Friday, July 25, 2008

ಪರಿಧಿಯಿಂದ ಹೊರಗೆ ಹೋದ ವ್ಯಾಸ


"ನಿಮ್ಮನ್ನು ಸುರಿಯುತ್ತಿರುವ ಮಳೆಯಲ್ಲಿ ಕಾಣಬೇಕೆಂದಿದೆ ನನಗೆ" ಎಂದಿದ್ದರು ಜಯಂತ್ ಕಾಯ್ಕಿಣಿ, ಎಂ. ವ್ಯಾಸರಿಗೆ. ನೀಲಿ ಮಳೆ, ಬೊಗಸೆಯಲ್ಲಿ ಮಳೆ ಮತ್ತು ಮುಂಗಾರು ಮಳೆಯ ಜಯಂತ ವ್ಯಾಸರನ್ನು ಕಾಣಲೆಂದೇ ಮಂಗಳೂರಿಗೆ ಬಂದು, ಇಲ್ಲಿಂದ ಕಾಸರಗೋಡಿಗೆ ಹೋಗಿ, ಆ ವರೆಗೆ ಎಂದೂ ಕಾಣದಿದ್ದ ವ್ಯಾಸರನ್ನು, ಅವರ ಫಾರೆಸ್ಟ್ ಗ್ರೀನ್ ಕಾರನ್ನು ಕಾಯುತ್ತ ನಿಂತ ಘಳಿಗೆ ನೆನಪಾಗುತ್ತದೆ.


ವ್ಯಾಸರು ಬಂದರು. ತಣ್ಣಗಿನ ಏರಿಳಿತಗಳಿಲ್ಲದ ದನಿ, ಕೃಶ ಕಾಯ, ಭಾವನೆಗಳ ಸುಳಿವುಗೊಡದ ಮುಖ. ಇದು ಕಣ್ಣಿಗೆ ಕಾಣುವ ವ್ಯಾಸರಾದರೆ ಅವರ ಅಂತರಂಗ ಬಲ್ಲವರೇ ಬಲ್ಲರು.


ವ್ಯಾಸರ ಮನೆಯಲ್ಲಿ ಒಂದಿಡೀ ಹಗಲು, ರಾತ್ರಿ ತಂಗಿದ್ದು ಹರಟಿ ಹರಟಿ ಸುಸ್ತಾಗಿ ಮಲಗಿ ಮತ್ತೆ ಮುಂಜಾನೆ ಇನ್ನೂ ಮಂಜು ಬೀಳುತ್ತಿರುವ ಹೊತ್ತಲ್ಲೇ ಎದ್ದು ಬಿಸಿ ಬಿಸಿ ಕಾಫಿ ಕುಡಿದು ಫಸ್ಟ್ ಬಸ್ಸಿಗೇ ಹೊರಟು ನಿಂತಿದ್ದು, ಕಾಸರಗೋಡಿನ ಪೇಟೆ ತನಕ ವ್ಯಾಸರು ಬಂದು ಬೀಳ್ಕೊಟ್ಟಿದ್ದು, ಅವರ ಪತ್ನಿ ನಮಗಾಗಿ ಮಾಡಿ ಉಣಿಸಿದ ವಿಶೇಷ ಭೋಜನ, ಮೊದಲಿಂದ ಜೊತೆಗಿದ್ದ ಮುರಳಿಕೃಷ್ಣ ಮತ್ತು ಮೋಹನ, ಇವರ ತಾತನವರಾದ ಶೇಣಿಯವರನ್ನು ಕಂಡಿದ್ದು.... ಜಯಂತರ ತಂದೆ ಗೌರೀಶರು ಈಗಿಲ್ಲ ಎಂದು ತಿಳಿದಾಗ ಮಂಕಾದ ಶೇಣಿಯವರು ಮುಂದೆ ಒಂದೇ ವಾರದಲ್ಲಿ ಮರೆಯಾಗಿ ಹೋಗಿದ್ದು, ಆಸುಪಾಸು ಎಂದು ಹೋಗಿ ಭೇಟಿ ಮಾಡಿದ ಕವಯಿತ್ರಿ ವಿಜಯಲಕ್ಷ್ಮಿ..


ನಾಗಾಭರಣ ತಮ್ಮ ಜೀವನ್ಮುಖಿ ಧಾರಾವಾಹಿಗೆ ಆಯ್ದಿದ್ದ ಮನೆಯನ್ನು ಹೊಕ್ಕು ನಮ್ಮದೇ ಸ್ಮೃತಿಗಳಲ್ಲಿ ಸಿಕ್ಕಿಬಿದ್ದು ಕಳೆದು ಹೋಗಿದ್ದು... ಕಾಸರಗೋಡಿನ ಕಾಲೇಜಿಗೆ ಹೋಗಿ ನಡೆಸಿಕೊಟ್ಟ ಪುಟ್ಟ ಸಂವಾದ ಕಾರ್ಯಕ್ರಮದಲ್ಲಿ ಮೌನವಾಗಿಯೇ ಕೂತ ವ್ಯಾಸ ಅಲ್ಲಿ ಮಾತನಾಡಿದ ನಮ್ಮನ್ನೆಲ್ಲ ಹೊಗಳಿದ್ದು...ಕೊನೆಗೆ ಅಂತೂ ಇಂತೂ ಬೇಕಲಕೋಟೆಯ ಒಳಗೆ ಬಂದಿದ್ದೇ ಧೋ ಎಂದು ನಾಲ್ಕೂ ನಿಟ್ಟಿನ ಗಾಳಿಯೊಂದಿಗೆ ಸುರಿದ ಭರ್ಜರಿ ಮಳೆಯಲ್ಲಿ ಜಯಂತರ ಆಸೆ ಪೂರೈಸಿದ್ದು!


ಒದ್ದೇ, ಒದ್ದೇ ನಾವೆಲ್ಲರೂ ಒದ್ದೇ ಎಂದು ಹಾಡಿದ ಜಯಂತ್! "ನಾನಿಲ್ಲೇ ಕೂತಿರುತ್ತೇನೆ, ನೀವೆಲ್ಲ ಹೋಗಿ ನೋಡಿಕೊಂಡು ಬನ್ನಿ" ಎಂದ ವ್ಯಾಸರು, ಮರಳಿದಾಗ "ಏನಾದರೂ ಕತೆಗಿತೆ ಸಿಕ್ಕಿತೇ ನಿಮಗೆ ಇಲ್ಲಿ?" ಎಂದು ತಮಾಷೆ ಮಾಡಿದ ಜಯಂತ್....
ಈಗ ನೆನಪುಗಳೆಲ್ಲ ನುಗ್ಗಿ ಬರುತ್ತಿವೆ. ಆತ್ಮೀಯ ಜೀವವೊಂದು ಇದ್ದಕ್ಕಿದ್ದಂತೆ ಮರೆಯಾಗಿ ಹೋದಾಗ ಯಾಕೆ ಹೀಗಾಗುತ್ತದೆ ಎನ್ನುವುದಕ್ಕೆ ಉತ್ತರವಿಲ್ಲ. ಉತ್ತರದ ಗರಜೂ ಇಲ್ಲ ಈಗ. ಸುಮ್ಮನೇ ನೆನಪುಗಳಲ್ಲಿ ವ್ಯಾಸರನ್ನು ನೆನೆಯುತ್ತ ಹೋಗುತ್ತೇನೆ...


"ಮೌನವಾದ ಎಂ.ವ್ಯಾಸರಿಗೆ ಮೌನದ ನಮನ" ಎಂದು ಜಯಂತ ಮೆಸೇಜ್ ಮಾಡಿದಾಗ ಆಘಾತವೇ ಆಗಿತ್ತು. ಕಳೆದ ವಾರವಷ್ಟೇ ಚಿಕನ್ ಗೂನ್ಯಾ ಬಂತು, ಕೈಕಾಲೆಲ್ಲ ನೋಯ್ತಿದೆ ನರೇಂದ್ರ ಎಂದಿದ್ದರು. ಮುರಳೀಧರ ಉಪಾಧ್ಯರು ಉದಯವಾಣಿಯಲ್ಲಿ ತಮ್ಮ ಬಗ್ಗೆ ಬರೆದಿದ್ದನ್ನು ಹೇಳಿ ಓದಿದ್ರಾ ಎಂದು ಕೇಳಿದ್ದರು. ಫೋನ್ ಮಾಡಿದಾಗೆಲ್ಲ ಮನೆಗೆ ಬನ್ನಿ ನರೇಂದ್ರ ಎನ್ನುತ್ತಿದ್ದರು. ಮಂಗಳೂರಿಗೆ ಯಾವುದಾದರೂ ಮದುವೆ ಮುಂಜಿಗೆ ಬಂದರೆ ಫೋನ್ ಮಾಡಿ ಕರೆಯುತ್ತಿದ್ದರು. ನಾವಿಬ್ಬರೂ ಅವರ ಕಾರಿನಲ್ಲಿ ಬೆಚ್ಚಗೆ ಕುಳಿತು ಅದೂ ಇದೂ ಮಾತನಾಡುತ್ತ ಕಳೆದೇ ಹೋಗುತ್ತಿದ್ದೆವು....


ಎಂಥ ವಿಪರ್ಯಾಸ ನೋಡಿ, ಎಂದೂ ತಮ್ಮ ಪುಸ್ತಕಗಳ ಬಗ್ಗೆ ಬರೆಯಲು ವ್ಯಾಸರು ನನಗೆ ಬಿಟ್ಟಿರಲಿಲ್ಲ. ಪರಸ್ಪರ ಗೊತ್ತಿರುವವರು ಬರೆದರೆ ಅದು ಎಷ್ಟೇ ಇಲ್ಲ ಎಂದರೂ ಒಂದಂಶ ದಾಕ್ಷಿಣ್ಯ-ಮುಲಾಜು ಇದ್ದೇ ಇರುತ್ತದೆ ನರೇಂದ್ರ, ನೀವು ನನ್ನ ಪುಸ್ತಕದ ಬಗ್ಗೆಲ್ಲ ಬರೀಲಿಕ್ಕೆ ಹೋಗ್ಬೇಡಿ ಎಂದು ಕಡಿವಾಣ ಹಾಕಿದ್ದರು. ಬಹುಷಃ ಅದಕ್ಕೋ ಏನೋ, ಎಲ್ಲೂ ಸಿಗದ ಅವರ ಕೃತ ಎಂಬ ಪುಸ್ತಕದ ಒಂದೇ ಒಂದು ಪ್ರತಿ ತಮ್ಮಲ್ಲಿದ್ದರೂ ಅದನ್ನು ನನಗೆ ಹೇಳಿಯೇ ಇರಲಿಲ್ಲ. ಒಮ್ಮೆ ಕಾರಿನೊಳಗಿನ ನಮ್ಮ ಸಂಭಾಷಣೆಯ ನಡುವೆ ಏನನಿಸಿತೋ, ನಿಧಾನಕ್ಕೆ ಡ್ಯಾಶ್‌ಬೋರ್ಡ್ ತೆರೆದು ಪುಸ್ತಕವನ್ನು ನನ್ನ ಕೈಯಲ್ಲಿಟ್ಟರು! ಈಗ, ಹೀಗೆ ವ್ಯಾಸರ ನೆನಪುಗಳನ್ನು ಒಟ್ಟು ಮಾಡುವ, ಮಾಡಿ ಬರೆಯುವ ದಿನ ಬಂತು!


ಸದಾ ಮನುಷ್ಯನ ಬಗ್ಗೆ, ಮನಸ್ಸಿನ ಬಗ್ಗೆ, ಬದುಕಿನ ಬಗ್ಗೆ, ಸಂಬಂಧಗಳ ಬಗ್ಗೆ ಯೋಚಿಸುತ್ತ, ಬರೆಯುತ್ತ, ಧ್ಯಾನಿಸುತ್ತ ಇದ್ದ ವ್ಯಾಸ ಒಬ್ಬ ತಪಸ್ವಿಯಂತೆ ಬದುಕಿದವರು. "ನೋವೇ ಸಕಲ ಕಲೆಗಳ ಮೂಲವಲ್ಲವ ನರೇಂದ್ರ, ನೋವಿಲ್ಲದವರು ಯಾರಿದ್ದಾರೆ ಹೇಳಿ? ನೋವಿನಿಂದಲೇ ಈ ಹಂಚಿಕೊಳ್ಳುವ, ಬರೆಯುವ ತುಡಿತಗಳೆಲ್ಲ ಬರುವುದು ನರೇಂದ್ರ, ನಿಮಗೆ ಗೊತ್ತಿರಬಹುದು, ಇವರಿದ್ದಾರಲ್ಲ, ಎಷ್ಟು ಚಂದ ಬರೆಯುತ್ತಾರೆ ಗೊತ್ತುಂಟ, ನಿಮಗೆ ಗೊತ್ತಿಲ್ಲ ಅವರ ಮನಸ್ಸಲ್ಲಿ ಎಂಥ ಯುದ್ಧ ನಡೀತಾ ಇದೆಯಂತ....ಅವರ ಕತೆ ಕೇಳಿದ್ರೆ ಉಂಟಲ್ಲ, ನನಗೆ ಒಂದು ನಿಮಿಷ ತಲೆಬಿಸಿಯಾಗಿ ಕಣ್ಣು ಕತ್ತಲೆ ಬಂದ ಹಾಗೆ ಆಯ್ತು ಗೊತ್ತುಂಟ? ಕೇಳಿದರೆ ಕಣ್ಣೀರು ಬರ್‍ತದೆ, ಪಾಪ ಅವರು.... ಅವರ ಎದ್ರು ನಮ್ಮದೆಲ್ಲ ಎಂತದು? ಹೇಳ್ತೇನೆ ನಿಮಗೆ ಅವರ ಕತೆ, ಕೇಳಿ..." ಎನ್ನುತ್ತಿದ್ದ ವ್ಯಾಸರ ಧ್ವನಿ ಕಿವಿಯಲ್ಲಿ ನಿಂತಂತಿದೆ.


ಅವರಿಗೆ ಅಪಾರಮಂದಿ ಆಪ್ತರಿದ್ದರು. ಹೆಚ್ಚಿನವರು ಬರಹಗಾರರು, ಕವಿಗಳು. ವ್ಯಾಸರ ಜೊತೆ ಸ್ವಲ್ಪಹೊತ್ತು ಮಾತನಾಡಿ ಏನೋ ಒಂದು ವಿಧದ ಮನಸ್ಸಮಾಧಾನ ಪಡೆಯುತ್ತಿದ್ದವರು. ಬರೆದಿದ್ದನ್ನು, ಬರೆಯಲಿರುವುದನ್ನು ಹಂಚಿಕೊಳ್ಳುತ್ತಿದ್ದವರು. ವ್ಯಾಸರಿಗೆ ಎಷ್ಟು ಮಂದಿಯ ಬದುಕಿನ ಒಳಸುಳಿಗಳ, ಜೀವ ಹಿಂಡುವ ನೋವುಗಳ ವಿವರ ಎಳೆ ಎಳೆಯಾಗಿ ಗೊತ್ತಿತ್ತು ಎನ್ನುವುದಕ್ಕಿಲ್ಲ. ಎಲ್ಲ ನೋವುಗಳನ್ನುಂಡ ನಂಜುಂಡನಂತೆ ಅವರು ನಿಂತಿದ್ದರು, ಬರೆಯುತ್ತಿದ್ದರು.


ಅವರ ಬಳಿ ತಮ್ಮದೆಲ್ಲವನ್ನೂ ತೆರೆದಿಡುತ್ತಿದ್ದ ಒಂದು ದೊಡ್ಡ ಬಳಗವೇ ಇತ್ತು. ಇವತ್ತು ಅವರೆಲ್ಲ ಅನಾಥರೇ. ಅವರ ದುಃಖಕ್ಕೆ ಯಾರು ಸಮಾಧಾನ ಹೇಳುವವರು? ಯಾರಿಗೂ ವ್ಯಾಸರ ವ್ಯವಧಾನ, ನಿಧಾನ, ಸಮಾಧಾನ ಇಲ್ಲ ಇವತ್ತು. ಅವರ ಬಳಿ ನಮ್ಮೆಲ್ಲರಿಗೂ ಆಗಿ ಮಿಗುವಷ್ಟು ಸಮಯವಿರುತ್ತಿತ್ತು. ಆದರೆ ನಮಗೆ ಪುರುಸೊತ್ತಿರುತ್ತಿರಲಿಲ್ಲ....


ವ್ಯಾಸರೂ ಹಾಗೆ, ಯಾರನ್ನೂ ಯಾವತ್ತೂ ನೋಯಿಸಿದವರಲ್ಲ. ಎಲ್ಲರನ್ನು ಪ್ರೀತಿಸುತ್ತಿದ್ದ, ಎಲ್ಲರ ಬಗ್ಗೆ ಅನುಕಂಪ ಮಿಶ್ರಿತ ಧೋರಣೆಯನ್ನಿಟ್ಟುಕೊಂಡೇ `ಅವರಿಗೂ ನೋವುಗಳಿರಬಹುದಲ್ವ....ನೂರಾರು?' ಎಂಬಂತೆ ಪ್ರತಿಕ್ರಿಯಿಸುತ್ತಿದ್ದ ವ್ಯಾಸರಿಗೆ ವಿಮರ್ಶೆಯ ಬಗ್ಗೆ ಕೂಡ ಅವರದೇ ಆದ ಅತ್ಯಂತ ವಿಶಾಲ ಮನೋಭಾವದ ನಿಲುವಿತ್ತು. "ನಮಗೆ ಸರಿ ಕಾಣಲಿಲ್ಲ, ಖುಶಿಯಾಗಲಿಲ್ಲ ಅನ್ನುವ ಒಂದೇ ಕಾರಣಕ್ಕೆ ನಾವು ಅವನು ಬರೆದಿದ್ದು ಸರಿಯಿಲ್ಲ ಅಂತ ತೀರ್ಮಾನ ಕೊಡಬಾರದು, ತಪ್ಪದು. ಯಾರಿಗೆ ಗೊತ್ತು, ಅದನ್ನು ನೋಡಬೇಕಾದ ಬೇರೆಯೇ ಒಂದು ದೃಷ್ಟಿಕೋನ ಇರಬಹುದು, ನಮಗದು ಗೊತ್ತೇ ಇಲ್ಲದಿರಬಹುದು...."


ಸಹವರ್ತಿಗಳ ಬರವಣಿಗೆಗೆ ವ್ಯಾಸ ಸದಾ ಪ್ರೇರಕ ಶಕ್ತಿ. "ನೀವು ಕ್ರಿಯೇಟಿವ್ ರೈಟಿಂಗ್ ಬಿಟ್ಟೇ ಬಿಟ್ಟ ಹಾಗೆ ಕಾಣ್ತದೆ, ಬರೆಯುವುದನ್ನ ಬಿಡಬೇಡಿ ನರೇಂದ್ರ, ಅದು ನಮ್ಮ ಮನಸ್ಸಿನ ಆರೋಗ್ಯಕ್ಕೆ ತುಂಬಾ ಅಗತ್ಯ" ಎನ್ನುತ್ತಿದ್ದ ವ್ಯಾಸರು ನನ್ನ ಯಾವುದೋ ಹಳೆಯ ಕಥೆಯ ಯಾವುದೋ ವಿವರವನ್ನು ನನಗೇ ನೆನಪಿಸಿ ಎಷ್ಟು ಚೆನ್ನಾಗಿ ಬರೀತಿದ್ರಿ ಎಂದು ಉಬ್ಬಿಸುತ್ತಿದ್ದರು! ತಮ್ಮ ಕತೆ, ಕವನ, ಬರಹಗಳ ಹಿಂದಿನ ಪ್ರೇರಣೆಗಳನ್ನು ಕುರಿತು ವಿವರವಾಗಿ ಹೇಳುತ್ತಿದ್ದ ವ್ಯಾಸರು ಬದುಕಿನ ಬಗ್ಗೆ ಇರಿಸಿಕೊಂಡಿದ್ದ ಪ್ರೀತಿ, ಪರಸ್ಪರ ಹಂಚಿಕೊಳ್ಳುವ ಕ್ರಿಯೆಯಲ್ಲಿ ಅವರಿಗಿದ್ದ ಅಚಲ ನಂಬುಗೆ ಅಪಾರವಾದದ್ದು. ಸದಾ ಪತ್ರ ಬರೆಯಿರಿ ಎನ್ನುತ್ತಿದ್ದರು. ಕಂಪ್ಯೂಟರಿನಲ್ಲಿ ಬರೆದ ಪತ್ರದ ಬಗ್ಗೆ ಅವರಿಗೆ ಅಷ್ಟೇನೂ ಸಮಾಧಾನವಿರದಿದ್ದರೂ ಅದನ್ನು ಹೇಳುತ್ತಿರಲಿಲ್ಲ. ಅವರ ಕೈಬರಹದ ಉದ್ದುದ್ದ ಪತ್ರಗಳಲ್ಲಿ ಆಳವಾದ ಭಾವಲಹರಿ, ಬರೆಯುವ ಬಗ್ಗೆ ಉತ್ತೇಜನ, ಪ್ರೀತಿ ತುಂಬಿರುತ್ತಿತ್ತು. ಇತ್ತೀಚೆಗಷ್ಟೇ ಮೊಬೈಲ್ ತೆಗೆದುಕೊಂಡು ಅದನ್ನೂ ಮದುವೆಹೆಣ್ಣಿನ ನಾಚಿಕೆಯಲ್ಲೇ ಹೇಳಿದ ವ್ಯಾಸರ ಜೊತೆ ಹೆಚ್ಚು ಮಾತನಾಡುವುದಕ್ಕಿಲ್ಲ, ಮೌನ ತಬ್ಬಿಬಿಟ್ಟಿತು...ಝುಮ್ಮನೆ!


ಪತ್ರಕರ್ತರೊಂದಿಗೂ ಅವರಿಗೆ ನಿಕಟ ಒಡನಾಟ. ರವಿಬೆಳಗೆರೆಗೆ ಇವರು-ಇವರಿಗೆ ರವಿ ಅಚ್ಚುಮೆಚ್ಚು. ಕುಡಿಯುವುದನ್ನು ಕಡಿಮೆ ಮಡಿ ರವೀ, ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಅತ್ಯಂತ ಕಕ್ಕುಲತೆಯಿಂದ ರವಿಬೆಳಗೆರೆಯವರಿಗೆ ಪತ್ರ ಬರೆಯುತ್ತಿದ್ದರು. ರವಿಬೆಳಗೆರೆಯ ಮುದ್ದಾದ ಕೈಬರಹವನ್ನು ಅದೊಂದು ಅಚ್ಚರಿಯೆಂಬಂತೆ ನಮಗೆಲ್ಲ ವಿವರಿಸುತ್ತಿದ್ದರು. ನಮ್ಮ ಜೊತೆ ಈ ರವಿ, ಜೋಗಿಯವರೆಲ್ಲ ಎಷ್ಟೊಂದು ಓದುತ್ತಾರೆ ಮಾರಾಯರೇ, ಎಷ್ಟೊಂದು ಬರೆಯುತ್ತಾರೆ ಇವರು ಎಂದು ನಿರಂತರ ಗುಣಗಾನ ಮಾಡುತ್ತಿದ್ದರು! ಇತ್ತೀಚೆಗೆ ಕಾಸರಗೋಡಿಗೆ ಬಂದ ಎಸ್.ದಿವಾಕರರ ಬಗ್ಗೆ ಅರ್ಧಗಂಟೆ ಕೊರೆದಿದ್ದರು! ಕೆ.ವಿ.ತಿರುಮಲೇಶ್ ಅವರ ದೀರ್ಘಕಾಲೀನ ಒಡನಾಡಿ. ಅದೇನೋ ವ್ಯಾಸರಿಗೆ ತಿರುಮಲೇಶ್ ಎಂದರೇ ಒಂದು ವಿಚಿತ್ರ ಮೋಹವಿತ್ತು. ವರ್ಷದ ಹಿಂದೆ ತಿರುಮಲೇಶ್ ವಿದೇಶಕ್ಕೆ ವಿಸಿಟಿಂಗ್ ಪ್ರೊಫೆಸರ್ ಆಗಿ ಹೋದಾಗ ಅವರ ವಯಸ್ಸು, ಆರೋಗ್ಯ ಎಂದೆಲ್ಲ ಗೊಣಗಿ, ಯಾಕೆ ಬೇಕಿತ್ತು ಇದೆಲ್ಲ ಇವರಿಗೆ ಎಂದರು. ವಿಷಯ ಅದೆಲ್ಲ ಆಗಿರಲೇ ಇಲ್ಲ. ಗುಟ್ಟು ಹೊರಗೆ ಬಂದಿದ್ದು ಮತ್ತೆ. "ಇಷ್ಟು ದಿನ ಅವರಾದರೂ ಒಂದು ಫೋನ್ ಮಾಡುತ್ತಿದ್ದರು, ಅದೂ ಇದೂ ಮಾತನಾಡುತ್ತಿದ್ದೆವು, ಇನ್ಮೇಲೆ ಅದೂ ಇಲ್ಲ...."

ಆ ಮಾತಿನ `ಅದೂ' ಇವತ್ತಿಗೂ ನನ್ನನ್ನು ಕಾಡುತ್ತ ಉಳಿದಿದೆ.


ಹಾಗೆಯೇ ವೆಂಕಟಲಕ್ಷ್ಮಿ, ಅ.ನ.ಪೂರ್ಣಿಮಾ, ವಿದ್ಯಾರಶ್ಮಿ, ಸಂಧ್ಯಾದೇವಿ, ಹರೀಶ್ ಅದೂರು ಮುಂತಾಗಿ ....ಒಬ್ಬಿಬ್ಬರಲ್ಲ. ಎಲ್ಲರ ಬಗ್ಗೆಯೂ ಅಭಿಮಾನ, ಪ್ರೀತಿ, ಕಾಳಜಿ. ಅವರ ಗುಣಗಾನ. ಅವರ ಬಳಿ ನಮ್ಮ ಬಗ್ಗೆ. ಮತ್ತೆ ನನಗೆ, ನನ್ನಂಥವರಿಗೆ ಫೋನು. ಇವರಿಗೆ ಕತೆ ಕಳಿಸಿ, ನಾನು ಹೇಳ್ತೇನೆ, ನೀವು ಕಳಿಸಿ. ಯಾರಿದ್ದಾರೆ ಸಾಹಿತಿಗಳಲ್ಲಿ ಹೀಗೆ ಹೊಸಬರನ್ನು ಬೆಂಬಲಿಸಿ ನಿಲ್ಲುವವರು, ಬರೆಯಿರಿ ಎಂದು ಬರೆಯಿಸುವವರು? ಸಾಹಿತಿಗಳ ಜಗತ್ತಿನಲ್ಲಿ ಒಂದು ಹನಿ ಅಸೂಯೆಯಿಲ್ಲದ, ಒಂದಿಷ್ಟು ರಾಜಕೀಯ ಮಾಡದ ಅಪರೂಪದ ವ್ಯಕ್ತಿ ಎಂ.ವ್ಯಾಸ!


ಹಾಗೆಯೇ ಅವರು ಮುಗ್ಧ ಕೂಡ ಆಗಿದ್ದರು. ಎಷ್ಟೋ ಮಂದಿಯ ಎದುರಿಗೊಂದು ಹಿಂದಿನಿಂದ ಇನ್ನೊಂದು ಎನ್ನುತ್ತಾರಲ್ಲ, ಅದು ಅವರಿಗೆ ತಿಳಿಯುತ್ತಿರಲಿಲ್ಲ. ನಮಗೆ ತಿಳಿಯುತ್ತಿತ್ತು, ಹೇಳಿದರೆ ವ್ಯಾಸರು ನೊಂದುಕೊಳ್ಳುತ್ತಾರೆಂದೇ ಅವರಿಗೆ ಹೇಳುತ್ತಿರಲಿಲ್ಲ. ಒಮ್ಮೆ ಏನೋ ಮಾತಿಗೆ ಪತ್ರಿಕೆಯವರಿಗೆ ಸಾಹಿತಿಗಳು ಹೇಗೆಂದರೆ ಗುಮಾಸ್ತರಿಗೆ ಚೆಕ್ಕುಗಳಿಗೆ ಪೀಡಿಸುವ, ಹೊಸ ಹೊಸ ಬಿಲ್ಲುಗಳ ಹೊರೆ ಹೇರುವ ಕಂಟ್ರಾಕ್ಟರುಗಳಿದ್ದ ಹಾಗೆ, ಗೌರವವಲ್ಲ, ಹೇವರಿಕೆ ಇರುತ್ತದೆ ಎಂದುಬಿಟ್ಟೆ. ಅವರು ಹೌದ ಎಂದಾಗಿನ ಅವರ ಧ್ವನಿ, ಅದರ ತಲ್ಲಣ ಈಗಲೂ ನೆನಪಿದೆ.


ಒಮ್ಮೆ ಒಂದು ಸಭೆಯಲ್ಲಿ ನಾವು ಭೇಟಿಯಾಗುವುದೆಂದು ನಿಗದಿಯಾಗಿತ್ತು. ನಾನು ಅಲ್ಲಿಗೆ ಮೊದಲು ಹೋದೆ. ನನಗೆ ಪರಿಚಯವಿದ್ದ ಯಾರೂ ಅಲ್ಲಿರಲಿಲ್ಲ ಮತ್ತು ಅಲ್ಲಿದ್ದ ಕೆಲವೇ ಮಂದಿಗೆ ನಾನು ಯಾರು, ಯಾಕೆ ಅಲ್ಲಿಗೆ ಬಂದೆನೆಂಬುದು ಬಗೆಹರಿಯುತ್ತಿಲ್ಲ ಎಂಬುದು ಅವರ ಮುಖಭಾವದಿಂದಲೇ ತಿಳಿಯುತ್ತಿತ್ತು. ಸಭೆ ಇನ್ನೇನು ಸುರು ಎನ್ನುವುದರಲ್ಲಿ ವ್ಯಾಸರು ಬಂದರು. ಸರಿ, ವ್ಯಾಸರು ಆ ಗುಂಪಿನ ಸ್ಟಾರ್‍ ಎಂಬುದು ಸಾಬೀತಾಯಿತು. ಯಥಾಪ್ರಕಾರ ನಾನು ತಣ್ಣಗೆ ಹಿಂದೆ ಕೂತೆ. ಸ್ವಲ್ಪಹೊತ್ತಿನಲ್ಲೇ ಹುಡುಕುತ್ತಿದ್ದ ವ್ಯಾಸರ ಕಣ್ಣುಗಳಿಗೆ ನಾನು ಬಿದ್ದಿದ್ದೇ ಎಲ್ಲರನ್ನೂ ಬಿಟ್ಟು ನೇರ ನನ್ನ ಬಳಿಗೇ ಬಂದು ಬಿಟ್ಟರು, "ಅರೆ, ನೀವು ಇಲ್ಲಿರುವುದ, ನನ್ನ ಹತ್ತಿರವೇ ಇರಿ ಮಾರಾಯರೆ" ಎನ್ನುತ್ತ ಕೈ ಹಿಡಿದುಕೊಂಡೇ ಕೂತರು! ಸಭೆಯಲ್ಲಿ ಪುಸ್ತಕ ಬಿಡುಗಡೆ, ಸನ್ಮಾನ ಎಲ್ಲ ನಡೆಯುವಾಗ ಇಲ್ಲಿ ವ್ಯಾಸರ ರನ್ನಿಂಗ್ ಕಮೆಂಟರಿ! "ಎಂಥ ನಾಟಕ ಮಾರಾಯರೆ ಇದೆಲ್ಲ, ಫೋಟೋ ತೆಗೆಯುವವರಿಗೆ ಫೋಸು ಕೊಡುತ್ತ ನಿಲ್ಲುವುದು, ಪುಸ್ತಕ ಹಿಡಿದು ತೋರಿಸುವುದು ಎಲ್ಲ....ನನಗಿದೆಲ್ಲ ಕಂಡರೇ ಆಗುವುದಿಲ್ಲ...." ಒಂದು ಬಾಣ ಬಿಟ್ಟೆ, "ಸರ್, ಈಗ ನಿಮ್ಮನ್ನೇ ಅಲ್ಲಿಗೆ ಕರೆಯುತ್ತಾರೆ, ನೋಡಿ, ಇಲ್ಲಿರುವ ಹಿರಿಯರಿಗೆಲ್ಲ ಗೌರವ ಪ್ರತಿ ಕೊಟ್ಟು ಸನ್ಮಾನ ಮಾಡ್ತಾರಂತೆ, ಹೇಳಿದ್ರಲ್ಲ ಮೈಕಿನಲ್ಲಿ ಈಗ, ಕರೀತಾರೀಗ ನಿಮ್ಮನ್ನೇ..." ಎಂದೆ. ಅಲ್ಲಿನ ಏನನ್ನೂ ಕಿವಿಗೊಟ್ಟು ಕೇಳಿರದ ವ್ಯಾಸ ಕಂಗಾಲಾದರು. "ಹೌದ, ನನಗೆ ಬೇಡ ಅದೆಲ್ಲ, ನಾನು ಎದ್ದು ಹೀಗೇ ಹೊರಗೆ ಹೋಗಿ ಬಿಡ್ತೇನೆ ಕರೆದ್ರೆ" ಎಂದು ತಯಾರಾಗಿಯೇ ಬಿಟ್ಟರು! "ಅರೆ, ಅದು ಹೇಗಾಗ್ತದೆ ಸರ್, ನೀವು ಎರಡು ಮಾತು ಭಾಷಣ ಮಾಡಬೇಕಾಗ್ತದೆ" ಎಂದೆ. ವ್ಯಾಸರು ಇನ್ನೇನು ಎದ್ದೇ ಬಿಡುವುದರಲ್ಲಿದ್ದರು! ಪುಣ್ಯಕ್ಕೆ ಕಾರ್ಯಕ್ರಮ ಸಂಯೋಜಕರು ವ್ಯಾಸರನ್ನು ಚೆನ್ನಾಗಿ ಬಲ್ಲವರೇ ಆಗಿದ್ದರಿಂದ ವ್ಯಾಸರನ್ನು ಕರೆಯಲಿಲ್ಲ.


ವ್ಯಾಸರು ಚಿರನಿದ್ರೆಗೆ ಮರಳಿದ್ದಾರೆ, ನಿಜ. ಆದರೆ ಅವರ ಮುನ್ನೂರಕ್ಕೂ ಹೆಚ್ಚಿನ ಕತೆಗಳಲ್ಲಿ ವ್ಯಾಸರು ಸದಾ ಜೀವಂತವಾಗಿ ಮಾತನಾಡುತ್ತಿದ್ದಾರೆ, ಉಸಿರಾಡುತ್ತಿದ್ದಾರೆ. ಒಬ್ಬ ಸತ್ವಶಾಲಿ ಬರಹಗಾರನಿಗೆ ಸಾವೆಂಬುದೇ ಇಲ್ಲ. ಭೌತಿಕವಾಗಿ ವ್ಯಾಸರು ಇದ್ದಿದ್ದು ಕೆಲವೇ ಕೆಲವು ನಿಕಟವರ್ತಿಗಳ ಮಟ್ಟಿಗೆ. ಲಕ್ಷಾಂತರ ಮಂದಿ ಓದುಗರಿಗೆ ವ್ಯಾಸರ ಪಾತ್ರಗಳೇ, ಕತೆಗಳೇ ವ್ಯಾಸರ ಜೀವಂತಿಕೆಯ ಸಾಕ್ಷಿಯಾಗಿದ್ದಿದ್ದು. ವ್ಯಾಸರ ಕತೆಗಳಲ್ಲಿ ಒಂದಂಶ ಮಾತ್ರ ಸಂಕಲನಗಳಲ್ಲಿ ಬಂದಿದೆ. ಅವರ ಎಲ್ಲ ಕತೆಗಳು ಕನ್ನಡದ ಓದುಗರಿಗೆ ಲಭ್ಯವಾಗುವಂತಾದರೆ ವ್ಯಾಸರ ಇರುವಿಕೆ ಹೆಚ್ಚು ಅರ್ಥಪೂರ್ಣವೂ, ಜೀವಂತವೂ ಆಗುವುದರಲ್ಲಿ ಸಂಶಯವಿಲ್ಲ. ಅವರ ಅಪಾರ ಅಭಿಮಾನಿಗಳು ಇದನ್ನು ಆಗಗೊಡುತ್ತಾರೆ ಎನ್ನುವುದರಲ್ಲಿ ಅನುಮಾನವೇನಿಲ್ಲ.


ವ್ಯಾಸರು ತಮ್ಮ ಅನೇಕ ಪತ್ರಗಳಲ್ಲಿ ಬರೆದ ಒಂದು ಸಾಲಿನೊಂದಿಗೆ ಈ ನೆನಪುಗಳ ನೆನವರಿಕೆಯನ್ನು ನಿಲ್ಲಿಸುತ್ತೇನೆ. ವ್ಯಾಸರು ಬರೆದಿದ್ದರು, ಬೀದಿಯಲ್ಲಿ ಒಂದೇ ಕಡೆ ಚಲಿಸುವ ಜನಸಮೂಹ ಒಂದೇ ಕಡೆಗೆ ಹೋಗುತ್ತಿರುವುದಲ್ಲ.
Post a Comment