Saturday, March 1, 2008

ಮನದ ಮುಂದಣ ಮಾಯೆ

ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿರುವ ಕೃತಿಯ ಕುರಿತು ಒಂದು ಟಿಪ್ಪಣಿ ಇಲ್ಲಿದೆ.

ಪ್ರಹ್ಲಾದ ಅಗಸನಕಟ್ಟೆ ನಿಜವಾದ ಅರ್ಥದಲ್ಲಿ ಒಬ್ಬ ಸಹಜ ಕಥೆಗಾರ. ಅವರ ಮನದ ಮುಂದಣ ಮಾಯೆ ಕಥೆಯಲ್ಲಿ ಒಂದು ಮಾತು ಬರುತ್ತದೆ. "ಹಿಂಗಲ್ರಿ, ಕತಿನ ಹಿಂಗ ಶುರು ಮಾಡ್ರಿ... ಕತಿ ಅಂದರ ಏನ್ ತಿಳ್ಕಂಡ್ರಿ...ಕಂಡದ್ದನ್ನ ಕಂಡಾಂಗ ಬರೆಯೋದಲ್ಲ...ಕಂಡದ್ದರ ಬೆನ್ನತ್ತಿ ಕಾಣದ್ದನ್ನ ಹುಡ್ಕೋದು. ಕತಿ ಬರೆಯಾಕ ನೀವು ಹೋಗಬ್ಯಾಡ್ರಪ್ಪ...ಕತಿನಾ ನಿಮ್ಮನ್ನ ಬರೆಸಬೇಕು..." ಅಗಸನ ಕಟ್ಟೆಯವರ ಕಥೆಗಳ ಆಶಯ ಮತ್ತು ಅವರ ಕಥಾವಿಧಾನದ ತಂತ್ರಗಾರಿಕೆಯನ್ನು ಈ ಮಾತುಗಳು ಸೂಚಿಸುವಂತಿವೆ.

ಅಗಸನಕಟ್ಟೆಯವರ ಕಥೆಗಳನ್ನು ಓದುತ್ತ ಹೋದಂತೆಲ್ಲ ಇವರ ಕೈಯಲ್ಲಿ ಏನಿಟ್ಟರೂ ಅದೊಂದು ಕಥೆಯಾಗುವ ಮಾಯಕಕ್ಕೆ ಬೆರಗು ಹುಟ್ಟದಿರದು. ಅದಕ್ಕೆ ಒಂದು ಕಾರಣ ಅವರ ಚಿತ್ರಕ ಶೈಲಿಯ ಬರವಣಿಗೆ. ಹುಬ್ಬಳ್ಳಿ, ಧಾರವಾಡ ಮತ್ತು ಬಳ್ಳಾರಿಯ ಕನ್ನಡದ ಸೊಗಡು ಹೊಂದಿದ ಅವರ ಆಕರ್ಷಕ ಭಾಷೆ. ಹಾಗೆಯೇ, ಅಗಸನಕಟ್ಟೆಯವರು ತಮ್ಮ ಎಲ್ಲಾ ಕಥೆಗಳಲ್ಲೂ ಸಾಧಿಸುವ ಒಂದು ಆಪ್ತ ಸ್ತರದ ಸಂವಹನ ಸಾಧ್ಯತೆ. ನಮ್ಮ ನಿಮ್ಮ ನಡುವಿನ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಬಗ್ಗೆ ಹೇಳಹೊರಡುವ ಮುನ್ನ ಇವರು ನಮ್ಮನ್ನು ತಮ್ಮ ಜೊತೆ ಕೊಂಡೊಯ್ಯುವ ಒಂದು ವಿಶಿಷ್ಟ ತಂತ್ರ ಇದು. ಕಥೆ ತೊಡಗುವ ಮುನ್ನವೇ ಅದಕ್ಕೆ ಬೇಕಾದ ಒಂದು ಆಪ್ತ ವಲಯವನ್ನು ಕಥೆಯ ಆರಂಭದಲ್ಲೇ ನಿರ್ಮಿಸಿಕೊಂಡು ಬಿಡುವ ಅಗಸನಕಟ್ಟೆಯವರು ಮುಂದೆ ಬರೆದಿದ್ದೆಲ್ಲ ಸುಂದರ ಕಥೆಯಾಗುವ ವಿಧಾನ ಅಚ್ಚರಿ ಹುಟ್ಟಿಸುವಂಥದು.

ಇವೆಲ್ಲ ಸೇರಿ ಅಗಸನಕಟ್ಟೆಯವರ ಕಥೆಗಳಲ್ಲಿನ ಚಿತ್ರಕ ವಿವರಗಳನ್ನು ಜೀವಂತಗೊಳಿಸಿವೆ. ಅತ್ಯಂತ ಸಂಯಮದಿಂದ, ಸೂಕ್ಷ್ಮಾತಿಸೂಕ್ಷ್ಮ ವಿವರಗಳಲ್ಲಿ ಅವರು ಒಂದು ವಾತಾವರಣವನ್ನೇ ಕಟ್ಟಿಕೊಡಬಲ್ಲವರು. ಮಾಸ್ತಿಯವರ ಕಥೆಗಳಲ್ಲಿ, ಕಾರಂತರ ಕಾದಂಬರಿಗಳಲ್ಲಿ ಕಂಡುಬರುವ ಈ ದೇಶೀ ಅಂಶ ಅಗಸನಕಟ್ಟೆಯವರಿಗೆ ಸಹಜವಾಗಿ ಸಿದ್ಧಿಸಿದೆ. ಅವರ ಎಲ್ಲಾ ಕಥೆಗಳಲ್ಲಿ ಈ ಅಂಶ ಗಾಢವಾಗಿ ನಮ್ಮ ಅನುಭವಕ್ಕೆ ಬರುತ್ತದೆ. ಕಥೆಯಾಗಿ ಅದು ಪರಿಣಾಮಕಾರಿಯಾಗಿರಲಿ, ಆಗದಿರಲಿ, ಅಗಸನಕಟ್ಟೆಯವರು ಕಟ್ಟಿಕೊಡುವ ಜಗತ್ತು ಮಾತ್ರ ನಮಗೆ ಆಪ್ತವಾಗುವಷ್ಟು ನಿಜವಾಗಿ ಮೂಡಿರುತ್ತದೆ.

ಅಗಸನಕಟ್ಟೆಯವರ ಕಥೆಗಳು ಮಹತ್ವಾಕಾಂಕ್ಷೆಯ ರಚನೆಗಳೇ. ತಮ್ಮ ಕಥೆಗಳ ಆಕೃತಿಯ ಕಡೆಗೆ ಅವರು ಕೊಡುವ ಗಮನ ಕಡಿಮೆಯದಲ್ಲ. ಅವರ ಕಥೆಗಳಲ್ಲಿ ಒಂದು ಸಾಮಾಜಿಕ ಅರ್ಥಪೂರ್ಣತೆ, ತಾತ್ವಿಕವಾದೊಂದು ಆಯಾಮ ಸಹಜವಾಗಿಯೇ ದಕ್ಕಿದಂತಿದ್ದರೂ ಅವು ಅಗಸನಕಟ್ಟೆಯವರು ಸಾಕಷ್ಟು ಯೋಚಿಸಿ, ಯೋಜಿಸಿ ಸೃಜಿಸಿದವುಗಳೇ. ಆದರೂ ಈ ಕಥೆಗಳಿಗೆ ಅಜರಾಮರವಾಗಿ ನಿಲ್ಲುವ, ಶ್ರೇಷ್ಠ ಕಥೆಗಳೆನಿಸಿಕೊಳ್ಳುವ ಧಾವಂತವಿಲ್ಲದಿರುವುದನ್ನು ಗಮನಿಸಬೇಕಿದೆ. ಹಾಗಾಗಿ ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಬಿಡಿಬಿಡಿಯಾಗಿ ಓದಿದಾಗ ಅಗಸನಕಟ್ಟೆಯವರ ಕಥೆಗಳ, ಕಥಾಲೋಕದ ಶಕ್ತಿಯ ಪೂರ್ಣ ಪರಿಚಯ ಸಿಗುವುದಿಲ್ಲ. ಅವು ವಿಶೇಷವಾಗಿ ನಮ್ಮನ್ನು ಕಲಕುವ, ಹಲವು ದಿನಗಳ ಕಾಲ ಕಾಡುವ ಕಸು ಹೊಂದಿರುವ ಕಥೆಗಳೆಂದು ಅನಿಸುವುದಿಲ್ಲ. ಮೆಲುದನಿಯ, ಯಾವುದನ್ನೂ ವಿಶೇಷವಾಗಿ ಒತ್ತಿ ಹೇಳದ ಈ ಕಥೆಗಳು ಒಟ್ಟಾಗಿ ನಿರ್ಮಿಸುವ ಒಂದು ಲೋಕವನ್ನು ಅರಿಯಲು ಇವುಗಳನ್ನು ಸಂಕಲನದಲ್ಲಿಯೇ ಓದಬೇಕು. ಆಗ ಅಗಸನಕಟ್ಟೆಯವರ ಕಥೆಗಳ ಶಕ್ತಿ ಅಥವಾ ಅದಕ್ಕಿಂತ ಅವರ ಕಥಾಜಗತ್ತಿನ ಮಾಯಕತೆ ನಮ್ಮ ಅರಿವಿಗೆ ಬರುತ್ತದೆ. ನಮ್ಮ ನಿಮ್ಮ ನಡುವಿನ ಸಾಮಾನ್ಯರ ಸಾಮಾನ್ಯ ಸಂಗತಿಗಳ ಬಗ್ಗೆ ಬರೆಯುತ್ತಲೇ, ವಿವರಿಸುತ್ತಲೇ ಯಾವುದೋ ಒಂದು ಒಳನೋಟ, ಯಾವುದೋ ಅನೂಹ್ಯ ತೊಳಲಾಟ, ಅಮೂರ್ತ ಕಾಣ್ಕೆಗಳ ಮಿಂಚು ಹರಿಸಬಲ್ಲ ಕಥೆಗಳನ್ನು ಅಗಸನಕಟ್ಟೆಯವರು ಕೊಡುತ್ತ ಬಂದಿದ್ದಾರೆ. ಅದೃಶ್ಯದ ಹಾದಿಯಲ್ಲಿ, ವಿಶ್ವನೆಂಬ `ವಿಶ್ವ', ತಾಜ್‌ಮಹಲ್, ಪ್ರಕ್ಷುಬ್ಧ ಅಲೆಗಳು, ಪಾರಿವಾಳ ಮತ್ತು ಪಿಶಾಚಿಯ ಪ್ರಶ್ನೆ, ನಾನು, ನನ್ನ ಗೆಳೆಯ ಮತ್ತು ಅಂಬೇಡ್ಕರ್, ಯಾದವಾಡನ ಪಾದುಕಾ ಪ್ರಕರಣ ಹೀಗೆ ಅನನ್ಯವಾದ ಕಥೆಗಳನ್ನು ಗಮನಿಸಿದರೆ ಅಗಸನಕಟ್ಟೆಯವರ ಕಥೆಗಳ ಶಕ್ತಿಯ ಅರಿವು ನಮಗಾಗುತ್ತದೆ.

ತಮ್ಮ ಅತ್ಯುತ್ತಮ ಎನ್ನಬಹುದಾದ ಕಥೆಗಳಲ್ಲಿ ಅಗಸನಕಟ್ಟೆಯವರು ಬಳಸಿದ ಸಾರ್ಥಕ ಪ್ರತಿಮೆಗಳು ನಮ್ಮ ಗಮನ ಸೆಳೆಯುತ್ತವೆ. ಆದರೆ ಹೀಗೆ ಪ್ರತಿಮೆಗಳನ್ನು, ರೂಪಕಗಳನ್ನು ಬಳಸಿಕೊಂಡು ಕಥೆ ಹೇಳುವುದರಲ್ಲಿ ಅಗಸನಕಟ್ಟೆಯವರಿಗೆ ಹೆಚ್ಚಿನ ಒಲವಿರುವಂತೆ ಕಾಣುವುದಿಲ್ಲ. ಕೆಲವೊಂದು ಕಥೆಗಳಲ್ಲಂತೂ ಅವರೇ ಅಂಥ ಪ್ರತಿಮಾ ವಿಧಾನವನ್ನು ವಾಚ್ಯಗೊಳಿಸಿ ಒಡೆದಿರುವುದೂ ಇದೆ. ಉದಾಹರಣೆಗೆ ಈ ಸಂಕಲನದ ಮೊದಲ ಕಥೆ ಪಾರಿವಾಳ ಮತ್ತು ಪಿಶಾಚಿಯ ಪ್ರಶ್ನೆ ಕಥೆಯನ್ನು ಗಮನಿಸಬಹುದು. ಭಾವಕ್ಕಿಂತ ಬುದ್ಧಿಯನ್ನು, ತರ್ಕವನ್ನು ನೆಚ್ಚುವ ಇವರು ಸತ್ಯವನ್ನು ಭಾವಸ್ತರದಲ್ಲಿ ಕಾಣಿಸಿ ಕೈತೊಳೆದುಕೊಳ್ಳುವವರಲ್ಲ. ಅದನ್ನು ವಾಸ್ತವದ ಸುಡುಬಿಸಿಲಿನಲ್ಲಿಟ್ಟು ಬಾ ನೋಡಿಲ್ಲಿ ಎನ್ನುವವರು.

ಇದ್ದುದರಲ್ಲಿ ಎನ್ಕೌಂಟರ್ ಕಥೆ ಭಾವುಕ ನೆಲೆಯಲ್ಲೇ ಮುಗಿಯುತ್ತ ಓದುಗನನ್ನು ತಟ್ಟಲು ಯತ್ನಿಸುವ ಕಥೆ. ಅಗಸನಕಟ್ಟೆಯವರ ಕಥೆಗಳಲ್ಲಿ ಸ್ವಲ್ಪ ವಿಶಿಷ್ಟವಾದ ಬಗೆಯ ಸ್ವಗತದಂಥ, ಆತ್ಮನಿವೇದನೆಯಂಥ ಧಾಟಿಯಲ್ಲಿರುವ ಕಥೆ ಎನ್ಕೌಂಟರ್. ಇಲ್ಲಿ ಇಬ್ಬರು ಗೆಳೆಯರ ಮುಖಾಮುಖಿ ಇದೆ. ಒಬ್ಬ ಕ್ರಿಯೆಯಲ್ಲಿ ಕ್ರಾಂತಿಯನ್ನು ಕಾಣುವವನು, ಇನ್ನೊಬ್ಬ ಮಾತಿನಲ್ಲಷ್ಟೇ ಕ್ರಾಂತಿಯ ಬಣ್ಣಗಾರಿಕೆಯನ್ನು ತೋರಿಸಿದವನು. ಈತನ ಆದರ್ಶ, ಆಶಯ ಅಪ್ರಾಮಾಣಿಕವಲ್ಲ, ಆದರೆ ತನ್ನ ಮಿತ್ರನಂತೆ ಎಲ್ಲವನ್ನೂ ತೊರೆದು ಕ್ರಾಂತಿಯ ಹಂಬಲಕ್ಕಾಗಿ ಬದುಕನ್ನು ಸಮರ್ಪಿಸಲಾರದವನು. ಅಷ್ಟರಮಟ್ಟಿಗೆ ಒಬ್ಬನಿಗೆ ತನ್ನ ಸ್ವಂತದ ಸುಖ ಮುಖ್ಯ, ಅದು ದಕ್ಕಿದರೆ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಕೊಳ್ಳಬಲ್ಲ. ಆದರೆ ಮಿತ್ರನಿಗೆ ಹಾಗಲ್ಲ. ಅವನಿಗೆ ಬೇಕಾದುದೆಲ್ಲವೂ ಇತ್ತು, ಆತ ಶ್ರೀಮಂತ. ಆದರೆ ತನ್ನ ಸುತ್ತಲಿನವರ ಬದುಕಿನ ನೋವು, ಸಂಕಷ್ಟ, ಶೋಷಣೆ, ಬಡತನ ಅವನನ್ನು ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಕೊಳ್ಳಲು ಬಿಡುತ್ತಿಲ್ಲ. ಮೇಲ್ನೋಟಕ್ಕೆ ನಕ್ಸಲ್ ಚಳುವಳಿಯ ಪರವಾಗಿರುವ ವಸ್ತುವಿದು ಅನಿಸಿದರೂ ಇದನ್ನು ಹಾಗೆ ಸೀಮಿತಗೊಳಿಸಿಕೊಂಡು ನೋಡುವುದೇ ಓದಿನ ಒಂದು ಮಿತಿಯಾದೀತು. ಆದರೂ ಸದ್ಯದ ವಸ್ತುಸ್ಥಿತಿ ಇದನ್ನು ತೆರೆದ ಮನಸ್ಸಿನಿಂದ ಕಾಣಲು ಬೇಕಾದ ಮನಸ್ಥಿತಿಯನ್ನು ಉಳಿಸಿದೆಯೆ ಎನ್ನುವುದು ಪ್ರಶ್ನೆ ಇದ್ದೇ ಇದೆ.

ನಾನು, ನನ್ನ ಗೆಳೆಯ ಮತ್ತು ಅಂಬೇಡ್ಕರ್ ಕಥೆಯ ಸಹಜ-ಪ್ರಾಮಾಣಿಕ-ಸಂಯಮದ ನಿರೂಪಣೆಯೇ ಮೂಲಾಧಾರವಾಗಿ ವಿವರಗಳು ಕಥೆಗೆ ದಕ್ಕಿಸಿಕೊಡುವ ಹಲವು ಆಯಾಮಗಳ ವಿಶಾಲ ವ್ಯಾಪ್ತಿ ಮತ್ತು ಇಷ್ಟಿದ್ದೂ ಈ ಸುಂದರ ಕಥೆಯ ಉದ್ದೇಶರಾಹಿತ್ಯದ ಧಾಟಿ - ಈ ಕಥೆಯನ್ನು ವಿಶಿಷ್ಟವಾಗಿಸಿದೆ. ಈ ಕಥೆಯಲ್ಲಿ ಬರುವ ನಿರೂಪಕನ ಭಾಷಣ, ಎಂ.ಎಲ್.ಎ. ಸಾಹೇಬರ ಭಾಷಣ ಮತ್ತು ಗೆಳೆಯನ ಭಾಷಣ ಮೂರರಲ್ಲೂ ಬರುವ ದಲಿತರ ಬದುಕಿನ ಚಿತ್ರಗಳು; ಎದುರೇ ಇರುವ ಆಲದ ಮರ ಇವುಗಳಿಗೆಲ್ಲ ಸಾಕ್ಷಿಯೋ ಎಂಬಂತೆ ನಿಂತಿರುತ್ತ ಆ ಇಡೀ ವಾತಾವರಣ ಹುಟ್ಟಿಸುವ ಸೂಕ್ಷ್ಮ ವಿಷಣ್ಣತೆಗೆ ಓದುಗ ಮುಖಾಮುಖಿಯಾಗುವಾಗ ಹುಟ್ಟುವ ತಲ್ಲಣಗಳಿಗೆ ಅನುಕೂಲಕರವಾದ ಒಂದು ನಿಧಾನಗತಿ ಕಥಾನಕದ ಓಟದಲ್ಲಿರುವುದು ಕಥೆಯ ಯಶಸ್ಸಿಗೆ ಪ್ರಮುಖ ಕಾರಣ ಎನಿಸುತ್ತದೆ. ಮೈಕುಗಳ ಮುಂದೆ ಆಡುವ ಮಾತು ಮತ್ತು ರಾತ್ರಿಯ ಗುಂಡು ಪಾರ್ಟಿಯಲ್ಲಿ ನಡೆಯುವ ಅವೇ ಮಾತುಗಳ ಅನಧಿಕೃತ ವಿಶ್ಲೇಷಣೆಯಲ್ಲಿ ತೆರೆದುಕೊಳ್ಳುವ ಆ ಮಾತುಗಳ ಹಿಂದಿರುವ ಸಂಕೀರ್ಣತೆ ಇಲ್ಲಿನ ವಸ್ತುವಿಗೆ ಹಲವು ಆಯಾಮಗಳ ಒಳನೋಟವನ್ನು ದಕ್ಕಿಸಿದೆ. ಹಾಗೆಯೇ ಮೂರನೆಯ ಭಾಗದ ಸರಳ ಪ್ರಸಂಗ ಕೊಡುವ ಹೊಸ ದರ್ಶನ ಎಲ್ಲವನ್ನೂ ಹೊಸದಾಗಿ ವಿಶ್ಲೇಷಿಸ ಬೇಕಾದ, ಮರು ವ್ಯಾಖ್ಯಾನಿಸ ಬೇಕಾದ ಅಗತ್ಯವಿದೆಯೇನೋ ಎನಿಸುವಂತಿದೆ. ಒಂದು ವೇದಿಕೆಯ ಮೇಲೆ, ಇನ್ನೊಂದು ರಾತ್ರಿಯ ನಿಶೆಯ ಅಮಲಿನಲ್ಲಿ ಮತ್ತು ಕೊನೆಯಲ್ಲಿ ಕೇವಲ ಮನುಷ್ಯರ ಮನೆವಾರ್ತೆಯ ನೆಲೆಯಲ್ಲಿ ನಡೆಯುವ ಪ್ರಸಂಗಗಳು ಒಂದೇ ವಿಚಾರಕ್ಕೆ ಸಂಬಂಧಿಸಿಯೂ ಅಲ್ಲವೇನೋ ಎಂಬಂತಿರುವುದು ಕಥೆಗೆ ವಿಶೇಷ ಸಂಕೀರ್ಣತೆಯನ್ನೂ, ತೇಜಸ್ಸನ್ನೂ ನೀಡಿರುವುದು ವಿಶೇಷ. ಇಂಥ ಹದ ಕಥೆಗೆ ದಕ್ಕುವುದು ಯಾತರಿಂದ ಎಂಬುದನ್ನು ವಿವರವಾಗಿ ಗಮನಿಸುವ ಅಗತ್ಯವಿದೆ.

ಅಂದಣದ ಮ್ಯಾಲ ಹಾರ್ಯಾವ ಕಥೆ ಕೂಡ ಹಲವು ದಿಶೆಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುವ ಪ್ರಯತ್ನ ಮಾಡುವುದಾದರೂ ಅದು ಇಲ್ಲಿ ಯಶಸ್ಸು ಕಂಡಿಲ್ಲ. ಒಂದು ಸ್ತರದಲ್ಲಿ ಇವತ್ತು ನಮ್ಮ ಹಳ್ಳಿಗಳಲ್ಲೇ ಬೇಡವಾಗುತ್ತಿರುವ ಗುಡಿಕೈಗಾರಿಕೆಗಳು, ಆಧುನಿಕತೆಯ ಸ್ಪರ್ಶವಿಲ್ಲದ ಸಣ್ಣಪುಟ್ಟ ಕರಕುಶಲಿಗರ ಅಪ್ರಸ್ತುತತೆಯನ್ನು ತಡವುತ್ತ, ಅಡುಗೆ ಮಾಡುವ - ಅನ್ನವಿಕ್ಕುವ ಕಾರ್ಯದ ಘನತೆ, ಆಶಯವನ್ನು ಮನಗಾಣಿಸುತ್ತ, ಜಾತಿ-ಧರ್ಮ-ಪಂಗಡಗಳ ಮಟ್ಟದಲ್ಲಿ ಸಮಾಜವನ್ನು ಒಡೆಯಲೆತ್ನಿಸುವ ಮಂದಿಯ ನೀಚತನವನ್ನು ಅದರ ಪರ್ಯಾಯವಾದ ಒಳ್ಳೆಯತನದಿಂದ ಮುಖಾಮುಖಿಯಾಗಿಸುವುದು ಕಥೆಯ ಪ್ರಯತ್ನವಾದರೂ ಅದು ಇಲ್ಲಿ ಅಷ್ಟು ಪರಿಣಾಮಕಾರಿಯಾಗಿ ಘಟಿಸಿಲ್ಲ. ಕಥೆಯ ಕೊನೆಯ ಹಂತದ ಪ್ರಸಂಗಕ್ಕೆ ಇರುವ ರಂಗು ಪೂರ್ವಾರ್ಧದ ವಿವರಗಳಿಗೆ ಇಲ್ಲದಿರುವುದು ಮತ್ತು ಇವೆರಡರ ನಡುವೆ ಇರಬೇಕಿದ್ದ ಒಂದು ಅಗತ್ಯ ಸಂತುಲನ ಕಥೆಯಲ್ಲಿ ಇಲ್ಲದೇ ಹೋದುದು ಇದಕ್ಕೆ ಕಾರಣ ಎನಿಸುತ್ತದೆ. ಇಂಥ ಸೂಕ್ಷ್ಮ ಸಂತುಲನವನ್ನು ಅಗಸನಕಟ್ಟೆಯವರು ತಾಜ್‌ಮಹಲ್‌ನಂಥ ಕಥೆಯಲ್ಲಿ ಸಾಧಿಸಿದವರೇ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಕಥೆಯೊಂದು ತನ್ನ ಆಕೃತಿಯ ಹೊರತಾಗಿಯೂ ಓದುಗನ ಮನಸ್ಸಿನಲ್ಲಿ ಹೊಂದಬೇಕಾದ ಕವಿಭಾವ ಪ್ರತಿಮಾ ಪುನರ್ಸೃಷ್ಟಿಯ ಸಂಕಟಗಳು ಎಂಥವು ಎಂಬುದು ಅರ್ಥವಾದೀತು.

ಶಿವನೂರಿನ ಹೊಸತೇರು ಕಥೆ ಕೂಡ ಸೆಳೆಯುವುದು ಅಗಸನಕಟ್ಟೆಯವರ ಚಿತ್ರಕ ಶೈಲಿಯ ವಿವರಗಳಿಂದಲೇ. ಆಧುನಿಕತೆ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಸರಳವಾದ ಸಣ್ಣಪುಟ್ಟ ಸುಖ, ಆಸೆ, ಖುಶಿಗಳನ್ನು ಇಲ್ಲವಾಗಿಸಿಬಿಟ್ಟಿರುವುದನ್ನು ಕಥೆ ಕೊಂಚ ಬಣ್ಣಿಸಿಯೇ ಹೇಳುವುದಾದರೂ ಅದೇನೂ ಮನಸ್ಸನ್ನು ಅಷ್ಟಾಗಿ ತಟ್ಟುವುದಿಲ್ಲ. ಮಠದ ಸ್ವಾಮೀಜಿಯ ವಿಡಂಬನೆ ಕೊಂಚ ಹೆಚ್ಚೇ ಆಗಿರುವುದು ಇದಕ್ಕೆ ಕಾರಣವಿದ್ದರೂ ಇರಬಹುದು. ಬಹಳಷ್ಟು ಆಧುನಿಕವಾದ ಮತ್ತು ಸಹಜ ಖುಶಿಯನ್ನು ಇಲ್ಲವಾಗಿಸಿದ ತಂತ್ರಜ್ಞಾನವನ್ನು ಹಳ್ಳಿ-ನಗರಗಳೆಂಬ ಬೇಧವಿಲ್ಲದಂತೆ ಸ್ವಾಗತಿಸುವ, ಸ್ವೀಕರಿಸುವ ಪರಿಪಾಠವನ್ನೆ ಎಲ್ಲೆಲ್ಲೂ ಕಾಣುತ್ತಿರುವಾಗ ಕಥೆಯ ವಿಡಂಬನೆ ಮುಖ್ಯವೆನಿಸದೇ ಹೋದರೂ ಅದನ್ನು ಹೇಳುತ್ತಿರುವ ರೀತಿ ಹೆಚ್ಚು ಆಪ್ತವಾದದ್ದು, ವಿಶಿಷ್ಟವಾದದ್ದು ಎಂಬ ಕಾರಣಕ್ಕೇ ಈ ಕಥೆ ಇಷ್ಟವಾಗುತ್ತದೆ.

ಕಥೆ ಹೇಳುವ ವಿಧಾನವೇ ಅಗಸನಕಟ್ಟೆಯವರ ಕಥೆಗಳ ಪ್ರಧಾನವಾದ, ಎದ್ದು ಕಾಣುವ ಅಂಶ. ಅವರದ್ದು ಸಹಜವಾದ ಧಾಟಿ. ಬಣ್ಣಗಾರಿಕೆಯಿಲ್ಲದ ವಿವರಗಳು. ಒತ್ತಡವಿಲ್ಲದ ತಿರುವುಗಳು. ತಮ್ಮ ಕೆಲವೇ ಕಥೆಗಳಲ್ಲಿ ಸಣ್ಣಕಥೆಗಳ ಮಾದರಿ ಗುಣವಾದ 'ಕೊನೆಯ ಪಂಚ್' ಕೊಡುವ ಪರಿಣಾಮಕಾರತ್ವವನ್ನು ಅಗಸನಕಟ್ಟೆಯವರೂ ಪ್ರಯತ್ನಿಸಿದ್ದುಂಟು. ಆದರೆ ಅಗಸನಕಟ್ಟೆಯವರ ಕಥೆಯ ಜಾಯಮಾನಕ್ಕೆ ಅಂಥ ಪಂಚ್‌ಗಳು ಕೃತಕವಾಗಿ ಕಾಣುವಷ್ಟು ಅವರ ಕಥೆಗಳು ಸಹಜತೆಯನ್ನು, ನಿರಾಳತನವನ್ನು ಮೈಗೂಡಿಸಿಕೊಂಡಿವೆ. ಡೆತ್ ಟ್ರ್ಯಾಪ್‌ನಂಥ ಕಥೆಯನ್ನು ಇಲ್ಲಿ ಗಮನಿಸಬಹುದು. ಅಂದಣದ ಮ್ಯಾಲ ಕಥೆಯ ಮಿತಿಗೆ ಕೂಡ ಇಂಥ ಪ್ರಯತ್ನದ ಕೊಡುಗೆಯಿದೆ ಅನಿಸುತ್ತದೆ.

ಮನದ ಮುಂದಣ ಮಾಯೆ ಕಥೆ ಕೂಡ ಹೇಳುವ ವಿಧಾನವೇ ಪ್ರಧಾನವಾಗಿರುವ, ಆ ಕಾರಣಕ್ಕಾಗಿಯೇ ಮುಖ್ಯವಾಗುವ ಕಥೆ. ಇಲ್ಲಿನ ಕಥಾನಕದಲ್ಲಿ ಅಂಥ ವಿಶೇಷವೇನೂ ಇಲ್ಲ. ಅದೇ ದೇವದಾಸನ ಕತೆಯದೇ ಒಂದು ಆವೃತ್ತಿ ಇಲ್ಲಿರುವುದಾದರೂ ಅದು ಓದುಗನ ಮುಂದೆ ತೆರೆದುಕೊಳ್ಳುತ್ತ ಹೋಗುವ ವಿಧಾನವೇ ಹೊಸತನದಿಂದ ಕೂಡಿದೆ. ಅಗಸನಕಟ್ಟೆಯವರು ಅಸಹಜವಾಗಿ ತಮ್ಮ ಕಥೆಗಳಿಗೆ ತಿರುವುಗಳನ್ನು ನೀಡುವವರಲ್ಲ, ಹಾಗೆ ಮಾಡಿ ಕಥಾನಕವನ್ನು ಬೆಳೆಸುವವರಲ್ಲ. ಆದರೂ ಇಲ್ಲಿ ಈ ಕಥೆಯ ಮೂರನೆಯ ಭಾಗದಲ್ಲಿ ಅಂಥ ಒಂದು ಚಲನೆಯ ಪ್ರಯೋಗವನ್ನೂ ಅವರು ಮಾಡಿ ನೋಡುತ್ತಾರೆ. ಕಥೆಯೊಂದರ ವಾಸ್ತವದ ಬದುಕಿನೆದುರು ಈ ಕಲ್ಪನೆಯ ಸಾಧ್ಯತೆಯನ್ನಿಟ್ಟು ಕತೆಗಾರನ ಎದುರಿನ ಸವಾಲುಗಳನ್ನು ಮತ್ತು ಬದುಕಿನ ಅನನ್ಯತೆಯನ್ನು ತೋರುವ ಯತ್ನ ಇಲ್ಲಿದೆ. ಕಥೆ ಒಂದು ಸೀಮಿತ ಪರಿಧಿಯಲ್ಲಿ ಪರಿಹಾರಗಳನ್ನು, ಅಂತ್ಯಗಳನ್ನು, ಅರ್ಥವಂತಿಕೆಯನ್ನು ನಿರೀಕ್ಷಿಸುತ್ತದೆ. ಆದರೆ ಬದುಕಿಗಾದರೋ ಇಂಥ ಚೌಕಟ್ಟಿನ ಹಂಗಿಲ್ಲ. ಪ್ರೇಮದ, ಕಾಮದ ಸಂಬಂಧಗಳು ಇಡೀ ಬದುಕನ್ನೆ ಆವರಿಸುವ ಮಾಯೆಗಳಿರುತ್ತ ಕಥೆ ತನ್ನ ಒಡಲಿನ ಮಿತಿಗಳನ್ನು ಅವಕ್ಕೆ ತೊಡಿಸಲು ಬರುವುದಿಲ್ಲ. ಈ ಅರಿವು ಕತೆಗಾರನಿಗಿರುವ ಸವಾಲೆಂತೋ ಅಂತೆಯೇ ಅಸಂಖ್ಯ ಅವಕಾಶಗಳನ್ನು ಅವನೆದುರು ತೆರೆದಿಡುವ ವರ ಕೂಡ. ಅಗಸನಕಟ್ಟೆಯವರಿಗೆ ಈ ಅರಿವು ಇದೆ. ಹಾಗಾಗಿಯೇ ಅವರು ತಮ್ಮ ಕಥೆಗಳ ಆಕೃತಿಯತ್ತ ನೀಡಿದಷ್ಟೇ ಗಮನವನ್ನು ಕಥೆಯ ಸಾಮಾಜಿಕ, ತಾತ್ವಿಕ ಆಯಾಮಗಳತ್ತ ನೀಡಿಯೂ ಎಲ್ಲೂ ಅಸಹಜ ಒತ್ತಡಗಳಿಗೆ, ಆಕರ್ಷಕ ಮಾದರಿಗಳಿಗೆ ಮನಸೋಲದೆ ತಮ್ಮ ಕಥೆಗಳ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಯಾದವಾಡನ ಪಾದುಕಾ ಪ್ರಕರಣ ಈ ಸಂಕಲನದ ಇನ್ನೊಂದು ಉತ್ತಮ ಕಥೆ. ಶಿರಸಂಗಿಗೂ ಕಾಲಿಗಿಕ್ಕುವ ಕೆರಗಳಿಗೂ ಇರುವ ವಿಲಕ್ಷಣ ಸಂಬಂಧವನ್ನು ಅನಾವರಣಗೊಳಿಸುತ್ತಲೇ ಈ ಕಥೆ ಇನ್ನೂ ಏನೆಲ್ಲವನ್ನೂ ಕಾಣಿಸುತ್ತ ಹೋಗುವ ಪರಿಯೇ ವಿಶಿಷ್ಟವಾಗಿದೆ. ಕೆರಗಳು ನೆನಪಿಸುವ ಭೂತಕಾಲದ ಅಪಮಾನದ, ಬಡತನದ ಕಥೆಗಳಂತೆಯೇ ಇಂದೂ ಅವು ಅವನನ್ನು ಹಲವು ವಿಧದಲ್ಲಿ ಕಾಡುತ್ತಿವೆ. ಅವನು ಅವುಗಳಿಂದ ಮುಕ್ತನಾಗಲು ಬಯಸಿದರೂ ಅವು ಅವನನ್ನು ಬಿಡಲಾರವು. ಅಲೆಗಳು ಹೊತ್ತೊಯ್ಯುವ ಕೆರಗಳಿಂದ ಭವಿಷ್ಯದಲ್ಲೂ ಈ ಅಪಮಾನದ, ಹೋರಾಟದ ಚಕ್ರದಿಂದ ಶಿರಸಂಗಿಗೆ ಮುಕ್ತಿಯಿಲ್ಲ ಎಂಬುದನ್ನು ಹೇಳುವ ರೂಪಕ ವಿಧಾನವೊಂದು ಇಲ್ಲಿ ಅತ್ಯಂತ ಸಹಜವಾಗಿ, ಸುಂದರವಾಗಿ ಒಡಮೂಡಿದೆ.

ಅನಾಮಧೇಯರಿಬ್ಬರ ಮುಖಾಮುಖಿ ಕಥೆ ನಿರೂಪಣೆಯ ವಿಲಕ್ಷಣ ವಿಧಾನದಿಂದ ನಿರ್ಮಿಸುವ ಒಂದು ಮ್ಲಾನ ವಾತಾವರಣವೇನಿದೆ ಅದು ತುಂಬ ದಟ್ಟವಾಗಿ ಆವರಿಸಿದಂತೆ ಓದುಗನನ್ನು ಕಲಕಬಲ್ಲಷ್ಟು ತೀವೃವಾಗಿ ಮೂಡಿದೆ. ಒಂದು ಬಗೆಯ ಸಂಭಾಷಣೆಯ ಧಾಟಿಯಲ್ಲಿದ್ದೂ ಯಾರನ್ನೂ ಉದ್ದೇಶಿಸಿರದಂಥ ಮಾತುಗಳು ಈ ಕಥೆಯ ನಿರೂಪಣೆಗೆ ವಿಶಿಷ್ಟವಾದ ಶಕ್ತಿಯನ್ನು ನೀಡಿದೆ. ಕಥೆಯಲ್ಲಿ ಕರೆಂಟು ಹೋಗುವ ಒಂದು ಪ್ರಸಂಗ ಬರುತ್ತದೆ. ಹಾಗೆ ನೋಡಿದರೆ ಇಡೀ ಕಥೆ ಇಂಥ ಒಂದು ಅಘೋಷಿತ ಕತ್ತಲಲ್ಲೇ ಇಬ್ಬರು ಮಾತನಾಡಿಕೊಂಡಂತಿರುವುದು ವಿಶೇಷ. ಈ ಅಪರಿಚಿತತೆ, ಕೇಳುವವರಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲದಿದ್ದರೂ ತೋಡಿಕೊಳ್ಳುವವರ ಅನಾಥ ಪ್ರಜ್ಞೆ ಕಥೆಯ ಒಡಲಿನಲ್ಲಿ ಹಾಸುಹೊಕ್ಕಾಗಿದೆ. ಸಹಜೀವಿಯ ಆಂತರಿಕ ತಲ್ಲಣಗಳು ಎದುರಿನ ವ್ಯಕ್ತಿಗೆ ಇರ್ರಿಲೆವಂಟ್ ಆಗಬಹುದಾದ ಈ ಒಂದು ದರಿದ್ರ ಸ್ಥಿತಿಯೇ ಆಘಾತಕಾರಿಯಾಗಿದೆ. ವಸ್ತುವಿಗಿಂತ ತಂತ್ರವೇ ಇಲ್ಲಿ ಕಾಡುವಷ್ಟು ಗಾಢವಾಗಿ ಕೆಲಸ ಮಾಡುತ್ತದೆ.

ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ ಎನ್ನಲಾಗದು. ಆದರೆ ಈ ಓದು ಕೊಡುವ ಖುಶಿ ಕೇವಲ ಮನರಂಜನೆಯದ್ದಲ್ಲ. ಅದು ನಿರ್ಮಿಸುವ ಒಂದು ವಾತಾವರಣ, ಅವು ತೆರೆದು ತೋರಿಸುವ ಒಂದು ಸಹಜ ಬದುಕು, ಥಟ್ಟನೇ ಅಪ್ತವಾಗುವ ಅವರ ನಿರೂಪಣಾ ವಿಧಾನ, ನಡುನಡುವೆ ಬರುವ ಅನನ್ಯವಾದ ಕೆಲವು ಅಪರೂಪದ ಕಥೆಗಳು - ಈ ಎಲ್ಲ ಕಾರಣಗಳಿಗಾಗಿ ಮತ್ತೆ ಮತ್ತೆ ಮುಖ್ಯವೆನಿಸುವ ಕಥೆಗಾರ ಅಗಸನಕಟ್ಟೆ.
(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ ಒಂದಲ್ಲಾ ಒಂದೂರಿನಲ್ಲಿ ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸಪತ್ರಿಕೆಯಲ್ಲಿ ಪ್ರಕಟಿತ)

No comments: