Sunday, July 13, 2008

ಮನಸುಖರಾಯನ ಮನೋಲೋಕಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ. ಅಷ್ಟೇ ಗಾಢವಾಗಿ ಭಾವನಾತ್ಮಕವಾಗಿ ಕೂಡ ನಮ್ಮನ್ನು ಕಲಕುವ ಬರಹಗಳಿವೆ ಇಲ್ಲಿ. ಬರಹಗಾರ ಬರೆಯುತ್ತ ಬರೆಯುತ್ತ ಕಣ್ಣು ಹನಿಗೂಡಿದಲ್ಲೆಲ್ಲ ನಮ್ಮ ಮೂಗಿನಲ್ಲೂ ಅದರ ಲಕ್ಷಣಗಳೆಲ್ಲ ಜಿನುಗುತ್ತವೆ! ಮುಖ್ಯ ನಾನು ಈ ಪುಸ್ತಕದ ಬಗ್ಗೆ ಬರೆಯ ಹೊರಟಿದ್ದೇ ಇಲ್ಲಿನ ತ್ರಯಸ್ಥ ಎಂಬ ಕತೆ ನನ್ನನ್ನು ಅಲ್ಲಾಡಿಸಿದ ಬಗೆಯಿಂದಾಗಿ.
ಪ್ರತಿಯೊಬ್ಬ ಸೂಕ್ಷ್ಮಮನಸ್ಸಿನ ಮನುಷ್ಯನನ್ನೂ ಈ ಕತೆ ಗಾಢವಾಗಿ ಕಲಕುತ್ತದೆ. ನಿಮ್ಮ ಬಾಲ್ಯವನ್ನು ಮುಟ್ಟಿ ಹದಿಹರಯದ, ತಾರುಣ್ಯದ ಹಳೆಯ ಗಾಯವನ್ನು ಮೃದುವಾಗಿ ಸವರಿ ಮಾತನಾಡುವ ಈ ಕತೆಯಲ್ಲಿ ಶ್ರೀನಿವಾಸ ವೈದ್ಯರು ಪ್ರತಿಯೊಬ್ಬನ ಬಾಲ್ಯವನ್ನೂ ಮುಟ್ಟಿದ ರೀತಿ ಅವರಿಗೇ ವಿಶಿಷ್ಟವಾದದ್ದು. ಕನ್ನಡದಲ್ಲಿ ಆತ್ಮರತಿಯ ಅಥವಾ ನಾಸ್ಟಾಲ್ಜಿಯಾದ ಸ್ಪರ್ಶವಿಲ್ಲದೆ ಹೀಗೆ ಯಾರಾದರೂ ಬಾಲ್ಯ, ತಾರುಣ್ಯ, ಯೌವನ ಮತ್ತು ನಡುವಯಸ್ಸಿನ ವರೆಗೆ ಒಂದು ಕತೆಯನ್ನು ಹಾಯಿಸಿ ತಂದಿದ್ದಾರೆಯೇ ಎನ್ನುವಂತಿದೆ ಈ ಕತೆ. ಈ ಕತೆಯನ್ನು ನೀವೆಲ್ಲರೂ ಓದಬೇಕು ಎಂದು ನನಗೆ ತೀವೃವಾಗಿ ಅನಿಸುತ್ತಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಇವತ್ತು ಮಾನವನ ಹೃದಯದ ಆಳದ ಸತ್ ಅನ್ನು ಮುಟ್ಟಿ ಅವನನ್ನು ಇನ್ನಷ್ಟು ಇನ್ನಷ್ಟು ಮನುಷ್ಯನನ್ನಾಗಿಸುವ ಪ್ರತಿಯೊಂದು ಕತೆ, ಕಾದಂಬರಿ, ಬರಹ ಎಲ್ಲರನ್ನೂ ತಲುಪಬೇಕು. ಇದರ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಚಿತ್ತಾಲರು ಒಮ್ಮೆ ಹೇಳಿದ್ದರು, ಹೆಚ್ಚು ಹೆಚ್ಚು ಮನುಷ್ಯನಾಗುವುದಕ್ಕೆ ಸಾಹಿತ್ಯ ಬೇಕು ಎಂದು. ಅದು ನಿಜ, ಸಾಹಿತ್ಯದ ಮೂಲ ಸೆಲೆಯೇ ಅದು. ಆದರೆ, ಮೂಲದಲ್ಲೂ ಫಲದಲ್ಲೂ ಅದು ಸಫಲವಾಗುತ್ತಿರುವುದು ಕಡಿಮೆಯೇ. ಅಷ್ಟರಮಟ್ಟಿಗೆ ಸರಿ ಸುಮಾರು ನೂರಿಪ್ಪತ್ತು ಪುಟಗಳ ಈ ಪುಟ್ಟ ಪುಸ್ತಕ ಹಲವು ಬಾರಿ ನಮ್ಮ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ, ಹೃದಯವನ್ನು ಆರ್ದ್ರಗೊಳಿಸುತ್ತದೆ.
ಇಷ್ಟನ್ನು ಹೇಳಿದ ಮೇಲೆ ವೈದ್ಯರ ಈ ಶೈಲಿಯ ಬಗ್ಗೆಯೇ ಎರಡು ಮಾತು. ಹಾಗೆ ನೋಡಿದರೆ ನಾನು ಶ್ರೀನಿವಾಸ ವೈದ್ಯರ ಕಾದಂಬರಿ 'ಹಳ್ಳ ಬಂತು ಹಳ್ಳ' (ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ), 'ಅಗ್ನಿಕಾರ್ಯ' ಮತ್ತು ಇತ್ತೀಚಿನ 'ತಲೆಗೊಂದು ತರತರ' ಯಾವುದನ್ನೂ ಇನ್ನೂ ಓದಿಲ್ಲ. ಹಾಗೆ ಒಬ್ಬ ಲೇಖಕನನ್ನು ಪೂರ್ತಿಯಾಗಿ ಓದದೆ (ಪ್ರಕಟಿತ ಕೃತಿಗಳ ಮಟ್ಟಿಗೆ, ಬರಲಿರುವ ಕೃತಿಗಳನ್ನು ಬಿಡಿ!) ಹೀಗೆ ಶೈಲಿಯ ಬಗ್ಗೆ, ಧೋರಣೆಯ ಬಗ್ಗೆ ಮಾತನಾಡುವುದು ತಪ್ಪು. ಆದರೂ ಕೇವಲ ಕಲಿಯುವ ಹಂಬಲದಿಂದ ಇದನ್ನು ತಡಕುತ್ತಿದ್ದೇನೆ. ಮತ್ತಿದು ಕೇವಲ ವೈದ್ಯರ ಕುರಿತಾಗಿ ಇಲ್ಲ.
ವೈದ್ಯರ ಶೈಲಿಯಲ್ಲಿ ಒಂಥರಾ ಅಸಾಹಿತ್ಯಿಕ ನೆಲೆಯಿಂದ ಮಾತನಾಡುತ್ತಿರುವ ಪ್ರಜ್ಞೆ, ಆ ಪ್ರಜ್ಞೆಗೆ ಸಂಬಂಧಿಸಿದ ಇನ್ನೇನೋ ಇದೆ. ಹಾಗೆಯೇ ಈ ಬರಹಗಳಲ್ಲಿ ಒಂದು ಆತ್ಮಕಥಾನಕದ ಛಾಯೆ ಕೂಡ ಇದೆ. ಈ ಎರಡು ಕಾರಣಗಳಿಂದಾಗಿಯೇ ಈ ಶೈಲಿಗೆ ಅಂಟಿಕೊಂಡ ಎರಡು ವಿಲಕ್ಷಣ ಸ್ತರಗಳಿವೆ. ಅದು, ಒಂದೋ ಕೆಲವು ಕಡೆ ಅದು ವಿಶಿಷ್ಟ ಉಡಾಫೆಯ ನೆರವನ್ನು ಪಡೆಯುತ್ತದೆ ಅಥವಾ ಇನ್ನು ಕೆಲವು ಕಡೆ ಸ್ವಲ್ಪ ಹೆಚ್ಚೇ ಅನಿಸುವ ಸ್ವ-ವಿಮರ್ಶೆಯ (ಇದು ಕೆಲವೊಮ್ಮೆ ತನ್ನನ್ನೆ ಗೇಲಿ ಮಾಡಿಕೊಳ್ಳುವ ಮಟ್ಟಕ್ಕೂ ಹೋಗುತ್ತದೆ) ನೆಲೆಯಲ್ಲಿ ಮಾತನಾಡುತ್ತದೆ. ಇವೆರಡರ ಹಂಗೂ ಇಲ್ಲದೆಯೇ ವೈದ್ಯರು ಮಾತನಾಡುವುದು ಹೇಗಿರುತ್ತಿತ್ತೋ ಎನಿಸುವ ಒಂದು ಸಾಧ್ಯತೆ ಮಾತ್ರ ಹಾಗೆಯೇ ಉಳಿದೇ ಬಿಡುತ್ತದೆ. ನಾನು ಇಲ್ಲಿ ಹೆಸರಿಸಿದ ವೈದ್ಯರ ಮುಂದಿನ ಕೃತಿಗಳಲ್ಲಿ ಇದೆಲ್ಲ ಇಲ್ಲದಿರುವ ಸಾಧ್ಯತೆ ಇದೆ.
ಗಮನಿಸಬೇಕಾದ ಸಂಗತಿಯೆಂದರೆ, ಇದು ತೇಜಸ್ವಿಯವರ ಕೃತಿಗಳಲ್ಲಿ, ಗೊರೂರರ ಬೈಲಹಳ್ಳಿ ಸರ್ವೆ, ನಮ್ಮೂರ ರಸಿಕರು ಕೃತಿಗಳಲ್ಲಿ ನಾವು ಸಾಧಾರಣವಾಗಿ ಕಾಣುವ, ದೈನಂದಿನ ಬದುಕಿನ ಹಿನ್ನೆಲೆಯಲ್ಲೆ ಪ್ರವೇಶಿಸುವ ಹಳ್ಳಿಗರ ಪಾತ್ರ ಚಿತ್ರಣದಲ್ಲಿನ ಲಘುವಾದ ಲಹರಿ ಅಲ್ಲ. ಒಮ್ಮೆ ಹಿರಿಯ ಸಾಹಿತಿಯೊಬ್ಬರು ನನ್ನೊಂದಿಗೆ ಮಾತನಾಡುತ್ತ ತೇಜಸ್ವಿಯವರು ಮನುಷ್ಯರನ್ನು ಹುಳುಗಳಂತೆ ಕಾಣುವ ಶೈಲಿ ಬಳಸುತ್ತಾರೆ ಎಂದಿದ್ದರು. ತೇಜಸ್ವಿಯವರು ಒಬ್ಬ ಯಂಕ್ಟ, ಕರಿಯ, ಪ್ಯಾರ, ಮಂದಣ್ಣರನ್ನು ತಮ್ಮಷ್ಟೇ ಮನುಷ್ಯರೆಂದು ಕಾಣುವುದರಿಂದಲೇ ಅವರೊಂದಿಗೆ ಒಂದು ತಾದ್ಯಾತ್ಮಭಾವದಿಂದ ಸಾಧಿಸಿದ ಸಲಿಗೆ ಅದು, ಪ್ರೀತಿಮೂಲವಾದದ್ದು. ಅದರಲ್ಲಿ ತೇಜಸ್ವಿಯವರ ಅಸ್ವಾಭಾವಿಕ ತಂತ್ರಗಾರಿಕೆ ಏನಿರಲಿಲ್ಲ. ಇದು ಅರ್ಥವಾಗಬೇಕಾದರೆ ನಾವು ಲಂಕೇಶರ 'ಟಿ ಪ್ರಸನ್ನನ ಗೃಹಸ್ಥಾಶ್ರಮ' ಅಥವಾ 'ಬಿರುಕು' ಮುಂತಾದ ನಾಟಕ, ಕಾದಂಬರಿಗಳನ್ನು ಗಮನಿಸಬೇಕು. ತೇಜಸ್ವಿಯವರ 'ಸ್ವರೂಪ'ದ ಹೇಮಂತ ಕೂಡ ಸ್ವಲ್ಪ ಮಟ್ಟಿಗೆ ಈ ಪಾತ್ರಗಳನ್ನು ಹೋಲುತ್ತಾನೆ. ಅಡಿಗರ `ರಾಮನವಮಿಯ ದಿವಸ' ಅಥವಾ `ಕೂಪಮಂಡೂಕ'ದಂಥ ಕವನಗಳಲ್ಲಿ ಇವನು ಸ್ಥಾಯಿಯಾಗಿ ನಿಲ್ಲುತ್ತಾನೆ. ಶಾಂತಿನಾಥ ದೇಸಾಯಿಯವರ ಕಾದಂಬರಿಗಳಲ್ಲಿ ಇಂಥವೇ ಪಾತ್ರದ ಕೊಂಚ ಸುಧಾರಿತ ತಳಿಗಳು ಇವೆ. ಇಲ್ಲಿ ಮನುಷ್ಯನ ದೈನಂದಿನಗಳ ಕ್ಷುದ್ರತೆಯನ್ನೇ ವಿವರ ವಿವರವಾಗಿ ಬಿಡಿಸಿಟ್ಟು ಅವನ ಅಂತರಂಗದ ಕೊಳಕನ್ನು, ನೀಚತನವನ್ನು, ಯೋಚನೆಗಳ ಅಶ್ಲೀಲತೆಯನ್ನು, ಅವನ ವ್ಯಕ್ತಿತ್ವದ, ಅಂತರಂಗದ ಸಾತ್ವಿಕ ಮತ್ತು ತಾಮಸದ ನಡುವಿನ ಆಳವಾದ ಕೊರಕಲನ್ನು ಒಡೆದು ತೋರಿಸಿ, ಹಾಗೆ ತೋರಿಸುವ ಮೂಲಕ ಮನುಷ್ಯನ ಕುರಿತ ಹೊಸ ಸತ್ಯಗಳನ್ನು ಶೋಧಿಸುವ ಉದ್ದೇಶ ಇದೆ. ಆದರೆ ಎಲ್ಲೋ ಒಂದು ಕಡೆ ಮನುಷ್ಯನೆಂದರೆ ಇದೇ ಎನ್ನುವ ಧಾಟಿ ಪಡೆದಿದ್ದೇ ನವ್ಯದ ತೊಡಕಾಯಿತು. ಡಾಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿಯಲ್ಲಿ ಈ ಕುರಿತ ಪುಟ್ಟ ಚರ್ಚೆ ಕೂಡ ಇದೆ. ತೇಜಸ್ವಿಯವರು ಮುಂದೆ `ಕರ್ವಾಲೋ' ಅಥವಾ `ಚಿದಂಬರ ರಹಸ್ಯ'ಕ್ಕೆ ಬರುವ ಹೊತ್ತಿಗೆ ಮನುಷ್ಯನ ದೈನಂದಿನಗಳ ಮೂಲಕವೇ ಅವನನ್ನು ನೋಡುತ್ತ ಅದನ್ನು ಅವನ ಕ್ಷುದ್ರತೆ ಎಂದುಕೊಂಡು ನೋಡದೆ, ಆ ದೃಷ್ಟಿಯಿಂದ ಅದನ್ನು, ಅವನನ್ನು ಚಿತ್ರಿಸದೆಯೇ ಬದುಕನ್ನು ಶೋಧಿಸುವ ಮನೋಧರ್ಮ ಪಡೆದರು. ನವ್ಯ ಮಾಗಿದ ಹಾದಿಯಾಗಿ ಇದನ್ನು ಇವತ್ತು ಎಲ್ಲರೂ ಬಲ್ಲರು.
ಆದರೆ, ಹೆಚ್ಚಿನ ಸಂದರ್ಭದಲ್ಲಿ ಈ ಬಗೆಯ ಕತೆ ಕಾದಂಬರಿಗಳ ಪ್ರಧಾನ ಪಾತ್ರ ಕಾರ್ಟೂನಿನಂತೆ ಕಾಣುವುದು ಯಾಕೆ ಎನ್ನುವುದನ್ನು ಯೋಚಿಸುವಾಗ ಈ ಮಾರ್ಗದ ಕೆಲವು ತೊಡಕುಗಳ ಬಗ್ಗೆ ಯೋಚಿಸುವುದು ಕುತೂಹಲಕರ ಅನಿಸಿತು.
ನಾನು ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಸರಳ ಮತ್ತು ನೇರ ಹಾದಿಯೆಂದರೆ ನನ್ನನ್ನೇ ನಾನು ಅರ್ಥಮಾಡಿಕೊಳ್ಳುವುದು. ಕೊನೆಗೂ ನಮಗೆ ಸಾಧ್ಯವಿರುವ ಹಾದಿ ಕೂಡ ಇದೊಂದೇ. ಹಾಗಿರುತ್ತ ನಾನು ಎಲ್ಲೆಲ್ಲಿ ಮನುಷ್ಯ ಹಾಗೆ ಮನುಷ್ಯ ಹೀಗೆ ಎನ್ನುತ್ತೇನೋ ಅದೆಲ್ಲ ನಾನು ಹೀಗೆ, ನಾನು ಹಾಗೆ ಕೂಡ ಆಗಿರುತ್ತದೆ, ಸರಳವಾಗಿ ನಾನೂ ಒಬ್ಬ ಮನುಷ್ಯನೇ ಆಗಿರುವುದರಿಂದ. ಮನುಷ್ಯನ ವ್ಯಕಿತ್ವದ ದ್ವಂದ್ವಮಯತೆಯನ್ನು, ಅವನ ಎಡಬಿಡಂಗಿತನವನ್ನು, ಪ್ರದರ್ಶನದ ವ್ಯಕ್ತಿತ್ವ ಮತ್ತು ಅವನ ಒಂಟಿ ಕ್ಷಣಗಳ, ಅವನ ಕತ್ತಲಿನ ಬದುಕಿನ, ಅವನು ತನ್ನನ್ನು ಯಾರೂ ಗಮನಿಸುತ್ತಿಲ್ಲ ಮತ್ತು ಇದೆಲ್ಲ ಯಾರಿಗೂ ಗೊತ್ತಾಗುವ ಛಾನ್ಸೇ ಇಲ್ಲ ಎಂದು ಖಂಡಿತವಾಗಿ ನಂಬಿದಾಗಿನ ವ್ಯಕ್ತಿತ್ವ ಏನಿದೆ ಎರಡನ್ನೂ ಕುರಿತು ಬರೆಯುವಾಗ ಅದು ಇನ್ಯಾರದೋ ಬದುಕಿನ ಕುರಿತಾಗಿ ಇರುವುದಿಲ್ಲ. ಇನ್ಯಾರದೋ ಬದುಕಿನ ಈ ಇನ್ನೊಂದು ಅರ್ಧಭಾಗ ನಮಗೆ ಯಾವತ್ತೂ ಕಾಣಲು ಸಿಗದ ಭಾಗ. ನಮ್ಮದು ಮಾತ್ರ ನಮಗೆ ಗೊತ್ತಿರುವುದು. ಹಾಗಾಗಿಯೇ ಅದು ತನ್ನನ್ನು ತಾನು ಕಂಡುಕೊಂಡ ಬಗೆಯೇ ಆಗಿರುತ್ತದೆ. ಈ ಕುರಿತ ಕೆಟ್ಟ ಕುತೂಹಲದಲ್ಲಿ ನನಗೆ ಆಸಕ್ತಿ ಇಲ್ಲ, ಅದನ್ನು ಉದ್ದೀಪಿಸುವುದೂ ನನ್ನ ಉದ್ದೇಶವಲ್ಲ. ಆದರೆ, ಹೀಗೆ ತನ್ನನ್ನೆ ತಾನು ನಗ್ನನಾಗಿ ತೆರೆದುಕೊಳ್ಳಲು ಒಬ್ಬ ಸಾಹಿತಿಗೆ ಸಾಕಷ್ಟು `ಅರಿವು' ಇರಬೇಕಾಗುತ್ತದೆ ಮತ್ತು ಆ ಹೊತ್ತಿಗೆ ಬದುಕಿನ ಕುರಿತ ಅವನ ನಿಲುವುಗಳು ಅವನಿಗೆ ಸ್ಪಷ್ಟಗೊಂಡಿರಬೇಕಾಗುತ್ತದೆ. ಇನ್ನೊಬ್ಬರ ಅನುಕರಣೆಯಿಂದ, ಇನ್ಯಾರದೋ ಖುಶಿಗಾಗಿ ಅಥವಾ ಕೇವಲ ಬಹುಮತದ ಮೋಡಿಗೆ ರೂಢಿಸಿಕೊಂಡ ನಿಲುವುಗಳಲ್ಲೇ ಕೊಳೆಯುತ್ತ ಇರುವ ವ್ಯಕ್ತಿಗೆ ಇದು ಅರ್ಥಕೂಡ ಆಗಲಿಕ್ಕಿಲ್ಲ.
ಹಾಗೆಯೇ ನಾನಿದನ್ನು ಮಾಡುವ ಮೊದಲು ನನ್ನ ಅಂತರಂಗಕ್ಕೆ ಜಗತ್ತಿನ ಇತರರು ನನ್ನಂತೆಯೇ ಎಂಬುದು ಅರ್ಥವಾಗಿರಬೇಕಾಗುತ್ತದೆ ಮತ್ತು ಅರ್ಥವಾಗಿಯೂ ನನಗೆ ಅವರನ್ನೆಲ್ಲ ಕೇವಲ ಪ್ರೀತಿಯಿಂದ ಕಾಣುವುದಕ್ಕೆ ಸಾಧ್ಯವಿರಬೇಕಾಗುತ್ತದೆ. ನನಗೆ ನಾನು ಅರ್ಥವಾಗಿದ್ದರೆ ಮಾತ್ರ ಇನ್ನೊಬ್ಬರೂ ಅರ್ಥವಾಗುವ ಸಾಧ್ಯತೆ ತೆರೆದುಕೊಳ್ಳುತ್ತದೆ ಎನ್ನುವುದು ಒಂದು; ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದೆಂದರೇ ಅವರನ್ನು ಪ್ರೀತಿಸುವುದು ಎನ್ನುವುದು ಇನ್ನೊಂದು. ಇದರ ಹೊರತಾಗಿ ನನ್ನಲ್ಲಿ ಸಿನಿಕತನ, ದ್ವೇಷ, ಅಸಮಾಧಾನ, ಅಸೂಯೆ, ಸಂಶಯ ಒಂದಿಷ್ಟಾದರೂ ಉಳಿದಿದ್ದರೆ ಇದು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಈ ಇಡೀ ಜಗತ್ತನ್ನು ಕೇವಲ ಪ್ರೀತಿಯಿಂದ ಕಾಣಬಲ್ಲವರಿಗೆ ಮಾತ್ರ ಯಾವತ್ತೂ ಸೃಜನಶೀಲ ಕ್ರಿಯೆ ಸುಲಭಸಾಧ್ಯವಾಗುವುದು ಮತ್ತು ಇನ್ನುಳಿದವರಿಗೆ ಬರೆಯುವುದು ಸುಲಭದ `ಕೆಲಸ'ವಾಗಿ ಬಿಡುವುದೂ.
ಇನ್ನೊಂದು, ಹೆಚ್ಚಿನ ಓದುಗರು ನಾಳೆ ದಿನ, "ಓಹ್, ಈ ಪಾತ್ರ ಯಾರದು ಅಂತ ಗೊತ್ತಾಯ್ತು ಮಾರಾಯ, ಹ್ಹಿಹ್ಹಿಹ್ಹಿ" ಎನ್ನುವ ಸಂದರ್ಭ ಕಳೆದುಕೊಳ್ಳಲು ತಯಾರಿರುವುದಿಲ್ಲ. ಮನೋಲೋಕದ ವಿದ್ಯಮಾನಗಳ ಕುರಿತು ಕತೆ ಕಾದಂಬರಿ ಬರೆಯುವವರನ್ನು ಮಾನಸಿಕವಾಗಿ ವಿಕ್ಷಿಪ್ತರು ಎಂದು ಕರೆದ ಉದಾಹರಣೆಗಳೂ ನಮ್ಮಲ್ಲಿ ಇಲ್ಲದಿಲ್ಲ, ಕೆಲವೊಮ್ಮೆ ಹೊಗಳಿಕೆಯಾಗಿ, ಇನ್ನು ಕೆಲವೊಮ್ಮೆ ಅದೂ ಇದೂ ಎರಡೂ ಆಗಿರುವ ಹಾಗೆ. ಹಾಗಿರುತ್ತ ವ್ಯಕ್ತಿಗತ ಬದುಕಿನ ವಿವರಗಳನ್ನು ಕೆಲವು ಪತ್ತೇದಾರರು ಹುಡುಕಿ ತೆಗೆದೇ ತೆಗೆಯುತ್ತಾರೆ. ಉದಾಹರಣೆಗೆ ಗೋಪಾಲಕೃಷ್ಣ ಅಡಿಗರ ಆತ್ಮಕತೆಯಂತಿರುವ `ನೆನಪಿನ ಗಣಿಯಿಂದ' ಓದಿದವರಿಗೆ ಅವರ `ಹುಲಿರಾಯ ಮತ್ತು ಇತರ ಕತೆಗಳು' ಸಂಕಲನ ಅನೇಕ ಪಾತ್ರಗಳು ಯಾರೆಂದು ಸ್ಪಷ್ಟವಾಗಿ ಗೊತ್ತಾಗಿಬಿಡುತ್ತದೆ! ಭೈರಪ್ಪನವರಂತೂ `ಭಿತ್ತಿ' ಬರೆಯುವಾಗ ಯಾವುದು ತಮ್ಮ ಬದುಕಿನ ಅನುಭವ, ಯಾವುದು ತಮ್ಮ ಕಾದಂಬರಿಗಾಗಿ ಕಲ್ಪಿಸಿದ ಬದುಕು ಎಂಬುದನ್ನು ಹೇಳುವುದಕ್ಕೇ ಇದನ್ನು ಬರೆದೆ ಎಂಬರ್ಥದ ಮಾತುಗಳನ್ನಾಡಿದ್ದರು. ಲಂಕೇಶರು ತಮ್ಮ `ಹುಳಿಮಾವಿನ ಮರ'ದಲ್ಲಿ ಈಗ, ಇಷ್ಟೆಲ್ಲ ವರ್ಷಗಳ ನಂತರ ಯಾವುದು ನಿಜಕ್ಕೂ ನಡೆಯಿತೋ ಯಾವುದನ್ನು ತಮ್ಮ ಮನಸ್ಸೇ ಕಲ್ಪಿಸಿ ನಿಜವಾಗಿ ನಡೆದಿದ್ದು ಎಂದು ಬಲವಾಗಿ ನಂಬಿತೋ ಹೇಳುವುದು ಕಷ್ಟ ಎನ್ನುತ್ತಾರೆ!
ಹಾಗಾಗಿ ತನ್ನನ್ನು ತನಗೆ ತೋರಿಸಲಿರುವ ಆ ಪಾತ್ರವನ್ನು ನಮ್ಮ ಹೆಚ್ಚಿನ ಬರಹಗಾರರು ಸಂಕೋಚದಿಂದಲೇ ಕಾರ್ಟೂನುಗಳನ್ನಾಗಿಸಿ ನೋಡುತ್ತ ಬಂದಿದ್ದಾರೆ ಅನಿಸುತ್ತದೆ. ಅನನ್ಯ ಅಪರೂಪದ ಮಾನವೀಯ ಗುಣಗಳಾಗಬಹುದಾಗಿದ್ದ ಅವನ ಪ್ರೇಮ, ಅವನ ಮುಗ್ಧತೆ, ಅವನ ಪ್ರಾಮಾಣಿಕತೆ, ಅವನ ಮೂರ್ಖತನ, ಅವನ ಪೆದ್ದುತನ, ಬೋದಾಳತನದಿಂದ ಕೂಡಿದ ತ್ಯಾಗಗಳು ಇಲ್ಲಿ ಸರಳವಾಗಿ ಒಂದು ವ್ಯಂಗ್ಯ ಮಿಶ್ರಿತ ನಗುವಿಗೆ ಭಾಜನವಾಗುತ್ತದೆ. ಹೀಗಾಗದೇ ಹೋದಲ್ಲಿ ಅದು ಸ್ವ-ಪ್ರದರ್ಶನದ ಅಥವಾ ಹೀರೋಯಿಸಂನ ಮಟ್ಟದಲ್ಲಿ ಉಳಿದುಬಿಡುತ್ತದೆ.
ಕುತೂಹಲದ ಸಂಗತಿಯೆಂದರೆ ನಮ್ಮ ರಾಘವೇಂದ್ರ ಪಾಟೀಲ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಮುಂತಾದವರ ಕತೆಗಳಲ್ಲಿ ಕೂಡ ಬರುವ ಇದೇ ಪಾತ್ರ ಇವತ್ತಿನ ವೇಗದ ಬದುಕಿನ ಹೊರೆಹೊತ್ತ ಮನುಷ್ಯನಿಗೆ ಸಂವಾದಿಯಾಗಿ ನಿಂತು ನಾಗರಿಕ ಜಗತ್ತಿನ ಹಣದ ಮದದ ಮುಂದೆ ಒಬ್ಬ ಪೆದ್ದ, ಅಮಾಯಕ, ಮೂರ್ಖ,ಮುಗ್ಧ ಮತ್ತು ಅಸಡ್ಡಾಳ ನಿರುಪಯುಕ್ತ ಜೀವಿಯಾಗಿ ಕಾಣಿಸಿಕೊಂಡೂ ಹೊಸತೇ ಆದ ಮತ್ತು ವಿಶಿಷ್ಟವೂ ಆದ ಒಂದು ಜೀವನ ದರ್ಶನ ನೀಡುವುದು!
ಕಾರಂತರ ಚೋಮನೋ, ಭಾರತೀಸುತರ ಮೋಚಿಯೋ ಪಡೆದ ಜೀವವಿಕಾಸದ ವಿವಿಧ ಹಂತಗಳಂತಿವೆ ಇದೆಲ್ಲ!
ಶ್ರೀನಿವಾಸ ವೈದ್ಯರು ಹರಟೆ ಎಂದು ಇವನ್ನೆಲ್ಲ ಕರೆದಿರುವುದರಿಂದಲೇ ಈ ಕಥಾನಕದ ನಿರೂಪಣೆಯಲ್ಲಿ ನುಸುಳಿರುವ ಅನಗತ್ಯ ಎನಿಸಬಹುದಾದ ವಿವರಗಳಿಗೆ ರಿಯಾಯಿತಿ ಪಡೆಯುತ್ತಾರೆ ಮಾತ್ರವಲ್ಲ, ತಾನು ಪಟ್ಟಾಂಗಕ್ಕೆ ಕೂತವ, ಹೇಳಲೇ ಬೇಕಿದ್ದದ್ದನ್ನು ಹೇಳುವಾಗ ಅಷ್ಟಿಷ್ಟು ಸೇರಿಸಿ ಮಾತನಾಡಿದರೆ (ಎಂಬ ಹಿಂಜರಿಕೆಯಿಂದ) ನೀವೇ ಸುಧಾರಿಸಿಕೊಳ್ಳಿ ಎನ್ನುವ ಶೈಲಿಯಲ್ಲೇ ಮಾತನಾಡುತ್ತಾರೆ ಮತ್ತು ನಡುವೆ ಎಲ್ಲಿ ತನ್ನದು ಅತಿ ವಾಚಾಳಿತನವಾಗುತ್ತಿದೆಯೋ ಎನ್ನುವ ಹಿಂಜರಿಕೆಯನ್ನೂ ಅನುಭವಿಸುತ್ತಾರೆ. ಇದು ಅವರ ಸರಳ ಸಜ್ಜನಿಕೆಯ ಪ್ರಾಮಾಣಿಕ ನಿವೇದನೆಯಾಗಿರುವುದರಿಂದಲೇ ಓದುಗ ಕೂಡ ಇದನ್ನೆಲ್ಲ ಅನಿವಾರ್ಯವಾಗಿ ಅನುಭವಿಸುತ್ತ ಹೋಗಬೇಕಾಗುತ್ತದೆ.
ಮನಸುಖರಾಯನ ಮನಸು, ಮನೋಹರ ಗ್ರಂಥ ಮಾಲಾ, ಧಾರವಾಡ. ಬೆಲೆ: ಎಪ್ಪತ್ತೈದು ರೂಪಾಯಿಗಳು.


No comments: