Sunday, June 22, 2008

ಸಾಹಿತ್ಯಪ್ರಿಯರ ಅನಿವಾರ್ಯ ಸಂಗಾತಿ


ಸಮ್ಮೋಹಗೊಳಿಸುವ ಶೈಲಿಯಲ್ಲಿ ಬರೆಯುವುದು ಇವತ್ತು ಅಂಥ ವಿಶೇಷ ಅಂತ ಅನಿಸುವುದೇ ಇಲ್ಲ. ಇದನ್ನು ಹಲವರು, ಅದರಲ್ಲೂ ಪತ್ರಕರ್ತರು ಕನ್ನಡದಲ್ಲಿ ಕ್ಲೀಷೆ ಎನಿಸುವ ಮಟ್ಟಿಗೆ ವಾರವಾರವೂ ನಮಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ತನಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ಹೇಳುವ, ಪೊಲಿಟಿಕಲಿ ಕರೆಕ್ಟ್ ಅನಿಸಿಕೊಳ್ಳುವ ಮೋಹವಿಲ್ಲದೆ ಹೇಳುವ, ಹೇಳುತ್ತಿರುವ ಮಾತುಗಳಿಗೆ ಹಿನ್ನೆಲೆಯಾಗಿ ಸಮೃದ್ಧವಾದ ಓದು, ಅಭಿರುಚಿ ಇರುವ ಮತ್ತು ತನ್ನ ದೋಷಗಳ ಅರಿವಿದ್ದು ಸ್ವವಿಮರ್ಶೆ ಮಾಡಿಕೊಳ್ಳಬಲ್ಲಷ್ಟು ಆತ್ಮಾನುಸಂಧಾನವುಳ್ಳ ಬರಹಗಾರರನ್ನು ಕಾಣುವುದು ಕಷ್ಟ. ಲಂಕೇಶ್ ಮತ್ತು ಅವರ ನಂತರದ ಲಂಕೇಶ್‌ರ ಪೂರ್ ಕಾಪಿಗಳಿಗಿರುವ ವ್ಯತ್ಯಾಸ ಇದು.
ಲಂಕೇಶ್ ವಾರವಾರವೂ ಬರೆಯುತ್ತಿದ್ದ ಟೀಕೆ-ಟಿಪ್ಪಣಿ ಮತ್ತು ಮರೆಯುವ ಮುನ್ನ ಕಲಂನ ಲೇಖನಗಳದೇ ಒಂದು ವೈಶಿಷ್ಟ್ಯವಿದೆ. ಲೇಖನದ ತಲೆಬರಹ ನೋಡಿದರೆ ಅದು ಯಾವುದೋ ರಾಜಕಾರಣಿಯ ಬಗ್ಗೆಯೋ, ವಿಜ್ಞಾನಿಯ ಕುರಿತೋ, ಧರ್ಮಗುರುವಿನ ಮೇಲೋ, ಕ್ರೀಡಾಪಟುವಿನ ವಿಷಯವೋ ಬರೆದಿದ್ದಾರೆ ಎನಿಸುವಾಗಲೇ ಅದು ಸಾಹಿತ್ಯ, ಮನುಷ್ಯನ ಆಳದ ವ್ಯಾಮೋಹಗಳು, ಅವನ ದುಗುಡ-ಆತಂಕಗಳು, ಭಾವುಕ ಕ್ಷಣಗಳು, ಭವಿಷ್ಯದ ಲೆಕ್ಕಾಚಾರಗಳು ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡು ಮನಸ್ಸಿಗೆ ತೆರೆಯುತ್ತಿದ್ದ ವಿಚಿತ್ರವಾದ ಒಂದು ವಿನ್ಯಾಸವೇನಿದೆ, ಅದು ಲಂಕೇಶ್‌ಗೆ ವಿಶಿಷ್ಟವಾದದ್ದು. ಲಂಕೇಶರ ವ್ಯಾಪಕವಾದ ಓದು, ಅವರು ಮನುಷ್ಯನ ಕುರಿತು ಇರಿಸಿಕೊಂಡಿದ್ದ ಸಮಗ್ರವಾಗಿದ್ದ ನಿಲುವು, ಅಪ್ಪಟವಾಗಿದ್ದ ಅಭಿರುಚಿ, ಪ್ರತಿಯೊಂದನ್ನೂ ತುಸು ಅನುಮಾನದಿಂದಲೇ ಸಮೀಪಿಸುವ ಪರೀಕ್ಷಕನ ದೃಷ್ಟಿ ಮತ್ತು ತಾನೇನೂ ಪರಿಪೂರ್ಣ ಪುರುಷೋತ್ತಮನಲ್ಲ ಎಂಬ ಆತ್ಮಜ್ಞಾನದೊಂದಿಗೇ ತಕ್ಷಣಕ್ಕೆ ಅನಿಸಿದ್ದನ್ನು ದಾಖಲಿಸುತ್ತಿದ್ದೇನೆ ಎನ್ನುವ ಪರಿಜ್ಞಾನ ನೀಡಿದ ಸರಳತೆ ಈ ಲೇಖನಗಳ ಹಿಂದಿರುತ್ತಿದ್ದುದೇ ಇದಕ್ಕೆ ಕಾರಣವಿರಬೇಕು.
ಲಂಕೇಶ್ ಎಲ್ಲೂ ಉಪದೇಶಕನ ಧಾಟಿ ಹಿಡಿದು ಮಾತನಾಡಲಿಲ್ಲ, ಅಂಥ ಸಂದರ್ಭಗಳನ್ನು ತಪ್ಪಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಗಮನಿಸಬೇಕು. ತಾನೊಬ್ಬ ಮಹಾನ್ ಚಿಂತಕ, ತನ್ನ ತಲೆಗೆ ಹೊಳೆಯುತ್ತಿರುವುದು ಇನ್ಯಾರಿಗೂ ಹೊಳೆಯಲಾರದ ಅದ್ಭುತ ಎನ್ನುವ ಭ್ರಮೆಗಳು ಲಂಕೇಶರಲ್ಲಿ ಇರಲಿಲ್ಲವೆಂದಲ್ಲ. ಸಮಕಾಲೀನರೊಂದಿಗೆ ಹೋಲಿಸುವಾಗ ಅಂಥ ಭ್ರಮೆಗಳಿಂದ ದೂರವಿರಲು ಅವರು ಪ್ರಯತ್ನಿಸುತ್ತಿದ್ದರು ಮಾತ್ರವಲ್ಲ ಇತರರ ಇಂಥ ಗುಣಗಳನ್ನು ಟೀಕಿಸುತ್ತ ತನ್ನನ್ನು ನಿಯಂತ್ರಿಸಿಕೊಳ್ಳುತ್ತಿದ್ದರು ಎಂದೂ ಅನಿಸುತ್ತದೆ.
ಪ್ರಖ್ಯಾತರ, ಈಗಾಗಲೇ ಅದ್ಭುತ ಕತೆಗಾರ, ಕಾದಂಬರಿಕಾರ, ಕವಿ ಎಂದೆಲ್ಲ ಮಾನ್ಯರಾದವರ ಹುಳುಕುಗಳನ್ನು ಬರೆಯುವಾಗ ಖಚಿತತೆಯೊಂದಿಗೆ ಬರೆದರೂ ಇದೆಲ್ಲ ನಮ್ಮ ಹೊಸ ಬರಹಗಾರರಿಗೆ ಸಹಾಯವಾಗಬೇಕು ಎನ್ನುವ, ನಮ್ಮ ವಿಮರ್ಶಕರು ಖ್ಯಾತಿಯ ಪ್ರಖರತೆಗೆ ಕಣ್ಣುಗುರುಡರಾಗದೇ ಕೃತಿಯ ಮೌಲ್ಯ ಮಾಪನ ಮಾಡದೇ ಹೋದರೆ ಅದು ಕನ್ನಡಕ್ಕಾಗುವ ನಷ್ಟ ಎನ್ನುವ ವಿವೇಚನೆ ಕೂಡ ಇತ್ತೆನ್ನುವುದನ್ನು ಮರೆಯಬಾರದು.
ಲಂಕೇಶರ ಯಾವುದೇ ಬರಹವನ್ನು ತೆಗೆದುಕೊಂಡರೂ ಅದು ಎಲ್ಲೋ ಸಾಹಿತಿ, ಸಾಹಿತ್ಯ ಮತ್ತು ವಿಮರ್ಶೆಯ ಸುತ್ತ ರಿಂಗಣ ಹಾಕದೇ ಇರುವುದಿಲ್ಲ ಅನಿಸುತ್ತದೆ. ಎಲ್ಲೋ ಹೇಗೋ ಅವೆಲ್ಲವೂ ಮನುಷ್ಯನ ಬಗ್ಗೆ, ಅವನ ವೈಚಿತ್ರ್ಯಗಳ ಬಗ್ಗೆ ಇರುತ್ತದೆ. ಹೆಚ್ಚಾಗಿ ಅವರ ಮಾತುಕತೆಯೆಲ್ಲ ಯಾವುದೋ ಲೇಖಕ, ಎಲ್ಲೋ ಬರೆದ ಯಾವುದೋ ಕವನ, ಕತೆ, ಕಾದಂಬರಿ, ಸಿನಿಮಾಗಳಿಗೆ ಎಡತಾಕುತ್ತದೆ. ಅಲ್ಲೇ ಯಾರೂ ಕಾಮನ್‌ಸೆನ್ಸ್ ಬಳಸಿ ಇವನ್ನೆಲ್ಲ ಅರಿತುಕೊಳ್ಳಬಹುದಾದ ಸರಳ ಪ್ರಯತ್ನಗಳ ಹೊಳಹುಗಳಿರುತ್ತವೆ. ಹಾಗಾಗಿ ಪ್ರಸ್ತುತ ಪ್ರಕಟವಾಗಿರುವ ಲಂಕೇಶರ ಆಯ್ದ ಕೆಲವು ಲೇಖನಗಳನ್ನು "ಸಾಹಿತಿ ಸಾಹಿತ್ಯ ವಿಮರ್ಶೆ" ಎಂದು ಕರೆದಿರುವುದು ತಮಾಶೆಯಾಗಿದೆ ಅನಿಸುತ್ತದೆ. ಇದೇ ಪುಸ್ತಕದೊಂದಿಗೇ ಪ್ರಕಟವಾಗಿರುವ ಟೀಕೆ-ಟಿಪ್ಪಣಿ (ಸಂಪುಟ-೩) ಗಮನಿಸಿದರೆ, ಅಥವಾ ಈ ಹಿಂದಿನ ಟೀಕೆ-ಟಿಪ್ಪಣಿ ಸಂಪುಟ ೧ ಮತ್ತು ೨ ರಲ್ಲಿ ಕಾಣಿಸಿಕೊಂಡ ಅನೇಕ ಲೇಖನಗಳ ಪುನರಾವರ್ತನೆ ಈ ಪುಸ್ತಕದಲ್ಲಿ ಅನಿವಾರ್ಯವಾಗಿರುವುದನ್ನು ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ.
ಇಷ್ಟಾಗಿಯೂ ಇದೊಂದು ಅಪೂರ್ವ ಕೃತಿಯಾಗಿಯೇ ಸಾಹಿತ್ಯ ಪ್ರಿಯರನ್ನು, ಬರಹಗಾರರನ್ನು, ವಿಮರ್ಶಕರನ್ನು ಮತ್ತು ಮುಖ್ಯವಾಗಿ ಪತ್ರಿಕೋದ್ಯಮ, ಸಾಹಿತ್ಯ ಎಂದೆಲ್ಲ ತೊಡಗಿಕೊಳ್ಳಬಯಸುವ ಯುವಜನಾಂಗವನ್ನು ಆಕರ್ಷಿಸಬೇಕಾದುದು ಬಹಳ ಮುಖ್ಯ. ಈ ಲೇಖನಗಳನ್ನು ಸಂಯೋಜಿಸಿ ವಿವರವಾದ ಒಳನೋಟಗಳುಳ್ಳ ಮುನ್ನುಡಿಯನ್ನು ಬರೆದಿರುವ ಡಾ. ವಿ.ಎಸ್.ಶ್ರೀಧರ ಅವರ ಕಾಳಜಿ ಈ ದೃಷ್ಟಿಯಿಂದ ತುಂಬ ಅಭಿನಂದನಾರ್ಹವಾದುದು.
ವಿಪರ್ಯಾಸವೆಂದರೆ ಮುದ್ರಣದೋಷ, ಅಚ್ಚಿನ ತಪ್ಪುಗಳ ಬಗ್ಗೆ ಪದೇ ಪದೇ ಖಾರವಾಗಿ ಬರೆಯುತ್ತಿದ್ದ, ಎಡಪುಟದ ಮೇಲೆ ಕೃತಿಯ ಹೆಸರು, ಬಲಪುಟದ ಮೇಲೆ ಅಧ್ಯಾಯ/ಲೇಖನದ ತಲೆಬರಹ ಇರಬೇಕು ಇತ್ಯಾದಿಯಾಗಿ ಬಯಸುತ್ತಿದ್ದ ಲಂಕೇಶರ ಪುಸ್ತಕವೇ ದರಿದ್ರ ಅಚ್ಚಿನ ದೋಷ, ಮುದ್ರಣದೋಷಗಳಿಂದ ತುಂಬಿರುವುದು! ಲಂಕೇಶರ ಬರಹಗಳ ಮಹತ್ವ ತಿಳಿದವರು ಇದನ್ನೆಲ್ಲ ಹೇಗೋ ಸಹಿಸಿಕೊಂಡು ಓದುತ್ತಾರೆ, ನಿಜ. ಆದರೆ ಹೊಸಬರಿಗೆ ಲಂಕೇಶರನ್ನು ತಲುಪಿಸುವ ಕ್ರಮವಂತೂ ಇದಲ್ಲ.
ಸಾಹಿತಿ ಸಾಹಿತ್ಯ ವಿಮರ್ಶೆ
ಪಿ. ಲಂಕೇಶ್ (ಸಂಯೋಜನೆ: ಡಾ.ವಿ.ಎಸ್.ಶ್ರೀಧರ)
ಲಂಕೇಶ್ ಪ್ರಕಾಶನ, ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು-560004. (ಪೋ:26676427)
ಪುಟಗಳು: 472+xxiii ಬೆಲೆ: ಮುನ್ನೂರು ರೂಪಾಯಿ.

1 comment:

Anonymous said...

ಪ್ರಿಯ ನರೇಂದ್ರ ಪೈ
ನಿಮ್ಮ ಬ್ಲಾಗ್ ಈಗ ಕಣ್ಣಿಗೆ ಬಿತ್ತು. ಹರೀಶ್ ಕೇರ ಬ್ಲಾಗ್ ನೋಡುತ್ತಿದ್ದಾಗ. ತುಂಬ ಚೆನ್ನಾಗಿದೆ. ಗಂಭೀರವಾಗಿ ವಿಮರ್ಶಿಸುತ್ತಿದ್ದೀರಿ. ಮತ್ತೆ ಮತ್ತೆ ಬರುತ್ತಿರುತ್ತೇನೆ
ಗುಡ್ ಲಕ್
-ಜೋಗಿ