Sunday, April 20, 2008

ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?


ಈ ಒಂದು ಪುಟ್ಟ ಬದುಕಿನಲ್ಲಿ ನಮಗೆ ಸಾಧ್ಯವಿರುವುದು ತೀರ ಸ್ವಲ್ಪ. ವಿಚಿತ್ರವೆಂದರೆ ತೀರ ನಮ್ಮದೆಂದೇ ಅನಿಸುವ ನಮ್ಮ ಬದುಕಿನ ಎಷ್ಟೋ ಸಂಗತಿಗಳು ನಮ್ಮದಾಗಿರುವುದೇ ಇಲ್ಲ. ಯಾರದೋ ನಿರ್ಧಾರ, ಯಾರದೋ ಯಾವುದೋ ನಡೆಯ ಪರಿಣಾಮಗಳನ್ನು ನಾವು ಬದುಕುತ್ತಿರುತ್ತೇವೆ. ಬಹುಷಃ ಎಸ್ಸೆಸ್ಸೆಲ್ಸಿ ಮುಗಿದದ್ದೇ ನಮಗಾಗ(1984) ಎದುರು ನಿಲ್ಲುತ್ತಿದ್ದ ಪ್ರಶ್ನೆ ಆರ್ಟ್ಸೋ, ಸೈನ್ಸೋ ಅಥವಾ ಕಾಮರ್ಸೋ ಎನ್ನುವುದು. ಈ ಮೂರರಲ್ಲಿ ಒಂದನ್ನು ಆಯುತ್ತಿದ್ದುದು ಕೂಡ ತೀರಾ ಕ್ಷುಲ್ಲಕ ಕಾರಣಗಳಿಗಾಗಿ ಎನ್ನುವುದನ್ನು ನೆನೆದರೆ ನಗುಬರುತ್ತದೆ. ಆದರೆ ಇದು ನಗುವ ವಿಷಯವಲ್ಲ ಎನ್ನುವುದು ಈಗ ತಿಳಿದಿದೆ! ನಾವೆಲ್ಲ ಇಪ್ಪತ್ತೊಂದರ ಸುಮಾರಿಗೆ ಡಿಗ್ರಿ ಪಡೆದಿದ್ದೆವು. ಎಲ್ಲರೂ ಡಿಗ್ರಿಯಾದರೆ ಒಳ್ಳೆಯದು, ಏನಾದರೂ ಕೆಲಸ ಸಿಗಬಹುದು ಎಂದು ನಂಬಿದ್ದರು. ಇವತ್ತಿನ ಕ್ಯಾಂಪಸ್ ಇಂಟ್ರ್ಯೂಗಳ ಕಾಲ ಆಗಿನ್ನೂ ಇರಲಿಲ್ಲ. ಇವತ್ತು ನೋಡಿ, ಹಿಂದೆ ಮುವ್ವತ್ತು ವರ್ಷಗಳ ಅಂತರದಲ್ಲಿ ಜನರೇಶನ್ ಗ್ಯಾಪ್‌ ಅಂತ ನಾವೆಲ್ಲ ಹೇಳುವ ಈ ಅನುಭವ ಬರುತ್ತಿದ್ದರೆ ಈಗ ಹೆಚ್ಚು ಕಡಿಮೆ ಐದು ವರ್ಷಗಳಿಗೇ ಕಾಲ ಬದಲಾದಂತೆ ಗೋಚರಿಸತೊಡಗುತ್ತಿದೆ. ಐದೇ ವರ್ಷಗಳ ಹಿಂದೆ ಇದ್ದ ಶಿಕ್ಷಣ, ಡಿಪ್ಲಾಮಾ, ಶಾರ್ಟ್ ಕೋರ್ಸ್,ಫಾಸ್ಟ್ ಟ್ರ್ಯಾಕ್, ಸಂದರ್ಶನ, ನೌಕರಿ, ಸಂಬಳ ಎಲ್ಲ ಇವತ್ತು ಔಟ್ ಡೇಟೆಡ್ ತರ ಕಾಣಿಸತೊಡಗುತ್ತದೆ. ಡಿಗ್ರಿ ಮುಗಿಸುವವರೆಗೆ ಫಸ್ಟ್ ಕ್ಲಾಸ್, ಡಿಸ್ಟಿಂಕ್ಷನ್ ಇತ್ಯಾದಿಗಳ ಬಗ್ಗೆ ಇದ್ದ ಭ್ರಮೆಗಳೆಲ್ಲ ಆ ಡಿಗ್ರಿ ಎಂಬುದು ಸಿಕ್ಕಿದ್ದೇ ಕರಗತೊಡಗುತ್ತದೆ. ಐನೂರು ರೂಪಾಯಿ ಸಂಬಳದ ಒಂದು ಕೆಲಸ ಸಿಕ್ಕಬೇಕಾದರೆ ಯಾರು ಯಾರನ್ನೋ ಕಂಡು, ಹಲ್ಲುಗಿಂಜಿ, ಇನ್ಯಾರಿಂದಲೋ ಹೇಳಿಸಿ ಎಲ್ಲ ಕೈಗೂಡುವವರೆಗೆ ಇನ್ಯಾರದೋ ಹಂಗಿನಲ್ಲಿ ಬದುಕುತ್ತಿರುವಂತೆ ಒಳಗೊಳಗೇ ನರಳಿ-ನವೆದು, ತಿನ್ನುವ ಅನ್ನ ಮೈಗೆ ಹತ್ತದೆ...
ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಇದ್ಯಾವುದೂ ಗಮನಕ್ಕೆ ಬರುವುದೇ ಇಲ್ಲವಲ್ಲ ಅನಿಸಿ ಅಚ್ಚರಿ.
ಇಪ್ಪತ್ತೈದು ಇಪ್ಪತ್ತೆಂಟಾದರೂ ಏನೇನೋ ಕಾರಣಗಳಿಗಾಗಿ ಮದುವೆಯಾಗದೇ ಹೋದ ಹುಡುಗಿಯರನ್ನು ಕಂಡಿದ್ದೇನೆ. ಕ್ರಮೇಣ ಅವರ ಕಣ್ಣುಗಳಲ್ಲಿನ ಹೊಳಪು ಮಾಯವಾಗುತ್ತದೆ. ಚೆನ್ನಾಗಿ ಸಿಂಗರಿಸಿಕೊಳ್ಳುವುದು, ನಡೆಯುವ ಶೈಲಿಯ ಬಗ್ಗೆ, ದೇಹ ಭಾಷೆಯ ಬಗ್ಗೆ ಎಚ್ಚರವಹಿಸುವುದು ಎಲ್ಲದರ ಕಡೆಗೆ ಆಸಕ್ತಿ ಕುಂದುತ್ತದೆ. ಮತ್ತೆ ಇದರಿಂದ ಅವರು ಆಕರ್ಷಕವಾಗಿ ಕಾಣುವುದು ಕೂಡ ನಿಲ್ಲುತ್ತದೆ. ಮದುವೆ ಇನ್ನಷ್ಟು ಕಷ್ಟ ಕಷ್ಟವಾಗುತ್ತಿರುವಂತೆ ಇವರ ಮಾತು, ವರ್ತನೆ, ಆಸಕ್ತಿ ಎಲ್ಲ ವಿಲಕ್ಷಣವಾಗುತ್ತ ಹೋಗುತ್ತದೆ. ನನಗೆ ಇವತ್ತಿಗೂ ನೆನಪಿರುವ ಒಂದು ಚಿತ್ರ, ಇಂಥ ಒಬ್ಬ ಹುಡುಗಿಯ ತಲೆಗೂದಲು ಉದುರಿ ನೆತ್ತಿ ಬೋಳಾಗಿದ್ದನ್ನು ನಾನು ಉಪ್ಪರಿಗೆಯಿಂದ ಕಂಡು ಕಂಗಾಲಾದ ದೃಶ್ಯ.
ಇವತ್ತು ಇಂಥದ್ದೆಲ್ಲ ಸ್ವಲ್ಪ ಅಸಂಗತ ವಿದ್ಯಮಾನಗಳು. ಮದುವೆಯ ಬಗ್ಗೆ ಹುಡುಗಿಯರಾಗಲೀ ಕೆಲಸದ ಬಗ್ಗೆ ಹುಡುಗರಾಗಲೀ ತಲೆಕೆಡಿಸಿಕೊಳ್ಳುವ ದಿನಗಳು ಎಲ್ಲೋ ಮರೆಗೆ ಸರಿಸಲ್ಪಟ್ಟಂತೆ ಕಾಣುತ್ತದೆ. ಆದರೆ ಇಂಥ ಅನುಭವಗಳು ಬದುಕಿನ ಇನ್ನೊಂದು ಮಗ್ಗುಲನ್ನು ತೋರುವುದರಿಂದ ಅದು ಬದುಕಿಗೆ ಬೇಕು. ನಾವೆಲ್ಲ ನಮ್ಮ ಬದುಕಿನಲ್ಲಿ ಅನುಭವಿಸಲಾಗದೇ ಹೋಗುವ ಅನುಭವಗಳೇ ಹೆಚ್ಚು. ನಮಗೆ ಏನಿಲ್ಲವೆಂದರೂ ದಕ್ಕುವುದು ನಾವು ಆಯ್ದುಕೊಂಡ ಒಂದೇ ಒಂದು ಹಾದಿಯ ಅನುಭವಗಳು. ಕಾರಂತರ ರಾಮ ಐತಾಳನ ಅನುಭವಗಳಾಗಲೀ, ಕರ್ವಾಲೋದ ನಿರೂಪಕನ ಅನುಭವಗಳಾಗಲೀ, ಚಿತ್ತಾಲರ ನಾಗಪ್ಪನ ಅನುಭವಗಳಾಗಲೀ, ಒಬ್ಬ ಚೋಮ, ಒಬ್ಬ ಹೂವಯ್ಯ, ಒಬ್ಬ ತಬರ, ಒಬ್ಬ ರಾಜೀವ (ವ್ಯಾಸರಾಯ ಬಲ್ಲಾಳರ ಬಂಡಾಯದ ನಾಯಕ), ಒಬ್ಬ ಫಣಿಯಮ್ಮ, ಒಬ್ಬ ಪ್ರಾಣೇಶಾಚಾರ್ಯ, ಲಂಕೇಶರ ಫಲವತ್ತಾದ ಕಪ್ಪು ನೆಲದಂಥ ದೇವಿ ಯಾರ ಬದುಕನ್ನೂ ನಮ್ಮದೇ ಕಾರಣಗಳಿಗಾಗಿ ನಾವು ಬದುಕುವುದು ಇನ್ನು ಸಾಧ್ಯವಿಲ್ಲ. ಅದನ್ನು ಸ್ವಲ್ಪಮಟ್ಟಿಗೆ ಸಾಧ್ಯವಾಗಿಸಿದ್ದು ಸಾಹಿತ್ಯ, ಅದರ ಓದು.
ಗಿರಿಯವರ ಗತಿ,ಸ್ಥಿತಿ ಕಾದಂಬರಿ, ಚಿತ್ತಾಲರ ಶಿಕಾರಿ, ಲಂಕೇಶರ ಬಿರುಕು ಮತ್ತು ತೇಜಸ್ವಿಯವರ ಸ್ವರೂಪ - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಒಂದು ಬಗೆಯಲ್ಲಿ ಇನ್ನೇನು ಇದು ವಿಕ್ಷಿಪ್ತತೆಗೆ ಹೊರಳುತ್ತದೆ ಎನ್ನುವ ಮಟ್ಟದ ಒಂಟಿತನದ ಹಲಬುವಿಕೆ ಇಲ್ಲಿದೆ. ಇಲ್ಲ ಇದೇ ವಿಕ್ಷಿಪ್ತ ಮನಸ್ಥಿತಿ ಎಂದು ಕೆಲವು ಕಡೆ ಅನಿಸಿದರೂ ಅಚ್ಚರಿಯಿಲ್ಲ. ಇದನ್ನು ನವ್ಯ ಎಂದೆಲ್ಲ ಕರೆಯುವುದು ಬೇಕಿಲ್ಲ. ಹಾಗೆಯೇ ನೋಡಬಹುದು. ಲಂಕೇಶ್ ಅಕ್ಕ ಬರೆಯುವ ಹೊತ್ತಿಗೆ ಬದುಕಿನ ಕ್ಷುದ್ರತೆಯ ಕಡೆಗೆ ನೋಡುವ ಅವರ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಗೋಚರಿಸುತ್ತದೆ. ತೇಜಸ್ವಿಯವರಂತೂ ನವ್ಯದ ಬಗ್ಗೆ ತಿರಸ್ಕಾರ ಬಂದು ಬರವಣಿಗೆಯ ಬೇರೆಯೇ ಮಜಲಿಗೆ ನಡೆದವರು. ಚಿತ್ತಾಲರು ಶಿಕಾರಿ ಬರೆಯುವುವಾಗಲೇ ಬೇರೆಯೇ ಹದ ಕಂಡುಕೊಂಡಿದ್ದರು ಅನಿಸುತ್ತದೆ. ಅದಕ್ಕೆ ಶಿಕಾರಿಯಲ್ಲೇ ನಮಗೆ ಹೊಳಹುಗಳಿವೆ.
ಗತಿ,ಸ್ಥಿತಿ ಬದುಕಿನ ಬೇಸರ (boredom) ಮತ್ತು ಅಸಹ್ಯತೆ (nausea)ಗಳ ಆಭಿವ್ಯಕ್ತಿ ಎನ್ನುತ್ತಾರೆ ಜಿ.ಎಸ್.ಅಮೂರ.
"ಆತನ ಸ್ಥಾಯಿಭಾವ ಅನಾಸಕ್ತಿ, ಬೇಸರ. ಈ ಬೇಸರ ಅವನ ಮೂಲಪ್ರವೃತ್ತಿಯೋ ಅಥವಾ ಅಸಂಗತ ಬದುಕಿಗೆ ಪ್ರತಿಕ್ರಿಯೆಯೋ ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ. ಈ ಬಗ್ಗೆ ಆತನಲ್ಲಿಯೇ ಸಂಶಯಗಳಿವೆ. ಗೆಳೆಯ ಮೂರ್ತಿಯೊಂದಿಗೆ ಆತ ನಡೆಸುವ ಸಂಭಾಷಣೆಯೊಂದು ಹೀಗಿದೆ:
"ಏನನ್ನು ನೆನೆಸಿಕೊಂಡರೂ ಮನಸ್ಸಿಗೆ ನಿರುತ್ಸಾಹವೇ. ಮಾಡಬಹುದಾದ್ದೆಲ್ಲ ಚಿಲ್ಲರೆಯಾಗಿ, ಮಾಡಲಾಗದ್ದು ಅಗಾಧವಾಗಿ ಕಾಣುತ್ತದೆ. ಯಾವುದೊಂದು ಕೆಲಸವೂ ಆಸಕ್ತಿ ಹುಟ್ಟಿಸಿ ನನ್ನನ್ನು ಎಳೆದುಕೊಳ್ಳಲ್ಲ" ಎಂದ."ಸಿಂಪಲ್ ಆಗಿ ಹೇಳೋದಾದರೆ ನಿನಗೆ ಬೋರ್ ಆಗಿದೆ. ಸುಮಾರಾದ್ದೊಂದು ಕೆಲಸ ಸಿಕ್ಕಿ ಕೈಗೆ ರೆಗ್ಯೂಲರ್ ಆಗಿ ಒಂದಿಷ್ಟು ಹಣ ಬೀಳ್ತಾಹೋಗಲಿ, ನಿನ್ನ ಬಹಳಷ್ಟು ಬೇಜಾರು ಕಡಿಮೆಯಾದೀತು" ಎಂದ ಮೂರ್ತಿ."ಇದ್ದರೂ ಇರಬಹುದು ನೋಡು. ಕೆಲವು ಸಾರಿ ನಾವು ಬಹಳ philosophical ಅಂತ ನಮ್ಮನ್ನೇ ನಾವು ನಂಬಿಸಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೇ ಖಾಲಿ ಜೇಬಾಗಿರುತ್ತೆ" ಎಂದು ನಕ್ಕ.
ಆತನ ಅನಾಸಕ್ತಿಯ ತಾತ್ವಿಕ ಸ್ವರೂಪ ಏನೇ ಆಗಿರಲಿ, ಅದು ಅವನ ಸ್ಥಾಯೀ ಭಾವವೆನ್ನುವಷ್ಟರ ಮಟ್ಟಿಗೆ ಗಟ್ಟಿಯಾಗಿದೆ" (ಕನ್ನಡ ಕಥನ ಸಾಹಿತ್ಯ:ಕಾದಂಬರಿ - ಜಿ ಎಸ್ ಅಮೂರ)
ಮನುಷ್ಯನಿಗೆ ಬದುಕ ಬೇಕು ಎನಿಸುವಂತೆ, ಯಾಕೆ ಬದುಕಬೇಕು ಅನಿಸದಂತೆ, ಈ ಎರಡೂ ವಿಚಾರ ಎಂದೂ ಪ್ರಸ್ತುತವಾಗದಂತೆ ಸಹಜವಾಗಿ ಸರಳವಾಗಿ ಬದುಕುವಂತೆ ಮಾಡಬಲ್ಲದ್ದು ಯಾವುದು? ಹಣ, ಹೆಣ್ಣು, ಮಣ್ಣು ಈ ಮೂರೂ ಅಲ್ಲದೆ ಇನ್ನೇನಾದರೂ ಇರಬಹುದೆ? ಅದು ಬರೇ ಪ್ರೀತಿ ಅಲ್ಲವೆ?
ಗತಿ,ಸ್ಥಿತಿಯ ನಾಯಕ ಮತ್ತು ನಾಯಕಿ (ಹಾಗೆಂದು ಕರೆಯಬಹುದಾದರೆ!) ಇಬ್ಬರಿಗೂ ಹೆಸರಿಲ್ಲ. ಕಾದಂಬರಿಯ ಉದ್ದಕ್ಕೂ ಅವನು ‘ಆತ’ ಅವಳು ‘ಆಕೆ’. ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳುವುದಕ್ಕೆಂದು ಬಿಸಿಲಿನ ಧಗೆಯಿಂದ ಕುದಿಯುತ್ತಿರುವ (ಅಂಥ ಅನುಭವ ನಮಗೂ ಉಂಟು ಮಾಡಬಲ್ಲ ವಿವರಗಳನ್ನು ಕಟ್ಟಿಕೊಡುವ ಭಾಷೆ ಗಿರಿಯವರದು) ಊರಿಗೆ ಬಂದು ಕೊಳಕಾದ ಗಲ್ಲಿ, ಓಣಿ, ಹೋಟೆಲು, ಹೋಟೆಲಿನ ರೂಮು, ಅಲ್ಲಿನ ತಂಡಾಸು, ಬಕೆಟ್ಟು, ಬೆವರು, ಗಬ್ಬು ವಾಸನೆ ಎಲ್ಲದರ ನಡುವೆ ಅಲ್ಲಿಂದ ಇನ್ನೆಂದಿಗೂ ಹೊರಹೋಗುವುದು ಸಾಧ್ಯವೇ ಇಲ್ಲವೇನೋ ಎಂಬಂತೆ ಕಂಗಾಲಾಗುವ, ಕೈಯಲ್ಲಿ ಕಾಸಿಲ್ಲದ ಅತಂತ್ರ ಸ್ಥಿತಿಯಲ್ಲಿ ಕಾದಂಬರಿ ಬದುಕಿನ ಮಗ್ಗುಲುಗಳ ದರ್ಶನ ನೀಡುತ್ತದೆ. ಒಂದು ಹಂತದಲ್ಲಿ ಜಿ ಎಸ್ ಸದಾಶಿವರ ‘ಸಿಕ್ಕು’ ನೀಳ್ಗತೆಯನ್ನು ನೆನಪಿಸುವ ಈ ವಿಲಕ್ಷಣವೇನಲ್ಲದ ಊರನ್ನು ಸುತ್ತಲೂ ಒಂದು ಬಂಡೆ ಆವರಿಸಿದ ಕೋಟೆಯೋ, ನಿಗೂಢ ಲೋಕವೋ ಎಂಬಂತೆ ಚಿತ್ರಿಸುವ ಗಿರಿಯವರು ಜೋಗದ ಕಣಿವೆಗೆ ಇಳಿಯುವ, ಇಳಿದ ಮೇಲೆ ಹತ್ತುವ ವಿಶಿಷ್ಟ ಪ್ರತಿಮಾ ವಿಧಾನದಲ್ಲಿ ಇಡೀ ಬದುಕಿನ ಗತಿಯನ್ನು ಗತಿಯಲ್ಲಿ ಅಡಗಿಕೊಂಡಂತಿರುವ ಸ್ಥಿತಿಯನ್ನು ಒಂದು ಮಿಂಚಿನ ಹೊಳಹಿನಲ್ಲಿ ಕಾಣಿಸಲು ಪ್ರಯತ್ನಿಸುತ್ತಾರೆ. ಎಲ್ಲೂ ಕೃತಕತೆ ಇಲ್ಲ. ತಿಣುಕಾಡಿ ಓದುವ ಅಗತ್ಯ ಬೀಳುವುದಿಲ್ಲ. ಎಲ್ಲರದೂ ಆಗಬಹುದಾದ ಬದುಕಿನ ಒಂದು ಹಂತವನ್ನು ಭಾಷೆಯಲ್ಲಿ ಇಷ್ಟು ನವಿರಾಗಿ ಕಟ್ಟಿಕೊಡುವುದು ಸರಳವಲ್ಲ. ಅದು ಬದುಕನ್ನು ತೀವೃವಾಗಿ ಬದುಕುತ್ತ, ಆಗಲೇ ಅದನ್ನು ಗಮನಿಸುತ್ತ, ಗಮನಿಸಿದ್ದನ್ನು ಅಕ್ಷರಗಳಲ್ಲಿ ಹಿಡಿಯುತ್ತ ಹೋಗುವವರಿಗಷ್ಟೇ ಸಾಧ್ಯವಾಗುವ ಒಂದು ಅನನ್ಯತೆ. ಇದು ಕೂಡ ಅಂಥ ಸುಖದ ಅನುಭವವೇನಲ್ಲ. ಆದರೂ ಈ ಅನುಭವ ಬದುಕಿಗೆ ಬೇಕು. ಅದು ನಮ್ಮ ನಿಮ್ಮ ಬದುಕಿನಲ್ಲೇ ಸಿಕ್ಕಿರಬಹುದು. ಆದರೆ ಅದನ್ನು ಅಕ್ಷರಗಳಲ್ಲಿ ಓದುವಾಗ ಅದಕ್ಕೆ ಹೆಚ್ಚು ಸ್ಪಷ್ಟತೆ ದಕ್ಕುತ್ತದೆ. ಬದುಕಿನಲ್ಲಿ ದಕ್ಕದೇ ಹೋದ ಅನುಭವವನ್ನು ಮೊದಲೇ ಹೇಳಿದಂತೆ ಸಾಹಿತ್ಯದ ಓದಿನಿಂದಲೇ ಪಡೆಯಬೇಕಾಗುತ್ತದೆ.
"ಕೃತಿಗಳನ್ನು ನೋಡುವ ಲೇಖಕರ ಹಾಗೂ ಉಳಿದ ಓದುಗರ ದೃಷ್ಟಿ ಬೇರೆ ಬೇರೆಯಾಗಿರುತ್ತವೆ ಎನ್ನುವುದು ಸಾಮಾನ್ಯ ಅನುಭವ. ಬಹುಶಃ ಇದೇ ಕಾರಣಕ್ಕಾಗಿಯೇ ಇರಬಹುದು, ಸಾಮಾನ್ಯ ಓದುಗ ‘ಹಳದಿ ಮೀನು’ ಹಾಗೂ ‘ಗತಿ,ಸ್ಥಿತಿ’ಗಳ ಬಗ್ಗೆ ಹೆಚ್ಚಿನ ಆಸ್ಥೆ ತೋರಿಲ್ಲ. ಕನ್ನಡ ಕಾದಂಬರಿಯ ಸಂಪ್ರದಾಯದಲ್ಲಿಯೂ ಕೂಡ ಈ ಕೃತಿಗಳು ಬೇರು ಬಿಡಲಿಲ್ಲ." ಎಂದಿರುವ ಅಮೂರರ ಮಾತು ನಿಜ. ಹಾಗೆಯೇ ಕಾದಂಬರಿಯ ಮುನ್ನುಡಿಯಲ್ಲಿ ಎಸ್.ದಿವಾಕರ್ ಹೇಳಿರುವ ಮಾತುಗಳು ಕೂಡ ನಿಜ:
"ಸುಮಾರು ಇಪ್ಪತ್ತು ವರ್ಷಗಳ ನಂತರ ಗಿರಿಯವರ ಕೃತಿ ಗತಿ ಸ್ಥಿತಿಯನ್ನು ಮತ್ತೆ ಓದಿದಾಗ ಹಿಂದೊಮ್ಮೆ ಓದಿದ ಕಿಂಚಿತ್ ನೆನಪೂ ಆಗದಷ್ಟು ತೀರ ಹೊಸ ಅನುಭವವಾಯಿತು, ನನಗೆ. ಒಂದು ಯಶಸ್ವಿ ಸಾಹಿತ್ಯ ಕೃತಿಯ ಅನನ್ಯತೆಗೆ, ಅದರ ಸಾರ್ವಕಾಲಿಕ ಪ್ರಭಾವಿ ಶಕ್ತಿಗೆ, ಇಂದಿಗೆ ಹೇಗೋ ಹಾಗೆ ಮುಂದಿಗೂ ಸಲ್ಲುವ ಅದರ ದರ್ಶನಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಚಲನಶೀಲತೆಯಿಲ್ಲದ ಗತಿಯೇ ಇಲ್ಲಿ ಬದಲಾವಣೆ ಕಾಣದ ಸ್ಥಿತಿಯಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಗಿರಿಯವರು ಈ ಕೃತಿಯಲ್ಲಿ ವಾಸ್ತವದ ಬೇರೆ ಬೇರೆ ಮಗ್ಗುಲುಗಳನ್ನು ಕೊರೆದು ತೋರಿಸಿದ್ದಾರೆ. ಭಾಷೆಯಲ್ಲಿ, ಧಾಟಿ ಧೋರಣೆಯಲ್ಲಿ, ನಿರೂಪಣೆಯಲ್ಲಿ ಸಂಪೂರ್ಣ ಸ್ವೋಪಜ್ಞತೆ ಸಾಧಿಸಿರುವ ಕೃತಿ ಇದು."ಹೊಸ ಪೀಳಿಗೆಯ ಓದುಗರಿಗೆ ಇದು ನವ್ಯರ ಕಾಲದ ಕಾದಂಬರಿಯೆಂದು ಬಹುಷಃ ಅನಿಸಲಾರದು. ಹೀಗೆ ಎಲ್ಲ ದೃಷ್ಟಿಯಿಂದಲೂ ಹೊಸತನ, ಪರಿಪೂರ್ಣತೆ ಸಾಧಿಸಿರುವ ಈ ಕಾದಂಬರಿ ಸಹಜವಾಗಿಯೇ ಕನ್ನಡ ಸಾಹಿತ್ಯದ ಒಂದು "ಕ್ಲಾಸಿಕ್" ಕೃತಿಯಾಗಿದೆ."
ಅಂಕಿತ ಪ್ರಕಾಶನ, 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು - 560004.

ಫೋನ್:26617100
ಪುಟಗಳು : 132+
ಬೆಲೆ: ರೂಪಾಯಿ ಐವತ್ತು.

No comments: