Thursday, May 1, 2008

ಜುಂಪಾ ಲಾಹಿರಿಯವರ ಹೊಸ ಪುಸ್ತಕ


ಹುಟ್ಟುವಾಗಲೇ ಮಗು ತೀರಿಕೊಂಡಿತ್ತು ಎನ್ನುವ ಆಘಾತದ ಬಳಿಕ ಅವರ ನಡುವೆ ಬರೀ ಮೌನ ಮಂಜುಗಡ್ಡೆಯಂತೆ ಬೆಳೆದು ನಿಂತಿದೆ. ಯಾವುದೂ ಈಗ ಈ ಸಂಬಂಧವನ್ನು ಮತ್ತೊಮ್ಮೆ ಅರ್ಥಪೂರ್ಣಗೊಳಿಸಲಾರದು ಅಂತ ಇಬ್ಬರಿಗೂ ತೀವೃವಾಗಿಯೇ ಅನಿಸತೊಡಗಿದೆ. ಬೇರ್ಪಡುವ ತಯಾರಿಯಲ್ಲಿದ್ದಾರೆ. ಆಗ ಇದ್ದಕ್ಕಿದ್ದ ಹಾಗೆ ಪ್ರತಿ ರಾತ್ರಿ ಒಂದು ಗಂಟೆ ಕಾಲ ವಿದ್ಯುತ್ ಇರುವುದಿಲ್ಲ ಎನ್ನುವ ಪ್ರಕಟನೆ ಹೊರಬೀಳುತ್ತದೆ. ಆಗ, ಸಮಯ ಕಳೆಯುವುದಕ್ಕಾಗಿ, ಗಂಡ ಹೆಂಡತಿ ಎನ್ನುವ ಸಂಬಂಧದ ಹೊರೆಯಿಲ್ಲದೆ, ಪ್ರೀತಿಯನ್ನು - ಸಂಬಂಧವನ್ನು ಕಾಪಿಟ್ಟುಕೊಳ್ಳುವ ಆತಂಕಗಳಿಲ್ಲದೆ, ಕೇವಲ ಸ್ನೇಹಿತರಂತೆ ತಾವು ಇದುವರೆಗೂ ಪರಸ್ಪರರಿಂದ ಮುಚ್ಚಿಟ್ಟ ಸಂಗತಿಗಳನ್ನು ಯಾವ ಭಿಡೆಯಿಲ್ಲದೆ ಹೇಳಬಹುದಾದ ಒಂದು ಸಂದರ್ಭವನ್ನು ಇವರು ಸೃಷ್ಟಿಸಿಕೊಳ್ಳುತ್ತಾರೆ. ಅದು ಅವರಿಗೇ ಗೊತ್ತಾಗದ ಹಾಗೆ ತಮ್ಮ ನಡುವೆ ಅದುವರೆಗೆ ಅಗೋಚರವಾಗಿದ್ದ ಸಂಬಂಧದ ತಂತುವೊಂದರ ಅಸ್ಪಷ್ಟ ಅರಿವು ಮೂಡಿಸುತ್ತ ಹೋಗುತ್ತದೆ. ಆ ಕರೆಂಟಿಲ್ಲದ ಒಂದು ಗಂಟೆಗಾಗಿ ಇಬ್ಬರೂ ಗುಪ್ತವಾಗಿ ಕಾತರಿಸತೊಡಗುತ್ತಾರೆ!

ಹೌದು, ಇದು ಜುಂಪಾಲಾಹಿರಿಯ Interpreter of Maladies ಸಂಕಲನದ ಒಂದು ಕಥೆ. ಈಗಷ್ಟೇ ಇವರ Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

ತಾಯಿ ತೀರಿದ ನಂತರ ನಿವೃತ್ತನಾಗಿರುವ ತಂದೆ ಟೂರುಗಳಲ್ಲಿ ಮುಳುಗುತ್ತಾನೆ. ಮಗಳು ರೂಮಾ ತನ್ನ ದೂರದ ಮನೆಯಲ್ಲಿ ಒಬ್ಬಳೇ ತನ್ನ ಮಗುವಿನೊಂದಿಗೆ ಕುಳಿತು ನೌಕರಿಯ ನಿಮಿತ್ತ ಹೆಚ್ಚಾಗಿ ಮನೆಯ ಹೊರಗೇ ಇರುವ ಗಂಡ ಮತ್ತು ಸದಾ ತಿರುಗಾಟದ ಹುಚ್ಚು ಹತ್ತಿಸಿಕೊಂಡಿರುವ ತಂದೆಯ ಬಗ್ಗೆ ಯೋಚಿಸುತ್ತಾಳೆ. ಮುದುಕನಾಗಿರುವ ಒಂಟಿ ಜೀವ ತಂದೆಗೆ ತಮ್ಮೊಂದಿಗೇ ಇರು ಎನ್ನಬೇಕೆ, ಮನೆ ಸಾಕಷ್ಟು ದೊಡ್ಡದಿದ್ದರೂ ಆತನ ಇರುವು ತನ್ನ ಕುಟುಂಬಕ್ಕೆ ಕಿರಿಕಿರಿ ಎನಿಸಲಾರದೇ ಎನ್ನುವ ವಿಚಾರಗಳಲ್ಲಿ ಅವಳಲ್ಲೇ ದ್ವಂದ್ವ ಇದೆ. ತಂದೆಯ ಬಗ್ಗೆ ಅವಳಲ್ಲಿ ಪ್ರೀತಿ, ಅನುಕಂಪ, ದ್ವೇಷ, ಸಿಟ್ಟು ಎಲ್ಲವೂ ಇರುವಂತಿದೆ. ಅದಕ್ಕೆಲ್ಲ ಅವನು ತಾಯಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿ ಕಾರಣವೇ ಎಂದರೆ ಅದೂ ಅವಳಿಗೆ ಸ್ಪಷ್ಟವಿಲ್ಲ. ತಂದೆಯ ಸ್ವತಂತ್ರ ಮನೋವೃತ್ತಿಯೇ, ಎಂದೂ ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆತು ನಡೆದುಕೊಳ್ಳದೇ ಇದ್ದ ಹಿನ್ನೆಲೆಯೇ. ಹೌದಾದರೆ ಅವನೀಗ ಬದಲಾಗಿದ್ದಾನೆ! ಇನ್ಯಾರೋ ಒಂಟಿ ಮುದುಕಿಯನ್ನು ಪ್ರೀತಿಸುತ್ತಿದ್ದಾನೆ! ಇನ್ನೂ ಜೀವಂತವಾಗಿರುವ ಅವನ ತೋಟಗಾರಿಕೆಯ ಹುಚ್ಚು, ಮಗುವಿನೊಂದಿಗೆ ಅವನು ಬೆರೆತ ರೀತಿ, ಬೆಂಗಾಲಿಯ ಕಂಪನ್ನು ಅವನು ಇನ್ನೂ ಅನುಭವಿಸುತ್ತಿರುವ ರೀತಿ ಎಲ್ಲವೂ ಅವಳಿಗೆ ಅಚ್ಚರಿಹುಟ್ಟಿಸಿದ ಹಾಗೆಯೇ ಅವನ ತಿರುಗಾಟದ ಹುಚ್ಚು ಕೂಡ ಅವಳಿಗೆ ಇದನ್ನೆಲ್ಲ ಊಹಿಸುವಂತೆ ಮಾಡುತ್ತದೆ. ತಂದೆ ಅವಳ ಜೊತೆಗಿರಲು ಬಯಸುತ್ತಿಲ್ಲ. ಅವನು ತನ್ನ ಒಂಟಿ ರೂಮಿನ ಅಪಾರ್ಟ್‌ಮೆಂಟ್‌ನಲ್ಲೇ ತಾನು ಸುಖಿ ಎನ್ನುತ್ತಾನೆ. ಇದು ಕೂಡಾ ರೂಮಾಗೆ ನಿರಾಳವೆನಿಸುವುದಿಲ್ಲ. ಹಾಗೆಯೇ ಅವನಿಗೂ ತನ್ನ ಹೊಸದಾದ ಪ್ರೀತಿಯಲ್ಲಿ ಅಂಥ ಭರವಸೆಗಳೇನಿಲ್ಲ, ಗೊತ್ತು. ಸ್ವತಂತ್ರ ಮನೋವೃತ್ತಿ ಮತ್ತು ಪ್ರೀತಿಗಾಗಿ ಇನ್ನೊಂದು ಜೀವಕ್ಕೆ ಅವಲಂಬಿಸುವುದು ಎರಡರ ನಡುವೆ ಅವನಿಗೂ ಗೊಂದಲಗಳಿರುವಂತಿದೆ. ವಿಚಿತ್ರವೆಂದರೆ ರೂಮಾಳ ದಾಂಪತ್ಯದಲ್ಲಿ ಕೂಡ ಅಸುಖಿ ಭಾವನೆ ಹುಟ್ಟಿಸುವ ಅಗೋಚರ ಗೋಡೆಗಳ ಅಸ್ತಿತ್ವ ಇರುವುದರ ಅರಿವೂ ಅವಳಿಗಿದೆ. ಒಂದು ಪರಕೀಯ ಭಾವ, ಎಲ್ಲ ಇದ್ದೂ ಏನೋ ಇಲ್ಲದ ಮತ್ತು ಆ ಏನೋ ಎಂಬುದು ಎಂದಿಗೂ ಯಾರಿಗೂ ದಕ್ಕಿರಲಾರದು ಎಂಬ ಅರಿವಿನೊಂದಿಗೇ ಈ ಕತೆ ಒಂದು ತಾದ್ಯಾತ್ಮ ರೂಪಿಸಿಕೊಂಡಿದೆ.

A Choice of Accommodation ಸಂಕಲನದ ಇನ್ನೊಂದು ಉತ್ತಮ ಕತೆ. Unaccustomed Earth ಮತ್ತು ಈ ಹೆಸರಿಗೆ ಇರುವ ಅಂತರ್ಗತ ಸಂಬಂಧವನ್ನು ನೋಡಿ. ಇಲ್ಲಿನ ಕತೆಯೂ ಸಂಬಂಧಗಳು ಕ್ರಮೇಣ ಪಡೆದುಕೊಳ್ಳುವ ರೂಪಾಂತರಗಳ ಕುರಿತೇ ಧೇನಿಸುವುದಾದರೂ ಇಲ್ಲಿ ಅದು ಹೆಚ್ಚು ಪಾಸಿಟಿವ್ ಆಗಿದೆ. ಸಂಬಂಧಗಳ ಆಳದ ಪ್ರಾಮಾಣಿಕ ಅಗತ್ಯಗಳಲ್ಲಿ ಹೆಚ್ಚು ವಿಶ್ವಾಸವಿಟ್ಟಿದೆ. ಆದರೆ ಈ ಪಾಸಿಟಿವ್ ಚಲನೆಯ ನಂತರ ಮತ್ತೆ ಈ ಸಂಬಂಧದ ಬಗ್ಗೆ ಹೊಸದಾಗಿ ಯೋಚಿಸುವುದು ಕೂಡ ಈ ಗಂಡು ಹೆಣ್ಣುಗಳಿಗೆ ಸಾಧ್ಯವಿದೆ, ಆ ಸಂಭವನೀಯತೆ ತೆರೆದೇ ಇದೆ! ಹೀಗೆ ಜುಂಪಾ ಅವರ ಕತೆಗಳಲ್ಲಿ ಸಂಭವನೀಯ ಸಂಬಂಧವೊಂದರ ಅಥವಾ ಸಂಭವನೀಯ ಬಿಡುಗಡೆಯೊಂದರ ಹಿನ್ನೆಲೆಯಲ್ಲಿ ಇರುವ ಸಂಬಂಧಗಳ ಗಟ್ಟಿತನ, ಪ್ರಾಮಾಣಿಕತೆ ಸಿದ್ಧಗೊಳ್ಳುತ್ತ ಹೋಗುತ್ತದೆ. ಪರ್ಯಾಯವೊಂದರ ನಿಕಷಃ ಬಹುಷಃ ಈ ಸಂಬಂಧಗಳ ಆಯುಷ್ಯ ನಿರ್ಧಾರಕ್ಕೆ ಅನಿವಾರ್ಯವೇನೋ ಎನ್ನುವಷ್ಟು ಅದರ ಬಳಕೆಯಿದೆ ಈ ಕತೆಗಳಲ್ಲಿ. ಆದರೆ ಈ ಆಯುಷ್ಯ ನಿರ್ಧಾರದ ಹಪಹಪಿಕೆಯನ್ನು, ಅಗತ್ಯವನ್ನು ಅನುಮಾನದಿಂದ ಕಾಣಬೇಕು. ಸ್ವತಃ ಶಾಶ್ವತನಲ್ಲದ ಮನುಷ್ಯ ಸದಾ ಸಂಬಂಧಗಳ, ಭಾವನೆಗಳ ಕ್ಷಣಭಂಗುರತೆಯ ಬಗ್ಗೆ, ನಶ್ವರತೆಯ ಬಗ್ಗೆ ಹಪಹಪಿಸುತ್ತಿರುವುದನ್ನು ಬಿಡುವುದಿಲ್ಲ ಎನ್ನುವುದು ಸತ್ಯ. ಅವನಿಗೆ ಈ ಹಪಹಪಿಗಳಿಂದ ಮುಕ್ತಿಯಿಲ್ಲ. ಇದನ್ನು ಕುರಿತು ಯೋಚಿಸಬೇಕು.

ಹಾಗೆಯೇ ಅಮೆರಿಕಕ್ಕೆ ಸೀಮಿತವಾದ ವಸ್ತುವಲ್ಲ ಇದು. ಗಂಡು ಹೆಣ್ಣು ಸಂಬಂಧ, ಮದುವೆ, ವಿಚ್ಛೇದನ, ಮರುಮದುವೆ, ಲಿವಿಂಗ್ ಇನ್, ಲೈಂಗಿಕ ಪರಿಶುದ್ಧತೆಯ ಪರಿಕಲ್ಪನೆಗಳು ಇವತ್ತು ಇಲ್ಲಿಯೂ ಬದಲಾಗಿವೆ. ಸರಿಬರದಿದ್ದರೆ ಬಿಟ್ಟುಬಿಡುವ ಒಂದು ಅಘೋಷಿತ ನಿರ್ಧಾರದೊಂದಿಗೇ ಅರೇಂಜ್ಡ್ ಎನಿಸಿಕೊಳ್ಳುವ ಮದುವೆಗಳು ನಡೆಯುವ ದಿನಗಳಿವು. ಸಹಜವಾಗಿಯೇ ಸಹಜೀವನದ ಲಾಭ ನಷ್ಟ, ಅಗತ್ಯ ಅನಿವಾರ್ಯತೆ, ಅನುಕೂಲ ಕಿರಿಕಿರಿಗಳ ಕುರಿತ ನಮ್ಮ ನಿರೀಕ್ಷೆಗಳು ಹಿಂದಿನಂತಿಲ್ಲ. ತೀರ ವೈಯಕ್ತಿಕ ಅನಿಸುವ ಸಂಗತಿಗಳೆಲ್ಲ ಕ್ರಮೇಣ ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಬದಲಾದ ಜೀವನದ ರೀತಿ ನೀತಿಗಳು ಮತ್ತು ಬದಲಾಗದ ಮನುಷ್ಯನ ಆಳದ ಅಗತ್ಯಗಳು, ಹಪಹಪಿಕೆಗಳು - ಈ ಎರಡರ ಸಂಘರ್ಷ ಉಂಟು ಮಾಡುವ ಒಂದು ವಿಕ್ಷಿಪ್ತ ಮನಸ್ಥಿತಿಯನ್ನು ಕುರಿತು ಈ ಕತೆಗಳು ನಮ್ಮನ್ನು ಎಚ್ಚರಿಸುತ್ತವೆ. ಈ ಕತೆಗಳಲ್ಲಿ ಬರುವ ಹೆಚ್ಚಿನ ಪಾತ್ರಗಳು ಈ ದೇಶದಿಂದ ಒಂದಲ್ಲಾ ಒಂದು ಕಾರಣಕ್ಕೆ ಅಮೆರಿಕಕ್ಕೆ ಹೋಗಿ ಅಲ್ಲಿ ನೆಲೆನಿಂತವು. ಹಿನ್ನೆಲೆ ಭಾರತದ್ದು. ಭಾರತದ ಸಾಂಪ್ರದಾಯಿಕ ದಾಂಪತ್ಯದ, ಏಕಪತ್ನೀ ವ್ರತದ, ಸುದೀರ್ಘ ನಿಷ್ಠೆಯ ಒಂದು ಮಾದರಿಯನ್ನು ಬೆನ್ನಿಗಿಟ್ಟುಕೊಂಡೇ ಇವು ಎಳೆಯರ ಗಂಡು ಹೆಣ್ಣು ಸಂಬಂಧಗಳನ್ನು ಚಿತ್ರಿಸುವುದು ವಿಶೇಷ. ಈ ಎಳೆಯರ ಸಂಬಂಧಗಳು ಹೆಚ್ಚಾಗಿ ಭಾರತೀಯ ಮತ್ತು ವಿದೇಶೀ ವ್ಯಕ್ತಿಗಳ ನಡುವೆಯೇ ರೂಪುಗೊಳ್ಳುವುದು ಇನ್ನೊಂದು ವಿಶೇಷ. ಇಬ್ಬರೂ ಕಾಕತಾಳೀಯವಾಗಿ ಭಾರತೀಯರೇ ಆಗಿರುವ ಸಾಧ್ಯತೆಗಳಿಲ್ಲವೆಂದಲ್ಲ. ಅಂದ ಮಾತ್ರಕ್ಕೆ ಪರಂಪರಾನುಗತ ಮದುವೆ ಎಂಬ ಸಂಸ್ಥೆ ಮತ್ತು ಅಮೆರಿಕ ವಾಸದ ಆಧುನಿಕತೆಯಿಂದ ತೆರೆದುಕೊಂಡ ಗಂಡು ಹೆಣ್ಣು ಸಂಬಂಧದ ಹೊಸ ಹೊಸ ಸಾಧ್ಯತೆಗಳ ಒಂದು ವ್ಯವಸ್ಥೆ ಎರಡನ್ನು ಈ ಕತೆಗಳು ತೂಗಿ ನೋಡುತ್ತವೆ ಎಂದೇನೂ ಅಲ್ಲ. ಜುಂಪಾ ಅವರಿಗೆ ಗಂಡು ಹೆಣ್ಣು ಸಂಬಂಧಕ್ಕೆ ಪರಂಪರೆಯ ಅಥವಾ ಆಧುನಿಕತೆಯ ಚೌಕಟ್ಟು ನೀಡುವ ಸ್ಪರ್ಶಗಳು ಮುಖ್ಯವೇ ಹೊರತು ಅವೇ ಚೌಕಟ್ಟುಗಳು ಮೂಲಭೂತವಾಗಿ ಗಂಡು ಹೆಣ್ಣು ಸಂಬಂಧದ ವಿಚಾರದಲ್ಲಿ ಮನುಷ್ಯನ ದೈಹಿಕ ಮಾನಸಿಕ ಅಗತ್ಯ, ದೌರ್ಬಲ್ಯ, ನಿಯಂತ್ರಣಗಳನ್ನು ರೂಪಿಸುತ್ತವೆ ಎನ್ನುವ ಭ್ರಮೆಯಿಲ್ಲ. ಅವರು ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿಯೇ ಕಾಣುತ್ತ ಹೋಗುತ್ತಾರಾದರೂ ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಅಕ್ಕಪಕ್ಕದಲ್ಲಿಡುತ್ತಲೇ ಅದನ್ನು ಮಾಡುತ್ತಾರೆ, ಮತ್ತು ಅದರ ಮೂಲಕ ಮನುಷ್ಯನನ್ನು ಇನ್ನಷ್ಟು ಆಳವಾಗಿ ತಿಳಿಯುವುದಕ್ಕೆ ಪ್ರಯತ್ನಿಸುತ್ತಾರೆ.

Only Goodness ತುಂಬ ಕಾಡುವ ಕತೆ. ಇಲ್ಲಿ ಗಂಡು ಹೆಣ್ಣು ದಾಂಪತ್ಯದ ಸಂಬಂಧಕ್ಕಿಂತ ದಾರಿತಪ್ಪಿದ ತಮ್ಮನ ಬದುಕಿನ ದುರಂತ ಮುಖ್ಯವಾಗುತ್ತದೆ. ಅದಕ್ಕೆ ಎಲ್ಲೋ ತಾನು ಕಾರಣವಿರಬಹುದೆ ಎಂಬಂಥ ಅಕ್ಕನ ಸೂಕ್ಷ್ಮ ಗಿಲ್ಟ್‌ನೊಂದಿಗೇ ನಿರೂಪಿಸಲ್ಪಡುವ ಈ ಕತೆ ದ್ವೇಷದ ಆಳದಲ್ಲಿ ಮಿಡಿಯುವ ಪ್ರೀತಿಯಂಥ ಒಂದು ಭಾವದಿಂದ ಕಲಕುತ್ತದೆ. ವಿಪರೀತ ಕುಡಿತದ ಚಟಕ್ಕೆ ಬಿದ್ದ ರಾಹುಲ್ ಕೊನೆಗಾದರೂ ಸರಿಹೋದ ಎನಿಸುವಾಗಲೇ ಅವನೆಂದಿಗೂ ಸರಿಹೋಗಲಿಕ್ಕಿಲ್ಲ ಎನ್ನುವ ಅನುಮಾನವನ್ನು ಹುಟ್ಟಿಸುತ್ತಾನೆ, ಮತ್ತೆ ಮತ್ತೆ ಅವನನ್ನು ದ್ವೇಷಿಸುವುದಲ್ಲದೆ ಇನ್ನೇನೂ ಸಾಧ್ಯವಿಲ್ಲ ಅನಿಸುವಂತೆ ಮಾಡುತ್ತಾನೆ. ಆದರೆ ಒಡಹುಟ್ಟಿದ ಅಕ್ಕನಿಗೆ ಗೊತ್ತಿದೆ, ಅವನು ಅವನಾಗಿಲ್ಲ ಎನ್ನುವುದು. ಆದರೆ ಆಕೆ ಏನನ್ನೂ ಬದಲಿಸಲಾರದ ಅಸಹಾಯಕಿ. ಇವನಿಂದಾಗಿಯೇ ದೂರವಾಗಬಹುದಾದ ಗಂಡನನ್ನು ಉಳಿಸಿಕೊಳ್ಳುವುದೇ ಅವಳಿಗೆ ಸಮಸ್ಯೆಯಾಗಿದೆ ಈಗ. ಎಲ್ಲಾ ಸಂಬಂಧಗಳು ಬಿರುಕು ಬಿಡುತ್ತ ಹೋಗಿವೆ ಈ ಕತೆಯಲ್ಲಿ, ಉದ್ದಕ್ಕೂ. ಆದರೆ ಬಿರುಕು ಕಾಣಿಸಿಕೊಳ್ಳುತ್ತಿರುವಾಗಲೇ ಆಳದ ತಂತುಗಳು ಎಷ್ಟು ಬಿಗಿಯಾಗಿವೆ ಎನ್ನುವುದರ ಅರಿವನ್ನು ಹುಟ್ಟಿಸುವುದು ಜುಂಪಾರ ವೈಶಿಷ್ಯ.

Nobody's Business ತನ್ನ ನಿರೂಪಣೆಯ ನವಿರುತನದಿಂದಾಗಿ ಮತ್ತು ಅದು ಹುಟ್ಟಿಸುವ ಕುತೂಹಲದಿಂದಾಗಿ ನಮ್ಮನ್ನು ಹಿಡಿದಿಡುವ ಕತೆ. ಅನಗತ್ಯ ಕುತೂಹಲ ಕೂಡ ಕಾಡುವ ವಿಸಂಗತಿಯಾಗಿ ಮನಸ್ಸಿನಲ್ಲಿ ಉಳಿಯುವ ಬಗೆ ಇಲ್ಲಿನ ಸೋಜಿಗ. ಸ್ಯಾಂಗ್ ಮತ್ತು ಫರೂಕ್ ನಡುವಣ ಸಂಬಂಧ ಬೇರೆ ಇನ್ನಿಬ್ಬರನ್ನು ಅವರವರದೇ ರೀತಿಯಲ್ಲಿ, ಅವರವರದೇ ದೌರ್ಬಲ್ಯಕ್ಕಾಗಿ ನೋಯಿಸುವುದು ಇಲ್ಲಿನ ಕೌತುಕ. ಈ ಇಬ್ಬರಲ್ಲಿ ಒಬ್ಬಳು ಫರೂಕನ ಪ್ರೇಮಿ. ಇನ್ನೊಬ್ಬ ಸ್ಯಾಂಗ್‌ಳನ್ನು ಗುಪ್ತವಾಗಿ ಇಷ್ಟಪಡುತ್ತಿದ್ದಾನೆ. ಸ್ಯಾಂಗ್-ಫರೂಕ್ ಸಂಬಂಧ ಕೆಡಲಿ ಎಂದು ಇಬ್ಬರೂ ಹಾರೈಸುವಂತೆ ಕಂಡರೂ ಅದು ನಿಜಕ್ಕೂ ಕೆಟ್ಟಾಗ ಕಂಗೆಡುವುದು ಇಲ್ಲಿನ ಸಂಕೀರ್ಣ ಹಂದರಕ್ಕೆ ಸಾಕ್ಷಿ.

ಮುನ್ನೂರಕ್ಕೂ ಹೆಚ್ಚು ಪುಟಗಳ ಈ ಪುಸ್ತಕದ ಎರಡನೆಯ ಭಾಗವನ್ನು ಪೂರ್ತಿಯಾಗಿ ಮೂರು ಕತೆಗಳ ಮೂಲಕ ಆವರಿಸಿರುವ ಹೇಮಾ ಮತ್ತು ಕೌಶಿಕ್ ಕತೆ ಜುಂಪಾ ಅವರ ಕಥನ ಕ್ರಮವನ್ನು ಅರಿಯುವುದಕ್ಕೆ ಹೆಚ್ಚು ಸಹಾಯಕವಾಗುವಂತಿವೆ. ಜುಂಪಾ ತಮ್ಮ ಪಾತ್ರಗಳ ಒಳಗುಟ್ಟುಗಳನ್ನು ಎಂದೂ ಸಂಭಾಷಣೆಗಳಲ್ಲಿ ಅನಾವರಣಗೊಳಿಸುವುದಿಲ್ಲ ಎನ್ನುವುದು ಕುತೂಹಲಕರ. ಕತೆಯ ಉದ್ದಕ್ಕೂ ಅವರು ತಮ್ಮ ಪಾತ್ರಗಳ ಬಾಹ್ಯ ಚಟುವಟಿಕೆಗಳನ್ನು ನಿರೂಪಿಸುತ್ತಲೇ ಅದನ್ನು ಮಾಡುವಲ್ಲಿ ನಿರ್ವಹಿಸುವ ಆಯ್ಕೆಗಳ ಸೂಕ್ಷ್ಮದಿಂದಲೇ ನಮಗೆ ಆ ಪಾತ್ರಗಳ ಚಾರಿತ್ರ್ಯವನ್ನು ಕಟ್ಟಿಕೊಡುವುದು ವಿಶೇಷ. ಇದರಲ್ಲಿ ಕಥಾನಕದ ಅಂಶ ಎಷ್ಟು ಮತ್ತು ಕಥಾನಕದ ನಿರೂಪಣೆಗೆ ಅಗತ್ಯವಿರುವ ಒಂದು ವಾತಾವರಣ, ಭಾವ, ಘಟ್ಟ ಮೂರನ್ನೂ ನಿರ್ವಹಿಸುವ ಅಂಶ ಎಷ್ಟು ಎನ್ನುವುದನ್ನು ಬಿಡಿಸಲಾಗದಷ್ಟು ತಾದ್ಯತ್ಮ ಇರುವುದು ಇವರ ಕತೆಗಳಿಗೆ ಪ್ರಾಮಾಣಿಕತೆಯ ಸ್ಪರ್ಶ ನೀಡಿದೆ. ಹಾಗಾಗಿಯೇ ನಮಗೆ ಕಥಾನಕಕ್ಕಿಂತ ವಿವರಗಳ ನಡುವೆ ಪಾತ್ರಗಳನ್ನು ಅರಿತುಕೊಳ್ಳುವ ಒಂದು ಪ್ರಕ್ರಿಯೆ ಹೆಚ್ಚು ಮುಖ್ಯವಾಗಿ ಬಿಡುತ್ತದೆ. ದೈನಂದಿನ ವಿವರಗಳ ಮೂಲಕ ವ್ಯಕ್ತಿಯನ್ನು ಅರಿಯುವ ಈ ಪ್ರಕ್ರಿಯೆ ಸಾಕಷ್ಟು ಅಸ್ಪಷ್ಟತೆಯನ್ನು, ಬಿಟ್ಟ ಪದಗಳನ್ನು ಕೊನೆಗೂ ಉಳಿಸಿಬಿಡುವುದರಿಂದ ಕೆಲವು ಪಾತ್ರಗಳು ಸ್ಕೆಚೀ ಆಗಿಯೇ ತಮ್ಮ ಪರಿಣಾಮಕಾರತ್ವವನ್ನು ನಮ್ಮ ಮೇಲೆ ಉಂಟುಮಾಡುತ್ತವೆ. ಹಾಗಾಗಿಯೇ ಓದುಗ ಇದರಲ್ಲಿ ಇನ್ನಿಲ್ಲದ ಆಸ್ಥೆಯಿಂದ ತೊಡಗಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಲ್ಲಿ ಜುಂಪಾರ ಪಾತ್ರಗಳ ಅಂತರಂಗದ ತುಮುಲಗಳು, ಹಪಹಪಿಕೆಗಳು, ಅಭೀಪ್ಸೆ-ಆಸೆಗಳು, ನಿರೀಕ್ಷೆಗಳು ನಮಗೆ ಮುಖ್ಯವಾಗುತ್ತವೆ. ಬದುಕು ಅವನ್ನೆಲ್ಲ ಕಟ್ಟಿ ಕೊಡುತ್ತದೆಯೇ ಇಲ್ಲವೇ ಎನ್ನುವುದು ಕಥಾನಕದ ಅಂಶವಾದರೂ ಅದರಾಚೆಗೂ ಈ ಪಾತ್ರಗಳು ನಮ್ಮನ್ನು ಆವರಿಸುತ್ತವೆ. ನಮ್ಮೊಂದಿಗೆ ಉಳಿಯುತ್ತವೆ. ಜುಂಪಾರ ಕಥಾನಕದ ಶಕ್ತಿ ಇರುವುದೇ ಇಲ್ಲಿ ಅನಿಸುತ್ತದೆ.
ನಿಜ, ಇಲ್ಲಿನ ಕತೆಗಳಲ್ಲಿ ಸಾಮಾಜಿಕ - ತಾತ್ವಿಕ ಅರ್ಥಪೂರ್ಣತೆಯ ಪ್ರಭಾವಳಿಯಾಗಲೀ, ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಮಕಾಲೀನ ಬದುಕಿನ ಸಮಸ್ಯೆಗಳ ಹೊಳಹುಗಳಾಗಲೀ, ಗಂಡು ಹೆಣ್ಣು ಸಂಬಂಧಗಳಾಚೆಯ ಇಶ್ಯೂಗಳ ನಿರ್ವಹಣೆಯಾಗಲೀ, ವ್ಯಕ್ತಿಗತ ನೆಲೆಯಾಚೆ ಚಾಚಿಕೊಳ್ಳುವ ಮಹತ್ವಾಕಾಂಕ್ಷೆಯ ವಸ್ತುವಾಗಲೀ ಇಲ್ಲ. ಇವು ನಮ್ಮ ನಿಮ್ಮ ಅಂತರಂಗವನ್ನು ನೇರವಾಗಿ ಉದ್ದೇಶಿಸಿರುವ ಕತೆಗಳು. ನಮ್ಮನ್ನು ಅಲ್ಲಿ ಕಲಕಬಲ್ಲ, ತನ್ನ ಪಾತ್ರಗಳ ತಲ್ಲಣ, ದುಗುಡ, ಹಪಹಪಿಕೆಗಳು ಮತ್ತು ಮೌನದ ಮೂಲಕ ನಮ್ಮನ್ನು ಕಾಡಬಲ್ಲ ಕತೆಗಳು.

ದಾಂಪತ್ಯದ ಬಗ್ಗೆ, ಗಂಡು ಹೆಣ್ಣು ಸಂಬಂಧಗಳ ಬಗ್ಗೆ, ಇವು ಹುಟ್ಟಿಸುವ ಮನಸ್ಸಿನ ತುಮುಲಗಳ ಬಗ್ಗೆಯೇ ನೇರವಾಗಿ ಪುಸ್ತಕಗಳು ಬರುತ್ತಿರುವ ಈ ದಿನಗಳಲ್ಲಿ Unaccusomed Earth ಎಲ್ಲಿ ನಿಲ್ಲುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ಯೋಚಿಸಬೇಕು. ನಾವು ಮನುಷ್ಯರನ್ನು ಅರ್ಥ ಮಾಡಿಕೊಳ್ಳುವುದು ಅವರ ಬಾಹ್ಯ ಪ್ರದರ್ಶನದ ಆಧಾರದ ಮೇಲೆ. ಪ್ರದರ್ಶನ ಎಂದೆ, ಅದು ಸರಿ. ನಾನು ನಿಮಗೆ ನನ್ನನ್ನು ಹೇಗೆ ಪ್ರದರ್ಶಿಸಿಕೊಳ್ಳುತ್ತೇನೋ ಅದನ್ನು ನೀವು ಹೇಗೆ ಗ್ರಹಿಸುತ್ತೀರೋ ಅದರ ಆಧಾರದ ಮೇಲೆ ನಿಮ್ಮ ‘ನಾನು’ ರೂಪುಗೊಳ್ಳುತ್ತೇನೆಯೇ ಹೊರತು ಅದು ನಿಜದ ‘ನಾನು’ ಅಲ್ಲ. ಹಾಗಿದ್ದರೆ ನಿಜದ ‘ನೀನು’ ನಮಗೆ ಎಲ್ಲಿ ಸಿಗುತ್ತಿ ಎಂದು ಕೇಳಿದರು ಒಬ್ಬರು. ಎಲ್ಲಿಯೂ ಇಲ್ಲ ಎನ್ನುವುದು ಆತ್ಮಘಾತುಕ ಸತ್ಯ. ಅದು ಶೂನ್ಯದಲ್ಲೇ ನನಗಷ್ಟೇ ಸಿಗಬಹುದಾದ ಕ್ಷಣಭಂಗುರ ಅನುಭವ. ಅದನ್ನು ಮಾತುಗಳಲ್ಲಿ ಹಿಡಿಯಲು ಹೋದರೆ ಮಾತಿನ ಸದ್ದು ಮೋಸ ಮಾಡುತ್ತದೆ. ಅಕ್ಷರಗಳಲ್ಲಿ ಬರೆಯ ಹೋದರೆ ಭಾಷೆಯ ಸೊಗಡು ಮೋಸ ಮಾಡುತ್ತದೆ. ಚಿತ್ರಗಳಲ್ಲಿ ಹಿಡಿದಿಟ್ಟರೆ ಬಣ್ಣಗಳು ಮೋಸ ಮಾಡಬಹುದು. ಡಾಯರಿಯಲ್ಲಿ ನನ್ನನ್ನು ನಾನು ಕಂಡುಕೊಳ್ಳಲು ಹೊರಟ ಹಾದಿಯಲ್ಲಿ ಇಂಥ ಅವಾಂತರಗಳನ್ನು ಕಂಡು ಬೆಚ್ಚಿ ಬಿದ್ದಿದ್ದೇನೆ. ನಿಮಗೆ ಗೊತ್ತಿರಬಹುದು, ಬೆಕ್ಕುಗಳಿಗೆ ಕಪ್ಪು ಬಿಳುಪು ಬಿಟ್ಟರೆ ಬೇರೆ ವರ್ಣಗಳು ಕಾಣಿಸುವುದಿಲ್ಲವಂತೆ. ನಮ್ಮ ಕನಸುಗಳಿಗೆ ಬಣ್ಣವಿರುವುದಿಲ್ಲವಂತೆ. ಮನುಷ್ಯನಿಗೂ ಕಾಣಿಸದ ಬಣ್ಣಗಳು, ಕೇಳದ ಶಬ್ದಗಳು, ಕಾಣದ ನೋಟಗಳು, ಸ್ಪರ್ಶಕ್ಕೆ ಸಿಗದ ವಸ್ತುಗಳು, ಬರೇ ಐದು ಇಂದ್ರಿಯಗಳಿಂದ ಕಂಡುಕೊಳ್ಳಲಾಗದ ಎಷ್ಟೋ ಸಂಗತಿಗಳಿರಲು ಸಾಧ್ಯ. ಹಾಗೆಯೇ ನಿಜದ ನಾನು ಆಡಲಾರದ ಹಾಡಲಾರದ ಕೇಳಲಾಗದ ಸದ್ದಿನಲ್ಲಿ, ಬರೆಯಲಾರದ ಓದಲಾರದ ಭಾಷೆಯಲ್ಲಿ, ನೋಡಲಾರದ ನೋಟದಲ್ಲಿ, ರುಚಿ ನೋಡಲಾಗದ ಮುಟ್ಟಲಾಗದ ಜಗತ್ತಿನಲ್ಲಿ ಒಂದು ಮಿಂಚಿನ ಹೊಳಹಿನಂತೆ ಕಾಣಬಹುದಾದರೆ ಅದನ್ನು ನಾನು ಮೌನದಲ್ಲೇ ಕಂಡುಕೊಳ್ಳಬೇಕಾದೀತು. ಮನುಷ್ಯ ಭಾಷೆ ಕಂಡು ಹಿಡಿದಿದ್ದೇ ಸತ್ಯವನ್ನು ಕಳೆದುಕೊಂಡ ಎನ್ನುತ್ತದೆ ಒಂದು ಧರ್ಮಗ್ರಂಥ. ಹಾಗಿರುತ್ತ ಅದನ್ನು ಸಾಹಿತ್ಯ ನಮಗೆ ನೀಡಲಾರದು. ಆದರೆ, ನಿಶ್ಚಿತವಾಗಿಯೂ ಅದು ಸತ್ಯವನ್ನು ಕಾಣಬಲ್ಲಂಥ ಒಂದು ಹೊಸ ದೃಷ್ಟಿಯನ್ನು ನಮಗೆ ನೀಡಬಲ್ಲದು. ಶ್ರೀ ಕೃಷ್ಣ ಗೀತೆಯಲ್ಲಿ ತನ್ನದೇ ವಿಶ್ವರೂಪವನ್ನು ಕಾಣುವ ದೃಷ್ಟಿಯನ್ನು ಅರ್ಜುನನಿಗೆ ನೀಡಿದಂತೆ! ಸೈಕಾಲಜಿಸ್ಟರಂತೆ ದಾಂಪತ್ಯದ ಬಗ್ಗೆ, ಗಂಡು ಹೆಣ್ಣುಗಳ ಸಂಬಂಧದ ಗೋಜಲುಗಳ ಬಗ್ಗೆ ಅಡ್ವೈಸರ್ ತರ ಬರೆಯುತ್ತಿರುವ ಅನೇಕರ ಪುಸ್ತಕಗಳು ನಮಗೆ ನಿಶ್ಚಿತ ನೋಟಗಳನ್ನು ನೀಡುತ್ತವೆ, ನಿಶ್ಚಿತ ದೃಷ್ಟಿಕೋನವನ್ನು ನೀಡುತ್ತದೆ, ನಿಶ್ಚಿತ ಪರಿಹಾರಗಳ ಬಗ್ಗೆ ಮಾತನಾಡುತ್ತದೆ. ಸೃಜನಶೀಲ ಸಾಹಿತ್ಯ ಕೃತಿಯೊಂದು ಯಾವುದೇ ಸಿದ್ಧನೋಟಗಳನ್ನು ಕಟ್ಟಿಕೊಡುವುದಿಲ್ಲ. ಅದು ದೃಷ್ಟಿಯನ್ನು ನೀಡುತ್ತದೆ. ಇದರಿಂದ ನೀವು ನಿಮಗಿಂತ ನಿಮ್ಮ ಬಗ್ಗೆ ಕಡಿಮೆ ತಿಳಿದಿರುವ ಎರಡನೆಯ ವ್ಯಕ್ತಿಯಿಂದ ನಿಮ್ಮ ಬಗ್ಗೆ ತಿಳಿಯುವ ಬದಲಿಗೆ ನಿಮ್ಮನ್ನು ನೀವೇ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ, ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ. ಮತ್ತೆ, ಇದಕ್ಕೆ ಶಾರ್ಟ್‌ಕಟ್‌ಗಳಿರುವುದಿಲ್ಲ. Unaccustomed Earth - Jhumpa Lahiri, Random House, 333pp; Rs.450.

No comments: