದುಕನ್ನೆ ಆವರಿಸುವ ಮಾಯೆಗಳಿರುತ್ತ ಕಥೆ ತನ್ನ ಒಡಲಿನ ಮಿತಿಗಳನ್ನು ಅವಕ್ಕೆ ತೊಡಿಸಲು ಬರುವುದಿಲ್ಲ. ಈ ಅರಿವು ಕತೆಗಾರನಿಗಿರುವ ಸವಾಲೆಂತೋ ಅಂತೆಯೇ ಅಸಂಖ್ಯ ಅವಕಾಶಗಳನ್ನು ಅವನೆದುರು ತೆರೆದಿಡುವ ವರ ಕೂಡ. ಅಗಸನಕಟ್ಟೆಯವರಿಗೆ ಈ ಅರಿವು ಇದೆ. ಹಾಗಾಗಿಯೇ ಅವರು ತಮ್ಮ ಕಥೆಗಳ ಆಕೃತಿಯತ್ತ ನೀಡಿದಷ್ಟೇ ಗಮನವನ್ನು ಕಥೆಯ ಸಾಮಾಜಿಕ, ತಾತ್ವಿಕ ಆಯಾಮಗಳತ್ತ ನೀಡಿಯೂ ಎಲ್ಲೂ ಅಸಹಜ ಒತ್ತಡಗಳಿಗೆ, ಆಕರ್ಷಕ ಮಾದರಿಗಳಿಗೆ ಮನಸೋಲದೆ ತಮ್ಮ ಕಥೆಗಳ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಯಾದವಾಡನ ಪಾದುಕಾ ಪ್ರಕರಣ ಈ ಸಂಕಲನದ ಇನ್ನೊಂದು ಉತ್ತಮ ಕಥೆ. ಶಿರಸಂಗಿಗೂ ಕಾಲಿಗಿಕ್ಕುವ ಕೆರಗಳಿಗೂ ಇರುವ ವಿಲಕ್ಷಣ ಸಂಬಂಧವನ್ನು ಅನಾವರಣಗೊಳಿಸುತ್ತಲೇ ಈ ಕಥೆ ಇನ್ನೂ ಏನೆಲ್ಲವನ್ನೂ ಕಾಣಿಸುತ್ತ ಹೋಗುವ ಪರಿಯೇ ವಿಶಿಷ್ಟವಾಗಿದೆ. ಕೆರಗಳು ನೆನಪಿಸುವ ಭೂತಕಾಲದ ಅಪಮಾನದ, ಬಡತನದ ಕಥೆಗಳಂತೆಯೇ ಇಂದೂ ಅವು ಅವನನ್ನು ಹಲವು ವಿಧದಲ್ಲಿ ಕಾಡುತ್ತಿವೆ. ಅವನು ಅವುಗಳಿಂದ ಮುಕ್ತನಾಗಲು ಬಯಸಿದರೂ ಅವು ಅವನನ್ನು ಬಿಡಲಾರವು. ಅಲೆಗಳು ಹೊತ್ತೊಯ್ಯುವ ಕೆರಗಳಿಂದ ಭವಿಷ್ಯದಲ್ಲೂ ಈ ಅಪಮಾನದ, ಹೋರಾಟದ ಚಕ್ರದಿಂದ ಶಿರಸಂಗಿಗೆ ಮುಕ್ತಿಯಿಲ್ಲ ಎಂಬುದನ್ನು ಹೇಳುವ ರೂಪಕ ವಿಧಾನವೊಂದು ಇಲ್ಲಿ ಅತ್ಯಂತ ಸಹಜವಾಗಿ, ಸುಂದರವಾಗಿ ಒಡಮೂಡಿದೆ.

ಅನಾಮಧೇಯರಿಬ್ಬರ ಮುಖಾಮುಖಿ ಕಥೆ ನಿರೂಪಣೆಯ ವಿಲಕ್ಷಣ ವಿಧಾನದಿಂದ ನಿರ್ಮಿಸುವ ಒಂದು ಮ್ಲಾನ ವಾತಾವರಣವೇನಿದೆ ಅದು ತುಂಬ ದಟ್ಟವಾಗಿ ಆವರಿಸಿದಂತೆ ಓದುಗನನ್ನು ಕಲಕಬಲ್ಲಷ್ಟು ತೀವೃವಾಗಿ ಮೂಡಿದೆ. ಒಂದು ಬಗೆಯ ಸಂಭಾಷಣೆಯ ಧಾಟಿಯಲ್ಲಿದ್ದೂ ಯಾರನ್ನೂ ಉದ್ದೇಶಿಸಿರದಂಥ ಮಾತುಗಳು ಈ ಕಥೆಯ ನಿರೂಪಣೆಗೆ ವಿಶಿಷ್ಟವಾದ ಶಕ್ತಿಯನ್ನು ನೀಡಿದೆ. ಕಥೆಯಲ್ಲಿ ಕರೆಂಟು ಹೋಗುವ ಒಂದು ಪ್ರಸಂಗ ಬರುತ್ತದೆ. ಹಾಗೆ ನೋಡಿದರೆ ಇಡೀ ಕಥೆ ಇಂಥ ಒಂದು ಅಘೋಷಿತ ಕತ್ತಲಲ್ಲೇ ಇಬ್ಬರು ಮಾತನಾಡಿಕೊಂಡಂತಿರುವುದು ವಿಶೇಷ. ಈ ಅಪರಿಚಿತತೆ, ಕೇಳುವವರಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲದಿದ್ದರೂ ತೋಡಿಕೊಳ್ಳುವವರ ಅನಾಥ ಪ್ರಜ್ಞೆ ಕಥೆಯ ಒಡಲಿನಲ್ಲಿ ಹಾಸುಹೊಕ್ಕಾಗಿದೆ. ಸಹಜೀವಿಯ ಆಂತರಿಕ ತಲ್ಲಣಗಳು ಎದುರಿನ ವ್ಯಕ್ತಿಗೆ ಇರ್ರಿಲೆವಂಟ್ ಆಗಬಹುದಾದ ಈ ಒಂದು ದರಿದ್ರ ಸ್ಥಿತಿಯೇ ಆಘಾತಕಾರಿಯಾಗಿದೆ. ವಸ್ತುವಿಗಿಂತ ತಂತ್ರವೇ ಇಲ್ಲಿ ಕಾಡುವಷ್ಟು ಗಾಢವಾಗಿ ಕೆಲಸ ಮಾಡುತ್ತದೆ.

ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ ಎನ್ನಲಾಗದು. ಆದರೆ ಈ ಓದು ಕೊಡುವ ಖುಶಿ ಕೇವಲ ಮನರಂಜನೆಯದ್ದಲ್ಲ. ಅದು ನಿರ್ಮಿಸುವ ಒಂದು ವಾತಾವರಣ, ಅವು ತೆರೆದು ತೋರಿಸುವ ಒಂದು ಸಹಜ ಬದುಕು, ಥಟ್ಟನೇ ಅಪ್ತವಾಗುವ ಅವರ ನಿರೂಪಣಾ ವಿಧಾನ, ನಡುನಡುವೆ ಬರುವ ಅನನ್ಯವಾದ ಕೆಲವು ಅಪರೂಪದ ಕಥೆಗಳು - ಈ ಎಲ್ಲ ಕಾರಣಗಳಿಗಾಗಿ ಮತ್ತೆ ಮತ್ತೆ ಮುಖ್ಯವೆನಿಸುವ ಕಥೆಗಾರ ಅಗಸನಕಟ್ಟೆ.
(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ ಒಂದಲ್ಲಾ ಒಂದೂರಿನಲ್ಲಿ ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸಪತ್ರಿಕೆಯಲ್ಲಿ ಪ್ರಕಟಿತ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ