Saturday, October 4, 2008

ತಲ್ಲಣಗಳ ಕಂಪನವನ್ನೆಬ್ಬಿಸುವ ಛಿನ್ನಮಸ್ತಾ


ಛಿನ್ನಮಸ್ತಾ ಮೂಲತಃ ಅಸ್ಸಾಮೀ ಕಾದಂಬರಿ. ಇದನ್ನು ಕನ್ನಡಕ್ಕೆ ತಂದವರು ಶ್ರೀ ಆರ್.ಪಿ.ಹೆಗಡೆಯವರು. ಜ್ಞಾನಪೀಠ ಪುರಸ್ಕೃತ ಲೇಖಕಿಯರ ಕೃತಿ ಮಾಲಿಕೆಯಲ್ಲಿ ಬಂದಿರುವ ಈ ಕೃತಿ ನಿಜಕ್ಕೂ ವಿಭಿನ್ನ ಅನುಭವ ಲೋಕವೊಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.


ಶಿವನ ಮೊದಲ ಪತ್ನಿ ದಕ್ಷರಾಜನ ಮಗಳು ಯಜ್ಞಕುಂಡಕ್ಕೆ ಹಾರಿಕೊಂಡ ಕತೆ ಎಲ್ಲರಿಗೂ ಗೊತ್ತಿರುವುದೇ. ಆ ಸತಿಯ ಬೆಂದ ದೇಹವನ್ನು ಅಗ್ನಿಕುಂಡದಿಂದ ಎತ್ತಿ ಹೆಗಲ ಮೇಲೆ ಹೊತ್ತು ಶಿವ ನರ್ತಿಸುವಾಗ ಆಕೆಯ ದೇಹದ ತುಂಡುಗಳು ಬಿದ್ದ ಸ್ಥಳಗಳೆಲ್ಲ ಶಕ್ತಿ ಪೀಠಗಳಾದವು, ಅಸ್ಸಾಮಿನ ಕಾಮಾಖ್ಯಾದಲ್ಲಿ ದೇವಿಯ ಯೋನಿಭಾಗ ಬಿದ್ದುದರಿಂದ ಅದನ್ನು ವಿಶಿಷ್ಟವೆಂದು ಭಾವಿಸಲಾಗುತ್ತದೆ ಎನ್ನುವ ಸ್ಥೂಲ ಭೂಮಿಕೆಯನ್ನು ಕಾದಂಬರಿಯ ಮೊದಲಿಗೆ ಮೂಲ ಲೇಖಕಿ ಇಂದಿರಾ ಗೋಸ್ವಾಮಿಯವರೇ ನೀಡಿದ್ದಾರೆ ಮಾತ್ರವಲ್ಲ ಮಂದಿರದಲ್ಲಿಯೇ ದೀರ್ಘಕಾಲದ ವರೆಗೆ ವಾಸವಾಗಿದ್ದು ಅನೇಕ ಸತ್ಯ ಸಂಗತಿಗಳನ್ನು ಕಂಡುಕೊಂಡ ಮೇಲೆಯೇ ಈ ಕಾದಂಬರಿಯನ್ನು ಬರೆದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಹೀಗಾಗಿಯೂ ಈ ಕಾದಂಬರಿ ಪುರಾಣ, ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತ ಚಿಂತನೆಗಳೊಂದಿಗೆ ತಾಕಲಾಡುತ್ತ ವಿಚಿತ್ರ ತಲ್ಲಣಗಳನ್ನು ಸೃಷ್ಟಿಸುತ್ತದೆ.

ಒಂದು ಕಡೆ ಪುರಾಣದ ಸತ್ಯಗಳು, ಕಾಲಿಕಾ ಪುರಾಣ ಮತ್ತಿತರ ಶಾಸ್ತ್ರಗಳ ಲೋಕವಿದೆ. ಇದನ್ನು ಸತ್ಯ ಎಂದು ಪರಿಗಣಿಸುವವರಿಗೆ ಅವೆಲ್ಲವೂ ವಾಸ್ತವದ ಜಗತ್ತೇ. ಇನ್ನೊಂದು ಕಡೆ ಆಳುತ್ತಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಧೋರಣೆಗಳು, ಅವರ ನಿಧಾನವಾದರೂ ನಿಶ್ಚಿತವಾದ ಪ್ರಭಾವ ಹಬ್ಬುತ್ತಿದೆ. ಡರಥಿಯಂಥ ಹೆಣ್ಣುಮಗಳು ತನ್ನ ಗಂಡ ಬಿಟಿಷ್ ಅಧಿಕಾರಿ ಹೆನ್ರಿ ಬ್ರೌನನನ್ನು ತ್ಯಜಿಸಿ ಮಂದಿರದ ಸಂನ್ಯಾಸಿಯ ಆಶ್ರಯ ಪಡೆದಿದ್ದಾಳೆ. ನಡುವೆ ಹೊಸಕಾಲದ ಕಾಟನ್ ಕಾಲೇಜಿನ ವಿದ್ಯಾರ್ಥಿಗಳಂಥವರ ಒಂದು ಸಮೂಹವಿದೆ. ಇವರ ಹಿನ್ನೆಲೆಯಲ್ಲಿ ವಿಧಿಬಾಲಾಳಂಥ ಮಧುರ ಭಾವನೆಗಳ ಜಗತ್ತಿನಲ್ಲಿರುವ ಹರೆಯದ ಮುಗ್ಧ ಹೆಣ್ಣೊಬ್ಬಳ ತೊಳಲಾಟವೂ ಇದೆ; ಭಕ್ತಿ, ಮಾನವೀಯತೆಗಿಂತ ಸ್ವಪ್ರತಿಷ್ಠೆಯೇ ಮುಖ್ಯವಾದಂತಿರುವ ಸಿಂಹದತ್ತನಂಥವರ ಛಲದ ಸಂಕಲ್ಪವೂ ಇದೆ. ಈ ಎಲ್ಲದರ ನಡುವೆಯೇ ಛಿನ್ನಮಸ್ತಾಳ ಜಟಾಧಾರಿ ಸಂನ್ಯಾಸಿಯ ಮೌನ ಹೋರಾಟ ನಡೆದಿದೆ, ಬಲಿಯನ್ನು ನಿಲ್ಲಿಸುವುದಕ್ಕಾಗಿ. ತಮ್ಮದೇ ರಕ್ತ, ಪ್ರಾಣವನ್ನು ನೀಡಿಯಾದರೂ ಸರಿಯೇ, ಮೂಕ ಪ್ರಾಣಿಗಳ ಬಲಿಯ ರಕ್ತದ ಹೊಳೆ ಹರಿಯುವುದು ನಿಲ್ಲಬೇಕು ಎಂಬುದು ಅವರ ಸಂಕಲ್ಪ. ಈ ಒಂದು ಸಂಕೀರ್ಣ ಸನ್ನಿವೇಶವನ್ನು ಸುಮಾರು 1921ರಿಂದ 1932ರವರೆಗಿನ ಘಟನೆಗಳನ್ನು ಆಧರಿಸಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಇದು ನೀಡುವ ಅನುಭವ ವಿಶಿಷ್ಟವೂ ತಲ್ಲಣಗೊಳಿಸುವಂಥದ್ದೂ ಆಗಿದೆ.

ಕಾದಂಬರಿಯ ಆಕೃತಿ ತನ್ನದೇ ಆದ ಒಂದು ಹೊಸತನದಿಂದ ಕೂಡಿದೆ. ಕಾದಂಬರಿಯ ಶಿಲ್ಪದಲ್ಲಿ ನಮಗೆ ಎಲ್ಲಿಯೂ ಓದುಗ ಸ್ನೇಹಿ ವಿವರಗಳು, ಮಾಹಿತಿಗಳು ಸಿಗುವುದಿಲ್ಲ. ನಾವೇ ಇಲ್ಲಿನ ಪಾತ್ರ ಮತ್ತು ಪರಿಸರಗಳನ್ನು ಪ್ರಯತ್ನಪಟ್ಟು ಅರ್ಥೈಸಿಕೊಳ್ಳುತ್ತ ಸಾಗಬೇಕಾಗುತ್ತದೆ. ಅದೇ ರೀತಿ ಇಲ್ಲಿ ಬರುವ ಅನೇಕ ದೇವಾಲಯಗಳು, ಗುಡ್ಡಗಳು, ಸರಿಸುಮಾರು ಎಲ್ಲಕಡೆಗಳಿಂದಲೂ ಕಾಣುವ ಬ್ರಹ್ಮಪುತ್ರಾ ಸೇರಿದಂತೆ ತೆರೆದುಕೊಳ್ಳುವ ಒಂದು ಭೂಮಂಡಲ ಕೂಡ ನಿಗೂಢವೇ. ಅದರ ನಕ್ಷೆಯ ಸ್ಪಷ್ಟ ವಿವರಗಳಿಲ್ಲದೆ ಕೆಲವಂಶ ಊಹೆ ಮತ್ತು ಕಲ್ಪನೆಯ ಮೊರೆ ಹೋಗುವ ಅನಿವಾರ್ಯತೆ ಮೂಡುತ್ತದೆ.

ಛಿನ್ನಮಸ್ತಾಳ ಜಟಾಧಾರಿ ಸಂನ್ಯಾಸಿಯ ಧ್ಯೇಯ, ಗುರಿಗಳು ತಿಳಿಯುತ್ತವಾದರೂ ಆತನ ಜೀವನ ಧರ್ಮ ನಮಗೆ ನಿಗೂಢವೇ. ಆತ ಧರ್ಮ ಮತ್ತು ಶಾಸ್ತ್ರನಿಷ್ಠನಾಗಿರುತ್ತಲೇ ಬ್ರಿಟಿಷರ ಅಧಿಕಾರದ ಸಹಕಾರದಿಂದಲೇ ಬಲಿಯನ್ನು ನಿಲ್ಲಿಸಬೇಕಿದೆ. ಇದು ಈ ಪಾತ್ರವನ್ನು ಹೆಚ್ಚು ಸಂಕೀರ್ಣ ಮತ್ತು ನಿಗೂಢಗೊಳಿಸಿದೆ. ಈ ಮಾತು ವಿಧಿಬಾಲಾ ಬಗ್ಗೆಯೂ, ಡರಥಿ ಬ್ರೌನ ಬಗ್ಗೆಯೂ ಹೇಳಬಹುದು ಮಾತ್ರವಲ್ಲ ಹೆಚ್ಚಿನ ಎಲ್ಲ ಪಾತ್ರಗಳ ಕುರಿತೂ ಹೇಳಬಹುದು. ವಿಧಿಬಾಲಾ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಬೆಳೆದ ಮುಗ್ಧೆ. ಆದರೆ ಬಲಿಯನ್ನು ವಿರೋಧಿಸಲು ಅವಳಿಗೆ ಅವಳದೇ ಆದ ಭಾವವಲಯದ ಸಮರ್ಥನೆಯಿದೆ. ಆದರೆ ಅದನ್ನು ಅವಳು ವ್ಯಕ್ತಪಡಿಸುವ ವಿಧಾನ ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಆಕೆ ಹೇಗೆ ಛಿನ್ನಮಸ್ತಾಳ ಜಟಾಧಾರಿ ಸಂನ್ಯಾಸಿಯ ತ್ಯಾಗವನ್ನು ಸರಿಗಟ್ಟುತ್ತಾಳೆ ಅಥವಾ ಮೀರುತ್ತಾಳೆ ಎಂಬುದು ಅಚ್ಚರಿಯ ಒಂದು ವಿದ್ಯಮಾನವಾಗಿ ಕಾದಂಬರಿಯಲ್ಲಿ ಮೈತಳೆದಿರುವುದು ನಿಜಕ್ಕೂ ಉತ್ಕೃಷ್ಟ ತಂತ್ರಗಾರಿಕೆಯ ಹಿರಿಮೆಯಾಗಿದೆ. ಇನ್ನು ಡರಥಿ ಬ್ರೌನ್ ಕೂಡ ವಿರೋಧಿಸುತ್ತಿರುವುದು ಹಿಂಸೆ ಮತ್ತು ಕ್ರೌರ್ಯವನ್ನೇ ಎಂಬುದು ನಮಗೆ ಆಕೆಯ ದುರಂತದಲ್ಲೇ ಮನದಟ್ಟಾಗುತ್ತದೆ. ಬ್ರಿಟಿಷ್ ಅಧಿಕಾರಿಯ ಪ್ರೀತಿಯನ್ನು ಧಿಕ್ಕರಿಸಿ ಸನಾತನ ಮಂದಿರದ ಸಂನ್ಯಾಸಿಯ ಜೊತೆ ಸೇರಿಕೊಂಡು ಆಕೆ ಎದುರಿಸುವ ಪಾಡು-ತನ್ನವರಿಂದ ಮತ್ತು ಈ ದೇಶಿಗರಿಂದ ನಮ್ಮನ್ನು ಸೆಳೆಯುತ್ತದೆ.

ಹೆಚ್ಚಿನ ಸನ್ನಿವೇಶಗಳು ಮಂಜು ಮುಸುಕಿದ ಬ್ರಾಹ್ಮೀಮುಹೂರ್ತದ ನಸುಗತ್ತಲಿನಲ್ಲಿ ಅಥವಾ ಸಂಜೆಗತ್ತಲಿನಲ್ಲಿ ನಡೆದರೆ ಇನ್ನುಳಿದಂತೆ ಸದಾ ಸುರಿಯುತ್ತಿರುವ ಮಳೆ ಅಥವಾ ಮಂಜು ಇಲ್ಲಿನ ಪರಿಸರಕ್ಕೂ ಹೊದಿಸುವ ಒಂದು ಬಗೆಯ ನಿಗೂಢತೆ ಕಾದಂಬರಿಗೆ ಬೇಕಾದ ವಿಶಿಷ್ಟ ಧ್ವನಿಯನ್ನು ಕೊಟ್ಟಿರುವಂತಿದೆ. ಸ್ವಲ್ಪಮಟ್ಟಿಗೆ ಕನ್ನಡದ ಓದುಗರಿಗೆ ಹೊಸತೇ ಆದ ಒಂದು ಜಗತ್ತಿನ ಅನಾವರಣ ಇಲ್ಲಿದೆ. ತುಂಬ ಹಿಂದೆ ಕನ್ನಡಕ್ಕೆ ಬಂದಿದ್ದ `ಅಘೋರಿಗಳ ನಡುವೆ' (ಸುರೇಶ್ ಸೋಮಪುರ ಅವರು ಬರೆದ, ನಮ್ಮ ಎಂ.ವಿ.ನಾಗರಾಜ ರಾವ್ ಕನ್ನಡಕ್ಕೆ ಅನುವಾದಿಸಿರುವ, ಅಂಕಿತ ಪ್ರಕಾಶನದ ಈ ಕಾದಂಬರಿಯ ಬೆಲೆ ತೊಂಭತ್ತು ರೂಪಾಯಿ. ರೋಚಕ ಥ್ರಿಲ್ಲರ್‌ಗಳನ್ನು ಮೆಚ್ಚುವವರನ್ನು ಬೆಚ್ಚಿಬೀಳಿಸಬಲ್ಲ ಕಸುಹೊಂದಿರುವ ಕಾದಂಬರಿ) ಕಾದಂಬರಿಯನ್ನು ಇದು ನೆನಪಿಸಿದರೂ ಇಲ್ಲಿ ಕಾದಂಬರಿಯ ಕಥಾನಕ ಹರಿಯುವ ವೇಗ ಮತ್ತು ಅದರ ಆಶಯದ ಆಳ ತೀರ ಭಿನ್ನವಾದದ್ದು.

ಬಲಿಯನ್ನು ನಿಲ್ಲಿಸುವ ಒಂದು ಸಮೂಹ ಪ್ರಯತ್ನ ಒಂದು ಕಡೆಯಿಂದ ಸಾಗುತ್ತಿರುವಾಗಲೇ ತನ್ನ ಸಂಗಾತಿಯನ್ನು ಬಿಟ್ಟುಬರುವ ಡರಥಿ ಒಂದು ಕಡೆ, ಸಂಗಾತಿಗಾಗಿ ಕಾಯುತ್ತಿರುವ ರತ್ನಧರ ಒಂದು ಕಡೆ ಕಾದಂಬರಿಯ ಪ್ರಧಾನ ಧಾರೆಯ ಜೊತೆ ಜೊತೆಯಾಗಿಯೇ ಹರಿಯುತ್ತಾರೆ. ಹೆನ್ರಿ ಬ್ರೌನ್ ಡರಥಿಗೆ ಹಂಬಲಿಸುವಂತೆಯೇ ರತ್ನಧರ ವಿಧಿಬಾಲಾಗಾಗಿ ಹಂಬಲಿಸುತ್ತಾನೆ. ಆದರೆ ಇಬ್ಬರ ಮನೋಧರ್ಮದಲ್ಲಿ ಮಾತ್ರ ಅಜಗಜಾಂತರ ವ್ಯತ್ಯಾಸ. ದುರಂತಗಳು ಇಲ್ಲಿ ವ್ಯಾಖ್ಯಾನಕ್ಕೆ ಸಿಗುವುದಿಲ್ಲವಾದರೂ ಈ ದುರಂತಗಳ ಹಿನ್ನೆಲೆಯಲ್ಲಿರುವ ಪ್ರೀತಿ ಪ್ರೇಮದ ನವಿರಾದ ಭಾವವೊಂದು ದೇವಿಗಾಗಿ ನಡೆಯುವ ಮೂಕ ಪ್ರಾಣಿಗಳ ಬಲಿಯೆದುರು ಪಡೆದುಕೊಳ್ಳುವ ಅರ್ಥ ಸಾಧ್ಯತೆಗಳು ನಮ್ಮ ಮೆಚ್ಚುಗೆ ಪಡೆಯುತ್ತವೆ.

ಇಡೀ ಕಾದಂಬರಿಯ ವಿವರಗಳಲ್ಲಿ ತೆರೆದುಕೊಳ್ಳುವ ಪ್ರಕೃತಿ ಕಣ್ಣಿಗೆ ಕಟ್ಟುತ್ತದೆ. ಸಾಮಾನ್ಯ ಜನಜೀವನದ ಚಿತ್ರಣ ಹದವಾಗಿ ಬೆರೆತು ಕಾದಂಬರಿಗೆ ಒಂದು ಘನತೆಯನ್ನು ನೀಡಿದೆ. ಒಂದು ದೈವೀಪ್ರೇರಣೆಯ ಪ್ರಭಾವಲಯದೊಳಗೆ ಪ್ರವೇಶಿಸಿದ ವಿಭಿನ್ನ ಮನಸ್ಥಿತಿಯ, ಸಮಸ್ಯೆಗಳ, ನೋವು-ನಲಿವಿನ ಮಂದಿಯ ಮನಸ್ಥಿತಿಯನ್ನು ಅದರ ಎಲ್ಲ ವಿವರಗಳಲ್ಲಿ ಚಿತ್ರಿಸಿದ ಬಗೆ ಗಮನ ಸೆಳೆಯುತ್ತದೆ. ಜಾತ್ರೆಯ ಉನ್ಮಾದ, ನರ್ತನದ ಆವೇಗ-ಭಕ್ತಿಯೊಳಗಿನ ಆವೇಶ ಮತ್ತು ಕ್ರೌರ್ಯದ ಅನಾವರಣ ಕೂಡ ಇಲ್ಲಿ ಕಲಾತ್ಮಕವಾಗಿ ಕಥಾನಕದ ನಡೆಗೆ ಸಾಂದರ್ಭಿಕವಾಗಿ ಮೂಡಿದೆ.

ಅನಾದಿಯಿಂದಲೂ ಹಿಂಸೆ ಹೇಗೆ ಮೂಲಭೂತವಾದ ಒಂದು ಅಭೀಪ್ಸೆಯಾಗಿ ಮನುಷ್ಯನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ, ಅದು ಮನುಷ್ಯ ಪಾರಮಾರ್ಥಿಕಕ್ಕೆ ತೆರಬಹುದಾದ ಅತ್ಯುತ್ಕೃಷ್ಟವಾದ ಕೊಡುಗೆ ಎಂಬ ಆದರ್ಶದ ಹಿನ್ನೆಲೆ ಹೇಗೆ ಇದೆಲ್ಲದರ ಹಿಂದೆ ಕೆಲಸ ಮಾಡಿದೆ ಎಂಬುದರ ಸ್ಥೂಲ ಚಿತ್ರವನ್ನೂ ಈ ಕಾದಂಬರಿ ನಮಗೆ ನೀಡುತ್ತದೆ. ಪ್ರಸ್ತುತ ಜಗತ್ತಿನ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮಗಳು ಹಿಂಸೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿಯೂ ನಾವಿದನ್ನು ನೋಡಬಹುದಾಗಿದೆ. ಧರ್ಮ, ಭಕ್ತಿಯ ಅಭಿವ್ಯಕ್ತಿ ಮನುಷ್ಯನ ಇಹದ ಬದುಕನ್ನು ಹೆಚ್ಚು ಸಹ್ಯವಾಗಿಸುವುದಕ್ಕಿದೆಯೋ ಅಥವಾ ಇನ್ನಷ್ಟು ತೊಡಕಿನದ್ದಾಗಿಸಲಿಕ್ಕಾಗಿಯೋ ಎಂಬ ಅದೇ ಪ್ರಶ್ನೆಯ ಎದುರು ನಮ್ಮನ್ನು ಈ ಕಾದಂಬರಿ ನಿಲ್ಲಿಸುತ್ತದೆ. ಅನುವಾದ ಎಲ್ಲಿಯೂ ತೊಡಕು ಹುಟ್ಟಿಸದೆ ಸುಲಲಿತ ಓದಿಗೆ ನೆರವಾಗುವಂತಿದೆ. ಮುದ್ರಣ, ಓರಣ ಎಲ್ಲವೂ ಅಚ್ಚುಕಟ್ಟಾಗಿದೆ.

ಛಿನ್ನಮಸ್ತಾ (ಕಾದಂಬರಿ)
ಅಸ್ಸಾಮಿ ಮೂಲ: ಇಂದಿರಾ ಗೋಸ್ವಾಮಿ, ಹಿಂದೀ ರೂಪಾಂತರ: ಪಾಪೋರಿ ಗೋಸ್ವಾಮಿ, ಕನ್ನಡ ಅನುವಾದ: ಆರ್.ಪಿ.ಹೆಗಡೆ.
ರವೀಂದ್ರ ಪುಸ್ತಕಾಲಯ, ಚಾಮರಾಜ ಪೇಟೆ, ಸಾಗರ-577 401.
ಪುಟಗಳು: vi+236, ಬೆಲೆ ರೂಪಾಯಿ ನೂರ ಇಪ್ಪತ್ತು.

2 comments:

ಕನ್ನಡದ ಕಂದ said...

ಈ ಪುಸ್ತಕದ ಪರಿಚಯ ಓದಿ ಖುಷಿಯಾಯಿತು

ನರೇಂದ್ರ ಪೈ said...

ಧನ್ಯವಾದಗಳು ಸರ್.