Tuesday, October 14, 2008

ಅಡಿಗರ ಕಾದಂಬರಿಗಳು


(ಅಡಿಗ-90 ಸಂದರ್ಭದಲ್ಲಿ ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ ಸಂಪಾದಿಸಿದ "ಪ್ರತಿಮಾ ಲೋಕ: ಗೋಪಾಲಕೃಷ್ಣ ಅಡಿಗ-ಮರುಓದು" ಕೃತಿಗಾಗಿ ಬರೆದ ಲೇಖನ)

ಅಡಿಗರ ಕಾವ್ಯ ಪರಂಪರೆಯನ್ನು ಗಮನಿಸಿದರೆ 1952ರ "ನಡೆದು ಬಂದ ದಾರಿ" ಕವನ ಸಂಕಲನದ ನಂತರ ಅದು ಹೊಸತೇ ಆದ ಮಜಲನ್ನು ಪಡೆದುಕೊಂಡಿರುವುದನ್ನು ಸ್ಪಷ್ಟವಾಗಿಯೇ ಗುರುತಿಸಬಹುದಾಗಿದೆ. ಇವತ್ತು ಅಡಿಗರನ್ನು ಕುರಿತು ಮತ್ತೆ ಮತ್ತೆ ನಡೆಯುತ್ತಿರುವ ಚರ್ಚೆ, ಜಿಜ್ಞಾಸೆಗಳೇನಿದ್ದರೂ ಅದು ಈ ಅವಧಿಯ ನಂತರದ ಅವರ ಕಾವ್ಯದ ಬಗ್ಗೆಯೇ ಎಂದರೂ ತಪ್ಪಾಗಲಾರದು. ಅಡಿಗರು ಆಕಾಶದೀಪ(1952) ಮತ್ತು ಅನಾಥೆ(1954) ಎಂಬ ಎರಡು ಕಾದಂಬರಿಗಳನ್ನೂ ಹುಲಿರಾಯ ಮತ್ತಿತರ ಕೆಲವು ಕತೆಗಳನ್ನೂ ಬರೆದಿರುವುದು ಕೂಡ ಅವರ ಚಂಡೆಮದ್ದಳೆ(1954), ಭೂಮಿಗೀತ(1959) ಮುಂತಾದ ಬಹು ಚರ್ಚಿತ ಕವನಸಂಕಲನಗಳು ಬರುವುದಕ್ಕೂ ಮುನ್ನ. ಬೇಂದ್ರೆಯವರ ಪ್ರಭಾವದಿಂದ ಮುಕ್ತರಾಗಬೇಕೆಂಬ ಒಂದು ಹಂಬಲ ಕೂಡ ಅವರನ್ನು ಕಾಡುತ್ತಿದ್ದ ಕಾಲ ಅದು. ಅದೇ ಸಮಯದಲ್ಲಿ ಅವರು ವಿಶ್ವಸಾಹಿತ್ಯದ ಅನುವಾದದ ಕೆಲಸದಲ್ಲಿ ಕೂಡ ತೊಡಗಿದ್ದರು. ಹೀಗೆ 1950-54ರ ಅವಧಿಯಲ್ಲಿ ಗದ್ಯದತ್ತ ಅವರ ಗಮನ ಹರಿದು ಈ ಎರಡು ಕಾದಂಬರಿಗಳನ್ನು ಬರೆದಿರಬಹುದು ಎನಿಸುತ್ತದೆ. ಆದರೂ ಅಡಿಗರ ಸೃಜನಶೀಲ ಗದ್ಯಕೃತಿಗಳಿಗೆ ಅವರ ಕಾವ್ಯ ಪರಂಪರೆಯೇ ಸವಾಲೊಡ್ಡುವುದು ಒಂದು ವಿಪರ್ಯಾಸವೆಂದೇ ಅನಿಸುತ್ತದೆ.


1950ಕ್ಕೂ ಮೊದಲಿನ ಕನ್ನಡ ಕಾದಂಬರಿ ಲೋಕ ಹೇಗಿತ್ತು, ಈ ಅವಧಿಯಲ್ಲಿ ಕನ್ನಡ ಕಾದಂಬರಿ ಪರಂಪರೆ ಏನಿತ್ತು ಎಂಬುದನ್ನೂ ಗಮನಿಸುವುದು ಸೂಕ್ತ. ಡಾ. ಪುರುಷೋತ್ತಮ ಬಿಳಿಮಲೆಯವರು ಬರೆದ ಕಾದಂಬರಿ 1926-1950 ಎಂಬ ಪ್ರಬಂಧದಲ್ಲಿ ಈ ಕುರಿತ ವಿವರಗಳಿವೆ. (ಶತಮಾನದ ಕನ್ನಡ ಸಾಹಿತ್ಯ, ಸಂ: ಜಿ ಎಚ್ ನಾಯಕ, ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ). ಬಿಳಿಮಲೆಯವರು ಕಾದಂಬರಿ ಪ್ರಕಾರ ಮಧ್ಯಮವರ್ಗದ ಜನರ ಮಹಾಕಾವ್ಯ ಎಂಬ ಮಾತನ್ನು ಪುಷ್ಟೀಕರಿಸುತ್ತ ಹೀಗೆ ಹೇಳುತ್ತಾರೆ:

"ಸಾಹಿತ್ಯವು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಬೇಕೆಂಬ 20ನೇ ಶತಮಾನದ ಕೂಗು ಕೂಡಾ ಕಾದಂಬರಿ ಪ್ರಕಾರಕ್ಕೆ ಹೆಚ್ಚು ಆಪ್ತವಾಯಿತು. ಈ ಎಲ್ಲಾ ಕಾರಣಗಳಿಂದಾಗಿ ಕಾದಂಬರಿ ಮಾಧ್ಯಮವು ಮಧ್ಯಮ ವರ್ಗದ ಮತ್ತು ಸಾಮಾನ್ಯವರ್ಗದ ಆಶೋತ್ತರಗಳನ್ನು ಅಭಿವ್ಯಕ್ತಿಸಲು ಮುಂದಾಯಿತು. ಭಾರತೀಯರಿಗೆ ಸಿಕ್ಕಿದ ವಸಾಹತು ಶಿಕ್ಷಣ, ಭಾರತೀಯ ಸಮಾಜದಲ್ಲಿ ಕಂಡು ಬಂದ ಹೊಸಬಗೆಯ ಜೀವನಕ್ರಮ, ಪಾಶ್ಚಾತ್ಯ ವೈಚಾರಿಕತೆಯಿಂದ ನಿಷ್ಪನ್ನಗೊಂಡ ಜಾಗೃತಿ, ಸ್ವಾತಂತ್ರ್ಯದ ಹಂಬಲದಲ್ಲಿ ಬೆಳೆದುಬಂದ ರಾಷ್ಟ್ರೀಯತಾವಾದ - ಇವೆಲ್ಲ ಬರಹಗರರಿಗೆ ಬಗೆಬಗೆಯ ವಸ್ತುವನ್ನು ಒದಗಿಸಿತು. ಜನ ಸಾಮಾನ್ಯರ ಕೌಟುಂಬಿಕ ಜೀವನದ ವಿವರಗಳು, ಬವಣೆಗಳು, ಸಾಮಾಜಿಕ ಜೀವನದ ಸೂಕ್ಷ್ಮಗಳೆಲ್ಲ ಕಲಾಕೃತಿಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾದವು. ಬರಹಗಾರರು ವಾಸ್ತವ ಜೀವನದ ವಿವರಗಳನ್ನು ಗದ್ಯದಲ್ಲಿ ತಾಳ್ಮೆಯಿಂದ ಮಂಡಿಸಲು ಮುಂದಾದರು ಮತ್ತು ತಮ್ಮ ಆದರ್ಶಗಳನ್ನು ನಿರೂಪಿಸಿದರು. ಸಾಮಾಜಿಕ ಸಂಬಂಧ, ಭೂ ಒಡೆತನ, ದಾಂಪತ್ಯ ಸಮಸ್ಯೆ, ವೇಶ್ಯಾ ಸಮಸ್ಯೆ, ಅಂತರ್ಜಾತೀಯ ಮದುವೆಗಳು, ಕಾನೂನಿನಲ್ಲಿರುವ ಬಿಕ್ಕಟ್ಟುಗಳು - ಇವೆಲ್ಲವನ್ನೂ ಕಾದಂಬರಿಗಳ ಮೂಲಕ ಚರ್ಚಿಸಲು ಆರಂಭಿಸಿದಾಗ, ನಿಜಕ್ಕೂ ಸಾಹಿತ್ಯ ಲೋಕದಲ್ಲಿ ದೊಡ್ಡ ಕ್ರಾಂತಿಯೇ ಸಂಭವಿಸಿತು. ೧೯೨೫-೧೯೫೦ರ ನಡುವೆ ಈ ಬಗೆಯ ಹೊಸ ಕಾದಂಬರಿಗಳು ಹೇರಳವಾಗಿ ಬಂದವು." (ಶತಮಾನದ ಕನ್ನಡ ಸಾಹಿತ್ಯ:ಪುಟ 205; ಕಾದಂಬರಿ 1926-1950:ಡಾ.ಪುರುಶೋತ್ತಮ ಬಿಳಿಮಲೆ)

ಅಡಿಗರ "ಅನಾಥೆ" ಕಾದಂಬರಿಯಲ್ಲಿ ಮೇಲ್ನೋಟಕ್ಕೆ ನಮಗೆ ಕಾಣುವುದು ವಿವಾಹಿತಳಾದ ಒಬ್ಬಳು ಸ್ತ್ರೀ ಮತ್ತು ಅವಿವಾಹಿತ ಆದರೆ ನೊಂದಿರುವ ಭಗ್ನಪ್ರೇಮಿಯೊಬ್ಬನ ನಡುವಿನ ತುಮುಲಗಳು. "ಆಕಾಶದೀಪ"ದಲ್ಲೂ ಮಿಂಚಿನಂತೆ ಬಂದು ಮರೆಯಾಗುವ ನೀಲಾ ಎಂಬ ಹುಡುಗಿ ಮಾಧವನಲ್ಲಿ ಉಂಟುಮಾಡುವ ತಳಮಳದ ಚಿತ್ರಣವಿದೆ. "ಆಕಾಶದೀಪ" ಎಳವೆಯ, ಷೋಡಶದ ಮನಸ್ಥಿತಿಯ ಕಥಾನಕವಾದರೂ ಅಲ್ಲಿ ತುಯ್ಯುವ ಮನಸ್ಸೂ, ಅದರ ನೋವೂ "ಅನಾಥೆ"ಯಲ್ಲಿ ಎದುರಾಗುವ ಸವಾಲುಗಳೂ ತೀರ ಭಿನ್ನವಾದ ವಸ್ತುವಲ್ಲ. ಇಲ್ಲಿ ನಾವು ಅದುವರೆಗಿನ ಇಂತಹುದೇ ವಸ್ತುವಿನೊಂದಿಗೆ ಹೊರಟ ಕೆಲವು ಕಾದಂಬರಿಗಳನ್ನು ಗಮನಿಸಬಹುದು. 1935ರಲ್ಲಿ ಬಂದ "ಧರ್ಮಸೆರೆ" (ಜಡಭರತ) ಮತ್ತು ಸಂಧ್ಯಾರಾಗ(ಅನಕೃ), 1936ರಲ್ಲಿ ಬಂದ "ಧೂಮಕೇತು" (ಕಡೆಂಗೋಡ್ಲು ಶಂಕರಭಟ್ಟ), 1937ರಲ್ಲಿ ಬಂದ "ಕಾನೂರು ಹೆಗ್ಗಡತಿ"(ಕುವೆಂಪು), ಅನಕೃ ಅವರ "ಮಂಗಳ ಸೂತ್ರ"(1940), "ಸಾಹಿತ್ಯರತ್ನ"(1943),"ಹೊಸಿಲು ದಾಟಿದ ಹೆಣ್ಣು"(1946),"ಮುಯ್ಯಿಗೆ ಮುಯ್ಯಿ"(1947), "ಕಣ್ಣೀರು"(1947), "ನಟಸಾರ್ವಭೌಮ"(1949) ಅಲ್ಲದೆ 1948ರಲ್ಲಿ ಬಂದ "ಹೇಮಾವತಿ" (ಗೊರೂರು ರಾಮಸ್ವಾಮಿ ಐಯಂಗಾರ್‍),1950ರಲ್ಲಿ ಬಂದ "ಸರ್ವಮಂಗಳಾ" (ಚದುರಂಗ) ಒಂದಲ್ಲ ಒಂದು ರೀತಿಯಲ್ಲಿ ಅಡಿಗರು ತಮ್ಮ ಕಾದಂಬರಿ "ಅನಾಥೆ"ಯಲ್ಲಿ ಎತ್ತಿಕೊಂಡ ಗಂಡು ಹೆಣ್ಣು ಸಂಬಂಧದ ಸ್ವರೂಪ, ಅಂದಿನ ಸಂಕ್ರಮಣ ಸ್ಥಿತಿಯಲ್ಲಿದ್ದ ಸಮಾಜವ್ಯವಸ್ಥೆ ಮತ್ತು ಯುವ ವಿದ್ಯಾವಂತರಲ್ಲಿ ಮೊಳೆಯುತ್ತಿದ್ದ ಸುಧಾರಣಾಪರ ಆದರ್ಶಗಳನ್ನು ತಡಕುವ ಕಾದಂಬರಿಗಳೇ.

ಇಲ್ಲೇ ಪುರುಷೋತ್ತಮ ಬಿಳಿಮಲೆಯವರು ಹೇಳುವ ಇನ್ನೊಂದು ಮಾತನ್ನು ಗಮನಿಸಬಹುದು. ಬಿಳಿಮಲೆಯವರು 1926ರಿಂದ 1950ರ ಅವಧಿಯ ಕಾದಂಬರಿಗಳನ್ನು ಗಮನಿಸಿ ಸರಿ ಸುಮಾರು ಎಲ್ಲಾ ಲೇಖಕರು ಸಾಮಾಜಿಕ ಸಮಸ್ಯೆಯನ್ನು ನೈತಿಕ ದೃಷ್ಟಿಕೋನದಿಂದಲೇ ನೋಡಿ ಪರಿಹಾರ ಸೂಚಿಸುವ ಸಾಮಾನ್ಯ ಕ್ರಮವನ್ನು ಅನುಸರಿಸುತ್ತಾರೆ ಎನ್ನುತ್ತಾರೆ.(ಪುಟ 224). ಆದರೆ ಅಡಿಗರು "ಅನಾಥೆ"ಯಲ್ಲಿ ತೋರುವ ದೃಷ್ಟಿಕೋನ ಕೇವಲ ಆದರ್ಶಪರ ನಿಲುವಿನಿಂದ ಹೊರಹೊಮ್ಮಿದ್ದೂ ಅಲ್ಲ, ಅಂಥ ಯಾವುದೇ ಪರಿಹಾರದ ಅಭಿವ್ಯಕ್ತಿಯೂ ಅಲ್ಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಎಂದು ಹೇಳಬಹುದಾದ್ದು ಅಡಿಗರಿಗೆ "ಆಕಾಶದೀಪ"ದಲ್ಲಾಗಲೀ "ಅನಾಥೆ"ಯಲ್ಲಾಗಲೀ ಸಮಾಜಮುಖೀ ಧೋರಣೆಗಳಿಗಿಂತ ವ್ಯಕ್ತಿಯ ಅಂತರಂಗದ ಔನ್ನತ್ಯ, ಅದರ ಮಾಗುವಿಕೆಯೇ ಮುಖ್ಯವಾಗಿರುವುದು.


ಅಡಿಗರ ಕತೆಗಳನ್ನು ಗಮನಿಸಿದರೂ ಆ ದಿನಗಳಲ್ಲಿ ಅಡಿಗರನ್ನು ಬಹುವಾಗಿ ಕಾಡಿದ ಸಂಗತಿಗಳು, ನೋವು, ಅಸಹಾಯಕತೆ ನಮ್ಮ ಅರಿವಿಗೆ ಬರುತ್ತದೆ. ವಿನಾಯಕನ ಸಂಸಾರ, ಅಪ್ರಿಯವಾದ ಸತ್ಯ, ತಿಮ್ಮನಗಾಡಿ, ಪುಟ್ಟನ ಪಯಣ, ದೇವರ ದಯೆ, ಇಟಲಿಯ ಸೈನಿಕ ಕತೆಗಳಲ್ಲೂ ಈ ಒಂದು ಆತ್ಮೀಯ ಜೀವದ ಅಥವಾ ವಸ್ತುವಿನ ಕನವರಿಕೆ, ಕಾಯುವಿಕೆ ನಿಷ್ಪಲವಾಗುವುದರ ಚಿತ್ರಗಳೇ ಇವೆ. ಅವರು ಬಯಸಿದಂಥ ಸ್ನೇಹದ, ಆತ್ಮೀಯತೆಯ ಒಡನಾಟ, ಸಖ್ಯ ದೊರೆಯಲಿಲ್ಲ, ನಂಬಿದವರು ತಮ್ಮ ನಂಬುಗೆಗೆ ಅರ್ಹವಾಗಿ ನಡೆದುಕೊಳ್ಳಲಿಲ್ಲ ಎಂಬ ಒಂದು ಅವ್ಯಕ್ತ ನೋವು ಅವರ ಬದುಕಿನಲ್ಲಿ ಹೇಗೋ ಅವರ ಕಾವ್ಯದಲ್ಲೂ ಇದೆ ಮತ್ತು ಅದು ಅವರ ಕತೆಗಳಲ್ಲಿ ಹೆಚ್ಚು ಢಾಳಾಗಿ ಕಾಣುವಂತಿದೆ. ಅಡಿಗರ ಆತ್ಮಕಥನ "ನೆನಪಿನ ಗಣಿಯಿಂದ" ಗಮನಿಸಿದರೆ ಈ ಮಾತು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.

"ಆಕಾಶದೀಪ" ಕಾದಂಬರಿಯಲ್ಲೂ ಪ್ರೀತಿಯ, ಸ್ನೇಹದ ನಿರಂತರವೂ ನಿಷ್ಪಲವೂ ಆದ ಹುಡುಕಾಟ ಮತ್ತು ಆ ನೋವೇ ಮೂಲವಾಗಿ ಹುಟ್ಟುವ ಒಂದು ಹೊಸ ಅರಿವು, ಸಮಾಧಾನ ಕಾಣಲು ಸಿಗುತ್ತದೆ. "ಆಕಾಶದೀಪ"ದ ಮಾಧವ ತನ್ನ ಆತ್ಮೀಯನಾದ ಕೃಷ್ಣನನ್ನು ಕಳೆದುಕೊಳ್ಳುತ್ತಾನೆ, ತನ್ನಲ್ಲಿ ಪ್ರೀತಿಯ ಕಲ್ಪನೆಯನ್ನು ಮೂಡಿಸಿದ ನೀಲಾಳನ್ನು ಕಳೆದುಕೊಳ್ಳುತ್ತಾನೆ. ಆದರೆ ಈ ಕಳೆದುಕೊಳ್ಳುವಿಕೆಯಾಗಲೀ, ಅದರ ನೋವಾಗಲೀ ಕೇವಲ ಒಂದು ದುಃಖಾಂತ್ಯದ ಕಥಾನಕದ ಅಗತ್ಯಗಳಾಗಿ ಇಲ್ಲಿ ಚಿತ್ರಿತವಾಗಿಲ್ಲ. ಅದಕ್ಕೆ ಇನ್ನೂ ಹೆಚ್ಚಿನ ಉದ್ದೇಶವಿರುವುದು ಇಲ್ಲಿ ಗಮನಾರ್ಹ. ಈ ಅಗಲುವಿಕೆ, ನೋವು, ನೊಂದವನ ಬದುಕನ್ನೇ ಕಬಳಿಸದೆ ಅದು ಮುಂದೆ ಬದುಕಿನಲ್ಲಿ ಮಾಗುವ, ಪ್ರಬುದ್ಧನಾಗುವ ಹಂತಕ್ಕೇರುವ ಹಾದಿಯಾಗಿ ತೆರೆದುಕೊಳ್ಳುವುದು ಇಲ್ಲಿನ ವಿಶೇಷ. "ಆಕಾಶದೀಪ"ದ ಈ ಮಾತುಗಳನ್ನು ಗಮನಿಸಿ:

"ಈ ಸಮುದ್ರಕ್ಕೂ ಉಬ್ಬರ ಇಳಿತವಿದೆ. ಉಬ್ಬುತ್ತದೆ, ಇಳಿಯುತ್ತದೆ. ಭರತ ಇಳಿತದ ಈ ಉಯ್ಯಾಲೆಯಾಟ ಪ್ರತಿದಿನವೂ ನಡೆಯುತ್ತದೆ. ಚಂದ್ರೋದಯವಾದರೆ ಸಾಕು, ಕಡಲ ನೀರು ತನ್ನ ಎದೆಯನ್ನು ಉಬ್ಬಿಸುತ್ತದೆ. ಚಂದ್ರಲೋಕವನ್ನೇ ಮುಟ್ಟುವ ಆಸೆಯೋ ಏನೋ ಅದಕ್ಕೆ. ಆ ಆಶೆ ತನ್ನ ಅಂತರಂಗದಲ್ಲಿ ಒತ್ತಿದಾಗ ಅದು ಏರುತ್ತದೆ. ಆ ಆಶೆಯ ತೀವ್ರತೆ ತಗ್ಗಿದಾಗ ಮತ್ತೆ ಇಳಿಯುತ್ತದೆ. ಇಳಿದೆನೆಂದು ಉಬ್ಬುವುದನ್ನು ನಿಲ್ಲಿಸುವುದಿಲ್ಲ ಕಡಲು! ಈ ವಿಚಾರ ಮಾಧವನ ಮನಸ್ಸಿನಲ್ಲಿ ವಿಚಾರ ತರಂಗವನ್ನೇ ಎಬ್ಬಿಸಿತು." (ಪುಟ 178)

ಇದೇ ಬಗೆಯ ನೋವು, ಅಗಲಿಕೆ "ಅನಾಥೆ"ಯಲ್ಲೂ ಇದೆ. ಆದರೆ "ಅನಾಥೆ"ಯ ಹೆಚ್ಚುಗಾರಿಕೆ ಎಂದರೆ ಮೊದಲನೆಯದಾಗಿ ಈ ಅಗಲಿಕೆ, ನಿರಾಶೆ ಇಲ್ಲಿ ಒಂದು ಆವರ್ತನ ಕ್ರಮದಲ್ಲಿರುವುದು. ಸರಿಸುಮಾರು ಒಂದೇ ಬಗೆಯ ನೋವು ಅಥವಾ ನಿರಾಸೆ ಮನುಷ್ಯನ ಎರಡು ವಿಭಿನ್ನ ವಯೋಮಾನದಲ್ಲಿ ಪುನರಾವರ್ತನೆಯಾದಾಗ ಅದು ನಮಗೆ ಕಾಣಿಸುವ ರೀತಿ ಮತ್ತು ಅದಕ್ಕೆ ಆತ ಸ್ಪಂದಿಸುವ ರೀತಿ ಇದನ್ನು ಅಡಿಗರು ಇಲ್ಲಿ ಗಮನಿಸುತ್ತಿದ್ದಾರೆ. ಎರಡನೆಯದಾಗಿ, ವಸ್ತು, ತಂತ್ರ ಮತ್ತು ಹೆಚ್ಚು ಪ್ರಬುದ್ಧವಾದ ಕಥಾನಕ. ಇದರ ಬಗ್ಗೆ ಮುಂದೆ ವಿವರವಾಗಿ ಗಮನಿಸಬಹುದು. ಮೂರನೆಯದಾಗಿ ಬದುಕಿನಲ್ಲಿ ಬಯಸಿದ್ದು ಸಿಗದೇ ಹೋಗುವ ಒಂದು ವಿದ್ಯಮಾನ ಇಲ್ಲಿ ಸ್ವೀಕರಿಸಲ್ಪಡುವ ರೀತಿಯಲ್ಲೇ ಇರುವ ಒಂದು ಹೊಸತನ. ಸಾಧಾರಣವಾಗಿ ಕಾದಂಬರಿಗಳಲ್ಲಿ ನಮಗೆ ಕಾಣಬರುವುದು ಎರಡು ಬಗೆಯ ತಿರುವುಗಳು. ಒಂದು, ಅಸಂಭವ ಎನಿಸಿದ ವಿದ್ಯಮಾನಗಳು ಪವಾಡಸದೃಶವಾಗಿ ಸಂಭವಿಸಿ ಓದುಗನನ್ನು ರಂಜಿಸುವುದು. ಇನ್ನೊಂದು, ಅದುವರೆಗೂ ಸಂಭಾವ್ಯವಾಗಿಯೇ ಕಂಡುಬಂದ ನಿರೀಕ್ಷೆಗಳು ತೀರ ಅನಿರೀಕ್ಷಿತವಾಗಿ ಅಸಾಧ್ಯವಾಗಿಬಿಟ್ಟು ಓದುಗನನ್ನು ಚಕಿತಗೊಳಿಸುವುದು. ಆದರೆ ಇಲ್ಲಿ ಅಡಿಗರು ಎರಡನ್ನೂ ಪ್ರಯತ್ನಿಸುವ ಆಕರ್ಷಣೆಗೆ ಒಳಗಾಗುವುದಿಲ್ಲ!

ಅಡಿಗರ ಎರಡೂ ಕಾದಂಬರಿಗಳ ವಸ್ತು ಮೂಲಭೂತವಾಗಿ ಕೇಂದ್ರೀಕೃತವಾಗಿರುವುದು ಈ ಬದುಕಿನಲ್ಲಿ ತನ್ನ ಸಕಲ ಮೋಹಕತೆಯಿಂದ ನಮ್ಮನ್ನು ಸೆಳೆಯುವ ಇಹದ ಸುಖದ ವ್ಯಾಮೋಹ ಮತ್ತು ಇದನ್ನು ನಿರಾಕರಿಸದೆ, ಆದರೆ ನಿಶ್ಚಯವಾಗಿಯೂ ಇದನ್ನು ಮೀರಿ ಪಡೆಯಬೇಕಿರುವ ಆತ್ಮೋನ್ನತಿಯ ಒಂದು ಸಿದ್ಧಿ-ಈ ಎರಡರ ನಡುವಿನ ತುಮುಲಗಳು. "ಆಕಾಶದೀಪ"ದ ನೀಲಾ ಪ್ರಸಂಗವನ್ನೇ ಹೋಲುವ ಒಂದು ಪ್ರಸಂಗ "ನೆನಪಿನ ಗಣಿಯಿಂದ" ಕೃತಿಯ ಪುಟ 73ರಲ್ಲಿ "ಯಾವ ಮೋಹನ ಮುರಲಿ ಕರೆಯಿತು" ಎಂಬ ಹೆಸರಿನಲ್ಲೇ ಇರುವುದು ಇಲ್ಲಿ ಗಮನಾರ್ಹ. ಹಾಗೆ ನೋಡಿದರೆ ಅಡಿಗರ ಎರಡೂ ಕಾದಂಬರಿಗಳ ಮೂಲಎಳೆ ಮೋಹನ ಮುರಳಿ ಕವನದಲ್ಲಿದೆ ಎಂದು ಅನಿಸಿದರೂ ಅಚ್ಚರಿಯಿಲ್ಲ. ಮೋಹನ ಮುರಲಿಯ ಈ ಸಾಲುಗಳನ್ನು ಗಮನಿಸಿ:

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ ಯಾವ ದಿವ್ಯದ ಯಾಚನೆ?

ಅನುರಕ್ತನಾದ ಸಂತನು ಇದ್ದಕ್ಕಿದ್ದ ಹಾಗೆಯೇ ವಿರಕ್ತನಾಗುವ ಬಗೆಯನ್ನು ಕಂಡು ದಿಗಿಲುಬಿದ್ದ ಪ್ರೇಯಸಿಯ ಕರುಣಾಕ್ರಂದನ ಈ ಗೀತದಲ್ಲಿ ಹೊಳಹು ಹಾಕಿದೆ ಎನ್ನುತ್ತಾರೆ ಪುತಿನ. ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ಎಂಬ ಸಾಲುಗಳಲ್ಲೂ ಬಯಕೆ ತೋಟದೊಳಗೇ ನಡೆಯುವುದು ಬೇಲಿಯೊಳಗಿನ ರಿಂಗಣ, ಅದು ತನ್ನನ್ನು ಬಂಧಿಸುವ ತೋಟ ಎಂಬ ಅರಿವು ಇದೆ. ಆದರೆ ಕವಿ ಜೀವನ ವಿಮುಖಿಯಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬುದೂ ಕವಿಗೆ ಗೊತ್ತು. ಅಂದರೆ ಬದುಕಿನ ಅನಿವಾರ್ಯವಾದ ಮೋಹ, ಬಯಕೆಗಳು ಒಂದೆಡೆ, ಅದರ ಬೆನ್ನಿಗೇ ಚಾಚುವ ದಿವ್ಯದ ಯಾಚನೆ ಇನ್ನೊಂದೆಡೆ. ಇಲ್ಲಿ ಮುಖ್ಯವಾಗುವುದು ಸಾಮಾಜಿಕ ಕಟ್ಟುಪಾಡುಗಳಲ್ಲ. ಆದರ್ಶದ ಹುಂಬ ಓಲೈಕೆಯಲ್ಲ. ಇದು ಅಂತರಂಗದ ಮಾಗುವಿಕೆಯ ಯಾಚನೆ, ಶೋಧನೆ. ಅಂತರಂಗದ ತೊಳಲಾಟ, ಮಾನಸಿಕ ಮಾಗುವಿಕೆಯನ್ನೇ ಸೂಚಿಸುವ ಕತೆ ಕಾದಂಬರಿಗಳು ನವೋದಯ ಕಾಲಘಟ್ಟದಲ್ಲಿ ಹೆಚ್ಚಿರಲಿಲ್ಲ ಎನ್ನುವುದನ್ನೂ ನಾವಿಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. ಹಾಗೆಯೇ, "ನಡೆದು ಬಂದ ದಾರಿ"ಯ ನಂತರ ಅಡಿಗರ ಕವನಗಳಲ್ಲಿ ಕಾಣುವ ಸಮಾಜಮುಖೀ ಧೋರಣೆಗಳು, ಆರ್ಥಿಕ-ರಾಜಕೀಯ ನಿಲುವುಗಳು ಈ ಕಾದಂಬರಿ ರಚನೆಯ ವೇಳೆಗೆ ಅವರಿಗೆ ಮುಖ್ಯವೆನಿಸಿರಲಿಲ್ಲ ಎಂಬುದನ್ನೂ ನಾವಿಲ್ಲಿ ಗಮನಿಸಬಹುದಾಗಿದೆ.

ಕತೆ ತೊಡಗುವಾಗ ಕಥಾನಾಯಕ ಶೀನಪ್ಪನ ಬದುಕಿನಲ್ಲಿ ಅದಾಗಲೇ ಒಂದು ಭಗ್ನಪ್ರೇಮದ ದುರಂತ ನಡೆದಿದೆ. ಹತ್ತು ವರ್ಷಗಳಷ್ಟು ಹಿಂದೆ ಅವನು ತುಂಬ ಬಯಸಿದ, ಪ್ರೀತಿಸಿದ ಜೀವ ಸಿಡುಬಿಗೆ ತುತ್ತಾಗಿ ಅವನ ಕಣ್ಣೆದುರೇ ಸುಟ್ಟು ಬೂದಿಯಾದ ಘಟನೆ ಅವನನ್ನು ಬಹುಮಟ್ಟಿಗೆ ಅಲ್ಲಾಡಿಸಿದೆ. ಇದೆಲ್ಲ ಅವನಲ್ಲಿ ಒಂದು ಬಗೆಯ ನಿರ್ಲಿಪ್ತಿಯನ್ನೂ ಮೂಡಿಸಿದೆ. ಈ ಹಂತದಲ್ಲಿ, ಒಂದು ಮಳೆಗಾಲದ ಕಗ್ಗತ್ತಲ ರಾತ್ರಿ ಕಾದಂಬರಿಯ ಕಥಾನಕ ತೊಡಗುತ್ತದೆ.

ಅಂದರೆ ಈ ಕಾದಂಬರಿಯ ಕೇಂದ್ರ ವ್ಯಕ್ತಿ ಶೀನಪ್ಪ ಭಗ್ನಪ್ರೇಮದ ಪೆಟ್ಟು ತಿಂದವನು. ಆ ಪೆಟ್ಟು ಅವನನ್ನು ಕಾದಂಬರಿಯ ಕಥಾನಕ ಒಡ್ಡಲಿರುವ ಹೊಸ ಸವಾಲಿಗೆ ಮುಖಾಮುಖಿಯಾಗುವುದರಲ್ಲಿ ಕೇವಲ ವ್ಯಕ್ತಿಗತ ನೆಲೆಯಲ್ಲಿ ಮಾತ್ರ ತಯಾರಾಗಿಸಿರುವಂಥದು. ಆದರೆ ಇಲ್ಲಿ ಎದುರಾಗುವ ಸವಾಲುಗಳಿಗೆ ಕೇವಲ ವ್ಯಕ್ತಿಗತ ನೆಲೆಯೊಂದೇ ಇರುವುದಲ್ಲ. ಅದಕ್ಕೆ ಸಾಮಾಜಿಕವಾದ ನೆಲೆಯಿದೆ. ಬಹುಪಾಲು ಬ್ರಾಹ್ಮಣರೇ ಇರುವ ಊರಿನಲ್ಲಿ ದೇವಾಲಯವೊಂದರ ಅರ್ಚಕನೂ ಆಗಿರುವ ಶೀನಪ್ಪ ಅವಿವಾಹಿತ. ವಿವಾಹಿತೆಯೂ ಒಬ್ಬಂಟಿಯೂ ಮೇಲಾಗಿ ಗರ್ಭಿಣಿಯೂ ಆಗಿರುವ ಪದ್ಮಾವತಿಯಂಥ ಹೆಣ್ಣಿಗೆ ಆತ ಆಶ್ರಯ ನೀಡುವುದೇ ಆ ಪುಟ್ಟ ಊರಿಗೆ ಸಹಜ ವಿದ್ಯಮಾನವಾಗಿ ಕಾಣುವುದಿಲ್ಲ. ಹಾಗಾಗಿ ಗ್ರಹಸ್ಥನಲ್ಲದ ಶೀನಪ್ಪನ ಸಮಸ್ಯೆಗೆ ಧಾರ್ಮಿಕ ನೆಲೆಯೂ ಇದೆ. ನೈತಿಕ ನೆಲೆಯಲ್ಲಿ ಶೀನಪ್ಪನ ಮತ್ತು ಪದ್ಮಾವತಿಯ ಚಾರಿತ್ರ್ಯವನ್ನು ಸಂಶಯಿಸುವ ಕೆಲಸವೂ ಪಾರ್ವತಮ್ಮ, ಸೀತಾರಾಮ ಭಟ್ಟರು, ಮಂಜುನಾಥ ಐತಾಳರು, ಗೋವಿಂದ ಸೋಮಯಾಜಿಗಳು, ಚಿದಂಬರ ಶಾಸ್ತ್ರಿಗಳು, ರಾಮಕೃಷ್ಣ ಜೋಯಿಸರು ಮುಂತಾದ ಊರ ಹಿರಿಯರೂ, ಜಾತ್ಯಸ್ಥರೂ, ಸಂಬಂಧಿಗಳೂ ಆದವರಿಂದ ನಡೆಯುತ್ತದೆ. ಅಂಥವರ ಕೆಲವು ನಿರ್ಧಾರಗಳಿಂದ ಹೊಸದಾದ ಕೆಲವು ಧರ್ಮಸಂಕಟಗಳೂ ಇಲ್ಲಿ ಉದ್ಭವವಾಗುತ್ತವೆ. ಪರಂಪರೆ ಮತ್ತು ಆಧುನಿಕ ವಿದ್ಯಾಭ್ಯಾಸ ಹುಟ್ಟುಹಾಕಿದ ಆದರ್ಶದ ನಡುವೆ ಇಲ್ಲಿ ತಿಕ್ಕಾಟ ಇದೆ ಎನ್ನುವುದಕ್ಕಿಂತಲೂ ಸಹಜವಾದ ಮಾನವೀಯ ನೆಲೆಯ ತಿಕ್ಕಾಟವಾಗಿ ಇದನ್ನು ಕಾಣಬಹುದಾಗಿದೆ. ಇಲ್ಲಿ ಹೆಣ್ಣಿನ ಜೀವನದ ಬವಣೆ, ನೋವು, ಮಿತಿಗಳು, ಗಂಡು ಅವಳನ್ನು ತಂದೆಯಾಗಿ, ಸಹೋದರನಾಗಿ, ಗಂಡನಾಗಿ, ವಿಟನಾಗಿ, ಸಮಾಜವಾಗಿ ಕಾಡುವ, ಹಿಂಸಿಸುವ ವಿವಿಧ ಮುಖಗಳನ್ನೂ ಅಡಿಗರು ಚಿತ್ರಿಸಿದ್ದಾರೆ. ಹೆಣ್ಣಿನ ಕುರಿತ ಅಡಿಗರ ಮನೋಧರ್ಮವೂ ಇಲ್ಲಿ ಎದ್ದು ಕಾಣುವಂತಿದೆ.

ಅಡಿಗರು ಈ ಎಲ್ಲ ನೆಲೆಗಳ ಮೂಲಕ ಇಲ್ಲಿಯ ಸಮಸ್ಯೆಯನ್ನು ಚಿತ್ರಿಸುತ್ತ, ಗಮನಿಸುತ್ತ ಹೋಗುತ್ತಾರೆ. ಆದರೆ ಅವರ ಕೇಂದ್ರ ಗಮನ ಮಾತ್ರ ಸಾಮಾಜದ ಗೊಂದಲಗಳನ್ನು, ಹೆಣ್ಣಿನ ನೋವನ್ನು, ಧರ್ಮಸಂಕಟಗಳ ನಿರ್ವಹಣೆಯನ್ನು, ಆದರ್ಶದ ಪ್ರತಿಪಾದನೆಯನ್ನು ಗುರಿಯಾಗಿ ಹೊಂದಿರುವಂಥದ್ದಲ್ಲ.

ಮಳೆಗಾಲದ ಕಗ್ಗತ್ತಲ ಅಪರಾತ್ರಿಯಲ್ಲಿ ತುಂಬಿದ ಗರ್ಭಿಣಿಯೊಬ್ಬಳು ಬೀದಿಯಲ್ಲಿ ಚೀತ್ಕಾರ ಹೊರಡಿಸಿ ಬಿದ್ದಿರುವುದನ್ನು ಕಂಡು ಅವಳನ್ನು ಮನೆಗೆ ಕರೆತಂದು, ಔಷಧೋಪಚಾರ ನಡೆಸಿ ಆಸರೆ ನೀಡಿದ ಶೀನಪ್ಪನನ್ನು ಲೋಕಾಪವಾದ ಕಾಡುತ್ತದೆ. ಅವನು ತುಂಬ ಬಯಸಿದ್ದ, ಅವನಿಗೆ ವಿಶೇಷ ಆತ್ಮತೃಪ್ತಿ ನೀಡುತ್ತಿದ್ದ ಮಹಾಬಲೇಶ್ವರನ ಪೂಜೆಯ ಹಕ್ಕನ್ನು ಅವನಿಂದ ಕಸಿಯಲಾಗುತ್ತದೆ. ಊರಿನ ಜಾತ್ಯಸ್ಥರ ಬಹಿಷ್ಕಾರಕ್ಕೆ ಅವನು ಗುರಿಯಾಗಬೇಕಾಗುತ್ತದೆ. ಅನಾಥೆಗೆ ಆಸರೆಯಾದದ್ದು ತಪ್ಪಲ್ಲ, ಆದರೆ ಅವಳ ಚಾರಿತ್ರ್ಯ ಸರಿಯಿಲ್ಲ, ಶೀನಪ್ಪ ಅವಿವಾಹಿತ ಒಬ್ಬಂಟಿ ಬ್ರಾಹ್ಮಣ, ಇಬ್ಬರೂ ಒಂದೇ ಸೂರಿನಡಿ ಈ ರೀತಿ ಜೊತೆಯಾಗಿರುವುದು ತಪ್ಪು. ಅದನ್ನು ಸಮಾಜ ಸಹಜ ಎಂದು ಕಾಣಲು ಸಿದ್ಧವಿಲ್ಲ.

ಇನ್ನು ವ್ಯಕ್ತಿಗತ ನೆಲೆಯ ಧರ್ಮಸಂಕಟವೂ ಸುರುವಾಗುತ್ತದೆ. ಶೀನಪ್ಪನ ಸಂಯಮ ಮತ್ತು ಆದರ್ಶಗಳನ್ನು ಕಂಡು ಆ ಹೆಣ್ಣೇ ಅಚ್ಚರಿಪಡುತ್ತ, ಅವನನ್ನೇ ಮೆಚ್ಚಿ ಆರಾಧಿಸುತ್ತ ಅಂಥ ಮೆಚ್ಚುಗೆ, ಆರಾಧನೆ ಒಂದು ಹೊರಳುದಾರಿಯಲ್ಲಿರುವುದನ್ನು ಗುರುತಿಸುವ ಹೊತ್ತಿಗೇ ಸ್ವತಃ ಶೀನಪ್ಪನೂ ತನ್ನಲ್ಲಿ ಅಂಥದೇ ಹೊರಳುವಿಕೆಯನ್ನು ಗುರುತಿಸಿ ಮುಂದಿನ ದಾರಿಯ ಬಗ್ಗೆ ಗೊಂದಲಗೊಳ್ಳುತ್ತಾನೆ, ವಿಚಲಿತನಾಗುತ್ತಾನೆ. ಪರಿಹಾರ ಕಾಣದೆ ಒದ್ದಾಡುತ್ತಾನೆ. ಅವಳು ಪರಸ್ತ್ರೀ. ಅವಳನ್ನು ಬಯಸುವುದು ತಪ್ಪು, ಮಹಾಪಾಪ. ಆದರೆ ಮನಸ್ಸು ತನಗೆ ಅಷ್ಟೇನೂ ಹಿತವಿಲ್ಲದ ಅದನ್ನು ಒಪ್ಪಲು ತಯಾರಿಲ್ಲ. ದೇಹಧರ್ಮವೂ ಒಂದಿದೆಯಲ್ಲ, ಅದು ಏನೂ ಆದೀತು ಎಂಬ ಘಟ್ಟಕ್ಕೆ ಅವನನ್ನು, ಪದ್ಮಾವತಿಯನ್ನೂ ಒಮ್ಮೆ ತಂದು ನಿಲ್ಲಿಸುತ್ತದೆ. ಇಲ್ಲಿ ನಿಜವಾದ ಧರ್ಮಸಂಕಟ ತೊಡಗುತ್ತದೆ. ಅಡಿಗರ ಕೇಂದ್ರ ಗಮನ ಈ ಧರ್ಮಸಂಕಟವನ್ನು ಮನುಷ್ಯ ಮೀರುವುದರಲ್ಲಿದೆ ಎಂದು ಅನಿಸುತ್ತದೆ. ಬರಿದೇ ಮೀರುವುದಲ್ಲ, ಈ ಮೀರುವಿಕೆ ಒಂದು ಹೊಸ ತಿಳಿವಿಗೆ, ಜೀವನದರ್ಶನಕ್ಕೆ ಕಾರಣವಾಗಬೇಕೆನ್ನುವುದರಲ್ಲಿದೆ.

ಗಂಡು ಹೆಣ್ಣು ಸಂಬಂಧ ಎದುರಿಸುವ ಅಸಹಾಯಕ ಸ್ಥಿತಿಯನ್ನು ಹೇಳುವ ಎದೆಯು ಮರಳಿ ತೊಳಲುತಿದೆಯಂಥ ಕವನ "ಕಟ್ಟುವೆವು ನಾವು" ಸಂಕಲನದಲ್ಲೂ ಇದೆ. ಆದರೆ "ನಡೆದು ಬಂದ ದಾರಿ"ಯ ಕವನಗಳಲ್ಲಿ ಈ ಅಸಹಾಯಕತೆ ಹೊಸದೊಂದು ತಿಳಿವಿಗೆ ಹೊರಳಿರುವುದನ್ನು ಕಾಣುತ್ತೇವೆ. ನನ್ನ ಮೋಹದ ಮೂರ್ತಿ (ಮೈಯ ಮರೆಯಿಸುವೊಲವು ಒಲವಲ್ಲ; ಅದು ಸೆಳವು. ನಂಬಿದರೆ ರಸಾತಳವು.), ನನ್ನ ನಿನ್ನ ಲೋಕ (ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ, ಬೇರೆದೊಂದು ಇದ್ದರೆ!), ನನ್ನ ನಿನ್ನ ನಡುವೆ (ಅಯ್ಯೊ, ನನ್ನ ನಿನ್ನ ನಡುವೆ ಎಂಥ ಕಡಲು ಮೂಡಿದೆ, ಅದೆಂಥ ಕಡಲು ಮೂಡಿದೆ!) ಮುಂತಾದ ಕವನಗಳನ್ನು ನಾವಿಲ್ಲಿ ಗಮನಿಸಿದರೆ ಅಡಿಗರ ಮನೋಧರ್ಮವನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ.

ಹಾಗೆ ನೋಡಿದರೆ ಕನ್ನಡ ಕಾದಂಬರಿಗಳಲ್ಲಿ ಇಂಥ ಧರ್ಮಸಂಕಟಗಳ ಇತಿಹಾಸವೇ ಇರುವಂತಿದೆ. ವಿವಾಹಿತೆಯರೇ ಆದ ಭಾಗೀರಥಿ ಮತ್ತು ನಂತರ ಸುನಾಲಿನಿಯರ ಆಕರ್ಷಣೆಗೆ ಒಳಗಾಗುವ ಚಂದ್ರಯ್ಯ (ಸರಸಮ್ಮನ ಸಮಾಧಿ(1927) - ಶಿವರಾಮ ಕಾರಂತ), ಅಣ್ಣನ ಹೆಂಡತಿಯನ್ನು ಬಯಸುವ ಶ್ರೀಧರ (ಧೂಮಕೇತು (1936) - ಕಡೆಂಗೋಡ್ಲು), ಸುಬ್ಬಮ್ಮ ಹೆಗ್ಗಡತಿ ಮತ್ತು ಸೇರೇಗಾರನ ಸಂಬಂಧ(ಕಾನೂರು ಹೆಗ್ಗಡ್ತಿ(1937) -ಕುವೆಂಪು), ಪತ್ನಿ ಗಿರಿಜೆ ಇರುತ್ತ ಲಲಿತೆಯನ್ನೂ ಬಯಸುವ ಲೇಖಕ ಕೇಶವಮೂರ್ತಿ (ಸಾಹಿತ್ಯರತ್ನ(1943) -ಅನಕೃ), ಪತ್ನಿ ರೋಗಗ್ರಸ್ತೆಯಾಗಿರುತ್ತ, ಅವಳ ಒಪ್ಪಿಗೆಯಿದ್ದರೂ ಲಕ್ಷ್ಮಿಯ ಕೋಣೆಗೆ ಹೋಗಲು ಒದ್ದಾಡುವ ಶ್ರೀನಿವಾಸ ಶ್ರೋತ್ರಿ (ವಂಶವೃಕ್ಷ(1963) - ಎಸ್ ಎಲ್ ಭೈರಪ್ಪ), ಚಂದ್ರಿಯ ಸಮಾಗಮ ಪ್ರಾಣೇಶಾಚಾರ್ಯರಲ್ಲಿ ಹುಟ್ಟಿಸುವ ಧರ್ಮಸಂಕಟ (ಸಂಸ್ಕಾರ(1965)- ಯು ಆರ್ ಅನಂತಮೂರ್ತಿ) ಇತ್ಯಾದಿ. ನವೋದಯದ ಕಾಲಘಟ್ಟದಲ್ಲೂ ಗಂಡು ಹೆಣ್ಣು ಸಂಬಂಧದ ವಿಲಕ್ಷಣ ಉದಾಹರಣೆಗಳನ್ನೂ, ಸಮಸ್ಯಾತ್ಮಕವಾಗುವ ಲೈಂಗಿಕ ವೈರುಧ್ಯಗಳನ್ನೂ, ತಮ್ಮ ಕತೆ ಕಾದಂಬರಿಗಳಲ್ಲಿ ತಂದವರಲ್ಲಿ ಅಡಿಗರೇ ಮೊದಲಿಗರಲ್ಲ. ಆದರೆ ಅಡಿಗರು ಈ ಧರ್ಮಸಂಕಟವನ್ನು ನಿರ್ವಹಿಸಿದ ಬಗೆ ತೀರ ಹೊಸದು. ಅಡಿಗರು ಅದನ್ನು ಇಲ್ಲಿ ಓದುಗರೇ ಎದುರಿಸಬೇಕಾದ ಒಂದು ಜಿಜ್ಞಾಸೆಯನ್ನಾಗಿಸಿ ಬಿಡುತ್ತಾರೆ. ಇದನ್ನು ನಾವು ಒಂದು ಮಿತಿಯನ್ನಾಗಿ ಕಾಣಬಹುದು, ತಪ್ಪೇನಿಲ್ಲ. ಅಡಿಗರ ಕವನಗಳನ್ನು ಗಮನಿಸದೆಯೇ ಈ ಕಾದಂಬರಿಯನ್ನು ಓದಿದರೆ ಅಡಿಗರು ಪ್ರಗತಿಪರರಲ್ಲ, ಸಾಂಪ್ರದಾಯಿಕ ಸನಾತನಿ ಎಂದೂ ಕಾಣುವುದು ಸಾಧ್ಯವಿದೆ! ಅಂಥ ಒಂದು ಅಭಿಪ್ರಾಯವನ್ನು ಕೆಲವರು, ಮುಖ್ಯವಾಗಿ ಪಿ.ಲಂಕೇಶ್, ವ್ಯಕ್ತಪಡಿಸಿದ್ದೂ ಇದೆ. ಆದರೆ ಇಲ್ಲಿ ಹಾಗೆ ಮಾಡುತ್ತ ಅದೇ ಮಿತಿ ತಾಂತ್ರಿಕವಾಗಿ ಕಾದಂಬರಿಗೆ ವಿಶಿಷ್ಟವಾದ ಒಂದು ಗುರುತ್ವ ದಯಪಾಲಿಸಿರುವುದನ್ನು ಅವಗಣಿಸಬಾರದು, ಅದು ತಪ್ಪಾಗುತ್ತದೆ.

ಇನ್ನು ಇಲ್ಲಿನ ವಸ್ತು, ತಂತ್ರ ಮತ್ತು ಕಥಾನಕದ ಹಂದರವನ್ನು ಒಂದಿಷ್ಟು ಗಮನಿಸಬಹುದು. ಶೀನಪ್ಪನಲ್ಲೂ ಪದ್ಮಾವತಿಯಲ್ಲೂ ಅಂತರಂಗದ ತುಮುಲ, ಮಾನಸಿಕ ದ್ವಂದ್ವಗಳೆಲ್ಲ ಬೆಳೆಯುತ್ತಿರುವ ಹಂತದಲ್ಲಿ ವಾಸ್ತವವಾಗಿ ಪದ್ಮಾವತಿಯ ಗಂಡನಾದ ರಾಮಚಂದ್ರ ಶಾಸ್ತ್ರಿ ಎನ್ನುವ ವ್ಯಕ್ತಿ ಜೀವಂತವಾಗಿರುವನೇ ಎಂಬುದೇ ಸ್ಪಷ್ಟವಿರುವುದಿಲ್ಲ. ಅಂದರೆ ಶೀನಪ್ಪ ಮತ್ತು ಪದ್ಮಾವತಿಯರು ಇರುವ ಬಳುವಡಿಯಲ್ಲಿನ ಕಥಾನಕವೂ ಕಳೂರುಕಟ್ಟೆಯಲ್ಲಿರುವ ರಾಮಚಂದ್ರ ಶಾಸ್ತ್ರಿ ಮತ್ತು ಸುಬ್ಬನ ಬದುಕಿನ ಕಥಾನಕವೂ ಇಲ್ಲಿ ಹಿಂದು ಮುಂದಾಗಿ ನಿರೂಪಸಲ್ಪಡುತ್ತಾ ಹೋಗುತ್ತದೆ. ಇಲ್ಲಿ 'ಕಾಲ'ವನ್ನು ಅಡಿಗರು ಬಳಸಿಕೊಂಡಿರುವ ರೀತಿ ಕುತೂಹಲಕರವಾಗಿದೆ. ಬಳುವಡಿಯ ಧರ್ಮಸಂಕಟವನ್ನು ತಿಳಿಯಾಗಿಸಬಲ್ಲ, ನಿವಾರಿಸಬಲ್ಲ ಅಥವಾ ಕೊನೆಯಾಗಿಸಬಲ್ಲ ಕಳೂರು ಕಟ್ಟೆಯ ಸಮಾಚಾರ ಸದಾಕಾಲ ಒಂದು ಅಂತರದಲ್ಲೇ ಹಿಂಬಾಲಿಸುತ್ತ ಇರುತ್ತದೆ. ಕಾದಂಬರಿಯ ಕಟ್ಟಕೊನೆಯ ಘಟ್ಟದಲ್ಲಿ ಮಾತ್ರ ಈ ಕಾಲದ ಅಂತರವನ್ನು ಕಾದಂಬರಿಕಾರ ಅಡಿಗರು ಸಂತುಲನಗೊಳಿಸಿದ್ದಾರೆ. ಇದರಿಂದಾಗಿ ಕಾದಂಬರಿಯ ಉದ್ದಕ್ಕೂ ಪದ್ಮಾವತಿ ಮತ್ತೆ ತನ್ನ ಪತಿಯನ್ನು ಸೇರುವವಳೆ ಅಥವಾ ಏನಾದರೂ ನಡೆದು ಆಗಲೇ ಓದುಗರನ್ನು ಆವರಿಸಿಕೊಂಡಿರುವ ಶೀನಪ್ಪನ ಜೊತೆಗೇ ನಿಲ್ಲುವಂತಾಗುವುದೇ ಎಂಬ ಪ್ರಶ್ನೆ ಜೀವಂತವಾಗಿಯೇ ಇರುತ್ತದೆ. ಊರಿನ ಬಹಿಷ್ಕಾರ, ಸಮಾಜದ ತಿರಸ್ಕಾರಗಳಿಗೆ ಗುರಿಯಾಗಿರುವ ಶೀನಪ್ಪನಿಗೆ ಪದ್ಮಾವತಿಯಿಂದ ದೂರವಾಗದೆ ಗತ್ಯಂತರವಿಲ್ಲ ಎಂಬುದೂ ಸರಳ ಸತ್ಯ. ಅಲ್ಲದೆ ಪದ್ಮಾವತಿ ಸದ್ಯಕ್ಕಂತೂ ಅವನಿಗೆ ಪರಸ್ತ್ರೀಯೇ. ಅವಳು ಬೇರೆ ತನ್ನ ಮಗ ಅನಂತನನ್ನು ತವರಿನಲ್ಲೇ ಬಿಟ್ಟು ಬಂದಿದ್ದಾಳೆ. ಅವಳ ಶೋಧದಲ್ಲೇ ಇರುವ ಸುಬ್ಬನ ಶೋಧ ಮುಗಿಯುವ ತನಕ ಏನಾದರೂ ಇತ್ಯರ್ಥವಾಗುವಂತೆಯೂ ಇಲ್ಲ. ಇದು ಕೇವಲ ಕುತೂಹಲ ಕೆರಳಿಸುವ, ಓದುಗರನ್ನು ಹಿಡಿದಿಡುವ ತಂತ್ರಗಾರಿಕೆಯಲ್ಲ. ಕಥಾನಕದ ತಾತ್ವಿಕ ಜಿಜ್ಞಾಸೆ ಇಲ್ಲಿ ನಡೆಯುತ್ತಿದ್ದು ಅದರಲ್ಲಿ ಓದುಗ ಸಕ್ರಿಯವಾಗುಳಿಯುವಂತೆ ಅಡಿಗರು ಕಾದಂಬರಿಗೆ ಒಂದು ಸಂಕೀರ್ಣ ತಂತ್ರವನ್ನು ಇಲ್ಲಿ ನೇಯ್ದಿರುವುದು ಸ್ಪಷ್ಟವಾಗಿದೆ. ಅಂತರಂಗದ ಅಮರ ಮಧುರ ಪ್ರೇಮದ ಮೋಹ ಒಂದೆಡೆ, ನಶ್ವರವೂ, ಕ್ಷಣಭಂಗರವೂ ಆದ ಸುಖದ ಕುರಿತ ನಿರ್ಲಿಪ್ತಿ ಇನ್ನೊಂದೆಡೆ. ಇದು ಶೀನಪ್ಪನನ್ನು ಕೊಂಡೊಯ್ಯುವುದೆಲ್ಲಿಗೆ?


ರಾಮಚಂದ್ರ ಶಾಸ್ತ್ರಿ ಸತ್ತಿದ್ದರೆ ಅಥವಾ ಪತ್ನಿಯನ್ನು ಪರಿತ್ಯಜಿಸಿದ್ದರೆ ಬಹುಷಃ ಶೀನಪ್ಪ ಪದ್ಮಾವತಿಯನ್ನು ಮದುವೆಯಾಗಬಹುದಾದ ಸಾಧ್ಯತೆಯೊಂದು ತೆರೆದುಕೊಳ್ಳುತ್ತಿತ್ತೆ? ಅದನ್ನು ಅಡಿಗರು ಕಟ್ಟಿದ ಬಳುವಡಿಯ ಸಮಾಜ ಸ್ವೀಕರಿಸುತ್ತಿತ್ತೆ? ಪತಿ ಅವಳನ್ನು ತಿರಸ್ಕರಿಸಲು ಸಾಕಷ್ಟು ಅವಕಾಶಗಳು ಕಾದಂಬರಿಯಲ್ಲಿ ಇದ್ದೇ ಇದ್ದವು. ಹಾಗಾಗಿ ಅಂಥ ಒಂದು ಸಾಧ್ಯತೆಯ ನಿರೀಕ್ಷೆಯನ್ನು ಓದುಗನಲ್ಲಿ ಅಡಿಗರು ಉಳಿಸಿರುತ್ತಾರೆ. ಅಥವಾ ಪದ್ಮಾವತಿಯೇ ದಿಟ್ಟವಾದ ಒಂದು ನಿಲುವು ತೆಗೆದುಕೊಂಡು ಪತಿಯನ್ನು ಪರಿತ್ಯಜಿಸಿ ಶೀನಪ್ಪನನ್ನು ಆಸರೆಯಾಗಿ ಆತುಕೊಳ್ಳುವುದು ಸಾಧ್ಯವಿತ್ತೆ? ರಾಮಚಂದ್ರ ಶಾಸ್ತ್ರಿ ಹಾಗೆ ತಿರಸ್ಕರಿಸಲ್ಪಡಬಹುದಾದ ಚಾರಿತ್ರ್ಯಹೀನನಲ್ಲ. ಕುಡುಕನಲ್ಲ, ವ್ಯಭಿಚಾರಿ ಎನಿಕೊಂಡವನಲ್ಲ. ಸಾಲದ ಶೂಲಕ್ಕೆ ಸಿಲುಕಿ ಊರುಬಿಟ್ಟವ, ಅಷ್ಟೆ. ಹಾಗಾಗಿ ಅಂಥ ಸಾಧ್ಯತೆಗಳು ಕಡಿಮೆ. ಇನ್ನು ಶೀನಪ್ಪನೇ ಸ್ವತಃ ದಿಟ್ಟವಾಗಿ ಏನನ್ನಾದರೂ ನಿರ್ಧರಿಸುವವನೆ?

ನಿಜವಾದ ಜಿಜ್ಞಾಸೆ ತೊಡಗುವುದೇ ಇಲ್ಲಿ. ಕಾದಂಬರಿ ಮುಗಿದರೂ ಅಡಿಗರು ಕಥಾನಕವನ್ನು ಹೇಗೆ ಮುಗಿಸಿದರು ಮತ್ತು ಯಾಕೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರವಾಗಿ ನಾವೇ ಅದನ್ನು ಬೇರೆ ಸಾಧ್ಯವಿರುವ ಎಲ್ಲ ಬಗೆಯಲ್ಲಿ ಕಲ್ಪಿಸುವಂತೆ ಮಾಡುತ್ತದೆ, ಅದರ ಸಾಧಕ ಬಾಧಕಗಳನ್ನು ಕುರಿತು ಯೋಚಿಸುವಂತೆ ಮಾಡುತ್ತದೆ ಮಾತ್ರವಲ್ಲ ಈ ಎಲ್ಲ ಯೋಚನೆ ಅಡಿಗರು ನಂಬಿದ ಜೀವನ ಮೌಲ್ಯಗಳ ಕುರಿತೂ ನಮಗೊಂದು ಒಳನೋಟ ನೀಡುತ್ತದೆ.

ಎಲ್ಲ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಕಳೂರುಕಟ್ಟೆಯ ಚೆಲುವಿಯ ಸೆಳೆತದಿಂದ ಹೇಗೋ ಪಾರಾಗಿ ಬಂದ ನಂತರ ರಾಮಚಂದ್ರ ಶಾಸ್ತ್ರಿ ಇದ್ದಕ್ಕಿದ್ದಂತೆ ತನ್ನ ಪತ್ನಿ ಪದ್ಮಾವತಿಯಲ್ಲಿ ನಿರಾಸಕ್ತನಾಗಿ ಬಿಡುತ್ತಾನೆ. ಅವಳು ಬದುಕುಳಿದಿರುವ ಸಾಧ್ಯತೆಯನ್ನೇ ಅಲ್ಲಗಳೆಯುವುದು ಅವನಿಗೆ ಆಪ್ಯಾಯಮಾನವಾಗಿ ಬಿಡುತ್ತದೆ. ಹಾಗೆಂದೇ ಮತ್ತೊಂದು ಮದುವೆಯ ಅವಕಾಶ ತೆರೆದುಕೊಂಡಾಗ ಹೆಚ್ಚೇನೂ ಯೋಚಿಸದೆ ತಲೆಯಾಡಿಸುವ ಮಟ್ಟಕ್ಕೆ ಇಳಿಯುತ್ತಾನೆ. ಆಗ ಪದ್ಮಾವತಿಯನ್ನು ನಡುಹಾದಿಯಲ್ಲಿ ಬಿಟ್ಟುಬಂದ ಸುಬ್ಬನಿಗೇ ಪದ್ಮಾವತಿಯನ್ನು ಹುಡುಕುವ ಜವಾಬ್ದಾರಿ ಒದಗಿದಂತೆ ಕಾಣುತ್ತದೆ. ಅದೇನೂ ಗಂಡ ಹೆಂಡಿರನ್ನು ಮತ್ತೊಮ್ಮೆ ಒಂದಾಗಿಸುವ ಉದ್ದೇಶದಿಂದಲ್ಲ. ಅದು ಅವನ ಅಳವಿಗೆ ಮೀರಿದ್ದು ಕೂಡ. ಪದ್ಮಾವತಿಯನ್ನು ದಾರಿಪಾಲು ಮಾಡಿದ್ದು ತನ್ನದೇ ಕುಡಿತ ಎಂಬುದು ಸುಬ್ಬುಗಿರುವ ಪಾಪಪ್ರಜ್ಞೆ. ಅಲ್ಲದೆ ಅವನ ಆಶ್ರಯದಾತೆಯಂತಿರುವ ಗಂಗೆ ಆ ಶೋಧವನ್ನು ಪೂರ್ತಿಗೊಳಿಸದೆ ತನ್ನನ್ನು ಬಿಡುವವಳಲ್ಲ ಎಂಬುದೂ ಅವನಿಗೆ ಗೊತ್ತಿದೆ. ಹಾಗಾಗಿಯೂ ತನ್ನಲ್ಲಿರುವ ಅರೆಬರೆ ಮಾನವೀಯತೆಯಿಂದಲೂ ಸುಬ್ಬು ಈ ಕೆಲಸಕ್ಕೆ ತೊಡಗುತ್ತಾನೆ. ಕಥಾನಕದ ದೃಷ್ಟಿಯಿಂದಲಾದರೂ ಪದ್ಮಾವತಿಯ ಕತೆ ಏನಾಯಿತೆಂಬುದು ಮುಖ್ಯವೇ ಸರಿ. ಆದರೆ ತನ್ನ ಪತಿ ತನ್ನ ಕಣ್ಣೆದುರೇ ಬೇರೊಬ್ಬಳನ್ನು ಮದುವೆಯಾಗುತ್ತಿರುವುದನ್ನು ಕಂಡು, ತನ್ನ ಹೊಟ್ಟೆಯ ಮಗು ತನ್ನನ್ನೇ ಗುರುತಿಸದೇ ಹೋಗುವುದನ್ನು ಕಂಡು ಪದ್ಮಾವತಿ ಕಂಗಾಲಾಗುತ್ತಾಳೆ. ತಮ್ಮ ಮತ್ತು ಅತ್ತಿಗೆ ನಿಜಸಂಗತಿ ತಿಳಿದು ಅವಳಿಗೆ ಆಶ್ರಯ ನೀಡುತ್ತಾರೆ ಎಂಬುದೇನೋ ಸರಿಯೆ. ಆದರೆ ಸುಬ್ಬನಾದಿಯಾಗಿ ಶೀನಪ್ಪನೂ ಈ ಜೀವದ ಕುರಿತು ಅವರವರ ಹಣೆಬರಹ ಎನ್ನುವಂಥ ಒಂದು ಅನುಕಂಪ ತೋರಿಸುವುದನ್ನು ಬಿಟ್ಟರೆ ಬೇರೇನೂ ಸಾಧ್ಯವಿರಲಿಲ್ಲವೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುವುದು ಸಹಜ.

"ಹೋರಾಡಬಹುದು. ಆದರೆ ಹೋರಾಟ ಯಾರೊಡನೆ? ಅದರಿಂದ ಪದ್ಮಳಿಗೆ ಸುಖವಾಗುವ ಹಾಗಿದ್ದರೆ? ಆದರೆ ಅವಳಿಗೆ ಈ ಜನ್ಮದಲ್ಲಿ ಮತ್ತೆ ಸುಖವಿಲ್ಲ." ಎಂದೇ ಶೀನಪ್ಪ ನಿರ್ಧರಿಸುತ್ತಾನೆ. ಪದ್ಮ ಶೀನಪ್ಪನನ್ನು ದೇವರು ಎಂದಿರುತ್ತಾಳೆ. ದೇವರಾಗದೆ ಬರಿಯ ಮನುಷ್ಯನಾಗುವ ಹಂತಕ್ಕೆ ಒಮ್ಮೆ ಶೀನಪ್ಪ ತಲುಪಿದ್ದ. ಅದನ್ನು ಬೈಂದೂರಿನ ಸುಮಿತ್ರೆಯ ಹಾಸುಗೆಯಲ್ಲಿ ಆಗಗೊಡುವುದೇ ಸರಿಯೆನಿಸುತ್ತದೆ ಅವನಿಗೆ. ಹಾಗಾಗಿ ಕೊನೆಗೂ ಪದ್ಮಾವತಿಯ ಮಟ್ಟಿಗೆ ಅವನು ದೇವರಾಗಿಯೇ ಉಳಿಯುತ್ತಾನೆ. ಅಡಿಗರು ಹಾಗೆ ಉಳಿಸುತ್ತಾರೆ ಅನಿಸುತ್ತದೆ. ತಾನೊಂದು ವೇಳೆ ಮದುವೆಯಾದ ಗ್ರಹಸ್ಥನಾಗಿದ್ದರೆ ಪದ್ಮಾವತಿಯಂಥ ಹೆಣ್ಣಿಗೆ ಆಶ್ರಯ ನೀಡಿದ್ದರೂ ಲೋಕಾಪವಾದಕ್ಕೆ ಗುರಿಯಾಗುತ್ತಿರಲಿಲ್ಲ ಎಂಬುದಷ್ಟೇ ಶೀನಪ್ಪನಿಗೆ ಮುಖ್ಯವಾದ, ಕೊನೆಗೂ ಅವನಿಗೆ ಒಲಿದ ಸತ್ಯವಾಗಿ ನಿಲ್ಲುತ್ತದೆ. ವಿಚಿತ್ರವೆಂದರೆ ಇನ್ನಾವ ರೀತಿಯ ಕ್ರಾಂತಿಕಾರತೆಯೂ ಕಾದಂಬರಿಯ ಚೌಕಟ್ಟಿನಲ್ಲಿ ಕೃತಕವಾಗುತ್ತಿತ್ತೇನೋ ಎನಿಸುವಾಗಲೇ ಈ ಬಗೆಯ ಅಂತ್ಯ ನಮ್ಮನ್ನು ಕಾಡುವಷ್ಟು ಬೇರೊಂದು ಕಾಡುತ್ತಿರಲಿಲ್ಲವೇನೋ ಅನಿಸುವುದು!

ದಕ್ಷಿಣಕನ್ನಡದ ಜನಜೀವನದ ಚಿತ್ರಗಳನ್ನು ನೀಡುವ ಯಾವುದೇ ಕಾದಂಬರಿ ಕಾರಂತರ ಕಾದಂಬರಿಗಳ ನೆನಪು ಮೂಡಿಸದೇ ಇರುವುದು ಅಸಾಧ್ಯ. ಹಾಗೆಯೇ ಅಡಿಗರ "ಆಕಾಶದೀಪ" ಕಾರಂತರ "ಮರಳಿ ಮಣ್ಣಿಗೆ" ಕಾದಂಬರಿಯಲ್ಲಿ ಬರುವ ಲಚ್ಚ ಮತ್ತು ರಾಮರ ವಿದ್ಯಾಭ್ಯಾಸದ ವಿವರಗಳನ್ನೇ ನೆನಪಿಸುವಂತಿದೆ. ಎರಡೂ ಕಾದಂಬರಿಗಳಲ್ಲಿ ಬರುವ ಕುಂದಾಪುರದ ಸುತ್ತಮುತ್ತಲಿನ ಪರಿಸರದ ವಿವರಗಳು, ಕಡಲು, ದೋಣಿಯಾನ, ಶಿಕ್ಷಣಕ್ಕಾಗಿ ಹೋಟೇಲಿನ ವಾಸ, ಆ ದಿನಗಳ ಊರಿನ ಸೆಳೆತ ಇಂಥ ಹೋಲಿಕೆಗೆ ಕಾರಣ. ಕರಾವಳಿಯ ಕೃಷಿಕ ಬದುಕನ್ನು ಅಡಿಗರು ಅತ್ಯಂತ ಚಿತ್ರವತ್ತಾಗಿ ಕಟ್ಟಿಕೊಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ತಾಳಮದ್ದಲೆ, ಯಕ್ಷಗಾನ, ನಡೆದೋ, ಗಾಡಿಕಟ್ಟಿಯೋ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಅನಿವಾರ್ಯತೆ, ಬದುಕಿಗೆ ಸಹಜವಾಗಿದ್ದರೂ ಹೊಸದೇ ಸಂಭ್ರಮವಾಗುವ ಕಾಲಕಾಲದ ಸೆಖೆ, ಮಳೆ, ಪ್ರಕೃತಿಯ ಬದಲಾವಣೆ ಮತ್ತು ಅದರೊಂದಿಗೇ ಬದಲಾಗುವ ಕೃಷಿಕನ ಕೆಲಸ ಕಾರ್ಯಗಳು, ಹೆಂಡ, ಜೂಜು, ವೇಶ್ಯೆಯರ ಸಹವಾಸದ ಕತೆಗಳು, ಸುಬ್ಬ ಮತ್ತು ಗಂಗೆಯರಂಥ ಅಪರೂಪದ ಪಾತ್ರಗಳ ಮುಖೇನ ಅಡಿಗರು ನಿರ್ಮಿಸುವ ಒಂದು ಭಿನ್ನ ಜಗತ್ತು, ಅಲ್ಲಿ ಸಿಗುವ ಬಾಲ್ಯದ ಆಟಗಳು, ಹಾಸ್ಯ, ಸರಸ, ಪ್ರಣಯ, ಎಲ್ಲದರಲ್ಲೂ ಎದ್ದು ಕಾಣುವ ನೈಜತೆ ಗಮನ ಸೆಳೆಯುತ್ತದೆ, ಆಪ್ತವಾಗುತ್ತದೆ. ತಮ್ಮ ಕಾದಂಬರಿಗೆ ಅಗತ್ಯವಾದ ಒಂದು ಪರಿಸರ ನಿರ್ಮಾಣದಲ್ಲಿ ಅಡಿಗರು ಅನನ್ಯ ತಾದ್ಯಾತ್ಮವನ್ನು ಇಲ್ಲಿ ತೋರಿದ್ದಾರೆ. ಎಲ್ಲ ಬಗೆಯಲ್ಲೂ ಅತ್ಯುತ್ತಮವಾದ ಕಾದಂಬರಿಗಳನ್ನು ಕೊಡಬಲ್ಲ ಕಸು ಹೊಂದಿದ್ದ ಅಡಿಗರು ಮುಂದೆ ಕಾದಂಬರಿಯನ್ನೇ ಬರೆಯಲಿಲ್ಲ ಎಂಬುದು ಮಾತ್ರ ಕನ್ನಡಕ್ಕಾದ ನಷ್ಟವೆಂದೇ ತೋರುತ್ತದೆ. ಅಡಿಗರು ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾದ ವಿಶಿಷ್ಟ ಸಾಹಿತ್ಯ ಪ್ರಕಾರ ಕಾವ್ಯವೆಂದು ತಿಳಿದು ತಮ್ಮ ಸೃಷ್ಟಿಪರವಾದ ಶಕ್ತಿಯನ್ನು ಅದಕ್ಕೇ ಬಳಸುವುದರಿಂದ ಉತ್ಕೃಷ್ಟ ಕೃತಿ ರಚನೆ ಸಾಧ್ಯವಾಗುತ್ತದೆ ಎಂದು ತಿಳಿದರು. ಸ್ವತಃ ಅಡಿಗರ ಅನಾಥೆ ಕಾದಂಬರಿಯೇ ಇಂಥ ನಿಲುವು ಪೂರ್ತಿ ಸರಿಯಲ್ಲ ಎಂಬಂತಿದ್ದರೂ ಅದು ಆವತ್ತೂ ಅವಜ್ಞೆಗೆ ಗುರಿಯಾಗಿರಬೇಕು ಎಂದೇ ಅನಿಸುತ್ತದೆ.

ಪ್ರತಿಮಾ ಲೋಕ : ಗೋಪಾಲಕೃಷ್ಣ ಅಡಿಗ-ಮರು ಓದು
ಸಂಪಾದಕರು: ಎಸ್.ಆರ್.ವಿಜಯಶಂಕರ

ಪ್ರಕಾಶನ: ಅಂಕಿತ ಪುಸ್ತಕ

ಪುಟಗಳು:360

ಬೆಲೆ : ರೂಪಾಯಿ ಇನ್ನೂರ ಐವತ್ತು.

No comments: