Sunday, April 27, 2008

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರು ಯಾರು?

ಆನುದೇವಾ ಎಂದಾಕ್ಷಣ ಈಗ ನೆನಪಾಗುವುದು ಬಂಜಗೆರೆ ಜಯಪ್ರಕಾಶ್, ಬಸವಣ್ಣ ಅಲ್ಲ! ಈಚಿನ ದಿನಗಳಲ್ಲಿ ಇಂಥ ಇನ್ನಷ್ಟು ವಿಪರ್ಯಾಸಗಳನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ; ವಿವಾದಗಳು ಇದರಾಚೆ ಏನನ್ನೂ ಸಾಧಿಸಿದ ದಾಖಲೆಗಳಿಲ್ಲ ಎಂದೂ ಅನಿಸುತ್ತದೆ. ಅದೇನೇ ಇರಲಿ, ಈಗ ಹೇಳಹೊರಟಿದ್ದು ಆನುದೇವಾ ಕುರಿತಲ್ಲ. ಬಂಜಗೆರೆಯವರು ಅನುವಾದಿಸಿದ ಅಲೆಕ್ಸ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್ ಬಗ್ಗೆ. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕಟವಾದದ್ದು. ಇದು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿದೆಯಂತೆ. ಇದಕ್ಕೆ ಮಿಲಿಯಗಟ್ಟಲೆ ಪ್ರತಿಗಳ ಮಾರಾಟದ ದಾಖಲೆಯಿದೆ. ಕಿರು ಧಾರಾವಾಹಿಯಾಗಿ ಟಿವಿಯಲ್ಲಿ ಪ್ರಸಾರವಾದಾಗ ಸುಮಾರು ನೂರ ಮೂವತ್ತು ಮಿಲಿಯನ್ ಜನ ವೀಕ್ಷಿಸಿದರೆಂದು ಅಂದಾಜು.

ತನ್ನ ಅಜ್ಜಿ ಕಿನ್-ಟೆ ಎಂಬ ಪೂರ್ವಿಕನ ಬಗ್ಗೆ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದ ಹೇಲಿ ಆಫ್ರಿಕಾದ ಮೌಕಿಕ ಇತಿಹಾಸಕಾರನೊಬ್ಬನ ನೆರವಿನಿಂದ, ಹನ್ನೆರಡು ವರ್ಷಗಳ ಸಂಶೋಧನೆ, ಸೃಜನಶೀಲ ಪರಿಶ್ರಮಗಳಿಂದ ಸಿದ್ಧಪಡಿಸಿದ ಕೃತಿ ರೂಟ್ಸ್. ಆಫ್ರಿಕಾದಿಂದ ಸೆರೆ ಹಿಡಿಯಲ್ಪಟ್ಟು ಒಬ್ಬ ಗುಲಾಮನಾಗಿ1767ರಲ್ಲಿ ಈ ಕುಂಟಾ ಕಿನ್-ಟೆಯನ್ನು ಗುಲಾಮರನ್ನು ಸಾಗಿಸುವ ಹಡಗಿನಲ್ಲಿ ಅಮೆರಿಕಾಕ್ಕೆ ತರಲಾಗಿತ್ತು. ಅಮೆರಿಕಾ ನಡೆಸಿದ ಕರಿಯರ ಅಮಾನವೀಯ ಶೋಷಣೆ, ಕ್ರೌರ್ಯ, ದೌರ್ಜನ್ಯಗಳ ಕತೆಯನ್ನು ಹೇಳುತ್ತಲೇ ಮಾನವೀಯ ಮಿಡಿತಗಳನ್ನು ನಮ್ಮಲ್ಲಿ ಹುಟ್ಟಿಸುವ ಈ ಕೃತಿಯನ್ನು ನವಿರಾಗಿ ಕನ್ನಡಕ್ಕೆ ತಂದಿದ್ದಾರೆ ಬಂಜಗೆರೆ.

ಮನುಷ್ಯ ತನ್ನ ವ್ಯಕ್ತಿಗತ ನೆಮ್ಮದಿ, ಸುಖದ ತಾಣವಾಗಿ, ಸಮಾಜದಲ್ಲಿ ತನ್ನ ಇರುವಿಕೆಯನ್ನು ಸಹ್ಯಗೊಳಿಸುವ ಒಂದು ಪರಿಸರವನ್ನು, ರೀತಿನೀತಿಗಳನ್ನು ರೂಪಿಸಿಕೊಂಡು ಬದುಕುತ್ತಾನೆ. ಆಂತರಿಕವಾಗಿ ಏನೇ ಗೊಂದಲ, ಸಂಘರ್ಷಗಳಿದ್ದರೂ ಹೊಂದಾಣಿಕೆಯ ಅನಿವಾರ್ಯತೆಯನ್ನು ಕೂಡ ಅರಿತಿರುವ ಮನುಷ್ಯ ಅವಕ್ಕೆಲ್ಲ ಒಡ್ಡಿಕೊಳ್ಳಲು ಹೆಚ್ಚು ಕಷ್ಟಪಡುವುದಿಲ್ಲ. ಆದರೆ ಹೊರಗಿನ ಬಲಶಾಲಿ ಶಕ್ತಿಗಳು ಇಂಥ ಬದುಕಿನ ಒಂದು ಚೌಕಟ್ಟನ್ನು ಮತ್ತೆ ಮತ್ತೆ ಧ್ವಂಸಗೊಳಿಸಿ, ವಿರೂಪಗೊಳಿಸಿ, ಕ್ರೂರವಾಗಿಯೂ, ನಿಷ್ಕರುಣಿಯಾಗಿಯೂ ದಮನಕಾರಿಯಾಗಿ ಎರಗಿದರೆ ಏನಾಗುತ್ತದೆ? ಒಂದು ಸಂಸ್ಕೃತಿಯ ನಾಶ. ಎರಡು ಶತಮಾನಗಳ ನಂತರ ಇದನ್ನು ಕಾಣುವಾಗ, ಕಾಣಿಸುವಾಗ ಒಂದು ಬಗೆಯ ನಿರ್ವಿಕಾರ ಸಿದ್ಧಿಸಿಬಿಡುತ್ತದೆ. ಎಲ್ಲ ಆಗಿಹೋದ ಸಂಗತಿಗಳು. ಒಮ್ಮೆ ಹಾಯ್ದು ಬಂದ ಬಳಿಕ ಕೆಂಡದ ಹಾದಿ ಕೂಡ ಮುಗಿದು ಹೋದ ಸಂಗತಿ ಎಂಬ ಕಾರಣಕ್ಕೇ ಅದನ್ನು ಹಾದು ಬಂದವನು ನಿರಾಳವಾಗಿರುತ್ತಾನೆ. ಆದರೆ ಅದನ್ನು ಕೇಳಿದವರಿಗೆ ಮೈ ಜುಂ ಎನಿಸುತ್ತದೆ, ಮನಸ್ಸು ಬೆಚ್ಚಿ ಎದ್ದು ಕೂರುತ್ತದೆ. ಅವನಿಗೆ ಅದು ಕೇವಲ ಮುಗಿದು ಹೋದ ವಿಸಂಗತಿಯಷ್ಟೇ ಆಗಿ ಉಳಿಯುವುದಿಲ್ಲ. ತಾನು ನಂಬಿ, ಶ್ರದ್ಧೆಯಿಟ್ಟು, ಆಚರಿಸುತ್ತ ಬಂದ ಬದುಕಿನ ರೀತಿ ನೀತಿಗಳೇ ಪ್ರಶ್ನಾರ್ಹವೇ ಎನಿಸಿ ಅವನನ್ನು ಅದು ಕಂಗಾಲಾಗಿಸುತ್ತದೆ. ರೂಟ್ಸ್ ಮಟ್ಟಿಗಂತೂ ಈ ಮಾತು ನೂರಕ್ಕೆ ನೂರರಷ್ಟು ನಿಜ.

ಆಫ್ರಿಕಾದ ಒಂದು ಸಾಮಾನ್ಯ ಬುಡಕಟ್ಟಿನ ಶಾಂತ ನೆಮ್ಮದಿಯ ಬದುಕು ಕುಂಟಾಕಿಂಟೆಯದು. ಅವನ ಹುಟ್ಟು, ಬಾಲ್ಯ, ಆಟಪಾಠ, ಸಾಹಸಗಳು, ಪ್ರೀತಿಯ ಅಮ್ಮ-ಅಪ್ಪ, ಸ್ನೇಹಿತರು, ತಮ್ಮಂದಿರು, ಇನ್ನೇನು ಬಂದೇ ಬಿಟ್ಟಿತು ಎನಿಸಿದ ಆ ಮಾಯಕದ ಯೌವನ...
ಹಠಾತ್ ಸೆರೆ. ಗುಲಾಮಗಿರಿಯ ನಗ್ನ ಬದುಕು. ಗುಲಾಮರನ್ನು ಅಮೆರಿಕಕ್ಕೆ ಸಾಗಿಸುವ ಹಡಗಿನ ನೆಲಮಾಳಿಗೆಯ ಕತ್ತಲಲ್ಲಿ, ಹೇಲು ಉಚ್ಚೆಯ ನರಕದಲ್ಲಿ ಕತ್ತಲೆಯ ಕೂಪದಲ್ಲಿ ಹೇನು, ಹೆಗ್ಗಣ,ಹುಳಗಳ ಕಾಟದಲ್ಲಿ ಸರಳುಗಳ ನಡುವೆ ಸರಪಳಿ ಬಿಗಿದುಕೊಂಡು ತಿಂಗಳುಗಟ್ಟಲೆ ಪ್ರಯಾಣ. ಚಾಟಿಯೇಟು. ಲೋಹದ ಕಿಲುಬು ಕೆರೆದಂತೆ ಮೈ ಕೆರೆದು ರಕ್ತ ಬರಿಸುವ ಅಪರೂಪದ ಸ್ನಾನ. ಮತ್ತೆ ಮನುಷ್ಯರಿಂದ ಮನುಷ್ಯರಿಗಾಗಿ ಮನುಷ್ಯರ ವ್ಯಾಪಾರ. ಗುಲಾಮರ ಸೇಲ್!

ಮುಂದೆ ಅಲ್ಲಾನ ಜಾಗದಲ್ಲಿ ಏಸು ಬರುತ್ತಾನೆ. ಕುಂಟಾಕಿಂಟೆ ಟೋಬಿಯಾಗುತ್ತಾನೆ. ಗುಲಾಮರ ಮಕ್ಕಳು ಒಡೆಯರ ಉಚಿತ ಆಸ್ತಿಯಾಗುವುದರಿಂದ ಈ ಗುಲಾಮರ ಮದುವೆಗೆ ಪ್ರೋತ್ಸಾಹ. ಮಕ್ಕಳಿಗೆಲ್ಲ ಕ್ರಿಶ್ಚಿಯನ್ ಹೆಸರುಗಳು. ಮದುವೆಯಾದ ಹುಡುಗಿ ಅಪ್ಪಟ ಕನ್ಯೆಯಲ್ಲದ ಅನುಮಾನ ಬಂದರೇ ಹಿಂದೆಮುಂದೆ ನೋಡದೆ ತಲಾಖ್ ಹೇಳುವ ಕುಲದ ಕುಂಟಾಕಿಂಟೆ ಈಗ ಎರಡು ಬಾರಿ ಹೆತ್ತಿರುವ ಕ್ರಿಶ್ಚಿಯನ್ ಬೆಲ್‌ಳನ್ನು ಅವಳ ನಲವತ್ತರ ವಯಸ್ಸಿನಲ್ಲಿ ಮದುವೆಯಾಗುತ್ತಾನೆ. ಒಬ್ಬಳೇ ಮಗಳು ಕಿಜ್ಜಿ. ಈ ಕಿಜ್ಜಿಯನ್ನು ಕುಂಟಾ ಕಿಂಟೆಯ ಎದುರಿಗೇ ಬರ್ಬರವಾಗಿ ಕೆಡಿಸಲಾಗುತ್ತದೆ, ಅವಳ ಯಾವುದೋ ಒಂದು ಮುಗ್ಧ ತಪ್ಪಿಗಾಗಿ. ಅವಳನ್ನು ಅವನೆದುರೇ ಮಾರಲಾಗುತ್ತದೆ, ಒಂದು ಪಶುವನ್ನು ಮಾರಿದಷ್ಟೇ ಸಹಜವಾಗಿ. ಒಮ್ಮೆ ಓಡಿ ಹೋಗುವ ಪ್ರಯತ್ನ ಮಾಡಿದ್ದಕ್ಕೆ ಕುಂಟಾನ ಅರ್ಧ ಪಾದವನ್ನು ಕತ್ತರಿಸಿ ಅವನು ಇನ್ನೆಂದೂ ಓಡದಂತೆ ಮಾಡಲಾಗುತ್ತದೆ.

ಉಮರೋ ಮತ್ತು ಬಿಂಟಾ ಕುಂಟಾನಂಥ ಮಗನನ್ನು ಕಳೆದುಕೊಳ್ಳುತ್ತಾರೆ. ಕುಂಟಾಕಿಂಟೆ ತನ್ನ ಬಾಲ್ಯ, ತಾಯ್ತಂದೆ, ದೇಶ, ಗೆಳೆಯರು, ಒಡಹುಟ್ಟಿದವರು, ಸ್ವಾತಂತ್ರ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಅದೇ ರೀತಿ ಅವನು ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆ. ಮತ್ತೆ ಈ ಮಗಳು ಕಿಜ್ಜಿ ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಾಳೆ. ಆದರೂ ಈ ಕಿಜ್ಜಿ ಅತ್ಯಾಚಾರದಿಂದ ಹುಟ್ಟಿದ ಮಗನಿಂದಲೇ ಬದುಕಿನತ್ತ ಮುಖಮಾಡುತ್ತಾಳೆ. ಕಿಜ್ಜಿಯ ಮಗನ ಬದುಕು ಇನ್ನೊಂದೇ ಸಾಹಸದ ಕತೆ. ಅವನನ್ನೂ ಮಾರುವುದು ಖರೀದಿಸುವುದು ನಡೆಯುತ್ತದೆ. ಅವನು ತನ್ನ ಹೆಂಡತಿ, ಮಕ್ಕಳು ಮತ್ತು ಪರಿವಾರವನ್ನು ಉಳಿಸಿಕೊಂಡು ಹೊಸ ಬದುಕು ಆರಂಭಿಸಲು ನಡೆಸುವ ಹೋರಾಟದ ಹಿಂದೆ ಅಬ್ರಹಾಂ ಲಿಂಕನ್ನನ ಗುಲಾಮಗಿರಿ ನಿಷೇಧದ ಕಾನೂನಿದೆ, ಬಲಿದಾನವಿದೆ.

ಇಡೀ ಕಾದಂಬರಿ ಓದಿ ಮುಗಿಸುತ್ತ ಸುಮಾರು ನಾಲ್ಕು ತಲೆಮಾರುಗಳ ತಲ್ಲಣ, ವಿಧಿಯ ಆಟ, ಮನುಷ್ಯನ ಕ್ರೌರ್ಯ, ಸಂಬಂಧಗಳ ಬಲಾತ್ಕಾರದ ವಿಘಟನೆ, ಇದೆಲ್ಲವನ್ನು ಸಹಿಸುವುದು, ಸ್ವೀಕರಿಸುವುದು ಅನಿವಾರ್ಯವಾದಾಗ ಮನುಷ್ಯ ಒಪ್ಪಿಕೊಂಡು ಬದುಕುವ ದುರಂತದ ಚಿತ್ರ ಕಂಡು ಮನಸ್ಸು ತತ್ತರಿಸುತ್ತದೆ. ಇದೆಲ್ಲ ಘೋರವಾಗಿದೆ. ಸಂಬಂಧಗಳು ಸುಳ್ಳೆ? ಅದು ಭ್ರಮೆಯ ಪಾತಳಿಯ ಮೇಲೆ ನಿಂತಿರುವ ವಿದ್ಯಮಾನವೆ? ತೊರೆದು ಬಿಡಬಹುದಾದ್ದೆ, ಸಾಧ್ಯವೆ? ಎಂಬೆಲ್ಲ ಪ್ರಶ್ನೆಗಳ ಜೊತೆಜೊತೆಗೇ ಕುಟುಂಬ ಪದ್ಧತಿಯ ಮಿಥ್‌ಗಳ ಅನಾವರಣ ಈ ಕಾದಂಬರಿಯಲ್ಲಿದೆಯೆ ಅನಿಸತೊಡಗುತ್ತದೆ. ಅದೆಷ್ಟು ಭಯಂಕರ ಅನಿಸುವಂತೆ ಅದು ನಮ್ಮನ್ನು ತಟ್ಟುವುದರಿಂದಲೇ, ಕಲಕುವುದರಿಂದಲೇ ಸಂಬಂಧಗಳಲ್ಲಿ ಬಿಡಿಸಲಾಗದ ಒಂದು ಪಾರಂಪರಿಕ ಬೆಸುಗೆಯನ್ನು ಕಂಡಿರುವ, ನಂಬಿರುವ ಮತ್ತು ಅನುಸರಿಸುತ್ತಿರುವ ನಾವು ಇನ್ನೂ ಹೆಚ್ಚು ವಿಶ್ವಾಸದಿಂದ ಅದಕ್ಕೆ ಆತುಕೊಳ್ಳುವಂತೆ ಮಾಡುತ್ತದೆ ಕೂಡ.

ಹೆತ್ತ ತಂದೆಯೆದುರೇ ನಡೆಯುವ ಕಿಜ್ಜಿಯ ಮಾರಾಟದ ಪ್ರಸಂಗ ಈ ಇಡೀ ಕಾದಂಬರಿಯ ಮಾತ್ರವಲ್ಲ ಮನುಕುಲದ ಅತ್ಯಂತ ದಾರುಣ ಪಾತಕ. ಇನ್ನೆಂದೂ ಈ ಮಗಳಿಗೆ ತಂದೆಯ ಆಸರೆಯ ಕನಸು ಕೂಡ ಇಲ್ಲ. ವಯಸ್ಸಾದ ತಂದೆಗೂ ಅಷ್ಟೆ. ಈ ತಂದೆಯ ತಂದೆಯಾದರೂ ಕಂಡಿದ್ದು ಅದನ್ನೇ ಅಲ್ಲವೆ? ಹೀಗೆ ಮನುಷ್ಯರನ್ನು ಅವರವರು ರೂಪಿಸಿಕೊಂಡ ಜಗತ್ತಿನಿಂದ, ಪರಿಸರದಿಂದ, ಬದುಕಿನಿಂದ ಅನಾಮತ್ತಾಗಿ ಎತ್ತಿ ಕೊಂಡೊಯ್ದು ಇನ್ನೆಲ್ಲೋ ನೆಟ್ಟು ಮತ್ತೆ ಅವರ ಬದುಕನ್ನು ಅನಿರೀಕ್ಷಿತವಾಗಿ ಕತ್ತರಿಸಿ ಹಾಕುತ್ತಿದ್ದರೆ ಮನುಷ್ಯ ಸಂಬಂಧಗಳ ನೆಲೆಗಟ್ಟು ಏನಾದೀತು? ತಂದೆ-ತಾಯಿ, ಮಗಳು, ಹೆಂಡತಿ ಎನ್ನುವ ಪದಗಳಿಗೆಲ್ಲ ಏನಾದರೂ ಅರ್ಥ ಉಳಿದಿರುತ್ತದೆಯೆ ಇಲ್ಲಿ? ಅದೆಲ್ಲ ಹೋಗಲಿ, ಈ ಭೂಮಿಯ ಮೇಲೆ ಎಷ್ಟೇ ಟೆಂಪೊರರಿಯಾಗಿಯೇ ಇರಲಿಯಲ್ಲ, ಇವತ್ತು ಒಟ್ಟಿಗೇ ಬದುಕುತ್ತಿರುವ ನನಗೂ ನಿಮಗೂ ಯಾವ ಸಂಬಂಧವೂ ಇಲ್ಲವೆ? ಇದನ್ನು ಹೇಳುವಾಗ ನನ್ನ ಮನಸ್ಸಿನಲ್ಲಿ ಎಡುವರ್ಡೋ ಗೆಲಿಯಾನೋನ Memory of Fire (ಇದನ್ನು ಕೆ.ಪಿ. ಸುರೇಶ್ ಬೆಂಕಿಯ ನೆನಪು ಎಂಬ ಹೆಸರಿನಲ್ಲಿ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ, ಅಭಿನವ ಇದನ್ನು ಪ್ರಕಟಿಸಿದೆ.) ಮತ್ತು ನಮ್ಮವರೇ ಆದ ನೇಮಿಚಂದ್ರರ ಯಾದ್ ವಶೇಮ್ (ನವಕರ್ನಾಟಕ ಪ್ರಕಾಶನ) ಕೃತಿಗಳು ಮನಸ್ಸಿಗೆ ಬರುತ್ತಿವೆ. ಒಂದು ದಕ್ಷಿಣ ಅಮೆರಿಕದ ಕತೆ ಹೇಳಿದರೆ ಇನ್ನೊಂದು ಯುರೋಪು ಹಿಟ್ಲರನ ನೆರಳಿನಲ್ಲಿ ನರಳಿದ್ದನ್ನು ಹೇಳುತ್ತದೆ. ಎಂ.ಆರ್.ಕಮಲ ಕನ್ನಡಕ್ಕೆ ತಂದಿರುವ ರೋಸಾಪಾರ್ಕ್, ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ, ಕತ್ತಲ ಹೂವಿನ ಹಾಡು, ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ (ಕಥನ ಪ್ರಕಾಶನ) ಎಲ್ಲ ಕಣ್ಣೆದುರು ಬರುತ್ತವೆ. ಇವತ್ತಿಗೂ ಪ್ಯಾಲೆಸ್ತೀನ್, ಟಿಬೆಟ್ ದಿನದಿನದ ನರಳಾಟವಾಗಿ ನಮ್ಮ ಕಣ್ಣ ಮುಂದಿವೆ. ಚರಿತ್ರೆಯಿಂದ ನಾವು ಕಲಿತಿದ್ದೇನು?

ಯಾವಾಗಲೂ ಚರಿತ್ರೆಯನ್ನು ಬರೆಯುವವರು ಗೆದ್ದ ಜನ. ಸೋತವರಿಗೆ ಚರಿತ್ರೆಯಿಲ್ಲ ಎನ್ನುತ್ತಾರೆ ಜಿ.ರಾಜಶೇಖರ. ಮೇಲೆ ಹೇಳಿದ ಪುಸ್ತಕಗಳು ಸೋತವರ ಚರಿತ್ರೆ.

ಬಂಜಗೆರೆಯವರು ಈಚೆಗೆ ಕೆನ್ಯಾದ ಕೆಲವು ಕತೆಗಳನ್ನು ಕೂಡ ಕನ್ನಡಕ್ಕೆ ತಂದಿದ್ದಾರಂತೆ. ಕನ್ನಡ ಇಂಥ ಅನುವಾದಗಳಿಂದ ಇನ್ನಷ್ಟು ಶ್ರೀಮಂತವಾಗಲಿ.
‘ತಲೆಮಾರು’ ಕೃತಿಯ ಪ್ರಕಾಶಕರು: ಆನಂದಕಂದ ಗ್ರಂಥಮಾಲೆ, ‘ಬಲರಾಮ’, ಅಧ್ಯಾಪಕರ ಕಾಲನಿ, ಮಲ್ಲಾಡಿಹಳ್ಳಿ - 577551. ಪುಟಗಳು 16+260. ಬೆಲೆ ನೂರ ಐವತ್ತು ರೂಪಾಯಿ.

No comments: