Sunday, March 30, 2008

ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!


ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.
ಈ ಸಂಕಲನದ ಮೊದಲ ಕತೆ ಮಸೀದಿಯ ಅಂಗಳ ಬಹುಷಃ ಕತೆಯಾಗುವ ಅಥವಾ ಕಾದಂಬರಿಯಾಗುವ ಒಂದು ಸುಪ್ತ ಉದ್ದೇಶ ಇಟ್ಟುಕೊಂಡೇ ಹೊರಟ ಕಥಾನಕದಂತಿಲ್ಲ. ಬಾಲ್ಯದ ನೆನಪುಗಳ, ಸ್ಮೃತಿಗಳ ಮೆಲುಕಾಟದಂತೆ ತೊಡಗುವ ಈ ಎಲ್ಲ ವಿವರಗಳು ಕ್ರಮೇಣ ಹಲವು ಕತೆಗಳ ಒಡಲಾಗುತ್ತ, ಬೆಳೆಯುತ್ತ ಹೋಗುತ್ತದೆ. ಮಗುವಿನ ಕಣ್ಣುಗಳಿಂದ ಹಿರಿಯರ ಬದುಕಿನ ದುರಂತಗಳನ್ನು ಮುಗ್ಧವಾಗಿ ಕಟ್ಟಿಕೊಡುವ ಕತೆಗಳು ಕನ್ನಡಕ್ಕೆ ಹೊಸತೇನಲ್ಲ. ಆದರೆ ಇಲ್ಲಿ ಅಂಥ ಯೋಜಿತ ಉದ್ದೇಶ, ಕ್ರಿಯೆ ಎರಡೂ ಇಲ್ಲ. ಕತೆಯ ಕೊನೆಗೆ (ಕೊನೆಯೆಂಬುದು ಇದೆಯೆ, ಇಂಥ ಕತೆಗಳಿಗೆ?) ಈ ವಿವರಗಳಿಗೆಲ್ಲ ಒಂದು ಆಕಾರ ನೀಡಲು ಬಶೀರ್ ಪ್ರಯತ್ನಿಸಿದಂತಿದೆ. ಈ ಪ್ರಯತ್ನ ಕೂಡ ಅತ್ಯಂತ ಸಹಜವಾಗಿ, ಅಪ್ರಯತ್ನ ಎಂಬಂತಿರುವುದು ವಿಶೇಷ. ತಮ್ಮ ಪ್ರೀತಿಯ ಆಟದ ಅಂಗಳವಾಗಿದ್ದ, ಮದರಸಾದ ಕಠಿಣ ಕಲಿಕೆಯ ಶಿಸ್ತಿನಿಂದ ಆಚೆ ಒಂದಿಷ್ಟು ಸ್ವಾತಂತ್ರ್ಯದ ಆಕಾಶವನ್ನು ಒದಗಿಸುತ್ತಿದ್ದ ಮೈದಾನವಾಗಿದ್ದ, ಪ್ರೀತಿಯ ನೇರಳೆ ಮರದ ನೆರಳ ತಾವಾಗಿದ್ದ ಜಾಗ ಕ್ರಮೇಣ ಕಬರಸ್ಥಾನವಾಗುವುದನ್ನು, ಅದಕ್ಕಾಗಿ ಸವಿ-ಒಗರು ನೆನಹುಗಳ ಹಲವಾರು ಕಲರವಗಳನ್ನು ಹೊತ್ತ ನೇರಳೆ ಮರವನ್ನೂ ಕಡಿಯಬೇಕಾಗಿ ಬರುವುದನ್ನು, ಒಂದಲ್ಲಾ ಒಂದು ಕಾಲಕ್ಕೆ ಚಟುವಟಿಕೆಯ ಬುಗ್ಗೆಗಳಂತೆ ಅಲ್ಲೇ ಓಡಾಡಿಕೊಂಡಿದ್ದ ಪುಟ್ಟ ಮಕ್ಕಳೇ ಅಲ್ಲಿ ಹೆಣವಾಗಿ ಮಲಗುವುದನ್ನು, ಅದನ್ನು ಉಳಿದವರು ಕಾಣಬೇಕಾಗುವುದನ್ನು ಹಂತ ಹಂತವಾಗಿ ಚಿತ್ರಿಸುತ್ತ ಮಸೀದಿಯ ಅಂಗಳ ಸವಿನೆನಪುಗಳ ಪೊರೆ ಕಳಚಿಕೊಂಡು ವಿಷಾದದ ಕಹಿ ನೆನಪುಗಳ ಮೈತೋರುತ್ತದೆ.
ಉಮ್ಮಾ ಕತೆ ಅತ್ಯಂತ ಕೌಶಲದ, ಕತೆಗಾರರ ಪ್ರಾಮಾಣಿಕ ಪೋಷಣೆ ಪಡೆದ ಒಂದು ಉತ್ತಮ ಕತೆ. ವಸ್ತುವಿನ ಮಟ್ಟಿಗೆ ಅಂಥ ವಿಶೇಷ ಇಲ್ಲಿದೆ ಎನ್ನಲಾಗದಾದರೂ ಇದೇ ಬಗೆಯ ವಸ್ತು ಕನ್ನಡದ ಅನೇಕ ಕಥೆಗಾರರಲ್ಲಿ ಹೇಗೆಲ್ಲ ಅಭಿವ್ಯಕ್ತಿ ಪಡೆದಿದೆ ಎನ್ನುವುದನ್ನು ಗಮನಿಸುವಾಗ ವಿಶೇಷ ಮಹತ್ವ ಪಡೆಯುತ್ತದೆ. ಹೆತ್ತ ಮಗನ ಸಾವಿನ ನಂತರ ಮಗನ ಮಡದಿಯ ವಿಷಯದಲ್ಲಿ ಮಾವನಾದವ ನಡೆದುಕೊಳ್ಳುವ ಬಗೆಯನ್ನು ಕುರಿತೇ ನಮ್ಮಲ್ಲಿ ಹಲವು ಕತೆಗಳು ಬಂದಿವೆ. ಮಗನಿಗಿಂತ ಕಿರಿಯಳಾದ ಎರಡನೆಯ ಹೆಂಡತಿಯನ್ನು ಮನೆತುಂಬಿಸಿಕೊಂಡ ತಂದೆ ಅಥವಾ ಬೆಳೆದ ಮಗನ ಎದುರೇ ಇನ್ನೊಬ್ಬಳನ್ನು ಇಟ್ಟುಕೊಂಡು ಊರೆಲ್ಲ ಗುಲ್ಲು ಮಾಡಿಕೊಂಡ ತಂದೆಯ ಕತೆ - ತಂದೆ ಮಗನ ಸಂಬಂಧವನ್ನು ಒರೆಗೆ ಹಚ್ಚುವುದನ್ನು ಕಂಡಿದ್ದೇವೆ. ಇದೇ ರೀತಿ ತಾಯಿ ಮಗಳ ಅಥವಾ ತಂದೆ ಮಗಳ ನಡುವಿನ ಒಳತೋಟಿಗಳನ್ನು ಮೀಟುವ ಕತೆಗಳೂ ಕನ್ನಡದಲ್ಲಿವೆ. ಇಲ್ಲಿ ಅಪ್ಪ ಎರಡನೆ ಮದುವೆ ಮಾಡಿಕೊಂಡು ಮನೆತುಂಬಿಸಿಕೊಳ್ಳುವ ಹುಡುಗಿ, ಚಿಕ್ಕಮ್ಮ ಎನಿಸಿಕೊಳ್ಳಲು ತಯಾರಾದ ಹುಡುಗಿ, ಮಗನ ಪತ್ನಿಯಾಗಲು ಯೋಗ್ಯಳಾದ ಒಬ್ಬಳು ಕನ್ಯೆ. ಇದು ತೀರಿಕೊಂಡ ತನ್ನ ಪ್ರೀತಿಯ ಉಮ್ಮಾಳ ನೆನಪಿನಲ್ಲಿ ಇನ್ನೂ ಹೊಯ್ದಾಡುತ್ತಿರುವ ಯುವಕನಲ್ಲಿ ಉಂಟು ಮಾಡುವ ತಲ್ಲಣಗಳು, ಅಪ್ಪ ಮಗನ ಸಂಬಂಧದಲ್ಲಿ ಕಾಣಿಸಿಕೊಳ್ಳುವ ಮೌನದ ಗೋಡೆಗಳು, ಅದರ ನಡುವಿನ ಬಿರುಕುಗಳು ಎಲ್ಲ ಕತೆಯಲ್ಲಿ ನವಿರಾಗಿ, ಅತ್ಯಂತ ಸಾವಧಾನವಾಗಿ ಮೂಡಿರುವುದು ಗಮನಾರ್ಹ.
ಬಾಳೆಗಿಡ ಗೊನೆಹಾಕಿತು ಕೊಂಚ ವಾಗ್ ವೈಭವಕ್ಕೆ ಅಗತ್ಯಕ್ಕಿಂತ ಹೆಚ್ಚೇ ಮನಸೋತಿದೆ ಅನಿಸಿದರೂ ಕತೆಯ ಉತ್ತರಾರ್ಧ ಅಗತ್ಯವಾದ ಬಿಗಿಯನ್ನು ಮೈಗೂಡಿಸಿಕೊಂಡು ಮನಸ್ಸಿಗಿಳಿಯುವ ಅಂತ್ಯದಿಂದ ಮನಗೆಲ್ಲುತ್ತದೆ. ಕೆ ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಮಾದರಿ ನಮ್ಮ ಬಹುತೇಕ ಎಲ್ಲ ಯುವ ಕತೆಗಾರರನ್ನು ಸೆಳೆದಿರುವುದು ಕುತೂಹಲಕರ!
ಗೋಡೆ ಕಪಾಟು ಒಂದು ಬಗೆಯ ವಿಡಂಬನೆಯನ್ನೇ ಗುರಿಯಾಗಿರಿಸಿಕೊಂಡಂತೆ ಕಾಣುವ ಕತೆ. ಸಾಹಿತಿಯ ಸಾಹಿತ್ಯ ಮತ್ತು ಬದುಕಿನ ನಡುವಿನ ಕಂದಕವನ್ನು ಲೇವಡಿಯಿಲ್ಲದೆ, ಸಾಧ್ಯವಾದ ಮಟ್ಟಿಗೆ ಕೊಂಕು ಇಲ್ಲದೆ ನೋಡುವ ಕತೆಯಿದು ಎಂದರೂ ಒಟ್ಟಾರೆಯಾಗಿ ಇದು ವಿಡಂಬನೆಯ ಲೇಪದಿಂದ ಮುಕ್ತವಾಗುವುದಿಲ್ಲ.
ರಣರಂಗದಲ್ಲಿ ಮುಸ್ಸಂಜೆ, ತಮಸೋಮಾ ಮತ್ತು ಹಲೋ ಹಲೋ ಕತೆಗಳು ಬಶೀರರಲ್ಲಿರುವ ಕತೆಗಾರನ ನಿಜವಾದ ಅಂತಃಸ್ಸತ್ವವನ್ನು ತೆರೆದು ತೋರುವಂಥ ಕತೆಗಳು. ರಣರಂಗದಲ್ಲಿ ಮುಸ್ಸಂಜೆ ಕತೆಯ ವಸ್ತು ತುಂಬ ಸೂಕ್ಷ್ಮದ್ದು. ಕೊಂಚ ಅವಾಸ್ತವಿಕ ಎನಿಸುವ ಒಂದು ನೆಲೆಯಿಂದಲೇ ಹೊರಟರೂ ಇಲ್ಲಿನ ನಿರೂಪಣೆಯ ಬಿಗಿ, ಮಿತಿಯಲ್ಲಿರುವ ಮಾತುಗಳು, ಕಥಾನಕದ ಹೆಚ್ಚಿನ ಹೊಣೆಯನ್ನು ತಾವೇ ಹೊತ್ತಂತಿರುವ ವಿವರಗಳು ಈ ಕತೆಯನ್ನು ಯಶಸ್ವಿಯಾಗಿಸಿವೆ. ವಸ್ತುವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಅದೇ ರೀತಿ ತಮಸೋಮಾದ ವಸ್ತು ಕೂಡ ತುಂಬ ಹೊಸತನದಿಂದ ಕೂಡಿದ್ದು ನಿರೂಪಣೆಯ ಹದ ನಿಜಕ್ಕೂ ಅದ್ಭುತವಾಗಿದೆ. ಇಂಥ ವಸ್ತು ಮತ್ತು ಕಥಾನಕವನ್ನು ಆಕರ್ಷಕವಾಗಿ, ಸಂಯಮದಿಂದ ನಿರ್ವಹಿಸುವುದು ನಿಜಕ್ಕೂ ಒಂದು ರೀತಿಯ ಸವಾಲು. ಇದನ್ನು ಬಶೀರ್ ತುಂಬ ತಾಳ್ಮೆಯಿಂದ ನಿಭಾಯಿಸುತ್ತಾರೆ. ಹಲೊ ಹಲೊ ಕತೆ ಮೇಲ್ನೋಟಕ್ಕೆ ವಿಶೇಷವಾದುದೇನನ್ನೂ ತನ್ನೊಡಲೊಳಗೆ ಇರಿಸಿಕೊಂಡಂತೆ ಕಾಣುವುದಿಲ್ಲವಾದರೂ ಈ ಕತೆ ಎಂಥವರನ್ನೂ ತಲ್ಲಣಗೊಳಿಸಿಬಿಡುವ ಪರಿಯೇ ಒಂದು ಅಚ್ಚರಿ. ಐದೇ ಐದು ಶಬ್ದಗಳ ಕೊನೆಯ ಒಂದು ಸಾಲು ಸಾಧ್ಯವಾಗಿಸುವ ಈ ಪವಾಡಕ್ಕೆ ಬೆರಗಾಗಿದ್ದೇನೆ. ಹಾಗೆಯೇ ಈ ಮೂರೂ ಕತೆಗಳ ಬಗ್ಗೆ ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲದ ಒಂದು ಕಥಾನಕವನ್ನು ಮೀರಿದ ವ್ಯಾಪ್ತಿಯನ್ನು ಈ ಮೂರೂ ಕಥೆಗಳು ಪಡೆದಿರುವುದು ಗಮನಿಸ ಬೇಕಾದ ಅಂಶವಾಗಿದೆ. ಬಶೀರ್ ಇನ್ನಷ್ಟು ಕತೆಗಳನ್ನು ಬರೆಯಬೇಕಿತ್ತು ಅನಿಸುವಾಗಲೇ ಸುದ್ದಿಮನೆಯ ಕತೆಗಳ ನಡುವೆ ಅವರು ಕಳೆದೇ ಹೋದಂತಿದ್ದಾರೆ. ಅವರು ಮತ್ತೆ ಕತೆಗಳನ್ನು ಬರೆಯಬೇಕು, ಅವರ ಸಂಕಲನ ಬರಬೇಕು ಅನಿಸುವಂತೆ ಮಾಡುತ್ತದೆ ಈ ಬಾಳೇ ಗಿಡ.

1 comment:

Anonymous said...

ಪ್ರಿಯ ಪೈ,
ಬಿ.ಎಂ.ಬಶೀರ್ ನನ್ನ ಇಷ್ಟದ ಕತೆಗಾರರಲ್ಲೊಬ್ಬರು. ಆದ್ದರಿಂದಲೇ ನಿಮ್ಮ ಬರಹವನ್ನು ಕುತೂಹಲದಿಂದ ಓದಿದೆ. ಅವರ ಅಣ್ಣ ರಶೀದ್ ಕೂಡ ಚೆನ್ನಾಗಿ ಬರೆಯುತ್ತಿದ್ದರು. ಅಣ್ಣನಂತೆಯೇ ಕ್ರಿಯಾಶೀಲವಾಗಿರುವ, ಆದರೆ ತಮ್ಮ ನಿಲುವುಗಳ ಬಗ್ಗೆ ಅಣ್ಣನಿಗಿಂತ ಹೆಚ್ಚು ಸ್ಪಷ್ಟತೆ ಹೊಂದಿರುವ ಬಶೀರ್ ಎಲ್ಲೂ ಕಳೆದುಹೋಗದಿರಲಿ ಎಂಬುದು ನನ್ನ ಹಾರೈಕೆ.
‘ಗೋಡೆ ಕಪಾಟು’ ಕತೆಯ ಕುರಿತು ನೀವು ಬರೆದಿದ್ದರ ಬಗ್ಗೆ ನನಗೆ ಕೊಂಚ ತಕರಾರಿದೆ. ಈ ಕತೆ ವಿಡಂಬನೆಯಲ್ಲೇ ನಿಲ್ಲುತ್ತದೆ ಅಂತೇನೂ ನನಗೆ ಅನಿಸಿಲ್ಲ. ‘ಕಟು ವಿಡಂಬನೆ ’ ಅನ್ನಬಹುದೇನೋ ? ಅದರ ಆಳದಲ್ಲಿರುವ ನೋವಿನ ಅರಿವು ವಿಡಂಬನೆಯನ್ನು ತೀಕ್ಞ್ಣಗೊಳಿಸುತ್ತದೆ. ಅಗ್ರೀ ಟು ಡಿಸ್‌ಅಗ್ರೀ !
- ಪ್ರೀತಿಯಿಂದ
ಹರೀಶ್ ಕೇರ