Friday, May 9, 2008

ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಎಸ್ ಸುರೇಂದ್ರನಾಥರ ಕಾದಂಬರಿ ಎನ್ನ ಭವದ ಕೇಡು ಇಷ್ಟವಾಗುವುದು ಅದು ಒಂದು ಇಡೀ ಆಕೃತಿಯಾಗಿ ನಮ್ಮ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳಿಗಾಗಿ ಮತ್ತು ಇಡೀ ಕಾದಂಬರಿಯ ಉದ್ದಕ್ಕೂ ಕಥಾನಕ ಸಾಗುವ ಒಂದು ಅನೂಹ್ಯ ವಿಧಾನಕ್ಕಾಗಿ. ಕಾದಂಬರಿ ಪ್ರಕಾರದ ಬರವಣಿಗೆ ಸಾಧಾರಣವಾಗಿ ಒಂದು ಬದುಕಿನ, ಇಡೀ ಜೀವನದ ಹೋರಾಟದ ಪರಿಪೂರ್ಣ ಅನುಭವವನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಒಂದು ವಾತಾವರಣವನ್ನು, ಜೀವಂತವೆನಿಸುವ ಪಾತ್ರಗಳನ್ನು ಅಚ್ಚಳಿಯದಂತೆ ಮನಸ್ಸಿನಲ್ಲಿ ಕಡೆದು ನಿಲ್ಲಿಸುತ್ತದೆ. ಅದೊಂದು ಬೇರೆಯೇ ಆದ ಲೋಕ, ಬರಹಗಾರನಿಗೂ ಓದುಗನಿಗೂ. ಅಲ್ಲಿ ಆ ಲೋಕದಲ್ಲಿ ಇರುವವರೆಗೆ ಮಾತ್ರ ನಿಜವಾದ ಅನೇಕ ಘಟನೆಗಳನ್ನು, ತಿರುವುಗಳನ್ನು, ಏಳು ಬೀಳುಗಳನ್ನು ಎಷ್ಟರಮಟ್ಟಿಗೆ ಓದುಗ ಒಪ್ಪಿಕೊಳ್ಳುತ್ತಾನೆ ಎನ್ನುವುದರ ಮೇಲೆ ಆತ ಆ ಲೋಕದಿಂದ ಹೊರಬಂದ ಮೇಲೆ ಆ ಓದು ತನಗೆ ಏನನ್ನುಂಟು ಮಾಡಿತು ಎನ್ನುವುದನ್ನು ಕಾಣಬಲ್ಲ. ಅಷ್ಟರ ಮಟ್ಟಿಗೆ ಓದಿನ ಸಂದರ್ಭದಲ್ಲೇ ಅವನಿಗೆ ಕಾದಂಬರಿಕಾರ ಕಟ್ಟಿಕೊಡುವ ಜಗತ್ತಿನಲ್ಲಿ ಇದು ಸಾಧ್ಯ, ಇದು ಹೌದು ಅನಿಸದೇ ಹೋದರೆ ಅಂಥ ಬರಹ ಅದರ ಕಾಣ್ಕೆಯ ದೃಷ್ಟಿಯಿಂದ ವ್ಯರ್ಥ. ಹಾಗೆಂದ ಮಾತ್ರಕ್ಕೆ ಕೇವಲ ವಾಸ್ತವವಾದಿ ಅಥವಾ ಸತ್ಯಾನುಸತ್ಯದ ಬರಹಕ್ಕೆ ಮಾತ್ರ ಇಂಥದ್ದು ಸಾಧ್ಯ ಎನ್ನುವುದು ತಪ್ಪು. ತಾನು ಕಂಡಿದ್ದು, ಕೇಳಿದ್ದು, ಅನುಭವಿಸಿದ್ದನ್ನು ಬಿಟ್ಟು ಹೊಸತನ್ನು ಪ್ರಯತ್ನಿಸುವ ಲೇಖಕ ಇಂಥ ಸಾಧ್ಯತೆಯಿಂದ ದೂರವುಳಿಯುತ್ತಾನೆ, ಅಂಥ ಬರಹದಲ್ಲಿ ಪ್ರಾಮಾಣಿಕತೆ ಇರುವುದಿಲ್ಲ, ಹಾಗಾಗಿ ಬರಹಗಾರ ತನ್ನ "comfort zone" ನ್ನು ಮೀರಿ ಬರೆಯಬೇಕು ಎನ್ನುವ ವಿಮರ್ಶಕರ ನಿರೀಕ್ಷೆಯನ್ನು ತಲುಪುವುದು ಇಂದಿನ ಸೀಮೀತ ಜೀವನಾನುಭವದ, ಸೀಮಿತ ಸಾಧ್ಯತೆಗಳ ಯಾಂತ್ರಿಕ ಬದುಕನ್ನು ಬದುಕುತ್ತಿರುವ ಹೊಸ ತಲೆಮಾರಿನ ಬರಹಗಾರನಿಗೆ ಕಷ್ಟ ಎನ್ನುವ ವಾದವೂ ಇದೆ. ಈ ಹಿನ್ನೆಲೆಯಲ್ಲಿ ಎಸ್ ಸುರೇಂದ್ರನಾಥರ ಎನ್ನ ಭವದ ಕೇಡು ಬಹಳ ಮುಖ್ಯವಾಗುತ್ತದೆ. ಇವರು ತೆಗೆದುಕೊಂಡ ರಿಸ್ಕ್ ಬಗ್ಗೆ ಡಾ.ಯು.ಆರ್.ಅನಂತಮೂರ್ತಿಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. "ನಮಗೆ ಗೊತ್ತಿರುವ ಲೋಕದಲ್ಲೇ ಗೊತ್ತಿಲ್ಲದ್ದು ನಡೆಯುವ ಸೋಜಿಗ ಈ ಕಾದಂಬರಿ ಶೈಲಿಯ ಮುಖ್ಯ ಲಕ್ಷಣ."

ಎನ್ನ ಭವದ ಕೇಡು ಕಾದಂಬರಿಯಲ್ಲಿ ಮಾಮಿಯ, ಗೋವರ್ಧನರಾಯರ, ಅವರ ನಾಲ್ವರು ಹೆಣ್ಣು ಮಕ್ಕಳ, ಗೌರಕ್ಕ-ಅಂಬಕ್ಕನಂಥವರ ಬದುಕನ್ನು ಕಟ್ಟಿಕೊಡುತ್ತ, ಒಟ್ಟಾರೆಯಾಗಿ ಕಾದಂಬರಿಕಾರರು ಓದುಗರಿಗೆ ದಕ್ಕಿಸಿಕೊಡುವ ಒಂದು ಜಗತ್ತು ಏನಿದೆ, ಅದು ಓದಿನುದ್ದಕ್ಕೂ ಆವರಿಸಿಕೊಳ್ಳುವಷ್ಟು ಗಾಢವಾಗಿ, ಆಪ್ತವಾಗಿ ಮತ್ತು ನೈಜವಾಗಿ ಪಡಿಮೂಡಿದೆ. ಇಲ್ಲಿನ ವಿವರಗಳ ಸಮೃದ್ಧಿ ಮತ್ತು ಭಾಷೆಯ ಬಳಕೆ ನಿಜಕ್ಕೂ ಅಚ್ಚರಿಹುಟ್ಟಿಸುವಷ್ಟು ಚೆನ್ನಾಗಿವೆ. ಹೆಣ್ಣು ಮತ್ತು ಅವಳ ಲೋಕವನ್ನು ಈ ಕಾದಂಬರಿ ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತದೆ ಎಂದರೆ ಅಡುಗೆಮನೆಯ ವಾಸನೆ, ಹೋಟೆಲಿನ ವಾತಾವರಣ ಹುಟ್ಟಿಸುವ ವಾಸನೆ, ಅವಳ ಹೆರಿಗೆಯ ವಾಸನೆ, ದಟ್ಟ ನೇರಳೆ ಬಣ್ಣದ ಬೆಳಕಾಗಿ,ನಾಗಲಿಂಗ ಪುಷ್ಪದ ಸುಗಂಧವಾಗಿ ಮೂಗಿಗಡರಿ ಕಣ್ಣಿಗೆ ಕಟ್ಟುವ ಕಾಮದ ವಾಸನೆ, ತಿಳಿ ಕೇಸರೀ ಬಣ್ಣದ ಹೊಗೆಯನ್ನುಟ್ಟ ಬೆತ್ತಲೆ ಗೋದಾವರಿಯಲ್ಲಿ ಸಂಗೀತ ಹುಟ್ಟಿಸುವ ಉನ್ಮಾದದ ವಾಸನೆ, ಮಾಮಿಯ ಸ್ನಾನದ ಗಿಡಮೂಲಿಕೆ, ಬೇರುಗಳ ದಟ್ಟ ವಾಸನೆ - ಎಲ್ಲವೂ ಒಂದು ಸ್ತ್ರೀಲೋಕವನ್ನು ಜೀವಂತಗೊಳಿಸಬಲ್ಲ, ಅವಳ ಲೋಕದ ಏಳು ಬೀಳುಗಳನ್ನು ಪ್ರತೀಕವಾಗಿಸಬಲ್ಲ ಪ್ರತಿಮೆಗಳಂತೆ ಇಲ್ಲಿ ಬರುತ್ತವೆ. ಅಡುಗೆ ಅವನ ನಾಲಿಗೆಯ ಚಪಲವನ್ನು, ಸುಗಂಧ ಅವನ ನಾಸಿಕದ ಚಪಲವನ್ನು, ಬಣ್ಣ ಅವನ ಕಣ್ಣಿನ ಚಪಲವನ್ನು, ಸಂಗೀತ ಅವನ ಕಿವಿಗಳ ಮಾದಕ ಭಾವಲೋಕದ ಚಪಲವನ್ನು, ಲೈಂಗಿಕತೆ ಅವನ ಸ್ಪರ್ಶದ ಚಪಲವನ್ನು ಪ್ರತಿನಿಧಿಸುತ್ತಲೇ ಅವು ಹೆಣ್ಣಿನ ಬದುಕಿಗೆ ಪ್ರತಿದ್ವಂದ್ವಿಯಾಗಿರುವ, ಅವಳ ಬದುಕಿನ ಸಂಘರ್ಷಗಳಿಗೆ ಮೂಲವಾಗಿರುವ ಬಗೆಯನ್ನು ಕಾದಂಬರಿ ಚಿತ್ರಿಸಿದೆ. ಇಲ್ಲಿ ಮೇಲ್ನೋಟಕ್ಕೆ ಕಂಡು ಬರುವ ಒಡಕುಗಳು ಆಳದಲ್ಲಿ ಸ್ತ್ರೀವಿರೋಧಿಯಾಗಿ ಎಂದೂ ಪರಿಣಮಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಸಣ್ಣಕ್ಕನಿಗೆ `ನೀರು ಕೊಡುವ' ಮಾಮಿಯ ಕ್ರಿಯೆಯ ಹಿನ್ನೆಲೆಯಲ್ಲಿ ಈ ಮಾತಿಗೆ ಹೆಚ್ಚಿನ ಪುಷ್ಟಿ ಸಿಗಬಹುದೆನ್ನಿಸುತ್ತದೆ. ಹಾಗೆಯೇ ಇಲ್ಲಿ ಗಮನಿಸಬೇಕಾದ ಮಾಮಿ-ರಾಧ, ಮಾಮಿ-ಗೌರಕ್ಕ, ಮಾಮಿ-ಯಮುನೆ, ಮಾಮಿ-ಪುಟ್ಟಕ್ಕ ಇತ್ಯಾದಿ ಸಂಬಂಧಗಳಲ್ಲಿರುವ, ಮೇಲ್ನೋಟಕ್ಕೆ ಕಾಣಿಸದಿದ್ದರೂ ಆಳದಲ್ಲಿರುವ ಒಂದು ತಂತುವಿನ ಮಿಡಿತ ಕೂಡ ಇದನ್ನೇ ಕಾಣಿಸುವಂಥದು. ಸರಸ್ವತಿ-ಮಾಮಿಯ ದ್ವೇಷ ಸಾಧನೆಯೇನಿದ್ದರೂ ಬೇರೆಯೇ ಒಂದು ಪಾತಳಿಯದು ಎನ್ನುವುದು ಸ್ಪಷ್ಟ.

ಹಲವಾರು ಕಾರಣಗಳಿಗಾಗಿ ಈ ಕಾದಂಬರಿ ಕಾರಂತರನ್ನು, ಅವರ ಕಾದಂಬರಿ ಲೋಕವನ್ನು ಅಲ್ಲಲ್ಲಿ ನೆನಪಿಸುತ್ತದೆ. ಅದು ಕೂಡ ಇಲ್ಲಿ ಚಿತ್ರಿತವಾಗಿರುವ ಸ್ತ್ರೀ ಲೋಕ ಮತ್ತು ಗಂಡಸರ ವ್ಯವಹಾರದ ಒಂದು ಜಗತ್ತಿನ ವಿವರಗಳಿಂದಲೇ ಇರಬಹುದು. ಅದೇ ರೀತಿ ಇಲ್ಲಿ ಬರುವ ಗಂಗೆ-ಯಮುನೆ-ಗೋದಾವರಿ ಮತ್ತು ಸರಸ್ವತಿಯವರ ವಿಭಿನ್ನ ಜಗತ್ತಿನ ವಿಭಿನ್ನ ಬಗೆಯ ಬೆಳವಣಿಗೆಯಲ್ಲಿ ಪಾಟೀಲರ ಮಾಯಿಯ ಮುಖಗಳ ಹೊಳಹು ಕಾಣಿಸುತ್ತದೆ. ಅಲ್ಲಿನ ಗಂಗಾ ತುಂಗಾ ನರ್ಮದಾರ ಪಾತ್ರಗಳ ಪರಿಕಲ್ಪನೆ, ಬೆಳವಣಿಗೆ ಮತ್ತು ಅಣುಕಾಸುರನ ಜನನದೊಂದಿಗೆ ಕತೆ ಪಡೆದುಕೊಳ್ಳುವ ಅನನ್ಯ ತೇಜಸ್ಸು ಎಲ್ಲವನ್ನೂ ಎನ್ನ ಭವದ ಕೇಡಿನ ಕೊನೆಯೊಂದಿಗೆ ತುಲನಾತ್ಮಕವಾಗಿ ಕಾಣುವುದು ಕೂಡ ಒಂದು ಹೊಸ ಅನುಭವದತ್ತ ನಮ್ಮನ್ನು ಕೊಂಡೊಯ್ಯಲು ಸಾಧ್ಯವಿದೆ.

ಆದರೂ ಇಲ್ಲಿನ ಬರವಣಿಗೆ ಸದಾ ಒಂದು ಬಗೆಯ ನಿಗೂಢಕ್ಕೆ, ಅನಿರೀಕ್ಷಿತಕ್ಕೆ, ತಿರುವಿಗೆ, ಆಘಾತಕ್ಕೆ ಓದುಗನನ್ನು ಮುಖಾಮುಖಿಯಾಗಿಸುತ್ತ ಸಾಗುವ ಚಪಲಕ್ಕೆ ಸಿಕ್ಕಿಕೊಂಡಂತಿದೆ. ಮಾಮಿಯ ಕಪಾಲಕ್ಕೆ ಗೋವರ್ಧನರಾಯರು ಒಂದೇಟು ಬಿಗಿಯುವುದು, ಗಂಗೆಯ ಆಕಸ್ಮಿಕ ಸಾವು, ಸದಾಶಿವನ ಸಾವು, ಸಣ್ಣಕ್ಕನ ಪ್ರಾಣಸಂಕಟದ ಕರೆ, ಗೋವರ್ಧನರಾಯರ ಹಲ್ಲೆ ಪ್ರಕರಣ ಇತ್ಯಾದಿಗಳನ್ನು ಕೊಂಚ ಹೆಚ್ಚೇ ವರ್ಣರಂಜಿತಗೊಳಿಸುವ ಪ್ರಯತ್ನ ಇಲ್ಲಿ ಕಾಣುತ್ತದೆ. ಇದು ತಪ್ಪೇನೂ ಅಲ್ಲ. ಆದರೆ ಇಂಥದು ಪದೇ ಪದೇ ಸಂಭವಿಸುವುದರಿಂದ ಕ್ರಮೇಣ ಈ ಯಾವುದೋ ಒಂದು ಅನೂಹ್ಯವಾದ ದುರ್ಘಟನೆಗೆ ಸದಾ ಕಾತರಿಸುವಂತೆ ಮಾಡುವ ಕಾದಂಬರಿಯ ತಂತ್ರ ಓದುಗನನ್ನು ರಂಜಿಸುವ ಬದಲಿಗೆ ಪ್ರತಿ ಅಧ್ಯಾಯದ ಕೊನೆಗೆ ಒಡೆಯುವ ಕುತೂಹಲದ ಮೊಟ್ಟೆ ಅವನಲ್ಲಿ ಇದು ಇಷ್ಟೇ ಎನಿಸುವ ಭಾವವನ್ನು ತರುವ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಅನಿಸುತ್ತದೆ. ಮುಂದಿನ ಅಧ್ಯಾಯದ ಓದು ಒಂದು ಸಿದ್ಧ ಮನಸ್ಥಿತಿಗೆ ಓದುಗನನ್ನು ಅನಗತ್ಯವಾಗಿ ಒಗ್ಗಿಸುತ್ತದೆ. ಅಲ್ಲಿ ಮತ್ತೆ ಇಂಥ ತಂತ್ರ ತೊಡಗಿದಂತೆಲ್ಲ ಓದುಗನ ಗಮನ ಆ ಅಂತ್ಯದತ್ತ ಹರಿದು ಕಾದಂಬರಿಯ ಆಶಯ, ಚೌಕಟ್ಟು, ಹಂದರದ ಕಡೆಗೆ ಇರಬೇಕಾದ ಗಮನ ಕುಂಠಿತವಾಗುತ್ತದೆ. ಇಡೀ ಕಾದಂಬರಿಗೆ ಬಿಗಿಯಾದ ಒಂದು ಚೌಕಟ್ಟು ಮತ್ತು ಹಂದರ ದಕ್ಕಿದೆ. ಅದು ಉದ್ದೇಶಿತವೋ ಅನುದ್ದೇಶಿತವೋ ಎನ್ನುವ ಸಂಗತಿ ಬೇರೆ; ಲೇಖಕರ ಮಾತುಗಳನ್ನು ಗಮನಿಸಿ. ಆದರೆ ಈ ಹಂದರವನ್ನು, ಚೌಕಟ್ಟನ್ನು, ಅದರ ಒಟ್ಟಾರೆ ಪರಿಣಾಮವನ್ನು ಈ ಸ್ವತಂತ್ರ ಅಧ್ಯಾಯಗಳಿಗೆ ಮಾತ್ರ ಹೊಂದುವ ತಂತ್ರವೇ ಅನಗತ್ಯವಾಗಿ ಮೊಟಕುಗೊಳಿಸಿರುವುದು ಬೇಸರ ಹುಟ್ಟಿಸುತ್ತದೆ.

ಮಾಮಿಯ ಪಾತ್ರವನ್ನು ಕಟ್ಟುವಲ್ಲಿ, ಪೋಷಿಸುವಲ್ಲಿ ಕಾದಂಬರಿಕಾರರು ನಿರ್ವಹಿಸಿದ ಎಚ್ಚರ ಮತ್ತು ಪರಿಶ್ರಮ ಗಮನ ಸೆಳೆಯುವಂಥದ್ದು. ಮಾಮಿಯ ಪ್ರತಿಯೊಂದು ಚಲನವಲನವೂ ನಿಗೂಢವಾದ ಒಂದು ಸ್ಪರ್ಶದಿಂದ ಸದಾ ಕೌತುಕಕ್ಕೆ ಕಾರಣವಾಗುವಂತಿದೆ. ಅವಳ ಅತೀಂದ್ರಿಯ ಶಕ್ತಿ, ಅಸಾಮಾನ್ಯವಾದ ನಡೆ ನುಡಿ, ಸ್ನಾನದ ವಿವರಗಳು ಆಕೆಯನ್ನು ಸಾಮಾನ್ಯರ ಜೊತೆ ಸಾಮಾನ್ಯಳಂತೆ ಉಳಿಸದಿರುವ ಕೆಲಸ ಮಾಡಿದೆ. ಕಾದಂಬರಿಯ ಮೂಲ ಎಳೆಗೆ ಅಗತ್ಯವಾದ ಆಕೆಯ ಕೆಲವು ಸ್ವಭಾವಗಳು ಕೂಡ ಈ ಅಸಹಜತೆಯೊಂದಿಗೆ ತಳಕು ಹಾಕಿಕೊಳ್ಳುತ್ತವೆಯಾದರೂ ಕಾದಂಬರಿಯ ಧ್ವನಿ ಏನಿದೆ ಅದು ಮಾಮಿಯ ಈ ಗುಣಗಳನ್ನು ಸಹಜವೆಂದು ದಾಖಲಿಸಲು ಕಾತರಿಸುತ್ತಿಲ್ಲವೆ, ಮತ್ತು ಹಾಗಿರುತ್ತ ಮಾಮಿಯ ಪಾತ್ರದ ಅಸಾಮಾನ್ಯ ರೂಪು ರೇಷೆಗಳು ಆ ಉದ್ದೇಶಕ್ಕೆ ಅಷ್ಟೇನೂ ಪೂರಕವಾಗಿಲ್ಲ ಎನ್ನಬೇಕಲ್ಲವೆ ಎನ್ನುವ ಪ್ರಶ್ನೆಗಳಿವೆ. ಇದನ್ನು ಸ್ಪಷ್ಟಗೊಳಿಸಿಕೊಳ್ಳಲು ನಾವು ಮಾಮಿಯ ಪಾತ್ರವನ್ನು ಇನ್ನಷ್ಟು ಗಮನವಿಟ್ಟು ನೋಡುವುದು ಅಗತ್ಯ.

ಮಾಮಿಯ ಬೇರು ನಾರಿನ ವಿಶಿಷ್ಟವಾದ ಸ್ನಾನವನ್ನು ಗಮನಿಸಿ. ಇದೇ ಸ್ನಾನದ ಬಹುಷಃ ಸ್ವಲ್ಪ ಗತಿ ತಪ್ಪಿದ ಸ್ಪರ್ಶ ಗೋದಾವರಿಯನ್ನು ಏನು ಮಾಡಿತು ಎನ್ನುವುದನ್ನು ಗಮನಿಸಿದರೆ ಅದು ಕೇವಲ ಸ್ನಾನವೆಂದು ಯಾರಿಗೂ ಅನಿಸುವುದಿಲ್ಲ. ಮಾಮಿ ನಡೆಸಿಕೊಂಡು ಬರಲು ಉದ್ದೇಶಿಸಿದ ಯಾವುದೋ ಕಠಿಣ ವೃತಕ್ಕೆ ಅದು ಅನಿವಾರ್ಯವಾಗಿತ್ತೋ ಎನಿಸುತ್ತದೆ. ಅದು ಕಾಮ ನಿಗ್ರಹವೆ, ಹೌದೆಂದಾದರೆ ಅದಕ್ಕೆ ಒಂದು ಸ್ಪಷ್ಟ ಉದ್ದೇಶವೂ, ಹಿನ್ನೆಲೆಯೂ ಇರಬೇಕಲ್ಲವೆ. ಅದನ್ನು ಸಣ್ಣಮ್ಮನ ತೀರ ತೆಳುವಾಗಿರುವ ಪಾತ್ರ ಚಿತ್ರಣ ಸೂಚಿಸುವ ಪ್ರಾಣಸಂಕಟಗಳಲ್ಲಿ ಹೂತಿದೆಯೆ? ಇನ್ನು ಅವಳ ಕತ್ತಲೆ ಕೋಣೆಯ ವಾಸ, ಆ ಏಕಾಂತ, ಮೌನ, ನಿದ್ದೆ ಇದೆಲ್ಲವೂ ಯಾಕಾಗಿ ಎನ್ನುವುದು ತಿಳಿಯುವುದಿಲ್ಲ. ಈ ತಿಳಿಯದೇ ಉಳಿಯುವ ಚರ್ಯೆಗಳು ಆ ಪಾತ್ರವನ್ನು ವಿಶಿಷ್ಟ, ವಿನೂತನಗೊಳಿಸುವುದು, ಅಸಂಗತ ಪಾತ್ರವೊಂದರ ಪರಿಕಲ್ಪನೆಯನ್ನು ನೀಡುವುದು ನಿಜವೇ. ಆದರೆ ಈ ಪರಿಕಲ್ಪನೆ ಸಾರ್ಥಕವಾಗಬೇಕಿರುವುದು ಮಾತ್ರ ಮಾಮಿ ಧ್ವನಿಸುವ ಅಥವಾ ಅವಳೆದುರಿನ ಇತರ ಪಾತ್ರಗಳು - ಇಲ್ಲಿ ಅದು ಸರಸ್ವತಿ ಮತ್ತು ವಾಸು ಇರಬಹುದೆ, ನಿರೂಪಿಸುವ ಭವದ ಕೇಡಿನಲ್ಲೇ ಅಲ್ಲವೆ? ಹಾಗಿದ್ದರೆ ಮಾಮಿಯ ಸಿಟ್ಟು-ಸಿಡುಕು-ದರ್ಪ ಮತ್ತು ಯಾವುದೋ ಜೀವ ಎಲ್ಲಿಯೋ ನರಳುತ್ತಿದ್ದರೆ ಸಾವಿನ ನೆರಳಿನಲ್ಲಿ ಬಾಡುತ್ತಿದ್ದರೆ ದಿಗ್ಗನೆ ಎದ್ದು ಓಡುವ ಅಂತಃಕರಣ(?), ಬದುಕಿನುದ್ದಕ್ಕೂ ನಿರ್ವಹಿಸುವ ಲೈಂಗಿಕ ಕಾಮನಿವೃತ್ತಿ ಮತ್ತು ಸಾವಿನ ನೆರಳಿನಲ್ಲಿರುವ ಗಂಡನಿಗೆ ಅನುಗ್ರಹಿಸುವ ರತಿಸುಖ, ಪ್ರೇಮವನ್ನು ಸದಾ ವಿರೋಧಿಸುವ ಪ್ರವೃತ್ತಿ ಮತ್ತು ತನ್ನದೇ ಎದೆಯಲ್ಲಿ ಗುಟ್ಟಾಗಿ ಉಳಿದಿರುವ ಒಂದು ಆರ್ದ್ರ ಪ್ರೇಮಪ್ರಕರಣ, ಯಮುನೆಯ ಮೇಲಿನ ಪ್ರೀತಿ ಮತ್ತು ಸರಸ್ವತಿಯ ಮೇಲಿನ ದ್ವೇಷ, ಗಂಡು ಹೆಣ್ಣು ಸಮಾಗಮವನ್ನು ಸಹಿಸಲಾರದ ವ್ಯಗ್ರತೆ ಮತ್ತು ವಾಸು-ಯಮುನೆಯ ಸಂಬಂಧವನ್ನು ಉತ್ತೇಜಿಸುವ ನಡೆ - ಮುಂತಾದ ವೈರುಧ್ಯಗಳಿಗೆ ಏನರ್ಥ? ಪ್ರತಿ ವ್ಯಕ್ತಿಯಲ್ಲೂ, ಬದುಕಿನಲ್ಲೂ ವೈರುಧ್ಯಗಳು ತುಂಬಿರುತ್ತವೆ ಮತ್ತು ಬದುಕಿಗೆ ಒಂದು ಅರ್ಥದ, ಚೌಕಟ್ಟಿನ ಹಂಗಿಲ್ಲ, ಅದೇನಿದ್ದರೂ ಪ್ರತಿಯೊಂದನ್ನೂ ನಮಗೆ ಈಗಾಗಲೇ ಗೊತ್ತಿರುವ ದತ್ತ ಅರ್ಥದ ಚೌಕಟ್ಟಿಗೆ ಹೊಂದಿಸುವ ನಮ್ಮ ಮನಸ್ಸಿನ ಅಗತ್ಯ ಎಂಬುದನ್ನು ತಿಳಿದೂ ಒಂದು ಸೃಜನಶೀಲ ಕೃತಿಯನ್ನು ಇಂಥ ಪರೀಕ್ಷೆಗೆ ಒಡ್ಡುವುದು ಅಗತ್ಯ. ಆಗಲೇ ದಿಕ್ಕು ತಪ್ಪಿಸುವ, ಅಚ್ಚರಿಗೊಳಿಸುವ ಒಂದು ಬರವಣಿಗೆ ಸತ್ಯದ ನಿಜವಾದ ಶೋಧವಾಗಲು ಸಾಧ್ಯ. ಡಾ.ಯು.ಆರ್.ಅನಂತಮೂರ್ತಿಯವರು ಇದನ್ನೇ ಕುರಿತು ಬರೆಯುತ್ತ "ತನ್ನನ್ನೇ ತಾನು ಮೀರುವಂತೆ ಬರೆಯುವ (ಬರೆಯಿಸಿಕೊಳ್ಳುವ) ಸೃಷ್ಟಿಯಲ್ಲಿ ಮಾತ್ರ ಗದ್ಯ ಕಾವ್ಯಗಂಧಿಯಾಗುವುದು. ಹೀಗೆ ಬರೆಯುವ ಕ್ರಿಯೆಯಲ್ಲಿ ಸೋಲೂ ಉಂಟು, ಗೆಲುವೂ ಉಂಟು." ಎನ್ನುತ್ತಾರೆ.

ಮಾಮಿಯ ಹೆಚ್ಚಿನ ನಡವಳಿಕೆಗಳು ಕೊನೆಗೂ ಒಂದು ಚೌಕಟ್ಟಿಗೆ ನಿಲುಕದ ವಿಕ್ಷಿಪ್ತ ವರ್ತನೆಯಾಗಿ ಮಾತ್ರ ಉಳಿಯುತ್ತದೆ ಎಂದು ಕೊಂಡರೂ ಅದು ಗುರಿ ಮುಟ್ಟಿದೆ. ಈ ಬಗ್ಗೆ ಮುಂದೆ ಗಮನಿಸಬಹುದು. ಸದ್ಯ ಮಾಮಿಯ ವ್ಯಕ್ತಿತ್ವವನ್ನು ಇನ್ನಷ್ಟು ಹಿಂಜಬಹುದು.
ಯಾವ ಕಾರಣಕ್ಕಾಗಿ ಮಾಮಿಯನ್ನು ದೈವತ್ವದ ಸಾಕಾರವೆಂಬಂತೆ ಕಾಣಬಹುದಾಗಿದೆಯೋ ಅದು ಕೂಡ ವಿಲಕ್ಷಣವಾಗಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ಅದು ಅವಳು ಬರಲಿರುವ ಸಾವನ್ನು ಕೂಡ ಮೂಸಿ ತಿಳಿಯಬಲ್ಲಳು ಎಂಬುದೇ. ಈ ಬಗೆಯ ವಿಶಿಷ್ಟ ಶಕ್ತಿಯಿಂದ ಆಕೆ ಮಾನವೀಯವಾದ ಏನನ್ನೂ ಮಾಡುವುದೇ ಇಲ್ಲ ಎಂಬುದು ಆಕೆಯ ಈ ವಿಲಕ್ಷಣ ದೈವತ್ವದ ಮಿತಿಯಾಗಿರುವುದನ್ನು ಗಮನಿಸಬೇಕು. ಯಾಕೆಂದರೆ ಮಾಮಿ ಬೃಂದಾವನಕ್ಕೆ ಬಂದಂದಿನಿಂದ ನಡೆದುಕೊಳ್ಳುವ ಪ್ರತಿಯೊಂದು ರೀತಿಯಲ್ಲೂ ಸಣ್ಣಮ್ಮನಿಗಾದ ಯಾವುದೋ ಅನ್ಯಾಯದ, ಅನಾಚಾರದ, ದುರಾಗ್ರಹದ ಕುರಿತಾದ ಎಚ್ಚರ ಅಥವಾ ಪ್ರತಿರೋಧ ವ್ಯಕ್ತವಾಗುತ್ತಿರುವಂತಿದೆ. ಇದು ಇಡೀ ಹೆಣ್ಣಿನ ಬದುಕನ್ನು ಪ್ರತಿನಿಧಿಸುತ್ತಿರಬಹುದಾದ ಸೂಚನೆ, ಹೊಳಹುಗಳನ್ನು ದಟ್ಟವಾಗಿರುವ ಕಾದಂಬರಿಯ ಸ್ರ್ತೀಲೋಕದ ಚಿತ್ರಣ ನೀಡುತ್ತದೆ. ಈ ದೃಷ್ಟಿಯಿಂದಲೇ ಮಾಮಿಯ ಜೀವನ ವಿರೋಧಿಯಾಗಿ ಕಾಣಬಹುದಾದ ಕೆಲವು ನಿಲುವುಗಳನ್ನು ನೋಡಬೇಕಿದೆ. ಮಗುವಿನ ತಾಯಿಯಾದರೆ ತಾನು ಸಾಯುತ್ತೇನೆಂಬ ಆಕೆಯ ಭಯ ಅಥವಾ ನಂಬುಗೆ, ಬೃಂದಾವನದಲ್ಲಿ ಆಕೆಯ ಬದುಕಿನ ಆರಂಭದಿಂದಲೇ ಸಾಮಾನ್ಯ ಮಾನವ ಬದುಕಿನ ಜೀವಂತಿಕೆಯನ್ನು ಸೂಚಿಸುವ ಪ್ರತಿಯೊಂದರಲ್ಲೂ ಆಕೆ ದ್ವೇಷ, ಅಸಹ್ಯಗಳನ್ನು ತೋರಿಸುವ ರೀತಿ, ಕಾಮ-ರತಿಸುಖದ ಪರಾಕಾಷ್ಠೆಗೆ ಮುಖ ತಿರುಗಿಸುವ ಆಕೆಯ ನಡವಳಿಕೆ, ಆಕೆಯನ್ನು ವ್ಯಗ್ರ ಮತ್ತು ವಿಕ್ಷಿಪ್ತಗೊಳಿಸುವ ಗೋವರ್ಧನರಾಯ-ರಾಧೆಯರ, ಸರಸ್ವತಿ-ವಾಸುವಿನ ಸಮಾಗಮ - ಈ ಎಲ್ಲದರ ಹಿಂದೆ ಸಣ್ಣಮ್ಮ ಅನುಭವಿಸಿದ ನರಕದ ಕಥೆಯೊಂದು ಸುಪ್ತವಾಗಿ ಗುಪ್ತವಾಗಿ ಹರಿಯುತ್ತಿದೆಯೆ? ತನ್ನಂತೆಯೇ ಕಾಣುತ್ತಿ ಆದರೆ ತನ್ನಂತೆ ಆಗಬೇಡ ಎನ್ನುವ ಸಣ್ಣಮ್ಮನ ಒಂದು ಉಕ್ತಿಯಲ್ಲೇ ಇದನ್ನೆಲ್ಲ ಕಾಣಬಹುದೆ? ವಾಸು ಮತ್ತು ಯಮುನೆಯರ ದಾಂಪತ್ಯವನ್ನು ಅನಿರೀಕ್ಷಿತ ಬಗೆಯಲ್ಲಿ ಸಹಿಸುವ, ಉತ್ತೇಜಿಸುವ ಮಾಮಿ ಅವರ ಕೂಸು ಸದಾಶಿವನ ಸಾವಿಗೆ ಕಾರಣವೆನ್ನುವ ಸರಸ್ವತಿಯ ವಾದದಲ್ಲಿ ಹುರುಳಿದೆ ಎನ್ನುವುದಾದರೆ ಜೀವಸೆಲೆಯ ಕರಾಳ ಶತ್ರು ಈ ಮಾಮಿಯೆನ್ನಬೇಕು. ರಾಧೆಯ ಸಾವಿನ ಬೆನ್ನಿಗೇ ನಾಗಲಿಂಗ ಪುಷ್ಪದ ಜೋಡಿ ಮರಗಳನ್ನು ಬುಡಸಹಿತ ಕಿತ್ತು ಹಾಕಿಸುವ ಮಾಮಿಯ ನಡೆ ಕೂಡ ಇದನ್ನೇ ಸೂಚಿಸುತ್ತದೆ.

ಜ್ಞಾನದ ಬಲದಿಂದ ಅಜ್ಞಾನದ
ಕೇಡುಜ್ಯೋತಿಯ ಬಲದಿಂದ ತಮಂಧದ
ಕೇಡುಪರುಷದ ಬಲದಿಂದ ಅವಲೋಹದ
ಕೇಡುಕೂಡಲ ಸಂಗನ ಶರಣರ ಅನುಭಾವದಿಂದ
ಎನ್ನ ಭವದ ಕೇಡು ನೋಡಯ್ಯಾ

ಎನ್ನುವ ವಚನದಿಂದ ತನ್ನ ಶೀರ್ಷಿಕೆಯನ್ನು ಪಡೆದಿರುವ ಕಾದಂಬರಿಯಲ್ಲಿ ಯಾವುದೇ ಅನುಭಾವದ ನೆರಳಿಲ್ಲ. ಇಲ್ಲಿ ಭವದ ಅತಿರೇಕವೇ ಭವದ ಕೇಡಾಗಿದೆಯೇ ಹೊರತು ಅನುಭಾವ ಎಲ್ಲೂ ಭವದ ಕೇಡಿನ ಹೊರದಾರಿಯಾಗಿ ಕಾಣಿಸಿಕೊಳ್ಳುವುದಿಲ್ಲ ಮಾತ್ರವಲ್ಲ ಭವದಿಂದ ಮುಕ್ತರಾಗುವ ತುಡಿತ ಕೂಡ ಇಲ್ಲಿನ ಯಾವುದೇ ಪಾತ್ರದ ನಿಲುವಿನಲ್ಲಿ ಇಲ್ಲ. ವಾಸು ಮತ್ತು ಸರಸ್ವತಿಯ ಸಮಾಗಮದ ತುರೀಯಾವಸ್ಥೆಗೆ ಸದಾ ಅಡ್ಡಿಯಾಗಿದ್ದ ಮಾಮಿಯನ್ನು, ಸ್ವತಃ ತನ್ನದೇ ಹಾಸುಗೆಯಲ್ಲಿ ಅದನ್ನು ನಿವಾರಿಸಿಕೊಂಡಿದ್ದ ಮಾಮಿಯನ್ನು ಹಠದಿಂದ ಸರಸ್ವತಿ ಮೀರುವುದೇ ಕಾದಂಬರಿಯ ಮಹತ್ವದ ನಡೆ. ಅಲ್ಲಿ ಒಂದು ನಾಟಕೀಯ ವಿದ್ಯಮಾನವಿದೆ. ಕಾಮದ ವಿಜೃಂಭಣೆಯಲ್ಲಿ ಸಾವು ಹಣಿಕಿಕ್ಕುವ ಒಂದು ವಿಪರ್ಯಾಸ ಮತ್ತು ಬದುಕು ರಕ್ತದ ಅಂಟಿನಿಂದ ಲಿಪ್ತವಾಗುವ ವೈಚಿತ್ರ್ಯ. ಕಾಮ,ಪ್ರೇಮ, ಸಮಾಗಮ, ಗಿಡ, ಚಿಗುರು, ಹೂವು, ಗಂಧ, ಸೃಷ್ಟಿ ಎಲ್ಲವನ್ನೂ ವಿರೋಧಿಸುತ್ತ ಅದಕ್ಕಾಗಿ ತನ್ನದೆ ಬದುಕನ್ನು, ತನ್ನ ಪ್ರೇಮವನ್ನು, ತನ್ನ ಸುಖವನ್ನು ಬಲಿಕೊಟ್ಟ ಮಾಮಿ ಭವವನ್ನು ಕೇಡೆನ್ನುತ್ತಿರುವಂತೆ ಇದೀಗ ಗೋಚರಕ್ಕೆ ಬರುವ ವಿದ್ಯಮಾನಕ್ಕೆ ಬೃಂದಾವನ ಹೊಣೆಯೆ ಅಥವಾ ಇಡೀ ಮಾನವ ಕುಲವೇ ಹೊಣೆಯೆ? ಭವದ ಬದುಕಿಗೆ ಇವೆಲ್ಲ ಎಂದೂ ಕೇಡಾಗಿರಲು ಸಾಧ್ಯವಿಲ್ಲವೆನ್ನುವುದು ಜೀವನ್ಮುಖಿಯಾದ ಎಲ್ಲರಿಗೂ ಗೊತ್ತು. ಹಾಗೆಂದ ಮಾತ್ರಕ್ಕೆ ಮಾಮಿ ಅದನ್ನು ಒಪ್ಪಬೇಕಿಲ್ಲ. ಮಾಮಿಯ ಕಟು ವಿರೋಧವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

"ಕಾದಂಬರಿ ಲೋಕದ `ಭವ' ಎಷ್ಟು ತೀವೃವಾದದ್ದೆಂದರೆ ಅದರ ತೀವೃತೆಯೇ ಅದರ ಕೇಡೆಂದು ನಮಗೆ ಅನಿಸುವಂತಿದೆ. ಅನುಭಾವಕ್ಕೆ ಆಸ್ಪದವಿಲ್ಲದ ದಟ್ಟ ಭವದ ವಾಸನೆಯ ಕೃತಿಯಿದು" ಎನ್ನುತ್ತಾರೆ ಡಾ.ಯು.ಆರ್.ಅನಂತಮೂರ್ತಿ. ಆದರೆ ಕಾದಂಬರಿಯಲ್ಲಿ ಭವದ ಅತಿರೇಕವಿಲ್ಲವೆನ್ನುವುದನ್ನು ಗಮನಿಸಬೇಕು. ಮಾಮಿಯನ್ನು ಹೊರತು ಪಡಿಸಿದರೆ ಬೇರೆ ಯಾವ ಪಾತ್ರದಲ್ಲೂ ಭವದ ಐಹಿಕ ವ್ಯಾಪಾರಗಳಲ್ಲಿ ಅತಿಲೋಲುಪತೆ, ತೀವೃತೆ ಕಾಣಿಸುವುದಿಲ್ಲ. ಹಾಗೆ ನೋಡಿದರೆ ಸರಸ್ವತಿಯ ವ್ಯಾಮೋಹಗಳಿಗಿಂತ ಗೋದಾವರಿಯ ಆಸಕ್ತಿಗಳು ತೀವೃ. ಆದರೂ ಗೋದಾವರಿಯ ಉನ್ಮಾದವನ್ನು ಕೂಡ ಒಂದು ಸಹಜ ವಿದ್ಯಮಾನವನ್ನಾಗಿ ಕಾದಂಬರಿ ಚಿತ್ರಿಸಿಲ್ಲ. ಅದು ಬೇರೆಯೇ ಪಾತಳಿಯಲ್ಲಿ ಘಟಿಸುವ ಒಂದು ಪ್ರಕ್ರಿಯೆ. ಇನ್ನು ಗೋವರ್ಧನರಾಯರು, ರಾಧೆ, ನಾಲ್ವರು ಮಕ್ಕಳು ಯಾರ ಪಾತ್ರವೂ ಧನದಾಹದಿಂದಾಗಲೀ, ಸುಖಲೋಲುಪತೆಯಿಂದಾಗಲೀ ವಿಜೃಂಭಿಸುವುದಿಲ್ಲ. ವಿಜೃಂಭಣೆಯೆಲ್ಲ ಮಾಮಿಯ ವಿಕ್ಷಿಪ್ತ ನಡವಳಿಕೆಯದ್ದೇ. ಆದಾಗ್ಯೂ ಮಾಮಿಯ ಒಟ್ಟಾರೆ ನಡವಳಿಕೆಯಲ್ಲಿ ವೈರುಧ್ಯಗಳಿಗೆ ಅಂಥ ಮಹತ್ವವಿಲ್ಲ. ಬಹುಷಃ ಇಂಥ ವೈರುಧ್ಯಗಳೆಲ್ಲ ಇಲ್ಲದಿರುತ್ತಿದ್ದರೆ ಮಾಮಿಯ ಆ ಪಾತ್ರ ಅಷ್ಟು ಜೀವಂತ, ಸಾಮಾನ್ಯ ಮತ್ತು ವಾಸ್ತವಿಕ ಕೂಡ ಆಗಿ ಕಾಣಿಸುವುದು ಸಾಧ್ಯವಾಗುತ್ತಿರಲಿಲ್ಲವೇನೋ. ಅಂಥ ಕಟುತ್ವ, ಅಂಥ ನಿಗ್ರಹ ಮತ್ತು ಅಂಥ ವೃತಸಹಜ ನಿಷ್ಠೆ ಮಾಮಿಯಂಥ ಹೆಣ್ಣನ್ನು ಮಾಮಿಯಂಥ ಮಾಮಿಯನ್ನಾಗಿಸದೇ ಇರುವುದು ಸಾಧ್ಯವಿತ್ತೆ? ಮಾಮಿಯ ಹೆಚ್ಚಿನ ನಡವಳಿಕೆಗಳು ಕೊನೆಗೂ ಒಂದು ಚೌಕಟ್ಟಿಗೆ ನಿಲುಕದ ವಿಕ್ಷಿಪ್ತ ವರ್ತನೆಯಾಗಿ ಮಾತ್ರ ಉಳಿಯುತ್ತದೆ ಎಂದು ಕೊಂಡರೂ ಅದು ಗುರಿ ಮುಟ್ಟಿದೆ ಎಂದು ಹೇಳಿರುವುದು ಈ ಕಾರಣಕ್ಕೇ.

ನಾರು, ಬೇರು, ಸುಗಂಧ, ದ್ರವ್ಯಾದಿಗಳ ಸ್ನಾನ (ಸ್ನಾನವೆಂಬ ಪ್ರಕ್ರಿಯೆಯೇ ವೈಬೋಗವನ್ನು ಸೂಚಿಸುವಂಥದು)ದ ವಿಲಕ್ಷಣ ಆಚರಣೆಯ ಹೊರತಾಗಿಯೂ ಭವಿಯ ಯಾವುದೇ ಲಕ್ಷಣ ಮಾಮಿಯಲ್ಲೂ ಇಲ್ಲವೆನ್ನುವುದನ್ನು ಗಮನಿಸಿ. ಅವಳ ರುಚಿ ಸಾವು, ದ್ವೇಷ ಕಾಮ ಎಂದು ಮೇಲ್ನೋಟಕ್ಕೆ ಕಂಡರೂ ಅದು ಹೊದ್ದು ಕೊಂಡ ಒಂದು ಅನಿವಾರ್ಯ ಕರ್ಮವಾಗಿತ್ತೆನಿಸುತ್ತದೆ. ಸರಸ್ವತಿಯ ವಿರೋಧ ಎಷ್ಟೋ ಬಾರಿ ಗುರಿಯಿಲ್ಲದ ಹೊಡೆತ ಎನಿಸುವುದು ಇದೇ ಕಾರಣಕ್ಕೆ. ಕೊನೆಗೂ ಕಾದಂಬರಿಯ ಕೇಂದ್ರ ಸಣ್ಣಮ್ಮನೇ ಆಗಿ ಬಿಡುವುದು ಇಲ್ಲಿನ ವಿಶೇಷ. ಸಣ್ಣಮ್ಮನ ಪಾತ್ರದ ವಿಶಿಷ್ಟ ಚಿತ್ರಣವನ್ನು ಸೂಚಿಸುವ ಈ ವಿವರಗಳನ್ನು ಗಮನಿಸಿ:

`ನೀ ಬರ್ತೀಂತ ಕಾಯ್ತಿದ್ದೆ. ಬಂದ್ಯಲ್ಲಾ ಬಿಡು.' ದನಿ ಬಂದತ್ತ ಶಶಿಕಲಾ ಮಬ್ಬುಗತ್ತಲಲ್ಲಿ ಹೆಜ್ಜೆ ಹೊರಳಿಸಿದಳು. ನೆಲವೇ ಅದಾಗಿತ್ತೋ, ಅದೇ ನೆಲವಾಗಿತ್ತೋ ಅಂತಹ ಮಾನವ ಜೀವವೊಂದು ನೆಲದ ಮೇಲೆ ಬರೆಬರೆಯಾಗಿ ಬಿದ್ದಿತ್ತು. ಅದರ ಮೈಯ್ಯ ಮೇಲಿನ ಸುಕ್ಕುಗಳು ನೆಲದ ಮೇಲಿನ ಬಿರುಕುಗಳಂತಿದ್ದವು. ವಯಸ್ಸೆಷ್ಟೋ ಗೊತ್ತಾಗುವಂತಿರಲಿಲ್ಲ. `ಕೂತ್ಗಾ' ಅಪ್ಪಣೆಯಿತ್ತ ದನಿಗೆ ಮಾತ್ರ ಹದಿನೆಂಟರ ಕಸುವಿತ್ತು. ತಿದ್ದಿ ಬರೆದ ಸ್ಪಷ್ಟತೆಯಿತ್ತು. ಕಣ್ಣನ್ನು ಜೀವದ ಮೇಲೆ ಕೀಲಿಸಿ, ಮಂತ್ರಮುಗ್ಧಳಾದಂತೆ ಅದರ ಪಕ್ಕದಲ್ಲಿ ಕುಳಿತಳು. ನೆಲದ ಮೇಲೆ ಹರಡಿ ಬಿದ್ದಿದ್ದ ಆ ಜೀವದ ಕೈಯನ್ನು ಕೈಗೆತ್ತಿಕೊಂಡಳು. ಸವರುತ್ತಾ ಕುಳಿತಳು.......ಅವಳ ಕೈಯ್ಯಿಂದ ತನ್ನ ಕೈಯ್ಯನ್ನು ಜಾರಿಸಿಕೊಂಡಿತು ಆ ಜೀವ. ಸ್ಪರ್ಶ ತಪ್ಪಿದ ಗಳಿಗೆ ನೆಲದೊಳಗೇ ಇಂಗಿ ಹೋಯಿತೇನೋ ಅನ್ನುವಂತೆ ಕತ್ತಲಲ್ಲಿ ಕಾಣದಾಯಿತು ಆ ಜೀವ.'

ಹೆಣ್ಣನ್ನು ಸದಾ ಮಾಯೆ, ಜೀವಸೃಷ್ಟಿಯನ್ನು ಪೊರೆಯುವವಳು, ಅಮ್ಮ ಎಂದೆಲ್ಲ ಕಾಣಲಾಗಿದೆ. ಅದೇ ಹೆಣ್ಣು ಈ ಜಗತ್ತಿನಲ್ಲಿ ಗಂಡನ್ನು ಇಹಕ್ಕೆ, ಮೋಹಕ್ಕೆ, ಬದುಕಿಗೆ ಹಚ್ಚುವವಳು ಎಂದರೂ ಸರಿಯೆ. ಅಂಥ ಹೆಣ್ಣು ಸ್ವತಃ ತಾನೇ ಭವದ ವಿರೋಧಿಯಾಗುವ ಮಟ್ಟಿಗೆ ಇಹದ ಬದುಕನ್ನು ನಾವೆಲ್ಲ ಸೇರಿ ಕೆಡಿಸಿಕೊಳ್ಳುತ್ತಿದ್ದೇವೆಯೆ, ಹಾಗೆ ಮಾಡಿ ಹೆಣ್ಣೇ ಭವದ ಬದುಕಿನ ವಿರುದ್ಧ ನಿಲ್ಲವಂಥ ಒಂದು ವಿಲಕ್ಷಣ ಸನ್ನಿವೇಶ ಸೃಷ್ಟಿಯಾಗುತ್ತಿದೆಯೆ ಎನ್ನುವ ಸೂಕ್ಷ್ಮವನ್ನು ಕೆದಕುತ್ತ ಹಾಗೇನಾದರೂ ಆದರೆ ಅದು ಹೇಗಿದ್ದೀತು ಎನ್ನುವುದರತ್ತ ಚಾಚಿದ ಕಲ್ಪನೆಯಂತಿದೆ ಈ ಕಾದಂಬರಿ. ಹೆಣ್ಣು, ಭೂಮಿ, ನೋವು ಮತ್ತು ಪ್ರತಿರೋಧಗಳ ಚಿತ್ರವನ್ನು ಒಟ್ಟೊಟ್ಟಿಗೇ ತೋರುವಂತಿರುವ ಈ ನಿರೂಪಣೆಯ ವಿಧಾನ ಕೂಡ ಕನ್ನಡಕ್ಕೆ ಹೊಸತು.
ಛಂದ ಪುಸ್ತಕ, ಐ-೦೦4, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 76.
ಸೆಲ್: 9844422782, chandapustaka@yahoo.com
ಪುಟಗಳು 236, ಬೆಲೆ: ಎಪ್ಪತ್ತೈದು ರೂಪಾಯಿ.

1 comment:

Mukta said...

ವಿಮರ್ಶೆ ತುಂಬಾ ಚೆನ್ನಾಗಿದೆ. ನಾನು ಇನ್ನೂ ಈ ಪುಸ್ತಕ ಓದಿಲ್ಲ. ನಿಮ್ಮ ಅನಿಸಿಕೆ ಓದಿದ ನಂತರ, ಪೂರಾ ಕಾದಂಬರಿ ಒದಬೆಕೆನಿಸಿದೆಂಈವು ಕಂಡ ಮಾಮಿನ ನಾನು ನೋಡಬೇಕು.