Thursday, October 30, 2008

ಬದುಕು, ಕತೆ, ಬರವಣಿಗೆ, ಓದುಗರು ಮತ್ತು ನಂಜು


ಕನ್ನಡದಲ್ಲಿ ಬರೆಯುವ ಕುರಿತಾಗಿಯೇ ಚಿಂತನೆಗೆ ಹಚ್ಚುವಂಥ ಜಾಣತನದ ಕೃತಿಯೊಂದು ಅದೂ ಕಾದಂಬರಿ ಪ್ರಕಾರದಲ್ಲಿ ಬಂದಿರುವುದು ವಿಶೇಷ.

1997ರಷ್ಟು ಹಿಂದೆಯೇ ಮನೋಹರ ಗ್ರಂಥ ಮಾಲೆಯಲ್ಲಿ, ಕೀರ್ತಿನಾಥ ಕುರ್ತಕೋಟಿಯವರ ಮುನ್ನುಡಿಯೊಂದಿಗೆ ಇಂಥ ಒಂದು ಕಾದಂಬರಿ ಬಂದಿತ್ತು. ಬರೆದವರು ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ಅಂಕಣಕಾರ ಕೆ. ಸತ್ಯನಾರಾಯಣ. ಕಾದಂಬರಿಯ ಹೆಸರು `ಸನ್ನಿಧಾನ'.

ಉಳ್ಳವರ ಮತ್ತು ಇಲ್ಲದವರ, ಸುಖದ ಮತ್ತು ಸಂಕಷ್ಟದ, ವೈಭೋಗದ ಮತ್ತು ನಿರ್ಗತಿಕರ ಕತೆಗಳು ಯಾಕೆ ಒಂದಾಗದ ಎರಡು ಬೇರೆ ಬೇರೆ ಕತೆಗಳಾಗಿಯೇ ಉಳಿಯುತ್ತವೆ ಎಂಬ ಸಾಮಾಜಿಕ, ಆರ್ಥಿಕ ಕಂದರಗಳ ಮಾತನಾಡುತ್ತ ಇಂಥ ವರ್ಗಗಳ ಮನುಷ್ಯ ಮತ್ತು ಮನಸ್ಸುಗಳ ಬಗ್ಗೆ ನಮ್ಮನ್ನು ಕಾಡುವಂಥ ಕತೆ ಹೆಣೆಯುತ್ತಾರೆ ಸತ್ಯನಾರಾಯಣ. ಅದಕ್ಕಿಂತ ಮುಖ್ಯವಾಗಿ ಕತೆಗಾರನ ಸಂಬದ್ಧ ಮತ್ತು ಅಸಂಬದ್ಧ ಕಾಣ್ಕೆಗಳ ಕುರಿತು ಸಾಕ್ಷೀಪ್ರಜ್ಞೆಯೊಂದು ಉದ್ದಕ್ಕೂ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಸಂಬದ್ಧ ಕತೆಯೊಂದನ್ನು, ಸಾಮಾಜಿಕವಾಗಿ, ತಾತ್ವಿಕವಾಗಿ ಅರ್ಥಪೂರ್ಣವಾದದ್ದನ್ನು ತನ್ನ ಕತೆಯಲ್ಲಿ ಬಿಂಬಿಸ ಹೊರಡುವ ಕತೆಗಾರ ಬದುಕಿನ ಕಟು ಸತ್ಯಗಳಿಂದಲೂ ಸಹಜ ಸೌಂದರ್ಯದಿಂದಲೂ ಕೊನೆಗೆ ಕನಿಷ್ಠ ಮಾನವೀಯತೆಯಿಂದಲೂ ದೂರ ದೂರವೇ ಉಳಿದುಬಿಡಬಹುದೆಂಬ ಸೂಕ್ಷ್ಮವನ್ನೂ ಅವರ ಈ ಕಾದಂಬರಿ ಸೂಚಿಸುತ್ತದೆ.

ಕತೆ ಬರೆಯುವುದು ಒಂದರ್ಥದಲ್ಲಿ ತೀರಾ ಅಸಹಜ ವಿದ್ಯಮಾನ. ಮನುಷ್ಯನನ್ನು ಹೊರತು ಪಡಿಸಿದರೆ ಜಗತ್ತಿನ ಬೇರೆ ಯಾವುದೇ ಜೀವಿಗೆ ಹೀಗೆ ತನ್ನದೇ ಕಲ್ಪನೆಯ ಅಥವಾ ಕನಸಿನ ಜಗತ್ತೊಂದರ ವಿದ್ಯಮಾನಗಳನ್ನು ಒಂದು ಅರ್ಥಪೂರ್ಣ ಹಂದರದಲ್ಲಿಟ್ಟು ಭಾಷೆಯ ಮೂಲಕ ಅದನ್ನು ಸಹಜೀವಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ ಅನಿಸುವುದಿಲ್ಲ. (ನಿಜ ಯಾರಿಗೆ ಗೊತ್ತು!) ಆದರೆ ಮನುಷ್ಯ ಇದನ್ನು ಮಾಡುತ್ತ ಬಂದಿದ್ದಾನೆ. ಶ್ರೀರಾಮ ಇದ್ದನೋ ಇರಲಿಲ್ಲವೋ ಅಥವಾ ಶ್ರೀಕೃಷ್ಣ ಇದ್ದನೋ ಇರಲಿಲ್ಲವೋ ಎಂಬ ಪ್ರಶ್ನೆ ಬಿಡಿ. ಅವರು ರಾಮಾಯಣ ಅಥವಾ ಮಹಾಭಾರತದಲ್ಲಿ ಇದ್ದಂತೆ ಅಥವಾ ಸದ್ಯದ ನಮ್ಮ ಗ್ರಹಿಕೆಗಳಿಗೆ ಲಭ್ಯರಾದಂತೆಯೇ ಇದ್ದರು ಎಂದು ಇದಂಇತ್ಥಂ ಎನ್ನುವಂತೆ ಹೇಳುವುದು ಕಷ್ಟ. ಅವರನ್ನು ಚಿತ್ರಿಸಿದ ಕೃತಿಕಾರನಿಗೆ ಅವರ ವ್ಯಕ್ತಿತ್ವದ ಎಷ್ಟನ್ನು ಮತ್ತು ಏನನ್ನು ನಮಗೆ ಲಭ್ಯವಾಗಿಸಬೇಕೆಂಬ ಬಗ್ಗೆ ನಿಶ್ಚಿತ ನಿಲುವು ಇದ್ದಿರಲೂ ಬಹುದು. ಈ ನಿಲುವು ಕೊಟ್ಟ ಮತ್ತು ನಮಗೆ ಗ್ರಹಿಸಲು ಸಾಧ್ಯವಾದ ಒಂದು ವ್ಯಕ್ತಿತ್ವವೇ ಇವತ್ತು ನಮಗೆ ನಮ್ಮ ನಮ್ಮ ಶ್ರೀರಾಮ ಇಲ್ಲವೇ ಶ್ರೀ ಕೃಷ್ಣ. ಆದರೆ ಇದು ವಾಸ್ತವದಿಂದ ಖಚಿತವಾಗಿ ಎಷ್ಟು ದೂರ ಎಂದು ನಿಖರವಾಗಿ ಹೇಳಬಲ್ಲವರಾರು?

ಸತ್ಯನಾರಾಯಣ ಇಂಥ ಮೂಲ ಪ್ರಶ್ನೆಗಳಿಗೇ ಲಗ್ಗೆ ಇಡುತ್ತ ತಮ್ಮ ಕಥಾನಕವನ್ನು ನಿರೂಪಿಸುತ್ತಾರೆ. ಸಾಧ್ಯವಾದಮಟ್ಟಿಗೂ ಈ ಒಣ ಚರ್ಚೆಯನ್ನು ಅವರು ಕಲಾತ್ಮಕವಾಗಿಸುತ್ತ ಸಾಗಿದ ಪರಿಯೇ ಒಂದು ಅಚ್ಚರಿ.

`ಒಂದು ಹಂತಕ್ಕೆ ಬಂದ ಮೇಲೆ, ಬರವಣಿಗೆ ಕೂಡ ಕಾಮದಂತೆ ಅಭ್ಯಾಸವಾಗಿ ಬಿಡುತ್ತದೆ; ಚಟವಾಗಿ ಬಿಡುತ್ತದೆ....ಚಪಲದಿಂದ, ಅಭ್ಯಾಸದಿಂದ ಸಿಗುವ ಸುಖ ಕೂಡ ಅಲ್ಪವಾದದ್ದೇನಲ್ಲ. ಆದರೆ ಈ ಸುಖ ನಿಲುಗಡೆಯದ್ದಲ್ಲ, ಆಳದ್ದಲ್ಲ, ನಿರಾಳ ತರುವಂತದಲ್ಲ. ಮತ್ತೆ ಮತ್ತೆ ಅದೇ ಅಭ್ಯಾಸಕ್ಕೆ ಶರಣು ಹೋಗಬೇಕು, ಚಪಲ ಪೂರೈಸಿಕೊಳ್ಳಬೇಕು. ಅದೇ ತರದ ಸುಖ, ಅದೇ ಸ್ತರದ ಸುಖ - ಅದೇ ವಿಷವೃತ್ತ - ತಿರುಕನ ಕನಸಿನಂತೆ ಅನ್ನೋಣವೆ, ರಾಜನ ಸುಖದಂತೆ ಅಂತ ಅನ್ನೋಣವೇ.'

ಈ ಒಂದು ಪರಿಚ್ಛೇದದಲ್ಲಿ ಸತ್ಯನಾರಾಯಣರು ಏನೆಲ್ಲವನ್ನು ಹೇಳುತ್ತಾರೆ, ಜೊತೆ ಜೊತೆಯಾಗಿ ಇರಿಸುತ್ತಾರೆಂಬುದನ್ನು ನೋಡಿ. ಅವರು ಹೇಳುತ್ತಿರುವುದು, ಬರವಣಿಗೆಯ ಯಾಂತ್ರಿಕತೆಯ ಮತ್ತು ಏಕತಾನತೆಯ ಬಗ್ಗೆ. ಆದರೆ ಬರೆಯುತ್ತಿರುವುದು ಕಾಮದ ಬಗ್ಗೆ. ಅದನ್ನು ಜೋಡಿಸುತ್ತಿರುವುದು ಎಂದೂ ಒಂದಾಗದೇ ಹೋದ ರಾಜ ಮತ್ತು ತಿರುಕನ ಕತೆಯ ಎಳೆಗೇ!

ಸತ್ಯಾನ್ವೇಷಣೆ ಬರವಣಿಗೆಯ ಒಂದು ಗುರಿ. ಆದರೆ `ಆಗಾಗ್ಗೆ ಅತಿಥಿಯಾಗಿಯೋ, ದೈವವಾಗಿಯೋ ಬಂದಾಗ ಕಾಣುವ ಸತ್ಯವನ್ನು ಕೂಡ ನಾವು ಬರೆಯುವುದಿಲ್ಲವಲ್ಲ' ಎನ್ನುತ್ತಾರೆ ಸತ್ಯನಾರಾಯಣ.

"ಸತ್ಯವಾದದ್ದನ್ನು, ಅಪ್ರಿಯವಾದದ್ದನ್ನು ಹೇಳಲು ಭಯ. ಇದನ್ನೆಲ್ಲ ಹೇಳಲು ಹೊರಟರೆ, ಬರವಣಿಗೆಯ ಸ್ವರೂಪ ಏನಾಗಬಹುದೆಂಬ ಭಯ. ಸಲ್ಲದೆ, ಗೆಲ್ಲದೆ ಹೋಗಬಹುದೆಂಬ ಆತಂಕ ಕೂಡ ಬರವಣಿಗೆಯನ್ನು ಮುಂದೆ ಹಾಕಲು, ಸತ್ಯದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಚೆನ್ನಾಗಿ ನೆನಪಿನಲ್ಲಿಡೋಣ, ಪ್ರತಿ ತಲೆಮಾರಿಗೂ ಬೇಕಾಗಿರುವುದು ಸತ್ಯವಲ್ಲ, ಬರವಣಿಗೆಯ ಸತ್ವವಲ್ಲ. ಪ್ರತಿ ತಲೆಮಾರಿಗೂ ಬೇಕಾಗಿರುವುದು, ತಾನು ಕಾಣಬೇಕೆಂದುಕೊಂಡ, ತನ್ನ ಮನಸ್ಸಿಗೆ ಸುಖ ಕೊಡಬಲ್ಲ ಸತ್ಯದ ಸ್ವರೂಪ ಮತ್ತು ಬರವಣಿಗೆಯ ಆಕಾರ ಮಾತ್ರ."

ಆದರೆ ಕತೆ ಕತೆಯ ಬೆನ್ನು ಹತ್ತಿ ಹೋದರೆ ಸತ್ಯ ಸಿಗುತ್ತದೆಯೆ ಅಥವಾ ಕತೆ ಸತ್ಯದ ಬೆನ್ನುಹತ್ತಿ ಹೋದರೆ ಕತೆ ಸಿಗುತ್ತದೆಯೆ ಎಂಬ ಪ್ರಶ್ನೆ ಉಳಿಯುತ್ತದೆ. ಸತ್ಯನಾರಾಯಣರು ಈ ಸಮಸ್ಯೆಯನ್ನು ಬಿಡಿಸಿಡುವ ಪರಿ ಗಮನಿಸಿ.

"ಅವನ ಸುಸ್ತು, ಅವನ ಬಿಡುಗಡೆಯ ದಾಹದ ತೀವೃತೆ ಎಷ್ಟಿತ್ತೆಂದರೆ, ಆ ಕ್ಷಣದಲ್ಲಿ ಯಾವುದೇ ಹೆಂಗಸು ಬಂದು ಅವನನ್ನು ರಮಿಸಿ, ರತಿಗೆಳೆದಿದ್ದರೂ ಆತ ಒಪ್ಪುತ್ತಿದ್ದ. ಆದರೆ ಇದೇ ರಮೇಶ, ದೀಪ ಆರಿಸಿದ ನಂತರ ಕತ್ತಲಲ್ಲಿ ಹೆಂಡತಿ ಬಂದು ಪಕ್ಕದಲ್ಲಿ ಮಲಗಿದ ಮೇಲೆ ಅವಳನ್ನು ಮುದ್ದಿಸುತ್ತಾ ತನ್ನ ತೆಕ್ಕೆಗೆ ಸೆಳೆದುಕೊಂಡು ಐ ಲವ್ ಯೂ, ಐ ಲವ್ ಯೂ ಅಂತ ಬಡಬಡಿಸಿದ. ಹಾಗಂದರೇನರ್ಥ ಅನ್ನುವುದು ಯಾರಿಗೆ ತಾನೆ ಗೊತ್ತು? ನೀನು ನನಗೆ ಬೇಕು, ಬೇಕಲೇ ಬೇಕು ಎಂಬುದು ಒಂದರ್ಥವಿರಬಹುದೇ. ಹೆಂಡತಿಯಾದವಳು ಅವನನ್ನು ಕೂಡಲು ಒಪ್ಪುವ ತನಕ, ಕೂಡುವ ತನಕ ರಮೇಶ, ರಮೇಶನಾಗಿಯೇ ಇರುತ್ತಿದ್ದ. ಆದರೆ ರತಿ ಎಂಬುದು ಪ್ರಾಪರ್ ಆಗಿ, ಉತ್ಕಟವಾಗಿ ಶುರುವಾದ ಮೇಲೆ, ಅಲ್ಲಿ ರಮೇಶನೆಂಬುವನಾಗಲಿ, ಅವನ ಹೆಂಡತಿಯಾಗಲಿ ಇರುತ್ತಿರಲಿಲ್ಲ. ಆ ಆವೇಗ, ಆ ಉಸಿರಾಟದ ರಭಸ, ಆ ತವಕ, ಆ ಭುಗಿಲಿನ ಬೆಳಕು, ಆ ಸಾಗರ, ಆ ಅಲೆ, ಆ ಪ್ರಶಾಂತತೆ.

"ಆದರೆ ಇದೇ ರಮೇಶ ಇದನ್ನೆಲ್ಲ ಕುರಿತು ಬರೆದಾಗ, ಶಯ್ಯಾಗೃಹವನ್ನು ಚೆನ್ನಾಗಿ ಅಲಂಕರಿಸುತ್ತಾನೆ. ಹೆಂಡತಿಯನ್ನು ಸಾವಧಾನದಿಂದ ರಮಿಸುತ್ತಾನೆ. ಅವಳು ಕೂಡ ಕತೆಯ ಸರಾಗವಾದ ಓದಿಗೆ ಅನುಕೂಲವಾಗಲೆಂದು ಅಷ್ಟೊಂದು ಕುಸುಬಿಷ್ಟೆ ಮಾಡುವುದಿಲ್ಲ. ವಾತ್ಸಾಯನನ ಕಾಮಸೂತ್ರದ ವಿವರಗಳನ್ನೋ, ಇಂಗ್ಲೀಷ್ ಕಾದಂಬರಿಯಲ್ಲಿ ಓದಿದ ವಿವರಗಳನ್ನೋ, ಮನಃಶಾಸ್ತ್ರೀಯ ಆಯಾಮಗಳನ್ನೋ ವಿವರ ವಿವರವಾಗಿ ಕತೆಯಲ್ಲಿ ಸೇರಿಸುತ್ತಾನೆ. ಈ ವಿವರಗಳಿಂದೆಲ್ಲ ಬರವಣಿಗೆ ಸಾಂದ್ರವಾದಷ್ಟು ಬರವಣಿಗೆಯಲ್ಲಿ ಧ್ವನಿ ಶಕ್ತಿಯಿದೆಯೆಂದು, ಭಾಷೆ ಎವೊಕೇಟಿವ್ ಆಗಿದೆಯೆಂದು ಅಭಿಪ್ರಾಯ ಚತುರರಾದ ವಿಮರ್ಶಕರು ಹೇಳುತ್ತಾರೆ. ಅಂತರಂಗದ ಇಂತಹ ಖಾಸಗಿ ಅನುಭವಗಳನ್ನು ಹೀಗೆ ಮುಕ್ತವಾಗಿ ಬರೆಯುವ ಹಿಂದಿರುವ ಸೃಜನಶೀಲ ಒತ್ತಡದ ಸ್ವರೂಪ ಅದೆಂತದಿರಬಹುದೆಂದು ಮೆಚ್ಚುಗೆಯಿಂದ, ಅಸೂಯೆಯಿಂದ ತಲೆದೂಗುತ್ತಾರೆ. ತಲೆದೂಗಿ ರಿವ್ಯೂ, ವಿಮರ್ಶೆ ಬರೆಯುತ್ತಾರೆ. ಅದನ್ನು ರಮೇಶ ತಂದು ಹೆಂಡತಿಗೆ ತೋರಿಸುತ್ತಾನೆ. ನಾನು, ನೀನು ಈ ಬರವಣಿಗೆಯಲ್ಲಿ, ಈ ಕತೆಯಲ್ಲಿ ಎಲ್ಲೆಲ್ಲಿ ಇದ್ದೀವಿ ಹೇಳು ಎಂದು ಅನುರಾಗದಿಂದ ಕೇಳುತ್ತಾನೆ. ಯಾವದಾದರೂ ಪಾಪದ ಓದುಗರು ಇವನ ಕತೆ, ಇವನ ಬರವಣಿಗೆ ಇದನ್ನೆಲ್ಲ ಓದಿ ತಮ್ಮ ಜೀವನ ಶೈಲಿಯಲ್ಲಿ ಇದನ್ನೆಲ್ಲ ಅನುಕರಿಸಲು ಪ್ರಯತ್ನ ಪಡುತ್ತಾರೆ. ಓದುಗರಿಗೆ ಓದುವಾಗ ಅನುಕೂಲವಾಗಲೆಂದು, ಸುಖವಾಗಲೆಂದು ತನ್ನ ಯಾವ ನಿಜವಾದ ಅನುಭವವನ್ನು ಮುಚ್ಚಿಟ್ಟು ರಮೇಶ ಬೇರೆ ಏನು ಬರೆದಿದ್ದನೋ, ಅದು ಇನ್ನೊಬ್ಬರ ಅನುಭವವಾಗಲು ಹೊರಡುತ್ತದೆ. ಇದರಲ್ಲೆಲ್ಲ ಯಾವುದು ಖಾಸಗಿ, ಯಾವುದು ಬಹಿರಂಗ, ಯಾವುದು ಅನುಭವ, ಯಾರ ಅನುಭವ, ಯಾವ ಸೃಜನಶೀಲತೆ, ಯಾರ ಅನುಭವಕ್ಕೆ ಯಾರ ಒತ್ತಾಯ, ಯಾರ ಬದುಕಿಗೆ ಯಾರ ಒತ್ತಾಸೆ?"

ಇದನ್ನೆಲ್ಲ ಹೆಚ್ಚು ವಿವರಿಸಬೇಕಿಲ್ಲ. ಆದರೆ ಮನನ ಮಾಡುವುದಕ್ಕೆ ಬೇಕಾದಷ್ಟು ಅಂಶಗಳಂತೂ ಇಲ್ಲಿದ್ದೇ ಇವೆ. ಮುಖ್ಯವ್ವಾಗಿ ಇಲ್ಲಿ ಕಥಾನಕ ಮತ್ತು ಬದುಕಿನ ನಡುವೆ ಬಿರುಕು ಇರುವಂತೆಯೇ ಬದುಕು ಮತ್ತು ಕಲ್ಪನೆಯ ನಡುವೆ ಸಾತತ್ಯವನ್ನು ಅರಸುವ ಪ್ರಯತ್ನವೂ ಇರುವುದು ಮನುಷ್ಯನ ಪ್ರವೃತ್ತಿಯನ್ನು ತೋರಿಸುತ್ತದೆ.

ಎಷ್ಟೊಂದು ಕತೆ, ಎಷ್ಟೊಂದು ಮದುವೆ ಎಂಬ ಎರಡನೆಯ ಅಧ್ಯಾಯ ಜಾತಿ, ಗಂಡು ಹೆಣ್ಣು, ಉಳ್ಳವರು ಇಲ್ಲದವರು, ಹಿಂದೂ ಕ್ರಿಶ್ಚಿಯನ್ ಎಂಬೆಲ್ಲ ನಮ್ಮ ನಡುವೆ ಬಿರುಕು ತರಬಲ್ಲ ಅಥವಾ ಹೊಸ ಸಂಬಂಧದ ಬೆಸೆಯಬಲ್ಲ ಸಂಗತಿಗಳಿಂದ ತೊಡಗುತ್ತದೆ. ಇಲ್ಲೂ ಕತೆ ಈ ಎಲ್ಲ ಕಾರಣಗಳಿಂದಾಗಿ ಎರಡಾಗುವ, ಎರಡು ಎಂಟಾಗಿ ಎಂಟು ಹದಿನಾರಾಗುವ ಒಂದು ಸಾಧ್ಯತೆ ತೆರೆದುಕೊಳ್ಳುತ್ತದೆ. ಕತೆ ಹೀಗೆಯೇ ಒಬ್ಬರಿಂದ ಇನ್ನೊಬ್ಬರ ಕಡೆಗೆ ಬೆಳೆಯುತ್ತ ಹೋಗುವುದು ಸಹಜವಾದರೂ ಅದು ಯಾವಾಗಲೂ ಹಾಗೆಯೇ ಆಗಬೇಕೆಂದೇನಿಲ್ಲವಲ್ಲ. ಕೆಲವು ಕತೆಗಳು ಮುಂದೆ ಎಂದೂ ಇನ್ನೊಂದರ ಜೊತೆ ಒಂದಾಗಲಾರದ ಕತೆಗಳಾಗಿಯೇ ಉಳಿಯುವಂತಿದ್ದರೆ ಇನ್ನು ಕೆಲವು ಕತೆಗಳ ಸಾಧ್ಯತೆ ಕೊಂಚ ಬೇರೆ ಬಗೆಯದು. ಅಂಥ ಕತೆಗಳು ಒಂದರ್ಥದಲ್ಲಿ ಒಂದನ್ನೊಂದು ಹೋಲುವ ಕತೆಗಳು. ಈ ಹೋಲಿಕೆಯ ಸಾಮ್ಯತೆಯೇ ಹಿಂದೆ ಎಂದೋ ಎರಡೆರಡಾಗಿಸಿದ (ಅಥವಾ ಹಾಗಾಗಲು ಕಾರಣವಾದ) ಈ ವಿಭಿನ್ನ ಕತೆಗಳ ನಡುವಿನ ಬಿರುಕುಗಳನ್ನು ಮುಚ್ಚುವುದಕ್ಕೆ ಈಗ ಕಾರಣವಾಗುವುದು ಒಂದು ಕಾಲದ ಪ್ರಕ್ರಿಯೆಯಾಗಿಯೂ ಗಮನಾರ್ಹ.

ಬಸವರಾಜು ಲಿಂಗಾಯತ. ಬ್ರಾಹ್ಮಣಳಾದ ವಿಜಯಲಕ್ಷ್ಮಿಯನ್ನು ಪ್ರೀತಿಸಿ ಮದುವೆಯಾದವ. ಇವರಿಬ್ಬರ ಪ್ರೊಫೆಸರ್ ಲಿಂಗಾಯತ ಮತ್ತು ಬ್ರಾಹ್ಮಣದ್ವೇಷಿ.

ಬಸವರಾಜುವಿನ ತಂದೆ ಮೌನಿ. ಯಾವುದನ್ನೂ ಪ್ರಶ್ನಿಸದ, ಕೇಳದ, ಏನನ್ನೂ ಬಿಟ್ಟುಕೊಡದ ನಿರ್ಲಿಪ್ತ, ನಿರ್ವಿಕಾರದ ಮೂರ್ತಿ. ಈತನ ತಂಗಿಯೊಬ್ಬಳು ಹರೆಯದಲ್ಲಿ ವೆರೈಟಿ ಎಂಟರ್‌ಟೇನ್‌ಮೆಂಟ್ ಶೋಗೆ ಅಂತ ಬಂದಿದ್ದ ಒಂದು ಕಂಪೆನಿಯ ಮ್ಯಾನೇಜರ್ ಜೊತೆ ಓಡಿ ಹೋಗಿ, ಅವರ ದಾಂಪತ್ಯ ಸರಿಹೋಗದೆ ಅವಳು ಇನ್ನೆಲ್ಲೋ ನರ್ಸಿಂಗ್ ಟ್ರೇನಿಂಗ್ ಮಾಡಿಕೊಂಡು ಕಷ್ಟ ಪಡುತ್ತಿದ್ದಾಗ ಈ ಅಣ್ಣ ಆಗಾಗ ಹೋಗಿ ಸಹಾಯ ಮಾಡುತ್ತಿದ್ದ ಎಂಬುದು ಕೂಡ ಬರೆ ಅನುಮಾನ, ಅಷ್ಟೆ.

ವಿಜಯಲಕ್ಷ್ಮಿಯ ತಂದೆ ಹಾಗಲ್ಲ. ಸದಾ ಮಗಳ ಮದುವೆಗೆ ಹಣ ಕೂಡಿಡಲಿಕ್ಕೇ ಬದುಕಿರುವವನಂತೆ ಆ ತ್ಯಾಗ, ನಿಷ್ಠೆಗಳನ್ನು ಹೇಳಿಕೊಳ್ಳುತ್ತ ಇದ್ದವನು. ಬಿಎಡ್ ಮಾಡಲು ಹಣವಿದ್ದೂ ಕೊಡಲಿಲ್ಲ ಎಂಬ ಕಾರಣಕ್ಕೆ ವಿಜಯಲಕ್ಷ್ಮಿಯ ಅಣ್ಣನಿಗೆ ತಂದೆಯ ಮೇಲಿನದಕ್ಕಿಂತ ವಿಜಯಲಕ್ಷ್ಮಿಯ ಮೇಲೆಯೇ ಹೆಚ್ಚು ಕೋಪ. ಯಾಕೆಂದರೆ, ದುಡ್ಡು ಕೊಡದಿರಲು ಕಾರಣ ಅವಳ ಮದುವೆಯ ಖರ್ಚು. ಇದು ಬೇರೆ ಬೇರೆ ರೀತಿಯಲ್ಲಿ ಹೊರಬರುತ್ತದೆ ಕೂಡ. ವಿಜಯಲಕ್ಷ್ಮಿಯ ಅಪ್ಪನಿಗಾದರೂ ತನ್ನ ತಂಗಿಯ ಮದುವೆಯನ್ನು ಸರಿಯಾದ ಕಡೆ ಕೊಟ್ಟು ಮಾಡಲಾಗದೆ ಕೊನೆಗೆ ಅಡುಗೆಯವನಿಗೆ ಕೊಡಬೇಕಾಗಿ ಬಂದ ನೋವು ಕಾಡುತ್ತಿರುತ್ತದೆ. ತನ್ನ ಮಗಳೂ ಕಸ ಮುಸುರೆ ಮಾಡುವಂತಾಗಬಾರದು ಎಂಬುದು ಆತನ ಗುರಿ.

ಆದರೆ ಬಸವರಾಜು ವಿಜಯಲಕ್ಷ್ಮಿಯರ ನಡುವೆ ದಾಂಪತ್ಯವೇನೂ ಅಷ್ಟು ಮೇಳೈಸಲಿಲ್ಲವೆನ್ನುವುದು ಸತ್ಯ. ಆದರೆ ಅದೇನೂ ಅವರ ಅಂತರ್ಜಾತೀ ವಿವಾಹದ ವೈಫಲ್ಯಕ್ಕೆ ಕಾರಣವಾಗುವುದಿಲ್ಲ. ಆದರೆ ಇವರ ಮಗ ಶ್ಯಾಮನಿಗೆ ಮಾತ್ರ ಪೋಲಿಯೋ. ಕಾಲಿಗೆ ಚಿಕಿತ್ಸೆ ಕೊಡಿಸಲು ನಿವೃತ್ತ ಜನರಲ್ ಒಬ್ಬರಲ್ಲಿಗೆ ದಿನವೂ ಹೋಗುತ್ತಿರಬೇಕಾಗುತ್ತದೆ. ಅಲ್ಲಿ ತೆರೆದುಕೊಳ್ಳುವ ಇಂಥದೇ ಇನ್ನಷ್ಟು ಮಕ್ಕಳ ಹಾಗೂ ಅವರನ್ನು ಹೆತ್ತವರ ಸಂಕಟಗಳು ಮುಂದೆ ಒಂದು ವಿಶಿಷ್ಟ ಸಂಘದ ಶುರುವಾತಿಗೆ, ಅದರ ನೆರಳಲ್ಲಿ ವಾರವಾರವೂ ಒಂದು ಕಡೆ ಸೇರಿ ಅನೇಕ ಒಳ್ಳೆಯ ಕೆಲಸಗಳನ್ನು ನಡೆಸುವ ಸಂಕಲ್ಪಕ್ಕೆ ಕಾರಣವಾಗುತ್ತದೆ. ಈ ಕಾಲು ಊನವಾದವರ ಕತೆಯೊಂದಿಗೇ ತಳುಕು ಹಾಕಿಕೊಂಡಂತೆ `ಓಡುವವನ ಆಧ್ಯಾತ್ಮದ ಕತೆ'ಯೂ ತೆರೆದುಕೊಳ್ಳುತ್ತದೆ.

ಬಸವರಾಜು ವಿಜಯಲಕ್ಶ್ಮಿಯರ ಪ್ರೊಫೆಸರ್‌ನ ಬ್ರಾಹ್ಮಣ ದ್ವೇಷಕ್ಕೆ ಹಿನ್ನೆಲೆ ಇದೆ. ಈತನ ತಂದೆಗೆ ನಾಗರಾಜರಾಯ ಎಂಬ ಒಬ್ಬ ಬ್ರಾಹ್ಮಣ ಸಹಪಾಠಿ ಇದ್ದು ಅವರಲ್ಲೇ ಜಾಣತನದ, ನೌಕರಿಯ, ಭಡ್ತಿಯ, ವರ್ಗಾವರ್ಗಿಯ ಜಿದ್ದುಗಳೆಲ್ಲ ಹುಟ್ಟಿಕೊಂಡು ಇಬ್ಬರನ್ನೂ ಹಸಿಹಸಿ ಸುಡುತ್ತಿರುತ್ತದೆ. ಅದು ವ್ಯಕ್ತಿಗತ ಜಿದ್ದಾಗದೆ ಜಾತಿವಾರು ಅಸಮಾನತೆಯ ಪಾಠವಾಗಿ ಮಕ್ಕಳ ಕಾಲಕ್ಕೂ ಅಷ್ಟಿಷ್ಟು ಬೆಳೆದು ಬರುತ್ತದೆ. ನಾಗರಾಜರಾಯ ಸತ್ತದಿನ ಕೆನಡಾದಿಂದ ಬಂದ ಅವನ ಮಗ ಶಂಕರನಾರಾಯಣನ ಸೌಜನ್ಯದ ಔದಾರ್ಯವೇ ಒಳಗಿನ ವಿಷವನ್ನೆಲ್ಲ ಹೊರಬರಲು ಪ್ರೇರಿಸುವುದು ವಿಪರ್ಯಾಸ. ಮೇಲೆ ತೋರುಗಾಣಿಕೆಯ ಪ್ರೀತಿ, ಔದಾರ್ಯ, ಒಡನಾಟ. ಒಳಗೆ ಸುಡುತ್ತಿರುವ ಅಸೂಯೆ, ದ್ವೇಷ, ಜಿದ್ದು. ಎಲ್ಲವೂ ಜಾತಿಯನೆಲೆಯಲ್ಲೆ ಆದರೂ ಅರ್ಥವಿಲ್ಲದ್ದು ಅನಿಸಿದರೂ ಮನುಷ್ಯ ಮೀರಲಾರದ್ದು ಕೂಡ ಆಗಿಬಿಟ್ಟಿರುವುದು ಸುಳ್ಳಲ್ಲವಲ್ಲ! ಇಷ್ಟಾಗಿಯೂ ಈ ಪ್ರೊಫೆಸರ್‌ಗೆ ತನ್ನ ಮಗ ಜ್ಞಾನೇಂದ್ರ ಇಂಜಿನಿಯರಿಂಗ್ ಮುಗಿಸಿ ಕೆನಡಾಕ್ಕೆ ಹೊರಟುನಿಂತಾಗ ನೆನಪಾಗುವುದು ಇದೇ ನಾಗರಾಜರಾಯನ ಮಗನೇ. ಆ ಸಂದರ್ಭದಲ್ಲಿ ಅವರು ನಾಗರಾಜರಾಯನ ಮಗನಿಗೆ ಭಾರತೀಯ ಸಂಸ್ಕೃತಿಯನ್ನು ಮುಂದೆ ಮಾಡಿಕೊಂಡು ಮಕ್ಕಳನ್ನು ಒಗ್ಗಿಸುವುದಕ್ಕಾಗಿಯಾದರೂ ವಾಪಾಸು ಭಾರತಕ್ಕೆ ಬಂದು ನೆಲೆಸುವಂತೆ ಮಡದಿ ಮಕ್ಕಳು ಮೆಚ್ಚಿ ತಲೆದೂಗುವಂಥ ಪತ್ರವೊಂದನ್ನು ಬರೆಯುತ್ತಾರೆ. ಆದರೆ ನಾಗರಾಜರಾಯನ ಮಗ ಅದಕ್ಕೆ ಉತ್ತರಿಸುವುದಿಲ್ಲ.

ಶಂಕರರಾಯರ ಒಬ್ಬಳೇ ಮಗಳು ಸಾವಿತ್ರಿಯನ್ನು ಸಂಭ್ರಮದಿಂದ ಅಮೆರಿಕದ ಅಳಿಯನಿಗೆ ಮದುವೆ ಮಾಡಿಕೊಟ್ಟರೂ ಅವಳು ಅಲ್ಲಿ ಇನ್ನಿಲ್ಲದ ಹಿಂಸೆ ಅನುಭವಿಸಿ ಕೊನೆಗೆ ಹೇಗೋ ಊರಿಗೆ ಮರಳಿ ಸಣ್ಣ ಕೆಲಸ ಹಿಡಿದು ಬದುಕುತ್ತಿರುವುದನ್ನು ಬಲ್ಲ ಬಸವರಾಜುವಿಗೆ ಲಿಂಗಾಯತ ಪ್ರೊಫೆಸರರಂಥ ಮಂದಿಯ ವಿಲಕ್ಷಣ ಬ್ರಾಹ್ಮಣದ್ವೇಷದ ಹಿನ್ನೆಲೆಯಲ್ಲೇ ತನ್ನ ಊರಿನ ಸಾವಿತ್ರಿಯ ಮುಖದ ಮೇಲಿನ, ಅವಳ ಅತ್ತೆ ಮಾವ ಗಂಡ ಎಲ್ಲಸೇರಿ ಹಾಕಿದ ಬರೆಗಳ ಗುರುತುಗಳು ನೆನಪಾಗುವುದು. ಇಲ್ಲಿ ಸಾವಿತ್ರಿ ಬ್ರಾಹ್ಮಣ ಹುಡುಗಿಯಾಗಿ ಲಿಂಗಾಯತ ಸಣ್ಣತನದ ಪ್ರತೀಕವಾಗುತ್ತಾಳೆ.

ಕಾಶೀಪತಯ್ಯನಿಗೆ ಮನೆಗೆಲಸದ ಕೆಂಪಮ್ಮನಲ್ಲಿ ಹುಟ್ಟಿದ ಮಗ ಮರಿಸ್ವಾಮಿ. ಹೆಂಡತಿಯಲ್ಲಿ ಹುಟ್ಟಿದವರು ಸುರೇಶ ಮತ್ತು ಹರೀಶ. ಸುರೇಶ ಊರಿನಲ್ಲೇ ಪೋಟೋಗ್ರಾಫರ್ ಆಗಿ ಮದುವೆ ಮಕ್ಕಳು ಮಾಡಿಕೊಂಡು ನೆಮ್ಮದಿಯಿಂದಿದ್ದಾನೆ. ಹರೀಶ ಅಮೆರಿಕದಲ್ಲಿ ನೆಲೆಕಂಡುಕೊಂಡವ. ಮರಿಸ್ವಾಮಿಗೂ ಮದುವೆಯಾಗಿದೆ, ಮೂರು ವರ್ಷದ ಮಗ ಶಶಾಂಕ ಹುಟ್ಟಿದ್ದಾನೆ. ಮರಿಸ್ವಾಮಿಗೆ ಮದುವೆಯಾಗಿದ್ದು ತಡವಾಗಿ. ಅದಕ್ಕೆ ಅವನ ಈ ಹುಟ್ಟಿನ ಹಿನ್ನೆಲೆಯೇ ಕಾರಣ.

ಇಲ್ಲಿ ಬೆಂಜಮಿನ್ ಪ್ರಭುವಿನ ಕತೆ ಕೂಡ ಇದೆ. ಎರಡು ತಲೆಮಾರಿನ ಹಿಂದೆ ಅವನ ಪೂರ್ವಜ ಒಬ್ಬ ಮಲೆಯಾಳಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ಮಠದಿಂದ ಹೊರಹಾಕಿಸಿಕೊಂಡವ. ಹಾಗಾಗಿ ಬೆಂಜಮಿನ್ ಪ್ರಭುವಿಗೆ ಸಾರಸ್ವತ ಮತ್ತು ಕ್ರಿಶ್ಚಿಯನ್ ಎರಡೂ ಕಡೆ ಅಷ್ಟಿಷ್ಟು ಒಲವಿರುತ್ತ ಅದು ಒಮ್ಮೊಮ್ಮೆ ಆ ಕಡೆಗೆ ಒಮ್ಮೊಮ್ಮೆ ಈ ಕಡೆಗೆ ವಾಲುತ್ತ ಇರುವುದು. ಬೆಂಜಮಿನ್ ತನ್ನ ಸಹೋದ್ಯೋಗಿ ಲಲಿತಳನ್ನು ಪ್ರೀತಿಸಿದ್ದು, ಕೊನೆಗೆ ಅವಳ ಅಪ್ಪನ ಮಧ್ಯಸ್ತಿಕೆಯಲ್ಲಿ ಅವಳನ್ನು ಅಮೆರಿಕದ ಹುಡುಗನಿಗೆ ಅನಾಯಾಸ ಬಿಟ್ಟುಕೊಟ್ಟಿದ್ದು ಮತ್ತು ಕೊನೆಗೆ ಲಿಲ್ಲಿ ಎಂಬ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಾಗಿರುವುದು ಮರಿಯಪ್ಪನಲ್ಲಿ ಪ್ರೇಮದ ಮತ್ತು ಮದುವೆಯ ಕುರಿತು ವಿಚಿತ್ರ ಗೊಂದಲ ಮತ್ತು ಅದರ ಫಲವೋ ಎಂಬಂತೆ ಅನಾಸಕ್ತಿಗೆ ಕಾರಣವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಬೆಂಜಮಿನ್‌ನ ಅಣ್ಣ, ಚರ್ಮದ ವೈದ್ಯನಿಂದಾಗಿ ತಿಳಿದು ಬಂದ ಲೈಂಗಿಕ ವ್ಯಾಧಿಗಳ ವರ್ಣನೆ ಕೂಡ ಅದಕ್ಕೆ ಕಾರಣವಿರಬಹುದು. ಮುಂದೆ ಈ ಬೆಂಜಮಿನ್ ಪ್ರಭು ಏನೇನೋ ಸಬೂಬು ಹೇಳಿಕೊಂಡು ಲಿಲ್ಲಿಯನ್ನು ಬಿಟ್ಟುಬಿಡುತ್ತಾನೆ. ಲಿಲ್ಲಿಯ ನಡತೆ, ಆರೋಗ್ಯ, ದಾಂಪತ್ಯ ಸಹಕಾರ ಎಲ್ಲದರ ಬಗ್ಗೆ ಬೆಂಜಮಿನ್ ಲಘುವಾಗಿ ಮಾತನಾಡುತ್ತಾನಾದರೂ ನಿಜವಾದ ಕಾರಣ ವರದಕ್ಷಿಣೆಯ ಕಂತುಗಳು ಸರಿಯಾಗಿ ಪಾವತಿಯಾಗಲಿಲ್ಲ ಎಂಬುದೇ ಆಗಿರುವುದು ಬಲ್ಲವರಷ್ಟೇ ಬಲ್ಲ ಸತ್ಯ.

ಮರಿಸ್ವಾಮಿಯ ಮ್ಯಾನೇಜರ್ ಬಿಸ್ವಾಸ್‌ನದ್ದು ಬಂಗಾಳಿ ಕನ್ನಡ ಕುಟುಂಬ. ಈ ಬಿಸ್ವಾಸನ ವಿಧವೆ ತಂಗಿ ಸುಜಯಳನ್ನೇ ಮರಿಸ್ವಾಮಿ ಮದುವೆಯಾಗಿದ್ದು. ಅತ್ತ ಬಂಗಾಳಿಯೂ ಅಲ್ಲದ ಇತ್ತ ಕನ್ನಡಿಗರೂ ಅಲ್ಲದ ಅವರ ಕುಟುಂಬ ನಾನಾ ಜಾತಿ, ನಾನಾ ಭಾಷೆ, ನಾನಾ ಧರ್ಮಗಳ ವಲಯದಲ್ಲಿ ಹರಿದು ಹಂಚಿಹೋಗಿದ್ದರಿಂದಲೇ ಮರಿಸ್ವಾಮಿ ಜೀವನದಲ್ಲಿ ಮೊದಲಬಾರಿಗೆ ತನ್ನ ಹಿನ್ನಲೆ, ತಂದೆ-ತಾಯಿ, ತನಗೆ ಹೆಣ್ಣುಕೊಡಲು ಬಂದ ಮಹನೀಯರು, ತನ್ನ ಆಸಕ್ತಿ ಇದೆಲ್ಲದರ ಬಗ್ಗೆ ಒಟ್ಟಾಗಿ, ಇಡಿಯಾಗಿ ತೋಡಿಕೊಳ್ಳುವುದು ಸಾಧ್ಯವಾಗುತ್ತದೆ. ಅಲ್ಲದೆ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಮರಿಸ್ವಾಮಿಗೆ ಕತೆಗಾರ ನಾರಾಯಣನೂ ಒತ್ತಾಸೆಯಾಗಿ ನಿಲ್ಲುತ್ತಾನೆ. ಅವನು ಕತೆಗಳು ಕವಲೊಡೆಯುವುದೇ ಮದುವೆಗಳಿಂದ ಎಂಬರ್ಥದ ಮಾತೊಂದನ್ನು ಆಡುತ್ತಾನೆ. ಹಾಗಾಗಿಯೇ ಇಲ್ಲಿ `ಎಷ್ಟೊಂದು ಮದುವೆಗಳ, ಎಷ್ಟೊಂದು ಕತೆಗಳ' ಮಾತು ಬಂದಿದೆ. ಕತೆಗಳು, ಬದುಕಿನ ಎಳೆಗಳು ಮುಂದುವರಿಯದೆ ಹೋದರೆ ಏನಾಗುತ್ತೆ ಅನ್ನೋದನ್ನ ವಿವರಿಸೋಕೆ ಈ ನಾರಾಯಣನೇ ತನಗೂ ತನ್ನ ಹೆಂಡತಿಗೂ ಸಮಾನವಾದೊಂದು ಕತೆಯನ್ನು ಹೇಳುತ್ತಾನೆ. ಕತೆ ಕೇಳಿ ಹುಟ್ಟಿದ ಭಾವಸರಣಿಯಲ್ಲೇ ಮರಿಸ್ವಾಮಿ ಸುಜಯಳನ್ನು ಮದುವೆಯಾಗುವುದಕ್ಕೆ ಒಪ್ಪಿಗೆ ಕೊಡುವುದು ಇಲ್ಲಿನ ವಿಶೇಷ. ಅಲ್ಲೇ ಪ್ರಿನ್ಸಿಪಾಲ್ ಮುಜುಮದಾರ ಒಂದು ಫೈಲ್ ಕೊಡುತ್ತ ಇದರಲ್ಲಿ ಮೂರೇ ಮೂರು ಮೆನುಕಾರ್ಡ ತರದ ಬರವಣಿಗೆಯ ವಿಶ್ಲೇಷಣೆ ಇದೆ, ಬಿಡುವಾದಾಗ ಓದಿ ಎಂದು ಕೊಡುತ್ತಾನೆ.

ಮದುವೆ, ಮನುಷ್ಯ ಸಂಬಂಧಗಳು ಮತ್ತು ವಿಘಟನೆಗೊಳ್ಳುವತ್ತ ಸಾಗುತ್ತಿರುವ ನಮ್ಮ ಕುಟುಂಬ ಪದ್ಧತಿಗಳನ್ನು ಕಾಣುವಾಗ ಸತ್ಯನಾರಾಯಣರ ಈ ಜೀವನದೃಷ್ಟಿ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ತಮ್ಮ ಒಂದು ಮುನ್ನುಡಿಯಲ್ಲಿ ಸತ್ಯನಾರಾಯಣರು ಹೇಳುತ್ತಾರೆ, "ಗಂಡು ಹೆಣ್ಣು ಎರಡೂ ಕೂಡಿ ಕಟ್ಟಬೇಕಾದ ಬದುಕು ಬಾಳು ಒಂದಿರುತ್ತದೆ ಎಂಬ ವಿಚಾರವನ್ನು ನಾವು ಈ ಕಾಲದಲ್ಲಿ ಒಪ್ಪುತ್ತೇವೆಯೇ - ಇದನ್ನು ಒಪ್ಪದಿದ್ದರೆ ದಾಂಪತ್ಯದ ವೈಫಲ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ದಾಂಪತ್ಯದೊಳಗೆ ಗಂಡು-ಹೆಣ್ಣಿನ ಸಂಬಂಧ ಯಾಂತ್ರಿಕವಾಗುತ್ತದೆ ಎಂದು ಹೇಳುವವರು ಕೂಡ ಯಾವ ಮನುಷ್ಯ ಸಂಬಂಧ ತಾನೇ ದೀರ್ಘ ಕಾಲಾವಧಿಯಲ್ಲಿ ಪ್ರತಿದಿನವೂ ಪ್ರತಿಕ್ಷಣವೂ ಬೆಚ್ಚನೆಯ ಪ್ರೀತಿಯಿಂದ ನಳನಳಿಸುತ್ತಿರುತ್ತದೆ ಎಂದು ಇದುವರೆಗೆ ಹೇಳಿಲ್ಲ. ಅತಿಯಾದ ಆತ್ಮಪ್ರತ್ಯಯಕ್ಕೆ ಮಿತಿಯಿರುವಂತೆ ಕೌಟುಂಬಿಕ ಚೌಕಟ್ಟಿಗೂ ಮಿತಿಯಿದೆ. ಕೌಟುಂಬಿಕ ಜೀವನವನ್ನು ವಿಶಾಲವಾದ ಸಮುದಾಯದೊಡನೆ ಬೆಸೆಯುವ ಒಂದು ಮಜಲಾಗಿ ನಮ್ಮಲ್ಲಿ ನೋಡುತ್ತಿದ್ದರು. ನವಮಧ್ಯಮವರ್ಗದವರಿಗೆ ತಾವು ಮತ್ತು ತಮ್ಮ ಕುಟುಂಬದಾಚೆಗೆ ಏನೂ ಕಾಣದು. ವಿಶಾಲವಾದ ಸಮುದಾಯದೊಡನೆ ಬೆರೆಯುವ ಒತ್ತಾಸೆಯಿಲ್ಲದ್ದರಿಂದಲೂ ಗಂಡು ಹೆಣ್ಣಿನ ಸಂಬಂಧ, ಕೌಟುಂಬಿಕ ಚೌಕಟ್ಟು ಎರಡರಲ್ಲೂ ಶಿಥಿಲತೆ ಕಂಡು ಬಂದಿರಬಹುದು."

ನಾರಾಯಣ ಹೇಳುವ ಕತೆ ಆತನಿಗೂ ಅವನ ಹೆಂಡತಿಗೂ ಸಮಾನವಾಗಿರುವಂಥದ್ದು, ಒಬ್ಬರಿಂದ ಒಬ್ಬರು ಮುಚ್ಚಿಡದ್ದು ಆಗಿರಬೇಕೆಂಬ ಒಂದು ಸವಾಲಿಗೆ ಉತ್ತರವಾಗಿ ಕಂಡಿದ್ದು. ಇದು ಕತೆಗಾರನ ಒಳಗಿನ ಬದುಕನ್ನು ತಾನು ತಿಳಿದುಕೊಂಡಿದ್ದೇನೆ, ಕಂಡಿದ್ದನ್ನು ನೆನಪಿನಲ್ಲಿ ದಾಖಲಿಸಿ ಬೇಕೆಂದಾಗ ಬೇಕೆನಿಸಿದ ಆಕಾರದಲ್ಲಿ ಇಟ್ಟು ತನ್ನದೇ ತೀರ್ಪು, ವಿಶ್ಲೇಷಣೆ ಕೊಟ್ಟು ಬರೆಯಬಲ್ಲೆ ಎಂಬ ಅಹಂಕಾರಕ್ಕೆ ಎದುರಾದ ಸವಾಲು. ಒಂದು ಕತೆಯ ಆಶಯ, ಅದರ ಹುಟ್ಟಿನ ಉದ್ದೇಶ ಮತ್ತು ಅದು ಸಾಧಿಸ ಹೊರಡಬಹುದಾದ ಅತ್ಯುತ್ತಮ ಲಕ್ಷ್ಯವೊಂದನ್ನು ಇದು ನಮ್ರವಾಗಿಯೇ ಸೂಚಿಸುತ್ತದೆ.

ಇಲ್ಲಿ ನಾರಾಯಣನ ಹೆಂಡತಿ ತನ್ನ ಸೋದರತ್ತೆಯ ಕತೆಯನ್ನೂ ನಾರಾಯಣ ತನ್ನ ಸೋದರತ್ತೆಯ ಕತೆಯನ್ನೂ ಹೇಳುತ್ತಾರೆ. ಆಶಯದ ದೃಷ್ಟಿಯಿಂದ ಮತ್ತು `ನಿಂತುಹೋದ ಕತೆ' ಎಂಬ ದೃಷ್ಟಿಯಿಂದಲೂ ಈ ಎರಡೂ ಕತೆಗಳು ಸಮಾನವಾದವು. ಒಬ್ಬಳಿಗೆ ಮುಚ್ಚಟೆಯ ದಾಂಪತ್ಯ ಇನ್ನೊಬ್ಬಳಿಗೆ ಸಾಧಾರಣ ದಾಂಪತ್ಯ ಲಭ್ಯವಾದರೂ ಇಬ್ಬರಿಗೂ ಅದು ತೀರ ಅಲ್ಪಾವಧಿಯದ್ದಾಗಿ ಬಿಡುತ್ತದೆ. ವಿಧವೆಯಾದವಳ ಸಂಕಟ, ಗೋಳುಗಳಿಂದ ತಪ್ಪಿಸಿಕೊಳ್ಳಲು ಒಬ್ಬಳು ಕ್ರಿಶ್ಚಿಯನ್ ಒಬ್ಬರನ್ನು ಮದುವೆಯಾಗಿ ಬದುಕು ರೂಪಿಸಿಕೊಂಡರೆ ಇನ್ನೊಬ್ಬಳು ತವರಿಗೆ ಮರಳಿ ವಿಧವೆ ತಾಯಿಯ ಜೊತೆ ತನ್ನಿಬ್ಬರು ಗಂಡು ಮಕ್ಕಳನ್ನು ಬೆಳೆಸುವುದರಲ್ಲಿ ವ್ಯಸ್ತಳಾಗುತ್ತಾಳೆ. ಒಂದು ದಿನ ತನ್ನ ಗಂಡು ಮಕ್ಕಳಿಬ್ಬರನ್ನೂ ತನ್ನ ತಾಯಿಯ ಬಳಿ ಬಿಟ್ಟು, ತಮ್ಮ ಬಿಡಾರದಲ್ಲೇ ಇದ್ದ ಕಾನ್‌ಸ್ಟೇಬಲ್ ಒಬ್ಬನ ಜೊತೆ ಓಡಿ ಹೋಗಿ ಬದುಕು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.

ಕೊನೆಯಲ್ಲಿ ".....ಆದರೆ ನಿಮ್ಮಂತೋರಿಗೆ ಕತೆ ಅರ್ಥವಾಗುವುದು ಮಾತ್ರವಲ್ಲ, ನಿಮ್ಮಲ್ಲೇ ಆ ಕತೆ ಮುಂದುವರೆಯೋದು. ಆದದ್ದರಿಂದ ಅದನ್ನು ಹೇಳಬೇಕಾಗಿ ಬಂದಿದೆ. ಹಾಗೆ ನೋಡಿದರೆ, ನೀವು ಈ ಕತೆಯ ಕೇಳುಗರು ಮಾತ್ರವಲ್ಲ, ಕತೆಯೊಳಗಿನ ಬದುಕಿಗೆ ವಾರಸುದಾರರು ಹೌದು ಕೂಡ. ನಾನಗಲೀ, ನನ್ನಂಥವರಾಗಲೀ ಹರಿಕತೆ ದಾಸರ ತರ ಕತೆ ಹೇಳತೀವಿ, ಗೊತ್ತಿದೆ ಅನ್ನುವ ಕಾರಣಕ್ಕೇ. ಮುಂದುವರಿಸೋಕೆ ಬೇಕಾದ ಮನೋಧರ್ಮ ಇಲ್ಲ. ನಿಯತ್ತಿಲ್ಲ ನಮ್ಮಲ್ಲಿ. ಅದೂ ಅಲ್ಲದೆ ಯಾರ ಕತೆ ಯಾರಲ್ಲಿ, ಯಾವಾಗ ಮುಂದುವರಿಯುತ್ತೆ, ಹೇಗೆ ಮುಂದುವರಿಯುತ್ತೆ ಅಂತ ಹೇಳೋಕೆ ಒಂದು ನಿಯಮವಾದರೂ ಎಲ್ಲಿದೆ, ಹೇಳಿ." ಎಂಬ ಮಾತಿದೆ. ನಾರಾಯಣ ಮರಿಸ್ವಾಮಿಗೆ ಹೇಳುವ ಮಾತು. ಕತೆಗಾರ ನಮ್ಮ ಬಳಿ ಹೇಳುವ ಮಾತೂ ಆಗಿರುವುದು ಸಾಧ್ಯ. ಯಾಕೆಂದರೆ ಈ ಕತೆಯ ಅಥವಾ ಇಂಥದೇ ಕತೆಯ ಸಾಕ್ಷಿಗಳಾಗಿರಬಹುದಾದ ನಮ್ಮ ಸಾಹಿತಿಗಳಿಗೆ ಅಥವಾ ಓದುಗರಿಗೂ ಈ ಕತೆಗಳೆಲ್ಲ ಮುಖ್ಯ ಅನಿಸಲೇ ಬೇಕಿಲ್ಲ. ಹಾಗೆ ಅನಿಸುವಂತೆ ಮಾಡಬಹುದಾದ ಯಾವುದೋ ನಮ್ಮಲ್ಲಿ ಇಲ್ಲದೇ ಇರಬಹುದು. ಅದನ್ನು ಕುರಿತು ಸತ್ಯನಾರಾಯಣರು ಹೇಳುತ್ತಿದ್ದಾರೆ ಅನಿಸುತ್ತದೆ.

ಇಷ್ಟೇ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ಅದು ಸತ್ಯನಾರಾಯಣರ ಕತೆಗಾರಿಕೆಯ ಕುರಿತು. ಸತ್ಯನಾರಾಯಣರು ಇದುವರೆಗೆ ಒಂದು ಕಥಾನಕದ ಮೂಲಕ, ರಾಜಧಾನಿಯಲ್ಲಿ ಶ್ರೀಮತಿಯರು, ಗೌರಿ ಮತ್ತು ಕಾಲಜಿಂಕೆ ಎಂಬ ನಾಲ್ಕು ಕಾದಂಬರಿಗಳನ್ನು ಬರೆದಿದ್ದಾರೆ. ನಾಲ್ಕನೆಯ ಕಾದಂಬರಿ ಇದು, ಸನ್ನಿಧಾನ. ಅಲ್ಲದೆ ನಿಮ್ಮ ಮೊದಲ ಪ್ರೇಮದ ಕತೆ, ವಿಕ್ಟೋರಿಯಾ ಮಗ ದೇವಲಿಂಗು, ಹಳೆಯ ಕಾಲದ ಹೊಸ ಕತೆ ಮುಂತಾಗಿ ಕೆಲವು ಕಥಾ ಸಂಕಲನಗಳೂ ಬಂದಿವೆ. ಅವರ ಇದುವರೆಗಿನ ಕತೆಗಳು ಎಂಬ ಬೃಹತ್ ಕಥಾ ಸಂಗ್ರಹ ಕೂಡ ಈಗ ಓದುಗರಿಗೆ ಲಭ್ಯವಿದೆ.

ಸತ್ಯನಾರಾಯಣರ ಕತೆ ಮತ್ತು ಕಾದಂಬರಿಗಳು ಬಿಡಿ ಬಿಡಿಯಾಗಿ ಮತ್ತು ಒಟ್ಟಾರೆಯಾಗಿ ನೀಡುವ ಅನುಭೂತಿಯಲ್ಲಿ ಮಹತ್ತರ ವ್ಯತ್ಯಾಸವಿದೆ. ಸತ್ಯನಾರಾಯಣರ ಕತೆಗಳನ್ನು ಅಲ್ಲಿ ಇಲ್ಲಿ ಓದಿದಾಗ ಅವು ಓದುಗನ ಮನಸ್ಸಿನಲ್ಲಿ ತಮಗೆ ಬೇಕಾದ ಸ್ಪೇಸ್ ಪಡೆದುಕೊಳ್ಳುವುದಿಲ್ಲ. ಪತ್ರಿಕೆಯಲ್ಲಂತೂ ಅದನ್ನು ನಿರೀಕ್ಷಿಸುವುದೇ ಬಹಳ ಕಷ್ಟ. ಸಂಕಲನದಲ್ಲಿ ಓದಿದಾಗ ಇವುಗಳನ್ನು ತಿಳಿದುಕೊಳ್ಳಲು ನಮಗೆ ಮೈ ಮನಸ್ಸು ಎಲ್ಲಾ ಹೊಸದಾಗಿರೋ, ಶುದ್ಧವಾಗಿರೋ ಹೊಸದೇ ಆದ ಮನಸ್ಸು ಬೇಕೇನೋ ಅನಿಸತೊಡಗುತ್ತದೆ. ಆದರೆ ಹೀಗೆ ಅನಿಸುವುದು ಇವರ ಕತೆಗಳನ್ನು ಒಟ್ಟಾಗಿ ಗ್ರಹಿಸಿದಾಗ ಮಾತ್ರ ಅನ್ನುವುದು ಮುಖ್ಯ.

ಅದೇ ರೀತಿ ಅನೇಕ ಬಾರಿ ಇವರ ಯಾವುದೋ ಹಳೆಯ ಕಥೆಯ ಒಂದು ಪಾತ್ರ ಇನ್ನೊಂದು ಕತೆಯಲ್ಲೋ ಕಾದಂಬರಿಯಲ್ಲೋ ಅತ್ಯಂತ ಸಹಜವಾಗಿ ಕಾಣಿಸಿಕೊಂಡು ಕಥಾನಕದ ಅರ್ಥ ವಿಸ್ತಾರಗಳನ್ನು ಹೆಚ್ಚಿಸುವುದು ಕೂಡ ಗಮನಿಸಬೇಕಾದ ಅಂಶ. ಅದೇ ರೀತಿ ಒಂದು ಸಂಕಲನದ ಯಾವುದೋ ಕಥೆ ಇನ್ನೊಂದು ಸಂಕಲನದ ಇನ್ನೊಂದು ಕತೆಯೇ ಆಗಿ ಮುಂದುವರಿಯುವುದೂ ಇದೆ. ಒಂದು ಸಂಕಲನದಲ್ಲಿ ಬರುವ ಸೋದರತ್ತೆ ಸಾವಿತ್ರಿಯ ಗಂಡನ ಮುಚ್ಚಟೆಯನ್ನು ಕಾಣುವಾಗ ನಿಮ್ಮ ಮೊದಲ ಪ್ರೇಮದ ಕತೆಯ ಪುಟ್ಟನಂಜನ ನೆನಪು ಬಂದರೆ ಅಚ್ಚರಿಯಿಲ್ಲ. ಅಂದರೆ ಆ ನೆನಪು ಆ ಕತೆಗೆ ಕೊಡುವ ಒಂದು ಪ್ರಭೆ ಬೇರೆಯೇ ಒಂದು ಬಗೆಯದ್ದು. ಹಾಗೆಯೇ ಇಲ್ಲಿನ ಮೆನುಕಾರ್ಡ್ ಕತೆಗಳೊಂದರಲ್ಲಿ `ಗೌರಿ' ಕಾದಂಬರಿಯ ಗೌರಿ ಕಾಣಿಸಿಕೊಳ್ಳುತ್ತಾಳೆ. ಸತ್ಯನಾರಾಯಣರ ಹಿಂದಿನ ಸೃಷ್ಟಿಯ ಇನ್ನೆಷ್ಟೋ ಪಾತ್ರಗಳು ಇಲ್ಲಿ ಮತ್ತೊಮ್ಮೆ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತವೆ ಅಥವಾ ಕಾಣಿಸಿಕೊಂಡ ಭ್ರಾಂತಿ ಹಿಡಿಸುವಷ್ಟರ ಮಟ್ಟಿಗೆ ಇವರ ಪಾತ್ರಗಳು ಸಹಜವಾಗಿ, ಆಪ್ತವಾಗಿ ನಮ್ಮ ಮನಸ್ಸಿನಲ್ಲಿ ಉಳಿದಿರುತ್ತವೆ ಎನ್ನಬೇಕೇನೋ. ಇದೇ ಕಾದಂಬರಿಯ "ಎಷ್ಟೊಂದು ಕತೆ ಎಷ್ಟೊಂದು ಮದುವೆ" ಎಂಬ ಎರಡನೆಯ ಅಧ್ಯಾಯದಲ್ಲಿ ಅರೆಬರೆಯಾಗಿ ಕಾಣಿಸಿಕೊಂಡ ಪಾತ್ರಗಳೂ ಮುಂದೆ ಮತ್ತೆ ಕಾಣಿಸಿಕೊಂಡು ಹಳೆಯ ಕತೆಗೆ ಹೊಸದೇ ಆಯಮವನ್ನು ತೊಡಿಸುತ್ತ ಇರುತ್ತವೆ. ಇದೊಂದು ವಿಶಿಷ್ಟ ಬಗೆಯ ತಂತ್ರವಾಗಿ ಓದುಗನನ್ನು ಹೊಸ ದರ್ಶನದತ್ತ ಕೊಂಡೊಯ್ಯುತ್ತದೆ. ಈ ಬಗೆಯಲ್ಲಿ ಕಥಾನಕದೊಳಗೆ ಕಥಾನಕ ನುಸುಳುವ ಬಗ್ಗೆ ಇಲ್ಲಿ ಒಂದು ಮಾತು ಬರುತ್ತದೆ. "...ಅದು ಬಂದ ರೀತಿಯಲ್ಲಿ, ಬೆಳೆದ ರೀತಿಯಲ್ಲಿ, ಇವೆಲ್ಲಕ್ಕೂ ಒಂದಕ್ಕೊಂದು ಸಂಬಂಧ ಇದೆಯೆ, ಎಂಬ ಪ್ರಶ್ನೆಯೇ ಅಪ್ರಸ್ತುತವಾದದ್ದು. ಹಾಗೆ ಸಂಬಂಧವಿಲ್ಲದಿದ್ದರೆ, ಅವೆಲ್ಲ ಒಂದರ ಹಿಂದೆ ಒಂದು, ನಾನು, ತಾನು ಅಂತ ಆತುರಾತುರವಾಗಿ ಓಡಿ ಬರುತ್ತಿರಲಿಲ್ಲ. ಬಂದು ಸೇರುತ್ತಿರಲಿಲ್ಲ."

ಈ ಎಲ್ಲ ತಂತ್ರಗಳ ಹಿಂದೆ ಶುದ್ಧ ಕಥಾನಕದ ಅನಿವಾರ್ಯ ಅಂಶಗಳನ್ನು ಅಥವಾ, ಸೃಜನಶೀಲ ಸೃಷ್ಟಿಕ್ರಿಯೆಯ ಸ್ವಾಭಾವಿಕ ಚಲನೆಯನ್ನು ಮೀರಿದ ಒಂದು ಉದ್ದೇಶ, ಗುರಿ ಕೆಲಸ ಮಾಡುತ್ತಿರುತ್ತದೆ ಎಂಬುದೇ ಗುರುತಿಸಬೇಕಾದ ಸಂಗತಿ. ಅದು ಕಥಾನಕವೊಂದು ಕತೆಗಾರನ ಕೈಯಲ್ಲಿ ರೂಪುಗೊಳ್ಳುವ ಪ್ರಕ್ರಿಯೆಯನ್ನು ಆ ಕೆಲಸದಲ್ಲಿ ತೊಡಗಿರುವಾಗಲೇ ಅದನ್ನು ಗಮನಿಸಿಕೊಂಡಿರುವ ಸೂಕ್ಷ್ಮ ಅವಲೋಕನದ ಒಂದು ಸಾಕ್ಷೀಪ್ರಜ್ಞೆ ಇಲ್ಲಿದೆ ಎಂಬುದು. ಹಾಗಾಗಿಯೇ ಇದು ಕಾದಂಬರಿಯ ಕುರಿತಾಗಿರುವ ಕಾದಂಬರಿ!

ಮೂರನೆಯ ಅಧ್ಯಾಯದಲ್ಲಿ ಸತ್ಯನಾರಾಯಣರು ನೇರ ಕತೆಗಾರನ, ಅವನ ಸುತ್ತಲಿನ ಜಗದ ಕತೆಗಳ, ಅವು ಕಥಾನಕಗಳಾಗಿ ಕತೆಗಾರನ ವಿವರಗಳಲ್ಲಿ ಮೈ ತಳೆಯುವ ಮತ್ತು ಒಮ್ಮೆ ಹಾಗೆ ಮೈತಳೆದದ್ದೇ ಪತ್ರಿಕೆಯ ಸಂಪಾದಕರ, ವಿಮರ್ಶಕರ, ಮುನ್ನುಡಿಕಾರರ ಜಗತ್ತಿನಲ್ಲೆಲ್ಲ ಆ ಕಥಾನಕ ಪಡೆದುಕೊಳ್ಳುವ ವೈವಿಧ್ಯಮಯ ಆಕೃತಿಗಳ ವಿವರಗಳೊಂದಿಗೆ ತೊಡಗುತ್ತಾರೆ. ಈ ಅಧ್ಯಾಯದಲ್ಲಿ ಬರುವ ಅನೇಕ ಕೆಣಕುವ, ಕಾಡುವ ನುಡಿಗಳಲ್ಲಿ ಒಂದು :

"ನೋಡಿ, ನಾವೆಲ್ಲರೂ ಒಂದು ಕಾಲದಲ್ಲಿ ನೋಡುವ ತುರ್ತಿನಲ್ಲಿ ಕಾಣುವ ಒತ್ತಾಯದಲ್ಲಿ ಬರೆಯುವುದಕ್ಕೆ, ಬದುಕುವುದಕ್ಕೆ ಹೋಗತೀವಿ. ಹುಡುಕಾಟಕ್ಕೆ ತೊಡಗ್ತೀವಿ, ಆಮೇಲಾಮೇಲೆ ಬರೆಯುವ ಚಪಲಕ್ಕೆ, ತೀಟೆಗೆಂದು ನೋಡಲು, ಕಾಣಲು ಪ್ರಯತ್ನಿಸ್ತೀವಿ. ಏನು ಕಾಣದೆ ಇದ್ದರೂ, ಏನೋ ಕಾಣತಾ ಇದೆ ಅಂತ ಸುಳ್ಳೇ ಸುಳ್ಳು ತಿಳಕೋತೀವಿ. ಈ ಹಂತಕ್ಕೆ ಬಂದಾಗ ಬರೆಯುವುದನ್ನು ನಿಲ್ಲಿಸುವುದು ಮಾತ್ರವಲ್ಲ ಸಾಧ್ಯವಾದರೆ ನಿರ್ವಾಣವನ್ನು ಕೂಡ ಸ್ವೀಕರಿಸಿಬಿಡಬೇಕು?"

ಮುನ್ನುಡಿ ಬರೆಸಿಕೊಳ್ಳಲಿಕ್ಕೆ ಅಂತ ಹೋದವರಿಗೆ ಮುನ್ನುಡಿಕಾರರ ಕತೆಯನ್ನು ಓದುವ ಕೆಲಸ(?) ಗಂಟು ಬೀಳುತ್ತದೆ. ಅದಕ್ಕಿಂತ ಮುಖ್ಯವಾಗಿ ಆವತ್ತೇ ಅವರಲ್ಲಿಗೆ ಬಂದಿದ್ದವರೊಬ್ಬರು ಕೊಟ್ಟ ಪತ್ರಗಳ ಮುದ್ರಿತ ಪ್ರತಿಗಳೂ ಸಿಗುತ್ತವೆ. ಬ್ರಾಹ್ಮಣ ಮಿತ್ರ ಬ್ರಾಹ್ಮಣರ ಕುರಿತು ಮಾಡಿದ ಟೀಕೆ ಮತ್ತು ಬ್ರಾಹ್ಮಣೇತರ ಮಿತ್ರ ಬ್ರಾಹ್ಮಣರ ಕುರಿತು ಮಾಡಿದ ಟೀಕೆ ಎರಡೂ ಒಂದೇ ಇದ್ದರೂ ಒಂದು ಮಾತ್ರ ಉಂಟು ಮಾಡುವ ನೋವೇ ಕಾರಣವಾಗಿ ಅವುಗಳನ್ನು ಮುದ್ರಿಸಿ ಸಿಕ್ಕಿದವರಿಗೆಲ್ಲ ಹಂಚಿ, ಅಭಿಪ್ರಾಯಗಳನ್ನು ಸಂಗ್ರಹಿಸುವ `ಹಸಿವೆ' ಹಿಡಿದ ಒಬ್ಬರು ನೀಡುವ ಮುದ್ರಿತ ಪತ್ರದ ಪ್ರತಿಗಳು ಅವು. ಮುಂದೆ ಅಲ್ಲೇ ಭೇಟಿಯಾಗುವ ಅರವಿಂದ ವ್ಯಂಗ್ಯವಾಗಿ ಹೇಳುತ್ತಾನೆ : "ನಾನೇನು ಕೊಡೋಲ್ಲ ನಿಮಗೆ ಓದೋಕ್ಕೆ. ಕತೆ ಕವನದ ಪೈಕಿಯವನಲ್ಲ ನಾನು. ಡೋಂಟ್ ಬಿ ನರ್ವಸ್." ಆದರೆ ಮುಂದೆ ಇದೇ ಅರವಿಂದ ತೆರೆದಿಡುವ ಓಡುವವನ ಆಧ್ಯಾತ್ಮ ಯಾವುದೇ ಕತೆಗೂ, ಕತೆ ನೀಡಬಹುದಾದ ಕಾಣ್ಕೆಗೂ ಕಡಿಮೆಯಾದುದೇನಲ್ಲ.

`ನಮ್ಮ ಕಾಲದ ಜಾನಪದ ಕತೆ' ಎಂಬ ಹೆಸರಿನ ನಾಲ್ಕನೆಯ ಅಧ್ಯಾಯದಲ್ಲಿ ಐದು ಮಂದಿ ಬರಹಗಾರರು ತಮ್ಮ ತಮ್ಮ ಬದುಕಿನ ಸ್ಥೂಲ ಹಿನ್ನೋಟ ನೀಡುತ್ತಾರೆ. ಅವರವರ ಆಸೆ, ಕನಸು, ಆದರ್ಶ ಬಾಲ್ಯದಲ್ಲಿ ಇದ್ದದ್ದು ಈಗ ಆಗಿರುವುದು ಎಲ್ಲದರ ಕುರಿತು ಹೇಳುತ್ತಾರೆ. ಇಲ್ಲಿ ಕತೆ, ಕತೆಗಾರನ ಬದುಕು ಮತ್ತು ಸ್ವಾನುಭವ ಹಾಗೂ ಅವನು ಕಟ್ಟುವ ಕಥಾನಕ - ಇವುಗಳ ನಡುವಿನ ಕಂದಕವನ್ನು ಹೇಳುತ್ತಲೇ ಇಬ್ಬರು ಮುದುಕರ ನಡುವೆ ಕತೆಯೊಂದರ ಕುರಿತಾಗಿಯೇ ನಡೆಯುವ ಹೊಡೆದಾಟದ ಪ್ರಸಂಗ ಬರುತ್ತದೆ. ನಮ್ಮ ಕಾಲದ ಜಾನಪದ ಕತೆ ಎಂದು ಹೇಳಿಕೊಂಡು ಇಬ್ಬರೂ ಒಂದು ಕತೆಗಾಗಿ `ನನ್ನದು' ಎಂಬ ಪ್ರತಿಷ್ಠೆಯನ್ನೆ ಮುಂದೆ ಮಾಡಿಕೊಂಡು ಜಗಳವಾಡುವುದನ್ನು ಕತೆಯ ಸಹಿತ ಸತ್ಯನಾರಾಯಣರು ಕಾಣಿಸಿ ಬೆಚ್ಚಿಬೀಳಿಸುತ್ತಾರೆ! ಇಲ್ಲಿನ ವಂದನಾಳ ಕತೆ ಯಾರ ಹೃದಯವನ್ನಾದರೂ ನಾಟುವಂಥದ್ದು. ಆದರೆ ಅದಕ್ಕಿಂತ ಅದನ್ನು ಬರೆದವರ, ಹೇಳುವವರ ಜಗಳವೇ ಮುಖ್ಯವಾಗಿ ಬಿಡುವುದೂ ಸಾಧ್ಯ!

ಕತೆಗಾರ ಬದುಕನ್ನು ನೋಡುವ ಬಗೆಯ ಕುರಿತೇ ಇಲ್ಲಿ ಅನುಮಾನ ಹುಟ್ಟಿಸುತ್ತಾರೆ ಸತ್ಯನಾರಾಯಣ.
"ನಿಮಗೆ ಗೊತ್ತಲ್ಲ, ಯಾವುದಾದರೂ ಒಂದು ಘಟನೆ, ಒಂದು ಸಂದರ್ಭನ ಕತೆ ಬರೆಯೋರು ನಾಲ್ಕು ಜನ ಲೇಖಕರು ಕೇಳಿಸಿಕೊಂಡರೆ, ಅವರು ಕೇಳಿಸಿಕೊಂಡ ಕತೆಗಿಂತ, ಅವರಿಗೆಲ್ಲ ಅದು ತಮ್ಮ ಮನಸ್ಸಿನಲ್ಲಿ ಹೇಗೆ ಬೆಳೆಯುತ್ತೆ ಅನ್ನೋದೇ ಮುಖ್ಯವಾಗುತ್ತೆ. ಪ್ರತಿಯೊಬ್ಬ ಲೇಖಕನಿಗೂ ವಸ್ತು, ಪಾತ್ರಗಳು, ಸಂದರ್ಭ ತನ್ನ ಮನಸ್ಸಿನೊಳಗೆ ಬೆಳೆಯುತ್ತಿರುವ, ಮಾಗುತ್ತಿರುವ ಕ್ರಮವೇ ಸರ್ವಶ್ರೇಷ್ಠವಾದ್ದು ಅನ್ನುವ ಭಾವನೆ, ಅಹಂಕಾರ ಇರುತ್ತೆ."

ಅದೇ ರೀತಿ ಬ್ರಾಹ್ಮಣನಿಗೆ ಬ್ರಾಹ್ಮಣನಿಂದಲೂ ಬ್ರಾಹ್ಮಣೇತರನಿಂದಲೂ ಬಂದ ಪತ್ರಗಳು ಕಾರಿಕೊಳ್ಳುವ ಪರಸ್ಪರ ಮತ್ತು ಜಾತೀಯ ನೆಲೆಯ ಜಿದ್ದುಗಳನ್ನು, ಈ ಜಿದ್ದೇ ಅವರ ಬದುಕಿನ ಪ್ರಮುಖ ಅಂಗವಾಗಿಬಿಟ್ಟು ಅದು ಅವರ ವ್ಯಕ್ತಿತ್ವವನ್ನೇ ರೂಪಿಸುವಷ್ಟರಮಟ್ಟಿಗೆ ಮುಖ್ಯವಾಗಿಬಿಡುವುದನ್ನು ಸೂಚಿಸುತ್ತವೆ. ಇವೂ ಬದುಕಿನ ಕತೆಗಳೇ. `ಸ್ವ' ಮುಖ್ಯವಾಗುವ ಒಂದಾನೊಂದು ನೆಲೆಗಟ್ಟಿನ ಕುರಿತೇ ಹೇಳುತ್ತಿವೆ ಇವು.

ಹಾಗೆಯೇ ರಷ್ಯಾ ಒಡೆಯುವುದು ಇಲ್ಲಿ ಒಂದು ರೂಪಕವಾಗುವ ಬಗೆ ಮತ್ತು ಅದು ರೂಪಕವಾಗಿರುವುದನ್ನು ಕೊಂಚ ವ್ಯಂಗ್ಯ ಬೆರೆತ ಧ್ವನಿಯಲ್ಲಿ ಕತೆಯನ್ನಾಗಿಸಿ ಕತೆಗೊಂದು ವಿಮರ್ಶೆ ಅಥವಾ ರಿವ್ಯೂ ನೀಡುತ್ತಿರುವ ರೂಪದಲ್ಲಿ ವಿಶ್ಲೇಷಿಸುವುದೂ ನಮ್ಮನ್ನು ಚಿಂತನೆಗೆ ಆಹ್ವಾನಿಸುವಂತಿದೆ.

ನಿಜ, ಇಷ್ಟಾಗಿಯೂ ಇಲ್ಲಿ ಅದ್ಭುತವಾದ ಕತೆ, ಏಕಸೂತ್ರದ್ದೇ ಎಂದು ನಿರೂಪಿಸಬಹುದಾದ ಒಂದೆಳೆಯ ಕಥಾನಕ ಇಲ್ಲ. ಕುತೂಹಲ ಹುಟ್ಟಿಸುವ ಒಂದು ಕತೆಯ ಬೆಳವಣಿಗೆಯಾಗಲೀ (ಒಂದು ಕಥಾನಕದ ಮೂಲಕ), ಒಂದು ಮುಖ್ಯ ಪಾತ್ರದ ಒಳತೋಟಿಗಳ ಚಿತ್ರವಾಗಲೀ (ಗೌರಿ), ಸಾಮಾಜಿಕ, ತಾತ್ವಿಕ ಆಯಾಮವಿರುವ ಕಲಾತ್ಮಕ ಅಭಿವ್ಯಕ್ತಿಯಾಗಲೀ (ರಾಜಧಾನಿಯಲ್ಲಿ ಶ್ರೀಮತಿಯರು) ಇಲ್ಲಿಲ್ಲ. ಆದರೆ ಸಾಹಿತ್ಯ, ಸಾಹಿತಿ, ಅವನ ಬರೆಯುವ ಕ್ರಿಯೆ, ವಿಮರ್ಶೆಯ-ಮೆಚ್ಚುಗೆಯ ನಿರೀಕ್ಷೆ, ಕತೆಯ ಶರೀರ, ಕತೆಗಾರ ಅದಕ್ಕೆ ಚೌಕಟ್ಟು ಒದಗಿಸಲು ಹೋಗಿ ಸತ್ಯಾನ್ವೇಷಣೆಯ ಹೆಸರಲ್ಲಿ ಸತ್ಯದಿಂದ(ದಕ್ಕುವ ಸತ್ಯ ಎಂಬುದೊಂದು ಇದ್ದರೆ - ಎಂಬ ಸಕಾರಣ ಅನುಮಾನದೊಂದಿಗೇ) ದೂರವಾಗುವ ವಿಪರ್ಯಾಸಗಳನ್ನು ಕಾಣಿಸುತ್ತಲೇ ಈ ಕಥಾನಕ ಸೂಕ್ಷ್ಮವಾಗಿ ತನ್ನ ಒಡಲೊಳಗೆ ಸೇರಿಸಿಕೊಳ್ಳುವ ಸಾಮಾಜಿಕ ಆಯಾಮ ತುಂಬ ಸೂಚ್ಯವಾಗಿರುವುದು ಒಂದು ಸಿದ್ಧಿ ಎಂದೇ ಹೇಳಬೇಕು.

ಏಳನೆಯ ಮತ್ತು ಎಂಟನೆಯ ಅಧ್ಯಾಯ ಕಾದಂಬರಿಯ ಚೌಕಟ್ಟಿಗೆ ನೇರವಾಗಿ ಸಂಬಂಧಿಸಿದ ಕಥಾನಕಗಳೇನೂ ಅಲ್ಲ. ಆದರೆ ತಥಾಕಥಿತ ಸಂಬಂಧದ ಪರಿಕಲ್ಪನೆಯನ್ನೆ ಅಲ್ಲಾಡಿಸುತ್ತಿರುವ ಕಾದಂಬರಿಯ ಅಧ್ಯಾಯಗಳ ಬಗ್ಗೆ ಹಾಗೆ ಹೇಳುವುದೂ ಕಷ್ಟ! ಸರಳವಾಗಿ ಈ ಎರಡೂ ಅಧ್ಯಾಯಗಳು ಬದುಕಿನ ಸೂಕ್ಷ್ಮಗಳ ಬಗ್ಗೆ ಆಳವಾದ ಒಳನೋಟ ನೀಡುವಂಥವು. ಆದಾಗ್ಯೂ ಕತೆ, ಈ ಅಧ್ಯಾಯಗಳು ಬದುಕಿನ ಸೂಕ್ಷ್ಮಗಳ ಕುರಿತು ನೀಡುವ ಒಳನೋಟದಷ್ಟು ಕಥನ ಕ್ರಮ ಮತ್ತು ಕತೆಗಾರನ ಕುರಿತು ಒಂದಲ್ಲ ಒಂದು ರೀತಿಯಲ್ಲಿ ಉಳಿದ ಅಧ್ಯಾಯಗಳು ನೀಡುವ ಒಳನೋಟಗಳು ಇಲ್ಲಿ ಇಲ್ಲ. ಲೋಕನಾಯಕರ ಜಗುಲಿ ಪುರಾಣ ಎಂಬ ಅಧ್ಯಾಯದ ಬಗ್ಗೆ ಕೀರ್ತಿನಾಥ ಕುರ್ತಕೋಟಿಯವರು ಹೇಳುವ ಮಾತು ಗಮನಿಸಿ:

"ಆದರೆ ಅದೊಂದು `ಜಗುಲಿ ಪುರಾಣ'ವಾಗಿರುವದರಿಂದ ಅದು ಮನೆಯ ಹೊರಗೂ ಇದೆ, ಒಳಗೂ ಇದೆ. ಮನೆಯ ಒಳಗಿನ ಬದುಕಿನ ಗದ್ದಲದ ಜೊತೆಗೆ ಸಂಬಂಧವಿಟ್ಟುಕೊಂಡೂ ಕೂಡ ಅದು ಹೊರಗಿನ ತಂಪುಗಾಳಿಯೊಂದಿಗೆ, ಮೇಲುಕೋಟೆಯ ರಾತ್ರಿಯ ಆಕಾಶದಲ್ಲಿಯ ನಕ್ಷತ್ರಗಳೊಡನೆ ಸಂವಾದ ಬೆಳೆಸಬಲ್ಲದು."

"ಇದರಲ್ಲಿಯೂ ಎರಡು ಕತೆಗಳು ಎದುರು ಬದುರಾಗಿ, ಒಂದಾಗಬೇಕೆಂದು ಕಾಯುತ್ತಿವೆ. ಒಂದು ಲೋಕನಾಯಕ ಜೆ.ಪಿ.ಯವರ ಕತೆ, ಇನ್ನೊಂದು ಅವರ ಶಿಷ್ಯ ಮೋಹನನ ಕತೆ. ಮೈಸೂರು ಸಿಲ್ಕ್ ಸೀರೆಯಲ್ಲಿ ಮೋಹನ ಕಾಣುವ ಸಾರ್ಥಕತೆ ಜೆ.ಪಿ.ಯವರಿಗೆ ದಕ್ಕಲಿಲ್ಲ. ಮೇಲುಕೋಟೆಯ ಜಗುಲಿಯ ಮೇಲೆ ಅವರು ಕೈಕೊಂಡಿದ್ದ ಪ್ರತಿಜ್ಞೆ ನೆರವೇರಲಿಲ್ಲವೆನ್ನುವುದು ಇತಿಹಾಸದ ಸತ್ಯ. ಮೋಹನನದು ಇತಿಹಾಸದ ಸತ್ಯವಲ್ಲ. ಅದೊಂದು ಸಂಭಾವ್ಯವಾದ ಸತ್ಯ. ಇಷ್ಟೇ. ಮೋಹನನ ಸಾರ್ಥಕತೆ ಅಂತರಂಗಕ್ಕೆ ಗೋಚರವಾದರೂ ಅದರ ಸತ್ಯವನ್ನು ಕೈಯಲ್ಲಿ ಹಿಡಿಯಲು ಬರುವುದಿಲ್ಲ. ಜೆ.ಪಿ. ಕೂಡ ಮೋಹನ ಉಡುಗೊರೆಯಾಗಿ ತಂದ ಸೀರೆಯ ಮೇಲೆ ಕೈಯಾಡಿಸಿ ಸಾರ್ಥಕತೆಯನ್ನು ಕ್ಷಣಕಾಲ ಅನುಭವಿಸುತ್ತಾರೆ. ಆದರೆ ಎಂಥ ಸಾರ್ಥಕತೆಯ ಮೇಲೂ ಅಪೂರ್ಣತೆಯ ನೆರಳು ಬಿದ್ದಿರುತ್ತದೆ."

`ಲಿಂಗಾಯತರ ಸ್ವಯಂವರ' ಎನ್ನುವ ಅಧ್ಯಾಯದಲ್ಲಿ ಗಂಡು ಹೆಣ್ಣು ಸಂಬಂಧದ ಮದುವೆ, ಕಾಮ, ವಿಚ್ಛೇದನ, ವಿವಾಹೇತರ ಸಂಬಂಧ ಮತ್ತು ಸಂಬಂಧಗಳ ಪರ್ಯಾಯ ಸಂಭವನೀಯತೆಗಳ ಕುರಿತ ಯೋಚನೆ ಹುಟ್ಟಿಸುವ ಪಾಪಪ್ರಜ್ಞೆ ಮತ್ತು ಮನುಷ್ಯನ ಆಳದ ಹಪಹಪಿಕೆಗಳ ಒಳ ಅರಿವು ಇವುಗಳ ಬಗ್ಗೆ ಇದೆ. ಮನುಷ್ಯನ ಆಳದ ಸಣ್ಣತನ, ನೀಚತನ ಮತ್ತು ಅವುಗಳ ಸಹಜತ್ವ ಕೂಡಾ ಬದುಕಿನ ಅನಿವಾರ್ಯ ಅಂಗವೇ ಎಂಬ ಅರಿವು ಇಲ್ಲದೇ ಹೋದರೆ ಏನಾದೀತು?

ಆ ಏನಾದೀತು ಎಂಬ ಪ್ರಶ್ನೆಯಲ್ಲಿರುವ ಸಾಧ್ಯತೆಗಳ ಮಹಾಪೂರವನ್ನೇ ನಮ್ಮೆದುರು ತೆರೆದಿಡುವ ಅಧ್ಯಾಯ ಗೌರಿಯೆಂಬ ಮೂರು ಟಿಪ್ಪಣಿಗಳು. ಇಲ್ಲಿ ಬರುವ ಗೌರಿ ಸತ್ಯನಾರಾಯಣರ ಗೌರಿ ಕಾದಂಬರಿಯ ಗೌರಿಯೇ ಎಂದರೂ ಆದೀತು, ಅಲ್ಲವೆಂದರೂ ಓದಿಗೂ ಅದರ ಸತ್ವದ ಅರಿವಿಗೂ ತೊಡಕಾಗದು. ಹಾಗೆಯೇ ಇಲ್ಲಿ ತೆರೆದುಕೊಳ್ಳುವ ವಿಭಿನ್ನ ಎನಿಸುವ ಮೂರು ಟಿಪ್ಪಣಿಗಳೂ ಎಲ್ಲೋ ಸಂಧಿಸುತ್ತವೆ ಮತ್ತು ಒಂದೇ ಎನಿಸುತ್ತವೆ. ಹಾಗೆಯೇ ಈ ಮೂರೂ ಟಿಪ್ಪಣಿಗಳು ಕಾದಂಬರಿಯ ಎರಡನೆಯ ಅಧ್ಯಾಯದಲ್ಲಿ ಬರುವ ಎಷ್ಟೊಂದು ಕತೆ ಎಷ್ಟೊಂದು ಮದುವೆಗಳಲ್ಲಿ ಯಾರೊಬ್ಬರದೂ ಆಗಬಹುದಾದ್ದು ಅನಿಸಿದರೆ ಅಚ್ಚರಿಯೇನಿಲ್ಲ. ಈ ಸಂಬಂಧ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ!

ಮುಂದೆ ಮೂರು ಮೆನುಕಾರ್ಡಿನ ಚರಿತ್ರೆ ಇದೆ. ಅದರ ಪೀಠಿಕೆ ಗಮನಿಸಿ : "ಬರೆಯುವವನಿಗೂ ಒಂದು ಅಹಂಕಾರ ಇರುತ್ತದಲ್ಲ. ಜಗತ್ತಿನಲ್ಲಿರುವ ಕಷ್ಟಕ್ಕಿಂತಲೂ, ಬರಹಗಾರನಾದವನಿಗೆ, ಅವನಿಗೆ ಅರ್ಥವಾದಷ್ಟೇ ಕಷ್ಟ, ಅವನು ಕಂಡಷ್ಟೇ ಕಷ್ಟ ಮುಖ್ಯವಾಗುತ್ತದೆ. ಅಷ್ಟೇ ಅಲ್ಲ, ಹಾಗೆ ಕಷ್ಟ ಪಡುವವರು ಅನುಭವಿಸುವ ನೋವಿಗಿಂತಲೂ ತನ್ನ ಬರವಣಿಗೆಯಲ್ಲಿ ಅಭಿವ್ಯಕ್ತವಾಗುವ ಕಷ್ಟ, ನೋವೇ ದೊಡ್ಡದು ಅಂತ ಕೂಡ ಬರಹಗಾರ ನಂಬತಾನೆ, ಭ್ರಮಿಸತಾನೆ."

ಉಪಸಂಹಾರ ಗಮನಿಸಿ: "ಈ ಮೂರೂ ವಿಶ್ಲೇಷಣೆಗಳು ಚೆನ್ನಾಗಿದೆಯಲ್ಲವೆ? ಹೌದು, ಚೆನ್ನಾಗಿದೆ. ಕೃಷ್ಣಪ್ಪನ ಟಿಪ್ಪಣಿಯನ್ನು ಯಾರೋ ದೂರದವರು ಹೇಳಿದರು ಅನ್ನುವಂತೆ ಬರೆದಿದ್ದೇನೆ. ಷಣ್ಮುಗಂ, ಕೌಶಿ ಗಂಡ ತಾವೇ ಹೇಳಿಕೊಂಡರು ಅನ್ನುವಂತೆ ಬರೆದಿದ್ದೇನೆ. ಎಲ್ಲವೂ ಒಂದೇ, ಎಲ್ಲವನ್ನೂ ನಾನು ಕಂಡಿರುವುದೇ, ಕೇಳಿರುವುದೇ. ಕಂಡಷ್ಟು ಮಾತ್ರವಲ್ಲ, ಕೇಳಿದ್ದು ಮಾತ್ರವಲ್ಲ, ಇನ್ನೂ ಏನೇನನ್ನೋ ಸೇರಿಸಿದ್ದೇನೆ, ತಪ್ಪುತಪ್ಪು ಮಾಹಿತಿಗಳನ್ನು, ಮಸಾಲೆ ಮಾಹಿತಿಗಳನ್ನು. ಅದಕ್ಕೇ ಮೂರೂ ವಿಶ್ಲೇಷಣೆಗಳು ಅಷ್ಟು ಚೆನ್ನಾಗಿರುವುದು, ಆಕರ್ಷಕವಾಗಿರುವುದು. ನನ್ನದು ಒಂದೇ ಆಸೆ, ನಾಳೆಯವರಿಗೆ ಸತ್ಯ ಗೊತ್ತಾಗಬಾರದು. ಏಕೆಂದರೆ ನಾಳಿನವರ ಆಸಕ್ತಿ ಸತ್ಯವಲ್ಲ. ನಾಳಿನ ದೃಷ್ಟಿಕೋನ, ನಾಳಿನ ಆ ಕ್ಷಣದ ಅಪೇಕ್ಷೆ ಮಾತ್ರ. ಅದರ ಅಗತ್ಯಕ್ಕೆ ತಕ್ಕಂತೆ ನಮ್ಮನ್ನು ನೋಡಿ ತೀರ್ಪು ಕೊಡುತ್ತಾರೆ. ಅದರಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಒಂದು ದಾರಿಯೆಂದರೆ ಅವರನ್ನೆ ದಾರಿ ತಪ್ಪಿಸುವುದು. ಅದಕ್ಕಾಗಿ, ನಾನು ಬರೆದ ಹಾಗೆ ಬರೆದು ಬಿಡುವುದೊಂದೇ ದಾರಿ."

ಇದೇ ಬಗೆಯ ಮಾತಿನಿಂದ ಸತ್ಯನಾರಾಯಣರು ಕಥಾನಕವನ್ನು ತೊಡಗಿದ್ದು ಸಹ. ಎರಡನೆಯ ಪುಟದಲ್ಲೇ ಸತ್ಯದ ಕುರಿತು ಕಥನಕಾರರಿಗೆ, ಕತೆಯನ್ನು ಓದುವವರಿಗೆ ಮತ್ತು ಒಟ್ಟಾರೆಯಾಗಿ ಎಲ್ಲರಿಗೂ ಇರುವ ಭಯ, ಅಹಿತದ ಬಗ್ಗೆ ಹೇಳುತ್ತಾರೆ. ಕೊನೆಯಲ್ಲೂ ನಿಲುವು ಅದೇ. ಆದರೆ ಸಾತತ್ಯ ಬೇರೆ. ಸತ್ಯನಾರಾಯಣರು ಈ ಪುಟ್ಟ ಕಾದಂಬರಿಯಲ್ಲಿ `ಒಳ್ಳೆ ದಾಸಯ್ಯನಂತಾಗಿ ಬಿಟ್ಟಿದ್ದೀನಿ ನಾನು' ಎಂದು ಹೇಳಿಕೊಂಡರೂ ಸಾಲು ಸಾಲಾಗಿ ಕತೆಯ ಬಿಳಲುಗಳನ್ನು ಹಬ್ಬಿಸುತ್ತ, ಇನ್ನೆಲ್ಲೋ ಒಂದನ್ನು ಇನ್ನೊಂದರ ಜೊತೆ ಕಟ್ಟುತ್ತ, ಕೆಲವನ್ನು ಅಕಾರಣ ಜೋಲು ಬಿಡುತ್ತ ಸಾಗಿದ್ದಾರೆ. ಆದರೆ ಈ ಎಲ್ಲ ಕತೆಗಳಿಗೆ ಅನನ್ಯವಾದ ಅನುರಣನ ಶಕ್ತಿ ಬರುವುದು, ಅವು ಸತ್ಯನಾರಾಯಣರು ಬಯಸುವಂತೆ ನಮ್ಮೊಳಗೆ ಬೆಳೆಯುವುದು, ಕತೆಯಾಗಿ ಅರಳುವುದು ಸಾಧ್ಯವಾಗುವುದು ಮಾತ್ರ ನಮ್ಮೊಳಗಿನ ಮಾನವೀಯ ತುಡಿತ ಮಿಡಿತಗಳ ಸಂವೇದನೆಗಳು ಜೀವಂತವಿದ್ದಾಗ ಮಾತ್ರ. ಇಲ್ಲಿ ಕಥನಕಾರನ ಯಾವುದೆ ತಂತ್ರಗಾರಿಕೆ, ಜಾಣ್ಮೆ, ಮಾತಿನಲ್ಲಿ ಮಂಟಪ ಕಟ್ಟುವ ವೃತ್ತಿಪರತೆ ಕೆಲಸಮಾಡುವುದಿಲ್ಲ. ಹಾಗಾಗಿಯೇ ಈ ಕಾದಂಬರಿಯ ಅಂತಃಸ್ಸತ್ವ ಬಹುಜನರ ಗ್ರಹಿಕೆಗೆ ಸಿಕ್ಕಿದಂತೆಯೇ ಕಾಣುವುದಿಲ್ಲ.

ಕೊನೆಯ ಅಧ್ಯಾಯದಲ್ಲಿ ಕಾಶೀಪತಯ್ಯನ ಮೊದಲನೆಯ ಹೆಂಡತಿಯ ಮಗ ಹರೀಶ ಅಮೆರಿಕದಿಂದ ಬಂದು ತನ್ನ ಹಣವನ್ನು ಸದ್ವಿನಿಯೋಗಗೊಳಿಸುವ ಯೋಜನೆಗಳನ್ನು ರೂಪಿಸುವ ವಿವರಗಳಿವೆ. ಇಲ್ಲಿ ಬರುವ, ಒಬ್ಬೊಬ್ಬರೂ ತಮ್ಮ ಮನೆಯೊಳಗೇ ತಮ್ಮದಲ್ಲದ ಒಂದು ಮಗುವನ್ನು ಬೆಳೆಸುವುದು ಎಂಬ ಪರಿಕಲ್ಪನೆಯೇ ಎಷ್ಟೊಂದು ಅದ್ಭುತ ಮತ್ತು ಚೇತೋಹಾರಿ! ವಾಸ್ತವದಿಂದ ಕೊಂಚ ದೂರಸರಿದಂತೆ ಕಾಣುವ ಇದರ ಆದರ್ಶಮಯತೆಯನ್ನು ಒಂದು ಘಳಿಗೆ ಮರೆತು ಯೋಚಿಸಿದರೂ ಈ ಕಥಾನಕದಲ್ಲಿ ಬರುವ ಜಾತೀಯ ಭಾವನೆ, ಅದು ಹುಟ್ಟಿಸುವ ಕ್ಷುದ್ರ ಮನಸ್ಸುಗಳು, ಮತ್ತೆ ಮತ್ತೆ ಬರುವ ಮದುವೆಗಳ ಮೂಲಕ ಮನುಷ್ಯ ಸಂಬಂಧಗಳು ಹೇಗೆಲ್ಲ ರೂಪುಗೊಳ್ಳಬಹುದು, ಯಾಕೆಲ್ಲ ವಿರೂಪಗೊಳ್ಳಬಹುದು ಎಂಬ ವಿವರಗಳೇ ಇಂಥ ಒಂದು ದಾರಿ ಬಿಟ್ಟರೆ ಅನ್ಯ ಪರಿಹಾರವೇ ಇಲ್ಲವೆಂಬಂಥ ಸ್ಥಿತಿಯನ್ನು ಹುಟ್ಟಿಸುವುದಂತೂ ಖಂಡಿತ.

"ತನಗೆ ವ್ಯತಿರಿಕ್ತವಾದದ್ದನ್ನೂ ತಿಳಿದುಕೊಳ್ಳುವ, ಪ್ರೀತಿಸುವ ಶಕ್ತಿ ಮತ್ತು ಪ್ರಜ್ಞೆ ಮಧ್ಯಮ ವರ್ಗಕ್ಕೆ ಇಲ್ಲ ಎನ್ನುವುದು ಈ ಕಾಲದ ಸತ್ಯ ಮತ್ತು ಈ ಕಾಲದ ಕತೆ" ಎಂದಿರುವ ಕುರ್ತಕೋಟಿಯವರ ಮಾತು ಈ ಕೃತಿ ಕನ್ನಡದ ಮನಸ್ಸುಗಳನ್ನು ತಲುಪ ಬೇಕಾದ ಪರಿಯಲ್ಲಿ ತಲುಪದೇ ಇರಲು ಇದ್ದಿರಬಹುದಾದ ಕಾರಣವನ್ನೂ ಸೂಚಿಸುತ್ತದೆ ಎನಿಸುತ್ತದೆ.

"ಅಷ್ಟಕ್ಕೆ ಮಾತ್ರವೇ ರಾಜರಾಣಿ - ತಿರುಕನ ಕತೆ ಒಂದಾಗಬಲ್ಲವೆ, ಒಂದೇ ಕತೆಯಾಗಬಲ್ಲವೆ?" ಎಂಬ ಪ್ರಶ್ನೆಯನ್ನೂ ಸೇರಿದಂತೆ ಈ ಕಾದಂಬರಿ ಎತ್ತುವ ನೂರಾ ಒಂದು ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಬಹುಕಾಲ ಧೇನಿಸುವಂತೆ ಮಾಡುವುದೇ ಈ ಕಾದಂಬರಿಯ ವಿಶಿಷ್ಟ ಸಾಧನೆ.

ಸನ್ನಿಧಾನ (ಕಾದಂಬರಿ) - ಕೆ.ಸತ್ಯನಾರಾಯಣ.
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪುಟಗಳು: 184 ಬೆಲೆ: ಎಪ್ಪತ್ತು ರೂಪಾಯಿ.
(ಹರಿಹರಪ್ರಿಯ ಅವರ `ಪ್ರಜಾಸಾಹಿತ್ಯ' ಮಾಸಪತ್ರಿಕೆಯಲ್ಲಿ ಪ್ರಕಟಿತ ಲೇಖನ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, October 29, 2008

ಭಯದ ಬಣ್ಣ ಹೇಗಿರುತ್ತದೆ?


ಒಂದು ಕನಸನ್ನು ಮಗ ನಿದ್ದೆಯಲ್ಲಿ ತೊಡಗುತ್ತಾನೆ. ಆದರೆ ಅದು ನನಸಾಗುವುದು ಅವನಿಗಲ್ಲ, ಅವನ ತಂದೆಗೆ. ಹುಡುಗನ ಅಪ್ಪ ಮಗನ ಈ ಕನಸನ್ನು ನಿಜವಾಗಿಯೂ ತನ್ನ ನನಸಿನಲ್ಲಿ ಎದುರಿಸುತ್ತಾನೆ. ಎದುರಿಸಿದ್ದರಿಂದಲೇ ಒಂದು ಬಗೆಯ ವಿಸ್ಮೃತಿಗೆ ತುತ್ತಾಗುತ್ತಾನೆ. ಅಪ್ಪನ ಈ ವಾಸ್ತವದ ಒಂದು ಭಾಗವನ್ನು ಕನಸಿನಿಂದೆಚ್ಚೆತ್ತವನಂತಿರುವ ಮಗ ಮುಂದುವರಿಸುತ್ತಾನೆ. ಅಥವಾ ಅವಾಸ್ತವಿಕ ಕನಸೊಂದರ ಈ ವಾಸ್ತವಿಕ ಮುಂದುವರಿಕೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾನೆ. ಎಲ್ಲೋ ಕಲ್ಪನೆಗೂ ಎಟುಕದ ಕಡೆಯಲ್ಲಿ ನಡೆದ ಮಗನ ಈ ಚಟುವಟಿಕೆಯನ್ನು ತನ್ನದೇ ವಿಸ್ಮೃತಿಯಲ್ಲಿ ಅಪ್ಪ ಕಾಣಬಲ್ಲವನಾಗುತ್ತಾನೆ. ಹಾಗೆ ಅಪ್ಪ ತನ್ನ ವಿಸ್ಮೃತಿಯಲ್ಲಿ ಕಂಡುಕೊಂಡಿದ್ದನ್ನು ಮುಂದೆ ಒಂದು ಕನಸಾಗಿ ಮಗ ಕಾಣುತ್ತಾನೆ, ಆ ತಂದೆಯ ಸಾವಿನ ನಂತರ!

`ತಿರೀಛ' ಕತೆ ಒಬ್ಬ ಅಪ್ಪ ಮಗನ ಕನಸು-ನನಸು-ಭ್ರಮೆ ಮತ್ತು ವಾಸ್ತವಗಳ ಪಾತಳಿಗಳಲ್ಲಿ ಏಕಕಾಲಕ್ಕೆ ಹರಿದಾಡುತ್ತ, ಈ ಅಪ್ಪ ಮಗನ ನಡುವೆ ಪಾರಂಪರಿಕವಾಗಿ ದಾಟಿ ಬಂದಿರಬಹುದಾದ ಸ್ಮೃತಿಯಲ್ಲಿ ತಲೆಮಾರಿನಿಂದ ತಲೆಮಾರಿಗೆ ದಾಟಿರಬಹುದಾದ ಭಯ, ಅಮಾಯಕತೆ, ವಿಧಿಯ ಅಸದೃಶ ಕೈವಾಡ ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳಲು ಯಶಸ್ವಿಯಾಗಿ ಯತ್ನಿಸುವ ವಿಶಿಷ್ಟ ವಿಧಾನದ ಕತೆ. ಇದು `ದೇಶಕಾಲ'ದ ಎಂಟನೆಯ ಸಂಚಿಕೆ (ಜನವರಿ-ಮಾರ್ಚ್ 2007)ಯಲ್ಲಿ ಪ್ರಕಟವಾದ ಹಿಂದಿ ಕತೆಗಾರ ಉದಯಪ್ರಕಾಶರ ವಿಶಿಷ್ಟ ಕತೆ. ಇದನ್ನು ಕನ್ನಡಕ್ಕೆ ಅನುವಾದಿಸಿದ್ದವರು ಮುಕುಂದ ಜೋಷಿ.
ತಿರೀಛ ಎಂಬ ಭಯಂಕರ ವಿಷಪ್ರಾಣಿಯ ಭಯ ಮಗನದ್ದು. ಇದು ಅವನ ಕನಸಿನಲ್ಲಿ ಬಂದು ಅವನನ್ನು ಹೆದರಿಸುತ್ತಿರುತ್ತದೆ. ಈ ಪ್ರಾಣಿಯ ಬಗ್ಗೆ, ಅದರ ವಿಲಕ್ಷಣ ವರ್ತನೆಯ ಬಗ್ಗೆ, ಅದರ ವಿಷದ ಘೋರ ಪರಿಣಾಮಕಾರತ್ವದ ಬಗ್ಗೆ ಮತ್ತು ಅದು ಗುರುತು ನೆನಪಿಟ್ಟುಕೊಂಡು ಅಟ್ಟಿಸಿಕೊಂಡು ಬರುವ ಬಗ್ಗೆ ಪುಟ್ಟ ಹುಡುಗ ಅಲ್ಲಿ ಇಲ್ಲಿ ಕೇಳಿದ ಅತಿರಂಜಿತ ನಂಬುಗೆ, ವದಂತಿ, ಸುಳ್ಳುಗಳೆಲ್ಲ ಸೇರಿ ನಿರ್ಮಿತವಾದಂತಿರುವ ಈ ಅಗೋಚರ ಭಯವೇ ಇಲ್ಲಿನ ವಸ್ತು. ಈ ತಿರೀಛ ಕನಸಿನಲ್ಲಿ ಅಟ್ಟಿಸಿಕೊಂಡು ಬಂದು ಕಚ್ಚಲು ಹವಣಿಸುವುದು ಮಗನನ್ನು. ಆದರೆ ನಿಜಕ್ಕೂ ಅದು ಒಂದು ದಿನ ಕಚ್ಚುವುದು ಮಾತ್ರ ಹುಡುಗನ ತಂದೆಯನ್ನು. ವಿಷಕ್ಕೆ ಚಿಕಿತ್ಸೆ ಪಡೆದ ತಂದೆಗೆ ಮರುದಿನ ಕೋರ್ಟಿಗೆ ಹೋಗುವ ಹಾದಿಯಲ್ಲಿ ಪಂಡಿತ ರಾಮ ಅವತಾರರು ಸಿಗುತ್ತಾರೆ. ಅವರು ಕೊಡುವ ಒಂದು ಸಲಹೆ - ಆ ತಿರೀಛವನ್ನು ಕೊಂದರಾಗಲಿಲ್ಲ, ಸುಡಬೇಕು; ಇಲ್ಲದಿದ್ದರೆ ಇಪ್ಪತ್ನಾಲ್ಕು ಗಂಟೆಗಳ ನಂತರವೂ ಅದರ ವಿಷ ಪರಿಣಾಮ ಬೀರುವುದು ಸಾಧ್ಯವಿದೆ ಎಂಬುದು. ಅದನ್ನು ಸುಟ್ಟು ಬಿಡಬೇಕು ಎನ್ನುವ ಸಲಹೆಯನ್ನು ಅವರು ನೀಡುತ್ತಿದ್ದ ಕಾಲಕ್ಕೇ ಅಲ್ಲಿದ್ದು ಕೇಳಿಸಿಕೊಂಡಂತೆ ವರ್ತಿಸುವ ಮಗ ಥಾನೂ ಜೊತೆ ಕಾಡಿಗೆ ಹೋಗಿ ತಾನು ತನ್ನ ಕನಸಿನಲ್ಲಿ ಮಾತ್ರ ಕಂಡಿದ್ದ ಕಾಡು, ಬೆಟ್ಟ, ಪೊದೆ, ಬಂಡೆ, ಕಾಲುವೆ ಎಲ್ಲವನ್ನೂ ವಾಸ್ತವಿಕವಾಗಿ ಗುರುತಿಸುತ್ತಾನೆ ಮಾತ್ರವಲ್ಲ ಸತ್ತ ತಿರೀಛದ ದೇಹವನ್ನೂ ಹುಡುಕಿ ಅದನ್ನು ಸುಡುತ್ತಾನೆ. ಇದನ್ನು ಮಾಡುವಾಗ ಥಾನೂ ಮಾತ್ರ ಅಳುತ್ತಿರುವುದು ಗಮನಿಸಬೇಕಾದ ಸಂಗತಿ.

ಕೋರ್ಟಿನ ಕೆಲಸಕ್ಕೆ ಪಟ್ಟಣಕ್ಕೆ ಹೋದ ತಂದೆ ಅಲ್ಲಿ ತನ್ನ ಕೊನೆಗಾಲ ಸಮೀಪಿಸುತ್ತಿದೆ ಎನ್ನುವ ಹೊತ್ತಿಗೆ ಅನುಭವಿಸುವ ಅನುಭೂತಿ ಮಗನ ಕನಸಿನಲ್ಲಿ ಮುಂದುವರಿಯುವುದು ಇಲ್ಲಿನ ಕೌತುಕ. ಸಾಯುವ ಕಾಲಕ್ಕೆ ತಿರೀಛ ಅನುಭವಿಸಿರಬಹುದಾದ ಒಂದು ಸ್ಥಿತಿಯನ್ನೇ ಹುಡುಗನ ತಂದೆ ಅನುಭವಿಸುವುದು ಇಲ್ಲಿನ ಒಂದು ವಿಶೇಷವಾದರೆ, ಮೂಕಪ್ರಾಣಿಯೊಂದರ ಕುರಿತ ಈ ಎಲ್ಲ ಅಪನಂಬುಗೆ, ಮೌಢ್ಯ, ಭಯ, ಬುದ್ಧಿಯುಳ್ಳ ಮನುಷ್ಯನಲ್ಲಿ ಕ್ರೌರ್ಯವಾಗಿ ಅಭಿವ್ಯಕ್ತಿಪಡೆಯುವುದನ್ನು ನವಿರಾಗಿ ಹಿಡಿದಿಡುವುದು ಈ ಕತೆಯ ಘನತೆಯನ್ನು ಬಹುವಾಗಿ ಹೆಚ್ಚಿಸಿರುವ ಅಂಶ.

ತಿರೀಛ ಎನ್ನುವುದು ಒಂದು ಭಯಂಕರ ವಿಷವಾಗಿ, ಅಮೂರ್ತ ಭಯವಾಗಿ ಇಲ್ಲಿ ಮುಖ್ಯ, ಅಷ್ಟೆ. ಈ `ವಿಷ' ಮತ್ತು ಅಮೂರ್ತ ಭಯ - ಎರಡೂ ಪಟ್ಟಣದ ಮಂದಿಯ ಮೈ ಮನಸ್ಸುಗಳನ್ನು ತುಂಬಿಕೊಂಡಿರುವುದರ ಚಿತ್ರ ಇಲ್ಲಿದೆ. ಕ್ಯಾಶ್ ಕೌಂಟರಿನಲ್ಲಿ ತನ್ನ ಕೆಲಸದಲ್ಲಿ ನಿಮಗ್ನನಾಗಿದ್ದ ಕ್ಯಾಶಿಯರನ ಭಯ, ಪೋಲೀಸ್ ಎಚ್.ಎಸ್.ಓ ಭಯ, ಕಲ್ಲು ಹೊಡೆಯುವ ಹುಡುಗರ ಮತ್ತು ಜನರ ಭಯ ಅಕಾರಣವಾದದ್ದು ಮತ್ತು ಅದೇ ಕಾಲಕ್ಕೆ ಭಯದ ಒಂದು ಕನಸಿನಷ್ಟೇ ನಿಷ್ಕಪಟವಾದದ್ದು. ಕುಡಿಯಲು ಒಂದು ಲೋಟ ನೀರು ಕೇಳುವುದಕ್ಕೂ ಹೆದರುವ, ಬಿದ್ದು ಹೋದ ತನ್ನದೇ ಕೋರ್ಟ್ ವ್ಯವಹಾರದ ಕಾಗದ ಪತ್ರಗಳನ್ನು ಕೇಳುವುದಕ್ಕೂ ಹೆದರುವ ಅಪ್ಪನ ಭಯದಷ್ಟೇ ನಿಷ್ಪಾಪವಾದದ್ದು. ಆದರೆ ಕಚ್ಚಿದ ತಿರೀಛವನ್ನು ಕೂಡಲೇ ಕೊಲ್ಲಬೇಕು, ಬರೇ ಕೊಂದರಾಗಲಿಲ್ಲ ಸುಟ್ಟುಬಿಡಬೇಕು ಎಂಬ ನಂಬುಗೆಯಲ್ಲಿರುವ `ವಿಷ'ವೇ ಈ ಅಕಾರಣ ಭಯದ ಹಿಂದೆಯೂ ನಿಂತು ನಡೆಸುವ ಕ್ರೂರ ಹಿಂಸೆಯೇನಿದೆ ಅದು ಮಾತ್ರ ಬೆಚ್ಚಿಬೀಳಿಸುವಂಥದು.

ಉದಯಪ್ರಕಾಶ ಇಲ್ಲಿ ಮನುಷ್ಯ ವರ್ತನೆಯ ದ್ವಂದ್ವ, ಗೊಂದಲ, ಮುಗ್ಧತೆ, ಕ್ರೌರ್ಯಗಳನ್ನು ಒಂದೆಡೆ ತರುತ್ತ ಅದಕ್ಕೆಲ್ಲ ಮೂಲವಾಗಬಲ್ಲ ಅವನ ಕ್ಷಣಿಕ ಅಸಡ್ಡೆ, ಬೇಜವಾಬ್ದಾರಿತನ, ಆತುರಗಳ ದುರಂತವನ್ನು ನಿರ್ವಹಿಸಿರುವ ಬಗೆ ಅದ್ವಿತೀಯವಾದದ್ದು. ಅವರ ಲೇಖನಿ ಒಂದು ಸಂಯಮದ, ಸಂತುಲಿತ ಸ್ಥಿಮಿತದಿಂದ ಈ ಕತೆಯನ್ನು ನಿರೂಪಿಸಿದೆ.

`ಮೋಹನದಾಸ' ಉದಯಪ್ರಕಾಶರ ನೀಳ್ಗತೆ. ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ. ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್.ಪಿ.ಹೆಗಡೆ. ಇವರು `ತಿರೀಛ' ಕತೆಯನ್ನು `ದೇಶಕಾಲ'ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ `ಮೋಹನದಾಸ' ಎಂಬ ನೀಳ್ಗತೆಯನ್ನು ತರಿಸಿ ಓದುತ್ತಾರೆ ಮತ್ತು ವಸ್ತು, ಶೈಲಿ, ತಂತ್ರದ ದೃಷ್ಟಿಯಿಂದ ಅದ್ಭುತವೆನಿಸುವ ಈ ನೀಳ್ಗತೆ ಕನ್ನಡಿಗರೆಲ್ಲರನ್ನು ತಲುಪಬೇಕೆಂಬ ಉದ್ದೇಶದಿಂದ ಅನುವಾದಿಸಲು ಮುಂದಾಗುತ್ತಾರೆ. ಆರ್.ಪಿ.ಹೆಗಡೆಯವರ ಈ ಘನ ಅಭಿರುಚಿಯ ಫಲಶ್ರುತಿ ಇದೀಗ ಲೋಹಿಯಾ ಪ್ರಕಾಶನದಿಂದಾಗಿ ನಮ್ಮೆಲ್ಲರ ಕೈಸೇರುವಂತಾಗಿರುವುದು ನಿಜಕ್ಕೂ ಅಭಿನಂದನೀಯ.

ಈ ಮೋಹನದಾಸನ ಹೆಂಡತಿ ಕಸ್ತೂರಿ, ತಾಯಿ ಪುತಲೀಬಾಯಿ, ಮಗ ದೇವದಾಸ ಹೌದಾದರೂ ಇದು ಮಹಾತ್ಮನ ಕತೆಯಲ್ಲ. ಈತನೊಬ್ಬ ಸಾಮಾನ್ಯ ದಲಿತ. ಈತನ ವ್ಯಕ್ತಿತ್ವದ ಒಂದೇ ಒಂದು ಅಸಾಮಾನ್ಯ ಅಂಶವೆಂದರೆ ಈತ ಪದವೀಧರ ಮಾತ್ರವಲ್ಲ, ಪ್ರತಿಭಾವಂತ ಪದವೀಧರನಾಗಿರುವುದು. ಅದೇ ಈತನ ಎಲ್ಲ ಗೋಳುಗಳಿಗೆ ಕಾರಣವಾಗುವುದು ಇಡೀ ಕತೆಯ ತಿರುಳು. ಫಸ್ಟ್‌ಕ್ಲಾಸ್‌ನಲ್ಲಿ ಡಿಗ್ರಿ ಮುಗಿಸಿದ ಈತನ ಹೆಸರು ಮೆರಿಟ್ ಲಿಸ್ಟ್‌ನಲ್ಲಿ ಎರಡನೇ ನಂಬರಿನಲ್ಲಿರುವುದು, ಓರಿಯೆಂಟಲ್ ಕೋಲ್ ಮೈನ್ಸ್‌ನ ನೌಕರಿಗಾಗಿ ನಡೆಯುವ ಲಿಖಿತ ಪರೀಕ್ಷೆ, ಸಾವಿರದೈನೂರು ಮೀಟರ್ ಓಟ, ವೇಗದ ನಡಿಗೆ, ಭಾರ ಎತ್ತುವುದು, ಜಿಗಿತ, ದೃಷ್ಟಿ-ಬಣ್ಣದ ಸೆನ್ಸ್ ಮುಂತಾದ ಶಾರೀರಿಕ ಪರೀಕ್ಷೆ ಎಲ್ಲದರಲ್ಲೂ ಮೊದಲನೆಯವನಾಗಿ ತೇರ್ಗಡೆಯಾಗುವುದು, ಸಂದರ್ಶನದಲ್ಲೂ ಇದೇ ಜಾಯ್ನಿಂಗ್ ಅಂದುಕೋ ಎನ್ನುವಷ್ಟರ ಮಟ್ಟಿಗೆ ಭರವಸೆಯನ್ನು ಪಡೆಯುವುದು - ಈತನ ಸಮಸ್ಯೆಗಳಿಗೆ ಮೂಲವಾಗುವುದು ವ್ಯವಸ್ಥೆಯ ವಿಡಂಬನೆ. ಉದ್ದಕ್ಕೂ ಈತ ಬದಿಗೆ ತಳ್ಳಲ್ಪಡುತ್ತಾನೆ ಮತ್ತು ತನಗೇನು ಅನ್ಯಾಯವಾಗಿದೆ, ಎಲ್ಲಿ ಆಗಿದೆ, ಹೇಗೆ ಆಗಿದೆ ಎಂಬುದು ಕೂಡಾ ಈತನಿಗೆ ತಿಳಿಯುವುದಿಲ್ಲ. ಈ ಅಜ್ಞಾನಕ್ಕೆ ಕಾರಣ ಈತನ ವ್ಯಕ್ತಿತ್ವದಲ್ಲಿ ಈವಿಲ್‌ ಇಲ್ಲವಾಗಿರುವುದೇ ಹೊರತು ಇನ್ನೇನಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿರುವಾಗಲೂ ಮೌಲ್ಯಗಳಲ್ಲಿ ಇನ್ನೂ ವಿಶ್ವಾಸವಿರುವುದು ಈತನ ದೌರ್ಬಲ್ಯವಾಗಿದೆ. ಕೊನೆಗೂ ಈತನಿಗೆ ವಾಸ್ತವದ ಅರಿವಾದಾಗ ಈತ ತಾನು ನಿಜಕ್ಕೂ ಯಾರು, ಯಾರ ಮಗ ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕಾದ ದೌರ್ಭಾಗ್ಯವನ್ನು ಎದುರಿಸಬೇಕಾಗುತ್ತದೆ. ಓಡಾಡುವ ಜೀವಂತ ವ್ಯಕ್ತಿಯೊಂದು ತಾನು ಸತ್ತಿಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕಾಗಿ ಬಂದಷ್ಟೇ ಸರಳ ಮತ್ತು ಕಠಿಣವಾದ ಸಂಗತಿಯಿದು. ತಬರನ ಕತೆ ನೆನಪಾಗುತ್ತದೆಯೆ? ಸರಕಾರದ ಭ್ರಷ್ಟ ಮುಷ್ಟಿಯೊಳಗಿನ ಮುಗ್ಧ ಹಕ್ಕಿಮರಿ ಈಗ ಬದುಕಿದೆಯೇ ಸತ್ತಿದೆಯೇ ಎಂದು ಹೇಳಬೇಕಾದ, ತತ್‌ಕ್ಷಣದ ಸತ್ಯ ಏನೆಂಬ ಒಗಟಿನಷ್ಟೇ ಸರಳವಾದದ್ದು. ನ್ಯಾಯಾಲಯದಲ್ಲಿ ಕೂಡ ನ್ಯಾಯದ ಪರವಾಗಿ ನಿಲ್ಲಬಲ್ಲ ಸಾಕ್ಷ್ಯ ದುರ್ಲಭವಾಗುತ್ತದೆ.

ಕತೆಯ ಮಹತ್ವವಿರುವುದು ಈ ದುರಂತದ ಚಿತ್ರಣದಲ್ಲಲ್ಲ. ಇದೆಲ್ಲ ಹೀಗೆ ಒಂದು ಕಲ್ಪನಾವಿಲಾಸದ ಕತೆಯೆಂಬಂತೆ ನಡೆಯುತ್ತಿರುವಾಗ ಕಥಾಲೋಕದಲ್ಲೇ ಓದುಗ ಕಳೆದುಹೋಗಬೇಕಿಲ್ಲ. ಕಥಾನಕ ನಿಮ್ಮೆದುರು ತೆರೆದುಕೊಳ್ಳುವ ವರ್ತಮಾನದಲ್ಲೇ ಹೊರಗಿನ ವಾಸ್ತವದ ಜಗತ್ತಿನಲ್ಲಿ ಏನು ನಡೆಯುತ್ತಿತ್ತು ಎಂಬ ಬಗ್ಗೆ ವಸ್ತುನಿಷ್ಠ ಸಂಗತಿಗಳನ್ನು ನೆನಪಿಸುವ ಕೆಲಸ ಕಥಾನಕದ ಜೊತೆಗೇ ಸಾಗುತ್ತದೆ. ಹೀಗೆ ಕಥಾಲೋಕ ಮೀಟುವ ಭಾವಸ್ತರವನ್ನು ವಾಸ್ತವ ಜಗತ್ತಿನ ವಿದ್ಯಮಾನಗಳು ಪ್ರಜ್ಞೆಯೊಂದಿಗೆ ಜೋಡಿಸುತ್ತವೆ. ಈ ಒಂದು ತಂತ್ರದ ಪರಿಣಾಮ ಗಮನಾರ್ಹವಾಗಿದೆ. ಜಗತ್ತು ಹೇಗೆ ಹೆಚ್ಚು ಹೆಚ್ಚು ಮುಂದುವರಿಯುತ್ತಿತ್ತು, ಎಂಥೆಂಥ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿದ್ದವು, ಹೊಸ ಹೊಸ ಒಪ್ಪಂದಗಳು ಹೇಗೆ ದೇಶದ ಭಾಗ್ಯದ ಬಾಗಿಲನ್ನು ತೆರೆಯುತ್ತಿದ್ದವು, ಚರ್ಚೆ-ಸಂವಾದಗಳಲ್ಲಿ ಹೇಗೆ ಅಭಿವೃದ್ಧಿಪರ ಮಂತ್ರಗಳು ಮೊಳಗುತ್ತಿದ್ದವು, ಭಾರತ ಹೇಗೆ ಪ್ರಕಾಶಿಸತೊಡಗಿತ್ತು, ಉಗ್ರರ ಅಟ್ಟಹಾಸ ಹೇಗೆ ಭುವಿಯನ್ನು ನಡುಗಿಸುತ್ತಿತ್ತು, ಎಂಥೆಂಥ ಭ್ರಷ್ಟ ಅಧಿಕಾರಿಗಳು ಸಿಕ್ಕಿಬಿದ್ದರೂ ಬಚಾವಾಗುತ್ತಿದ್ದರು, ಎಲ್ಲೆಲ್ಲಿ ಮುಗ್ಧ ಸ್ತ್ರೀಯರ ಮೇಲೆ ಬರ್ಬರ ಬಲಾತ್ಕಾರ ನಿರಾತಂಕವಾಗಿ ನಡೆಯುವುದು ಸಾಧ್ಯವಿರುತ್ತಿತ್ತು, ಮಕ್ಕಳು,ದಲಿತರು, ವಯೋವೃದ್ಧರು ಹೇಗೆ ಕಾಲನ ಕ್ರೌರ್ಯದ ತುಳಿತಕ್ಕೆ ಎಂದಿನಂತೆ ನಲುಗುತ್ತಲೇ ಇದ್ದರು ಎಂಬ ಟಿಪ್ಪಣಿಗಳು ಕಥಾನಕಕ್ಕೆ ಸಾಂದರ್ಭಿಕವಾಗಿ ಅದರ ವಿಭಿನ್ನ ಘಟ್ಟದಲ್ಲೇ ನಮಗೆ ಸಿಗುವುದರಿಂದ ಈ ನತದೃಷ್ಟ ಮೋಹನದಾಸ ನಮಗೆ ಭಾವುಕ-ಅವಾಸ್ತವಿಕ ಪಾತ್ರವಾಗದ ಸಾಧ್ಯತೆಯೊಂದು ಹುಟ್ಟಿಕೊಳ್ಳುತ್ತದೆ.

ಈ ಮೋಹನದಾಸನ ಕುರುಡಿ ತಾಯಿ, ಕೆಮ್ಮಿನಲ್ಲಿ ರಕ್ತ-ಮಾಂಸ ಉಗುಳುವ ತಂದೆ, ತಿವಾರಿ ಇನ್ಸ್‌ಪೆಕ್ಟರನ ಕಾಮುಕ ಲಾಲಸೆಯನ್ನು ಕೆರಳಿಸುವ ಕಸ್ತೂರಿಯ ಸೌಂದರ್ಯ, `ಮುದಿ ಎತ್ತಿನ ಅಂಡಕೋಶದ ಹಾಗೆ' ಜೋಲುಬಿದ್ದ ಮುಖದ ಮೋಹನದಾಸ - ಎಲ್ಲರ ದುರಂತ ಓದುಗನಿಗೆ ಅತಿರಂಜಿತವಲ್ಲ ಅನಿಸುವುದು, ಅಸಾಧ್ಯ-ಅಸಂಭವ ಅನಿಸದೇ ಇರುವುದು, ಅವಾಸ್ತವಿಕವೆನಿಸದ ಒಂದು ಸತ್ಯದರ್ಶನವಾಗುವುದು ಈ ತಂತ್ರದ ಸಫಲ ಕೊಡುಗೆ. ಮಾತ್ರವಲ್ಲ, ಇನ್ನಷ್ಟು ಭಯಂಕರವಾದ ಸತ್ಯಗಳು ಇಲ್ಲೇ ಎಲ್ಲೋ ಯಾರದೋ ಬದುಕಿನ ಕತೆಯಲ್ಲಿ ಅಗೋಚರವಾಗಿ ಅವಿತಿರಬಹುದೆಂಬ ಪ್ರಜ್ಞೆ ಮತ್ತು ಆತಂಕ ಕೂಡ ಮೂಡುವಂತಾಗುತ್ತದೆ. ಇಡೀ ಕತೆಯ ಮೂಲ ಉದ್ದೇಶವಿರುವುದೇ ಇಲ್ಲಿಗೆ ಓದುಗನನ್ನು ತಲುಪಿಸುವುದು ಮತ್ತು ಈ ಪ್ರಕ್ರಿಯೆ ಕತೆಯಲ್ಲಿ ಅತ್ಯಂತ ಕೌಶಲಪೂರ್ಣವಾಗಿ, ಅದ್ಭುತವಾಗಿ ಯಶಸ್ಸು ಕಂಡಿದೆ.

ಕತೆ ಸುರುವಾಗುವುದು `ಭಯದ ಬಣ್ಣ ಹೇಗಿರುತ್ತದೆ?' ಎಂಬ ಪ್ರಶ್ನೆಯೊಂದಿಗೆ. ಈ ಎರಡೂ ಕತೆಗಳು ತಿಳಿಯಲು ಹಾತೊರೆಯುವ ಸಂಗತಿ ಇದೇ. ಆದರೆ ಈ ಭಯ ಯಾವುದರದ್ದು ಎಂಬುದು ಇದಕ್ಕಿಂತ ಹೆಚ್ಚು ಗಹನವಾದ ಪ್ರಶ್ನೆ, ಕೇಳದೆಯೇ ಮನಸ್ಸಿನಲ್ಲಿ ಏಳುವಂಥದ್ದು, ಉದಯಪ್ರಕಾಶರ ಕಥಾನಕ ಹಿಡಿದಿಡಲು ಸದಾ ಯತ್ನಿಸುತ್ತಿರುವಂಥದು. ಇವತ್ತಿನ ನಾಗರಿಕ ಜಗತ್ತಿನಲ್ಲಿ ಮೌಲ್ಯಗಳೊಂದಿಗೆ ಬದುಕ ಬಯಸುವ ಪ್ರತೀ ಮನುಷ್ಯನೂ ತನ್ನಂತರಂಗದಲ್ಲಿ ಅನುಭವಿಸುವ ತಳಮಳ, ನಿರಂತರ ಮುಖಾಮುಖಿಯಾಗುವ ಗೊಂದಲ, ಎದುರಿಸುವ ಅಪಮಾನ, ಕುಹಕ, ಸೋಲು ಎಲ್ಲವನ್ನೂ ಕಾಣುತ್ತೇವೆ ಈ ಕತೆಗಳಲ್ಲಿ, ಈ ಸಣ್ಣ ಸರಳ, ಮೂರ್ಖ ಪ್ರಶ್ನೆಯಲ್ಲಿ.


ಮೋಹನದಾಸ (ನೀಳ್ಗತೆ)
ಮೂಲ ಹಿಂದಿ ಕತೆಗಾರ: ಉದಯಪ್ರಕಾಶ
ಅನುವಾದ: ಆರ್.ಪಿ.ಹೆಗಡೆ
ಪ್ರಕಾಶಕರು: ಲೋಹಿಯಾ ಪ್ರಕಾಶನ, `ಕ್ಷಿತಿಜ', ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103 (08392-257412)
ಪುಟಗಳು: 108, ಬೆಲೆ : ರೂಪಾಯಿ ಐವತ್ತು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, October 27, 2008

ಪ್ರೇಮ, ಕಾಮ ಮತ್ತು ಮನುಷ್ಯ ಸಂಬಂಧ...


ತನ್ನ ತೊಂಭತ್ತನೆಯ ಹುಟ್ಟುಹಬ್ಬಕ್ಕೆ ಇನ್ನೂ ಕನ್ಯೆಯಾಗಿರುವ ಒಬ್ಬಳು ಹುಡುಗಿಯನ್ನು ಗೊತ್ತುಪಡಿಸುವಂತೆ ಬೆಲೆವೆಣ್ಣುಗಳ ಯಜಮಾನ್ತಿಗೆ ಕರೆಮಾಡುವ ಈ ನಿರೂಪಕನ ಒಂಟಿತನ, ಪ್ರೇಮವಿಲ್ಲದ ಬದುಕಿನ ಬರಡುತನ, ಜೀವಂತಿಕೆಯಿಲ್ಲದ ದೈನಂದಿನಗಳನ್ನು ಅನಾವರಣಗೊಳಿಸುತ್ತ ಹೋಗುವ ಕಾದಂಬರಿ Memories of My Melocholy Whores. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಹತ್ತು ವರ್ಷಗಳ ದೀರ್ಘ ವಿರಾಮದ ಬಳಿಕ ಬರೆದ ಮೊದಲ ಕಾದಂಬರಿಯಿದು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಅತೀವ ಕುತೂಹಲ, ನಿರೀಕ್ಷೆಗಳನ್ನೆಬ್ಬಿಸಿತ್ತು. Edith Grossman ಎಂಬ ನುರಿತ ಅನುವಾದಗಾರ್ತಿ ಇದನ್ನು ಇಂಗ್ಲೀಷಿಗೆ ತಂದಿದ್ದಾರೆ.

ಅವನೊಬ್ಬ ಬರಹಗಾರ. ಪತ್ರಕರ್ತನಾಗಿ ನಿವೃತ್ತನಾದವನು. ಸಂಗೀತ ಅವನ ಆಸಕ್ತಿ. ಕಲಾ ವಿಮರ್ಶಕ. ಆದರೆ ಬಯಸಿ ಬಯಸಿ ಒಂಟಿಯಾಗಿಯೇ ಉಳಿದವನು. ಮದುವೆಯಿಂದ ತಪ್ಪಿಸಿಕೊಂಡ ಸಾಹಸಿ. ಸ್ನೇಹಿತರಿಲ್ಲದವನು; ಹಿಂದೆ ಇದ್ದವರೂ ಈಗಾಗಲೇ ನ್ಯೂಯಾರ್ಕ್ ಸೇರಿಯಾಗಿದೆ. ನ್ಯೂಯಾರ್ಕಿಗೆ ಅಂದರೆ ಹಿಂದಿನದ್ದನ್ನು ನೆನೆಯಲಿಚ್ಛಿಸದ ಸತ್ತವರು ಸೇರುವ ಜಾಗಕ್ಕೆ, ಅಪರಲೋಕಕ್ಕೆ! ಅವನು ಎಲ್ಲಿಗೂ ವಿಶೇಷತಃ ಟೂರು ಹೋದವನಲ್ಲ. ಹಣಕ್ಕೆ ತತ್ವಾರವಿದ್ದರೂ ಅವನು ಕ್ರಮಬದ್ಧವಾಗಿ ಮಾಡಿದ್ದೆಂದರೆ ಖಾನ, ಪಾನ, ಗಾನ ಮತ್ತು ಸೋನ. ಕೊನೆಯದು ಹೆಚ್ಚಾಗಿ ಬೆಲೆವೆಣ್ಣುಗಳ ಜೊತೆಗೇ ಎನ್ನಬಹುದು. ಕೆಲವೊಂದು ಬಾರಿ ಅವನಿಗೆ ಅಲ್ಲಿನ ವರ್ಷದ ಗ್ರಾಹಕ ಎಂಬ ಹೆಗ್ಗಳಿಕೆ ಪ್ರಾಪ್ತವಾದದ್ದೂ ಉಂಟು!

ಬದುಕು ತನಗೆ ನೀಡಿದ್ದು ಇಷ್ಟನ್ನೆ; ಸ್ವಲ್ಪ ಹೆಚ್ಚಿನದ್ದನ್ನು ದಕ್ಕಿಸಿಕೊಳ್ಳಲು ತಾನಾದರೂ ಪ್ರಯತ್ನಿಸಿದ್ದಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಈತ ಬದುಕನ್ನು ಅದು ಬಂದಂತೆ, ಇದ್ದಂತೆ ಒಪ್ಪಿಕೊಂಡ ಸ್ವೀಕೃತಿಯ ಮನೋಭಾವದವನು. ಮುದ್ದು ಮಾಡಿ ಬೆಳೆಸಲ್ಪಟ್ಟ ಮಗು ತಾನು ಎನ್ನುವ ಈತ ಬಹುಮುಖ ಪ್ರತಿಭೆಯ ತನ್ನ ತಾಯಿಯನ್ನು ಆಗಾಗ ನೆನೆಯುತ್ತಾನೆ. ನಿಷ್ಠುರ ಸ್ವಭಾವದವನಿರಬಹುದಾದ ತಂದೆಯನ್ನು ಹೆಚ್ಚು ವಿವರಿಸುವುದಿಲ್ಲ. ತಾಯಿಯ ಪೇಂಟಿಂಗುಗಳ ಜೊತೆ, ಅವಳ ಹಳೆಯ ಆಭರಣಗಳ ಜೊತೆ ಕೊಂಚಮಟ್ಟಿಗೆ ಭಾವನಾತ್ಮಕ ಕೊಂಡಿಯೊಂದು ಉಳಿದಿರುವಂತೆ ಸ್ಪಂದಿಸುವ ನಿರೂಪಕ ನಿರ್ಭಾವುಕ ಜೀವಿಯೇನಲ್ಲ. ಆದರೆ ಪ್ರೇಮವಿಲ್ಲದ, ಅನುರಕ್ತಿಯಿಲ್ಲದ ವ್ಯಾವಹಾರಿಕ ಭಾವಸ್ತರದ ಒಂದು ಯಾಂತ್ರಿಕ ಬದುಕಿನ ಈ ಹಂತದಲ್ಲಿ, ತೊಂಭತ್ತರ ಹರೆಯದಲ್ಲಿ ಅವನ ಭಾವಕೋಶಗಳು ಅರಳತೊಡಗುವ ಕತೆ ಇಲ್ಲಿದೆ.

"ಒಂದು ಹೆಣ್ಣಿನೊಂದಿಗೆ ಪ್ರೀತಿಯಿಂದ ಕೂಡುವುದೆಂದರೆ ಏನೆಂದು ತಿಳಿಯದೇ ಸಾಯಬೇಡ. ಇನ್ನೂ ತಡಮಾಡಬೇಡ, ಜಾಗ್ರತೆ!" ಎಂದು ಇವನನ್ನು ಅವನ ಹರೆಯದ ಹಾಸುಗೆಯ ಗೆಳತಿಯೊಬ್ಬಳು ಎಚ್ಚರಿಸುತ್ತಾಳೆ. ಆ ವೇಳೆಗಾಗಲೇ ಪ್ರೀತಿಯ ಮೋಹಕ ಜಾಲದಲ್ಲಿ ತನ್ನನ್ನೆ ತಾನು ಕಳೆದುಕೊಂಡಿರುವ ಅರಿವು ಇರುತ್ತ ಈ ಮಾತು ಇವನಿಗೆ ಅರ್ಥವಾಗುತ್ತದೆ. ಸರಿ ಸುಮಾರು ಇದೇ ಅವಧಿಯಲ್ಲಿ ಈತನ ಹುಟ್ಟುಹಬ್ಬಕ್ಕೆಂದು ಪ್ರಿಂಟರ್ಸ್ ನೀಡಿದ ಒಂದು ಸಾಕು ಬೆಕ್ಕು ಇವನನ್ನು ಕಾಡುತ್ತಿರುತ್ತದೆ. ಎಂದೂ ಮುದ್ದಿನ ಪ್ರಾಣಿಗಳತ್ತ ಒಲವು ತೋರಿರದ ಈ ಮನುಷ್ಯನಿಗೆ ಅದರ ಬಗ್ಗೆ ಕ್ರಮೇಣ ಬೆಳೆಯುವ ಕಾಳಜಿ, ಬೆಕ್ಕನ್ನು ಸಾಕುವ ಕುರಿತು ಅವನು ಪುಸ್ತಕಗಳನ್ನು ಓದಿಕೊಂಡು ತಯಾರಾಗುವ ರೀತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಕಾಯಿಲೆಯಾದಾಗ ವೈದ್ಯರು ಕೊಡುವ ಸಲಹೆಯ ಎದುರು ಈತ ವಿಚಲಿತನಾಗುವ ಬಗೆ ಗಮನಾರ್ಹವೆನಿಸುತ್ತವೆ. ವಯಸ್ಸಾಗಿದೆ ಅದಕ್ಕೆ, ಸಾಯಲು ಬಿಡುವುದು ಉತ್ತಮ ಎಂದಾದಾಗ, ಕೇವಲ ವಯಸ್ಸಾಗಿದೆ ಎಂಬ ಒಂದೇ ಕಾರಣಕ್ಕೆ ಅದನ್ನು ಕೊಲ್ಲಬೇಕೇ ಎಂಬ ದ್ವಂದ್ವ ಕಾಡತೊಡಗುತ್ತದೆ. ತಾನೂ ವಯಸ್ಸಾದವನೇ ಅಲ್ಲವೆ? ತನ್ನ ಅಂಕಣದಲ್ಲಿ ಅದರ ಕುರಿತೇ ಬರೆಯುತ್ತಾನೆ. ಬೆಕ್ಕು ಉಳಿಯುತ್ತದೆ, ಬರೇ ಮನೆಯಲ್ಲಿ ಮಾತ್ರವಲ್ಲ, ಮನದಲ್ಲೂ.

ಇಡೀ ದಿನ ಬಟನ್ನು ಹೊಲಿಯುವ, ಆ ನಂತರ ತನ್ನ ತಮ್ಮಂದಿರು-ತಂಗಿಯರ ಊಟಮಾಡಿಸಿ, ಅವರನ್ನು ಮಲಗಿಸುವ, ಕಾಯಿಲೆಯ ತಾಯಿಯ ಕಾಳಜಿವಹಿಸಿ, ಅವಳನ್ನೂ ಮಲಗಿಸಿ ತನ್ನ ದಿನದ ಎಲ್ಲಾ ಕೆಲಸ ಮುಗಿಸುವ ಹೊತ್ತಿಗೆ ರಾತ್ರಿ ಹತ್ತು ಗಂಟೆ. ಆಗಷ್ಟೇ ಇನ್ನೂ ಹದಿನಾಲ್ಕರ ಅವಳಿಗೆ ಈ ತೊಂಭತ್ತರ ರಸಿಕನ ಹಾಸುಗೆಗೆ ಬರುವುದಕ್ಕೆ ಸಾಧ್ಯ. ಆದರೂ ಬಂದೇ ಬರುತ್ತಾಳವಳು. ಇವನು ಕೋಣೆಯನ್ನು ಹೊಗುವ ಮುನ್ನವೇ ಅವಳು ಅಲ್ಲಿ ಬಂದಿರುತ್ತಾಳೆ. ಆದರೆ ಹೇಗೆ?

ಪೂರ್ತಿಯಾಗಿ ನಗ್ನಳಾಗಿ ಮಲಗಿದ ಹದಿನಾಲ್ಕರ ಪೋರಿಯನ್ನು ಅಲ್ಲಿ ಅವನು ಕಾಣುತ್ತಾನೆ. ಅವಳ ಪುಟ್ಟ ಪುಟ್ಟ ಮೊಲೆಗಳಿನ್ನೂ ಪೂರ್ತಿಯಾಗಿ ಅರಳಿಲ್ಲ. ದೇಹ ತುಂಬಿಕೊಂಡಿಲ್ಲ. ದುಡಿದು ದಣಿದು ಹೇಗೆ ಗಾಢವಾದ ನಿದ್ದೆಗೆ ಜಾರಿ ಮಲಗಿದ್ದಾಳೆಂದರೆ ಎಚ್ಚರಿಸುವ ಮನಸ್ಸೂ ಆಗದೆ ಅವಳು ಏಳಬಹುದೆ ಎನ್ನುವ ನಿರೀಕ್ಷೆಯಲ್ಲೇ ಇಡೀ ರಾತ್ರಿ ಕಳೆಯುತ್ತದೆ. ಅವಳ ಬಡತನದ ಕುರುಹುಗಳಾಗಿ ಅಲ್ಲಿ ಅವಳು ಕಳಚಿಟ್ಟ ಅವಳ ಉಡುಪುಗಳು, ಚಪ್ಪಲಿ ಎಲ್ಲ ಇವೆ. ಕೋಣೆ ಕೂಡ ಅವಳಷ್ಟೇ ಬಡವಾಗಿದೆ. ಕ್ರಮೇಣ ಅವರು ಹೀಗೆ ಕಳೆಯುವ ರಾತ್ರಿಗಳ ಸಂಖ್ಯೆ ಹೆಚ್ಚುತ್ತದೆ. ಈ ಲೋಕದಲ್ಲೇ ಇಲ್ಲದ ಹಾಗೆ ಮಲಗಿರುವ ಅವಳಿಗೆ ಇಷ್ಟವಾದ ಕತೆ, ಹಾಡು ಎಲ್ಲವನ್ನೂ ಅವಳ ಕನವರಿಕೆಗಳಿಂದ, ನಿದ್ದೆಯಲ್ಲೇ ಅವಳು ಒಮ್ಮೊಮ್ಮೆ ಬೀರುವ ಮುಗುಳ್ನಗೆಯಿಂದ ತಿಳಿದುಕೊಂಡು ಅವಳಿಗಾಗಿ ಕತೆಯೋದುತ್ತಾನೆ. ಪ್ಲೇಯರಿನಲ್ಲಿ ಹಾಡು ಹಾಕುತ್ತಾನೆ. ಅವಳಿಗಾಗಿ ಆ ಕೋಣೆಯನ್ನು ಪೇಂಟಿಂಗು, ಗಡಿಯಾರ ಇತ್ಯಾದಿಗಳಿಂದ ಅಲಂಕರಿಸುತ್ತಾನೆ. ಅವಳಿಗೆ ತನ್ನದೇ ಕಲ್ಪನೆಯ ಒಂದು ಹೆಸರನ್ನಿಡುತ್ತಾನೆ. ಹಗಲಲ್ಲಿ ತನ್ನದೇ ಮನೆಯಲ್ಲಿ ತಾನು ಮಾಡುವ ಪ್ರತಿಯೊಂದು ದೈನಂದಿನಗಳಲ್ಲೂ ಅವಳು ತನ್ನ ಜೊತೆಗಿದ್ದಾಳೆಂದು ಅನಿಸತೊಡಗುತ್ತದೆ ಅವನಿಗೆ. ಸದಾ ಅವಳ ಸಾನ್ನಿಧ್ಯವನ್ನು ಅವನು ಅನುಭವಿಸುತ್ತಾನೆ. ಅಲ್ಲಿಂದ ಮುಂದೆಂದೂ ಅವನಿಗೆ ತಾನು ಒಂದೇ ಜೀವ ಅನಿಸುವುದೇ ಇಲ್ಲ!

ಹೀಗೆ ಅವನು ಅವಳ ಹಾಸುಗೆಯಲ್ಲೆ ಕೂತು ಆ ನಗ್ನ ದೇಹವನ್ನು ಇಂಚು ಇಂಚಾಗಿ ನೋಡುತ್ತ, ಪುಳಕಗೊಳ್ಳುತ್ತ, ಕತೆಗಳನ್ನು ಓದುತ್ತ, ಮಾತಿನಲ್ಲೆ ಅವಳನ್ನು ಮುದ್ದು ಮಾಡುತ್ತ, ಅವಳಾ ಕಿವಿಯಲ್ಲಿ ಆಗೊಮ್ಮೆ ಈಗೊಮ್ಮೆ ಪಿಸುಗುಟ್ಟಿ, ಹಣೆಗೆ ಮುತ್ತಿಟ್ಟು ಮಾಡಿದ್ದೇನು?

ಅದರ ಅರಿವು ಪಾಪ ಅವನಿಗೂ ಇದ್ದಂತಿಲ್ಲ. ಅರಿವಾಗಲು ಒಂದು ದುರ್ಘಟನೆ ಕಾರಣವಾಗುವುದು ಈ ಕಾದಂಬರಿಯ ಕ್ಲೈಮ್ಯಾಕ್ಸ್. ಏನು ಪ್ರೀತಿಯೆಂದರೆ? ಅದೇಕೆ ಸದಾ ಎರಡು ಅಲುಗಿನ ಕತ್ತಿ? ಅದು ಬರುವಾಗಲೂ ಕೊಯ್ಯುತ್ತ ಹೋಗುವಾಗಲೂ ಕೊಯ್ಯುತ್ತ ಯಾಕೆ ಕಾಡುತ್ತದೆ? ಗೊತ್ತಿಲ್ಲ ಅವನಿಗೆ. ಆದರೆ ತೊಂಭತ್ತರ ಈ ಪ್ರೇಮಿ ಅವಳಿಗಾಗಿ ಹುಚ್ಚನಾಗುತ್ತಾನೆ. ಅವಳನ್ನು ಕಳೆದುಕೊಂಡು ತನ್ನ ಬದುಕನ್ನೆ ಕಳೆದುಕೊಳ್ಳುತ್ತಾನೆ. ಎಲ್ಲ ಹರೆಯದ ಭಗ್ನಪ್ರೇಮಿಗಳಂತೆಯೇ ಇವನು ಕೂಡ ಅರೆಹುಚ್ಚ, ಸಂನ್ಯಾಸಿ, ಕ್ರೂರಿ...

ನಮ್ಮ ಕೆ.ಎಸ್.ನರಸಿಂಹ ಸ್ವಾಮಿ ಹಾಡಿಲ್ಲವೆ, `ಪ್ರೇಮವೆನಲು ಹಾಸ್ಯವೆ....'

ಚಂದ್ರಶೇಖರ ಕಂಬಾರರ "ಜೀಕೆ ಮಾಸ್ತರರ ಪ್ರಣಯ ಪ್ರಸಂಗ" ಎಂಬ ಕಿರುಕಾದಂಬರಿಯ ನೆನಪಾಗುತ್ತದೆ. ನಡುವಯಸ್ಸಿನ ಮಾಸ್ತರರನ್ನು ಸೆಳೆಯುವ ಬಾಲೆ, ಇನ್ಯಾವುದೋ ತರುಣನ ಜೊತೆ ಮಾತನಾಡುವುದು ಕಣ್ಣಿಗೆ ಬಿದ್ದರೂ ತಲ್ಲಣಿಸುವ ಮಾಸ್ತರರ ಪ್ರೇಮದ ಉತ್ಕಟತೆ, ಆ ತರುಣನ ತಲೆ ಕಂಡರೇ ಕೆರಳುವ ದ್ವೇಷ, ಸಿಟ್ಟು...ಕೊನೆಯಲ್ಲಿ ತಮ್ಮದೇ ಹುಚ್ಚಿನೆದುರು ತಾವೇ ಪೆಚ್ಚಾಗುವ ಮಾಸ್ತರರಿಗೆ ಪ್ರೇಮ ವಯಸ್ಸಿನ ಪಾಠ ಕಲಿಸುತ್ತದೆ, ಬದುಕಿನ ಸತ್ಯ ಕಾಣಿಸುತ್ತದೆ.

ಇನ್ನೊಂದು ಕತೆ ನೆನಪಾಗುತ್ತದೆ. ಇದೂ ನೀಳ್ಗತೆ ಅಥವಾ ಕಿರುಕಾದಂಬರಿ. ಅದರ ಹೆಸರಾಗಲೀ, ಅದನ್ನು ಬರೆದವರ ಹೆಸರಾಗಲೀ (ಎಂ.ಎನ್.ವ್ಯಾಸರಾವ್ ಇರಬಹುದೆ?) ಈಗ ನೆನಪಾಗುತ್ತಿಲ್ಲ. ಮಯೂರದಲ್ಲಿ ಅದನ್ನು ಓದಿದ್ದು. ಬಟ್ಟೆಯಂಗಡಿಯಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದ ನಾಯಕನಿಗೆ ನಡುವಯಸ್ಸು. ಅಕ್ಕತಂಗಿಯರ ಮದುವೆ, ಬಾಣಂತನ, ವರೋಪಚಾರದ ಬಾಕಿಚುಕ್ತಾ, ವಯಸ್ಸಾದ ಹೆತ್ತವರ ಪಾಲನೆ ಪೋಷಣೆ ಎಂದೆಲ್ಲ ಎಂದೂ ಮುಗಿಯದ ಸಂಸಾರ ತಾಪತ್ರಯಗಳಲ್ಲಿ ಇವನು ಮದುವೆಯಾಗದೇ ಉಳಿದುಬಿಟ್ಟಿರುತ್ತಾನೆ. ನಡುವಯಸ್ಸಿನ ಮನಸ್ಥಿತಿಯಲ್ಲಿ ಇದೆಲ್ಲ ಹೆಚ್ಚು ಸೂಕ್ಷ್ಮವಾಗಿ ಬಿಡುತ್ತದೇನೋ. ಇವನನ್ನು ಬಟ್ಟೆಯಂಗಡಿಗೆ ಹೊಸದಾಗಿ ಸೇರಿದ ಹುಡುಗಿಯೊಬ್ಬಳು ಸೆಳೆಯುತ್ತಾಳೆ. ಅದು ಅನುಕಂಪವೋ, ಕರುಣೆಯೋ, ಪ್ರೇಮವೋ, ಮೋಹವೋ ತಿಳಿಯದ ಗೊಂದಲ ಒಂದುಕಡೆಗಿರುತ್ತ ನಿಜಕ್ಕೂ ಅವಳಿಗೆ ತನ್ನಲ್ಲಿ ಮನಸ್ಸಿರಬಹುದೇ ಎಂಬ ತಳಮಳ ಇನ್ನೊಂದೆಡೆ. ಮನೆಯ ಒಡಕು ದೋಣಿಯಲ್ಲಿ ಅವಳ ಸೇರ್ಪಡೆ ಉಂಟು ಮಾಡಬಹುದಾದ ತಲ್ಲಣಗಳ ಕುರಿತ ನಿರಂತರ ಚಿಂತೆ. ಪ್ರೇಮ ಅವನನ್ನು ಹೀಗೆಲ್ಲ ದಹಿಸುತ್ತ ಖುಶಿಯ ಝಲಕ್ ಕೊಡುತ್ತಿರುವಾಗಲೇ ಪ್ರೇಮದ ನಾಟಕ ದುರಂತದಲ್ಲಿ ಕೊನೆಯಾಗುತ್ತದೆ. ಹೌದು, ನಾಟಕವೇ. ಹುಡುಗಿ ಬಟ್ಟೆಯಂಗಡಿಯನ್ನು ಸಾಕಷ್ಟು ದೋಚಿ, ಅದರ ಹೊಣೆ ಇವನದಾಗುವಂತೆ ಮಾಡಿ ತನ್ನ ಪ್ರಿಯಕರನೊಂದಿಗೆ ಕಣ್ಮರೆಯಾಗುತ್ತಾಳೆ. ಈತನ ಪಾಡು ನಾಯಿಪಾಡೇ.

ನಡುವಯಸ್ಸಿನ ಹಿನ್ನೋಟ, ಮುಖ್ಯವಾಗಿ ಪ್ರೇಮ, ಭಾವನಾತ್ಮಕ ಸಂಬಂಧ ಇತ್ಯಾದಿಗಳ ತುಡಿತದ ಹಿನ್ನೆಲೆಯಲ್ಲಿ, ಎಲ್ಲರಿಗೂ ಸಾಮಾನ್ಯವಾದದ್ದೇ ಇರಬಹುದು. ಕುಸುಮಾಕರ ದೇವರಗೆಣ್ಣೂರ ಅವರ ನಿರಿಂದ್ರಿಯ ರೊಳ್ಳಿ ಮತ್ತು ಶಿವರಾಮ ಕಾರಂತರ ಕೇವಲ ಮನುಷ್ಯರು ಕಾದಂಬರಿಯ ಹಯವದನ ರಾಯರನ್ನು ನೆನೆಯುತ್ತೇನೆ. ರೊಳ್ಳಿ ತನ್ನ ಇಡೀ ಬದುಕನ್ನು ಹಣದ ಹಿಂದೆ ಹೂಡಿದ ಏಕಾಗ್ರಚಿತ್ತದ ಓಟವನ್ನಾಗಿಸಿಕೊಂಡು ಕಳೆದಿದ್ದಾನೆ. ಇಡೀ ಬದುಕನ್ನು ಪ್ರೇಮದ, ಭಾವದ ಸ್ಪರ್ಶವಿಲ್ಲದೆ ಕಳೆದಿದ್ದಾನೆ. ಈಗ ನಿವೃತ್ತಿ ಅವನಿಗೆ ನರಕಸದೃಶವಾಗಿದೆ. ಜಗತ್ತಿನಲ್ಲಿ ಎಲ್ಲರೂ ತಿಂದುಂಡು ಹಾಯಾಗಿರುವುದನ್ನು ಇದೇ ಮೊದಲಬಾರಿಗೆಂಬಂತೆ ಕಾಣುವ ಅವನಿಗೆ ಇಹವೂ ಪರವೂ ಅಗಮ್ಯವಾಗಿರುವುದರ ಅರಿವಾಗುತ್ತಿದೆ. ಜೀವನದರ್ಶನ? ಊಹೂಂ, ಇಲ್ಲ. ಕಾರಂತರ ಹಯವದನರಾಯರು ಕೂಡ ಸರಿಸುಮಾರು ರೊಳ್ಳಿಯ ಪಾಲಿಶ್ಡ್ ವರ್ಷನ್ ಎನ್ನುವಂತಿದ್ದಾರೆ. ಇವರ ಪತ್ನಿ ಕೂಡ ವ್ಯವಹಾರದಲ್ಲಿ ಸಿಕ್ಕಿದ ಒಂದು ಲಾಭಾಂಶದಂತಿದ್ದಾಳೆ! ಮನುಷ್ಯ ಸಂಬಂಧದ ನಿಜವಾದ ಅರ್ಥ ಇವರಿಗೆ ತಿಳಿಯುವುದು ಇವರ ಬದುಕಿನಲ್ಲಿ ಗಂಡನನ್ನು ಬಿಟ್ಟ ಕಾವೇರಿಯ ಪ್ರವೇಶವಾದ ಮೇಲೆಯೇ.

ಮುಸ್ಸಂಜೆಯ ಪ್ರೇಮ ಪ್ರಸಂಗಗಳನ್ನು ಬದುಕು, ಅದರ ಸಾರ್ಥಕತೆ, ಅರ್ಥಪೂರ್ಣತೆ ಇತ್ಯಾದಿಗಳೊಂದಿಗೆ ತಳುಕು ಹಾಕಿ ನೋಡುವುದನ್ನು ಈ ಪುಟ್ಟ ಟಿಪ್ಪಣಿಯೊಂದಿಗೆ ಮುಗಿಸುತ್ತೇನೆ.

"ನನ್ನನ್ನು ಖುಷಿಪಡಿಸಿ. ನನಗೆ ಜೀವಿಸುವ ಆಶೆ ಕೊಡಿ..."
ಆ ಕಡೆಯಿಂದ ಫೋನಿನಲ್ಲಿ ಬರುತ್ತಿದ್ದ ಹೆಣ್ಣುಮಗಳ ಧ್ವನಿ.
ಮುಸ್ಸಂಜೆ. ಬ್ಯಾಡ್ಮಿಂಟನ್ ಮುಗಿಸಿ ಮುಳುಗುತ್ತಿರುವ ಸೂರ್ಯನ ಜೊತೆಗೇ ಈ ಜಗತ್ತು ಕತ್ತಲಲ್ಲಿ ಅದ್ದಿ ಹೋಗುವುದನ್ನು ಕಾಣುತ್ತಿರುವಂತೆಯೇ ಈ ಮಾತುಕತೆ ಕೂಡ ಹೀಗೆಯೇ ಮುಂದುವರಿಯುತ್ತದೆ.
"ಹಾಗಾದ್ರೆ ನಾನು ಸಂತೋಷವಾಗಿ ಸದಾ ಮಾಡಬಹುದಾದ ಕೆಲಸ ಹೇಳಿ..."
ನಾನು ನಕ್ಕು ಕೇಳಿದೆ, "ನೀನು ಯಾರನ್ನೂ ಪ್ರೀತಿಸ್ತಿಲ್ಲವಾ? ನಿನ್ನೆದುರು ನಿಂತು 'ನಾನಿದ್ದೇನೆ, ನಿನ್ನ ವ್ಯಸನವನ್ನೆಲ್ಲ ನನಗೆ ಕೊಡು' ಎನ್ನುವಂಥ ಗೆಳೆಯನಿಲ್ಲವೆ?"
"ನಾನು ನಿಜಕ್ಕೂ ನಂಬಬಹುದಾದ ಗೆಳೆಯ ಸಿಕ್ಕಿಲ್ಲ." ಎಂದು ಮೊತ್ತ ಮೊದಲ ಬಾರಿಗೆ ನಕ್ಕು ಹೇಳಿದ್ದಳು. "ತಪ್ಪು ತಿಳಿಯಬೇಡಿ, ಆ ಗೆಳೆಯ ನೀವೇ ಆಗಿದ್ದರೆ?" ಅಂದಳು ಹುಡುಗಿ.
"ಹುಚ್ಚು ಹುಡುಗಿ. ನಾನು ಎಲ್ಲ ಸಿಕ್ಕು, ತೊಂದರೆಗಳಿಂದ ಹೊರಬರುತ್ತಿರುವ ಮನುಷ್ಯ; ಬಿಸಿಲುಗುದುರೆಗಳ ಬೆನ್ನು ಹತ್ತಿ ಓಡಾಡುವ ಕಾಲ ಮುಗಿಯಿತು. ಕೇಳ್ತಿದ್ದೀಯ ಮರಿ? ನನಗೆ ನಿನ್ನ ವಯಸ್ಸಿನ ಮಕ್ಕಳಿದ್ದಾರೆ...."

ಹೌದು, ಇದು ಲಂಕೇಶ್. ಇದನ್ನು ಬರೆದಾಗ (11/03/1984ರ ಟೀಕೆ ಟಿಪ್ಪಣಿ) ಅವರಿಗೆ ಸರಿಯಾಗಿ ನಲವತ್ತೊಂಭತ್ತು ವರ್ಷ.

ತನ್ನನ್ನು ಅರ್ಥಮಾಡಿಕೊಳ್ಳಬಲ್ಲ ಒಂದು ಜೀವದ ಹುಡುಕಾಟ ಮನುಷ್ಯ ಜೀವನದಲ್ಲಿ ನಿರಂತರವಾದದ್ದೇ ಇರಬಹುದು. ಅದು ಸಹಜ ಮತ್ತು ಆರೋಗ್ಯಕರ ಕೂಡ ಇದ್ದೀತು. ಅದಕ್ಕೆ ವಯಸ್ಸಿನ ಬಂಧವೂ ಇಲ್ಲದಿರಬಹುದು. ತನಗೆ ಸಿಕ್ಕಿದ್ದರಲ್ಲಿ ಅದಿಲ್ಲವೆಂದು ತಿಳಿದು ಸದಾ ಇರದುದರೆಡೆಗೆ ತುಡಿಯುವುದೇ ಅದರ ಸೆಳೆತವಿರಬಹುದು. ಹಾಗಿದ್ದೂ ಈ ಮನುಷ್ಯ ಸಂಬಂಧಗಳು ಎಲ್ಲೋ ಒಂದು ಕಡೆ ಸಿಕ್ಕು, ತೊಡಕು ಅಂತಲೂ ಅವನಿಗೆ ಅನಿಸಬಹುದು. ಆದರೂ ಅದಕ್ಕಾಗಿ ಅವನು ತಹತಹಿಸುತ್ತಿರಲೂ ಇರಬಹುದು!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, October 23, 2008

ತಾನೇ ನೇಯ್ದ ವ್ಯೂಹದ ಒಳಸುಳಿಯಲ್ಲಿ ಜನರಲ್ ಬೊಲಿವಾರ್


ಮಾಂತ್ರಿಕ ವಾಸ್ತವವಾದ, magical realism, ಐಂದ್ರಜಾಲಿಕ ವಾಸ್ತವಿಕತೆ ಎಂಬ ಶಬ್ದಗಳನ್ನು ಕೇಳಿದರೇ ನೆನಪಾಗುವ ಹೆಸರು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್. ಮಾರ್ಕ್ವೆಜ್‌ರ ಕೆಲವು ಸಣ್ಣಕತೆಗಳು (ಅನುವಾದ: ನರಹಳ್ಳಿ ಬಾಲಸುಬ್ರಹ್ಮಣ್ಯ), ನೂರು ವರ್ಷದ ಏಕಾಂತ (ಅನುವಾದ: ಎ.ಎನ್.ಪ್ರಸನ್ನ) ಬಿಟ್ಟರೆ ಪುಸ್ತಕ ರೂಪದಲ್ಲಿ ಮಾರ್ಕ್ವೆಜ್ ಕನ್ನಡಕ್ಕೆ ಬಂದಿರುವುದು ಕಡಿಮೆಯೇ. ಇದೀಗ ಪಿ.ವಿ.ನಾರಾಯಣ ಅವರು ವ್ಯೂಹ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ.

ಮಾರ್ಕ್ವೆಜ್ ಸುಲಭವಾಗಿ ದಕ್ಕುವ ಬರಹಗಾರನಲ್ಲ ಎಂಬುದನ್ನು ಸರಿಸುಮಾರು ಎಲ್ಲರೂ ಒಪ್ಪುತ್ತಾರೆ. ಮಾರ್ಕ್ವೆಜ್ ಬಳಸುವ ಭಾಷೆ, ಕಾಲವನ್ನು ಹಿಂದುಮುಂದಾಗಿಸಿ ನಿರ್ವಹಿಸುವ ಬಗೆ, ತನ್ನ ಪುಟ್ಟ ಪುಟ್ಟ ವಿವರಗಳಲ್ಲಿ ಭೂತಕಾಲವನ್ನು, ಅಸಂಗತ ಜಗತ್ತನ್ನು, ಕಲ್ಪನೆಯನ್ನು ಅತ್ಯಂತ ಚಿತ್ರವತ್ತಾಗಿ ಕಟ್ಟಿಕೊಡುವ ನೈಪುಣ್ಯ ಎಲ್ಲವನ್ನೂ ಗಮನಿಸಿಕೊಂಡು ಕೃತಿಯ ಒಟ್ಟಾರೆ ಕಾಣ್ಕೆಯ ಕುರಿತು ಮಾತನಾಡುವುದಕ್ಕಿಂತ ಸುಮ್ಮನೇ ಕೂತು ಅದನ್ನು ಅನುಭವಿಸುವುದೇ ಹೆಚ್ಚು ಹಿತ ನೀಡುವ ಸಂಗತಿ!

ಹಾಗೆ ನೋಡಿದರೆ ವ್ಯೂಹ ಕಾದಂಬರಿ ಕಥಾನಕವೇ ಪ್ರಧಾನವಾಗಿರುವ ಕೃತಿಯಲ್ಲ. `ಲ್ಯಾಟಿನ್ ಅಮೆರಿಕದ ಆರು ದೇಶಗಳಲ್ಲಿ ವಿಮೋಚಕನೆಂದು ಪ್ರಖ್ಯಾತನಾದ' ಬೊಲಿವಾರ್‌ನ ಕೊನೆಯ ದಿನಗಳು ಇಲ್ಲಿ ಚಿತ್ರಿಸಲ್ಪಟ್ಟಿರುವ ವಿಧಾನ ಕೂಡ ವಿಲಕ್ಷಣವಾದದ್ದು. ಕಥಾನಕ ತೊಡಗುವುದು ಈ ಜನರಲ್ ಬೊಲಿವಾರ್ ಪದತ್ಯಾಗ ಮಾಡಿ, ದೇಶತ್ಯಾಗ ಮಾಡಿ 1830ರಲ್ಲಿ ಕೈಗೊಂಡ ಕೊನೆಯ ಪಯಣದ ತಯಾರಿಯ ಹಂತದಿಂದ. ಆದರೆ ಅದು ಅನೇಕ ರೀತಿಯಲ್ಲಿ ಹಿಮ್ಮೊಗ ಚಲನೆಯನ್ನು ಪಡೆದು ತನ್ನ ಕಥಾನಕವನ್ನೂ, ತನ್ನ ಪಾತ್ರಪ್ರಪಂಚವನ್ನೂ ಸುಪುಷ್ಟಗೊಳಿಸಿಕೊಳ್ಳುತ್ತದೆ. ಅಷ್ಟು ಮಾತ್ರವಲ್ಲ, ಅನೇಕ ಕಡೆಗಳಲ್ಲಿ ಮುಂದೆ ನಡೆದುದರ ದರ್ಶನವನ್ನೂ ನಮಗೆ ನೀಡುತ್ತದೆ ಮತ್ತು ಹಾಗೆ ಮಾಡಿ ಭೂತಕಾಲದ ಮಹಾನ್ ವ್ಯಕ್ತಿಗಳ ಮಹಾನ್ ನಿರೀಕ್ಷೆಗಳಿಗೂ, ಆಶೋತ್ತರಗಳಿಗೂ ವರ್ತಮಾನದ ಕಟು ವಾಸ್ತವಕ್ಕೂ ಇರುವ ಅಂತರವನ್ನು ಕಾಣಿಸುತ್ತದೆ, ಕಾಣಿಸಿ ಚರಿತ್ರೆಯ ಹೊಸ ಮುಖವನ್ನೇ ತೆರೆದಿಡುತ್ತದೆ.

ವ್ಯೂಹ ಓದುವಾಗ ಪುಟಪುಟಗಳಲ್ಲಿ ನಿರೂಪಿಸಲ್ಪಟ್ಟ ಜನರಲ್ ಬೊಲಿವಾರನ ಕಾಯಿಲೆ, ಕೆಮ್ಮು, ನಿಶ್ಶಕ್ತಿಗಳೆಲ್ಲ ನಮ್ಮನ್ನೂ ಬಾಧಿಸುತ್ತವೇನೋ ಎನಿಸುವಷ್ಟರ ಮಟ್ಟಿಗೆ ಎದ್ದ-ಕೂತ-ಮಲಗಿದ-ಓಡಾಡಿದ ವಿವರಗಳಲ್ಲಿ ಆತನ ಕೊನೆಯ ದಿನಗಳ ಕ್ಷಣಕ್ಷಣವನ್ನೂ ಮರುಕಲ್ಪಿಸಿ, ಆ ವ್ಯಕ್ತಿತ್ವವನ್ನು ಜೀವಂತಗೊಳಿಸಿದ್ದಾನೆ ಕಾದಂಬರಿಕಾರ. ನಡುವೆ ಅಟ್ಲಸ್ ತೆಗೆದು ಈ ಕೃತಿಯಲ್ಲಿ ಮತ್ತೆ ಮತ್ತೆ ಬರುವ ಲಿಮ, ಸಂಟಾ ಫ ದ ಬೊಗೊಟ, ಕಸಾಂಡ್ರೋ, ಕಿಂಗ್‌ಸ್ಟನ್, ಮ್ಯಾಗ್ಡಲೀನ ನದಿಪಾತ್ರದ ಹರಿವು, ಮಾಂಪಾಕ್ಸ್, ಟರ್ಬಾಕೊ, ಸಂಟಾ ಮಾರ್ಟಾ, ಅಲೆಜಾಂಡ್ರಿನೊ ಮುಂತಾದ ಪ್ರಾಂತಗಳ ಗುರುತು ಮಾಡಿಕೊಳ್ಳಬೇಕಾದೀತು. ಬೊಲಿವರ್ ಬಗ್ಗೆ ಚರಿತ್ರೆ ಹೇಳುವ ವಿವರಗಳನ್ನು ಕಲೆಹಾಕಬೇಕಾದೀತು. ಅನುವಾದಿತ ಕೃತಿಗಳನ್ನು ಓದುವಾಗ ಎದುರಾಗುವ ಅನಿವಾರ್ಯ ಸಮಸ್ಯೆಗಳು ಇವು. ಭೂಗೋಳ, ಚರಿತ್ರೆ, ಸಂಸ್ಕೃತಿಯ ಬಗ್ಗೆ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದೇ ಹೋದರೆ ತೀರ ಅಪರಿಚಿತ ಜಗತ್ತಿನ ಸಾಹಿತ್ಯ ದಕ್ಕುವುದಿಲ್ಲ.

ಈ ಎಲ್ಲ ಸಂಗತಿಗಳಾಚೆ ಈ ಬೊಲಿವರ್ ಎಂಬ ಸ್ವಾತಂತ್ರ್ಯವೀರ, ಯೋಧ, ಒಬ್ಬ ಹೀರೋನ ಕೊನೆಯ ದಿನಗಳು ಸಾಕಷ್ಟು ಫ್ಲ್ಯಾಶ್ ಬ್ಯಾಕ್‌ಗಳ ಸಹಿತ ಈ ಪುಟಗಳಲ್ಲಿ ಎಷ್ಟೊಂದು ಜೀವಂತವಾಗಿ ಪಡಿಮೂಡಿದ್ದಾವೆಂದರೆ ಆತನ ವ್ಯಕ್ತಿತ್ವ ತನ್ನೆಲ್ಲ ಪ್ಲಸ್ ಮತ್ತು ಮೈನಸ್‌ಗಳೊಂದಿಗೇ ನಮ್ಮನ್ನು ಕಾಡತೊಡಗುತ್ತದೆ. ಕೊನೆಯ ಪುಟಗಳಿಗೆ ಬರುವ ಹೊತ್ತಿಗೆ ಈ ಧೀಮಂತ ಚೇತನ ನಮ್ಮಲ್ಲಿ ಅನುಕಂಪ, ಕಾಳಜಿ, ಹೆಮ್ಮೆ, ಬೇಸರ ಎಲ್ಲವನ್ನೂ ಹುಟ್ಟಿಸಬಲ್ಲ ಆಪ್ತ ಜೀವವಾಗಿ ಬಿಡುತ್ತದೆ. ಈ ಮಹಾ ಸಿಡುಕ, ರಸಿಕ, ಗುಟ್ಟಿನ ತಂತ್ರಗಾರ ಬೊಲಿವರ್ ನಮಗೆ ಎಷ್ಟು ಹಿಡಿಸುತ್ತಾನೆಂದರೆ ಆತನ ಕಾಯಿಲೆ, ನಿಶ್ಶಕ್ತಿ, ಹತಾಶೆಗಳೊಂದಿಗೇ ಆತ ಸಹಜವೆನಿಸತೊಡಗುತ್ತಾನೆ! ಈ ಜೀವ ಈ ಎಲ್ಲದರೊಂದಿಗೆ ನಲುಗಿರಬಹುದಾದ ತೀವೃತೆ, ನಲುಗುತ್ತಲೇ ದೃಢವಾಗಿರಲು ಸತತ ಹೋರಾಡುತ್ತ ತಲುಪಿರ ಬಹುದಾದ ವಿಲಕ್ಷಣ ಮನಸ್ಥಿತಿ, ಅದೆಲ್ಲದರಾಚೆ ಆತ ಒಂದು ಬಗೆಯಲ್ಲಿ ತನ್ನ ಆರೋಗ್ಯವನ್ನು, ದೈಹಿಕ ಸ್ವಾಧೀನತೆಯನ್ನು ನಟಿಸುತ್ತಲೇ ಕೊನೆಯ ದಿನಗಳನ್ನು ನಿಭಾಯಿಸುವುದನ್ನು ಕಾಣುವಾಗ ಯಾವುದೇ ಸಾಮಾನ್ಯ ವಯೋವೃದ್ಧನದೂ ಆಗಬಹುದಾದ ಒಂದು ಸಾಧಾರಣ ಪ್ರೊಸೆಸ್ ಇಲ್ಲಿ ಜನರಲ್ ಬೊಲಿವಾರ್‌ನ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಹೊಸ ಅರ್ಥ, ವಿಶೇಷ ಮಹತ್ವ ಪಡೆದುಕೊಳ್ಳುವುದು ವಿಶೇಷ. ಮಾರ್ಕ್ವೆಜ್ ಚಿತ್ರಿಸಿದ ಬೊಲಿವರನ ಈ ಪ್ರೊಸೇಸ್ ನಿಶ್ಚಿತವಾಗಿಯೂ ಒಂದು ಘನತೆಯನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಂಡಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಮಾರ್ಕ್ವೆಜ್‌ರ ಈ ಬರವಣಿಗೆಯಲ್ಲಿ ಗಮನಿಸಿದ ಇನ್ನೆರಡು ಅಂಶಗಳೂ ಮುಖ್ಯವಾದವು. ಒಂದು, ನೇರವಾಗಿ ಎಲ್ಲಿಯೂ ಈ ಬೊಲಿವಾರ್ ಅನುಭವಿಸಿರಬಹುದಾದ ಮಾನಸಿಕ ತುಮುಲದ ವಿವರಗಳಿಲ್ಲದಿರುವುದು. ಮಾರ್ಕ್ವೆಜ್ ಈ ಅರ್ಥದಲ್ಲಿ ನಿಜವಾಗಿಯೂ ಮಾತನಾಡುವುದು ಕಡಿಮೆ, ಕಾಣಿಸುವುದು ಹೆಚ್ಚು. ಬೊಲಿವಾರ್ ಪಾತ್ರ ನಮಗೆ ಹೆಚ್ಚು ಹೆಚ್ಚು ನಿಚ್ಚಳವಾಗುವುದು ಆತನ ಮಾನವೀಯ ಸಂಬಂಧಗಳ ಮೂಲಕ. ಹೆಚ್ಚು ಕಡಿಮೆ ಅವೆಲ್ಲವೂ ಪ್ರಕಟವಾಗುವ ಘಟನೆಗಳು ಭೂತಕಾಲಕ್ಕೇ ಸಂಬಂಧಿಸಿದಂತಿವೆಯೇ ಹೊರತು ಇಲ್ಲಿ ವರ್ತಮಾನದಲ್ಲೇ ಘಟಿಸುವ ವಿಶೇಷವಾದ ಘಟನೆಗಳಿಲ್ಲ. ಸ್ಯೂಕ್ರ್ ಕುರಿತ ಬೊಲಿವಾರನ ನಿಲುವು, ಆತನ ಮೇಲಿದ್ದ ಪ್ರೀತಿ, ಆತನ ಸಾಮರ್ಥ್ಯದ ಕುರಿತಿದ್ದ ಭರವಸೆ, ಯಾರಿಗೂ ಸರಿಯಾಗಿ ತಿಳಿಯದ ಹಾಗೆ ಆತ ಎಂದೋ ಕೊಲೆಯಾಗಿದ್ದ ಕೆಟ್ಟ ಸುದ್ದಿ ತಲುಪಿದಾಗ ಬೊಲಿವಾರ್ ಆಂತರಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹೋಗುವ ಸಂದರ್ಭ ಇವೆಲ್ಲ ಇಲ್ಲಿ ಬಹಳ ಮುಖ್ಯವಾದವು. ಹಾಗೆಯೇ ಬೊಲಿವಾರ್ ತನ್ನ ಮಹಾ ವೈರಿ ಎಂಬಂತೆ ಕಾಣುವ ಸಟಾಂಡರನ ವಿದ್ರೋಹ (ಅದಕ್ಕೆ ಇನ್ನೊಂದು ಮುಖವಿರಬಹುದಾದ ಸಾಧ್ಯತೆಯನ್ನು ಜೀವಂತವಾಗಿಟ್ಟುಕೊಂಡೇ), ಆತನಿಗೆ ವಿಧಿಸಲಾದ ಮರಣದಂಡನೆಯ ಶಿಕ್ಷೆಯ ವಿಚಾರದಲ್ಲಿ ಜನರಲ್ ಪ್ರತಿಕ್ರಿಯಿಸಿದ ರೀತಿ, ತಮ್ಮ ದೇಶತ್ಯಾಗದ ನಂತರ ಆತ ದೇಶಕ್ಕೆ ಎಸಗಬಹುದಾದ ಕೇಡಿನ ಕಲ್ಪನೆ ನೀಡುವ ಚಿಂತೆ, ವಿದೇಶೀ ಸಾಲದ ಕುರಿತ ಅವರ ಭಯ ಕೂಡ ನಮಗೆ ಪರೋಕ್ಷವಾಗಿ ಬೊಲಿವಾರ್ ವ್ಯಕ್ತಿತ್ವವನ್ನು ಸ್ವಲ್ಪಸ್ವಲ್ಪವಾಗಿಯೇ ಕಾಣಿಸುತ್ತ ಹೋಗುತ್ತವೆ. ಜನರಲ್ ಪಯರ್‌ಗೆ ವಿಧಿಸಿದ ಮರಣದಂಡನೆಗೆ ಬೊಲಿವಾರ್ ಸ್ಪಂದಿಸಿದ ರೀತಿಯಂತೂ ಅತ್ಯಂತ ವಿಶಿಷ್ಟವಾದದ್ದು. ಅಧಿಕಾರಶಾಹಿ, ಆಡಳಿತಶಾಹಿಯ ಎದುರು ಆತ ಅನುಭವಿಸುವ ಮೂಕ ಹಿಂಸೆ ಮತ್ತು ಅವುಗಳ ಸಮರ್ಥನೆ ಜೊತೆಜೊತೆಯಾಗಿಯೇ ಇದೆ ಇಲ್ಲಿ. ತಮ್ಮದೇ ಕಿರಿಯ ಜನರಲ್‌ಗಳಾದ ಇಟೂರ್‌ಬೈಡ್ ಮತ್ತು ರಾಬರ್ಟ್ ವಿಲ್ಸನ್ ಜೊತೆಗೆ ಬೊಲಿವಾರ್ ನಡೆದುಕೊಳ್ಳುವ ಬಗೆ, ತಮ್ಮ ಅನಪೇಕ್ಷಿತ ಉತ್ತರಾಧಿಕಾರಿ ಉರ್ಡಾನೆಟ್ ಜೊತೆಗಿನ ಅವರ ಸಂಬಂಧಗಳು ಕೂಡಾ ನಮಗೆ ಬೊಲಿವಾರ್ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಹಾಯಕವಾಗಿವೆ. ಇಷ್ಟು ಹೇಳಿದ ಮೇಲೆ ತಮ್ಮ ದೀರ್ಘಕಾಲೀನ ಪ್ರೇಯಸಿ ಮ್ಯಾನ್ಯುಯೆಲ ಸಯನೆಜ್ ಮತ್ತು ಸದಾ ನೆರಳಿನಂತೆ ಜೊತೆಯಾಗಿದ್ದ ಸೇವಕ ಜೋಸೆ ಪೆಲಾಸಿಯೋಸ್ ಕುರಿತು ವಿಶೇಷವಾಗಿ ಹೇಳಲೇ ಬೇಕಾಗಿಲ್ಲ. ಎಲ್ಲರೂ, ಎಲ್ಲವೂ ನಮಗೆ ಬೊಲಿವಾರ್ ವ್ಯಕ್ತಿತ್ವವನ್ನು ಕಟ್ಟಿಕೊಡುವುದರೊಂದಿಗೇ ಕಥಾನಕ ಮೈತಳೆಯುತ್ತ ಸಾಗುವುದಾದರೂ ಎಲ್ಲಿಯೂ ಮಾರ್ಕ್ವೆಜ್ ಒಬ್ಬ ನಿರೂಪಕನಾಗಿ ತನ್ನ ಭಾಷ್ಯಗಳನ್ನು ತುರುಕಿಲ್ಲ, ಹೇರಿಲ್ಲ ಎಂಬುದು ಬಹಳ ಮುಖ್ಯ ಅಂಶ. ಈ ಕೃತಿಯಲ್ಲಿ ಮಾರ್ಕ್ವೆಜ್ ನಿರೂಪಿಸುತ್ತಿರುವುದು ಒಂದು ಚಾರಿತ್ರಿಕ ಪಾತ್ರವನ್ನು, ಕೇವಲ ಕಲ್ಪನೆಯ ಕಥಾನಕವನ್ನಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಸ್ವತಃ ತನ್ನದೇ ಆದ ರಾಜಕೀಯ ನಿಲುವುಗಳಿದ್ದ ಮಾರ್ಕ್ವೆಜ್ ಬರೆದಿರುವ ಕಾದಂಬರಿ ಇದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಈ ಅಂಶವನ್ನು ಗಮನಿಸಬೇಕು.

ಇಡೀ ಕೃತಿಯ ನಿರೂಪಣೆಯಲ್ಲಿ ಮಾರ್ಕ್ವೆಜ್ ನಿರ್ಲಿಪ್ತನಾಗಿ ಕೃತಿಯ ಚೌಕಟ್ಟಿನಿಂದ ಹೊರಗೇ ನಿಲ್ಲುತ್ತಾನೆಂದಲ್ಲ. ಹಿಂದೆಯೇ ಹೇಳಿದಂತೆ ಇವತ್ತು ನಮಗೆ ಹಿಂದಿನ ಮಹಾ ವ್ಯಕ್ತಿಗಳ ಅವಾಸ್ತವಿಕ ಆದರ್ಶದಂತೆಯೂ, ಕಲ್ಪನಾಲೋಕದ ಕನಸುಗಳಂತೆಯೂ ಕಾಣುವ ಅಂದಿನ ಅವರ ಅನೇಕ ನಿರೀಕ್ಷೆಗಳು, ಆಶೋತ್ತರಗಳು ವರ್ತಮಾನದಲ್ಲಿ ಪಡೆದುಕೊಂಡಿರುವ ರೂಪಾಂತರವನ್ನು ಗಮನಿಸುವಾಗ ಮಾರ್ಕ್ವೆಜ್ ತೀರಾ ಮಡಿವಂತಿಕೆಯ ನಿರೂಪಣೆಗೆ ಬದ್ಧನಾದಂತೆ ಕಾಣುವುದಿಲ್ಲ. ಆದರೆ ಎಲ್ಲೆಲ್ಲೂ ನಮಗೆ ಎದ್ದು ಕಾಣುವುದು ನಿರೂಪಕನ ಸಂಯಮ, ಒಂದು ಚೌಕಟ್ಟಿನ ಒಳಗಿನ ನಿರೂಪಣೆ.

ಎರಡನೆಯದು, ಬೊಲಿವಾರ್ ವ್ಯಕ್ತಿತ್ವದಲ್ಲಿ ವಯಸ್ಸು, ಕಾಯಿಲೆ, ದೇಹದ ನಿಶ್ಶಕ್ತಿ ಎಲ್ಲವೂ ಕೂಡಿ ಪ್ರಭಾವಿಸಿರಬಹುದಾದ ಒಂದು ಸಹಜ ಬದಲಾವಣೆಯನ್ನು ಮಾರ್ಕ್ವೆಜ್ ಕೃತಿಯ ಒಡಲಿನಲ್ಲಿ ಕಾಣಿಸಿರುವ ಬಗೆ. ನಡುವಯಸ್ಸಿನ ನೋಟವೆನ್ನಿ, ಅರುಳು ಮರುಳೆನ್ನಿ, ವಯೋವೃದ್ಧರಲ್ಲಿ ಕಾಣಬರುವ ಮಗುವಿನ ಮುಗ್ಧತೆಯೆನ್ನಿ, ಸುಧೀರ್ಘ ಕಾಲದ ಅನಾರೋಗ್ಯದಿಂದಾದ ಮತಿಭ್ರಾಂತಿಯೆನ್ನಿ - ಒಂದು ನಿಶ್ಚಿತ ಹದದೊಂದಿಗೆ ಎಲ್ಲಿಯೂ ಅತಿಯಾಗದಂತೆ-ಎಲ್ಲಿಯೂ ಅದೇ ಮುಖ್ಯವಾಗದಂತೆ ಮಾರ್ಕ್ವೆಜ್ ಬೊಲಿವಾರನ ವ್ಯಕ್ತಿತ್ವದೊಂದಿಗೆ ಸಂತುಲಿತವಾಗಿ ಬೆರೆಸಿರುವ ರೀತಿ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಮಾರ್ಕ್ವೆಜ್‌ನ ಈ ಕಾದಂಬರಿ ಒಂದು ಸೀಮಿತ ಅರ್ಥದಲ್ಲಿ ಒಂದು ಪಾತ್ರಚಿತ್ರಣವೇ; ಜೀವನ (ಆತ್ಮ)ಚರಿತ್ರೆಯೇ. ಅದನ್ನು ಭೂತ-ವರ್ತಮಾನ-ಭವಿಷ್ಯತ್‌ಗಳ ನಡುವೆ ತುಯ್ಯುತ್ತ, ಹಲವಾರು ಪಾತ್ರಗಳ ಜೊತೆಗಿನ ಸಂಬಂಧಗಳ ಮೂಲಕ, ಮಹತ್ವದ್ದೆನಿಸುವ ಆಯ್ದ ಘಟನೆಗಳ ಮೂಲಕ ಕಟ್ಟಿಕೊಡುವುದರಲ್ಲಿ ಅಂಥ ವಿಶೇಷವೇನಿಲ್ಲ. 1830ರಲ್ಲಿ ಬೊಲಿವಾರ್ ಕೈಗೊಂಡ ಅಂತಿಮ ಪ್ರಯಾಣದೊಂದಿಗೇ ತೊಡಗುವ ಈ ಕಥಾನಕವನ್ನು ಇಷ್ಟು ಅದ್ಭುತವಾಗಿ, ಕಲಾತ್ಮಕವಾಗಿ, ತನ್ನೆಲ್ಲ ಸೂಕ್ಷ್ಮವಿವರಗಳೊಂದಿಗೆ ಕಟ್ಟಿಕೊಡಲು ಮಾರ್ಕ್ವೆಜ್‌ಗಿದ್ದಿರಬಹುದಾದ ಸೀಮಿತ ಪರಿಕರಗಳನ್ನು ಮತ್ತು ಇತರ ತೊಡಕು-ಮಿತಿಗಳನ್ನು ಗಮನಿಸಿದರೆ ಹುಟ್ಟುವ ಮೆಚ್ಚುಗೆಯನ್ನೂ ಮೀರಿ ಈ ಮಾನವಿಕ ಅಂಶ ನಮ್ಮ ಗಮನ ಸೆಳೆಯುತ್ತದೆ.

ಜನರಲರ ಜೀವನದುದ್ದಕ್ಕೂ ಅವರ ನೆರಳಿನಂತಿದ್ದು ಅವರ ಸೇವೆಗೈದ ಜೋಸೆ ಪೆಲಾಸಿಯೋಸ್‌ನ ವ್ಯಕ್ತಿತ್ವವೂ ಜನರಲ್ಲರ ವ್ಯಕ್ತಿತ್ವದಂತೆಯೇ ಆಳವಾಗಿ ನಮ್ಮ ಮನಸ್ಸಿಗಿಳಿಯುವುದು ಈ ಕಾದಂಬರಿಯ ಇನ್ನೊಂದು ಮಹತ್ವದ ಅಂಶ. ಹಾಗೆ ನೋಡಿದರೆ ಈ ಕಾದಂಬರಿಯ ಪಾತ್ರಪ್ರಪಂಚ ಬಹುವಿಶಾಲವಾದದ್ದು. ಇಲ್ಲಿನ ಹತ್ತಾರು ಪಾತ್ರಗಳು ಗಾಢವಾಗಿಯೇ ಮೂಡಿಬಂದಿವೆ. ಜೋಸೆ ಪೆಲಾಸಿಯೋಸ್‌ನ ಪಾತ್ರಕ್ಕೆ ಉಳಿದ ಪಾತ್ರಗಳೊಂದಿಗೆ ಹೋಲಿಸಿದಲ್ಲಿ ವಿಶೇಷವೆನಿಸುವಂಥ ಒಂದು ಪೋಷಣೆ ದೊರಕಿದೆ ಎಂದೇನೂ ಹೇಳುವಂತಿಲ್ಲ. ಆದರೂ ಈ ಪಾತ್ರ ತಣ್ಣಗೇ ನಮ್ಮ ಮನಸ್ಸಿನಲ್ಲಿ ಪಡೆದುಕೊಳ್ಳುವ ಘನತೆಗೆ ಕಾರಣವಾಗುವ ಅಂಶ ಇನ್ನೇನಲ್ಲ, ಮಾರ್ಕ್ವೆಜ್ ನಿರೂಪಣಾ ಕೌಶಲ ಮತ್ತು ಅದರ ಸಂಯಮದ ಕೊಡುಗೆ.

ಹಲವಾರು ತ್ಯಾಗ, ಬಲಿದಾನ, ಸಾವು, ನೋವುಗಳ ಹೋರಾಟದಾಚೆ ದೇಶವೊಂದು ಸ್ವಾತಂತ್ರ್ಯ ಪಡೆದುಕೊಳ್ಳಲು ಹೆಣಗಾಡುತ್ತದೆ. ಆದರೆ ಇತಿಹಾಸ ಆ ಹೋರಾಟವನ್ನೂ, ಯಶಸ್ಸನ್ನೂ, ಕಾಲಾನಂತರ ಆ ಯಶಸ್ಸಿನ ಭವಿತವ್ಯವನ್ನೂ ತಣ್ಣಗೆ ದಾಖಲಿಸುತ್ತದೆ. ಮರಣಶಯ್ಯೆಯಲ್ಲಿ ಬೊಲಿವಾರ್‌ಗೂ ಸ್ಯೂಕ್ರ್, ಸಟಾಂಡರ್ ಮತ್ತು ಉರ್ಡಾನೆಟ್‌ಗಳಂಥವರ ಕೈಯಲ್ಲಿ ದೇಶ ಏನಾಗುವುದೋ ಎಂಬ ಆತಂಕ, ಅನಿಶ್ಚಿತತೆ ಎಲ್ಲ ಸಹಜವಾಗಿಯೇ ಕಾಡುತ್ತದೆ. ತಾವು ನೇಯ್ದ ವ್ಯೂಹದಲ್ಲಿ ತಾವೇ ಸಿಕ್ಕಿಕೊಂಡವರಂತೆ ಒದ್ದಾಡುತ್ತಾರೆ. ಈ ಮಹಾ ವ್ಯೂಹದ ಒಳಸುಳಿಗಳು ಯೋಚಿಸಿದಷ್ಟೂ ಅವರನ್ನು ಕಂಗಾಲಾಗಿಸುತ್ತವೆ. ತಮಗೆಲ್ಲಿ ಬಿಡುಗಡೆ ಈ ವ್ಯೂಹದಿಂದ ಎಂದು ಪರಿತಪಿಸುತ್ತಾರೆ. ಎಲ್ಲೋ ಒಂದು ಕಡೆ ನಮ್ಮ ಸ್ವಾತಂತ್ರ್ಯ ಹೋರಾಟ, ಗಾಂಧಿ, ನೆಹರೂ, ಬೋಸ್, ಲೋಹಿಯಾಗಳೆಲ್ಲರ ನೆರಳು ಈ ಕಾದಂಬರಿಯಲ್ಲಿ ಕಂಡರೆ ಅಚ್ಚರಿಯಿಲ್ಲ. ಸೃಜನಶೀಲ ಕೃತಿಯೊಂದು ಯಾವತ್ತೂ ಸಮಕಾಲೀನವಾಗಿಯೇ ಇರುತ್ತದೆ ಎನ್ನುವುದು ಬಹುಷಃ ಇದಕ್ಕೇ ಇರಬಹುದು!

ಈ ಕಾದಂಬರಿಯ ಓದು ಅರ್ಥಪೂರ್ಣ. ಇದು ನಮ್ಮನ್ನು ಮಾರ್ಕ್ವೆಜ್‌ರ ಇನ್ನಷ್ಟು ಕೃತಿಗಳನ್ನು ಓದಲು ಪ್ರೇರೇಪಿಸುತ್ತದೆ. ಅವು ಕನ್ನಡದಲ್ಲಿ ಸಿಗುವಂತಾದರೆ ಇನ್ನಷ್ಟು ಖುಶಿಯಾಗುತ್ತದೆ. ಈ ಎಲ್ಲ ಕಾರಣಕ್ಕೆ ಪಿ.ವಿ.ನಾರಾಯಣ ಮತ್ತು ಕೃತಿಯ ಪ್ರಕಾಶಕರು ಅಭಿನಂದನಾರ್ಹರು.

ಪ್ರಕಾಶಕರು : ಸೌಮ್ಯ ಎಂ., 7/1 ಎಂ. ಎನ್. ಕೃಷ್ಣರಾವ್ ಪಾರ್ಕ್ ಎದುರು, ಬಸವನಗುಡಿ, ಬೆಂಗಳೂರು-560004
ಪುಟಗಳು :231
ಬೆಲೆ : ನೂರಿಪ್ಪತ್ತು ರೂಪಾಯಿ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, October 18, 2008

ಒಂದು ಅಪೂರ್ವ ಸಂಚಿಕೆ


ಈ ಬಾರಿಯ ದೇಶಕಾಲ ನಿಜಕ್ಕೂ ಒಂದು ಅಪೂರ್ವವಾದ ಸಂಚಿಕೆಯಾಗಿ ಮೂಡಿಬಂದಿದ್ದು ಸಂಪಾದಕ ವಿವೇಕ ಶಾನಭಾಗ್ ಅಭಿನಂದನಾರ್ಹ ಕೆಲಸ ಮಾಡಿದ್ದಾರೆ. ಈ ಸಂಚಿಕೆಯ ಹೈಲೈಟ್ಸ್:

ಕನ್ನಡ ಸಣ್ಣಕತೆಗಾರರಲ್ಲೇ ವಿಶಿಷ್ಟವಾದ ಲಯದ ಬರಹಗಾರ, ಸಂಯಮದ ಕಲೆಗಾರ ಸಂದೀಪ ನಾಯಕ ಅವರ ಸಣ್ಣಕತೆ "ಇನ್ನೊಂದೇ ಕಥೆ".

"ಈ ಸಂಚಿಕೆಯ `ದೇಶಭಾಷೆ'ಯಲ್ಲಿ ಮರಾಠಿಯ ಸುಪ್ರಸಿದ್ಧ ಲೇಖಕ ಜಿ.ಎ.ಕುಲಕರ್ಣಿಯವರ ಕತೆಯಿದೆ. ಅವರ ಕತೆಗಳನ್ನು ಸೂಚಿಸಿ ಅವರ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದ್ದು ಹಳೆ ತಲೆಮಾರಿನ ಲೇಖಕರಲ್ಲ; ಈಗ ಬರೆಯುತ್ತಿರುವ ಹೊಸ ಮರಾಠಿ ಲೇಖಕರು. ಅವರೆಲ್ಲ ಜಿಎ ಮತ್ತು ಅವರ ಕತೆಗಳ ಕುರಿತು ಭಾವವಶರಾಗಿ ಮಾತನಾಡುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ." ಎನ್ನುವ ವಿವೇಕ್ ಶಾನಭಾಗ್ ಅವರೇ ಜಿ..ಕುಲಕರ್ಣಿಯವರ ಕತೆ `ಚಂದ್ರಾವಳ'ಕ್ಕೆ ಒಂದು ಮಹತ್ವದ ಪ್ರಸ್ತಾವನೆಯನ್ನೂ ಒದಗಿಸಿದ್ದಾರೆ ಮಾತ್ರವಲ್ಲ ಈ ಕತೆಯೊಂದಿಗೆ ಸ್ವತಃ ಜಿಎ ಅವರೇ ಈ ಕತೆಯ ಕುರಿತು ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಆಪ್ತರಿಗೆ ಬರೆದ ಪತ್ರಗಳಿಂದ ಆಯ್ದ ಮಾತುಗಳೂ ಇವೆ. ಕತೆಯನ್ನು ಕನ್ನಡದ ಖ್ಯಾತ ವಿಮರ್ಶಕ ಜಿ.ಎಸ್.ಅಮೂರ ಅವರು ಅನುವಾದಿಸಿದ್ದಾರೆ. ಕತೆ ತನ್ನ ಅನನ್ಯ ಪ್ರತಿಮಾಶಕ್ತಿಯಿಂದ, ಉಜ್ವಲ ಸಾಲುಗಳ ರೂಪಕತೆಯಿಂದ ಗಮನಸೆಳೆಯುತ್ತದೆ. ಹೊಸತಲೆಮಾರಿನ ಓದುಗರು ಹಳೆಯ ಕೃತಿಗಳನ್ನು ಮುನ್ನೆಲೆಗೆ ತರುವ, ತಂದು ಹೊಸ ಚೌಕಟ್ಟಿನಲ್ಲಿ ಮರುಪರಿಶೀಲಿಸುವಂತೆ ಮಾಡುವ ವಿಮರ್ಶೆ ಮುಖ್ಯವಾದುದು ಎನ್ನುತ್ತಾರೆ ವಿವೇಕ್ ಶಾನಭಾಗ್.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾ|| ಯು.ಆರ್.ಅನಂತಮೂರ್ತಿಯವರು ಡಬ್ಲ್ಯೂ.ಬಿ.ಯೇಟ್ಸ್ ಬಗ್ಗೆ ಮಾಡಿದ ಒಂದು ಪಾಠ ಇಲ್ಲಿ ತನ್ನೆಲ್ಲ ಮಾಂತ್ರಿಕ ಸ್ಪರ್ಶದೊಂದಿಗೇ ಬರಹಕ್ಕಿಳಿದು ಬಂದಿದೆ, ಎನ್.ಎ.ಎಂ.ಇಸ್ಮಾಯಿಲ್ ಅವರ ಕೃಪೆಯಿಂದ! ಇದು ಸಾಹಿತ್ಯಪ್ರಿಯರಿಗೆ ಇಷ್ಟವಾಗುವ ಸೊಗಸಾದ ಒಂದು ಲೇಖನ.

ಇಷ್ಟೇ ಸೊಗಸಾದ ಇನ್ನೊಂದು ಓದು, ದಕ್ಷಿಣ್ ಬಜರಂಗೇ ಅವರ ಭಾಷಣದ ಬರಹರೂಪ - `ಹನಿ ಮತ್ತು ಹಳ್ಳ'. ಹೆಗ್ಗೋಡಿನ ನೀನಾಸಂ ಸಂಸ್ಥೆಯಲ್ಲಿ ಜರುಗಿದ ಇಂಡಿಯಾ ಥಿಯೇಟರ್ ಫೋರಂನ ಸಮಾವೇಶದಲ್ಲಿ ದಕ್ಷಿಣ್ ಬಜರಂಗೇ ಅವರು ಮಾಡಿದ ಭಾಷಣ ಕೇಳುವುದೇ (ಓದುವುದೇ) ಒಂದು ಖುಶಿಯ ಅನುಭವ! ಇದನ್ನು ಸಾಧ್ಯವಾಗಿಸಿದವರು ರಘುನಂದನ. ಈ ಲೇಖನ ಸ್ವಾತಂತ್ರ್ಯಪೂರ್ವದ ದಿನಗಳಿಂದ ಹಿಡಿದು ಇವತ್ತಿನ ವರೆಗೆ ಡೀನೋಟಿಫೈಯಾಗಿರುವ ಒಂದು ಜನಾಂಗ ಎದುರಿಸಿದ ಸವಾಲುಗಳು ಮತ್ತು ಆ ಸವಾಲುಗಳ ನಡುವೆಯೇ ಈ ಜನಾಂಗದ ಸೃಜನಶೀಲ ಶಕ್ತಿ ಉಳಿದು ಬೆಳೆದು ಬಂದ ಸೋಜಿಗವನ್ನು ತನ್ನದೇ ಆದ ವಿಶಿಷ್ಟ ಧ್ವನಿಯಲ್ಲಿ ಮನಗಾಣಿಸುವಂತಿದೆ.

ಪಿ.ಲಂಕೇಶರ `ನೀಲು ಕಾವ್ಯ'ದ ಕುರಿತು ಭಾಗೇಶ್ರೀಯವರೂ, ಎಸ್.ಸುರೇಂದ್ರನಾಥ್ ಅವರ `ಎನ್ನ ಭವದ ಕೇಡು' ಕುರಿತು ಆನಂದ್ ಋಗ್ವೇದಿಯವರೂ, ಲಂಕೇಶರ `ಮಂಜು ಕವಿದ ಸಂಜೆ ಮತ್ತು ಇತರ ಕತೆಗಳು' ಕುರಿತು ಕೆ.ಸತ್ಯನಾರಾಯಣ ಅವರೂ ಈ ಬಾರಿಯ `ಈ ಹೊತ್ತಿಗೆ-ಈ ಹೊತ್ತಿಗೆ' ವಿಭಾಗದಲ್ಲಿ ಬರೆದಿದ್ದಾರೆ. ಈ ಬರಹಗಳು ಕೃತಿಯ ಹೊಸ ಹೊಸ ಒಳನೋಟಗಳನ್ನು ಸ್ಫುಟಗೊಳಿಸುವಂತಿವೆ; ಓದುಗರಲ್ಲಿ ಹೊಸ ಜಿಜ್ಞಾಸೆಗಳನ್ನು ಹುಟ್ಟಿಸುವಂತಿವೆ ಮಾತ್ರವಲ್ಲ ಓದುಗರನ್ನು ಕೃತಿಗಳ ಮರು ಓದಿಗೆ ಆಹ್ವಾನಿಸುವಂತಿವೆ.

ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತೇ ಮನು ವಿ ದೇವದೇವನ್, ಡಾ||ಯು.ಆರ್.ಅನಂತಮೂರ್ತಿ, ಎಂ.ವಿ.ಕಾಮತ್, ಪಟ್ಟಾಭಿರಾಮ ಸೋಮಯಾಜಿ, ಎನ್.ಎ.ಎಮ್.ಇಸ್ಮಾಯಿಲ್, ಜೆ.ಎಸ್.ಸದಾನಂದ - ನಡೆಸಿದ ವಿವರವಾದ ವಿಶ್ಲೇಷಣೆ ಈ ಬಾರಿಯ `ಸಮಯ ಪರೀಕ್ಷೆ'ಯ ವಿಶೇಷ. ತೆಹಲ್ಕಾ ಪತ್ರಿಕೆಯ ಅಕ್ಟೋಬರ್ ನಾಲ್ಕರ ಸಂಚಿಕೆಯಲ್ಲಿ ಪ್ರಕಟವಾದ ಅನಂತಮೂರ್ತಿಯವರ We Created the Fascists ಲೇಖನವನ್ನು ಓದಿದವರು ಅವಶ್ಯವಾಗಿ ಓದಬೇಕಾದ ವಿಸ್ತೃತ ಲೇಖನ ಇಲ್ಲಿದೆ.

ದೇಶಕಾಲ ಇಲ್ಲೆಲ್ಲ ಸಿಗುತ್ತದೆ:
ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು
ಸ್ವಪ್ನ ಬುಕ್ ಹೌಸ್, ಗಾಂಧಿನಗರ-ಸದಾಶಿವನಗರ-ಜಯನಗರ
ನಾಗಶ್ರೀ, ಜಯನಗರ ನಾಲ್ಕನೆಯ ಬ್ಲಾಕ್
ರಂಗಶಂಕರ, ಬೆಂಗಳೂರು
ಶಂಕರ್ಸ್, ವಿಮಾನ ನಿಲ್ದಾಣ, ಬೆಂಗಳೂರು
ದೇಸಿ, ಬೆಂಗಳೂರು-ಸಾಗರ
ನವಕರ್ನಾಟಕದ ಎಲ್ಲ ಮಳಿಗೆಗಳು
ಅತ್ರಿ ಬುಕ್ ಸೆಂಟರ್, ಮಂಗಳೂರು
ಸೀತಾ ಬುಕ್ ಸೆಂಟರ್, ಉಡುಪಿ
ಅಕ್ಷರ ಪ್ರಕಾಶನ, ಹೆಗ್ಗೋಡು
deshakaala@gmail.com (092431 36256)

(ಡಾ||ಯು.ಆರ್.ಅನಂತಮೂರ್ತಿಯವರ ಚಿತ್ರ ಕೃಪೆ: `ವಿಕ್ರಾಂತ ಕರ್ನಾಟಕ' ಕನ್ನಡ ವಾರಪತ್ರಿಕೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡದ ತೇರಿಗೆ ಪ್ರಶಸ್ತಿಯ ಕಳಶ!


(ರಾಘವೇಂದ್ರ ಪಾಟೀಲರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕನ್ನಡಸಾಹಿತ್ಯ ಡಾಟ್ ಕಾಂ ತಾಣಕ್ಕಾಗಿ ಶೇಖರಪೂರ್ಣ ಅವರ ಕೋರಿಕೆಯಂತೆ ಬರೆದ ಲೇಖನ)

ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ `ತೇರು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು ಓದಿಗೆ, ಚರ್ಚೆ-ಸಂವಾದಗಳಿಗೆ ಕಾರಣವಾಗಬೇಕಾದ ಸಂದರ್ಭ. ಅನಿವಾರ್ಯವಾಗಿ ಈ ಅಧ್ಯಯನ ಒಂದು ಕಾಲಘಟ್ಟದ ಸಾಹಿತ್ಯದ ಚರ್ಚೆಯಾಗಿಯೂ ಬೆಳೆಯುತ್ತದೆ, ಬೆಳೆಯಬೇಕು. ಕನ್ನಡದ ಸದ್ಯದ ಸಂದರ್ಭದಲ್ಲಿ ಇದೆಲ್ಲ ನಡೆಯಬೇಕಾದ ತುರ್ತು ಹೆಚ್ಚೇ ಇದೆ ಅನಿಸುತ್ತದೆ.

ನವ್ಯ ಕಥಾ ಪರಂಪರೆ ತನ್ನ ಅತಿಗೆ ಹೋದ ಬಗ್ಗೆ ಸಾರ್ವತ್ರಿಕ ಟೀಕೆಗೆ ಒಳಗಾದರೂ ಅದರಿಂದ ಕನ್ನಡ ಸಾಹಿತ್ಯಕ್ಕೆ ಹಲವು ರೀತಿಯ ಲಾಭಗಳಾಗಿವೆ. ಒಂದು ಹೊಸ ಸಂವೇದನೆಯನ್ನು ಅದು ಕನ್ನಡಕ್ಕೆ ತಂದುಕೊಟ್ಟಿತು. ಬರೆಯುವ ಪ್ರಕ್ರಿಯೆಯಲ್ಲಿ ಅನೇಕ ಬಗೆಯ ಪ್ರಯೋಗಶೀಲತೆಗೆ ನವ್ಯ ಕಾರಣವಾಯಿತು. ಮುಖ್ಯವಾಗಿ ವಿಶ್ವಸಾಹಿತ್ಯಕ್ಕೆ ಅಪ್‌ಡೇಟ್ ಆಗುವತ್ತ ಕನ್ನಡದ ಮನಸ್ಸುಗಳು ತುಡಿದಿದ್ದರಿಂದ ಹೆಚ್ಚಿದ ಮಟ್ಟದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪರಿಚಯ ಕನ್ನಡಕ್ಕೆ ದಕ್ಕಿತು. ಇದರಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿರಬಹುದು. ಮುಖ್ಯವಾಗಿ ನವ್ಯ ಎಂಬುದು ಕನ್ನಡದ ಜಾಯಮಾನಕ್ಕೆ, ಕನ್ನಡದ ಆವತ್ತಿನ ಸಂದರ್ಭಕ್ಕೆ ಸಹಜವಾಗಿ ಒದಗಿದ ಬೆಳವಣಿಗೆ ಅಥವಾ ಪರಿವರ್ತನೆಯಾಗಿತ್ತೆ, ಅಥವಾ ಅಕಾಲದಲ್ಲಿ ಎರವಲು ತಂದ ಕಟ್ಟಿಕೊಟ್ಟ ಬುತ್ತಿಯಾಗಿತ್ತೆ ಎಂಬೆಲ್ಲ ವಾದ ವಿವಾದ ಇದ್ದೇ ಇದೆ. ಆದರೆ ಇದೆಲ್ಲದರ ಹೊರತಾಗಿಯೂ ನವ್ಯದಿಂದಲೇ ಒದಗಿದ ಕೆಲವೊಂದು ಹೊಸ ಅರಿವು ಎಷ್ಟೆಲ್ಲ ಬಗೆಯಾಗಿ ಇವತ್ತು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದೆ ಎಂಬುದಕ್ಕೆ ಹೊಸ ಪುರಾವೆಗಳನ್ನು ನೀಡಬೇಕಾಗಿಲ್ಲ. ಅದೂ ಅಲ್ಲದೆ, ನವ್ಯಕಾಲ ಘಟ್ಟದಲ್ಲೇ ನವ್ಯದಿಂದ ಒಂದರ್ಥದಲ್ಲಿ ಸಿಡಿದು ನಿಂತು ಹೊಸ ಅನ್ವೇಷಣೆಗಳಿಗೆ ನಮ್ಮ ಅನೇಕ ಮಹತ್ವದ ಲೇಖಕರು ಪ್ರಯತ್ನಿಸುವಂತಾಗಲು ಸಹ ನವ್ಯವೇ ಕಾರಣ. ಹಾಗೆ ಹೊಸ ದಾರಿಗಳನ್ನು ಅನ್ವೇಷಿಸಿ ಕನ್ನಡದ ಕಥನ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೆಲವೇ ಮಹತ್ವದ ಲೇಖಕರಲ್ಲಿ ರಾಘವೇಂದ್ರ ಪಾಟೀಲರು ಒಬ್ಬರು.

ರಾಘವೇಂದ್ರ ಪಾಟೀಲರು ತಮ್ಮ `ತೇರು' ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟವಾದಾಗ, ಇದು ಒಂದು ಮಾತೃಕೆಗೆ ಸಂದ ಪುರಸ್ಕಾರ ಎಂದು ತಮ್ಮ ಸಂಕಥನವನ್ನು ಪ್ರತ್ಯಕ್ಷ, ಪರೋಕ್ಷವಾಗಿ ರೂಪಿಸಿದ ಹಲವು ಲೇಖಕರನ್ನು, ವಿಮರ್ಶಕರನ್ನು ನೆನೆದರು. ಕೇವಲ ಸೌಜನ್ಯದ ಮಾತೆಂದು ಮರೆತು ಬಿಡಬಹುದಾದ ಮಾತಲ್ಲ ಇದು. ಪಾಟೀಲರ ಸಾಹಿತ್ಯವನ್ನು ಅರಿಯಲು ಹೊರಟವರ ಮಟ್ಟಿಗೆ ಬಹಳ ಮುಖ್ಯವಾದ, ಪ್ರಾಮಾಣಿಕವಾದ ಮಾತು. ತಮ್ಮ `ದೇಸಗತಿ' ಕಥಾಸಂಕಲನವನ್ನು ಪಾಟೀಲರು `ಕಥೆ ಹೇಳುವುದನ್ನು ಕಲಿಸಿದ ಕನ್ನಡದ ಎಲ್ಲ ಹಿರಿಯ ಕಥೆಗಾರರಿಗೆ ಗೌರವದಿಂದ' ಅರ್ಪಿಸಿದ್ದಾರೆ. ಕನ್ನಡದ ಎಲ್ಲ ಅತ್ಯುತ್ತಮ ಕಥೆಗಾರರ ಶ್ರೇಷ್ಠ ಅನುಭೂತಿಗಳನ್ನು ಮೈಗೂಡಿಸಿಕೊಂಡು ಬರೆಯುವ ಪಾಟೀಲರ ಶೈಲಿಯನ್ನು ಅಧ್ಯಯನ ಮಾಡುವುದಕ್ಕೆ ಈ ಅರಿವು ರಹದಾರಿ ಇದ್ದಂತೆ.

ಹಾಗೆ ನೋಡಿದರೆ ಪಾಟೀಲರು `ತೇರು' ಕೃತಿಗಿಂತ ಮೊದಲೇ ಆಧುನಿಕ ಪುರಾಣಗಳನ್ನು ಬರೆದವರು! ಅವರ `ದೇಸಗತಿ'ಯಾಗಲಿ, `ಮಾಯಿಯ ಮುಖಗಳು' ನೀಳ್ಗತೆಯಾಗಲೀ ಅಂಥ ಬೀಜಗಳನ್ನು ತನ್ನ ಒಡಲೊಳಗೇ ಹೊತ್ತಿಲ್ಲ ಎನ್ನುವಂತಿಲ್ಲ. ಆದರೆ `ತೇರು' ಹಲವಾರು ಕಾರಣಗಳಿಗೆ ಭಿನ್ನವಾಗಿಯೂ ಮುಖ್ಯವಾಗಿಯೂ ಗಮನಾರ್ಹವಾಗುತ್ತದೆ.

ಮೊದಲಿಗೆ, ಇವರ ಕಥನ ಶೈಲಿ ವಿಶಿಷ್ಟವಾದದ್ದು. ದೇವನೂರ ಮಹದೇವರ `ಕುಸುಮಬಾಲೆ'ಯನ್ನು ಬಿಟ್ಟರೆ ಇವರಷ್ಟು ಹದವಾಗಿ ಕಾವ್ಯಾತ್ಮಕ ಜಾನಪದ ಗದ್ಯ ಬಳಸಿಯೂ ಗೆದ್ದ ಕತೆಗಾರರು ಬೇರೊಬ್ಬರಿಲ್ಲ ಎನಿಸುತ್ತದೆ. ಮೊಗಳ್ಳಿ ಸೀಮಿತಮಟ್ಟದಲ್ಲಿ ಇದನ್ನು ಪ್ರಯತ್ನಿಸಿದ್ದಾರೆ. ಕಂಬಾರರು ಬೇರೆಯೇ ಸ್ತರದಲ್ಲಿ ಈ ಮಾದರಿಯನ್ನು ಬಳಸಿಕೊಂಡಿದ್ದಾರೆ. ಆದರೆ ಪಾಟೀಲರು ಇದನ್ನು ದುಡಿಸಿಕೊಂಡ ಬಗೆ ಸೂಕ್ಷ್ಮ ಅಧ್ಯಯನವನ್ನು ಬಯಸುವಷ್ಟು ವಿಶಿಷ್ಟವಾಗಿದೆ.

ಎರಡನೆಯದಾಗಿ, ಇವರಲ್ಲಿ ನಾವು ಫ್ಯಾಂಟಸಿ ಮತ್ತು ಜಾನಪದ ಎರಡೂ ಅಭಿವ್ಯಕ್ತಿ ಮಾಧ್ಯಮಗಳ ಸಂತುಲಿತ ಮತ್ತು ಒಂದಕ್ಕೊಂದು ಪೂರಕವಾದ ಬಳಕೆಯನ್ನು ಕಾಣುತ್ತೇವೆ. ನಾನು ಫ್ಯಾಂಟಸಿ ಎಂದಿರುವುದು ಮಾಂತ್ರಿಕ ವಾಸ್ತವವಾದ ಅಥವಾ ಮ್ಯಾಜಿಕಲ್ ರಿಯಲಿಸಂ ಎಂದು ಯಾವುದನ್ನು ಗುರುತಿಸಲಾಗುತ್ತಿದೆಯೋ ಅದನ್ನು. ನಮ್ಮ ಜಾನಪದ ಕಥನ ಪರಂಪರೆಯ ಅವಿಭಾಜ್ಯ ದೃವ್ಯವೇ ಆಗಿದ್ದ ಇದು ಗಂಭೀರ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಕೊಂಚ ಹೊಸತೆನಿಸಿದರೂ ಹೊಸತಲ್ಲ. ಕಂಬಾರರ, ಕಾರ್ನಾಡರ ನಾಟಕಗಳಲ್ಲಿ ಇದರ ಬಳಕೆಯಾಗಿದ್ದಿದೆ. ಜಾನಪದೀಯ ತಳಹದಿಯಲ್ಲಿ ಈ ಪವಾಡಗಳಂಥ, ಮಾಂತ್ರಿಕ ವಾಸ್ತವಿಕತೆಯ ಚಿತ್ರಣವನ್ನು ನೀಡಿದಾಗ ಅದು ಆ ಒಂದು ನೆಲೆಯಲ್ಲಿ ಹೆಚ್ಚು ವಾಸ್ತವಿಕವೂ ಸುಸಂಬದ್ಧವೂ ಆಗಿ ಮೂಡಿಬರುವುದಲ್ಲದೆ ಬೇರೆ ಯಾವುದೇ ತಂತ್ರ ಬಳಸಿದರೂ (ಕನಸು/ಭ್ರಮೆ ಇತ್ಯಾದಿ) ಇಷ್ಟು ಸುಗಮವಾಗಲಾರದ ಸ್ವೀಕೃತಿಗೆ, ಯಾವುದೇ ವಿಧವಾದ ತಾರ್ಕಿಕ ಪ್ರಶ್ನೆ, ಜಂಜಾಟಗಳಿಲ್ಲದ ಸ್ವೀಕೃತಿಗೆ ಇದು ಹಾದಿ ಸುಗಮಗೊಳಿಸಿಕೊಡುತ್ತದೆ! ಹಾಗಿದ್ದರೂ ಇದು ಕಥನವನ್ನು ಸರಳಗೊಳಿಸದೆ ಅದಕ್ಕೊಂದು ವಿಶಿಷ್ಟ ಬಿಗಿಯನ್ನೂ ದೊರಕಿಸಿಕೊಡುವುದು ಗಮನಾರ್ಹ. ಹಾಗಾಗಿಯೇ ಪಾಟೀಲರಿಗೆ ಇದು ಒಂದು ತಂತ್ರದ ಮಟ್ಟಿಗೆ ಅಥವಾ ಕೇವಲ ಮಾಧ್ಯಮವಾಗಿ ಮುಖ್ಯ. ಅದರ ಚಿತ್ರಣವೇ ಅವರ ಗುರಿ ಅಲ್ಲ ಎಂಬುದನ್ನು ಕೂಡ ಗಮನಿಸಬೇಕು.

ಮೂರನೆಯದಾಗಿ, ಪಾಟೀಲರ ಕಥಾನಕದ ಆತ್ಮ ಒಂದು ರೀತಿಯಲ್ಲಿ ಆಧ್ಯಾತ್ಮಿಕವೇ ಆಗಿರುವುದು. ಈ ಶಬ್ದದ ಬಗ್ಗೆ ಕೊಂಚ ವಿವರಣೆ ಅಗತ್ಯ. `ಮಾಯಿಯ ಮುಖಗಳು' ಎಂಬ ಹೆಸರಿನ ಕತೆಯಲ್ಲಿ ಕತೆಯ ಹೆಸರೂ ಸೇರಿದಂತೆ ಗಂಗಾ, ತುಂಗಾ ಮತ್ತು ನರ್ಮದಾರ ಪಾತ್ರಗಳ ಪರಿಕಲ್ಪನೆ ಮತ್ತು ಪೋಷಣೆ, ಕೊನೆಯಲ್ಲಿ ಬರುವ ಅಣುಕಾಸುರನ ಜನನ; `ಊರಾನ ಮಂದಿ ಎಲ್ಲಾರೂ ಕೂಡಿ ಕರೀಬೇಕಾದ ಛಂದಸ್ಸು ಇದು....' ಎಂದು ಹೊಸ `ಲಯ' ಕಂಡುಕೊಳ್ಳಲು ಹಾದಿ ತೋರುವ ಲಂಗಟದ ಸ್ವಾಮಿ; ಆಮ್ಟೆಯವರ ಆಶ್ರಮ ಸೇರುವ ದ್ಯಾವಪ್ಪ... ಎಲ್ಲರೂ ಸ್ಫುರಿಸುವ ಒಂದು `ಸತ್' ಇದೆಯಲ್ಲ, ಅದನ್ನು ನಾನು ಆಧ್ಯಾತ್ಮ ಎನ್ನುತ್ತಿರುವುದು; ಆದರ್ಶ ಎನ್ನುವುದು ಕ್ಲೀಷೆಯಾಗುತ್ತದೆ ಅನಿಸಿದ್ದರಿಂದ.

ಗಂಡುಮೆಟ್ಟಿನ ಸೀಮೆಯ ಜಾನಪದೀಯ ನುಡಿಗಟ್ಟಿನಲ್ಲಿದ್ದರೂ ಭಾವಗೀತೆಯ ಪಲಕುಗಳನ್ನು ಹೊಂದಿದ ಭಾಷೆ; ಜಾನಪದ ಕತೆಗಳ, ಪದ್ಯಗಳ ಮೂಲಕ ಕಥಾನಕವನ್ನು ಮಿಥ್ ಆಗಿಯೂ ಪ್ರಸ್ತುತಕ್ಕೆ ರಿಲವಂಟ್ ಆಗಿಯೂ ಮಾಡಿಕೊಂಡು ಚರಿತ್ರೆ ಮತ್ತು ಸಮಕಾಲೀನ ಜಗತ್ತಿನ ನಡುವೆ ತುಯ್ಯತ್ತಲೆ ಕಥಾನಕವನ್ನು ಬೆಳೆಸುವ ಜಾಣ್ಮೆ; ಈ ಎರಡೂ ಅಂಶಗಳನ್ನು ನಿರ್ದಿಷ್ಟ ಉದ್ದೇಶಕ್ಕೆ, ಮತ್ತು ತಮ್ಮ ಕಥಾನಕದ ತಾಂತ್ರಿಕ ಅಗತ್ಯ, ಅನುಕೂಲಗಳಿಗೆ ಬಳಸಿಕೊಂಡೂ ಅದು ಅತ್ಯಂತ ಸಹಜವಾಗಿ ಒದಗಿಬಂದಂತೆ ಕಾಣುವ ಹಾಗೆ ಕತೆ ಹೇಳುವ ಪಾಟೀಲರ ಕತೆಗಳ ಆಶಯ, ಆಕೃತಿ ಮತ್ತು ಸಂವೇದನೆಗಳ ಪರಿಪ್ರೇಕ್ಷ್ಯ; ಎಲ್ಲವೂ ಇಡೀ ಸಂಕಥನದ ಅಂತಃಸ್ಫೂರ್ತ ಗುಟ್ಟುಗಳನ್ನು ಸುಲಭದಲ್ಲಿ ಬಿಚ್ಚಿಕೊಳ್ಳದ ಛಂದಸ್ಸಿಗೆ ಒಯ್ಯುತ್ತದೆ. ಇದಕ್ಕೆ ಕಾರಣವಿದೆ. ಈ ಎಲ್ಲ ಅಂಶಗಳೂ ಗೌಣವಾಗುವಂತೆ ಮಾಡಬಲ್ಲ ಗಟ್ಟಿಯಾದ ಕಥಾಹಂದರ ಮತ್ತು ಪಾಟೀಲರಿಗಷ್ಟೇ ಸಾಧ್ಯವಾಗಿರುವ ಅಂಥ ಕಥಾನಕಕ್ಕೆ ಅವರು ಒದಗಿಸುವ ಹಲವು ವ್ಯಾಪ್ತಿಗಳುಳ್ಳ ಅರ್ಥಪರಂಪರೆಯ ಅನುರಣನ ಶಕ್ತಿ!

ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ಮೊದಲನೆಯದಾಗಿ, ಪಾಟೀಲರು ತಮ್ಮ ಕಾವ್ಯಾತ್ಮಕ ಪರಿಭಾಷೆಯಲ್ಲಿ ಎಲ್ಲೂ ರೂಪಕಗಳ ಭಾಷೆ ಬಳಸುವುದಿಲ್ಲ. ಅಂದರೆ ಮನಸ್ಸಿನಲ್ಲಿ ದೀರ್ಘಕಾಲ ನಿಲ್ಲುವ, ಕಾಡುವ ಯಾವುದೇ ಬಿಂಬಗಳನ್ನು ಸೃಜಿಸದ ಸರಳ ಆಡುನುಡಿಯ ಛಂದಸ್ಸಿನಾಚೆ ಪಾಟೀಲರು ತಮ್ಮ ನಿರೂಪಣೆಯ ಕಾವ್ಯಾತ್ಮಕ ಅಂಶಗಳೊಂದಿಗೆ ತಾದ್ಯಾತ್ಮ ಬೆಳೆಸುವುದಿಲ್ಲ. ಎರಡನೆಯದಾಗಿ, ಪಾಟೀಲರು ಜಾನಪದದ ನುಡಿಗಟ್ಟುಗಳಲ್ಲೇ ಮಂತ್ರ ಮುಗ್ಧರಾಗಿ ನಿಂತುಬಿಡುವುದಿಲ್ಲ. ತಾಂತ್ರಿಕ ಅಗತ್ಯಗಳಿಗೆ ಇವುಗಳನ್ನು ಪಾಟೀಲರು ದುಡಿಸಿಕೊಳ್ಳುತ್ತಾರೆಯೇ ಹೊರತು ಅವುಗಳ ಮೇಲೆ ಅವರಿಗೆ ತಮ್ಮ ಇಡೀ ಕೃತಿಯ ಆಶಯವನ್ನೂ ಮೀರಿ ಸೆಳೆಯುವ ಮೋಹವಿಲ್ಲ. ಮೂರನೆಯದಾಗಿ, ಪುರಾಣಗಳನ್ನು, ಚರಿತ್ರೆಯನ್ನು ವರ್ತಮಾನಕ್ಕೆ ಜೋಡಿಸುವ ಹಾದಿಯಲ್ಲಿ ಈಗಾಗಲೇ ಜನ ತಿಳಿದಿರುವ ಕತೆಯು ತನ್ನ ಒಡಲಿನಲ್ಲಿರಿಸಿಕೊಂಡಿರಬಹುದಾದ, ಸರಿಯಾಗಿ ಅನಾವರಣವಾಗದುಳಿದ ಸಂಗತಿಗಳನ್ನು ಶೋಧಿಸುವ ಸಾಹಸಕ್ಕೂ ಪಾಟೀಲರು ಇಳಿಯುವುದಿಲ್ಲ. ಹಾಗಾಗಿಯೇ ಬಹುಷಃ ಪಾಟೀಲರು ಆಧುನಿಕ ಪುರಾಣವನ್ನೇ ಬರೆಯುತ್ತಾರೆ. ಈ ಆಧುನಿಕ ಪುರಾಣಗಳು ಲಭ್ಯ ಪುರಾಣಗಳ ಹೊಸ ಭಾಷ್ಯಗಳಲ್ಲ. ನಾಲ್ಕನೆಯದಾಗಿ, ಪೂರ್ವನಿಯೋಜಿತವಲ್ಲ ಎನಿಸುವ ಕತೆಯನ್ನು ಇವರು ತೊಡಗುವುದಿಲ್ಲ. ಪಾಟೀಲರ ಕತೆಗಳಿಗೆ ನಿರ್ದಿಷ್ಟ ಆರಂಭ, ಗುರಿ ಎಲ್ಲ ಇರುವಂತಿದೆ. ಹಾಗಾಗಿ ಇವು ವರ್ತಮಾನದಲ್ಲಿ ನಿಂತು ಭೂತದ ಕತೆಗಳನ್ನೇ ಹೇಳುವುದು ಹೆಚ್ಚು. ವರ್ತಮಾನದಲ್ಲಿ ತೊಡಗಿ ವರ್ತಮಾನದಲ್ಲೇ ಮುಗಿಯುವುದು, ಅಥವಾ ವರ್ತಮಾನದಲ್ಲಿ ತನ್ನ ಗಮ್ಯವನ್ನು ಶೋಧಿಸುವುದು ಕಡಿಮೆ.

ಈಗ ತೇರು ಕಾದಂಬರಿಯನ್ನು ಗಮನಿಸಬಹುದು. ಇದು ಹಳೆಯ, ಪುರಾತನವಾದ ಒಂದು ಕಥಾನಕವನ್ನೂ ಅದರ ಮೂಲಕ ಹರಿದು ಬರುವ ಇಂದಿನ ಜಗತ್ತಿನ ಜನರನ್ನೂ ಒಂದು ನಿರ್ದಿಷ್ಟ ಸ್ತರದಲ್ಲಿ ಸಮಾನ ಪಾತಳಿಗೊಯ್ದು ನಿಲ್ಲಿಸುವ ಕೆಲಸವನ್ನು ತನ್ನ ಇತರ ಅನೇಕ ಕೆಲಸಗಳ ಜೊತೆಗೇ ಮಾಡುತ್ತದೆ. ಸ್ವತಃ ಇಲ್ಲಿನ ಕಥಾನಕ ತನ್ನ ಒಂದು ನೆಲೆಯಲ್ಲಿ ಮಿಥ್ ಎಂದು ನಾವು ಕರೆಯುವ, ಪವಾಡ, ಅದ್ಭುತಗಳ ಪುರಾಣವನ್ನೂ, ಇನ್ನೊಂದು ನೆಲೆಯಲ್ಲಿ ಸನದು, ರಿಕಾರ್ಡುಗಳು ಹೇಳುವ ಪುರಾವೆಗಳುಳ್ಳ ಚರಿತ್ರೆಯನ್ನೂ ಒಂದು ನಿರ್ದಿಷ್ಟ ಪಾತಳಿಗೆ ಒಯ್ದು ನಿಲ್ಲಿಸಿ ಮುಖಾಮುಖಿಯಾಗಿಸುತ್ತದೆ; ಅಲ್ಲಿ ಬರುವ ಪಾತ್ರಗಳನ್ನಲ್ಲ. ಇದು ಬಹಳ ಮುಖ್ಯ. ಕಥಾನಕವೇ ಇಲ್ಲಿ ಬಹಳ ಮುಖ್ಯ ಪಾತ್ರಧಾರಿ. ಅದನ್ನು ಗೌಣವಾಗಿಸಬಲ್ಲ ಕಸು ಉಳ್ಳ ಪಾತ್ರಧಾರಿಗಳು ಇಲ್ಲಿ ಇಲ್ಲ.

ಹಾಗೆಯೇ ವದಂತಿ, ಮೌಢ್ಯ, ನಂಬುಗೆ, ಭಕ್ತಿ ಎಲ್ಲ ಒಂದರೊಳಗೊಂದು ಸೇರಿದಂತಿರುವ ಕಂತೆ ಪುರಾಣವನ್ನೂ, ಒಂದು ತಲೆಮಾರಿನ ಭಕ್ತಿ,ಗೌರವಕ್ಕೆ ಪಾತ್ರವಾದ ಒಂದು ಪ್ರಾಚೀನ ಪರಂಪರೆಯನ್ನೂ ಜತೆಜತೆಯಾಗಿಯೇ ಪ್ರತಿನಿಧಿಸುವ ಅಂಶಗಳಲ್ಲೂ ಆಂತರಿಕ ಮುಖಾಮುಖಿ/ಸಂಘರ್ಷ ಕೂಡಾ ಇಲ್ಲಿ ನಡೆಯುತ್ತಿರುತ್ತದೆ. ಇದು ಇಲ್ಲಿನ ಪಾತ್ರಗಳ (ನಿರೂಪಕನೂ ಸೇರಿ) ಸಮಸ್ಯೆಯೋ ಅನುಕೂಲವೋ ಆಗಿ ಸಂದರ್ಭಾನುಸಾರ ಪ್ರಕಟಗೊಳ್ಳುವ ಅಂಶ. ಹಾಗಾಗಿ ಇಲ್ಲಿ ಬರುವ ಆಧುನಿಕ ಜಗತ್ತಿನ ಮನುಷ್ಯ ಮತ್ತು ಅವನ ಮಟ್ಟಿಗೆ ಅಸಂಗತವಾಗುತ್ತಿರುವ ಪುರಾಣ-ಇತಿಹಾಸಗಳ ಒಂದು ಕಾಲಘಟ್ಟದ ನಡುವಿನ ಸಂಘರ್ಷ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆಧುನಿಕ ಮನುಷ್ಯನ ಆಂತರಿಕ ತುಡಿತ, ಗತ ಇತಿಹಾಸದಿಂದ ಮುಕ್ತನಾಗಿ ನಿಂತು ಹೊಸದಾಗಿ ಸ್ಥಾಪಿಸಿಕೊಳ್ಳಬಯಸುವ ಅಸ್ಮಿತೆಯ ಕನಸು, ಅದರ ಸುತ್ತ ಬೆಳೆಯುವ ಆಸೆ, ಆಶೋತ್ತರಗಳೇನೇ ಇರಲಿ, ಅವು ಗತದ ಎಲ್ಲವನ್ನೂ ತನ್ನೊಡಲಿನಲ್ಲಿಟ್ಟುಕೊಂಡೇ ಮುಂದೆ ಹೋಗಬೇಕಾಗುತ್ತದೆ. ಆಮ್ಟೆಯವರ ಆಶ್ರಮ ಸೇರಿಕೊಳ್ಳುವ ದ್ಯಾವಪ್ಪನ ಆದರ್ಶ ಎಲ್ಲೋ ಒಂದು ಕಡೆ `ರಗುತದೊಳಗೆ ಸೇರಿಕೊಂಡ ವಿಷವನ್ನೂ ಕಳಕೊಂಡು' ಶುದ್ಧನಾಗ ಬಯಸುವ ಮೊದಲ ತಲೆಮಾರಿನ ದ್ಯಾವಪ್ಪನ ಆದರ್ಶವನ್ನೇ ಹೋಲುತ್ತದೆ!

ಈ ಕಥಾನಕ ನಮ್ಮೆದುರು ತೆರೆದುಕೊಳ್ಳುವ ಅನನ್ಯ ಬಗೆ ಕೂಡ ವಿಶೇಷ ಗಮನಕ್ಕೆ ಅರ್ಹವಾಗಿದೆ.

ಇಲ್ಲಿ ವರ್ತಮಾನವನ್ನು ಪ್ರತಿನಿಧಿಸುವ ಒಬ್ಬ ನಿಷ್ಪಕ್ಷಪಾತಿಯೂ, ನಿಷ್ಟುರ ವಾಸ್ತವವಾದಿಯೂ, ವರದಿ ನೀಡುವುದೇ ಕೆಲಸವಾಗಿರುವವನೂ ಆದ ಪತ್ರಕರ್ತನಿದ್ದಾನೆ. ಅವನು ಕಥೆ ಹೇಳುತ್ತಾನೆ ನಮಗೆ.

ಭವಿಷ್ಯವನ್ನು ಪ್ರತಿನಿಧಿಸುವ ಒಬ್ಬ - ಕನಸುಗಳನ್ನು, ಆದರ್ಶಗಳನ್ನು ಹೊತ್ತವನು, ಆದರೆ ಸಾಮಾನ್ಯ ಜನರಿಗೆ ಎಡಬಿಡಂಗಿ ತರವೂ, ಹುಚ್ಚನ ತರವೂ ಕಾಣಬಹುದಾದವನು, ಆದರ್ಶವಾದಿಯಾದವನು ಇದ್ದಾನೆ. ಅವನೂ ಕಥೆಯ ಕೆಲವಂಶ ಹೇಳುತ್ತಾನೆ.

ಭೂತಕಾಲವನ್ನು ಪ್ರತಿನಿಧಿಸುವ ಒಬ್ಬನೂ ಇದ್ದಾನೆ. ತನ್ನ ಮೂಢನಂಬುಗೆಗಳನ್ನು ಸ್ವತಃ ತಾನೂ ಪ್ರಶ್ನಿಸಿಕೊಳ್ಳಲಾರದ ಇತರರೂ ಪ್ರಶ್ನಿಸಲಾರದ ಸ್ಥಿತಿ ಅವನದು. ಅವನೂ ಅವನ್ನೆಲ್ಲ ಎಕಾಎಕಿ ತೊರೆದು ಬಿಡಲಾರ. ತೊರೆ ಎನ್ನಲು ಆಗದ ಹಾಗೆ, ಅವೆಲ್ಲ ಅವನ ವ್ಯಕ್ತಿತ್ವದ ಭಾಗವಾಗಿ ಇರುತ್ತಲೇ ಅವನಿಂದ ಬೇರ್ಪಡಿಸಲಾಗದ ಕೆಲವು ಮೌಲ್ಯಗಳನ್ನೂ ಆತ ಪ್ರತಿನಿಧಿಸುತ್ತಾನೆ. ಆತ ಮುಗ್ಧ. ಮುದುಕ ಬೇರೆ. ಈ ಮುದುಕನೇ ಕತೆಯನ್ನು ತೊಡಗುವವನೂ ಹೌದು.

ವರ್ತಮಾನಕ್ಕೆ ಸಂವಾದಿಯಾದ ಭೂತಕಾಲದ ಕಥೆಯನ್ನು ಹೇಳುವಲ್ಲಿ ಎಲ್ಲೆಲ್ಲ ಮಿಥ್ ಅಥವಾ ಪುರಾಣವನ್ನು ಕಾಣಿಸಬೇಕಾಗುತ್ತದೋ ಅಲ್ಲೆಲ್ಲ ಗೊಂದಲಿಗರ ಜಾನಪದ ಹಾಡುಗಳನ್ನು ಪಾಟೀಲರು ಬಳಸಿಕೊಳ್ಳುತ್ತಾರೆ. ಅದನ್ನು ಕತೆಯ ಬಹು ಮುಖ್ಯ ಭಾಗದ ನಿರೂಪಣೆಗೆ, ಶಿಷ್ಟ ಭಾಷೆಯಲ್ಲಿ ಸುಲಭ ಸ್ವೀಕೃತವಾಗಲಾರದಂಥ ಸಂಗತಿಗಳನ್ನು ಹೇಳಲು ಬಳಸಿಕೊಳ್ಳುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು.

ಹೀಗೆ ಕಥಾನಕದ ನಿರೂಪಣೆಯ ತಂತ್ರ ವಿಶೇಷ ಗಮನಕ್ಕೆ ಪಾತ್ರವಾಗುವ ಒಂದು ಅಂಶ.

ಈ ಗೊಂದಲಿಗರ ಹಾಡಿನ ಮೂಲಕವೇ ಚರಿತ್ರೆ ಕ್ರಮೇಣ ಪುರಾಣವಾದಾಗ ಪಡೆದುಕೊಳ್ಳುವ ರೂಪಾಂತರ ಮತ್ತು ಕೇಳುವವರಿಗೇ ಯಾಕೆ ನೋವು ಅನುಭವಿಸಿದ ಬಲಿಪಶುಗಳಿಗೂ ಕ್ರಮೇಣ ತಮ್ಮ ನೋವು, ಅವಮಾನಗಳೆಲ್ಲ ಘನವಾಗಿ, ಪುಣ್ಯಫಲವಾಗಿ, ಹಿತಕರವಾಗಿ ಕಾಣಿಸುವಂತೆ ಮಾರ್ಪಾಡಾಗುವ ಸಹಜ ಬಗೆಯನ್ನು ಕಾಣಿಸುತ್ತಾರೆ. ಮಾತ್ರವಲ್ಲ ಈ ಬೆಳವಣಿಗೆಗೆ ಪ್ರೇರಕವಾಗುವ ಇದರ ಹಿಂದಿನ ಶಕ್ತಿಗಳು, ಅಧಿಕಾರದ ಕೇಂದ್ರಗಳು ಚರಿತ್ರೆಯನ್ನು ರೂಪಿಸುವ ಅಮೂರ್ತ ಬಗೆಯನ್ನು ಕಾಣಿಸುತ್ತಾರೆ. ಈ ಕೆಲಸವನ್ನು ಸುಸಂಬದ್ಧವಾಗಿ ಮಾಡಲು ಗೊಂದಲಿಗರ ಹಾಡು ಇಲ್ಲಿ ಕತೆ ಹೇಳುವ ಪಾತ್ರ ನಿರ್ವಹಿಸಿದೆ. ಹೀಗೆ ನಾಲ್ಕು ವಿಭಿನ್ನ ಕೋನಗಳಲ್ಲಿ, ನೆಲೆಯಲ್ಲಿ ಕತೆ ತೆರೆದು ಕೊಳ್ಳುತ್ತದೆ. ಹೀಗೆ ಚರಿತ್ರೆ, ವರ್ತಮಾನ, ಪುರಾಣ, ಐತಿಹ್ಯ, ನಂಬುಗೆ, ಭ್ರಮೆ, ವಾಸ್ತವ ಎಲ್ಲವೂ ಸೇರಿದ ಈ ಕಥಾನಕ ಆಧುನಿಕ ಅಂಶಗಳ ಜೊತೆ ಮುಖಾಮುಖಿಯನ್ನು ಎದುರಿಸಿದರೂ ಒಟ್ಟಾರೆಯಾಗಿ ಈ ಮುಖಾಮುಖಿ ಕೂಡಾ ಇನ್ನೊಂದು ಪುರಾಣವೇ ಆಗಿದೆ. ಅಷ್ಟರ ಮಟ್ಟಿಗೆ ಇಲ್ಲಿನ ದ್ಯಾವಪ್ಪ ಆಯ್ದುಕೊಳ್ಳುವ ಆದರ್ಶ ಕೂಡಾ ಸಹಜವಲ್ಲದ ಒಂದು ದಾರಿಯಾಗಿಯೆ ಉಳಿಯುತ್ತದೆಯೇ ಹೊರತು ಬದುಕಿನ ಒಳಗಿನಿಂದ ಈ ಪುರಾಣಗಳ ಹೇರುವಿಕೆಯನ್ನು ಮೀರುವ ಮಾರ್ಗವಿಲ್ಲ ಎಂಬ ನಿಲುವಿಗೆ ಕಥಾನಕ ಬಂದು ತಲುಪುತ್ತದೆ. ಒಂದೋ ಸಂಪೂರ್ಣ ಶರಣಾಗತಿ ಇಲ್ಲ ಸಂಪೂರ್ಣವಾಗಿ ಅದನ್ನು ಮೀರಿ ನಡೆಯುವ ಹಾದಿ, ಅದು ಇನ್ನೊಂದು ಅತಿಗೆ ನಮ್ಮನ್ನು ಒಯ್ದರೂ.

ಅಧಿಕಾರ ಕೇಂದ್ರಕ್ಕೆ, ಪಟ್ಟಭದ್ರರಿಗೆ ಎಲ್ಲೋ ಅನಿವಾರ್ಯವಾಗುವ ಈ ದೇವರು, ಧರ್ಮ, ಪರಂಪರೆಯ ಪ್ರೀತಿ, ಪುರಾತನವಾದದ್ದರ ರಕ್ಷಣೆ, ಹೊಸ ಹೊಸ ಪುರಾಣಗಳ ನಿರ್ಮಿತಿ ಎಲ್ಲವೂ ಸಾಮಾನ್ಯ ಮನುಷ್ಯನ ಸಹಜ ಸರಳ ಬದುಕಿಗೆ ಹೊರೆಯಾಗುವ, ತೊಡಕಾಗುವ ಹಂತದಲ್ಲಿ ಪುರಾಣಗಳು ಆಧುನಿಕ ಜಗತ್ತಿನ ವರ್ತಮಾನದ ವಿದ್ಯಮಾನವೇ ಆಗಿಬಿಡುವುದನ್ನು ಗಮನಿಸಬೇಕು. ಅಧಿಕಾರ ಕೇಂದ್ರಗಳು ಬದಲಾದರೂ, ಶಿಥಿಲಗೊಂಡರೂ ಈ ಭೂತಗಳು, ಪ್ರೇತಾತ್ಮಗಳು ಮುಕ್ತಿ ಇಲ್ಲದ ಪಿಶಾಚಿಗಳಂತೆ ತೊಡರಿಕೊಂಡೇ ಇರುವುದನ್ನು ಕಾಣಬಹುದು. ಕೃತಿಯ ಘನತೆ ಇರುವುದೇ ಇಲ್ಲಿ. ಅಧಿಕಾರ ಕೇಂದ್ರಗಳು ಶಿಥಿಲವಾಗುವುದಕ್ಕೆ ಆಯಾ ಕೇಂದ್ರದೊಳಗಿನ ಒಡಕುಗಳೇ ಕಾರಣವಾಗುತ್ತವೆ, ಪಾಟೀಲರ ಕತೆಗಳಲ್ಲಿ. ಆದರೆ ಪುರಾಣ ಭಂಜಕ ಶಕ್ತಿಗಳು ಯಶಸ್ಸು ಕಾಣುವುದಿಲ್ಲ. ಇದು ಅವುಗಳ ವಿರಾಟ್ ಸ್ವರೂಪವನ್ನು ತೆರೆದು ತೋರಿಸುತ್ತದೆ. ಆದರೆ ಈ ಹೊಸ ತೊಡಕುಗಳನ್ನು, ಹೊರೆಯನ್ನು ಮೀರಲು ಆಧುನಿಕ ಮನುಷ್ಯನಿಗೆ ಇರುವ ಮಾರ್ಗೋಪಾಯಗಳ ಶೋಧನೆ ಈ ಸಂಕಥನದಲ್ಲಿ ಕಾಣಸಿಗುವುದಿಲ್ಲ. ದ್ಯಾವಪ್ಪನ ಪಾತ್ರವಾದರೂ ಪರಿಪೂರ್ಣತೆಯ ಹಾದಿ ಹಿಡಿದಂತೆ ಎಲ್ಲೂ ಕಂಡು ಬರುವುದಿಲ್ಲ.

ದ್ಯಾವಪ್ಪನ ಆದರ್ಶ, ಅವನ ನಿಲುವು ಕೂಡಾ ಇನ್ನೊಂದು ಅತಿಯಾಗಿರಬಹುದಾದ್ದು. ಅಥವಾ ಅವನ ಗೊಂದಲದ ಫಲಶೃತಿಯಾಗಿರಬಹುದಾದ್ದು. ಹೆಚ್ಚೆಂದರೆ ಅವನೂ ಸಾಮಾನ್ಯನ ಬದುಕಿನ ಪರಿಧಿಯಿಂದ ಹೊರಗೇ ಉಳಿಯುವ ಇನ್ನೊಂದು ಪಾತ್ರವಾಗಿ ಬಿಡಬಹುದಾದ್ದು. ಕೊನೆಗೂ ನಿರೂಪಕ ಮತ್ತು ದ್ಯಾವಪ್ಪನ ಹೆಂಡತಿ ಎಲ್ಲ ಇರುವ ಜಗತ್ತಿನಿಂದ ಭಿನ್ನವಾದ ಒಂದು ಜಗತ್ತಿಗೆ ಸೇರಿಕೊಂಡವನಂತೆ ಕಾಣುವ ದ್ಯಾವಪ್ಪನೊಂದಿಗೆ ಮುಕ್ತಾಯವಾಗುವ ಕಾದಂಬರಿ ಈ ಕಾರಣಕ್ಕೆ ಕೊಂಚ ನಿರಾಶೆ ಹುಟ್ಟಿಸಿದರೆ ಆಶ್ಚರ್ಯವಿಲ್ಲ.

ಇಲ್ಲಿ ಡಾ||ಯು.ಆರ್.ಅನಂತಮೂರ್ತಿಯವರ `ಸಂಸ್ಕಾರ'ದ ಪ್ರಾಣೇಶಾಚಾರ್ಯರೂ, `ಭಾರತೀಪುರ'ದ ಗಣೇಶನೂ ಮನಸ್ಸಿನಲ್ಲಿ ಸುಳಿಯುತ್ತಾರೆ. ಭಾರತೀಪುರದ ಜಗನ್ನಾಥ ಹೊರಟಿದ್ದೂ ಪುರಾಣಭಂಜಕ ಕೆಲಸಕ್ಕೇ, ಕೊಂಚ ವಿಶಾಲ ಅರ್ಥದಲ್ಲಿ. ಅದನ್ನು ಗಣೇಶನ ಉನ್ಮಾದ ಕೆಡಿಸುವುದು `ಭಾರತೀಪುರ'ದ ವಿಪರ್ಯಾಸ. ಹಾಗೆಯೇ ಪ್ರಾಣೇಶಾಚಾರ್ಯರ ನೈಷ್ಠಿಕ ಕೋಟೆಯನ್ನು ಚಂದ್ರಿ ಒಡೆಯುವುದೂ ಕೂಡಾ ಒಂದರ್ಥದಲ್ಲಿ ಪುರಾಣಭಂಜಕತೆಯೇ. ಪಾಟೀಲರ ಆಧುನಿಕ ಪುರಾಣ ಈ ಎಲ್ಲ ದೃಷ್ಟಿಯಲ್ಲಿ ಹೊಸ ಜಿಜ್ಞಾಸೆಗಳಿಗೆ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ಆದರೆ ಕಾದಂಬರಿಯ ಕೇಂದ್ರ ಕೇವಲ ಪುರಾತನವಾದದ್ದು ಮತ್ತು ಆಧುನಿಕವಾದದ್ದರ ಸಂಘರ್ಷವಲ್ಲ. ಅದು ಒತ್ತಟ್ಟಿಗಿರುತ್ತ ಕಾದಂಬರಿ ಇತರ ಅನೇಕ ಹೊಳಹುಗಳನ್ನು ನೀಡುತ್ತ ಹಲವು ರೀತಿಯ ಓದಿಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಸಿದ್ಧವಾಗಿ ಓದುಗರಿಗೆ ದಕ್ಕುತ್ತದೆ. ಹಾಗಾಗಿ `ತೇರು' ಸ್ಪರ್ಶಿಸುವ ಕೆಲವು ಸಮಕಾಲೀನ ಪ್ರಶ್ನೆಗಳಿಗಾಗಿಯೂ, ಕೃತಿಯ ಕಲಾತ್ಮಕ ನೇಯ್ಗೆಗಾಗಿಯೂ ಬಹಳ ಮಹತ್ವದ ಕೃತಿ. ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಹೂವಿಗೆ ಗಂಧವಿದ್ದಂತೆ, ಹೊಸ ಮತ್ತು ಹಳೆಯ ಓದುಗರನ್ನು ಅದು ಮತ್ತೊಮ್ಮೆ ತನ್ನತ್ತ ಸೆಳೆಯಬೇಕು. ಆಗ ಪ್ರಶಸ್ತಿಗೊಂದು ಅರ್ಥ, ಕೃತಿಕಾರನ ಪರಿಶ್ರಮವೂ ಸಾರ್ಥಕ. ಅದೇ ಪಾಟೀಲರಿಗೆ ನಾವು ನೀಡಬಹುದಾದ ಅರ್ಥಪೂರ್ಣ, ಸಾರ್ಥಕ ಅಭಿನಂದನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, October 14, 2008

ಅಡಿಗರ ಕಾದಂಬರಿಗಳು


(ಅಡಿಗ-90 ಸಂದರ್ಭದಲ್ಲಿ ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ ಸಂಪಾದಿಸಿದ "ಪ್ರತಿಮಾ ಲೋಕ: ಗೋಪಾಲಕೃಷ್ಣ ಅಡಿಗ-ಮರುಓದು" ಕೃತಿಗಾಗಿ ಬರೆದ ಲೇಖನ)

ಅಡಿಗರ ಕಾವ್ಯ ಪರಂಪರೆಯನ್ನು ಗಮನಿಸಿದರೆ 1952ರ "ನಡೆದು ಬಂದ ದಾರಿ" ಕವನ ಸಂಕಲನದ ನಂತರ ಅದು ಹೊಸತೇ ಆದ ಮಜಲನ್ನು ಪಡೆದುಕೊಂಡಿರುವುದನ್ನು ಸ್ಪಷ್ಟವಾಗಿಯೇ ಗುರುತಿಸಬಹುದಾಗಿದೆ. ಇವತ್ತು ಅಡಿಗರನ್ನು ಕುರಿತು ಮತ್ತೆ ಮತ್ತೆ ನಡೆಯುತ್ತಿರುವ ಚರ್ಚೆ, ಜಿಜ್ಞಾಸೆಗಳೇನಿದ್ದರೂ ಅದು ಈ ಅವಧಿಯ ನಂತರದ ಅವರ ಕಾವ್ಯದ ಬಗ್ಗೆಯೇ ಎಂದರೂ ತಪ್ಪಾಗಲಾರದು. ಅಡಿಗರು ಆಕಾಶದೀಪ(1952) ಮತ್ತು ಅನಾಥೆ(1954) ಎಂಬ ಎರಡು ಕಾದಂಬರಿಗಳನ್ನೂ ಹುಲಿರಾಯ ಮತ್ತಿತರ ಕೆಲವು ಕತೆಗಳನ್ನೂ ಬರೆದಿರುವುದು ಕೂಡ ಅವರ ಚಂಡೆಮದ್ದಳೆ(1954), ಭೂಮಿಗೀತ(1959) ಮುಂತಾದ ಬಹು ಚರ್ಚಿತ ಕವನಸಂಕಲನಗಳು ಬರುವುದಕ್ಕೂ ಮುನ್ನ. ಬೇಂದ್ರೆಯವರ ಪ್ರಭಾವದಿಂದ ಮುಕ್ತರಾಗಬೇಕೆಂಬ ಒಂದು ಹಂಬಲ ಕೂಡ ಅವರನ್ನು ಕಾಡುತ್ತಿದ್ದ ಕಾಲ ಅದು. ಅದೇ ಸಮಯದಲ್ಲಿ ಅವರು ವಿಶ್ವಸಾಹಿತ್ಯದ ಅನುವಾದದ ಕೆಲಸದಲ್ಲಿ ಕೂಡ ತೊಡಗಿದ್ದರು. ಹೀಗೆ 1950-54ರ ಅವಧಿಯಲ್ಲಿ ಗದ್ಯದತ್ತ ಅವರ ಗಮನ ಹರಿದು ಈ ಎರಡು ಕಾದಂಬರಿಗಳನ್ನು ಬರೆದಿರಬಹುದು ಎನಿಸುತ್ತದೆ. ಆದರೂ ಅಡಿಗರ ಸೃಜನಶೀಲ ಗದ್ಯಕೃತಿಗಳಿಗೆ ಅವರ ಕಾವ್ಯ ಪರಂಪರೆಯೇ ಸವಾಲೊಡ್ಡುವುದು ಒಂದು ವಿಪರ್ಯಾಸವೆಂದೇ ಅನಿಸುತ್ತದೆ.


1950ಕ್ಕೂ ಮೊದಲಿನ ಕನ್ನಡ ಕಾದಂಬರಿ ಲೋಕ ಹೇಗಿತ್ತು, ಈ ಅವಧಿಯಲ್ಲಿ ಕನ್ನಡ ಕಾದಂಬರಿ ಪರಂಪರೆ ಏನಿತ್ತು ಎಂಬುದನ್ನೂ ಗಮನಿಸುವುದು ಸೂಕ್ತ. ಡಾ. ಪುರುಷೋತ್ತಮ ಬಿಳಿಮಲೆಯವರು ಬರೆದ ಕಾದಂಬರಿ 1926-1950 ಎಂಬ ಪ್ರಬಂಧದಲ್ಲಿ ಈ ಕುರಿತ ವಿವರಗಳಿವೆ. (ಶತಮಾನದ ಕನ್ನಡ ಸಾಹಿತ್ಯ, ಸಂ: ಜಿ ಎಚ್ ನಾಯಕ, ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ). ಬಿಳಿಮಲೆಯವರು ಕಾದಂಬರಿ ಪ್ರಕಾರ ಮಧ್ಯಮವರ್ಗದ ಜನರ ಮಹಾಕಾವ್ಯ ಎಂಬ ಮಾತನ್ನು ಪುಷ್ಟೀಕರಿಸುತ್ತ ಹೀಗೆ ಹೇಳುತ್ತಾರೆ:

"ಸಾಹಿತ್ಯವು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಬೇಕೆಂಬ 20ನೇ ಶತಮಾನದ ಕೂಗು ಕೂಡಾ ಕಾದಂಬರಿ ಪ್ರಕಾರಕ್ಕೆ ಹೆಚ್ಚು ಆಪ್ತವಾಯಿತು. ಈ ಎಲ್ಲಾ ಕಾರಣಗಳಿಂದಾಗಿ ಕಾದಂಬರಿ ಮಾಧ್ಯಮವು ಮಧ್ಯಮ ವರ್ಗದ ಮತ್ತು ಸಾಮಾನ್ಯವರ್ಗದ ಆಶೋತ್ತರಗಳನ್ನು ಅಭಿವ್ಯಕ್ತಿಸಲು ಮುಂದಾಯಿತು. ಭಾರತೀಯರಿಗೆ ಸಿಕ್ಕಿದ ವಸಾಹತು ಶಿಕ್ಷಣ, ಭಾರತೀಯ ಸಮಾಜದಲ್ಲಿ ಕಂಡು ಬಂದ ಹೊಸಬಗೆಯ ಜೀವನಕ್ರಮ, ಪಾಶ್ಚಾತ್ಯ ವೈಚಾರಿಕತೆಯಿಂದ ನಿಷ್ಪನ್ನಗೊಂಡ ಜಾಗೃತಿ, ಸ್ವಾತಂತ್ರ್ಯದ ಹಂಬಲದಲ್ಲಿ ಬೆಳೆದುಬಂದ ರಾಷ್ಟ್ರೀಯತಾವಾದ - ಇವೆಲ್ಲ ಬರಹಗರರಿಗೆ ಬಗೆಬಗೆಯ ವಸ್ತುವನ್ನು ಒದಗಿಸಿತು. ಜನ ಸಾಮಾನ್ಯರ ಕೌಟುಂಬಿಕ ಜೀವನದ ವಿವರಗಳು, ಬವಣೆಗಳು, ಸಾಮಾಜಿಕ ಜೀವನದ ಸೂಕ್ಷ್ಮಗಳೆಲ್ಲ ಕಲಾಕೃತಿಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾದವು. ಬರಹಗಾರರು ವಾಸ್ತವ ಜೀವನದ ವಿವರಗಳನ್ನು ಗದ್ಯದಲ್ಲಿ ತಾಳ್ಮೆಯಿಂದ ಮಂಡಿಸಲು ಮುಂದಾದರು ಮತ್ತು ತಮ್ಮ ಆದರ್ಶಗಳನ್ನು ನಿರೂಪಿಸಿದರು. ಸಾಮಾಜಿಕ ಸಂಬಂಧ, ಭೂ ಒಡೆತನ, ದಾಂಪತ್ಯ ಸಮಸ್ಯೆ, ವೇಶ್ಯಾ ಸಮಸ್ಯೆ, ಅಂತರ್ಜಾತೀಯ ಮದುವೆಗಳು, ಕಾನೂನಿನಲ್ಲಿರುವ ಬಿಕ್ಕಟ್ಟುಗಳು - ಇವೆಲ್ಲವನ್ನೂ ಕಾದಂಬರಿಗಳ ಮೂಲಕ ಚರ್ಚಿಸಲು ಆರಂಭಿಸಿದಾಗ, ನಿಜಕ್ಕೂ ಸಾಹಿತ್ಯ ಲೋಕದಲ್ಲಿ ದೊಡ್ಡ ಕ್ರಾಂತಿಯೇ ಸಂಭವಿಸಿತು. ೧೯೨೫-೧೯೫೦ರ ನಡುವೆ ಈ ಬಗೆಯ ಹೊಸ ಕಾದಂಬರಿಗಳು ಹೇರಳವಾಗಿ ಬಂದವು." (ಶತಮಾನದ ಕನ್ನಡ ಸಾಹಿತ್ಯ:ಪುಟ 205; ಕಾದಂಬರಿ 1926-1950:ಡಾ.ಪುರುಶೋತ್ತಮ ಬಿಳಿಮಲೆ)

ಅಡಿಗರ "ಅನಾಥೆ" ಕಾದಂಬರಿಯಲ್ಲಿ ಮೇಲ್ನೋಟಕ್ಕೆ ನಮಗೆ ಕಾಣುವುದು ವಿವಾಹಿತಳಾದ ಒಬ್ಬಳು ಸ್ತ್ರೀ ಮತ್ತು ಅವಿವಾಹಿತ ಆದರೆ ನೊಂದಿರುವ ಭಗ್ನಪ್ರೇಮಿಯೊಬ್ಬನ ನಡುವಿನ ತುಮುಲಗಳು. "ಆಕಾಶದೀಪ"ದಲ್ಲೂ ಮಿಂಚಿನಂತೆ ಬಂದು ಮರೆಯಾಗುವ ನೀಲಾ ಎಂಬ ಹುಡುಗಿ ಮಾಧವನಲ್ಲಿ ಉಂಟುಮಾಡುವ ತಳಮಳದ ಚಿತ್ರಣವಿದೆ. "ಆಕಾಶದೀಪ" ಎಳವೆಯ, ಷೋಡಶದ ಮನಸ್ಥಿತಿಯ ಕಥಾನಕವಾದರೂ ಅಲ್ಲಿ ತುಯ್ಯುವ ಮನಸ್ಸೂ, ಅದರ ನೋವೂ "ಅನಾಥೆ"ಯಲ್ಲಿ ಎದುರಾಗುವ ಸವಾಲುಗಳೂ ತೀರ ಭಿನ್ನವಾದ ವಸ್ತುವಲ್ಲ. ಇಲ್ಲಿ ನಾವು ಅದುವರೆಗಿನ ಇಂತಹುದೇ ವಸ್ತುವಿನೊಂದಿಗೆ ಹೊರಟ ಕೆಲವು ಕಾದಂಬರಿಗಳನ್ನು ಗಮನಿಸಬಹುದು. 1935ರಲ್ಲಿ ಬಂದ "ಧರ್ಮಸೆರೆ" (ಜಡಭರತ) ಮತ್ತು ಸಂಧ್ಯಾರಾಗ(ಅನಕೃ), 1936ರಲ್ಲಿ ಬಂದ "ಧೂಮಕೇತು" (ಕಡೆಂಗೋಡ್ಲು ಶಂಕರಭಟ್ಟ), 1937ರಲ್ಲಿ ಬಂದ "ಕಾನೂರು ಹೆಗ್ಗಡತಿ"(ಕುವೆಂಪು), ಅನಕೃ ಅವರ "ಮಂಗಳ ಸೂತ್ರ"(1940), "ಸಾಹಿತ್ಯರತ್ನ"(1943),"ಹೊಸಿಲು ದಾಟಿದ ಹೆಣ್ಣು"(1946),"ಮುಯ್ಯಿಗೆ ಮುಯ್ಯಿ"(1947), "ಕಣ್ಣೀರು"(1947), "ನಟಸಾರ್ವಭೌಮ"(1949) ಅಲ್ಲದೆ 1948ರಲ್ಲಿ ಬಂದ "ಹೇಮಾವತಿ" (ಗೊರೂರು ರಾಮಸ್ವಾಮಿ ಐಯಂಗಾರ್‍),1950ರಲ್ಲಿ ಬಂದ "ಸರ್ವಮಂಗಳಾ" (ಚದುರಂಗ) ಒಂದಲ್ಲ ಒಂದು ರೀತಿಯಲ್ಲಿ ಅಡಿಗರು ತಮ್ಮ ಕಾದಂಬರಿ "ಅನಾಥೆ"ಯಲ್ಲಿ ಎತ್ತಿಕೊಂಡ ಗಂಡು ಹೆಣ್ಣು ಸಂಬಂಧದ ಸ್ವರೂಪ, ಅಂದಿನ ಸಂಕ್ರಮಣ ಸ್ಥಿತಿಯಲ್ಲಿದ್ದ ಸಮಾಜವ್ಯವಸ್ಥೆ ಮತ್ತು ಯುವ ವಿದ್ಯಾವಂತರಲ್ಲಿ ಮೊಳೆಯುತ್ತಿದ್ದ ಸುಧಾರಣಾಪರ ಆದರ್ಶಗಳನ್ನು ತಡಕುವ ಕಾದಂಬರಿಗಳೇ.

ಇಲ್ಲೇ ಪುರುಷೋತ್ತಮ ಬಿಳಿಮಲೆಯವರು ಹೇಳುವ ಇನ್ನೊಂದು ಮಾತನ್ನು ಗಮನಿಸಬಹುದು. ಬಿಳಿಮಲೆಯವರು 1926ರಿಂದ 1950ರ ಅವಧಿಯ ಕಾದಂಬರಿಗಳನ್ನು ಗಮನಿಸಿ ಸರಿ ಸುಮಾರು ಎಲ್ಲಾ ಲೇಖಕರು ಸಾಮಾಜಿಕ ಸಮಸ್ಯೆಯನ್ನು ನೈತಿಕ ದೃಷ್ಟಿಕೋನದಿಂದಲೇ ನೋಡಿ ಪರಿಹಾರ ಸೂಚಿಸುವ ಸಾಮಾನ್ಯ ಕ್ರಮವನ್ನು ಅನುಸರಿಸುತ್ತಾರೆ ಎನ್ನುತ್ತಾರೆ.(ಪುಟ 224). ಆದರೆ ಅಡಿಗರು "ಅನಾಥೆ"ಯಲ್ಲಿ ತೋರುವ ದೃಷ್ಟಿಕೋನ ಕೇವಲ ಆದರ್ಶಪರ ನಿಲುವಿನಿಂದ ಹೊರಹೊಮ್ಮಿದ್ದೂ ಅಲ್ಲ, ಅಂಥ ಯಾವುದೇ ಪರಿಹಾರದ ಅಭಿವ್ಯಕ್ತಿಯೂ ಅಲ್ಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಎಂದು ಹೇಳಬಹುದಾದ್ದು ಅಡಿಗರಿಗೆ "ಆಕಾಶದೀಪ"ದಲ್ಲಾಗಲೀ "ಅನಾಥೆ"ಯಲ್ಲಾಗಲೀ ಸಮಾಜಮುಖೀ ಧೋರಣೆಗಳಿಗಿಂತ ವ್ಯಕ್ತಿಯ ಅಂತರಂಗದ ಔನ್ನತ್ಯ, ಅದರ ಮಾಗುವಿಕೆಯೇ ಮುಖ್ಯವಾಗಿರುವುದು.


ಅಡಿಗರ ಕತೆಗಳನ್ನು ಗಮನಿಸಿದರೂ ಆ ದಿನಗಳಲ್ಲಿ ಅಡಿಗರನ್ನು ಬಹುವಾಗಿ ಕಾಡಿದ ಸಂಗತಿಗಳು, ನೋವು, ಅಸಹಾಯಕತೆ ನಮ್ಮ ಅರಿವಿಗೆ ಬರುತ್ತದೆ. ವಿನಾಯಕನ ಸಂಸಾರ, ಅಪ್ರಿಯವಾದ ಸತ್ಯ, ತಿಮ್ಮನಗಾಡಿ, ಪುಟ್ಟನ ಪಯಣ, ದೇವರ ದಯೆ, ಇಟಲಿಯ ಸೈನಿಕ ಕತೆಗಳಲ್ಲೂ ಈ ಒಂದು ಆತ್ಮೀಯ ಜೀವದ ಅಥವಾ ವಸ್ತುವಿನ ಕನವರಿಕೆ, ಕಾಯುವಿಕೆ ನಿಷ್ಪಲವಾಗುವುದರ ಚಿತ್ರಗಳೇ ಇವೆ. ಅವರು ಬಯಸಿದಂಥ ಸ್ನೇಹದ, ಆತ್ಮೀಯತೆಯ ಒಡನಾಟ, ಸಖ್ಯ ದೊರೆಯಲಿಲ್ಲ, ನಂಬಿದವರು ತಮ್ಮ ನಂಬುಗೆಗೆ ಅರ್ಹವಾಗಿ ನಡೆದುಕೊಳ್ಳಲಿಲ್ಲ ಎಂಬ ಒಂದು ಅವ್ಯಕ್ತ ನೋವು ಅವರ ಬದುಕಿನಲ್ಲಿ ಹೇಗೋ ಅವರ ಕಾವ್ಯದಲ್ಲೂ ಇದೆ ಮತ್ತು ಅದು ಅವರ ಕತೆಗಳಲ್ಲಿ ಹೆಚ್ಚು ಢಾಳಾಗಿ ಕಾಣುವಂತಿದೆ. ಅಡಿಗರ ಆತ್ಮಕಥನ "ನೆನಪಿನ ಗಣಿಯಿಂದ" ಗಮನಿಸಿದರೆ ಈ ಮಾತು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.

"ಆಕಾಶದೀಪ" ಕಾದಂಬರಿಯಲ್ಲೂ ಪ್ರೀತಿಯ, ಸ್ನೇಹದ ನಿರಂತರವೂ ನಿಷ್ಪಲವೂ ಆದ ಹುಡುಕಾಟ ಮತ್ತು ಆ ನೋವೇ ಮೂಲವಾಗಿ ಹುಟ್ಟುವ ಒಂದು ಹೊಸ ಅರಿವು, ಸಮಾಧಾನ ಕಾಣಲು ಸಿಗುತ್ತದೆ. "ಆಕಾಶದೀಪ"ದ ಮಾಧವ ತನ್ನ ಆತ್ಮೀಯನಾದ ಕೃಷ್ಣನನ್ನು ಕಳೆದುಕೊಳ್ಳುತ್ತಾನೆ, ತನ್ನಲ್ಲಿ ಪ್ರೀತಿಯ ಕಲ್ಪನೆಯನ್ನು ಮೂಡಿಸಿದ ನೀಲಾಳನ್ನು ಕಳೆದುಕೊಳ್ಳುತ್ತಾನೆ. ಆದರೆ ಈ ಕಳೆದುಕೊಳ್ಳುವಿಕೆಯಾಗಲೀ, ಅದರ ನೋವಾಗಲೀ ಕೇವಲ ಒಂದು ದುಃಖಾಂತ್ಯದ ಕಥಾನಕದ ಅಗತ್ಯಗಳಾಗಿ ಇಲ್ಲಿ ಚಿತ್ರಿತವಾಗಿಲ್ಲ. ಅದಕ್ಕೆ ಇನ್ನೂ ಹೆಚ್ಚಿನ ಉದ್ದೇಶವಿರುವುದು ಇಲ್ಲಿ ಗಮನಾರ್ಹ. ಈ ಅಗಲುವಿಕೆ, ನೋವು, ನೊಂದವನ ಬದುಕನ್ನೇ ಕಬಳಿಸದೆ ಅದು ಮುಂದೆ ಬದುಕಿನಲ್ಲಿ ಮಾಗುವ, ಪ್ರಬುದ್ಧನಾಗುವ ಹಂತಕ್ಕೇರುವ ಹಾದಿಯಾಗಿ ತೆರೆದುಕೊಳ್ಳುವುದು ಇಲ್ಲಿನ ವಿಶೇಷ. "ಆಕಾಶದೀಪ"ದ ಈ ಮಾತುಗಳನ್ನು ಗಮನಿಸಿ:

"ಈ ಸಮುದ್ರಕ್ಕೂ ಉಬ್ಬರ ಇಳಿತವಿದೆ. ಉಬ್ಬುತ್ತದೆ, ಇಳಿಯುತ್ತದೆ. ಭರತ ಇಳಿತದ ಈ ಉಯ್ಯಾಲೆಯಾಟ ಪ್ರತಿದಿನವೂ ನಡೆಯುತ್ತದೆ. ಚಂದ್ರೋದಯವಾದರೆ ಸಾಕು, ಕಡಲ ನೀರು ತನ್ನ ಎದೆಯನ್ನು ಉಬ್ಬಿಸುತ್ತದೆ. ಚಂದ್ರಲೋಕವನ್ನೇ ಮುಟ್ಟುವ ಆಸೆಯೋ ಏನೋ ಅದಕ್ಕೆ. ಆ ಆಶೆ ತನ್ನ ಅಂತರಂಗದಲ್ಲಿ ಒತ್ತಿದಾಗ ಅದು ಏರುತ್ತದೆ. ಆ ಆಶೆಯ ತೀವ್ರತೆ ತಗ್ಗಿದಾಗ ಮತ್ತೆ ಇಳಿಯುತ್ತದೆ. ಇಳಿದೆನೆಂದು ಉಬ್ಬುವುದನ್ನು ನಿಲ್ಲಿಸುವುದಿಲ್ಲ ಕಡಲು! ಈ ವಿಚಾರ ಮಾಧವನ ಮನಸ್ಸಿನಲ್ಲಿ ವಿಚಾರ ತರಂಗವನ್ನೇ ಎಬ್ಬಿಸಿತು." (ಪುಟ 178)

ಇದೇ ಬಗೆಯ ನೋವು, ಅಗಲಿಕೆ "ಅನಾಥೆ"ಯಲ್ಲೂ ಇದೆ. ಆದರೆ "ಅನಾಥೆ"ಯ ಹೆಚ್ಚುಗಾರಿಕೆ ಎಂದರೆ ಮೊದಲನೆಯದಾಗಿ ಈ ಅಗಲಿಕೆ, ನಿರಾಶೆ ಇಲ್ಲಿ ಒಂದು ಆವರ್ತನ ಕ್ರಮದಲ್ಲಿರುವುದು. ಸರಿಸುಮಾರು ಒಂದೇ ಬಗೆಯ ನೋವು ಅಥವಾ ನಿರಾಸೆ ಮನುಷ್ಯನ ಎರಡು ವಿಭಿನ್ನ ವಯೋಮಾನದಲ್ಲಿ ಪುನರಾವರ್ತನೆಯಾದಾಗ ಅದು ನಮಗೆ ಕಾಣಿಸುವ ರೀತಿ ಮತ್ತು ಅದಕ್ಕೆ ಆತ ಸ್ಪಂದಿಸುವ ರೀತಿ ಇದನ್ನು ಅಡಿಗರು ಇಲ್ಲಿ ಗಮನಿಸುತ್ತಿದ್ದಾರೆ. ಎರಡನೆಯದಾಗಿ, ವಸ್ತು, ತಂತ್ರ ಮತ್ತು ಹೆಚ್ಚು ಪ್ರಬುದ್ಧವಾದ ಕಥಾನಕ. ಇದರ ಬಗ್ಗೆ ಮುಂದೆ ವಿವರವಾಗಿ ಗಮನಿಸಬಹುದು. ಮೂರನೆಯದಾಗಿ ಬದುಕಿನಲ್ಲಿ ಬಯಸಿದ್ದು ಸಿಗದೇ ಹೋಗುವ ಒಂದು ವಿದ್ಯಮಾನ ಇಲ್ಲಿ ಸ್ವೀಕರಿಸಲ್ಪಡುವ ರೀತಿಯಲ್ಲೇ ಇರುವ ಒಂದು ಹೊಸತನ. ಸಾಧಾರಣವಾಗಿ ಕಾದಂಬರಿಗಳಲ್ಲಿ ನಮಗೆ ಕಾಣಬರುವುದು ಎರಡು ಬಗೆಯ ತಿರುವುಗಳು. ಒಂದು, ಅಸಂಭವ ಎನಿಸಿದ ವಿದ್ಯಮಾನಗಳು ಪವಾಡಸದೃಶವಾಗಿ ಸಂಭವಿಸಿ ಓದುಗನನ್ನು ರಂಜಿಸುವುದು. ಇನ್ನೊಂದು, ಅದುವರೆಗೂ ಸಂಭಾವ್ಯವಾಗಿಯೇ ಕಂಡುಬಂದ ನಿರೀಕ್ಷೆಗಳು ತೀರ ಅನಿರೀಕ್ಷಿತವಾಗಿ ಅಸಾಧ್ಯವಾಗಿಬಿಟ್ಟು ಓದುಗನನ್ನು ಚಕಿತಗೊಳಿಸುವುದು. ಆದರೆ ಇಲ್ಲಿ ಅಡಿಗರು ಎರಡನ್ನೂ ಪ್ರಯತ್ನಿಸುವ ಆಕರ್ಷಣೆಗೆ ಒಳಗಾಗುವುದಿಲ್ಲ!

ಅಡಿಗರ ಎರಡೂ ಕಾದಂಬರಿಗಳ ವಸ್ತು ಮೂಲಭೂತವಾಗಿ ಕೇಂದ್ರೀಕೃತವಾಗಿರುವುದು ಈ ಬದುಕಿನಲ್ಲಿ ತನ್ನ ಸಕಲ ಮೋಹಕತೆಯಿಂದ ನಮ್ಮನ್ನು ಸೆಳೆಯುವ ಇಹದ ಸುಖದ ವ್ಯಾಮೋಹ ಮತ್ತು ಇದನ್ನು ನಿರಾಕರಿಸದೆ, ಆದರೆ ನಿಶ್ಚಯವಾಗಿಯೂ ಇದನ್ನು ಮೀರಿ ಪಡೆಯಬೇಕಿರುವ ಆತ್ಮೋನ್ನತಿಯ ಒಂದು ಸಿದ್ಧಿ-ಈ ಎರಡರ ನಡುವಿನ ತುಮುಲಗಳು. "ಆಕಾಶದೀಪ"ದ ನೀಲಾ ಪ್ರಸಂಗವನ್ನೇ ಹೋಲುವ ಒಂದು ಪ್ರಸಂಗ "ನೆನಪಿನ ಗಣಿಯಿಂದ" ಕೃತಿಯ ಪುಟ 73ರಲ್ಲಿ "ಯಾವ ಮೋಹನ ಮುರಲಿ ಕರೆಯಿತು" ಎಂಬ ಹೆಸರಿನಲ್ಲೇ ಇರುವುದು ಇಲ್ಲಿ ಗಮನಾರ್ಹ. ಹಾಗೆ ನೋಡಿದರೆ ಅಡಿಗರ ಎರಡೂ ಕಾದಂಬರಿಗಳ ಮೂಲಎಳೆ ಮೋಹನ ಮುರಳಿ ಕವನದಲ್ಲಿದೆ ಎಂದು ಅನಿಸಿದರೂ ಅಚ್ಚರಿಯಿಲ್ಲ. ಮೋಹನ ಮುರಲಿಯ ಈ ಸಾಲುಗಳನ್ನು ಗಮನಿಸಿ:

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ ಯಾವ ದಿವ್ಯದ ಯಾಚನೆ?

ಅನುರಕ್ತನಾದ ಸಂತನು ಇದ್ದಕ್ಕಿದ್ದ ಹಾಗೆಯೇ ವಿರಕ್ತನಾಗುವ ಬಗೆಯನ್ನು ಕಂಡು ದಿಗಿಲುಬಿದ್ದ ಪ್ರೇಯಸಿಯ ಕರುಣಾಕ್ರಂದನ ಈ ಗೀತದಲ್ಲಿ ಹೊಳಹು ಹಾಕಿದೆ ಎನ್ನುತ್ತಾರೆ ಪುತಿನ. ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ಎಂಬ ಸಾಲುಗಳಲ್ಲೂ ಬಯಕೆ ತೋಟದೊಳಗೇ ನಡೆಯುವುದು ಬೇಲಿಯೊಳಗಿನ ರಿಂಗಣ, ಅದು ತನ್ನನ್ನು ಬಂಧಿಸುವ ತೋಟ ಎಂಬ ಅರಿವು ಇದೆ. ಆದರೆ ಕವಿ ಜೀವನ ವಿಮುಖಿಯಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬುದೂ ಕವಿಗೆ ಗೊತ್ತು. ಅಂದರೆ ಬದುಕಿನ ಅನಿವಾರ್ಯವಾದ ಮೋಹ, ಬಯಕೆಗಳು ಒಂದೆಡೆ, ಅದರ ಬೆನ್ನಿಗೇ ಚಾಚುವ ದಿವ್ಯದ ಯಾಚನೆ ಇನ್ನೊಂದೆಡೆ. ಇಲ್ಲಿ ಮುಖ್ಯವಾಗುವುದು ಸಾಮಾಜಿಕ ಕಟ್ಟುಪಾಡುಗಳಲ್ಲ. ಆದರ್ಶದ ಹುಂಬ ಓಲೈಕೆಯಲ್ಲ. ಇದು ಅಂತರಂಗದ ಮಾಗುವಿಕೆಯ ಯಾಚನೆ, ಶೋಧನೆ. ಅಂತರಂಗದ ತೊಳಲಾಟ, ಮಾನಸಿಕ ಮಾಗುವಿಕೆಯನ್ನೇ ಸೂಚಿಸುವ ಕತೆ ಕಾದಂಬರಿಗಳು ನವೋದಯ ಕಾಲಘಟ್ಟದಲ್ಲಿ ಹೆಚ್ಚಿರಲಿಲ್ಲ ಎನ್ನುವುದನ್ನೂ ನಾವಿಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. ಹಾಗೆಯೇ, "ನಡೆದು ಬಂದ ದಾರಿ"ಯ ನಂತರ ಅಡಿಗರ ಕವನಗಳಲ್ಲಿ ಕಾಣುವ ಸಮಾಜಮುಖೀ ಧೋರಣೆಗಳು, ಆರ್ಥಿಕ-ರಾಜಕೀಯ ನಿಲುವುಗಳು ಈ ಕಾದಂಬರಿ ರಚನೆಯ ವೇಳೆಗೆ ಅವರಿಗೆ ಮುಖ್ಯವೆನಿಸಿರಲಿಲ್ಲ ಎಂಬುದನ್ನೂ ನಾವಿಲ್ಲಿ ಗಮನಿಸಬಹುದಾಗಿದೆ.

ಕತೆ ತೊಡಗುವಾಗ ಕಥಾನಾಯಕ ಶೀನಪ್ಪನ ಬದುಕಿನಲ್ಲಿ ಅದಾಗಲೇ ಒಂದು ಭಗ್ನಪ್ರೇಮದ ದುರಂತ ನಡೆದಿದೆ. ಹತ್ತು ವರ್ಷಗಳಷ್ಟು ಹಿಂದೆ ಅವನು ತುಂಬ ಬಯಸಿದ, ಪ್ರೀತಿಸಿದ ಜೀವ ಸಿಡುಬಿಗೆ ತುತ್ತಾಗಿ ಅವನ ಕಣ್ಣೆದುರೇ ಸುಟ್ಟು ಬೂದಿಯಾದ ಘಟನೆ ಅವನನ್ನು ಬಹುಮಟ್ಟಿಗೆ ಅಲ್ಲಾಡಿಸಿದೆ. ಇದೆಲ್ಲ ಅವನಲ್ಲಿ ಒಂದು ಬಗೆಯ ನಿರ್ಲಿಪ್ತಿಯನ್ನೂ ಮೂಡಿಸಿದೆ. ಈ ಹಂತದಲ್ಲಿ, ಒಂದು ಮಳೆಗಾಲದ ಕಗ್ಗತ್ತಲ ರಾತ್ರಿ ಕಾದಂಬರಿಯ ಕಥಾನಕ ತೊಡಗುತ್ತದೆ.

ಅಂದರೆ ಈ ಕಾದಂಬರಿಯ ಕೇಂದ್ರ ವ್ಯಕ್ತಿ ಶೀನಪ್ಪ ಭಗ್ನಪ್ರೇಮದ ಪೆಟ್ಟು ತಿಂದವನು. ಆ ಪೆಟ್ಟು ಅವನನ್ನು ಕಾದಂಬರಿಯ ಕಥಾನಕ ಒಡ್ಡಲಿರುವ ಹೊಸ ಸವಾಲಿಗೆ ಮುಖಾಮುಖಿಯಾಗುವುದರಲ್ಲಿ ಕೇವಲ ವ್ಯಕ್ತಿಗತ ನೆಲೆಯಲ್ಲಿ ಮಾತ್ರ ತಯಾರಾಗಿಸಿರುವಂಥದು. ಆದರೆ ಇಲ್ಲಿ ಎದುರಾಗುವ ಸವಾಲುಗಳಿಗೆ ಕೇವಲ ವ್ಯಕ್ತಿಗತ ನೆಲೆಯೊಂದೇ ಇರುವುದಲ್ಲ. ಅದಕ್ಕೆ ಸಾಮಾಜಿಕವಾದ ನೆಲೆಯಿದೆ. ಬಹುಪಾಲು ಬ್ರಾಹ್ಮಣರೇ ಇರುವ ಊರಿನಲ್ಲಿ ದೇವಾಲಯವೊಂದರ ಅರ್ಚಕನೂ ಆಗಿರುವ ಶೀನಪ್ಪ ಅವಿವಾಹಿತ. ವಿವಾಹಿತೆಯೂ ಒಬ್ಬಂಟಿಯೂ ಮೇಲಾಗಿ ಗರ್ಭಿಣಿಯೂ ಆಗಿರುವ ಪದ್ಮಾವತಿಯಂಥ ಹೆಣ್ಣಿಗೆ ಆತ ಆಶ್ರಯ ನೀಡುವುದೇ ಆ ಪುಟ್ಟ ಊರಿಗೆ ಸಹಜ ವಿದ್ಯಮಾನವಾಗಿ ಕಾಣುವುದಿಲ್ಲ. ಹಾಗಾಗಿ ಗ್ರಹಸ್ಥನಲ್ಲದ ಶೀನಪ್ಪನ ಸಮಸ್ಯೆಗೆ ಧಾರ್ಮಿಕ ನೆಲೆಯೂ ಇದೆ. ನೈತಿಕ ನೆಲೆಯಲ್ಲಿ ಶೀನಪ್ಪನ ಮತ್ತು ಪದ್ಮಾವತಿಯ ಚಾರಿತ್ರ್ಯವನ್ನು ಸಂಶಯಿಸುವ ಕೆಲಸವೂ ಪಾರ್ವತಮ್ಮ, ಸೀತಾರಾಮ ಭಟ್ಟರು, ಮಂಜುನಾಥ ಐತಾಳರು, ಗೋವಿಂದ ಸೋಮಯಾಜಿಗಳು, ಚಿದಂಬರ ಶಾಸ್ತ್ರಿಗಳು, ರಾಮಕೃಷ್ಣ ಜೋಯಿಸರು ಮುಂತಾದ ಊರ ಹಿರಿಯರೂ, ಜಾತ್ಯಸ್ಥರೂ, ಸಂಬಂಧಿಗಳೂ ಆದವರಿಂದ ನಡೆಯುತ್ತದೆ. ಅಂಥವರ ಕೆಲವು ನಿರ್ಧಾರಗಳಿಂದ ಹೊಸದಾದ ಕೆಲವು ಧರ್ಮಸಂಕಟಗಳೂ ಇಲ್ಲಿ ಉದ್ಭವವಾಗುತ್ತವೆ. ಪರಂಪರೆ ಮತ್ತು ಆಧುನಿಕ ವಿದ್ಯಾಭ್ಯಾಸ ಹುಟ್ಟುಹಾಕಿದ ಆದರ್ಶದ ನಡುವೆ ಇಲ್ಲಿ ತಿಕ್ಕಾಟ ಇದೆ ಎನ್ನುವುದಕ್ಕಿಂತಲೂ ಸಹಜವಾದ ಮಾನವೀಯ ನೆಲೆಯ ತಿಕ್ಕಾಟವಾಗಿ ಇದನ್ನು ಕಾಣಬಹುದಾಗಿದೆ. ಇಲ್ಲಿ ಹೆಣ್ಣಿನ ಜೀವನದ ಬವಣೆ, ನೋವು, ಮಿತಿಗಳು, ಗಂಡು ಅವಳನ್ನು ತಂದೆಯಾಗಿ, ಸಹೋದರನಾಗಿ, ಗಂಡನಾಗಿ, ವಿಟನಾಗಿ, ಸಮಾಜವಾಗಿ ಕಾಡುವ, ಹಿಂಸಿಸುವ ವಿವಿಧ ಮುಖಗಳನ್ನೂ ಅಡಿಗರು ಚಿತ್ರಿಸಿದ್ದಾರೆ. ಹೆಣ್ಣಿನ ಕುರಿತ ಅಡಿಗರ ಮನೋಧರ್ಮವೂ ಇಲ್ಲಿ ಎದ್ದು ಕಾಣುವಂತಿದೆ.

ಅಡಿಗರು ಈ ಎಲ್ಲ ನೆಲೆಗಳ ಮೂಲಕ ಇಲ್ಲಿಯ ಸಮಸ್ಯೆಯನ್ನು ಚಿತ್ರಿಸುತ್ತ, ಗಮನಿಸುತ್ತ ಹೋಗುತ್ತಾರೆ. ಆದರೆ ಅವರ ಕೇಂದ್ರ ಗಮನ ಮಾತ್ರ ಸಾಮಾಜದ ಗೊಂದಲಗಳನ್ನು, ಹೆಣ್ಣಿನ ನೋವನ್ನು, ಧರ್ಮಸಂಕಟಗಳ ನಿರ್ವಹಣೆಯನ್ನು, ಆದರ್ಶದ ಪ್ರತಿಪಾದನೆಯನ್ನು ಗುರಿಯಾಗಿ ಹೊಂದಿರುವಂಥದ್ದಲ್ಲ.

ಮಳೆಗಾಲದ ಕಗ್ಗತ್ತಲ ಅಪರಾತ್ರಿಯಲ್ಲಿ ತುಂಬಿದ ಗರ್ಭಿಣಿಯೊಬ್ಬಳು ಬೀದಿಯಲ್ಲಿ ಚೀತ್ಕಾರ ಹೊರಡಿಸಿ ಬಿದ್ದಿರುವುದನ್ನು ಕಂಡು ಅವಳನ್ನು ಮನೆಗೆ ಕರೆತಂದು, ಔಷಧೋಪಚಾರ ನಡೆಸಿ ಆಸರೆ ನೀಡಿದ ಶೀನಪ್ಪನನ್ನು ಲೋಕಾಪವಾದ ಕಾಡುತ್ತದೆ. ಅವನು ತುಂಬ ಬಯಸಿದ್ದ, ಅವನಿಗೆ ವಿಶೇಷ ಆತ್ಮತೃಪ್ತಿ ನೀಡುತ್ತಿದ್ದ ಮಹಾಬಲೇಶ್ವರನ ಪೂಜೆಯ ಹಕ್ಕನ್ನು ಅವನಿಂದ ಕಸಿಯಲಾಗುತ್ತದೆ. ಊರಿನ ಜಾತ್ಯಸ್ಥರ ಬಹಿಷ್ಕಾರಕ್ಕೆ ಅವನು ಗುರಿಯಾಗಬೇಕಾಗುತ್ತದೆ. ಅನಾಥೆಗೆ ಆಸರೆಯಾದದ್ದು ತಪ್ಪಲ್ಲ, ಆದರೆ ಅವಳ ಚಾರಿತ್ರ್ಯ ಸರಿಯಿಲ್ಲ, ಶೀನಪ್ಪ ಅವಿವಾಹಿತ ಒಬ್ಬಂಟಿ ಬ್ರಾಹ್ಮಣ, ಇಬ್ಬರೂ ಒಂದೇ ಸೂರಿನಡಿ ಈ ರೀತಿ ಜೊತೆಯಾಗಿರುವುದು ತಪ್ಪು. ಅದನ್ನು ಸಮಾಜ ಸಹಜ ಎಂದು ಕಾಣಲು ಸಿದ್ಧವಿಲ್ಲ.

ಇನ್ನು ವ್ಯಕ್ತಿಗತ ನೆಲೆಯ ಧರ್ಮಸಂಕಟವೂ ಸುರುವಾಗುತ್ತದೆ. ಶೀನಪ್ಪನ ಸಂಯಮ ಮತ್ತು ಆದರ್ಶಗಳನ್ನು ಕಂಡು ಆ ಹೆಣ್ಣೇ ಅಚ್ಚರಿಪಡುತ್ತ, ಅವನನ್ನೇ ಮೆಚ್ಚಿ ಆರಾಧಿಸುತ್ತ ಅಂಥ ಮೆಚ್ಚುಗೆ, ಆರಾಧನೆ ಒಂದು ಹೊರಳುದಾರಿಯಲ್ಲಿರುವುದನ್ನು ಗುರುತಿಸುವ ಹೊತ್ತಿಗೇ ಸ್ವತಃ ಶೀನಪ್ಪನೂ ತನ್ನಲ್ಲಿ ಅಂಥದೇ ಹೊರಳುವಿಕೆಯನ್ನು ಗುರುತಿಸಿ ಮುಂದಿನ ದಾರಿಯ ಬಗ್ಗೆ ಗೊಂದಲಗೊಳ್ಳುತ್ತಾನೆ, ವಿಚಲಿತನಾಗುತ್ತಾನೆ. ಪರಿಹಾರ ಕಾಣದೆ ಒದ್ದಾಡುತ್ತಾನೆ. ಅವಳು ಪರಸ್ತ್ರೀ. ಅವಳನ್ನು ಬಯಸುವುದು ತಪ್ಪು, ಮಹಾಪಾಪ. ಆದರೆ ಮನಸ್ಸು ತನಗೆ ಅಷ್ಟೇನೂ ಹಿತವಿಲ್ಲದ ಅದನ್ನು ಒಪ್ಪಲು ತಯಾರಿಲ್ಲ. ದೇಹಧರ್ಮವೂ ಒಂದಿದೆಯಲ್ಲ, ಅದು ಏನೂ ಆದೀತು ಎಂಬ ಘಟ್ಟಕ್ಕೆ ಅವನನ್ನು, ಪದ್ಮಾವತಿಯನ್ನೂ ಒಮ್ಮೆ ತಂದು ನಿಲ್ಲಿಸುತ್ತದೆ. ಇಲ್ಲಿ ನಿಜವಾದ ಧರ್ಮಸಂಕಟ ತೊಡಗುತ್ತದೆ. ಅಡಿಗರ ಕೇಂದ್ರ ಗಮನ ಈ ಧರ್ಮಸಂಕಟವನ್ನು ಮನುಷ್ಯ ಮೀರುವುದರಲ್ಲಿದೆ ಎಂದು ಅನಿಸುತ್ತದೆ. ಬರಿದೇ ಮೀರುವುದಲ್ಲ, ಈ ಮೀರುವಿಕೆ ಒಂದು ಹೊಸ ತಿಳಿವಿಗೆ, ಜೀವನದರ್ಶನಕ್ಕೆ ಕಾರಣವಾಗಬೇಕೆನ್ನುವುದರಲ್ಲಿದೆ.

ಗಂಡು ಹೆಣ್ಣು ಸಂಬಂಧ ಎದುರಿಸುವ ಅಸಹಾಯಕ ಸ್ಥಿತಿಯನ್ನು ಹೇಳುವ ಎದೆಯು ಮರಳಿ ತೊಳಲುತಿದೆಯಂಥ ಕವನ "ಕಟ್ಟುವೆವು ನಾವು" ಸಂಕಲನದಲ್ಲೂ ಇದೆ. ಆದರೆ "ನಡೆದು ಬಂದ ದಾರಿ"ಯ ಕವನಗಳಲ್ಲಿ ಈ ಅಸಹಾಯಕತೆ ಹೊಸದೊಂದು ತಿಳಿವಿಗೆ ಹೊರಳಿರುವುದನ್ನು ಕಾಣುತ್ತೇವೆ. ನನ್ನ ಮೋಹದ ಮೂರ್ತಿ (ಮೈಯ ಮರೆಯಿಸುವೊಲವು ಒಲವಲ್ಲ; ಅದು ಸೆಳವು. ನಂಬಿದರೆ ರಸಾತಳವು.), ನನ್ನ ನಿನ್ನ ಲೋಕ (ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ, ಬೇರೆದೊಂದು ಇದ್ದರೆ!), ನನ್ನ ನಿನ್ನ ನಡುವೆ (ಅಯ್ಯೊ, ನನ್ನ ನಿನ್ನ ನಡುವೆ ಎಂಥ ಕಡಲು ಮೂಡಿದೆ, ಅದೆಂಥ ಕಡಲು ಮೂಡಿದೆ!) ಮುಂತಾದ ಕವನಗಳನ್ನು ನಾವಿಲ್ಲಿ ಗಮನಿಸಿದರೆ ಅಡಿಗರ ಮನೋಧರ್ಮವನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ.

ಹಾಗೆ ನೋಡಿದರೆ ಕನ್ನಡ ಕಾದಂಬರಿಗಳಲ್ಲಿ ಇಂಥ ಧರ್ಮಸಂಕಟಗಳ ಇತಿಹಾಸವೇ ಇರುವಂತಿದೆ. ವಿವಾಹಿತೆಯರೇ ಆದ ಭಾಗೀರಥಿ ಮತ್ತು ನಂತರ ಸುನಾಲಿನಿಯರ ಆಕರ್ಷಣೆಗೆ ಒಳಗಾಗುವ ಚಂದ್ರಯ್ಯ (ಸರಸಮ್ಮನ ಸಮಾಧಿ(1927) - ಶಿವರಾಮ ಕಾರಂತ), ಅಣ್ಣನ ಹೆಂಡತಿಯನ್ನು ಬಯಸುವ ಶ್ರೀಧರ (ಧೂಮಕೇತು (1936) - ಕಡೆಂಗೋಡ್ಲು), ಸುಬ್ಬಮ್ಮ ಹೆಗ್ಗಡತಿ ಮತ್ತು ಸೇರೇಗಾರನ ಸಂಬಂಧ(ಕಾನೂರು ಹೆಗ್ಗಡ್ತಿ(1937) -ಕುವೆಂಪು), ಪತ್ನಿ ಗಿರಿಜೆ ಇರುತ್ತ ಲಲಿತೆಯನ್ನೂ ಬಯಸುವ ಲೇಖಕ ಕೇಶವಮೂರ್ತಿ (ಸಾಹಿತ್ಯರತ್ನ(1943) -ಅನಕೃ), ಪತ್ನಿ ರೋಗಗ್ರಸ್ತೆಯಾಗಿರುತ್ತ, ಅವಳ ಒಪ್ಪಿಗೆಯಿದ್ದರೂ ಲಕ್ಷ್ಮಿಯ ಕೋಣೆಗೆ ಹೋಗಲು ಒದ್ದಾಡುವ ಶ್ರೀನಿವಾಸ ಶ್ರೋತ್ರಿ (ವಂಶವೃಕ್ಷ(1963) - ಎಸ್ ಎಲ್ ಭೈರಪ್ಪ), ಚಂದ್ರಿಯ ಸಮಾಗಮ ಪ್ರಾಣೇಶಾಚಾರ್ಯರಲ್ಲಿ ಹುಟ್ಟಿಸುವ ಧರ್ಮಸಂಕಟ (ಸಂಸ್ಕಾರ(1965)- ಯು ಆರ್ ಅನಂತಮೂರ್ತಿ) ಇತ್ಯಾದಿ. ನವೋದಯದ ಕಾಲಘಟ್ಟದಲ್ಲೂ ಗಂಡು ಹೆಣ್ಣು ಸಂಬಂಧದ ವಿಲಕ್ಷಣ ಉದಾಹರಣೆಗಳನ್ನೂ, ಸಮಸ್ಯಾತ್ಮಕವಾಗುವ ಲೈಂಗಿಕ ವೈರುಧ್ಯಗಳನ್ನೂ, ತಮ್ಮ ಕತೆ ಕಾದಂಬರಿಗಳಲ್ಲಿ ತಂದವರಲ್ಲಿ ಅಡಿಗರೇ ಮೊದಲಿಗರಲ್ಲ. ಆದರೆ ಅಡಿಗರು ಈ ಧರ್ಮಸಂಕಟವನ್ನು ನಿರ್ವಹಿಸಿದ ಬಗೆ ತೀರ ಹೊಸದು. ಅಡಿಗರು ಅದನ್ನು ಇಲ್ಲಿ ಓದುಗರೇ ಎದುರಿಸಬೇಕಾದ ಒಂದು ಜಿಜ್ಞಾಸೆಯನ್ನಾಗಿಸಿ ಬಿಡುತ್ತಾರೆ. ಇದನ್ನು ನಾವು ಒಂದು ಮಿತಿಯನ್ನಾಗಿ ಕಾಣಬಹುದು, ತಪ್ಪೇನಿಲ್ಲ. ಅಡಿಗರ ಕವನಗಳನ್ನು ಗಮನಿಸದೆಯೇ ಈ ಕಾದಂಬರಿಯನ್ನು ಓದಿದರೆ ಅಡಿಗರು ಪ್ರಗತಿಪರರಲ್ಲ, ಸಾಂಪ್ರದಾಯಿಕ ಸನಾತನಿ ಎಂದೂ ಕಾಣುವುದು ಸಾಧ್ಯವಿದೆ! ಅಂಥ ಒಂದು ಅಭಿಪ್ರಾಯವನ್ನು ಕೆಲವರು, ಮುಖ್ಯವಾಗಿ ಪಿ.ಲಂಕೇಶ್, ವ್ಯಕ್ತಪಡಿಸಿದ್ದೂ ಇದೆ. ಆದರೆ ಇಲ್ಲಿ ಹಾಗೆ ಮಾಡುತ್ತ ಅದೇ ಮಿತಿ ತಾಂತ್ರಿಕವಾಗಿ ಕಾದಂಬರಿಗೆ ವಿಶಿಷ್ಟವಾದ ಒಂದು ಗುರುತ್ವ ದಯಪಾಲಿಸಿರುವುದನ್ನು ಅವಗಣಿಸಬಾರದು, ಅದು ತಪ್ಪಾಗುತ್ತದೆ.

ಇನ್ನು ಇಲ್ಲಿನ ವಸ್ತು, ತಂತ್ರ ಮತ್ತು ಕಥಾನಕದ ಹಂದರವನ್ನು ಒಂದಿಷ್ಟು ಗಮನಿಸಬಹುದು. ಶೀನಪ್ಪನಲ್ಲೂ ಪದ್ಮಾವತಿಯಲ್ಲೂ ಅಂತರಂಗದ ತುಮುಲ, ಮಾನಸಿಕ ದ್ವಂದ್ವಗಳೆಲ್ಲ ಬೆಳೆಯುತ್ತಿರುವ ಹಂತದಲ್ಲಿ ವಾಸ್ತವವಾಗಿ ಪದ್ಮಾವತಿಯ ಗಂಡನಾದ ರಾಮಚಂದ್ರ ಶಾಸ್ತ್ರಿ ಎನ್ನುವ ವ್ಯಕ್ತಿ ಜೀವಂತವಾಗಿರುವನೇ ಎಂಬುದೇ ಸ್ಪಷ್ಟವಿರುವುದಿಲ್ಲ. ಅಂದರೆ ಶೀನಪ್ಪ ಮತ್ತು ಪದ್ಮಾವತಿಯರು ಇರುವ ಬಳುವಡಿಯಲ್ಲಿನ ಕಥಾನಕವೂ ಕಳೂರುಕಟ್ಟೆಯಲ್ಲಿರುವ ರಾಮಚಂದ್ರ ಶಾಸ್ತ್ರಿ ಮತ್ತು ಸುಬ್ಬನ ಬದುಕಿನ ಕಥಾನಕವೂ ಇಲ್ಲಿ ಹಿಂದು ಮುಂದಾಗಿ ನಿರೂಪಸಲ್ಪಡುತ್ತಾ ಹೋಗುತ್ತದೆ. ಇಲ್ಲಿ 'ಕಾಲ'ವನ್ನು ಅಡಿಗರು ಬಳಸಿಕೊಂಡಿರುವ ರೀತಿ ಕುತೂಹಲಕರವಾಗಿದೆ. ಬಳುವಡಿಯ ಧರ್ಮಸಂಕಟವನ್ನು ತಿಳಿಯಾಗಿಸಬಲ್ಲ, ನಿವಾರಿಸಬಲ್ಲ ಅಥವಾ ಕೊನೆಯಾಗಿಸಬಲ್ಲ ಕಳೂರು ಕಟ್ಟೆಯ ಸಮಾಚಾರ ಸದಾಕಾಲ ಒಂದು ಅಂತರದಲ್ಲೇ ಹಿಂಬಾಲಿಸುತ್ತ ಇರುತ್ತದೆ. ಕಾದಂಬರಿಯ ಕಟ್ಟಕೊನೆಯ ಘಟ್ಟದಲ್ಲಿ ಮಾತ್ರ ಈ ಕಾಲದ ಅಂತರವನ್ನು ಕಾದಂಬರಿಕಾರ ಅಡಿಗರು ಸಂತುಲನಗೊಳಿಸಿದ್ದಾರೆ. ಇದರಿಂದಾಗಿ ಕಾದಂಬರಿಯ ಉದ್ದಕ್ಕೂ ಪದ್ಮಾವತಿ ಮತ್ತೆ ತನ್ನ ಪತಿಯನ್ನು ಸೇರುವವಳೆ ಅಥವಾ ಏನಾದರೂ ನಡೆದು ಆಗಲೇ ಓದುಗರನ್ನು ಆವರಿಸಿಕೊಂಡಿರುವ ಶೀನಪ್ಪನ ಜೊತೆಗೇ ನಿಲ್ಲುವಂತಾಗುವುದೇ ಎಂಬ ಪ್ರಶ್ನೆ ಜೀವಂತವಾಗಿಯೇ ಇರುತ್ತದೆ. ಊರಿನ ಬಹಿಷ್ಕಾರ, ಸಮಾಜದ ತಿರಸ್ಕಾರಗಳಿಗೆ ಗುರಿಯಾಗಿರುವ ಶೀನಪ್ಪನಿಗೆ ಪದ್ಮಾವತಿಯಿಂದ ದೂರವಾಗದೆ ಗತ್ಯಂತರವಿಲ್ಲ ಎಂಬುದೂ ಸರಳ ಸತ್ಯ. ಅಲ್ಲದೆ ಪದ್ಮಾವತಿ ಸದ್ಯಕ್ಕಂತೂ ಅವನಿಗೆ ಪರಸ್ತ್ರೀಯೇ. ಅವಳು ಬೇರೆ ತನ್ನ ಮಗ ಅನಂತನನ್ನು ತವರಿನಲ್ಲೇ ಬಿಟ್ಟು ಬಂದಿದ್ದಾಳೆ. ಅವಳ ಶೋಧದಲ್ಲೇ ಇರುವ ಸುಬ್ಬನ ಶೋಧ ಮುಗಿಯುವ ತನಕ ಏನಾದರೂ ಇತ್ಯರ್ಥವಾಗುವಂತೆಯೂ ಇಲ್ಲ. ಇದು ಕೇವಲ ಕುತೂಹಲ ಕೆರಳಿಸುವ, ಓದುಗರನ್ನು ಹಿಡಿದಿಡುವ ತಂತ್ರಗಾರಿಕೆಯಲ್ಲ. ಕಥಾನಕದ ತಾತ್ವಿಕ ಜಿಜ್ಞಾಸೆ ಇಲ್ಲಿ ನಡೆಯುತ್ತಿದ್ದು ಅದರಲ್ಲಿ ಓದುಗ ಸಕ್ರಿಯವಾಗುಳಿಯುವಂತೆ ಅಡಿಗರು ಕಾದಂಬರಿಗೆ ಒಂದು ಸಂಕೀರ್ಣ ತಂತ್ರವನ್ನು ಇಲ್ಲಿ ನೇಯ್ದಿರುವುದು ಸ್ಪಷ್ಟವಾಗಿದೆ. ಅಂತರಂಗದ ಅಮರ ಮಧುರ ಪ್ರೇಮದ ಮೋಹ ಒಂದೆಡೆ, ನಶ್ವರವೂ, ಕ್ಷಣಭಂಗರವೂ ಆದ ಸುಖದ ಕುರಿತ ನಿರ್ಲಿಪ್ತಿ ಇನ್ನೊಂದೆಡೆ. ಇದು ಶೀನಪ್ಪನನ್ನು ಕೊಂಡೊಯ್ಯುವುದೆಲ್ಲಿಗೆ?


ರಾಮಚಂದ್ರ ಶಾಸ್ತ್ರಿ ಸತ್ತಿದ್ದರೆ ಅಥವಾ ಪತ್ನಿಯನ್ನು ಪರಿತ್ಯಜಿಸಿದ್ದರೆ ಬಹುಷಃ ಶೀನಪ್ಪ ಪದ್ಮಾವತಿಯನ್ನು ಮದುವೆಯಾಗಬಹುದಾದ ಸಾಧ್ಯತೆಯೊಂದು ತೆರೆದುಕೊಳ್ಳುತ್ತಿತ್ತೆ? ಅದನ್ನು ಅಡಿಗರು ಕಟ್ಟಿದ ಬಳುವಡಿಯ ಸಮಾಜ ಸ್ವೀಕರಿಸುತ್ತಿತ್ತೆ? ಪತಿ ಅವಳನ್ನು ತಿರಸ್ಕರಿಸಲು ಸಾಕಷ್ಟು ಅವಕಾಶಗಳು ಕಾದಂಬರಿಯಲ್ಲಿ ಇದ್ದೇ ಇದ್ದವು. ಹಾಗಾಗಿ ಅಂಥ ಒಂದು ಸಾಧ್ಯತೆಯ ನಿರೀಕ್ಷೆಯನ್ನು ಓದುಗನಲ್ಲಿ ಅಡಿಗರು ಉಳಿಸಿರುತ್ತಾರೆ. ಅಥವಾ ಪದ್ಮಾವತಿಯೇ ದಿಟ್ಟವಾದ ಒಂದು ನಿಲುವು ತೆಗೆದುಕೊಂಡು ಪತಿಯನ್ನು ಪರಿತ್ಯಜಿಸಿ ಶೀನಪ್ಪನನ್ನು ಆಸರೆಯಾಗಿ ಆತುಕೊಳ್ಳುವುದು ಸಾಧ್ಯವಿತ್ತೆ? ರಾಮಚಂದ್ರ ಶಾಸ್ತ್ರಿ ಹಾಗೆ ತಿರಸ್ಕರಿಸಲ್ಪಡಬಹುದಾದ ಚಾರಿತ್ರ್ಯಹೀನನಲ್ಲ. ಕುಡುಕನಲ್ಲ, ವ್ಯಭಿಚಾರಿ ಎನಿಕೊಂಡವನಲ್ಲ. ಸಾಲದ ಶೂಲಕ್ಕೆ ಸಿಲುಕಿ ಊರುಬಿಟ್ಟವ, ಅಷ್ಟೆ. ಹಾಗಾಗಿ ಅಂಥ ಸಾಧ್ಯತೆಗಳು ಕಡಿಮೆ. ಇನ್ನು ಶೀನಪ್ಪನೇ ಸ್ವತಃ ದಿಟ್ಟವಾಗಿ ಏನನ್ನಾದರೂ ನಿರ್ಧರಿಸುವವನೆ?

ನಿಜವಾದ ಜಿಜ್ಞಾಸೆ ತೊಡಗುವುದೇ ಇಲ್ಲಿ. ಕಾದಂಬರಿ ಮುಗಿದರೂ ಅಡಿಗರು ಕಥಾನಕವನ್ನು ಹೇಗೆ ಮುಗಿಸಿದರು ಮತ್ತು ಯಾಕೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರವಾಗಿ ನಾವೇ ಅದನ್ನು ಬೇರೆ ಸಾಧ್ಯವಿರುವ ಎಲ್ಲ ಬಗೆಯಲ್ಲಿ ಕಲ್ಪಿಸುವಂತೆ ಮಾಡುತ್ತದೆ, ಅದರ ಸಾಧಕ ಬಾಧಕಗಳನ್ನು ಕುರಿತು ಯೋಚಿಸುವಂತೆ ಮಾಡುತ್ತದೆ ಮಾತ್ರವಲ್ಲ ಈ ಎಲ್ಲ ಯೋಚನೆ ಅಡಿಗರು ನಂಬಿದ ಜೀವನ ಮೌಲ್ಯಗಳ ಕುರಿತೂ ನಮಗೊಂದು ಒಳನೋಟ ನೀಡುತ್ತದೆ.

ಎಲ್ಲ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಕಳೂರುಕಟ್ಟೆಯ ಚೆಲುವಿಯ ಸೆಳೆತದಿಂದ ಹೇಗೋ ಪಾರಾಗಿ ಬಂದ ನಂತರ ರಾಮಚಂದ್ರ ಶಾಸ್ತ್ರಿ ಇದ್ದಕ್ಕಿದ್ದಂತೆ ತನ್ನ ಪತ್ನಿ ಪದ್ಮಾವತಿಯಲ್ಲಿ ನಿರಾಸಕ್ತನಾಗಿ ಬಿಡುತ್ತಾನೆ. ಅವಳು ಬದುಕುಳಿದಿರುವ ಸಾಧ್ಯತೆಯನ್ನೇ ಅಲ್ಲಗಳೆಯುವುದು ಅವನಿಗೆ ಆಪ್ಯಾಯಮಾನವಾಗಿ ಬಿಡುತ್ತದೆ. ಹಾಗೆಂದೇ ಮತ್ತೊಂದು ಮದುವೆಯ ಅವಕಾಶ ತೆರೆದುಕೊಂಡಾಗ ಹೆಚ್ಚೇನೂ ಯೋಚಿಸದೆ ತಲೆಯಾಡಿಸುವ ಮಟ್ಟಕ್ಕೆ ಇಳಿಯುತ್ತಾನೆ. ಆಗ ಪದ್ಮಾವತಿಯನ್ನು ನಡುಹಾದಿಯಲ್ಲಿ ಬಿಟ್ಟುಬಂದ ಸುಬ್ಬನಿಗೇ ಪದ್ಮಾವತಿಯನ್ನು ಹುಡುಕುವ ಜವಾಬ್ದಾರಿ ಒದಗಿದಂತೆ ಕಾಣುತ್ತದೆ. ಅದೇನೂ ಗಂಡ ಹೆಂಡಿರನ್ನು ಮತ್ತೊಮ್ಮೆ ಒಂದಾಗಿಸುವ ಉದ್ದೇಶದಿಂದಲ್ಲ. ಅದು ಅವನ ಅಳವಿಗೆ ಮೀರಿದ್ದು ಕೂಡ. ಪದ್ಮಾವತಿಯನ್ನು ದಾರಿಪಾಲು ಮಾಡಿದ್ದು ತನ್ನದೇ ಕುಡಿತ ಎಂಬುದು ಸುಬ್ಬುಗಿರುವ ಪಾಪಪ್ರಜ್ಞೆ. ಅಲ್ಲದೆ ಅವನ ಆಶ್ರಯದಾತೆಯಂತಿರುವ ಗಂಗೆ ಆ ಶೋಧವನ್ನು ಪೂರ್ತಿಗೊಳಿಸದೆ ತನ್ನನ್ನು ಬಿಡುವವಳಲ್ಲ ಎಂಬುದೂ ಅವನಿಗೆ ಗೊತ್ತಿದೆ. ಹಾಗಾಗಿಯೂ ತನ್ನಲ್ಲಿರುವ ಅರೆಬರೆ ಮಾನವೀಯತೆಯಿಂದಲೂ ಸುಬ್ಬು ಈ ಕೆಲಸಕ್ಕೆ ತೊಡಗುತ್ತಾನೆ. ಕಥಾನಕದ ದೃಷ್ಟಿಯಿಂದಲಾದರೂ ಪದ್ಮಾವತಿಯ ಕತೆ ಏನಾಯಿತೆಂಬುದು ಮುಖ್ಯವೇ ಸರಿ. ಆದರೆ ತನ್ನ ಪತಿ ತನ್ನ ಕಣ್ಣೆದುರೇ ಬೇರೊಬ್ಬಳನ್ನು ಮದುವೆಯಾಗುತ್ತಿರುವುದನ್ನು ಕಂಡು, ತನ್ನ ಹೊಟ್ಟೆಯ ಮಗು ತನ್ನನ್ನೇ ಗುರುತಿಸದೇ ಹೋಗುವುದನ್ನು ಕಂಡು ಪದ್ಮಾವತಿ ಕಂಗಾಲಾಗುತ್ತಾಳೆ. ತಮ್ಮ ಮತ್ತು ಅತ್ತಿಗೆ ನಿಜಸಂಗತಿ ತಿಳಿದು ಅವಳಿಗೆ ಆಶ್ರಯ ನೀಡುತ್ತಾರೆ ಎಂಬುದೇನೋ ಸರಿಯೆ. ಆದರೆ ಸುಬ್ಬನಾದಿಯಾಗಿ ಶೀನಪ್ಪನೂ ಈ ಜೀವದ ಕುರಿತು ಅವರವರ ಹಣೆಬರಹ ಎನ್ನುವಂಥ ಒಂದು ಅನುಕಂಪ ತೋರಿಸುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಿರಲಿಲ್ಲವೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುವುದು ಸಹಜ.

"ಹೋರಾಡಬಹುದು. ಆದರೆ ಹೋರಾಟ ಯಾರೊಡನೆ? ಅದರಿಂದ ಪದ್ಮಳಿಗೆ ಸುಖವಾಗುವ ಹಾಗಿದ್ದರೆ? ಆದರೆ ಅವಳಿಗೆ ಈ ಜನ್ಮದಲ್ಲಿ ಮತ್ತೆ ಸುಖವಿಲ್ಲ." ಎಂದೇ ಶೀನಪ್ಪ ನಿರ್ಧರಿಸುತ್ತಾನೆ. ಪದ್ಮ ಶೀನಪ್ಪನನ್ನು ದೇವರು ಎಂದಿರುತ್ತಾಳೆ. ದೇವರಾಗದೆ ಬರಿಯ ಮನುಷ್ಯನಾಗುವ ಹಂತಕ್ಕೆ ಒಮ್ಮೆ ಶೀನಪ್ಪ ತಲುಪಿದ್ದ. ಅದನ್ನು ಬೈಂದೂರಿನ ಸುಮಿತ್ರೆಯ ಹಾಸುಗೆಯಲ್ಲಿ ಆಗಗೊಡುವುದೇ ಸರಿಯೆನಿಸುತ್ತದೆ ಅವನಿಗೆ. ಹಾಗಾಗಿ ಕೊನೆಗೂ ಪದ್ಮಾವತಿಯ ಮಟ್ಟಿಗೆ ಅವನು ದೇವರಾಗಿಯೇ ಉಳಿಯುತ್ತಾನೆ. ಅಡಿಗರು ಹಾಗೆ ಉಳಿಸುತ್ತಾರೆ ಅನಿಸುತ್ತದೆ. ತಾನೊಂದು ವೇಳೆ ಮದುವೆಯಾದ ಗ್ರಹಸ್ಥನಾಗಿದ್ದರೆ ಪದ್ಮಾವತಿಯಂಥ ಹೆಣ್ಣಿಗೆ ಆಶ್ರಯ ನೀಡಿದ್ದರೂ ಲೋಕಾಪವಾದಕ್ಕೆ ಗುರಿಯಾಗುತ್ತಿರಲಿಲ್ಲ ಎಂಬುದಷ್ಟೇ ಶೀನಪ್ಪನಿಗೆ ಮುಖ್ಯವಾದ, ಕೊನೆಗೂ ಅವನಿಗೆ ಒಲಿದ ಸತ್ಯವಾಗಿ ನಿಲ್ಲುತ್ತದೆ. ವಿಚಿತ್ರವೆಂದರೆ ಇನ್ನಾವ ರೀತಿಯ ಕ್ರಾಂತಿಕಾರತೆಯೂ ಕಾದಂಬರಿಯ ಚೌಕಟ್ಟಿನಲ್ಲಿ ಕೃತಕವಾಗುತ್ತಿತ್ತೇನೋ ಎನಿಸುವಾಗಲೇ ಈ ಬಗೆಯ ಅಂತ್ಯ ನಮ್ಮನ್ನು ಕಾಡುವಷ್ಟು ಬೇರೊಂದು ಕಾಡುತ್ತಿರಲಿಲ್ಲವೇನೋ ಅನಿಸುವುದು!

ದಕ್ಷಿಣಕನ್ನಡದ ಜನಜೀವನದ ಚಿತ್ರಗಳನ್ನು ನೀಡುವ ಯಾವುದೇ ಕಾದಂಬರಿ ಕಾರಂತರ ಕಾದಂಬರಿಗಳ ನೆನಪು ಮೂಡಿಸದೇ ಇರುವುದು ಅಸಾಧ್ಯ. ಹಾಗೆಯೇ ಅಡಿಗರ "ಆಕಾಶದೀಪ" ಕಾರಂತರ "ಮರಳಿ ಮಣ್ಣಿಗೆ" ಕಾದಂಬರಿಯಲ್ಲಿ ಬರುವ ಲಚ್ಚ ಮತ್ತು ರಾಮರ ವಿದ್ಯಾಭ್ಯಾಸದ ವಿವರಗಳನ್ನೇ ನೆನಪಿಸುವಂತಿದೆ. ಎರಡೂ ಕಾದಂಬರಿಗಳಲ್ಲಿ ಬರುವ ಕುಂದಾಪುರದ ಸುತ್ತಮುತ್ತಲಿನ ಪರಿಸರದ ವಿವರಗಳು, ಕಡಲು, ದೋಣಿಯಾನ, ಶಿಕ್ಷಣಕ್ಕಾಗಿ ಹೋಟೇಲಿನ ವಾಸ, ಆ ದಿನಗಳ ಊರಿನ ಸೆಳೆತ ಇಂಥ ಹೋಲಿಕೆಗೆ ಕಾರಣ. ಕರಾವಳಿಯ ಕೃಷಿಕ ಬದುಕನ್ನು ಅಡಿಗರು ಅತ್ಯಂತ ಚಿತ್ರವತ್ತಾಗಿ ಕಟ್ಟಿಕೊಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ತಾಳಮದ್ದಲೆ, ಯಕ್ಷಗಾನ, ನಡೆದೋ, ಗಾಡಿಕಟ್ಟಿಯೋ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಅನಿವಾರ್ಯತೆ, ಬದುಕಿಗೆ ಸಹಜವಾಗಿದ್ದರೂ ಹೊಸದೇ ಸಂಭ್ರಮವಾಗುವ ಕಾಲಕಾಲದ ಸೆಖೆ, ಮಳೆ, ಪ್ರಕೃತಿಯ ಬದಲಾವಣೆ ಮತ್ತು ಅದರೊಂದಿಗೇ ಬದಲಾಗುವ ಕೃಷಿಕನ ಕೆಲಸ ಕಾರ್ಯಗಳು, ಹೆಂಡ, ಜೂಜು, ವೇಶ್ಯೆಯರ ಸಹವಾಸದ ಕತೆಗಳು, ಸುಬ್ಬ ಮತ್ತು ಗಂಗೆಯರಂಥ ಅಪರೂಪದ ಪಾತ್ರಗಳ ಮುಖೇನ ಅಡಿಗರು ನಿರ್ಮಿಸುವ ಒಂದು ಭಿನ್ನ ಜಗತ್ತು, ಅಲ್ಲಿ ಸಿಗುವ ಬಾಲ್ಯದ ಆಟಗಳು, ಹಾಸ್ಯ, ಸರಸ, ಪ್ರಣಯ, ಎಲ್ಲದರಲ್ಲೂ ಎದ್ದು ಕಾಣುವ ನೈಜತೆ ಗಮನ ಸೆಳೆಯುತ್ತದೆ, ಆಪ್ತವಾಗುತ್ತದೆ. ತಮ್ಮ ಕಾದಂಬರಿಗೆ ಅಗತ್ಯವಾದ ಒಂದು ಪರಿಸರ ನಿರ್ಮಾಣದಲ್ಲಿ ಅಡಿಗರು ಅನನ್ಯ ತಾದ್ಯಾತ್ಮವನ್ನು ಇಲ್ಲಿ ತೋರಿದ್ದಾರೆ. ಎಲ್ಲ ಬಗೆಯಲ್ಲೂ ಅತ್ಯುತ್ತಮವಾದ ಕಾದಂಬರಿಗಳನ್ನು ಕೊಡಬಲ್ಲ ಕಸು ಹೊಂದಿದ್ದ ಅಡಿಗರು ಮುಂದೆ ಕಾದಂಬರಿಯನ್ನೇ ಬರೆಯಲಿಲ್ಲ ಎಂಬುದು ಮಾತ್ರ ಕನ್ನಡಕ್ಕಾದ ನಷ್ಟವೆಂದೇ ತೋರುತ್ತದೆ. ಅಡಿಗರು ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾದ ವಿಶಿಷ್ಟ ಸಾಹಿತ್ಯ ಪ್ರಕಾರ ಕಾವ್ಯವೆಂದು ತಿಳಿದು ತಮ್ಮ ಸೃಷ್ಟಿಪರವಾದ ಶಕ್ತಿಯನ್ನು ಅದಕ್ಕೇ ಬಳಸುವುದರಿಂದ ಉತ್ಕೃಷ್ಟ ಕೃತಿ ರಚನೆ ಸಾಧ್ಯವಾಗುತ್ತದೆ ಎಂದು ತಿಳಿದರು. ಸ್ವತಃ ಅಡಿಗರ ಅನಾಥೆ ಕಾದಂಬರಿಯೇ ಇಂಥ ನಿಲುವು ಪೂರ್ತಿ ಸರಿಯಲ್ಲ ಎಂಬಂತಿದ್ದರೂ ಅದು ಆವತ್ತೂ ಅವಜ್ಞೆಗೆ ಗುರಿಯಾಗಿರಬೇಕು ಎಂದೇ ಅನಿಸುತ್ತದೆ.

ಪ್ರತಿಮಾ ಲೋಕ : ಗೋಪಾಲಕೃಷ್ಣ ಅಡಿಗ-ಮರು ಓದು
ಸಂಪಾದಕರು: ಎಸ್.ಆರ್.ವಿಜಯಶಂಕರ

ಪ್ರಕಾಶನ: ಅಂಕಿತ ಪುಸ್ತಕ

ಪುಟಗಳು:360

ಬೆಲೆ : ರೂಪಾಯಿ ಇನ್ನೂರ ಐವತ್ತು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ