Wednesday, September 17, 2008

ಮೊಮ್ಮಕ್ಕಳು ಹೇಳಿದ ಅಜ್ಜೀಕತೆ


ಲಂಕೇಶ್‌ರ ಲೇಖನಗಳ ಸಂಗ್ರಹವಾದ `ಸಾಹಿತಿ,ಸಾಹಿತ್ಯ, ವಿಮರ್ಶೆ' ಕೃತಿಯಲ್ಲಿ ಮೊದಲು ಈ ಪುಸ್ತಕದ ಬಗ್ಗೆ ಓದಿದ್ದೆ. ಈಚೆಗೆ ಎಚ್.ವೈ ಶಾರದಾ ಪ್ರಸಾದರು ನಿಧನರಾದಾಗ ಪ್ರಕಟವಾದ ಡಾಯು.ಆರ್.ಅನಂತಮೂರ್ತಿಯವರ "ಶೌರಿ ಎಂಬ ರುಜು; ಶಾರದಾ ಪ್ರಸಾದ್ ಕುರಿತು ಒಂದು ಸ್ವಗತ" (ಋಜುವಾತು ಬ್ಲಾಗ್, ಸೆಪ್ಟೆಂಬರ್ 7ರ ಉದಯವಾಣಿ ಸಾಪ್ತಾಹಿಕ ಸಂಚಿಕೆ) ಲೇಖನದಲ್ಲಿ ಮತ್ತೊಮ್ಮೆ ಇದೇ ಪುಸ್ತಕದ ಉಲ್ಲೇಖವಿತ್ತು. ಲಂಕೇಶರ ಅತ್ಯುತ್ತಮವಾದ ರಿವ್ಯೂಗಳಲ್ಲಿ ಈ ಕೃತಿ ಕುರಿತ ರಿವ್ಯೂ ಕೂಡ ಒಂದು ಎಂದು ಅನಂತಮೂರ್ತಿಯವರು ಬರೆಯುತ್ತಾರೆ.
ಇದೊಂದು ಪುಟ್ಟ ಪುಸ್ತಕ. ಹೆಗ್ಗೋಡಿನ ಅಕ್ಷ್ರರ ಪ್ರಕಾಶನ 1994ರಲ್ಲಿ ಹೊರತಂದಿರುವ ಈ ನಲವತ್ತಾರು ಪುಟಗಳ, ಇಪ್ಪತ್ತೈದು ರೂಪಾಯಿ ಬೆಲೆಯ ಪುಸ್ತಕದ ಪ್ರತಿಗಳು ಈಗಲೂ ಲಭ್ಯವಿರುವುದು ಒಂದರ್ಥದಲ್ಲಿ ಖುಶಿಕೊಟ್ಟಿತು. ಎಂಟು ಮಂದಿ ಮೊಮ್ಮಕ್ಕಳು ಕಂಡ, ಈ ಅಜ್ಜಿ ಜಗತ್ತಿನಿಂದ ಮರೆಯಾದ 33 ವರ್ಷಗಳ ನಂತರ ಆಕೆಯ ವ್ಯಕ್ತಿತ್ವ, ಅವಳೊಂದಿಗಿನ ತಮ್ಮ ಒಡನಾಟವನ್ನೆಲ್ಲ ನೆನೆದು ಬರೆದ ಲೇಖನಗಳ ಸಂಗ್ರಹವಿದು ಎಂದರೆ ಏನನ್ನೂ ಹೇಳಿದಂತಾಗಲಿಲ್ಲ ಅನಿಸುತ್ತದೆ. ಇದನ್ನು ಬರೆಯುವ ಹೊತ್ತಿಗೆ ಈ ಮೊಮ್ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿ ತಾವೂ ನಡುವಯಸ್ಸು ದಾಟಿದವರಾಗಿದ್ದರು. ಅತ್ಯಂತ ಹಿರಿಯರಾದ ಎಚ್.ವೈ ಶಾರದಾಪ್ರಸಾದ್ ಅವರಿಗೆ ಆಗ ಎಪ್ಪತ್ತು, ಅತ್ಯಂತ ಕಿರಿಯ ನೀರಜ ಅಚ್ಯುತರಾವ್ ಅವರಿಗೆ ಐವತ್ತು ದಾಟಿತ್ತು. ಪುಸ್ತಕದ ಆರಂಭದಲ್ಲೇ ಎಚ್.ವೈ ಶಾರದಾಪ್ರಸಾದ್ ಬರೆದಿರುವ ಮಾತುಗಳು ಈ ಪುಸ್ತಕದ ಹಿಂದೆ ಮಿಡಿಯುವ ಮನಸ್ಸುಗಳ ಬಗ್ಗೆ ಹೇಳುತ್ತದೆ:
"ಮಕ್ಕಳು ಸ್ವಾರ್ಥಿಗಳು. ಮೊಮ್ಮಕ್ಕಳು ಮತ್ತೂ. ನಾವೆಲ್ಲ ಮಕ್ಕಳಾಗಿದ್ದಾಗ ಹಿರಿಯರ ಪ್ರೀತಿ ನಮ್ಮ ಆಜನ್ಮ ಹಕ್ಕು ಎಂಬ ಭಾವನೆಯಿಂದ ಅದನ್ನು ಹೀರಿ ಬೆಳೆದು ಬಂದವರಲ್ಲವೆ? ಬೆಳೆಯುವ ಭರದಲ್ಲಿ ಮಿಕ್ಕವರಿಗೆ ಸಲ್ಲಬೇಕಾದನ್ನು ಸಲ್ಲಿಸಿದೆವೆ?
ನಮ್ಮ ಮನೆಯಲ್ಲಿ ಒಬ್ಬ ಅಜ್ಜಿಯಿದ್ದರು, ನಮ್ಮ ತಂದೆಯ ತಾಯಿ. ಸುಮಾರು ನೂರು ವರ್ಷ ಬದುಕಿ ಮೂವತ್ತುಮೂರು ವರ್ಷದ ಹಿಂದೆ ತೀರಿ ಹೋದರು. ಆಕೆಯಿದ್ದಾಗ ಆಕೆ ನಮಗೊಂದು ತಲೆ ನೋವು ಎಂಬಂತೆ ನಡೆದುಕೊಂಡೆವು. ತಪ್ಪು ಮಾಡಿದೆವೆಲ್ಲಾ ಎಂದು ನಾವೇ ಅಜ್ಜ ಅಜ್ಜಿಯರಾಗುತ್ತಾ ಬಂದಿರುವ ಈಗ ಅನಿಸಹತ್ತಿದೆ.
ಪ್ರತಿ ದೀರ್ಘಜೀವಿಯೂ ಇತಿಹಾಸದ ಒಂದು ಪುಸ್ತಕವಿದ್ದಂತೆ. ಕಾಲಗತಿಯ ಛಾಪು ಅವರ ಮೇಲಿರುತ್ತದೆ. ನಮ್ಮ ಅಜ್ಜಿಯನ್ನು ನೆನೆಸಿಕೊಳ್ಳುತ್ತ ಬದಲಿಸಿರುವ ಸಮಾಜದ ಚಿತ್ರವೂ ನಮಗೆ ಅರಿವಾಗುತ್ತದೆ."
ಈ ಪುಸ್ತಕವನ್ನು ಸಂಪನ್ನಗೊಳಿಸಿದ ಮೊಮ್ಮಕ್ಕಳಲ್ಲಿ ಎಚ್.ವೈ ಶಾರದಾಪ್ರಸಾದ್ ಎಲ್ಲರಿಗೂ ಗೊತ್ತು. ನಾರಾಯಣದತ್ತ ಒಬ್ಬ ಹಿಂದೀ ಪತ್ರಕರ್ತ, ಎಚ್.ವೈ ಮೋಹನರಾಂ ಸಸ್ಯಶಾಸ್ತ್ರದ ಪ್ರಾಧ್ಯಾಪಕ, ಕಸ್ತೂರಿ ಸುಬ್ರಹ್ಮಣ್ಯಂ ಮನೋವಿಜ್ಞಾನಿ, ಎಚ್.ವೈ ರಾಜಗೋಪಾಲ್ ಇಂಜಿನಿಯರ್. ಮೂವರು ಗೃಹಿಣಿಯರು. ಹೀಗೆ ಇಲ್ಲಿನ ನೋಟಗಳಲ್ಲಿ ವಿವರಗಳ ಮಟ್ಟಿಗೆ ಪುನರುಕ್ತಿಯಿದ್ದರೂ ಒಳನೋಟದಲ್ಲಿ ಹೊಸತನ, ಹೊಸ ದೃಷ್ಟಿ ಇದೆ. ಈ ಪುಸ್ತಕವನ್ನು ಕುರಿತು ಬರೆಯುತ್ತ ಕೊನೆಯಲ್ಲಿ ಲಂಕೇಶ್ ಹೇಳುತ್ತಾರೆ,
"ಕೊನೆಯದಾಗಿ ಈ ಪುಟ್ಟ ಪುಸ್ತಕ ಮನುಷ್ಯ ನಿಜಕ್ಕೂ ಯಾತಕ್ಕಾಗಿ ಬದುಕುತ್ತಾನೆ, ಯಾವುದರಿಂದ ಮನುಷ್ಯನಾಗಿ ಉಳಿಯುತ್ತಾನೆ ಎಂಬ ಪ್ರಶ್ನೆಗೆ ಸೂಚ್ಯ ಉತ್ತರ ಕೊಡುತ್ತದೆ. ಈ ಬದುಕಿನಲ್ಲಿ ಕೆಲವರು ಮನೆ, ಆಸ್ತಿ, ಒಡವೆ, ಸ್ಥಾನಮಾನಕ್ಕಾಗಿ ಪರದಾಡಿ ಕಣ್ಮರೆಯಾಗುತ್ತಾರೆ; ಕೆಲವರು ಅಧಿಕಾರಕ್ಕಾಗಿ, ವರ್ಚಸ್ಸಿಗಾಗಿ ದಿನಗಳನ್ನು ಸವೆಸಿ ಹೋಗುತ್ತಾರೆ; ಎಲ್ಲೋ ಕೆಲವರು ಮಾತ್ರ "ಅಯ್ಯೋ, ಅಜ್ಜಿ ಹೇಳಿದ ಹಸೆಯ ಹಾಡನ್ನು ಬರೆದುಕೊಳ್ಳಲಿಲ್ಲವಲ್ಲ" ಎಂದು ಪರಿತಪಿಸಿ, ಬರೆದುಕೊಂಡ ಹಾಡುಗಳಿಂದ ಆನಂದ ಪಟ್ಟು ಮುಂದಿನ ಜನಾಂಗಕ್ಕೆ ಕೊಡುತ್ತಾರೆ. ಈ ಕೊನೆಯವರೇ ಇಲ್ಲಿ ನಮ್ಮಲ್ಲೆಲ್ಲ ನೆನಪು, ಸಂಸ್ಕೃತಿ, ಸಾಹಿತ್ಯದ ಅರ್ಥವಂತಿಕೆ ಸೂಚಿಸಿ ಬದುಕನ್ನು ಸಹ್ಯಗೊಳಿಸುತ್ತಾರೆ."
ಈಗ ಶಾರದಾಪ್ರಸಾದ್ ಕೂಡ ಇಲ್ಲ. ಪುಸ್ತಕದ ಕೊನೆಯ ಲೇಖನ ನೀರಜ ಅಚ್ಯುತರಾವ್ ಅವರದ್ದು, ಅಜ್ಜಿಯ ಕೊನೆಯ ದಿನಗಳ ಕುರಿತದ್ದು. ಅದನ್ನು ಓದಿ ಮುಗಿಸುತ್ತಿದ್ದಂತೆ ವಿಷಣ್ಣ ಭಾವ ಕವಿಯುತ್ತದೆ. ಮುದುಕರನ್ನು ನೋಡುವ ನಮ್ಮ ದೃಷ್ಟಿಕೋನವನ್ನೇ ಈ ಪುಸ್ತಕ ಬದಲಿಸಬಲ್ಲ ಕಸು ಹೊಂದಿರುವುದು ಅಚ್ಚರಿ ಹುಟ್ಟಿಸುತ್ತದೆ.

No comments: