Friday, May 23, 2008

ವಿವೇಕ ಶಾನಭಾಗರ `ಒಂದು ಬದಿ ಕಡಲು'


"ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "


ದಿನಕರ ದೇಸಾಯಿಯವರ ಈ ಚುಟುಕದಿಂದಲೇ ವಿವೇಕ ತಮ್ಮ ಕಾದಂಬರಿಗೆ ಒಂದು ಬದಿ ಕಡಲು ಎನ್ನುವ ಹೆಸರನ್ನು ಆಯ್ದಿದ್ದಾರೆ. ಒಂದು ಊರು ನಮಗೆ ನಮ್ಮ ಬಾಲ್ಯದಲ್ಲಿ ಕಂಡಂತೆಯೇ ನಮ್ಮ ತಾರುಣ್ಯದಲ್ಲಿ, ಯೌವನದಲ್ಲಿ, ನಡುವಯಸ್ಸಿನಲ್ಲಿ ಮತ್ತು ಮುದಿತನದಲ್ಲಿ ಕಾಣುವುದಿಲ್ಲ. ಊರು ಕಾಲಮಾನಕ್ಕೆ ತಕ್ಕಂತೆ ಬದಲಾಗುವುದು ಸಹಜ ವಿದ್ಯಮಾನವೇ. ಆದರೆ ಅದು ಬದಲಾಗುವ ಪ್ರಕ್ರಿಯೆ ತುಂಬ ಕುತೂಹಲಕರ. ಪೇಟೆ ಆಧುನಿಕ ಸ್ವರೂಪ ಪಡೆದುಕೊಳ್ಳುವುದು, ಕಟ್ಟಡಗಳೇಳುವುದು ಇತ್ಯಾದಿ ಕಣ್ಣಿಗೆ ಹೊಡೆದು ಕಾಣಿಸುತ್ತದೆ, ಅದರಲ್ಲೇನೂ ವಿಶೇಷವಿಲ್ಲ. ಆದರೆ ಊರು ಬದಲಾಗುವುದೆಂದರೆ ಊರಿನ ಮಂದಿ ಕೂಡ ತಲೆಮಾರಿನಿಂದ ತಲೆಮಾರಿಗೆ, ಒಂದೇ ತಲೆಮಾರು ತನ್ನ ವಯಸ್ಸಿನ ವಿಭಿನ್ನ ಘಟ್ಟಗಳಲ್ಲಿ, ತನ್ನ ಬದುಕಿನ ವಿವಿಧ ಸ್ತರಗಳಲ್ಲಿ ಬದಲಾಗುವುದು. ಆದರೆ ಇದೆಲ್ಲ ಅಷ್ಟು ಢಾಳಾಗಿ ಒಡೆದು ಕಾಣುವುದಿಲ್ಲ. ಅದನ್ನು ಕಾಣಲು ಸೂಕ್ಷ್ಮ ದೃಷ್ಟಿಯ ಅವಲೋಕನ, ವೈಚಾರಿಕತೆ ಮತ್ತು ಕಾರ್ಯ ಕಾರಣ ವಿವೇಚನೆಗೆ ಅಗತ್ಯವಾದ ಮನಶ್ಶುದ್ಧಿ ಬೇಕು. ಇಲ್ಲವಾದರೆ ಎಲ್ಲವನ್ನೂ ಕಾಲದ ಮಹಿಮೆ ಎನ್ನುವ ಅರುಳು ಮರುಳಿನ ಸಿನಿಕತನದ ಅನಿಸಿಕೆಗಳು ನುಸುಳುತ್ತವೆ. ಬದುಕಿನ ಪುಟ್ಟ ಪುಟ್ಟ ಘಟನೆಗಳಲ್ಲಿ, ತನ್ನ ಅನುಭವಕ್ಕೆ ಬರುವ ಚಿತ್ರ ವಿಚಿತ್ರ ವಿದ್ಯಮಾನಗಳಿಗೆ ಒಬ್ಬ ವ್ಯಕ್ತಿ ಸ್ಪಂದಿಸುವ, ಪ್ರತಿಕ್ರಿಯಿಸುವ, ಆನಂತರ ಅದನ್ನು ತಾನೇ ಕಂಡು ವಿವೇಚಿಸುವ ಸೂಕ್ಷ್ಮಗಳನ್ನು ಗ್ರಹಿಸಿ ಅದರಲ್ಲಿ ವ್ಯಕ್ತಿ ಮತ್ತು ಬದುಕು ಒಟ್ಟಾರೆಯಾಗಿ ಕಾಲದ ಒತ್ತಡಗಳೊಂದಿಗೆ ನಡೆಸುವ ಸಂಘರ್ಷವನ್ನು ಎಚ್ಚರದಿಂದ ಗುರುತಿಸಿ, ಗ್ರಹಿಸಿ ಅದನ್ನು ದಾಖಲಿಸುವ ಕೆಲಸ ಸುಲಭದ್ದಲ್ಲ. ಇದೊಂದು ತಲೆಮಾರಿನ ಸವಾಲು. ಇದನ್ನು ಕೈಗೆತ್ತಿಕೊಂಡಿದ್ದಾರೆ ವಿವೇಕ್, ತಮ್ಮ ಕಾದಂಬರಿ `ಒಂದು ಬದಿ ಕಡಲು' ಕೃತಿಯಲ್ಲಿ. ಈ ಸೂಕ್ಷ್ಮ ಅನ್ವೇಷಣೆಯ ಗ್ರಹಿಕೆಗಳನ್ನು ಅಕ್ಷರಗಳಲ್ಲಿ ಮೂಡಿಸುವ ಸೃಜನಕ್ರಿಯೆಯ ಮರ್ಮಗಳನ್ನು ಸೂಚಿಸುವಂತಿರುವ ಅರುಣಾಚಲ ಪ್ರದೇಶದ ಕವಯತ್ರಿ ಮಮಾಂಗ್ ದಾಯಿ ಹೇಳಿದ ಒಂದು ಮಾತು ಇಲ್ಲಿ ಉಲ್ಲೇಖನೀಯ:


"People believe there's lot of voilence in Northeast. When I write I cannot convey images of bloodshed and bullet wounds. Instead I write about the stillness of land, the changing landscape due to war and strife."


ವಿವೇಕ್ ತಮ್ಮ ಮುನ್ನುಡಿಯಲ್ಲಿ ಹೇಳುತ್ತಾರೆ, "ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ."


ಕಾದಂಬರಿಯ ಓದಿಗೆ ತೊಡಗಿದಂತೆಲ್ಲ ಮನಸ್ಸನ್ನು ಆವರಿಸುವುದು ವಿವೇಕ್ ಪಾತ್ರಗಳನ್ನು ಅವುಗಳ ದೈನಂದಿನ ಚಟುವಟಿಕೆಗಳಲ್ಲೇ ನಮಗೆ ಪರಿಚಯಿಸಿ, ವ್ಯಕ್ತಿ ಪರಿಚಯಯೊಂದಿಗೆ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಬಗೆ. ಫಂಡರಿಯನ್ನು ವಿವರಿಸುತ್ತ ಅವಳ ಎತ್ತರ, ಬೆಳ್ಳಗಾಗುತ್ತಿರುವ ಕೂದಲು, ಕೆನ್ನೆಯ ಎಲುಬು, ಬೆವರು, ಅವಳ ತಿರಗಣೆ ತಂಬಿಗೆ...ಹೀಗೆ ಬಾಹ್ಯ ವಿವರಗಳಲ್ಲಿ ತೊಡಗುವ ಚಿತ್ರ ಕ್ರಮೇಣ ನಾವೆಲ್ಲ ತಿಳಿದಿರುವ ಒಂದು ಜೀವಂತ ಪಾತ್ರವಾಗುವ, ಆಂತರಿಕವಾಗಿ ಓದುಗನಿಗೆ ಆಪ್ತವಾಗುವ ರೀತಿ ತುಂಬ ವಿಶಿಷ್ಟ. ಇಲ್ಲಿ ಮತ್ತೆ ಲಂಕೇಶ್ ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ.


"ಲೇಖಕನಾದವನು ತನ್ನ ಪಾತ್ರಗಳ ವಿಚಿತ್ರ ಸುಖ ಮತ್ತು ಕಾತರ ಕೂಡಿದ ಸ್ಥಿತಿ - ಇದನ್ನು ಬೇಕಾದರೆ complex ಎನ್ನಿ, ಹಿಡಿದಿಡಲಾರದವ ಒಳ್ಳೆಯ ಸಾಹಿತಿಯಾಗಲಾರ."


ವಿವೇಕರ ಮೊದಲ ಕಥಾಸಂಕಲನಕ್ಕೆ ಬರೆದ ಮುನ್ನುಡಿಯಲ್ಲೇ ಯಶವಂತ ಚಿತ್ತಾಲರು ವಿವೇಕರ ಈ ವಿಶಿಷ್ಟ ಶಕ್ತಿಯ ಬಗ್ಗೆ ಗಮನಸೆಳೆದು ಮೆಚ್ಚುನುಡಿಯನ್ನಾಡಿದ್ದರು. ಭಾಷೆಯನ್ನು ಬಳಸುವ ರೀತಿಯೇ ವಾಸ್ತವವನ್ನು ಗ್ರಹಿಸುವ ರೀತಿಯೂ ಆಗಿ ವಿವೇಕರಲ್ಲಿ ವಿವರಗಳು ಮೂಡುತ್ತವೆ ಎನ್ನುತ್ತಾರೆ ಚಿತ್ತಾಲರು. ಫಂಡರಿ ವಿಧವೆಯಾದಾಗ ಅವಳಿಗೆ ಇಪ್ಪತ್ತು ವರ್ಷ. ಆ ದಿನದ ಘಟನೆಯನ್ನು ವಿವೇಕ್ ವಿವರಿಸುವ ಪರಿ ಗಮನಿಸಿ:


"ತಕ್ಷಣ ಊರಿನ ಜನ ಕಿಕ್ಕಿರಿದು ಸೇರಿದರು. ಈ ಸುದ್ದಿಯನ್ನು ನಂಬಲು ಸಾಧ್ಯವಿಲ್ಲದ ಹಾಗೆ `ಶಂಕರನನ್ನು ಈಗ ತಾನೆ ಆ ಮುರ್ಕಿಯಲ್ಲಿ ನೋಡಿದೆನಲ್ಲ', `ಸಂಜೆ ಬೇಲೆ ಕಡೆಗೆ ಹೋಗುವ ಅಂತ ಹೇಳಿದನಲ್ಲ', ಮುಂತಾಗಿ ಮಾತಾಡುತ್ತ ತಮ್ಮ ಕಳವಳವನ್ನು ಮುಚ್ಚಿಡಲು ಪ್ರಯತ್ನಿಸಿದರು. ಒಳಗೆ ಅತ್ತೆ ಸೊಸೆಯರಿಗೆ ಸಮಾಧಾನ ಹೇಳಹೋದವರು, ಅವರು ಮಾತಿಲ್ಲದೇ ಕೂತದ್ದು ನೋಡಿ, ಯಾವುದಕ್ಕೂ ಪ್ರತಿಕ್ರಿಯಿಸದ್ದನ್ನು ನೋಡಿ ಏನು ಹೇಳಬೇಕೋ ತೋಚದೇ ಸುಮ್ಮನೇ ತಿರುಗಿ ಬಂದರು. ಅಳದವರಿಗೆ ಹೇಗೆ ಸಮಾಧಾನ ಮಾಡಬಹುದೆಂದು ಅವರಿಗೂ ಗೊತ್ತಾಗಲಿಲ್ಲ. ಯಾವ ಮಾತುಗಳಿಗೂ ಅವರ ದುಃಖ ನಿಲುಕುವಂತಿರಲಿಲ್ಲ. ಮನೆತುಂಬ ಸೇರಿದ ಜನ ಅಪ್ಪಿತಪ್ಪಿ ಅಡಿಗೆ ಮನೆಯತ್ತ ಹಾದಾಗ, ಮಣೆಯೆದುರು ಬಡಿಸಿದ ಗಂಜಿ ಕಂಡು ಕಳವಳಗೊಂಡರು. ಗಂಜಿಯ ಮೇಲೆ ಬಡಿಸಿದ ಉಪ್ಪು ಕರಗಿ ಕಂದು ರಸವಾಗಿ ಎಲೆಯ ಒಂದು ಪಕ್ಕ ಮಡುಗಟ್ಟಿತ್ತು. ಎಲ್ಲವೂ ಏರುಪೇರಾದ ಈ ಕ್ಷಣದ ಮುಂಚೆ ಇಲ್ಲೊಂದು ಸಹಜ ದೈನಿಕ ಜರುಗುತ್ತಿತ್ತು ಎಂಬುದನ್ನು ಒತ್ತಿ ಒತ್ತಿ ಹೇಳುವಂತೆ ಇದ್ದ ಆ ದೃಶ್ಯವನ್ನು ಗಮನಿಸಿದರೂ, ತಮ್ಮೊಳಗೆ ದಾಖಲಿಸಿಕೊಳ್ಳಲು ಅಂಜಿದವರಂತೆ ಅದನ್ನು ನಿರ್ಲಕ್ಷಿಸಿದರು." (ಪುಟ ೧೨-೧೩)


- ಈ ವಿವರಗಳಿಗೆ ಎಂಥ ಧ್ವನಿಶಕ್ತಿಯಿದೆ ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಇದು ಸಾವನ್ನು ಭಾಷೆಯಲ್ಲಿ ಕಟ್ಟಿಕೊಡುತ್ತಲೇ ಅದೇ ಕಾಲಕ್ಕೆ ಸಾವಿನ ಮನೆಯ ಅನುಭವವನ್ನು ಓದುಗನಿಗೆ ಉಂಟುಮಾಡುವ ಕವಿಭಾವ ಉದ್ದೀಪಕ ಪ್ರತಿಮಾ ಸೃಷ್ಟಿ. ವಿವೇಕರ ಬರವಣಿಗೆಯ ಒಂದು ಸಹಜವಾದ ಅಷ್ಟೇ ಅನನ್ಯವಾದ ವೈಶಿಷ್ಟ್ಯವಿದು. ಅದ್ಭುತವಾದ ವಿವರಗಳನ್ನು ಕಟ್ಟಿಕೊಡುವ ಅನೇಕ ಬರಹಗಾರರಿರಬಹುದು. ಆದರೆ ವಿವರಗಳನ್ನು ಪೋಲು ಮಾಡದ ಮತ್ತು ಅವುಗಳಿಂದ ಗರಿಷ್ಠ ಕೆಲಸ ತೆಗೆಯುವ, ಪ್ರತೀಕಗಳನ್ನು ಸಾರ್ಥಕ ಪ್ರತಿಮೆಗಳನ್ನಾಗಿಸುವ ಕಲೆಗಾರಿಕೆ ಇಲ್ಲಿ ಕಾಣುತ್ತೇವೆ. ಇಂಥ ಇನ್ನೂ ಹಲವು ಉದಾಹರಣೆಗಳನ್ನು ಕಾದಂಬರಿಯ ಉದ್ದಕ್ಕೂ ಕಾಣಬಹುದಾಗಿದೆ.


ಪುಟ ೨೧ರಲ್ಲಿ ಪುರಂದರ ಮತ್ತು ಮೋಹಿನಿ ಮಾವಿನಕಾಯಿ ಹೆಕ್ಕುವ ವಿಚಾರದಲ್ಲಿ ಗಡಿ ಪ್ರಶ್ನೆ ಬರುತ್ತದೆ. ತೀರ ಕ್ಷುಲ್ಲಕವಾಗಬಹುದಾಗಿದ್ದ ಈ ಸಂಗತಿಯನ್ನು ಕುಶಾಲಿನ ಮಾತಿನಲ್ಲಿ ಕೊಂಡೊಯ್ಯಲು ಬಯಸಿದ ಪುರಂದರನ ಮನಸ್ಥಿತಿಗೆ ಮೋಹಿನಿ ಸ್ಪಂದಿಸುವುದಿಲ್ಲ. ಗಂಭೀರವಾಗುತ್ತಾಳೆ, ಸಟಕ್ಕನೆ ಮಾತು ನಿಲ್ಲಿಸಿ ಮನೆಯೊಳಗೆ ಹೋಗುತ್ತಾಳೆ. ಅವಳನ್ನು ನಿಲ್ಲಿಸಬಹುದಾಗಿದ್ದ `ಮೋಹಿನೀ' ಎಂಬ ಒಂದು ಸಣ್ಣ ಶಬ್ದ ಸದ್ದಾಗದೇ ಹೋಗುವುದನ್ನು ಪುರಂದರ ಗಮನಿಸುವ ವಿವರಗಳು ಗಮನಾರ್ಹವಾಗಿವೆ.


ಆ ನೋಟ ಪುರಂದರನನ್ನು ಅಲ್ಲಿ ಎಂಥ ಸ್ಥಿತಿಯಲ್ಲಿ ಉಳಿಸಿರಬಹುದು ಎಂಬುದನ್ನು ಊಹಿಸಬಹುದು. ಹೈಸ್ಕೂಲಿನಲ್ಲಿ ಕಲಿಯುತ್ತಿರುವ ಇಬ್ಬರಿಗೂ ಇದೆಲ್ಲದರಿಂದ ಏನೂ ಅಗಬೇಕಾದುದಿಲ್ಲ, ನಿಜವೇ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಯಾವ ಮುನ್ಸೂಚನೆಯನ್ನೂ ಕೊಡದೆ ಬರಿಯ ಪರೀಕ್ಷೆ, ಮಾರ್ಕು, ಶಾಲೆಯ ಕುರಿತು ಹಿರಿಯರು ಕೂಡಿಸಿದ ತಂತುಗಳು ಚಾಚಿಕೊಂಡು ಹುಟ್ಟುವ ಒಂದೇ ತರಗತಿ, ಒಂದೇ ವಯಸ್ಸು ಎಂಬ ಸಮಾನ ಅಂಶಗಳು ಪ್ರೇರಿಸುವ ಒಂದು ನಿಷ್ಪಾಪಿ ಭಾವಕ್ಕೆ ಆಗುವ ನೋವು ಸುಪ್ತಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುವುದೇ ಅನಿಸುತ್ತದೆ. ಕೊನೆಯಲ್ಲಿ ರಮಾಕಾಂತನ ಜೊತೆ ಮಾತನಾಡುತ್ತ ಪುರಂದರ `ವ್ಯಕ್ತಪಡಿಸುವ ಧಾಡಸೀತನ ಇಲ್ಲದ ಮಾತ್ರಕ್ಕೆ ಪ್ರೇಮ ಸುಳ್ಳೇನಾಗುವುದಿಲ್ಲವಲ್ಲ ಸರ್' ಎನ್ನುವ ಮಾತನ್ನು ಗಮನಿಸಿ. ಪುರಂದರ ಮುಂದೆ ರತ್ನಳ ಮನಸ್ಸಿಗಾಗಬಹುದಾದ ಯಾವುದೇ ನೋವುಗಳಿಗೆ ವಿಶೇಷ ಮಹತ್ವ ನೀಡದಿರುವುದಕ್ಕೆ ಇಂತಹ ನೋವುಗಳು ನೈತಿಕ ಸಮರ್ಥನೆಯನ್ನೊದಗಿಸುತ್ತವೆಯೇ, ಸುಪ್ತಮನಸ್ಸಿನಲ್ಲಿ? ಈ ಸೂಕ್ಷ್ಮಗಳನ್ನು ವಿವೇಕ್ ಮೀಟಿಯೂ ಮೀಟದಂತೆ ಲಯ ಸಾಧಿಸುತ್ತಾರೆ.


ಪುಟ ೮೩ರಲ್ಲಿ ಬರುವ ಇನ್ನೊಂದು ಸನ್ನಿವೇಶ ಗಮನಿಸಿ. ದೋಣಿಯಿಂದ ಇಳಿಯುವಾಗ ಅತಿ ಆತ್ಮವಿಶ್ವಾಸದಿಂದ ಎರಡೂ ಕೈಗಳಲ್ಲಿ ಟ್ರಂಕು, ಚೀಲ ಹಿಡಿದು ಇಳಿಯಲು ಹೋದ ಸರ್ವೋತ್ತಮ ಮುಗ್ಗರಿಸಿ ಬೀಳುತ್ತಾನೆ. ಟ್ರಂಕು ಕಾಲ ಮೇಲೆಯೇ ಬಿದ್ದು ಗಾಯವಾಗುತ್ತದೆ. ಆ ವಿವರಗಳು ಹೀಗಿವೆ:


"ಸುನಂದೆ ಮತ್ತು ಗೋದಾವರಿಯನ್ನು ಜನ ಕೈ ಹಿಡಿದು ಬೇಗ ಬೇಗ ಇಳಿಸಿದರು. ಸರ್ವೋತ್ತಮ ಏಳಲು ಪ್ರಯತ್ನಿಸುತ್ತಿದ್ದ ಹಾಗೆ ಮಂಡಿಯಿಂದ ರಕ್ತ ಜಿನುಗತೊಡಗಿತು. ತೊಡೆಗಿಂತ ಮೇಲೆ ಸರಿದ ಧೋತರದ ಸಂದಿಯಿಂದ ಅವನ ಬಿಳಿಯ ಲಂಗೋಟಿ ಕಾಣಿಸುತ್ತಿತ್ತು. ನಿಸ್ತೇಜ ಕಾಲುಗಳು, ಸುಕ್ಕುಬಿದ್ದ ಚರ್ಮ, ಗೂನಾಗುತ್ತಿರುವ ಬೆನ್ನು ಕಂಡು ಒಮ್ಮೆಲೇ ಅವನು ಮುದುಕನಾಗಿ ಹೋಗುತ್ತಿರುವ ಹಾಗೆ ಗೋದಾವರಿಗೆ ಅನಿಸಿತು. ಕಾಲು ಸೋತು ಅವನು ಧಕ್ಕೆಯಲ್ಲಿ ಕೂತುಬಿಟ್ಟ.


`ಹಂ ಹಂ' ಎಂದವನು ಮುಲುಗುತ್ತಿದ್ದಾಗ, ಕಾಲಿಗೆ ಆದ ಪೆಟ್ಟಿಗಿಂತ ಹೆಚ್ಚಿನದೇನೋ ಆಗಿದೆಯೆನ್ನಿಸಿ ಗೋದಾವರಿ ಸಣ್ಣಗೆ ಕಂಪಿಸಿದಳು. ಆ ಕ್ಷಣದಲ್ಲಿ ಅವಳಿಗೆ ತಾನು ಇನ್ನು ಮುಂದೆ ಅವನನ್ನು ನೋಡಿಕೊಳ್ಳಬೇಕೆಂಬ ಅಸ್ಪಷ್ಟ ಪ್ರಜ್ಞೆಯೊಂದು ಹುಟ್ಟಿತು...." (ಪುಟ೮೩)


ಇಲ್ಲಿ ನದಿಯ ಬಳಿ ಸಾರ್ವಜನಿಕವಾಗಿ ಅತಂತ್ರನಾಗಿ ಬಿದ್ದ ನಡುವಯಸ್ಸಿನ ಮನುಷ್ಯ, ಚೆಲ್ಲಿಕೊಂಡ ಟ್ರಂಕು, ಕೈಚೀಲ, ಕಂಗಾಲಾದ ಹೆಂಡತಿ-ವಯಸ್ಸಿಗೆ ಬಂದ ಮಗಳು, ಸುತ್ತ ಚಿತ್ರಗಳಂತೆ ನಿಂತ ಜನ, ಧೋತರದ ಸಂದಿಯಿಂದ ಕಂಡ ಅವನ ಬಿಳಿಯ ಲಂಗೋಟಿ ಎಲ್ಲವೂ ಆ ಹೆಂಡತಿಯಲ್ಲಿ ಹುಟ್ಟಿಸಿದ ಭಾವ ಏನಿದೆ, ಅದು "ತಾನು ಇನ್ನು ಮುಂದೆ ಅವನನ್ನು ನೋಡಿಕೊಳ್ಳಬೇಕು" ಎಂಬ ಅಸ್ಪಷ್ಟ ಪ್ರಜ್ಞೆ! ವಿವರಗಳು ಸಾರ್ಥಕ ಪ್ರತೀಕಗಳಾಗಿ ಅನುಭೂತಿ ನೀಡುವ ಬಗೆ ಇದು. ಮುಂದಿನ ವಿವರಗಳು ಈ ಸಂಬಂಧದ ಹೊಸ ಮಜಲನ್ನು ಇನ್ನಷ್ಟು ಪುಷ್ಟೀಕರಿಸುತ್ತ ಹೋಗುತ್ತವೆ. ಗೋದಾವರಿಯ ವ್ಯಕ್ತಿತ್ವ, ವಾಸುದೇವ ಕಸ್ತೂರಿಯರ ಮೇಲಿನ ಅವಳ ಜಿದ್ದು ಎರಡೂ ಸುಂದ್ರಜ್ಜಿಯ ಮಾತಿನ ಹಿನ್ನೆಲೆಯಲ್ಲಿ ಇನ್ನಷ್ಟು ಸೆಟೆದುಕೊಂಡು ಗಟ್ಟಿಗೊಳ್ಳುವುದನ್ನು ಇಲ್ಲಿಂದಲೇ ಕಾಣಬಹುದಾಗಿದೆ ಕೂಡ.


ವೆಂಕಟೇಶ ತರುವ ಪಾಂಡುರಂಗನ ಸಾವಿನ ಸುದ್ದಿ ತಲುಪುವ ಬಗೆಯನ್ನು ನೋಡಿ. ಸುದ್ದಿ ತಂದ ವೆಂಕಟೇಶನಿಗೆ ತಾನು ತಂದುದು ಸುದ್ದಿಯಲ್ಲ ಸಾವಿನ ಕರಿನೆರಳು ಎಂಬುದರ ಅರಿವಾಗುವ ಸನ್ನಿವೇಶ ಮಣೆಯ ಮುಂದೆ ಉಣ್ಣದೇ ಉಳಿದ ಗಂಜಿ, ಕರಗಿದ ಉಪ್ಪಿನಂತೆಯೇ ಎಲ್ಲ ಮಾತುಗಳನ್ನು ಮೀರಿ ನಿಲ್ಲುತ್ತದೆ.


"`ಅಂವಾ ಮಳ್ಳ ಡ್ರೈವರು. ಕಿಟಕಿಯಲ್ಲಿ ತಲೆ ಹಿಂದೆ ಹಾಕಿ ಹಿಂದೆ ನೋಡಿ ನೋಡಿ ರಿವರ್ಸಿನಲ್ಲಿ ಹೋದ. ಓಣಿಯ ತುದಿಗೆ ನಿಲ್ಲಿಸಿ ಮುಂದೆ ನೋಡ್ತಾನೆ - ಅಲ್ಲಿ ಇಂವ ಫಡ್ಚ' ಎಂದು ವೆಂಕಟೇಶ ಸುದ್ದಿಯ ಮುಖ್ಯಾಂಶವನ್ನು ಆವೇಶದಲ್ಲಿ ಹೇಳುವಾಗ ತನಗರಿವಾಗದಂತೆ ಕೈಚಪ್ಪಾಳೆ ತಟ್ಟಿದ." (ಪುಟ ೧೯೫)


- ಈ ವಿವರಗಳು ನಮ್ಮ ದೈನಿಕಗಳು ಅತ್ಯುತ್ಸಾಹದಿಂದ ಹಿಂದಿನ ದಿನ ನಡೆದ ಅಪಘಾತ, ದುರಂತಗಳನ್ನು ವರ್ಣರಂಜಿತವಾಗಿ ವರ್ಣಿಸುವಷ್ಟೇ ಸಹಜವಾಗಿವೆ. ಅಷ್ಟೇ ದುರಂತಮಯ ವಿಪರ್ಯಾಸದಂತೆ ಈ ವರ್ಣನೆಯ ಆರ್ಭಟವೆಲ್ಲವೂ ಆ ಸಾವಿನ ಸುದ್ದಿಗೆ ನೊಂದವರ, ಸತ್ತ ವ್ಯಕ್ತಿಗೆ ಸಂಬಂಧಿಸಿದವರ ಮುಂದೆಯೇ ನಡೆಯುತ್ತಿರುತ್ತದೆ.


"`ನಾ ಬರ್ತೇನೆ' ಅಂದ ಅವನಿಗೆ ಯಾರೂ ಏನೂ ಹೇಳಲಿಲ್ಲ. ಅವನು ಮತ್ತೆ ಮಾತಾಡದೇ ಎದ್ದು ಚಪ್ಪಲಿ ಹಾಕಿಕೊಂಡು ಹಿಂತಿರುಗಿ ನೋಡದೇ ದಣಪೆ ದಾಟಿ ಕಣ್ಮರೆಯಾದ." (ಪುಟ ೧೯೬)


ಇದೇ ರೀತಿ `ನಮ್ಮಂಥವರ ಮನೆಯ ಮಕ್ಕಳು ಬೇಗನೇ ದೊಡ್ದವರಾಗಿ ಬಿಡುತ್ತಾರೆ ಎಂದು' ಸಾವಿತ್ರಿಗೆ ಅನಿಸುವಂತೆ ಮಾಡುವ ಭೇದಭಾವದ ಸೂಕ್ಷ್ಮಗಳು, ತೆಣೆಯ ಮೇಲೆ ಚಾಪೆ ಹಾಸಿಕೊಂಡು ಮಲಗಿದ ವಾಸುದೇವನ ತೋರ ತೋಳಿನ ಮೇಲಿನ ಹಸಿರು ಹಚ್ಚೆಯ ಹೆಡೆಯೆತ್ತಿದ ಹಾವು ಸೂಸುವ ದ್ವೇಷದ ಭಾವ, ಸೂರಜರಾಣಿಯ ಒಂದು ಶಿಲ್ಪ ಸದೃಶ ನೋಟದ ವಿವರಗಳು, ಹುಬ್ಬಳ್ಳಿಗೆ ವಾಪಾಸು ಹೊರಟ ಪುರಂದರ ಬಸ್ಸು ಘಟ್ಟ ಹತ್ತುವ ಸಂದರ್ಭದಲ್ಲಿ ಬರುವ ವಿವರಗಳು ಹುಟ್ಟಿಸುವ ಒಂದು ವಿಚಿತ್ರ ಮನಸ್ಥಿತಿ, ಧಬೆಧಬೆಯ ಧಾರೆಯಡಿ ಸುನಂದೆ ಯಮುನೆಯರ ಸ್ನಾನದ ವಿವರಗಳು, ಸುನಂದೆ ಮೌನವಾಗಿ ಫಂಡರಿಯ ವಿಲಂಬಿತ ಗತಿ ಮತ್ತು ಯಮುನೆಯ ವೇಗ ಎರಡರಲ್ಲೂ ಎಳೆ ತಪ್ಪಿದ ಅತಂತ್ರತೆಯನ್ನು ಗ್ರಹಿಸುವ ವಿವರಗಳು, ಯಶವಂತ ಪುರಂದರನಾಗಿ ಲಕ್ಷ್ಮೀಬಾಯಿಯೊಂದಿಗೆ ರಮಿಸುವ ವಿವರಗಳು, ವಿಭ್ರಾಂತನಾದ ಸರ್ವೋತ್ತಮ ತನ್ನ ಗತಿಸಿದ ತಂದೆ ಅನಂತನ ಜೊತೆ ಮಾತನಾಡಿದೆ ಎನ್ನುವುದನ್ನು ಕೇಳಿ ವಿಚಲಿತಳಾದ ಸುನಂದೆ ತನ್ನ ತಂದೆಯನ್ನು ನೆನೆಯುವ ಪ್ರಸಂಗ ಎಲ್ಲವೂ ಏಕಕಾಲಕ್ಕೆ ಕಥಾನಕದ ಜೋಡಿ ಅನುಸಂಧಾನ ನಡೆಸುತ್ತಲೇ ಪಾತ್ರಗಳ ಅಂತರಾತ್ಮವನ್ನು ತೆರೆತೆರೆದು ತೋರುತ್ತವೆ ಮಾತ್ರವಲ್ಲ ಆ ಪಾತ್ರಗಳ ಮುಂದಿನ ನಡೆಯನ್ನು ಕೂಡ ಒಂದು ಕಾರ್ಯಕಾರಣ ಸಂಬಂಧದ ಮೂಲಕ ಜೋಡಿಸಿ (ಹೆಚ್ಚಿನ ಬಾರಿ ಅದು ಸುಪ್ತವಾಗಿದ್ದರೂ) ವಿವರಿಸುವಂತೆ ಕಂಡುಬರುತ್ತವೆ. ಹೀಗಾಗಿ ಇಲ್ಲಿ ಸಾವಿತ್ರಿಯ ಅಪಮಾನ, ಗೋದಾವರಿಯ ಮನಸ್ಸಿನ ಶಂಕೆ, ವಾಸುದೇವನ ತಂತ್ರಗಾರಿಕೆ, ಪುರಂದರನ ವಚನ ಭ್ರಷ್ಟತೆ, ಸುನಂದೆಯ ಅನಾಥಪ್ರಜ್ಞೆ, ಯಮುನೆಯ ಜೀವನ ಪ್ರೀತಿ, ಎಲ್ಲದರ ನಡುವೆ ಅನುದ್ದಿಶ್ಯ ನಲುಗಿದಂತಿರುವ ರತ್ನಾ (ಅವಳು ಕತ್ತಿಯಿಂದ ಕೈ ಬೆರಳು ಕತ್ತರಿಸಿಕೊಂಡ ಸನ್ನಿವೇಶ ಗಮನಿಸಿ)ಎಲ್ಲರನ್ನೂ, ಎಲ್ಲರ ನಡೆಯನ್ನೂ ಒಂದು ಅದ್ಭುತವಾದ ಸಹಾನುಭೂತಿಯಿಂದ ಕಾಣುವ ಮನಸ್ಸು ನಮಗೆ ಕಾಣಸಿಗುತ್ತದೆ. ಇದನ್ನೇ ಮಾಸ್ತಿಯವರು `ಜೊತೆಯ ಜೀವದ ನೋವಿನೊಂದಿಗೆ ಸಹಾನುಭೂತಿಯಿಂದ ಬೆರೆತು ಅದನ್ನು ಇನ್ನೊಂದು ಜೀವಕ್ಕೆ ಮುಟ್ಟಿಸುವ ತವಕದಿಂದ' ಕಥೆ ಹುಟ್ಟಿದಾಗ ಅದು ತನ್ನ ಶ್ರೇಷ್ಠ ಉದ್ದೇಶವನ್ನು ಸಾಧಿಸ ಹೊರಟಂತಾಗುತ್ತದೆ ಎಂದಿರುವುದು.


ಇಲ್ಲಿ ಪುರಂದರ ರತ್ನಾಳನ್ನೆ ಮದುವೆಯಾಗಬೇಕಿತ್ತು. ಆದರೆ ಅದು ಅವನ ಬದುಕು-ಭವಿಷ್ಯವನ್ನು ನುಂಗಿಬಿಡುವ ವಚನ ಎನಿಸಿದಾಗ ಅದನ್ನು ಮುರಿಯಲು ಅವನು ಮುಂದಾಗುತ್ತಾನೆ. ಅದಕ್ಕೆ ಅವನದೇ ಆದ ಒಂದು ಸಮಾಧಾನವನ್ನೂ ಕೊಟ್ಟುಕೊಳ್ಳುತ್ತಾನೆ. ಆದರೆ ಅವನಿಗೆ ಗೊತ್ತು, ತನ್ನದು ಪೂರ್ತಿ ಸರಿಯಿರಲಿಲ್ಲವೆಂಬ ಸತ್ಯ. ಹಾಗಾಗಿಯೇ "ಈ ಜನ್ಮದಲ್ಲಿ ಮತ್ತೆ ನಿನ್ನ ಮೋರೆ ನೋಡುವುದಿಲ್ಲ....ಇದು ನನ್ನ ಮಾತು. ಹೇಗೆ ಉಳಿಸಿಕೊಳ್ಳುತ್ತೇನೆ ನೋಡು. ನೋಡಿ ಕಲಿತುಕೋ...." ಎಂದ ವಾಸುದೇವನ ಮಾತು ಉಳಿಸುವುದಕ್ಕಾಗಿಯೇ ಬಸ್ಸಿನಲ್ಲಿ ಅವನಿರುವುದು ತಿಳಿದಾಗ ತನ್ನ ಮುಖ ಅವನಿಗೆ ಕಾಣದಂತೆ ತಾನೇ ಮುಖವನ್ನು ಮರೆಸಿಕೊಳ್ಳುತ್ತಾನೆ. ಈ ಕ್ರಿಯೆಯಲ್ಲಿ ಇರುವ ಸಾಂದರ್ಭಿಕ ನಡೆಯನ್ನೂ ಅದರ ಆಳದಲ್ಲಿರುವ ಅರ್ಥವ್ಯಾಪ್ತಿಯನ್ನೂ ಒಟ್ಟೊಟ್ಟಿಗೇ ನಿರ್ವಹಿಸುವುದು ಮಾತ್ರ ಖಂಡಿತವಾಗಿ ವಿವೇಕ್ ವಿಶೇಷತೆ. ಮಾತು ತಪ್ಪಿರುವುದು ನಿಜ ಮತ್ತು ಅದು ತಪ್ಪು ಎಂಬ ಅರಿವಿರುತ್ತ ಮಾತು ತಪ್ಪದೇ ಇರುವುದರ ಬಗ್ಗೆ ಸ್ವತಃ ಪುರಂದರನಿಗಿರುವ ಗೌರವವನ್ನು ಅವನ ತನ್ನ ಕುರಿತೇ ಇರುವ ನಾಚಿಕೆಯೊಂದಿಗೇ ಇದು ಕಾಣಿಸುತ್ತದೆ ಮಾತ್ರವಲ್ಲ ಬದುಕಿನ ಶಾಶ್ವತ ಮೌಲ್ಯಗಳತ್ತ ಹೊಸ ತಲೆಮಾರು ಎದುರಿಸುತ್ತಿರುವ ಸೂಕ್ಷ್ಮ ಒತ್ತಡಗಳನ್ನೂ ಕಾಣಿಸಿಬಿಡುತ್ತದೆ.


ಈ ಹಿನ್ನೆಲೆಯಲ್ಲಿ ಸರ್ವೋತ್ತಮನ ವಂಶಾವಳಿ ಬಿಚ್ಚುವ ಹುಚ್ಚು ಮತ್ತು ಶಾಲೆಯಲ್ಲಿ ರೆಕಾರ್ಡು ತಿದ್ದಿ ತನಗಾಗಿರಬಹುದಾದ ಅನ್ಯಾಯದ ವಿರುದ್ಧ ಸೆಣಸುವ ತಯಾರಿ - ಎರಡನ್ನೂ ಗಮನಿಸಬೇಕೆನಿಸುತ್ತದೆ. ಸರ್ವೋತ್ತಮನ ಕಾಯದೆಶೀರ್ ವಂಶಾವಳಿಯಲ್ಲಿ ಅವರು ಹೊಟ್ಟೆಯ ಮಗಳಿಗಿಂತ ಹೆಚ್ಚಿನ ಮುತುವರ್ಜಿಯಿಂದ ಸಾಕಿದ ಮಗಳು ಸುನಂದೆಗೆ ಸ್ಥಳವಿಲ್ಲ. ಹಾಗೆಯೇ ಎಂದೋ ಆಗಿ ಹೋಗಿರಬಹುದಾದ, ಈಗ ಬದುಕಿದ್ದಾನೋ ಇಲ್ಲವೋ ಎಂದು ಕೂಡಾ ತಿಳಿದಿಲ್ಲದ ಶಾಲಾ ಇನ್ಸ್‌ಪೆಕ್ಟರ್ ಮಾಡಿದ ಅನ್ಯಾಯಕ್ಕೆ ಈಗ ನ್ಯಾಯ ಕೇಳಿ ಹೋರಾಡುವುದರಲ್ಲಿ ಯಾರಿಗೂ ಯಾವ ಅರ್ಥವೂ ಕಾಣುವುದಿಲ್ಲ. ಈ ಎರಡೂ ವೈರುಧ್ಯಗಳಲ್ಲಿರುವ ವಿಪರ್ಯಾಸವನ್ನು ಗಮನಿಸಿ. ಒಂದು, ಮೌಲ್ಯ ಕಾಲಾಂತರದಲ್ಲಿ ಅಪಮೌಲ್ಯವಾಗುವುದನ್ನು ಮತ್ತು ಅದು ಅನಿವಾರ್ಯವಾದಾಗ ಸಮಾಜ ಅದನ್ನು ಸಹಜವಾಗಿ ಸ್ವೀಕರಿಸುವುದನ್ನು ಹೇಳುತ್ತದೆ. ಇನ್ನೊಂದು ಕಣ್ಣೆದುರಿನ ಸತ್ಯವನ್ನೂ ಮೌಲ್ಯಗಳ ಅಂತಿಮ ರಕ್ಷಕನಾಗಿರುವ ಕಾನೂನು ಕಾಯದೆ ಸುಳ್ಳೆನ್ನಬಹುದಾದ ಸಾಧ್ಯತೆಯನ್ನು ಕಾಣಿಸುತ್ತದೆ. ವಿಲಕ್ಷಣವಾದ ಒಂದು ಆಯಾಮದಿಂದಲೇ ಇದನ್ನು ಗ್ರಹಿಸಿ ಜೀರ್ಣಿಸಿಕೊಳ್ಳಬೇಕಾದ ಸಂಕೀರ್ಣತೆ ಬದುಕಿನದು. ಬದುಕು ಈ ಎರಡರ ನಡುವಿನ ಹೊಂದಾಣಿಕೆಯಲ್ಲಿ, ಎಲ್ಲ ವಿಲಕ್ಷಣ ಅಸಂಗತಗಳ ನಡುವೆಯೇ ಸಹಜತೆಯ ಸೋಗು ಹೊತ್ತು ಸಾಗುತ್ತಿರುತ್ತದೆ.


ಇದೇ ಬಗೆಯ ಪರಂಪರೆ ಮತ್ತು ಮಾನವೀಯ ನಿಲುವು ಎರಡರ ನಡುವಿನ ಸಂಘರ್ಷವನ್ನು ಪ್ರತಿನಿಧಿಸುವ ರಮಾಕಾಂತ ಯಮುನೆಯರ ಮದುವೆ ಮತ್ತು ಯಮುನೆಯ ಅತ್ತೆ ಫಂಡರಿ ಈ ವಿಷಯವಾಗಿ ತೆಗೆದುಕೊಳ್ಳುವ ನಿಲುವು ಕಾದಂಬರಿಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಪ್ರಕಟವಾಗಿರುವ ಬಗೆ ಕೂಡ ಗಮನಾರ್ಹವಾಗಿದೆ. ಬಂಗಾರದ ಬಳೆಗಳು, ಕರಿಮಣಿ ತಾಳಿಯ ಸರ, ಮೋಹನ ಮಾಲೆ, ಕಿವಿಯ ಓಲೆ ಮತ್ತು ಎರಡು ಉಂಗುರಗಳನ್ನು ಯಮುನೆಗಾಗಿ ಬಿಟ್ಟು ಹೋದ ಅತ್ತೆಯ ಸಮ್ಮತಿ ರಮಾಕಾಂತನಿಗೆ `ಎಂಥ ಪಲ್ಲಟವನ್ನಾದರೂ ಸಾಂಸಾರಿಕತೆಯಲ್ಲಿ ಹೀರಿಕೊಳ್ಳಬಲ್ಲ ಶಕ್ತಿ'ಯಾಗಿ ಕಾಣುತ್ತದೆ ಮಾತ್ರವಲ್ಲ ಅದರ ಬಗ್ಗೆ ಅವನಿಗೆ ಆಶ್ಚರ್ಯ ಮತ್ತು ಭಯ ಕೂಡ ಆಗುತ್ತದೆ.


ವಾಸುದೇವ-ಕಸ್ತೂರಿ, ದೇವರಾಯ-ಕಾವೇರಿ ಮತ್ತು ಸರ್ವೋತ್ತಮ-ಗೋದಾವರಿಯರ ಸಂಸಾರ, (ಇವರಲ್ಲಿ ಕಸ್ತೂರಿ, ಕಾವೇರಿ ಮತ್ತು ಗೋದಾವರಿ ಅಕ್ಕತಂಗಿಯಂದಿರು) ದೇವರಾಯ-ಕಾವೇರಿಯವರ ನೆರೆಯವರಾದ ಇಬ್ಬರು ವಿಧವೆಯರು ಫಂಡರಿ ಮತ್ತು ಯಮುನೆಯರನ್ನು ಬಿಟ್ಟರೆ ಹೊರಗಿನವರಾಗಿ ಕಾದಂಬರಿಯಲ್ಲಿ ಮಹತ್ವ ಪಡೆಯುವ ಪಾತ್ರ ವಸಂತ ಕುಮಾರ ಯಾನೆ ಪುರಂದರ ಯಾನೆ ಯಶವಂತನದ್ದು. ಬನಬಂಢಾರಿಯ ಮೂಲಕ ಊರಿಗೆ ಮರಳುವ, ಹಿಂದೊಮ್ಮೆ ಓಡಿ ಹೋಗಿದ್ದ ಯಶವಂತ ಇಡೀ ಕಾದಂಬರಿಗೆ ನೀಡುವ ಪರಿಪ್ರೇಕ್ಷ್ಯ ಗಮನಾರ್ಹವಾದದ್ದು. ಒಂದು ಸ್ತರದಲ್ಲಿ ಪುರಂದರ ಮತ್ತು ಈ ಯಶವಂತನ ಮುಖಾಮುಖಿ ಜಯಂತ ಕಾಯ್ಕಿಣಿಯವರ `ಇದ್ದಾಗ ಇದ್ಧಾಂಗ' ಕತೆಯ ಆನಂದ ಮತ್ತು ಪಬ್ಬೂ ನಡುವಿನ ಮುಖಾಮುಖಿಯ ಒಂದು ಆಯಾಮವನ್ನೂ ಪಡೆದುಕೊಂಡಿದೆ. ಇಲ್ಲಿನ ಯಶವಂತ ಮತ್ತು ಪುರಂದರರ ನಡುವಿನ ಸ್ನೇಹದ ವಿವರಗಳು ವಿವೇಕರ `ಅಂಕುರ' ಕಥಾಸಂಕಲನದ ಕತೆ `ಬಂದಾವೋ ಬಾರವೋ' ಕತೆಯ ನಿರೂಪಕ ಮತ್ತು ಅವನ ಗೆಳೆಯನ ಸ್ನೇಹದ, ಓಡಾಟದ ವಿವರಗಳನ್ನು ಮನಸ್ಸಿಗೆ ತರುತ್ತದೆ. ಇಲ್ಲಿನ ಯಶವಂತ ಊರು ಬಿಟ್ಟು ಹೋದ ಮೇಲೆ ಹಲವಾರು ವೇಷಗಳನ್ನು ಧರಿಸಿದರೂ ಅವುಗಳಲ್ಲಿ ಮಹತ್ವವಾದದ್ದು ಪುರಂದರನ ವೇಷ. ಪುರಂದರನ ಬದುಕಿನ ಒಂದಾನೊಂದು ಸಾಧ್ಯತೆಯಂತೆ ತೆರೆದುಕೊಳ್ಳುವ ಯಶವಂತನ ಪುರಂದರೋಪಖ್ಯಾನ ಮನುಷ್ಯನ ಬದುಕಿಗೆ ತೆರೆದೇ ಇರುವ ಅನಂತಾನಂತ ಸಾಧ್ಯತೆಗಳಲ್ಲಿ ಯಾವುದೋ ಒಂದು ಕ್ಷಣದ ಯಾವುದೋ ಒಂದು ಸಂಗತಿ ಯಾವುದೋ ಒಂದನ್ನು, ಒಂದನ್ನು ಮಾತ್ರಾ ಆಯ್ಕೆ ಮಾಡುವಂತೆ, ಮನುಷ್ಯ ಅದರ ನಮ್ರ ಆಜ್ಞಾನುವರ್ತಿಯಾಗಿರಬಹುದೆಂಬಂತೆ ಒಂದು ಒಳನೋಟವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ.


`ಒಂದು ಬದಿ ಕಡಲು' ಕಾದಂಬರಿಯಲ್ಲಿ ಇಂಥ ನಿಲುವು ಇನ್ನೂ ಹಲವೆಡೆ ಕಂಡುಬರುತ್ತದೆ. ಗಮನಿಸಿ :
"ಎಂತೆಂಥ ಸೂಕ್ಷ್ಮಗಳ ಮೇಲೆ ದೊಡ್ಡ ದೊಡ್ಡ ಘಟನೆಗಳೆಲ್ಲ ನಿಂತಿದ್ದಾವೆ; ತನ್ನ ಬಾಯಿಯಿಂದ ಹೊರಡದೇ ಇದ್ದ `ಮೋಹಿನೀ' ಅನ್ನುವ ಒಂದು ಶಬ್ದದ ಮೇಲೆ!" (ಪುಟ:೨೨).


"ಹೋಗಬೇಕೆಂದು ಆ ಕ್ಷಣಕ್ಕೆ ಅನಿಸಿ ಹೊರಟಿದ್ದಲ್ಲ ಎಂದು ನಿನಗೂ ಗೊತ್ತಿದೆ. ತುಂಬ ದಿನಗಳ ಕಾಲ ಒಳಗೇ ಇತ್ತು ಅದು. ಒಂದು ಕಿಡಿಗೆ ಕಾಯುತ್ತಿದ್ದೆ. ಸಿಡಿದದ್ದೇ ಹತ್ತಿ ಉರಿಯಿತು. ಯಾಕೆ ಕಿಡಿ ಸಿಡಿಯಿತೆಂದು ಮಾತಿನಲ್ಲಿ ಹೇಳಲಿಕ್ಕೇ ಸಾಧ್ಯವಿಲ್ಲ. ಬಿಸಿಲು ಹೊಡೆಯುತ್ತಿದ್ದ ಮಧ್ಯಾಹ್ನ, ಬೆವರು ಮೈಗೆ ಗಂಜೀಫ್ರಾಕು ಅಂಟಿಕೊಂಡ ಗಳಿಗೆಯಲ್ಲಿ ನಮ್ಮ ಮನೆಯ ಅಟ್ಟದ ಮೇಲೆ ಕೂತಾಗ ಅದು ಹುಟ್ಟಿತೋ ಏನೋ." (ಪುಟ ೧೫೯).


"ಇಲ್ಲವೋ ಯಾವುದೂ ವ್ಯರ್ಥ ಹೋಗುವುದಿಲ್ಲ. ಎಲ್ಲೋ ಒಂದು ಕಡೆ ಸೇರಿಕೊಂಡು ಅದು ಬೆಳೆಯುತ್ತದೆ. ನೀನು ಆರಂಭಿಸಿದ್ದು ಇನ್ನೆಲ್ಲೋ ಸಫಲವಾಯಿತು ನೋಡು. ಆ ಮಾವಿನ ಕಾಯಿಯಿಂದ ಶುರುವಾದದ್ದು ಇನ್ನೂ ಮುಗಿದ ಹಾಗೆ ಕಾಣುವುದಿಲ್ಲವೋ. ಯಾರಿಗೂ ಗೊತ್ತಿಲ್ಲದ ಒಂದು ಸಂಗತಿಯನ್ನು ನಿನಗೆ ಹೇಳುತ್ತೇನೆ. ಇದನ್ನು ಕೇಳಿದರೆ ನಿನ್ನ ಕೆಲಸ ವ್ಯರ್ಥ ಹೋಗಿಲ್ಲ ಅನಿಸಬಹುದು...' (ಪುಟ ೧೯೯).


"ಯೋಚಿಸುತ್ತ ಹೋದಂತೆ ತಾವು ಯಾವುದೋ ದೊಡ್ಡ ಯೋಜನೆಯೊಂದರ ದಾಳದ ಹಾಗೆ ಅನಿಸಿ, ಸಮ್ಮತಿಯೂ ಒಂದು ಅಸ್ತ್ರದ ಹಾಗೆ ಕಾಣಿಸಿತು." (ಪುಟ ೨೧೦).


ಹಾಗೆಯೇ ಯಶವಂತನ ಬದುಕಿನ ವಿವರಗಳು ಪುರಂದರನ ಅನುಭವಗಳಾಗಿ ಆತ ಅವುಗಳನ್ನು ನೆನೆಯುವ ಮೂಲಕ ತಾನು ಅದನ್ನು ಒಳಗಾಗುವ ಭಾಗ ಕಾದಂಬರಿಯ ಹಂದರದಲ್ಲಿಯೇ ಓದುಗನಿಗೆ ಒಂದು ಹೊಸ ಒಳನೋಟವನ್ನು ನೀಡುತ್ತದೆ. `ವಾಕ್ಯಗಳ ನಡುವೆ, ದೀರ್ಘ ಮೌನಗಳ ನಡುವೆ, ನಿಟ್ಟುಸಿರುಗಳ ನಡುವೆ ಅವನು ಹೇಳದೇ ಉಳಿದದ್ದನ್ನು ಪುರಂದರನೇ ಊಹಿಸಿಕೊಳ್ಳುತ್ತಿದ್ದ:' ಪುರಂದರನ ಮನಸ್ಸಿನ ಹಪಹಪಿಕೆಗಳು, ಆಸೆ ಆಕಾಂಕ್ಷೆಗಳು ಹೀಗೆ ತಾತ್ಕಾಲಿಕವಾಗಿ ಪುರಂದರನಾಗಿದ್ದ ಯಶವಂತನ ಮೂಲಕ ಪುರಂದರನಿಗೆ ಒದಗಿ ಬರುವುದು ಮತ್ತು ಪುರಂದರನೇ ಸ್ವ ಇಚ್ಛೆಯಿಂದ ಅಂಥ ಅನುಭವಗಳಿಗೆ ಚಾಚಿಕೊಳ್ಳಲು ಪ್ರಯತ್ನಿಸುವುದು ಮನುಷ್ಯನ ಒಂದಕ್ಕಿಂತ ಹೆಚ್ಚು ಸಾಧ್ಯತೆಗಳನ್ನು ಬದುಕುವ ಸುಪ್ತ ಆಸೆಯನ್ನು ಪ್ರತಿನಿಧಿಸುತ್ತದೆ. ಯಶವಂತನಂತೂ ಇದನ್ನು ಪುರಂದರನಾಗಿ, ವಸಂತಕುಮಾರನಾಗಿ ಕಂಡು ಬಂದವನು. ಆದರೂ ಅಪ್ಪನ ಒತ್ತಾಯಕ್ಕೆ ಅಂಗಡಿಯಲ್ಲಿ ಕೂರುವ ಯಶವಂತನಾಗಲೀ, ತಾನು ಒಂಥರಾ ಅಂತರ್ಪಿಶಾಚಿ ಎಂದುಕೊಳ್ಳುವ ಪುರಂದರನಾಗಲೀ ಬದುಕಿನ ನಿರರ್ಥಕತೆ ಮತ್ತು ಅರ್ಥಹೀನತೆ ಆಗಾಗ ಎದ್ದು ಬಂದು ಒಡ್ಡುವ ಸವಾಲುಗಳಿಗೆ ಸುಖದ ಉತ್ತರಗಳನ್ನು ಕಂಡುಕೊಂಡವರೇನಲ್ಲ. ಕಾದಂಬರಿಯ ಉಳಿದೆಲ್ಲ ಪಾತ್ರಗಳು ಬದುಕಿನ ಹೊರಗಿನ ಹೋರಾಟಗಳ ಕತೆಯನ್ನು ಹೇಳುತ್ತಿದ್ದರೆ ಯಶವಂತನ ಮೂಲಕ ಪುರಂದರ ಒಳಗಿನ ತುಮುಲಗಳನ್ನು ಗುರುತಿಸಬಲ್ಲವನಾಗುತ್ತಾ ಮಾಗುವ ಹಾದಿಯಲ್ಲಿರುವಂತೆ ಭಾಸವಾಗುತ್ತದೆ.


ಹಾಗೆಯೇ ಇಷ್ಟೆಲ್ಲ ಉಜ್ವಲ ಅಂಶಗಳಿರುವ ಒಂದು ಉತ್ತಮ ಕಾದಂಬರಿಯ ಓದು ಒಟ್ಟಾರೆಯಾಗಿ ನೀಡುವ ಕಾಣ್ಕೆ ಏನು ಎಂಬ ಪ್ರಶ್ನೆ ಇದೆ. ಕಾದಂಬರಿ ಒಂದು ಕಥಾನಕವನ್ನು, ಬದುಕನ್ನು, ವಾತಾವರಣವನ್ನು ಕಟ್ಟಿಕೊಡುತ್ತಲೇ ಒಂದು ದರ್ಶನವನ್ನೂ ಓದುಗನಿಗೆ ಒದಗಿಸುತ್ತದೆ. ಉತ್ತರಕನ್ನಡದ ಒಂದು ಬದುಕನ್ನು ಕಟ್ಟಿಕೊಡುತ್ತಲೇ ಅದು ಎದುರಿಸುವ ದೈನಂದಿನ ಸಂಘರ್ಷಗಳನ್ನು, ಬದುಕಿನ ರೀತಿನೀತಿಗಳಲ್ಲಿನ ಸೂಕ್ಷ್ಮ ಪಲ್ಲಟಗಳನ್ನು ಹೇಳುವ `ಒಂದು ಬದಿ ಕಡಲು' ಕಾದಂಬರಿ ಒಂದು ನಿರ್ದಿಷ್ಟ ಕಥಾನಕದ ನಿರೂಪಣೆಯನ್ನೇ ಗುರಿಯಾಗಿರಿಸಿಕೊಂಡಿರುವಂಥದ್ದಲ್ಲ. ಒಂದು ಜೀವನಕ್ರಮದ ನಿರೂಪಣೆ ಇಲ್ಲಿರುವುದು. ಅದು ಬಹಳಷ್ಟು ಒಳನೋಟಗಳನ್ನು ಹೊಂದಿರುವುದು, ಸಂಕೀರ್ಣ ಮುಖಗಳನ್ನು ಪಡೆದಿರುವುದು ಅಲ್ಲಲ್ಲಿ ಗಮನಕ್ಕೆ ಬಂದರೂ ಇದೇ ಈ ಕಾದಂಬರಿಯ ಒಟ್ಟಾರೆ ಧ್ವನಿ ಎನ್ನಬಹುದಾದ ನಿರ್ದಿಷ್ಟ ತಾತ್ವಿಕತೆಯನ್ನು, ಅಂಥ ಎಳೆಗಳನ್ನು ಇಲ್ಲಿ ಕಾಣಲಾರೆವು. ಕಾರಂತರ ಕಾದಂಬರಿ ಎನ್ನುವಾಗ ಬಹುಷಃ ನಮ್ಮ ಮನಸ್ಸಿಗೆ ಅವರ ಯಾವುದೋ ಒಂದು ಕಾದಂಬರಿ ಬರುವುದಿಲ್ಲ. ಅವರ ಹಲವು ಹತ್ತು ಕಾದಂಬರಿಗಳು ಸೇರಿ ನಿರ್ಮಿಸುವ ಒಂದು ಜಗತ್ತೇ ಮನಸ್ಸಿನ ಮುಂದೆ ಬಿಚ್ಚಿಕೊಳ್ಳುತ್ತದೆ. ಹಾಗೆಯೇ ಕುವೆಂಪು ಅವರ ಎರಡು ಮಹಾನ್ ಕಾದಂಬರಿಗಳನ್ನು ಸ್ವತಂತ್ರವಾಗಿ ಮನಸ್ಸಿಗೆ ತಂದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಈ ಮಾತು ನಮ್ಮ ಬಹಳಷ್ಟು ಮಹತ್ವದ ಕಾದಂಬರಿಕಾರರಾದ ತೇಜಸ್ವಿ, ಚಿತ್ತಾಲ, ಲಂಕೇಶ್, ದೇವನೂರ ಮಹದೇವ, ಆಲನಹಳ್ಳಿ, ರಾಘವೇಂದ್ರ ಪಾಟೀಲ ಮುಂತಾದ ಅನೇಕರ ವಿಷಯದಲ್ಲೂ ನಿಜ. ಇವರ ಯಾವುದೇ ಒಂದು ಕೃತಿಯನ್ನು, ಅದು ಕಾದಂಬರಿಯಾಗಿರಲಿ, ಕಥೆಯಾಗಿರಲಿ, ಪ್ರತ್ಯೇಕವಾಗಿಟ್ಟುಕೊಂಡು ನೋಡುವುದು ಬಹಳ ಕಷ್ಟ. ಹಾಗೆಯೇ ವಿವೇಕರ `ಒಂದು ಬದಿ ಕಡಲು' ಕಾದಂಬರಿ ಕೂಡ ವಿವೇಕರಿಂದ ಬರಲಿರುವ ಕೃತಿಗಳತ್ತ ಒಂದು ಮುಖ ಮಾಡಿದಂತಿರುವುದು ನಿಜ. ಆಗಲೇ `ಒಂದು ಬದಿ ಕಡಲು' ಕೃತಿಯ ಮೂಲಕ ಅವರು ತೊಡಗಿಸಿಕೊಂಡಿರುವ ಹಲವು ವಿದ್ಯಮಾನಗಳು ಒಂದು ಅರ್ಥಪೂರ್ಣ ಚೌಕಟ್ಟಿಗೆ ಒಳಪಡುವುದು ಸಾಧ್ಯ ಅನಿಸುತ್ತದೆ.


ಅಕ್ಷರ ಪ್ರಕಾಶನ, ಸಾಗರ, ಹೆಗ್ಗೋಡು - ೫೭೭೪೧೭

ಪುಟ : 212. ಬೆಲೆ: ನೂರ ಮುವ್ವತ್ತೈದು ರೂಪಾಯಿ.

No comments: