Tuesday, July 22, 2008

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು


`ಚಂದ್ರಶಾಲೆ' ಕತೆ ಈ ಸಂಕಲನದ ಮೊದಲ ಕತೆ. ತೇರಿನ ದಿನ ಬಳೆಯಂಗಡಿಯ ಬಸವಣ್ಣಿಯ ಜತೆಗೆ ಕುಂಕುಮದಂಗಡಿಯ ವಿಶ್ವೇಶ್ವರಯ್ಯ ನಡೆಸುವ ಪ್ರೇಮ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಾಬಲನ ಮನಸ್ಸು ತುಂಬಿಕೊಂಡ ಸರಸ್ವತಿ, ತೇರು ಎಳೆಯುವ ಸಂಭ್ರಮದ ಗದ್ದಲ, ಗಡಿಬಿಡಿಗಳು, ತೇರನ್ನೆ ಮನೆ, ಗಂಡ ಎಲ್ಲವೂ ಮಾಡಿಕೊಂಡಿರುವ ಕಾಯಕ್ಕನ ವಿಪರೀತಗಳು ಎಲ್ಲ ಸೇರಿ ನೀಡುವ ಚಿತ್ರ ಗಾಢವಾಗಿ ಕಾಡುವಂತಿದ್ದರೂ ಕತೆಯಾಗಿ ಈ ಎಲ್ಲ ನೋಟಗಳು ಕೂಡಿಕೊಳ್ಳುವ ಏಕಸೂತ್ರದ ಪ್ರತಿಮೆ ತೇರು. ತೇರು ಹಬ್ಬದ ಸಂಭ್ರಮವನ್ನು ತರುವುದರ ಜೊತೆಗೇ, ಊರಿನ ಜನರ ಸುಪ್ತ ಅಥವಾ ಅದುಮಿ ಹಿಡಿಯಲ್ಪಟ್ಟ ಉನ್ಮಾದ, ಹುಚ್ಚು, ಸುಖದ, ಸಂಭ್ರಮದ ಅಪೇಕ್ಷೆ, ಕಳ್ಳ ಪ್ರೇಮದ ನಿರೀಕ್ಷೆ ಎಲ್ಲಕ್ಕೂ ಕಾರಣವಾಗುತ್ತಿರುತ್ತದೆ. ಕರ್ತವ್ಯದ ನೊಗವನ್ನು ಸ್ವಲ್ಪ ಸಡಿಲಿಸಿ ನಗಲು ಕಾರಣ ಹುಡುಕುತ್ತಿರುವ ಮನುಷ್ಯನಿಗೆ ತೇರು ಒದಗಿಬರುವುದು ಹೀಗೆ. ಚಂದ್ರಶಾಲೆಯ ಚಿತ್ರ ಮತ್ತು ತೇರಿನೊಂದಿಗಿನ ಕಾಯಕ್ಕನ ಸಂಬಂಧ ಸೂಕ್ಷ್ಮವಾಗಿ ಇಣುಕಿ ನೋಡುವ ಅಂಶಗಳು ಅಮೂರ್ತವಾಗಿಯೇ ಉಳಿಯುವುದು ಈ ಕತೆಯ ವಿಶೇಷ.


`ಗಾಳಿಮರದ ನೆಳಲು' ಕತೆ ಭಿನ್ನವಾಗಿದೆ. ಜೈಲಿನಲ್ಲಿರುವ ವೆಂಕಟೇಶನ ಹೆಂಡತಿ ನಾಗಮ್ಮ ಬಸುರಿ. ಅವಳು ಸುಡುಬಿಸಿಲಿನಲ್ಲಿ ರಸ್ತೆಯ ಬದಿಯಲ್ಲಿ ತನ್ನ ಗಂಡನನ್ನು ಕಾಯುತ್ತಿದ್ದಾಳೆ. ಕಾರವಾರದ ಕೋರ್ಟಿಗೆ ವಿಚಾರಣೆಗಾಗಿ ಪೋಲಿಸರು ವ್ಯಾನಿನಲ್ಲಿ ಅವನನ್ನು ಕರೆದೊಯ್ಯುವಾಗ ಒಂದು ಬಾರಿ ನೋಡುವುದು, ವ್ಯಾನು ನಿಲ್ಲಿಸಿದರೆ ಮಾತನಾಡುವುದು, ಅವನಿಗಿಷ್ಟವೆಂದು ಬೆಳಿಗ್ಗೆ ಬೇಗ ಎದ್ದು, ಅತ್ತೆಗೆ ಸುಳ್ಳು ಹೇಳಿ, ಮಾಡಿತಂದ ಅವನ ಇಷ್ಟದ ಪಾಯಸ ಕೊಡುವುದು ಎಲ್ಲ ಅವಳ ಆತಂಕ, ಅನುಮಾನ, ಉದ್ವೇಗ ಎಲ್ಲ ಸೇರಿದಂತಿರುವ ಉದ್ದೇಶಗಳು. ಇಲ್ಲಿನ ವಿವರಗಳು ಎಷ್ಟೊಂದು ಸೊಗಸಾಗಿವೆ ಎಂದರೆ, ವ್ಯಾನು ಬರುತ್ತೋ ಇಲ್ವೋ, ನಿಲ್ಲಿಸ್ತಾರೋ ಇಲ್ವೋ, ಅವನಿಗೆ ಇದೆಲ್ಲ ಇಷ್ಟವಾಗುತ್ತೋ ಇಲ್ವೋ ಎಂಬೆಲ್ಲ ಆತಂಕಗಳು ನಾಗಮ್ಮ, ತುಳಸಿಯರದ್ದಾಗದೆ ಓದುಗರದ್ದೇ ಆಗಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿರುವುದು ಈ ಕತೆಯ ಯಶಸ್ವೀ ಅಂಶಗಳಲ್ಲಿ ಒಂದು.


ಹೀಗೆ ಓದುಗನಲ್ಲಿ ಹುಟ್ಟಿಸಿದ ಆತಂಕ ಧ್ವನಿಸುವ ಅಂತಃಕರಣ ಇದೆಯಲ್ಲ, ಅದು ವಿಶಿಷ್ಟವಾದದ್ದು ಮತ್ತು ಜಯಂತರ ಕಥನ ಪರಂಪರೆಯ ಮೂಲಭೂತ ಸೆಲೆಯೇ ಹೀಗೆ ಮನುಷ್ಯನಿಗೆ ತನ್ನೊಳಗಿನ ಮನುಷ್ಯನನ್ನು ಮತ್ತೆ ಮತ್ತೆ ನಿಕ್ಕಿಯಾಗಿಸುತ್ತ, ಅವನನ್ನು ಹೆಚ್ಚು ಹೆಚ್ಚು ಮನುಷ್ಯನನ್ನಾಗಿಸುತ್ತ ಹೋಗುವುದೇ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜಯಂತ ಅದನ್ನು ಓದುಗನಲ್ಲಿ ಹುಟ್ಟಿಸುವುದು ಯಾವುದೇ ಅಬ್ಬರವಿಲ್ಲದೆ, ಅದ್ಭುತವಾದ ಸನ್ನಿವೇಶಗಳ ಮೇಲಾಟಗಳಿಂದಲ್ಲ, ತಾತ್ವಿಕ ದೊಂಬರಾಟದಿಂದಲ್ಲ, ಸಂಕೀರ್ಣ ಕಥಾಲೋಕದ ನಿರ್ಮಾಣದಿಂದಲೂ ಅಲ್ಲ. ಜಯಂತ ಮನುಷ್ಯನನ್ನು ಕಾಣುವ ದೃಷ್ಟಿಕೋನ, ಅವನ ಸತ್‌ನಲ್ಲಿ ತೋರಿಸುವ ಅಚಲ ನಂಬುಗೆ ಮತ್ತು ಸರಳವಾದ ಮನಸ್ಸಿನಿಂದ ಜಗತ್ತನ್ನು ಪ್ರೀತಿಸಬಲ್ಲ ಅವರ ಶಕ್ತಿ ಇವೇ ಜಯಂತರ ಸೃಜನಕ್ರಿಯೆಯ ಬತ್ತದ ಸೆಲೆ ಎಂದು ಮತ್ತೆ ಮತ್ತೆ ಅನಿಸುವುದು ಈ ಕಾರಣಗಳಿಗೆ.


"ನಿನಗಾಗಿ ಕಾದವರು ಬರೆ ನಾವಿಬ್ಬರೆ ಅಲ್ಲ" ಎಂದು ಧೈರ್ಯ ತುಂಬುವವಳಂತೆ ಗೌರಿಯ ಕಡೆ ನೋಡಿ ಮಾಯೆಯಲ್ಲಂಬಂತೆ ಅವಳನ್ನೂ ಕೈಬೀಸಿ ಕರೆದಳು. ಇಷ್ಟೇ ತನ್ನ ಸೀಮೆ ಎಂಬಂತೆ ಗೌರಿ ಅಲ್ಲೇ ಪೊದೆಯಲ್ಲಿ ಎಲೆಯಾಗಿ, ಮುಳ್ಳಾಗಿ, ಕಣ್ಣಾಗಿ ಅವಿತೇ ಉಳಿದಳು."


ಈ ಗೌರಿ ನಾಗಮ್ಮನ ಸವತಿ. ನಾಗಮ್ಮ ತುಂಬು ಬಸುರಿ. ಇಡೀ ಸನ್ನಿವೇಶ ರಣ ರಣ ಸುಡು ಬಿಸಿಲಿನಲ್ಲಿ ನಡೆಯುತ್ತಿದೆ. ಕಣ್ಣಿಗೆ ರಾಚುವ ಬಿಸಿಲಿನಲ್ಲಿ ದೂರದ ತಿರುವಿನಲ್ಲಿ ಇದ್ದಕ್ಕಿದ್ದಂತೆ ಕಾಣಬಹುದಾದ ಕರಿನೀಲಿ ಪೋಲೀಸ್ ವ್ಯಾನಿಗಾಗಿ ಕಾಯುತ್ತ ನಿಂತ ಗಾಳಿ ಮರದ ನೆಳಲಿನಲ್ಲಿ ದ್ರವಿಸುವ ಮಾನವೀಯ ಅಂತಃಕರಣದ ದೃಶ್ಯಾವತರಣ ಹೇಗಿದೆ ಎಂದರೆ ಈ ಕತೆ ಬಹುಕಾಲ ಮನಸ್ಸಿನಲ್ಲಿ ಒಂದು ಕಾಯುವಿಕೆಯಾಗಿ ನಿಂತು ಬಿಡುತ್ತದೆ!


`ತೀರ' ಕತೆ ಒಂದು ನುಡಿಚಿತ್ರದಂತೆಯೇ ಮೂಡಿ ನಿಲ್ಲುತ್ತದೆ. ದಡಕ್ಕೆ ಬಿದ್ದು ಸಾಯುವ ಬೃಹತ್ ಮೀನೊಂದು ತೀರದ ಜನರಲ್ಲಿ ಹುಟ್ಟಿಸುವ ಆತಂಕವನ್ನು ಮೀರುವ ಅದನ್ನು ಬದುಕಿಸುವ ಓಡಾಟ, ಗಡಿಬಿಡಿ ಇಲ್ಲಿ ಚಿತ್ರಿತಗೊಂಡಿದೆ. `ಪ್ರಾಣವನ್ನು ತಮ್ಮೊಳಗೆ ಹಂಚಿ ಹೋಗಲೆಂದೇ ದೇಹವನಿಲ್ಲಿ ತೊರೆಯುತ್ತಿದೆ ಇದು' ಎಂಬ ಭಾವ ಇಲ್ಲಿ ಕಡಲ ತೀರದ ನಸುಗತ್ತಲಲ್ಲಿ ರೂಪು ರೇಖೆಯಿಲ್ಲದ ಮಂದಿಯ ಮನದಲ್ಲಿನ ಅಶಾಂತ ತೆರೆಗಳಂತೆ ಹೊಯ್ದಾಡುತ್ತದೆ.


`ಸ್ವಪ್ನದೋಷ' ಕಥಾನಕವೇ ಮುಖ್ಯವಾದ ಒಂದು ಕತೆ. ಇಲ್ಲಿ ಭವಾನಿಯ ಸುಪ್ತ ಆಸೆ ಚಿನ್ನದ ಬಳೆ. ಘಟ್ಟದ ಮೇಲೆ ಸಿರ್ಸಿ ಸಮೀಪದ ಹಳ್ಳಿಯ ಹೆಲ್ತ್‌ಸೆಂಟರಿನಲ್ಲಿ ಕೆಲಸ ಮಾಡುವ ಗಂಡ ಲೀಲಾಧರ ಒಂಥರಾ ಅನಾಸಕ್ತ ಜೀವಿ. ಪ್ರಸ್ತುತ ಸ್ಥಿತಿಗತಿಗೆ ಹೊಂದಿಕೊಂಡು ಅದನ್ನು ಸ್ವೀಕರಿಸಲಾರದ, ಅದಕ್ಕಿಂತ ಹೆಚ್ಚಿನದನ್ನು ಕೈಗೂಡಿಸಿಕೊಳ್ಳಲಾರದ ಮಧ್ಯಮವರ್ಗದ ಹಳಹಳಿಕೆಗಳಲ್ಲಿ ಕಳೆದು ಹೋದವನಂತಿರುವ ಲೀಲಾಧರ ಹೆಂಡತಿ ಅವರಿವರಲ್ಲಿ ಅಡುಗೆಗೆ ಹೋಗುವುದನ್ನು ತಿಳಿದು ಕುಣಿದಾಡುತ್ತಾನೆ. ಅವನಿಗೆ ಭ್ರಾಂತಿ ಕವಿಯುತ್ತದೆ. ಕೇವಲ ಚಿನ್ನದ ಬಳೆಗಾಗಿ ಕದ್ದು ಮುಚ್ಚಿ ಅಡುಗೆ ಕೆಲಸ ಅದು ಇದು ಎಂದು ಯೋಚಿಸುವುದರಲ್ಲೆ ತನ್ನ ಪುಟ್ಟ ಪ್ರಪಂಚ ನೇಯ್ದುಕೊಂಡಿರುವ ಭವಾನಿ, ದಾಯಾದಿಗಳ ಜೊತೆ ಜಗಳಕ್ಕೆ ಹೆದರಿ ಊರಿನಿಂದ ದೂರವೇ ನಿಲ್ಲುವ ಅವಳ ಗಂಡ, ಅವನ ಭ್ರಾಂತಿ, ಸರಿಪಡಿಸಲು ಪ್ರಯತ್ನಿಸಿದರೂ ಸೋಲುವ ಅವಳು ಕೊನೆಗೆ ನಿಲ್ಲುವುದು ತನ್ನ ಚಿನ್ನದ ಬಳೆಯ ಕನಸಿನೊಂದಿಗೇ. ಅಷ್ಟರಮಟ್ಟಿಗೆ ಅವಳು ಕನಸುಗಳತ್ತ ಬರೇ ನಿಟ್ಟುಸಿರು ತೂರಿ ಭ್ರಾಂತಳಾಗದೇ ಲೀಲಾಧರನನ್ನು ಮೀರುವುದು ಕುತೂಹಲಕರವಾಗಿದೆ. ಮುಗ್ಧತೆಯನ್ನು, ಮೌಢ್ಯಕ್ಕೆ ಒಯ್ಯದೆ, ಸರಳಗೊಳಿಸದೆ ಕತೆ ಹೇಳುವ ಬಗೆ ಇಲ್ಲಿನ ವೈಶಿಷ್ಟ್ಯ.


`ಟ್ರೈಸಿಕಲ್' ಕತೆ ಮನುಷ್ಯ ಸಂಬಂಧಗಳನ್ನು, ಮಾನವ ಪ್ರೀತಿಯನ್ನು, ಅದು ಒಡ್ಡುವ ಸಂದಿಗ್ಧಗಳನ್ನು ಮತ್ತೆ ಸಣ್ಣ ಪುಟ್ಟ ಸಂಗತಿಗಳ ಮೂಲಕವೇ ಕಟ್ಟಿಕೊಡ ಬಯಸುವ ಕತೆ. ಏನಿದು ಇಷ್ಟು ಚಿಕ್ಕ ಸಂಗತಿ ಎನಿಸುವಾಗಲೇ ಅದು ಅಂತಃಕರಣವನ್ನು ಅಷ್ಟೇ ಆಳವಾಗಿ ಕಲಕುವುದಲ್ಲದೆ ಈ ಕತೆಯ ವಿವರಗಳು ಯಾಕೋ ಮಾಸ್ತಿಯವರ ನೆನಪು ಮೂಡಿಸುತ್ತದೆ. ಭಾರತೀಸುತರ `ಮೋಚಿ' ಕತೆ ಹೇಗೆ ಕನ್ನಡ ಮನಸ್ಸುಗಳನ್ನು ಇಂದಿಗೂ ತನ್ನ ಅಪ್ಪಟತನದಿಂದ ಕಲಕುತ್ತದೆಯೋ ಹಾಗೆ ಇದು. ಹಿಂದೆ ತಾವು ಊರು ಬಿಟ್ಟು ಹೋಗುವ ಸಂದರ್ಭದಲ್ಲಿ ಪಕ್ಕದ ಮನೆಯ ಪುಟ್ಟ ಮಗುವಿಗೆ ಆಡಿಕೊಳ್ಳಲು ಎಂದು ಬಿಟ್ಟು ಹೋಗಿದ್ದ ಪುಟ್ಟ ಸೈಕಲ್ಲು ಈಗ ತಮ್ಮದೇ ಮನೆಯಲ್ಲಿರುವ ಪುಟ್ಟ ಮಗುವಿಗೆ ಇದ್ದರಾಗುತ್ತಿತ್ತು ಎಂಬ ಆಸೆಯೇ ಮೂಲವಾಗಿ ಅದನ್ನು ಮರಳಿ ಒಯ್ಯಲು ಬಂದ ಮಾಸ್ತರರಿಗೆ ಅದನ್ನು ಒಯ್ಯಲು ಸಾಧ್ಯವಾಗುವುದಿಲ್ಲ. ಕೊಡಲು ಬಯಸಿದ ತಂದೆ ತಾಯಿಗಳಿಗೂ ಏನೆಲ್ಲ ಆಟ ಹೂಡಿದರೂ ಕೊಡಲಾಗುವುದಿಲ್ಲ! ಇದು ಗೆರೆಗಳ ನಡುವಿನ ತಲ್ಲಣಗಳ ಬರಹ.


`ಬಿಡು ಬಿಡು ನಿನ್ನಯ...' ಜಯಂತರ ಕತೆಗಳಲ್ಲಿ ಆಶಯದ ದೃಷ್ಟಿಯಿಂದ ಕೊಂಚ ವಿಶಿಷ್ಟ ಎನಿಸುವ ಕತೆ. ಮೈಯಲ್ಲಿ ಕೆಚ್ಚು ರೊಚ್ಚು ತುಂಬಿರುವ ದಿನಗಳ ದ್ವೇಷ ಬದುಕಿನುದ್ದಕ್ಕೂ ಒಂದು ತೆವಲಾಗಿ ಹತ್ತಿಕೊಂಡರೆ ಸಾವಿನ ಎದುರೂ ಅದು ಮೆರೆಯುತ್ತದೆಯೆ ಅಥವಾ ಮರೆಯಾಗುತ್ತದೆಯೆ ಎಂಬುದನ್ನು ಹೀಗೇ ಎಂದು ಹೇಳಲಾಗುವುದಿಲ್ಲ. ಘನಶ್ಯಾಮನಿಗೆ ಮಾಸ್ತರರ ಮೇಲಿರುವ ದ್ವೇಷ ಇಂಥದು. ಆತ ಈಗ ಮರಣಶಯ್ಯೆಯಲ್ಲಿದ್ದಾನೆ. ಸಹಜವಾದ ಮಾನವೀಯ ಅಂತಃಕರಣದಿಂದ ಅವನನ್ನು ಕಾಣ ಹೊರಟ ಮಾಸ್ತರರಿಗೆ ಹಾದಿಯುದ್ದಕ್ಕೂ ಕಾಡುವ ಈ ದ್ವೇಷದ ಫ್ಲ್ಯಾಶ್‌ಬ್ಯಾಕ್ ತಾವೀಗ ಅವನನ್ನು ಹೀಗೆ ಕಾಣಹೊರಟಿದ್ದು ಸರಿಯೆ ತಪ್ಪೆ ಎಂದು ಯೋಚಿಸುವಂತೆ ಮಾಡುತ್ತದೆ. ಇದು ಬಹಳ ಪ್ರಮುಖವಾದ ಘಟ್ಟ.


ಘನಶ್ಯಾಮ ಸಾಯಬಹುದು ಅಥವಾ ಸಾಯದೇ ಬದುಕಲೂ ಬಹುದು. ಎರಡೂ ಸಂದರ್ಭಗಳಲ್ಲಿ ಈ ಆಜನ್ಮ ವೈರಿ ಮಾಸ್ತರರ ಭೇಟಿ ಸ್ವತಃ ಘನಶ್ಯಾಮನಿಗೆ ಹೇಗೆ ಕಾಣಬಹುದು? ತಾನು ಕೈಲಾಗದೆ ಬಿದ್ದಿರುವುದನ್ನು ಕಂಡು ಹೀಯಾಳಿಸಲು ಬಂದಂತೆ ಕಾಣುವುದೆ ಅಥವಾ ಮರಣಶಯ್ಯೆಯಲ್ಲಿ ಈವರೆಗಿನ ಎಲ್ಲ ದ್ವೇಷ, ಜಿದ್ದು ಅರ್ಥಹೀನವಾಗಿ ಕಾಣುವುದೆ? ಪ್ರಶ್ನೆ ಉಳಿಯುತ್ತದೆ ಮತ್ತು ಮಾಸ್ತರರು ತಮ್ಮ ಭೇಟಿ ಘನಶ್ಯಾಮನ ಹಿಂಸೆಯನ್ನು ಹೆಚ್ಚಿಸಬಹುದೆಂದು ತರ್ಕಿಸಿ ತಮ್ಮ ಭೇಟಿಯನ್ನು ಕ್ಯಾನ್ಸಲ್ ಮಾಡಿ ಹಿಂದಿರುಗುತ್ತಾರೆ. ಇದು ಘನಶ್ಯಾಮನಿಗಿಂತ ಮಾಸ್ತರರ ಮನಸ್ಸನ್ನು ತೋರಿಸುತ್ತದೆ, ಅಲ್ಲವೆ? ಹಾಗಾಗಿ ಮಾಸ್ತರರ ಈ ನಿರ್ಧಾರವೂ ಓದುಗರಿಗಾಗಲಿ, ಮಾಸ್ತರರಿಗಾಗಲಿ ಪೂರ್ತಿ ಸಮಾಧಾನ ನೀಡಿದಂತಿಲ್ಲ! ಬಿಡಬೇಕಾದವರು ಇಲ್ಲಿ ಮಾಸ್ತರರೋ ಅಥವಾ ಘನಶ್ಯಾಮನೋ ಎಂಬ ಪ್ರಶ್ನೆ ಉಳಿದೇ ಇದೆ. ಜಯಂತರ ಕತೆಗಳಲ್ಲಿ ಸಾಧಾರಣವಾಗಿ ಮಾನವೀಯ ಅಂತಃಕರಣ ಗೆಲ್ಲಬೇಕು, ಎದ್ದು ನಿಲ್ಲಬೇಕು. ಆದರೆ ಇದೊಂದು ಕತೆ ಬಹುಷಃ ಅಪವಾದದಂತಿದೆ.


`ಚುಕ್ಕಾಣಿ' ಕತೆಯಲ್ಲಿ ತದಡಿ ಬಂದರು, ಗೋಕರ್ಣದಿಂದ ದಿನವೂ ನಾಲ್ಕೂವರೆಗೆ ಬಂದು ಹೋಗುವ ಕೆಂಪು ಬಸ್ಸು, ಮರಳುವ ತನಕ ಮಾಯವಾದಂತೆ ಅಗೋಚರ ಲೋಕಕ್ಕೆ ತೆರಳುವ ಲಾಂಚುಗಳು, ಅವು ಹೊತ್ತು ತರುವ ಮೀನುಗಳ ಲೋಕ, ಬೇಬಿ ಇದೀಗ ಸ್ಫೋಟಿಸಿದ ಸಮಸ್ಯೆ, ಕಂಗಾಲಾದ ಮಾಸ್ತರರ ದಿಕ್ಕೆಟ್ಟ ಪರಿಸ್ಥಿತಿ, ಊರ ಯುವಕರ, ಕೆಲಸವಿಲ್ಲದವರ, ಅಂಗಡಿಕಾರರ ಎಲ್ಲ ಗದ್ದಲಗಳು, ಅಪಸ್ವರಗಳು ಪರಸ್ಪರ ಒಂದಕ್ಕೊಂದು ತಳುಕು ಹಾಕಿಕೊಂಡಿರುವಂತೆ, ಇವುಗಳಲ್ಲೇ ಯಾವುದೋ ಒಂದು ಉಳಿದೆಲ್ಲವನ್ನು ಒಂದರ ಹಿಂದೆ ಒಂದು ಘಟಿಸುವಂತೆ ಹುನ್ನಾರಿಟ್ಟಿದೆ ಎಂಬಂತೆ ಚಿತ್ರಿಸಿರುವ ರೀತಿ ಗಮನಾರ್ಹವಾಗಿದೆ. ಇಷ್ಟಾಗಿಯೂ ಈ ಕತೆ ಒಂದು ನುಡಿಚಿತ್ರದ ಹಾಗೆ ಮನಸ್ಸಿನಲ್ಲಿ ನಿಲ್ಲುತ್ತದೆಯೇ ಹೊರತು ಕಥಾನಕವಾಗಿ ಬೆಳೆಯುವುದಿಲ್ಲ.


`ಚೌತಿ ಚಂದ್ರ'ದ ಕತೆ ಮೇಲ್ನೋಟಕ್ಕೆ ಒಂದು ತಿಕ್ಕಲ ಲಹರಿಯ ಹುಚ್ಚುಚ್ಚಾಟದಂತೆ ಕಂಡರೂ ಇದು ಅಡಗಿಸಿಟ್ಟುಕೊಂಡಿರುವ ಆಳ ವಿಸ್ಮಯಕರ. ಚೌತಿ ಚಂದ್ರನನ್ನು ಕಂಡು ಕಳ್ಳ ಎನಿಸಿಕೊಳ್ಳುವ ಭಯದಿಂದ ಆವತ್ತೆಲ್ಲ ಆಕಾಶವನ್ನೇ ನೋಡದೆ ಉಳಿಯುವ ಮನುಷ್ಯನ ಮೂಲ ಮೌಢ್ಯದಂಥ ಒಂದು ಶ್ರದ್ಧೆ ಇಲ್ಲಿ ಒಂದು ಸ್ಥಾಯಿಯಾದ ಹಿನ್ನೆಲೆಯಾಗಿ ಕೆಲಸಮಾಡುತ್ತಿದೆ. ಆಕಾಶಕ್ಕೇ ಕೈ ಹಚ್ಚುವ ಹುಚ್ಚಿನಂಥ ಉತ್ಸಾಹದ ಪಾಂಡುರಂಗ ಇಲ್ಲಿ ತನ್ನ ಜೀವನಪ್ರೀತಿಯನ್ನು ಉತ್ಕಟತೆಯಿಂದಲೇ ನಮಗೆ ಮನಗಾಣಿಸುವ ಪಾತ್ರ. ರಜೆ ಕೊಡದ ಕೋಪಕ್ಕೆ ಬಸ್ಸನ್ನೆ ಹಾರಿಸಿಕೊಂಡು ಊರಿಗೆ ಬರುವ, ಬಂದು ಮಕ್ಕಳು, ಚೌತಿ ಗಣಪತಿಯ ಹಬ್ಬ, ನಾಟಕಶಾಲೆ, ನಾಟಕದ ತಾಲೀಮಿನ ಹುಡುಗರ ನಡುವೆ `ಅರವತ್ತು ಕ್ಯಾಂಡಲ್ ಬಲ್ಬಿನಂತೆ ಉರಿಯುತ್ತ' ಕಂಗೊಳಿಸುವ ಜುಯೀಬಾಯಿ ಎಂದೆಲ್ಲ ಕಳೆದು ಹೋಗುವ ಪಾಂಡುರಂಗ ಪ್ರತಿನಿಧಿಸುವ ಒಂದು ಸ್ತರ; ನಾಟಕದ ಬಣ್ಣದ ಬದುಕು, ನಟನೆ, ತರಹೇವಾರಿ ಮನುಷ್ಯರ ನಡುವಿನ ಒಡನಾಟ, ವ್ಯವಹಾರ ಎಲ್ಲದರ ನಡುವೆ ಆಕಾಶವನ್ನು ಕಾಣಲು ಅವಕಾಶವೇ ಇಲ್ಲದಂಥ ಪರಿಸ್ಥಿತಿಯಲ್ಲಿರಬಹುದಾದ ಜುಯೀಬಾಯಿಯ ನೇಪಥ್ಯದ ಮೌನದ ಭಾರ ಇನ್ನೊಂದು ಸ್ತರ. ಇವೆರಡೂ ಸಂಧಿಸುವ ಚೌತಿಯ ಚಂದ್ರನಿರುವ ಆಕಾಶದ ಕೆಳಗಿನ ಏಕಾಂತದ ಒಂದು ರಾತ್ರಿ ಈ ಇಡೀ ಕತೆಯ ಅಂತರಾತ್ಮವನ್ನು ತೆರೆದಿಡುತ್ತದೆ. ಕೇವಲ ಸಾನ್ನಿಧ್ಯದ ಹಿತ ಮತ್ತು ಮೌನದ ಸಂವಾದ ಇಲ್ಲಿ ಪಡೆದುಕೊಳ್ಳುವ ಅರ್ಥವ್ಯಾಪ್ತಿ ವಿಶಿಷ್ಟವಾದದ್ದು.


ಅಲ್ಲಿ ಬಸ್ಸು ಹಾರಿಸಿತಂದ ಆತಂಕ ಪಾಂಡುರಂಗನಿಗೆ. ಅವನನ್ನು "ಬಿಟ್ಟುಬಿಡು ಅದನ್ನು ನನಗೆ" ಎಂದು ಬಾಯ್ಮುಚ್ಚಿಸುವ ಜುಯೀಬಾಯಿಯ ಮಾತಿನಲ್ಲಿ ಎಂಥ ಆತ್ಮವಿಶ್ವಾಸ, ಶಾಂತಿ, ನೆಮ್ಮದಿ, ಪ್ರೀತಿ ಎಲ್ಲ ಇದೆ! ಕಾಲವನ್ನು ಸ್ತಬ್ಧಗೊಳಿಸಿ ನಿಲ್ಲಿಸಿಬಿಡಬಲ್ಲ ಶಕ್ತಿ ಇದೆ! ವಿಪರ್ಯಾಸವೆಂದರೆ ಈ ಘಳಿಗೆಯನ್ನು ಇಬ್ಬರೂ `ಕದ್ದು' ಪಡೆದಿರುವುದು!


`ಬಣ್ಣದ ಕಾಲು' ತನ್ನ ವಿವರಗಳ ಲೋಕದಿಂದ ಮುಂಬಯಿಯ ಬದುಕನ್ನು ಹೊಸದೇ ಆದ ದೃಷ್ಟಿಯಿಂದ ಕಟ್ಟಿಕೊಡುವ ಕತೆಯಾದರೂ ಮೂಲದಲ್ಲಿ ಪುಟ್ಟ ಪೋರನೊಬ್ಬನ ತುಂಟತನದಾಚೆ ಅವನಲ್ಲಿ ಹುದುಗಿರುವ ಮಾನವೀಯ ನೆಲೆಯನ್ನು ಗುರುತಿಸುವ ಕತೆ.


`ಸೇವಂತಿ ಹೂವಿನ ಟ್ರಕ್ಕು' ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಒಂದು. ಈ ಕತೆಯ ಅಂತ್ಯವಲ್ಲದ ಅಂತ್ಯ ಎಂಥವರನ್ನೂ ತಲ್ಲಣಗೊಳಿಸಿ ಕಾಡುತ್ತ ಉಳಿಯುತ್ತದೆ. ಮನುಷ್ಯ ಹುಟ್ಟು ಮತ್ತು ಸಾವು ಹೇಗೆ ನಮ್ಮ ನಮ್ಮ ಬದುಕಿನ ಅನುಕೂಲಗಳಿಗೆ ಸರಿಯಾಗಿ ಹೊಂದಿಕೊಳ್ಳಬೇಕಾದ ಸಂಗತಿಗಳು ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾನೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಈ ಪುಟ್ಟ ಕತೆ ಮೂಡಿದೆ. ಇಲ್ಲಿನ ಮನುಷ್ಯ `ಮಹಾಜನ' ಕುಟುಂಬ.


`ಇಂಗುವ ಕಂಗಳಿಂದ ದುರ್ಗಿ ಕೈಲಿದ್ದ ಗುಳಿಗೆಗಳನ್ನೇ ನೋಡಿದಳು. ನಂತರ ಏನೋ ಹೇಳಲು ತಡವರಿಸಿದಳು. ಮಹಾಜನನಿಗೆ ತಿಳಿಯಲಿಲ್ಲ. ಅವನ ಹೆಂಡತಿ ಬಗ್ಗಿ ದುರ್ಗಿಯ ಸಮೀಪ ಕಿವಿ ಒಯ್ದಳು. ದುರ್ಗಿ "ತಗೋತೇನೆ........ಆದರೆ ನಾಳೆ........ನಾಳೆ ತಗೋತೇನೆ" ಎಂದು ಪಿಸುಗುಟ್ಟಿದಳು.'


`ಇನ್ನೇನು ಯಾರೋ ಬಂದು ಈ ಟ್ರಕ್ಕಿನ ಬಾಗಿಲು ತೆಗೆದು ಹಳದಿ ಹೂವಿನ ರಾಶಿಯಲ್ಲಿ ನಿಂತು ಸಲಿಕೆಯಿಂದ ಗೋರಿ ಗೋರಿ ರಸ್ತೆಗೆ ಹೂವು ಸುರಿಯಲಿರುವರು. ಈ ಯುಗದಲ್ಲಿಯೇ ಅತ್ಯಂತ ಉದ್ದವಾದ ರಾತ್ರಿ ತನ್ನೆಲ್ಲ ಶಕ್ತಿಯಿಂದ ನಾಳೆಯನ್ನು ನೂಕಿ ನಿಂತಿರುವುದು.'


ಈ ಸಾಲುಗಳು ನಮ್ಮ ಅಂತರಂಗದ ತಳಮಳಕ್ಕೆ ಕಾರಣವಾಗುವ ಅಸಹನೀಯ ತಲ್ಲಣಗಳನ್ನೆಬ್ಬಿಸುವ ಸಾಲುಗಳು.


`ದಿಟ್ಟಿಬೊಟ್ಟು' ಕತೆ ಕೆ.ಕೆ ಎಂಬ ವ್ಯಕ್ತಿಯ ವ್ಯಕ್ತಿಚಿತ್ರದಂತಿರುವ ಕತೆ. ಎಂಭತ್ತು ದಾಟಿದಂತಿರುವ ದಣಿದ ವಯೋವೃದ್ಧನ ಬದುಕಿನಲ್ಲೀಗ ಪ್ರಸ್ತುತವಾಗಿ ಉಳಿದಿರುವುದು ಎಡಪಂಥೀಯ ಚಳುವಳಿಗಳಾಗಲೀ, ಸಂಪು ಸತ್ಯಾಗ್ರಹಗಳಾಗಲೀ ಅಲ್ಲ. ಅದು ಬರೇ ಪುಟಾಣಿ ಮಕ್ಕಳು, ಅವರ ಬೊಗಸೆಗಣ್ಣುಗಳಲ್ಲಿನ ಕನಸು, ಖಾಲಿ ಬಿಳೀ ಕಾಗದದಂತಿರುವ ಈ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಯಾವ ಚಿತ್ತು, ಕಾಟು, ಕಲೆ ಆಗದಂತೆ ಅವರ ಬದುಕು ಬೆಳಗಲೀ ಎಂಬ ಸ್ನಿಗ್ಧ ಹಾರೈಕೆ. ಈ ಕತೆಕೂಡ ಕಥಾನಕದ ಹಂಗಿಲ್ಲದ ನುಡಿಚಿತ್ರದಂತೆಯೇ ಇರುವುದನ್ನು ಗಮನಿಸಬಹುದು.


`ಅಪರೂಪ' ಕತೆಯೊಂದಿಗೆ ಎಸ್.ದಿವಾಕರ ಅವರ `ಕ್ರೌರ್ಯ' ಮತ್ತು ಜುಂಪಾಲಾಹಿರಿಯ `The treatment of Bibi Haldar' ಕತೆಗಳು ನೆನಪಾಗುತ್ತವೆ. ಕನ್ನಡದಲ್ಲೂ ಸರಿ ಸುಮಾರು ಇಂಥ ಪರಿತ್ಯಕ್ತ ಎನ್ನಬಹುದಾದ ಹರಯದ ಹುಡುಗಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಇತರ ಕತೆಗಳೂ ಬಂದಿವೆ. ಪಾರ್ಶ್ವವಾಯುವಿಗೆ ತುತ್ತಾದ ಹರೆಯದ ಹುಡುಗಿಯ ಸುಪ್ತ ಕನಸುಗಳು, ಬಯಕೆಗಳು, ಅವುಗಳನ್ನು ವಸ್ತು ಸ್ಥಿತಿಯ ಅರಿವಿನೊಂದಿಗೇ ಸ್ವತಃ ನಿಭಾಯಿಸಲು ಹೆಣಗುವ ಪರಿಯ ಒಂದು ಸಂಯಮದ ಚಿತ್ರ ಇಲ್ಲಿದೆ. ಸಹಜವಾಗಿರುವವರ ಬದುಕಿನ ಅನೇಕ ರಿಚ್ಯುಯಲ್‌ಗಳ ಕುರಿತ ತನ್ನದೇ ಫ್ಯಾಂಟಸಿಗಳಲ್ಲಿ ನಸುನಗುವ ವರ್ಷಾಳ ಬದುಕಿನ ದುರಂತವನ್ನು ಕೇವಲ ಒಂದು ಫೋಟೋ ಪ್ರಕರಣದಲ್ಲಿ ಜಯಂತ್ ಹಿಡಿದುಕೊಟ್ಟಿರುವುದು ಅವರ ಸೂಕ್ಷ್ಮ ಅವಲೋಕನದ ಪ್ರತಿಭೆಯನ್ನು ತೋರುವಂತಿದೆ.


`ಹೊಸ್ತಿಲು' ಈ ಸಂಕಲನದ ಕೊನೆಯ ಮತ್ತು ಹದಿಮೂರನೆಯ ಕತೆ. ಗುಜರಿ ದಂಧೆಯಲ್ಲಿರುವವನ ಕನಸುಗಳು, ಅವನ ಕೈಗೆಟುಕದ ಕಣ್ಣೆದುರಿನದೇ ಒಂದು ಜಗತ್ತು, ಭಗ್ನಗೊಂಡ ವಾಸ್ತವ ಎಲ್ಲವೂ ಅವನದೇ ಅಂಗಡಿಯ ಒಂದು ನಿಲುವುಗನ್ನಡಿಯಲ್ಲಿ ಫ್ಲ್ಯಾಶ್‌ಗಳಾಗಿ ಮೂಡಿ ಮರೆಯಾಗುವುದು ಒಂದು ಸುಂದರ ಪರಿಕಲ್ಪನೆಯಾಗಿ ಇಡೀ ಕತೆಯನ್ನು ಆವರಿಸಿದೆ.


ಚಂದ್ರಶಾಲೆ, ತೀರ, ಚುಕ್ಕಾಣಿ, ದಿಟ್ಟಿಬೊಟ್ಟು, ಹೊಸ್ತಿಲು ಕತೆಗಳು ಕಥಾನಕದ ಅಂಶವನ್ನು ಕಡೆಗಣಿಸಿ ನುಡಿಚಿತ್ರಗಳ ಆಯಾಮವನ್ನೇ ಹೆಚ್ಚಾಗಿ ನೆಚ್ಚಿಕೊಂಡಂತಿರುವುದರಿಂದ ಜಯಂತರ ಕತೆಗಳಲ್ಲಿ ಕಥಾನಕದ ಬೆಳವಣಿಗೆಯಿಲ್ಲ, ಬದಲಿಗೆ ಅವು ವಿವರಗಳಲ್ಲೇ ಪರವಶಗೊಂಡಂತೆ ಉಳಿಯುತ್ತವೆ ಎಂಬ ಅಭಿಪ್ರಾಯವೂ ಬರಲು ಕಾರಣವಾದವು. ಈ ಕತೆಗಳನ್ನು ನೋಡುವಾಗ ಸಹಜವಾಗಿಯೇ ಅಂಕಣಗಳು ಜಯಂತರ ಕತೆಗಾರಿಕೆಯ ಮೇಲೆ ಪರಿಣಾಮ ಬೀರಿರುವುದು ಕಾಣುತ್ತದೆ.


ಆದರೆ ಗಾಳಿ ಮರದ ನೆಳಲು, ಸ್ವಪ್ನದೋಷ, ಟ್ರೈಸಿಕಲ್, ಬಿಡು ಬಿಡು ನಿನ್ನಯ, ಚೌತಿ ಚಂದ್ರ, ಬಣ್ಣದ ಕಾಲು, ಸೇವಂತಿ ಹೂವಿನ ಟ್ರಕ್ಕು ಮತ್ತು ಅಪರೂಪ ಕತೆಗಳು ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತವೆ. ಗಾಳಿ ಮರದ ನೆಳಲು, ಸೇವಂತಿ ಹೂವಿನ ಟ್ರಕ್ಕು, ಬಣ್ಣದ ಕಾಲು ಮೂರೂ ಕತೆಗಳು ಭಿನ್ನ ಭಿನ್ನ ನೆಲೆಯಲ್ಲಿ, ಭಿನ್ನ ಭಿನ್ನ ವಯೋಮಾನದ ಪಾತ್ರಗಳ ಪಾತಳಿಯಲ್ಲಿ ಮಾನವನ ಆಂತರಿಕ ತುಮುಲಗಳ ಸುತ್ತ, ಅವನ ಅಂತಃಕರಣದ ಸೆಲೆಗಳ ಮೂಲ ಅರಸುತ್ತ ಬಿಚ್ಚಿಕೊಳ್ಳುತ್ತವೆ. ಆದರೆ ಮಾಸ್ತಿ ಕತೆಗಳ ನೆನಪು ತರುವ ಬಿಡುಬಿಡು ನಿನ್ನಯ ಕತೆಯಲ್ಲಿ ಮಾಸ್ತರರು ಘನಶ್ಯಾಮನನ್ನು ನೋಡಲು ಹೋಗದಿರುವ ನಿರ್ಧಾರಕ್ಕೆ ಬರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗಾಗಿ ಗಾಳಿ ಮರದ ನೆಳಲು ಕತೆಯ ನಾಗಮ್ಮನ ಔದಾರ್ಯವನ್ನು ಘನಶ್ಯಾಮನಲ್ಲಿ ಕಾಣಬಹುದಾದ ಸಾಧ್ಯತೆ ಇಲ್ಲಿಲ್ಲ. ಅದರೆದುರು ಘನಶ್ಯಾಮ ಮನಸ್ಸಿಗೆ ಹಿಂಸೆ ಮಾಡಿಕೊಂಡರೆ ಎಂಬ ಮಾಸ್ತರರ ತರ್ಕ ಸ್ವಲ್ಪ ಕಡಿಮೆಯದ್ದಕ್ಕೆ ರಾಜಿ ಮಾಡಿಕೊಂಡಂತೆಯೇ ಕಾಣುತ್ತದೆ! ಟ್ರೈಸಿಕಲ್ ಮತ್ತು ಅಪರೂಪ ಕತೆಗಳಲ್ಲೂ ಜಯಂತರ ಕಾಳಜಿ ಮನುಷ್ಯ ಸಂಬಂಧಗಳ ನಡುವೆ ದೃವಿಸುವ ಅಂತಃಕರಣದ ಅಪರೂಪದ ಕ್ಷಣಗಳನ್ನು ಕಟ್ಟಿಕೊಡುವುದೇ ಆಗಿದೆ. ಸ್ವಪ್ನದೋಷ ಕತೆ ಕೂಡ ಬಿಡು ಬಿಡು ನಿನ್ನಯ ಕತೆಯಂತೆಯೇ ಜಯಂತರ ಎಂದಿನ ಶೈಲಿ, ಆಶಯ ಮತ್ತು ನಿಲುವುಗಳಿಗೆ ಭಿನ್ನವಾಗಿ ಹೊಸತನವನ್ನು ತೋರುತ್ತವೆ. ಇದೇ ಮಾತು ನಿರೂಪಣೆಯ ವಿಧಾನದ ಮಟ್ಟಿಗೆ ಚೌತಿಚಂದ್ರ ಕತೆಗೂ ಅನ್ವಯಿಸುತ್ತದೆ.


೧೯೯೯ರಲ್ಲಿ ಬಂದ ಈ ಸಂಕಲನ ದ್ವಿತೀಯ ಮುದ್ರಣ ಕಂಡಿದೆ, ಅಂಕಿತದವರು ತಂದಿದ್ದಾರೆ.

1 comment:

kaligananath gudadur said...

jayantannana kathegalendare kavyaloka prveshisidante. avara kathegalanteye nanage avarendre innu ishta.
-kaligananath gudadur