Tuesday, May 20, 2008

ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!


ಬಾಳಾಸಾಹೇಬ ಲೋಕಾಪುರ ಅವರು ತಮ್ಮ `ಹುತ್ತ' ಕಾದಂಬರಿಯ ಮೂಲಕ ಬದುಕಿನ ಹಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಾರೆ ಮತ್ತು ತಮ್ಮ ಓದುಗನೂ ಅವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದ್ದಾರೆ. ತುಂಬ ಪ್ರಾಮಾಣಿಕವಾದ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸು ಹೊಂದಿದೆ. ಅಷ್ಟೇ ಮಹತ್ವದ್ದಾಗಿ ಇದನ್ನು ಸಾಧಿಸುವಾಗ ಅವರು ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ.


ಇಲ್ಲಿನ ಭೀಮು ಮುತ್ಯಾ ಮತ್ತು ಕಲ್ಲಪ್ಪ ಹಲವಾರು ಕಾರಣಗಳಿಗೆ ಒಂದು ಬಗೆಯ ಸಂವಾದಿತ್ವ ಹೊಂದಿರುವ ಪಾತ್ರಗಳು. ಅದೇ ರೀತಿ ರಾವಸಾಬ ಮತ್ತು ಜಿನ್ನಪ್ಪ; ಚಂಪಕವ್ವ ಮತ್ತು ಬುದ್ದವ್ವ. ಶಿವರುದ್ರ ತನ್ನ ದ್ವೇಷ, ಕ್ರೌರ್ಯ ಮತ್ತು ಒಳಸಂಚುಗಳ ಪ್ರತೀಕವಾಗಿ ನಿಂತರೆ ನಾಗಿಯ ಪಾತ್ರ ಸ್ತ್ರೀವ್ಯಾಮೋಹದ ಕೇಂದ್ರವಾಗಿದೆ. ಇದೇ ರೀತಿ ಇಲ್ಲಿ ಗಾಂಧಿ ಮತ್ತು ಜೈನ ಧರ್ಮ ಎರಡು ಸಂವಾದೀ ನೆಲೆಗಟ್ಟುಗಳಾಗಿ ಕಾದಂಬರಿಯಲ್ಲಿ ಪಾತ್ರಗಳಾಗಿಯೇ ಸೇರಿಕೊಂಡಂತಿರುವುದು ಕೂಡ ಗಮನಾರ್ಹ.


ಭೀಮು ಮುತ್ಯಾ ಮತ್ತು ಕಲ್ಲಪ್ಪ ಇಬ್ಬರೂ ಗೃಹಸ್ಥರು. ಬದುಕಿನ ಏರು ಪೇರುಗಳನ್ನು ಕಂಡು ಮಾಗಿದವರು. ಭೀಮು ಮುತ್ಯಾ ಜೈನ ತತ್ವಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಕಲ್ಲಪ್ಪನಿಗಿಂತ ಮುಂದೆ. ಅವನು ಮಾತು ಮಾತಿಗೆ ತತ್ವಗಳನ್ನು ಉಲ್ಲೇಖಿಸಬಲ್ಲ, ತನ್ನ ಕೇರಿಗೆ ನ್ಯಾಯ ಹೇಳಬಲ್ಲ, ಜನರ ಮನಸ್ಸಿನ ಗೊಂದಲ, ದ್ವಂದ್ವಗಳಿಗೆ ಧರ್ಮದ ನೆಲೆಗಟ್ಟಿನಲ್ಲಿ ಪರಿಹಾರ ಹೇಳಬಲ್ಲ ವ್ಯಕ್ತಿ. ಅದೇ ರೀತಿ ಹೊಸ ತಲೆಮಾರಿನ ಜಿನ್ನಪ್ಪ ಮತ್ತು ರಾವಸಾಬರ ಹುಚ್ಚು ಆವೇಶಗಳಿಗೆ ಕಡಿವಾಣ ಹಾಕಬಲ್ಲ ಹಿರಿಯತನದ, ಗೌರವದ ಸ್ಥಾನ ಆತನದು. ಆದರೆ ಊರಿನ ಜಿದ್ದಿಗೆ ಮೂಲ ಈತನೇ ಆಗಿರುವುದು ಮತ್ತು ಕೊನೆತನಕ ಈತ ಅಂಥ ಜಿದ್ದುಗಳನ್ನು ಪೂರ್ತಿಯಾಗಿ ಮೀರಲಾರದೇ ಹೋಗುವುದು ಕೇವಲ ಈ ಪಾತ್ರದ ವಿಪರ್ಯಾಸವಲ್ಲ, ಇದು ಊರಿನ ಚಾರಿತ್ರ್ಯಕ್ಕೇ ಸಂಬಂಧಿಸಿದ ವಿದ್ಯಮಾನ ಕೂಡ. ಹಾಗೆಯೇ ಎಷ್ಟೇ ಜೈನತತ್ವಗಳನ್ನು ಮೈಗೂಡಿಸಿಕೊಳ್ಳಲು ಹಾತೊರೆದರೂ ತನ್ನ ಮನಃಕಷಾಯಗಳನ್ನು ತಾನಿನ್ನೂ ಮೀರಿಲ್ಲ ಎನ್ನುವುದರ ಅರಿವು ಕೂಡ ಸ್ವತಃ ಭೀಮು ಮುತ್ಯಾನಿಗಿರುವುದು ಒಂದು ವಿಶೇಷ. ಮಾತು ನಿಲ್ಲಿಸುವ ವೃತಧಾರಿಯಾದ ಈತ ನಿರ್ಮಲಾ ಪ್ರಕರಣದ ಸಂದರ್ಭದಲ್ಲಿ ವೃತ ಮುರಿದು ಮಾತನಾಡುವುದು ಮತ್ತು ತತ್ವ ಸಿದ್ಧಾಂತಗಳ ಮಿತಿಯನ್ನು ಕಂಡುಕೊಂಡ ಮೇಲೂ ಯಮಸಲ್ಲೇಖನಕ್ಕೆ ನಿರ್ಧರಿಸುವುದು ಕೂಡ ಕುತೂಹಲಕರವಾಗಿದೆ. ಇಂಥ ಹಲವು ಕಾರಣಗಳಿಂದ ಇಲ್ಲಿ ಭೀಮು ಮುತ್ಯಾನ ಪಾತ್ರ ಇಹಕ್ಕೂ ಪರಕ್ಕೂ ನಡೆದುಕೊಳ್ಳುವ ಪಾತ್ರವಾಗಿಯೇ ಮೂಡಿಬಂದಿದೆ.

ಶಿವರುದ್ರ ಮಾಡಿದ್ದು, ನಿರ್ಮಲಾ ಮಾಡಿದ್ದು ತಪ್ಪೆಂದು ಕೂಡ ಆತ ಬಲ್ಲ. ಆದರೆ ಶಿವರುದ್ರನನ್ನು ಊರ ಹಿತಕ್ಕಾಗಿಯೇ ಎಷ್ಟು ಸಹಿಸಬೇಕೆಂಬುದನ್ನು, ಹೆಣ್ಣಿನ ಮನಸ್ಸಿನ ಒಳಸುಳಿಗಳನ್ನು ಕೂಡ ಅರಿತವನು. ಶಿವರುದ್ರನ ಮನಸ್ಸಿನ ಕಲ್ಮಶ, ಕ್ರೌರ್ಯ, ಹಿಂಸಾ ಮಾರ್ಗಗಳನ್ನು ಕುರಿತು ಅವನಲ್ಲಿ ಜುಗುಪ್ಸೆ ಇರುವಂತೆಯೇ ಅದರ ಬಗ್ಗೆ ರೊಚ್ಚು ಕೂಡ ಇದ್ದೇ ಇದೆ. ಆದರೆ ಜಿನ್ನಪ್ಪ ಮತ್ತು ರಾವಸಾಬರನ್ನು ಎಂದೂ ಪ್ರತೀಕಾರಕ್ಕೆ ಮುಂದೊಡ್ಡುವುದಿಲ್ಲ ಎನ್ನುವುದನ್ನು ಗಮನಿಸಿದರೆ ಅವನ ನಿಲುವು ಹೆಚ್ಚು ಸಂಕೀರ್ಣವಾಗಿ ಕಾಣುತ್ತದೆ. ಜೈನ ತತ್ವ ಮಾತ್ರ ಅವನ ಅಹಿಂಸಾಪರತೆಗೆ ಇರುವ ಕಾರಣವಿರಲಾರದು. ಮುಂದಿನ ತಲೆಮಾರು ಇಂಥ ಪ್ರತಿರೋಧ, ಜಿದ್ದಿನ ಸಾಧನೆಗಿಳಿದರೆ ಊರಿನ ಶಾಂತಿ, ನೆಮ್ಮದಿ ಶಾಶ್ವತವಾಗಿ ಕೆಡುತ್ತದೆ ಎಂಬ ಎಚ್ಚರ ಅವನಲ್ಲಿರುವಂತಿದೆ. ಹಾಗೆಯೇ ಅವನು ಮಾನವ ದೇಹದ ತುರ್ತುಗಳನ್ನು ಧರ್ಮ ವಿಧಿಸುವ ಕಟ್ಟುಕಟ್ಟಳೆಯನ್ನು ಮೀರಿ ತಿಳಿದುಕೊಳ್ಳಬಲ್ಲ. ಬುದ್ದವ್ವನೊಡನೆ ಮದುವೆ ದಿನ ಚಬಕಸೂರ ತೆಗೆಯುವ ವಿಚಾರದಲ್ಲಿ ನಡೆಯುವ ಚರ್ಚೆಯನ್ನು ಇಲ್ಲಿ ಗಮನಿಸಬಹುದು. ಅವನಿಗೆ ಒಂದು ಮಧ್ಯಸ್ಥ ಭಾವ ರೂಢಿಸಿತ್ತು ಎನ್ನುತ್ತದೆ ಕಾದಂಬರಿ. ನಿರ್ಮಲಾ ಮತ್ತು ಸಿದ್ದು ಮಾಸ್ತರರನ್ನು ಹುಡುಕಿ ತೆಗೆಯುವ ರಾವಸಾಬ ಮತ್ತು ಜಿನ್ನಪ್ಪನ ಸಲಹೆಗೆ ಅವನು ಬೇಡ ಎನ್ನುವ ಮಾತಿನಲ್ಲೂ ಅವನು ಬದುಕಿನ ಇಹದ ಬೇಕು ಬೇಡಗಳನ್ನು ಕೂಡ ಗೌರವದಿಂದಲೇ ಕಾಣುತ್ತಾನೆನ್ನುವುದಕ್ಕೆ ಕುರುಹು ಸಿಗುತ್ತದೆ.


ಈ ಭೀಮು ಮುತ್ಯಾನ ಪಾತ್ರದ ಎದುರು ಕಲ್ಲಪ್ಪನ ಪಾತ್ರವನ್ನಿಡುತ್ತದೆ ಕಾದಂಬರಿ. ಕಲ್ಲಪ್ಪ ಬೇರೆಯೇ ತರದ ಬದುಕನ್ನು ಬದುಕಿದವ. ಬೀಡಿ, ಹೋಟೆಲಿನ ತಿಂಡಿ, ಜೈನ ಆಚರಣೆಗೆ ವಿಶೇಷತಃ ಅಂಥ ನಿಷ್ಠೆಯೇನಿಲ್ಲದ ರೀತಿ ನೀತಿ ಮತ್ತು ಸಂಘರ್ಷಗಳಿಲ್ಲದೆ ಹೆಂಡತಿ ಬುದ್ದವ್ವನ ಜೊತೆಗಿನ ತಣ್ಣಗಿನ ಜೀವನ ಅವನ ಬದುಕು. ಆದರೆ ಸಂದರ್ಭ ಬಂದರೆ ಅವಳಿಗೆ ನಾಲ್ಕು ತದುಕುವುದಕ್ಕೆ ಹಿಂದೇಟು ಹಾಕುವವನೇನಲ್ಲ. ಅವನ ನಿರ್ಧಾರಗಳ ಮಟ್ಟಿಗೆ ಅವನಲ್ಲಿ ದ್ವಂದ್ವಗಳು ಗೊಂದಲಗಳು ಇದ್ದಂತಿಲ್ಲ. ಆಸ್ತಿಯನ್ನು ಜಿನ್ನಪ್ಪನಿಗೆ ಬರೆಯಲು ತನ್ನ ಹೆಂಡತಿ ತೀವೃವಾಗಿ ಬಯಸುತ್ತಿದ್ದಾಳೆಂಬುದರ ಅರಿವಾದಾಗ ಅರ್ಧ ರಾವಸಾಬನಿಗೂ ಕೊಟ್ಟರಾಗದೆ ಅನಿಸಿದರೂ ಅವಳ ನಿರ್ಧಾರವನ್ನೆ ಆಗಗೊಡುತ್ತಾನೆ. ಇಂಥ ಕಲ್ಲಪ್ಪನಿಗೆ ತನ್ನ ಅಣ್ಣ ಸಾತಪ್ಪನ ಕೃತ್ರಿಮದ ನಡೆನುಡಿ ಕಂಡೂ ಕಾಣಿಸುವುದಿಲ್ಲ. ಚಂಪಕವ್ವನ ನೀಚತನ ಅರಿಯಬಲ್ಲನಾದರೂ ಅದನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಅವನಲ್ಲಿ ಇಲ್ಲ. ಸಾತಪ್ಪನ ಇನ್ನೊಂದು ಮುಖವನ್ನು ಶಿವರುದ್ರನ ಮೂಲಕ ತಿಳಿದರೂ ಕಲ್ಲಪ್ಪ ಇದು ಎಂದಿಗೂ ಜಿನ್ನು ಮತ್ತು ರಾವಸಾಬರಿಗೆ ಗೊತ್ತಾಗಬಾರದೆಂದು ಅವನಿಂದ ಮಾತು ತೆಗೆದುಕೊಳ್ಳುತ್ತಾನೆ! ಕಲ್ಲಪ್ಪನ ನಡೆಯಲ್ಲೂ ಊರಿನ ನೆಮ್ಮದಿ, ಶಾಂತಿ ಮುಂದಿನ ತಲೆಮಾರಿನಲ್ಲಿ ಕದಡಬಾರದೆಂಬ ಕಾಳಜಿಯೇ ಇರುವುದು ಕಾಣುತ್ತದೆ.

ಈ ತರದ ಬದುಕು ಸವೆಸಿದ ಕಲ್ಲಪ್ಪನಿಗೆ ಕ್ರಮೇಣ ಭೀಮು ಮುತ್ಯಾ ಮತ್ತು ಹೆಂಡತಿಯಿಂದಾಗಿಯೇ ಜೈನ ತತ್ವದಲ್ಲಿ, ಆಚರಣೆಯಲ್ಲಿ ಆಸಕ್ತಿ ಬೆಳೆಯುತ್ತದೆ. ಆದರೆ ಅದೇನೂ ಒಂದು ದೊಡ್ಡ ಪರಿವರ್ತನೆಯ ರೂಪದಲ್ಲೇನೂ ಅಲ್ಲ ಎಂಬುದು ಕೂಡ ಮುಖ್ಯ. ಎಲ್ಲೋ ಬದುಕಿನ ನಿರರ್ಥಕತೆ, ಅರ್ಥಹೀನತೆಯನ್ನು ಕಂಡವನಂತೆ ಮನಸ್ಸಿನ ಒಂದು ಸಮಾಧಾನಕ್ಕಾಗಿ ಯಾವುದಕ್ಕಾದರೂ ಜೋತುಬೀಳುವ ಮನಸ್ಥಿತಿಯಲ್ಲಿದ್ದ ಅವನಿಗೆ ತಕ್ಷಣಕ್ಕೆ ಸಿಕ್ಕಿದ್ದು ಜೈನ ತತ್ವ, ಪ್ರವಚನ, ಆಚರಣೆಗಳು, ಅಷ್ಟೇ. ಇದನ್ನು ಬಿಟ್ಟರೆ ಅವನಲ್ಲಿ ಯಾವ ಪಾರಮಾರ್ಥಿಕ ಆಸೆಗಳೂ ಇಲ್ಲ ಎಂಬುದನ್ನು ಗಮನಿಸಬೇಕು. ಬುದ್ದವ್ವ ಸತ್ತ ನಂತರ ತನ್ನ ಅಸ್ತಿತ್ವಕ್ಕೇ ಅರ್ಥವಿಲ್ಲದಂಥಾಗುವ ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಜೈನ ದೀಕ್ಷೆ ಪಡೆಯುವುದಕ್ಕೆ ಮುಂದಾಗುವ ಕಲ್ಲಪ್ಪ ಆ ಮೂಲಕ ತನ್ನೊಳಗಿನ ಖಾಲೀತನವನ್ನು ಮೀರಲು ಯತ್ನಿಸುತ್ತಾನೆ. ಅಷ್ಟೇ ಸಹಜವಾಗಿ ಈ ಸಂನ್ಯಾಸವೂ ಸಂಸಾರದಂಥದೇ ಇನ್ನೊಂದು ಬಂಧನ ಎಂದು ತಿಳಿಯುತ್ತಲೇ ಹೆಚ್ಚಿನ ದ್ವಂದ್ವ, ತುಮುಲಗಳಿಲ್ಲದೆ ಅದರಿಂದ ಬಿಡುಗಡೆಯನ್ನೂ ಪಡೆಯುತ್ತಾನೆ.

ಇಲ್ಲಿ, ತಾನು ಸಂನ್ಯಾಸಿಯಾಗಿ ಗಳಿಸಿದ್ದು ಸ್ವಾತಂತ್ರ್ಯವನ್ನಲ್ಲ ಬದಲಿಗೆ ಹಲವನ್ನು ಮಾಡಲಾಗದ ಮಿತಿಗಳನ್ನು, ಹೊಸದಾದ ಬಂಧನವನ್ನು ಎನ್ನುವುದು ಕಲ್ಲಪ್ಪನಿಗೆ ಅರ್ಥವಾಗುತ್ತದೆ. ನಿರ್ಮಲಾ ಇಲ್ಲಿ ಕೇವಲ ನಿಮಿತ್ತ ಮಾತ್ರ. ಯಾಕೆಂದರೆ, ಬೆತ್ತಲೆಯಾಗಿಯೇ ಜೈನ ಸಂನ್ಯಾಸತ್ವದಿಂದ ಹೊರಬಂದ ಬಳಿಕವೂ ಕಲ್ಲಪ್ಪ ನಿರ್ಮಲಾ ಬದುಕನ್ನು ನೇರ್ಪುಗೊಳಿಸುವುದಕ್ಕೇನೂ ಹೊರಡುವುದಿಲ್ಲ. ಅಷ್ಟು ಮಾತ್ರವಲ್ಲ, ಇಲ್ಲಿ ಇನ್ನೂ ಒಂದು ಕುತೂಹಲದ ವಿದ್ಯಮಾನವಿದೆ. ಕಲ್ಲಪ್ಪ ತನ್ನ ನಗ್ನತೆಯನ್ನು ಮುಚ್ಚಿಕೊಳ್ಳುವುದಕ್ಕೂ ಪ್ರಯತ್ನಿಸುವುದಿಲ್ಲ ಎಂಬುದನ್ನು ಗಮನಿಸಿ. ನೋಡಲಿಕ್ಕಾಗದ ಜನ ಅವನ ಮೇಲೆ ಧೋತರ, ಹರಿದ ಅಂಗಿ ಎಸೆಯುತ್ತಾರೆಯೇ ವಿನಃ ಅವನು ತನ್ನ ನಗ್ನತೆಯ ಬಗ್ಗೆ ವಿಶೇಷವಾಗಿ ಜಾಗೃತನಂತೆ ವರ್ತಿಸುವುದಿಲ್ಲ. ಬದಲಾಗಿ ಅವನು ಬಳಸುವ ಅಸ್ತ್ರ ಕೇವಲ ಹುಚ್ಚಿನ ನಾಟಕ! ಜನಕ್ಕೆ ನಗ್ನತೆ ಎಂದರೆ ಭಯ, ಅಷ್ಟೇ ಎಂಬುದು ಕಲ್ಲಪ್ಪನಿಗೆ ತಿಳಿದಿದ್ದೆ ಅವನ ರೀತಿಯೇ ಬದಲಾಗುವ ಪ್ರಕ್ರಿಯೆಯನ್ನು ಗಮನಿಸಬೇಕು. ಈ ಅರಿವು ಕೂಡ ಹಲವು ಬಗೆಯ ವಿಚಾರಲಹರಿಯನ್ನು ಎಬ್ಬಿಸುವಂತಿದೆ. ಜೈನ ಮುನಿಯ ನಗ್ನತೆಯನ್ನು ಸಮಾಜ ಗೌರವದಿಂದ ಕಾಣುತ್ತದೆ. ಹುಚ್ಚನ ನಗ್ನತೆಯನ್ನು ಸಹಿಸುತ್ತದೆ ಮತ್ತು ಅವನಿಗೆ ಬಟ್ಟೆ ಹೊದಿಸಿ ತಾನೇ ಅದರ ಹೊಣೆ ಹೊತ್ತುಕೊಳ್ಳುತ್ತದೆ. ಆದರೆ ಸಾಮಾನ್ಯ ಮನುಷ್ಯನೊಬ್ಬ ಇದ್ದಕ್ಕಿದ್ದಂತೆ ನಗ್ನನಾಗಿ ಬೀದಿಗೆ ಬಂದರೆ ಅವರು ಕಂಗಾಲಾಗುತ್ತಾರೆ.

ಭೀಮು ಮುತ್ಯಾ ಮತ್ತು ಕಲ್ಲಪ್ಪ ಇಬ್ಬರೂ ವಿಭಿನ್ನ ಹಾದಿಯಲ್ಲಿ ಸಾಗಿ ಜೈನ ಅಥವಾ ಯಾವುದೇ ಧರ್ಮದ ಅಂತರಾಳವನ್ನು ಅರಗಿಸಿಕೊಂಡರೂ ಕೊನೆಗೆ ಬದುಕು ಮತ್ತು ಅದು ಕಲಿಸುವ ಪಾಠಗಳು ಧರ್ಮಕ್ಕಿಂತ ದೊಡ್ಡವು ಎಂಬುದನ್ನು ಅರಿಯುವುದೇ ಇಲ್ಲಿರುವ ದರ್ಶನ. ಭೀಮು ಮುತ್ಯಾನ ಯಮಸಲ್ಲೇಖನದ ನಿರ್ಧಾರದ ಹಿಂದೆ ಪದಮವ್ವಳ ಅದೆ ತಾನೆ ಹುಟ್ಟಿದ ನಿಷ್ಪಾಪಿ ಕೂಸಿಗಾದ ದುರ್ಗತಿಯ ಕುರಿತ ಜಿಜ್ಞಾಸೆಯಿದೆ. ಕೆಂಜಗಗಳು ಮುತ್ತಿಕೊಂಡು ಎಲ್ಲೆಂದರಲ್ಲಿ ಕಚ್ಚಿ ಹಸುಗೂಸಿನ ಕಣ್ಣುಗಳನ್ನೇ ತಿಂದುಹಾಕಿದ ಘೋರ ವಿದ್ಯಮಾನ ಅವನನ್ನು ಕಂಗೆಡಿಸಿದೆ. ಈ ಕುರುಡು ಕೂಸಿನ ಎದುರು ಹಿಂಸೆ ಮತ್ತು ಅಹಿಂಸೆಯ ಯಾವ ತತ್ವ, ಸಿದ್ಧಾಂತ, ಶಾಸ್ತ್ರಗಳು ಹೇಳುವ ಅರ್ಥಕ್ಕೂ ನೆಲೆಯಿಲ್ಲ ಎಂಬುದನ್ನು ಅರಿತ ಮೇಲೂ ಭೀಮು ಮುತ್ಯಾ ಯಮಸಲ್ಲೇಖನಕ್ಕೆ ಮನಸ್ಸು ಮಾಡಿದನೆಂದರೆ ಅದರಲ್ಲಿ ಧರ್ಮ ಶ್ರದ್ಧೆಗಿಂತ ಮಿಗಿಲಾದದ್ದು ಇದೆ ಮತ್ತು ಅದು ಲೌಕಿಕಕ್ಕೆ ಸೇರಿದ್ದೇ ಆಗಿದೆ. ಮನುಷ್ಯ ಸಾವಿಗೆ ತಯಾರಾಗಿ ಇರಬಲ್ಲ ಸ್ಥಿತಿಯಲ್ಲಿ ಮಾತ್ರ ನಿಜವಾಗಿ ಸ್ವತಂತ್ರನಾಗಬಲ್ಲ ಎಂಬ ಗಾಂಧಿಯ ಮಾತುಗಳು ಇಲ್ಲಿ ಎಷ್ಟು ಅರ್ಥಪೂರ್ಣ ಎನಿಸುತ್ತದೆ.

ಗಾಂಧಿಯ ಕುರಿತು ಇವರಲ್ಲಿ ಇರುವ ಕುರುಡ ಆನೆಯನ್ನು ಬಣ್ಣಿಸಿದ ಬಗೆಯ ಕಲ್ಪನೆಗಳೇನಿವೆಯೋ ಅಂಥವೇ ಕಲ್ಪನೆಗಳು ಧರ್ಮದ ಕುರಿತಾಗಿಯೂ ಇರುವುದನ್ನು ಗಮನಿಸಬೇಕು. ಎಷ್ಟೋ ಬಾರಿ ಇವರಿಗೆ ಭೀಮು ಮುತ್ಯಾ ತತ್ವಗಳನ್ನು ಹೀಗೇ ಎಂದು ವಿವರಿಸುವ, ಪುರಾಣಕತೆಯ ಒಳ ಅರ್ಥ ಇದೇ ಎಂದು ತಿಳಿಹೇಳುವ ಪ್ರಸಂಗಗಳು ಬರುತ್ತವೆ. ಈ ಮಂದಿಗೆ ಬದುಕು ಮುಖ್ಯವಾದದ್ದು, ಧರ್ಮ, ಗಾಂಧಿ ಎಲ್ಲ ಆನಂತರದ್ದು. ಹಾಗಾಗಿ, ಇಲ್ಲಿ ಬದುಕಿನ ಸಂಘರ್ಷಗಳ ಎದುರು ಜಿನ್ನಸೂರನ ಅಹಿಂಸೆಯೂ, ನಿರ್ಮಮ-ನಿರ್ವಿಕಾರ ಶಾಂತಿಯೂ, ಗಾಂಧಿಯ ಅಸ್ಪೃಶ್ಯತಾ ನಿವಾರಣೆಯಂಥ, ಅಹಿಂಸೆಯಂಥ ತತ್ವಗಳೂ ಸತತ ಸೆಣಸಬೇಕಾಗುತ್ತದೆ. ಎಷ್ಟೋ ಸಲ ಅವು ಸೋತಂತೆಯೂ ನಮಗೆ ಭಾಸವಾಗುತ್ತದೆ. ನೀತಿ ನಿಯಮಗಳ ಧರ್ಮದ ಎದುರು ಸಾಮಾನ್ಯ ಮಂದಿ ಬದುಕಿನ ದೇಹಧರ್ಮ ಮತ್ತು ಮನೋಧರ್ಮವನ್ನು ಎತ್ತಿ ಹಿಡಿದಂತೆಯೂ ಕಾಣುತ್ತದೆ. ಆದರೆ ಕಾದಂಬರಿಯ ನಿಜವಾದ ಲಂಘನ ಇರುವುದೇ ಈ ತತ್ವಗಳು ಬದುಕನ್ನು ಒಳಗೊಂಡೇ ಇವೆ ಎಂದು ಸಾಧಿಸುವುದರಲ್ಲಿ ಮತ್ತು ಹಾಗೆ ಮಾಡಿ ಗೆಲ್ಲುವುದರಲ್ಲಿ. ಮಕ್ಕಳು ಗಾಂಧಿಯ ಫೋಟೋ ಕಂಡು ಸ್ವ ಇಚ್ಛೆಯಿಂದ ಶಾಲೆಗೆ ಬರತೊಡಗಿದಂತೆಯೇ ಭೀಮು ಮುತ್ಯಾನ ಸಲ್ಲೇಖನದ ಆಯ್ಕೆಯಲ್ಲಿ ಕೂಡಾ ಒಂದು ಬಗೆಯ ಭ್ರಮೆಯೇ ಇದೆ, ಅನುಮಾನವಿಲ್ಲ. ಆದರೆ ಇದೇ ಭ್ರಮೆ ಕೊನೆಯ ಬಂದೂಕಿನ ಮೆರವಣಿಗೆಯಲ್ಲಿ ವಾಸ್ತವ ಗ್ರಹಿಕೆಯಾಗುವ ಪವಾಡದ ನಿರೂಪಣೆ ಏನಿದೆ, ಅದು ಈ ಕಾದಂಬರಿಯ ಮಹತ್ವದ ಘಟ್ಟ.

`ಗಾಂಧಿಜಿ ಸತ್ತರಂತ. ಯಾರೋ ಬಂದೂಕಲೆ ಗುಂಡ ಹೊಡದಾರಂತ' ಅಂದ.

`ನಿನಗ್ಯಾಂಗ ಗೊತ್ತಾತ?' ಅಂದ ಜಿನ್ನಪ್ಪ.
`ರೇಡಿವೆದಾಗ ಹೇಳಿದ್ರ ಈಗ' ಅಂದ ಗೌಡ.
ಊದುವ ಬಾರಿಸುವ ಸಪ್ಪಳುಗಳು ನಿಂತು ಬಿಟ್ಟವು. ಗಾಂಧಿ ಎಂಬ ಮನುಷ್ಯನನ್ನು ಕೊಲ್ಲಬಲ್ಲ ಆ ಬಂದೂಕನ್ನು ಮಂದಿ ಭಯ ಮತ್ತು ಮರುಕದಿಂದ ವಿಚಿತ್ರವಾಗಿ ನೋಡತೊಡಗಿದರು. ಯಮನ್ಯಾ ಸರಕ್ಕನೆ ಬಂದೂಕಿಗೆ ಹಾಕಿದ್ದ ಹೂವಿನ ದಂಡಿಯನ್ನು ತಗಿದು ಚೆಲ್ಲಿದ. ಅದು ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿದ್ದ ಮಂದಿಯ ಕಾಲ ತುಳಿತಕ್ಕೆ ಸಿಕ್ಕು ಕ್ಷಣಾರ್ಧದಲ್ಲೆ ಹಾದಿಯ ಕಸವಾಯಿತು. ದುಂಡ್ಯಾ ಬಂದೂಕನ್ನು ಕೆಳಗೆ ಬಗ್ಗಿಸಿ ಅವಸರ ಅವಸರವಾಗಿ ದಡ್ಡಿಯಲ್ಲಿ ಹಾಯ್ದು ಜಿನ್ನಪ್ಪನ ಮನೆಯ ಪಡಸಾಲೆಯ ಗೂಟಿಗೆ ಹಾಕಿದ. ಬಂದೂಕ ತರುವ ಹುರುಪು ಉನ್ಮಾದಗಳು ಗಾಂಧಿಯೊಬ್ಬನ ಸಾವಿನಿಂದ ಅಪರಾಧದ ಛಾಯೆ ಪಡೆದಂತಾಗಿ ಜಿನ್ನಪ್ಪ ನಾಚಿಕೊಂಡ. ಗೂಟಿಗೆ ತೂಗು ಬಿಟ್ಟ ಬಂದೂಕಿನ ಕೆಳಗೆ ಗ್ವಾಡಿಗೆ ಆಧಾರ ಆಗಿ ಜಿನ್ನಪ್ಪ ಉಸ್ ಎಂದು ಕುಂತ. ಅಡಗಿ ಮನೆಯಿಂದ ಪಡಸಾಲೆಗೆ ಅವನ ಕುರುಡು ಕೂಸು ಅಂಬೆಗಾಲಿಕ್ಕಿ ಬಂತು. ಜಿನ್ನಪ್ಪ ಅದನ್ನು ಎತ್ತಿ ತೊಡೆಯ ಮೇಲೆ ಇಟ್ಟುಕೊಂಡ. `ನೀ ಯಾವಾಗ ಬಂದಿ?' ಎಂದು ಅಡಗಿ ಮನೆಯ ಕಡೆ ಮುಖ ಮಾಡಿ ಹೆಂಡತಿಯನ್ನು ಕೇಳಿದ. ಅವಳು ನಿಧಾನ ಒಳಗಿನಿಂದ ಬಂದು ಅವನ ಮುಂದೆ ಕುಂತು ಮಾತಿಲ್ಲದೆ ಅವನನ್ನು ನೋಡತೊಡಗಿದಳು." (ಪುಟ ೧೭೩)

ನಾಲ್ಕು ಎಕರೆ ಹೊಲ ಮಾರಿ, ಹತ್ತಾರು ಸಾವಿರ ತೆತ್ತು ಬಂದೂಕ ಕೊಂಡು ಬರುವಾಗಲೇ ಶಿವರುದ್ರ, ಮಾನಿಂಗ ಮತ್ತು ಕಾಟಕರ ತಮ್ಮಣ್ಣ ಕೈಗೆ ಕೋಳ ಹಾಕಿಸಿಕೊಂಡು ಜೋರಾಗಿ ನಗುತ್ತ ಪೋಲೀಸರೊಂದಿಗೆ ಹೋಗುತ್ತಿರುವುದನ್ನು ಇವರು ಕಂಡಿರುತ್ತಾರೆ. ಒಂದು ಅರ್ಥದಲ್ಲಿ ಬಂದೂಕು ಈ ದೃಶ್ಯದ ಎದುರಿಗೇ ಒಂದು ತರದ ಹಾಸ್ಯದ ವಸ್ತುವಾಗಿರುತ್ತದೆ. ಗಾಂಧಿಯ ಸಾವಿನ ಸುದ್ದಿಯ ಎದುರು ಅದು ಒಂದು ಅಪಮಾನದ ವಸ್ತುವಾಗಿ ಬಿಡುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಆದರೆ ಅಲ್ಲಿಗೇ ಊರಿನಲ್ಲಿ ಆಗಾಗ ಹೆಡೆಯಾಡಿಸುತ್ತಲೇ ಇರುವ ದ್ವೇಷವೆಂಬ ಹಾವಿನ ನಂಜು ಕರಗುವುದೆಂಬ ಆಶಯವನ್ನೇನೂ ಕಾದಂಬರಿ ಇಟ್ಟುಕೊಂಡಿಲ್ಲ. ಅದು ಹುತ್ತದಲ್ಲಿ ಅಡಗಿಕೊಂಡು, ಬಡಿದದ್ದೇ ಊರು ಸೇರುವ ಉತ್ಸಾಹವನ್ನಿಟ್ಟುಕೊಂಡೇ ಇರುವಂತಿದೆ. ಮತ್ತು ತಮ್ಮ ಸ್ವಾರ್ಥಕ್ಕಾಗಿ ಈ ಹುತ್ತ ಬಡಿದು ದ್ವೇಷದ ಹೆಡೆ ಕೆರಳಿಸುವ ಮಂದಿ ಕೂಡ ಊರಲ್ಲಿ ಇದ್ದೇ ಇದ್ದಾರೆಂಬ ಅರಿವು ಸಹ ಇಲ್ಲಿದೆ. ವೈನಿ ಅಂದರೆ ತನ್ನ ಅವ್ವನಿಗಿಂತ ಹೆಚ್ಚೆಂದು ಭಾವಿಸಿದ್ದ ರಾವಸಾಬನಿಗೂ ತನ್ನ ಪತ್ನಿಗೂ ಸಂಬಂಧ ಇದ್ದಿರಬಹುದೆ ಎಂದು ರಾವಸಾಬ ಸತ್ತ ನಂತರವೂ ಸಂಶಯಿಸುವ ಜಿನ್ನಪ್ಪನ ಮನಸ್ಸಿನ ಸಂಶಯದ ಹೆಡೆಯಲ್ಲೇ ದ್ವೇಷದ ನಂಜು, ವಿಷ ಎಲ್ಲವೂ ಇದೆ. ಹುತ್ತದಿಂದ ಹೊರಬಂದ ಹತ್ತು ಮಾರು ಉದ್ದದ ಕರ್ರಗಿನ ನಾಗರಹಾವೊಂದು ಪದಮವ್ವಳ ಮನೆಯನ್ನೇ ಸೇರುವುದು ಮತ್ತು ಅದರ ಎದುರು ನಿರಾಳ ನಿಶ್ಚಿಂತೆಯಿಂದ ಕೂತ ಪದುಮವ್ವ, ಕೈಕಾಲು ಬಡಿದು ಆಡುತ್ತಿರುವ ಅವಳ ಕುರುಡು ಕೂಸು ಕೊಡುವ ಒಂದು ಸಂಕೀರ್ಣ ಚಿತ್ರವೇ ಇನ್ನೊಂದು ಕಾದಂಬರಿಯಾಗುವಷ್ಟು ಸುಪುಷ್ಟವಾಗಿರುವುದನ್ನು ಕಾಣಬಹುದಾಗಿದೆ! ಇಲ್ಲಿ ಮತ್ತೆ ಗಾಂಧಿ, ಜಿನ್ನಸೂರ ಎಲ್ಲ ಸಾಪೇಕ್ಷ ಸಾಧ್ಯತೆಗಳಾಗಿ ಸೆಣೆಸಬೇಕಿದೆ.

ಕಾದಂಬರಿ ಮೆಚ್ಚುಗೆಯಾಗುವುದು ಅದರ ತಣ್ಣಗಿನ ನಡೆಗಾಗಿ, ಮೆತ್ತಗಿನ ದನಿಗಾಗಿ. ಎಲ್ಲೂ ಯಾವುದೇ ಅಜೆಂಡಾಗಳನ್ನಿರಿಸಿಕೊಂಡಿರುವ ಕಾದಂಬರಿ ಇದೆಂದು ತಪ್ಪಿಕೂಡ ಅನಿಸುವುದಿಲ್ಲ. ಇಲ್ಲಿರುವುದೆಲ್ಲ ಬದುಕಿನ ಯಥಾವತ್ ಚಿತ್ರಣವೇ ಅನಿಸುವಷ್ಟು ಇಲ್ಲಿನ ಕಥಾನಕ ಸಹಜವಾಗಿದೆ. ಇಲ್ಲಿನ ಪಾತ್ರಗಳು ಬದುಕು ಪಡೆದುಕೊಳ್ಳುವ ತಿರುವುಗಳಿಗಷ್ಟೇ ಪ್ರತಿಸ್ಪಂದಿಸುತ್ತ ತಮ್ಮ ನಡೆಯನ್ನು ತಾತ್ಪೂರ್ತಿಕವಾಗಿ ಒರೆಗೆ ಹಚ್ಚುತ್ತಾರೆಯೇ ವಿನಃ ಯಾವುದೇ ತಾತ್ವಿಕ ಉದ್ದೇಶಗಳು ಅವುಗಳನ್ನು ನಿಯಂತ್ರಿಸುತ್ತಿಲ್ಲ. ಅದೇ ಸಮಯಕ್ಕೆ ಇಲ್ಲಿ ಯಾವುದೇ ಒಂದು ಪಾತ್ರ ಇನ್ನೊಂದಕ್ಕಿಂತ ಹೆಚ್ಚಿನ ಪೋಷಣೆಯನ್ನು ಪಡೆದಂತೆಯಾಗಲೀ, ಹೆಚ್ಚಿನ ಅಭಿವ್ಯಕ್ತಿಯನ್ನು ಪಡೆದುಕೊಂಡಿರುವಂತೆಯಾಗಲೀ ನಿರೂಪಣೆ ಸಾಗಿಲ್ಲ. ಕಲಾತ್ಮಕವಾಗಿಯೂ ತಾಂತ್ರಿಕವಾಗಿಯೂ ಒಂದು ಅನನ್ಯ ಹದ, ಸಂಯಮ ಮತ್ತು ಶಿಸ್ತು ಈ ಕಾದಂಬರಿಗೆ ಸಹಜವಾಗಿ ಎಂಬಂತೆ ದಕ್ಕಿರುವುದು ಕಾದಂಬರಿಯ ಯಶಸ್ಸಾಗಿದೆ. ಇದರ ಹಿಂದೆ ಬಾಳಾಸಾಹೇಬ ಲೋಕಾಪುರ ಅವರ ಪರಿಶ್ರಮ ಮತ್ತು ಅತ್ಯುತ್ತಮವಾದುದನ್ನು ಕೊಡಬೇಕೆಂಬ ಹೊಣೆಗಾರಿಕೆ ಇರುವುದು ಎದ್ದು ಕಾಣುತ್ತದೆ.

ಲೋಹಿಯಾ ಪ್ರಕಾಶನ, ಬಳ್ಳಾರಿ, ಬೆಲೆ:75.00, ಪುಟಗಳು: 182+xviii

No comments: