Wednesday, September 24, 2008

ಮಕ್ಕಳಿವರು ಐದೂವರೆ ಕೋಟಿ...


ಕನ್ನಡದ ಒಂದು ಉತ್ತಮ ಸಾಹಿತ್ಯಿಕ ಕಿರುಪತ್ರಿಕೆ `ಸಂಕಲನ'ದ ಪ್ರಕಟಣೆ ನಿಲ್ಲುತ್ತಿದೆ. ನಮ್ಮ ಅನೇಕ ಗಣ್ಯ ಸಾಹಿತಿಗಳು, ವಿಮರ್ಶಕರು, ಚಿಂತಕರು ವ್ಯಕ್ತಪಡಿಸಿದ ಕೆಲವು ಅನಿಸಿಕೆಗಳು ಇಲ್ಲಿವೆ:


ಸಂಕಲನ ೨೯ರ `ಕಡೀಪುಟ' ಓದಿದೆ. ಗುಂಗು ಹಿಡಿಸಿದೆ. ಈ ಸಲದ ಡಾ.ಎಸ್.ಶೆಟ್ಟರ್ ಅವರ ಲೇಖನದ ವ್ಯಾಪ್ತಿ, ಗಾಢತೆ ಅಚ್ಚರಿ ತರಿಸುವಂತಿದೆ.
-ಪ್ರಸನ್ನ, ಹೆಗ್ಗೋಡು.

ಸಂಕಲನ-೨೯ ಬಂತು. ಇಲ್ಲಿಯ ಕ್ರಿಶ್ಚಿಯನ್ ಹುಡುಗರಿಗೆ ಕನ್ನಡ ಸಂವಹನ ಹೇಳಿಕೊಡುತ್ತಿದ್ದೇನೆ. ವಾರಕ್ಕೆ ೨ ದಿನ ಮಾತ್ರ. ಇವತ್ತಿನ ಸಂಚಿಕೆಯಲ್ಲಿ ಬಂದ ನಾ.ಡಿಸೋಜರ `ನನ್ನ ಅವ್ವ ಅಪ್ಪ' ಓದಿ ವಿವರಿಸಿ ಪಾಠ ಮಾಡಿದೆ. ಅವರಿಗೆ ಖುಶಿಯಾಯಿತು. -ಡಾ.ಶ್ರೀನಿವಾಸ ಹಾವನೂರ, ಮಂಗಳೂರು.


ಈವತ್ತು (೨೨.೧೧.೨೦೦೬) ಹೊಸ ಸಂಕಲನ ಸಿಕ್ಕಿತು. ಮೊದಲು `ಕಡೀಪುಟ' ಓದಿದೆ. ಅದರ ಆಪ್ತ ಗದ್ಯವು ನನ್ನನ್ನು ಸೆಳೆಯಿತು. ಹಾಗೆಯೇ ಪುಟ ತಿರುಗಿಸುತ್ತ ಇಡೀ ಸಂಚಿಕೆಯನ್ನೇ ಒಂದು ಪಟ್ಟಿಗೆ ಓದಿ ಮುಗಿಸಿದೆ. ಈ ಸಂಚಿಕೆಯ ಹದ ಬಹಳ ಚೆನ್ನಾಗಿದೆ. ನಾನೂ ಒಬ್ಬ ಸಂಪಾಕದನಾಗಿರುವುದರಿಂದ ಇದನ್ನು ಸಾಧಿಸುವ ಕಷ್ಟ ಗೊತ್ತಿದೆ. ಕೇವಲ ಅದೃಷ್ಟದಿಂದ ಇದು ಸಾಧ್ಯವಾಗುವ ಮಾತಲ್ಲ. ಬಹಳಷ್ಟು ಪ್ರಯತ್ನ (ಮತ್ತು ಒಂದಿಷ್ಟು ಅದೃಷ್ಟವೂ) ಬೇಕಾಗುತ್ತದೆ. ಇದು ನಿಮಗೆ ಒದಗಿ ಬಂದಿರುವುದು ಇಲ್ಲಿ ಕಾಣುತ್ತದೆ.

ಒಮ್ಮೆ ಕಣ್ಣು ಹಾಯಿಸಿದರೆ ಓದಬೇಕು ಅನಿಸುವಂಥ ಲೇಖನಗಳು ಈ ಸಂಚಿಕೆಯಲ್ಲಿ ಇವೆ. ಪ್ರತಿ ಲೇಖನವೂ (ಉಷಾ ರೈ, ತಾರಿಣಿ, ವಸಂತ ಕವಲಿ, ಭರಣ್ಯ, ಹುದೆಂಗಜೆ) ಮನಸ್ಸಿನ ವಿಭಿನ್ನ ಸ್ತರಗಳನ್ನು ತಾಕುತ್ತವೆ. ಹಾಗಾಗಿ ಇಡೀ ಸಂಚಿಕೆಯನ್ನು ಒಟ್ಟಿಗೇ ಓದಿದರೂ ಹೊರೆಯೆನಿಸುವುದಿಲ್ಲ. ಪುಸ್ತಕ ಪರಿಶೀಲನೆ ಮತ್ತು ವಿಮರ್ಶೆಯನ್ನು ನೀವು ಸತತವಾಗಿ ಮಾಡುತ್ತಿದ್ದೀರಿ. ಇದು ಮಹತ್ವದ ಕೆಲಸ. ಇಂಥ ಒಳ್ಳೆಯ ಸಂಚಿಕೆಗಾಗಿ ನಿಮಗೆ ಕೃತಜ್ಞತೆಗಳು ಮತ್ತು ಅಭಿನಂದನೆಗಳು.
-ವಿವೇಕ ಶಾನಭಾಗ, ಬೆಂಗಳೂರು.


ಸಂಕ್ರಮಣದ ಸಾಹಸದ ನಂತರ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಅಷ್ಟೇ ಮಹತ್ವದ ಸಂಕಲನವನ್ನು ನಿಯಮಿತವಾಗಿ ಪ್ರಕಟಿಸುತ್ತಿರುವುದು ನನಗೆ ಸಂತೋಷ ಕೊಟ್ಟಿದೆ. ಈಗ ಅವರ ಜೊತೆಗೆ ಕವಿ ಎಂದು ಒಳ್ಳೆಯ ಹೆಸರು ಮಾಡಿದ ಹೇಮಾ ಇದ್ದಾರೆ. ಪತ್ರಿಕೆಯ ಹುಟ್ಟಿನಿಂದಲೂ ನಾನು ಅದನ್ನು ಗಮನಿಸುತ್ತ ಬಂದಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಇಂಥ ಪತ್ರಿಕೆಗಳ ಮುಖ್ಯ ಉದ್ದೇಶ ಹೊಸ ಲೇಖಕ-ಲೇಖಕಿಯರನ್ನು ಬೆಳಕಿಗೆ ತರುವುದು. ಈ ಕಾರ್ಯವನ್ನು ಗೆಳೆಯ ಲಂಕೇಶ್ ತುಂಬ ಆಸಕ್ತಿಯಿಂದ, ಯಶಸ್ವಿಯಾಗಿ ನೆರವೇರಿಸಿದರು. ಪಟ್ಟಣಶೆಟ್ಟಿ ದಂಪತಿಗಳೂ ಈ ದಿಕ್ಕಿನಲ್ಲಿ ಶ್ರದ್ಧೆಯಿಂದ ದುಡಿಯುತ್ತಿದ್ದಾರೆ. ಇದರ ಅರ್ಥ ಪ್ರಸಿದ್ಧ ಲೇಖಕರಿಗೆ ಇಲ್ಲಿ ಸ್ಥಾನವಿರಬಾರದು ಎಂದೇನೂ ಅಲ್ಲ. ಷ.ಶೆಟ್ಟರ್ ಅವರು `ಕವಿರಾಜಮಾರ್ಗ'ವನ್ನು ಕುರಿತು ಬರೆಯುತ್ತಿರುವ ಲೇಖನಮಾಲೆ ಸಂಕಲನವನ್ನು ಎಷ್ಟು ಶ್ರೀಮಂತಗೊಳಿಸಿದೆ ಎನ್ನುವುದನ್ನು ಪತ್ರಿಕೆಯ ಓದುಗರಿಗೆ ತಿಳಿಸಿ ಹೇಳಬೇಕಾಗಿಲ್ಲ. ನಮ್ಮ ಎಲ್ಲ ಸಾಂಸ್ಕೃತಿಕ ಆಸ್ಥೆಗಳನ್ನು ಒಳಗೊಳ್ಳುವಷ್ಟು ಶಕ್ತಿಯುತವಾಗಿ ಪತ್ರಿಕೆ ಬೆಳೆಯಲಿ.
-ಡಾ.ಜಿ.ಎಸ್.ಅಮೂರ, ಧಾರವಾಡ.


ಸಂಕಲನ ನಿರೀಕ್ಷೆಗೂ ಮೀರಿ ಚೆನ್ನಾಗಿ ಬರ್ತಿದೆ.
-ಕುಂ.ವೀರಭದ್ರಪ್ಪ, ಕೊಟ್ಟೂರು.

ಕಾನೂನು, ಸಾಹಿತ್ಯ, ಸಮಾಜ, ಸಂಸ್ಕೃತಿ ಮುಂತಾದ ವಿಚಾರ ಒಳಗೊಂಡಂತೆ ಸಾಕಷ್ಟು ರೀಡಿಂಗ್ ಮೆಟೀರಿಯಲ್ ಇರುವ ಸಂಕಲನ ಸಂಚಿಕೆಗಳನ್ನು ಓದುತ್ತಿದ್ದಂತೆ ಖುಶಿಯಾಗುತ್ತದೆ. ಮುಂಬರುವ ಸಂಚಿಕೆಗಳಿಗಾಗಿ ಕುತೂಹಲ ಹುಟ್ಟುತ್ತದೆ.
-ಎಂ.ಎಸ್.ನರಸಿಂಹಮೂರ್ತಿ, ಬೆಂಗಳೂರು.

ಸಂಕಲನ ಯಾವ ಸಂಚಿಕೆಯ ಬಗ್ಗೆ ಯಾರೇ ಬರೆದರೂ ಭಿನ್ನಾಭಿಪ್ರಾಯವಿಲ್ಲ. ಸಂಕಲನ ಓದುತ್ತಿದ್ದಂತೆ ರಸಿಕರ ಹೃದಯಸಮುದ್ರ ಉಕ್ಕೇರುವುದು ಸಹಜ. ಅರವಿಂದ ಚೊಕ್ಕಾಡಿಯವರ `ಶಾಲಾ ಶಿಕ್ಷಣದಲ್ಲಿ ಸೃಜನಶೀಲತೆ' ಸಂಕಲನದ ವೈಶಿಷ್ಟ್ಯ ಹೆಚ್ಚಿಸಿದ ಲೇಖನ.
-ಡಾ.ವಾಮನ ಬೇಂದ್ರೆ, ಧಾರವಾಡ.

ಸಂಕಲನ ಸಂಗ್ರಾಹ್ಯವಾಗಿದೆ, ಚೆಲುವಾಗಿದೆ. ಹಾರ್ದಿಕ ಅಭಿನಂದನೆಗಳು
-ಪ್ರೊ.ತಾಳ್ತಜೆ ವಸಂತಕುಮಾರ, ಮುಂಬಯಿ.

ಸಂಕಲನ-೩೫ ತಲುಪಿದೆ. ಸಾಹಿತ್ಯಿಕ ಕಿರುಪತ್ರಿಕೆಯ ಬರಹಗಳು ಓದುಗರನ್ನು ಹೊಸ ಓದಿಗೆ, ಮತ್ತಷ್ಟು ಓದಿಗೆ ಪ್ರಚೋದಿಸಬೇಕು. ಈ ಮಾನದಂಡದ ಹಿನ್ನೆಲೆಯಿಂದ ನೋಡಿದಾಗ ಈ ಸಂಚಿಕೆ ಎಷ್ಟೊಂದು ಮೌಲಿಕವಾಗಿದೆ ಅನಿಸಿತು. ಗುಂಥರ್ ಗ್ರಾಸ್, ಸತ್ವಂತ ನಾಗಮ್ಮ, ಬಿದೇಸಿಯಾ, ಕಾರಂತರ ಜೀವಂತ ಪಾತ್ರಗಳು, ನಾಡಿಗರ ಮೌನದಾಚೆಯ ಮಾತು, ಕವಿರಾಜಮಾರ್ಗ ಮಂಥನ ವಿಮರ್ಶೆ - ಎಲ್ಲ ಲೇಖನಗಳು ಮತ್ತಷ್ಟು ಓದನ್ನು ಪ್ರಚೋದಿಸುತ್ತವೆ. The Last Station ಕುರಿತಂತೆ ನಿಮ್ಮ ಲೇಖನ ಓದಿದವನೇ ಬೆಂಗಳೂರಿನ ನನ್ನ ಸ್ನೇಹಿತರಿಗೆ ಫೋನ್ ಮಾಡಿ ಪುಸ್ತಕ ಕೊಳ್ಳುವಂತೆ ಸೂಚಿಸಿದೆ. ತರುಣಸಾಗರರ ಬಗ್ಗೆ ನಿಮ್ಮ ಲೇಖನ ಓದಿ ನನಗೇ ನನ್ನ ಬಗ್ಗೆ ನಾಚಿಕೆಯಾಯಿತು. ಭೇಟಿ ಮಾಡುವ ಒಂದು ಅವಕಾಶವಿದ್ದಾಗಲೂ ನಾನೇ ಕಳೆದುಕೊಂಡೆ. ಸಂಕಲನ ಪತ್ರಿಕೆಯ ಲೇಖಕರ ಬಳಗ ವಿಸ್ತಾರವಾಗಿದೆ. ಕಿರುಪತ್ರಿಕೆಗಳು ಹೀಗೆಯೇ ಇರಬೇಕು. ನಿಮ್ಮ ಪರಿಶ್ರಮ, ಶ್ರದ್ಧೆಗೆ ಅಭಿನಂದನೆಗಳು.
-ಕೆ.ಸತ್ಯನಾರಾಯಣ, ಕೊಲ್ಹಾಪುರ.

ಸಂಕಲನ ೩೭ರಲ್ಲಿ ಕೆಲವು ಅಪೂರ್ವವಾದ ಲೇಖನಗಳಿವೆ. ತಮ್ಮ `ಶ್ರೀರಂಗರ ಸಾಮಾಜಿಕ ಕಾರ್ಯಗಳು', ಜಯಾ ಪ್ರಾಣೇಶ್ ಅವರ `ಜೋಗಿ' ಮತ್ತು ಸೋಮಶೇಖರ ರಾವ್ ಅವರ `ನನ್ನ ಅವ್ವ ನನ್ನ ಅಪ್ಪ' ಮತ್ತು ಪುಸ್ತಕ ಪರಿಶೀಲನೆಗಳು ಗಮನಾರ್ಹ ಬರಹಗಳು. ನನಗೆ ಬೇಕಾದ ಕೆಲವು ವಿವರಗಳು ಈ ಲೇಖನಗಳಿಂದ ನನಗೆ ದೊರಕಿವೆ.
-ಪ್ರೊ.ಜಿ.ವೆಂಕಟಸುಬ್ಬಯ್ಯ, ಬೆಂಗಳೂರು.

ಸಂಕಲನದಲ್ಲಿ ನೀವು ಒದಗಿಸುತ್ತಿರುವ ವೈವಿಧ್ಯಮಯ ಮತ್ತು ಮೌಲಿಕ ಲೇಖನಗಳಿಗೆ ಹೋಲಿಸಿದರೆ ನಾವು ನೀಡುತ್ತಿರುವ ಚಂದಾಹಣ ಬಹಳ ಕಡಿಮೆಯೆಂದೇ ನನ್ನ ಅನಿಸಿಕೆ. ಆದರೂ ಚಂದಾದಾರರು ಸಕಾಲದಲ್ಲಿ ಚಂದಾ ನವೀಕರಿಸಿ ಸಹಕರಿಸುತ್ತಿಲ್ಲವೆಂದು ತಿಳಿದು ಬಹಳ ಬೇಸರವಾಯಿತು. ಕನ್ನಡದಲ್ಲಿ ಒಂದು ಉತ್ತಮ ಪತ್ರಿಕೆಯ ಪ್ರಕಟಣೆಯ ಹಿಂದೆ ಶ್ರಮವೆಷ್ಟಿದೆ! ಅದನ್ನು ಪೋಷಿಸುವ, ಉಳಿಸುವ ಜವಾಬ್ದಾರಿ ಕನ್ನಡಿಗರಿಗೆ ಇರಬೇಡವೆ? ಪ್ರತಿ ಸಂಚಿಕೆಗೆ ಎಷ್ಟು ಕಡಿಮೆ ಬೀಳುತ್ತದೆ ತಿಳಿಸಿ. ಅಷ್ಟನ್ನು ನಾನು ಕೊಡುತ್ತೇನೆ. ಆದರೆ ಯಾವ ಸಂದರ್ಭದಲ್ಲಿಯೂ `ಸಂಕಲನ'ವನ್ನು ನಿಲ್ಲಿಸುವ ಯೋಚನೆ ಮಾಡಬೇಡಿ. ಸುಮ್ಮನೆ ಉಪಚಾರಕ್ಕಾಗಿ ಹೇಳುತ್ತಿಲ್ಲ. ನಿಜವಾಗಿ, ಆತ್ಮೀಯವಾಗಿ, ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ.
-ಸದಾನಂದ ಸುವರ್ಣ, ಮಂಗಳೂರು.

ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕಳೆದ ಏಳು ವರ್ಷಗಳಿಂದ ಎರಡು ತಿಂಗಳಿಗೊಮ್ಮೆ ಎಂಬಂತೆ ನಿರಂತರವಾಗಿ, ನಿಯಮಿತವಾಗಿ ಹೊರತರುತ್ತಿದ್ದ `ಸಂಕಲನ' ದ ಹಳೆಯ ಸಂಚಿಕೆಗಳನ್ನು ತಿರುವುತ್ತಿದ್ದರೆ ಅದು ಸದ್ದಿಲ್ಲದೆ, ಪ್ರಚಾರವಿಲ್ಲದೆ ಮಾಡುತ್ತ ಬಂದ ಅದ್ಭುತ ಕೆಲಸ ಅಚ್ಚರಿಹುಟ್ಟಿಸುತ್ತದೆ. ಆದರೆ ಈಗ ನಲವತ್ತೆರಡನೆಯ ಸಂಚಿಕೆಯೇ ಕೊನೆಯದು ಎಂದಿದ್ದಾರೆ ಪಟ್ಟಣಶೆಟ್ಟಿಯವರು!

"ವಿವಿಧ ಕಾರಣಗಳಿಂದಾಗಿ ಇದು ಪ್ರಕಟಣೆಯ ಕೊನೆಯ ವರ್ಷ, ಮತ್ತು ಮುಂದಿನ ಸಂಚಿಕೆ ಸಂಕಲನ -೪೨ ಕೊನೆಯ ಸಂಚಿಕೆ ಎಂದು ತಿಳಿಸಲು ಹರ್ಷ ಮತ್ತು ವಿಷಾದಗಳ ಮಿಶ್ರ ಭಾವನೆ ನಮ್ಮಲ್ಲಿದೆ." ಎನ್ನುತ್ತಾರೆ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಹೇಮಾ ಪಟ್ಟಣಶೆಟ್ಟಿ. ಕಳೆದ ಕೆಲವಾರು ತಿಂಗಳಿಂದ ಸಂಕಲನ ನಿಲ್ಲುವ ಮಾತಿತ್ತು. ಎರಡು ಮೂರು ವರ್ಷಗಳ ಹಿಂದೊಮ್ಮೆ ವಿಜಯಕರ್ನಾಟಕದ ವಿಶ್ವೇಶ್ವರ ಭಟ್ಟರು ಭಾನುವಾರದ ಸಂಪಾದಕೀಯದಲ್ಲಿ ಇಂಥ ನಿಲುಗಡೆಯ ಸುದ್ದಿ ಬರೆದುದನ್ನು ಓದಿಯೇ ನಾನೂ ಚಂದಾದಾರನಾಗಿದ್ದು!

ಇಂಥ ಒಳ್ಳೆಯ ಪತ್ರಿಕೆಯೊಂದು ನಿಂತು ಹೋಗಬೇಕೆ? ೩೭ನೆಯ ಸಂಚಿಕೆಯಲ್ಲಿ ಹೇಳಿದಂತೆ ಕೇವಲ ನೂರರಷ್ಟು ಮಂದಿ ಚಂದಾ ನವೀಕರಿಸಿದ್ದರಂತೆ. ಅದೂ ವಾರ್ಷಿಕ ಚಂದಾ ಕೇವಲ ಇನ್ನೂರು ರೂಪಾಯಿಯಷ್ಟೇ. ಆಲಸ್ಯ, ಅವಜ್ಞೆ ಮತ್ತು ಕೆಲವೊಮ್ಮೆ ಕಳಿಸಿದರಾಯಿತು ಎಂಬ ನಿರ್ಲಕ್ಷ್ಯ. ಆದರೂ ಕನ್ನಡಕ್ಕಾಗಿ ಹೋರಾಡುವವರ ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು ತಮಾಷೆಯಾಗಿದೆಯಲ್ಲವೆ?

ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಈಮೇಲ್ ವಿಳಾಸ: siddhaling.pattanshetti@rediffmail.com ಅಥವಾsankalana.sp@gmail.com
ಮೊಬೈಲ್: 94486 30637
ಅಂಚೆ ವಿಳಾಸ: ಹೂಮನೆ, ಶ್ರೀದೇವಿ ನಗರ, ವಿದ್ಯಾಗಿರಿ, ಧಾರವಾಡ - 580 004

5 comments:

shreedevi kalasad said...

ಈವತ್ತೇ ಮೇಲ್ ಮಾಡಿದೆ ಪಟ್ಟಣಶೆಟ್ಟಿಯವರಿಗೆ. ‘ಸಂಕಲನ’ಕ್ಕಾಗಿ.

ನರೇಂದ್ರ ಪೈ said...

ತುಂಬ ಒಳ್ಳೆಯದು ಶ್ರೀದೇವಿಯವರೆ. ಆದರೆ ಸಮಸ್ಯೆ ಬರೇ ಹಣಕಾಸಿನದ್ದಿರಲಾರದು. ಒಬ್ಬ ಸಂಪಾದಕನಾಗಿ ಯಾರೇ ಆದರೂ ಧಾರೆಯೆರೆಯ ಬೇಕಾದ ಸಮಯ, ಶ್ರಮ ಮತ್ತು ಕಾಳಜಿಯನ್ನು ಎಣಿಸಿದರೇ ನೀವಿದನ್ನು ಮಾಡಿ ಮಾಡಿ ಎಂದು ಹೇಳುವುದಕ್ಕೂ ನಾಲಗೆ ಏಳುವುದಿಲ್ಲ. ನಾವೇ ಆಗಿದ್ದರೆ ಮಾಡುತ್ತಿದ್ದೆವೆ...? ಅಪರೂಪಕ್ಕೊಬ್ಬರು ಸಿದ್ಧಲಿಂಗ ಪಟ್ಟಣಶೆಟ್ಟಿ, ಡಿ.ವಿ.ಪ್ರಹ್ಲಾದ, ವಿವೇಕ ಶಾನಭಾಗ...ಹೀಗೆ. ರಾಘವೇಂದ್ರ ಪಾಟೀಲರು ಅಷ್ಟು ಚೆನ್ನಾಗಿ ಬರುತ್ತಿದ್ದ ಸಂವಾದವನ್ನು ನಿಲ್ಲಿಸಿಯೇ ಬಿಟ್ಟರು. ಹಾಗೆ ತುಂಬ ಪತ್ರಿಕೆಗಳು ನಿಂತಿವೆ. ವಿವೇಕರಂತೂ ಇಂಥ ಪತ್ರಿಕೆಗಳಿಗೆ ಸೀಮಿತ ಅವಧಿಯ ಆಯುರ್ಮಾನವಿರುವುದು ಸಹಜವೇ ಎಂದಿದ್ದಾರೆ. ಆದರೂ ನೋಡೋಣ, ನಿಮ್ಮಂಥವರ ಒಂದು ಮಾತು, ಒಂದು ಉತ್ತೇಜನ ಎಂಥ ಸ್ಪೂರ್ತಿಯನ್ನೂ ತರಬಲ್ಲದು...
ಸಂಕಲನ ಉಳಿದರೆ ನಿಮಗೆಲ್ಲ ನನ್ನ ಪರವಾಗಿ ಮತ್ತೂ ಒಂದು ಧನ್ಯವಾದ...

shreedevi kalasad said...

ಪೈಗಳೆ ನೀವು ಹೇಳುವುದು ನಿಜ. ಮೌಲ್ಯಯುತವಾದದ್ದು ಪ್ರಚಾರ ಬಯಸುವುದಿಲ್ಲ. ಅದಕ್ಕೇ ಅದರ ಆಯಸ್ಸು ಕಡಿಮೆ. ಆದರೆ ಹೀಗಾಗಬಾರದಲ್ಲವೆ?

ನರೇಂದ್ರ ಪೈ said...

ಹೀಗಾಗಬಾರದಿತ್ತು ನಿಜ ಶ್ರೀದೇವಿಯವರೆ. ಆದರೆ ವಸ್ತುಸ್ಥಿತಿ ಹಾಗಿರುವುದು ಕೂಡ ನಿಜ. ಅದಕ್ಕೆ ಎಲ್ಲೋ ನಾವು ಕೂಡಾ ಬಾಧ್ಯಸ್ಥರು ಅನ್ನುವುದು ಕೂಡ ನಿಜ. ಕಾರಂತರ ಒಂದೊಂದೇ ಕಾದಂಬರಿಗಳನ್ನು ಓದುತ್ತಿದ್ದರೆ ಇದೆಲ್ಲ ಯಾವತ್ತೂ ಇದ್ದಿದ್ದು ಹಾಗೇನೇ, ನಾವು ಮಾತ್ರ ಈಗಷ್ಟೇ ಗಮನಿಸ್ತಿದೀವಿ ಅನಿಸುತ್ತದೆ. ಪ್ರಚಾರ, ಹಣ, ಕೀರ್ತಿ ಯಾವುದನ್ನೂ ನಂಬಿ ಅದೇ ನಿಜ ಯಶಸ್ಸು ಎನ್ನುವ ಹಾಗಿಲ್ಲ. ಆದರೆ ಹಾಗನಿಸುವ ಹಾಗೆ ಅವೆಲ್ಲ ಜಗಮಗಿಸುತ್ತಿರುವುದು ಮತ್ತು ಮಂಕು ಕವಿಸುವುದು ಸತ್ಯ. ಇದೊಂದು ವಿರೋಧಾಭಾಸಗಳ ಜಗತ್ತು.

shreedevi kalasad said...

ಹೌದು ಪೈಗಳೆ. ಇದೆಲ್ಲ ಎಲ್ಲ ಕಾಲಕ್ಕೂ ಇದ್ದಿದ್ದೇ. ಇವೆಲ್ಲ ನಮ್ಮಷ್ಟಕ್ಕೆ ನಾವೇ ಯೋಚಿಸಿಕೊಂಡು, ಮಾಡುವಂಥ ಕೆಲಸ- ವಿಷಯಗಳು. ಬೇರೊಬ್ಬರಿಂದ ಕೇಳಿ, ಹೇಳಿಸಿಕೊಂಡು ಮಾಡುವಂಥದಲ್ಲ. ಇದೆಲ್ಲ ಸಾಧಿಸಬೇಕೆಂದರೆ ಅಂಥ ವಾತಾವರಣ ಮುಖ್ಯ.