Friday, August 29, 2008

ಕಾಡುಕೋಳಿಯ ಜಾಡು ಹಿಡಿದು...


ಅಬ್ದುಲ್ ರಶೀದ್‌ರ `ಈ ತನಕದ ಕಥೆಗಳು' ಸಂಕಲನದಲ್ಲಿ ಅವರ ಈ ಹಿಂದಿನ ಎರಡು ಸಂಕಲನದ (ಹಾಲು ಕುಡಿದ ಹುಡುಗ ಮತ್ತು ಪ್ರಾಣಪಕ್ಷಿ) ಕಥೆಗಳಲ್ಲದೆ ಆ ನಂತರದಲ್ಲಿ ಅವರು ಬರೆದ ಕೆಲವು ಕತೆಗಳೂ ಸೇರಿವೆ. 2006ರಲ್ಲೇ ಪ್ರಕಟವಾದ ಈ ಸಂಕಲನ ಹಲವಾರು ಕಾರಣಗಳಿಗಾಗಿ ಗಮನಾರ್ಹವಾಗಿದೆ.


ಒಂದು ಉತ್ತಮ ಕಥೆ ಕೇವಲ ಕಥಾನಕವನ್ನು ನಿರೂಪಿಸುವ ಕೆಲಸವನ್ನು ಮಾತ್ರ ಮಾಡುವುದಿಲ್ಲ. ಆ ಕಥೆ ತನ್ನ ಓದುಗನಲ್ಲಿ ಮತ್ತೆ ಮತ್ತೆ ಜೀವಂತಗೊಳ್ಳುವ, ಅವನಲ್ಲಿ ಅದು ಬೆಳೆಯುವ, ಅವನನ್ನು ಬೆಳೆಸುವ ಸತ್ವವನ್ನು ಹೊಂದಿರುತ್ತದೆ. ಇಂಥ ಕತೆಗಳಲ್ಲಿ ಒಂದು ಆರಂಭ, ಒಂದು ಕುತೂಹಲದ ಘಟ್ಟ ಮತ್ತು ಅಚ್ಚರಿಯ/ಸುಖದ/ದುಃಖದ ಒಂದು ಅಂತ್ಯ ಇವೇ ಪ್ರಧಾನವಾಗಿರುವುದಿಲ್ಲ. ಅಂದ ಮಾತ್ರಕ್ಕೆ ಈ ಲಕ್ಷಣಗಳಿಲ್ಲದ ಮಾತ್ರಕ್ಕೆ ಅದು ಒಂದು ಉತ್ತಮ ಕಥೆ ಎಂದೇನೂ ಅಲ್ಲ. ಕೊನೆಗೂ ಒಬ್ಬ ಸಾಮಾನ್ಯ ಓದುಗನಿಗೆ ಕಥೆ ಜೀವಂತವೆನಿಸುವುದು, ಅಲ್ಲಿನ ಪಾತ್ರಗಳು ಜೀವಂತವೆನಿಸುವುದು ಮುಖ್ಯ; ಕಥಾನಕ ತನ್ನ ಭಾಷೆ, ತರ್ಕ ಮತ್ತು ಘಟನೆಗಳನ್ನು ಮೀರಿ ಅವನ ಭಾವವಲಯವನ್ನು ತಲುಪುವುದು ಮುಖ್ಯ. ಒಂದು ಕಥೆಯ ಸಾರ್ಥಕತೆ ಅಡಗಿರುವುದು ಕೊನೆಗೂ ಅಲ್ಲಿಯೇ.


ಓದುಗನ ನೆಲೆಯಿಂದ ಈ ವಾದಸರಣಿ ಚೆನ್ನಾಗಿಯೇ ಕಾಣುತ್ತದೆ. ಆದರೆ ಒಬ್ಬ ಬರಹಗಾರನಾಗಿ ಇದನ್ನು ಆತ ಸಾಧಿಸುವುದು ಹೇಗೆ ಎಂಬುದು ತುಂಬ ಕುತೂಹಲಕರ ಪ್ರಶ್ನೆ. ಬಾಲ್ಯವನ್ನು, ಹಳ್ಳಿಯ ಪರಿಸರವನ್ನು, ಬದುಕಿನ ಸೂಕ್ಷ್ಮವಾದ ಸಂವೇದನೆಗಳನ್ನು ಮೀಟಿದ ಸಂದರ್ಭಗಳನ್ನು ಭಾಷೆಯಲ್ಲಿ ಪುನರುಜ್ಜೀವನಗೊಳಿಸುತ್ತ, ತಮ್ಮ ಉದ್ದೇಶಿತ ಕಥಾನಕದ ಸಂದರ್ಭದಲ್ಲಿ ಅವುಗಳನ್ನು ಉಚಿತವಾಗಿ ಬಳಸಿಕೊಳ್ಳುತ್ತ, ತನ್ನ ಬದುಕಿನಲ್ಲಿ ನೇರವಾಗಿ ಅಂತರಂಗವನ್ನು ತಟ್ಟಿದ ಸನ್ನಿವೇಶಗಳ ಪುನರ್‌ಸೃಷ್ಟಿಯನ್ನು ಓದುಗನ ಅಂತರಂಗದಲ್ಲಿ ಸಾಧಿಸಲು ಪ್ರತಿಯೊಬ್ಬ ಕಥೆಗಾರನೂ ತನ್ನ ಶಕ್ತ್ಯಾನುಸಾರ ಪ್ರಯತ್ನಿಸುತ್ತಾನೆ.


ನಮ್ಮ ಸಂವೇದನೆಗಳು ಸಾಧಾರಣವಾಗಿ ದೃಶ್ಯ, ಶ್ರಾವ್ಯ ಮತ್ತು ಸ್ಪರ್ಶದೊಂದಿಗೆ ಹೆಚ್ಚು ನಿಕಟವಾದ ತಾದ್ಯಾತ್ಮ ಹೊಂದಿರುತ್ತವೆ. ಇನ್ನೆರಡು ಇಂದ್ರಿಯಗಳಾದ ರುಚಿ ಮತ್ತು ವಾಸನೆಗಳ ಪಾತ್ರ ತೌಲನಿಕವಾಗಿ ಸ್ಪಲ್ಪ ಮಟ್ಟಿಗೆ ಕಡಿಮೆ. ಕಥೆಗಾರನ ಬಳಿ ಇರುವುದು ಕೇವಲ ಭಾಷೆ ಮತ್ತು ಅದರ ಇನ್ನೊಂದು ಮುಖವಾದ ಮೌನ ಮಾತ್ರ. ಈ ಮೌನವನ್ನು ಕೂಡ ಆತ ಭಾಷೆಯ ಮೂಲಕವೇ ತನ್ನ ಕಥೆಯಲ್ಲಿ ಸಾಧಿಸಬೇಕಾಗುತ್ತದೆ ಎಂಬುದು ಬೇರೆ ಮಾತು. ಉದಾಹರಣೆಗಾಗಿ, ಭಾಷೆಯಲ್ಲಿ ಕತೆಗಾರ ಕಟ್ಟಿಕೊಡುವ ದೃಶ್ಯ, ಕೇಳಿಸುವ ಭಾವಗೀತೆಯೋ, ಕೊಳಲನಾದವೋ ಮತ್ತೊಂದೋ ಅಥವಾ ಭಾಷೆಯಲ್ಲಿ ಅವನು ವರ್ಣಿಸುವ ಸುರತಕ್ರಿಯೆಯ ಸ್ಪರ್ಶಸುಖ ಎಲ್ಲವೂ ಓದುಗನ ಸ್ಮೃತಿಯಲ್ಲಿ (ನಿಜ ಅನುಭವ ಮತ್ತು ಕಲ್ಪನೆಯ ಅನುಭವ ಸೇರಿ) ನಿಜವಾಗುವ ಒಂದು ಅನನ್ಯ ಸಾಧ್ಯತೆಯನ್ನು ಅವಲಂಬಿಸಿ ಅವನ ಎಲ್ಲ ಭಾಷಾವ್ಯಾಯಾಮ ನಡೆಯಬೇಕಾಗಿರುತ್ತದೆ. ತಮಾಷೆ ಎಂದರೆ ಕೆಲವೊಮ್ಮೆ ಇದೆಲ್ಲದರ ಅರಿವೇ ಇಲ್ಲದೆ, ಕೇವಲ ಸರಳ, ಪ್ರಾಮಾಣಿಕ ವಿವರಗಳಿಂದಲೇ ಒಬ್ಬ ವ್ಯಕ್ತಿ ಅಥವಾ ಒಂದು ಘಟನೆ ಅದ್ಭುತ ಜೀವಶಕ್ತಿಯಿಂದ ನಳನಳಿಸತೊಡಗುವುದು ಮತ್ತು ಕೆಲವೊಮ್ಮೆ ಎಲ್ಲ ಶಾಸ್ತ್ರ-ಶಸ್ತ್ರ ವಿಶಾರದ ಸರ್ಕಸ್ಸಿನಿಂದಾಚೆಗೂ ಎಲ್ಲವೂ ಕಾರ್ಡ್‌ಬೋರ್ಡ್ ಚಿತ್ರಗಳಾಗಿ ಬಿಡುವುದು! ಕತೆಗಾರನನ್ನು ಸದಾ ಕಾಡುವ ವಿಸ್ಮಯವೊಂದು ಇಲ್ಲಿ ನೆರಳಿನಂತೆ ಸುಳಿದಾಡುತ್ತ ಮಾಯಾಮೃಗದಂತೆ ಸೆಳೆಯುತ್ತಿರುತ್ತದೆ.

ನಮ್ಮ ಹಿರಿಯ ಕತೆಗಾರ ಕೆ.ಸತ್ಯನಾರಾಯಣ ಓದಿದ/ಕೇಳಿದ ಕತೆಯೊಂದು ಓದುಗನಲ್ಲಿ ಹೊಸತೇ ಆದ ಇನ್ನೊಂದು ಕತೆಯಾಗಿ ತೊಡಗಿಕೊಳ್ಳುವ ಬಗ್ಗೆ ಹೇಳುತ್ತಾರೆ. ಅವರ `ಸನ್ನಿಧಾನ' ಎಂಬ ಕಾದಂಬರಿಯಿಂದ ತೊಡಗಿ ಇತ್ತೀಚೆಗಿನ ನಾಗರಾಜ ವಸ್ತಾರೆಯವರ `ಹಕೂನ ಮಟಾಟ' (ಈ ಕಥಾಸಂಕಲನಕ್ಕೆ ಇತ್ತೀಚೆಗೆ ಡಾಯು.ಆರ್.ಅನಂತಮೂರ್ತಿ ಪ್ರಶಸ್ತಿ ಬಂದಿರುವುದನ್ನು ಇಲ್ಲಿ ನೆನೆಯಬಹುದು) ಕಥಾಸಂಕಲನಕ್ಕೆ ಬರೆದ ಮುನ್ನುಡಿಯವರೆಗೆ ಕೆ. ಸತ್ಯನಾರಾಯಣರು ಇಂಥ ಮನೋಧರ್ಮವನ್ನು (ಅಂದಹಾಗೆ, `ಮನೋಧರ್ಮ' ಎಂಬುದು ಕೆ. ಸತ್ಯನಾರಾಯಣ ಅವರ ಒಂದು ಅದ್ಭುತವಾದ ಪುಸ್ತಕ) ಪ್ರತಿಪಾದಿಸುತ್ತ ಬಂದಿದ್ದಾರೆ. ಅಂದರೆ ಒಂದು ಕತೆಯ ಪಾತ್ರಗಳು, ಅವು ಕಾಣಿಸಿಕೊಂಡ ವಾತಾವರಣ ಹೆಚ್ಚು ಹೆಚ್ಚು ಜೀವಂತವಾದಂತೆ ಅವು ಆ ಪುಟ್ಟ ಕತೆಯೊಂದರ ಕಥಾನಕದ ಆಚೆಗೂ ನಮ್ಮೊಂದಿಗೆ ಮಾತನಾಡ ತೊಡಗುತ್ತವೆ, ಬದುಕತೊಡಗುತ್ತವೆ ಮತ್ತು ನಾವು ಎಲ್ಲೋ ಒಂದು ಬಿಂದುವಿನಲ್ಲಿ ಈ ಪಾತ್ರಗಳೊಂದಿಗೆ ಅವು ಕಂಡುಬಂದ ವಾತಾವರಣದಲ್ಲೋ ನಾವು ಪ್ರಸ್ತುತ ಇರುವ ವಾತಾವರಣದಲ್ಲೋ ಸಂಧಿಸುತ್ತೇವೆ, ವಾದಿಸುತ್ತೇವೆ, ಹಂಚಿಕೊಳ್ಳುತ್ತೇವೆ ಮತ್ತು ಬದುಕತೊಡಗುತ್ತೇವೆ. ಇಂಥ ಅನುಭವ ಎಲ್ಲ ಓದುಗರಿಗೂ ಒಂದಲ್ಲಾ ಒಂದು ಕತೆಯೊಂದಿಗಾದರೂ ಆಗಿಯೇ ಇರುತ್ತದೆ.

ಇದು ಅಬ್ದುಲ್ ರಶೀದ್‌ರ ಸಂಕಲನದ ಕಥೆಗಳ ಹೆಚ್ಚುಗಾರಿಕೆ. ಕಥೆ ಹೇಳಬಹುದಾದ, ಬಹುತೇಕ ನಾವೆಲ್ಲರೂ (ಅಬ್ದುಲ್ ರಶೀದ್ ಕೂಡ ಸೇರಿದಂತೆ?) ಮರೆತಿರಬಹುದಾದ ಅತ್ಯುತ್ತಮ ವಿಧಾನವೊಂದರ ಮಾದರಿಯೇ ಇಲ್ಲಿದೆ. ಈ ಲಯ, ನಾದ ಮತ್ತು ಕಾವ್ಯ ಸಂಧಿಸಿದಂಥ ಬರಹಗಾರಿಕೆ ಅಚ್ಚರಿ ಹುಟ್ಟಿಸುತ್ತದೆ.

ವಿಚಿತ್ರವೆಂದರೆ ಈ ಅಬ್ದುಲ್ ರಶೀದ್ ಎಲ್ಲೂ ನೆಟ್ಟಗೆ ಒಂದು ಕತೆಯನ್ನು ಹೇಳಿಲ್ಲ. `ಒಂದು ಬಹಿರಂಗ ತಪ್ಪೊಪ್ಪಿಗೆ'ಯಲ್ಲಿ ರಶೀದ್ ಬರೆದ ಮಾತುಗಳು ರಶೀದ್ ವ್ಯಕ್ತಿತ್ವವನ್ನು ತೋರಿಸುವ ಹಾಗೆಯೇ ಇವರ ಬರಹಗಾರಿಕೆಯ ಪಟ್ಟುಗಳನ್ನು ಕೂಡ ಕಾಣಿಸುವಂತಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಸುರಿಯುತ್ತಲೇ ಇರುವ ಮಳೆಯಲ್ಲಿ ಸತತವಾಗಿ ತೋಯುತ್ತಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಮಲೆನಾಡಿನ-ಕೊಡಗಿನ ಮೋಡ ಮುಸುಕಿದ ತೇವ ಭರಿತ ವಾತಾವರಣದ ಎಲ್ಲ ಆತಂಕ, ಮಜಾ ಮತ್ತು ನೀರವವನ್ನು ಕಂಬಳಿಯಂತೆ ಹೊದ್ದಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಆ ಕಗ್ಗತ್ತಲೆಯ ಕಾಫಿ ತೋಟದ ಕಾಡಿನಂಥ ಕಾಡಿನೊಳಗಿನ ಅಡ್ಡತಿಡ್ಡ ಕಾಲುದಾರಿಯಲ್ಲಿ ಕಾಲಡಿಯ ಒಣಗಿದ ಎಲೆಯ ಚರಪರ ಸದ್ದು ಮತ್ತು ಮೈಗೆ ಸವರುವ ಗಿಡಬಳ್ಳಿಗಳ ನಡುವಲ್ಲೇ ದಾರಿ ನುಸುಳಿಕೊಂಡು ನಮ್ಮತ್ತ ನುಗ್ಗುತ್ತಿವೆ.


ಉಮ್ಮಾನ ಕಿವಿಗಳಲ್ಲಿ ಹೊಳೆಯುವ ಅಲಿಕತ್ತುಗಳು, ಬಾಲ್ಯದಲ್ಲೇ ಕಾಲಿಗೆ ತೊಡರುವ ಸಮಾಧಿಗಳು, ಸಲಾತ್ ಹೇಳುತ್ತ ಹಾದಿಯಲ್ಲಿ ಅವಸರವಸರವಾಗಿ ಹೋಗುತ್ತಿರುವ ಮಂದಿ, ಪಡೆದವನ ನೆರಳಿನಲ್ಲಿ ಪ್ರೇಮಿಸುವ, ಕಾಮಿಸುವ, ನಿಟ್ಟುಸಿರು ಬಿಡುವ, ನಾಳೆಯ ಬಗ್ಗೆ ಏನೊಂದೂ ನಿಶ್ಚಿತವಿಲ್ಲದ, ಕನಸುಗಳ ನೆನಪಿನ ನೋಟಗಳಿಲ್ಲದ ಸುರುಮು ಹಚ್ಚಿದ ಖಾಲೀ ಕಣ್ಣುಗಳ ಮಂದಿ ಕತೆಗಳಾಚೆ ನಮ್ಮನ್ನು ಆವರಿಸುವ ಬಗೆ ಅಚ್ಚರಿ ಹುಟ್ಟಿಸುತ್ತದೆ ಮಾತ್ರವಲ್ಲ ಇದೆಲ್ಲ ಈ ರಶೀದ್‌ಗೆ ಸಾಧ್ಯವಾದ ಮಾಯಕದ ಬಗ್ಗೆ ಕೂಡ ಯೋಚಿಸುವಂತಾಗುತ್ತದೆ.

ಇನ್ನೊಂದು ಗಮನಿಸಬೇಕಾದ ಅಂಶ, ಈ ಅಬ್ದುಲ್ ರಶೀದ್‌ರಲ್ಲಿರುವ ತನ್ನ ಸಹಜೀವಿಯ ಮತ್ತು ತನ್ನ ಓದುಗನ ಕುರಿತಾದ ಅತೀವವಾದ ಮಾನವೀಯ ವಿಶ್ವಾಸ. ಎಲ್ಲೂ ರಶೀದ್‌ಗೆ ತಾನು ಹೇಳುತ್ತಿರುವ ಬರಾತ್, ಸಲಾತ್, ಉಪವಾಸ, ಜಿನ್ನೇ, ಇಬಿಲೀಸ್ ಇತ್ಯಾದಿ ತನ್ನ ಓದುಗನಿಗೆ ಹೊಸದಿರಬಹುದು, ಇವುಗಳೆಲ್ಲ ತನ್ನ ಸಂವಹನಕ್ಕೆ ತೊಡಕಾಗಬಹುದು ಎಂಬ ಅನುಮಾನವೇ ಬಂದಂತಿಲ್ಲ, ಮಾತನಾಡುವಾಗ. ಅಂದರೆ ಕಥೆ ಹೇಳುವಾಗ. ಇದು ಸಾಧ್ಯವಾಗುವುದು ಒಬ್ಬ ಕಥೆಗಾರನಿಗೆ ತನ್ನ ಓದುಗರಲ್ಲಿ ಪ್ರಾಮಾಣಿಕವಾದ ಪ್ರೀತಿ ಇದ್ದಾಗ. ಇಲ್ಲಿ ರಶೀದ್‌ಗೆ ತಾನು ಬಳಸುತ್ತಿರುವ ಭಾಷೆ, ಶಬ್ದ ಯಾವುದೂ ಮುಖ್ಯವೆನಿಸಿಯೇ ಇಲ್ಲ. ಅವರ ಕತೆಗಳು ಈ ಹಂಗನ್ನು ಮೀರಿ ಬೆಳೆಯುತ್ತವೆ, ಮೌನದಲ್ಲಿ ಕೂಡ ಮಾತನಾಡತೊಡಗುತ್ತವೆ. ನಿಜ ಅರ್ಥದಲ್ಲಿ ಇಲ್ಲಿನ ಕಥೆಗಳು ಕಥೆಗಳಿಗಿಂತ ಹೆಚ್ಚು ಕವನದ ಲಯ, ಧಾಟಿ ಹೊಂದಿವೆ. ಇಲ್ಲಿನ ಗದ್ಯ ಹೆಚ್ಚು ಹೆಚ್ಚು ಜೀವಂತವಾಗಿದೆ, ತೇವ ಹೊಂದಿದೆ.

ಈ ಸಂಕಲನದಲ್ಲಿನ ಕತೆಗಳನ್ನು ಸ್ಥೂಲವಾಗಿ ಮೂರು ಬಗೆಯ ಕತೆಗಳಾಗಿ ವಿಂಗಡಿಸಿ ಗುರುತಿಸಬಹುದಾಗಿದೆ. ಬಾಲ್ಯ, ಕಾಡು, ಸುರಿಯುತ್ತಿರುವ ಮಳೆ, ನಡುನಡುವೆ ಹಣಿಕಿಕ್ಕುವ ಅದ್ಭುತ ರಮ್ಯ ಮಕ್ಕಳ ಕತೆಗಳು, ದೈನಂದಿನಗಳ ದಟ್ಟ ವಿವರಗಳೇ ಒಂದು ರೂಪಕದಂತೆ ಕಥಾನಕವಾಗುವ ಮಾಯಕದ ಕವನದಂಥ ಕತೆಗಳು ಮೊದಲನೆಯ ಬಗೆಯ ಕತೆಗಳು. ಇವು ರಶೀದರ ಸಹಜ ಕಥನ ಕೌಶಲದ ಅದ್ಭುತ ಶಕ್ತಿಯನ್ನೂ, ಈ ವಿಧಾನದ ಸಾಮರ್ಥ್ಯವನ್ನೂ ನಮಗೆ ಕಾಣಿಸಿಕೊಡಬಲ್ಲ ಕತೆಗಳು. ಎರಡನೆಯ ಬಗೆಯ ಕತೆಗಳಲ್ಲಿ ರಶೀದ್ ಸರಿಸುಮಾರು ಇದೇ ಕಥಾಜಗತ್ತನ್ನು ಸ್ವಲ್ಪ ಪ್ರಬುದ್ಧವಾದ ದೃಷ್ಟಿಕೋನದಿಂದ ಕಾಣುವ-ಕಾಣಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟರಮಟ್ಟಿಗೆ ಬಾಲ್ಯದ ಮುಗ್ಧತೆ, ಸೂಕ್ಷ್ಮ ವಿವರಗಳನ್ನು ನೀಡುವ ಕುಸುರಿತನ, ಪರೋಕ್ಷವಾಗಿ ಹಿರಿಯರ ಒಂದು ಜಗತ್ತನ್ನು ವಿವರಿಸುವ ಅಸ್ಪಷ್ಟ ರೇಖಾಚಿತ್ರದಂಥ ನಿರೂಪಣೆಯ ಶಕ್ತಿಯಾದ ಒಂದು ಕಂಪನವಿಸ್ತಾರ - ಎಲ್ಲವನ್ನೂ ಬಿಟ್ಟುಕೊಟ್ಟು ಹೆಚ್ಚು ನೇರವಾದ ನಿರೂಪಣೆಗೆ ಇಳಿಯುತ್ತಾರಿಲ್ಲಿ. ಇನ್ನು ಮೂರನೆಯ ಬಗೆಯ ಕಥೆಗಳನ್ನು ಬರೆಯುವ ಹೊತ್ತಿಗೆ ರಶೀದ್ ತೀರ ವಾಸ್ತವವಾದಿಯಾಗಿ ಬಿಟ್ಟಂತೆ ಕಾಣುತ್ತದೆ. ರಶೀದರ `ಅಲೆಮಾರಿಯ ದಿನಚರಿ'ಯನ್ನು ಓದಿದವರಿಗೆ, ಓದಿ ಬಹುವಾಗಿ ಮೆಚ್ಚಿಕೊಂಡವರಿಗೆ ಇದನ್ನು ಹೆಚ್ಚು ವಿವರಿಸಬೇಕಿಲ್ಲ. ಅಂಥ ಕೆಲವು ದಿನಚರಿಯ ಹಾಳೆಗಳೋ ಎಂಬಂಥ ಕೆಲವು ಕತೆಗಳನ್ನು ಈ ಸಂಕಲನದಲ್ಲಿಯೇ ಕಾಣಬಹುದಾಗಿದೆ. ಇಲ್ಲಿ ಹೆಚ್ಚಾಗಿ ತಾನು ಕಂಡ, ಕೇಳಿದ, ಸ್ಪಂದಿಸಿದ ಸಂಗತಿಗಳನ್ನು ತಮ್ಮದೇ ಆದ ಒಂದು ಲಯವಿನ್ಯಾಸದೊಂದಿಗೆ ರಶೀದ್ ಹೇಳುತ್ತಿದ್ದಾರೆಯೇ ಹೊರತು ಅದನ್ನು ಒಂದು ಕಲಾತ್ಮಕ ನಿರೂಪಣೆಯ ಕಥಾನಕವನ್ನಾಗಿಸಿ ಚಂದ ನೋಡುವ ಉಮೇದಿನಿಂದ `ಕತೆಗಾರನಿಗಿರಬೇಕಾದ ನರಿಯ ಜಾಣ್ಮೆ, ರೇಷಿಮೆಯಂತಹ ನಾಜೂಕು ಇತ್ಯಾದಿಗಳನ್ನು' ಬಳಸಿಕೊಂಡು ಕತೆಗಾರನಾಗಲು ಅವರು ಪ್ರಯತ್ನಿಸುವುದಿಲ್ಲ. ಆದರೆ ಒಬ್ಬ ಸಹಜ ಕತೆಗಾರನಾಗಿರುವ ರಶೀದ್ ಕೈಯಲ್ಲಿ ಇವೇ ವಾಸ್ತವ ಬದುಕಿನ ಆಯ್ದ ವಿವರಗಳು ಸೃಜನಶೀಲವಾಗಿ ಮೈತಳೆದು ಬರುವ ಹಂತದಲ್ಲಿ ಮತ್ತೆ ಅವರ ಮೊದಲನೆಯ ಗುಂಪಿನ ಕತೆಗಳ ಮಾಯಕ ಸ್ಪರ್ಶವನ್ನು ಮರಳಿಪಡೆದಿರುವುದು ಮತ್ತು ಹಾಗಾಗಿ ಅವು ರಶೀದರಿಂದ ಇನ್ನಷ್ಟು ಕತೆಗಳನ್ನು ನಿರೀಕ್ಷಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗುವುದನ್ನು ಗಮನಿಸಬಹುದಾಗಿದೆ.

ಒಟ್ಟು ಹತ್ತೊಂಭತ್ತು ಕತೆಗಳಲ್ಲಿ ಮೊದಲನೆಯದಾದ "ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತು..." ಕತೆ ಇದೀಗ ಹರೆಯಕ್ಕೆ ಕಾಲಿಟ್ಟ ಅಮಿನಾಬೀಬಿಯ ಮುಗ್ಧ ತಲ್ಲಣಗಳನ್ನು, ಅವಳ ಪ್ರೇಮ-ಕಾಮದ ಕಲ್ಪನೆಯ ರೋಮಾಂಚನಗಳನ್ನೂ, ಎಲ್ಲದರ ಸಾಕ್ಷಾತ್ಕಾರದಂತೆ ಕಾಣುವ ಒಂದು ಮೋಹಕ ಉದ್ವೇಗದ ಸಂಜೆ ನಡೆಯುವ ಅವಳ ಹೆಲಿಪೆಟ್ಟರ್ ಭೇಟಿಯನ್ನೂ ನವಿರಾಗಿ ನಿರೂಪಿಸುತ್ತದೆ.
"ಕಪ್ಪು ಹುಡುಗನ ಹಾಡು" ಅನಾಥ ಬಾಲಕನೊಬ್ಬನ ಮನಸ್ಸಲ್ಲಿ ತನ್ನ ಸಹವರ್ತಿಗಳ ಗೇಲಿ, ಕುಹಕ, ಕಟಕಿಗಳಿಂದಲೇ ತನ್ನನ್ನು ಹೆತ್ತವರ ಕುರಿತಾಗಿ ಉದ್ಭವಿಸುವ ಮುಗ್ಧ ತಲ್ಲಣಗಳನ್ನೂ, ಸಾರಾತಾತಾಳಂಥ ಪಾತ್ರದ ಕರುಳಿನ ಸಂಕಟಗಳನ್ನೂ ಕವಿತೆಯ ಲಯದಲ್ಲಿ ಹಿಡಿದಿಡುವ ಕತೆ. ರಶೀದ್ ತಮ್ಮ ಹೆಚ್ಚಿನ ಎಲ್ಲ ಕತೆಗಳಲ್ಲಿ ಬಳಸಿಕೊಳ್ಳುವ ಅದ್ಭುತ ರಮ್ಯ ಮಕ್ಕಳ ಕತೆಗಳು ಇಲ್ಲಿಯೂ ಆವರಿಸಿಕೊಳ್ಳುತ್ತವೆ.
"ಕಾಡು ಕೋಳಿಯ ಜಾಡು" ಕತೆಯೇ ಒಂದು ಸಶಕ್ತ ರೂಪಕದಂತಿರುವ ಕತೆ. ಅಥವಾ ಈ ಕತೆ ಒಂದು ಸ್ಥಿತಿಯನ್ನು ಕಾವ್ಯಮಯವಾಗಿ ಚಿತ್ರಿಸಿ ಸುಮ್ಮನಾಗುವ ಕತೆಯಲ್ಲದ ಕತೆ. ಕಗ್ಗಂಟಿನಂಥ ಕಾಡಿನಲ್ಲಿ ಎಲ್ಲೋ ಕೂಗಿದಂತಾಗಿ ಸೆಳೆಯುವ, ಇನ್ನೆಲ್ಲೋ ಗಿಡಗಂಟಿ ಪೊದೆಗಳಲ್ಲಿ ಅಲ್ಲಾಡಿದಂತಾಗಿ ಕೆಣಕುವ, ಇದ್ದಕ್ಕಿದ್ದಂತೆ ಕಣ್ಣೆದುರೇ ಓಡಿ ಮತ್ತೆ ಮಾಯವಾಗಿ ಕಾಡುವ ಕಾಡುಕೋಳಿಯ ಹಿಂದೆ ಬಿದ್ದ ಹುಡುಗಾಟದ ಪುಟ್ಟ ಹುಡುಗ ಮತ್ತು ಅವನ ತಾಯಿಯ ಕಷ್ಟದ ಕಾಯಕ, ತಂದೆಯ ರಕ್ತ ಕಕ್ಕುವ ಕೆಮ್ಮಿನ ಕಾಯಿಲೆ, ಡರಕ್ ಡರಕ್ ಸದ್ದು ಎಬ್ಬಿಸುತ್ತಾ ಬರುವ ಟ್ರಾಕ್ಟರ್, ಕಾಡಿನ ನಡುವೆ ಕಾಡುಕೋಳಿಯಂತೆಯೇ ಬಂದು ಮರೆಯಾಗುವ ಅದರ ನಿಗೂಢ ಶೈಲಿ ಎಲ್ಲವೂ ಯಾವುದೇ ಉದ್ವೇಗವಿಲ್ಲದ ವಿವರಗಳಲ್ಲಿ ಜಿಟಿಜಿಟಿ ಮಳೆ ಮನಸ್ಸಿನಲ್ಲಿ ಹುಟ್ಟಿಸುವ ನೀರವದಂತೆ ಕಣ್ಣಿಗೆ ಕಟ್ಟುತ್ತದೆ.
"ಹಾಲು ಕುಡಿದ ಹುಡುಗಾ" ಒಂದು ಕವನದಂಥ ಕತೆ. ಶ್ರೀಕೃಷ್ಣನ ತಾರುಣ್ಯದ ಗೋಪಿಕೆಯರೊಡನೆಯ ಕೀಟಲೆಗಳ ವರ್ಣನೆಯ ಹದದಲ್ಲಿ ಇಲ್ಲಿನ ವಿವರಗಳು, ರಸಿಕನಾಟದ ಕಣ್ಣಾಮುಚ್ಚಾಲೆ ಚಿತ್ರಿಸಲ್ಪಟ್ಟಿದೆ.
"ಕೊಯಿದ ಗದ್ದೆಯಲ್ಲಿ ಕೊಕ್ಕರೆ ಕುಣಿಯುವುದು" ಕೂಡ `ಹೇಳಿದ ವಿವರಗಳಿಂದ ಹೇಳದೇ ಇರುವುದನ್ನು ಕಾಣಿಸುವ' ಕೈಚಳಕದಿಂದ ಗಮನ ಸೆಳೆಯುವ ಕತೆ. ರಶೀದರ ಕತೆಗಳಲ್ಲಿ ನಮಗೆ ಬಹಳ ಮೆಚ್ಚುಗೆಯಾಗುವ ಗುಣವೇ ಇದು. ರಶೀದ್ ಕೊಡುವ ವಿವರಗಳು ಬೇರೆಯೇ ಒಂದು ಜಗತ್ತನ್ನು - ಅದರ ಬಗ್ಗೆ ವಿಶೇಷವಾಗಿ ಹೇಳದಿರುವಾಗಲೂ- ಕಾಣಿಸುತ್ತವೆ. ಈ ಒಂದು ಅದ್ಭುತ ಕಲೆಗಾರಿಕೆ ರಶೀದರ ಕತೆಗಳ ಹೆಚ್ಚುಗಾರಿಕೆ.
"ಪಾತು" ಬಾಲ್ಯದಲ್ಲಿ ತನ್ನೊಂದಿಗೆ ಓಡಾಡಿದ, ಆಟ ಪಾಠಗಳಲ್ಲಿ ಸಹವರ್ತಿಯಾಗಿದ್ದ ಪಾತು ಎಂಬವಳ ಸುತ್ತ ಬಿಚ್ಚಿಕೊಳ್ಳುವ ನೆನಪುಗಳಿಂದ ಸಂಪನ್ನವಾದ ಕತೆ. "ಮರಣ ಭಯ" ಕತೆ ಒಂದು ವಿಧದಲ್ಲಿ `ಕಾಡು ಕೋಳಿಯ ಜಾಡು ಹಿಡಿದು' ಕತೆಯ ರೀತಿಯಲ್ಲೇ, ಮಕ್ಕಳ ಚಟುವಟಿಕೆಗಳ ಹಂದರದಲ್ಲೇ ದೊಡ್ಡವರ ಬದುಕಿನ ವಿವರಗಳನ್ನು, ದುರಂತ-ದುಗುಡಗಳನ್ನು ಕಟ್ಟಿಕೊಡುವ ಕತೆ.

ಸಲ್ಮಾನ್ ರಶ್ದಿಗೆ ಫತ್ವಾ ಹೊರಡಿಸಿದ ಸಂದರ್ಭವನ್ನು ವಿದ್ಯಾವಂತ ಮಗ ಮತ್ತು ಮಾತೃಹೃದಯದ ತಾಯಿ ಪಾತ್ರಗಳನ್ನಿಟ್ಟುಕೊಂಡು ಒಂದು ಮುಸ್ಲಿಂ ಕುಟುಂಬದ ಮನೆಯಂಗಳದಲ್ಲಿ ವಿವರಿಸುವ ಕತೆ "ಮಂಗಗಳಾದ ಮೂವರು ಹುಡುಗರು". ಪಂಡಿತ್ ಹಾಜಿಯ ವ್ಯಕ್ತಿಚಿತ್ರಣದ ಪರಿಮಿತಿಯಲ್ಲೇ ಬದುಕಿನ ಅನಿವಾರ್ಯಗಳ ತಂತುಗಳನ್ನು ನವಿರಾಗಿ ಮೀಟುವ ಕತೆ "ಪ್ರಾಣಪಕ್ಷಿ". ಮೂರು ತಲೆಮಾರಿನ ವ್ಯಾಪ್ತಿಯನ್ನು ಬಾಚುವ "ಅಂಬಾಚು" ಕತೆ ನಿದ್ದೆ ಬಾರದ ಸೆಕೆಯ ಒಂದು ರಾತ್ರಿ ಕಿಷ್ಕಿಂಧೆಯಂಥ ಪುಟ್ಟ ಮನೆ ಹುಟ್ಟಿಸುವ ಉಸಿರುಕಟ್ಟಿಸುವ ವಾತಾವರಣವನ್ನು ಅತ್ಯಂತ ನೈಜವಾಗಿ ಚಿತ್ರಿಸಿದೆ. `ಹಾಲು ಕುಡಿದ ಹುಡುಗಾ' ಜಾಡಿನಲ್ಲಿರುವ "ಬರಾತಿನ ರಾತ್ರಿ", ಹಿಂಸೆಯ ವಿಭಿನ್ನ ಮುಖಗಳೆದುರು ಉಪವಾಸದ ಪರಿಕಲ್ಪನೆಯನ್ನಿಡುವ "ಉಪವಾಸ" ಕತೆ ಮೇಲೆ ಹೇಳಿದ ಎರಡನೆಯ ಬಗೆಯ ಕತೆಗಳು. ಈ ಕತೆಗಳು ಮೊದಲನೆಯ ಬಗೆಯ ಕತೆಗಳ ಗುಣಾತ್ಮಕ ಅಂಶಗಳನ್ನು ಬೇಕೆಂದೇ ಬಿಟ್ಟುಕೊಟ್ಟು ಬರೆದಂತಿರುವುದರಿಂದ ಮತ್ತು ರಶೀದ್ ಎಂದೂ ಮಹತ್ವಾಕಾಂಕ್ಷೆಯ, ಸಿಲೆಬಸ್‌ಗೆ ಅನುಗುಣವಾಗಿ ಬರೆಯುವ ಜಾಯಮಾನದವರೇ ಅಲ್ಲವಾದುದರಿಂದ ಸ್ವತಃ ರಶೀದರ ಇತರ ಕತೆಗಳೆದುರು ವಿಶೇಷವಾಗಿ ಗಮನಸೆಳೆಯುವುದಿಲ್ಲ. ಸೂಕ್ಷ್ಮವಾದ ವಿವರಗಳು ಕಟ್ಟಿಕೊಡುವ ಒಂದು ಜೀವಂತ ಜಗತ್ತು, ಆಪ್ತವಾಗುವ ಅಲ್ಲಿಯ ಪಾತ್ರಗಳು, ಆ ಪಾತ್ರಗಳ ವಿಶಿಷ್ಟ ವ್ಯಕ್ತಿತ್ವ ಎಲ್ಲವೂ ಇಲ್ಲಿ ಚೆನ್ನಾಗಿ ಮೂಡಿವೆ ನಿಜ. ಆದರೆ ರಶೀದ್ ಇದಕ್ಕಿಂತ ಹೆಚ್ಚಿನದನ್ನು ಆಗಲೇ ನೀಡಿರುವ ಕತೆಗಾರರಾಗಿರುವುದರಿಂದ ಸ್ವತಂತ್ರವಾಗಿ ಈ ಕತೆಗಳು ನೀಡುವ ಹೊಸತೇ ಆದ ಅಂಶಗಳು ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಇವು ಇದೇ ಸಂಕಲನದಲ್ಲಿ ನಮಗೆ ಕಾಣಸಿಗುವ ಮೂರನೇ ಬಗೆಯ ಕತೆಗಳಿಗೂ ಮೊದಲ ಬಗೆಯ ಕತೆಗಳಿಗೂ ಒಂದು ಕೊಂಡಿಯಂತಿರುವುದು ಗಮನಿಸಬೇಕಾದ ಸಂಗತಿ.

ಎಂದಿನ ತಮ್ಮ `ಕತೆಗಾರ'ನ ಶೈಲಿಗೆ ವಿರುದ್ಧವಾದ ಶೈಲಿಯನ್ನೇ ಉದ್ದೇಶಪೂರ್ವಕ ರೂಢಿಸಿಕೊಂಡು ಸಹಜವಾಗಿ ಬರೆಯುವ ಜಾಡು ಹಿಡಿದ ರಶೀದ್ ಮುಂದೆ ವಿಭಿನ್ನವಾಗಿ ಬರೆದಿದ್ದು ನಮ್ಮ ಗಮನಕ್ಕೆ ಬರುವುದು ಸಂಕಲನದ ಮೂರನೇ ಬಗೆಯ ಕಥೆಗಳಲ್ಲಿ.

ಸುದೀರ್ಘವಾದ ಒಂದು ಜೀವಮಾನವನ್ನೇ ಒಳಗೊಂಡು ಚಿಗುರುವ, ಬೆಳೆಯುವ ಮತ್ತು ಯಾವುದೋ ನಿಗೂಢವಾದ, ಆಳಮನಸ್ಸಿನ ಯಾವುದೋ ಪಾತಳಿಗೆ ಮಾತ್ರ ತಲುಪಬಲ್ಲ ಒಂದು ಸಾರ್ಥಕತೆಯನ್ನು ಸಾಧಿಸುವ ಪ್ರೇಮದ ಸಾಫಲ್ಯವನ್ನು ಅದರ ದುರಂತದ ಸುಳಿಗಳ ಜೊತೆಜೊತೆಗೇ ತೆರೆದಿಡುವ ಕತೆ "ಒಂದು ಪುರಾತನ ಪ್ರೇಮ".

ಕೇವಲ ಸ್ನೇಹವೇ ಕಾರಣವಾದ ಒಂದು ಆತ್ಮೀಯ ಸಂಬಂಧ ಈ ಗೆಳೆತನದ ಜೊತೆಗೆ ಕ್ರಾಂತಿಯ ನೆರಳನ್ನು ಚಾಚುವುದನ್ನು ಸೂಕ್ಷ್ಮವಾಗಿ ಕಾಣಿಸುವ ಮತ್ತು ಅದನ್ನು ಎಲ್ಲೋ ಯಾಕೋ ನಿರಾಕರಿಸಿದಂತೆ ದೂರನಿಲ್ಲುವ ಗೆಳೆಯನ ಕುರಿತು ಹೇಳುವ "ಕಾಮ್ರೇಡ್ ಮತ್ತು ಉಮ್ಮ".

"ಕುವೈತಿನಲ್ಲಿ ನಮ್ಮ ಬಿರಿಯಾನಿ ಅಬ್ದುಲ್ ಕಾದಿರಿ" ಕತೆ ಅಬ್ದುಲ್ ಕಾದಿರಿಯ ವ್ಯಕ್ತಿ ಚಿತ್ರದಂತಿದ್ದೂ ಅದನ್ನು ಮೀರಿ ಬೆಳೆಯುವುದು ಅವನ ಪ್ರೇಮ, ಬಿರಿಯಾನಿ, ಅದನ್ನು ಅವನಿಗೆ ಮಾಡಲು ಕಲಿಸಿದ ಅವನ ಅಜ್ಜಿ, ಈ ಎಲ್ಲ ಪರೋಕ್ಷ ವಿವರಗಳಲ್ಲಿ ಒಡಮೂಡುವ ಸಕೀನಾಳ ಚಿತ್ರ ಮತ್ತು ಕಾದಿರಿಯ ಕ್ಯಾಸೆಟ್ಟಿನ ಮಾತುಗಳಿಂದ. ಇದೇ ಬಗೆಯ ಇನ್ನೊಂದು ಕತೆ "ಕೀರ್ತಿ ಪತಾಕೆ". ಇಲ್ಲಿ ಬಾಪುಟ್ಟಿ ಸಾಹೇಬರ ಆಶುಕವಿತೆ ಮತ್ತು ಡಿಸೆಂಬರ್ ಆರರ ಗಲಾಟೆ ಇಡೀ ಕತೆಗೆ ನೀಡುವ ಒಂದು ಕಳೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ಕತೆಯೊಂದಿಗೆ "ಬಂಡಶಾಲೆ" ಕತೆಯನ್ನು ಹೋಲಿಸಿ ನೋಡಬಹುದು. ಎರಡೂ ಕತೆಯ ಕೊನೆಯನ್ನು ಗಮನಿಸಿ. ಅಲ್ಲಿ `ತೆಗೆದುಕೋ ಅಲ್ಲಾಹುವೇ' ಎಂದು ಮರಿಯಮ್ಮ ಪ್ರಾಣವನ್ನು ಮೂರು ಮಂದಿ ದೇವದೂತರ ಕೈಗೆ ಕೊಡುತ್ತಾರೆ. ಇಲ್ಲಿ ಬಾಪುಟ್ಟಿ ಸಾಹೇಬರು ಕನಸಿನೊಳಕ್ಕೆ ಹೊರಟು ಹೋಗುವಾಗ ಅವರ ಪ್ರಿಯ ಪತ್ನಿ ಖಾತೂನ್ ಬೇಗಂ ಕನಸಲ್ಲಿ ಬರಲು ತಯಾರಿ ನಡೆಸಿದ್ದ ಮಾಹಿತಿ ಇದೆ!

ದಾಂಪತ್ಯದ ಮೊದಲ ಮೆಟ್ಟಿಲುಗಳಲ್ಲೇ ಸಂಬಂಧ ಎಡವಿ, ಅದರಿಂದ ನಿಷ್ಕಾರಣವಾಗಿ ಅತಂತ್ರಳಾದ ಒಬ್ಬ ಹೆಣ್ಣುಮಗಳ ಸುತ್ತ ಇರುವ ಕತೆ "ಮಣ್ಣಾಂಗಟ್ಟಿ". ಅವಳ ಬದುಕಿನ ವಿಭಿನ್ನ ಘಟ್ಟಗಳಲ್ಲಿ ಅವಳ ಅಣ್ಣ ಅವಳಿಗೆ ಕಾಣುವ ವಿಚಿತ್ರ ವೈರುಧ್ಯಮಯ ಆಕೃತಿಗಳನ್ನು ನಮಗೆ ಕಾಣಿಸುತ್ತಲೇ ಇದು ಅವಳ ಮತ್ತು ಅವಳಣ್ಣನ ಪಾತ್ರಗಳನ್ನು ನಿಕಷಃಕ್ಕೊಡುತ್ತದೆ. ಅದೇ ಸಮಯಕ್ಕೆ ನಿರೂಪಕನ ಸ್ನೇಹಿತನೂ ಆಗಿರುವ ಈ ಅಣ್ಣ ನಿರೂಪಕನಿಗೆ ಕಾಣಿಸುವ ಬಗೆ ಕೂಡ ಪಲ್ಲಟಗಳಿಗೆ ಗುರಿಯಾದಂತಿದೆ. ಇವೆಲ್ಲವೂ ನಮಗೆ ಈ ಹೆಣ್ಣುಮಗಳು ಅಥವಾ ಅವಳಣ್ಣ ಕಾಣಿಸುವ, ಕಾಣಿಸಬೇಕಾದ ಬಗೆಯನ್ನು ಪ್ರಶ್ನಿಸತೊಡಗುತ್ತದೆ. ಈ ಪ್ರಶ್ನೆ ಕೇವಲ ನೈತಿಕ ನೆಲೆಗಟ್ಟಿನ ಪ್ರಶ್ನೆಯಾಗಿ ಉಳಿಯದೆ ಬದುಕಿನ ಹಲವು ಮಜಲುಗಳನ್ನು ಏಕಕಾಲಕ್ಕೆ ಮುಖಾಮುಖಿಯಾಗಿಸುವುದು ಅಚ್ಚರಿಹುಟ್ಟಿಸುತ್ತದೆ.

"ಬೀಜ" ಕತೆ ಒಂದು ವಿಧದಲ್ಲಿ ಬಿರಿಯಾನಿ ಅಬ್ದುಲ್ ಕಾದಿರಿಯ ಕತೆಯ ಮುಂದುವರಿದ ಭಾಗದಂತಿದೆ. ಮಂದಣ್ಣ, ದಾಕ್ಷಾಯಿಣಿ, ಅವರಿಬ್ಬರ ಪ್ರೇಮಸಾಹಸಗಳು ಮತ್ತು ಸಾವಯವ ಅಜ್ಜನ ಪ್ರವೇಶ ಇಷ್ಟನ್ನು ನಿರೂಪಕನೂ ಒಂದು ಪಾತ್ರವಾಗಿ ಒಳಗೊಂಡು ಬರುವ ಕತೆಯಿದು.


ಒಟ್ಟಾರೆಯಾಗಿ ಈ ಬಗೆಯ ಕತೆಗಳಿಗೆ ಅನ್ವಯಿಸುವಂತೆ ಕೆಲವು ಮಾತುಗಳನ್ನು ಹೇಳುವುದಾದರೆ, ಇಲ್ಲಿ ಅನುಭವ ಹೆಚ್ಚು ಸಾಂದ್ರವಾಗಿ ಪಡಿಮೂಡಿದೆ ಮಾತ್ರವಲ್ಲ ಬದುಕಿನ ಸಂಕೀರ್ಣ ವಿನ್ಯಾಸಗಳು ಹೆಚ್ಚು ಸಹಜವಾಗಿಯೇ ರಶೀದರ ಕತೆಗಳಲ್ಲಿ ಮೈತಳೆಯತೊಡಗಿವೆ. ಇದಕ್ಕಿಂತ ಹೆಚ್ಚಾಗಿ ರಶೀದ್ ಕಂಡದ್ದನ್ನು ಕಾಣಿಸುತ್ತಲೇ ಕಾಣಿಸದೇ ಹೋದುದೂ ಇರಬಹುದೆಂಬ ಪಕ್ವ ಮನಸ್ಸಿನ ಅನುಮಾನಗಳನ್ನು ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಂಡಿರುವುದರ ಕೆಲವು ಹೊಳಹುಗಳು ಕೂಡ ಈ ಕತೆಗಳಲ್ಲಿ ನಮಗೆ ಕಾಣಸಿಗುವುದು ಒಂದು ವಿಶೇಷ. ರಶೀದರ ಖುಲ್ಲಾಂಖುಲ್ಲ ನಿಲುವುಗಳನ್ನು ಬಲ್ಲವರಿಗೆ ಇದು ಕೊಂಚ ವಿಶೇಷವೆನಿಸಿದರೆ ಅಚ್ಚರಿಯಿಲ್ಲವಾದರೂ ಒಬ್ಬ ಕತೆಗಾರನಿಗೆ ಅಗತ್ಯವಾದ ಹದ ಇದನಿಸುತ್ತದೆ. ಮಣ್ಣಾಂಗಟ್ಟಿ ಮತ್ತು ಬೀಜದಂಥ ಕತೆಗಳಲ್ಲಿ ರಶೀದ್ ಮತ್ತೆ ತಮ್ಮ ಮೊದಲನೆಯ ಬಗೆಯ ಕಥೆಗಳ ಎಲ್ಲ ಗುಣಾತ್ಮಕ ಅಂಶಗಳನ್ನೂ ಮರಳಿ ಒಳಗೊಂಡು ಹೊಸತೇ ಆದ ಒಂದು ಹದವನ್ನು ರೂಪಿಸಿಕೊಳ್ಳುತ್ತಿರುವಂತೆಯೂ ಕಾಣುತ್ತದೆ.


ರಶೀದರ ಮುಂದಿನ ಸಂಕಲನ ಅಥವಾ ಕಾದಂಬರಿಯನ್ನು ಈ ಎಲ್ಲ ಕಾರಣಗಳಿಗಾಗಿ ಕಾಯುವಂತಾಗಿದೆ!


ಈ ತನಕದ ಕಥೆಗಳು, ಅಭಿನವ ಪ್ರಕಾಶನ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನ ಹಳ್ಳಿ, ವಿಜಯನಗರ, ಬೆಂಗಳೂರು-೫೬೦೦೪೦

ಪುಟಗಳು 216, ಬೆಲೆ ನೂರೈವತ್ತು ರೂಪಾಯಿ.

2 comments:

ಪಲ್ಲವಿ ಎಸ್‌. said...

(August 30, 2008 - 12:53pm ರಂದು ನೀಡಿದ್ದ ಪ್ರತಿಕ್ರಿಯೆ. ಇದಕ್ಕೆ ನಿಮ್ಮಿಂದ ಸೂಕ್ತ ಉತ್ತರ ನಿರೀಕ್ಷಿಸುತ್ತೇನೆ)

ನರೇಂದ್ರ ಅವರೇ, ಅಬ್ದುಲ್‌ ರಷೀದ್‌ ಅವರ ಕಥಾ ಸಂಕಲನ ಕುರಿತ ವಿಮರ್ಶೆ ಓದಿದೆ.

ಅವರ ಈ ಪುಸ್ತಕ ಓದಿಲ್ಲವಾದ್ದರಿಂದ, ಆ ಕುರಿತು ನೀವು ಪ್ರಸ್ತಾಪಿಸಿರುವ ಅಂಶಗಳನ್ನೇ ಮುಂದಿಟ್ಟುಕೊಂಡು ನನ್ನ ಗೊಂದಲವನ್ನು ಹೇಳಲು ಯತ್ನಿಸುತ್ತೇನೆ.

ವಿಮರ್ಶೆ ಇಷ್ಟೊಂದು ಗೊಂದಲ ಹುಟ್ಟಿಸಬೇಕಾ? ಇಡೀ ಬರಹ ಓದಿದ ಮೇಲೆ ಉಳಿದಿದ್ದು ಗೊಂದಲವೊಂದೇ. ಒಬ್ಬ ಸಾಹಿತ್ಯಾಸಕ್ತ ವ್ಯಕ್ತಿಗೆ ಕತೆಗಳು ತಲುಪುವಷ್ಟು ಸುಲಭವಾಗಿ ವಿಮರ್ಶೆ ತಲುಪುವುದಿಲ್ಲ. ಆ ಕಾರಣಕ್ಕೆ ವಿಮರ್ಶಕ ಕ್ರಿಯಾಶೀಲ ವ್ಯಕ್ತಿಯಾಗದೇ ದೂರದಲ್ಲೇ ಇದ್ದಾನೆ ಎಂಬುದಕ್ಕೆ ನಿಮ್ಮ ಈ ಬರಹ ಸಾಕ್ಷಿಯಂತೆ ಕಾಣುತ್ತದೆ.

ನೀವು ಬರೆದ ಸಾಲುಗಳನ್ನು ಉಲ್ಲೇಖಿಸಿ ಹೇಳುವುದಾದರೆ
Quote:
ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಸುರಿಯುತ್ತಲೇ ಇರುವ ಮಳೆಯಲ್ಲಿ ಸತತವಾಗಿ ತೋಯುತ್ತಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಮಲೆನಾಡಿನ-ಕೊಡಗಿನ ಮೋಡ ಮುಸುಕಿದ ತೇವ ಭರಿತ ವಾತಾವರಣದ ಎಲ್ಲ ಆತಂಕ, ಮಜಾ ಮತ್ತು ನೀರವವನ್ನು ಕಂಬಳಿಯಂತೆ ಹೊದ್ದಿವೆ. ಇಲ್ಲಿನ ಬಹುತೇಕ ಎಲ್ಲ ಕತೆಗಳೂ ಆ ಕಗ್ಗತ್ತಲೆಯ ಕಾಫಿ ತೋಟದ ಕಾಡಿನಂಥ ಕಾಡಿನೊಳಗಿನ ಅಡ್ಡತಿಡ್ಡ ಕಾಲುದಾರಿಯಲ್ಲಿ ಕಾಲಡಿಯ ಒಣಗಿದ ಎಲೆಯ ಚರಪರ ಸದ್ದು ಮತ್ತು ಮೈಗೆ ಸವರುವ ಗಿಡಬಳ್ಳಿಗಳ ನಡುವಲ್ಲೇ ದಾರಿ ನುಸುಳಿಕೊಂಡು ನಮ್ಮತ್ತ ನುಗ್ಗುತ್ತಿವೆ.

ಇಷ್ಟ್ಯಾಕೆ ಗೊಂದಲ ಸರ್‌? ’ಇಲ್ಲಿನ ಬಹುತೇಕ ಕತೆಗಳು’ ಎಂಬ ಸಾಲನ್ನು ಪ್ರತಿ ವಾಕ್ಯಕ್ಕೂ ಸೇರಿಸಿಯೇ ಹೇಳಬೇಕಾ? ವಿಮರ್ಶೆಯ ವಿಶಿಷ್ಟ ವಿಧಾನವೇ ಇದು? ಕತೆಗಳು ಮಳೆ, ಮೋಡ, ಆತಂಕ ನೀರವತೆಯನ್ನು ಕಂಬಳಿಯಂತೆ ಹೊದ್ದಿದ್ದರೆ ಅವು ಓದುಗನೆದುರು ಅನಾವರಣಗೊಳ್ಳುವುದು ಹೇಗೆ? ಓದುಗ ಅವನ್ನು ಈ ಎಲ್ಲ ಪದರುಗಳಿಂದ ಹೊರ ತಂದು ಅರ್ಥ ಮಾಡಿಕೊಳ್ಳಬೇಕಾ?

Quote:
ಎರಡನೆಯ ಬಗೆಯ ಕತೆಗಳಲ್ಲಿ ರಶೀದ್ ಸರಿಸುಮಾರು ಇದೇ ಕಥಾಜಗತ್ತನ್ನು ಸ್ವಲ್ಪ ಪ್ರಬುದ್ಧವಾದ ದೃಷ್ಟಿಕೋನದಿಂದ ಕಾಣುವ-ಕಾಣಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟರಮಟ್ಟಿಗೆ ಬಾಲ್ಯದ ಮುಗ್ಧತೆ, ಸೂಕ್ಷ್ಮ ವಿವರಗಳನ್ನು ನೀಡುವ ಕುಸುರಿತನ, ಪರೋಕ್ಷವಾಗಿ ಹಿರಿಯರ ಒಂದು ಜಗತ್ತನ್ನು ವಿವರಿಸುವ ಅಸ್ಪಷ್ಟ ರೇಖಾಚಿತ್ರದಂಥ ನಿರೂಪಣೆಯ ಶಕ್ತಿಯಾದ ಒಂದು ಕಂಪನವಿಸ್ತಾರ -

ಕಂಪನವಿಸ್ತಾರ ಅಂದರೇನು ಸರ್‌? ’ಅಸ್ಪಷ್ಟ ರೇಖಾಚಿತ್ರದಂಥ ನಿರೂಪಣೆಯ ಶಕ್ತಿಯಾದ ಒಂದು ಕಂಪನ ವಿಸ್ತಾರ’ ಎಂದು ಬರೆದರೆ ಏನನ್ನು ಅರ್ಥ ಮಾಡಿಕೊಳ್ಳಬೇಕು? ಅಥವಾ ಏನು ಬೇಕಾದರೂ ಅರ್ಥ ಮಾಡಿಕೊಂಡರೆ ಆದೀತೆ? ಇಷ್ಟೇಕೆ ಕ್ಲಿಷ್ಟಕರವಾಗಿ ವಿಮರ್ಶೆ ಬರೆಯಬೇಕು? ಇದನ್ನು ಸರಳವಾಗಿ ವಿವರಿಸಲು ಸಾಧ್ಯವಿಲ್ಲವೆ?

Quote:
ಇದಕ್ಕಿಂತ ಹೆಚ್ಚಾಗಿ ರಶೀದ್ ಕಂಡದ್ದನ್ನು ಕಾಣಿಸುತ್ತಲೇ ಕಾಣಿಸದೇ ಹೋದುದೂ ಇರಬಹುದೆಂಬ ಪಕ್ವ ಮನಸ್ಸಿನ ಅನುಮಾನಗಳನ್ನು ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಂಡಿರುವುದರ ಕೆಲವು ಹೊಳಹುಗಳು ಕೂಡ ಈ ಕತೆಗಳಲ್ಲಿ ನಮಗೆ ಕಾಣಸಿಗುವುದು ಒಂದು ವಿಶೇಷ.

ಈ ಸಾಲುಗಳಂತೂ ಪೂರ್ತಿ ಗೊಂದಲ ಹುಟ್ಟಿಸುತ್ತವೆ ಮತ್ತು ನಿಮ್ಮ ಬರವಣಿಗೆಯ ದ್ವಂದ್ವ ತೋರಿಸುತ್ತವೆ.

ಹೆಚ್ಚು ಬರೆದರೆ ಇದೇ ಪ್ರತ್ಯೇಕ ವಿಮರ್ಶೆಯಾದೀತು. ೨೦೦೬ರಲ್ಲಿ ಅಚ್ಚಾದ ಪುಸ್ತಕಕ್ಕೆ ಈಗ ವಿಮರ್ಶೆ ಬರೆದಿರುವುದು, ಅದೂ ಇಷ್ಟು ಕೆಟ್ಟದಾಗಿ ಬರೆದಿರುವುದು ನಿಮ್ಮ ಅಭಿರುಚಿಗೆ ತಕ್ಕುದಲ್ಲ ಎಂಬುದು ನನ್ನ ಭಾವನೆ. ದಯವಿಟ್ಟು ನೇರವಾಗಿ ಬರೆಯಿರಿ. ಸರಳವಾದಷ್ಟೂ ಸ್ಪಷ್ಟವಾಗುತ್ತದೆ ಬರವಣಿಗೆ. ಮೂಲ ಲೇಖಕನ ಬರವಣಿಗೆಯ ಬಗ್ಗೆ ಅನುಮಾನಗಳನ್ನು ಹುಟ್ಟಿಸುವಂತಹ ಇಂತಹ ವಿಮರ್ಶೆ ಬಹುಶಃ ಅಬ್ದುಲ್‌ ರಷೀದ್‌ ಅವರಿಗೂ ಬೇಕಿರಲಿಲ್ಲವೇನೋ.

- ಪಲ್ಲವಿ. ಎಸ್‌.

ನರೇಂದ್ರ ಪೈ said...

ಪಲ್ಲವಿಯವರೇ,
ಮೊದಲಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ತೀರ ದುರದೃಷ್ಟಕರ ಸನ್ನಿವೇಶವೊಂದರಲ್ಲಿ ನನಗೆ ನಿಮ್ಮ ಐಡಿ ಸುಳ್ಳು ಮತ್ತು ನಿಮ್ಮ ಪ್ರತಿಕ್ರಿಯೆ ಕೂಡಾ ಮೇಲ್ನೋಟಕ್ಕೆ ಕಾಣುವ ಉದ್ದೇಶದ್ದಲ್ಲ ಎನ್ನುವಂಥ ಅಭಿಪ್ರಾಯ ಮೂಡಿ ಎಲ್ಲವೂ ತಪ್ಪುಗಂಟಾಗುತ್ತ ಹೋಯಿತು ಮಾತ್ರವಲ್ಲ ನಾನು ಅನವಶ್ಯಕ ದುಡುಕುವಂತೆಯೂ ಆಯಿತು. ಈಗ ನೀವು ಇಲ್ಲಿಯೂ ಮತ್ತೆ ನಿಮ್ಮ ಅದೇ ಪ್ರತಿಕ್ರಿಯೆಯನ್ನು ಕಾಣಿಸಿರುವುದು ನನಗೆ ಎರಡು ಕಾರಣಗಳಿಗೆ ಮಹತ್ವದ್ದು. ಒಂದು, ನನಗೆ ಸಂಪದದಲ್ಲಿ ನಿಮ್ಮ ಪ್ರತಿಕ್ರಿಯೆ ಕಾಣದಾದ ಬಗ್ಗೆ ತುಂಬ ಬೇಸರವಿತ್ತು. ನನ್ನ ಲೇಖನ ತೆಗೆಯಬಾರದು ಎಂದು ನಾನು ಬಯಸಿದ್ದಕ್ಕೆ ಕಾರಣವೇ ನಿಮ್ಮ ಈ ಪ್ರತಿಕ್ರಿಯೆ. ಆನಂತರದ ಕೆಲವು ಪ್ರತಿಕ್ರಿಯೆಗಳು, ಮುಖ್ಯವಾಗಿ ನನ್ನವು, ಶಿಷ್ಟಾಚಾರವನ್ನು ಮೀರಿದವು ಎಂಬ ಕಾರಣಕ್ಕೆ ಆ ಲೇಖನವನ್ನೇ ಅಲ್ಲಿಂದ ತೆಗೆಯಲಾಯಿತು ಮತ್ತು ಹಾಗಾಗಿ ನಿಮ್ಮ ಪ್ರತಿಕ್ರಿಯೆ ಕೂಡಾ ಅದರೊಂದಿಗೇ ಅಲ್ಲಿಂದ ಮಾಯವಾಯಿತು. ಎರಡನೆಯದಾಗಿ ನೀವು ಮತ್ತೆ ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ಕಾಣಿಸಿರುವುದು ನಿಮ್ಮ ಅನಿಸಿಕೆ ಕೇವಲ ನೋಯಿಸುವುದಕ್ಕಾಗಿಯೇ ಬರೆದುದಲ್ಲ ಎಂಬುದನ್ನು ಸೂಚಿಸುತ್ತದೆ. ಇದು ನನಗೆ ಇಷ್ಟವಾಯಿತು. ಪ್ರಾಮಾಣಿಕವಾದ ಯಾವುದೇ ಪ್ರತಿಕ್ರಿಯೆ, ಅದು ನನಗೆ ಇಷ್ಟವಾಗಲಿ, ಆಗದಿರಲಿ ನನಗೆ ಸ್ವೀಕೃತವೇ. ದುರುದ್ದೇಶದ ಕುಹಕ, ನಿಂದೆ ಮತ್ತು ಕಟಕಿ ನನ್ನನ್ನು ಮುದುಡಿಕೊಳ್ಳುವಂತೆ ಮಾಡುತ್ತದೆ, ಎಲ್ಲ ಸಾಮಾನ್ಯ ಮನುಷ್ಯರಂತೆಯೇ. ಹಾಗಾಗಿ ನಿಮ್ಮ ಕ್ಷಮೆ ಕೇಳುತ್ತಲೇ ನೀವು ಮತ್ತೆ ನನ್ನ ಲೇಖನಕ್ಕೆ ಪ್ರತಿಕ್ರಿಯಿಸುವ ದೊಡ್ಡತನ ತೋರಿಸಿರುವುದಕ್ಕಾಗಿ ನಿಮಗೆ ವಂದನೆ ಸಲ್ಲಿಸುತ್ತೇನೆ. ಕೊನೆಗೂ ಉಳಿದು ಹೋಗುವ ನನ್ನ ನೋವು ನೀವು ಸಂಪದದಿಂದ ನಿರ್ಗಮಿಸಿದ್ದು ಮತ್ತು ಅದಕ್ಕೆ ಪರೋಕ್ಷವಾಗಿ ನಾನು ಹೊಣೆಗಾರನಾಗಿದ್ದು. ಇದಕ್ಕೆ ನನ್ನನ್ನು ನಾನು ಕ್ಷಮಿಸಿಕೊಳ್ಳಲಾರೆ.

ಇನ್ನು ನನ್ನ ಪ್ರತಿಕ್ರಿಯೆ. ಒಟ್ಟಾರೆಯಾಗಿ ನಿಮಗೆ ಹೇಳಲಿಕ್ಕಿದ್ದಿದ್ದು ನನ್ನ ಬರಹ ಗೊಂದಲವನ್ನು ಹುಟ್ಟುಹಾಕುವಂತಿದೆ, ಅನಗತ್ಯ ಸಂಕೀರ್ಣವಾಗಿದೆ ಮತ್ತು ಸರಳವಾಗಿ ಹೇಳಬಹುದಾಗಿದ್ದನ್ನು ಕ್ಲಿಷ್ಟಗೊಳಿಸಿ ಹೇಳಿದ್ದೇನೆ ಎನ್ನುವುದು; ಅಷ್ಟೇ ಅಲ್ಲವೆ? ಅದನ್ನು ಹೇಳುವುದಕ್ಕೆ ಇಷ್ಟೊಂದು ಕಟುವಾಗುವ ಅಗತ್ಯವಿತ್ತೆ? ನನ್ನ ಲೇಖನ ಹಾಗಿರುವುದು ನಿಜವೇ, ಸುಳ್ಳಲ್ಲ. ಅದು ನನ್ನ ಭಾಷೆಯ ಬಳಕೆಯಲ್ಲಿನ ತೊಡಕು, ದೌರ್ಬಲ್ಯ ಎಂಬ ಅರಿವು ಕೂಡಾ ನನಗೆ ಹಿಂದಿನಿಂದಲೂ ಇದೆ. ಈಗಲೂ ಈ ಲೇಖನವನ್ನು ಬೇಕೆಂದೇ ಹಾಗೆ ಬರೆದೆನೆ ಎಂದು ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇಲ್ಲ ಎಂದು ಪ್ರಾಮಾಣಿಕವಾಗಿ ನಂಬುತ್ತೇನೆ.

ನೀವು ಕೂಡಾ ಬರೆಯುತ್ತಿರುವುದರಿಂದ ಇದು ನಿಮಗೆ ಅರ್ಥವಾಗಬಹುದು. ಅನೇಕ ಬಾರಿ ನಮ್ಮ ಮನಸ್ಸಿನಲ್ಲಿರುವ ಅರ್ಥ, ಭಾವನೆ, ಅರಿವು ಭಾಷೆಯಲ್ಲಿ ಯಥಾವತ್ ಬಂತು ಅಂತ ನಾವು ಭಾವಿಸುತ್ತೇವೆಯೇ ಹೊರತು ನಿಜಕ್ಕೂ ಬಂದಿದೆ ಎಂದೇನೂ ಅಲ್ಲ. ಅನೇಕ ಬಾರಿ ಕೆಲವು ಶಬ್ದಗಳು ನಮ್ಮ ಮನಸ್ಸಿನಲ್ಲಿ ಎಬ್ಬಿಸುವ ಬಿಂಬ ಕೇವಲ ವೈಯಕ್ತಿಕವಾಗಿದ್ದು ನಮಗೆ ಮಾತ್ರ ಆ ಅರ್ಥ, ಭಾವನೆ, ಅರಿವನ್ನು ತಕ್ಷಣಕ್ಕೆ ಮರುಸೃಷ್ಟಿಸಬಲ್ಲವೇ ಹೊರತು ಎಲ್ಲರಿಗೂ ಹಾಗೆ ಆಗಬೇಕಾದ್ದಿಲ್ಲ. ಅದರಲ್ಲೂ ಅಂಥ ಬಿಂಬಗಳಿಗೆ ತೀರಾ ಅಪರಿಚಿತನಾದ ಎರಡನೇ ಓದುಗನಿಗೆ ಅದು ಎಂದಿಗೂ ಘಟಿಸುವುದಿಲ್ಲ. ಆದಾಗ್ಯೂ ನಾನು ಇದನ್ನು ಓದುಗನ ಮಿತಿ ಎಂದು ಹೇಳುತ್ತಿಲ್ಲ. ಇದು ನನ್ನದೇ ಮಿತಿ ಮತ್ತು ನನ್ನ ಭಾಷೆಯ ಸಮಸ್ಯೆ. ವರ್ಷಗಳ ಬಳಿಕ ನಾನು ಬರೆದಿದ್ದನ್ನು ನಾನೇ ಮತ್ತೊಮ್ಮೆ ಓದಿದರೆ ಅದು ನನಗೆ ಬೇರೆಯೇ ಅರ್ಥವ್ಯಾಪ್ತಿಯನ್ನು ನೀಡಿದ್ದೂ ಇದೆ, ಇದನ್ನು ನಾನೇ ಬರೆದೆನೆ ಅನಿಸಿದ್ದೂ ಇದೆ.

ಮೂಲತಃ ಭಾವಕ್ಕೆ ಭಾಷೆಯ ಹಂಗಿಲ್ಲ. ನಗ್ನವಾದ ಒಂದು ಭಾವಕ್ಕೆ ಭಾಷೆಯ ಬಟ್ಟೆ ತೊಡಿಸಿ ಹೊರಗೆ ಬಿಟ್ಟಾಗ ಹೊರಗಿನವರಿಗೆ ಮೇಲ್ನೋಟಕ್ಕೆ ಬಟ್ಟೆ ಕಾಣಿಸುತ್ತದೆ, ಭಾವವಲ್ಲ. ಬಟ್ಟೆಯ ಒಳಗಿನ ಆಕೃತಿಯನ್ನು ಆ ತೊಡುಗೆ ಸ್ವಲ್ಪ ಹೆಚ್ಚು ಮಾಡಿ ತೋರಿಸಲೂ ಬಹುದು, ಕೆಡಿಸಿ ತೋರಿಸಲೂ ಬಹುದು. ಅಪರೂಪಕ್ಕೆ ವಾಸ್ತವವಾದ ಆಕೃತಿಯನ್ನೇ ತೋರಿಸಬಹುದು. ಬರಹಗಾರನ ಭಾವವೊಂದು ಓದುಗನ ಮನಸ್ಸಿನಲ್ಲಿ ಪುನರ್ ಸೃಷ್ಟಿಯಾಗುವ ಪ್ರಕ್ರಿಯೆ ಯಾರ ಯಾವ ಯೋಜನೆಗಳಿಗೂ,ನಿರೀಕ್ಷೆಗಳಿಗೂ ಯಥಾವತ್ ದಕ್ಕುವುದು ಸಾಧ್ಯವಿಲ್ಲ. ಸದ್ಯದ ನನ್ನ ಲೇಖನ ನಿಮ್ಮಲ್ಲಿ ಗೊಂದಲ ಹುಟ್ಟಿಸಿದ್ದರೆ, ಅದನ್ನು ಓದಿದ ಉಳಿದವರಿಗೂ ಗೊಂದಲವನ್ನೇ ಹುಟ್ಟಿಸಿದ್ದರೆ ನನಗೆ ಅಂಥ ಕೆಡುಕೇನೂ ಅನಿಸುವುದಿಲ್ಲ. ಅದೊಂದೇ ಕಾರಣಕ್ಕೆ ನಾನು ನನ್ನ ಲೇಖನವನ್ನು ಹಿಂದೆಗೆದುಕೊಳ್ಳುವುದಿಲ್ಲ. ನಿಜ, ನಾನು ಸರಿಯಾಗಿ ನನ್ನ ಅನಿಸಿಕೆಯನ್ನು ಕಮ್ಯುನಿಕೇಟ್ ಮಾಡಿಲ್ಲದೇ ಇರಬಹುದು. ಸೊ ವಾಟ್ ಎನ್ನುವ ಧಾರ್ಷ್ಟ್ಯ ನನ್ನದು. ನಿಮಗೆ ಅರ್ಥವಾಗದಿದ್ದರೆ ಅದನ್ನು ನಿರ್ಲಕ್ಷಿಸಿಬಿಡಿ. ಎಲ್ಲವೂ ಎಲ್ಲರಿಗೂ ಅರ್ಥವಾಗಲೇ ಬೇಕೆಂಬ ಹಟ ಯಾಕೆ? "ನೀನು ಬರೆದಿದ್ದು ಅರ್ಥವಾಗುವುದಿಲ್ಲ ಮಾರಾಯ, ಅದೇನು ಬರೀತೀಯೋ ನಿನಗೇ ಗೊತ್ತು" ಎಂದು ನನಗೆ ಹೇಳಿದವರಲ್ಲಿ ನೀವೇ ಮೊದಲಿಗರಲ್ಲ ಮತ್ತು ನಿಶ್ಚಿತವಾಗಿಯೂ ನೀವೇ ಕೊನೆಯವರಾಗಲಿ ಎಂದು ನಾನು ಬಯಸುವುದೂ ಇಲ್ಲ. ಆದರೆ ಅದರಿಂದ ಅಬ್ದುಲ್ ರಶೀದರ ಪುಸ್ತಕಕ್ಕೆ ಹಾನಿಯಾಗಬಾರದು, ಆಗುವುದಿಲ್ಲ. ಯಾಕೆಂದರೆ, ನನ್ನ ಮಾತುಗಳಿಂದ ಕೃತಿಯ ಬೆಲೆ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ನಾನು ಪುಸ್ತಕದ ಬಗ್ಗೆ ಅನಿಸಿಕೆ ಹೇಳುತ್ತಿದ್ದೇನೆ, ಪುಸ್ತಕವನ್ನೇ ತಿದ್ದುತ್ತಿಲ್ಲ. ಪುಸ್ತಕದ ಬಗ್ಗೆ ನಿಲುವು ತಳೆಯುವುದಕ್ಕೆ ಪುಸ್ತಕವನ್ನೇ ಓದಬೇಕು, ನನ್ನ ಅನಿಸಿಕೆಯನ್ನು ಕಣ್ಮುಚ್ಚಿ ಮುಖಬೆಲೆಗೇ ಕೊಂಡುಕೊಳ್ಳಬಾರದು. ಹಾಗೆ ಮಾಡುವುದು ತಪ್ಪು ಮತ್ತು ಆ ತಪ್ಪಿಗೆ ನಾನು ಬಾಧ್ಯಸ್ಥನಾಗುವ ಸಂಭವವಿಲ್ಲ. ನನ್ನ ಅನಿಸಿಕೆಯನ್ನು ಓದಿ ಯಾರಾದರೂ ಒಂದು ಪುಸ್ತಕವನ್ನೇ ನಿರ್ಲಕ್ಷಿಸಿದರೆ ಅದು ನನಗೆ, ನನ್ನ ಮಾತಿಗೆ ನೀಡುವ ಅನಗತ್ಯವಾದ ಅತಿ ಮಹತ್ವವಾಗುತ್ತದೆ. ಸಾಧಾರಣವಾಗಿ ನಾನು ನನ್ನ ಮಾತುಗಳ ಕ್ರೆಡಿಬಿಲಿಟಿಗೆ ಗಮನ ನೀಡುತ್ತೇನಾದರೂ, ಕೆಟ್ಟದಾಗಿದೆ ಎಂದು ನನಗನಿಸಿದ ಪುಸ್ತಕಗಳ ಬಗ್ಗೆ ಬರೆಯುವುದನ್ನೇ ತಪ್ಪಿಸುತ್ತೇನಾದರೂ ನನ್ನ ಅನಿಸಿಕೆಯಿಂದ ಯಾವನೇ ಬರಹಗಾರ, ಪ್ರಕಾಶಕ ಇಲ್ಲವೇ ಓದುಗ ಒಂದು ಮಿತಿಯಾಚೆ ಪ್ರತಿಸ್ಪಂದಿಸುತ್ತಾನೆಂದು ನಂಬಿಲ್ಲ.

ನನಗೆ ಒಬ್ಬ ವಿಮರ್ಶಕನ ಅನಿಸಿಕೆಗಳು ಪುಸ್ತಕವನ್ನು ನಾನೇ ಓದಿದ ಮೇಲೆ ತಪ್ಪುತಪ್ಪಾಗಿವೆ ಅನಿಸಿದಲ್ಲಿ ನಾನು ಆ ವಿಮರ್ಶಕನ ಮಾತಿಗೆ ಕೊಡುವ ಬೆಲೆ, ಗೌರವ ಕಡಿಮೆಯಾಗುತ್ತದೆಯೇ ಹೊರತು ಕೃತಿಯನ್ನಾಗಲೀ, ಕೃತಿಕಾರನನ್ನಾಗಲೀ ತಪ್ಪು ತಿಳಿಯುವುದಿಲ್ಲ. ಎಲ್ಲರೂ ಹಾಗೆಯೇ ಅಲ್ಲವೆ?

ಈಗ ನಿಮ್ಮ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ. ಈ ಉತ್ತರಗಳು ಕೇವಲ ನನ್ನ ವ್ಯಕ್ತಿಗತ ಅನಿಸಿಕೆಗಳು. ಸಾರ್ವತ್ರಿಕವಾದ ವಿಚಾರಗಳಲ್ಲ. ಸಾಹಿತಿಯ, ವಿಮರ್ಶಕನ ನೆಲೆಯಿಂದಲೋ ಅಥವಾ ಅಂಥವರ ವಕ್ತಾರನ ಧ್ವನಿಯಲ್ಲೋ ಹೇಳುತ್ತಿರುವುದಲ್ಲ.

೧. ವಿಮರ್ಶಕ ಕ್ರಿಯಾಶೀಲ ವ್ಯಕ್ತಿಯಾಗಿರದೇ ದೂರದಲ್ಲೇ ಇದ್ದಾನೆ ಎಂದಿದ್ದೀರಿ. ವಾಸ್ತವವಾಗಿ ನನಗೆ ವಿಮರ್ಶಕ ಕ್ರಿಯಾಶೀಲನಾಗಿರುವುದು ಎಂದರೇನೆಂದು ತಿಳಿಯಲಿಲ್ಲ. ವಿವರಿಸಿ ಎಂದು ನಿಮ್ಮನ್ನು ಕೇಳುತ್ತಿಲ್ಲ. ನನ್ನದು ನಾನು ಓದಿದ ಒಳ್ಳೆಯ ಪುಸ್ತಕವನ್ನಿಟ್ಟುಕೊಂಡು ಅದು ಯಾವೆಲ್ಲ ರೀತಿಯಲ್ಲಿ ನನ್ನೊಳಗಿನ ಬರಹಗಾರನನ್ನು ಪೋಷಿಸಬಲ್ಲದು ಎನ್ನುವುದನ್ನು ಗಮನಿಸುವುದು ಮತ್ತು ಅದರೊಂದಿಗೇ ಸ್ವಲ್ಪ ಮಟ್ಟಿಗೆ ಅದು ಸಾಮಾನ್ಯ ಓದುಗನಾಗಿ ನನಗೆ ಹೊಸತೇನನ್ನು ನೀಡಿತೆನ್ನುವುದನ್ನು ಬರೆಯುವುದು. ಇದು ಶಿಷ್ಟ ಸಂಪ್ರದಾಯದ ವಿಮರ್ಶನ ಪದ್ಧತಿಯಾಗದೆಯೂ ಇರಬಹುದು, ನನಗೆ ಅದರ ಹಂಗಿಲ್ಲ.

೨. ಇನ್ನು, ಬಹುತೇಕ ಎನ್ನುವ ಶಬ್ದವನ್ನು ಮೂರೂ ವಾಕ್ಯಗಳಿಗೆ ಸೇರಿಸಿಯೇ ಹೇಳಬೇಕು. ಆಯಾ ವಾಕ್ಯಗಳು ಸೂಚಿಸುವ ಅನಿಸಿಕೆ ಸಂಕಲನದ ಎಲ್ಲಾ ಕತೆಗಳಿಗೂ ಒಂದೇ ತೆರನಾಗಿ ಅನ್ವಯಿಸುವುದಿಲ್ಲವಾದ್ದರಿಂದ ಮತ್ತು ಈ ಮೂರೂ ವಾಕ್ಯಗಳನ್ನು ಒಂದೇ ವಾಕ್ಯವಾಗಿಸುವುದು ಸರಿಕಾಣಿಸದ್ದರಿಂದ ಮೂರೂ ವಾಕ್ಯಗಳಿಗೆ `ಬಹುತೇಕ ಎಲ್ಲ ಕತೆಗಳೂ' ಎನ್ನುವ ವಿಶೇಷಣದ ಬಳಕೆಯಾಗಿದೆ. ಅದು ತಿಳಿದೇ ಮಾಡಿದ್ದು ಮತ್ತು ಸರಿಯಾಗಿಯೇ ಇದೆ. ಆದರೆ ಇದು ವಿಮರ್ಶೆಯ ವಿಶಿಷ್ಟ ವಿಧಾನವೇ ಎಂದು ನೀವು ಕೇಳಿರುವುದು ನಿಮ್ಮ ಕುಹಕವನ್ನು ತೋರಿಸುತ್ತದೆಯಲ್ಲವೇ?

೩. "ಕತೆಗಳು ಮಳೆ, ಮೋಡ, ಆತಂಕ ನೀರವತೆಯನ್ನು ಕಂಬಳಿಯಂತೆ ಹೊದ್ದಿದ್ದರೆ ಅವು ಓದುಗನೆದುರು ಅನಾವರಣಗೊಳ್ಳುವುದು ಹೇಗೆ? ಓದುಗ ಅವನ್ನು ಈ ಎಲ್ಲ ಪದರುಗಳಿಂದ ಹೊರ ತಂದು ಅರ್ಥ ಮಾಡಿಕೊಳ್ಳಬೇಕಾ" ಎಂದು ಕೇಳಿದ್ದೀರಿ. ಇದಕ್ಕೆ ನನ್ನ ಉತ್ತರ ಹೌದು. ಓದುಗ ಹಾಗೆ ಹೊರತಂದೇ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಹೆಚ್ಚು ಬಲಪ್ರಯೋಗದ ಅಗತ್ಯ ಬೀಳಲಾರದು.

೪. ಕಂಪನವಿಸ್ತಾರ ಎಂಬ ಶಬ್ದವನ್ನು ಮೊದಲು ಬಳಸಿದ್ದು ನಾನಲ್ಲ. ಅದು ಒಂದು ಉತ್ತಮ ಶಬ್ದ. ಇದನ್ನು ಕನ್ನಡದ ಸೆಲೆಬ್ರೇಟೆಡ್ ಕತೆಗಾರರೊಬ್ಬರು ಮೊದಲ ಬಾರಿಗೆ ಬಳಸಿದ್ದನ್ನು ನಾನು ಗಮನಿಸಿದ್ದೆ. ಯಾರು, ಎಲ್ಲಿ ಎಂಬ ವಿಚಾರ ಇಲ್ಲಿ ಬೇಡ. ಓದಿನಾಚೆಗೂ ಒಂದು ಓದು ಮನಸ್ಸಿನಲ್ಲಿ ಅನುರಣಿಸುವುದಕ್ಕೆ ಕಂಪನವಿಸ್ತಾರ ಎನ್ನಬಹುದು ಎಂದುಕೊಂಡಿದ್ದೇನೆ. ಅಸ್ಪಷ್ಟ ರೇಖಾಚಿತ್ರಗಳಂಥ ನಿರೂಪಣೆ ಕೂಡ ಒಂದು ತಂತ್ರ. ಅದು ನಮ್ಮ ಮನಸ್ಸಿನಲ್ಲಿ ಒಂದು ಬಿಂಬವನ್ನು ಸೃಜಿಸುತ್ತದೆ. ಒಂದು ಅಸಂಗತ ನಾಟಕ ಅಥವಾ ನವ್ಯ ಚಿತ್ರಕಲೆ ಮನಸ್ಸಿನಲ್ಲಿ ಉಂಟುಮಾಡುವ ಒಂದು ಬಿಂಬದಂತೆಯೇ ಇದು. ಅರ್ಥಕ್ಕಿಂತ ಪರಿಣಾಮಕ್ಕೆ ಹೆಚ್ಚು ಒತ್ತು ಇಲ್ಲಿ. ಇದು ನಮ್ಮ ಅನುಭವ, ಸಂವೇದನೆ ಮತ್ತು ಸ್ಪಂದನಾಶೀಲ ಮನಸ್ಸಿನ ಸ್ಮೃತಿಗಳಿಗೆ ಸಂಬಂಧಿಸಿದ್ದು ಮತ್ತಿದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಬಹುದು. ಸೃಜನಶೀಲ ಬರಹದ ಎಲ್ಲ ಪರಿಣಾಮಗಳನ್ನು ವಿವರಿಸುವುದು ಕಷ್ಟ. ಹಾಗೇ ಅದು ಅರ್ಥವಾದರೆ, ಅಸ್ಪಷ್ಟವಾಗಿಯಾದರೂ ಪರವಾಗಿಲ್ಲ, ಅದು ಒಳ್ಳೆಯದು. ಹೊರತು ಭಾವಜಗತ್ತಿನ ವಿದ್ಯಮಾನಗಳನ್ನೆಲ್ಲಾ ಭಾಷೆಯಲ್ಲೇ ನಿಚ್ಚಳಗೊಳಿಸುತ್ತೇನೆಂದು ಹೊರಟರೆ ನಾವು ಅರ್ಥದೊಂದಿಗೇ ಉಳಿಯುತ್ತೇವೆ, ಭಾವದೊಂದಿಗೆ ಅಲ್ಲ. ಸೃಜನಶೀಲ ಸಾಹಿತ್ಯ ಅನುಭವವಾಗುವುದು ಮುಖ್ಯ, ಅರ್ಥವಾಗುವುದಲ್ಲ ಎಂದು ನಾನು ನಂಬುತ್ತೇನೆ.

೫. "ಇದಕ್ಕಿಂತ ಹೆಚ್ಚಾಗಿ ರಶೀದ್ ಕಂಡದ್ದನ್ನು ಕಾಣಿಸುತ್ತಲೇ ಕಾಣಿಸದೇ ಹೋದುದೂ ಇರಬಹುದೆಂಬ ಪಕ್ವ ಮನಸ್ಸಿನ ಅನುಮಾನಗಳನ್ನು ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಂಡಿರುವುದರ ಕೆಲವು ಹೊಳಹುಗಳು ಕೂಡ ಈ ಕತೆಗಳಲ್ಲಿ ನಮಗೆ ಕಾಣಸಿಗುವುದು ಒಂದು ವಿಶೇಷ." ಎಂದು ನಾನು ಬರೆದಿದ್ದರ ಬಗ್ಗೆ " ಈ ಸಾಲುಗಳಂತೂ ಪೂರ್ತಿ ಗೊಂದಲ ಹುಟ್ಟಿಸುತ್ತವೆ ಮತ್ತು ನಿಮ್ಮ ಬರವಣಿಗೆಯ ದ್ವಂದ್ವ ತೋರಿಸುತ್ತವೆ." ಎಂದಿದ್ದೀರಿ. ರಶೀದ್ ಬಗ್ಗೆ ನನಗೆ ಸ್ವಲ್ಪ ಗೊತ್ತು. ರಶೀದ್ ಅಮೂರ್ತ ಮತ್ತು ಅದ್ಭುತ ರಮ್ಯ ಜಗತ್ತಿನ ಬಗ್ಗೆ ವಿಶೇಷ ಮೋಹವುಳ್ಳವರಲ್ಲ. ಅವರು ವಾಸ್ತವವಾದಿ ಮತ್ತು ಭೌತಿಕ ವಿಚಾರಗಳ ಬಗ್ಗೆ ಅಷ್ಟೇ ನೇರ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡುವ ವ್ಯಕ್ತಿ. ಸದ್ಯದ ಸಂಕಲನದ ಕತೆಗಳಲ್ಲಿ ಅವರು ಬದುಕಿನ ಅನೇಕ ಅಮೂರ್ತ ಸಾಧ್ಯತೆಗಳ ಕುರಿತು ಸಹನೆಯ ನಿಲುವು ತೋರಿಸಿರುವುದು ನನಗೆ ವಿಶೇಷ ಅನಿಸಿತು. ಅದನ್ನೇ ಬರೆದಿದ್ದೇನೆ. ಕಂಡದ್ದನ್ನು ಕಾಣಿಸುವುದು ಇದ್ದದ್ದೇ. ಕಾಣಿಸದೇ ಹೋದ ಸಂಗತಿಗಳೂ ಭೌತಿಕ ಜಗತ್ತಿನಲ್ಲಿ ಇರಬಹುದು ಎಂಬ ಒಂದು, ತನಗೆ ತಿಳಿಯದ್ದೂ ಇರಬಹುದು, ಎಲ್ಲವೂ ತರ್ಕಕ್ಕೆ-ಪರೀಕ್ಷೆಗೆ ದಕ್ಕಬೇಕಾದ್ದಿಲ್ಲ ಎನ್ನುವ ಒಂದು ಸ್ವೀಕೃತಿಯ ಮನೋಭಾವ ಇಲ್ಲಿ ಇದೆ ಎನ್ನುವುದನ್ನು ಆ ಸಾಲುಗಳಲ್ಲಿ ಬರೆದಿದ್ದೆ. ಇದನ್ನು ವಿವರಿಸಬೇಕಾಗಿ ಬಂದಿದ್ದು ಸ್ವಲ್ಪ ಅನಪೇಕ್ಷಿತ.

ನಿಮ್ಮ ಮೇಲಿನ ಗೌರವ ಮತ್ತು ನನ್ನ ತಪ್ಪುತಿಳುವಳಿಕೆಯ ಕುರಿತ ನನಗೇ ಆದ ಬೇಸರ ಕಾರಣ ಈ ಉತ್ತರಕ್ಕೆ. ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸಬೇಕು ಎಂದು ನನಗೆ ಎಂದೂ ಅನಿಸಿದ್ದಿಲ್ಲ. ಸ್ವಲ್ಪ ಯೋಚಿಸಿದರೆ ನಿಮಗೇ ತಿಳಿಯುವ ಸರಳ ಸಂಗತಿಗಳು ಇವೆಲ್ಲ. ಅಷ್ಟು ಚೆನ್ನಾಗಿ ಬ್ಲಾಗ್ ಬರೆಯುವ ನಿಮಗೆ ಇದು ಅರ್ಥವಾಗುವುದಿಲ್ಲವೆ?

ನನಗೆ ಸರಳವಾಗಿ ಅನಿಸಿದ್ದು ಇಷ್ಟೇ. ಒಂದು ಪುಸ್ತಕವನ್ನು ಪರಿಚಯಿಸಲು ನಾನು ಬಯಸಿದ್ದು. ಅದು ಮಾತ್ರ ಮುಖ್ಯವಾಗಬೇಕಿತ್ತು. ಸಂಪದದಲ್ಲಿ ನನ್ನ ಲೇಖನವನ್ನು ಟ್ರಂಕೇಟ್ ಮಾಡಿದ್ದರ ಕಾರಣ ಅದು. ನೀವು ಅದಕ್ಕೂ ಕುಹಕದ ಪ್ರತಿಕ್ರಿಯೆ ದಾಖಲಿಸಿದಿರಿ. ಸಾಧ್ಯವಾದರೆ ಆ ಪುಸ್ತಕವನ್ನು ಓದುವುದು ಇಲ್ಲವಾದರೆ ಬಿಡುವುದು ಅಷ್ಟೇ ನಾನು ನಿರೀಕ್ಷಿಸುವ ಪರಿಣಾಮ. ನನ್ನ ಬರಹಗಾರಿಕೆಯ ಪ್ರದರ್ಶನವಲ್ಲ, ಮೆಚ್ಚುಗೆಯಲ್ಲ. ಟೀಕೆಗೆ ಸ್ವಾಗತವೇ, ಆದರೆ ಅದು ವಸ್ತುನಿಷ್ಠವಾಗಿದ್ದರೆ ಮಾತ್ರ. ನಿಮ್ಮ ಪ್ರತಿಕ್ರಿಯೆ ಓದಿ ನನಗೆ ನಾನೇನಾದರೂ ಅನುಚಿತವಾದದ್ದನ್ನು ಮಾಡಿದ್ದೇನೆಯೇ, ಮಾಡುತ್ತಿದ್ದೇನೆಯೇ ಅನಿಸಿದ್ದು ಸತ್ಯ. ಅದರಲ್ಲೂ ನಾನು ಅಬ್ದುಲ್ ರಶೀದರ ಪುಸ್ತಕಕ್ಕೆ ಅನ್ಯಾಯ ಮಾಡಿದ್ದೇನೆ ಎನ್ನುವಂಥ ಮಾತುಗಳು. ತಮಾಷೆ ಎಂದರೆ ಈ ಮಾತನ್ನು ನೀವು ಒಪ್ಪಿಕೊಂಡಿರುವಂತೆ ಅಬ್ದುಲ್ ರಶೀದರ ಪುಸ್ತಕವನ್ನು ಓದದೇ ಹೇಳಿದ್ದು! ಒಂದು ಹೊಸ ಪುಸ್ತಕದ ವಿಮರ್ಶೆ ಬರೆಯುವಾಗ ಓದುಗ ಅದಾಗಲೇ ಆ ಪುಸ್ತಕವನ್ನು ಓದಿರುವುದಿಲ್ಲ ಎಂಬುದು ಗೊತ್ತಿರುತ್ತದೆ. ಹಳೆಯ ಪುಸ್ತಕದ ವಿಮರ್ಶೆ ಮಾಡುವಾಗ ಓದುಗ ಅದನ್ನು ಓದಿರುವ ಸಾಧ್ಯತೆಯನ್ನೂ ಮನಸ್ಸಿನಲ್ಲಿರಿಸಿಕೊಂಡಿರುತ್ತೇನೆ. ಹಳೆಯ ಪುಸ್ತಕದ ವಿಮರ್ಶೆ ಎಂದು ನಿಮಗೂ ಗೊತ್ತು. 2006ರಲ್ಲಿ ಬಂದಿದ್ದ ಪುಸ್ತಕಕ್ಕೆ ಈಗ, ಅದೂ ಇಷ್ಟು ಕೆಟ್ಟದಾಗಿ ಬರೆದ ವಿಮರ್ಶೆ ಅಗತ್ಯವಿರಲಿಲ್ಲ ಎನ್ನುವಂಥ ಮಾತನ್ನೂ ಬರೆದಿದ್ದೀರಿ. ಅಬ್ದುಲ್ ರಶೀದ್ ಕೂಡಾ ಇಂಥದ್ದನ್ನು ಬಯಸಿರಲಿಕ್ಕಿಲ್ಲ ಎಂದಿದ್ದೀರಿ. ನನ್ನ ವಿಮರ್ಶೆಯ ಉದ್ದೇಶ ಯಾವುದೇ ಲೇಖಕನ ಓಲೈಕೆಯಲ್ಲ. ರಶೀದರ ಖುಶಿಗೆ, ಬಯಕೆಗೆ ನಾನು ಬರೆಯಲಾರೆ. ಸ್ವತಃ ರಶೀದ್ ಇದು ಕೆಟ್ಟದಾಗಿದೆ ಎಂದರೂ ನನಗೆ ಅವರು ಅದನ್ನು ಮನಗಾಣಿಸುವ ತನಕ ನಾನು ನನ್ನ ಲೇಖನವನ್ನು ಹಿಂದೆಗೆಯುವವನಲ್ಲ.

ಏನಿದ್ದರೂ ನೀವು ಈ `ಕೆಟ್ಟ' ಲೇಖನಕ್ಕೆ ನೀಡಿರುವ ಮಹತ್ವ ಕೊಂಚ ಅತಿಯಾಯಿತೆಂದು ನನಗೇ ಅನಿಸಿದೆ. ಒಬ್ಬ ಬರಹಗಾರನಿಗೆ ಇದರಿಂದ ಖುಶಿಯಾಗಬಹುದೇನೋ. ನನಗಂತೂ ಆಗಿಲ್ಲ. ಅದು ಕೆಟ್ಟದಾಗಿದೆ ಎಂಬ ಕಾರಣಕ್ಕೆ ಅಲ್ಲ. ಈ ಯಾವ ಚರ್ಚೆಯೂ ಅರ್ಥಪೂರ್ಣವಾದ ಏನನ್ನೂ ಹುಟ್ಟಿಸಿಲ್ಲ ಎಂಬ ಕಾರಣಕ್ಕೆ. ಹಾಗಾಗಿಯೇ ನಿಮ್ಮ ಉದ್ದೇಶವನ್ನು ಅನುಮಾನದಿಂದ ನೋಡುವಂತಾಯಿತು. ಸೂಕ್ತ ಉತ್ತರ ನಿರೀಕ್ಷಿಸುತ್ತೇನೆ ಎಂದು ಬರೆದಿದ್ದೀರಿ. ಅಗತ್ಯವಿತ್ತೆ ಈ ಉತ್ತರದ್ದು ಎನ್ನುವ ಅನುಮಾನದೊಂದಿಗೇ,
ವಂದನೆಗಳೊಂದಿಗೆ,
ನರೇಂದ್ರ.