Wednesday, September 17, 2008

ಅಹ್‌ಕ್ಯೂವಿನ ಸತ್ಯಕಥೆ


ನೀನಾಸಂನವರ ನಾಟಕಗಳನ್ನು ಬಹಳ ಹಿಂದಿನಿಂದಲೂ ತಪ್ಪದೆ ನೋಡುತ್ತಿದ್ದೆ. ನಿಜ ಹೇಳಬೇಕೆಂದರೆ ರಂಗಭೂಮಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದ ನನಗೆ ಈ ನಾಟಕಗಳು ಇಷ್ಟವಾಗುತ್ತಿದ್ದುದು ಒಂದೇ ಕಾರಣಕ್ಕೆ, ಅದು ನಮ್ಮೆಲ್ಲ ನಾಗರಿಕ ಸೋಗಿನಾಚೆ ನಮ್ಮೆಲ್ಲರ ಒಳಗೆ ಮಿಡಿಯುತ್ತಿರುವ ಸಹಜವಾದ ಸ್ವಭಾವ, ದೌರ್ಬಲ್ಯ ಇತ್ಯಾದಿಗಳಿರುವ ಒಬ್ಬ ಸಾಮಾನ್ಯ ಮನುಷ್ಯನನ್ನು ತಮಾಷೆ ಮಾಡುತ್ತಲೇ ಕಣ್ಣಿಗೆ ಕಟ್ಟುವಂತೆ ಮಾಡುತ್ತಿತ್ತು. ನಮ್ಮೊಳಗಿನ ನಮ್ಮನ್ನು, ಸಾಧಾರಣವಾಗಿ ಅಡಗಿಸಲ್ಪಟ್ಟವನನ್ನು ನಮಗೆ ಕಾಣಿಸುತ್ತಿತ್ತು.


ಜಂಟಲ್‌ಮನ್‌ಗಳಲ್ಲೇ ಜಂಟಲ್‌ಮನ್ ಆಗಲು ಹೊರಟ ಒಬ್ಬ ಮಾಮಾಮೋಶಿಯೋ, ಕೊಳಚೆ ಕಲ್ಮಶಗಳನ್ನು ತುಂಬಿಕೊಳ್ಳುವ ಒಂದು ಚರ್ಮದ ಚೀಲವನ್ನು ನನ್ನೆದುರು ಹೊಗಳಬೇಡಿ ಎಂದು ಹೆಣ್ಣಿನ ಬಗ್ಗೆ ದಪ್ಪದಪ್ಪದ ತತ್ವಶಾಸ್ತ್ರದ ಹೊತ್ತಗೆ ಹೊತ್ತು ಸಿಡುಕುವ, ಮುಂದೆ ಹೆಣ್ಣಿನ ಮೋಹಕ್ಕೆ ಎಲ್ಲರಿಗಿಂತ ಹೆಚ್ಚು ಮರುಳಾಗುವ ಮಿಸ್ ಸದಾರಮೆಯ ರಾಜಕುಮಾರನೋ, ರಂಗದ ತುಂಬ ಎರಡೇ ಹೆಜ್ಜೆಗಳಲ್ಲಿ ಆವರಿಸಿಕೊಂಡಂತೆ ನಡೆದಾಡುವ ದುರಾಸೆಯ ಮೀಡಿಯಾಳ ಮಾವನೋ, ನಿನ್ನ ಮೈ ಸ್ವಲ್ಪ ಸ್ವಚ್ಛವಾಗಿದ್ದರೆ ನಿನ್ನ ಮೇಲೆ ಉಗಿಯಬಹುದಾಗಿತ್ತು ಎಂದು ಬೈಯ್ಯುವ ಅಥೆನ್ಸಿನ ಅರ್ಥವಂತದ ಹುಚ್ಚನೋ, ಸಮ್ಯಕ್ ಜ್ಞಾನಕ್ಕೆ ಬೆಂಕಿಬಿತ್ತು, ಸೊಳ್ಳೆಗಳು, ಕ್ರಿಮಿಕೀಟಗಳು, ನರಕ ಎಂದು ತಪಸ್ಸನ್ನು ವರ್ಣಿಸುವ ಅಗ್ನಿ ಮತ್ತು ಮಳೆಯ ಯವಕ್ರೀಯೋ....ಮಾಡುತ್ತಿದ್ದ ಮ್ಯಾಜಿಕ್ ಅದು. ಅಲ್ಲಿ ನಕ್ಕು ಕಳೆಯುತ್ತಿದ್ದ ಇವನ ವೇಷ ಕ್ರಮೇಣ ನಮ್ಮದೇ ಎಂಬುದು ಅರಿವಾಗುತ್ತಿತ್ತು ಮತ್ತು ಅದಕ್ಕಾಗಿಯೇ ಅದು ಅಷ್ಟು ಆಪ್ತವಾಗಿದ್ದು, ನಗಿಸಿದ್ದು ಎನ್ನುವುದೂ ಅರಿವಾಗುತ್ತಿತ್ತು. ಕೆಲವು ದಿನಗಳ ವರೆಗೆ ಒಂದು ಗುಂಗಾಗಿ ಈ ನಾಟಕಗಳು ಕಾಡುತ್ತಿದ್ದವು, ಹೊಸ ಬಗೆಯ ಚಿಂತನೆಗೆ ಕಾರಣವಾಗುತ್ತಿದ್ದವು.


ಇಲ್ಲೊಂದು ಪುಸ್ತಕವಿದೆ, ಹೆಸರು `ಅಹ್‌ಕ್ಯೂವಿನ ಸತ್ಯಕಥೆ'. ಚೀನಾದ ಲೂ ಶೂನ್ ಕಾವ್ಯನಾಮದಿಂದ ಪ್ರಖ್ಯಾತರಾದ ಚೌ ಶಿ ಜೆಂಗ್ ಬರೆದ ಈ ಕಾದಂಬರಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ ಜಗದೀಶ ಮಂಗಳೂರಮಠ. ಪ್ರಜಾಪ್ರಭುತ್ವದ ಲೇವಡಿಯಂತಿರುವ ಈ ಕಾದಂಬರಿ ನಮಗೆ ಹೆಚ್ಚು ಅರ್ಥಪೂರ್ಣವೆನಿಸಲು ಎರಡೆರಡು ಕಾರಣಗಳಿವೆ. ಒಂದು ನಮ್ಮದೂ ಪ್ರಜಾಪ್ರಭುತ್ವ ದೇಶವಾಗಿರುವುದು, ಮತ್ತೊಂದು ಇದು ನಮ್ಮೊಳಗಿನ ಸಾಮಾನ್ಯ ಮನುಷ್ಯನನ್ನು ನಮಗೆ ಹೆಚ್ಚು ಸ್ಫುಟವಾಗಿ ತೋರಿಸುತ್ತಿರುವುದು.


ಸಾಮಾನ್ಯರಲ್ಲಿ ಸಾಮಾನ್ಯನಾದ ಈ ಅಹ್‌ಕ್ಯೂ ಕುರಿತು ಮುನ್ನುಡಿಯಲ್ಲಿ ಮಾಲತಿ ಪಟ್ಟಣಶೆಟ್ಟಿಯವರು ಹೀಗೆ ಹೇಳುತ್ತಾರೆ:
ಅಹ್‌ಕ್ಯೂ ಈ ಕಿರು ಕಾದಂಬರಿಯ ಮುಖ್ಯ ಪಾತ್ರ. ಆತ ಅತ್ಯಂತ ಬಡವ....ಕೂಲಿಕಾರ. ಅವನಿಗೊಂದು ನೆಲೆಯಿಲ್ಲ....ತೊಡಲು ಬಟ್ಟೆಯಿಲ್ಲ. ತಿಳಿದೊ, ತಿಳಿಯದೆಯೋ ಅವನು ಮಾಡುವ ತಪ್ಪುಗಳು ಹಲವು. ತನಗೆ ಸೇರದವರ ಜೊತೆ ಸದಾ ಜಗಳಾಡುತ್ತಾನೆ. ಹಾಯ್ದು ಹೋಗುವಾಗಲೆಲ್ಲ ದುರುಗುಟ್ಟಿ ನೋಡಿ ತನ್ನ ಅಹಮಿಕೆ ಸ್ಥಾಪಿಸಲು ಪ್ರಯತ್ನಿಸುತ್ತಾನೆ. ಮೇಲ್ವರ್ಗದವರ ಜೊತೆ ವರ್ತಿಸುವಾಗ ಮುಗ್ಧನಾಗಿದ್ದರೂ ಹಲವಾರು ಬಾರಿ ದಂಡನೆಗೆ ಒಳಗಾಗುತ್ತಾನೆ. ಜನಸಾಮಾನ್ಯರೂ ಸಹ ಅವನು ಬಡವ, ಕೆಳವರ್ಗದವ ಎಂದು ಪದೇ ಪದೇ ಅವನ ತಲೆಯನ್ನು ಗೋಡೆಗೆ ಅಪ್ಪಳಿಸಿ ಕ್ರೂರವಾಗಿ ಶಿಕ್ಷಿಸುತ್ತಾರೆ. ಆದರೂ ತಾನು ಯಾರಿಗಿಂತಲೂ ಕಡಿಮೆಯವನಲ್ಲ ಎಂಬ ಆತ್ಮಾಭಿಮಾನದಿಂದ ತಲೆಯೆತ್ತಿ ಅದೇ ಜನರ ಮುಂದೆ ನಡೆದಾಡುವ ರೀತಿ ಕುತೂಹಲಕಾರಿ."


ತನಗಾದ ಅವಮಾನವನ್ನು, ಮಾನಸಿಕ-ದೈಹಿಕ ನೋವನ್ನು ಈ ಅಹ್‌ಕ್ಯೂ ನೀಗಿಕೊಳ್ಳುವ ರೀತಿ ವಿಚಿತ್ರವಾಗಿದೆ. ತನಗಿಂತ ಅಸಮರ್ಥರ ಬಳಿ ತನ್ನ ಡೌಲು ತೋರಿಸುತ್ತ, ಬಲಶಾಲಿಗಳಿಂದ ಗೂಸಾ ತಿನ್ನುತ್ತ ಮತ್ತೆ ಮನಸ್ಸಿನಲ್ಲೇ ತಾನು ಅವರಿಗಿಂತ ಉತ್ತಮ ಎಂದು ಮೊಂಡು ವಾದಗಳಿಂದ ತನ್ನನ್ನೇ ತಾನು ಮುದಗೊಳಿಸಿಕೊಳ್ಳುತ್ತ ಈತ ಬದುಕಿಯೇ ಬದುಕುತ್ತಾನೆ. ಒಮ್ಮೆ ಪೆದ್ದನಂತೆ ಕೆಲಸದವಳ ಮೈಮೇಲೆ ಕೈ ಹಾಕಲು ಹೋಗಿ ಒದೆ ತಿನ್ನುತ್ತಾನೆ. ಹಣ ಮಾಡಿಕೊಂಡು ಬಂದು ಇಡೀ ಊರವರ ಗಮನ ಸೆಳೆದು ಅವರಲ್ಲಿ ಸುಪ್ತವಾಗಿರುವ ನಗರದ ವಸ್ತುಗಳ ಮೋಹವನ್ನು ಬತ್ತಲುಗೊಳಿಸುತ್ತಾನೆ. (ಇಲ್ಲಿ ಯಾಕೋ ನಮ್ಮ ಉಲ್ಲಾಸ ಹೆಗಡೆಯವರ ಕತೆ `ಪಂಚಾಮೃತ ಅಭಿಷೇಕ' ಪದೇ ಪದೇ ನೆನಪಾಗುತ್ತದೆ. ದುಬೈಯಿಂದ ಬಂದ ಮಾಬ್ಲು ಬಳಿ ವಯಾಗ್ರ ಇದೆ ಎಂಬ ಸುದ್ದಿ ಇಡೀ ಊರಿನಲ್ಲಿ ಮುದುಕರಿಂದ ಹುಡುಗರವರೆಗೆ ಮೂಡಿಸುವ ಸಂಚಲನ, ಕೊನೆಗೆ ಈ ಒಂದು ಭ್ರಮೆ ಗೋಪಾಳನನ್ನೂ ಭಟ್ಟರನ್ನೂ ತಲುಪಿಸುವ ನೆಲೆ ಸರಿಸುಮಾರು ಅಹ್‌ಕ್ಯೂನ ವ್ಯಾಪಾರದ ಕತೆಯಂತೆಯೇ ಇರುವುದೊಂದು ವಿಶೇಷ. ಈ ಕತೆ `ಹಲವಾರು ಕಲರವಗಳ ಊರಗಾಥೆ' ಸಂಕಲನದಲ್ಲಿದೆ). ಸರಕಾರ ಕೂಡ ಇಂಥ ನಿಷ್ಪಾಪಿಯೊಬ್ಬನ ಬಲಿಯಿಂದ ಕ್ರಾಂತಿಯತ್ತ ಆಕರ್ಷಿತರಾಗಬಹುದಾದ ಜನರನ್ನು ಎಚ್ಚರಿಸಲು ಸಾಧ್ಯ ಎಂದು ನಂಬಿ ಇವನನ್ನು ಕ್ರಾಂತಿಕಾರಿ ಎಂದು ಬಿಂಬಿಸಿ ಶಿರಚ್ಛೇದಕ್ಕೆ ಗುರಿಯಾಗಿಸುವುದು, ಈತ ಅದೊಂದು ಗೌರವದ ಸ್ಥಾನವೆಂದು ಭ್ರಮಿಸುತ್ತ ಸ್ವತಃ ಕ್ರಾಂತಿಕಾರಿಯಲ್ಲದಿದ್ದರೂ ಹೌದೆಂದು ತನ್ನನ್ನೇ ತಾನು ನಂಬಿಸಿಕೊಳ್ಳುತ್ತ ಹುತಾತ್ಮನ ಫೋಸು ಕೊಡುವುದು-ಸಾವಿನ ನೆರಳಿನಲ್ಲೂ ವಿಚಿತ್ರ, ವಿಲಕ್ಷಣ ಅನಿಸುತ್ತಿರುವಾಗಲೇ ಬೇರೊಂದು ಪಾತಳಿಯಲ್ಲಿ ಸಹಜವಾಗಿ ಕೂಡ ಕಾಣುವುದು ಗಮನಾರ್ಹ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಅಂತರ್ಗತವಾಗಿರುವ ದ್ವಂದ್ವ, ಗೊಂದಲ ಮತ್ತು ಭೋಳೇತನವನ್ನು ಕಾಣಿಸುವಂತೆಯೇ ನಾಗರಿಕ ಪ್ರಜೆಯ ಎಡಬಿಡಂಗಿತನ, ಪ್ರಚಾರಪ್ರಿಯತೆ ಮತ್ತು ಬದ್ಧತೆಯಿಲ್ಲದ ಬದುಕನ್ನು ಕೂಡ ಲೇವಡಿ ಮಾಡುವಂತಿದೆ.


ಕಾದಂಬರಿಯ ಧ್ವನಿ ತುಂಬ ನಿರ್ವಿಕಾರವಾದದ್ದು, ಒಂದು ಬಗೆಯ ವರದಿಯ ಶೈಲಿಯದ್ದು (ಇದೊಂದು ಜೀವನ ಚರಿತ್ರೆ, ಸತ್ಯಕ್ಕೆ-ವಾಸ್ತವಕ್ಕೆ ಬದ್ಧವಾದದ್ದು ಎಂದು ಆರಂಭದಲ್ಲೇ ಹೇಳಿಕೊಂಡಿದೆ). ಸಾಮಾನ್ಯನೊಬ್ಬನ ಬದುಕಿನ ಸುತ್ತ ಇದು ರೂಪುಗೊಂಡಿದೆಯಾದರೂ ಆ ಸಾಮಾನ್ಯನನ್ನು ಗೇಲಿ ಮಾಡುವ, ನಿಕೃಷ್ಟವಾಗಿಸಿ ಚಿತ್ರಿಸುವ ಬಗೆ ಇಲ್ಲಿ ಕಾಣುವುದಿಲ್ಲ. ಅವನ ಬದುಕಿನ ತೀರ ಸಾಮಾನ್ಯವೆನಿಸುವ ವಿದ್ಯಮಾನಗಳ ಯಥಾವತ್ ಚಿತ್ರಣ ಎನ್ನುತ್ತಲೇ ಆ ವಿವರಗಳಲ್ಲಿ ತುಂಬಿರುವ ಕಟುವ್ಯಂಗ್ಯವನ್ನು ಸಶಕ್ತವಾಗಿ ಕಾದಂಬರಿಕಾರ ನಮಗೆ ತಲುಪಿಸುತ್ತಾನೆ. ಅವನು ಹುಚ್ಚನೋ, ಅಸಂಬದ್ಧನೋ ಆಗಿ ಮೈತಳೆದಿಲ್ಲ ಇಲ್ಲಿ. ದೈಹಿಕವಾಗಿ ಕೊಂಚ ದುರ್ಬಲ, ಆರ್ಥಿಕವಾಗಿ ಬಡವ ಎಂಬುದನ್ನು ಬಿಟ್ಟರೆ ಬೇರೆ ಯಾವುದೆ ಸಾಮಾನ್ಯ ವ್ಯಕ್ತಿಗಿರುವಷ್ಟೇ ಘನತೆ, ಆತ್ಮಸಮ್ಮಾನ, ಸ್ವಾಭಿಮಾನ ಎಲ್ಲ ಅವನಲ್ಲಿ ಇರುವುದೇ ಅವನ ಮಹಾ ತೊಡಕಾಗುವುದು ಇಲ್ಲಿನ ವ್ಯಂಗ್ಯ. ಕೈಯಲ್ಲಿ ನಾಲ್ಕು ಕಾಸು ಓಡಾಡುವ ಸಂದರ್ಭದಲ್ಲಿ, ತಾತ್ಕಾಲಿಕವಾಗಿ ಅವನು ಈ ವಿಚಾರದಲ್ಲೂ ಒಂದು ಬಗೆಯ ಸಮಾನತೆಯನ್ನು ದಕ್ಕಿಸಿಕೊಳ್ಳುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ಯಾವುದೇ ಅಸಾಮಾನ್ಯತೆಯನ್ನು ಹೊರಿಸದೆ ಅವನ ಪಾತ್ರಚಿತ್ರಣ ಮೂಡಿಬಂದಿರುವುದೇ ಈ ಕಥಾನಕದ ಬಹಳ ಮುಖ್ಯವಾದ ತಂತ್ರವಾಗಿದೆ. ಅವನು ಯಾವುದೇ ಒಬ್ಬ ಸಾಮಾನ್ಯ ಓದುಗನ ಅಂತರಂಗವನ್ನು ತಲುಪುವ ಪಾತಳಿ ಬಹುಷಃ ಇದೇ ಆಗಿದೆ.


ಕಾದಂಬರಿಯ ತುಂಬ ಹಲವು ನಾಟಕೀಯ ಚಿತ್ರಣವಿರುವುದರಿಂದ ಒಂದು ರಂಗಕ್ರಿಯೆಯಾಗಿ ಬಹುಷಃ ಇದು ಹೆಚ್ಚು ಪರಿಣಾಮಕಾರಿಯಾಗಬಹುದು ಅಂತಲೂ ಅನಿಸುತ್ತದೆ. ಯಾಕೆಂದರೆ, ಕಾದಂಬರಿ ತನ್ನ ವಿವರಗಳು, ಸನ್ನಿವೇಶಗಳಾಚೆ ಒಂದು ಅನುಭವವಾಗಿ ನಮ್ಮನ್ನು ತಟ್ಟುತ್ತದೆ, ಬಹುಕಾಲ ಕಾಡುತ್ತ ಉಳಿಯುತ್ತದೆ. ಇಷ್ಟು ಪುಟ್ಟ ಕಾದಂಬರಿಯೊಂದು ಮೌನವಾಗಿಯೇ, ನಿರ್ಲಿಪ್ತ ಶೈಲಿಯಲ್ಲೇ ಮನಸ್ಸನ್ನು ಆವರಿಸುವುದು ವಿಶೇಷ. ಜಗದೀಶ ಮಂಗಳೂರಮಠ ಅವರ ಅನುವಾದ ಸೊಗಸಾಗಿದೆ, ನಮ್ಮ ನಾಡು-ನುಡಿಗೆ ಕಥಾನಕವನ್ನು ಹೊಂದಿಸಿ ಇಲ್ಲಿನದೇ ಕತೆಯೋ ಎಂಬಂತೆ ಇದನ್ನು ತರಲು ಅವರು ನಡೆಸಿದ ಪ್ರಯತ್ನ ಗಮನ ಸೆಳೆಯುತ್ತದೆ. ಅಲ್ಲಲ್ಲಿ ನೀಡಿರುವ ಫೂಟ್ ನೋಟ್‌ಗಳು ಕತೆಯನ್ನು ಮೂಲದ ಸೊಗಡಿನಲ್ಲೇ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ. ಅಚ್ಚಿನ ದೋಷಗಳು ಅಲ್ಲಲ್ಲಿ ಹಣಿಕಿಕ್ಕುತ್ತವಾದರೂ ಕಾದಂಬರಿಯ ಇತರ ಧನಾತ್ಮಕ ಅಂಶಗಳೆದುರು ಅಷ್ಟು ಮುಖ್ಯವಾಗುವುದಿಲ್ಲ.


`ಅಹ್‌ಕ್ಯೂವಿನ ಸತ್ಯ ಕಥೆ' - ಕನ್ನಡಕ್ಕೆ ಜಗದೀಶ ಮಂಗಳೂರಮಠ, ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ - 580 020, ಪುಟಗಳು 88, ಬೆಲೆ ರೂಪಾಯಿ ಐವತ್ತು.

3 comments:

ಸುಧನ್ವಾ said...

welcome.

Harish kera said...

Welcome back pai.
ಇಷ್ಟು ಮತ್ತು ಇಷ್ಟೊಂದು ಒಳ್ಳೆಯ ಲೇಖನಗಳನ್ನು ಕೊಡುವುದಾದರೆ, ನೀವು ಆಗಾಗ ಅಜ್ಞಾತವಾಸ ಮಾಡಿ ಬನ್ನಿ ಮಾರಾಯರೆ !
- ಹರೀಶ್ ಕೇರ

ನರೇಂದ್ರ ಪೈ said...

ಸುಧನ್ವ, ಹರೀಶ್,
ಇಬ್ಬರಿಗೂ ಥ್ಯಾಂಕ್ಸ್. ಆಗಾಗ ಈ ಮಂಗಳೂರಿನಲ್ಲಿ ತಲೆ ಕೂಡ ಹೊರಗೆ ಹಾಕದಂತೆ ಆಗುತ್ತಿದ್ದರೆ ಪುಸ್ತಕಗಳು ಮಾತ್ರ ನಮ್ಮನ್ನು ಕಾಪಾಡಬೇಕು! ರಜೆಗೆ ಕಾರಣ ಕೊಡಬೇಕಾಗಿಲ್ಲ, ಯಾಕೆ ಸುಮ್ಮನೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕೂತು ಕೂಚುಭಟ್ಟನ ತರ ಓದುತ್ತಾ ಇದ್ದೀ ಮಹರಾಯ ಎಂದು ಕೇಳುವವರಿಲ್ಲ! ಯಾಕಾದರೂ ಈ ಜನ ಹೊರಗೆ ಹೋಗಿ ಹೊಡೆದಾಡಿಕೊಂಡು ನರಳುತ್ತಾರೋ!