Sunday, August 3, 2008

ಅಶೋಕ ಹೆಗಡೆ ಕಥಾಲೋಕ - ಹಸಿರು ಸೀರೆ


ಅಶೋಕ ಹೆಗಡೆಯವರ ಮೂರನೆಯ ಕಥಾಸಂಕಲನ, "ವಾಸನೆ, ಶಬ್ದ, ಬಣ್ಣ ಇತ್ಯಾದಿ" ಹೊರಬಂದಿದೆ. ಮೊದಲ ಸಂಕಲನ `ಒಂದು ತಗಡಿನ ಚೂರು' ಬಹುತೇಕ ಬಹುಮಾನಿತ ಕಥೆಗಳನ್ನೇ ಹೊತ್ತು ಬಂದ ಸಂಕಲನವಾದರೂ ಕಥನಕ್ಕಿಂತ ಕಾವ್ಯಾತ್ಮಕ ಚಿತ್ರಕ ವಿವರಗಳಲ್ಲೇ ಮುಳುಗಿರುವುದನ್ನು ಕಾಣುತ್ತೇವೆ. ಎರಡನೆಯ ಕಥಾಸಂಕಲನ `ಒಳ್ಳೆಯವನು' ನಿಜಕ್ಕೂ ಕೆಲವು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ನೀಡಿದ ಸಂಕಲನ. ಈ ಸಂಕಲನದ ಬಗ್ಗೆ ಮತ್ತೆ ವಿವರವಾಗಿಯೇ ಬರೆಯುತ್ತೇನೆ. ಈ ನಡುವೆ ಅಶೋಕರ ಕಾದಂಬರಿ `ಅಶ್ವಮೇಧ' ಬಂತು. ಕಾದಂಬರಿ ಎಷ್ಟು ಚೆನ್ನಾಗಿತ್ತೆಂದರೆ ಬಹಳಷ್ಟು ಮಂದಿ ಬರಹಗಾರರೂ ವಿಮರ್ಶಕರೂ ಅಶೋಕರ ನಿಜವಾದ ಕ್ಷೇತ್ರ ಸಣ್ಣಕತೆಯಲ್ಲ, ಕಾದಂಬರಿಯೇ ಎನ್ನುವಂತಾಯಿತು! ಈ ಕಾದಂಬರಿಯ ನಂತರ ಬಂದ ಸಂಕಲನದ ಎಲ್ಲ ಕಥೆಗಳು ವೈಶಿಷ್ಟ್ಯಪೂರ್ಣವಾಗಿದ್ದು ಅವರ ಇದುವರೆಗಿನ ಕಥನಗಾರಿಕೆಯನ್ನು ಬಿಟ್ಟು ಹೊಸದೇ ಮಾರ್ಗದಲ್ಲಿರುವುದನ್ನು ಕಾಣಿಸುತ್ತದೆ. ಹಾಗಾಗಿ, ಇಲ್ಲಿನ ಕಥೆಗಳ ಒಟ್ಟಾರೆ ಪ್ರಯೋಗಶೀಲತೆಯನ್ನು, ಕಥೆ ಹೇಳುವ ಧಾಟಿಯನ್ನು, ಆಶಯವನ್ನು ಮತ್ತು ಕಥೆಗಾರನ ನಿಲುವನ್ನು ಹೊಸದಾಗಿ ವಿಮರ್ಶಿಸಿ ನೋಡಬೇಕಾಗಿದೆ. ಅಶೋಕರ ಹಿಂದಿನ ಸಂಕಲನಗಳನ್ನು, ಕಾದಂಬರಿಯನ್ನು ಗಮನಿಸಿ ಹೇಳುವುದರಿಂದ ಇಲ್ಲಿನ `ಹೊಸತು' ಹೊಸಬನ ಪ್ರಯತ್ನವಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ರಿಯಾಯಿತಿ ಇಲ್ಲದೇ ಇದನ್ನು ಕಾಣಬಹುದಾಗಿದೆ.

ಪ್ರಸ್ತುತ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. `ವಾಸನೆ, ಶಬ್ದ, ಬಣ್ಣ ಇತ್ಯಾದಿ', `ಅಂಕ ೧, ದೃಶ್ಯ ೨', `ಕಲ್ಲು' ಮತ್ತು `ಜಿದ್ದು' ಕಥೆಗಳು ಒಂದರ್ಥದಲ್ಲಿ ಮಿನಿಕತೆಗಳು. `ಒಂದು ಡಾಲರ್ ನೋಟು' ಕಥೆ ಇವರದೇ `ಅಶ್ವಮೇಧ' ಕಾದಂಬರಿಯ ಒಂದು ಅಂಕವನ್ನೇ ಕಥೆಯಾಗಿಸಿದಂತಿದೆ.

`ವಾಸನೆ, ಶಬ್ದ, ಬಣ್ಣ ಇತ್ಯಾದಿ' ಕಥೆ ಪ್ರಯೋಗಶೀಲತೆ ಮತ್ತು ಹೇಳುವ ಜಾಣ್ಮೆಯನ್ನು ನೆಚ್ಚಿರುವ ಕತೆ. ಇಲ್ಲಿ ನಿರೂಪಿಸಲ್ಪಡುತ್ತಿರುವ ಸಂಗತಿಯನ್ನು ನಿರೂಪಿಸುತ್ತಿರುವ ಕೌಶಲ ಗಮನಸೆಳೆಯುತ್ತದೆ. ಅಬುವಿನಲ್ಲೆಂದು ನೆನಪು, ಒಂದು ದೊಡ್ಡ ಮರದ ಹಲಗೆಯ ಮೇಲೆ ಈ ಕಡೆ "ಈ ಫಲಕದ ಇನ್ನೊಂದು ಬದಿಯಲ್ಲಿ ಬರೆದಿರುವುದು ಸತ್ಯ" ಎಂದು ಬರೆದಿದ್ದಾರಂತೆ. ಹಲಗೆಯ ಇನ್ನೊಂದು ಕಡೆ "ಈ ಫಲಕದ ಇನ್ನೊಂದು ಬದಿಯಲ್ಲಿ ಬರೆದಿರುವುದು ಸುಳ್ಳು" ಎಂದಿದೆಯಂತೆ. ಸತ್ಯ ಮತ್ತು ಸುಳ್ಳುಗಳ ನಡುವೆ ಅಥವಾ, ಅರ್ಧ ಮತ್ತು ಇನ್ನರ್ಧದ ನಡುವೆ ಹೀಗೆ ಹೌದು ಅಲ್ಲಗಳು ಮಿಳಿತವಾಗಿರುವುದು ಒಂದು ಚೋದ್ಯ. ಅಶೋಕ್ ಈ ಪುಟ್ಟ ಕಥೆಯಲ್ಲಿ ಇದನ್ನೇ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅಶೋಕ್ ಎಂದೂ ಎಲ್ಲಾ ಪಂಚೇಂದ್ರಿಯಗಳನ್ನೂ ಹಾದು ಮನಸ್ಸಿಗಿಳಿಯಲಾರದ ಮಿತಿಯನ್ನು ಅನಿವಾರ್ಯವಾಗಿ ಹೊತ್ತಿರುವ ಪ್ರಿಂಟ್ ಮೀಡಿಯಾದ ಕಥೆಯೊಂದು, ವಾಸನೆ (ಮೂಗು), ಶಬ್ದ (ಕಿವಿ) ಮತ್ತು ಬಣ್ಣ (ಕಣ್ಣು)ಗಳನ್ನು ತಲುಪಿ ಮನಸ್ಸಿಗೆ ಸೇರಬೇಕೆನ್ನುವ ಆಶಯವನ್ನು ಹೊತ್ತು ಅದಕ್ಕೆ ಬೇಕಾದ ತಂತ್ರವನ್ನು ಸೃಜಿಸಿಕೊಂಡಂತೆಯೂ ಇದೆ. ಕೆಲ ಮಟ್ಟಿಗೆ `ಅಂಕ೧ ದೃಶ್ಯ ೨' ಕಥೆಯಲ್ಲಿಯೂ ಸಂಭಾಷಣೆಗಳು ಶಬ್ದವನ್ನು ಹೊತ್ತು ಮನಸ್ಸು ತಲುಪಬೇಕೆನ್ನುವಂತೆ ಹೆಣೆಯಲ್ಪಟ್ಟಿರುವುದನ್ನು ಕಾಣಬಹುದು.

`ಅಂಕ ೧, ದೃಶ್ಯ ೨' ಕಥೆ ಒಂದು ಭಗ್ನಪ್ರೇಮವನ್ನು ಹೊಸ ವಿಧಾನದಲ್ಲಿ ಹೇಳುವ, ಭಗ್ನಪ್ರೇಮ ಎಂಬುದು ಆಧುನಿಕ ತಲೆಮಾರಿನಲ್ಲಿ ಹೇಗೆ ಸ್ವೀಕರಿಸಲ್ಪಡುತ್ತದೆ ಎನ್ನುವ ಅರಿವಿನೊಂದಿಗೆ ಹೇಳುವ ಯತ್ನ. ಮತ್ತೆ ಇಲ್ಲಿನ ಪ್ರಯೋಗಶೀಲತೆಯೇ ಕಥೆಯ ಪ್ರಮುಖ ಗಮನಾರ್ಹ ಅಂಶ.

`ಕಲ್ಲು' ಕಥೆ ಮನುಷ್ಯ ಸಂವೇದನೆಗಳಿಂದ ದೂರವಾಗುತ್ತಿರುವುದನ್ನೇ ಹೇಳುತ್ತದೆ. ಈ ಕಥೆಯಲ್ಲಿರುವ ಗಮನಾರ್ಹವಾದ ಒಂದು `ವಿಧಾನ'ದ ಬಗ್ಗೆ `ಹಸಿರು ಸೀರೆ' ಕಥೆಯ ಸಂದರ್ಭದಲ್ಲಿ ಗಮನ ಹರಿಸಬಹುದು.

`ಜಿದ್ದು' ಕಥೆ ಪುಟ್ಟದಾಗಿದ್ದರೂ ಬದುಕಿನ ಸ್ಪರ್ಧಾತ್ಮಕ ಒತ್ತಡವನ್ನು, ಅದು ಮನುಷ್ಯನ ಬದುಕನ್ನೇ ನುಂಗಿನೊಣೆಯುವುದನ್ನು ಒಂದು ಅಂತರದಿಂದ ಗಮನಿಸಬಲ್ಲ ಸ್ಥಿತಿ ನಮಗೆ ಸಾಧ್ಯವಾದರೆ ಅದು ಕೂಡ ಮನುಷ್ಯನನ್ನು ಕೈಹಿಡಿದು ಎತ್ತುವುದು ಸಾಧ್ಯ ಎಂಬ ಅಸಾಧ್ಯ ನಂಬುಗೆಯಲ್ಲಿ ವಿಶ್ವಾಸವಿರಿಸುವುದು ಅಚ್ಚರಿ ಮಿಶ್ರಿತ ಮೆಚ್ಚುಗೆಗೆ ಕಾರಣವಾಗುವಂತಿದೆ.

`ಒಂದು ಡಾಲರ್ ನೋಟು' ಶೈಲಿ, ವಸ್ತು ಮತ್ತು ಆಶಯದ ನಿಟ್ಟಿನಿಂದ ಅಶೋಕರ ಈ ಹಿಂದಿನ ಕಥೆಗಳೊಂದಿಗೆ ನಿಲ್ಲಬಲ್ಲ ಈ ಸಂಕಲನದ ಏಕೈಕ ಕಥೆ. ಇಲ್ಲಿನ ಖಾಸಿಂ ಸಾಬಿಯ ಕಷ್ಟದ ಬದುಕು ಆಕಸ್ಮಿಕವಾಗಿ ಹುಟ್ಟಿದ ಒಂದು ಭವ್ಯ ಕನಸಿನೊಂದಿಗೆ ತಳುಕು ಹಾಕಿಕೊಂಡು ಅವನಿಗೆ ಕೆಲವೇ ದಿನಗಳ ಶ್ರೀಮಂತಿಕೆಯ ಕಲ್ಪನೆಯೊಂದನ್ನು ದಯಪಾಲಿಸಿ ಮತ್ತೆ ಎಂದಿನ ಸ್ಥಿತಿಯೊಂದಿಗೆ ಉಳಿಸಿ ಮರೆಯಾಗುವುದರ ಆಪ್ತ ಚಿತ್ರಣವನ್ನು ಕಥೆ ನೀಡುತ್ತಿದೆ. ಕಥೆಯ ಸಹಜ ಸೌಂದರ್ಯವೇ ಅದರ ಮೂಲ ಆಕರ್ಷಣೆಯಾಗಿರುವುದನ್ನು ಇದೇ ಸಂಕಲನದ ಇತರ ಕಥೆಗಳ ಹಿನ್ನೆಲೆಯಲ್ಲಿ ಒಂದು ವೈಶಿಷ್ಟ್ಯವನ್ನಾಗಿಯೂ ಮಿತಿಯನ್ನಾಗಿಯೂ ಇಟ್ಟುಕೊಂಡು ಗಮನಿಸಬಹುದಾಗಿದೆ.

ಈ ಸಂಕಲನದ `ಹೆಣದ ಬಟ್ಟೆ' ಕಥೆ ಈಗಾಗಲೇ ನಾವು ದಿನಪತ್ರಿಕೆಗಳಲ್ಲಿ ಓದಿ, ಕ್ರೈಂಸ್ಟೋರಿಯಂಥ ಟೀವಿ ಕಾರ್ಯಕ್ರಮಗಳಲ್ಲಿ, ಕೆಲವು ಸಿನಿಮಾಗಳಲ್ಲಿ ಮತ್ತೆ ಮತ್ತೆ ಅತಿರಂಜಿತವಾಗಿ ನೋಡಿಬಿಟ್ಟ ವಸ್ತುವನ್ನೇ ಹೊಂದಿರುವುದರಿಂದ ಮತ್ತು ಕಥೆಯಲ್ಲಿ ಹೊಸತೇನೂ ಇಲ್ಲದಿರುವುದರಿಂದಲೂ ಗಮನ ಸೆಳೆಯುವುದಿಲ್ಲ.

ಅದೇ ರೀತಿ `ಗ್ರೀಷ್ಮ' ಮತ್ತು `ಸಮುದ್ರ' ಕಥೆಗಳಲ್ಲಿ ಕೂಡ ಹೊಸತೇ ಎನ್ನ ಬಹುದಾದ ಕಥಾನಕವಿಲ್ಲ. ಒಂದು ಯೌವನದಿಂದ ಇನ್ನೇನು ನಡುವಯಸ್ಸಿಗೆ ಹೊರಳಲಿರುವ ಹೆಂಗಸೊಬ್ಬಳಲ್ಲಿ ಮೊಳೆಯುತ್ತಿರುವ ಹೊಸ ಪ್ರೇಮದ, ಸಂಗಾತಿಯ ಕನಸನ್ನು ಕುರಿತು ಹೇಳಿದರೆ ಇನ್ನೊಂದು ನಿರುದ್ಯೋಗ ಪರ್ವದ ವಿವರಗಳಲ್ಲಿ ನಿಲ್ಲುತ್ತದೆ. ಈ ಎರಡೂ ವಸ್ತುಗಳು ಈಗಾಗಲೇ ಕ್ಲೀಷೆಯೆನಿಸುವ ಮಟ್ಟಿಗೆ ಕನ್ನಡ ಸಣ್ಣಕತೆಗಳಲ್ಲಿ ಮತ್ತೆ ಮತ್ತೆ ಬಂದಿರುವುದನ್ನು ಗಮನಿಸಿದರೆ ಅಶೋಕರ ನಿರೂಪಣಾ ಶೈಲಿಯೊಂದೇ ಇಲ್ಲಿ ಓದುವಿಕೆಯನ್ನು ಸಹ್ಯವಾಗಿಸುವ ಅಂಶ ಎನ್ನಬೇಕು.

ನಮ್ಮ ಬಹುತೇಕ ಕತೆಗಾರ್ತಿಯರು ಮತ್ತು ಕತೆಗಾರರು ಕೂಡ ಈ ನಡುವಯಸ್ಸಿನ ಒಂಟಿ ಹೆಂಗಸಿನ ಮನಸ್ಸಿನ ತುಮುಲಗಳನ್ನು ತಮ್ಮ ಕಥೆಗಳಲ್ಲಿ ತಂದಿದ್ದಾರೆ. ವ್ಯತ್ಯಾಸವೆಂದರೆ, ಈ ಎಲ್ಲ ಕಥೆಗಳು ಸಾಧಾರಣವಾಗಿ ಮುಗಿದು ಹೋದ ಯೌವನದ ಹಪಹಪಿಕೆಗಳಂತಿದ್ದರೆ ಅಶೋಕರ ಕಥೆಯ ಶೈಲಕ್ಕ ಹೊಸ ಸಂಬಂಧವೊಂದರ ಹೊಸ್ತಿಲಲ್ಲಿ ನಿಂತಿರುವ ಆಶಾವಾದಿಯಾಗಿರುವುದು. ಲಂಕೇಶರ `ಬೆಳದಿಂಗಳ ದಾಹ' ಕತೆಯ ಪಾರು ಚಿಕ್ಕಮ್ಮ, `ಸುಭದ್ರ' ಕತೆಯ ಸುಭದ್ರ, ವಿವೇಕರ `ಅಂಚು' ಕತೆಯ ಜೀಜಾಬಾಯಿ, ಸುಮಂಗಲಾರ `ಅರ್ಧ ಹೆಣೆದ ಗುಲಾಬಿ ಕಾಲು ಚೀಲ'ದ ಶೀಲಾ ಮೇಡಂ, ವೈದೇಹಿಯವರ `ಆಭಾ', ಜುಂಪಾಲಾಹಿರಿಯ ಇತ್ತೀಚಿನ Unaccunstomed Earth ನ Hell Heven ಕತೆಯ ಅಪರ್ಣ, ವಿಭಿನ್ನ ಪಾತಳಿಗಳಲ್ಲಿ ಒಂಟಿ ಹೆಣ್ಣಿನ ಮನಸ್ಸಿನ ಹಪಹಪಿಗಳನ್ನು ಕೇಂದ್ರವಾಗಿರಿಸಿಕೊಂಡ ಕಥೆಗಳು. ಅಶೋಕರ `ಗ್ರೀಷ್ಮ' ಶೈಲಕ್ಕನ ವಿವರಗಳನ್ನು ಅತ್ಯಂತ ಸಾವಧಾನದಿಂದ ಮತ್ತು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದಾದರೂ ಅಷ್ಟರಿಂದಲೇ ತೃಪ್ತಗೊಳ್ಳುವುದು ನಿರಾಶೆಯನ್ನೂ ಹುಟ್ಟಿಸುತ್ತದೆ.

`ಸಮುದ್ರ' ಕಥೆ ಕಟ್ಟಿಕೊಡುವ ಒಂದು ಜಗತ್ತು ಜುಂಪಾಲಾಹಿರಿಯ A Temporary Matter ಕಥೆಯ ಜಗತ್ತಿನೊಂದಿಗೆ ಹೋಲುವುದು ಕುತೂಹಲಕರ. ಅಲ್ಲಿ ಗಂಡನ ನಿರುದ್ಯೋಗ, ಮಗುವಿನ ಸಾವು ಮತ್ತು ದಾಂಪತ್ಯದ ಭವಿಷ್ಯ ಮೂರನ್ನೂ ಒಳಗೊಂಡು ಕಥೆ ಬೆಳೆಯುತ್ತದೆ. ಇದೇ ರೀತಿ ನಿರುದ್ಯೋಗ ಪರ್ವವನ್ನು ಹೊಸಬಗೆಯಲ್ಲಿ ಹೇಳುವ ಕಥೆ ಜಯಂತ ಕಾಯ್ಕಿಣಿಯವರ `ಗೇಟ್ ವೇ'. ಈ ಕಥೆ ಕೂಡಾ ದಾಂಪತ್ಯ ಮತ್ತು ಮಗುವನ್ನು ಒಳಗೊಂಡು ಹೊಸ ಜೀವನದರ್ಶನವನ್ನು ಕೊಡಲು ಪ್ರಯತ್ನಿಸುತ್ತದೆ. ಸ್ವತಃ ಅಶೋಕ್ ಹೆಗಡೆಯವರ ಈ ಹಿಂದಿನ `ಒಳ್ಳೆಯವನು' ಸಂಕಲನದ `ಅಂತರದಂಗೆ' ಕಥೆ ಕೂಡಾ ನಿರುದ್ಯೋಗ ಪರ್ವದ ಸುತ್ತಲೇ ಇರುವುದನ್ನು ಇಲ್ಲಿ ನೆನೆಯಬಹುದು. ಅಶೋಕ್ ತಮ್ಮ `ಸಮುದ್ರ' ಕಥೆಯಲ್ಲಿ ಹಣದ ಹಿಂದೆ ಓಟ ಹೂಡಿದ ಆಧುನಿಕ ಮಧ್ಯಮವರ್ಗದ ಮನುಷ್ಯ ಸಿಲುಕಿಕೊಂಡ ದ್ವೀಪದ ಪರಿಕಲ್ಪನೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರಾದರೂ ಈ ಸುಂದರ ಚೌಕಟ್ಟನ್ನಿಟ್ಟುಕೊಂಡು ಕಥೆ ಯಾವುದೇ ಹೊಸ ಶೋಧಗಳಿಗೆ ಚಾಚಿಕೊಳ್ಳುವುದಿಲ್ಲ. ಚಾಚಿಕೊಳ್ಳಲೇ ಬೇಕು ಯಾಕೆ ಎನ್ನಬಹುದಾದರೂ ಒಂದು ವಸ್ತು ಪುನರಾವೃತ್ತಿಯಾಗುವಾಗ ಇಂಥ ನಿರೀಕ್ಷೆಗಳು ಓದುಗರಲ್ಲಿ ಸಹಜ ಅನಿಸುತ್ತದೆ.

ಈ ಸಂಕಲನದ `ಮಳೆ', `ಹಸಿರು ಸೀರೆ' ಮತ್ತು `ಕತ್ತಲು' ನಿಜಕ್ಕೂ ವಿಶೇಷ ಗಮನಕ್ಕೆ ಅರ್ಹವಾದ ಕಥೆಗಳು.

`ಮಳೆ' ಕತೆಯನ್ನು ಎಂ.ವ್ಯಾಸರ `ರಥ' ಹಾಗೂ ಸಿ.ಎನ್. ರಾಮಚಂದ್ರರ `ಸಂಗತ' ಕಥೆಗಳೊಂದಿಗೆ ತುಲನಾತ್ಮಕವಾಗಿಯೂ ಓದಬಹುದಾದ ಮಟ್ಟಿಗೆ ವಸ್ತುವಿನ ಸಾಮ್ಯ ಹೊಂದಿದೆ. ಆದರೆ ಅಶೋಕರ ಕಥೆಯಲ್ಲಿ ಮಳೆ, ಕಾಯುವಿಕೆ ಮತ್ತು ಅದಮ್ಯ ಜೀವನಪ್ರೀತಿ ಮೂರೂ ಹಾಸುಹೊಕ್ಕಾಗಿ ತೆರೆದುಕೊಳ್ಳುವ ಬಗೆ ಅನನ್ಯವಾಗಿದೆ. ವ್ಯಾಸರಲ್ಲಿ ಮಲಗಿದಲ್ಲೇ ಆಗಿ ಬಿಡುವ ನಾಯಕ ನಾಯಕಿಗಾದ ಅನ್ಯಾಯಕ್ಕೆ ಎಲ್ಲೋ ಒಂದು ಕಡೆ ನ್ಯಾಯ ಒದಗಿಸುವ ಶಿಕ್ಷೆಯೆಂಬಂತೆ ಕಾಣಿಸಿಕೊಂಡರೆ ಸಿ.ಎನ್.ರಾಮಚಂದ್ರರ ಕಥೆಯ ನಾಯಕನಿಗೆ ತನ್ನ ದಾಂಪತ್ಯದ ಕುರಿತ, ಮನುಷ್ಯ ಸಂಬಂಧಗಳನ್ನು ಕುರಿತ ನಂಬುಗೆಗಳೇ ಅಸಂಗತವಾಗುತ್ತಿವೆಯೆ ಎಂಬ ಸಂದಿಗ್ಧ ಮುಖ್ಯವಾಗುತ್ತದೆ.

ಅಶೋಕ್ ಇಲ್ಲಿ ಶಿವರಾಮಜ್ಜ, ಪಾಂಡುರಂಗ, ಪ್ರಶಾಂತ ಎಂಬ ಮೂರು ಗಂಡು ಪಾತ್ರಗಳನ್ನೂ ಭವಾನಿ, ರುಕ್ಮಿಣಿ ಎಂಬ ಎರಡು ಹೆಣ್ಣು ಪಾತ್ರಗಳನ್ನೂ ಇರಿಸಿಕೊಂಡು ದೀಪ, ಕತ್ತಲೆ, ಮಳೆ, ಪರಭಾರೆಯಾದ ಹೊಲ - ಮುಂತಾದ ಪ್ರಕೃತಿಯ ಆಗುಹೋಗುಗಳನ್ನೂ, ವಸ್ತುಲೋಕದ ವಿವರಗಳನ್ನೂ ಬಳಸಿಕೊಂಡು ಒಬ್ಬ ಸೀತಾರಾಮ, ರಾಮನಾಯ್ಕರಂಥ ಪರ್ಯಾಯಗಳನ್ನು ತೋರಿಸುತ್ತಲೇ ಬದುಕಿನ ಅರ್ಥ ವಿಸ್ತಾರಗಳನ್ನು ತೆರೆದಿರುವುದು ಮನಸ್ಸಿಗಿಳಿಯುವಂತಿದೆ. ಮಾದ್ರಿ ಕುಂತಿಯರ ಉಲ್ಲೇಖ ಈ ಕಥೆಯ ರುಕ್ಮಿಣಿಯ ಆಳದ ತುಮುಲಗಳಿಗೆ, ದ್ವಂದ್ವಗಳಿಗೆ ಹೊಸ ಅರ್ಥ ನೀಡುವಂತಿದೆ. ಇದೆಲ್ಲದರ ಆಚೆಗೂ ಇಲ್ಲಿ ಎದ್ದು ನಿಲ್ಲುವ ಜೀವನಪ್ರೀತಿ, ಸ್ವೀಕೃತಿ ಎರಡೂ ಮೇಲ್ನೋಟಕ್ಕೆ ವಿಲಕ್ಷಣವಾಗಿ ಕಾಣುವ ಭವಾನಕ್ಕನಂಥ ಪಾತ್ರದಿಂದ ಮೇಲೆದ್ದು ನಿಲ್ಲುವುದು ಕತೆಗೆ ವಿಶೇಷ ಮೆರುಗು ತಂದಿದೆ. ಈ ಮಾತನ್ನು ಶಿವರಾಮಜ್ಜನ ಪಾತ್ರದ ಕುರಿತೂ ಹೇಳಬಹುದಾಗಿರುವುದು ಕೂಡ ಗಮನಾರ್ಹವಾದ ಅಂಶವೇ.

`ಹಸಿರು ಸೀರೆ', ಈ ಸಂಕಲನದಲ್ಲಿ ಅನೇಕ ಕಡೆ ಅಶೋಕರು ಬಳಸಿದ ಹೊಸದೇ ಆದ ಒಂದು ವಿಧಾನದ ಸಾರ್ಥಕ ಪ್ರಯತ್ನದಂತಿದೆ. ಕಾಫ್ಕಾನ ಕಾದಂಬರಿ metamorphosisನ ನಾಯಕ ಗ್ರೆಗರಿ ಬೆಳಗ್ಗೆ ಏಳುವಾಗ ಒಂದು ಹುಳುವಾಗಿ ಮಾರ್ಪಟ್ಟಿದ್ದ ಎನ್ನುವ ಪ್ರಜ್ಞೆಯಿಂದ ಬಳಲುವಂತೆ ಇಲ್ಲಿನ ನಾಯಕ ತಾನು ಲುಂಗಿಗೆ ಬದಲು ಸೀರೆ ಉಟ್ಟಿರುವುದಾಗಿ, ನಿಧಾನವಾಗಿ ತನ್ನಲ್ಲಿ ಹೆಣ್ತನ ಜಾಗೃತವಾಗುತ್ತಿರುವುದಾಗಿ ಕಲ್ಪಿಸುತ್ತ ಹೋಗುತ್ತಾನೆ. ಇಲ್ಲಿ ಹೆಣ್ತನ ಎನ್ನುವುದನ್ನು ಅಶೋಕರು ಬಹಳ ವಿಸ್ತಾರವಾದ ನೆಲೆಗಟ್ಟಿನಿಂದ ಕಾಣುತ್ತಾರೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯ. ಕಂಬಾರರ ಮಾತೃಸಂಸ್ಕೃತಿ ಎನ್ನುವ ಪರಿಕಲ್ಪನೆಗೆ ಹತ್ತಿರದ ಒಂದು ಹೆಣ್ತನ ಇದು. ಇಲ್ಲಿನ ಕೆ.ಕೆ.ನಾಯರ್ ಬಹುಮಟ್ಟಿಗೆ ಇದೇ ಸಂಕಲನದ `ಕಲ್ಲು' ಕತೆಯ `ಅವನು'. ಆದರೆ ಈ ಕಲ್ಲು ಕ್ರಮೇಣ ಇದೇ ಸಂಕಲನದ `ಹೆಣದ ಬಟ್ಟೆ'ಕತೆಯಲ್ಲಿ ಬರುವ ತಾಯಿಯನ್ನೆ ಹೋಲುವ ಅಜ್ಜಿಯ ಭಾವಜಗತ್ತಿನೊಳಗೆ ಪ್ರವೇಶ ಪಡೆಯುವ ಸಂಸ್ಕಾರ ಮರಳಿ ಪಡೆಯುವುದು ಇಲ್ಲಿನ ಗಮನಾರ್ಹ ಬೆಳವಣಿಗೆ. ಇದು ಭಾರತೀಯ ಪಾರಂಪರಿಕ ಸಂಸ್ಕಾರವೊಂದರ ಭಾವೋತ್ಕರ್ಷಪರ ಬೆಳವಣಿಗೆ ಎಂಬುದು ನಿಜವಾದರೂ ಅದು ಧ್ವನಿಸುವ ಆಶಯ ನಮಗೆ ಮುಖ್ಯವಾಗುತ್ತದೆ.

ಇನ್ನು `ಕತ್ತಲು' ಕಥೆ ತುಂಬ ತಲ್ಲಣಗೊಳಿಸಬಲ್ಲ ಸತ್ಯಗಳನ್ನು ಹಸಿಹಸಿಯಾಗಿಯೇ ಮುಖಕ್ಕೆ ಹಿಡಿಯುವುದರಿಂದ ಓದುಗನನ್ನು ಅಲ್ಲಾಡಿಸಬಲ್ಲ ಶಕ್ತಿ ಪಡೆದಿದೆ. ಆದರೆ ಈಗಾಗಲೇ ವಸುಧೇಂದ್ರರ `ಕ್ಷಿತಿಜ', `ಹಲೊ ಭಾರತಿ' ಮತ್ತು `ಗುಳ್ಳೆ'ಯಂಥ ಕಥೆಗಳನ್ನು ಓದಿರುವುದರಿಂದ ಈ ಸಾಫ್ಟ್‌ವೇರ್ ಇಂಡಸ್ಟ್ರಿ ಮತ್ತು ಅಲ್ಲಿ ಕೆಲಸ ಮಾಡುವ ಅಚ್ಚರಿಯ ಸಂಬಳದ ಸರದಾರರ ದೈನಿಕಗಳ ವಿವರಗಳ ಬಗ್ಗೆ ಹೊಸತೇನೂ ಅನಿಸುವುದಿಲ್ಲ. ಅದಕ್ಕಿಂತ ಹೆಚ್ಚು, ಇಂಥ ಧಾವಂತದ ಬದುಕು ಇವತ್ತು ಈ ಕ್ಲಾಸ್ ಐಟಿ ನೌಕರರಿಗೆ ಮಾತ್ರ ಎಂದು ತಿಳಿಯಬೇಕಾಗಿಲ್ಲ ಕೂಡ. ಈ ಕಥೆಯ ವೈಶಿಷ್ಟ್ಯವೆಂದರೆ ಮೊದಲನೆಯದಾಗಿ, ನಾವು ಇವತ್ತು ಎದುರಿನ ಮನುಷ್ಯನ ಮಾತು ಕೇಳಿಸಿಕೊಳ್ಳಲೂ ಪುರುಸೊತ್ತಿಲ್ಲದ (ವಾಸ್ತವವಾಗಿ ಸಹನೆಯಿಲ್ಲದ) ಮನುಷ್ಯರಾಗಿರುವುದನ್ನು ಸಹಜವಾಗಿ ಚಿತ್ರಿಸಿರುವುದು. ಕಥೆಯಲ್ಲಿ ಬರುವ ಎಲ್ಲ ಮುಖಾಮುಖಿಗಳಿಗೂ ಇದನ್ನು ಅನ್ವಯಿಸಬಹುದಾದರೂ ಶಂಕರ ಮತ್ತು ಮನೋಹರನ ಪ್ರಸಂಗ ಇದನ್ನು ಹೆಚ್ಚು ಅಚ್ಚುಕಟ್ಟಾಗಿ, ಅರ್ಥವತ್ತಾಗಿ ಸಾಧಿಸಿದೆ. ಎರಡನೆಯದು, ಮನುಷ್ಯ ಸಂವೇದನೆಗಳನ್ನು ಕಳೆದುಕೊಂಡು ಕೂಡ ನೆಮ್ಮದಿಯಿಂದಿರಬಲ್ಲ ಸ್ಥಿತಿ ತಲುಪಿರುವುದನ್ನು ಅಷ್ಟೇ `ಕೂಲ್' ಆಗಿ ಹೇಳಿರುವುದು! ಎಲ್ಲರ ನಿರೀಕ್ಷೆಗೂ ಮೀರಿ, ಆ ರಿಕ್ಷಾದವನನ್ನು ಮನೋಹರ ಬಿಟ್ಟೇ ಬರುವುದು ಗಮನಿಸಿ. ಮತ್ತೆ, ಎಲ್ಲೋ ಅದು ಸರಿ ಎಂದು ನಮಗೇ ಅನಿಸುವುದು ನಿಜವಾದ ದುರಂತ. ಮನೋಹರ ಅವನನ್ನು ಆಸ್ಪತ್ರೆಗೆ ಸಾಗಿಸಿದ್ದರೆ, ಅಲ್ಲಿ ಅವ ಇನ್ನಿಲ್ಲದ ಉಪಾದ್ವಾಪ್ಯಗಳಿಗೆ ಸಿಲುಕಿ ನರಳುತ್ತಿರುವಾಗ ಇಲ್ಲಿ ಅವನ ಮಗುವಿಗೇನಾದರೂ ಜ್ವರ ಹೆಚ್ಚಾಗಿ ಇನ್ನೇನಾದರೂ ದುರಂತ ಸಂಭವಿಸಿದ್ದರೆ ಎಂದೆಲ್ಲ ಸಮರ್ಥನೆಗಳನ್ನು ಹುಡುಕುತ್ತದೆ ಮನಸ್ಸು. ಅದಕ್ಕಿಂತ ಅವನ ಸೈಡ್ ಮಿರರ್‌ನ ಕತ್ತಲೆಯೇ ಶಾಶ್ವತವಾಗಿ ಸೇಫ್ ಎಂದು ಅನಿಸುತ್ತಲ್ಲ, ಇಲ್ಲಿ ಅಶೋಕ್ ಕೌಶಲ್ಯ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕತೆ ಹೇಳುವ ವಿಧಾನದ ಸೌಂದರ್ಯ, ಜಾಣ್ಮೆ, ಕೌಶಲ್ಯಗಳಿಂದಾಗಿಯೇ ಒಂದು ಕತೆ ಮೆಚ್ಚುಗೆಗೆ ಪಾತ್ರವಾಗುವುದೇನೂ ಅಷ್ಟು ಮಹತ್ವದ ಸಂಗತಿಯಾಗಿ ಉಳಿದಿಲ್ಲ ಇವತ್ತು. ಕನ್ನಡದ ಸಣ್ಣಕತೆಗಳು ಚಾಚಿಕೊಳ್ಳುತ್ತಿರುವ ವೈಶಾಲ್ಯ, ಮೈಗೂಡಿಸಿಕೊಳ್ಳುತ್ತಿರುವ ಪ್ರಯೋಗಶೀಲತೆ ಮತ್ತು ಸಾಧಿಸುತ್ತಿರುವ ಪ್ರಾಮಾಣಿಕತೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಂತಿಮವಾಗಿ ಕಥೆ ಓದುಗನಲ್ಲಿ ಪ್ರಾಮಾಣಿಕವಾದ ಮತ್ತು ರಚನಾತ್ಮಕವಾದ ಸಂವೇದನೆಗಳನ್ನು ಸೃಜಿಸದೇ ಹೋದರೆ ಎಲ್ಲ ಕಸುಬುದಾರಿಕೆಯ ನೆಲೆಯಲ್ಲೇ ಉಳಿದುಬಿಡುತ್ತದೆ. ಈ ನಿಟ್ಟಿನಿಂದ ನೋಡಿದರೆ ಅಶೋಕರು ತಮ್ಮ ಈ ಹೊಸ ಸಂಕಲನದಲ್ಲಿ ನಡೆಸಿರುವ ನಾನಾ ರೀತಿಯ ಪ್ರಯೋಗಗಳ ಒಟ್ಟಾರೆ ತಾತ್ಪೂರ್ತಿಕ ಫಲಶೃತಿಯೇನು ಎಂಬುದರ ಬಗ್ಗೆ ಚಿಂತನೆ, ಚರ್ಚೆ ಅಗತ್ಯ.

ಇಲ್ಲಿನ `ವಾಸನೆ, ಶಬ್ದ, ಬಣ್ಣ ಇತ್ಯಾದಿ', `ಅಂಕ ೧, ದೃಶ್ಯ ೨', `ಗ್ರೀಷ್ಮ', `ಸಮುದ್ರ' ಕಥೆಗಳಲ್ಲಿ ಹೊಸತನವಿದೆ. ಆದರೆ ಅದು ಹೇಳುವ ವಿಧಾನದಲ್ಲಿ ಎದ್ದು ಕಾಣುವಷ್ಟು ಕಥಾನಕದ ವಸ್ತು ಮತ್ತು ಆಶಯದ ದೃಷ್ಟಿಯಲ್ಲಿ ಇಲ್ಲ. `ಹಸಿರು ಸೀರೆ' ಎರಡನ್ನೂ ಸಾಧಿಸಿದ ಒಂದು ಯಶಸ್ವೀ ಕಥೆಯಾಗಿದ್ದು ಇದನ್ನು ಗಮನಿಸಿದರೆ ನಾನು ಹೇಳುತ್ತಿರುವುದು ಹೆಚ್ಚು ಸ್ಪಷ್ಟವಾಗಬಹುದು ಅನಿಸುತ್ತದೆ. `ಮಳೆ', `ಒಂದು ಡಾಲರ್ ನೋಟು' ಮತ್ತು `ಕತ್ತಲು' ಕಥೆಗಳ ನಿರೂಪಣೆ ವಿಶೇಷ ಪೋಷಣೆಯನ್ನು ಪಡೆದಿದ್ದು ಪ್ರಯೋಗಶೀಲತೆ ಗೌಣವಾಗಿದ್ದೂ ಗಮನ ಸೆಳೆಯುತ್ತವೆ. ಸಣ್ಣಕತೆಗಳ ಕುರಿತು ವಿಶೇಷ ಆಸಕ್ತಿ ಇರುವವರಿಗೆ ಈ ಸಂಕಲನ ಒಂದು ಹೊಸ ಆಕರವನ್ನು ಒದಗಿಸಿ ಈ ಪ್ರಕಾರದ ಗಂಭೀರ ಸಾಧ್ಯತೆಗಳ ಕುರಿತು ವಿಶ್ಲೇಷಣೆ ನಡೆಸುವಂತೆ ಇರುವುದಂತೂ ಸತ್ಯ.
ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.
ಪುಟಗಳು 136, ಬೆಲೆ ರೂಪಾಯಿ ಎಂಭತ್ತು.

No comments: