Sunday, April 13, 2008

ಚೀನಾದ ಜನಸಾಮಾನ್ಯರು


ಈಗ ಚೀನಾ ಸುದ್ದಿಯಲ್ಲಿದೆ. ಟಿಬೆಟ್‌ನ ಯುವಕರು ಸುರುಹಚ್ಚಿಕೊಂಡ ಪ್ರತಿಭಟನೆ ಬೇರೆ ಬೇರೆ ಕಡೆಗಳಲ್ಲಿ ಈ ಒಲಿಂಪಿಕ್ ಜ್ಯೋತಿಗೆ ಸಿಕ್ಕ ಸ್ವಾಗತದಲ್ಲೂ ತನ್ನ ಇರವು ತೋರಿಸಿದೆ. ಬೌದ್ಧರ ಗುರು ದಲಾಯಿಲಾಮಾ ತಮ್ಮ ನಂತರದ ತಲೆಮಾರು ಬಹಳಷ್ಟು ಬದಲಾಗಿರುವ ಮೌಲ್ಯಗಳನ್ನು ಹೊಂದಿರುತ್ತದೆ ಎನ್ನುವ ಅರ್ಧ ಭವಿಷ್ಯ ಮತ್ತು ಅರ್ಧ ವರ್ತಮಾನವನ್ನು ಕುರಿತು ಆಡಿದಂಥ ಮಾತುಗಳು ಅವರ ಆತಂಕವೋ ಆಶಯವೋ ತಿಳಿಯದೆ ಜನ ಗೊಂದಲಗೊಂಡಂತಿದ್ದಾರೆ. ಹಾಗೆಯೇ ಚೀನಾ ಕಳೆದ ಒಂದೆರಡು ದಶಕಗಳಲ್ಲಿ ಎದುರುಗೊಂಡ ತಲ್ಲಣಗಳು, ಅದರ ಆರ್ಥಿಕ ಸಾಮಾಜಿಕ ಬದುಕು ಅಲ್ಲಾಡಿ ಮತ್ತೆ ಸ್ಥಿರಗೊಂಡ ಬಗೆ ಎಲ್ಲವನ್ನೂ ಜಗತ್ತು ಗಮನಿಸಿದೆ. ಚೀನಾದ ಮಹಾಗೋಡೆ ಮನಸ್ಸಲ್ಲಿ ಮೂಡಿಸುವ ಅದರ ಮುಚ್ಚಿದ ಬಾಗಿಲುಗಳ ನಿಗೂಢ ಲೋಕ ಕ್ರಮೇಣ ಜಾಗತೀಕರಣದ ಅವಕಾಶಗಳಿಗೆ ಬಾಗಿಲು ತೆರೆದಿದ್ದು ಮತ್ತು ಜಾಗತೀಕರಣದ ಒಳಿತುಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಒಂದು ದೇಶ ಚೀನಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಎಲ್ಲ ಈಗ ಇತಿಹಾಸ. ನಾವೆಲ್ಲ ಮಾಧ್ಯಮಿಕ ತರಗತಿಗಳಲ್ಲಿ ಕಲಿಯುತ್ತಿದ್ದಾಗ ಈ ಚೀನಾ ಎಂದರೆ ದ್ರೋಹದ ಸಂಕೇತದಂತೆ ಕಂಡಿತ್ತು. ಹಿಂದೀ ಚೀನೀ ಭಾಯಿ ಭಾಯಿ ಎನ್ನುತ್ತಲೇ ಈ ದೇಶ ಸಿಯಾಚಿನನ್ನು ಆಕ್ರಮಿಸಿದ್ದು ಆ ಎಳೆಯ ಮನಸ್ಸಿನಲ್ಲಿ ನಿಂತಿತ್ತು. ಆದರೆ ತುಂಡು ತುಂಡಾದ ಈ ಎಲ್ಲವೂ ತಪ್ಪುತಪ್ಪಾದ ಚಿತ್ರಗಳೇ. ಒಂದು ದೇಶವನ್ನು ಅಲ್ಲಿಯ ಜನರನ್ನು ಹೀಗೆಲ್ಲ ಸಾರಾಸಗಟಾಗಿ ಗ್ರಹಿಸುವುದು ತಪ್ಪು. ಮನುಷ್ಯ, ಅವನ ಆಶೆ, ದುಗುಡ, ಅಗತ್ಯ, ಮುಗ್ಧತೆ, ಆದರ್ಶ, ನೀಚತನ ಇವಕ್ಕೆಲ್ಲ ಗಡಿಗಳಿಲ್ಲ. ಇದೆಲ್ಲ ಚೆನ್ನಾಗಿ ಅರ್ಥವಾಗುವುದು ಸಾಹಿತ್ಯದ ಮೂಲಕ ಎಂದೇ ಅನಿಸುತ್ತದೆ.
ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.
ಜೀಜುನ್ ಜೊತೆಗಿನ ಪ್ರೇಮಾಂಕುರ, ಆನಂತರದ ಮದುವೆ, ದಾಂಪತ್ಯ, ಅದು ಕ್ರಮೇಣ ಉತ್ಸಾಹ ಕಳೆದುಕೊಂಡ ಆಚರಣೆಯ ಮಟ್ಟಕ್ಕಿಳಿಯುವುದು ಮತ್ತು ಅದನ್ನು ಕೊನೆ ಎಂದು ತಿಳಿದ ಶಿಜುವಾನ್ ಶೆಂಗ್‌ಗೆ ಅದೇ ನಿಜವಾದ ಆರಂಭವಾಗಿತ್ತು ಎಂದು ತಡವಾಗಿ ಅರ್ಥವಾಗುವುದು ಇಲ್ಲಿ ಮೆಲುಗತಿಯ ಒಂದು ಹಾಡಿನಂತೆ ಇದೆಯಿಲ್ಲಿ. ಜೀಜುನ್‌ಳ ಪಾತ್ರ ಚಿತ್ರಣ ಅಸ್ಪಷ್ಟ ರೇಖೆಗಳಲ್ಲೇ ಒಡಮೂಡಿದ್ದರೂ ಅದು ನಮ್ಮನ್ನು ಕಾಡುವಲ್ಲೇ ಗಾಢವಾಗಿ ಬಿಡುವುದು ನಿಜವಾದ ಅಚ್ಚರಿ! ಕತೆಗೆ ಒಂದು ಗುಂಗಿದೆ. ಈ ಗುಂಗಿನಲ್ಲಿ ನಮ್ಮನ್ನು ಕಾಡುವ ಇನ್ನೇನೋ ಇದೆ.
ಹುಲ್ಲಿನ ದಳಗಳು ಕಥೆಯ ಮಿಠಾಯಿವಾಲಾ ಮುದುಕ ಕಾಬೂಲಿವಾಲಾನ ನೆನಪು ತರುತ್ತಾನೆ. ಪುಟ್ಟ ಕಥೆ. ಒಂದು ಮನೋಲಹರಿಯ ಗತಿಯಲ್ಲಿದೆ.
ಉದ್ದ ಹೆಂಡತಿ ಮತ್ತು ಗಿಡ್ಡ ಗಂಡ ಕತೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಹಾಗೆ ನೋಡಿದರೆ ಏನೂ ಇಲ್ಲದ ಈ ಕತೆಯ ದೇಹದೊಳಗೆ ಮಿಡಿಯುವ ಆತ್ಮವೊಂದು ಅದೆಲ್ಲಿಂದ ಬಂದು ಸೇರಿಕೊಂಡಿದೆಯೋ ತಿಳಿಯುವುದಿಲ್ಲ! ಈ ಕತೆಯನ್ನು ಮೇಲಿನ ಜೀಜುನಳ ಕತೆಯೊಂದಿಗೂ ಹೋಲಿಸಬಹುದು. ಇದೂ ಒಂದು ದಾಂಪತ್ಯದ - ದಂಪತಿಗಳ ಕತೆಯೇ. ಆದರೆ ಇದನ್ನು ನಮಗೆ ಕಾಣಿಸುವ ಮಂದಿ ಒಂದು ವಠಾರದವರು. ದಂಪತಿಗಳು ಅವರ ಪಾಡಿಗೆ ಅವರು ದುಡಿಯುತ್ತ, ಓಡಾಡಿಕೊಂಡಿದ್ದರೆ ಈ ಮಂದಿ ಅವರ ಸುಖದ ಬಗ್ಗೆ ಅಸೂಯೆಪಡುತ್ತ, ಪ್ರೀತಿಯನ್ನು ಅನುಮಾನಿಸುತ್ತ, ಆ ದಾಂಪತ್ಯದಲ್ಲಿ ಏನಾದರೊಂದು ತಿರುವಿಗಾಗಿ, ಬದಲಾವಣೆಗಾಗಿ ಹಂಬಲಿಸಿ ಕಾಯುತ್ತ ಇರುವುದನ್ನು ಹೇಳುವುದರ ಮೂಲಕವೇ ಕತೆ ಮೈತಳೆಯುತ್ತದೆ. ಈ ತಂತ್ರದ ವಿಶಿಷ್ಯತೆಯೇ ಕತೆಗೆ ಬೇಕಾದ ತಮಾಷೆ, ಆತಂಕ, ಕೌತುಕ ಎಲ್ಲವನ್ನೂ ನೀಡುವಂತಿರುವುದನ್ನು ಗಮನಿಸಿ. ಮನುಷ್ಯನ ಸಣ್ಣತನ, ಪ್ರೀತಿ, ಮುಗ್ಧತೆ, ಔದಾರ್ಯ ಎಲ್ಲವೂ ಅವನು ತನಗೆ ಸಂಬಂಧವೇ ಇಲ್ಲದ ಒಂದು ದಾಂಪತ್ಯಕ್ಕೆ ಅನಗತ್ಯವಾಗಿ ಸ್ಪಂದಿಸುವ ರೀತಿಯಲ್ಲೇ ತೆರೆದುಕೊಳ್ಳುವ ಬೆರಗು ಇಲ್ಲಿದೆ. ಈ ದಾರಿಯಲ್ಲೇ ಯಾರದೋ ಆಗಿ ತೊಡಗುವ ಕತೆ ನಮ್ಮೊಳಗಿನವನದೇ ಆಗಿಬಿಡುವ ಮಾಯಕ ಮಾತ್ರ ಯಾವ ಕ್ಷಣದಲ್ಲಿ ಸಂಭವಿಸಿತೋ ಅರಿವಾಗುವುದಿಲ್ಲ. ಕತೆ ಮನಸ್ಸಿಗಿಳಿಯುವುದು ಇಲ್ಲೇ.
ಕಪ್ಪು ಗೋಡೆಗಳು ಕೂಡ ಇದೇ ತಂತ್ರವನ್ನು ಹೊಂದಿರುವುದು ಕುತೂಹಲಕರ. ಇಲ್ಲಿ ವಠಾರ ಗಮನಿಸುತ್ತಿರುವುದು ದಾಂಪತ್ಯವನ್ನಲ್ಲ. ತನ್ನ ಮನೆಗೂ, ಮನೆಯ ಮಾಡಿಗೂ ಕಪ್ಪು ಬಣ್ಣ ಬಳಿಯುತ್ತಿರುವ ಒಬ್ಬ ವಿಲಕ್ಷಣ ವ್ಯಕ್ತಿಯ ವಿಚಿತ್ರ ನಡವಳಿಕೆ ಇಲ್ಲಿನ ವಠಾರದವರನ್ನು ಇನ್ನಿಲ್ಲದಂತೆ ಚಿಂತೆಗೆ ಹಚ್ಚಿದೆ. ವಠಾರದಲ್ಲಿದ್ದೂ ಅವನ ಬಗ್ಗೆ ಹೆಚ್ಚೇನೂ ಈ ಮಂದಿಗೆ ಗೊತ್ತಿಲ್ಲದಿರುವುದೇ ಇವರ ಕುತೂಹಲಕ್ಕೆ ಕಾರಣವಾದರೂ ಈ ಅಕಸ್ಮಾತ್ತಾಗಿ ಸುರುವಾದ ವಿದ್ಯಮಾನ ಅವರನ್ನು ಕಂಗಾಲಾಗಿಸಿದೆ. ಏನು ಮಾಡಬೇಕು ಇಂಥ ಸಂದರ್ಭದಲ್ಲಿ ಅನ್ನುವುದೇ ಅವರಿಗೆ ಹೊಳೆಯುತ್ತಿಲ್ಲ.
ಬೊಂಬೆಗಳು ಕತೆ ಬಹುಷಃ ಈ ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಒಂದು. ವಿಚಿತ್ರವೆಂದರೆ ಲಂಕೇಶರ ಒಂದು ಕತೆಯನ್ನು ಈ ಕತೆ ನೆನಪಿಸುವುದು! ಆ ಕತೆಯ ಹೆಸರು ಕೃತಜ್ಞತೆ ಎಂಬ ನೆನಪು. ಮಧ್ಯವಯಸ್ಕ ಹೆಂಗಸೊಬ್ಬಳು ಒಂದು ಪುಟ್ಟ ಅಂಗಡಿ ನಡೆಸುತ್ತಿದ್ದಾಳೆ. ಅವಳ ಅಂಗಡಿಯಲ್ಲಿ ಐದಾರು ಮಂದಿ ಸೇಲ್ಸ್ ಗರ್ಲ್ಸ್, ಬಾಯ್ಸ್ ಕೆಲಸಕ್ಕಿದ್ದಾರೆ. ಅವರಲ್ಲಿ ಒಬ್ಬ ಹುಡುಗ ತನ್ನ ತಾರುಣ್ಯದ ವಿಚಿತ್ರಗಳಿಂದ ಮಾಲಕಿಯ ಗಮನ ಸೆಳೆಯುತ್ತಾನೆ. ಮನುಷ್ಯ ಸಂಬಂಧಗಳನ್ನು ಗಂಡು-ಹೆಣ್ಣು ನೆಲೆಯಲ್ಲೇ ಕಾಣುತ್ತ ಸಾಕಷ್ಟು ಗೋಜಲುಗಳನ್ನು ಹುಟ್ಟಿಸಿಕೊಳ್ಳಲು ಹದವಾದ ವಯಸ್ಸು ಅವನದು. ತನ್ನ ವಿಕ್ಷಿಪ್ತವೆನಿಸಬಹುದಾದ ನಡೆಯಿಂದ ತನ್ನ ಬಿಗು ನಿಲುವಿನ, ವ್ಯವಹಾರಸ್ಥೆಯಾದ ಮಾಲಕಿಯಲ್ಲಿ ಅವನು ತನಗೇ ಅರಿಯದಂತೆ ಎಬ್ಬಿಸಿರಬಹುದಾದ ತಲ್ಲಣಗಳನ್ನೆಲ್ಲ ಇಲ್ಲಿ ಓದುಗನೇ ಭರಿಸಬೇಕಾಗುವ ಹಾಗೆ ಲಂಕೇಶ್ ಕತೆ ಬರೆಯುತ್ತಾರೆ. ಅವಳ ಸೆಟೆದುಕೊಂಡ ಹೆಣ್ತನದಲ್ಲೇ ಅದರ ಟೊಳ್ಳುತನದ ಕುರುಹುಗಳನ್ನೆಲ್ಲ ಕಾಣಿಸುವ ಲಂಕೇಶರ ಕತೆಯನ್ನೇ ನೆನಪಿಸುವ ಈ ಬೊಂಬೆಗಳು ಕತೆ ಕೂಡ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಪಡ್ಡೆ ಹುಡುಗನ ಬದಲಿಗೆ ಐವತ್ತರ ಮಾಗಿದ ಮನುಷ್ಯನಿದ್ದಾನೆ. ಫ್ಯಾಶನ್ ಅಂಗಡಿಯ ಮಾಲಕಿಗೂ ಸುಮಾರು ಅದೇ ವಯಸ್ಸು. ಇಬ್ಬರೂ ಒಂಟಿ ಜೀವಿಗಳು. ಶ್ಯುಜೆನ್‌ಗೆ ತಾನು ಮಾದಕವಾಗಿ ಕಾಣುವಂತೆ, ಆಧುನಿಕ ಪೋಷಾಕುಗಳಲ್ಲಿ, ಆಕರ್ಷಕ ಭಂಗಿಗಳಲ್ಲಿ ಶೃಂಗರಿಸುವ ಬೊಂಬೆಗಳಲ್ಲಿ ಕ್ರಮೇಣ ತನ್ನ ಮಾಲಕಿ ಹುವಾರೂಯಿ ಕಾಣತೊಡಗುವುದು ಮತ್ತು ವ್ಯವಹಾರಸ್ಥೆಯಾಗಿಯೂ, ತನ್ನ ಒಳಗನ್ನು ತುಂಬ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡವಳಂತೆಯೂ ಕಾಣುವ ಹುವಾರೂಯಿಯ ಆಳದ ನೆಮ್ಮದಿಯೇ ಅವನನ್ನು ಕಾಡತೊಡಗುವುದೂ ಹೆಚ್ಚು ಕಡಿಮೆ ಒಂದೇ ಕಾಲಕ್ಕೆ ಸಂಭವಿಸುತ್ತದೆ! ಹುವಾರೂಯಿಯ ಪಾತ್ರವನ್ನು ಹಿಡಿದಿರಿಸಿದ ರೀತಿ ಅನನ್ಯವಾಗಿರುವುದು ಈ ಕತೆಯ ಹೆಚ್ಚುಗಾರಿಕೆ.
ಕಿಟಕಿ ಕತೆ ಆಳವಾಗಿ ತಟ್ಟುವ, ವಾಸ್ತವವೊಂದರ ನಿರೂಪಣೆಯೋ ಎಂಬಷ್ಟು ನೇರವಾಗಿರುವ ಕತೆ. ಈ ಕತೆಯಲ್ಲಿ ಹಣಿಕಿಕ್ಕುವ ವರದಿಯ ಧಾಟಿ, ಕಥಾನಕದಲ್ಲಿ ನೇರವಾಗಿ ಒಳಗುಗೊಳ್ಳದ ನಿರುದ್ವಿಗ್ನ ನಿರೂಪಣೆಯ ವಿಧಾನ ಈ ಕತೆಯನ್ನು ವಿಭಿನ್ನವಾಗಿಸಿದೆ. ಕತೆಗಿಂತ ಯಾವುದೋ ಅನುಭವ ಕಥನವನ್ನು ಓದುತ್ತಿರುವ ಭಾವನೆ ಬರುವಂತೆ ಈ ನಿರೂಪಣೆ ಇದೆ. ಪ್ರೇಮಿಗಳ ನಡುವಿನ ತಪ್ಪುಕಲ್ಪನೆ ನಿವಾರಣೆಯಾಗುವಲ್ಲಿ ದಕ್ಕುವ ಅಂತ್ಯ ಈ ಕತೆಗಾರ ಕೊನೆಗೂ ಏನೋ ಹೇಳಲು ಹೋಗಿ ಇನ್ನೇನೋ ಹೇಳುವ, ನಿರೂಪಣೆಗೆ ಒಂದು ಚೌಕಟ್ಟು ತೊಡಿಸುವ ಅನಿವಾರ್ಯಕ್ಕೆ ಸಿಕ್ಕಿಕೊಂಡರೇ ಅನಿಸುವಂತೆ ಮಾಡುತ್ತದೆ. ಏನಿದ್ದರೂ ಈ ಓದು ನಿರಾಸೆಯನ್ನಂತೂ ಹುಟ್ಟಿಸುವುದಿಲ್ಲ.
ಆಕಸ್ಮಿಕಕ್ಕೆ ಸಿಕ್ಕಿ ಮಲಗಿಕೊಂಡಲ್ಲೇ ಶೇಷಾಯುಷ್ಯವನ್ನೆಲ್ಲ ಕಳೆಯ ಬೇಕಾಗಿ ಬಂದ ಯುವಕರು ಪಾತ್ರವಾಗಿರುವ ಕತೆಗಳು ಕನ್ನಡದಲ್ಲಿ ತುಂಬ ಇವೆ. ಎಂ.ವ್ಯಾಸ (ಸ್ನಾನ ಸಂಕಲನ), ಅಶೋಕ ಹೆಗಡೆ (ವಾಸನೆ,ಶಬ್ದ,ಬಣ್ಣ ಇತ್ಯಾದಿ ಹೆಸರಿನ ಹೊಸ ಕಥಾ ಸಂಕಲನ), ಸಿ.ಎನ್.ರಾಮಚಂದ್ರ (ಮೊತ್ತ ಸಂಕಲನ) ಬರೆದ ಕತೆಗಳು ಇಲ್ಲಿ ನೆನಪಾಗುತ್ತವೆ. ಸಾಧಾರಣವಾಗಿ ನಿಷ್ಪ್ರಯೋಜಕನಾಗಿ ಮಲಗಿದ ಯುವಕ ವಿವಾಹಿತನೇ ಆಗಿರುವುದೊಂದು ವಿಶೇಷ. ಅಂಥವರ ದಾಂಪತ್ಯದ ತಲ್ಲಣಗಳು ಕತೆಯ ಕೇಂದ್ರದಂತೆ ಮಿಡಿಯುತ್ತಿರುವುದು ಹೆಚ್ಚು. ಆದರೆ ಇಲ್ಲಿ ಹಾಗಿಲ್ಲ. ಇಲ್ಲಿ ಈ ಆಕಸ್ಮಿಕದ ಕಾರ್ಯಕಾರಣ ಸಂಬಂಧದ ಕುರಿತೇ ಮಹತ್ವಾಕಾಂಕ್ಷಿಯಾಗಿದ್ದ ಯುವಕ ನಡೆಸುವ ವ್ಯರ್ಥ ಜಿಜ್ಞಾಸೆಯಿದೆ. ಈ ವ್ಯರ್ಥ ಜಿಜ್ಞಾಸೆಯಲ್ಲೂ ಬದುಕನ್ನು ಮುನ್ನೆಡಸಬಲ್ಲ ಒಳನೋಟಗಳು ದಕ್ಕುವಂತಿರುವುದು ಈ ಕತೆಯ ವಿಶೇಷ.
ಶಿಫು ಇನ್ನೊಂದು ಗುಂಗು ಹಿಡಿಸಬಲ್ಲ ದಟ್ಟ ವಿವರಗಳ, ಕುತೂಹಲಕರವೂ ವಿಲಕ್ಷಣವೂ ಆದ ಪಾತ್ರವೊಂದರ ಸುತ್ತಲೇ ಇರುವ ನೀಳ್ಗತೆ. ಅಯಸ್ಕಾಂತ ಹಚ್ಚಿರುವ, ಮುಚ್ಚುವಾಗ ಟಪ್ ಎಂದು ಸದ್ದು ಮಾಡುವ ಮುಚ್ಚಳವಿರುವ ಪೆನ್ಸಿಲ್ ಬಾಕ್ಸ್‌ಗಾಗಿ ಒಂದೇ ಒಂದು ಮಿನಿಟು ನಿಲ್ಲುವ ರೈಲುಬಂಡಿಯೊಳಗೆ ಕಾಲಿಟ್ಟು ಕಳೆದುಹೋಗುವ ಹುಡುಗಿಯ ಕತೆ ಓಹ್, ಸಿಯಾಂಗ್ ಸ್ಯೂ! ಈ ಪುಟ್ಟ ದೇವತೆಯಂಥ ಮುಗ್ಧ ಹಳ್ಳಿ ಹುಡುಗಿ ಸಿಯಾಂಗ್ ಸ್ಯೂ ಜೊತೆ ಪ್ರಕೃತಿ ಕೂಡ ಮಾತನಾಡುತ್ತದೆ ಇಲ್ಲಿ. ಜಯಂತರ ಕತೆಗಳಲ್ಲಿ, ನುಡಿಚಿತ್ರಗಳಲ್ಲಿ ಮತ್ತೆ ಮತ್ತೆ ಬರುವ ಮುಂಬಯಿಗೆ ಹೊರಟಿರುವ ಟ್ರಕ್ಕು, ಅದರ ಡ್ರೈವರು, ಪುಗ್ಸಟ್ಟೆ ಟ್ರಕ್ಕು ಹತ್ತಿ ಕೂತ ವಿಚಿತ್ರ ಆತಂಕ, ಕನಸು, ಖುಶಿಗಳ ಮುದ್ದೆಯಂತಿರುವ ಒಬ್ಬ ನಿರುದ್ಯೀಗಿ ಯುವಕ - ರನ್ನು ನೆನಪಿಸುವ ಕತೆ ಹದಿನೆಂಟರ ಹೊಸ್ತಿಲಲ್ಲಿ. ಎಂಥವರ ಎದೆಯನ್ನೂ ಕಲಕಬಲ್ಲ ಮಾರ್ದವದ ಅದ್ಭುತ ಕತೆ ಚೆರ್ರಿ....
ಚೀನಾದ ಆರ್ಥಿಕ, ಸಾಮಾಜಿಕ ಪಲ್ಲಟಗಳನ್ನೇ ಚಿತ್ರಿಸುವ ಉದ್ದೇಶದ ಕೆಲವು ಕತೆಗಳೂ ಸಂಕಲನದಲ್ಲಿವೆ. ಕೆಂಪು ಬೈಂಡಿನ ಪುಸ್ತಕ, ೧೩, ಆನಂದ ರಸ್ತೆ, ಸಾವು ಬದುಕಿನ ನಡುವೆ ಸುಮಾರಾಗಿ ಅಂಥ ಕತೆಗಳೆನ್ನಬಹುದು.
ಹೃದಯವಂತರನ್ನು ಕಾಡಬಲ್ಲ, ಸಂತೈಸಬಲ್ಲ ಕತೆಗಳನ್ನು ಕೊಟ್ಟ ಗೋಪಾಲಕೃಷ್ಣ ಪೈಯವರಿಗೂ, ಅವರ ಹಿಂದೆ ನಿಂತು(!) ಬರೆಯಿಸಿದ, ಚೀನಾದ ರಾಜಕೀಯ, ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲೇ ಚೀನಾ ಸಾಹಿತ್ಯದ ಸ್ಥೂಲ ಪರಿಚಯವನ್ನೂ ಪ್ರಸ್ತಾವನೆಯಲ್ಲಿ ನೀಡಿರುವ ಎಸ್ ದಿವಾಕರರಿಗೂ ಕೃತಜ್ಞತೆ ಹೇಳಬೇಕು, ಕನ್ನಡಕ್ಕೆ ಒಂದು ಒಳ್ಳೆಯ ಪುಸ್ತಕವನ್ನು ಕೊಟ್ಟಿದ್ದಕ್ಕೆ.
ಭಾಗ್ಯಲಕ್ಷ್ಮೀ ಪ್ರಕಾಶನ, 87, 3ನೇ ಕ್ರಾಸ್, 4ನೇ ಬ್ಲಾಕ್, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಬೆಂಗಳೂರು-560 085. ಮೊಬೈಲ್ : 94480 47735
ಪುಟಗಳು 248+

ಬೆಲೆ: ನೂರ ಇಪ್ಪತ್ತು ರೂಪಾಯಿ.

No comments: