Wednesday, September 17, 2008

ಅವಧೂತನೊಬ್ಬನ ರೂಪಾಂತರ


ಸಂಚಯದ ಮೂಲಕ ಡಿ.ವಿ.ಪ್ರಹ್ಲಾದ್ ಯಾರಾದರೂ ಮೆಚ್ಚಿ ತಲೆದೂಗುವಂಥ ಕೆಲಸ ಮಾಡುತ್ತ ಬಂದಿದ್ದಾರೆ. ಸಂಚಯದ ಎಪ್ಪತ್ತೈದನೆಯ ಸಂಚಿಕೆಯಂತೂ ಎಪ್ಪತ್ತೈದು ಕವಿಗಳ ಕವನಗಳನ್ನು ಹೊತ್ತ ಒಂದು ಅಪೂರ್ವ ಸಂಕಲನ. ಇದನ್ನು ಕಾವ್ಯ ಸಂಭ್ರಮವೆಂದು ಕರೆದಿರುವುದು ಅತ್ಯಂತ ಔಚಿತ್ಯಪೂರ್ಣ. ಹಾಗೆಯೇ `ಅವಧೂತನೊಬ್ಬನ ರೂಪಾಂತರ' ಎಂಬ ಹೆಸರಿನ ಬಹುಮಾನಿತ ಕಥೆಗಳ ಒಂದು ಪುಟ್ಟ ಸಂಕಲನ, ಮೊದಲ ಮುದ್ರಣ 2001 ಎಂದು ಹೇಳಿಕೊಂಡರೂ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಅರವತ್ತೇ ಪುಟಗಳ ಮುವ್ವತ್ತು ರೂಪಾಯಿ ಮುಖಬೆಲೆಯ ಈ ಪುಟ್ಟ ಪುಸ್ತಕದಲ್ಲಿ ಐದು ಕಥೆಗಳಿವೆ. ಕೇಶವ ಮಳಗಿಯವರ ಮುನ್ನುಡಿಯಿದೆ.
ಚಂದ್ರಶೇಖರ ಕಂಠಿ, ಎಸ್.ತಮ್ಮಾಜಿರಾವ್, ಸುಮಂಗಲಾ ಬಾದರದಿನ್ನಿ, ದಮಯಂತಿ ನರೇಗಲ್ ಮತ್ತು ಶ್ರೀವಿಜಯ ಬರೆದ ಕತೆಗಳು ಮನಸೆಳೆಯುವಂತಿವೆ. ಎಲ್ಲ ಕತೆಗಳ ಕುರಿತೂ ಕೇಶವ ಮಳಗಿಯವರು ಬರೆದ ಮಾತುಗಳು ಪರಿಪೂರ್ಣವಾಗಿರುವುದರಿಂದ ಅದನ್ನೇ ಇಲ್ಲಿ ಗಮನಿಸಬಹುದಾಗಿದೆ:
"ಮುಡಚೀಟಿ ಕಥೆ ಸಾಮಾಜಿಕ ನ್ಯಾಯದ ಸಮಸ್ಯೆಯನ್ನು ಮತ್ತೊಮ್ಮೆ ಚರ್ಚಿಸಲು ಯತ್ನಿಸಿದರೆ ಇದಕ್ಕೆ ವ್ಯತಿರಿಕ್ತವಾದ ವಸ್ತುವಿನ `ಅವಧೂತನೊಬ್ಬನ ರೂಪಾಂತರ' ಬದುಕಿನ ವಿಸ್ಮಯವನ್ನು ಲವಲವಿಕೆಯಿಂದ ನಿರೂಪಿಸಲು ಯತ್ನಿಸುತ್ತ `ಚಕಿತತೆ'ಯನ್ನು ಹಾಗೇ ಉಳಿಸಿಕೊಳ್ಳಲು ಹವಣಿಸಿದೆ. `ಬಿಡುಗಡೆ' ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಜನಪ್ರಿಯ ಮಾದರಿಗಿಂತ ತುಸು ಈಚೆ ಬಂದು ಮುಖಾಮುಖಿಯಾಗಲು ಪ್ರಯತ್ನಿಸಿದೆ. ಆಧುನಿಕ ಶಿಕ್ಷಣ ಪಡೆದು ಸಂಸ್ಕಾರಗೊಂಡ ಮನಸ್ಸು ಎದುರಿಸುವ ತಾಕಲಾಟಗಳನ್ನು ತೀರ ಸಾಮಾನ್ಯ ಹೆಣ್ಣೊಂದು ಅದಕ್ಕಿಂತ ಹೆಚ್ಚು ಧೈರ್ಯವಾಗಿ ಎದುರಿಸುವ ಸನ್ನಿವೇಶವನ್ನು ಕಥೆ ಹೇಳಲು ಪ್ರಯತ್ನಿಸುತ್ತಿದೆ. `ಯೋಗ್ಯವರ' ಇನ್ನೊಂದು ಬಗೆಯದು. ಕಥೆಯ ಕೊನೆಯಲ್ಲಿ ಅನಾವರಣಗೊಳ್ಳುವ ಗೆಳತಿಯ ಕಪಟ ಪರಿಣಾಮಕಾರಿಯಾಗಿ ಮೂಡಿಬಂದಿದೆ. `ಹೊನ್ನಿ' ಮಾಸ್ತಿ ಕಥಾ ಪರಂಪರೆಯಲ್ಲಿ ಮೂಡಿಬಂದ ಭಾವೋದ್ವೇಗವಿಲ್ಲದೆ ತುಂಬು ಸಂಯಮದಿಂದ ಒಂದು ಹೆಣ್ಣಿಗೊದಗಿದ ದುರಂತವನ್ನು ಓದುಗರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ."
ಈ ಕತೆಗಳು ವಿಭಿನ್ನವಾಗಿದ್ದು ಒಂದೇ ಸಂಕಲನದಲ್ಲಿ ಓದುವಾಗ ಏಕತಾನತೆಯ ಕಿರಿಕಿರಿಯಿಲ್ಲದೆ ಪ್ರತಿಯೊಂದು ಕತೆಯೂ ಹೊಸದೇ ಆದ ಲೋಕವೊಂದಕ್ಕೆ ಆಹ್ವಾನ ನೀಡುವಂತೆ ಆಕರ್ಷಿಸುತ್ತದೆ. ಎಲ್ಲ ಕತೆಗಳ ಆಪ್ತಧಾಟಿ ಕತೆಗಳು ಬಹುಕಾಲ ಮನದಲ್ಲಿ ಉಳಿಯುವಂತೆ ಮಾಡುತ್ತವೆ. ಮುಡಚೇಟಿ(ಚಿತ್ರಶೇಖರ ಕಂಠಿ) ಕತೆಯ ಮಾಸ್ತರ, ತಮ್ಮಾಜಿರಾಯರ ಕತೆಯ ಅವಧೂತ, ಸುಮಂಗಲಾರ ಕತೆಯ ಬುರ್ಖಾದ ಹೆಂಗಸು, ದಮಯಂತಿಯವರ ಕತೆಯೊಳಗಿನ ಶೈಲಜಾ, ಶ್ರೀವಿಜಯ ಅವರ ಹೊನ್ನಿ ಜೀವಂತ ಪಾತ್ರಗಳಾಗಿ ನಮ್ಮನ್ನು ಕಾಡುತ್ತವೆ. ಒಳ್ಳೆಯ ಕತೆಗಳ ಉತ್ತಮ ಸಂಕಲನ.
`ಅವಧೂತನೊಬ್ಬನ ರೂಪಾಂತರ', ಸಂಚಯ ಪ್ರಕಾಶನ, 100, ಮೊದಲ ಮೇನ್, ಆರನೇ ಬ್ಲಾಕ್, ಮೂರನೇ ಸ್ಟೇಜ್, ಮೂರನೇ ಫೇಸ್, ಬನಶಂಕರಿ, ಬೆಂಗಳೂರು-560 085

No comments: