Wednesday, September 17, 2008

ಲಂಕೇಶ್ ಓದಿದ ವರ್ಷದ ಪುಸ್ತಕ!ಈ ವರ್ಷ(1995) ತಾವು ಓದಿದ ಅತ್ಯುತ್ತಮ ಪುಸ್ತಕ ಎಂದು ಲಂಕೇಶ್ ಮೆಚ್ಚಿಕೊಂಡಿರುವ ಪುಸ್ತಕ `ನೆನಪಿನ ರಂಗಸ್ಥಳ' ಎಂಬುದು. ಇದು ಕೆರೆಮನೆ ಶಿವರಾಮ ಹೆಗಡೆಯವರ ಆತ್ಮಕಥನ. ಇದನ್ನು ಅವರ ಬಾಯಲ್ಲೇ ಕೇಳಿ, ಕ್ಯಾಸೆಟ್ಟಿನಲ್ಲಿ ಧ್ವನಿಮುದ್ರಿಸಿಕೊಂಡು, ಸಾಕಷ್ಟು ವಿವೇಚನೆಯಿಂದ (ಕಥನ ಕಾರಣದಲ್ಲಿ ವಿವರಿಸಿದಂತೆ) ಬರಹರೂಪಕ್ಕಿಳಿಸಿದವರು ಶ್ರೀ ಜಿ.ಎಸ್.ಭಟ್. ಈ ಒಂದು ಪುಸ್ತಕವನ್ನೂ ಅಕ್ಷರ ಪ್ರಕಾಶನವೇ ಹೊರತಂದಿರುವುದು ಹೆಮ್ಮೆಯ ಸಂಗತಿ. ನೂರ ಮುವ್ವತ್ತಾರು ಪ್ಲಸ್ ಹನ್ನೆರಡು ಪುಟಗಳ ಇತರ ಬರಹಗಳಿರುವ ಈ ಪುಸ್ತಕದಲ್ಲಿ ಕೆಲವಾದರೂ ಅಪರೂಪದ ಚಿತ್ರಗಳಿವೆ, ಅಂದವಾದ ರಟ್ಟಿನ ಹೊದಿಕೆಯ ರಕ್ಷಾಕವಚವಿದೆ. ಪುಸ್ತಕ ಸರ್ವಾಂಗ ಸುಂದರವಾಗಿದ್ದೂ ಬೆಲೆ ಕೇವಲ ಐವತ್ತೈದೇ ರೂಪಾಯಿ ಇರಿಸಿರುವುದು ಪುಸ್ತಕಪ್ರಿಯರಿಗೆ ಮೆಚ್ಚುಗೆಯಾಗುವಂತಿದೆ.

ಇಲ್ಲಿ ಯಾವ ಹಮ್ಮು-ಬಿಮ್ಮು ಇಲ್ಲದೆ ತಮ್ಮ ಬಾಲ್ಯದ ದಿನಗಳಿಂದ ಹಿಡಿದು ತಮ್ಮ ಯೌವನದ ದುಡಿಮೆಯ ಕಷ್ಟದ ದಿನಗಳು, ದಾಂಪತ್ಯ, ತಾಳಮದ್ದಲೆಯ ಸಣ್ಣಪುಟ್ಟ ಅರ್ಥಗಾರಿಕೆಯಿಂದ ತೊಡಗಿ ಸ್ವತಃ ಮೇಳಕಟ್ಟಿದಲ್ಲಿನ ವರೆಗಿನ ಏಳು ಬೀಳುಗಳು ಎಲ್ಲವನ್ನೂ ಸಂಕ್ಷಿಪ್ತವಾಗಿ ಕೆರೆಮನೆ ಶಿವರಾಮ ಹೆಗಡೆಯವರು ಹೇಳುತ್ತ ಹೋಗಿದ್ದಾರೆ. ಲಂಕೇಶ್ ಹೇಳುವಂತೆ ಇದು ಸ್ವಲ್ಪ ದೊಡ್ದದಾಗಿರಬಹುದಿತ್ತು. "ಎಂಭತ್ನಾಲ್ಕು ವರ್ಷ ಬದುಕಿ ಮೂರು ಮಕ್ಕಳು ಪಡೆದು ಯಕ್ಷಗಾನ ವೇಷದಲ್ಲಿ ಹಲವಾರು ಪ್ರಯೋಗ ನಡೆಸಿ ನಂಬಿಕೆ ಬಾರದ ಆಧುನಿಕ ಜಗತ್ತಿನಲ್ಲಿ ನಂಬಿಕೆ ಕುದುರಿಸಿಕೊಂಡು ಕ್ರಿಯಾತ್ಮಕ ಬದುಕು ನಡೆಸಿದವರು; ಆ ಉದ್ದನೆಯ ವರ್ಣರಂಜಿತ ಬದುಕಿನ ಬಗ್ಗೆ ಚೆನ್ನಾಗಿ ಹೇಳಬಲ್ಲ ರಸಿಕತೆ ಪಡೆದಿದ್ದರು. ಹೀಗಿದ್ದಾಗ ಇವರ ಜೀವನ ಚರಿತ್ರೆ 136ಪುಟಗಳ ಪುಟ್ಟ ಪುಸ್ತಕದಲ್ಲಿ ಮುದುಡಿಕೊಳ್ಳುವ ಅಗತ್ಯವಿರಲಿಲ್ಲ."

ಅದು ನಿಜವೆಂದು ಪುಸ್ತಕವನ್ನು ಓದಿ ಮುಗಿಸಿದ ಮೇಲೂ, ನಮಗೂ ಅನಿಸಿಯೇ ಅನಿಸುತ್ತದೆ. ಆದರೆ ಇಷ್ಟಾದರೂ ಇದೆಯಲ್ಲ ಮೆಲುಕು ಹಾಕುವುದಕ್ಕೆ ಎನ್ನುವುದೇ ಒಂದು ಸಮಾಧಾನ.

ಈ ಪುಸ್ತಕದ ವಿವರಗಳಲ್ಲಿ ಇಪ್ಪತ್ತನೆಯ ಶತಮಾನದ ಬಹಳಷ್ಟು ಕಾಲಮಾನ ಒಳಗೊಂಡಿದ್ದು, ಆ ದಿನಗಳಲ್ಲಿ ಯಕ್ಷಗಾನಕ್ಕೆ ಜನಮನದಲ್ಲಿ ಇದ್ದಂಥ ಸ್ಥಾನಮಾನವೇನು ಎಂಬ ಬಗ್ಗೆಯೂ, ಅದೊಂದು ಕಲಾಪ್ರಕಾರವಾಗಿ ಹೇಗೆ ಜನಜೀವನದೊಂದಿಗೆ ಬೆರೆತಿತ್ತು ಎಂಬ ಬಗ್ಗೆಯೂ ಒಂದು ಆಪ್ತವಾದ ಚಿತ್ರವನ್ನು ಒದಗಿಸುತ್ತದೆ. ತೀರಾ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೆರೆಮನೆ ಶಿವರಾಮ ಹೆಗಡೆಯವರು ಹೊಟ್ಟೆಪಾಡಿಗಾಗಿ ಮಾಡದ ಕೆಲಸವಿಲ್ಲ. ಅಂಗಡಿ ಇಡುತ್ತಾರೆ, ಹೋಟೆಲು ಇಡುತ್ತಾರೆ, ಡ್ರೈವಿಂಗ್ ಕಲಿತು ಬಸ್ಸು, ಕಾರು ಓಡಿಸುತ್ತಾರೆ, ಟಿಕೇಟು ಹರಿಯುವ ಬಸ್ಸಿನ ಏಜೆಂಟರಾಗುತ್ತಾರೆ, ದೇವಸ್ಥಾನದ ಪಡಿಚಾಕರಿಯನ್ನು ಮಾಡುತ್ತಾರೆ ಮತ್ತು ಈ ಎಲ್ಲದರ ನಡುವೆ ಒಬ್ಬ ಉತ್ಕೃಷ್ಟ ಯಕ್ಷಗಾನ ಕಲಾವಿದರಾಗಿ ರೂಪುಗೊಂಡು ರಾಷ್ಟ್ರಪ್ರಶಸ್ತಿಗೆ ಭಾಜನರಾಗುತ್ತಾರೆ. ನಡುವೆ ಸಾಕಷ್ಟು ಸಾಲ-ಶೂಲ, ಸಾಂಸಾರಿಕ ಜಂಜಡಗಳು ಇದ್ದೇ ಇದ್ದವು. ಎಲ್ಲ ಇದ್ದೂ ಮೇಳಕಟ್ಟಿದ, ಮನೆ ಕಟ್ಟಿದ ಕತೆ ಹೇಳುತ್ತಾರೆ, ಯಾವುದೇ ಅಹಮಿಕೆಯಿಲ್ಲದೆ, ಸೋಗಿನ ಮಾತುಗಳಿಲ್ಲದೆ. ಸಹಕಲಾವಿದರನ್ನು, ಅವರಿವರನ್ನು ದೂರುವಾಗ ಸಕಾರಣವಾಗಿಯೇ ತಮ್ಮ ಮನಸ್ಸಿನಲ್ಲಿರುವುದನ್ನು ದಿಟ್ಟವಾಗಿ ತೋಡಿಕೊಂಡಿದ್ದಾರೆ. ಮೆಚ್ಚಿಕೊಂಡವರನ್ನು ಅವರ ದೌರ್ಬಲ್ಯಗಳಾಚೆಗೂ ಸ್ವೀಕರಿಸಿದ್ದಾರೆ. ತಮ್ಮ ನಡೆಯನ್ನು, ಮಿತಿಯನ್ನು ಅಡಗಿಸಿಟ್ಟು ಲೋಕದ ಆದರ್ಶವನ್ನೇ ತಮ್ಮ ಆಚರಣೆ ಎಂಬಂಥ ಸೋಗು ಎಲ್ಲೂ ತೋರಿಸಿಲ್ಲ ಎನ್ನುವುದು ಸಣ್ಣಸಂಗತಿಯೇನಲ್ಲ. ತಮ್ಮ ದೃಷ್ಟಿ ಹೀಗೆ, ತಮಗೆ ಕಂಡಿದ್ದು ಇದು ಎನ್ನುವಲ್ಲಿ ಅವರು ಅತ್ಯಂತ ಸ್ಪಷ್ಟ. ಹಾಗಾಗಿಯೇ ಈ ಆತ್ಮಕಥಾನಕ ಎಲ್ಲರೂ ಕುಳಿತು ಕೇಳಬೇಕಾದ ಒಬ್ಬ ಯಕ್ಷನ ಕತೆಯಂತಿದೆ!
ಈ ಪುಸ್ತಕದ ಬಗ್ಗೆ ಬರೆಯುತ್ತ ಲಂಕೇಶ್ ಒಂದು ಬಹುಮುಖ್ಯವಾದ ವಿಚಾರದ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಆ ಮಾತಿನ ಎಳೆಯನ್ನು ಮಾತ್ರ ಇಲ್ಲಿ ಕಾಣಿಸಬಹುದು ಅನಿಸುತ್ತದೆ:

"ನಾವು ಮಾತನಾಡುವಾಗ, ಬರೆಯುವಾಗ ಬಳಸುವುದು `ಶಬ್ದ' ಎಂಬುದನ್ನು ಮರೆಯುತ್ತೇವೆ; ನಮ್ಮಲ್ಲಿ ಜೀವವಿಲ್ಲದ ನಮ್ಮ ಮಾತಿಗೆ ಮತ್ತು ಗದ್ಯಕ್ಕೆ ಸಾವು ಬಡಿಯುತ್ತದೆ. ಜಿ.ಎಸ್.ಭಟ್ಟ ಅವರು ರೆಕಾರ್ಡ್ ಮಾಡಿರುವ ಈ ಇಡೀ ಪುಸ್ತಕದಲ್ಲಿ ಮಾತು ಕೇಳಿಸುತ್ತವೆ; ಕೆರೆಮನೆ ಶಿವರಾಮ ಹೆಗಡೆಯವರ ಕಂಠ, ಮಾತಿನ ಏರಿಳಿತ, ಲಹರಿ, ಅವರು ಬಳಸುವ ನಿಕ್ಕಿ, ಹಿಲಾಲು; ನೆನೆಸಿಕೊಳ್ಳುತ್ತೇನೆ ಎಂಬುದಕ್ಕೆ `ಹಂಬಲಿಸಿಕೊಳ್ಳುತ್ತೇನೆ...'
.....
"ತುಯ್ದಾಟ, ಪ್ರೀತಿ, ನೋವು, ನಲಿದಾಟ - ಎಲ್ಲವೂ ಒಮ್ಮೆಗೇ ಬಂದುಬಿಡುವ ಅನೇಕ ಭಾಗಗಳು ಈ ಪುಸ್ತಕದಲ್ಲಿವೆ; ಜೀವವೆನ್ನುವುದಕ್ಕೆ ಮಿಸುಕಾಟವಿದೆ, ನಲಿದಾಟವಿದೆ, ಸ್ಪಂದನವಿದೆ, ಸ್ಫೋಟವಿದೆ ಎಂಬುದನ್ನು ಮತ್ತು ಶಬ್ದಕ್ಕೆ ಸದ್ದು, ಸಂಗೀತ, ನೆನಪು, ಚಂದವಿದೆ ಎಂಬುದನ್ನು ನೀವು ಇಲ್ಲಿ ನೋಡಬೇಕು."

ಇಂಥ ಸೊಗಡನ್ನು ಉಳಿಸಿಕೊಂಡು ಕೆಲವು ಆತ್ಮಚರಿತ್ರೆಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರಲ್ಲಿ ವೈದೇಹಿ ಪ್ರಮುಖರು. ಇವರು ಭಾಸ್ಕರ ಚಂದಾವರ್ಕರ್ ಅವರ ಸಂಗೀತದ ಕುರಿತ ಹಲವಾರು ಉಪನ್ಯಾಸಗಳನ್ನು ಕೂಡ ಇದೇ ರೀತಿ ದಾಖಲಿಸಿಕೊಂಡು, ಕನ್ನಡಕ್ಕೆ ಅನುವಾದಿಸಿ ಸಂಗೀತ ಸಂವಾದ ಎನ್ನುವ ಅಪರೂಪದ ಒಂದು ಪುಸ್ತಕವನ್ನು ಕನ್ನಡದಲ್ಲಿ ಸಿಗುವಂತೆ ಮಾಡಿದ್ದಾರೆ ಎನ್ನುವ ಸಂಗತಿ ಹೆಚ್ಚಿನವರಿಗೆ ಗೊತ್ತಿರಲಾರದು. ಈ ಪುಸ್ತಕವನ್ನು ಕೂಡ ಅಕ್ಷರ ಪ್ರಕಾಶನವೇ ಹೊರತಂದಿದೆ.

No comments: