Saturday, August 9, 2008

ಅಶೋಕಹೆಗಡೆ ಕಥಾಲೋಕ - ಒಳ್ಳೆಯವನು


"ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್‌ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದು ಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು"

-ತಮ್ಮ `ಒಳ್ಳೆಯವನು' ಕಥಾಸಂಕಲನದ ಮೊದಲಿಗೆ ಅಶೋಕ್ ಹೆಗಡೆ ಹೇಳುವ ಮಾತುಗಳಿವು. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯವರೂ ಸೇರಿ ಬಹುತೇಕ ಎಲ್ಲ ಉತ್ತರಕನ್ನಡದ ಲೇಖಕರಿಗೂ `ಭಾವ'ದೊಂದಿಗೆ ವಿಚಿತ್ರ ನಂಟು. ಈ ಕತೆಯಿಂದ ಕತೆಗಾರ ಏನನ್ನು ಹೇಳಬಯಸಿದ್ದಾನೆ ಎಂಬ ವಿಮರ್ಶಾ ಲೋಕದ ಭೂತಗನ್ನಡಿಯ ಪ್ರಶ್ನೆಗಳೆಲ್ಲ ಅಪ್ರಸ್ತುತವೂ ಅಸಂಬದ್ಧವೂ ಆಗುವಂತೆ ಈ ವಿವರಗಳ ಆಪ್ತಲೋಕವೊಂದು ತೆರೆದುಕೊಂಡು ಓದುಗನನ್ನು ಆರ್ದೃಗೊಳಿಸಿ ಹಿತವಾದ ಒಂದು ಅನುಭವ ನೀಡುವುದರೊಂದಿಗೆ ಈ ಕತೆಗಳು ಮುಗಿಯುತ್ತವೆ. ಈ ಎಲ್ಲ ಅಂಶಗಳಿದ್ದೂ ಕತೆಯಿಂದ ಬೇರೇನನ್ನೋ ನಿರೀಕ್ಷಿಸಿದ್ದ ನಾವು ನಮಗೆ ಕತೆ ನೀಡದೇ ಹೋದುದನ್ನು ಬೇರೆ ಮಾತಿಲ್ಲದೆ ಒಪ್ಪಿಕೊಳ್ಳುವಂತೆ ಮಾಡಬಲ್ಲ ಪರಿಣಾಮಕಾರತ್ವ ಈ ಕತೆಗಳ ಹೆಚ್ಚುಗಾರಿಕೆ ಎಂದೇ ಹೇಳಬೇಕು. ತಾತ್ತ್ವಿಕ ಆಯಾಮಗಳ, ಸಾಮಾಜಿಕ ಅರ್ಥಪೂರ್ಣತೆಯ, ಸಮಕಾಲೀನ ಸಾಹಿತ್ಯದ ಪರಿಕಲ್ಪನೆಯೊಂದಿಗೆ ಒಂದು ತೌಲನಿಕ ಚರ್ಚೆಗೆ ಅನೇಕ ಬಾರಿ ಈ ಕತೆಗಳ ಚೌಕಟ್ಟು ಹೊಂದುವುದಿಲ್ಲ. ಈ ಮಾತಿಗೆ ಅಪವಾದಗಳಿದ್ದರೆ ಅದು ಕೂಡ ಕೇವಲ ಕಾಕತಾಳೀಯವೇ ಹೊರತು ಕತೆಗಾರನ ಪ್ರಜ್ಞಾಪೂರ್ವಕ ಉದ್ದೇಶ ಅದಾಗಿರಲಿಲ್ಲ ಎನ್ನುವಂತಿರುತ್ತವೆ. ಕನ್ನಡದ ಸಣ್ಣಕತೆಗಳ ಇತ್ತೀಚಿನ ನಿಲುವು ಒಲವುಗಳು ಈ ಬಗೆಯ ಕತೆಗಳ ಸುತ್ತ ಹೆಣೆದುಕೊಂಡಿರುವುದು ಕೂಡ ಕುತೂಹಲಕರ.

ಮೂಲಭೂತವಾಗಿ ಅಶೋಕರ ಬರವಣಿಗೆಯ ಜಾಡು ಇದೇ ಸೊಗಡು ಪಡೆದು ಬಂದಿರುವಂಥದ್ದು. ಆದರೆ ಅನೇಕ ಕಡೆ ಇವರು ಈ ಮಾರ್ಗದಿಂದ ಹೊರಳಿ ನಡೆದುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಹಾಗೆ ಮಾಡಿ ಯಶಸ್ವಿಯಾದ ಕತೆ `ಸಾಕ್ಷಿ'. ಬಹುಷಃ ಇತರ ಕತೆಗಳ ಆಳದಲ್ಲೂ ಈ ಹೊರಳುವಿಕೆಯ ಪ್ರಯತ್ನ ತೀರಾ ಗೌಣವಾಗಿಯಾದರೂ ಇದ್ದಿರಬೇಕು ಎನಿಸುತ್ತದೆ. ಆಲಿಕಲ್ಲು, ನೀಲಿ ಬಾನಿನಲ್ಲಿ ನಗುವ ಚಂದಿರ, ಹೊಳೆದದ್ದೆ ತಾರೆ, ನಿನ್ನ ಹೆಸರಿನಲ್ಲಿ ಒಂದು ತೆರೆ ಹುಟ್ಟಲಿ, ಉಳಿದಿದ್ದೆ ದಾರಿ ಕತೆಗಳು ಅಂಥ ಹಂಬಲವನ್ನು ತಮ್ಮೊಳಗೆ ಹೊಂದಿದ್ದ ಕತೆಗಳೇ ಇರಬಹುದು. ಆದರೆ ಅವು ಪೂರ್ತಿಯಾಗಿ ತಾತ್ತ್ವಿಕ ಆಯಾಮಗಳಿಗೆ ಶರಣಾಗುವುದಿಲ್ಲ. ಬಹುಷಃ ಈ ಹೆಸರುಗಳೇ ಅದನ್ನೆಲ್ಲ ಸೂಚಿಸುತ್ತಿರುವಂತಿದೆ. ಹಾಗೆಯೇ ಈ ಕತೆಗಳು ಕೇವಲ `ಭಾವ' ನಿರ್ಮಿತಿಯೊಂದಿಗೆ ನಿಲ್ಲುವುದೂ ಇಲ್ಲ. ಅಶೋಕರ ಅತ್ತ್ಯುತ್ತಮ ಕತೆಗಳು ಈ ಎರಡೂ ಅಂಶಗಳನ್ನು ಮೈಗೂಡಿಸಿಕೊಂಡು ಬಂದ ಈ ಬಗೆಯ ಕತೆಗಳಲ್ಲೇ ಸಿಗುತ್ತವೆ. ಆದರೆ ಪೂರ್ತಿ ಭಿನ್ನ ಮಾರ್ಗ ಹಿಡಿದ ಕತೆಗಳು ಎಂದು ಗುರುತಿಸಬಹುದಾದ `ಒಳ್ಳೆಯವನು' ಮತ್ತು `ಅಂತರದಂಗೆ' ಕತೆಗಳು ಪಕ್ಕಾ ಮ್ಯಾಗಝೀನ್ ಕತೆಯಂಥ `ಕೈ ಹಿಡಿದವರು' ಕತೆಯ ಜೊತೆಗೇ, ಈ ವಿಭಿನ್ನತೆಯ ಕಾರಣಕ್ಕಾಗಿ, ಪ್ರತ್ಯೇಕವಾಗಿ ನಿಲ್ಲುತ್ತವೆ.

ಸಾಮಾಜಿಕ ಅರ್ಥಪೂರ್ಣತೆ ಮತ್ತು ಸದ್ಯದ ವರ್ತಮಾನದ ವಿದ್ಯಮಾನಗಳಿಗೆ ತನ್ನ ಸಾಹಿತ್ಯಸೃಷ್ಟಿಯ ನೆಲೆಯಲ್ಲಿ ಒಬ್ಬ ಕತೆಗಾರ ಸ್ಪಂದಿಸುತ್ತಿರುವ ರೀತಿಗಳೇ ಮುಖ್ಯವೆನಿಸಿದಲ್ಲಿ ಒಳ್ಳೆಯವನು ಮತ್ತು ಅಂತರದಂಗೆ ಕತೆಗಳು ಅಂಥ ಸಾಕಷ್ಟು ಅಂಶಗಳನ್ನು ಹೊಂದಿವೆ. ಅಂತರದಂಗೆ ಕತೆಯಂತೂ ಸಮಕಾಲೀನ ವಸ್ತು, ವಿವರಗಳಿಂದ ಜಾಗತೀಕರಣ, ಮುಕ್ತ ವ್ಯಾಪಾರ ನೀತಿ, ಕ್ಷಿಪ್ರ ಆರ್ಥಿಕತೆಗಳೆಲ್ಲಾ ಸೇರಿ ಸಾಮಾನ್ಯ ಮನುಷ್ಯನೊಬ್ಬನ ಭ್ರಮಾತ್ಮಕ ಹೊಸ ಜಗತ್ತೊಂದು ಏಕಾಎಕಿ ತೆರೆದುಕೊಳ್ಳುವುದನ್ನೂ ಮತ್ತು ಅದು ಅಷ್ಟೇ ಬೇಗ ಬಿಳಿಚಿಕೊಂಡು ಯೂಸ್ ಎಂಡ್ ಥ್ರೋ ತರದ ಬದುಕನ್ನೆ ಅವನ ಪಾಲಿಗೆ ನಿರ್ಮಿಸಿಕೊಡುವುದನ್ನೂ ಅದ್ಭುತವಾಗಿ ಚಿತ್ರಿಸಿದೆ.

"ಧಾರವಾಡದ ಬೀದಿಯಲ್ಲಿ.........ಧನ್ಯವಾಗಬಲ್ಲದು" ಪ್ಯಾರಾ ಅಶೋಕ ಹೆಗಡೆಯವರ ಸಾಹಿತ್ಯಿಕ ಕಾಳಜಿಯನ್ನೂ ಇವರು ಈ ಬದುಕಿನ ರಸವನ್ನು ಗ್ರಹಿಸುವ ಅವರದೇ ಆದ ವಿಶಿಷ್ಟ ಬಗೆಯನ್ನೂ ಹೇಳುತ್ತದೆ. ಅಶೋಕ ಹೆಗಡೆಯವರ ಸೂಕ್ಷ್ಮ ನಿರೂಪಕ ದೃಷ್ಟಿಯ ಹರಹು ವ್ಯಾಪ್ತಿಗಳನ್ನು ಕಾಣಿಸುವುದರೊಂದಿಗೇ ಅದ್ಬುತವಾದ ಕೆಲವು ಬಿಂಬಗಳನ್ನು ನೀಡುವ ಪ್ಯಾರಾ ಈ ನಿರೂಪಕನ ಕತೆಗಳ ಕಾಳಜಿ, ಆಸಕ್ತಿಗಳ ಮಿತಿಗಳನ್ನೂ ಎಲ್ಲೋ ತೆರೆದು ತೋರುವಂತಿದೆ. ಇದನ್ನು ಮಿತಿ ಎನ್ನಬೇಕೊ ಅಥವಾ ಉದಾರ ಮಾನವ ಪ್ರೀತಿಯಾಚೆಯದೇನನ್ನೂ ಬಯಸದ ಇಲ್ಲಿನ ಕತೆಗಳ ಸಾರ್ಥಕತೆಯ ಅಂಚುಗಳೆನ್ನಬೇಕೊ ಹೇಳುವುದು ಕೊಂಚ ಕಷ್ಟವೇ. ವಿಮರ್ಶೆಯ ಪರಿಭಾಷೆಯಲ್ಲಿ, ಸಿದ್ಧ ಮಾದರಿಯ ವಿಮರ್ಶಾ ನಿರೀಕ್ಷೆಗಳ (ಕತೆಗಾರನ ಬೆಳವಣಿಗೆಯ ಘಟ್ಟಗಳನ್ನು ಗುರುತಿಸುವ, ಅವನ ಕತೆಗಳಲ್ಲಿನ ಮಹತ್ವಾಕಾಂಕ್ಷೆಯ ಸಾಧಕ-ಬಾಧಕಗಳನ್ನು ನಿಕಷಃಕ್ಕೆ ಒಡ್ಡುವ, ಕೊನೆಗೆ ಕತೆಯ ಯಶಸ್ಸು-ಸೋಲುಗಳ ಬಗ್ಗೆ ತೀರ್ಪು ನೀಡುವ, ಇತ್ಯಾದಿ) ವ್ಯಾಪ್ತಿಯಲ್ಲಿ ಮಿತಿಯಾಗಿ ಕಾಣಬಹುದಾದ್ದು ಒಬ್ಬ ಕತೆಗಾರನಿಗೂ ಮುಖ್ಯ ಎನಿಸಬೇಕಾಗಿಲ್ಲ.

ಅಂದ ಮಾತ್ರಕ್ಕೆ ಇದೇ ಒಂದು ಹೆಚ್ಚುಗಾರಿಕೆಯೆಂದಾಗಲೀ ಮಿತಿ ಎಂದಾಗಲೀ ಎತ್ತಿ ಹೇಳುತ್ತಿಲ್ಲ. ಆದಾಗ್ಯೂ ಎರಡೂ ಆಗಿರಬಹುದಾದ ಅದರ ಚರ್ಚೆ ನಡೆಯಬೇಕಿದೆಯಾದರೂ ನನ್ನ ಪ್ರಸ್ತುತ ಉದ್ದೇಶ ಅದಲ್ಲ. ತಮ್ಮ ತಮ್ಮ ಸಾಹಿತ್ಯಿಕ ಉದ್ದೇಶಗಳ ಆಯ್ಕೆ, ನೆರವೇರಿಕೆ, ಸಮರ್ಥನೆ ಮತ್ತು ಬದಲಾವಣೆ ಆಯಾ ಲೇಖಕರ ಸ್ವಾತಂತ್ರ್ಯಕ್ಕೆ ಬಿಟ್ಟ ಸಂಗತಿ ಎಂದೇ ಭಾವಿಸಬಹುದು.
ಅಶೋಕ ಹೆಗಡೆಯವರ `ಒಳ್ಳೆಯವನು' ಕಥಾಸಂಕಲನ ಮುಖ್ಯವಾಗುವುದು ನಾನು ಈ ತನಕ ಚರ್ಚಿಸಿದ ಉತ್ತರಕನ್ನಡದ ಮೂಲ ಸೆಲೆಗಳನ್ನು, ಧಾತುಗಳನ್ನು ಬಿಟ್ಟುಕೊಡದೆ, ಅದನ್ನೆಲ್ಲ ಬಳಸಿಕೊಂಡೂ ಕೊಂಚ ಭಿನ್ನವಾಗಿ ತಮ್ಮ ಕತೆ ಹೆಣೆಯುತ್ತಾರೆ ಎಂಬ ಕಾರಣಕ್ಕೆ. ಅದನ್ನು ಸ್ವಲ್ಪ ವಿವರವಾಗಿ ಗಮನಿಸುವುದು ಮುಖ್ಯ.

ಮೊದಲ ಕತೆ `ಆಲಿಕಲ್ಲು' ದಟ್ಟ ವಿವರಗಳಲ್ಲೇ ಭಾವನಿರ್ಮಿತಿಯ ಉದ್ದೇಶ ಹೊಂದಿದ ಕತೆ. `ಮಳೆ ಬರದೆ ಧೂಳೆಬ್ಬಿಸುವ ಆ ದಾರಿಯ ಕೊನೆ ತಲುಪಿದ ನಾಗರಾಜನಿಗೆ ಬಂದ ದಾರಿ ಬರಬೇಕಾದುದಲ್ಲಾ ಎನ್ನುವ ಭಾವನೆಯೊಂದು ಮರಿಹಾಕಿ ನಡಿಗೆಯ ವೇಗವನ್ನು ನಿಧಾನಿಸಿದ' ಎಂಬ ಮೊದಲ ವಾಕ್ಯ ಇಡೀ ಕತೆಯ ಬೀಜ ಮಂತ್ರದಂತಿದೆ. `ಬಂದ ದಾರಿ ಬರಬೇಕಾದುದಲ್ಲಾ' ಎಂಬ ಅರಿವು ಹುಟ್ಟುವುದೇ, ಹುಟ್ಟಿದ ಸಂದಿಗ್ಧಗಳೊಂದಿಗೇ ಕತೆಯ ಪ್ರಮುಖ ಅಂಶ. ಈ ಅರಿವು ಮುಸುಕಿನಾಚೆ ಒಡೆದು ಕಾಣಿಸಿಕೊಳ್ಳುವ ಹಂತದಲ್ಲಿ ಅದು ಸಾಕಾರಗೊಳ್ಳುತ್ತದೆ. ಉಳಿದ ವಿವರಗಳೆಲ್ಲ ಕತೆಗೆ ಬೇಕಾದ ವಾತಾವರಣ, ವಸ್ತುವಿಗೆ ಬೇಕಾದ ಆಳ, ನಿರೂಪಣೆಯ ಬಿಗಿ ದಕ್ಕಿಸಿಕೊಡಲು ಸಶಕ್ತವಾಗಿ, ಸಮರ್ಥವಾಗಿ ಬಳಸಲ್ಪಟ್ಟಿವೆ, ಓದುಗನನ್ನು ಬೆಚ್ಚಗೆ ತಮ್ಮೊಂದಿಗೆ ಒಯ್ಯುತ್ತವೆ. ಈ ಕತೆಯೊಂದಿಗೆ ವೈದೇಹಿಯವರ `ಪಥಿಕರು' ಕತೆಯನ್ನೂ ಗಮನಿಸುವುದು ಸಾಧ್ಯವಾದರೆ ಈ ಓದು ಕೆಲವು ಕುತೂಹಲಕರ ಒಳನೋಟಗಳನ್ನು ನಮಗೆ ನೀಡುವುದು ಸಾಧ್ಯವಿದೆ.

`ನೀಲಿಬಾನಿನಲ್ಲಿ ನಗುವ ಚಂದಿರ' ಕತೆಯಲ್ಲಿ ನಿಜಕ್ಕೂ ಭಾವಜಗತ್ತಿನ ದುರಂತಗಳನ್ನು ಸ್ವೀಕರಿಸುವ ಮನೋಭಾವ ಹಿತಕಾರಿಯಾಗಿ, ಸರಳ ಸಹಜತೆಯೊಂದಿಗೆ ಮೂಡಿ ಬಂದಿದೆ. ಜಯಂತರ ಕತೆ `ಮೋಗ್ರಿಯ ಸತ್ಸಂಗ'ವನ್ನು ಪದೇ ಪದೇ ನೆನಪಿಸಿದ ಕತೆ ಇದು. ಇಬ್ಬರೂ ಬಹಳಷ್ಟು ಸಾಮ್ಯತೆಗಳಿರುವ ವಸ್ತು, ವಿವರಗಳಲ್ಲಿ ಹೇಳುವ ಕತೆ ಕೌತುಕ ಹುಟ್ಟಿಸುತ್ತದೆ.

ಸಾರಂಗ ರಾವ್ ಮಗಳು ವಸುಂಧರೆ, ಚಾಳಿನ ಹುಡುಗಿ ಮಂಜರಿ ಸಾವಂತ್‌ಗಳ ವ್ಯರ್ಥಗೊಂಡ ಪ್ರೇಮದ ಹುಡುಕಾಟಗಳಂತೆಯೇ ಮಹಾನಗರಿಯ ಎಲ್ಲ `ಜನರ ಎದೆಯ ಕೂಸು ಕೂಡ ತಟ್ಟನೇ ಕೈಜಾರಿ, ಕಣ್ತಪ್ಪಿ ಲೋಕಲ್‍ನಿಂದ ಹೊರಗೆ ಧುಮುಕುವ ನೆರಳುಗಳ ಪ್ರಪಾತದಲ್ಲಿ ಕಳೆದು ಹೋಗುತ್ತದೇನೋ, ಕಳೆದು ಹೋಗಿ ಯಾರಾರದೋ ಕೈ ಸೇರಿ ಮುಖ, ಆಕೃತಿ ಕಳೆದುಕೊಂಡು ಮುಂಬೈನ ಬೀದಿಬದಿಯ ಜನದಟ್ಟಣೆಯಲ್ಲಿ ಭಿಕ್ಷೆ ಬೇಡುತ್ತದೇನೋ' ಎಂಬ ಅವ್ಯಕ್ತ ದುಗುಡ ಸಾರ್ವತ್ರಿಕವಾಗಿರಬಹುದಾದ ದುರಂತದ ಛಾಯೆ ಇಲ್ಲಿದೆ. ದುರಂತಗಳ ನೆರಳಿನಡಿಯಲ್ಲೆ, ಅದೇ ಲೋಕಲ್‍ನಲ್ಲಿ ಬದುಕಿನ ಗಾಡಿಯೂ ಚಲಿಸುತ್ತಿರಬೇಕಾಗಿ ನಕ್ಕು ಹಗುರಾಗುವ, `ಗೆಲುವಾಗೆಲೆ ಮನ, ಲಘುವಾಗೆಲೆ ಮನ' ಎಂಬ ಕವಿನುಡಿಯನ್ನು ನೆನಪಿಸುವಂಥ ಎದೆ ಹಗುರಗೊಳಿಸುವ ಅಂತ್ಯ ಕತೆಗೆ ವಿಶೇಷ ಮೆರುಗು ನೀಡುತ್ತದೆ.

`ಹೊಳೆದದ್ದೆ ತಾರೆ' ಕತೆ ಅನಗತ್ಯ ಮಹತ್ವಾಕಾಂಕ್ಷೆ ಇರುವ ಯಾವ ಸೋಗನ್ನೂ ತೋರದೆ ಲಘುವಾಗಿ ಲಘುವಲ್ಲದ ಏನನ್ನೋ ಹೇಳುವ ಹೊಳಹು ತನ್ನೊಳಗೇ ಇಟ್ಟುಕೊಂಡು ಮುಗಿಯುವುದರಿಂದ ಹಿತವಾಗಿಯೂ, ಅಚ್ಚುಕಟ್ಟಾಗಿಯೂ ಮೂಡಿಬಂದಿದೆ.

`ಸಾಕ್ಷಿ' ಕತೆ ಈ ಸಂಕಲನದ ಶ್ರೇಷ್ಠ ಕತೆಗಳಲ್ಲಿ ಒಂದು. ಇಲ್ಲಿ ಬಳಸಲ್ಪಟ್ಟ ತಂತ್ರ ಅದರದ್ದೇ ಆದ ಸುಪುಷ್ಟ ಧ್ವನಿಯುಳ್ಳದ್ದು. ಭಾಷೆ ಇಲ್ಲಿ ಸಂಕೀರ್ಣವಾಗಿ ಇರದೆ ವಿವರಗಳು ಸಹಜ ಸೌಂದರ್ಯದೊಂದಿಗೆ ಬಂದಿವೆ. ಕಡುವ್ಯಾಮೋಹಿಯ ಪ್ರೇಮವೇ, ದ್ವೇಷ ಮತ್ತು ಕ್ರೌರ್ಯಗಳ ನೆಲೆಯಲ್ಲಿ ಸಾಗುವ ಬಗೆಯನ್ನು ಅನಾವರಣಗೊಳಿಸಿದ ರೀತಿ ಅಚ್ಚುಕಟ್ಟಾಗಿದೆ. ವಿಚಿತ್ರ ಸನ್ನಿವೇಶವೊಂದರಲ್ಲಿ ವಾಸ್ತವವಾಗಿ ಸೆರೆಯಲ್ಲಿರಬೇಕಾದವನೊಬ್ಬನ ಸೆರೆಯಲ್ಲಿರುವ ನಿರೂಪಕ ಹಾಗೂ ಇತರರು ಅಪರಾಧಿಯ `ಭಾವ'ವನ್ನು ಸಾಕ್ಷೀಕರಿಸುವುದು, ಅದೂ ಸರಿಯಾದ ಸಾಕ್ಷಿಯಿಲ್ಲದ ಕಾರಣಕ್ಕೇ ಅಪರಾಧವನ್ನು ಕಾಣಲು ಸೋತ ಕೋರ್ಟಿನ ಆವರಣದಲ್ಲೇ; ಚಲನಶೀಲವಾದ ವ್ಯಾನೊಂದರಲ್ಲಿ ಕುಳಿತು, ಅದು ಕೆಟ್ಟು ನಿಂತಿರುವ ವ್ಯಾನಾಗಿರುತ್ತ...

ಈ ತಾಂತ್ರಿಕ ಚೌಕಟ್ಟು ಎಲ್ಲೂ ಕೃತಕ ಎನಿಸದಷ್ಟು ಸಹಜವಾಗಿ ಹಂತಗಳಲ್ಲಿ ಅನಾವರಣಗೊಳ್ಳುತ್ತ ಹೋಗುತ್ತದೆ. ಇಲ್ಲಿನ ಕಥನವೂ ಸ್ವತಂತ್ರವಾಗಿಯೆ ಗಟ್ಟಿಯಾಗಿದೆ ಮತ್ತು ಅದು ಈ ಎಲ್ಲ ಅಂಶಗಳನ್ನು ಗೌಣಗೊಳಿಸುವಷ್ಟು ಸ್ವಯಂಶಕ್ತವಾಗಿದೆ. ಹಾಗಾಗಿ, ಈ ಅಂಶವನ್ನು ಬಿಟ್ಟು ನೋಡಿದರೂ ಈ ಕತೆ ಅಶೋಕ ಹೆಗಡೆಯವರ ಪ್ರತಿಭೆಯ ಸೇಂದ್ರೀಕೃತ ಅಭಿವ್ಯಕ್ತಿ ಎಂದೇ ಹೇಳಬಹುದಾದಷ್ಟು ಸಾಮಾಗ್ರಿಯನ್ನು ಹೊಂದಿದೆ.

`ಕೈ ಹಿಡಿದವರು' ಕತೆ ಕೂಡ ಚೆನ್ನಾಗಿದೆ. ಆದರೆ ಈ ಕತೆಯ ವಸ್ತು ಓದುಗನ ಮನಸ್ಸಿನಲ್ಲಿ ಅಷ್ಟೇನೂ ಮಹತ್ವ ಪಡೆಯುವ ಸಾಮರ್ಥ್ಯ ಹೊಂದಿಲ್ಲ. ತನ್ನ ಒಂದು ರಹಸ್ಯ ಸಾಯುತ್ತಿರುವ ಗಂಡನಿಗೆ ಮೊದಲೇ ತಿಳಿದಿತ್ತೆ ಎಂಬ ಸಕಾರಣ ಹುಟ್ಟಿಕೊಂಡ ಅನುಮಾನವೊಂದನ್ನು ವಯಸ್ಸಾಗಿ ಸಾಯಲು ಬಿದ್ದ ಗಂಡನ ಹತ್ತಿರ ಕೂತ ಹೆಂಡತಿಯ ಮನದಲ್ಲಿ ಹಾಗೆಯೆ ಉಳಿಸಿ ತೀರಿಕೊಳ್ಳುವ ಸುಬ್ರಾಯ ಭಟ್ಟರು ಕೂಡಾ ಯಾರಿಗೂ ಹೇಳದ ಗುಟ್ಟುಗಳನ್ನಿಟ್ಟುಕೊಂಡೇ ಸಾಯುವುದು ಇಲ್ಲಿನ ಚೋದ್ಯ.
ದಿನಕ್ಕೊಬ್ಬಳು ನಾಟಕದ ನಟಿಯ ಸೆರಗು ಹಿಡಿದು ಅಲೆದ ಸುಬ್ರಾಯ ಭಟ್ಟರ ಮನಸ್ಸು ಪರಿವರ್ತನೆಗೊಳ್ಳಲು ಕಾರಣವಾಗಿದ್ದು ಮಾತ್ರ ತನ್ನ ದೇಹದ ಕಾಮನೆಗಳನ್ನು ಕೆರಳಿಸುತ್ತಿದ್ದ, ತಣಿಸುತ್ತಿದ್ದ ಸುಕೋಮಲ ಸುಂದರ ಜೀವವೊಂದು ತನ್ನ ಕಣ್ಣೆದುರೇ ಶರಾವತಿಯಲ್ಲಿ ಮುಳುಗುತ್ತಿದ್ದಾಗ ತನಗೆ ತನ್ನ ಜೀವದ ಸ್ವಾರ್ಥವೆ ಮುಖ್ಯವಾಗಿಬಿಟ್ಟಿತಲ್ಲ ಎಂಬ ಸಾಕ್ಷಿಪ್ರಜ್ಞೆ ಹುಟ್ಟಿಸಿದ ಆತ್ಮಶೋಧನೆ. ಆದರೆ ಅದು ಯಾರಿಗೂ ತಿಳಿಯದ ಗುಟ್ಟಾಗಿಯೆ ಅವರೊಂದಿಗೆ ಸಾಯುತ್ತದೆ. ಇಲ್ಲಿ ಕಾಡುವ ಪಾಪಪ್ರಜ್ಞೆಯೇ ಮುಖ್ಯವಾಗಿರುತ್ತ ಅದನ್ನು ಓದುಗನಲ್ಲಿ ಇನ್ನೂ ಹೆಚ್ಚು ಅನುರಣನೀಯಗೊಳಿಸಲು ಅಗತ್ಯವಾಗಿದ್ದ ಒಂದು ಲಯ ಈ ಕತೆಯ ತಂತ್ರದ ಮಿತಿಯಿಂದಾಗಿ ಸಾಧ್ಯವಾಗಿಲ್ಲ ಎನಿಸುತ್ತದೆ. ಸುಬ್ರಾಯ ಭಟ್ಟರಿಗೆ ಪತ್ನಿಯ ರಹಸ್ಯ ತಿಳಿದಿರಲಿಲ್ಲ ಎಂಬುದು ಓದುಗನಿಗೆ ತಿಳಿದುಬಿಡುತ್ತದೆ. ಓದುಗನಿಗೂ ತಿಳಿಯದಿದ್ದಲ್ಲಿ ಕತೆಯ ಸಂಭವನೀಯ ಪರಿಣಾಮ ಹೆಚ್ಚುತ್ತಿತ್ತು. ಉಳಿದಂತೆ ವಿವರಗಳ ಜಗತ್ತು, ಸಾವಧಾನದ ಓಘದಲ್ಲಿರುವ ನಿರೂಪಣೆಯ ಹಿತ ಎಲ್ಲವೂ ಇಲ್ಲಿದ್ದೇ ಇದೆ.

ಅದ್ಭುತ ಎನಿಸುವ ಇನ್ನೊಂದು ಕತೆ, `ನಿನ್ನ ಹೆಸರಿನಲ್ಲಿ ಒಂದು ತೆರೆಹುಟ್ಟಲಿ'. ಹಮೀದ ತಾನು ಒಬ್ಬ ವೇಶ್ಯೆಯ ಮಗ ಎಂಬ ಸಂಗತಿಯನ್ನು ಒಂದು ಸಮಸ್ಯೆ ಎಂದೋ ತನ್ನ ಕೀಳಿರಿಮೆಗೆ ಸಮರ್ಥನೆ ಎಂದೋ ನಂಬಿದಂತಿರುವ ದೊಡ್ಡ ಡಾಕ್ಟರ್. ಆದರೆ ತನ್ನನ್ನೆ ತಾನು ಮೋಸ ಮಾಡಿಕೊಂಡು ತನ್ನ ಹಿನ್ನೆಲೆಯಿಂದ ಕಳಚಿಕೊಳ್ಳುವ ಗಿಮ್ಮಿಕ್ ಇಷ್ಟವಿಲ್ಲದ ಸರಳ ಮನುಷ್ಯ. ಅದೇ ಓಣಿಯ ಟೀ ಹುಡುಗ ಮಂಜನ ಜೊತೆ ಮಾತ್ರ ತನ್ನ ಸಹಜ ಸ್ಥಿತಿಯಲ್ಲಿ ನಿರಾಳನಾಗಬಲ್ಲ ಹಮೀದನಿಗೆ ಆಳದಲ್ಲಿ ತನ್ನ ತಾಯಿಯ ಕಸುಬು, ಸೂಳೆಯರೇ ಇರುವ ಓಣಿ, ಮಂಜ, ಶಿಥಿಲಗೊಂಡ ಹಳೆಯ ಮನೆ ಎಲ್ಲವೂ ಅನಿವಾರ್ಯ, ಅಗತ್ಯದ ಸಂಗತಿಗಳೇ. ಅವುಗಳ ಹೊರತಾಗಿ ಅವನ ಅಸ್ತಿತ್ವ ಸುಳ್ಳಾಗಿಬಿಡುವ ಸಂಗತಿಯ ಅರಿವಿದೆ ಅವನಿಗೆ. ಅಷ್ಟೇ ಆಗಿದ್ದರೆ ಈ ಕತೆ ಮುಖ್ಯವಾಗಬೇಕಾದ್ದಿರಲಿಲ್ಲ. ವೇಶ್ಯಾ ಆರೋಗ್ಯ ಅಭಿಯಾನದ ವಿರೋಧಿ ಹಮೀದ, ನೇಪಾಳೀ ಹುಡುಗಿಯೊಬ್ಬಳನ್ನು ಹುಡುಕಿಕೊಂಡು ಹೊರಡುವ ಹಮೀದ, ಅವಳಲ್ಲಿ ತನ್ನ ತಾಯಿಯ ನೆರಳು ಕಾಣುವ ಹಮೀದ, ಹಾಗೆ ತಾಯಿಯ ನೆರಳನ್ನು ಕಾಣುವುದಕ್ಕೇ ಎಂಬಂತೆ ಅವಳನ್ನು ಹುಡುಕಿ ಹೊರಟಿರಬಹುದಾದ ಹಮೀದ ಮತ್ತು ತಾನು ವೇಶ್ಯೆಯ ಮಗ ಎಂಬುದನ್ನು ಈ ಲೋಕ ತಿಳಿದೂ ತನ್ನನ್ನು ಸ್ವೀಕರಿಸಬೇಕು ಎಂದು ತೀವೃವಾಗಿ ಬಯಸುವ ಹಮೀದ, ಕೊಂಚ ಹದ ತಪ್ಪಿದರೆ ಬರಿಯ ನಾಸ್ಟಾಲ್ಜಿಯಾ ಅನ್ನಿಸಿಬಿಡಬಹುದಾಗಿದ್ದ ಮಿತಿಯನ್ನು ಮೀರಿನಿಂತ ಭಾವಗೀತೆಯಾಗುವುದು ಈ ಕತೆಯ ವಿಶೇಷತೆ.

`ಒಳ್ಳೆಯವನು' ಕತೆ ಈ ಸಂಕಲನಕ್ಕೆ ಶೀರ್ಷಿಕೆಕೊಟ್ಟ ಕತೆ. ಬದುಕನ್ನು ಅದರ ಪರಿಧಿಯ ಹೊರ ನಿಂತು, ಸಾಕ್ಷೀ ಪ್ರಜ್ಞೆಯಿಂದ ನೋಡುವ ತಂತ್ರ ಈ ಕತೆಯ ಉದ್ದಕ್ಕೂ ಬಳಸಲ್ಪಟ್ಟಿದೆ. ಅಸಂಗತ ನಾಟಕದಂತೆ ತೊಡಗುವ ಕತೆ ಯಾರೂ ಆಗಿಬಿಡಬಹುದಾದ ಒಂದು ಪಾತ್ರವನ್ನು ಸೃಜಿಸಿಕೊಂಡು ಅವನ ಮೂಲಕ ನೋಡುತ್ತ ನೋಡಿಸಿಕೊಳ್ಳುತ್ತ ಹೋಗುತ್ತದೆ. ಈ ಒಳ್ಳೆಯವನು ತನ್ನ ಸರಳ, ಮುಗ್ಧ, ನಿರ್ಲಿಪ್ತ, ವಿಧಾನದ ಬದುಕಿನಿಂದ ಬಹಳ ಬೇಗ ಮೂರ್ಖ, unfit ಮತ್ತು ಹುಚ್ಚ ಅನಿಸಿಕೊಂಡು ತಾನು ಈ ಜಗತ್ತಿಗೆ ಸೇರಿದವನೇ ಅಲ್ಲವೇನೋ ಎಂಬ ಸುಪ್ತ ಅನುಮಾನವನ್ನು ತನ್ನೊಳಗೆ ಬೆಳೆಸಿಕೊಂಡು ಬದುಕುವುದನ್ನು ಕತೆ ಸಮರ್ಥವಾಗಿ ಹಿಡಿದಿಡುತ್ತದೆ.

ಆಧುನಿಕ ಮನಷ್ಯನ ಅಂತರಾಳ ತಡಕುವ ಸ್ಪಷ್ಟ ಉದ್ದೇಶ ಹೊಂದಿರುವ ಈ ಕತೆ ಯಶಸ್ವಿಯಾಗಿಯೂ ವಿಶೇಷ ಅನ್ನಿಸಿಕೊಳ್ಳುವುದಿಲ್ಲ. ನವ್ಯದ ಅತಿಗಳನ್ನು ಕಂಡವರಿಗೆ, ಅಷ್ಟೇ ಅತಿಯಾಗಿ ಅದನ್ನು ತುಚ್ಚೀಕರಿಸಿರುವುದನ್ನೂ ಕಂಡವರಿಗೆ ಈ ಕತೆ ತೀರಾ ತಡವಾಗಿ ಬಂದಿದೆ ಎಂದೋ, ಅಕಾಲಿಕ ಎಂದೋ ಅನಿಸಿದರೂ ಹೆಚ್ಚಲ್ಲ. ಅಲ್ಲದೆ, ಸ್ವತಃ ಅಶೋಕ ಹೆಗಡೆಯವರ ಮಹತ್ವಾಕಾಂಕ್ಷೆಯ ಹಂಗಿಲ್ಲದ, ಒಂದರ್ಥದಲ್ಲಿ ಉದ್ದೇಶರಹಿತವಾದ ನಿರೂಪಣೆಯುಳ್ಳ ಕತೆಗಳು ಪಡೆಯುವ ಯಶಸ್ಸನ್ನು ಗಮನಿಸಿದರೆ, `ಒಳ್ಳೆಯವನು' ಕತೆ ಗೆದ್ದೂ ಸೋಲುವುದೆಲ್ಲಿ ಎಂಬುದು ತಿಳಿಯುತ್ತದೆ. Out dated ವಸ್ತು ಮತ್ತು ಪೂರ್ವಯೋಜಿತ ರೀತಿಯಲ್ಲೇ ಸಾಗುವ ಕತೆ ಎಂಬ ಕಾರಣಕ್ಕೆ ಈ ಕತೆ ಗಮನ ಸೆಳೆಯುವುದಿಲ್ಲ, ಕತೆಯ ಉಳಿದೆಲ್ಲ ಗುಣಾತ್ಮಕ ಅಂಶಗಳನ್ನು ಇದು ನುಂಗಿಬಿಡುತ್ತದೆ.

`ಉಳಿದದ್ದೆ ದಾರಿ' ಮತ್ತು `ಹೊಳೆದದ್ದೆ ತಾರೆ' ಕತೆಗಳ ನಡುವೆ ಅನೇಕ ಹೋಲಿಕೆಗಳಿವೆ. ಅಲ್ಲಿ ತಂದೆ ಮಗನ ನಡುವಿನ ಒಂದು ಆಟ ಅವರ ನಡುವಿನ ಪೈಪೋಟಿ, ಜುಗಲ್‍ಬಂದಿ, ಪ್ರೀತಿ, ಪರಿಧಿ ಮೀರಲೇ ಬೇಕಾದ್ದಕ್ಕೆ ಅಗತ್ಯವಾದ ತರಬೇತಿ ಇವೆಲ್ಲದರ ಹಾಗೆ ಕಾಣುವಂತೆ ಇಲ್ಲಿನ ತಮಾಷೆಯ ಆಟಕ್ಕೂ ಕಂಡೂ ಕಾಣದ ಉದ್ದೇಶಗಳೆಲ್ಲ ಇರುವಂತಿದೆ. ಇಲ್ಲಿ ಲಟಾರಿ ಜೀಪು ಮತ್ತು ವೈಯ್ಯಾರದ ಕಾರುಗಳ ನಡುವಿನ ಸ್ಪರ್ಧೆಯ ಓಟ ಮುಖ್ಯ ರಸ್ತೆಯ ವಿದ್ಯಮಾನಗಳನ್ನು ಮೀರಿ ಹಲವು ಕವಲು ದಾರಿಗಳಲ್ಲೂ ಹರಿಯುತ್ತದೆ ಮತ್ತು ಅದರಿಂದಾಗಿಯೆ ಬದುಕಿನ ಓಟಕ್ಕೆ ಇರುವ ಸಂಕೀರ್ಣ ಮುಖಗಳ ನಿರುದ್ದೇಶಿತ ಮಿಂಚುನೋಟಗಳನ್ನು ಒದಗಿಸುತ್ತದೆ.

ವಿವರಗಳಲ್ಲಿ, ಚಿತ್ರಣದಲ್ಲಿ ಉಸಿರುಕಟ್ಟಿಸುವ ತೀವೃತೆ ಇದ್ದೂ; ಹೆಚ್ಚಿನದೆಲ್ಲ ಭಾಷೆಯ ಸದ್ದುಗಳಲ್ಲೆ ಕಣ್ಣಿಗೆ ಹೊಡೆಯುವುದರಿಂದ ಸೃಜನಶೀಲ ಕಲೆಗಾರಿಕೆಗೆ ಕನಿಷ್ಟ ಅವಕಾಶ ನೀಡುವ ವಸ್ತುವಿನ ಕತೆ `ಅಂತರದಂಗೆ', ದೀರ್ಘ ನಿಟ್ಟುಸಿರು, ಆತಂಕ ಹುಟ್ಟಿಸಿಯೂ ಕತೆಯಾಗುವ ಮುನ್ನವೇ ಮುಗಿಯುತ್ತದೆ. ವಸ್ತು ಸಮಕಾಲೀನ, ಅನುಭವ ತಾಜಾ, ವಿವರಗಳು ಸಮೃದ್ಧವಾಗಿದ್ದರೂ ಒಂದು ವಾಸ್ತವವಾದೀ ಚಿತ್ರದ ಆಚೆ ಕತೆ ಯಾವುದೇ ಒಳನೋಟಗಳನ್ನು ನೀಡಲಾರದ್ದಾಗಿಬಿಡುವ ದುರಂತ ಕತೆಗಾರಿಕೆಯದಲ್ಲ, ವಸ್ತು ಸ್ಥಿತಿಯದು ಎನಿಸುತ್ತದೆ. ಕಾರ್ಟೂನಿನ, ವಿಡಂಬನೆಯ ರಾಜಕಾರಣಿಗಳಿಗಿಂತ, ವಾಸ್ತವದ ರಾಜಕಾರಣಿ, ಪರಿಸ್ಥಿತಿಗಳೇ ಹಾಸ್ಯಾಸ್ಪದವಾದಾಗ ವ್ಯಂಗ್ಯಕಲಾವಿದರು, ವಿಡಂಬನಕಾರರು ಬೆಚ್ಚಿಬೀಳುವ ಹಾಗೆ ಇದು. ಅಂಥ ವಸ್ತುವನ್ನು ಆಯ್ದುಕೊಂಡು ಬರೆದಾಗ ಅದು ಸುದ್ದಿಯಾಗುತ್ತದೆ, ಸದ್ದು ಮಾಡುತ್ತದೆ ಆದರೆ ಕತೆಯಾಗುವುದಿಲ್ಲ. ಕತೆ, ಅದನ್ನು ಓದಿ ಮುಗಿಸಿದ ಬಳಿಕ ಓದುಗನಲ್ಲಿ ಹೊಸದಾಗಿ ಹುಟ್ಟಿ, ಬೆಳೆಯತೊಡಗುವ ಸಜೀವ. ಇಲ್ಲಿ ಕತೆ ಮುಗಿಯುವ ಹೊತ್ತಿಗೆ ಓದುಗನಿಗೆ ಎಲ್ಲ ಮುಗಿದರೆ ಸಾಕೆನ್ನಿಸತೊಡಗಿ ಅದು ನಿರ್ಜೀವವಾಗಿರುತ್ತದೆ! ನಿರುದ್ಯೋಗ ಪರ್ವದ ಸಂಕಟಗಳಾಚೆ ಜಾಗತೀಕರಣ, ಉದಾರೀಕರಣದ ತೊಗಲು ಹೊತ್ತಿದ್ದರೂ ಕತೆಗೆ ಆ ಎಲ್ಲ ಆಯಾಮಗಳ ಸಹಜ ಅನಿವಾರ್ಯವೇನೂ ಇಲ್ಲ.

ಭಾವದ ಪುನರ್ಸೃಷ್ಟಿ ಭಾಷೆಯ ಮೂಲಕ ಆಗಬೇಕೆನ್ನುವಾಗ ಬಳಸುವ ಪ್ರತಿಮೆಗಳು, ಬಿಂಬಗಳು, ಶಬ್ದದ ಧ್ವನಿಯ ಉಪಯೋಗ ಎಲ್ಲ ನುರಿತ ಕತೆಗಾರರಾದ ಅಶೋಕರಿಗೆ ಹೊಸದಲ್ಲ. ಅವರ ಅನೇಕ ಕತೆಗಳಲ್ಲಿ ಅವರು ಅದನ್ನೆಲ್ಲ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಹಾಗೆ ಬಳಸುವ ವಾಕ್ಯಗಳು, ಶಬ್ದಗಳು ಸೂಕ್ಷ್ಮಸಂವೇದಿಯಾಗಿರುತ್ತವೆ ಮಾತ್ರವಲ್ಲ ಅವುಗಳನ್ನು ಬಳಸಿದ ರೀತಿ, ಕಟ್ಟಿಕೊಟ್ಟ ರೀತಿ ಓದುಗನ ಗ್ರಹಿಕೆ ಮತ್ತು ಸ್ಪಂದನಗಳ ದೃಷ್ಟಿಯಿಂದ ಬಹಳ ನಾಜೂಕಿನ ಕೆಲಸ. ಆದರೆ ಕೆಲವೊಂದು ಕಡೆ ಅಶೋಕರು ಸಶಕ್ತವಾದ ಬಿಂಬಗಳನ್ನು ಉದ್ದೀಪಿಸಿದ ಬೆನ್ನಿಗೇ ಅವುಗಳನ್ನು ತುಂಟ ಹುಡುಗನಂತೆ ಕೆಡಹುತ್ತ ಹೋಗುತ್ತಾರೆ. ಮನಸ್ಸಲ್ಲಿ ಕ್ಷಣಕಾಲವಾದರೂ ಅವು ನಿಲ್ಲದಂತೆ ಇನ್ನೊಂದೇ ಬಿಂಬವನ್ನು ನುಗ್ಗಿಸಿ ಎಲ್ಲ ಗೋಜಲಾಗಿಸುತ್ತಾರೆ. ಅವರು ಸೃಜಿಸುವ ಬಿಂಬಗಳಿಗೆ ಅನೇಕ ಕಡೆ ದೀರ್ಘಕಾಲೀನ ಉದ್ದೇಶವೇ ಇದ್ದಂತೆ ಅನಿಸುವುದಿಲ್ಲ. ಇದು ಅವರ ಕತೆಗಳ ಸುಲಲಿತ ಓದಿಗೆ ಮತ್ತು ಈ ಓದು ನೀಡಬೇಕಾದ ರಸಾನುಭೂತಿಗೆ ಕೆಲವು ತೊಡಕುಗಳನ್ನು ಒಡ್ಡುವಂತಿದೆ.

೧೯೯೬ರಲ್ಲಿ ಬಂದ `ಒಂದು ತಗಡಿನ ಚೂರು' ಸಂಕಲನದ ನಂತರ ಸುಮಾರು ಎಂಟು ವರ್ಷಗಳ (೨೦೦೪) ಅಂತರದಲ್ಲಿ ಅಶೋಕರ ಎರಡನೆಯ ಸಂಕಲನ `ಒಳ್ಳೆಯವನು' ಬಂದಿದೆ. ಸಣ್ಣಕತೆಯ ಪ್ರಕಾರವನ್ನು ಗಂಭೀರವಾಗಿ ಸ್ವೀಕರಿಸಿ ಹೊಣೆಗಾರಿಕೆಯಿಂದ ಬರೆಯುತ್ತಿರುವ ಅಶೋಕ ಹೆಗಡೆಯವರ ಸಾಧ್ಯತೆಗಳು ನಿಜಕ್ಕೂ ಅನನ್ಯವಾಗಿದೆ. ಅವರ ಸೂಕ್ಷ್ಮಸಂವೇದನೆ, ಸ್ಪಷ್ಟ ಸಾಹಿತ್ಯಿಕ ಉದ್ದೇಶಗಳು, ತಮ್ಮ ಕತೆಯನ್ನು ಭಾವ ಜಗತ್ತಿನಿಂದ ಅರಿವಿನ ಪಾತಳಿಗೆ ಏರಿಸಬೇಕೆಂಬ ತುಡಿತ, ಸಮರ್ಥ ತಾಂತ್ರಿಕ ನಿರ್ವಹಣೆ ಮತ್ತು ವೈವಿಧ್ಯಮಯವೂ ವಿಶಿಷ್ಟವೂ ಆದ ವಸ್ತುವಿನ ಆಯ್ಕೆ, ಅನೇಕ ಕಡೆ ಕಾಣುವ ಗಮನಾರ್ಹವಾದ ಸಂಯಮದ ನಡೆ, ಸದಾ ಜಾಗೃತವಾಗಿರುವ ಪ್ರಯೋಗಶೀಲತೆ ಎಲ್ಲವನ್ನೂ ಗಮನಿಸಿದಾಗ ಅಶೋಕ ಹೆಗಡೆಯವರ ಸಾಧನೆ ಮೆಚ್ಚುಗೆ ಹುಟ್ಟಿಸುತ್ತದೆ.

ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.
ಪುಟಗಳು ೧೦೪, ಬೆಲೆ ರೂಪಾಯಿ ಅರವತ್ತು.

2 comments:

Anonymous said...

I am touched. If a writer gets this kind of sincere feedback, sure he could write for many years.

thanks Naren
ashok hegde

Anonymous said...

ಪ್ರಿಯ ನರೇಂದ್ರ ನಿಮ್ಮಂಕಣದ ಮೂಲಕ ಅಶೋಕ ಹೆಗಡೆಯಂತವರಿಗೆ ಒಂದು ಸ್ಪಷ್ಟೀಕರಣ(ಕ್ಕೆ ದಯವಿಟ್ಟು ಅವಕಾಶ ಮಾಡಿಕೊಡಿ): ಈ ಪುಣ್ಯಾತ್ಮ ಪುಸ್ತಕೋದ್ಯಮದಲ್ಲಿ ಲೇಖಕರಿಗೆ ಮಾತ್ರವಲ್ಲ ಎಲ್ಲರಿಗೂ ನಿಸ್ವಾರ್ಥದಿಂದ ಬುದ್ಧಿ (ಹೊಗಳುಭಟನಲ್ಲ) ಮತ್ತು ಹಣದೊಡನೆ (ಹಾಗೆಂದು ಸೂರೆ ಹೋಗುವ ಹಣ ಖಂಡಿತಾ ಇವರಲ್ಲಿಲ್ಲ) ತೆತ್ತುಕೊಂಡ ಅಪೂರ್ವ ಜೀವಿ. ನನ್ನ ಕಂಪ್ಯೂ ಅಜ್ಞಾನದಲ್ಲಿ ನಾನು ಉತ್ಸಾಹೀ ಬ್ಲಾಗಿಗನಲ್ಲ. ಆದರೆ ವೃತ್ತಿಪರ ಪುಸ್ತಕೋದ್ಯಮಿಯಾಗಿ ಇವರ ಸಂಪರ್ಕಕ್ಕೆ ಬಂದಂದಿನಿಂದ ನರೇಂದ್ರ ಪೈ ಅಂಥ ಇನ್ನೊಬ್ಬರನ್ನು ಕಂಡಿಲ್ಲ.
ಜಿ.ಎನ್.ಅಶೋಕವರ್ಧನ