Sunday, July 27, 2008

ಕ್ಷಮೆಯಿಲ್ಲದೂರಿನಲಿ....


ಈಚೆಗೆ ಓದಿದ ಒಂದು ಒಳ್ಳೆಯ ಕತೆಯ ಬಗ್ಗೆ ನಿಮಗೆಲ್ಲ ಹೇಳಬೇಕಿದೆ.
ವಸುಧೇಂದ್ರ ಎಲ್ಲರಿಗೂ ಗೊತ್ತು. ಮನೀಷೆ, ಯುಗಾದಿ, ಚೇಳು ಎನ್ನುವ ಮೂರು ಕಥಾಸಂಕಲನಗಳು ಇವರಿಂದ ಬಂದಿವೆ. ಮಿಥುನ ಹೆಸರಿನ ಒಂದು ಅನುವಾದಿತ ಕಥಾಸಂಕಲನ ಕೂಡ ತಂದಿದ್ದಾರೆ. ಕೋತಿಗಳು ಸಾರ್ ಕೋತಿಗಳು ಪುಸ್ತಕವನ್ನು ಯಾರಿಗೇ ಕೊಟ್ಟರೂ ಅವರು ನಿಮ್ಮ ಆತ್ಮೀಯ ಸ್ನೇಹಿತರಾಗಿ ಬಿಡುವಷ್ಟು ಪರಿಣಾಮಕಾರಿಯಾಗಿ ವಸುಧೇಂದ್ರ ಅದನ್ನು ಬರೆದಿದ್ದಾರೆ! ನಮ್ಮಮ್ಮ ಅಂದ್ರೆ ನಂಗಿಷ್ಟ ಎನ್ನುವ ಎಲ್ಲರಿಗೂ ಇಷ್ಟವಾದ ಕೃತಿಗೆ ಸಾಹಿತ್ಯ ಅಕೆಡಮಿ ಪ್ರಶಸ್ತಿ ಕೂಡ ಬಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ವಸುಧೇಂದ್ರ ಕನ್ನಡಕ್ಕೆ ಕೆಲವು ಅತ್ಯುತ್ತಮವಾದ ಪುಸ್ತಕಗಳ ಕೊಡುಗೆಯನ್ನು ತಮ್ಮ ಛಂದ ಪ್ರಕಾಶನದ ಮೂಲಕ ನೀಡಿದ್ದಾರೆ. ಪುಸ್ತಕ ಛಂದ ಪ್ರಕಾಶನದ್ದು ಅಂತಾದರೆ ಅದನ್ನು ಯಾರದೇ ರಿವ್ಯೂ, ವಿಮರ್ಶೆಗಳ ವಶೀಲಿಯಿಲ್ಲದೆ ಕೊಂಡುಕೊಳ್ಳಬಹುದು ಎನ್ನುವ ವಿಶ್ವಾಸವನ್ನು ವಸುಧೇಂದ್ರ ಈಗಾಗಲೇ ಕನ್ನಡದ ಓದುಗರಲ್ಲಿ ಮೂಡಿಸಿದ್ದಾರೆ. ಅನೇಕ ಹೊಸತನಗಳನ್ನು ಪುಸ್ತಕ ಪ್ರಕಾಶನಕ್ಕೆ ತೊಡಿಸಿದವರು ಕೂಡ ಈ ವಸುಧೇಂದ್ರ. ವಸುಧೇಂದ್ರರ ಕತೆಗಳ ಬಗ್ಗೆ ಇನ್ನೆಂದಾದರೂ ವಿವರವಾಗಿ ಬರೆಯುತ್ತೇನೆ. ಸದ್ಯಕ್ಕೆ ಈ ಸಲದ `ದೇಶಕಾಲ' ತ್ರೈಮಾಸಿಕದಲ್ಲಿ ಬಂದಿರುವ ವಸುಧೇಂದ್ರರ `ಕ್ಷಮೆಯಿಲ್ಲದೂರಿನಲಿ' ಕತೆಯ ಬಗ್ಗೆ....
ಇದೆಲ್ಲ ನಿತ್ಯವೂ ನಮ್ಮ ಬದುಕಿನಲ್ಲಿ ನಡೆಯುತ್ತಿರುತ್ತದೆ. ಬೆಳಿಗ್ಗೆ ಏಳುವುದು ತಡವಾಗುತ್ತದೆ ಅಥವಾ ಅನಿವಾರ್ಯವಾದ ಯಾವುದೋ ಸಲಕರಣೆ ಕೈಕೊಡುತ್ತದೆ, ಯಾರೋ ಬೆಳ್ಳಂಬೆಳಗ್ಗೆ ಮನಸ್ಸಿಗೆ ಹಿತವಾಗದ, ವಿರುದ್ಧವಾದ ಏನೋ ಕಿರಿಕ್ ಮಾಡುತ್ತಾರೆ....ಈ ದಿನವೆಲ್ಲ ಹಾಳಾಗುತ್ತದೆ ಎನ್ನುವ ತೀರ್ಮಾನ ಬೆಳಿಗ್ಗೆ ಎಂಟು ಎಂಟೂವರೆಗೆಲ್ಲ ನಾವೇ ತೆಗೆದುಕೊಂಡಿರುತ್ತೇವೆ! ಅಂದ ಮೇಲೆ ಅದು ಹಾಗೇ ಆಗಬೇಕಲ್ಲ.
ಇಬ್ಬರು ವ್ಯಕ್ತಿಗಳ ನಡುವೆ ಒಂದು ಮಾತು ಇಲ್ಲವೇ ಆಡಬೇಕಾದ ಮಾತು ಆಡದೇ ಬಿಟ್ಟ ಮೌನ ಏನೆಲ್ಲ ಅನಾಹುತ ಎಬ್ಬಿಸಬಹುದು ಎಂಬ ಸೂಕ್ಷ್ಮ ಕೂಡ ನಮಗೆ ಅರಿವಾಗಿರುತ್ತದೆ. ನಮ್ಮ ರಕ್ತದ ಒತ್ತಡದ ಕಡೆಗೆ, ಉಸಿರಾಟದ ಏರಿಳಿತದ ಕಡೆಗೆ ನಮ್ಮ ಗಮನ ಇಂಥ ಧಾವಂತದ, ಒತ್ತಡದ ಸಂದರ್ಭದಲ್ಲಿ ಇರುವುದಿಲ್ಲ. ಯಾರದೋ ಕೈಗೊಂಬೆಗಳಂತೆ, ಯಾವುದೋ ಸೂತ್ರಕ್ಕೆ ಸಿಕ್ಕಿದ ಯಂತ್ರಗಳಂತೆ ಒಂದರ ಹಿಂದೆ ಒಂದರ ಹಾಗೆ ಏನೇನೋ ಮಾಡುತ್ತ ಹೋಗುತ್ತೇವೆ.....ಎಲ್ಲೋ ಅಂತರಂಗದ ಆಳದಲ್ಲಿ `ಸ್ವಲ್ಪ ನಿಧಾನ ಮಾಡು, ಒಮ್ಮೆ ತಿರುಗಿ ನೋಡು....ಇಲ್ಲ, ನೀನು ದುಡುಕುತ್ತಾ ಇದ್ದೀ....ಯಾಕೆ ಈ ಧಾವಂತ?' ಎನ್ನುವ ಕೇಳಿಯೂ ಕೇಳದ ಅಸ್ಪಷ್ಟ ನುಡಿ ನಮ್ಮ ವೇಗಕ್ಕೆ ತಡೆಯೊಡ್ಡುತ್ತ ಇನ್ನಷ್ಟು ಕೆರಳಿಸುತ್ತ ಇರುತ್ತದೆ...
ಅದು ಕೆರಳಿಸಬಾರದು, ಕೆರಳಿಸುವುದಕ್ಕೆ ಇರುವುದಲ್ಲ ಅದು. ಕ್ಷಣಕಾಲ ಸ್ವಸ್ಥ ನಿಂತು ಎಲ್ಲವನ್ನೂ, ಮನದ, ದೇಹದ ಒತ್ತಡ, ಹೊರೆ, ವೇಗ ಎಲ್ಲವನ್ನೂ ನೆಲಕ್ಕೆ ಚೆಲ್ಲಿ ಹಗುರಾಗುವಂತಿದ್ದರೆ.....ನಿಮಗೆ ಅದು ಅರ್ಥವಾಗುವುದು ಸಾಧ್ಯವಿತ್ತು.
ಆದರೆ ಹಾಗಾಗುವುದಿಲ್ಲ. ಆಕಸ್ಮಿಕ ನಡೆದೇ ಹೋಗುತ್ತದೆ; ದುರಂತ.
ವಸುಧೇಂದ್ರ ಇದನ್ನೆಲ್ಲ ಗಮನಿಸಿರುವುದು ನನಗೆ ವಿಶೇಷ ಅನಿಸಿದ್ದಲ್ಲ. ಇದನ್ನೆಲ್ಲ ವಸುಧೇಂದ್ರ ಅತ್ಯಂತ ಅಚ್ಚುಕಟ್ಟಾಗಿ ಕತೆಯಲ್ಲಿ, ಕನ್ನಡದಲ್ಲಿ, ಶಬ್ದಗಳಲ್ಲಿ ಹಿಡಿದುಕೊಟ್ಟಿದ್ದಾರೆ! ಅದು ವಿಶೇಷ.
ಈ ಕತೆಯಲ್ಲಿ ಸಹಜವೆಂಬಂತೆ ಬರುವ ವಿವರಗಳು ಕತೆಯ ಆಶಯ ಮತ್ತು ಧ್ವನಿಗೆ ಇಂಬುಕೊಡುವ ಸಾರ್ಥಕ ಪ್ರತಿಮೆಗಳಾಗಿ ಒದಗಿಬಂದಿರುವುದು ಮೊದಲ ಮೆಚ್ಚುಗೆಗೆ ಕಾರಣ. ಅದು ರಿವರ್ ಸೈಡ್ ಎನ್ನುವ ಅಪಾರ್ಟ್‌ಮೆಂಟಿನ ಹೆಸರಿರಬಹುದು, ಸ್ವಿಮ್ಮಿಂಗ್ ಪೂಲಿನಲ್ಲೇ ಮನುಷ್ಯನ ಮನಸ್ಸಿನಲ್ಲಿ ಸಂವೇದನೆಗಳ ಒರತೆ ಇಂಗಿಹೋಗಿರುವುದನ್ನು ಕಾಣಿಸುವ ಘಟನೆಗಳ ಸರಮಾಲೆಯೊಂದು ಸುರುಹಚ್ಚಿಕೊಳ್ಳುವ ವಿಪರ್ಯಾಸವಿರಬಹುದು, ಅಕ್ಕಪಕ್ಕದ ಮನೆಯವರು ಇ-ಮೇಲ್ ಮುಖಾಂತರ ಮಾತನಾಡಿಕೊಳ್ಳುವ ವಿಶಿಷ್ಟ ಸಂದರ್ಭ ಹೊಳೆಯಿಸುವ ಅರ್ಥಗಳಿರಬಹುದು. ಇವೆಲ್ಲ ಬರೇ ಉಪಯೋಗಿಸಿಕೊಂಡ ಸಂಗತಿಗಳಾಗದೇ ಕತೆಯ ಒಡಲಿನೊಳಗೆ ಸೇರಿಹೋಗಿರುವ ರೀತಿಯೇ ಮೆಚ್ಚುಗೆಗೆ ಪಾತ್ರವಾಗುತ್ತದೆ. ಉದಾಹರಣೆಗೆ ಇಲ್ಲಿ ಹೆಂಡತಿಯ ಪಾಸ್‌ವರ್ಡನ್ನು ಗಂಡ ಕೇಳುವ ಒಂದು ಸಂದರ್ಭವಿದೆ. ಹೆಂಡತಿಯ ಐಡಿಯಲ್ಲಿ ಮೆಸೇಜ್ ನೀಡಬಯಸುವ ಗಂಡ, ಹೆಂಡತಿಯ ಐಡಿಗೆ ಪ್ರವೇಶ ಬಯಸುವ ಗಂಡ, ಅವನ ಬಳಿ ಅದಕ್ಕೆ ಬೇಕಾದ ಪಾಸ್‌ವರ್ಡ್ ಇಲ್ಲದಿರುವುದು ಎಲ್ಲ ಮೇಲ್ಮಟ್ಟದ ಅರ್ಥವನ್ನು ಮೀರಿ ಕೆಲಸ ಮಾಡುತ್ತದೆ. ಇಂಥವನ್ನು ವಸುಧೇಂದ್ರ ದುಡಿಸಿಕೊಳ್ಳುತ್ತ ಹೋಗಿದ್ದಾರೆ ಕತೆಯುದ್ದಕ್ಕೂ. ಮಗುವಿಗೆ ಇಷ್ಟವಿಲ್ಲದಿರುವಾಗ ಅದು ತನ್ನ ತಾಯಿಗಾಗಿ ಸ್ವಿಮ್ಮಿಂಗ್‌ಪೂಲ್‍ಗೆ ಇಳಿಯಬೇಕಾಗುತ್ತದೆ, ಅಲ್ಲೇ ನೀರಿನಲ್ಲಿ ಆಡುವುದನ್ನುನಿಜಕ್ಕೂ ಇಷ್ಟಪಟ್ಟಾಗ ಥಂಡಿಯಾಗುತ್ತದೆ ಎಂದು ಗದರಿಸಿಕೊಂಡು ಹೊರಬರಬೇಕಾಗುತ್ತದೆ. ಇಬ್ಬರು ತಾಯಂದಿರು ಮಗುವಿಗೆ ಜನ್ಮಕೊಡುವ ಕೊಟ್ಟು ತಾಯ್ತನದ ಸುಖವನ್ನು ಹೊಂದುವ ಸಂಗತಿಯ ಬಗ್ಗೆ ವಾದಿಸುವಾಗ ಕೂಸು ಹಾಸುಗೆಯ ಮೇಲೆ ಹೊರಳಿ ಯಾವುದೋ ಗೊಂಬೆ ಕುಂಯ್ ಗುಡುತ್ತದೆ!
ಆ ಪಾಸ್‌ವರ್ಡನ ಅರ್ಧಭಾಗ ಅವಳ ಹಳೆಯ ಪ್ರೇಮಿಯ ಹೆಸರಿನ ಪಸೆ ಹೊಂದಿರುವುದು, ಅದು ಇಬ್ಬರಲ್ಲೂ ಹುಟ್ಟಿಸುವ ನೀರವ ಭಾವವೇನಿದೆ ಅದನ್ನು ಕತೆಯ ಮೂಲ ಆಶಯಕ್ಕೆ ಭಿನ್ನವಾದ ಒಂದು ಆಯಾಮದ ಹೊಳಹಿಗೆ ಬಳಸಿಕೊಂಡಿರುವುದು ಒಬ್ಬ ಕತೆಗಾರ ಹೇಗೆ ಬದುಕನ್ನು ಸಮಗ್ರವಾಗಿಯೇ ಗಮನಿಸುತ್ತ ಹೋಗಬೇಕಿದೆ ಎನ್ನುವುದನ್ನು ಕಾಣಿಸುವಂತಿದೆ. ಸಾಮಾನ್ಯವಾಗಿ ಸಣ್ಣಕತೆಗಳಲ್ಲಿ ಇಂಥ ಅಂಶಗಳು ನಿರ್ಲಕ್ಷ್ಯಕ್ಕೆ ತುತ್ತಾಗುತ್ತ ಇದ್ದವು ಎನ್ನುವುದರಿಂದ ಹೇಳಬೇಕಾಯಿತು. ಕತೆಯ ಅಂತ್ಯದಲ್ಲೂ ಇಂಥದೇ ಒಂದು ಪ್ರಯತ್ನ ಇಡೀ ಕತೆಗೆ `ಕತೆಗೆ ಬರೇ `ಅದನ್ನು' ಹೇಳುವುದಷ್ಟೇ ಉದ್ದೇಶ ಆಗಿರಲಿಲ್ಲ' ಎನ್ನುವ ಆಯಾಮವನ್ನು ನೀಡಿದೆ. ಇದು ಬಹಳ ಮುಖ್ಯ. ಸಣ್ಣಕತೆ ಹೀಗೆ ತನ್ನ ಒಡಲನ್ನು ಮೀರುವ ಕಡೆ ಮುಖಮಾಡಿಕೊಂಡಿದ್ದರೆ ಅದು ಹೆಚ್ಚು ಮೆಚ್ಚುಗೆಯಾಗುತ್ತದೆ ಕೂಡ.
ಇಡೀ ಕತೆ ಒಂದು chain of action-reaction ತತ್ವವನ್ನು ಅವಲಂಬಿಸಿಕೊಂಡಿದೆ. ಇದು ಕತೆಗೆ ಒಂದು ವೇಗವನ್ನು ದಕ್ಕಿಸುತ್ತದೆ ಮತ್ತು ಓದಿಸಿಕೊಳ್ಳುವ ಶಕ್ತಿ ಇದರಿಂದಾಗಿ ಕತೆಗೆ ತನ್ನಿಂದ ತಾನೇ ದಕ್ಕುತ್ತದೆ. ಆದರೂ ಇಲ್ಲಿ ವಸುಧೇಂದ್ರ ಸ್ವಲ್ಪ ಗಮನ ನೀಡಬೇಕಿದೆ ಅನಿಸುತ್ತದೆ. ಕತೆ ನಲವತ್ತರ ಸ್ಪೀಡಿನಲ್ಲಿದೆ. ಇಪ್ಪತ್ತರಲ್ಲಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತಲ್ಲವೆ ಅನಿಸಿದ್ದು ನಿಜ. ಆದರೆ ಕತೆ ಹೇಳುತ್ತಿರುವುದೇ ಒಂದು ಆವೇಗದ ಕ್ರಿಯೆ ಪ್ರತಿಕ್ರಿಯೆಯ ಸರಪಳಿಯನ್ನು. ಉದ್ವೇಗದ ಮನಸ್ಥಿತಿಯನ್ನು. ಆದಾಗ್ಯೂ ಇದು ದೈನಂದಿನ ಸಂಗತಿಯಾಗಿಬಿಟ್ಟಿರುವ ವಿಪರ್ಯಾಸವನ್ನು. ಇಲ್ಲಿನ ಸವಾಲು ಗಮನಿಸಿ. ಬಹುಷಃ ಬೇರೆ ಯಾರಾದರೂ ಅರವತ್ತರಲ್ಲಿ ಹೇಳಿಬಿಡಬಹುದಾದುದನ್ನು ವಸುಧೇಂದ್ರ ನಲವತ್ತರ ವೇಗದಲ್ಲಿ ಹೇಳುತ್ತಿದ್ದಾರೆ! ಅದಕ್ಕಾಗಿ ಅವರು ಸ್ವಲ್ಪ ಸಾವಧಾನದಿಂದಿರುವ ಸುಜಾ, ಆಕೃತಿ ಮತ್ತು ರೇಖಾಳಂಥ ಸ್ತ್ರೀ ಪಾತ್ರಗಳನ್ನು ಬಳಸಿಕೊಂಡಿರುವುದು ಕೂಡ ಮೆಚ್ಚುಗೆಗೆ ಕಾರಣವಾಗುತ್ತದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಸುಜಾ ತಕ್ಷಣ ಪ್ರತಿಕ್ರಿಯಿಸುವುದಿಲ್ಲ. ಅವಳು ಮೆಸೇಜುಗಳನ್ನು ಪೋಸ್ಟ್ ಮಾಡುತ್ತ ಒಟ್ಟಾರೆಯಾಗಿ ಅಧ್ವಾನದ್ದಾಗಿ ಕಾಣುವ ಹೊಲಸಿನಲ್ಲಿ ಭಾಗವಾಗುವುದಿಲ್ಲ. ಬದಲಿಗೆ ನೇರ ರೇಖಾಳ ಫ್ಲ್ಯಾಟ್‌ಗೇ ಬರುತ್ತಾಳೆ. ಇದನ್ನು ವಿಶೇಷವಾಗಿ ಗಮನಿಸಬೇಕಿದೆ. ಎಲ್ಲರೂ, ಎಲ್ಲವೂ ಇಂಟರ್ನೆಟ್‌ನಲ್ಲೇ ವ್ಯವಹರಿಸುತ್ತಿರುವಾಗ (ಶ್ರೀನಿವಾಸನ್ ಆನ್‌ಲೈನ್ ಖರೀದಿಯಲ್ಲಿ ತೊಡಗಿರುವುದನ್ನು ಗಮನಿಸಿ) ಈಕೆ ಒಬ್ಬಳೇ ನೇರ ಮುಖಾಮುಖಿಗೆ ಮನಸ್ಸು ಮಾಡುತ್ತಾಳೆ! ಈ ಸಂದರ್ಭ ಎಷ್ಟು ಚೆನ್ನಾಗಿ ಬಂದಿದೆ ಎಂದರೆ, ಅದು ರೇಖಾಳಲ್ಲಿ ತರುವ ಬದಲಾವಣೆಯೇ ಎಲ್ಲವನ್ನೂ ಹೇಳುವಂತಿದೆ.
ಇಲ್ಲೇ ಹೇಳಬೇಕಾದ ಇನ್ನೊಂದು ಮಾತು, ಈ ಸುಜಾ ತನ್ನ ಮುಖತಃ ಭೇಟಿ ಮುಗಿಸಿ ತನ್ನ ಫ್ಲ್ಯಾಟ್‌ಗೆ ಹಿಂದಿರುಗುವ ಮೊದಲೇ ಅವಳ ಗಂಡನಿಗೆ ರೇಖಾಳ ಪ್ರತಿಕ್ರಿಯೆ ತಲುಪುವ ವೈಪರೀತ್ಯವನ್ನು ವಸುಧೇಂದ್ರ ದುಡಿಸಿಕೊಂಡಿರುವುದು! ಇದು ಎಬ್ಬಿಸುವ ಹೊಸ ದುಮ್ಮಾನಗಳ ಅರಿವು ಸ್ವತಃ ರೇಖಾಗಿಲ್ಲ. ಯಾಕೆ, ಇಂಥದೊಂದು ಸಾಧ್ಯತೆ ಸ್ವತಃ ಸುಜಾಗೆ ಹೊಳೆದಿರುವುದಿಲ್ಲ.
ವಸುಧೇಂದ್ರ ತಮ್ಮ ಕತೆಯಲ್ಲಿ ತಪ್ಪದೇ ಬಳಸಿಕೊಳ್ಳುವ ತಮಾಷೆಯ ವಿಟ್ ಕೂಡಾ ಇಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಶ್ರೀನಿವಾಸ ಸಿಟ್ಟಿನಿಂದಲೇ ಹಾಕುವ ಮೆಸೇಜಿಗೆ ಬರುವ ಪ್ರತಿಕ್ರಿಯೆಗಳಲ್ಲಿ ಇರುವ ಪರಸ್ಪರ ವೈರುಧ್ಯಗಳಿಂದ ಕೂಡಿರುವ ಸಂಗತಿಗಳು ಬರೇ ತಮಾಷೆಯಲ್ಲ. ಹಾಗೆಯೇ ಶ್ರೀನಿವಾಸ ಮೆಸೇಜ್ ಪೋಸ್ಟ್ ಮಾಡಿದ್ದೇ `ಇನ್ನೀಗ ನೋಡು ತಮಾಷೆ' ಎಂದು ಶಿಳ್ಳೆ ಹಾಕುವುದು ಕೂಡ ತಮಾಷೆಯಾಗಿ ಮುಗಿಯುವುದಿಲ್ಲ.
ಕೊಂಚ ಸಿನಿಮೀಯ ಅನಿಸುವ ರಂಗು ಕತೆಗೆ ಅಂಟಿದ್ದರೂ ಅದೇನೂ ಸಮಸ್ಯೆಯೊಡ್ಡುವುದಿಲ್ಲ. ವಸುಧೇಂದ್ರ ಇನ್ನೂ ಅನೇಕ ಒಳ್ಳೊಳ್ಳೆಯ ಕತೆಗಳನ್ನು ಕೊಟ್ಟಿದ್ದಾರೆ, ಇದೇ ಅವರ ಮಾಸ್ಟರ್ ಪೀಸ್ ಅಂತೇನೂ ಈ ಕತೆಯ ಬಗ್ಗೆ ಬರೆದಿರುವುದಲ್ಲ. ಈ ಕತೆಯನ್ನು ನೀವೆಲ್ಲ ಓದಲೇ ಬೇಕು ಅಂತ ಪ್ರಾಮಾಣಿಕವಾಗಿ ಅನಿಸಿದ್ದರಿಂದ, ವಸುಧೇಂದ್ರರ ಕತೆಗಾರಿಕೆ ಇಲ್ಲಿ ಸಾರ್ಥಕವಾಗಿ ಕೆಲಸಮಾಡಿರುವುದು ಕಣ್ಣಿಗೆ ಹೊಡೆದು ಕಂಡಿದ್ದರಿಂದ....ನನಗೂ ಬರೆದರೆ ಹೀಗೆ ಕತೆ ಬರೆಯಬೇಕು ಅನಿಸುವುದರಿಂದ!
ವಸುಧೇಂದ್ರರ ಈ ಕತೆ ಓದಿದಾಗ ಇದು ನೆನಪಾಯಿತು:
ಓಶೋ ಒಂದು ಕಡೆ ಹೇಳುತ್ತಾರೆ, ನಿನ್ನ ಪ್ರತಿಯೊಂದು ಮಾತು, ಮಾತ್ರವಲ್ಲ ನಿನ್ನ ಯೋಚನೆ ಕೂಡಾ ಇನ್ನೊಬ್ಬರ ಬದುಕಿನ ಮೇಲೆ ಪರಿಣಾಮ ಬೀರುತ್ತಿರುತ್ತದೆ, ಬೀ ಕೇರ್‌ಫುಲ್!
ಅಭಿನಂದನೆಗಳು ವಸುಧೇಂದ್ರ!
ದೇಶಕಾಲ ಇಲ್ಲೆಲ್ಲ ಸಿಗುತ್ತದೆ:
ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು
ಸ್ವಪ್ನ ಬುಕ್ ಹೌಸ್, ಗಾಂಧಿನಗರ-ಸದಾಶಿವನಗರ-ಜಯನಗರ
ನಾಗಶ್ರೀ, ಜಯನಗರ ನಾಲ್ಕನೆಯ ಬ್ಲಾಕ್ ರಂಗಶಂಕರ, ಬೆಂಗಳೂರು
ಶಂಕರ್ಸ್, ವಿಮಾನ ನಿಲ್ದಾಣ, ಬೆಂಗಳೂರು
ದೇಸಿ, ಬೆಂಗಳೂರು-ಸಾಗರ
ನವಕರ್ನಾಟಕದ ಎಲ್ಲ ಮಳಿಗೆಗಳು
ಅತ್ರಿ ಬುಕ್ ಸೆಂಟರ್, ಮಂಗಳೂರು
ಸೀತಾ ಬುಕ್ ಸೆಂಟರ್, ಉಡುಪಿ
ಅಕ್ಷರ ಪ್ರಕಾಶನ, ಹೆಗ್ಗೋಡು
deshakaala@gmail.com (092431 36256)
(ಚಿತ್ರ ಅವಧಿ Flickr photos ಕೃಪೆ)

No comments: