Thursday, July 17, 2008

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್


ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.


ಒಂದು ಘಳಿಗೆ ಈ ಅಂಶವನ್ನು ಮರೆತು ನೋಡಿದರೆ ಜಯಂತರು ಸೃಷ್ಟಿಸುವ ಪಾತ್ರಗಳು, ಅವರು ನಿರ್ಮಿಸುವ ಊರು, ಕೇರಿಗಳು, ಸನ್ನಿವೇಶಗಳು ಯಾವುದೂ ಇಂದಿನ, ನಮ್ಮ ಸುತ್ತಮುತ್ತಿನ ಜನಜೀವನಕ್ಕೆ ಪ್ರಸ್ತುತವೇ ಅಲ್ಲ ಎನಿಸಿ ಅವೆಲ್ಲ ಒಂದು ಅಸಂಗತ ಲೋಕದ ಚಿತ್ರಗಳು ಎನಿಸಬಹುದು. ನಮಗೆ ಒಬ್ಬ ಇಂದ್ರನೀಲ, ಒಬ್ಬಳು ಮಧುಬನಿ, ಭಾಮಿನಿ, ರೂಪಕ್ ರಾಥೋಡ್ ಕಣ್ಣಿಗೆ ಬೀಳುವುದೂ ಕಷ್ಟವಾಗಿರುವ ಈ ಸುಡುಬಿಸಿಲಿನಂಥ ದಿನಗಳಲ್ಲಿ ಜಯಂತ್‌ಗೆ ಹೇಗೆ, ಎಲ್ಲಿ ಈ ತಂಪಾದ ಮಂದಾನಿಲದಂಥ ಮಂದಿ ಸಿಕ್ಕರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಸರಳವಿಲ್ಲ. ಕತೆಗಾರನ ಸಂವೇದನೆಯ ಸ್ತರಗಳು, ಆತನ ಜೀವನದೃಷ್ಟಿ ಮತ್ತು ಮನುಷ್ಯನ ಮೂಲಭೂತ ಸತ್ ನಲ್ಲಿ ಕತೆಗಾರನಿಗಿರುವ ಅಚಲ ನಂಬುಗೆ ಬಹುಷಃ ಇಂಥ ಪಾತ್ರಗಳ ಸೃಷ್ಟಿಗೆ ಕಾರಣವಾಗುತ್ತಿರಬೇಕು. ಅದಿಲ್ಲದೆ ಬದುಕಿನ ಕಹಿ ಅನುಭವಗಳ ಪಾದಧೂಲಿಯನ್ನು ಮತ್ತೆ ಮತ್ತೆ ಅಳಿಸಿ ಹಾಕಿ ಸಿಹಿಯನ್ನು ಮೆಲುಕು ಹಾಕುವುದು ಜಯಂತರಂಥ ಜಯಂತರಿಗೆ ಮಾತ್ರ ಸಾಧ್ಯವಾದೀತು!


ಜಯಂತರ ಕತೆಗಳಲ್ಲಿ ಕಂಡು ಬರುವ ಆಶಯ, ಅವರು ನಮಗೆ ಕಟ್ಟಿಕೊಡುವ ನೋಟ ಮತ್ತು ಅದಕ್ಕೆ ಅವರು ಬಳಸುವ ಆಕೃತಿ ಮೂರನ್ನೂ ಒಟ್ಟಾಗಿ ಗಮನಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಜಯಂತ್ ಮೂಲತಃ ಕವಿ. ಅವರೊಳಗಿನ ಕವಿ ಅನೇಕ ಬಿಂಬಗಳನ್ನು, ಪ್ರತಿಮೆಗಳನ್ನು, ಕೆಲವೊಮ್ಮೆ ಶಬ್ದಗಳಿಂದಲೂ ತಮಗೆ ಬೇಕಾದ ಸಂವೇದನೆಯನ್ನು ಮರುಸೃಷ್ಟಿಸಿಕೊಳ್ಳಬಲ್ಲ. ಇದನ್ನು ಅವರು ಕತೆಯ ಪರಿಸರದ, ಪಾತ್ರಗಳ ಒಳಗಿನಿಂದಲೇ ಮಾಡುವುದರಿಂದ ಅನೇಕ ಬಾರಿ ಅವು ಓದುಗನ ಮೇಲೆ ಉದ್ದೇಶಿತ ಪರಿಣಾಮವನ್ನು ಉಂಟುಮಾಡಿಯೂ ಅದಕ್ಕೆ ಯಾವೆಲ್ಲ ಅಂಶಗಳು ಕಾರಣವಾದವು ಎಂಬುದು ನಮಗೆ ನಿಲುಕುವುದಿಲ್ಲ.


ಲಕ್ಷ್ಮೀಶ ತೋಳ್ಪಾಡಿಯವರು ಒಂದು ಕಡೆ ಹೇಳುತ್ತಾರೆ, "ಅನುಭವದ ಒತ್ತಡದಿಂದ ನುಡಿಗಟ್ಟು ರೂಪುಗೊಳ್ಳುತ್ತ ಹೋಗುತ್ತದೆ. ಆದುದರಿಂದಲೇ ಅದು ಮರಳಿ ಅನುಭವವನ್ನು ಉಂಟುಮಾಡುತ್ತದೆ......
"ಜತೆಗೆ ಅನುಭವದಿಂದ ಉಂಟಾದ ಮಾತು ಮರಳಿ ಅನುಭವವನ್ನು ಉಂಟುಮಾಡುತ್ತಾ, ಅನುಭವವನ್ನು ಶೋಧಿಸುತ್ತದೆ ಕೂಡ. ಇದೇ ಸೃಷ್ಟಿಕ್ರಿಯೆಯ ಮಹತ್ವ."


ಕತೆಗಾರಿಕೆಯಿಂದ ನುಡಿಚಿತ್ರಗಳಿಗೆ ಹೊರಳಿಕೊಂಡ ಜಯಂತ್ ತಮ್ಮ ಅನನ್ಯ ರೂಪಕಶಕ್ತಿಯನ್ನು ಅಲ್ಲಿಯೂ ಮೆರೆದವರು. ಆದರೆ ಅದರಿಂದಾಗಿ ಅವರ ಕತೆಗಾರಿಕೆಯ ಮೇಲಾದ ಪರಿಣಾಮದ ಸ್ಪಷ್ಟ ಚಿತ್ರ ಅವರ `ಬಣ್ಣದ ಕಾಲು' ಸಂಕಲನ ಓದುವಾಗ ಸಿಗುತ್ತದೆ. ಇದೇ ಜಯಂತರ ಒಂದು `ತೂಫಾನ್ ಮೇಲ್' ಅಥವಾ `ಒಪೆರಾ ಹೌಸ್' ಕತೆ ಓದುವಾಗ ನಮಗೆ ಸಿಗುವ ಬೆಚ್ಚನೆಯ ಅನುಭವ `ಬಣ್ಣದ ಕಾಲು' ಸಂಕಲನದ ಕೆಲವು ಕತೆಗಳಲ್ಲಿ ಸಿಗುವುದಿಲ್ಲ. ಅಲ್ಲಿನ ಕತೆಗಳಲ್ಲಿ ಜಯಂತ್ ಅನೇಕ ಬಾರಿ ನುಡಿಚಿತ್ರಗಳಿಗೇ ಮುಗಿದುಬಿಡುವ `ಕತೆ'ಗಳೊಂದಿಗೆ ಕಾಣಿಸುತ್ತಾರೆ. ಚಂದ್ರಶಾಲೆ ಮತ್ತು ತೀರ ಕತೆಗಳು ಪೂರ್ಣಪ್ರಮಾಣದ ಕತೆಗಳಾಗಿ ಮನಸ್ಸಿಗೆ ಬರುವುದಿಲ್ಲ ಈ ಕಾರಣಕ್ಕೆ ಅನಿಸುತ್ತದೆ.


ಕತೆಯೇ ರೂಪಕವಾಗುವುದಾದರೆ - ಅದೊಂದು ಅದ್ಭುತ ಸಿದ್ದಿ - ಅದಾಗಿಯೆ ದಕ್ಕಬೇಕು. ಪ್ರಯತ್ನದಿಂದಲ್ಲ. ಜಯಂತ ಅದನ್ನು ಅದೃಷ್ಟ ಒಲಿಯುವುದು ಎಂದು ಕರೆದಿದ್ದಾರೆ. ಆ ರೂಪಕದ ಭಾಷೆ, ಅವರು ಕಾಣಿಸುವ ಪುಟ್ಟ ಪುಟ್ಟ ಬಿಂಬಗಳು, ಒಟ್ಟಾರೆಯಾಗಿ ಇಡೀ ಕತೆಯ ಶರೀರ(ಆಕೃತಿ) ಕೊಡುವ ನೋಟದಲ್ಲಿ ಸಾಧಿಸುವ ಪ್ರತಿಮಾ ಭಾವ ನಿರ್ಮಿತಿ ಜಯಂತರೊಳಗಿರುವ ಕವಿಯ ಕಾಣ್ಕೆ. ಸಹಜಸ್ಪೂರ್ತ. ಆರೋಪಿತವಲ್ಲ. ಈ ಅಂಶವನ್ನು ಅವರ ಮುಖ್ಯ ಹಾಗೂ ಅಷ್ಟೇನೂ ಮುಖ್ಯವಲ್ಲದ ಕತೆಗಳಲ್ಲೂ ಸಮಾನವಾಗಿಯೇ ಕಾಣಲು ಸಾಧ್ಯ. ಅವರು ಗೀಚಿದ ಕತೆಗಳಲ್ಲೂ, ಕೂತು ಬರೆಯದೆ ನಿಂತು ಬರೆದ ಕತೆಗಳಲ್ಲೂ ಅದನ್ನೆಲ್ಲ ಕಾಣಲು ಸಾಧ್ಯ. ಹಾಗಾಗಿಯೆ ಜಯಂತ ಅಂಕಣ ಬರೆಯತೊಡಗಿದರೆ ಅವರು ಬರೆಯಬಹುದಾಗಿದ್ದ ಅತ್ಯುತ್ತಮ ಕತೆಗಳನ್ನು ಕಳೆದುಕೊಂಡೆವೇನೋ ಅನಿಸತೊಡಗುತ್ತದೆ. ಸಾಂದರ್ಭಿಕವಾಗಿ ಹೇಳಬೇಕಾದ ಮಾತೆಂದರೆ ಜಯಂತ್ ಹೇಗೆ ಮೂಲಭೂತವಾಗಿ ಒಬ್ಬ ಕವಿಯೋ, ಅವರ ಬರಹಗಳೆಲ್ಲ ಮೂಲಭೂತವಾಗಿ ಕವನಗಳೇ. ಅವು ಕತೆಗಳಾಗಿ, ಅಂಕಣಗಳಾಗಿ, ನಾಟಕಗಳ ಅನುವಾದಗಳಾಗಿ, ಮತ್ತೆ ಕೆಲವೊಮ್ಮೆ ಕವಿತೆಗಳಾಗಿಯೇ ನಮ್ಮ ಮುಂದೆ ಬರುತ್ತವೆ, ಅಷ್ಟೆ. ಆದರೂ ಕತೆಗಳಲ್ಲಿ ಕಾಣಿಸಿಕೊಂಡಾಗ ಸಮೃದ್ಧವಾಗಿಯೂ, ಸಾಹಿತ್ಯಿಕ ಹೊಣೆಗಾರಿಕೆಯಿಂದಲೂ ಇರುತ್ತಾರೆನಿಸುತ್ತದೆ.


೧೯೯೨ರಷ್ಟು ಹಿಂದೆಯೆ ಜಯಂತ್ ಕೆಲವೊಂದು ಅಂಶಗಳನ್ನು ಸಮಕಾಲೀನ ಕನ್ನಡ ಕಥಾಸಾಹಿತ್ಯದ ಹಿನ್ನೆಲೆಯಲ್ಲಿ ಗುರುತಿಸಿರುವುದು ಕಾಣಿಸುತ್ತದೆ. "ನಾನು ಎಂದೋ ನಿಮ್ಮೊಂದಿಗೆ ಹೇಳಿದಂತೆ ಬಹುಷಃ ಕನ್ನಡದಲ್ಲಿ ಭಾಷೆಯ ನೆಲೆಯಲ್ಲಿ ಆಗಬೇಕಾದ್ದೆಲ್ಲ ಎಂದೋ ಆಗಿಹೋಗಿದೆ. ಎಲ್ಲ ಪ್ರಯೋಗಗಳು ರಿಟರ್ನ್ ಚಿತ್ರಗಳಂತೆ ಸಪ್ಪಗೆ ಅನಿಸುತ್ತವೆ. ವೈಯಕ್ತಿಕ ನೆಲೆಯಲ್ಲಿ, ಸಂವೇದನೆಯ ನೆಲೆಯಲ್ಲಿ, ಮೈದುಂಬಿಕೊಳ್ಳುವುದಷ್ಟೆ, ಸಮಗ್ರ ಮನುಷ್ಯರಾಗಿ ಅರಳುವುದಷ್ಟೆ -ಸಾಹಿತ್ಯಕ್ಕೆ ಸಾಹಿತಿಗಳು ಮಾಡಬಹುದಾದ ವರದಾನ." (ಕೆ.ಸತ್ಯನಾರಾಯಣರಿಗೆ ಬರೆದಿದ್ದು)


ಓದುಗನ ಸಂವೇದನೆಯನ್ನು, ಸ್ಪಂದನಾಶೀಲತೆಯನ್ನು, ಸೂಕ್ಷ್ಮಗಳಿಗೆ ಮನಸ್ಸು ತೆರೆಯುವುದನ್ನು ಜಯಂತರ ಕತೆಗಳು ಬಯಸುತ್ತವೆ ಮತ್ತು ಅದರದೇ ಆದ ಒಂದು ಲಯದಲ್ಲಿ ಸಾಧಿಸುತ್ತವೆ ಕೂಡಾ. ಆದರೆ ಅಲ್ಲಿಂದ ಮುಂದೇನು ಎಂಬ ಪ್ರಶ್ನೆ ಇದೆ. ಜಯಂತರ ಸಾಹಿತ್ಯದ ಹೊಸ ಹೊಸ ಮಜಲುಗಳನ್ನು ಕಾಣಬಯಸುವವರಿಗೆ, ಅವರ ಹೊಸ ಸಾಧನೆಗಳನ್ನು ಸದಾ ನಿರೀಕ್ಷಿಸುಸುತ್ತಿರುವವರಿಗೆ ಜಯಂತರ ಕತೆಗಳು ಅಲ್ಪತೃಪ್ತಿಯವು ಎನಿಸಿದರೆ ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ತೂಫಾನ್ ಮೇಲ್ ಕುರಿತು ಬರೆಯುತ್ತ ಡಾ.ಸಿ.ಎನ್.ರಾಮಚಂದ್ರನ್ ಹೇಳುವ ಮಾತುಗಳು ಮುಖ್ಯವೆನಿಸುತ್ತವೆ. ಅವರು ಹೇಳುತ್ತಾರೆ, "ಇವು ಒಂದು ಅನಿರೀಕ್ಷಿತ ಆಶಯ/ವರ್ತನೆ/ಭಾವನೆ ಇವುಗಳ ಸುತ್ತ ಕಟ್ಟಿದ ಸಿದ್ಧಮಾದರಿಯ ಕತೆಗಳಾಗಿವೆ. ಇವುಗಳು ಆ ಕೇಂದ್ರಾಶಯ/ವರ್ತನೆ/ಭಾವನೆಯತ್ತ ಅಕ್ಕಪಕ್ಕ ನೋಡದೆ ಉಸಿರುಗಟ್ಟಿ ಓಡುತ್ತವೆ."


ಲಗ್ನ ಪತ್ರಿಕೆಯ ಆಲ್ಬಂ ಹಿಡಿದು ವಧೂವರರ ಹೆಸರುಗಳೇ ಇಲ್ಲದ ಖಾಲಿಖಾಲಿ ಮಾದರಿಗಳನ್ನು ಮಗಚುತ್ತ, ಮುಂಬೈಯ ರಸ್ತೆಗಳಲ್ಲಿ ತೆವಳುತ್ತಿರುವ ವಾಹನಗಳ ಸಾಲು, ಅಲ್ಲಿನ ರೈಲ್ವೇಸೇತುವೆ, ಕಟ್ಟಡ, ಟ್ರಕ್ಕುಗಳು, ಜಲ್ಲಿ ಕಲ್ಲು, ರೈಲು ಎಲ್ಲದರ ಗಿಜಿಗಿಜಿಯಲ್ಲೇ ಲಗ್ನಪತ್ರಿಕೆಯ ಒಕ್ಕಣೆ ಬರೆಯುತ್ತ ಅನಾವರಣಗೊಳ್ಳುವ ಪೋಪಟ್ - ಅಸಾವರಿಗಳ ಮದುವೆಯ ಒಂದು ನವಿರಾದ ಆಸೆ (ನೋ ಪ್ರೆಸೆಂಟ್ಸ್ ಪ್ಲೀಸ್);


ಊರವರಿಂದ ಪೆಟ್ಟು ತಿಂದು ಉಢಾಳ ಅನ್ನಿಸಿಕೊಂಡು, ಇನ್ನೀಗ ಎರಡನೆಯ ಮಗಳ ಮದುವೆಗೆ ಎಲ್ಲಿ ಇದೆಲ್ಲ ಅಡ್ಡಿಯಾದೀತೋ ಎಂಬ ತಂದೆಯ ಸಂದಿಗ್ಧದ ಭೀತಿಯಲ್ಲೇ ಎಲ್ಲರಿಂದ ಪರಿತ್ಯಕ್ತನಾಗಿಬಿಡುವ ಛೋಟೂ; ಈ ತಂದೆಯ ಸಾವು, ಎರಡನೆಯ ಅಕ್ಕನ ಮದುವೆ, ಅವಳ ಗಂಡನ ಉಢಾಳತನ, ಬಡತನ ಎಲ್ಲದರ ಹಿನ್ನೆಲೆಯಲ್ಲಿ ಎಕಾಎಕಿ ನಿಷ್ಪಾಪಿಯಂತೆ ಕಾಣತೊಡಗುವ ಘಟ್ಟದಲ್ಲೆ ತೊಡಗುವ ಅವನ ಹುಡುಕಾಟ; ಆ ಹುಡುಕಾಟದಲ್ಲಿ ಕಾಣಬರುವ ಅಕ್ಕಂದಿರ ಈರ್ಷ್ಯೆ, ಸಣ್ಣತನ, ನಿರಾಸಕ್ತಿ; ಅವುಗಳೆಲ್ಲ ಅನಾವರಣಗೊಳಿಸುವ ಎದೆಕಲಕುವ ಮಾನವ ಪ್ರೀತಿಯ, ಸಂಬಂಧಗಳ ಒಂದು ಭಾವಜಗತ್ತು (ಕಣ್ಮರೆಯ ಕಾಡು);


ತನ್ನ ರೂಮಿನ ಪಾರ್ಟ್‌ನರ್ ತನ್ನಿಂದ ದೂರವಾಗುತ್ತಿರುವುದನ್ನು, ಕೆಲಸ ಸಿಕ್ಕಿ ಕೊಂಚ ಅನುಕೂಲ ಕಂಡುಕೊಂಡಿದ್ದೇ ರೀತಿ ನೀತಿಗಳಲ್ಲಿ ಬದಲಾಗತೊಡಗಿದ್ದನ್ನು ಸೂಕ್ಷ್ಮವಾಗಿ, ತಾಳ್ಮೆ ಮತ್ತು ದುಃಖದಿಂದ ಅರಿವಿಗಿಳಿಸಿಕೊಳ್ಳುತ್ತ ಧೇನಿಸುವ ರೂಪಕ್ ರಾಥೋಡ್ ತನ್ನ ಪಾರ್ಟ್‌ನರನ ಕಷ್ಟ, ಸಂದಿಗ್ಧಗಳನ್ನು ಕಾಣಲಾರದೆ ತಾನೇ ಬೇರೆಡೆಗೆ ಹೋಗುವ ನಿರ್ಧಾರಕ್ಕೆ ಬಂದರೂ ಆಗಲೇ ಕಾಯಿಲೆ ಬೀಳುವ ಆ ಪಾರ್ಟ್‌ನರ್; ಹಣದೊಂದಿಗೇ ಸುರುಹಚ್ಚಿಕೊಳ್ಳುವ ರೂಂ‌ಮೇಟ್‌ನ ಸಣ್ಣತನ ಹಾಗೂ ಕಾಯಿಲೆ, ಆಪರೇಶನ್, ಸಾವುಗಳ ಆಸ್ಪತ್ರೆಯೆದುರು ಮತ್ತೆ ಮೇಲೆದ್ದುನಿಲ್ಲುವ ಮಾನವೀಯ ಔದಾರ್ಯ; ಇವು ಅನಾವರಣಗೊಳಿಸುವ ನಗರ ಜೀವನದಲ್ಲಿ ಮನುಷ್ಯ ಮನುಷ್ಯರ ನಡುವೆ ಬೆಸೆಯುತ್ತ ಹೋಗುವ ಸಂಬಂಧದ ಮೂಲಸೆಲೆಗಳ ಒಂದು ಕಿರುನೋಟ (ಪಾರ್ಟ್‌ನರ್);


ಭಾಮಿನಿಯ ಸೌಂದರ್ಯ, ಮದುವೆ, ರಾಜಕಾರಣ, ಸಮಾಜಸೇವೆ, ಅನಾಥ ಮಗುವನ್ನು ಮನೆಗೇ ತಂದಿಟ್ಟುಕೊಳ್ಳುವ ಔದಾರ್ಯ ಎಲ್ಲವೂ ಒಂದು ಹಂತದಲ್ಲಿ ವೈಯಕ್ತಿಕ ಬದುಕಿನಲ್ಲೇ ಉಂಟುಮಾಡುವ ವಿಚಿತ್ರ ಸಂಘರ್ಷ; ಬಿರುಕು ಬಿಡುವ ಮದುವೆ; ಯಾವುದೋ ಕಾರಣಕ್ಕೆ ಕುಟುಂಬದ ಆಸ್ತಿ, ಚಿನ್ನ ಎಲ್ಲ ಬಿಟ್ಟು ಮಗಳೊಂದಿಗೆ ಗುಜರಾತಿನಲ್ಲಿ ನೆಲೆಸಿದ್ದ ಭಾಮಿನಿಯ ತಂದೆಯ ಸಾವು ಮತ್ತು ಗಂಡನೊಂದಿಗಿನ ವಿರಸಗಳ ತರುವಾಯ ತನ್ನ ಪ್ರೀತಿಯ ಊರಿಗೆ ಅವಳು ಮರಳಿದರೆ ಯಾರಿಗೂ ಇಷ್ಟವಾಗದೇ ಹೋಗುವ ಅವಳ ಬರವು ಹುಟ್ಟಿಸುವ ತಲ್ಲಣಗಳು (ಭಾಮಿನಿ ಸಪ್ತಪದಿ);


ವಯಸ್ಸು ಮೀರಿದ ಮಗಳ ಮದುವೆಗಾಗಿ ಅವಳ ಎಂದೋ ಆದ ಆದರೆ ಈಗ ಅನೂರ್ಜಿತವಾಗಿಬಿಟ್ಟಿರುವ ಮೊದಲ ಮದುವೆಯ ನೆನಪುಗಳನ್ನು ಅಳಿಸಲು ಅವಳ ಕನ್ಯತ್ವದ ದೃಢೀಕರಣಪತ್ರವನ್ನು ಸಹ ಕೈಯಲ್ಲಿ ಹಿಡಿದುಕೊಂಡು ಪಾಡು ಪಡುವ ವೃದ್ಧ ತಂದೆ ಹುಟ್ಟಿಸುವ ಅನುಕಂಪವನ್ನು ಮೀರಿದ ತಲ್ಲಣಗಳು (ಕನ್ನಡಿಯಿಲ್ಲದ ಊರಿನಲ್ಲಿ);


ಸುಂಟರಗಾಳಿಯಂತೆ ಸಾಗುವ ತೂಫಾನ್‌ಮೇಲ್‌ನಿಂದ ಇನ್ನೂ ಕತ್ತಲಿರುವಾಗಲೇ ನಿಲುಗಡೆಯಿಲ್ಲದ ಒಂದು ಸ್ಟೇಶನ್ನಿನ್ನಲ್ಲಿ ದಿಢೀರನೆ ಹಾರಿಕೊಂಡು, ಒಂದೂ ಮಾತನಾಡದೆ, ಹತ್ತಿರ ಕೂಡ ಬರದೆ, ಆ ನಸುಕಿನಲ್ಲೆ ಎದ್ದುಬಂದು ಸದ್ದೇ ಮಾಡದೆ ಚಿತ್ರಪಟಗಳಂತೆ ನಿಂತ ಹೆಂಡತಿ, ಮಗನತ್ತ ಅಷ್ಟು ದೂರದಿಂದಲೇ ಕೈಬೀಸಿ, ಹಣ ಇತ್ಯಾದಿ ಇರಬಹುದಾದ ಒಂದು ಕಟ್ಟನ್ನೆಸೆದು ಜತೆಯವನೊಂದಿಗೆ ಮಾಯವಾಗುವ ತಂದೆ; ಮನದಲ್ಲಿ ಉಳಿದುಬಿಟ್ಟ ಅಪ್ಪನ ನಸುಕಿನ ಸಾಹಸದ ಅಪೂರ್ಣ ಬಿಂಬವೇ ಸ್ಫೂರ್ತಿಯೇನೋ ಎಂಬಂತೆ ತೂಫಾನ್ ಎಂದೇ ಕರೆಸಿಕೊಂಡು, ಹೊಟ್ಟೆಪಾಡಿಗಾಗಿ ಸಿನಿಮಾದ ಸ್ಟಂಟ್ ಕಲಾವಿದನಾಗಿ ಜೀವವನ್ನೆ ಪಣಕ್ಕೊಡ್ಡುವ ಮಗ; - ಇವರಿಬ್ಬರು ಒಂದು ನೆಲೆಯಿಂದ ಮತ್ತು....


ಸಿನಿಮಾ ಹಾಡಿನ ಗ್ರೂಪ್ ಡ್ಯಾನ್ಸ್ ಚಿತ್ರೀಕರಣದಲ್ಲಿ ಡ್ಯಾನ್ಸ್‌ಡೈರೆಕ್ಟರ್ ಹೇಳಿದ ಹಾಗೆ, ಹೇಳಿದಷ್ಟು ಸಲ ಮೈಕುಣಿಸುವಾಗ ಅದು ಮಧುವಂತಿಗೆ ಹೊಟ್ಟೆಪಾಡು, ಅಷ್ಟೇ. ನಾಚಿಕೆ, ಮಾನ, ಮರ್ಯಾದೆ, ಲಜ್ಜೆಗಳು ಅವಳನ್ನು ಕಾಡುವುದಿಲ್ಲ. ಆದರೆ ಗಂಡನೆದುರು ಅವಳದು ಬೇರೆಯೆ ತೆರ. ನಟನೆಯ ನಾಚಿಕೆ ಕೂಡ ಅವಳ ವಾಸ್ತವದ ಬದುಕಿನಲ್ಲಿ ಬರಬಹುದಾದ ನಾಚಿಕೆಯಲ್ಲ. ನಟನೆಯನ್ನು ವಾಸ್ತವ ಮಾಡಿಕೊಂಡ ಕಣ್ಣುಗಳಿಗೆ ವಾಸ್ತವ ಅರ್ಥವಾಗುವುದಿಲ್ಲ ಎನ್ನುವಂತೆ ತಕರಾರು ತೆಗೆಯುವ ಗಂಡ ಬಲದೇವ; ಇವರಿಬ್ಬರು ಇನ್ನೊಂದು ನೆಲೆಯಿಂದ....


ಬದುಕನ್ನು ಅದೂ ಒಂದು ಸ್ಟಂಟ್ ಎಂಬಂತೆ ತಟ್ಟುತ್ತಾರೆ, ಇಲ್ಲಿ ಬರುವ ಎಲ್ಲರೂ, ತೂಫಾನ್, ಅವನಪ್ಪ, ಮಧುವಂತಿ...(ತೂಫಾನ್ ಮೇಲ್);


ನೆನಪುಗಳನ್ನು, ಅರಿವನ್ನು ಕಳೆದುಕೊಂಡ ಅಸ್ತಿತ್ವಕ್ಕೇನು ಅರ್ಥವಿರಲು ಸಾಧ್ಯ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು, ದೇಹವನ್ನು ಮೀರಿ, ನೆನಪು-ಅರಿವುಗಳೇ, ಅವು ಅಮೂರ್ತವಾದರೂ, ನಿಜವಾದ ವ್ಯಕ್ತಿತ್ವ ಎನ್ನುವ ಶಶಾಂಕ, ಸರೋಜಿನಿಯರು (ಬಕುಲಗಂಧ):
ರಾಕೆಟ್ ತೇಜಬಲಿ ಮತ್ತು ರಾಮ್‌ಪ್ಯಾರೇ ನಡುವಿನ ಮಾನವೀಯ ಸ್ನೇಹಸಂಬಂಧ ಮತ್ತು ನೆಲೆ ತಪ್ಪುತ್ತಿರುವ ಸರ್ಕಸ್ ದಂಧೆ ಅವರ ಎದುರಿಡುವ ಹೊಟ್ಟೆಪಾಡಿನ ಪ್ರಶ್ನೆಯ ಎದುರು ನಿಲ್ಲುವ ಸ್ಟಂಟ್ (ಬಾವಿಯಲ್ಲೊಂದು ಬಾಗಿಲು);


ಎಲ್ಲೋ ಈ ಬಾವಿಯಲ್ಲೊಂದು ಬಾಗಿಲು ಮತ್ತು ತೂಫಾನ್ ಮೇಲ್ ಕತೆಗಳ ಆತ್ಮವನ್ನೇ ಕೊಂಚ ಅಮೂರ್ತವಾಗಿ ತಡಕಾಡುವಂತೆ ಕಾಣುವ ಮತ್ತು ಆ ಕಾರಣಕ್ಕಾಗಿಯೆ ಆಪ್ತವಾಗಿಬಿಡುವ ಸುಧಾಂಶು ಮತ್ತು ಪಾಲಿಯರ ಗೇಟ್‌ವೇ; ಅಕಾಲದಲ್ಲಿ ನಿರುದ್ಯೋಗಿಯಾದ, ಅದರಿಂದಾಗಿಯೆ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ, ಧೈರ್ಯ ಕಳೆದುಕೊಂಡು ಕುಬ್ಜನಾಗುತ್ತಿರುವ ಸುಧಾಂಶುವಿಗೆ ಪ್ರೇಮಿಸಿ ಉಟ್ಟ ಬಟ್ಟೆಯಲ್ಲೆ ಇವನ ಹಿಂದೆ ಓಡಿಬಂದು ಮದುವೆಯಾದ ಪಾಲಿಯದೇ ಧೈರ್ಯ, ಒಂದು ತೆರನ ಡ್ರೈವ್. ಮುಂಬಯಿಯ ನಿಸ್ತಂತು ಪೇಟೆಯ ಹಿನ್ನೆಲೆಯಲ್ಲಿ ಈ ಕತೆ ತೊಡಗಿಕೊಂಡು ಅವನ ನಿರುದ್ಯೋಗ ಪರ್ವದ ಮತ್ತು ಸಾಂಸಾರಿಕ ಬದುಕಿನ ವಿಶಿಷ್ಟ ತಲ್ಲಣಗಳನ್ನು ಇನ್ನೇನು ಎಲ್ಲ ಸಿಡಿಯಿತೋ ಎಂಬಂಥ, ಉಸಿರುಕಟ್ಟಿಸುವ ನೀರವತೆಯಲ್ಲೆ ಹೊಳೆಯಿಸುತ್ತ ಹಲವಾರು ಪ್ರಶ್ನೆಗಳತ್ತ ತನ್ನ ಕೈ ಚಾಚುತ್ತದೆ. ಮನುಷ್ಯ ತನ್ನಲ್ಲಿಯ ಮಾರಿಕೊಳ್ಳಬಹುದಾದ ವಸ್ತುವಿನೆದುರು ತಡಕಾಡುತ್ತ, ಈ ಗೇಟ್‌ವೇ ಮುಂಬಯಿಗೆ ಗೇಟೋ, ಸಮುದ್ರಕ್ಕೋ ಎಂಬ ಪ್ರಶ್ನೆಯ ಎದುರು ಕಂಗಾಲಾಗುತ್ತ, ಈ ಇಡೀ ಲೋಕದೊಂದಿಗೇ ಸಾಂಸಾರಿಕತೆಯನ್ನು ಸಾಧಿಸುವ ದಾರಿಯನ್ನು ಈ ಗೇಟ್‌ವೇ ನಮಗೆ ದಯಪಾಲಿಸುತ್ತದೆಯೆ ಎಂಬಂತೆ ಸಮುದ್ರದಲ್ಲಿ ಒಂದು ತಾಸು ಸುತ್ತಾಡಿಸಿಕೊಂಡು ಬರುವ ಬಣ್ಣದ ಲಾಂಚಿನಲ್ಲಿ ಒಂಟಿವಿಹಾರಕ್ಕೆ ಹೊರಟ ಪಾಲಿಯ ಚಿತ್ರವನ್ನು ಕಣ್ಣಿಗೆ ಕಟ್ಟುತ್ತದೆ. "ಈ ಮಕ್ಕಳ ಕಣ್ಣೊಳಗಿನ ಆಕಾಶದ ನೀಲಿ ಆರಿ ಹೋಗಬಾರದಲ್ಲಾ ಸುಧಾಂಶು" ಎನ್ನುವ ಪಾಲಿ, ಪರೀಕ್ಷೆಯ ದಿನವೇ ಹೊಟ್ಟೆನೋವಿನಿಂದ ಬಿಕ್ಕಿ ಬಿಕ್ಕಿ ಅಳುತ್ತ ದೇವರಿಗೆ ಕೈಮುಗಿದು ಹೊರಟ ಪುಟ್ಟಿ ಈ ಅಸಹಾಯಕನ ಎದೆ ಕಲಕುವಂತೆ ನಮ್ಮ ಎದೆಯನ್ನೂ ಕಲಕುತ್ತಾರೆ, ಕಲಕುತ್ತ ಉಳಿಯುತ್ತಾರೆ.


ಹೀಗೆ ಎಲ್ಲರೂ ಮೀಟುವುದು ಭಾವಜಗತ್ತಿನ ತಲ್ಲಣಗಳನ್ನು, ಸಂವೇದನೆಗಳನ್ನು, ಹೇಳಲಾರದ ಮೂಕ ವೇದನೆಯನ್ನು ಮತ್ತು ಸಂದಿಗ್ಧಗಳು ಉಸಿರುಕಟ್ಟಿಸುವ ಸ್ಥಿತಿ ನಿರ್ಮಿಸಿ ಮಾನವೀಯತೆಗೆ ಸವಾಲು ಒಡ್ಡುವುದನ್ನು, ಆ ಸವಾಲನ್ನು ಮನುಷ್ಯ ತನ್ನ ಆಳದಿಂದಲೇ ಮೀರಿ ನಿಲ್ಲುವುದನ್ನು. ಮನುಷ್ಯ ಸಂಬಂಧಗಳು, ಹೊಟ್ಟೆಪಾಡಿನ ಹೋರಾಟ, ವ್ಯಾಪಾರೀಕರಣದ ಸಂದಿಗ್ಧಗಳು, ಎಲ್ಲ ಸೇರಿ ಹುಟ್ಟಿಸುವ ಸಂವೇದನೆಗಳು. ಈ ನೆಲೆಯನ್ನು ಮೀರಿ ಜಯಂತರ ಕತೆಗಳು ಕೈಚಾಚುವುದಿಲ್ಲ ಎಂದಿಲ್ಲ. ಆದರೆ ಅದು ಸಹಜವಾಗಿ ಕತೆಯ ಆತ್ಮಕ್ಕೆ ದಕ್ಕಿದರೆ ಮಾತ್ರ. ಅಂಥ ಒಂದು ಆಯಾಮಕ್ಕಾಗಿಯೆ ಜಯಂತರು ಪ್ರಯತ್ನಿಸಿ ಕತೆ ಬೆಳೆಸಿದ್ದು, ಕತೆಯ ತೆಕ್ಕೆಗೆ ಅಂಥ ವಿಚಾರಗಳನ್ನು ಎಳೆತಂದಿದ್ದು ಕಾಣಿಸುವುದಿಲ್ಲ.


ಇದಕ್ಕೆ ಅಪವಾದ ಎಂಬಂತೆ ಇದೆ ಜಯಂತರ `ಟಿಕ್ ಟಿಕ್ ಗೆಳೆಯ' ಕತೆ ಎಂಬುದು ವಿಮರ್ಶಕರ ಅಭಿಪ್ರಾಯ. `ಟಿಕ್‌ಟಿಕ್ ಗೆಳೆಯ' ಕತೆ ಜಯಂತರ ಕತೆಗಳಲ್ಲಿಯೇ ಶ್ರೇಷ್ಠವಾದ ಕತೆ ಎಂಬ ಅಭಿಪ್ರಾಯವನ್ನು ಕೆಲವು ವಿಮರ್ಶಕರು ಹಾಗೂ ಓದುಗರು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಕತೆಯನ್ನು ಕೊಂಚ ಗಮನವಿಟ್ಟು ನೋಡಬಹುದು. (ಆಗಿನ್ನೂ ಜಯಂತರ ಚಾರ್ಮಿನಾರ್ ಬಂದಿರಲಿಲ್ಲ)


ಈ ಕತೆ ಬರೆಯುವಾಗ ಜಯಂತರ ಭಾವ ಜಗತ್ತಿನ ಸಂಯೋಜಕನಿಗಿಂತ ಬೌದ್ಧಿಕ ಜಗತ್ತಿನ ಕಥಾಸಂಯೋಜಕ ಹೆಚ್ಚು ಚುರುಕಾಗಿರುವುದು ಕಾಣುತ್ತದೆ. ಇಲ್ಲಿ ಯಾವೆಲ್ಲ ವಿವರಗಳನ್ನು ಅವರು ಓದುಗನನ್ನು ಆರ್ದೃಗೊಳಿಸಲು ಕಟ್ಟಿಕೊಡುತ್ತಾ ಹೋಗುತ್ತಾರೋ ಅವೆಲ್ಲ ವಿವರಗಳ ಸಂಯೋಜನೆಯಲ್ಲಿನ ಜಾಣ್ಮೆಯೇ ಕಣ್ಣಿಗೆ ಹೊಡೆದು ಕಾಣುವಂತಿದೆ. ಓದುಗನ ಮನಸ್ಸಿನಲ್ಲಿ ಭಾವ ಮತ್ತು ಬುದ್ಧಿಯ ನಡುವಿನ ಕೊಡುಕೊಳ್ಳುವಿಕೆಯ ಹಂತದಲ್ಲೇ ಕತೆಯ ವಿವರಗಳು ಮತ್ತು ತತ್ಪರಿಣಾಮ ಕತೆ ಥಟ್ಟನೆ ಅಪ್ರಾಮಾಣಿಕವಾಗುತ್ತ ಹೋಗುತ್ತದೆ.


ಹದಿನೈದು ವರ್ಷದ ಪುಟ್ಟ ಹುಡುಗಿಗೆ ತನ್ನ ಒಂಭತ್ತನೆಯ ವಯಸ್ಸಿನಲ್ಲಿ ಕಂಡ ದುರಂತ ಕ್ವಿಜ್‌ನ ಸೆಟ್‌ನಲ್ಲಿ ಎಕಾಎಕಿ ಬಾಧಿಸುವುದನ್ನು ಓದುಗನಿಗೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದು ಕ್ವಿಜ್ ಸ್ಪರ್ಧೆ. ಮೇಲಾಗಿ ಟೀವಿಯವರ ಸೆಟ್. ಇಲ್ಲಿ ಮನುಷ್ಯನ ಭಾವಜಗತ್ತು ಜಾಗೃತಗೊಳ್ಳುವ ಸಾಧ್ಯತೆ ಕಡಿಮೆ. ಹಾಗಾಗಿ ಜಯಂತರು ಈ ಸೆಟ್‌ನ್ನು ಆಸ್ಪತ್ರೆಯ ನೆಲಮಾಳಿಗೆಗೆ ತರುತ್ತಾರೆ. ಆಸ್ಪತ್ರೆಯ ವಿವರಗಳನ್ನು ಗಮನಿಸಿ. ಇಲ್ಲಿ ಬರುವ ಬುದ್ದೂರಾಮನನ್ನು ಗಮನಿಸಿ. ಜಯಂತರೇ ಒಂದೆಡೆ ಹೇಳುತ್ತಾರೆ, "ಕಥೆ, ಹಳೆಯ ಸೂತ್ರಗಳಿಗೆ ಹೊಸ ಉದಾಹರಣೆಯಲ್ಲ. ಕಥೆ ಹೊಸತೇನನ್ನೋ ಕಾಣುತ್ತಿರಬೇಕು, ಕಾಣಿಸುತ್ತಿರಬೇಕು." ಜಯಂತರ ಹಿರಿಮೆಯಿರುವುದೇ ಇಲ್ಲಿ. ಅವರು ಕತೆ ಹೇಳುವಾಗ ತಮ್ಮ ಕತೆಯ ಪಾತ್ರಗಳನ್ನು, ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತ ಕತೆ ಬೆಳೆಸುವ ಅಸಾಧಾರಣ ಕತೆಗಾರ. ಆದರೆ ಇಲ್ಲಿಯೇ ನಿರ್ದಿಷ್ಟ ಆಶಯ/ವರ್ತನೆ/ಭಾವನೆ ಜಯಂತರಿಗೆ ಮುಖ್ಯವೆನಿಸಿದಂತಿದೆ. ಹುಡುಗಿಯ ತಂದೆಯ ಅಸಂಗತವೆನ್ನಿಸುವ ಒಂದು ಮೋಟಿವ್ ಕೂಡಾ ಕನ್‌ವಿನ್ಸಿಂಗ್ ಅನಿಸುವುದಿಲ್ಲ. ಹುಡುಗಿ ಕ್ವಿಜ್‌ಸೆಟ್‌ನಲ್ಲಿ ಭೋಪಾಲ್ ದುರಂತದ ಬಗ್ಗೆ ಪ್ರಶ್ನೆ ಕೇಳಿದ್ದೇ ಕಣ್ಣಿಗೆ ಕಟ್ಟಿದ ಚಿತ್ರದಿಂದಾಗಿ ಸಂಕಟಗೊಂಡು ಬವಳಿಬಂದು ಬಿದ್ದುಬಿಡುತ್ತಾಳೆ. ಯಾಕೊ ಇದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದಿನ ಒಂದು ದುರಂತವನ್ನು ಕಾಲಾಂತರಗೊಳಿಸಿ ಹೇಳಿದ್ದು ಕಾರಣವೆ, ದೂರದರ್ಶನದಂಥ ಮಾಧ್ಯಮ ನಡೆಸುತ್ತಿರುವ ಜಗಮಗಿಸುವ ಲೈವ್ ಕ್ವಿಜ್ ಸೆಟ್ ಮತ್ತು ಮುಂಜಾನೆ ರೈಲಿನಿಂದಿಳಿಸುವ ಬಿಳೀಬಟ್ಟೆಯಲ್ಲಿ ಸುತ್ತಿದ ಶವಗಳು ಎರಡೂ ಸ್ಮೃತಿಗಳು ಪ್ರತಿನಿಧಿಸುವ ವಿಭಿನ್ನವಾದ - ಒಂದು ಭಾವ ಜಗತ್ತು - ಅಲ್ಲಿನ ವಾಸ್ತವವಾದ ಇನ್ನೊಂದು ತಾರ್ಕಿಕ ಜಗತ್ತನ್ನು - ಅಸಂಗತವೆನ್ನಿಸುವಂಥ ಒಂದು ಸನ್ನಿವೇಶದಲ್ಲಿ ಮುಖಾಮುಖಿಯಾಗುವ ಚಿತ್ರಣ ಕಾರಣವೆ ನನಗೂ ತಿಳಿಯದು. ನಾನು ವೈಯಕ್ತಿಕವಾಗಿ ಭೋಪಾಲದ ದುರಂತಕ್ಕೆ ಸ್ಪಂದಿಸಿದ ರೀತಿಕೂಡ ನನ್ನ ಈ ಅಭಿಪ್ರಾಯಕ್ಕೆ ಕಾರಣವಾಗಿರುವುದು ಸಾಧ್ಯ ಎಂಬ ಅಂಶವನ್ನು ಕೂಡ ಮರೆತಿಲ್ಲ. ೧೯೮೪ರಲ್ಲಿ, ದೇಶದ ಉತ್ತರದ ತುದಿಯಲ್ಲಿ ನಡೆದ ಈ ಭಯಂಕರ ಘಟನೆಗೆಗೆ ಬೇರೆ ಬೇರೆ ವಯೋಮಾನದ ಕರ್ನಾಟಕದ ಮಂದಿ ಸ್ಪಂದಿಸಿದ ಬಗೆ ಕೂಡಾ ಅಷ್ಟೇ ಮುಖ್ಯ, ಈ ಕತೆಗೆ ಪ್ರಾಮಾಣಿಕವಾಗಿ ಸ್ಪಂದಿಸಲಿಕ್ಕೆ. ನನ್ನ ಗ್ರಹಿಕೆಯಲ್ಲಿ, ಆಸ್ಪತ್ರೆಯ ವಾತಾವರಣ, ಅಲ್ಲಿನ ವಿವರಗಳು, ಬುದ್ದೂರಾಮನ ಪಾತ್ರ, ಅವನ ಒಳ್ಳೆಯತನ, ಭೋಪಾಲ್ ದುರಂತದ ಕುರಿತ ಚಿತ್ರ ಯಾವುದೂ ಪ್ರಜ್ಞೆ ತಪ್ಪಿ ಬೀಳುವ ಹುಡುಗಿಯ ಸಹಾಯಕ್ಕೆ ಬರುವುದಿಲ್ಲ.


ಆದಾಗ್ಯೂ, ಇಡೀ ಕತೆಯ ಆಶಯ ಮತ್ತು ಜಯಂತ್ ಅದನ್ನು ಬುದ್ಧಿಪೂರ್ವಕವೇ ಆಗಿರಬಾರದೇಕೆ, ಸಂಯೋಜಿಸಿದ ರೀತಿಗಳಿಗಾಗಿ ಇದನ್ನು ಒಂದು ಅದ್ಭುತ ಕತೆಯೆಂದು ಒಪ್ಪಲೇಬೇಕು.


ಜಯಂತರ ಕತೆಗಳಿಗೆ ಸಾಮಾಜಿಕ ಅರ್ಥಪೂರ್ಣತೆಯ, ತಾತ್ವಿಕ ಆಯಾಮವೊಂದರ ಹಂಗಿಲ್ಲ. ಅವು ಸಾಮಾನ್ಯ ಬದುಕಿನ ಆಪ್ತ ವಿದ್ಯಮಾನಗಳಲ್ಲಿ, ಸಂಗತಿಗಳಲ್ಲಿ, ಅನಾವರಣಗೊಳ್ಳುವ ಮನುಷ್ಯತ್ವವನ್ನು ಅದರ ಕ್ಷಣ ಭಂಗುರತೆಯನ್ನು ಒಪ್ಪಿಕೊಂಡು, ಒಂದು ಅನಧಿಕೃತ ಸ್ವೀಕೃತಿಯೊಂದಿಗೆ ಓದುಗನ ಭಾವ ಜಗತ್ತನ್ನು ಸ್ಪರ್ಶಿಸುತ್ತವೆ.


ಜಯಂತರ ಸಾಹಿತ್ಯಿಕ ಆದ್ಯತೆಗಳನ್ನು ವ್ಯಕ್ತಪಡಿಸುವ ಅವರ ಈ ಮಾತುಗಳು ಗಮನಾರ್ಹ: `ಒಂದು ಕಥೆಗೆ ಅದರ ಧ್ವನಿಶಕ್ತಿ ಎಲ್ಲಿಂದ ಬರುತ್ತದೆ? ಬಹುಷಃ ಹೇಳಿದ ಸಂಗತಿಯ ಜತೆಗೆ ಹೇಳದ ಸಂಗತಿಯೂ ಇದ್ದರೆ ಬರೆಹ ಧ್ವನಿಪೂರ್ಣವಾಗುತ್ತದೆ. ಇದರಲ್ಲಿ ಹೇಳದ್ದು ಜಾಸ್ತಿಯಾದರೆ ಅದು ಅಮೂರ್ತವಾಗಿ ಬಿಡಬಹುದು ಮತ್ತು ಹೇಳಿದ್ದು ಜಾಸ್ತಿಯಾದರೆ ಅದೊಂದು ಸಮಾಜಶಾಸ್ತ್ರೀಯ ಪ್ರಬಂಧವಾಗಿ ಬಿಡಬಹುದು. ಒಟ್ಟಾರೆ ವ್ಯಕ್ತ ಮತ್ತು ಅವ್ಯಕ್ತಗಳ ಹಾಳತವಾದ ಹದ ಫಲಿಸಬೇಕು. ಈ ಹದ ಎಲ್ಲಿಂದ ಬರಬೇಕು? ಸಂವೇದನೆಯಿಂದಲೆ? ನೋಟದಿಂದಲೆ? ಆಕೃತಿಯಿಂದಲೆ? ಅಥವಾ ಅದೃಷ್ಟದಿಂದಲೆ?'


ಕತೆಗಾರನ ಮತ್ತು ಆ ಕತೆ ಓದುಗನಲ್ಲಿ ಉದ್ದೀಪನಗೊಳಿಸುವ ಸಂವೇದನೆ, ಕತೆ ಕಟ್ಟಿಕೊಡುವ ಹೊರ-ಒಳ ನೋಟ, ಕತೆಯ ಆಕೃತಿ ಮತ್ತು ಅದನ್ನು ಬರೆಯುವವನ ಅದೃಷ್ಟ ಜಯಂತರ ಪ್ರಧಾನ ಕಾಳಜಿಗಳಾಗಿರುವುದನ್ನು ಗಮನಿಸಬೇಕು. ತತ್ವಗಳಲ್ಲ, ಮಾದರಿಗಳಲ್ಲ, ಸಾಮಾಜಿಕ, ಸಾಹಿತ್ಯಿಕ ರಿಲವನ್ಸ್‌ಗಳ ಕುರಿತು ಅವರು ತಲೆಕೆಡಿಸಿಕೊಂಡಂತಿಲ್ಲ. ಸಾಮಾನ್ಯನೊಬ್ಬನ ದೈನಂದಿನಗಳ ಚಿತ್ರಣ ನೀಡುವುದರಲ್ಲಿ, ಅಲ್ಲಿನ ಸಣ್ಣಪುಟ್ಟ ವಿವರಗಳಿಂದ ತಮ್ಮ ಕತೆಯ ನೆಲ ಹಸನುಗೊಳಿಸಿಕೊಳ್ಳುವುದರಲ್ಲಿ ಮತ್ತು ಆ ವಿವರಗಳೆಲ್ಲ ಕತೆಯಾಗಿಬಿಡುವ ಮಾಯಕ ನಿರ್ಮಿಸುವಲ್ಲಿ ಜಯಂತ್ ಅನನ್ಯ ಕತೆಗಾರ. ಜಯಂತ್ ಹೇಳುತ್ತಾರೆ, "ಒಂದು ಕಥೆ ಚಿಕ್ಕದಿರಲಿ, ದೊಡ್ಡದಿರಲಿ, ತನ್ನದೇ ಆದ ವಾತಾವರಣವನ್ನು ಹೊಮ್ಮಿಸಬೇಕು. ಮತ್ತು ಈ ವಾತಾವರಣದಲ್ಲೇ ಅದರ ಪಾತ್ರ, ಪ್ರಸಂಗಗಳು ಸಜೀವವಾಗಿರಬಲ್ಲವು."


ನನ್ನ ಅಭಿಪ್ರಾಯದಲ್ಲಿ ಒಪೆರಾ ಹೌಸ್ ಈ ಸಂಕಲನದ ಬಹಳ ಮುಖ್ಯ ಕತೆ. ಈ ಕತೆ ಜಯಂತರ ಒಂದು ಹಂತದ ಕತೆಗಾರಿಕೆಯನ್ನು, ಅವರ ಕತೆಗಾರಿಕೆಯ ಮೂಲ ಧಾತುಗಳನ್ನು ಸಶಕ್ತವಾಗಿ ಪ್ರತಿನಿಧಿಸುವ ಕತೆ.


ಒಪೆರಾ ಹೌಸ್‌ನ ಇಂದ್ರನೀಲ ಮತ್ತು ಅವನ ಸಹವರ್ತಿ ನೌಕರರ ಮನಸ್ಸಿನಾಳದಲ್ಲಿ ಈ ಚಿತ್ರಮಂದಿರವೂ ಒಂದು ಮುಂಜಾನೆ ಭಗ್ನಗೊಂಡು ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ತಲೆಯೆತ್ತಬಹುದೆಂಬ ಭೀತಿಯಿಂದ ಹುಟ್ಟಿಕೊಳ್ಳುವ ತಲ್ಲಣ-ತಳಮಳಗಳೆ ಈ ಇಡೀ ಕತೆಯ ಶರೀರ. ಇದೆಲ್ಲ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಸುತ್ತ ಸೇರಿದ ಆತ್ಮೀಯರ ಉಸಿರುಗಟ್ಟಿಸುವ ಸಂಕಟದಂತೆ ಕಂಡರೂ, ಕತೆಯ ಆತ್ಮ ತಾಡದೇವದ ನಂದಾಬಾಯಿ, ಪ್ರಸ್ತುತ ಭಾಟಿಯಾ ಆಸ್ಪತ್ರೆಯಲ್ಲಿ ಮರಣಶಯ್ಯೆಯಲ್ಲಿರುವ ಕುಂದಾಬಾಯಿಗೆ ಹಿಂದಿರುಗಿಸಬೇಕಾಗಿರುವ ನಿರ್ಜೀವ ಪ್ಲಾಸ್ಕ್ ಪ್ರತಿನಿಧಿಸುವ ಶಾಶ್ವತ ಮೌಲ್ಯಗಳ, ಮನುಷ್ಯ ಸಂಬಂಧದ, ಪ್ರೀತಿಯ ಜೀವಂತಿಕೆಯಲ್ಲೇ ಇದೆ. ಹಾಗಾಗಿ ಒಪೆರಾ ಹೌಸ್ ಮುಚ್ಚಲಾಗುತ್ತದೆ ಎಂಬ ಎದೆಬಿರಿಯುವ ವದಂತಿ ನಿಜವಾದ ನಂತರವಷ್ಟೇ ಈ ನಂದಾಬಾಯಿ - ಕುಂದಾತಾಯಿ ಪ್ರಕರಣ ಬರುತ್ತದೆ. ಇದನ್ನು ಜಯಂತ್ ನೇಯ್ದುಕೊಟ್ಟಿರುವ ರೀತಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.


ಇಲ್ಲಿ ಜಯಂತರ ರೂಪಕಗಳ ನೇಯ್ಗೆಯನ್ನು ತುಸು ಗಮನಿಸಬಹುದು. ಈ ನೇಯ್ಗೆ ಹೇಗೆ ಒಂದು ಸ್ತರದಲ್ಲಿ ಕತೆಗಾರಿಕೆಯ ತಂತ್ರವಾಗಿಯೂ ಇನ್ನೊಂದು ಸ್ತರದಲ್ಲಿ ಕೇವಲ ವಿವರಗಳಾಗಿ ಕತೆಯ ಶರೀರವಾಗಿಯೂ ದುಡಿಯುತ್ತಿರುತ್ತದೆ ಎಂಬುದನ್ನು ಗಮನಿಸಬೇಕು. ಸೂಕ್ಷ್ಮವಾಗಿ, ಕವನ ಓದಿದ ಹಾಗೆ ಶಬ್ದಶಬ್ದವನ್ನೂ ಗಮನಿಸಿ ಓದಬೇಕಾದ ಸಾಲುಗಳಿವು. ಈ ಮಾತುಗಳಿಂದ ಜಯಂತ್ ತಮ್ಮ ಕತೆಯ ಆತ್ಮಕ್ಕೆ ಅಗತ್ಯವಾದ ಅಥವಾ ಕತೆಯನ್ನು ಓದುತ್ತಿರುವ ಓದುಗನ ಮನಸ್ಸಿನಲ್ಲಿ ಹುಟ್ಟಿಸಬೇಕಾದ ಬಿಂಬ-ಭಾವಗಳನ್ನು ಬಹಳ ಅಚ್ಚುಕಟ್ಟಾಗಿ ಸಾಧಿಸುತ್ತಾರೆಂಬುದನ್ನು ಮರೆಯಬಾರದು:


ಅಪರಾತ್ರಿಯಲ್ಲಿ ಮುಂಬಯಿಯ ನಿರ್ಜನ ಬೀದಿಯನ್ನು ಜಯಂತ್ ವಿವರಿಸುವ ಮಾತುಗಳು: `ಯಾವುದೋ ಮಹಾಭೀತಿಯಿಂದ ಜನ ಶಹರವನ್ನು ತ್ಯಜಿಸಿ ಹೋದರೋ ಎಂಬಂತೆ ಅನಿಸುತ್ತಿತ್ತು' ಇಲ್ಲಿನ ಮಹಾಭೀತಿಯಾಗಲೀ, ಶಹರವನ್ನು ತ್ಯಜಿಸುವ ಪರಿಸ್ಥಿತಿಯಾಗಲೀ ಕೇವಲ ಫ್ಯಾಂಟಸಿಗಳು. ಆದರೆ ಅವು ಓದುಗನಲ್ಲಿ ಮೀಟುವ ಬಿಂಬಗಳು ಕತೆಯ ಆತ್ಮದ ನೆಲೆಯಿಂದ ತೀರ ವಾಸ್ತವ!


`ನೂರಾರು ವರ್ಷಗಳ ಇತಿಹಾಸವಿದ್ದ ಶಿಲ್ಪ ಚಿತ್ತಾರದ ಈ ಹಳೇ ಕಟ್ಟಡ ಈಗಾಗಲೇ ರಾತ್ರಿಯೊಡನೆ ಮಾತಿಗೆ ತೊಡಗಿದಂತಿತ್ತು.'

`ಆಗ ಅವನಿಗೆ ಈ ಶಹರ ಮಕ್ಕಳನ್ನು ತೊಡೆಯಮೇಲೆ ಮಲಗಿಸಿಕೊಂಡು ತಾನು ಮಾತ್ರ ಎಚ್ಚರದಿಂದ ಕಾಯುತ್ತ ಕೂತ ತಾಯಿಯಂತೆ ತೋರುತ್ತಿತ್ತು.'


`ಫ್ಲಾಸ್ಕಿನಲ್ಲಿ ಏನೂ ಇರಲಿಲ್ಲ! ಅದು ಖಾಲಿ ಇತ್ತು. ಅದರಿಂದ ತಣ್ಣನೆಯ ನಸುಗತ್ತಲೆ ಲೋಟದೊಳಗೆ ಸುರಿಯುತ್ತಿರುವಂತೆ ಇಂದ್ರನೀಲನಿಗೆ ಭಾಸವಾಯಿತು.'


ಥಿಯೇಟರಿನ ಒಳಗೆ ಸಿಕ್ಕಿದ ಫ್ಲಾಸ್ಕ್ ಬಗ್ಗೆ ಇಡೀ ಕತೆಯ ಅಂತ್ಯದ ತನಕ ನಮಗೆ ಯಾವುದೇ ನಿಖರ ವಿವರ ಸಿಗುವುದಿಲ್ಲ. ಆದರೆ ಅದರ ಕುರಿತು ನಾವು ಲಘುಭಾವ ತಳೆಯದಂತೆ ಜಯಂತ್ ಎಚ್ಚರವಹಿಸುತ್ತಾರೆ: `ಅತ್ಯಂತ ತುರ್ತಾಗಿ ಯಾರನ್ನೋ ತಲುಪಬೇಕಾಗಿದ್ದ ವಸ್ತುವೊಂದು ಹಾದಿತಪ್ಪಿ ಕೈಲಿ ಸಿಕ್ಕಿಬಿದ್ದಿರುವಂತೆ ಇಂದ್ರನೀಲನಿಗೆ ತುಂಬ ಕಸಿವಿಸಿ ಆಯಿತು.'

`ಖಂಡಿತ ಇದು ಯಾವುದೋ ಆಸ್ಪತ್ರೆಗೆ ಹೊರಟಿದ್ದ ಪ್ಲಾಸ್ಕು. ಆದರೆ ಅಸ್ಪತ್ರೆಗೆ ಹೊರಟವರು ಪಿಕ್ಚರಿಗೆ ಯಾಕೆ ಬಂದರು? ಅಥವಾ ರಾತ್ರೆ ಆಸ್ಪತ್ರೆಯಲ್ಲಿ ಎಚ್ಚರಿರಬೇಕಾದ್ದರಿಂದ ತುಸು ವಿಶ್ರಮಿಸಲು ಬೇರೆಲ್ಲೂ ಜಾಗವಿರದೇ ಇಲ್ಲಿ ಬಂದು ಎರಡು ಗಂಟೆ ನಿದ್ರಿಸಿ, ಅವಸರದಲ್ಲಿ ಎದ್ದು ಹೊರಡುವಾಗ ಮರೆತು ಹೋದರೆ?'


`ಜುಬಿಲಿಗಳ ಹಂಗಾಮು ಮುಗಿದು ಚಿತ್ರಗಳು ಐವತ್ತು ದಿನ ಓಡುವುದೇ ಮಹಾ ಸಾಹಸ ಆಗತೊಡಗಿದಂತೆ ಒಂದು ಬಗೆಯ ವಿಷಣ್ಣ ಮಂಕು ಚಿತ್ತಾರಗಳಲ್ಲಿ ಕವಿಯತೊಡಗಿತು. ಎಷ್ಟು ಹೊಡೆದರೂ ಧೂಳು ಹೋಗುತ್ತಲೆ ಇರಲಿಲ್ಲ. ನಲ್ಲಿಗಳು ಸೋರತೊಡಗಿದವು. ಇಂಟರ್‌ವಲ್‌ನಲ್ಲಿ ಶೇರ್‌ಮಾರ್ಕೆಟ್ಟಿನಂತೆ ಪಾಪ್‌ಕಾರ್ನ್ ಕೊಡಿ, ಸಮೋಸಾ ಕೊಡಿ, ಬಟಾಟೆವಡೆ ಕೊಡಿ ಎಂದು ನೋಟು ನಾಣ್ಯ ಹಿಡಿದು ಚೀರಾಡುವ ನೂರಾರು ಕೈಗಳ ಸಂತೆ ಆಗುತ್ತಿದ್ದ ಕೌಂಟರ್‌ಗಳು ಬಿಕೋ ಹೊಡೆಯತೊಡಗಿದವು.'

`ಜೇಡ ಯಾವುದೇ ಆವೇಶ ಮಹತ್ವಾಕಾಂಕ್ಷೆ ಇಲ್ಲದೆ ಸುಮ್ಮನೆ ತನ್ನ ಬಲೆಯನ್ನು ಒಂದು ಕೇಂದ್ರದಿಂದ ನೇಯುವಂತೆ ಇಂದ್ರನೀಲ ಈ ಒಪೆರಾ ಹೌಸ್ ಕೇಂದ್ರದಿಂದಲೆ ತನ್ನ ಸಣ್ಣ ಸದ್ದಿಲ್ಲದ ವಿಶ್ವವನ್ನು ನೇಯ್ದುಕೊಂಡಿದ್ದ'


`ಬಲಕ್ಕೆ ದೂರ ರಾಕ್ಸಿ ಸಿನೆಮಾದ ಎದುರು ಮೂರು ತಿಂಡಿಗಾಡಿಗಳು ಮಹಾಮೌನದಲ್ಲೇ ಏನೇನನ್ನೋ ಬೇಯಿಸುತ್ತಿದ್ದವು. ಅವು ಈಗ ಯಾರನ್ನೂ ಕೂಗಿ ಕರೆಯಬೇಕಾದ್ದೇ ಇರಲಿಲ್ಲ. ಬೇಕಾದವರು ತೆಪ್ಪಗೆ ಸ್ವಪ್ನದಲ್ಲಿ ಚಲಿಸುವವರಂತೆ ಅಲ್ಲಿ ತಲುಪಿ ದಣಿದ ಕಣ್ಣುಗಳಲ್ಲಿ ತಿನ್ನುತ್ತಿದ್ದರು.'


`ಕೆನಡಿ ಬಿಜ್ಜಿನ ಏರಿನಿಂದ ಯಾಕೋ ಹಿಂದಿರುಗಿ ನೋಡಿದ. ಒಪೆರಾ ಹೌಸ್ ತುಂಬ ಹತಾಶವಾಗಿ, ಅದರಲ್ಲೀಗ ಮಗನ್‌ಭಾಯ್ ಮತ್ತು ಭಾಲೇಕರ ಇದ್ದಾರೆ ಎನ್ನುವುದೇ ಸುಳ್ಳು ಅನಿಸುವಂತೆ ಕಾಣುತ್ತಿತ್ತು.'


`ಅಲೆಮಾರಿ ಚನಾವಾಲಾನ ಆ ಪುಟ್ಟ ಅಗ್ಗಿಷ್ಟಿಕೆ ಯಾವಾಗಲೂ ಇಂದ್ರನೀಲನ ಮನಸ್ಸಿಗೆ ಬರುತ್ತದೆ. ಬಾಲ್ಯದಲ್ಲಿ ಅಮ್ಮ ಹೊತ್ತಿಸಿದ್ದ ಒಲೆಯಂತೆ ಅದು ವಿಚಿತ್ರವಾದ ಬಿಸಿಯನ್ನು ಅವನಲ್ಲಿ ಎಬ್ಬಿಸುತ್ತದೆ. ಒಲೆ ಹೊತ್ತಿಕೊಂಡಾಗ ಅಮ್ಮನ ಮುಖವೂ ಬೆಳಗುತ್ತಿತ್ತು. ನಿದ್ದೆಯಿಂದ ಎಬ್ಬಿಸಲ್ಪಟ್ಟಂತಿದ್ದ ಆ ಮುಖ ನಿರ್ವಿಕಾರವಾಗಿ ಹೊತ್ತಿಕೊಂಡಂತಿರುತ್ತಿತ್ತು.'


`ಚಾಯ್‌ವಾಲಾ ರಾತ್ರಿಯ ಮೈದಡವುವ ತಾಯಿಯಂತೆ ಇದ್ದ.'


`ಮಕ್ಕಳು ಮನೆ ಆಟ ಆಡುವಂತೆ ಅವರು ಅವರದೇ ರೀತಿಯಲ್ಲಿ ಆಡಿದ ಸುಳ್ಳು ಸಂಸಾರದ ಆಟದ ಸ್ವರಗಳು ಬಿಸಿಬಿಸಿ ಇದ್ದವು. ಅವೆಲ್ಲವೂ ಈ ಫ್ಲಾಸ್ಕಿನಲ್ಲಿವೆ. ಚನಾವಾಲಾನ ಪುಟ್ಟ ಅಗ್ಗಿಷ್ಟಿಕೆ, ಚಾಯ್‌ವಾಲಾನ ಸ್ಟೋವಿನ ನೀಲಿ ಶಾಖ, ಬಬನ್‌ನ ಇಸ್ತ್ರಿಯ ಕೆಂಡ - ಎಲ್ಲವೂ ಇದರಲ್ಲಿವೆ. ಇದನ್ನು ಬೇಗ ಬೇಗ ಒಪೆರಾ ಹೌಸ್‌ನ ನೀರವಕ್ಕೆ ರವಾನಿಸಬೇಕು ಎಂಬಂಥ ಅವಸರದಲ್ಲೇ ಓಡುತ್ತ...'


`ಹೊಸದೊಂದು ಹಗಲುಗನಸಿನಂಥ ಈ ಕ್ಷಣಗಳಿಂದ ತನಗೇನೂ ಆಘಾತವೇ ಆಗುತ್ತಿಲ್ಲವಲ್ಲ ಎಂದು ಇಂದ್ರನೀಲ ಬೆಚ್ಚಿಬಿದ್ದ. ಏರುತ್ತಿರುವ ಬಿಸಿಲಲ್ಲಿ ಎಲ್ಲರೂ ಹಣ್ಣು ಮುದುಕರಂತೆ ಕಾಣುತ್ತಿದ್ದರು. ಕಾರಂಜಿಯ ನವಿಲು ವಿಕಾರವಾಗಿತ್ತು. ಅದರ ಕಣ್ಣಿನ ಜಾಗದಲ್ಲಿದ್ದ ಗಾಜಿನ ಗೋಲಿ ಚೆಕ್ಕೆ ಎದ್ದು ಒಡೆದು ಹೋಗಿತ್ತು. ನಿನ್ನೆಯ ತನಕ ನಡೀತಿದ್ದ ಸಿಸಿಮಾ ಪೋಸ್ಟರುಗಳೆಲ್ಲ ಇಂದಿನಿಂದ ಮುಕ್ತಗೊಂಡ ಖುಷಿಯಲ್ಲಿದ್ದಂತೆ ತೋರುತ್ತಿದ್ದವು. ಇಬ್ಬರು ಪೋಲೀಸರು ಬೀಗ ಹಾಕಿದ ಗೇಟಿನ ಎದುರು ಅಂಗೈಯಲ್ಲಿ ತಂಬಾಕು ಅರೆಯುತ್ತ ನಿಂತಿದ್ದರು.'


`ಇಂದ್ರನೀಲ ಒಪೆರಾ ಹೌಸಿನ ಎಡಭಾಗದ ಲೋಹದ ಸುರುಳಿ ಏಣಿಯ ಪಕ್ಕದ ಕಿರುಬಾಗಿಲಿನತ್ತ ನಡೆಯುತ್ತ ಭಾಲೇಕರನಿಗೆ `ಬೇಗ ಬಂದೆ' ಎಂದು ಬಗ್ಗಿ ಹೊರಬಂದು ಹಗಲಿನ ಎದೆಯ ಮೇಲೆ ನಡೆಯತೊಡಗಿದ.'


`ಇಡೀ ಒಪೆರಾ ಹೌಸನ್ನೇ ತಬ್ಬಿ ಮುದ್ದಿಸುತ್ತಿದ್ದ ಬಿಸಿಲು ತನ್ನನ್ನೂ ಸಂತೈಸಲು ಒಳತನಕ ಬಂತಲ್ಲಾ ಅನಿಸಿ ಅದನ್ನೇ ನಿಟ್ಟಿಸುತ್ತಿದ್ದ ಬೆರಳುಗಳಿಂದ ಮೆಲ್ಲಗೆ ಸೋಕಿದ. ಒಪೆರಾ ಹೌಸಿನ ಒಳಗೆ ಅವಿತುಕೊಂಡಿದ್ದ ರಾತ್ರಿಯೊಂದು ಆ ಬಿಸಿಲುಕೋಲಿನಲ್ಲಿ ಮೆಲ್ಲಗೆ ಹಗಲಿನೊಂದಿಗೆ ಬೆರೆಯತೊಡಗಿತು.'


ಕತೆಯ ಕೇಂದ್ರಕ್ಕೆ ಜಯಂತ್ ತಂದುಕೊಡುವ ವಿಸ್ತಾರ, ವ್ಯಾಪ್ತಿಯನ್ನು ಗಮನಿಸಬೇಕು. ಅದು ಒಳಗೊಳ್ಳುವ ವ್ಯಕ್ತಿಗಳನ್ನು, ರಾತ್ರಿ-ಹಗಲುಗಳನ್ನು, ಸ್ವತಃ ಒಪೆರಾಹೌಸನ್ನು ಜಯಂತ್ ಕಥೆಯ ಒಡಲಿನಲ್ಲಿ ಒಳಗೊಂಡ ಬಗೆಯನ್ನು ಗಮನಿಸಬೇಕು. ಇಲ್ಲಿ ಫ್ಲಾಸ್ಕು ಕತ್ತಲೆಯನ್ನು ಸುರಿಯುತ್ತದೆ, ಕಟ್ಟಡ ರಾತ್ರಿಯೊಂದಿಗೆ ಮಾತಿಗೆ ತೊಡಗುತ್ತದೆ, ಶಹರ ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಾನು ಮಾತ್ರ ಎಚ್ಚರದಿಂದ ಕಾಯುವ ತಾಯಿಯಾಗುತ್ತದೆ, ತಿಂಡಿಗಾಡಿಗಳು ಮಹಾಮೌನದಲ್ಲೇ ಏನನ್ನೋ ಬೇಯಿಸುತ್ತವೆ, ಮಂದಿ ದಣಿದ ಕಣ್ಣುಗಳಲ್ಲಿ ತಿನ್ನುತ್ತಾರೆ, ಚಾಯ್‌ವಾಲಾ ರಾತ್ರಿಯ ಮೈದಡವುವ ತಾಯಿಯಾಗುತ್ತಾನೆ, ಹಗಲಿನ ಬಿಸಿಲು ಸಂತೈಸುತ್ತದೆ, ಚನಾವಾಲನ ಅಗ್ಗಿಷ್ಟಿಕೆ, ಸಿನಿಮಾ ಪೋಸ್ಟರುಗಳು ಎಲ್ಲವಕ್ಕೂ ಜೀವವಿದೆ, ಭಾವವಿದೆ! ಕೊನೆಗೆ ಒಪೆರಾ ಹೌಸಿನ ಒಳಗೆ ಅವಿತುಕೊಂಡಿದ್ದ ರಾತ್ರಿಯೊಂದು ಆ ಬಿಸಿಲುಕೋಲಿನಲ್ಲಿ ಮೆಲ್ಲಗೆ ಹಗಲಿನೊಂದಿಗೆ ಬೆರೆಯತೊಡಗುತ್ತದೆ. ಇಂದ್ರನೀಲ ಹಗಲಿನ ಎದೆಯ ಮೇಲೆ ನಡೆಯುತ್ತಾನೆ.


ನಂದಾಬಾಯಿ - ಕುಂದಾತಾಯಿ ನಡುವಿನ ತಂತುಗಳು ಕಂಪಿಸುವ ಸಂದಿಗ್ಧ ಸ್ಥಿತಿಯನ್ನು ಕತೆಯ ತೀರ ಕೊನೆಯಲ್ಲಿ ರಿಲೇಟ್ ಮಾಡಿದಾಗ್ಯೂ, ಇಡೀ ಕತೆಯ ಕೇಂದ್ರ ಒಪೆರಾಹೌಸ್ ಆಗಿರದೆ ಇದುವೇ ಆಗಿತ್ತು ಎಂಬಂತೆ ಕತೆಯನ್ನು ಫ್ಲಾಸ್ಕಿನಿಂದಲೆ ತೊಡಗುತ್ತಾರೆ ಜಯಂತ್. ಓದುಗನ ಸಂವೇದನೆಗಳನ್ನು ಕತೆ ತಡಕುವುದೂ ಇಲ್ಲೇ. ಕತೆಗೆ ಅದ್ಭುತ ಸಾರ್ಥಕತೆಯನ್ನು ಹೀಗೆ ಕಣ್ಣೆವೆ ತೆರೆಯುವುದರಲ್ಲಿ ದಕ್ಕಿಸಿಬಿಡುವ ಜಯಂತರ ಪ್ರತಿಭೆಯ ಬಗ್ಗೆ ಮೂಡುವ ಅಭಿಮಾನ, ಗೌರವಗಳಿಗೆ ಕಾರಣ ಇದು. ಜಯಂತರ ಕತೆಗಳಲ್ಲಿ ಏಕಕಾಲಕ್ಕೆ ಕಾಣಸಿಗುವ ಇಂಥ ತಾಂತ್ರಿಕ ಜಾಣ್ಮೆ, ರೂಪಕಗಳ ಹಂದರದ ಮೂಲಕ ಪ್ರತಿಮಾಭಾವ ಪುನರ್‌ಸೃಷ್ಟಿಯ ಉನ್ನತ ಕಲೆಗಾರಿಕೆ ಎರಡನ್ನೂ ಮೀರಿ ವಸ್ತು - ಮಾನವ ಸಂಬಂಧಗಳ, ಭಾವ ಜಗತ್ತಿನ ಸೂಕ್ಷ್ಮಗಳ ಸುತ್ತ ನಮ್ಮನ್ನು ತುಡಿಯುವಂತೆ ಮಾಡಬಲ್ಲ ಕಸು ಹೊಂದಿರುವುದನ್ನು ಗಮನಿಸುತ್ತೇವೆ. ಇಷ್ಟೇ ಮುಖ್ಯವಾಗಿ ಜಯಂತ್ ಕತೆ ಹೇಳುವಾಗ ಎಲ್ಲೂ ಯಾವುದೂ ಪೂರ್ವನಿಯೋಜಿತ ಎಂಬ, ಸಪ್ರಯತ್ನ ಎನಿಸುವ ಭಾರ ಇಲ್ಲದ ಬಗೆಯಲ್ಲಿ ಅದೊಂದು ಅವರಿಗೇ ಕರಗತವಾದ ಮಂದ್ರಸ್ಥಾಯಿಯಲ್ಲೇ ಎಲ್ಲವೂ ಸಹಜ ವ್ಯಾಪಾರವೆಂಬಂತೆ ಮೆಲುದನಿಯಲ್ಲಿ ಮುಗಿಸಿ ಮುಗುಳ್ನಗುತ್ತಾರೆ. ಅದು ಅವರಿಗೆ ಅಷ್ಟೇ ಸಹಜ ಮತ್ತು ಸ್ವಾಭಾವಿಕ. ಅಸಹಜ ಎಂಬಷ್ಟು ಅಚ್ಚರಿದಾಯಕ ಕಲೆಗಾರಿಕೆಯಿದು. ಜಯಂತರಿಗೊಲಿದ ಅದೃಷ್ಟವೆ, ಅವರೊಳಗಿನ ಸಹಜ ಕವಿಯ ಗರಿಮೆಯೆ?


ಜಯಂತ್ ಇಂದು ಬರೆಯುತ್ತಿರುವ ಸಣ್ಣಕತೆಗಾರರಲ್ಲಿ ಬಹು ಮುಖ್ಯ ಕತೆಗಾರ. ಬಹುಷಃ ಹೊಸತಲೆಮಾರಿನ ಕತೆಗಾರರು ಮೈಗೂಡಿಸಿಕೊಳ್ಳಬೇಕಾದ, ಬೇರೆ ಕತೆಗಾರರಲ್ಲಿ ಸಿಗಲಾರದ ಹಲವಾರು ಉತ್ತಮ ಅಂಶಗಳು ಅವರ ಕತೆಗಳಲ್ಲಿ ಸಿಗುತ್ತವೆ. ಹಾಗಾಗಿಯೇ ಅವುಗಳ ಅಧ್ಯಯನ ನಡೆಯಬೇಕಿದೆ.

2 comments:

Hemanth said...

ಸರ್,

ಜಯಂತ್ ರವರ ಸಾಲುಗಳನ್ನು ಓದಿ enjoyable ಅಂತ ಅನ್ನಿಸ್ತು.ಅವರ ಕವಿ ಮುಖ ಮಾತ್ರ ನಮಗೆ ಗೊತ್ತಿತ್ತು ಆದರೆ ಅವರ ಒಳಗಿರುವ ಕಥೆಗಾರನನ್ನ ನಿಮ್ಮ ಲೇಖನದ ಮೂಲಕ ನಮಗೆ ಪರಿಚಯಿಸಿದ್ದಕ್ಕೆ ದನ್ಯವಾದಗಳು.

ನರೇಂದ್ರ ಪೈ said...

ಜಯಂತ್ ಮೂಲತಃ ಕವಿ. ಆದರೆ ಚಿತ್ರಗೀತೆಗಳ ಕವಿಯಲ್ಲ. ಅವರ ನೀಲಿಮಳೆ, ರಂಗದಿಂದೊಂದಷ್ಟು ದೂರ, ಜಿಲೇಬಿ ಕವನಸಂಕಲನಗಳನ್ನು ಓದಿದರೆ ನಿಮಗೆ ನನ್ನ ಮಾತು ಅರ್ಥವಾಗುತ್ತದೆ. ಅವರು ಕತೆಗಳನ್ನು ಕಟ್ಟುವ ಬಗೆ ಮತ್ತು ಅವರ ಕಥಾಜಗತ್ತಿನ ಸಾಮಾನ್ಯ ಮನುಷ್ಯ - ಇದು ನಮಗೆ ಜಯಂತರನ್ನು ಹೆಚ್ಚು ಚೆನ್ನಾಗಿ ಪರಿಚಯಿಸುತ್ತದೆ. ಹಾಗೆ ಹೇಳಬೇಕೆಂದರೆ, ಜಯಂತ್ ಒಬ್ಬ ಅಪ್ಪಟ ನಿಷ್ಕಲ್ಮಶ ಹೃದಯದ ಆತ್ಮೀಯ. ಕಹಿಯನ್ನು ಒಂದಿಷ್ಟೂ ಇಟ್ಟುಕೊಳ್ಳದ ಮಗುವಿನ ಮನಸ್ಸಿನ ಮನುಷ್ಯ. ಹಾಗಾಗಿಯೇ ಅವರು ಏನೇ ಮಾಡಿದರೂ ಅದರಲ್ಲೊಂದು ಫ್ರೆಶ್‌ನೆಸ್, ಜೀವಕಳೆ ಮತ್ತು ಪ್ರೀತಿಯೇ ಹರಿಯುತ್ತಿರುತ್ತದೆ.
ಪ್ರತಿಕ್ರಿಯೆಗೆ ಧನ್ಯವಾದಗಳು ಹೇಮಂತ್.