Sunday, June 1, 2008

ಪ್ರಹ್ಲಾದ ಅಗಸನಕಟ್ಟೆಯವರ `ಕಾಯಕ್ಕೆ ನೆಳಲಾಗಿ'

ಪ್ರಹ್ಲಾದ ಅಗಸನಕಟ್ಟೆಯವರ ಆರನೆಯ ಕಥಾಸಂಕಲನ, `ಕಾಯಕ್ಕೆ ನೆಳಲಾಗಿ' ಹೊರಬಂದಿದೆ. ಹಿಂದಿನ `ಮನದ ಮುಂದಣ ಮಾಯೆ'ಗೆ ಸಾಹಿತ್ಯ ಅಕಾಡಮಿ ಬಹುಮಾನ ದಕ್ಕಿದ ನಂತರ ಹೊರಬರುತ್ತಿರುವ ಮೊದಲ ಸಂಕಲನ ಇದು. ಸರಳವಾಗಿ, ಸಹಜವಾಗಿ ಕಥಾನಕವನ್ನು, ಪಾತ್ರಗಳನ್ನು, ಸನ್ನಿವೇಶವನ್ನು ಚಿತ್ರಿಸುತ್ತ ಸಾಗುವ ಅಗಸನಕಟ್ಟೆಯವರದು ನವ್ಯೋತ್ತರ ಮತ್ತು ಹೊಸ ತಲೆಮಾರಿನ ಕತೆಗಾರರ ನಡುವೆ ವಿಶಿಷ್ಟ ದನಿ. ಅದಕ್ಕೆ ಅದರದೇ ಆದ ಒಂದು ಸೊಗಡು, ಸ್ವಾತಂತ್ರ್ಯ ಮತ್ತು ಸೌಂದರ್ಯ ಇದೆ.
ಅಗಸನಕಟ್ಟೆಯವರದು ಸಹಜ ಕತೆಗಾರಿಕೆ. ಗ್ರಾಮ್ಯ ಭಾಷೆ, ದೈನಂದಿನಗಳ ಸಾಮಾನ್ಯ ವಿವರಗಳ ಸೂಕ್ಷ್ಮ ಅಳವಡಿಕೆ ಮತ್ತು ಜೀವಂತ ಪಾತ್ರಗಳ ನೈಜ ಚಿತ್ರಣದ ಮೂಲಕ ಒಂದು ಸಹಜ ವಿದ್ಯಮಾನವನ್ನು ಕಥಾನಕದ ಚೌಕಟ್ಟಿನಲ್ಲಿ ಕಟ್ಟಿಕೊಡಬಲ್ಲ ಕಲೆಗಾರಿಕೆ ಅಗಸನಕಟ್ಟೆಯವರ ಹೆಚ್ಚುಗಾರಿಕೆ. ಮನೆಯೊಳಗಣ ಕಿಚ್ಚು, ತೇಲಲೀಯದು ಗುಂಡು, ಕಾಯಕ್ಕೆ ನೆಳಲಾಗಿ, ಕಂದನಲ್ಲಿ ಕುಂದನರಸುವರೆ ಮತ್ತು ಊರಾಗಿನ ಆ ಮರ ಕತೆಗಳಲ್ಲಿ ಬಳಸಿದ ಭಾಷೆ ಮತ್ತು ಇಲ್ಲಿ ಬರುವ ಗ್ರಾಮ್ಯ ಪರಿಸರದ ಜೀವಂತ ವಿವರಗಳು ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಿವೆ. ಅದೇ ರೀತಿ ಅಹಿಂಸೋ ಪರ...ಧರ್ಮ, ಒಂದು ಇನ್ಸ್‌ಪೆಕ್ಷನ್, ಚಿಕ್ಕೂನ್ ಗುನ್ಯಾ, ಹೆಣವೆದ್ದು ನಗುತಿರೆ, ನಾನೇಕೆ ಪರದೇಶಿ ಕತೆಗಳಲ್ಲಿ ವೃತ್ತಿಪರ ಜಗತ್ತು ಸಶಕ್ತ ವಿವರಗಳಲ್ಲಿ ಮೈತುಂಬಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಅಗಸನಕಟ್ಟೆಯವರ ಭಾಷೆ ಎರಡು ಜಗತ್ತಿನಲ್ಲೂ ತನ್ನ ಮಾಯಕವನ್ನು ಮೆರೆಯುತ್ತದೆ. ಸೀನಾಯ ನಮಃದ ಶಂಕರ ಶಿಂಧೆ, ಅಹಿಂಸೋ ಪರ...ಧರ್ಮದ ಜಮೀರುಲ್ಲಾಖಾನ್, ಚಿಕ್ಕೂನ್ ಗುನ್ಯಾದ ಅರಳಿಕಟ್ಟಿ ಕೂಡಾ ಸಿದ್ಧಪ್ಪ, ನಾಗ, ಕುಬಸದ ಮುಂತಾದವರಂತೆಯೇ ಮನಸ್ಸಿನಲ್ಲುಳಿಯುತ್ತವೆ.
ಪ್ರಸ್ತುತ ಸಂಕಲನದಲ್ಲಿ ಮೂರು ಬಗೆಯ ಕತೆಗಳಿವೆ. ಮೊದಲನೆಯದು ಮುಕ್ತವಾಗಿ ತೊಡಗಿ, ಕುತೂಹಲದ ಕಣ್ಣುಗಳಿಂದ ಬದುಕನ್ನು ಗಮನಿಸುತ್ತ ಒಟ್ಟಾರೆಯಾಗಿ ಬದುಕು ನೀಡುವ ಅನುಭವವನ್ನು ಮುಗ್ಧವಾಗಿಯೇ ಚಿತ್ರಿಸುವ ಕತೆಗಳು. ಇಲ್ಲಿ ಕತೆಗಾರರಿಗೆ ಯಾವುದೇ ಪೂರ್ವನಿಯೋಜಿತವಾದ, ನಿರ್ದಿಷ್ಟವಾದ ಒಂದು ಅಂತ್ಯದತ್ತ ಸಾಗುವ ಉದ್ದೇಶವಾಗಲಿ, ಆ ದಿಕ್ಕಿನತ್ತ ಸಾಗುವ ಧಾವಂತವಾಗಲೀ ಇರುವುದು ಮೇಲ್ನೋಟಕ್ಕಂತೂ ಕಾಣಬರುವುದಿಲ್ಲ. ಮನೆಯೊಳಗಣ ಕಿಚ್ಚು, ತೇಲಲೀಯದು ಗುಂಡು, ಕಾಯಕ್ಕೆ ನೆಳಲಾಗಿ ಕತೆಗಳು ಈ ಬಗೆಯವು. ಅಗಸನಕಟ್ಟೆಯವರು ಇಲ್ಲಿ ನಿರ್ಮಿಸಿರುವ ಒಂದು ಕಥಾಲೋಕದಲ್ಲಿ, ಅದನ್ನು ಚಿತ್ರಿಸಿರುವ ಕ್ರಮದಲ್ಲಿ, ಆಯ್ದಿರುವ ವಿವರಗಳು ಮತ್ತು ಕಥಾನಕದ ಮಿತಿಯಲ್ಲಿ ಈ ಕತೆಗಳು ಯಶಸ್ವಿಯಾಗಿವೆಯೆ ಇಲ್ಲವೆ ಎನ್ನುವುದನ್ನು ಗಮನಿಸಬಹುದಾಗಿದೆ. ಇಲ್ಲಿನ ಕತೆಗಳು ಬದುಕನ್ನು ಅದು ಇದ್ದಂತೆ ಕಾಣುವುದರಾಚೆ ಅದಕ್ಕೆ ಪ್ರಯತ್ನ ಪೂರ್ವಕ ಯಾವುದೇ ಚೌಕಟ್ಟು ತೊಡಿಸುವ ಅಗತ್ಯವಿಲ್ಲ, ಅದು ಹಾಗೆಯೇ ಹಲವು ಆಯಾಮಗಳಲ್ಲಿ ಅರ್ಥಸ್ಫುರಿಸಬಲ್ಲ ಕಸುವನ್ನು ಹೊಂದಿದೆ ಎನ್ನುವಂತಿವೆ. ಹಾಗಾಗಿ ಈ ಕತೆಗಳು ಏನನ್ನು ಕುರಿತಾಗಿ ಇವೆ ಅಥವಾ ಏನನ್ನು ಹೇಳುತ್ತಿವೆ ಎಂಬುದನ್ನು ಒಂದು ಸಾಲಿನಲ್ಲೋ ಕೆಲವೊಂದು ವಿವರಗಳಲ್ಲೋ ಹೇಳುವುದು ಸಾಧ್ಯವಿಲ್ಲ. ಈ ಬಗೆಯ ಕಥೆಗಳ ಯಶಸ್ಸು ಇರುವುದೇ ಇಲ್ಲಿ ಅನಿಸುತ್ತದೆ.
ಎರಡನೆಯ ಬಗೆಯ ಕತೆಗಳಿಗೆ ಒಂದು ಚೌಕಟ್ಟು ಒದಗಿಸುವ ಉದ್ದೇಶ ಲೇಖಕರಿಗಿರುವುದು ಸ್ಪಷ್ಟವಾಗಿಯೇ ಕಂಡು ಬರುತ್ತದೆ. ನಾನೇಕೆ ಪರದೇಶಿ, ಅಹಿಂಸೋ ಪರ....ಧರ್ಮ, ಊರಾಗಿನ ಆ ಮರ, ಸೀನಾಯ ನಮಃ, ಹೆಣವೆದ್ದು ನಗುತಿರೆ ಎಂಬ ಎಲ್ಲ ಐದು ಕತೆಗಳಲ್ಲೂ ನಾಗರಿಕ ಜಗತ್ತು ಮೌಲ್ಯಗಳ ವಿಚಾರದಲ್ಲಿ ಹಳಿತಪ್ಪುತ್ತಿರುವುದರ ಕುರಿತು ಗಾಢವಾದ ವಿಷಾದವಿದೆ ಎನ್ನುವುದು ಮೇಲ್ನೋಟಕ್ಕೇ ಕಾಣಿಸುವ ಸಂಗತಿ. ಆದರೆ ಇಲ್ಲಿನ ಕತೆಗಳು ಅಗಸನಕಟ್ಟೆಯವರ ಸಹಜ ಶೈಲಿಯ ಎಲ್ಲ ಗುಣಾತ್ಮಕ ಅಂಶಗಳನ್ನಿಟ್ಟುಕೊಂಡೂ ಮೊದಲನೆಯ ಬಗೆಯ ಕಥೆಗಳಲ್ಲಿ ಎದ್ದು ಕಾಣದ ಒಂದು ತಾತ್ವಿಕ ಆಯಾಮ ಮತ್ತು ಸಾಮಾಜಿಕ ಅರ್ಥಪೂರ್ಣತೆಯನ್ನು ಹೊಂದಲು ಕಾತರಗೊಂಡಿರುವ ರಚನೆಗಳಂತೆ ಕಾಣುತ್ತವೆ. ಇಂಥ ಹವಣಿಕೆಯ ಮಿತಿಗಳ ಬಗ್ಗೆ ಅಗಸನಕಟ್ಟೆಯವರಿಗೆ ಸ್ಪಷ್ಟವಾದ ಅರಿವಿದೆ. ಸಣ್ಣಕತೆಗೆ ಒಂದು ಸ್ಪಷ್ಟ ಕೇಂದ್ರ, ಒಂದು ನಿರ್ದಿಷ್ಟ ಅಂತ್ಯ ಮತ್ತು ಕೌತುಕದ ಕಥಾನಕ ಇರಬೇಕೆಂಬುದು ಸಾಮಾನ್ಯವಾಗಿ ನಮ್ಮ ತಿಳುವಳಿಕೆ. ಸುಮಾರಾಗಿ ನೀಳ್ಗತೆಗಳು ಇಂಥ ನಂಬಿಕೆಗಳಿಂದ ಕಳಚಿಕೊಂಡಂತೆ ಕಾಣುತ್ತದೆ. ಆದರೆ ಪತ್ರಿಕೆಗಳಿಗೆ ಬರೆಯುವ ಕತೆಗಾರರಿಗೆ ಇರುವ ಒತ್ತಡಗಳು ಬೇರೆಯೇ ತರ. ಅವು ಇಂಥ ನಿರೀಕ್ಷೆಗಳಿಗೆ ಪೂರ್ತಿಯಾಗಿ ಬೆನ್ನು ತಿರುಗಿಸುವುದನ್ನು ಸಾಧ್ಯವಾಗಿಸುವುದಿಲ್ಲವೇನೋ ಅನಿಸುತ್ತದೆ. ಇಲ್ಲಿ ಒಂದು ಸಂತುಲನವನ್ನು ಕಾಯ್ದುಕೊಳ್ಳಲು ಪ್ರಹ್ಲಾದ ಅಗಸನಕಟ್ಟೆಯವರು ಪ್ರಯತ್ನಿಸಿದ್ದು ಎದ್ದು ಕಾಣಿಸುತ್ತದೆ. ಹಾಗೆ ನೋಡಿದರೆ ಕಾಯಕ್ಕೆ ನೆಳಲಾಗಿ ಕತೆಯಲ್ಲೇ ಅದನ್ನು ಅವರು ಯಶಸ್ವಿಯಾಗಿಯೇ ಸಾಧಿಸಿದ್ದಾರೆ. ಅಂಥವೇ ಇನ್ನೂ ಕೆಲವು ಪ್ರಯತ್ನಗಳು ಅಹಿಂಸೋ ಪರ....ಧರ್ಮ, ನಾನೇಕೆ ಪರದೇಶಿ ಮತ್ತು ಹೆಣವೆದ್ದು ನಗುತಿರೆ ಕತೆಗಳು. ಈ ಮೂರೂ ಕತೆಗಳಲ್ಲಿ ಗಮನಸೆಳೆಯುವ ವಿವರಗಳು, ಇಲ್ಲಿ ಸೂಕ್ಷ್ಮವಾಗಿ ಮೈತಳೆಯುವ ಕಥಾನಕ ಸೇರಿ ಕಟ್ಟಿಕೊಡುವ ಚಿತ್ರ ಏನಿದೆ, ಅದು ಸಾಂದರ್ಭಿಕವಾಗಿ ಹಿಂಸೆ, ಕೋಮುವಾದ, ಹೆಣ್ಣಿನ ಶೋಷಣೆ, ಸರಕಾರೀ ಬ್ಯೂರಾಕ್ರೆಸಿಯ ಪಸೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ಮಾನವೀಯತೆ ಕಮರುತ್ತಿರುವುದನ್ನೂ ಸೂಚಿಸಲು ಯತ್ನಿಸುತ್ತದೆ. ಆದರೆ ಸೀನಾಯ ನಮಃ, ಚಿಕ್ಕೂನ್ ಗುನ್ಯಾ ಮತ್ತು ಊರಾಗಿನ ಆ ಮರ ಕತೆಗಳಲ್ಲಿ ಕತೆಗಳು ಎರಡನ್ನೂ ಆಸಕ್ತಿಯಿಂದ ಮಾಡುತ್ತಿಲ್ಲ. ಇಲ್ಲಿನ ವಿಷಯ ವ್ಯಾಪ್ತಿ ಸಣ್ಣದು, ಧಾಟಿ ಕೊಂಚ ಲಘು, ಓಘ ಕೊಂಚ ವೇಗದ್ದು ಮತ್ತು ಮೊದಲ ಬಗೆಯ ಕತೆಗಳಿಗಾಗಲೀ, ಇಲ್ಲಿ ಹೆಸರಿಸಿದ ಮೊದಲ ಮೂರು ಕತೆಗಳಿಗಾಗಲೀ ಸಿಕ್ಕ ಪೋಷಣೆ ಈ ಕತೆಗಳಿಗೆ ದೊರೆತಿಲ್ಲದಿರುವುದು ಗಮನಿಸಬಹುದಾದ ಅಂಶಗಳು. ಆದರೆ ಸೀನಾಯ ನಮಃ ಹಿಂದಿನ ಸಂಕಲನದ ಯಾದವಾಡನ ಪಾದುಕಾ ಪ್ರಕರಣವನ್ನು ನೆನಪಿಸುತ್ತದೆ ಮಾತ್ರವಲ್ಲ ತನ್ನ ಲಘುಧಾಟಿಯಿಂದಲೇ ಈ ಕತೆ ಮೀಟುವ ಸಂಗತಿಗಳು ಸಣ್ಣವಲ್ಲ. ಈ ಕತೆಗೆ ತನ್ನದೇ ಆದ ಒಂದು ಗುರುತ್ವವಿರುವುದನ್ನು ವಿಶೇಷವಾಗಿ ಗಮನಿಸಬಹುದು.
ಕಂದನಲ್ಲಿ ಕುಂದನರಸುವರೆ ಮತ್ತು ಒಂದು ಇನ್ಸ್‌ಪೆಕ್ಷನ್ ಎರಡೂ ಕತೆಗಳು ಮೂರನೇ ಬಗೆಯವು. ಇಲ್ಲಿನ ಚಿತ್ರಕ ವಿವರಗಳು, ಪಾತ್ರ-ಸನ್ನಿವೇಶ ಮತ್ತು ಕಥಾನಕಕ್ಕೆ ದಕ್ಕಿದ ಉತ್ತಮ ಪೋಷಣೆಯ ಹೊರತಾಗಿಯೂ ಹೊಸದೇನನ್ನೂ ಹೇಳದ ಕಾರಣಕ್ಕೆ ಅಷ್ಟಾಗಿ ಗಮನಸೆಳೆಯುವುದಿಲ್ಲ. ಕಂದನಲ್ಲಿ ಕುಂದನರಸುವರೆ ಕತೆಯ ವಿವರಗಳಂತೂ ಬಹುಕಾಲ ಮನಸ್ಸಿನಲ್ಲಿ ಉಳಿಯುವಷ್ಟು ಗಾಢವಾಗಿ ಮೂಡಿವೆ. ಆದರೆ ವಸ್ತುವನ್ನು ಗಮನಿಸಿದಾಗ ಈ ಶಿಲ್ಪ ವ್ಯರ್ಥವಾದ ಬಗ್ಗೆ ಬೇಸರವಾಗುತ್ತದೆ.
ಮೊದಲ ಕತೆ ಮನೆಯೊಳಗಣ ಕಿಚ್ಚು ಸಿದ್ಧಪ್ಪ-ಸಿದ್ದಮ್ಮ ಮತ್ತು ಅವರ ಮಗ ರುದ್ರಮೂರ್ತಿಯರನ್ನೊಳಗೊಂಡ ಒಂದು ಪುಟ್ಟ ಸಂಸಾರದ ಕತೆ ಹೇಳುತ್ತಿದೆ. ಇದನ್ನು ನಿರೂಪಕ ಒಂದು ಜಾಗೃತ ಮತ್ತು ಸುರಕ್ಷಿತ ಅಂತರದಿಂದ ನಮಗೆ ಹೇಳುತ್ತಿದ್ದಾನೆ. ಹೇಳಲು ಆತ ಬಳಸುವ ವಿಧವಿಧದ ತಂತ್ರಗಳು, ಆಯಾಮಗಳು, ವಿವರಗಳು ತುಂಬ ಕುತೂಹಲ ಹುಟ್ಟಿಸುವಂತಿವೆ ಮಾತ್ರವಲ್ಲ ಅವು ಕತೆಯ ಧ್ವನಿಗೆ ತಮ್ಮದೇ ಆದ ಬಗೆಯಲ್ಲಿ ಕೊಡುಗೆ ನೀಡಿವೆ ಎಂಬುದನ್ನು ಗಮನಿಸಬೇಕು.
ಈ ಎಲ್ಲ ವಿವರಗಳ ಉದ್ದೇಶ ಇಂಥ ಕಡು ಬಡವರ ಸಹಜ ಬದುಕನ್ನು ಕುರಿತು ನಾಗರಿಕ-ವಿದ್ಯಾವಂತ-ಮಧ್ಯಮವರ್ಗದ ಗ್ರಹಸ್ಥನೊಬ್ಬನಲ್ಲಿ, ಅವನ ಆಳದಲ್ಲಿ ಇರುವ ಭಯ, ಆತಂಕ; ಅದು ಅವನಲ್ಲಿ ಹುಟ್ಟಿಸುವ ವಿಲಕ್ಷಣ ತಳಮಳಗಳನ್ನು ಕಾಣಿಸುವುದೇ ಹೊರತು ಆ ಸಂಸಾರದ ತಕ್ಷಣದ ತಾಪತ್ರಯಗಳ ಚಿತ್ರಣವಲ್ಲ.
ಇಲ್ಲಿ ಎಲ್ಲರೂ ಒಂದಲ್ಲಾ ಒಂದು ಬಗೆಯಲ್ಲಿ ಮನೆಯೊಳಗಣ ಕಿಚ್ಚುಗಳೇ. ಕಥೆಯ ಚೌಕಟ್ಟಿನೊಳಗೆ ಸಿದ್ಧಪ್ಪನ ಆಗಮನ ಆಗುವುದೇ ಅವನು ನುಂಗಲಾಗದ ಉಗುಳಲಾಗದ ಒಂದು ವಸ್ತುವಾಗಿಯೇ. ಮುಂದೆ ಹಲವರಿಗೆ ಹಲವು ಕಾರಣಗಳಿಗೆ ರುದ್ರಮೂರ್ತಿಯೂ ಅಪ್ಪನಂತಹುದೇ ಇನ್ನೊಂದು ವಸ್ತುವಾಗುವುದು ವಿಪರ್ಯಾಸ. ಅವನ ಉದ್ಯೋಗ, ಅವನ ಹೆಂಡತಿಯ ಐಷಾರಮದ ಬದುಕಿನ ಆಸೆ, ಕೊನೆಗೆ ಅವಳ ಎಲ್ಲೆ ಮೀರಿದ ನಡವಳಿಕೆ ಎಲ್ಲವೂ ರುದ್ರಮೂರ್ತಿಯನ್ನು ಅವನ ಮದುವೆಯ ನಂತರ ಹೆತ್ತವರಿಗೆ, ಸಂಬಂಧಿಕರಿಗೆ, ಊರವರಿಗೆ ಮತ್ತು ಕೊನೆಗೆ ಹೆಂಡತಿಗೂ ಬೇಡದ ವಸ್ತುವಾಗುವಂತೆ ಮಾಡುತ್ತದೆ. ಇನ್ನು ಸಿದ್ಧಮ್ಮ ಕೂಡ ಆಸರೆಯಿಲ್ಲದ, ವಯಸ್ಸಾದ ಹೆಂಗಸಾಗಿ ಯಾರಿಗೂ ಬೇಡ. ನಿರೂಪಕ ಅವಳ ಗೋಳಿನ ಕಥೆಯನ್ನು ಕೇಳುತ್ತಾನಾದರೂ ಅವನ ಕಣ್ಣಿಗೆ ಆ ಮುಸ್ಸಂಜೆ ಹೊತ್ತು ಅವಳೊಂದು ಕರಾಳ ಕಪ್ಪಿನ ಸಂಕೇತದಂತೆಯೇ ಕಾಣಿಸುತ್ತಾಳೆ. ಇದು ಅವನ `ನಾಗರಿಕ' ಎಚ್ಚರವನ್ನೂ ಅವಳ ಬದುಕಿನ ದಾರುಣತೆಯನ್ನೂ ಏಕಕಾಲಕ್ಕೆ ಹಿಡಿದಿಟ್ಟಿದೆ.
ಈ ಇಡೀ ಸಂಸಾರ ಇನ್ನಿಲ್ಲದಂತೆ ಕಷ್ಟ, ಸಂಕಟಗಳಿಗೆ ಸಿಲುಕಿರುವಾಗಲೂ, ನಾಳಿನ ಭವಿಷ್ಯ ಸದಾ ಅವರ ಕಣ್ಣುಗಳೆದುರು ಅಸ್ಪಷ್ಟ, ಅಭದ್ರ, ಆತಂಕಕಾರಿಯಾಗಿದ್ದಾಗಲೂ ಅವರಲ್ಲಿ ಅಂತರ್ಗತವಾಗಿರುವ ಒಂದು ಹಗುರತನ ಯಾರಲ್ಲಾದರೂ ದಿಗ್ಭ್ರಮೆ ಮೂಡಿಸುವಂಥಾದ್ದು. ನಮ್ಮ ನಿಮ್ಮಂಥ ನಾಗರಿಕ, ವಿದ್ಯಾವಂತ ಮತ್ತು ಸುಸಂಸ್ಕೃತ ಮಂದಿಯ ಯಾವ ಅನುಕಂಪ, ಸಹಾಯ, ಗ್ರಹಿಕೆಗಳ ಹಂಗೂ ಇಲ್ಲದೆ ಇಂಥ ಕೋಟ್ಯಂತರ ಮಂದಿಯ ದಿನನಿತ್ಯದ ಬದುಕು ನಡೆಯುತ್ತಿದೆ, ನಡೆಯುತ್ತದೆ ಕೂಡ. ಕಥೆಯಲ್ಲಿ ಕಣ್ಣೆದುರಿಗೆ ಇವರ ಬದುಕಿನ ಸೂಕ್ಷ್ಮ ಚಿತ್ರಗಳೆಲ್ಲ ಮೂಡುತ್ತ ಹೋದಂತೆ ನಿರೂಪಕನ ಎಚ್ಚರ, ಇವರೆಲ್ಲ ಎಲ್ಲಿ ತನಗೇ ತಗುಲಿಕೊಳ್ಳುತ್ತಾರೋ ಎನ್ನುವ ಭಾವದಿಂದಲೇ ಕಾಣಿಸುವ ಹಿಂಜರಿಕೆಗಳು ನಮ್ಮಲ್ಲಿ ಅಸುಖದ ಭಾವನೆ ಮೂಡಿಸುತ್ತಿರುವಾಗಲೇ ಅವನು ಪ್ರತಿ ಬಾರಿ ಜಾಣತನದಿಂದ ನುಸುಳಿಕೊಂಡು ಅವರಿಂದ ಬಚಾವಾದಾಗಲೂ ನಮಗೆ ಒಂಥರಾ ನಿರಾಳ ಕೂಡ ಅನಿಸುತ್ತಿರುತ್ತದೆ! ನಿರೂಪಕನ ಯಾವ ಹುಂಬ ಆದರ್ಶಗಳೂ ನೀಡಲಾರದ ಒಂದು ದರ್ಶನ ಇದೆ ಇಲ್ಲಿ.
ಕತೆಯ ಕೊನೆಯಲ್ಲಿ ಬರುವ ಒಂದು ವಿವರವಂತೂ ಇಡೀ ಕತೆಯ ಅಂತರಾತ್ಮವನ್ನೇ ತೆರೆದು ತೋರುವಂಥದು. ಊರ ಪಂಚಾಯಿತಿ ರುದ್ರನನ್ನು ಎಲ್ಲೇ ಇದ್ದರೂ ಎಳಕಂಬ ಎಂದು ಸಿದ್ಧಪ್ಪನನ್ನು ಕಳಿಸಿದೆ. ರುದ್ರ ಎಲ್ಲಿದ್ದಾನೆಂಬುದೇ ಯಾರಿಗೂ ಗೊತ್ತಿಲ್ಲ. ಊರಿನಲ್ಲಿ ರುದ್ರನ ಹೆಂಡತಿ ನಾಯ್ಕರ ಭೀಮಪ್ಪನ ಜೊತೆ ಸೇರಿಕೊಂಡು ಆಟವಾಡುತ್ತಿದ್ದಾಳೆ. ರುದ್ರನಿಲ್ಲದೆ ಊರಿನ ಹಿರಿಯರಿಗೆ ಅವಳನ್ನು ಹದ್ದುಬಸ್ತಿನಲ್ಲಿಡುವುದು ಸಾಧ್ಯವಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮುಸ್ಸಂಜೆ ಹೊತ್ತು ಮನೆಯನ್ನು ಹೊಕ್ಕ ಸಿದ್ಧಪ್ಪ ನಿರೂಪಕನಲ್ಲಿ ವಿಚಿತ್ರ ತಳಮಳಗಳನ್ನು ಹುಟ್ಟಿಸಿದ್ದಾನೆ. ರುದ್ರನನ್ನು ಹುಡುಕಲು ರಾತ್ರಿಹೊತ್ತೇ ಆತಂಕದಿಂದಲೇ ಸ್ಕೂಟರು ಹತ್ತಿ ಇಬ್ಬರೂ ಹೊರಡುತ್ತಾರೆ. ಒಂದು ಕಡೆ ನಿರೂಪಕ ಢಾಬಾದ ಒಳಗೆ ವಿಚಾರಿಸಿಕೊಂಡು ಬರಲು ತಾನೊಬ್ಬನೇ ಹೋಗುತ್ತಾನೆ. ಅಲ್ಲಿ ಸಮರ್ಪಕವಾದ ಯಾವುದೇ ಉತ್ತರ ಸಿಗುವುದಿಲ್ಲ. ಅವನು ಅಲ್ಲಿಂದ ಹೊರ ಬರುವಷ್ಟರಲ್ಲಿ ಸಿದ್ಧಪ್ಪ ಅದು ಹೇಗೋ ಒಂದು ಬಾಟಲಿ ಸಂಪಾದಿಸಿಕೊಂಡು `ತರಾತುರಿಯಲ್ಲಿ ಹಿಗ್ಗುತ್ತಿರುವುದ'ನ್ನು ಕಂಡು ಕಲ್ಲಾಗುತ್ತಾನೆ.
ನಿರೂಪಕನಲ್ಲಿ ಇದೆಲ್ಲ ಹುಟ್ಟಿಸುವ ಆತಂಕ, ಗೊಂದಲ, ಭವಿಷ್ಯದ ಚಿಂತೆ ಯಾವುದೂ ಸಿದ್ಧಪ್ಪನಲ್ಲಿ ಇದ್ದೂ ಇಲ್ಲದಂತಿರುವುದರಿಂದಲೇ ಅವನು ಹೆಚ್ಚು ಸ್ವತಂತ್ರವಾಗಿ ಬದುಕನ್ನು ಬದುಕಬಲ್ಲ. ಈ ಮಾತು ಸಿದ್ಧಮ್ಮ, ರುದ್ರ ಮತ್ತು ಅವನ ಹೆಂಡತಿಗೆ ಕೂಡ ಸಲ್ಲುತ್ತದೆ. ಆದರೆ ನಿರೂಪಕ ಪ್ರತಿನಿಧಿಸುವ ವಿದ್ಯಾವಂತ-ನಾಗರಿಕ-ಸುಸಂಸ್ಕೃತರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ತೇಲಲೀಯದು ಗುಂಡು ಕೂಡ ಇಂಥವೇ ಸೂಕ್ಷ್ಮಗಳನ್ನು ನಮ್ಮಲ್ಲಿ ಸ್ಪಂದಿಸಗೊಡುವ ಕತೆ. ಈ ಕತೆಯಲ್ಲಿ ಬರುವ, ಇಡೀ ಕತೆಯನ್ನು ಆವರಿಸಿದ ಎಂ.ಸಿ ಕುಬಸದ, ಅಷ್ಟೋ ಇಷ್ಟೋ ಕಾಣಸಿಗುವ ಊರ ಗೌಡ ಮತ್ತು ಕುಬಸದನ ತಾಯಿ ಈ ಕತೆಗೆ ನೀಡಿರುವ ಚೈತನ್ಯ ಬೆರಗು ಹುಟ್ಟಿಸುವಂಥದು. ಯಾವುದೇ ಊರಿನಲ್ಲಿ ಕಾಣಿಸಬಹುದಾದ ಒಬ್ಬ ಪದವೀಧರ ನಿರುದ್ಯೋಗಿ ಈತ. ಕೆಲಸ ಸಿಕ್ಕಿಲ್ಲ, ಹೊಲದ ಗೇಯ್ಮೆ ಮಾಡಲಾರ, ನಲವತ್ತರ ಸಮೀಪ ಸಂದರೂ ಮದುವೆಯಾಗಿಲ್ಲ. ತನ್ನ ಬದುಕು `ಸೆಟ್ಲ್' ಆಗದಿರಲು ಇರುವ ತೊಡಕುಗಳೇನು ಎಂಬುದೇ ಸರಿಯಾಗಿ ತಿಳಿಯದಂತಿರುವ ಕುಬಸದ ಊರ ಗೌಡರಾದಿಯಾಗಿ ಎಲ್ಲರಲ್ಲೂ, ಎಲ್ಲದರಲ್ಲೂ ತನ್ನ ಬದುಕಿನ ವೈಫಲ್ಯಕ್ಕೆ ಇರಬಹುದಾದ ಕಾರಣಗಳನ್ನು ಹುಡುಕುವವನಂತೆ ಪತ್ರಿಕೆಗಳ ದೂರುವಿಭಾಗವನ್ನೇ ತನ್ನ ವೇದಿಕೆಯನ್ನಾಗಿಸಿಕೊಂಡು ಎಲ್ಲರ ನಿಷ್ಟುರಕ್ಕೆ ತುತ್ತಾಗುತ್ತಾನೆ, ದಿನಗಳೆದಂತೆ ತಣ್ಣಗೆ ಕೊರೆಯುವ ಸಮಸ್ಯೆಯಾಗುತ್ತಾನೆ. ಅದು ಹೇಗೋ ನೇರವಾಗಿ ಬದುಕಲ್ಲಿ `ಸೆಟ್ಲ್' ಆದವರನ್ನು ಸೂಕ್ಷ್ಮವಾಗಿ ಕುಟುಕುವ ಮುಳ್ಳಾಗುತ್ತಾನೆ. ಇಲ್ಲಿಯೂ ನಿರೂಪಕ ಒಮ್ಮೆ ಈತನ ಸಾಪೇಕ್ಷ ಸಾಧ್ಯತೆಯಂತೆ ಇನ್ನೊಮ್ಮೆ ಏನಾದರೂ ಸಹಾಯ ಮಾಡಬಲ್ಲವನಂತೆ ಎಲ್ಲ ಕಾಣಿಸಿಕೊಂಡು ಕತೆಗೆ ದಕ್ಕಿಸುವ ಆಯಾಮ ಗಮನಾರ್ಹವಾಗಿದೆ.
ಕಾಯಕ್ಕೆ ನೆಳಲಾಗಿ, ಕಂದನಲ್ಲಿ ಕುಂದನರಸುವರೆ, ನಾನೇಕೆ ಪರದೇಶಿ ಕತೆಗಳಲ್ಲಿ ಹೆಣ್ಣಿನ ಪರವಾದ ಕಾಳಜಿ ಎದ್ದು ಕಾಣುವಂತಿರುವುದು ಒಂದು ವಿಶೇಷ. ಈ ಕತೆಗಳು ಸ್ಥೂಲವಾಗಿ ಹೆಣ್ಣಿನ ಲೈಂಗಿಕ ಶೋಷಣೆಯ ಕುರಿತಾಗಿಯೇ ಇರುವುದು, ಅವಳ ಶೀಲ, ಮದುವೆ ಮತ್ತು ವಿವಾಹ ಪೂರ್ವ ಲೈಂಗಿಕ ಸಮಸ್ಯೆಗಳತ್ತ ವಿಭಿನ್ನವಾದ ಆಯಾಮದಿಂದ ನೋಡುವ ಪ್ರಯತ್ನ ಮಾಡುವುದು ಕುತೂಹಲಕರ. ಕಾಯಕ್ಕೆ ನೆಳಲಾಗಿ ಕತೆ ಅಸಮರ್ಪಕ ವಯೋಮಾನದ ದಾಂಪತ್ಯದ ಸೋಲು ಮತ್ತು ಅದರಿಂದ ಹೊರಬರಲು ಒಂದು ಹೆಣ್ಣು ಮಾಡಿದ ಪ್ರಯತ್ನಕ್ಕೆ ಅವಳ ಊರಿನವರು ಪ್ರತಿಸ್ಪಂದಿಸುವ ವಿಚಿತ್ರ ಬಗೆಯನ್ನು ಕಾಣಿಸುತ್ತದೆ. ಅವಳು ಸತ್ತಿದ್ದಾಳೆಂದು ತಮ್ಮಷ್ಟಕ್ಕೇ ಕಲ್ಪಿಸಿ, ಊರಿನಲ್ಲಿ ಅವಳ ದೆವ್ವ ಓಡಾಡುತ್ತಿದೆ ಎಂದು ಗೊಂದಲ ಎಬ್ಬಿಸಿ ತಮ್ಮ ಮನಸ್ಸಿನ ಭೂತಗಳನ್ನು ಹೊರಬಿಡುವ ಮಂದಿಯ ಮನಸ್ಸಿನ ಗೋಜಲನ್ನು ಸಿದ್ಧಜ್ಜ ಮತ್ತು ನಾಗಜ್ಜ ಮಾತ್ರ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಬರುವ ನಾಗಜ್ಜನ ವಿಲಕ್ಷಣ ಪಾತ್ರ ಬದುಕಿನ ಸಂಕೀರ್ಣ ಮುಖಗಳನ್ನು ಒಮ್ಮೆಗೇ ಕಾಣಿಸುವಂತಿದ್ದು ಕತೆಯಲ್ಲಿ ಹೊಸತನವಿದೆ. ನಾನೇಕೆ ಪರದೇಸಿ ಕತೆ ಕೂಡ ಹಳೆಯ ಒಂದು ಸಮಸ್ಯೆಯನ್ನೇ ಹೊಸದೇ ಆದ ಬಗೆಯಿಂದ ನೋಡುತ್ತ, ಕೊಂಚ ನಾಟಕೀಯವೆನಿಸಿದರೂ ಮನಮುಟ್ಟುವಂತೆ ಚಿತ್ರಿಸಿದೆ. ಗರ್ಭಪಾತ, ಮದುವೆ ಮತ್ತು ಶೀಲದ ಗುಟ್ಟು ವಯಸ್ಸಿನ ವಿಭಿನ್ನ ನೆಲೆಯಿಂದ ಹೇಗೆ ಕಾಣುತ್ತದೆ ಎನ್ನುವುದನ್ನು ಹೇಳುತ್ತಲೇ ನಿರೂಪಕನ ಬದುಕಿನ ವಿವರಗಳು ಇವಕ್ಕೆಲ್ಲ ಒದಗಿಸುವ ಒಂದು ಪರಿಪ್ರೇಕ್ಷ್ಯ ಕತೆಗೆ ಹೊಸ ಮೆರುಗನ್ನು ತಂದಿದೆ. ಈ ಕತೆ ಕೂಡ ನಿರ್ಮಿಸುವ ಕಥಾಲೋಕ ತುಂಬ ಆಪ್ತವಾಗಿ ಮೂಡಿದ್ದು ಮನಸೆಳೆಯುವಂತಿದೆ. ಮೊದಲೇ ಹೇಳಿದಂತೆ ಕಂದನಲ್ಲಿ ಕುಂದನರಸುವರೆ ಕತೆಯ ನಿರೂಪಣೆಯ ವಿಧಾನ ಪ್ರಮುಖವಾಗಿ ಮನಸೆಳೆಯುವಂತಿದೆ.
ಕೊನೆಗೂ ಅಗಸನಕಟ್ಟೆಯವರನ್ನು ಮತ್ತೆ ಮತ್ತೆ ಓದಬೇಕು ಅನಿಸುವುದಕ್ಕೆ ಇರುವ ಪ್ರಮುಖವಾದ ಒತ್ತಡ ಅವರು ಕಟ್ಟಿಕೊಡುವ ಸಾಮಾನ್ಯ ಬದುಕಿನ ವಿವರಗಳ ಮಾಯಕತೆಯೇ. ಅವರು ಹೆಚ್ಚು ಹೆಚ್ಚು ಅದನ್ನು ಅನುದ್ದಿಶ್ಯ ಚಿತ್ರಿಸುತ್ತ ಹೋದಂತೆಲ್ಲ ಅವು ಹೆಚ್ಚು ಆಪ್ತವಾಗುತ್ತ, ಮೇಲ್ನೋಟಕ್ಕೆ ಕಾಣದ ಒಳನೋಟಗಳಿಂದ ಸಮೃದ್ಧವಾಗುತ್ತ ಮೈತುಂಬಿಕೊಳ್ಳುವುದು ನಿಜಕ್ಕೂ ಒಂದು ಸೋಜಿಗ. ಅವರ ಬಹುತೇಕ ಕತೆಗಳು ನೆನಪಾಗುವುದು ಕಥಾನಕದಿಂದಲ್ಲ, ಅವು ಕಟ್ಟಿಕೊಡುವ ಒಂದು ಕಥಾಜಗತ್ತಿನ ವಿವರಗಳಿಂದಲೇ ಎನ್ನುವುದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಗಸನಕಟ್ಟೆಯವರ ಮನದ ಮುಂದಣ ಮಾಯೆ, ಪ್ರಕ್ಷುಬ್ಧ ಅಲೆಗಳು, ನಾನು ನನ್ನ ಗೆಳೆಯ ಮತ್ತು ಅಂಬೇಡ್ಕರ್, ಅದೃಶ್ಯದ ಹಾದಿಯಲ್ಲಿ, ತಾಜ್ ಮಹಲ್ - ಮುಂತಾದ ಅವರ ಯಶಸ್ವೀ ಕತೆಗಳ ವಿಚಾರದಲ್ಲೂ ಈ ಮಾತು ನಿಜವಾಗಿರುವುದು ಗಮನಾರ್ಹ.
ಕಾಯಕ್ಕೆ ನೆಳಲಾಗಿ (ಕಥಾಸಂಕಲನ) ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ -560 020, ಪುಟಗಳು 176, ಬೆಲೆ : ರೂಪಾಯಿ ತೊಂಭತ್ತು.

2 comments:

Vivek said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

ಅಮರ said...

ನಮಸ್ಕಾರ ಸರ್,

ನಿಮ್ಮ ಪುಸ್ತಕ ಪರಿಚಯದ ಬರಹಗಳು ಇಷ್ಟವಾದವು. ಸಾಮಾನ್ಯವಾಗಿ ಪ್ರಖ್ಯಾತ ಲೇಖರ ಬರವಣಿಗಳ ಬಗ್ಗೆ ಹೆಚ್ಚು ಮಂದಿ ಬರೆಯುತ್ತಾರೆ, ಆದರೆ ನಿಮ್ಮ ಬರಹಗಳಲ್ಲಿ ನನಗೆ ಅಜ್ಞಾತವಾಗಿದ್ದ ಹಲವಾರು ಪ್ರತಿಭಾವಂತ ಲೇಖಕರ ಬರಹಗಳನ್ನ ನಮ್ಮ ಮುಂದೆ ಇಟ್ಟಿದ್ದಿರಾ ನಿಮಗೆ ನನ್ನ ಧನ್ಯವಾದಗಳು.
-ಅಮರ