Thursday, October 9, 2008

ಓದುಗನಲ್ಲಿ ಪೂರ್ಣಗೊಳ್ಳುವ ಒಂದು ಅಪೂರ್ಣ ಕಾದಂಬರಿನಾವು ಪ್ರತಿಯೊಬ್ಬರೂ ಬದುಕಿನ ಒಂದಲ್ಲಾ ಒಂದು ಘಟ್ಟದಲ್ಲಿ ಆಧ್ಯಾತ್ಮವನ್ನು ಆಶ್ರಯಿಸಿದವರೇ. ಸಾಧಾರಣವಾಗಿ ಅನಿರೀಕ್ಷಿತವಾದ ನೋವು, ಆಘಾತ, ಸಂಕಟ ಎದುರಾದಾಗ ಒಂದು ಬಗೆಯ ಸ್ಮಶಾನ ವೈರಾಗ್ಯ ಎನ್ನುತ್ತೇವಲ್ಲ, ಅಂಥದ್ದು ಆವರಿಸುವುದು ಸಹಜವೇ. ಬದುಕಿನಲ್ಲಿ ಸುಲಭವಾಗಿ ಸಿಗದೇ ಹೋದುದು, ನಮಗೆ ದಕ್ಕಿಸಿಕೊಳ್ಳಲಾಗದೇ ಹೋದುದು, ಕೈತಪ್ಪಿ ಹೋದುದು, ಸಿಕ್ಕಿಯೂ ಉಳಿಸಿಕೊಳ್ಳಲಾಗದೇ ಹೋದುದು ನಿರಂತರವಾಗಿ ನಮ್ಮನ್ನು ಕಾಡುತ್ತ, ಬದುಕಿನ ಉದ್ದೇಶ, ಅರ್ಥ ಮತ್ತು ಅಗತ್ಯಗಳನ್ನೇ ಪ್ರಶ್ನಿಸುತ್ತ ಸಹಜ ಬದುಕಿಗೆ ವಿಮುಖವಾಗಿ ನಮ್ಮನ್ನು ನಡೆಸಲು ಹವಣಿಸುವುದು ಕೂಡ ಎಲ್ಲರ ಬದುಕಿನಲ್ಲೂ ಇರುವಂಥದೇ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬುದು ನಿಜವಾದರೂ ಆ ಇರದುದರತ್ತ ಒಂದು ವೈರಾಗ್ಯ, ಅದು ಅಭಾವ ವೈರಾಗ್ಯವೇ ಆಗಿರಲೊಲ್ಲದೇಕೆ, ಸಾಧ್ಯವಾಗುವುದು ಆಧ್ಯಾತ್ಮದಿಂದಲೇ ಎನ್ನುವುದು ಕೂಡ ನಿಜ. ಬಹುಷಃ ಸ್ತ್ರೋತ್ರ ಪಠಣ, ನಾಮ ಮಂತ್ರದ ಜಪ ಇಲ್ಲವೇ ಬರೆಯುವುದು, ಪೂಜೆ, ಪುನಸ್ಕಾರ, ಹರಕೆ, ಹೋಮ, ಹವನ ಎಲ್ಲ ಒಂದು ಪಾತಳಿಯದಾದರೆ ಇನ್ನೊಂದು ಪಾತಳಿಯದ್ದು ಆತ್ಮಸಂಸ್ಕಾರಕ್ಕೆ ಕುರಿತದ್ದು. ಗೀತೆ, ಪುರಾಣ, ಭಾಗವತ ಇತ್ಯಾದಿಗಳ ಪ್ರವಚನ. ಸಾಯಿಬಾಬಾ, ಅಮ್ಮ, ಅಸಾರಾಮ ಭಾಪುಜೀ ಹೀಗೆ ಕೆಲವರು. ಇನ್ನೂ ಮುಂದೆ ಉಪನಿಷತ್, ಬ್ರಹ್ಮಸೂತ್ರ, ವೇದಾಂತ ಇತ್ಯಾದಿಗಳ ಜಿಜ್ಞಾಸೆ ನಡೆಯಬಹುದು. ನಮ್ಮಲ್ಲಿ ಅನೇಕರು ಓಶೋ, ಜೆಕೆ ಮುಂತಾದವರನ್ನು ಓದಿಕೊಂಡವರು.


ಜೆಕೆಯ ಶೈಲಿ ಎಲ್ಲರಿಗೂ ಗೊತ್ತಿರುವುದೇ. ಮೊದಲು ನಮ್ಮ ನಿಲುವು, ಅನಿಸಿಕೆ, ಅನುಭವ, ಭ್ರಮೆ, ಶ್ರದ್ಧೆಗಳಿಂದ ಮುಕ್ತರಾಗಿ ಒಂದು ಸಂಗತಿಯನ್ನು ಅದು ಹೇಗಿದೆಯೋ ಹಾಗೆ ನೋಡಲು ಮನಸಾ ಸಿದ್ಧರಾಗುವುದು ಅಗತ್ಯ. ನಂತರ ಪ್ರಶ್ನೆಗಳನ್ನು ಸುಮ್ಮನೇ ಗಮನಿಸುತ್ತ ಹೋಗುವುದು. ಉತ್ತರಿಸುವ ಅಗತ್ಯವಿಲ್ಲ. ಯಾಕೆಂದರೆ, ಯಾವುದೇ ಒಂದು ಉತ್ತರ ಅಂತಿಮವೆಂದು ತಿಳಿಯುವುದು ಒಂದು ನಿರ್ದಿಷ್ಟ ನಿಲುವಿಗೆ ಅಂಟಿಕೊಂಡಂತಾಗುತ್ತದಲ್ಲ! ತೀರಾ ಎಂದರೆ ತೀರಾ ತೆರೆದ ಮನಸ್ಸಿನಿಂದ ಸುಮ್ಮನೇ ನೋಡುತ್ತ ಹೋಗಿ ಎನ್ನುತ್ತಾರವರು. ತಾನು ಬೋಧಕನಲ್ಲ, ನೀವು ಶಿಷ್ಯರೋ ಶ್ರೋತ್ರಾರರೋ ಅಲ್ಲ. ಇಬ್ಬರೂ ಸೇರಿ ಅದು ಏನಿದೆಯೋ ಅದನ್ನು, ಹೇಗಿದೆಯೋ ಹಾಗೆ ಗಮನಿಸುತ್ತ ಹೋಗುವುದು ಸದ್ಯದ ಕೆಲಸ, ಅಷ್ಟೇ. ಮುಂದೆ ನೀವು ನಿಮ್ಮಷ್ಟಕ್ಕೆ ನಾನು ನನ್ನಷ್ಟಕ್ಕೆ ಅದನ್ನು ಕುರಿತು ಚಿಂತನೆ ನಡೆಸಬಹುದು. ಏನೋ ಅರಿವಾಗಬಹುದು, ಆಗದೆಯೂ ಇರಬಹುದು, ಚಿಂತೆ ಇಲ್ಲ. ಪ್ರಶ್ನೆಗಳೊಂದಿಗೆ ಉಳಿಯುವುದು ಅವರಿಗೆ ಅಪೂರ್ಣತೆಯಂತೆ ಕಾಣಿಸುವುದಿಲ್ಲ. ಪರಿಪೂರ್ಣತೆಯ ಹಾದಿಯಲ್ಲಿರುವುದು ಮಾತ್ರ ಕೊನೆಗೂ ನಮಗೆ ಸಾಧ್ಯವಿರುವುದು ಎಂದುಕೊಂಡಂತಿದೆ ಇದೆಲ್ಲ.

ಇಷ್ಟನ್ನು ಹೇಳಿರುವುದಕ್ಕೆ ಒಂದು ಉದ್ದೇಶವಿದೆ. ಎದುರಿಗೆ ಕೀರ್ತಿನಾಥ ಕುರ್ತಕೋಟಿಯವರ ಕಾದಂಬರಿ `ಅರ್ಥಾಂತರ' ಇದೆ. ಇದು ಒಂದು ಅರ್ಥದಲ್ಲಿ ಅಪೂರ್ಣ ಕಾದಂಬರಿ. ಇನ್ನೊಂದು ಅರ್ಥದಲ್ಲಿ, ಹೇಗಿದೆಯೋ ಹಾಗೆ ಪೂರ್ಣವೇ. ಆದರೆ ಕಾದಂಬರಿ ಆಧ್ಯಾತ್ಮದ ಕುರಿತಾಗಿಯೇ ಇದೆ ಎಂದಲ್ಲ. ಅದು ನರಗುಂದ ಬಂಡಾಯದ ಸುತ್ತ ಇರುತ್ತ ಕ್ಷಾತ್ರದ ಕಳೆಯನ್ನೇ ಹೊತ್ತಿದೆ. ಆದರೆ ಏಕಕಾಲಕ್ಕೆ ಆಧ್ಯಾತ್ಮದ ತೇಜಸ್ಸನ್ನೂ ಹೊಂದಿರುವುದು ಮತ್ತು ಅದನ್ನು ಹೊಂದಿರುವ ವಿಶಿಷ್ಟ ಬಗೆ ಏನಿದೆ ಅದು ಈ ಜಿಕೆ ವಿಚಾರಧಾರೆಯ ಮುಕ್ತತೆ ಪಡೆದಿರುವುದು ಈ ಅಪೂರ್ಣವೆನ್ನಲಾಗದ ಪರಿಪೂರ್ಣತೆಯ ಲಕ್ಷಣವಾಗಿ ಸೆಳೆಯುವುದೇ ಒಂದು ಸೋಜಿಗದಂತಿದೆ!

"ಈ ಕಾದಂಬರಿಯು ನರಗುಂದ ಬಂಡಾಯದ ನಂತರ ಉತ್ತರ ಕರ್ನಾಟಕದ ಜನಜೀವನದಲ್ಲಿ ಉಂಟಾದ ಸ್ಥಿತ್ಯಂತರಗಳನ್ನು ಚಿತ್ರಿಸುತ್ತದೆ. ಹಳ್ಳಿಗಳಲ್ಲಿದ್ದ ಜಮೀನುದಾರರು, ವತನದಾರರು ತಾವು ಇದುವರೆಗೂ ನಂಬಿಕೊಂಡು ಬಂದ ವ್ಯವಸ್ಥೆಯನ್ನು, ಮೌಲ್ಯಗಳನ್ನು ಬ್ರಿಟಿಷ್ ರಾಜಸತ್ತೆಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು, ಅದಕ್ಕಾಗಿ ಅವರು ಎದುರಿಸಿದ ಮಾನಸಿಕ ತುಮುಲ, ಒಳತೋಟಿಗಳನ್ನು ಕುರಿತದ್ದಾಗಿದೆ. ಹಳೆಯ ರಾಜಕೀಯ ವ್ಯವಸ್ಥೆ ಹೋಗಿ ಹೊಸ ವ್ಯವಸ್ಥೆ ಬಂದಾಗ ಒಂದು ಹೊಸ ಸಂಸ್ಕೃತಿಯ ನಿರ್ಮಾಣವಾಗುತ್ತದೆ. ಇಂಥದೊಂದು ಹೊಸ ಸಂಸ್ಕೃತಿಯು ನಿರ್ಮಾಣವಾಗುತ್ತಿರುವ ಕಾಲಘಟ್ಟವನ್ನು ಈ ಕಾದಂಬರಿ ಚಿತ್ರಿಸಲು ಹವಣಿಸಿದೆ" ಎಂದು ಈ ಕೃತಿಯನ್ನು ಪ್ರಕಟಿಸಿದ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡದ ಪರ ಬರೆದ `ನಮ್ಮ ಮಾತು' ಹೇಳುತ್ತದೆ.

ಆದರೆ ಇದು ಸ್ಥೂಲವಾಗಿ ಕುರ್ತಕೋಟಿಯವರೇ ಮೊದಲ ಅಧ್ಯಾಯದಲ್ಲಿ ದಾಖಲಿಸಿದ, ಅವರ ಈ ಉದ್ದೇಶಿತ ಬೃಹತ್ ಕೃತಿಯ ಗುರಿಯಾಗಿತ್ತು, ಆಶಯವಾಗಿತ್ತು. ಅವರ ಈ ಆಶಯದ ಕಟ್ಟಡದ ಈಡೇರಿಕೆಗೆ ಬೇಕಾದ ಅಡಿಪಾಯವಷ್ಟೇ ಈಗ ನಮಗೆ ದಕ್ಕಿರುವುದು. ಇಲ್ಲಿ ಕುರ್ತಕೋಟಿಯವರು ದಾಖಲಿಸಿರುವ ವಿವರಗಳೇ ಜಿಜ್ಞಾಸೆಗೆ ಸಾಕಷ್ಟು ಸುಪುಷ್ಟವಾದ ಗ್ರಾಸವನ್ನು ನಮಗೆ ಒದಗಿಸಿವೆಯಾದರೂ ಈ ಕಾದಂಬರಿ ಪೂರ್ಣಗೊಂಡಿದ್ದರೆ ಅದು ಅವರ ಮೂಲ ಉದ್ದೇಶವನ್ನೂ ಮೀರಿ ಬೆಳೆದು ನಿಲ್ಲುತ್ತಿತ್ತು ಮತ್ತು ಕನ್ನಡಕ್ಕೆ ಬಹುಮಹತ್ವದ ಕೃತಿಯೊಂದು ದಕ್ಕುತ್ತಿತ್ತು ಎನ್ನುವುದನ್ನು ಈ ಮೊದಲ ತೊಂಬತ್ತರಷ್ಟು ಪುಟಗಳೇ ತೋರಿಸಿಕೊಟ್ಟಿವೆ. ಗುಣ ಮತ್ತು ದೋಷ ಎರಡೂ ಅದೇ ಆಗಿರುವುದು ಇಲ್ಲಿನ ವಿಪರ್ಯಾಸ. ಹಾಗಾಗಿ ಇಷ್ಟನ್ನೇ ಇರಿಸಿಕೊಂಡು ಕೀರ್ತಿನಾಥ ಕುರ್ತಕೋಟಿಯವರ ನಿರೂಪಣಾ ವಿಧಾನ, ತತ್ವ ಮತ್ತು ಇಲ್ಲಿನ ಒಂದು ಬಹುಮುಖ್ಯ ಪಾತ್ರವಾದ ಶ್ರೀಪಾದ ಗೌಡನ ಮೂಲಕ ಅವರು ಶೋಧಿಸ ಹೊರಟಿದ್ದ ಸತ್ಯದ ಆಳ - ಇವುಗಳ ಕುರಿತು ಗಮನಹರಿಸಬಹುದು.


ಶಾನುಭೋಗ ನಾರಾಯಣಪ್ಪನ ಕತೆ , ನೀಲಪ್ಪಗೌಡ ಮತ್ತು ದನಕಾಯುವ ಹುಡುಗ ಮುದುಕಪ್ಪನ ಕತೆ, ನೀಲಪ್ಪ ಗೌಡನ ಮನೆಯಲ್ಲಿ ನಡೆಯುವ ಒಂದು ಕಳ್ಳತನದ ಪ್ರಸಂಗ, ತಿರುಮಲರಾಯ, ಫಿರಂಗಿ ರಂಗಪ್ಪ ಹಾಗೂ ಕರಣಿಕ ವಾಮನರಾಯರ ವ್ಯಕ್ತಿ ಚಿತ್ರ ನೀಡುವ ಒಂದು ಅಧ್ಯಾಯ, ಬೆಳಧಡಿಯ ಬ್ರಹ್ಮಾನಂದರ ಕತೆ, ಬಹುವ್ರೀಹಿ ರಾಮನಗೌಡರ ಮನೆತನದ ಕತೆ ಇವಿಷ್ಟೂ ಕುರ್ತಕೋಟಿಯವರ ದೀರ್ಘಕಾಲೀನ ಬರವಣಿಗೆಯ ಯೋಜನೆಯನ್ನು ಸೂಚಿಸುವ ತುಂಡು ತುಂಡು ಬರಹಗಳಂತೆ ಕಾಣಿಸಿಕೊಳ್ಳುವುದನ್ನು ಬಿಟ್ಟರೆ ವೀರಪ್ಪಗೌಡ ಮತ್ತು ಹನುಮಂತ ಗೌಡರ ಕತೆ ತೀರ ಸ್ವತಂತ್ರವಾಗಿ ತಾನೇ ಒಂದು ಕಾದಂಬರಿಯಾಗಿ ಬೆಳೆಯುವ ಸೂಚನೆಗಳು ನಮಗೆ ಸಿಗುತ್ತವೆ. ಇಲ್ಲಿಯೂ ನೀಲಕಂಠ ಶಾಸ್ತ್ರಿ, ಶಂಕರ ಜೋಯಿಸ ಮುಂತಾದ ಪಾತ್ರಗಳು ತುಂಬಿಕೊಂಡು "ಇದಂ ಬ್ರಾಹ್ಮಂ ಇದಂ ಕ್ಷಾತ್ರಂ" ಎನ್ನುವಂತೆ ಕಥಾನಕ ಮೈತಳೆಯುವುದರ ಹಿಂದಿನ ಸ್ಥೂಲ ಸಂಕಲ್ಪದಂತೆ ಒಂದು ಪಾತ್ರ ಶ್ರೀಪಾದ ಗೌಡ ಮೂಡಿಬಂದಿದೆ.

ಶಾನುಭೋಗ ನಾರಾಯಣಪ್ಪನ ಕತೆ ನಮ್ಮನ್ನು ಒಮ್ಮೆಗೇ ತಲ್ಲಣಗೊಳಿಸಬಲ್ಲ ಒಂದು ಕತೆ ಹೇಗೋ ಹಾಗೆಯೇ ಕುರ್ತಕೋಟಿಯವರ ನಿರೂಪಣಾ ವಿಧಾನವನ್ನು ಕೂಡ ಕಣ್ಣಿಗೆ ಕಟ್ಟುವ ಕತೆ. ಮುಗಿದೇ ಹೋಯ್ತೆನಿಸಿದ್ದ ತನ್ನ ಬದುಕನ್ನು ಅನಿರೀಕ್ಷಿತವಾಗಿ ಕಾಯ್ದವನು ಕುಲದೇವರು ಕೇಶವನಲ್ಲ; ತನ್ನ ಊರಿನಲ್ಲಿ ರಾಜನಂತೆ ಮೆರೆದಾಡಿದ ಒಬ್ಬ ಕುಲಕರ್ಣಿಯನ್ನು ಸೈನ್ಯದಲ್ಲಿನ ಒಬ್ಬ ಕಾರಕೂನ ಬೇಕಾದರೆ ಕಾಯಬಹುದು, ಬೇಡವಾದರೆ ಕೊಲ್ಲಿಸಬಹುದು ಎನ್ನುವ ಸತ್ಯದ ಸಾಕ್ಷಾತ್ಕಾರವಾದದ್ದೇ ನಾರಾಯಣಪ್ಪ ಅದೃಷ್ಟದ ಆಟವೆಂಬಂತೆ ಮೃತ್ಯುವಿನಿಂದ ಬಚಾವಾದ ತನ್ನ ಜೀವವನ್ನು ಕಸದಂತೆ ಒಗೆದು ವಿಷ ಕುಡಿದು ಮಲಗುತ್ತಾನೆ. ಇದನ್ನು ಕುರ್ತಕೋಟಿಯವರು ನಿರೂಪಿಸುವ ವಿಶಿಷ್ಟ ಬಗೆ ಎಷ್ಟು ಪಾರಂಪರಿಕ ಸಾವಧಾನದಿಂದ ಕೂಡಿದೆಯೋ ಅಷ್ಟೇ ಕೌತುಕಮಯ ನಡೆಯನ್ನು ಕೂಡ ಪಡೆದಿರುವುದು, ಅವರ ವಿಶ್ಲೇಷಣೆಯ ವಿವರಗಳಾಚೆಗೂ ಗಮನಾರ್ಹವಾಗಿದೆ. ಇದೇ ಮಾತು ಮುದುಕಪ್ಪನೆಂಬ ಹೆಸರಿನ ದನಗಾಹಿ ಹುಡುಗನ ಕತೆಗೂ ಅನ್ವಯಿಸುತ್ತದೆ. ಈ ವಿಶಿಷ್ಟ ಕತೆಯನ್ನು ನಾವು ಕುಸುಮಬಾಲೆಯ ಯಾಡಗೌಡನ ಕತೆಯೊಂದಿಗೇ ನೋಡುವುದು ಸಾಧ್ಯವಾದರೆ ಎಷ್ಟು ಚೆನ್ನ! ಯಾಡ ದನಗಾಹಿಯಾಗಿ ಗೋಪಾಲಕರೊಂದಿಗೆ ಸೇರಿಕೊಂಡು ಜೊತೆಯವರೆಲ್ಲ ಆಟದಲ್ಲಿ ಮುಳುಗಿದ್ದಾಗ ತಾನೊಬ್ಬನೇ ಮಾರುವೇಷದಲ್ಲಿ ದನಗಳೊಂದಿಗೆ ಸಂತೆಮಾಳಕ್ಕೆ ಹೋಗಿ ಆ ಎಲ್ಲಾ ದನಗಳನ್ನು ಮಾರಿ, ಮತ್ತೆ ಊರಿಗೆ ಬಂದು ದನಗಳನ್ನೆಲ್ಲ ಗೋಪಾಲಕರ ಜೊತೆಯಲ್ಲೇ ಹುಲಿ ಹಿಡಿಯಿತೆಂದು, ತಾನು ಬದುಕಿ ಉಳಿದಿದ್ದೇ ಹೆಚ್ಚೆಂದು ಕತೆ ಹೆಣೆಯುತ್ತಾನೆ, ಯಾರಿಗೂ ಅನುಮಾನ ಬರದಂತೆ ಕ್ರಮೇಣ ಶ್ರೀಮಂತನಾಗುತ್ತಾನೆ. ಇಲ್ಲಿ ಮುದುಕಪ್ಪನೆಂಬ ದನಗಾಹಿ ಹುಡುಗ ತನಗೆ ಸಿಕ್ಕಿದ ಇಕ್ಕೇರಿ ವರಹಗಳ ಗಂಟನ್ನು ತನ್ನ ಧನಿ ಗೌಡರಿಗೆ ಸೇರಿದ್ದೆಂದು ಬಗೆದು ಅವರಿಗೆ ಒಪ್ಪಿಸಿ ಅವರು ಕೊಡುವ ಚಿಟ್ಟಿ ಜೋಳಕ್ಕೆ ತೃಪ್ತನಾಗುತ್ತಾನೆ. ಕುರ್ತಕೋಟಿಯವರು ನೀಡುವ ಪುಟ್ಟ ವಿಶ್ಲೇಷಣೆ ಕೂಡ ಬಹಳ ತೀಕ್ಷ್ಣವಾಗಿದ್ದು ಮನದಲ್ಲಿ ಉಳಿಯುತ್ತದೆ:

"ಬಂಗಾರದ ಬೆಲೆ ಬಹುಶಃ ಮುದುಕಪ್ಪನಿಗೆ ಗೊತ್ತಿತ್ತು, ಆದರೆ ಬಂಗಾರ ವಸ್ತು ಒಡವೆಗಳ ರೂಪದಲ್ಲಿದ್ದಾಗ ಮಾತ್ರ. ಭೂಮಿಯ ಮೇಲೆ ನಡೆದಾಡುವ ಪಶು ಸಂಪತ್ತಿನಿಂದ ಹಿಡಿದು, ಭೂಮಿಯ ಒಳಗಿನ ನಿಧಿ ನಿಕ್ಷೇಪಗಳ ಮೇಲೆ ಕೂಡ ಇರುವ ಅಧಿಕಾರ ರಾಜನದು, ಅಥವಾ ಆ ರಾಜನ ಪ್ರತಿನಿಧಿಯಾಗಿದ್ದ ಗೌಡರದು ಎಂಬ ನಂಬಿಕೆ ಮುದುಕಪ್ಪನಲ್ಲಿ ರಕ್ತಗತವಾಗಿತ್ತು. ದೇವಸ್ವ ಮತ್ತು ರಾಜಸ್ವಗಳೆರಡನ್ನೂ ಸಾಮಾನ್ಯ ಜನರು ಮುಟ್ಟುವಂತಿಲ್ಲ. ಒಂದು ವೇಳೆ ಲೋಭದಿಂದ ಅವುಗಳನ್ನು ತೆಗೆದುಕೊಂಡರೆ ಅದು ಕಳವು."

ಮುಂದೆ ರಾತ್ರಿಹೊತ್ತು ಅತಿಥಿಗಳಂತೆ ಗೌಡರ ಮನೆಗೆ ಊಟಕ್ಕೆ ಬಂದ ಮಂದಿಯೇ ಮನೆ ದರೋಡೆಗೆ ಯತ್ನಿಸುವ ಕತೆ ಬರುತ್ತದೆ. ಕಳ್ಳರು ಒಳಗೆ ಬರುವುದು ಸಾಧ್ಯವಾಗುವುದಿಲ್ಲ, ಯಾವ ಸಾಮಾನೂ ಕಳುವಾಗುವುದಿಲ್ಲ. ಆದರೆ ಅಧ್ಯಾಯವನ್ನು ಕುರ್ತಕೋಟಿಯವರು ಮುಗಿಸುವ ಸೊಗಡು ನೋಡಿ:

"ಆದರೆ ಅತಿಥಿಗಳಾಗಿ ಬಂದಿದ್ದವರು ಕಳ್ಳರಾಗಿದ್ದರು. ಮನೆಯ ಸುತ್ತಲಿನ ಅಭೇದ್ಯವಾಗಿದ್ದ ಗೋಡೆಯಲ್ಲಿ ಕನ್ನದ ಕಿಂಡಿ ಬಿದ್ದಿತ್ತು. ಅದನ್ನು ಮುಚ್ಚಿರಲಿಲ್ಲ. ಮುಚ್ಚಿದರೂ ಆ ಗಾಯ ಉಳಿಯುವಂತಿತ್ತು. ಹಣಮಪ್ಪನ ಗುಡಿಯ ಹತ್ತರ ಹೆಣವೊಂದು ಬಿದ್ದಿತ್ತು."

ಅತಿಥಿಗಳು ಕಳ್ಳರಾಗುವುದು, ಅಭೇದ್ಯ ಗೋಡೆಯಲ್ಲಿ ಒಂದು ಕನ್ನದ ಕಿಂಡಿ ತೆರೆದುಕೊಳ್ಳುವುದು ಮತ್ತು ದೇವರ ಗುಡಿಯ ಬಳಿ ಒಂದು ಹೆಣ, ಕಳ್ಳನದೇ ಆಗಿರಲಿ, ಬೀಳುವುದು - ಎಲ್ಲವೂ ಧ್ವನಿಸುವ ಪತನದ ಛಾಯೆ ಇಲ್ಲಿ ನಮ್ಮನ್ನು ಕಲಕುತ್ತದೆ.


ಇಷ್ಟಾದ ಮೇಲೆ ನಮ್ಮನ್ನು ತೀವೃವಾಗಿ ಸೆಳೆಯುವುದು ಇಲ್ಲಿನ ಶ್ರೀಪಾದ ಗೌಡನ ಕತೆ. ಈತ ಜಿಜ್ಞಾಸು. ವೇದಾಂತ ಅಧ್ಯಯನಕ್ಕೆ ತೊಡಗುತ್ತಾನೆ. ಸಂಸಾರದಲ್ಲಿ ಅಕ್ಷರಶಃ ಕಮಲದ ಎಲೆಯ ಮೇಲಿನ ನೀರಿನ ಹನಿಯಂತೆ ಉಳಿಯುತ್ತಾನೆ. ತನಗೆ ವೇದಾಂತದ ಭ್ರಮೆ ಮುಸುಕಿಲ್ಲವಷ್ಟೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಅವನ ಸಾಕ್ಷೀಪ್ರಜ್ಞೆ ತೀಕ್ಷ್ಣವಾಗಿದೆ. ಒಂದು ಕಡೆ ಇಂದ್ರ ಮತ್ತು ವಿರೋಚನರ ಕತೆ ಬರುತ್ತದೆ. ಒಬ್ಬ ದೇವತೆ ಇನ್ನೊಬ್ಬ ರಾಕ್ಷಸ. ಇಬ್ಬರಿಗೂ ಪ್ರಜಾಪತಿಯಿಂದ ಆತ್ಮಜ್ಞಾನದ ಉಪದೇಶವಾಗುತ್ತಿದೆ. ಕೊಳದಲ್ಲಿ ಪ್ರತಿಬಿಂಬ ನೋಡಿ ಏನು ಕಂಡಿತು, ಏನು ಕಾಣಲಿಲ್ಲ ಎನ್ನುವುದನ್ನು ಹೇಳಿ ಎನ್ನುತ್ತಾನೆ ಪ್ರಜಾಪತಿ. ಇಬ್ಬರ ರೀತಿ-ನೀತಿ, ಅರಿಯುವ ಬಗೆ ಭಿನ್ನ. ಕತೆ ಇರುವುದು ನಮಗೆ. ಇಬ್ಬರ ಕುರಿತು ಹೇಳುತ್ತ ಈ ಕತೆ ನಮಗೆ ಆತ್ಮಜ್ಞಾನದ ಸ್ವರೂಪವನ್ನು ತಿಳಿಯುವ ಬಗೆಯ ಅರಿವು ನೀಡುತ್ತಿದೆ. ಆದರೆ ಶ್ರೀಪಾದ ಶ್ರೀಕಂಠ ಶಾಸ್ತ್ರಿಗಳನ್ನು ಕೇಳುತ್ತಾನೆ, "ಈ ಕಥೀ ನಾವು ಓದೀವಿ, ಗುರುಗಳ ಕಡೆಯಿಂದ ಪಾಠ ಆಗೇದ, ಮತ್ತ ಓದತೀವಿ, ಆತ್ಮಜ್ಞಾನ ಆಗಲಿಲ್ಲಲ್ಲ? ಏನಂತಿ?"

ಶ್ರೀಕಂಠ ಶಾಸ್ತ್ರಿಗಳ ಉತ್ತರ ಗಮನಿಸಿ: "...ಪ್ರಜಾಪತಿ ಒಬ್ಬಾಂವ, ಶಿಷ್ಯರು ಇಬ್ಬರು. ಪ್ರಜಾಪತಿ ಸೂಚಿಸುವುದು ಒಂದು ಆತ್ಮ, ನಿಸ್ಸಂಗವಾದ ಆತ್ಮ. ಶಿಷ್ಯರಿಗೆ ಕಂಡದ್ದು ಎರಡು, ಬಿಂಬ ಮತ್ತು ಪ್ರತಿಬಿಂಬ. ಆದರೆ ಪ್ರತಿಬಿಂಬದ ಬಿಂಬ ಯಾವುದೂ ಅಂದರ ಅವರ ದೇಹನ ಹೊರತು ಆತ್ಮ ಅಲ್ಲ. ಅದರ ಈ ಗೊಂದಲದಾಗಿಂದ ಪಾರು ಹ್ಯಾಂಗ ಆಗಬೇಕು? ಗೊತ್ತಿಲ್ಲ. ನನಗ ಗೊತ್ತಿರೂದು ಅಂದರ ಸಂಸ್ಕೃತದಾಗ ಇದ್ದದ್ದನ್ನು ಕನ್ನಡದಾಗ ಹೇಳೂದು."

ಶ್ರೀಪಾದ ಗೌಡನ ಉತ್ತರ: "ಅಂದರ ಅವೂ ಎರಡು ಅನ್ನು. ಅವೂ ಮತ್ತ ಒಂದು ಬಿಂಬ ಇನ್ನೊಂದು ಪ್ರತಿಬಿಂಬ...."

".......ಇಷ್ಟ ದಿನ ಆಚಾರ್ಯರ ಭಾಷ್ಯದೊಳಗ ಅದು ತಿಳೀಲಿಲ್ಲ, ಇದು ಸಮಂಜಸ ಇಲ್ಲ ಅಂತ ಹೇಳತಿದ್ದಿವಿ. ಆದರ ಭಾಷ್ಯ ಅನ್ನೊದು ತಿಳಿಯಬೇಕಾದ ವಸ್ತು, ಇಂದಿಲ್ಲ ನಾಳೆ ತಿಳೀತದ. ಆದರೆ ತಿಳಕೊಳ್ಳೋದು ಭಾಷ್ಯನ ಹೊರತು ಪ್ರಪಂಚನೂ ಅಲ್ಲ ಮಾಯಾನೂ ಅಲ್ಲ!!"

ಸಂಸಾರದಿಂದ ದೂರವಾಗುವ ಸಂದರ್ಭದಲ್ಲಿ ಇದೇ ಶ್ರೀಪಾದ ಗೌಡ ಶ್ರೀಕಂಠ ಶಾಸ್ತ್ರಿಯ ಬಳಿ ಹೇಳುವ ಮಾತಿದು:
".....ನಿಮಗೆಲ್ಲಾ ಸಂಸಾರ ಮೈಯುಂಡದ ಚಟಾ ಆಗಿಬಿಟ್ಟಿದೆ. ಅದಕ್ಕ ತಿಳಿಯೂದುಲ್ಲ. ಚಟಾ ಅಂದರ ಅದು ಇದ್ದರ ಸುಖಾ ಇಲ್ಲ, ಆದರ ಬಿಟ್ಟರ ನಡಿಯೂದುಲ್ಲ. ನನಗೂ ಹೊಳದದ್ದು ಇಷ್ಟ ನೀಲಕಂಠ."

ಅಣ್ಣನ ಮಗನ ನಾಮಕರಣ ಸಂದರ್ಭದಲ್ಲಿ ಹೇಳುತ್ತಾನೆ;
"ನೋಡು ನೀಲಕಂಠ, ಈ ನಾಮ ರೂಪದ್ದೊಂದು ಮೋಜ ಅದ! ರೂಪ ದೇವರು ಕೊಟ್ಟದ್ದು, ಆದರ ನಾಮ ನಾವು ಕೊಡೋದು ಅಲ್ಲ? ಕಲ್ಲು, ಮಣ್ಣು, ಗಿಡಕಂಟಿ, ಸೂರ್ಯ, ಚಂದ್ರ ಅಂತ ನಾವ ಹೆಸರು ಕೊಡತೀವಿ, ವಸ್ತುವಿನ ರೂಪ, ನಾಮದೊಳಗ ಅಡಿಗಿಸಿ ಇಡತೀವಿ. ಆದರ ಹೆಸರಿಂದು ಒಂದು ತೊಡಕು ಅದ ನೋಡು. ನನ್ನ ಹೆಸರು ಶ್ರೀಪಾದ, ನಿನ್ನ ಹೆಸರು ನೀಲಕಂಠ. ಆದರ ಖರೇವಂದ್ರ ಇವು ನಮ್ಮ ಹೆಸರ? ನನ್ನ ಹೆಸರನ್ನ ನಾನ ಎಂದೂ ಉಪಯೋಗ ಮಾಡಿಕೊಳ್ಳೂದುಲ್ಲ. ಏ ಶ್ರೀಪಾದಾ, ಅಂತ ನನ್ನ ನಾನ ಕರಿಯೂದಿಲ್ಲ. ನನ್ನ ಹೆಸರು ಉಪಯೋಗ ಮಾಡಿಕೊಳ್ಳೋವರು ಇನ್ನೊಬ್ಬರು. ಇದು ಎಂಥಾ ವಿಚಿತ್ರ ಅದ ಅಲ್ಲ?"

ಅದು ಆ ಕಾಲ. ಈಗ ನಾವು ನಮ್ಮ ಹೆಸರನ್ನು ಎಷ್ಟೊಂದು ಉಪಯೋಗ ಮಾಡಿಕೊಳ್ಳುತ್ತೇವೆ, ಅಲ್ಲವೆ? ಹೆಸರಿಗಾಗಿಯೇ ಏನೆಲ್ಲ ನಡೆಸುತ್ತೇವೆ! "ಅರ್ಥಾಂತರ" ಇಂಥ ಸ್ಥಿತ್ಯಂತರಗಳನ್ನೂ ಪಿಸುಗುಡುತ್ತಿದೆ ಅನಿಸುವುದಿಲ್ಲವೆ?

ಕಾದಂಬರಿಯ ಕೊನೆಯಲ್ಲಿ ಶ್ರೀಗೌಡಪಾದರ ಮಾಂಡೂಕ್ಯ ಕಾರಿಕೆಗಳ ಮೇಲೆ ಶ್ರೀಪಾದ ಗೌಡರ ಟೀಕೆ ಟಿಪ್ಪಣಿಗಳು ಎನ್ನುವ ಅನುಬಂಧವಿದೆ. ಈ ಟೀಕೆಗಳು ಯಾರನ್ನಾದರೂ ಸುದೀರ್ಘಕಾಲದ ಜಿಜ್ಞಾಸೆಗೆ ಪ್ರೇರೇಪಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಬರುವ ಗೌಡರ ಬದುಕು, ಅಧಿಕಾರ, ಹೋರಾಟ ಮತ್ತು ಮಾನವೀಯತೆಗಳೆಲ್ಲದರ ನಡುವೆಯೇ ಕಾಡುವ ಕಷ್ಟ ಕಾರ್ಪಣ್ಯಗಳ, ಸಾವು ನೋವುಗಳ ಹಿನ್ನೆಲೆಯಲ್ಲಿ ಶ್ರೀಪಾದ ಗೌಡ ವೈರಾಗ್ಯದ ಮೂಲಕವೇ ಪಡೆದುಕೊಳ್ಳುವ ಒಂದು ವಿನೂತನ ಚೈತನ್ಯ ನಮ್ಮನ್ನು ಕಾಡುತ್ತ ಉಳಿಯುತ್ತದೆ.
ಅರ್ಥಾಂತರ (ಕಾದಂಬರಿ)
ಕೀರ್ತಿನಾಥ ಕುರ್ತಕೋಟಿ
ಪ್ರಕಾಶಕರು: ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್
1, ದೇಸಾಯಿ ಕಾಲನಿ
ಧಾರವಾಡ - 580 003
ಪುಟಗಳು: vi+94
ಬೆಲೆ: ರೂಪಾಯಿ ಎಪ್ಪತ್ತೈದು.

2 comments:

chetana said...

ಈ ಕಾದಂಬರಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದ. ಒಂದಿಬ್ಬರು ಹಿರಿಯರು ನನಗೆ ‘ಅರ್ಥಾಂತರ’ವನ್ನು ಓದಲು ಸೂಚಿಸಿದ್ದರು. ಆದರೆ ಅದರ ವಸ್ತು ವಿಷಯವನ್ನು ಹೇಳಿರಲಿಲ್ಲ. ಹೀಗಾಗಿ ಅದು ಓದದೆ ಉಳಿದುಹೋಗಿತ್ತು. ನಿಮ್ಮ ಬರಹ, ಕೃತಿಯ ಓದಿಗೆ ಉತ್ತೇಜನ ನೀಡುವಂತಿದೆ.
ಮತ್ತೊಮ್ಮೆ ಧನ್ಯವಾದ.

- ಚೇತನಾ ತೀರ್ಥಹಳ್ಳಿ

ನರೇಂದ್ರ ಪೈ said...

ಖಂಡಿತ ಓದಿ ಚೇತನಾ, ನಿಮಗದು ಇಷ್ಟವಾಗುತ್ತದೆ.