Sunday, September 21, 2008

ಇನ್ನು ಮುಂದೆ ಬರೆಯುವುದಿಲ್ಲ


ಎಂದ ಚಿರಾಯು!
ಅತ್ಯಂತ ಕಿರಿಯ ವಯಸ್ಸಿನಲ್ಲೇ ಜ್ಞಾನಪೀಠ ಪ್ರಶಸ್ತಿ ದಕ್ಕಿಸಿಕೊಂಡ ಪ್ರಖ್ಯಾತ ಸಾಹಿತಿ ಚಿರಾಯು ಪೆಂಗ್ವಿನ್ ಸಂಸ್ಥೆಯೊಂದಿಗೆ ಐವತ್ತಾರು ಲಕ್ಷಕ್ಕೆ ಒಂದು ಹೊಸ ಕಾದಂಬರಿ ಬರೆದುಕೊಡುವ ಕರಾರಿಗೆ ಒಪ್ಪಿಕೊಂಡು, ಒಪ್ಪಿಕೊಂಡ ಮೇಲೆ ಬರೆಯುವುದರ ಕುರಿತೇ ಎದುರಿಸುವ ತಲ್ಲಣಗಳ ಕಥೆ ಯಾಮಿನಿ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಕೇಂದ್ರವಾಗಿ ಮೈತಳೆದ ಒಂದು ಕಥಾನಕವೇ ಇಲ್ಲ. ಐವತ್ತಾರು ಲಕ್ಷದ ಕಾದಂಬರಿ ಬರೆಯಲು ಒಪ್ಪಿಕೊಂಡ ಚಿರಾಯು ಕೊನೆಗೆ ಶ್ರದ್ಧಾಗೆ ಕೊಡುವ ತನ್ನ ಹಳೆಯ ಟಿಪ್ಪಣಿ ಪುಸ್ತಕದಂತೆಯೇ ಈ ಯಾಮಿನಿ ಕೂಡ ಹಲವೆಡೆ ಒಂದು ಟಿಪ್ಪಣಿ ಪುಸ್ತಕದಂತೆಯೇ ಇರುವುದು ಸೋಜಿಗ!
ಈ ಮಿತಿಗಳಾಚೆಗೂ ಹಲವಾರು ಕಾರಣಗಳಿಗಾಗಿ ಈ ಕಾದಂಬರಿ ಮುಖ್ಯವಾಗುತ್ತದೆ. ಒಂದು; ಹಣ, ಖ್ಯಾತಿ ಮತ್ತು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ತಹತಹವನ್ನು ತಮ್ಮ ಆಳದಲ್ಲಾದರೂ ಗುರುತಿಸಿಕೊಂಡ ಕನ್ನಡದಂಥ ಸೀಮಿತ ಓದುಗರಿರುವ ಪ್ರಾದೇಶಿಕ ಭಾಷೆಯ ಬರಹಗಾರರ ತಲ್ಲಣಗಳ ಬಗ್ಗೆ ಇದು ಮಾತನಾಡುತ್ತಿದೆ.

ಎರಡನೆಯದಾಗಿ, ಇಲ್ಲಿ ಮೊದಲನೆಯದು ಎಂದು ಗುರುತಿಸಿದ ವಿದ್ಯಮಾನವನ್ನು ಈ ಕಾದಂಬರಿ ಒಬ್ಬ ಬರಹಗಾರನ ಅಂತರಾತ್ಮದ ತೊಳಲಾಟಗಳ ಜೊತೆಯಲ್ಲೇ ಗುರುತಿಸುತ್ತಿರುವುದು. ಇದು ಹೆಚ್ಚು ಸೂಕ್ಷ್ಮವಾದದ್ದು ಮತ್ತು ಇದನ್ನು ಜೋಗಿ ಎಷ್ಟರ ಮಟ್ಟಿಗೆ ಬರಹಗಾರರಲ್ಲದ ಓದುಗರಲ್ಲಿ ಸಾಕ್ಷಾತ್ಕರಿಸಬಲ್ಲರು ಎಂಬುದು ಚರ್ಚೆಯ ವಸ್ತುವಾದರೂ ಇದು ಈ ಕಾದಂಬರಿಯ ಮಹತ್ವದ ಬಿಂದು. ಬರಹಗಾರನ ಬರವಣಿಗೆ ಎಂಬುದು ಆತನ ಅಹಂಕಾರದ ವಿಸ್ತರಣೆ (extention of self ego) ಎಂಬುದನ್ನು ಕಂಡುಕೊಂಡು ಬರವಣಿಗೆಯನ್ನೇ ಬಿಟ್ಟುಬಿಡುವ ತೀರ್ಮಾನಕ್ಕೆ ಬರುವ ಚಿರಾಯುವಿಗೆ ಪ್ರೇಮದ ಶರಣಾಗತಿ ಹೆಚ್ಚು ಆಪ್ಯಾಯಮಾನವಾಗಿ ಕಾಣಿಸುವುದರಲ್ಲೇ ಈ ಅರಿವಿನ ಹೊಳಹುಗಳಿರುವುದು ಗಮನಾರ್ಹ.
ಮೂರನೆಯದಾಗಿ, ಬರಹಗಾರನ ವೈಯಕ್ತಿಕ ಬದುಕು, ಅದರ ಒಂದು ಮುಖವಾಗಿ ಇಲ್ಲಿ ಬಂದಿರುವ ವೈವಾಹಿಕ ಬದುಕು-ವಿವಾಹೇತರ ಸಂಬಂಧಗಳು ಹುಟ್ಟಿಸುವ ತಲ್ಲಣ ಏನೇ ಇರಲಿ, ಅದು ಈ ಕಾದಂಬರಿಯಲ್ಲಿ ಒಂದು ಸೂಕ್ಷ್ಮ ರೂಪಕವಾಗಿ ಬಳಸಲ್ಪಟ್ಟಿರುವುದು. ಪ್ರಖ್ಯಾತಿ, ಪ್ರಶಸ್ತಿ, ಹಣ ಒಬ್ಬ ಲೇಖಕನ ವ್ಯಕ್ತಿಗತ ಸ್ವಾತಂತ್ರ್ಯವನ್ನು ಹೇಗೆ ಮೊಟಕುಗೊಳಿಸುತ್ತದೋ ಅದೇ ರೀತಿ ದಾಂಪತ್ಯ ವ್ಯವಸ್ಥೆಯೊಂದು ನಮ್ಮ ಸಮಾಜದಲ್ಲಿ ಪಾರಂಪರಿಕವಾಗಿ ವಿಧಿಸಿರುವ ಸಾಮಾಜಿಕ ನಿರೀಕ್ಷೆಗಳು ಕೂಡ ಒಬ್ಬ ವಿವಾಹಿತ ವ್ಯಕ್ತಿ ಬೇರೊಂದು ಹೆಣ್ಣಿನ ಸಂಗಡ ಇರಿಸಿಕೊಳ್ಳುವ ಸಂಬಂಧವನ್ನು extra-marital affair ಎಂದೇ ಪರಿಗಣಿಸಿ ಆತನ ಸ್ವಾತಂತ್ರ್ಯಕ್ಕೆ ಮಿತಿಗಳನ್ನು ಹೇರುತ್ತವೆ ಎನ್ನುವಾಗಲೇ ಇದೆಲ್ಲ ಒಬ್ಬ ಲೇಖಕನ ಸೃಜನಶೀಲ ವ್ಯಕ್ತಿತ್ವಕ್ಕೆ ಮಾರಕವಾಗುತ್ತವೆ ಎಂಬುದನ್ನು ಒಂದು ಬಗೆಯ ಪರೀಕ್ಷಣಾರ್ಥ ಪ್ರಯೋಗಕ್ಕೆ ಒಳಪಡಿಸಿದಂತೆ ಈ ಕಾದಂಬರಿಯಲ್ಲಿ ಬಂದಿರುವುದನ್ನು ಕೊಂಚ ಗಮನಿಸಬೇಕಾದ ಅಗತ್ಯವಿದೆ. ಇದು ಕೇವಲ ಒಂದು ಸಂಸಾರದ ಟಿಪಿಕಲ್ ಸಮಸ್ಯೆಯಷ್ಟೇ ಆಗಿ ನಮಗೆ ಕಂಡರೆ ಕಾದಂಬರಿಯ ಸಂರಚನೆಯಲ್ಲಿರುವ ಉದ್ದೇಶ ನಮ್ಮ ಕಣ್ಣಿಗೆ ಕಾಣಿಸದೇ ಹೋಗಬಹುದು.
ಚಿರಾಯು ಬರೆಯುವುದಕ್ಕಾಗಿಯೇ ಊರು ಬಿಟ್ಟು ಕೇರಿ ಬಿಟ್ಟು ರೇಂಜ್ ಇಲ್ಲದ ಕಡೆ (ಸೆಲ್ ಫೋನಿನ ರೇಂಜು ನಮ್ಮನ್ನು ಬಂಧಿಸುವ ವಿಪರ್ಯಾಸವನ್ನು ಗಮನಿಸಿ) ಕಾಡು ಹೊಕ್ಕು ಬರೆಯುವುದಕ್ಕೆ ತಿಣುಕಾಡುವುದರಲ್ಲೇ ಈ ಸ್ವಾತಂತ್ರ್ಯದ ಅಭೀಪ್ಸೆ ಇದೆ. ಈ ಅಭೀಪ್ಸೆ ಅಸಹಜವಲ್ಲ. ಆದರೆ ಇದನ್ನು ಒಬ್ಬ ಬರಹಗಾರನಲ್ಲಿ ಹುಟ್ಟಿಸಿದ ಜಗತ್ತು ಏನಿದೆ, ಆ ಜಗತ್ತಿನ ಯಾವೆಲ್ಲ ಅಂಶಗಳು ಈ ಅಭೀಪ್ಸೆಗೆ ಕಾರಣವಾಗಿವೆ, ಅದರಲ್ಲಿ ಅಸಹಜತೆ(abnormal factors) ಇದೆ. ಕಾದಂಬರಿಯ ಸೂಕ್ಷ್ಮ ಕೇಂದ್ರ ಇದೇ ಆಗಿದೆ.
ಹೆಣ್ಣು ಇಲ್ಲಿ ಕಾಮದ ಸಂಕೇತವಾಗಿಯೋ, ಮಾಯೆಯಾಗಿಯೋ ಬಂದಿಲ್ಲ. ಆಕೆ ಇಲ್ಲಿ ಅಂತರಂಗಕ್ಕೆ ಬೇಕಾದ ಯಾವುದೋ ಒಂದು `ಶಮನ'ದಂತೆ ಬಂದಿರುವುದು ಗಮನಸೆಳೆಯುತ್ತದೆ. ಗಮನಿಸಿ: `ಅಮ್ಮನ ಸೆರಗಿನ ತುದಿ ಇನ್ನೂ ಕೈಯಲ್ಲಿದೆ ಅನ್ನಿಸಿ ಚಿರಾಯು ಕಣ್ಮುಚ್ಚಿಕೊಂಡ.' (ಪುಟ 114) ಯಾಮಿನಿಗಾಗಿ ಚಿರಾಯು ತಹತಹಿಸುತ್ತಿರುವುದು ಒಂದು ಸ್ತರದಲ್ಲಿ ಯಾಕೆಂದೇ ಅವನಿಗೆ ಗೊತ್ತಿಲ್ಲ. ಇನ್ನೊಂದು ಸ್ತರದಲ್ಲಿ ಅದು ಕಾಮಕ್ಕೆ ಅಲ್ಲವೆಂಬುದರ ಅರಿವಿದೆ. ಹಾಗೆಂದ ಮಾತ್ರಕ್ಕೆ ಅವನಿಗೆ ಸ್ಮಿತಾ ಬಗ್ಗೆ ಯಾವ ಅಸಹ್ಯ, ಬೇಸರ, ದ್ವೇಷವೂ ಇಲ್ಲ. ಅವಳೊಡನೆ ಎಂದಿನಂತೆ ಸಂಸಾರ ನಡೆಸಬಲ್ಲ ಅವನ ಸಾಧ್ಯತೆಯಿಂದ ಅವನು ದೂರವಾಗಿಲ್ಲ. ಈ ಚಿರಾಯು-ಯಾಮಿನಿ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕಾದ ಬೇರೆಯೇ ಒಂದು ಪಾತಳಿಯನ್ನು ಚಿರಾಯುವಿನ ಸ್ಮಿತಾ,ಊರ್ಮಿಳಾ ದೇಸಾಯಿ ಮತ್ತು ಸುಚಿತ್ರಾ ನಾಯಕ್ ಜೊತೆಗಿನ ಸಂಬಂಧದ ಹಿನ್ನೆಲೆಯಲ್ಲಿ ತಿಳಿದುಕೊಳ್ಳಬಹುದಾಗಿದೆ.
ಇಷ್ಟಲ್ಲದೆ ಇಲ್ಲಿ ಚುಟುಕಾಗಿ ನೂರಾರು ಪಾತ್ರಗಳು ಹೀಗೆ ಬಂದು ಹಾಗೆ ಹೋಗುವ ಮುನ್ನ ಯಾವುದೋ ಗಹನವಾದ ಪ್ರಶ್ನೆಯನ್ನೋ, ಬದುಕಿನ ಅನುಭವವಷ್ಟೇ ದಕ್ಕಿಸಬಲ್ಲ ಯಾವುದೋ ಸತ್ಯದ ಒಂದು ತುಣುಕನ್ನೋ ಒಗೆದು ಹೋಗುತ್ತಾರೆ. ಸಾಹಿತ್ಯ, ಬರೆಯುವುದು, ಬರೆಯದಿರುವುದು ಎಲ್ಲವೂ ಕಾದಂಬರಿಯ ಉದ್ದಕ್ಕೂ ಚರ್ಚೆಗೆ ತುತ್ತಾದಂತಿದೆ, ನೇರವಾಗಿ ಮತ್ತು ಪರೋಕ್ಷವಾಗಿ. ತಮಾಷೆಯೆಂದರೆ, ಕಾದಂಬರಿಯ ಉದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುವ ಯಾಮಿನಿ ನೇರವಾಗಿ ಕಾದಂಬರಿಯ ವೇದಿಕೆಯ ಮೇಲೆ ಕಾಣಿಸಿಕೊಳ್ಳುವುದು ಮಾತ್ರ ಕೊನೆಯ ಪುಟದಲ್ಲೇ!
ಇನ್ನುಮುಂದೆ ಬರೆಯುವುದಿಲ್ಲ ಎನ್ನುತ್ತಾನೆ ಚಿರಾಯು, ಕೊನೆಗೂ ಯಾಮಿನಿ ಸಿಕ್ಕಿದಾಗ. ಸರಿ, ಬರವಣಿಗೆ ಎಂಬುದು ಅಹಂಕಾರದ ಅಧಿಕೃತ ಪ್ರದರ್ಶನ ಎಂಬುದರಲ್ಲಿ ಸತ್ಯವಿದೆ. ಇಗೋ, ಇದು ನಾನು ಬರೆದಿದ್ದು ಎನ್ನುವಾಗಲೇ ಇದು ನನ್ನದು ಎನ್ನುವ, ನನ್ನ ಅಸ್ಮಿತೆಯನ್ನು ಜಗತ್ತಿಗೆ ಸಾರುವ ಒಂದು ಅಭಿವ್ಯಕ್ತಿ ಕೂಡಾ ಅದಾಗಿರುವುದು ನಿಜವೇ. ಆದರೆ ಹಂಚಿಕೊಳ್ಳುವ ಭಾವ ಒಬ್ಬ ಬರಹಗಾರನಿಗೆ ಮೂಡುವುದು, ಸಾಧ್ಯವಾಗುವುದು ಆತ ಇಡೀ ಜಗತ್ತನ್ನು ತನ್ನಂತೆಯೇ ಎಂದು ಒಪ್ಪಿಕೊಂಡು ಪ್ರೀತಿಸಿದಾಗಲೇ. ಹೀಗೆ ನಾನು ಜಗತ್ತನ್ನು ಒಪ್ಪಿಕೊಂಡಾಗಲೇ ಜಗತ್ತೂ ನನ್ನನ್ನು ಒಪ್ಪಿಕೊಳ್ಳುವುದು ಸಾಧ್ಯವಾಗಬಹುದಾದ ಒಂದು ಸಾಧ್ಯತೆ ತೆರೆದುಕೊಳ್ಳುವುದು. ತಟ್ಟನೇ ಎದುರಾಗುವ ಅಪರಿಚಿತ ವ್ಯಕ್ತಿಯ ಮೋರೆಯಲ್ಲಿ ಕಾರಣವಿಲ್ಲದೆ ಅರಳುವ ಒಂದು ಮುಗುಳ್ನಗೆಗಿಂತ ಸುಂದರವಾದ ವಸ್ತುವೇ ಜಗತ್ತಿನಲ್ಲಿಲ್ಲ ಎನ್ನುವ ಜಯಂತಕಾಯ್ಕಿಣಿಯವರ ಮಾತುಗಳು ಇಲ್ಲಿ ನೆನಪಾಗುತ್ತವೆ. ಎದುರಾಗುವ ವ್ಯಕ್ತಿ ಮೋರೆ ಗಂಟು ಹಾಕಿಕೊಂಡು ಬಿಗಿದ ಹುಬ್ಬು, ತುಟಿಗಳಿಂದ ಕೆಕ್ಕರಿಸಿದರೆ ಬದುಕು ಅಸಹನೀಯ ಕೂಡ ಹೌದು.
ಬರೆಯುವುದು ಒಂದು ಅತ್ಯಂತ ಶ್ರೇಷ್ಠವಾದ ಮಾನವೀಯ ಕಾಯಕ ಎಂದು ನಂಬಿದವರು ನಾವು. ಬರೆಯುವುದು ಈ ಜಗತ್ತಿನೊಂದಿಗೆ ನಮ್ಮನ್ನು ನಾವು ಜೋಡಿಸಿಕೊಳ್ಳುವ ಒಂದು ವಿಶ್ವಾಸದ ಕ್ರಿಯೆ. ಇಡೀ ಜಗತ್ತನ್ನು ಪ್ರೀತಿಸಲು, ಅದರಲ್ಲಿರುವ ಇತರ ಮನುಷ್ಯರನ್ನು ತನ್ನಂತೆಯೇ ಎಂದು ಅರ್ಥಮಾಡಿಕೊಳ್ಳಲು ಅದು ಕಲಿಸುತ್ತದೆ. ಈ ಅರ್ಥಮಾಡಿಕೊಳ್ಳುವ ಕ್ರಿಯೆ ಪ್ರೀತಿಯನ್ನು ಹುಟ್ಟಿಸುತ್ತದೆ. ವಿನಯವನ್ನು, ಹೆಚ್ಚು ಸಂವೇದನಾಶೀಲತೆಯನ್ನು ಅದು ನೀಡುತ್ತದೆ. ನಮ್ಮನ್ನು ಹೆಚ್ಚು ಹೆಚ್ಚು ಉತ್ತಮವಾದ ಮನುಷ್ಯರನ್ನಾಗಿಸುತ್ತದೆ. ಬದುಕನ್ನು, ಮನುಷ್ಯರನ್ನು ಮತ್ತು ಮನಸ್ಸನ್ನು ಅರ್ಥಮಾಡಿಕೊಳ್ಳಲು ಇರುವ ಅತ್ಯುತ್ತಮವಾದ ಕೆಲವು ಮಾರ್ಗಗಳಲ್ಲಿ ಇದು ಒಂದು ಎಂದು ನಮ್ಮ ಪರಂಪರೆಯ ಅನುಭವ. ಆದರೆ ಚಿರಾಯು ಯಾಕೆ ಇದನ್ನು ನಿರಾಕರಿಸುತ್ತಾನೆ ಎನ್ನುವುದಕ್ಕೆ ಬೇಕಾದ ಒಂದು ಗಟ್ಟಿಯಾದ ಮುಖಾಮುಖಿ ಕಾದಂಬರಿಯಲ್ಲಿಲ್ಲ. ಪುಸ್ತಕ ಪ್ರಕಟನೆ, ಬರೆಯುವುದು ಎಲ್ಲವೂ ಕಾಂಟ್ರಾಕ್ಟ್, ಒಂದು ಉತ್ಪನ್ನ ಎನ್ನುವಂಥ ಔದ್ಯಮಿಕ ಜಗತ್ತಿನ ಜಡ ತೀರ್ಮಾನಗಳು ಒಬ್ಬ ಬರಹಗಾರನ ಸೃಜನಶೀಲತೆಯನ್ನು ಹೀಗೆ ಬತ್ತಿಸಿಯಾವೆ, ಎಂದಾದರೂ?
ಕಾದಂಬರಿಯನ್ನು ಒಮ್ಮೆ ಓದಿದ ಮೇಲೆ ನಿಧಾನವಾಗಿ ಮತ್ತೊಮ್ಮೆ ಓದಬಹುದಾದ, ಓದಿ ತರ್ಕಿಸಬಹುದಾದ ಸಾಕಷ್ಟು stuff ಇದರಲ್ಲಿದೆ. ಹಾಗೆಯೇ ಒಂದು ಕ್ಲಾಸಿಕಲ್ ಶೈಲಿಯ ಕಾದಂಬರಿಯಲ್ಲಿ ಇರಬೇಕಾದ, ಕಾದಂಬರಿ ಪ್ರಕಾರ ಎಂದ ಮಾತ್ರಕ್ಕೇ ಓದುಗ ನಿರೀಕ್ಷಿಸಬಹುದಾದ ಅನೇಕ ಅಂಶಗಳ ಗೈರು ಕೂಡ ಇದೆ. Word economy ತತ್ವಕ್ಕೆ ಬದ್ಧರಾಗಿ, ಚಕಚಕನೆ ಓದಿಸಿಕೊಂಡು ಹೋಗಬಲ್ಲ ಆದರೆ ಆ ರೀತಿಯಿದ್ದೂ ಓದುಗ ಒಮ್ಮೆ ಅಲ್ಲಲ್ಲಿ ನಿಂತು ಯೋಚಿಸುವಂತೆ ಮಾಡಬಲ್ಲ ಒಂದು ಪುಸ್ತಕವನ್ನು ಜೋಗಿ ಕೊಟ್ಟಿರುವುದು ಅವರೊಳಗಿನ ಪತ್ರಕರ್ತ ಸಾಧಿಸಿದ ಒಂದು ಹೊಸ ಮಜಲು ಎಂದೇ ಹೇಳಬೇಕು.
ಯಾಮಿನಿ(ಕಾದಂಬರಿ)

ಪ್ರಕಾಶಕರು: ಅಂಕಿತ ಪುಸ್ತಕ, 53,ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004

ಪುಟಗಳು: 120

ಬೆಲೆ: ರೂಪಾಯಿ ಎಂಭತ್ತು ಮಾತ್ರ.

5 comments:

ಗಿರೀಶ್ ರಾವ್, ಎಚ್ (ಜೋಗಿ) said...

ನೀವು ಕಾದಂಬರಿಗೆ ಪ್ರತಿಕ್ರಿಯಿಸಿದ ಬಗೆ ನೋಡಿದ ಮೇಲೆ ನನ್ನ ತಪ್ಪುಗಳು ಸ್ಪಷ್ಟವಾದವು. ಕಾದಂಬರಿಯನ್ನು ಬರೆಯುತ್ತಿರುವಾಗ ಓದುತ್ತಿದ್ದ ಮಿತ್ರೆ ಚಿರಾಯು ಬರೆಯುವುದಿಲ್ಲ ಅಂದಿದ್ದು ಅಸಹಜ ಎಂದಿದ್ದರೂ ನನ್ನ ಆ ಕ್ಷಣದ ನಿಲುವು ಮನಸ್ಥಿತಿ ಹಾಗೇ ಇತ್ತು.
ಮತ್ತೊಂದು ಕಾದಂಬರಿ ಬರೆಯುವುದಕ್ಕೆ ಬೇಕಾದ ಸ್ಪೂರ್ತಿಯನ್ನಂತೂ ನೀವು ಕೊಟ್ಟಿದ್ದೀರಿ. ಮುಂದಿನದು ದೇವರ ಚಿತ್ತ.
ಥ್ಯಾಂಕ್ಯೂ ಸರ್
-ಜೋಗಿ

ನರೇಂದ್ರ ಪೈ said...

ಸರ್,
ನಿಮ್ಮ ವಿನಯ ದೊಡ್ಡದು. ನಿಮ್ಮ ಹೊಸ ಕಾದಂಬರಿಯನ್ನು ಕಾಯುವ, ಓದುವ ಖುಶಿ ನಮ್ಮದು.

mruganayanee said...

"ಬರೆಯುವುದು ಒಂದು ಅತ್ಯಂತ ಶ್ರೇಷ್ಠವಾದ ಮಾನವೀಯ ಕಾಯಕ ಎಂದು ನಂಬಿದವರು ನಾವು"

ಹೌದಾ ಆಥರ ನಂಬಿಕಂಡು ಬರೀತಿರ ನಿವೆಲ್ಲಾ? ಬರೆಯುವುದು ಬರವಣಿಗೆಯ ಮೇಲಿನ ಪ್ರೀತಿಗೆ, ನಮ್ಮ ಆಲೋಚನೆಗಳ ಅಭಿವ್ಯಕ್ತಿಗೆ, ಅಲ್ಲವ?

ನಿಮ್ಮ ಯಾಮಿನಿಯ ವಿಮರ್ಶೆ ಇಷ್ಟ ಆಯ್ತು. ಬರೀತಿರಿ

ನರೇಂದ್ರ ಪೈ said...

ಮೃಗನಯನಿಯವರೇ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನನ್ನ ಮಟ್ಟಿಗೆ ಬರೆಯುವುದು, ಅದಕ್ಕಿಂತಲೂ ಬರೆದಿದ್ದನ್ನು ನಾಲ್ಕು ಮಂದಿ ಓದಲು ಅರ್ಹವಾದದ್ದು ಎಂದು ತಿಳಿದು ಅದನ್ನು ಪ್ರಕಟಿಸುವುದು ನೀವು ಹೇಳಿದಷ್ಟು ಸರಳ ಪ್ರಕ್ರಿಯೆಯಲ್ಲ. ವಿಶಾಲ ನೆಲೆಯಲ್ಲಿ ನಿಮ್ಮ ನಿಲುವೇ ಸರಿಯಿರಬಹುದು, ನನ್ನ ನಿಲುವು ಅನಗತ್ಯ ತೊಡಕಿನ ಹೇಳಿಕೆ ಅನಿಸಬಹುದು.

Hemanth said...

Dear Sir,

ನಿಮ್ಮ ವಿಮರ್ಶೆಯೇ ಒಂದು ಪುಸ್ತಕದಂತಿದೆ, ನಿಜವಾಗ್ಲು ನೀವು, ನೀವು ಓದಿದ ಕಥೆ, ಕಾದಂಬರಿಗಳ ಬಗ್ಗೆ ನಿಮ್ಮ ವಿಮರ್ಶೆಯ ಮೂಲಕವೇ ಆ ಕಥೆ, ಕಾದಂಬರಿಯ ಬಗ್ಗೆ ಆಸಕ್ತರಾಗೊ ಹಾಗೆ ವಿಮರ್ಶಿಸುತ್ತೀರಿ.ಜಯಂತ್ ರವರ ಮಾತುಗಳು(ತಟ್ಟನೇ ಎದುರಾಗುವ ಅಪರಿಚಿತ ವ್ಯಕ್ತಿಯ ಮೋರೆಯಲ್ಲಿ ಕಾರಣವಿಲ್ಲದೆ ಅರಳುವ ಒಂದು ಮುಗುಳ್ನಗೆಗಿಂತ ಸುಂದರವಾದ ವಸ್ತುವೇ ಜಗತ್ತಿನಲ್ಲಿಲ್ಲ ಎನ್ನುವ ಜಯಂತಕಾಯ್ಕಿಣಿಯವರ ಮಾತುಗಳು ಇಲ್ಲಿ ನೆನಪಾಗುತ್ತವೆ) ಕಾವ್ಯಮಯವಾಗಿವೆ.

Thanks
Hemanth