Sunday, November 30, 2008

ವಿವೇಕ್ ಶಾನಭಾಗರೊಡನೆ....(ಉತ್ತರಾರ್ಧ)

ಈಗ ನಿಮ್ಮ ಕತೆಗಳ ಜಗತ್ತಿಗೆ ಬರುವ. ಅಂಕುರ ಸಂಕಲನ ಬರುವ ಹೊತ್ತಿಗೆ ತಮ್ಮ ಮೇಲೆ ಚಿತ್ತಾಲರ ಪ್ರಭಾವ ಇತ್ತೆ? ಮುಂದೆ ನೀವು ಅದರಿಂದ ಹೇಗೆ ಹೊರಬಂದಿರಿ? ಹೊರಬರುವುದಕ್ಕಾಗಿಯೇ ಏನಾದರೂ ಮಾಡಬೇಕಾಯಿತೋ ಹೇಗೆ?

ನಾನು ಚಿತ್ತಾಲರನ್ನ ಅಕಸ್ಮಾತ್ತಾಗಿ ಓದಿದೆ. ಅಂದ್ರೆ, ನಾನು ಸಾಹಿತ್ಯಾನ ಓದ್ಲಿಕ್ಕೆ ಸುರುಮಾಡಿದಾಗ ನನ್ಗೆ ಈ ನವ್ಯ ಅಥವಾ ನವೋದಯ ಅಥವಾ ಈ ಪ್ರಗತಿಶೀಲ .. ಆತರದ ಯಾವ ಒಂದು ಸಾಹಿತ್ಯದಲ್ಲಿ ಪಂಥಗಳಿದ್ದಾವೆ ಅನ್ನೋದು ಗೊತ್ತಿರಲಿಲ್ಲ. ನಾನು ನನ್ನ ಕೈಗೆ ಸಿಕ್ಕಿದ ಪುಸ್ತಕಗಳನ್ನ ಓದ್ತಾ ಬಂದೆ. ಆಮೇಲೆ ಓದ್ತಾ ಓದ್ತಾ ಓದ್ತಾ ನಂಗೆ ಇಷ್ಟವಾದದ್ದನ್ನ ಹೆಚ್ಚು ಓದಿದೆ. ಅದೇ ರೀತಿ ಆವಾಗ ನಾನು ಯಶವಂತ ಚಿತ್ತಾಲರನ್ನ ಮೊಟ್ಟಮೊದಲ್ನೆ ಸಲ ಓದ್ದಾಗ ನನಗೆ, ಅವರ ಆಟ ಸಂಕಲನ ನಾನು ಮೊದ್ಲು ಓದಿದ್ದು, ಆವಾಗ ನನ್ಗೆ ತುಂಬ ಆಶ್ಚರ್ಯ ಆಯ್ತು. ಆಶ್ಚರ್ಯ ಯಾಕಂದ್ರೆ ನಾನು, ಆವಾಗ ನಾನು ಉತ್ತರಕನ್ನಡದಿಂದ ಬಂದವ್ನು, ಅವ್ರೂ ಉತ್ತರಕನ್ನಡದವ್ರು, ಆವಾಗ ನನ್ನ ಸುತ್ತಲಿನ ಪರಿಸರ ಇಷ್ಟು ಚೆನ್ನಾಗಿ, ಇಷ್ಟು ಬೇರೆಯಾಗಿ ಅವ್ರ ಕತೆಗಳಲ್ಲಿ ಕಾಣಿಸ್ತಾ ಇರ್ಬೇಕಾದ್ರೆ, ಏನು ಅದನ್ನ ಅವರು ನೋಡಿರುವ ರೀತಿಯಲ್ಲಿ ಏನು ಭಿನ್ನತೆ ಇದೆ ಅಂತ ಅನಿಸ್ತು ನನಗೆ. ನನಗೆ ಮೊಟ್ಟ ಮೊದಲ್ನೆ ಸಲ ಈ ನನ್ನೊಳಗೂ ಇನ್ನೊಂದು ಉತ್ತರ ಕನ್ನಡ ಇದೆ, ನನ್ನೊಳಗೂ... ನಾವು ಒಂದೇ ನೆಲವನ್ನ ಹಂಚಿಕೊಂಡಿದ್ರು, ಒಂದೇ ಊರಲ್ಲಿ ನಾವು ಬೆಳೆದಿದ್ರು ನನಗೆ ನಾನು ಕಾಣುವ ಜಗತ್ತು ಬೇರೆ, ಅವ್ರು ಕಾಣುವ ಜಗತ್ತು ಬೇರೆ ಅಂತನ್ನುವಂಥ ಒಂದು... ಅನ್ನೋದು ನನ್ಗೆ ಹೊಳೀತು ಆವಾಗ. ಅದ್ರಿಂದಾಗಿ ನನಗೆ ಹೆಚ್ಚು ಸ್ಫೂರ್ತಿ ಬಂತು ಅಂತ ನಾನು ಹೇಳ್ಬಹುದು. ಅಂದ್ರೆ, ಈ ತರದ, ಅದ್ರಲ್ಲು ಅವರ ಸಂದರ್ಶನ, ಅಬೋಲಿನ್, ಆ ಕತೆಗಳನ್ನ ಓದ್ದಾಗ ನಮ್ಮ ಸುತ್ತಮುತ್ತಲಿನ ಜಗತ್ತು, ಸುತ್ತಮುತ್ತಲಿನ ಕಥೆಗಳು, ಅವುಗಳನ್ನೆ ಕಥೆಯಾಗಿ ನಾನು ಕೂಡ ಹೇಳಬಲ್ಲೆ ಮತ್ತು ಭಿನ್ನವಾಗಿ ಹೇಳಬಲ್ಲೆ ಅಂತ ನನಗೆ ಅನಿಸ್ತು.

ಆಮೇಲೆ ಅವರ ಪ್ರಭಾವದ ಬಗ್ಗೆ ಹೇಳ್ಬೇಕಂದ್ರೆ, ಮೊದ್ಲು ಅದ್ರಿಂದ ನಾನು ತುಂಬ ಪ್ರಜ್ಞಾಪೂರ್ವಕವಾಗಿ ತಪ್ಪಿಸ್ಕೊಂಡೆ. ಅದೂ ನನ್ನ ಮೊದಮೊದಲು ಕೆಲವು ಕತೆಗಳಲ್ಲಿ. ಯಾಕಂದ್ರೆ ಅದು ನನಗೆ, ನಾನು ಉತ್ತರಕನ್ನಡದ ಬಗ್ಗೆ ಬರೀಲಿಕ್ಕೆ ಸುರು ಮಾಡ್ದಾಗ ಅವ್ರು ಉತ್ತರಕನ್ನಡದವ್ರಾಗಿರೋದ್ರಿಂದ ಮತ್ತು ಆಗಲೇ ಅಂದ್ರೆ ನಾನು ಬರೆಯೋ ಹೊತ್ತಿಗಾವಾಗ್ಲೇ ಅವ್ರು ಪ್ರಸಿದ್ಧ ಲೇಖಕರು ಆಗಿದ್ರಿಂದ, ಅವ್ರ ಬರವಣಿಗೆ ಬಗ್ಗೆ, ಅವರು ಉಪಯೋಗಿಸೋ ಕೆಲವು ನುಡಿಗಟ್ಟುಗಳ ಬಗ್ಗೆ, ಅವರು ಉಪಯೋಗಿಸುವ ಕೆಲವು ಶಬ್ದಗಳ ಬಗ್ಗೆ, ಅವೆಲ್ಲವೂ ಜನ್ರಿಗೆ ಅವಾಗ್ಲೇ ಗೊತ್ತಿತ್ತು. ಆಮೇಲೆ ಉತ್ತರಕನ್ನಡ ಅಂದ್ರೆ ಚಿತ್ತಾಲರ ಉತ್ತರಕನ್ನಡ ಅನ್ನೋದು ಮಾತ್ರ ಜನರ ಮನಸ್ಸಲ್ಲಿತ್ತು. ಹಾಗಾಗಿ ನಾನು ಅದನ್ನ ಪ್ರಜ್ಞಾಪೂರ್ವಕವಾಗಿ ಕೆಲವು ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಲಿಲ್ಲ. ಯಾಕಂದ್ರೆ ನನಗೆ ಅವ್ರಿಗಿಂತ ನನ್ನದು ಬೇರೆ ಉತ್ತರಕನ್ನಡ, ನಾನು ನೋಡಿದ ಉತ್ತರಕನ್ನಡ ಬೇರೆ, ನನ್ನ, ನಾನು ನೋಡಿದ ಜಗತ್ತು ಬೇರೆ ಅನ್ನೊದನ್ನ ನನಗೆ ಹೇಳ್ಬೇಕಿತ್ತು. ಆ ಅದೇ ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಿದ್ರೆ, ಜನ ಅದನ್ನ, ಅಥವಾ ಓದುಗರಿಗೆ ಅದು, ಬೇರೆಯಾಗಿ ಅನಿಸದೇ ಹೋಗಬಹುದು. ಭಿನ್ನವಾದ ಒಂದು ಕತೆಯನ್ನ ನಿಮಗೆ ಹೇಳ್ಬೇಕಾದ್ರೆ, ಬೇರೆ ರೀತಿಯಲ್ಲಿ ನಿಮಗೆ ಹೇಳ್ಬೇಕಾದ್ರೆ ಅದಕ್ಕೆ ಬೇರೆದೇ ಒಂದು ಭಾಷೆ ಬೇಕು. ಅಂದ್ರೆ ಕೆಲವನ್ನು ನೀವು ಎತ್ತರದ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ, ಕೆಲವನ್ನ ನೀವು ಕಡಿಮೆ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ. ಕೆಲವನ್ನ ಹೇಳ್ದೇ ಇರ್ಬೇಕಾಗುತ್ತೆ. ಸೊ, ಈ ಎಲ್ಲ ಕೌಶಲ್ಯಗಳೇನಿದಾವೆ, ಅದನ್ನೆಲ್ಲ ನಾನು ಬರಬರುತ್ತ ರೂಢಿಸಿಕೊಂಡೆ. ಆದ್ರೆ, ನಾನು ಪ್ರಜ್ಞಾಪೂರ್ವಕವಾಗಿ ಮಾಡಿದ್ದೆಂದ್ರೆ, ಚಿತ್ತಾಲರಿಗೇ ವಿಶಿಷ್ಟವಾದ ಕೆಲವನ್ನ ಪ್ರಜ್ಞಾಪೂರ್ವಕವಾಗಿ ಉಪಯೋಗಿಸದೇ ಬಿಟ್ಟೆ.

ಒಂದು ರೀತಿ ನೋಡಿದರೆ ಒಂದು ಸಂಕಲನದಿಂದ ಇನ್ನೊಂದಕ್ಕೆ ಹೋಗುವಾಗ ನೀವು ಮಹತ್ವದ ಬದಲಾವಣೆಗಳನ್ನು, ಬೆಳವಣಿಗೆಯನ್ನು ದಾಖಲಿಸುತ್ತ ಬಂದವರು. ಅಂದರೆ ಪ್ರತಿ ಮೂರನೆಯ ಸಂಕಲನದಲ್ಲಿ ಮೊದಲ ಎರಡರ ಸಮನ್ವಯತೆ, ಹಿಂದಿನದ್ದರ ಅತಿಗಳಿಂದ ಮುಕ್ತಿ ಎದ್ದು ಕಾಣುತ್ತದೆ. ಅಂಕುರದ ಕಾಮ ಮುಂದೆ ತನ್ನ ಜಾಗ ಕಂಡುಕೊಂಡ ಹಾಗೇ, ಲಂಗರುವಿನಲ್ಲಿ ಮನುಷ್ಯ ಸಂಬಂಧಗಳ ತಲ್ಲಣಗಳ ಕುರಿತಾದ ಶೋಧ ನಡೀತು. ಹುಲಿಸವಾರಿ ಸಂಕಲನಕ್ಕೆ ಬರುವ ಹೊತ್ತಿಗೆ ತಮ್ಮ ಕಥಾಲೋಕದ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿದ್ದಂತೆ, ಮನುಷ್ಯ ಸಂಬಂಧಗಳ ಒಂದು ಭಾವನಾತ್ಮಕ ಜಗತ್ತಿನಿಂದ ತಾವು ಕಾರ್ಪೋರೇಟ್ ಜಗತ್ತು ಅವನ ಭಾವವಲಯವನ್ನು ಅತಿಕ್ರಮಿಸುತ್ತಿರುವುದರ ಬಗ್ಗೆ ಆಸಕ್ತರಾದ ಹಾಗೆ ಕಾಣಿಸುತ್ತದೆ. ಬಗೆಯ ಬದಲಾವಣೆಗೆ ಕಾಲಘಟ್ಟದ ಸ್ಥಿತ್ಯಂತರಗಳು ಕಾರಣವೇ ಅಥವಾ ಸಾಹಿತ್ಯ ಸಮಕಾಲೀನವಾಗಿರಬೇಕೆಂದು ತಮಗೆ ಅನಿಸಿತ್ತೇ? ಯಾಕೆಂದರೆ ಮುಂದೆ ನೀವು ಸಾಧಿಸಿದ ಸಮನ್ವಯತೆಯ ದೃಷ್ಟಿಯಿಂದ, ಮತ್ತೊಬ್ಬನ ಸಂಸಾರ ಗಮನಿಸಿದರೆ ತಿಳಿಯುವ ಹಾಗೆ, ಇದು ಬಹಳ ಮುಖ್ಯವಾದ ಬೆಳವಣಿಗೆ ಅಂತ ಅನಿಸುತ್ತದೆ. ಇದನ್ನು ಸ್ವಲ್ಪ ವಿಶ್ಲೇಷಿಸಬಹುದೆ?

ಅಂದ್ರೆ ಈ ಸಮಕಾಲೀನತೆ ಅನ್ನೋದು ಅದು, ವಸ್ತುವಿನ ಸಮಕಾಲೀನತೆ ಬೇರೆ, ಸಾಹಿತ್ಯದ ಸಮಕಾಲೀನತೆ ಬೇರೆ. ನಾವು ಬರೀಬೇಕಾದ್ರೆ ಪ್ರತಿಯೊಂದು, ಇವತ್ತು ಸೃಷ್ಟಿಯಾದ ಎಲ್ಲಾ ಸಾಹಿತ್ಯವೂ ಸಮಕಾಲೀನವೇ. ಯಾಕಂದ್ರೆ ಬರೆಯುವ ಲೇಖಕನಿಗೆ ಅವನ ಸುತ್ತ ಮುತ್ತಲು ನಡೀತಾ ಇರುವ ವಿದ್ಯಮಾನಗಳು, ಅಲ್ಲಿ ನಡೀತಾ ಇರುವ ಸ್ಥಿತ್ಯಂತರಗಳು, ಅವೆಲ್ಲವೂ ಅವನ ಮೇಲೆ ಪರಿಣಾಮ ಮಾಡೇ ಮಾಡುತ್ತೆ. ಈಗ ರಾಮಾಯಣ ಬರೆದ್ರು ಅದು ಸಮಕಾಲೀನ ಅಂತ್ಲೆ ನಾನು ತಿಳಕೊಂಡಿದೇನೆ. ಯಾಕಂದ್ರೆ ಅದು ವಸ್ತು ಎಷ್ಟೇ ಹಳೇದಿರ್ಬೋದು ಅಥವಾ ವಸ್ತು ಒಂದು ಐತಿಹಾಸಿಕ ಕಾದಂಬರಿಗೆ ಒಂದು ಐನೂರು ವರ್ಷ ಹಳೇದಿರ್ಬೋದು. ಆದ್ರೆ ಇವತ್ತು ಬರೆದಾಗ ಯಾವ್ದನ್ನ ನಾವು ಹೇಳ್ತೀವಿ-ಹೇಳೋದಿಲ್ಲ ಅನ್ನೋದಿದ್ಯಲ್ಲ; ಆಮೇಲೆ, ಯಾವ ರೀತಿಯಿಂದ ಅದನ್ನ ಹೇಳ್ತೀವಿ, ಯಾವುದರ ಮೇಲೆ ಹೆಚ್ಚು ಒತ್ತು ಕೊಡ್ತೀವಿ ಅನ್ನೋದು ನಮ್ಮ ಸುತ್ತಲಿನ ಸ್ಥಿತ್ಯಂತರಗಳಿಂದ, ಸುತ್ತಲಿನ ಸಮಕಾಲೀನ ಘಟನೆಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತೆ. ಅಂದ್ರೆ ಒಬ್ಬ ಲೇಖಕನಿಗೆ ತನ್ನ ಕಾಲವನ್ನ ಬಿಟ್ಟು ಬರೀಲಿಕ್ಕೇ ಶಕ್ಯ ಇಲ್ಲ. ಹಂಗಾಗಿ ಎಲ್ಲವೂ ಸಮಕಾಲೀನ ಅಂತ್ಲೇ ನನ್ನ ಅನಿಸಿಕೆ. ವಸ್ತುಗಳು ಬೇರೆ ಬೇರೆ ಕಾಲಘಟ್ಟದಲ್ಲಿರಬಹುದು. ಕೆಲವು ಒಂದು ನೂರು ವರ್ಷ ಹಳೇದಿರ್ಬೋದು, ಕೆಲವು ಐವತ್ತು ವರ್ಷ ಹಳೇದಿರ್ಬೋದು. ಅದು ಒಂದು, ಯಾವುದನ್ನ ಲೇಖಕ ಹೆಚ್ಚು ಪರಿಣಾಮಕಾರಿಯಾಗಿ ಹೇಳಲಿಕ್ಕೆ ಸಾಧ್ಯ ಅನ್ನೋದರ ಮೇಲಿಂದ ಆಯ್ದುಕೊಂಡಂಥ ಒಂದು, ಅದೊಂದು ಅವನ ಆಯ್ಕೆ ಅದು. ಹೊರತು ಅವನ ಸೆನ್ಸಿಬಿಲಿಟಿಯೇನಿದೆ, ಅದು ಸಮಕಾಲೀನವೇ ಮತ್ತು ಇವತ್ತಿಂದೇ ಅಂತ ನನಗನಿಸುತ್ತೆ. ಹಾಗಾಗಿ ನನ್ನ ಎಲ್ಲ ಕತೆಗಳಲ್ಲೂ ನಾನು ಬರೆದಾಗ ನಾನು ಆಯಾ ಸಮಕಾಲೀನತೆಗೆ ಸ್ಪಂದಿಸುತ್ತಾ ಇದ್ದೇನೆ ಅಂತ್ಲೆ ನಾನು ತಿಳ್ಕೊಂಡು ಬರೆದಿದ್ದೇನೆ. ಅದ್ಕೇನೆ ಕೆಲವು ವಸ್ತುಗಳ ಆಯ್ಕೆಯಲ್ಲಿ ಯಾಕೆ ನಾವು ಎಲ್ಲವನ್ನೂ ಹೇಳುವುದಿಲ್ಲ ಅಥವಾ ಯಾಕೆ ನಾವು ಕೆಲವನ್ನ ಬಿಡ್ತೀವಿ ಅನ್ನೋದು ಒಬ್ಬ ಲೇಖಕನಿಗೆ ಇದು ಸಮಕಾಲೀನ ಅಲ್ಲ ಅಂತ ಅನಿಸ್ತಾ ಇರುತ್ತೆ. ಅಂದ್ರೆ, ಇವತ್ತಿನ ಕಾಲಕ್ಕೆ ಈ ಕತೇನ, ಈ ವಸ್ತುವನ್ನ ಎತ್ತಿಕೊಳ್ಳೋದು ಪ್ರಸ್ತುತವಲ್ಲ ಅಂತ ಅನ್ಸುತ್ತೆ. ಆದ್ರಿಂದ ಅವನದನ್ನ ಬಿಡ್ತಾನೆ. ಹಾಗಾಗಿ ಅವನ ಆಯ್ಕೆ ಏನಿದೆ, ಅದು ಎಲ್ಲವೂ ಸಮಕಾಲೀನವೇ.

ನಿಲುಕು, ಇನ್ನೂಒಂದು, ಮತ್ತೊಬ್ಬನ ಸಂಸಾರ ಮತ್ತು ಥೂ ಕೃಷ್ಣ ಕಥೆಗಳಲ್ಲಿ ವಿಶಿಷ್ಟವಾದ ಒಂದು ಶೋಧವಿದೆ. ಪರಸ್ಪರ ಸಂಬಂಧವಿಲ್ಲವೆಂದು ನಾವು ಮೇಲ್ನೋಟಕ್ಕೆ ಗ್ರಹಿಸುವ ಅನೇಕ ಸಂಬಂಧಗಳಲ್ಲಿ, ಘಟನೆಗಳಲ್ಲಿ, ವ್ಯಕ್ತಿಗಳ ನಡುವೆ ಸುಪ್ತವಾದ-ಗುಪ್ತವಾದ ಏನೋ ಒಂದು ತಂತು ಕೆಲಸ ಮಾಡುತ್ತಿರಬಹುದೆ ಎಂಬ ಅನುಮಾನವೆ ಶೋಧವಾಗಿ ವಿಸ್ತರಿಸಿದಂಥ ಕಥಾನಕಗಳು ಇವು. ನಿಮ್ಮ ಒಟ್ಟಾರೆ ಕತೆಗಳಿಂದ ಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುವಂಥವು. ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಬಹುದೆ?

ಇದನ್ನ ಹೇಳೋದು ಕಷ್ಟ. ಯಾಕಂದ್ರೆ, ಇದನ್ನ ನಾನು ತುಂಬ, ಈ ತರದ್ದ, ಈ ತರದ ಕೆಲವು ಕತೆಗಳಿದ್ದಾವೆ. ಈಗ ನೀವು ಹೇಳಿದ ಉದಾಹರಣೆಗಳನ್ನೆಲ್ಲ ನಾನು ಒಪ್ತೇನೆ. ಆದ್ರೆ, ಇದನ್ನ ನಾನು... ಈಗ ನೀವು ಮುಂದೆ ಇದಕ್ಕಿನ್ನು ಜೋಡಣೆಯಾಗುವಂತೆ ಬರೀತೇನೆ ಅಂತ ಹೇಳೋದಿಕ್ಕು ನನಗೆ ಸಾಧ್ಯವಿಲ್ಲ. ಆದ್ರೆ ಯಾವಾಗ್ಲು ನನಗೆ, ಈ ನೀವು ಕೆಲವು ಉದಾಹರಣೆಗಳನ್ನ ಕೊಟ್ರಿ, ಅದು ಒಂದು ಅವ್ಯಕ್ತಕ್ಕೆ, ಏನೋ ಒಂದನ್ನ ಮುಟ್ಲಿಕ್ಕೆ, ಅಥವಾ ಅವ್ಯಕ್ತದ ಜೊತೆಗೆ ಏನೋ ಒಂದು ಸಂಬಂಧ ಕಲ್ಪಿಸುವುದು ಏನಿದೆ, ಅದು ಯಾವಾಗ್ಲು ನನಗೊಂದು ಸ್ವಲ್ಪ, ತುಂಬಾ ಒಂದು ಆಸಕ್ತಿಕರವಾಗಿ ಕಾಣುವಂಥ ಕ್ಷೇತ್ರ ನನಗದು. ಯಾಕಂದ್ರೆ, ಕಣ್ಣಿಗೆ ಕಾಣಿಸದೇ ಇರುವಂಥದು, obviously ಯಾವ್ದು ಇಲ್ವೋ, ಅದು ಯಾವಾಗ್ಲೂ ತುಂಬ ನನಗೆ ಕುತೂಹಲದ ವಿಷ್ಯ. ಅಲ್ಲೇನೋ ಆಗ್ತಾ ಇದೆ, ಅದೇನೋ ಆಗ್ತಾ ಇದೆ...ಅಂತ. ಆಮೇಲೆ ಅಲ್ಲಿ ಏನೋ ಆಗ್ತಾ ಇರೋದು ಇದ್ಯಲ್ಲ, ಅದನ್ನ ನಮಗೆ ನಮ್ಮ ಐಂದ್ರಿಕ ಜಗತ್ತನ್ನ ಬಿಟ್ರೆ ಬೇರೆ ಯಾವ ರೀತಿಯಿಂದ್ಲೂ ನಮಗೆ ಅದನ್ನ ಮುಟ್ಲಿಕ್ಕೆ ಸಾಧ್ಯ ಇಲ್ಲ. ಆದ್ರಿಂದ ನನ್ನ ಕತೆಗಳಲ್ಲು ಅಷ್ಟೆ, ನಾನು ಐಂದ್ರಿಕ ಜಗತ್ತಿಂದ್ಲೇ ಅದನ್ನ ಗ್ರಹಿಸ್ಲಿಕ್ಕೆ ನಾನು ಪ್ರಯತ್ನ ಪಟ್ಟಿದೀನಿ. ಕೆಲವು ಕತೆಗಳಿಗೆ ಕೆಲವು ತಂತ್ರಗಳಿದ್ದಾವೆ. ಉದಾಹರಣೆಗೆ ನೀವು, ಫ್ಯಾಂಟಸಿಯನ್ನ ತುಂಬಾ ಜನ ಉಪಯೋಗಿಸ್ತಾರೆ, ಕೆಲವು ರೀತಿಯ ಕೆಲವು ಸಂಗತಿಗಳನ್ನ ಹೇಳ್ಲಿಕ್ಕೆ. ಆಮೇಲೆ ಜಗತ್ತಿನ ಸಾಹಿತ್ಯದಲ್ಲು ಎಷ್ಟೋ ದೊಡ್ಡ ದೊಡ್ಡ ಉದಾಹರಣೆಗಳು ಇದ್ದಾವೆ. Metamorphisis, for example, ಭಾಳ ಒಂದು ದೊಡ್ಡ ಕತೆ. ಆದ್ರೆ ನನ್ನ ರೀತಿಯ ಬರವಣಿಗೆಗೆ ನಾನು ಈ ಫ್ಯಾಂಟಸಿ ಅಥವಾ ಆ ತರದ ಒಂದು ತಂತ್ರಗಳನ್ನ ಉಪಯೋಗಿಸೋದು ನನಗೆ, ನಾನು ಇದುವರೆಗು ಉಪಯೋಗಿಸಿಲ್ಲ. ಉಪಯೋಗಿಸಲಾರೆ ಅಂತಲ್ಲ, ಅದನ್ನು ಉಪಯೋಗಿಸುವುದಿಲ್ಲ ಅಂತಲ್ಲ ನಾನು ಹೇಳಿದ್ದು. ಆದ್ರೆ ನನ್ನ ವಿಧಾನ ನಾನು ನನಗೆ ಗೊತ್ತಿರೋ ಸಂಗತಿಗಳ ಮೂಲಕ ಅವ್ಯಕ್ತವನ್ನ ಮುಟ್ಲಿಕ್ಕೆ ಸಾಧ್ಯವಾ ಅಂತ ಒಂದು ಪರಿಶೀಲನೆ ಇದ್ಯಲ್ಲ, ಅದು ನನಗೆ ಯಾವಾಗ್ಲೂ ತುಂಬ ಆಸಕ್ತಿಕರವಾಗಿ ಕಂಡಿದೆ, as a writer. ನನಗೆ ಯಾವಾಗ್ಲೂ ಅದು excite ಮಾಡುತ್ತೆ.

ನಿಮ್ಮ ಕತೆಗಳಲ್ಲಿ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳ ಬಗ್ಗೆ ತುಂಬ ಕುತೂಹಲಕರ ಅನಿಸುವಂಥ ಕೆಲವು ಸಂಗತಿಗಳಿವೆ. ಸ್ತ್ರೀ ಪಾತ್ರಗಳು ವಿಶಿಷ್ಟವಾದವು. ಅದು ಪ್ರೇಮಕ್ಕ(ಪರಸ್ಪರ, ನಿಲುಕು) ಇರಲಿ, ಸರೋಜಿನಿ (ಸುಧೀರನ ತಾಯಿ)ಯಿರಲಿ, ಮುಕ್ತಾ(ಕಾರಣ) ಅಥವಾ ಗೋದಾವರಿ,ಪಂಡರಿ, ಯಮುನೆ, ಕಾವೇರಿ(ಒಂದು ಬದಿ ಕಡಲು) ಯಾರೇ ಇರಲಿ, ಅವರಲ್ಲಿ ವಿಶಿಷ್ಟವಾದ ಒಂದು ತೇಜಸ್ಸಿದೆ. ಕಾರಂತರ ಕಾದಂಬರಿಗಳಲ್ಲಿ ಕಾಣುವಂಥ ಒಂದು ಕೆಚ್ಚು, ಏಕಾಂಗಿಯಾಗಿಯೂ ಬದುಕನ್ನು ಎದುರಿಸಬಲ್ಲ ಮನಸ್ಥಿತಿ ಅವರ ವ್ಯಕ್ತಿತ್ವದಲ್ಲಿ ಸಹಜವಾಗಿಯೇ ಎಂಬಂತೆ ಇದೆ. ವೈವಾಹಿಕ ಬದುಕಿನ ವೈಫಲ್ಯವೋ, ಮದುವೆಯೇ ಇಲ್ಲದೆ ಕಳೆಯಬೇಕಾಗಿ ಬಂದುದೋ, ಸಾಂಸಾರಿಕ ಬದುಕಿಗೆ ಎಲ್ಲೋ ಹೇಗೋ ಎರವಾದ ನೋವೋ ಇವರ ಬದುಕನ್ನು ಆವರಿಸಿದಾಗ್ಯೂ ಇವರು ಅಂಥ ಬದುಕನ್ನು ಜೀವನ್ಮುಖಿಯಾಗಿ, ವಿಶಿಷ್ಟ ಚೈತನ್ಯದಿಂದ ಎದುರಾಗುತ್ತಾರೆ. ಇದು ನೀವು ನೋಡಿದ ನಿಮ್ಮ ಉತ್ತರಕನ್ನಡದ ಪರಿಸರದ ಕೊಡುಗೆ ಅನಿಸುತ್ತದೆಯೇ ಅಥವಾ ತಾಂತ್ರಿಕ ನೆಲೆಗಟ್ಟಿನಲ್ಲಿ ನೀವು ಇಂಥ ಪಾತ್ರಗಳನ್ನ ಸೃಷ್ಟಿಸಿದ್ದೀರ?

ನಾನು ಬೆಳೆದು ಬಂದಾಗ, ತುಂಬ ಕಾಲ ನಾನು ಅಡಿಗೆ ಮನೇಲಿ ಕಳೆದಿದೀನಿ. ನನಗೆ ತುಂಬ ಇಷ್ಟ. ಅಂದ್ರೆ, ನಿಮಗಿನ್ನು ಬಹುಷಃ ಗೊತ್ತಿಲ್ಲದಿರೋ ವಿಷ್ಯ ಏನಂದ್ರೆ ನಾನು ತುಂಬ ಚೆನ್ನಾಗಿ ಅಡುಗೆ ಮಾಡ್ತೇನೆ. ನನಗದರಲ್ಲಿ ತುಂಬ ಆಸಕ್ತಿ. ನನಗೆ ಭಾಳ ಒಂದು ಆಸಕ್ತಿಯ ವಿಷಯ ಅದು. ನಾನು ಬೇರೆ ಊರಿಗೆ, ಬೇರೆ ದೇಶಕ್ಕೆ ಹೋದ್ರೆ ನಾನು ಅಲ್ಲಿಯ ಕಿರಾಣಿ ಅಂಗಡಿಗೆ ಹೋಗಿ, ಅಲ್ಲಿಯ ಸಾಮಾನು ತಂದು, ಅಲ್ಲಿ ಅಡಿಗೆ ಮಾಡಿ, ತುಂಬ...ನನಗದರಲ್ಲಿ ಭಾಳ ಒಂದು ಆಸಕ್ತಿಯ ಕ್ಷೇತ್ರ ಅದು ನಂದು. ಮತ್ತೆ ನಾನು ಚಿಕ್ಕಂದಿನಿಂದ ನಾನು ತುಂಬ ಈ ಹೆಂಗಸರ ಮಧ್ಯೆ ಬೆಳೆದವನು. ನನ್ಗೆ ನೂರಾರು ಕತೆಗಳಿದಾವೆ ಅವರ ಜೊತೆ ಮಾಡೋದಿಕ್ಕೆ, ಹೇಳೋದಿಕ್ಕೆ. ಆಮೇಲೆ ತುಂಬ ನನಗದು, ಭಾಳ ಒಂದು fascinating ಆಗಿತ್ತದು. ಯಾಕೆ ಅಂದ್ರೆ, ತುಂಬ ಕಾರಣಗಳಿವೆ ಅಲ್ಲಿ. ಒಂದು, ನಾನು ತುಂಬ ಬಡತನದಲ್ಲಿದ್ದ, ಕಷ್ಟದಲ್ಲಿದ್ದ ಹೆಂಗಸರನ್ನು ನೋಡಿದ್ದೇನೆ. ಆಮೇಲೆ ಅವ್ರು, ಯಾವ್ದೇ ಒಂದು, ಅಂದ್ರೆ...ಆದ್ರೂ ಅವ್ರು ಅಂಥ ಕಷ್ಟದಲ್ಲು ಅವ್ರು ಒಂದು ಕುಟುಂಬಕ್ಕೆ ಅಡಿಗೆ ಮಾಡಿ ಹಾಕ್ತಾ ಇದ್ರು...ಯಾಕಂದ್ರೆ ಅವ್ರಿಗೊಂದು ಅದು ಸಲಹುವ ಗುಣ ಇತ್ತು. ಸೊ, ಅದು ನನ್ಮೇಲೆ ಭಾಳ ಪರಿಣಾಮ ಮಾಡಿದೆ. ಅಂಥ ತುಂಬ ಜನ ಹೆಂಗಸ್ರನ್ನ ನಾನು ನೋಡಿದೇನೆ. ಆಮೇಲೆ ನನ್ನ ಸಂಬಂಧಿ ಒಬ್ರು ಹೆಂಗಸಿದ್ರು. ಅವ್ರು ಯಾವಾಗ್ಲು, ನಾವವ್ರಿಗೆ ಭಾಳ ಕತೆ ಹೇಳಿ ಅಂತ ನಾನು ತುಂಬ ಅವ್ರನ್ನ ಪೀಡಿಸ್ತಾ ಇದ್ದೆ. ಆದ್ರೆ ಅವ್ರು ಒಂದೇ ಕತೆ ಹೇಳ್ತ ಇದ್ರು ಯಾವಾಗ್ಲು. ಅದನ್ನ ಇದು ನಾನು ಎಲ್ಲೋ ಬೇರೆ ಕಡೆ ಮಾತನಾಡಿದ್ದೇನೆ ಇದ್ರ ಬಗ್ಗೆ, ಅವ್ರು ಒಂದೇ ಕತೆಯನ್ನ , ಅವ್ರು ನೆರಳಿನ ಕಳ್ಳ ಅಂತ ಒಂದು ಕತೆಯನ್ನ ಹೇಳ್ತಾ ಇದ್ರು ನಮಗೆ ಅವ್ರು. ಆ ಕತೆಯನ್ನ ಹತ್ತು ಸರ್ತಿ ನೂರು ಸರ್ತಿ ಸಾವಿರ ಸರ್ತಿ ನಾನದನ್ನ ಕೇಳಿರ್ಬೋದು. ಕೇಳಿದಾಗ್ಲೆಲ್ಲ ಅವ್ರು ಅದೇ ಕತೇನ ಹೇಳ್ತಾ ಇದ್ರು. ಆದ್ರೆ, ಅವ್ರದ್ದು ಏನು ವಿಶೇಷ ಅಂದ್ರೆ, ಪ್ರತೀ ಸಲಾನು ಅವ್ರದನ್ನ ಬೇರೆ ತರ ಹೇಳ್ತಿದ್ರವ್ರು. ಅಂದ್ರೆ ಕತೆ ಅದೇನೆ, ಆದ್ರೆ ನಾನು ಅವ್ರು ಕೊಟ್ಟಿಗೇಲಿದ್ರೆ, ಅವ್ರ ಆ ಕತೆ ಕೊಟ್ಟಿಗೆಯಿಂದ್ಲೇ ಸುರುವಾಗ್ತಿತ್ತು. ಅಂದ್ರೆ ಅವ್ರಲ್ಲಿ ಅವ್ರೇನೋ ಮಾಡ್ತಿದ್ರು, ಅವ್ರಮ್ಮ ಬಂದಿದ್ರು... ಅವ್ರು ಅಡಿಗೆ ಮನೇಲಿದ್ರೆ, ಆ ಕತೆ, ಆ ಕಳ್ಳ ಏನಿದಾನೆ ಅವ್ನು ಆ ಅಡಿಗೆ ಮನೇಲೆ ತಿಂಡಿ ತಿನ್ತಾ ಇರ್ತಿದ್ದ, ಅಲ್ಲಿಂದ ಸುರುವಾಗ್ತಿತ್ತು. ಹೀಗೆ ಅವ್ರು ಪ್ರತಿಯೊಂದು, ಅವ್ರು ಎಲ್ಲಿ ಯಾವ ಜಾಗದಲ್ಲಿರ್ತಿದ್ರೋ ಅಲ್ಲಿಂದ ಆ ಕತೆ ಸುರು ಮಾಡಿ, ಆವತ್ತಿನ ದಿನಕ್ಕೆ ಅದನ್ನ ಹೊಂದಿಸಿ ಒಟ್ಟಲ್ಲಿ ಆ ಒಂದು way of ಅವ್ರದ್ದೊಂದು ಆ ಕತೆಯನ್ನು ಹೇಳೊದಿದ್ಯಲ್ಲ, ಅದು ನನ್ನ ಮೇಲೆ ಭಾಳ ಪರಿಣಾಮ ಮಾಡಿದೆ. ಕಥನ ಕ್ರಮಕ್ಕೆ ಭಾಳ ಒಂದು ಒಳ್ಳೆಯ ಉದಾಹರಣೆ ಅಂತ ನನಗನಿಸುತ್ತೆ. ಆಮೇಲೆ ಅಷ್ಟಲ್ದೆ ಅವ್ರಿಗೆ ಊಟಕ್ಕೆಲ್ಲ ಆವಾಗ ತುಂಬ ಕಷ್ಟ ಇತ್ತು. ತುಂಬ ಬಡತನದಲ್ಲಿ ಇದ್ದವ್ರು ಅವರು. ಅವರ ಮನೆಗೆ ಬರೇ ಅಕ್ಕಿ ಮಾತ್ರ ಬರ್ತಿತ್ತು. ಸೊ, ಹಂಗಾಗಿ ಅವ್ರು ಅಕ್ಕಿಯ ನಾನಾ ರೀತಿಯ ಖಾದ್ಯಗಳನ್ನ ಮಾಡ್ತಿದ್ರು. ಅಂದ್ರೆ ಹೆಂಗೆ ಅವ್ರು ಒಂದೇ ಕತೇನ ನಾನಾ ರೀತಿಯಾಗಿ ಹೇಳ್ತಾ ಇದ್ರೊ, ಅದೇ ರೀತಿ ಅವ್ರು, ಬರೇ ಅಕ್ಕಿಯಿಂದ ಅವ್ರತ್ರ ನಾನು ಎಷ್ಟೊಂದು ರೀತಿಯ ಅಡುಗೆ ವಿಧಾನಗಳನ್ನ ಅಕ್ಕಿಯಿಂದ ಮಾಡುವ ನಾನಾ ರೀತಿಯ, ಬೆಳಿಗ್ಗೆಯಿಂದ ಸಂಜೆಯಿಂದ - ರಾತ್ರಿವರೆಗೂ ಯಾಕಂದ್ರೆ ಬೇರೆ ಏನೂ ಅವ್ರಿಗೆ income ಇರ್ಲಿಲ್ಲ, ಬೇರೆ ಏನೂ ಅವ್ರಿಗೆ ಆದಾಯ ಇರ್ಲಿಲ್ಲ. ಒಂದಷ್ಟು ಅಕ್ಕಿ ಬರ್ತಿತ್ತವ್ರಿಗೆ ಅಷ್ಟು ಬಿಟ್ರೆ. ಸೊ, ಈ ರೀತಿಯ ಪಾತ್ರಗಳು, ಇದು ನನಗೆ ನನ್ನ ಬಾಲ್ಯವನ್ನು ತುಂಬ ತುಂಬಿಕೊಂಡಿವೆ ಇವು. ಹಿಂಗಾಗಿ ಅದು ಸಹಜವಾಗಿ ಅದು ನನ್ನ ಕತೆ ಕಾದಂಬರಿಗಳಲ್ಲಿ ಬರುತ್ತೆ.

ಆಮೇಲೆ ಇದನ್ನ ನಾನು ಯಾವುದೇ ತಂತ್ರವಾಗಿ ಉಪಯೋಗಿಸ್ಲಿಲ್ಲ. ಅಂದ್ರೆ ನಾನು ಈ ಕಥನ ಕೌಶಲ್ಯ ಏನಿದೆ, ಈ craftsmenship ಏನಿದೆಯಲ್ಲ, ಅದು, ಒಂದು ಕತೆಯನ್ನ ಪರಿಣಾಮಕಾರಿಯಾಗಿ ಹೇಳ್ಲಿಕ್ಕೆ ತುಂಬ ಮಹತ್ವದ್ದದು. ಅಂದ್ರೆ ನೀವು ಒಂದು ಕುರ್ಚಿ ಮಾಡಿದ್ರೆ, ಅದಕ್ಕೆ ಮೊಳೆ ಹೊಡೆದ್ಹಾಂಗದು. ಆದ್ರೆ, ಆ ಮೊಳೆ ಕಾಣಿಸ್ಬಾರ್ದು, ಮತ್ತೆ ಚುಚ್ಬಾರ್ದು. ಹಂಗಿರ್ಬೇಕು ತಂತ್ರ. ಅದು, ತಂತ್ರ ನಿಮ್ ಕಣ್ಣಿಗೆ ಹೊಡೆದ್ರೆ, ಆಮೇಲೆ ಅದು bad carpentry ಅದು. ಅಂದ್ರೆ ನಿಮ್ಗೆ ಕತೆ ಹೇಳ್ಲಿಕ್ಕೆ ಬರೋದಿಲ್ಲ ಅಂತ ಅದರರ್ಥ. ಅಥವಾ ನೀವು ಪ್ರಯೋಗಕ್ಕಾಗಿ ಪ್ರಯೋಗಶೀಲತೆ ಮಾಡಿದ್ರೆ, ಏನು ಹೊಸದನ್ನು ಹೊಸಾ ರೀತಿ ಹೇಳ್ಬೇಕಂತ ಮಾಡಿದ್ರೆ, ಆವಾಗ್ಲೂ ಅದು ಕುರ್ಚಿಗೆ ಮೊಳೆ ಕಂಡ್ಹಾಂಗೇನೆ ಅದು. ಅದು ಇರ್ಬೇಕು, ಅದು ಅತ್ಯಗತ್ಯ, ಆದ್ರೆ ಅದು ಕಣ್ಣಿಗೆ ಕಾಣಿಸ್ಬಾರ್ದು, ಕೈಗೆ ತಾಗ್ಬಾರ್ದು. ಆ ತರ ತಂತ್ರ ಇರ್ಬೇಕು.

ನಿಮ್ಮ ಕತೆಗಳನ್ನು ಗಮನಿಸುವಾಗ ಇದೇ ರೀತಿ ಒಬ್ಬ ಪಬ್ಬನ ಪಾತ್ರ ಇರಬಹುದು, ಜನ್ನ ಇರಬಹುದು, ಕ್ರಮೇಣ ಅವನು ಬುಗುರಿಯಾಗ್ತಾನೆ, ಕ್ರಮೇಣ ಒಬ್ಬ ಉಪ್ಪ, ಒಬ್ಬ ಶರವಣ ಆಗ್ತಾನೆ ಅನಿಸ್ತದೆ. ಒಂದು ವ್ಯಕ್ತಿತ್ವ ಇದೆಯಲ್ಲ, ಒಂದು ರೀತಿಯಲ್ಲಿ ಅವನು ಅಸಹಾಯಕ, ಸ್ವಲ್ಪ ಮೂರ್ಖ, ಸ್ವಲ್ಪ ಮುಗ್ಧ, ಮತ್ತೆ ಸಮಾಜ ಅವನನ್ನು ಬಳಸಿಕೊಳ್ಳುತ್ತ ಇರುವಾಗ್ಲೂ ಅವನು ನಮಗೆ ಬೇರೆ ಇನ್ನೇನನ್ನೋ ತೋರಿಸ್ತಾ ಇರ್ತಾನೆ. ಪಾತ್ರ ಕೂಡ ನಿಮ್ಮ ಕತೆಯಿಂದ ಕತೆಗೆ ಬೆಳೀತಾ ಬಂದಿದೆ ಅನಿಸ್ತದೆ. ಇದನ್ನ ಸ್ವಲ್ಪ ವಿವರಿಸಬಹುದೆ?

ಅಂದ್ರೆ ಇದು, ಒಂದು ಕಥಾ ಪ್ರಪಂಚ ಇದ್ಯಲ್ಲ, ನನಗೆ ನನ್ನ ಎಲ್ಲ ಕತೆಗಳು, ಕಾದಂಬರಿಗಳು ಇದೆಲ್ಲ ಸೇರಿ ಒಂದು ಜಗತ್ತಿದೆ. ಆಮೇಲೆ ಅದು ಆ ಜಗತ್ತಿನಲ್ಲಿ ಇದೆಲ್ಲ, ಈ ಎಲ್ಲ ಪಾತ್ರಗಳು ಬೇರೆ ಬೇರೆ ರೀತಿಯಿಂದ ಆಗ್ತಾ ಇವೆ. ಇದು ನಾನು ಹೊಸ್ತಾಗಿ ಬರೀಲಿಕ್ಕೆ ಸುರು ಮಾಡಿದಾಗ ನನಗೆ ಈ ತರದ್ದೊಂದು ಇರ್ಲಿಲ್ಲ. ಅಥವಾ ನನಗದು ...ಒಂದೆರಡು ಕತೆ ಬರ್ದಾಗ ನನಗೇನನ್ಸಲ್ಲ. ಅಥವಾ ಐದು ಕತೆ ಬರ್ದಾಗ ನನಗೇನು ಅನ್ಸೋದಿಲ್ಲ. ಆದ್ರೆ, ನೀವು ಮತ್ತೆ ಬರವಣಿಗೆ ಮುಂದುವರಿಸ್ತ ಹೋದ್ಹಾಗೆ, ಕೆಲವು ಸಂಗತಿಗಳು ಮತ್ತೆ ಮತ್ತೆ ಅಥವಾ ಅದೇ ಪಾತ್ರಗಳು ನಿಮಗೆ ಹೊಸ ಅರ್ಥಗಳನ್ನ ಕೊಡ್ತವೆ. ಅಂದ್ರೆ ಉದಾಹರಣೆಗೆ, ಕೆಲವೀಗ ನೀವು ಪಾತ್ರಗಳ ಹೆಸರುಗಳನ್ನ ಹೇಳಿದ್ರಿ, ಅದು ಮೊದಲ ಕತೆಗಳಲ್ಲಿ ಮೊದಲ ಕೆಲವು ಕತೆಗಳಲ್ಲಿ ಅವುಗಳಿಗೆ ಇರುವ ವ್ಯಾಪ್ತಿಯೇನಿದೆ, ಆ ವ್ಯಕ್ತಿತ್ವಗಳ ವ್ಯಾಪ್ತಿ ಅಥವಾ ಆ ಪಾತ್ರಗಳ ವ್ಯಾಪ್ತಿ ಅದು ನಮಗೆ, ಇನ್ನೂ ನಮ್ಮ ಅನುಭವ, ಇನ್ನೂ ಹೆಚ್ಚಾಗ್ತ ಹೋದಂಗೆ ಅದ್ರ ವ್ಯಾಪ್ತೀನೂ ಹೆಚ್ಚೆಚ್ಚು ಆಗ್ತ ಹೋಗುತ್ತೆ. ಹಂಗಾಗಿ ಆ ಪಾತ್ರಗಳು ಬೇರೆ ಬೇರೆ ರೂಪದಲ್ಲಿ ಕಾಣಿಸೋ ಸಾಧ್ಯತೆ ಇದೆ ಮತ್ತದು ಸಾಮಾನ್ಯವಾಗಿ ನೀವು ಬೇರೆ ಕತೆಗಾರರಲ್ಲೂ ನೀವದನ್ನ ಕಾಣ್ತೀರಿ. ಅಂದ್ರೆ, ಒಂದೇ ರೀತಿಯ ಕಾಳಜಿ, ಒಂದೇ ರೀತಿ ಪಾತ್ರಗಳು, ಒಂದೇ ರೀತಿಯಂತಲ್ಲ ಅದು, ಒಂದೇ ಮೂಲದಿಂದ ಬಂದಂಥ ಕೆಲವು ಪಾತ್ರಗಳು ಮತ್ತು ಕೆಲವು ಕಾಳಜಿಗಳು ಮತ್ತೆ ಮತ್ತೆ... ಅದು ಲೇಖಕನಿಗೆ ತುಂಬಾ ಸಹಜ ಅಂತ್ಲೆ ನಾನು ತಿಳ್ಕೊಂಡಿದೀನಿ. ಯಾಕಂದ್ರೆ, ನಾನು ಮತ್ತೆ ಬೇರೆ ಬೇರೆ ಕಾಲಘಟ್ಟದಲ್ಲಿ ಅದನ್ನ ನೋಡ್ತ ಇದ್ದಂಗೆ, ಬೇರೆ ಬೇರೆ ವಿವರಗಳು ಅದಕ್ಕೆ ಸೇರಿಕೊಳ್ತವೆ, ಬೇರೆ ಬೇರೆ ಅರ್ಥಗಳದಕ್ಕೆ ಸೇರ್ಕೊಳ್ತವೆ. ನಾವು ನೋಡದೆ ಇರೋದು, ನಾವು ಆಗ ಅಮುಖ್ಯ ಅಂತ ತಿಳ್ಕೊಂಡಿದ್ದಂಥ, ಅದು ಈಗ ನಮಗೆ ಹೆಚ್ಚು ಮುಖ್ಯವಾಗಿ ಕಾಣ್ಸತ್ತೆ, ಪರಿಣಾಮಕಾರಿಯಾಗಿ ಕಾಣ್ಸತ್ತೆ, ನಾವ್ಯಾಕೆ ಅದನ್ನ ಅಷ್ಟು ಗಮನ ಇಟ್ಟು ನೋಡ್ಲಿಲ್ಲ ಆವಾಗ, ಇದಕ್ಕೆ ಬೇರೆ ಏನೋ ಅರ್ಥ ಇತ್ತಲ್ಲ ಅಂತ ನಮಗೆ ಈಗ ಅನ್ಸುತ್ತೆ. ಸೊ, ಅದು ಒಂದು ಕಥಾಪ್ರಪಂಚದಲ್ಲಿ, ಒಂದು ಕಥಾಲೋಕದಲ್ಲಿ ಇದು ಹೆಚ್ಚು ಸಹಜವಾದುದು ಅಂತ್ಲೆ ನಾನು ತಿಳ್ಕೊಂಡಿದೀನಿ.

ನಿಮ್ಮ ಒಂದು ಬದಿ ಕಡಲು ಕಾದಂಬರಿಯಲ್ಲಿ ಮೊದಲಿಗೆ ಒಂದು ಮಾತು ಹೇಳಿದ್ದೀರಿ, 'ಬರೆಯುವ ಹೊತ್ತಿಗೆ ಮಹತ್ವದ್ದೆಂದು ಅನಿಸಿದ ಹಲವು ಸಂಗತಿಗಳು ಕಾಲಾಂತರದಲ್ಲಿ ಅದೇ ತೀವೃತೆಯಲ್ಲಿ ಕಾಣಿಸದೇ ಇರುವುದರಿಂದ ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈಹಚ್ಚಲು ಅಳುಕಾಗುತ್ತದೆ' ಅಂತ. ನಿಮ್ಮ ಅಂಕುರದ ಕಥೆಗಳು ಕೂಡ ಇವತ್ತು ಮಸುಕಾಗಿವೆ ಅನಿಸದಿರುವ ಸಂದರ್ಭದಲ್ಲಿ ತಮಗೆ ಇಂಥ ಅನುಮಾನ ಯಾಕೆ ಕಾಡಿತು?

ನಾನು ಆ ಮಾತನ್ನು ಬರ್ದಿದ್ದು ಈ ಕಾದಂಬರಿಯ ಪರಿಷ್ಕರಣೆಯ ಬಗ್ಗೆ. ಅಂದ್ರೆ, ಈ ದೀರ್ಘ ಕಾದಂಬರಿಯನ್ನ ಬರ್ದು ಅದ್ಮೇಲೆ ಅದ್ರ ಒಳ್ಗಡೆ, ಅದು ತುಂಬ ಒಂದು ಸಂಕೀರ್ಣವಾದ ಒಂದು ಕಟ್ಟಡ ಇದೆ ಅದ್ರ ಒಳ್ಗಡೆ. ಅಂದ್ರೆ ಅದಕ್ಕೆ ನೀವು ಆ ಸಂದರ್ಭಗಳನ್ನ, ಅದ್ರ ಅಧ್ಯಾಯಗಳನ್ನ ನೋಡಿದ್ರೆ ಅದು ಬೇರೆ ಬೇರೆ, ವರ್ಷದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಬೆಳಕಿನಲ್ಲಿ, ದಿನದ ಬೇರೆ ಬೇರೆ ಜಾಗದಲ್ಲಿ ಜರಗುವಂಥದ್ದು. ಸೊ, ಅಷ್ಟೊಂದು ಕಾಂಪ್ಲೆಕ್ಸನ್ನ ನಾನು ಮತ್ತೆ, ಅದನ್ನ ಬರೆದು ಒಂದೆರಡು ವರ್ಷ ಬಿಟ್ಟು ಮತ್ತೆ ಅದನ್ನ ಪರಿಷ್ಕರಣೆ ಮಾಡೋದಿದ್ಯಲ್ಲ, ಆವಾಗ ಅದು, ಅದ್ರೊಳಗೆ ಹೋಗ್ಲಿಕ್ಕೇನೇ ಒಂದ್ವಾರ ಬೇಕಾಗುತ್ತೆ. ಅಂದ್ರೆ, ಅದೇ ಮನಸ್ಥಿತಿಯಲ್ಲಿ ಅದ್ನೆಲ್ಲ ನೋಡ್ಲಿಕ್ಕೆ ಆ ಪರಿಸ್ಥಿತಿ, ಅಂಥಾ ಒಂದು process ಇದ್ಯಲ್ಲ, ಅದನ್ನ ಮತ್ತೊಂದ್ಸಲ ಇಂಥಾ ಒಂದು ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈ ಹಚ್ಚಲಿಕ್ಕೆ ಅಳಕಾಗ್ತದೆ ಅಂತ ನಾನು... ಅದು ನನ್ನ ಉದ್ದೇಶ. ಅಂದ್ರೆ ಅದು ಆ ತೀವೃತೆಯಲ್ಲಿ ಕಾಣ್ಸೋದಿಲ್ಲ, ಆ ತೀವೃತೆಯಲ್ಲಿ ಆವಾಗ ನಾವು ಅದು ಅನಗತ್ಯ ಅಂತ ತಿಳ್ಕೊಂಡಿರ್ತೀವಿ, ಅಥವಾ ಬರೆಯುವಾಗ ಏನೋ ಒಂದು ಮನ್ಸಲ್ಲಿರುತ್ತೆ, ಬರೆಯುವಾಗ ಯಾವ್ದಾದರೂ ಕೆಲವು ಮುಖ್ಯ ಅಂತ ಅನ್ಸಿರುವ ಸಂಗತಿಗಳಿರ್ತಾವಲ್ಲ, ಅಂದ್ರೆ ಮುಖ್ಯ ಅಂತ ಕಾದಂಬರಿ ಒಳ್ಗಡೆ; ಅದು ಕಾಲಾಂತರದಲ್ಲಿ, ಈ ಎಲ್ಲ ಬದ್ಲಾವಣೆಗಳಿಂದ ಅದು ಅಷ್ಟು... ಅದು ನಾನು ಬರೆದ ಮಾತು ಆ ಒಟ್ಟು process ಬಗ್ಗೆ, ಅಂದ್ರೆ, process of editing ಬಗ್ಗೆ. ಪರಿಷ್ಕರಣೆಯ ಪ್ರಕ್ರಿಯೆ ಬಗ್ಗೆ ನಾನು ಬರೆದಿದ್ದೆ ಹೊರತು ಒಟ್ಟು ಬರವಣಿಗೆಯ ಬಗ್ಗೆ ಅಲ್ಲ. ಸೊ, ಹಾಗಾಗಿ ಅದು ಅಪಾರ್ಥಕ್ಕೆ ಎಡೆ ಮಾಡಿ ಕೊಡ್ಬಾರ್ದು.

ನಾಟಕ ರಚನೆಯ ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಿ. ರಂಗಸಾಧ್ಯತೆಗಳ ಕುರಿತು ನಿಮ್ಮ ಪರಿಕಲ್ಪನೆಗಳು, ರಂಗಕೃತಿ (ಟೆಕ್ಸ್ಟ್)ಯಾಗಿ ಮತ್ತು ರಂಗದಲ್ಲಿ ಅದು ಒಂದು ರಂಗ-ಕೃತಿಯಾಗಿ ಬರುವಾಗ ಅದರ ತಾತ್ವಿಕತೆ ಮತ್ತು ಎರಡರ ಸಂತುಲನ ಮಾಡುವಾಗ ನಿಮ್ಮ ಯೋಜನೆಗಳು ಯಾವ ತರ ಇರ್ತವೆ?

ಅಂದ್ರೆ ನನಗೆ ನಾಟಕ ಮಾಧ್ಯಮದಲ್ಲಿ ಯಾವಾಗ್ಲು ಮೊದ್ಲಿಂದ್ಲು ಆಸಕ್ತಿಯಿದೆ. ನನಗೆ ಅದ್ರ ಬಗ್ಗೆ ಇರೋ ಆಕರ್ಷಣೆ ಏನು ಅಂದ್ರೆ, ಬರೆದ ಕೂಡ್ಲೆ ತಕ್ಷಣ ಅದಕ್ಕೊಂದು interpretation ಸಿಗುತ್ತೆ. ಅಂದ್ರೆ, ಆ ನಾಟಕ ಆಡ್ದಾಗ, ಅದೇನು ನನ್ನ ಮನಸ್ಸಿನಲ್ಲಿ ಒಂದು ನಾಟಕ - ಒಂದು ಕೃತಿ ಮತ್ತು ಅದಕ್ಕೆ ಸಾಧ್ಯತೆಗಳಿರ್ತಾವಲ್ಲ, ಆ ಸಾಧ್ಯತೆಗಳ ಅನ್ವೇಷಣೆ immediately ಆಗುತ್ತೆ. ತಕ್ಷಣ ನಾವದನ್ನ ರಂಗದ ಮೇಲೆ ನೋಡ್ಬಹುದು. ಇದು ಒಬ್ಬ ಲೇಖಕನಿಗೆ ತುಂಬ ಅವ್ನನ್ನ ತುಂಬ ಆಕರ್ಷಿಸುವಂಥ ವಿಷ್ಯ ಇದು. ಯಾಕಂದ್ರೆ, ನಾವು ಒಂದು ಕಾದಂಬರಿಯನ್ನು ಬರೆದ್ರೆ, ಒಂದು ಕತೆಯನ್ನು ಬರೆದ್ರೆ ಅದು ಇನ್ನೊಬ್ರ ಮನಸ್ಸಿನಲ್ಲಿ ರೂಪಾಂತರ ಆಗ್ಲಿಕ್ಕೆ ಅಥವಾ ಅದು ರೂಪಾಂತರ ಆದದ್ದು ನಮ್ಮ ಅನುಭವಕ್ಕೆ ಬರ್ಲಿಕ್ಕೆ ಸ್ವಲ್ಪ ಕಾಲ ತಗೊಳುತ್ತೆ. ಆದ್ರೆ ಇದು ತಕ್ಷಣ ರಂಗದ ಮೇಲೆ ಬರುವಂಥ ಒಂದು ಅನುಭವ ಇದ್ಯಲ್ಲ, ಅದು ತುಂಬ ಭಿನ್ನವಾದದ್ದು ಮತ್ತು ತುಂಬ ಅದಕ್ಕೊಂದು ವಿಚಿತ್ರವಾದ ಒಂದು ಸೆಳೆತ ಇದೆ. ಅಂದ್ರೆ ನನಗಂತು ಇದೆ ಅದು. ಸೊ, ಹಂಗಾಗಿ ನಾನು ಅದಕ್ಕೆ, ಆ ಕ್ಷೇತ್ರದ ಬಗ್ಗೆ ನನಗೆ ಮೊದ್ಲಿಂದ್ಲು ಆಸಕ್ತಿ. ನಾನು ಯಾವಾಗ್ಲು ಅದ್ರ ಕುರಿತು ಯೋಚ್ನೇನೂ ಮಾಡ್ತಿರ್ತೇನೆ. ಆಮೇಲೆ, ನನ್ನ ಓದಲ್ಲು ಕೂಡ ನಾನು ಹೆಚ್ಚು ನಾಟ್ಕದ ಬಗ್ಗೆ, ನನಗೆ ನೋಡೋದ್ ಮಾತ್ರ ಅಲ್ಲ, ಓದೋದ್ರಲ್ಲು ನನಗೆ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಸಾಹಿತ್ಯಕೃತಿಯಾಗಿನು ನಾಟ್ಕ ನನಗೆ ಒಂದು ಆಕರ್ಷಣೆಯ ಒಂದು ಕ್ಷೇತ್ರವಾಗಿದೆ. ಇದೆಲ್ಲಾ ಬಿಟ್ಟು ಸುಮ್ನೆ ಒಂದು, ನಿಮ್ಮ craftsmenship ದೃಷ್ಟಿಯಿಂದ ನೋಡಿದ್ರು ಕೂಡ ನಾಟ್ಕ ಅನ್ನೋದು, ಅದು ನಿಮ್ಮ ಬರವಣಿಗೆಗೊಂದು ಬೇರೆಯೇ ರೀತಿಯ ಒಂದು ಆಯಾಮವನ್ನು ಕೊಡುತ್ತೆ. ಕತೆಗಳನ್ನು ಬರೆದು, ಕಾದಂಬರಿಗಳನ್ನು ಬರೆದು ಇದ್ದವ್ರಿಗೆ ನೀವು ನಾಟ್ಕ ಬರೀಲಿಕ್ಕೆ ಇರೋ ಒಂದು ತಯಾರಿ, ಒಂದು ಮನಸ್ಥಿತಿ ಮತ್ತೆ ಅದಕ್ಕಿಂತ ಹೆಚ್ಚಾಗಿ ಆ ಬರವಣಿಗೆಯದೇ ಒಂದು ಕ್ರಮ ಇದ್ಯಲ್ಲ, ಅಂದ್ರೆ ನೀವು ಎಲ್ಲವನ್ನು ಮಾತಿನಲ್ಲಿ ಹೇಳ್ಬೇಕಾದದ್ದು, ಆಮೇಲೆ, ಒಂದಿಷ್ಟೇ ತೋರ್ಸಿ ಬಹಳಷ್ಟನ್ನ ಅದನ್ನ ನಿಮ್ಮ ಮನಸ್ಸಿನಲ್ಲಿ ಬಿಡುವಂಥಾದ್ದು, ಅಥ್ವಾ ಅದನ್ನ ನಟರಿಗೆ, ದಿಗ್ದರ್ಶಕರಿಗೆ ಬಿಡುವಂಥಾದ್ದು - ಎಲ್ಲ, ಒಂದ್ರೀತಿಯ ಆ craftsmenship ಅಥವಾ ಆ ಕಲಾತ್ಮಕ ಕೌಶಲ್ಯ, ಅದು ಕೂಡ ಒಂದು ರೀತಿಯ, ಭಾಳ ದೊಡ್ಡ ಸವಾಲು ಅಂತ ನನಗನಿಸುತ್ತೆ. ಸೊ, ಇದೆಲ್ಲದ್ರಿಂದ ನಾನು ಅದಕ್ಕೆ ಆಕರ್ಷಿತನಾದೆ.

ಒಂದು ಕತೆ ಬರೆಯುವುದು ಇನ್ನೊಂದು ಕಾದಂಬರಿ ಬರೆಯೋದು. ಎರಡರಲ್ಲಿ ಬರವಣಿಗೆಯ ಪ್ರಕ್ರಿಯೆಯ ದೃಷ್ಟಿಯಿಂದ ಏನು ವ್ಯತ್ಯಾಸ? ನಿಮಗೆ ಯಾವುದು ಹೆಚ್ಚು ಇಷ್ಟ?

ಈ ಕತೆ ಅನ್ನೋದು ನಾನು ಯಾವಾಗ್ಲು ಈ ಉದಾಹರಣೆಯನ್ನ ಕೊಡ್ತ ಇರ್ತೇನೆ; ಅದನ್ನು ಶಾಂತಿನಾಥ ದೇಸಾಯಿ ಹೇಳಿದ್ರು. ಅದೇನಂದ್ರೆ, ಕತೆಯಂದ್ರೆ ಒಂದು ಮರದ ಮೇಲೆ ಹತ್ತಿ ಅದ್ರ ಹಣ್ಣು ತಿಂದ್ಹಂಗೆ, ಕಾದಂಬರಿ ಅಂದ್ರೆ ಇಡೀ ತೋಟದಲ್ಲೆ ಓಡಾಡಿ, ನಿಮ್ಗೆ ಬೇಕಾದ ಹಣ್ಣು ಕಿತ್ಹಂಗೆ ಅಂತ. ಅಂದ್ರೆ ನಿಮಗೆ ಹೇಳ್ಬೇಕಾಗಿದ್ದೇನಂದ್ರೆ, ಒಟ್ಟು ಎರಡೂ ಮಾಧ್ಯಮ ಇದ್ಯಲ್ಲ, ಅದಕ್ಕದಕ್ಕೆ ಭಿನ್ನವಾದ ಒಂದು ಜೀವನದೃಷ್ಟಿ ಬೇಕಾಗತ್ತೆ. ಎರಡನ್ನು ಬರೀಬೇಕಾದ್ರೆ ನಮ್ಮ ಮನಸ್ಥಿತಿ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಅದಕ್ಕೆ ಬೇಕಾದ ಲೋಕದೃಷ್ಟಿ ಎಲ್ಲವೂ ತುಂಬ ಭಿನ್ನವಾದದ್ದು. ಆದ್ರಿಂದ ಒಂದು ಕತೆ ಬರೀತ ಬರೀತ ಕಾದಂಬರಿಯಾಗೋದಿಲ್ಲ ಅಥ್ವಾ ಒಂದು ಉದ್ದ ಕತೆ ಕಾದಂಬರಿಯಾಗೋದಿಲ್ಲ. ಕಾದಂಬರಿಗೆ ಬೇಕಾದ, ಕಾದಂಬರಿಗೆ ತುಂಬ ಆಳ ಬೇಕು. ಅಂದ್ರೆ, it is about total experience... ಅಂಥ ಒಂದು ಅನುಭವದ, ಒಂದು ಪೂರ್ಣ ಅನುಭವದ ಅಂಥ ಒಂದು ಮಾಧ್ಯಮ ಅದು. ಆದ್ರೆ ಕತೆ ಅಂದ್ರೆ ಹಾಗಲ್ಲ. ಕತೆ ಅದರ ಅಳತೆ ಚಿಕ್ಕದು, ಆಮೇಲೆ ಅದ್ರಲ್ಲಿ ನೀವು ಹೇಳಬೇಕಾದ ಸಂಗತಿಗಳನ್ನ ಚುರುಕಾಗಿ ಹೇಳ್ಬೇಕು, ಆಮೇಲೆ ಹೀಗೆ... ಅದ್ರಲ್ಲೊಂದು ಇಡೀ ಮಾಧ್ಯಮಾನೇ ಅದು ಬೇರೆ. ಹಾಗಾಗಿ ಕತೆಗಾರನಿಗೆ ಮತ್ತು ಕಾದಂಬರಿಕಾರನಿಗೆ ಇರಬೇಕಾದ ಮನಸ್ಥಿತಿ ಎರಡೂ ಬೇರೆ ಬೇರೆ. ಆಮೇಲೆ ಕಾದಂಬರಿ ಬರೆಯುವಾಗ ಹೆಚ್ಚು ಸಾವಧಾನ ಬೇಕು ಅಂತ ನನಗನಿಸುತ್ತೆ. ಅಂದ್ರೆ ಸಾವಧಾನ ಅನ್ನೋದು ನಾನು ನಿಮಗೆ ಒಂದನ್ನ ತಿಳ್ಕೊಂಡು, ಒಂದನ್ನ ಅರಗಿಸಿಕೊಂಡು, ಒಂದನ್ನ ಸಮಾಧಾನವಾಗಿ ಹೇಳುವ ರೀತಿ. ಸಮಾಧಾನ ಅನ್ನೋದನ್ನ ನೀವು ತುಂಬ metaphoricalಆದ ಅರ್ಥದಲ್ಲಿ ನೀವದನ್ನ ತಗೊಳ್ಬೇಕು. ಸಮಾಧಾನಕರವಾದ ರೀತಿಯಲ್ಲಿ ಅದನ್ನ ಹೇಳ್ಬೇಕು. ಸೊ, ಈ ಎಲ್ಲ ರೀತಿಯಿಂದ ಎರಡೂ ಸಂಪೂರ್ಣ ಭಿನ್ನವಾದ ಮಾಧ್ಯಮಗಳಂತ್ಲೆ ನನಗೆ ಅನ್ಸುತ್ತೆ. ಆಮೇಲೆ ನಾನು ಈ ಕಾದಂಬರಿಗಳನ್ನ ಬರೀತಾ ಇರೋದಿಕ್ಕೂ ಮತ್ತೆ ಆ ತರ ಈ ಕ್ಷೇತ್ರದಲ್ಲಿ ನಾನು ಈಗ ಎರಡು ಕಾದಂಬರಿಗಳನ್ನ ಬರೆಯೋದಿಕ್ಕು ಇದೇ ಒಂದು ಕಾರಣ; ಯಾಕಂದ್ರೆ ಅದು ನನಗೆ ಅದು ಹೆಚ್ಚು space ಕೊಡುತ್ತೆ ಅಂತ ನನಗನಿಸಿದೆ.

ಒಂದು ಸಾಹಿತ್ಯ ಪತ್ರಿಕೆಯನ್ನು ದೀರ್ಘಕಾಲ ನಡೆಸಿಕೊಂದು ಬರುವುದು ಮತ್ತು ಸರಿಯಾಗಿ ನಡೆಸಿಕೊಂಡು ಬರುವುದು; ಸಮಯಕ್ಕೆ ಸರಿಯಾಗಿ ಅದನ್ನ ಓದುಗರಿಗೆ ತಲುಪಿಸಿ, ಬದ್ಧತೆಯನ್ನ ಉಳಿಸಿಕೊಂಡು ನಡೆಸಿಕೊಂಡು ಬರುವುದು ಎರಡೂ ತುಂಬ ಕಷ್ಟ ಎನ್ನುವಂಥ ಒಂದು ಸಾಮಾನ್ಯ ಆಭಿಪ್ರಾಯ ಇದೆ. ಈಗಾಗಲೇ ಮೂರುವರ್ಷಗಳನ್ನ ಪೂರೈಸಿರುವ ದೇಶಕಾಲದಂಥ ಪತ್ರಿಕೆ ನಡೆಸುವ ಅನುಭವ ಹೇಗಿತ್ತು ಮತ್ತು ದೇಶಕಾಲದ ಸಂಪಾದಕರಾಗಿ ಪತ್ರಿಕೆಯನ್ನು ಮುಂಬರುವ ದಿನಗಳಲ್ಲಿ ವಿಭಿನ್ನವಾಗಿ ರೂಪಿಸುವ ಬಗ್ಗೆ ಯೋಜನೆಗಳೇನಾದರೂ ಇವೆಯೆ?

ಇದು ಕಷ್ಟ ಅಂದ್ರೆ ನಿಜವಾಗ್ಲು ಅದಕ್ಕೆ ತುಂಬ ಕೆಲ್ಸ ಇದೆ. ಕೆಲ್ಸ ಇಲ್ದೆ ಅದ್ಯಾವುದು ಆಗೋದಿಲ್ಲ. ಯಾಕಂದ್ರೆ ಒಂದು ಪತ್ರಿಕೆ ನಡೆಸೋದು ಅಂದ್ರೆ ಅದಕ್ಕೆ ಮೊದ್ಲಿಂದ ಕೊನೇವರೆಗೂ ನಮ್ಮ ಒಂದು ಸಣ್ಣ ತಂಡ ಇದೆ. ಆ ತಂಡದಿಂದ್ಲೆ ನಾವದನ್ನ ಮಾಡ್ತೀವಿ. ಚನ್ನಕೇಶವ ಅಂತ ಅದಕ್ಕೆ ವಿನ್ಯಾಸಕಾರರಿದ್ದಾರೆ. ಸೊ, ಹೀಗೆ... ಆಮೇಲೆ ಅಕ್ಷರ, ಕೆ.ವಿ.ಅಕ್ಷರ ಅವರು ನನ್ಜೊತೆಗಿದಾರೆ. ಸೊ ಅದಷ್ಟೆ ಅಲ್ದೇನೆ ಇನ್ನೂ ತುಂಬ ಜನ ಸ್ನೇಹಿತರಿದಾರೆ. ಇದೆಲ್ಲ ಒಬ್ನೇ ಮಾಡ್ಲಿಕ್ಕಾಗುವಂಥ ಕೆಲ್ಸ ಅಲ್ಲ ಇದು. ಆದ್ರಿಂದ ಇದು ಒಂದು ಈ ನನ್ನ ಸಾಹಿತ್ಯ ಸ್ನೇಹಿತರು, ಲೇಖಕ ಮಿತ್ರರು, ಆಮೇಲೆ ಓದುಗರು, ಚಂದಾದಾರರು, ಇವ್ರೆಲ್ಲ ಎಲ್ಲ ಒಂದು ದೊಡ್ಡ ಬಳಗ ಅಂತ ತಿಳ್ಕೊಂಡು ನಾವು ಮಾಡ್ತಿದೀವಿ. ಆಮೇಲೆ ಅದು.....ನನಗೆ ಈ ವರೆಗೆ ತುಂಬ ಸಹಕಾರ ಎಲ್ಲ ಸಿಕ್ಕಿದೆ. ಅದು, ಇನ್ನು ಅದರ ಸಮಯದ ಬಗ್ಗೆ ಕೇಳಿದ್ರೆ, ಅದು, ಮಾಡ್ಬೇಕಂತ ಒಂದು ನಿಮಗೆ ಅನಿಸಿದ್ರೆ ಮತ್ತು ಅದಕ್ಕೆ ನೀವು ಪ್ರಾಮುಖ್ಯತೆಯನ್ನ ಕೊಟ್ರೆ ಆವಾಗ ಅದು ಅದೆಲ್ಲವೂ ಸಮಯಕ್ಕೆ ಸರಿಯಾಗಿ ಬರುತ್ತೆ. ಅದೇನು ತೊಂದ್ರೇನೆ ಆಗ್ಬಾರ್ದು ಯಾಕಂದ್ರೆ ಅದೊಂದು ರೀತಿಯ commitmentಉ. ನಾವು ನಮ್ಮ ಚಂದಾದಾರರಿಗೆ, ಓದುಗರಿಗೆ ನಾವು ಪ್ರತಿ ತಿಂಗಳು ತರ್ತೀವಿ ಅಂದ್ರೆ ಪ್ರತಿ ತಿಂಗ್ಳು ತರ್ಬೇಕು ಅದನ್ನ. ದುರದೃಷ್ಟವಶಾತ್ ನಮ್ಮಲ್ಲಿ ಹೆಚ್ಚು ಸಾರಿ ಹೆಚ್ಚು ಪಾಲು ಸಾಹಿತ್ಯ ಪತ್ರಿಕೆಗಳು ಸಮಯಕ್ಕೆ ಸರಿಯಾಗಿ ಬರದೇ ಇರೋದ್ರಿಂದ, ಸಮಯಕ್ಕೆ ಸರಿಯಾಗಿ ಬರೋದೇ ಒಂದು ದೊಡ್ಡ ಭಾಗ್ಯ ಅನ್ನುವಂಗಾಗಿದೆ. ಅದು actually ನೀವದು basic ಆದ ಒಂದು commitment ಅದು. ಅಂದ್ರೆ ಅದನ್ನ ಕನಿಷ್ಠವಾದ ಒಂದು - ಒಬ್ಬ ಚಂದಾದಾರನಿಗೆ ನಾವು ಪ್ರತಿತಿಂಗ್ಳು ತರ್ತಿವಂದ್ರೆ ನಾವು ಪ್ರತಿತಿಂಗ್ಳು ಒಂದು ಪತ್ರಿಕೆಯನ್ನ ಕೊಡೋದು ಒಂದು ಕನಿಷ್ಠವಾದ ಒಂದು ಧರ್ಮ. ಆದ್ರೆ ಈ ವರೆಗು ಲೇಖಕರ ಸಹಕಾರ ಇರೋದ್ರಿಂದ, ಆಮೇಲೆ ತುಂಬ ಜನ ಅದನ್ನ ನಾನು ಕೇಳ್ದಾಗ ಸಮಯಕ್ಕೆ ಸರಿಯಾಗಿ ಬರೆದು ಕೊಡೋದ್ರಿಂದ ಇದ್ನೆಲ್ಲ ಮಾಡೋದು ಸಾಧ್ಯವಾಗಿದೆ.

ನಿಮ್ಮ ಆರಂಭದ ಸಂಚಿಕೆಯಲ್ಲಿ ನೀವು ನಿಮ್ಮ ಸಂಪಾದಕೀಯದಲ್ಲಿ ಒಂದು ಒಳ್ಳೆಯ ಮಾತನ್ನ ಹೇಳಿದ್ರಿ. "ಯಶಸ್ಸು, ಪ್ರಗತಿ, ಜ್ಞಾನ, ಕುಟುಂಬ ಸಂಬಂಧಗಳ ಸಹಜ ಅರ್ಥಗಳನ್ನು ನಮ್ಮಿಂದ ಕಸಿದುಕೊಳ್ಳ ತೊಡಗಿರುವ ಸಂಗತಿಗಳ ಬಗ್ಗೆ ತತ್ಕ್ಷಣದ ಆಸೆ ಮತ್ತು ದೌರ್ಬಲ್ಯಗಳನ್ನು ಮೀರಿದ ಆಳವಾದ ಆಲೋಚನೆ ಇಂದಿನ ಅಗತ್ಯವಾಗಿದೆ." ಅಂತ. ಅಂಥ ಉದ್ದೇಶಗಳನ್ನೆಲ್ಲ ಇಟ್ಟುಕೊಂಡೇ ನೀವು ದೇಶಕಾಲವನ್ನ ಆರಂಭ ಮಾಡಿದ್ರಿ ಅಂತೇನೂ ಅಲ್ಲ, ಆದ್ರೆ, ಮೊದಲ್ನೆ ಉತ್ತರದಲ್ಲಿ ನೀವು ಹೇಳಿದ ಹಾಗೆ, ಮನಸ್ಸಿನ ಒಂದು spaceನ್ನ ವಿಸ್ತರಿಸುವ ನಿಮ್ಮ ಸತತವಾದ ಪರಿಶ್ರಮದಲ್ಲಿ, ದೇಶಕಾಲ ವರೆಗೆ ಮಾಡಿರೋದ್ರಲ್ಲಿ ನಿಮಗೆ ಸಮಾಧಾನ ಇದೆಯ? ಅಥವಾ ಅದಕ್ಕೆ ಒಳ್ಳೆಯ ಒಂದು ಪ್ರತಿಸ್ಪಂದನ ಜನರಿಂದ ಸಿಕ್ಕಿದೆ ಅಂತನಿಸುತ್ತದೆಯೆ?

ಸಮಾಧಾನ ಇದೆ ನನಗೆ. ಆದ್ರೆ ಇನ್ನೂ ಹೆಚ್ಚಿನ ಕೆಲಸ ಮಾಡ್ಲಿಕ್ಕೆ ಸಾಧ್ಯ ಅಂತ ನನಗನಿಸುತ್ತೆ. ಅಂದ್ರೆ ಕೆಲವು ಸಂಗತಿಗಳನ್ನ ನಾವು, ಅಂದ್ರೆ ಕೆಲವು ಲೇಖನಗಳನ್ನ ನಾವು ಪ್ರಕಟಿಸಿದ್ದೇವೆ. ಕೆಲವು ಕತೆಗಳನ್ನ ಮಾಡಿದ್ದೀವಿ. ಅದು, ಬೇರೆ ಎಲ್ಲೂ ಯಾವ್ದೇ ಒಂದು ಪತ್ರಿಕೆಯಲ್ಲೂ ಪ್ರಕಟವಾಗಲಿಕ್ಕೆ ಸಾಧ್ಯ ಇಲ್ದೇ ಇರುವಂಥದ್ದನ್ನ ಮಾಡುವುದು ಕೂಡ ನಮ್ಮದೊಂದು ಉದ್ದೇಶ ಇತ್ತು. ಅಂದ್ರೆ ಈಗ ಎಷ್ಟೋ ಕಡೆಗಳಲ್ಲಿ ದೀರ್ಘವಾದ ಲೇಖನಗಳನ್ನ ಹಾಕೋದಿಲ್ಲ. ದೀರ್ಘವಾದ ಕತೆಗಳನ್ನ ನಿಮಗೆ ಓದ್ಲಿಕ್ಕೆ ಸಿಗೋದಿಲ್ಲ. ಪುಸ್ತಕಗಳಲ್ಲಿ ಬಿಟ್ರೆ ಬೇರೆ ಎಲ್ಲೂ ಅದೆಲ್ಲ ಸಿಗೋದಿಲ್ಲ. ಆ ತರದ ಕೆಲವು ಅವಕಾಶಗಳು ನಮ್ಮಲ್ಲಿದ್ವು. ಆಮೇಲೆ, ಯಾವಾಗ್ಲು ಅದು, ಹೊಸಬ್ರು ಈ ಪತ್ರಿಕೆಗೆ ಸೇರ್ಕೊಂಡಾಗ, ಹೊಸ ಬರಹಗಾರರು ಬರೀಲಿಕ್ಕೆ ಸುರುಮಾಡ್ದಾಗ ಅವ್ರಿಗೆ ಇದು ನಮ್ದು ಅಂತ ಅನಿಸಿದಾಗ, ಅವ್ರಿಗಿದ್ರಲ್ಲಿ ಒಂದು ಜಾಗ ಇದೆ ಅಂದಾಗ್ಲೇ ಅದಕ್ಕೊಂದು ಜೀವಕಳೆ ಇರುತ್ತೆ. ಯಾವಾಗ್ಲು ಒಂದು ಪತ್ರಿಕೆಗೆ, ಒಂದು ಲೈವ್ಲಿನೆಸ್ ಇರುತ್ತೆ. ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗ್ಬೇಕು ಅಂತನ್ನೋದು ನನ್ನ ಇಷ್ಟ. ಅದಾಗಿಲ್ಲ ಅಂತಲ್ಲ, ಆಗಿದೆ. ಆದ್ರೆ ಇನ್ನೂ ಆಗ್ಬೇಕು. ಆದ್ರೆ ಹಾಗಂತ ಅದನ್ನ ಕೇವಲ ಒಂದು ಅವ್ರನ್ನ ಒಳಗೊಳ್ಳಬೇಕು ಅನ್ನೋ ಕಾರಣಕ್ಕೆ ಎಲ್ಲವನ್ನೂ ಪ್ರಕಟಮಾಡೋದು ಅಂತ ಅಲ್ಲ. ಆದ್ರೆ ಅವ್ರು, ಹೆಚ್ಚು ಹೆಚ್ಚು ಹೊಸಬರು ಬರೀಲಿಕ್ಕೆ ಸುರುಮಾಡ್ದಾಗ, ಹೆಚ್ಚು ಹೆಚ್ಚು ಹೊಸ ರೀತಿಯ ಬರಹಗಳು ಬಂದಾಗ್ಲೆ ಇದಕ್ಕೊಂದು ಸಾರ್ಥಕತೆ ಇದೆ. ಇಲ್ದಿದ್ರೆ ಇದನ್ನ ಸುಮ್ನೆ ಒಂದು ಪತ್ರಿಕೆಯನ್ನ ನಡೆಸೋದ್ರಲ್ಲಿ ಯಾವ ಒಂದು ಹೊಸ ಅರ್ಥವೂ ಇರೋದಿಲ್ಲ. ಆಮೇಲೆ ಎಲ್ಲ ಪತ್ರಿಕೆಗೂ, ನಾನಿದನ್ನ ಆರಂಭಿಸುವಾಗ್ಲೆ ಹೇಳ್ದೆ, ಎಲ್ಲ ಪತ್ರಿಕೆಗಳಿಗೂ ಒಂದು ಅದಕ್ಕು ಒಂದು ಆಯುಷ್ಯ ಅಂತ ಒಂದಿರುತ್ತೆ. ನೀವು ಯಾವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರು. ಯಾಕಂದ್ರೆ ಅದನ್ನ ಒಂದು ಸಣ್ಣ ಗುಂಪು ನಡೆಸ್ತಾ ಇರುತ್ತೆ. ಆಮೇಲೆ ಅದಕ್ಕೊಂದು ಅದ್ರ intensity ಇದ್ಯಲ್ಲ, ಅದು ತುಂಬಾ ವರ್ಷಗಳ ಕಾಲ ಆ intensityಯನ್ನ ಕಾಯ್ದುಕೊಂಡು ಬರೋದು ಕಷ್ಟ. ಯಾಕೆ ಕಷ್ಟ ಅಂದ್ರೆ ಅದ್ಕೆ ತುಂಬ personal ಆದ timeನ್ನ ನಾವು invest ಮಾಡ್ತಿರ್ತೀವಿ. ಈಗ ನಾನು ಕೂಡ ಅಷ್ಟೆ, ನಾನು ಅಥ್ವಾ ನಮ್ಮ ತಂಡ, personal timeನ್ನ ಅಂದ್ರೆ, ನಾವು personal ಆಗಿ ಬೇರೆ ಏನೋ ಮಾಡ್ಬೇಕಾಗಿರೋ ಹೊತ್ತಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ನಮ್ಮ ಕುಟುಂಬದ ಜೊತೆ ಕಳೀ ಬೇಕಾದ ಕಾಲದಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ಅಂದ್ರೆ ಏನೋ ನಮ್ಮ personal ಆದ ಏನೋ ಒಂದನ್ನ ಕೊಡ್ತಾ ಇರ್ತೀವಿ. ಇದನ್ನ ದೀರ್ಘ ಕಾಲ ಮಾಡೋದು ಭಾಳ ಕಷ್ಟ. ಇದನ್ನ ಕೆಲವು ವರ್ಷಗಳ ವರೆಗೆ ಮಾಡ್ಬೋದು. ಇನ್ನೊಂದು ಏನಂದ್ರೆ, ಈ ಹೊತ್ತಿಗೆ ಬರೀತಾ ಇದಾರಲ್ಲ, ಇವ್ರೆಲ್ಲ ಇದ್ರಲ್ಲಿ ಒಳಗೊಂಡಾಗ, ಅವ್ರದ್ದೂ ಒಂದು intensive ಆದ ಒಂದು period ಇರುತ್ತೆ. ಒಂದು intense ಆದ ಒಂದು ಕಾಲ ಇರುತ್ತೆ. ಈಗಿನ ಲೇಖಕರಿಗೂ. ಅವ್ರು ಬರೀಲಿಕ್ಕಿರ್ಲಿ, respond ಮಾಡೋದಿರ್ಲಿ ಅಥವಾ ಯಾವ ರೀತಿದಿರ್ಲಿ; ಆ ಕಾಲಕ್ಕೂ ಇದಕ್ಕೂ ಒಂದ್ರೀತಿಯ ಸಂಬಂಧ ಇದೆ. ಆದ್ರಿಂದ ನೀವು ಸಾಕ್ಷಿಯನ್ನ ನೋಡಿ, ಅಥವಾ ಋಜುವಾತು ನೋಡಿ. ಅವೆಲ್ಲವೂ ಒಂದು ಉಚ್ಛ್ರಾಯವನ್ನು ತಲುಪಿ, ಆ ಕಾಲಕ್ಕೆ ಅದು ತುಂಬ useful ಆಗಿತ್ತು. ಎಲ್ರು ನಾವಿನ್ನು ಅದನ್ನ ನೆನಸ್ಕೋತೀವಿ, ಅದಿನ್ನು ಎಷ್ಟೋ ಹೊಸ ರೈಟರ್ಸ್‌ನ್ನು ಬೆಳಕಿಗೆ ತಂದಿತ್ತು. ಲಂಕೇಶ್ ಪತ್ರಿಕೆಯನ್ನು ನೋಡಿ. ಅದಕ್ಕೂ ಒಂದು ಉಚ್ಛ್ರಾಯ ಇತ್ತು. ಹಾಗೆ ಈ ತರ ಅದು ಹೊಸ ಹೊಸ, ಲಂಕೇಶ್ ಪತ್ರಿಕೆ ಸಾಹಿತ್ಯ ಪತ್ರಿಕೆ ಅಂತಲ್ಲ, but, ಈ ರೀತಿಯ ಒಂದು ಸಾಹಿತ್ಯದ ಪತ್ರಿಕೆಯ ಒಂದು ಉಚ್ಛ್ರಾಯ ಇರುತ್ತೆ, ಕೆಲವು ಕಾಲ ಇರುತ್ತೆ. ಅದನ್ನ, ಅದ್ರಿಂದ ಈ ಪತ್ರಿಕೆಗೆ ಕೂಡ ಆ ತರದ್ದೊಂದು ಯಾವ್ದೋ ಒಂದು ಆಯುಷ್ಯ ಇದೆ ಅಂತ ನಾನು ತಿಳ್ಕೊಂಡಿದೀನಿ. ಹಾಗಾಗಿ ಅದೊಂದು eternal, ಆದೊಂದು ಎಲ್ಲ ಕಾಲಕ್ಕು ಇರುತ್ತೆ ಆ ತರದ ಯಾವ್ದೇ ಒಂದು ಕಲ್ಪನೆಗಳಾಗ್ಲಿ ಅಥವಾ ಭ್ರಮೆಗಳಾಗ್ಲಿ ನನ್ಗಿಲ್ಲ.
(ಮೂಲ ಆಡಿಯೋ ಸಂದರ್ಶನವನ್ನು ಕೇಳಲು ದಯವಿಟ್ಟು sampada.net ತಾಣದ podcast ವಿಭಾಗವನ್ನು ಭೇಟಿ ಮಾಡಿ.)
ಕೃತಜ್ಞತೆಗಳು : ಶ್ರೀ ಹರಿಪ್ರಸಾದ್ ನಾಡಿಗ್, ಸಂಪದ ತಾಣದ ಸಂಚಾಲಕರು.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, November 27, 2008

ವಿವೇಕ್ ಶಾನಭಾಗರ ಎರಡನೆಯ ನಾಟಕ ಬಹುಮುಖಿ (2008)

ಈ ನಾಟಕ ಶರವಣ ಸರ್ವಿಸಸ್ ಕಥೆಯನ್ನು ನೆನಪಿಸುತ್ತದೆ ಮಾತ್ರವಲ್ಲ ಮೊದಲ ಓದಿಗೆ ಆ ಕಥೆಯ ಮೊನಚು, ಅದು ನೀಡುವ ಒಂದು ಗಾಢ ಅನುಭವ, ಅದರ appeal ಈ ನಾಟಕದ ಟೆಕ್ಸ್ಟ್‌ನಲ್ಲಿ ಮಿಸ್ಸಿಂಗ್ ಅಂತಲೇ ಅನಿಸಿದರೂ ಒಂದು ರಂಗಕೃತಿ ತನ್ನ ಟೆಕ್ಸ್ಟ್‌ನಲ್ಲೇ ಕೊಡಬೇಕಾದುದನ್ನೆಲ್ಲ ಕೊಟ್ಟುಬಿಟ್ಟರೆ ನಿರ್ದೇಶಕನಿಗೆ ಅದು ಸವಾಲಾಗುವುದು ಹೇಗೆ, ತನ್ನ ರಂಗಸಾಧ್ಯತೆಗಳನ್ನು ತೆರೆದುಕೊಳ್ಳುವುದು ಹೇಗೆ ಮತ್ತು ಅದನ್ನು ರಂಗದಲ್ಲಿ ನೋಡಬೇಕಾದರೂ ಯಾಕೆ ಅಂತ ಯೋಚಿಸಿದರೆ ಈ ತೀರ್ಮಾನ ಎಲ್ಲೋ ತಪ್ಪೆನಿಸುತ್ತದೆ. ಹಾಗಾಗಿ ಇದನ್ನು ಒಂದು ರಂಗಕೃತಿಯನ್ನಾಗಿಯೇ ನೋಡಬೇಕು. ವಿವೇಕರ ನಾಟಕಗಳು ತಕ್ಷಣವೇ ರಂಗ ಪ್ರಯೋಗದ ಭಾಗ್ಯವನ್ನೂ ಪಡೆದಿರುವುದರಿಂದ ಎರಡೂ ನಿಟ್ಟಿನಲ್ಲಿ ವಿವೇಕರ ನಾಟಕಗಳನ್ನು ಗಮನಿಸುವುದು ಕೂಡ ಸಾಧ್ಯವಾಗಿದೆ. ಹಿಂದೆ ವಿವೇಕರ ಸಕ್ಕರೆ ಗೊಂಬೆಯನ್ನು ನೀನಾಸಂ ತಂಡ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಬಹುಮುಖಿ ಕೂಡ ಈಗಾಗಲೇ ರಂಗಶಂಕರದಲ್ಲಿ ಕೆಲವು ಪ್ರಯೋಗಗಳನ್ನು ಕಂಡಿದೆ.

ಇಲ್ಲಿನ ಸಂಜಯ ಕುರುಕ್ಷೇತ್ರದ ಸಂಜಯನ ಹಾಗೆಯೇ ವರದಿಗಾರ. ಅವನ ಮೂಲ ವ್ಯಕ್ತಿತ್ವವೇ ರೂಪಾಂತರಗೊಳ್ಳಬೇಕಾದ ತುರ್ತು ಹುಟ್ಟಿಸುವಂಥದು. ಅವನ ನೌಕರಿ ಅದಕ್ಕೆ ತಕ್ಕಂತಿದೆ. ಅಥವಾ ಆ ನೌಕರಿ ಹಾಗಾಗಲು ಕಾರಣವಾದ ಒಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವನಿದ್ದಾನೆ. ಹಾಗಾಗಿ ಇಲ್ಲಿ ಫ್ಯಾಕ್ಟ್ ರಿಪೋರ್ಟ್ ಮಾಡುವ ಸಂಜಯ ‘ತಲೆಯ ಮೇಲೆ ಹೊಡೆದ ಹಾಗೆ’ ಸ್ಟೋರಿ ಕೊಡಬಲ್ಲ ಸಂಜಯನಾಗಿ ರೂಪಾಂತರಗೊಳ್ಳ ಬೇಕಾದ ಒಂದು ಒತ್ತಡವಿದೆ. `ಸ್ಟೋರಿ'ಗಳನ್ನು ಹುಡುಕಿಕೊಂಡು ಹೊರಡುವ ಪತ್ರಕರ್ತರನ್ನು ಬಲ್ಲವರಿಗೆ ಈ `ಸ್ಟೋರಿ'ಗಳೆಂದರೇನೆಂಬುದು ಕೂಡ ಗೊತ್ತು. ಸಂಜಯನ ರೂಪಾಂತರ ನಾಟಕದಲ್ಲಿ "ನೀನೀಗ ಬೇರೆಯೇ ಮನುಷ್ಯನ ತರ ಕಾಣುತ್ತಿದ್ದೀಯ" ಎನ್ನುವ ಒಂದು ಮಾತಾಗಿ ಬರುವಾಗ ಅದನ್ನು ಪ್ರೇಕ್ಷಕನ ಅನುಭವವಾಗಿಸುವ ಸವಾಲು ಸಣ್ಣದಲ್ಲ. ಇದನ್ನು ನಿರ್ದೇಶಕ ಗಮನಿಸದೇ ಹೋದರೆ, ಸಮರ್ಥವಾಗಿ ನಿಭಾಯಿಸದೇ ಹೋದರೆ ನಾಟಕದ ಉದ್ದೇಶ ಸಫಲವಾಗುವುದಿಲ್ಲ.

ಹಾಗೆಯೇ ಏಕಕಾಲಕ್ಕೆ ಶಕೀಲಾಳೂ ಶಕುಂತಳಾಳೂ ಆಗಬಲ್ಲ ವಿಶಿಷ್ಟ ಸಾಧ್ಯತೆಯೊಂದಿಗೇ ಕಾಣಿಸಿಕೊಳ್ಳುವ ಹುಡುಗಿ ತನ್ನ ಪ್ರಿಯಕರ ಶೇಖರ ತನ್ನೆಲ್ಲಾ ಸುಳ್ಳುಗಳೊಂದಿಗೇ ಪರರೆದುರು ಸಿಕ್ಕಿಬಿದ್ದಾಗ ಆತ್ಮರಕ್ಷಣೆಗಾಗಿಯಾದರೂ ತಾನು ಸುಳ್ಳುಗಳ ಮೊರೆಹೋಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಅದೇ ಊರ್ಮಿಳಾ ಸಂಜಯನ ಜೊತೆ ಮತ್ತು ಸಂಪಾದಕನ ಜೊತೆ ಮುಖಾಮುಖಿಯಾಗುವ ಎರಡು ಬೇರೆ ಬೇರೆ ಸನ್ನಿವೇಶಗಳಲ್ಲಿ ಸತ್ಯ ಮತ್ತು ಸುಳ್ಳನ್ನು ಬೆರೆಸಿದಂತೆ ಬದುಕುತ್ತಿರುವುದನ್ನು ಕಾಣುತ್ತೇವೆ. ಇಂಥ ಸೂಕ್ಷ್ಮ ಸಂಭಾಷಣೆ, ನಾಟಕೀಯತೆಗಳನ್ನು ಬೆರೆಸಿ ವಿವೇಕ್ ನಾಟಕ ರಚಿಸುತ್ತಾರೆ. ಆದರೆ ಇಂಥ ಸೂಕ್ಷ್ಮಗಳನ್ನು ಸಚಿತ್ರ ಜೋಡಿಸಬಲ್ಲ, ಪ್ರೇಕ್ಷಕನಿಗೆ ಅಂಥ ಒಂದು ಒಳನೋಟವನ್ನೂ ರಂಗದಲ್ಲಿ ಕಾಣಿಸಬಲ್ಲ ಹದ ಸಾಧಿಸುವುದು ನಿರ್ದೇಶಕನ ಎದುರಿಗಿರುವ ಸವಾಲು.

ಇಲ್ಲಿನ ಶೇಖರ ಮಾತ್ರ ಬಹುಮುಖಿಯಲ್ಲ. ಇಲ್ಲಿನ ಹೆಚ್ಚಿನ ಪಾತ್ರಗಳು ಬಹುಮುಖಿಗಳು, ಮುಖವಾಡದ ಬದುಕುಗಳನ್ನು ಹೊಂದಿರುವವರೇ ಆಗಿರುವುದನ್ನು ಕಾಣುತ್ತೇವೆ. ಸದಾ ಮಫ್ತಿಯಲ್ಲಿರುವ ಇನ್ಸ್‌ಪೆಕ್ಟರ್, ಶರವಣನ ಅಪರಾವತಾರದಂತಿರುವ ಜಕ್ಕೂಜಿ, ಅಲ್ಲದೆ ಇಲ್ಲಿ ಬರುವ ಶ್ರೀಮಂತ ಹೆಂಗಸರು ಎಲ್ಲರೂ ಕೂಡ ಬಹುಮುಖಿಗಳೇ. ಈ ಶ್ರೀಮಂತ ಗೃಹಿಣಿಯರ ಖಾಲೀ ಕ್ಷಣಗಳ ಮುಹೂರ್ತ ತೊಡಗುವುದು ಹನ್ನೊಂದರಿಂದ ನಾಲ್ಕರವರೆಗೆ ಎನ್ನುವಲ್ಲೇ, ಜಕ್ಕೂಜಿಯ ಮೇಲೆ ಕೂಡಾ ಇವರಲ್ಲೊಬ್ಬಳಿಗೆ ಮನಸ್ಸಾಗುತ್ತದೆ ಎನ್ನುವುದರಲ್ಲೇ ಇದೆಲ್ಲದರ ನಾಟಕೀಯತೆ, ಕಪಟತನ ಎದ್ದು ಕಾಣುವಂತಿದೆ. ಇದನ್ನು ಪ್ರೇಕ್ಷಕನ ಅನುಭವವಾಗಿಸುವುದರಲ್ಲಿ ನಿರ್ದೇಶಕನಿಗೆ ಹೊಸ ಹೊಸ ಅವಕಾಶಗಳೂ ಕಾಣಿಸುತ್ತವೆ, ಮಿತಿಗಳೂ ಇವೆ. ಗಂಭೀರವಾಗಿಯೇ ಇದೆ ಎನಿಸುವ ಈ ನಾಟಕದ ಟೆಕ್ಸ್ಟ್‌ನ್ನು ಹಾಸ್ಯದ ಸ್ತರದಲ್ಲಿ ರಂಗಕ್ಕೆ ತರುವುದು ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ಸುಳಿವುಗಳು ಇಲ್ಲಿನ ಚುರುಕಾದ ಸಂಭಾಷಣೆಯಲ್ಲೇ ನಮಗೆ ಕಾಣುತ್ತವೆ. ಮುಖವಾಡಗಳ ಬಳಕೆ, ಕಾಮಿಕ್ ವೇಷಭೂಷಣಗಳ ಬಳಕೆ ಕೂಡ ಈಗಿನ ರಂಗ ಪ್ರಯೋಗಗಳಲ್ಲಿ ಸಾಮಾನ್ಯವಾಗಿರುವ ಅಂಶವೇ. ನಾಟಕಗಳನ್ನು ರಂಗದ ಮೇಲೆ ನೋಡಿ, ರಂಗಭಾಷೆಯನ್ನು ಸೂಕ್ಷ್ಮವಾಗಿ ಗಮನಿಸಿಕೊಂಡಿರುವವರಿಗೆ ಬಹುಷಃ ಹೀಗೆ ಬರೆಯುವ ವಿಶನ್ ದಕ್ಕುತ್ತದೆ. ಅಂಥ ವಿಶನ್ ವಿವೇಕ್‌ಗೆ ದಕ್ಕಿದೆ ಎನ್ನುವುದು ಈ ನಾಟಕವನ್ನು ಓದುವಾಗ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತದೆ.

ಇಲ್ಲಿ ಸಂಪಾದಕ ತನ್ನ ಒಂದು ವರದಿಗೆ ಮರುದಿನವೇ ಇತರ ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ ತಲೆಕಟ್ಟು ಕೂರುವ ಒಂದು ಸನ್ನಿವೇಶವಿದೆ. ಈ ಸನ್ನಿವೇಶವನ್ನು ರಂಗದಲ್ಲಿ ಹೆಚ್ಚು ಜೀವಂತಗೊಳಿಸುವ ಅಗತ್ಯವಿದೆ. ಅಂದರೆ ಮನುಷ್ಯನ ಬಹುಮುಖೀತನದಷ್ಟೇ ಸುದ್ದಿಯ ಬಹುರೂಪಿತನ ಕೂಡ ಆಘಾತಕಾರಿ ಮತ್ತು ಅಸಹ್ಯ ಹುಟ್ಟಿಸುವ ಮಟ್ಟದ್ದು. ದಿನ ಬೆಳಗಾದರೆ ಇದನ್ನು ನಾವು ಪತ್ರಿಕೆಗಳಲ್ಲಿ ಕಾಣುತ್ತಿದ್ದೇವೆ. ಉದಾಹರಣೆಗೆ ಒಂದು ಪತ್ರಿಕೆ ಗೋಕರ್ಣ ದೇವಾಲಯದ ಆಡಳಿತ ಹಸ್ತಾಂತರಕ್ಕೆ ವ್ಯಾಪಕ ಸ್ವಾಗತ, ಮೆಚ್ಚುಗೆಯ ಸುರಿಮಳೆ ಎಂದು ಬರೆದ ದಿನವೇ ಇನ್ನೊಂದು ಪತ್ರಿಕೆಯಲ್ಲಿ ವ್ಯಾಪಕ ವಿರೋಧ, ಇನ್ನಷ್ಟು ತೀವೃವಾಗಲಿರುವ ಪ್ರತಿಭಟನೆ ಎಂದು ವರದಿ ಮಾಡುತ್ತದೆ! ಮತ್ತೆ ಅವಕಾಶ ಸಿಕ್ಕಿದರೆ ಒಂದೇ ವೇದಿಕೆಯಲ್ಲಿ ಉಭಯ ಸಂಪಾದಕರೂ ಒಬ್ಬರನ್ನೊಬ್ಬರು ಹೊಗಳಿಕೊಂಡು ಹಗುರಾಗುತ್ತಾರೆ.

ನಾಟಕದ ಪಠ್ಯದಲ್ಲೇನೋ ಈ ದೃಶ್ಯ ಒಂದಾದ ಮೇಲೊಂದರಂತೆ ಸಂಪಾದಕನೇ ಪ್ರತಿಕ್ರಿಯೆಗಳನ್ನು ಓದುವ ಕ್ರಮದಲ್ಲಿ ಇದು ಬಂದಿದೆ. ರಂಗದಲ್ಲಿ ಬೇರೆ ಬೇರೆ ನಿರ್ದೇಶಕರು ಇದನ್ನು ಹೇಗೆಲ್ಲ ಜೀವಂತಗೊಳಿಸುತ್ತಾರೆ ಎಂಬ ಕುತೂಹಲವನ್ನು ಈ ಸನ್ನಿವೇಶ ಹುಟ್ಟಿಸುತ್ತದೆ. ಕೆ.ವಿ.ಸುಬ್ಬಣ್ಣ ಒಂದು ಮಾತು ಹೇಳಿದ್ದರು, ನಾಟಕ ಅರ್ಥವಾಗುವುದು ಮುಖ್ಯವಲ್ಲ, ಅದು ಅನುಭವವಾದರೆ ಸಾಕು ಅಂತ. ಇದು ಗಹನವಾದ, ತುಂಬ ಮುಖ್ಯವಾದ ಮಾತು. ನಾಟಕ ನನಗೆ ನನ್ನೊಳಗೇ ಇರುವ ಆದರೆ ನಾನು ಸ್ಪಷ್ಟವಾಗಿ ಗುರುತಿಸದೇ ಹೋಗಿರಬಹುದಾದ ಅಷ್ಟೂ ಪಾತ್ರಗಳನ್ನು ವಿಶಿಷ್ಟ ನಾಟಕೀಯತೆಯ ಲೇಪದೊಂದಿಗೆ ನನಗೇ ಕಾಣಿಸುವ ಪ್ರಕ್ರಿಯೆ. ಅದರ ತಮಾಷೆಯೇ ಅದು. ಅದರ ಆಕರ್ಷಣೆಯೂ ಅದೇ. ಆಗಲೇ ಅದು ಅರ್ಥವಾಗುವ ಹಂತದಿಂದ ನುಸುಳಿ ನೇರ ಸುಪ್ತ ಮನಸ್ಸಿಗೇ ಲಗ್ಗೆ ಇಟ್ಟು ಅನುಭವವಾಗುವುದು ಸಾಧ್ಯವಾಗುವುದೂ. ನಾಟಕದ ವಸ್ತು ಹೆಚ್ಚು ಹೆಚ್ಚು ಮನುಷ್ಯನ ಅಂತರಂಗದ ನಿಶ್ಶಬ್ದಕ್ಕೆ ಸಂಬಂಧಿಸಿದಂತೆಲ್ಲ ರಂಗ ಕ್ರಿಯೆಯಲ್ಲಿ ಅದನ್ನು ಪ್ರತ್ಯಕ್ಷಗೊಳಿಸಿ ಅನುಭವವಾಗಿಸುವ ಸವಾಲು ಕಠಿಣದ್ದಾಗುತ್ತದೆ. ವಿವೇಕರು ಬಹುಮುಖಿಯಲ್ಲಿ ಎತ್ತಿಕೊಂಡಿರುವ ವಿಚಾರ ತುಂಬ ಸೂಕ್ಷ್ಮವಾದದ್ದು. ರಂಗಕ್ರಿಯೆಯ ಮುಖೇನ ಪ್ರೇಕ್ಷಕನಿಗೆ ಅದನ್ನು ತಲುಪಿಸುವ, ಅವನ ಅನುಭವವನ್ನಾಗಿಸುವ ಕ್ರಿಯೆ ಇನ್ನೂ ಹೆಚ್ಚು ಸೂಕ್ಷ್ಮವಾದದ್ದು ಮತ್ತು ಬಹಳ ಪರಿಶ್ರಮವನ್ನು ಬೇಡುವಂಥದ್ದು. ಹಾಗಾಗಿ ಇಲ್ಲಿನ ಸವಾಲು ದೊಡ್ಡದು.

ಒಬ್ಬ ಸಂಜಯ, ಒಬ್ಬ ಶೇಖರ, ಒಬ್ಬ ಜಕ್ಕೂಜಿ ಒಂದೆಡೆ ಇರುತ್ತ ಶಕೂನಂಥ ಪಾತ್ರವೊಂದು ಹಲವು ಆಯಾಮಗಳನ್ನು ನಾಟಕಕ್ಕೆ ಕೊಡುವ ಕಸು ಹೊಂದಿದೆ. ಕೆಂಪೇಗೌಡ ಅಥವಾ ಟಿಪ್ಪೂ ತರದ ಇತಿಹಾಸದ ಪಾತ್ರಗಳನ್ನು ತಮ್ಮ ಉದ್ದೇಶಕ್ಕೆ ವಿವೇಕ್ ಬಳಸಿರುವುದು ಅತ್ಯಂತ ಸಮಯೋಚಿತವೂ ಅಗತ್ಯವೂ ಆಗಿದೆ ಅನಿಸುತ್ತದೆ. ಕೊಲೆ, ಅಪಘಾತ, ದುರಂತಗಳನ್ನು ರಂಜಕವಾಗಿ ಬಳಸಿಕೊಳ್ಳುವ ಮಾಧ್ಯಮಗಳು ಕಣ್ಮುಂದೆ ಇರುತ್ತ ಬಹುಷಃ ಒಂದು ದುರಂತವನ್ನು ಅವರು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ನಾಟಕಕ್ಕೆ ಇನ್ನೂ ಹೆಚ್ಚಿನ ರಂಗು ಬರುತ್ತಿತ್ತು; ಹಲವು ರಸಗಳ ಅಭಿವ್ಯಕ್ತಿಗೆ ಅವಕಾಶ ತೆರೆಯುತ್ತಿತ್ತು ಮತ್ತು ರಂಗಕೃತಿಯಾಗಿಯೂ ನಾಟಕವಾಗಿಯೂ ಅದರ ಸವಾಲುಗಳು ಹೆಚ್ಚು ಸ್ಪಷ್ಟ ಮತ್ತು ಸರಳವಾಗುತ್ತಿದ್ದವು ಎಂಬುದು ನಿಜವಾದರೂ ಹಾಗೆ ಮಾಡದೆ ಇತಿಹಾಸವನ್ನು ಬಳಸಿಕೊಂಡಿರುವುದರ ಕುರಿತು ಕೊಂಚ ಯೋಚಿಸಬೇಕು.

ಇತಿಹಾಸವನ್ನು ಕೂಡ ಮನುಷ್ಯನ ಹೊಟ್ಟೆಪಾಡಿನ, ಓದುಗರ ಸುದ್ದಿಯ ಹಸಿವಿನ, ವರದಿಗಾರನ 'ತಲೆಮೇಲೆ ಹೊಡೆಯುವಂಥ ಸ್ಟೋರಿ'ಯೊಂದರ ಹಸಿವಿನ ಅಗತ್ಯಗಳಿಗೆ ಇಲ್ಲಿನ ಪಾತ್ರಧಾರಿಗಳಿಂದ ಬಳಸಿಕೊಳ್ಳಲ್ಪಡುವುದು, ಇತಿಹಾಸದ ವಿಪರ್ಯಾಸಗಳಿಗಾಗಿ ವರ್ತಮಾನದಲ್ಲಿ ಹೊಡೆದಾಡುತ್ತಿರುವ ಸಮಾಜದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಚುಚ್ಚುಮದ್ದೇ. ಎಲ್ಲೋ ಮತ್ತೆ ವರದಿಗಾರನಿಗೂ ಈ ಬಗೆಯ ಬಳಕೆ ಅವನ ಹೊಟ್ಟೆಪಾಡಾಗಿರುವ ವಿಪರ್ಯಾಸವನ್ನು ಕೂಡ ನಾವು ಗಮನಿಸಬೇಕು. ಒಬ್ಬ ಜಕ್ಕೂಜಿ, ಒಬ್ಬ ಶೇಖರನ ಎಲ್ಲ ಕಪಟ ನಾಟಕದ ಹಿಂದೆ ಇರುವ ಒಂದು ಹೊಟ್ಟೆಪಾಡಿನ ಅನಿವಾರ್ಯತೆ ಮತ್ತು ಅದು ಈ ವ್ಯಕ್ತಿಗಳ ವೈಯಕ್ತಿಕ ಅನಿವಾರ್ಯತೆಗಿಂತ ಒಟ್ಟು ಸಮಾಜದ ಅಗತ್ಯವೇ ಆಗಿತ್ತೇನೋ ಎನ್ನುವಂಥ ಒಂದು ಸಮಷ್ಠಿಯ ಒತ್ತಡ ಕೂಡ ಶ್ರೀಮಂತ ವರ್ಗದಿಂದ, ಪತ್ರಿಕೆಗಳಿಂದ ನಿರ್ಮಿಸಲ್ಪಟ್ಟಿರುವುದನ್ನು ನಾಟಕ ಹಿಡಿದುಕೊಟ್ಟಿದೆ. ಇದು ಪಠ್ಯವಾಗಿ ನಾಟಕದ ಬಹುಮುಖ್ಯ ಯಶಸ್ಸು. ವ್ಯಕ್ತಿ ಮತ್ತು ಸಮಾಜದ ಜಂಟಿ ಅಗತ್ಯ ಈ ಭ್ರಷ್ಟತೆಯ ಹಿಂದೆ ಕೆಲಸ ಮಾಡಿರುತ್ತ ಇದಕ್ಕೆ ಸುಲಭ ಲಭ್ಯ ಅಸ್ತ್ರವಾಗಿ ಬಳಸಲ್ಪಡುವುದು ನಮ್ಮದೇ ಇತಿಹಾಸ ಎನ್ನುವ ಅಂಶ ಬಹುಮುಖಿಗೆ ಮನುಷ್ಯನ ಬಹುಮುಖಿತನಗಳನ್ನು ಹೇಳುವುದರಾಚೆಗೂ ಚಾಚಬಲ್ಲ ಬಹುಮುಖ ಆಯಾಮಗಳನ್ನು ಒದಗಿಸಿದೆ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, November 23, 2008

ವಿವೇಕ್ ಶಾನಭಾಗರ ನಾಲ್ಕನೆಯ ಕಥಾಸಂಕಲನ : ಮತ್ತೊಬ್ಬನ ಸಂಸಾರ (2005)


ಮತ್ತೊಬ್ಬನ ಸಂಸಾರ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಅವರ ಹಿಂದಿನೆಲ್ಲ ಕಥೆಗಳಿಗಿಂತ ಭಿನ್ನವಾಗಿಯೂ ಹೆಚ್ಚು ಸಂಕೀರ್ಣವಾಗಿಯೂ ಇರುವುದು ವಿಶೇಷ. ಇವು ಯಾವುದೇ ಬಗೆಯ ಸೈದ್ಧಾಂತಿಕ ಚೌಕಟ್ಟಿಗಾಗಲೀ, ಸರಳೀಕೃತ ನೋಟಕ್ಕಾಗಲೀ, ಸಿದ್ಧಮಾದರಿಯ ವಿಮರ್ಶೆಗಾಗಲಿ ದಕ್ಕದ ಕಥೆಗಳು. ಪ್ರತಿ ಕಥೆಯೂ ಅದರಷ್ಟಕ್ಕೇ ಅನನ್ಯ ಮತ್ತು ಹಾಗಾಗಿ ಸಂಕಲನದ ಬಗ್ಗೆ ಒಟ್ಟಾರೆ ಮಾತುಗಳು ಕಷ್ಟವಾಗಿಸುವಷ್ಟು ವಿಭಿನ್ನ.

ಮೊದಲ ಕಥೆ ಮತ್ತೊಬ್ಬನ ಸಂಸಾರವನ್ನು ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ನಿಲುಕು ಮತ್ತು ಇನ್ನೂಒಂದು ಕಾದಂಬರಿಯೊಂದಿಗೆ ಹೋಲಿಸುವುದು ಅಗತ್ಯ. ನಿಲುಕು ಕಥೆಯಲ್ಲಿ ಒಬ್ಬರ ಬದುಕಿನಂತೆಯೇ ಇನ್ನೊಬ್ಬರ ಬದುಕು ಇರಬಹುದಾದ ಒಂದು ಅನೂಹ್ಯ ಸಾಧ್ಯತೆ ಒಂದು ಕುತೂಹಲವಾಗಿ, ಬೆರಗಾಗಿ ಬಂದಿದೆ. ಇಬ್ಬರು ಶ್ರೀರಾಮರು ಇರಬಹುದಾದ ಮತ್ತು ಇಬ್ಬರೂ ಅಗೋಚರ ಎಂಬ ಹೆಸರಿನಲ್ಲೇ ಒಂದು ಕಥೆಯನ್ನು ಬರೆದಿರಬಹುದಾದ ವಿಲಕ್ಷಣ ಎನಿಸಬಹುದಾದ ಸತ್ಯ; ಅರ್ಜುನ ಹೇಳದೇ ಮುಚ್ಚಿಡುವ ಸಂಗತಿ ತನ್ನದೇ ಬದುಕಿನಲ್ಲಿ ನಡೆದ(ನಡೆದಂಥ) ವಿದ್ಯಮಾನವಾಗಿರಬಹುದಾದ ಸಾಧ್ಯತೆ; ಯಾವ ನಿಖರ ಕಾರ್ಯಕಾರಣ ಸಂಬಂಧವೂ ಇಲ್ಲದೆ ಸರಸ್ವತಿ ಎಂಬ ಒಬ್ಬ ಹುಡುಗಿ ಭಿಡೆಯಿಲ್ಲದೆ ತನ್ನನ್ನು ಮದುವೆಯಾಗು ಎಂದು ಮನೆಗೇ ಬರುವ ಪ್ರಸಂಗದ ವೈಚಿತ್ರ್ಯ -ಎಲ್ಲವೂ ಇಲ್ಲಿ ಕೇವಲ ಬೆರಗಿನಾಚೆ ಚಾಚಿಕೊಳ್ಳುವ ಉದ್ದೇಶ ಹೊಂದಿಲ್ಲ. ಆದರೆ ಇನ್ನೂ ಒಂದು ಕಾದಂಬರಿ ಉದ್ದಿಶ್ಯ ಪೂರ್ವಕ ಹಾಗೆ ಪರಕಾಯ ಪ್ರವೇಶದ ಅನಿವಾರ್ಯವನ್ನು ಕಂಡುಕೊಂಡಿರಬಹುದಾದ ಒಬ್ಬ ವ್ಯಕ್ತಿಯ ತಲ್ಲಣಗಳನ್ನು ಕುರಿತದ್ದು, ಎರಡು ಸಂಸ್ಕೃತಿಗಳ ಜನಜೀವನದ ಮೇಲೆ ಅದರಿಂದಾದ ಪರಿಣಾಮಗಳನ್ನು ಸೂಕ್ಷ್ಮವಾಗಿ ವಿವೇಚಿಸುವಂಥದ್ದು ಮತ್ತು ಇಂಥ ಒಂದು ಹೊರದಾರಿಯ ದೂರಗಾಮಿ ಪರಿಣಾಮಗಳನ್ನು ಆಧುನಿಕತೆ ಮತ್ತು ಪರಂಪರೆಯ ಆಯಾಮಗಳಿಂದ ನೋಡಲು ಯತ್ನಿಸುವಂಥದ್ದು. ಮತ್ತೊಬ್ಬನ ಸಂಸಾರವಾದರೋ ಬದುಕಿನ ತೀರ ವ್ಯಕ್ತಿಗತ ನೆಲೆಯಲ್ಲೂ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವುದರ ಸೂಕ್ಷ್ಮ ವಿಡಂಬನೆಯೇ ಸರಿ.

ಶರವಣ ಸರ್ವಿಸಸ್ ವಿವೇಕರ ಬಹುಮುಖ್ಯ ಕಥೆಗಳಲ್ಲಿ ಒಂದು. ಇಲ್ಲಿನ ಶರವಣನನ್ನು ಲಂಗರು ಕಥೆಯ ಪಬ್ಬ, ಸುಧೀರನ ತಾಯಿ ಕಥೆಯ ಉಪ್ಪ, ಸರಹದ್ದು ಕಥೆಯ ಜನ್ನನ ಜೊತೆ ಹೋಲಿಸಬಹುದಾದ ವ್ಯಕ್ತಿಯಾದರೂ ಇವನು ಅವರೆಲ್ಲರ ರಿಫೈನ್ಡ್ ಮಾದರಿಯೆನ್ನಬೇಕು. ಯಾಕೆಂದರೆ ಕಂತು ಕಥೆಯ ಬುಗುರಿಯನ್ನೋ, ಜಾಮೀನು ಸಾಹೇಬ ಕಥೆಯ ದಯಾನಂದನನ್ನೋ ಪಬ್ಬನಿಗೆ ಕಸಿ ಮಾಡಿರುವಂತೆ ಈ ಶರವಣ ಈ ಎಲ್ಲರನ್ನು ಹೋಲುತ್ತಾನೆ. ಆದರೆ ಆ ಎರಡೂ ಪಾತ್ರಗಳು (ಕಂತು ಕಥೆಯ ಬುಗುರಿ ಅಥವಾ ಜಾಮೀನು ಸಾಹೇಬದ ದಯಾನಂದ) ತೆರೆದಿಡದ ಸತ್ಯಗಳನ್ನು ಈ ಶರವಣ ನಮ್ಮೆದುರು ತೆರೆದಿಡುವ ಬಗೆ ಹೊಸದು. ಬೆಂಗಳೂರಿನಿಂದ ಬಂದ ಶ್ರೀಕಾಂತ ಈ ಶರವಣನಲ್ಲಿ ಪ್ರಚೋದಿಸುವ ಅಪಾರ ಯಶಸ್ಸಿನ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿಲ್ಲಿ.

ಓದಿನಲ್ಲಿ ದಡ್ಡನಾಗಿದ್ದ, ದೇಹದಲ್ಲಿ ಪೀಚಾಗಿದ್ದ, ಸೋಡಾ ಗ್ಲಾಸಿನ ಬುಡ್ಡಿ ಎಂಬ ಅಡ್ಡ ಹೆಸರಿನ ಶ್ರೀಕಾಂತ ಬೆಂಗಳೂರಿನಲ್ಲಿ ಶೇರು ವ್ಯವಹಾರ ನಡೆಸಿ ಎಷ್ಟು ಬೆಳೆಯುತ್ತಾನೆಂದರೆ ಶರವಣನ ಹೆಂಡತಿ ಲಾವಣ್ಯಳತ್ತ ಅವನು ಬೀರುವ ನೋಟದಲ್ಲಿರುವ ಆತ್ಮವಿಶ್ವಾಸದಲ್ಲೇ ಶರವಣನಿಗೆ ಬದುಕಿನ ಸವಾಲಿನ ಸಂದೇಶ ರವಾನೆಯಾಗಿ ಬಿಟ್ಟಿರುತ್ತದೆ! ನಗರದ ಭ್ರಮಾಧೀನ ಜನರ ನಾಡಿಯನ್ನು ಕಂಡುಕೊಂಡ ಶರವಣ ಇವರಿಗೆ ಸಮಾಧಾನದ ಭ್ರಮೆ ಬೇಕೇ ಹೊರತು ನಿಜವಾದ ಸಮಾಧಾನ ಬೇಕಿಲ್ಲ ಎಂಬುದನ್ನು ತನ್ನ ಶರವಣ ಸರ್ವಿಸಸ್‌ನ ಬಂಡವಾಳ ಮಾಡಿಕೊಂಡು ಬೆಳೆಯುತ್ತಾನೆ. ಆದರೆ ಈ ಪ್ರಕ್ರಿಯೆಯಲ್ಲಿ ಅವನೇ ತನ್ನ ನಿಜದ ಶಾಂತಿ, ನೆಮ್ಮದಿ, ಸಮಾಧಾನಗಳನ್ನು ಬಲಿಕೊಟ್ಟಿರುವುದು ಮಾತ್ರ ಅವನ ಅರಿವಿಗೆ ಬರುವುದು ತಡವಾಗಿ! ಹೆಂಡತಿ ಲಾವಣ್ಯ ಒಂದು ಮಾತೂ ಆಡದೆ ಮನೆಬಿಟ್ಟು ಹೋಗಿದ್ದರಲ್ಲಿ, ಮಗಳ ಮಹಾ ಮೌನದಲ್ಲಿ ಇದು ಶರವಣನೆದುರು ನಿಂತಿದೆ. ಆಧುನಿಕ ನಗರಗಳ ಎಲ್ಲ ಸಾಂಪ್ರದಾಯಿಕ ಭ್ರಮೆಗಳನ್ನೂ ದುಡಿಸಿಕೊಂಡ ಶರವಣ ಯಾವ ಯಶಸ್ಸಿನ ಕುದುರೆಯ ಬೆನ್ನು ಹತ್ತಿದ್ದನೋ ಅದಕ್ಕೇ ಬಂಧಿಯಾಗಿರುವುದನ್ನು ಕಥೆ ನವಿರಾಗಿ, ಸರಳವಾಗಿ ಕಟ್ಟಿಕೊಡುತ್ತದೆ. ಇಲ್ಲಿ ವಾಸ್ತು, ನಾಡಿ ಶಾಸ್ತ್ರ, ಪುರೋಹಿತರ ವ್ಯವಸ್ಥೆಯೆಲ್ಲದರ ಜೊತೆ ಯುಜಿ ಕೂಡ ಬರುತ್ತಾರೆ. ನಡುವಿನ ಫಿಲ್ಟರ್ ಇಲ್ಲದೆ ಬದುಕನ್ನು ಪಡೆಯುವ ಯೂಜಿಯವರ ಪ್ರವೇಶ ಮತ್ತು ಫಿಲ್ಟರುಗಳನ್ನೇ ತನ್ನ ಸರ್ವಿಸಸ್‌ನ ಬಂಡವಾಳ ಮಾಡಿಕೊಂಡಿರುವ ಶರವಣ ಈ ಎರಡು ಧ್ರುವಗಳ ನಡುವೆ ಅವನ ಮಗಳ ಮಹಾ ಮೌನವಿದೆ. ಕಥೆಯಲ್ಲೂ ಆ ಮೌನ ನಮ್ಮ ಒಳಗನ್ನು ಕಲಕುವಂತೆ, ಕಾಡುವಂತೆ ಹರಿಯುತ್ತಿದೆ.

ಕಾರಣ ಕಥೆ ವಿವೇಕರ ಹಳೆಯ ಶೈಲಿಗೆ ಹೆಚ್ಚು ಸಮೀಪವಿದೆ. ಮುಕ್ತಾ ಎನ್ನುವ ಒಬ್ಬ ನತದೃಷ್ಟೆಯ ಬದುಕಿನ ದುರಂತವನ್ನು ಪರೋಕ್ಷವಾಗಿಯೇ ಹೇಳುವ ಈ ಕಥೆಯಲ್ಲಿ ವಿವೇಕರ ಮೊದಮೊದಲಿನ ಕಥೆಗಳ ಪ್ರೇಮಕ್ಕನೋ, ಇತ್ತೀಚಿನ ಸುಧೀರನ ತಾಯಿ ಸರೋಜಿನಿಯೋ ಕಂಡರೆ ಅಚ್ಚರಿಯಿಲ್ಲ. ಹೊಸದಾದ ಒಂದು ಬದಿ ಕಡಲು ಕಾದಂಬರಿಯಲ್ಲಿ ಕೂಡ ಇಂಥ ಪಾತ್ರಗಳು ಎದುರಾಗುತ್ತವೆ. ಕಾರಣ ಕಥೆಯ ಆರಂಭ ಗಮನಿಸಿ:

"ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ ಹೂದಂಡೆಯ ನಡುವಿನ ನಾರಿನ ಹಾಗೆ ರಸ್ತೆ ಹರಿದಿತ್ತು. ಈ ಒತ್ತೊತ್ತು ಮನೆಗಳ ನಡುವಿನ ಒಂದು ಖಾಲಿ ಜಾಗದಿಂದಾಗಿ, ಆ ಬದಿಯ ಮನೆಗಳ ಸಾಲು ಥಟ್ಟನೆ ಅಲ್ಲಿ ತುಂಡಾಗಿತ್ತು. ಈ ಜಾಗದ ನೇರ ಎದುರಿಗೆ, ರಸ್ತೆಯ ಈಚೆ ಕಡೆ, ನನ್ನ ಅಜ್ಜನ ಮನೆ."

ಇಲ್ಲಿ ಕಥೆ ಇರುವುದು ಈ ಅಜ್ಜನ ಮನೆಯ ಎದುರು ಮನೆಯಲ್ಲಿ. ಆದರೆ ಅದರ ಎಲ್ಲ ಅನಾವರಣ ನಡೆಯುವುದು ಈ ಅಜ್ಜನ ಮನೆಯಲ್ಲೇ. ಅಲ್ಲದೆ ಬೆಳೆದವರ ಲೋಕದ ಮೂಢನಂಬುಗೆಗಳನ್ನು, ಅದಕ್ಕೆ ತನ್ನ ತಪ್ಪೇನೂ ಇಲ್ಲದೆ ಬಲಿಯಾದವಳ ನೋವನ್ನು, ಇಲ್ಲಿ ವಿವೇಕ್ ನಮಗೆ ಒಬ್ಬ ಮುಗ್ಧ ಬಾಲಕ ಮತ್ತು ಆ ಮುಕ್ತಾಳ ಮುಖಾಮುಖಿಯ ವಿವರಗಳಲ್ಲಿ ಕಟ್ಟಿಕೊಡುತ್ತಾರೆ. ಇಲ್ಲಿ ಗಮನಿಸಬೇಕಾದ್ದು ಓದುಗನಿಗೆ ಮುಕ್ತಾ ನೇರವಾಗಿ ದಕ್ಕುವುದು ಪುಟ್ಟ ಬಾಲಕನೊಂದಿಗಿನ ಅವಳ ಪುಟ್ಟ ಪಟ್ಟಾಂಗದಿಂದಲೇ ಆಗಿದ್ದರೂ ಇಲ್ಲಿನ ನಿರೂಪಣೆ ಆ ಬಾಲಪ್ರಜ್ಞೆಯನ್ನು ಬಳಸಿಕೊಂಡಿಲ್ಲದಿರುವುದು. ಇಲ್ಲಿನ ನಿರೂಪಕ ವಯಸ್ಸಿನ ನಿರ್ಬಂಧವಿಲ್ಲದ ಒಂದು ಸ್ವಾತಂತ್ರ್ಯವನ್ನು ಉಳಿಸಿಕೊಂಡು ಏಕಕಾಲಕ್ಕೆ ವಿಭಿನ್ನ ಪಾತಳಿಗಳಲ್ಲಿ ಸಂಚರಿಸಬಲ್ಲ ಸಾಧ್ಯತೆಯನ್ನು ಬಳಸಿಕೊಳ್ಳುತ್ತಾನೆ. ಹಾಗಾಗಿ ಅದನ್ನು ಹೊಸದೇ ಆದ ನಿಚ್ಚಳ ಕಣ್ಣುಗಳಿಂದ ಕಾಣುವುದನ್ನು ಸಾಧ್ಯವಾಗಿಸುತ್ತಾನೆ.

ಈ ಮಾರಿಕಾಂಬೆ, ಅಪಶಕುನ ಎಂಬ ಅಪಖ್ಯಾತಿಗೆ ತುತ್ತಾದ ಮುಕ್ತಾ, ಒತ್ತೊತ್ತಾದ ಮನೆಗಳಲ್ಲಿ ಇದೊಂದೇ ಕಳಚಿಕೊಂಡಿರುವುದು, ನಡುವಿನ ದಾರಿ ಎಲ್ಲವನ್ನು ವಿವರಗಳಲ್ಲಿ ಕಟ್ಟಿಕೊಡುವ ಸಾಮಾನ್ಯ ಕ್ರಿಯೆಯಲ್ಲೂ ವಿವೇಕ್ ತೋರಿಸುವ ರೂಪಕಗಳು ಮನಸೆಳೆಯುತ್ತವೆ, ಯಾಕೆಂದರೆ ಅವು ಸೊಗಸಾಗಿವೆ ಎಂದಷ್ಟೇ ಅಲ್ಲ, ಅವುಗಳು ಕಥೆಯ ಆತ್ಮದೊಂದಿಗೆ ಸಂಬಂಧಿಸಿದ ಯಾವುದೋ ತಂತುಗಳನ್ನು ತಮಗೇ ಅರಿಯದ ಹಾಗೆ ಮೀಟುತ್ತಿವೆ ಎಂಬ ಕಾರಣಕ್ಕೂ. ಇಂಥ ಸಾರ್ಥಕ ಪ್ರತಿಮೆಗಳತ್ತ ವಿವೇಕ್ ಸದಾ ಜಾಗೃತ. ಇಲ್ಲಿನ ಕಥೆಗೂ ನಮ್ಮೊಳಗಿನ ಭಾವಸ್ಪಂದನದ ಉದ್ದೀಪನದಾಚೆ ಘನವಾದ ಅನ್ಯ ಉದ್ದೇಶಗಳಿಲ್ಲದಾಗ್ಯೂ ಈ ಉದ್ದೇಶ ಘನವಾಗುವುದು ಮತ್ತು ಕಥೆ ಸುದೀರ್ಘ ಕಾಲ ಮನಸ್ಸಿನಲ್ಲಿ ನಿಲ್ಲುವುದು ಇಂಥ ವಿವರಗಳಿಂದಲೇ ಎನ್ನುವುದು ಗಮನಾರ್ಹ.

ಅಂಚು ಕಥೆ ಅನೇಕ ಕಾರಣಗಳಿಗೆ ಲಂಕೇಶರ ಕೊನೆಯ ಸಂಕಲನದ ಕಥೆಗಳನ್ನು ನೆನಪಿಸುತ್ತದೆ. ರಸಿಕ ಪಿ.ಟಿ. ಮಾಸ್ತರ ಸುಬ್ಬರಾಯಪ್ಪ ಮತ್ತು ಅವನ ಚೇಷ್ಟೆಗಳು ಒಂದೇ ಒಂದು ಮುಖಾಮುಖಿಯಲ್ಲಿ ಹೇಗೆ ಅಂತರಂಗದ ಶೋಧಕ್ಕೆ ಅವನನ್ನು ಪ್ರೇರೇಪಿಸುವುದೋ ಹಾಗೆಯೇ ಅವನ ಮತ್ತು ಜೀಜಾಬಾಯಿಯ ಒಂದೇ ಒಂದು ಮುಖಾಮುಖಿ ಓದುಗರನ್ನು ಹಲವಾರು ವಿಧಗಳಲ್ಲಿ ತಟ್ಟುತ್ತದೆ, ಬಹುಕಾಲ ಕಲಕುತ್ತದೆ. ಸೂಕ್ಷ್ಮ ಸಂವೇದನೆಗಳಿರುವ ಆದರೆ ಹೊರನೋಟಕ್ಕೆ ಮಹಾರಸಿಕನಷ್ಟೇ ಆಗಿ ಕಾಣುವ ಸುಬ್ಬರಾಯ ಮತ್ತು ದುರಂತ ನಾಯಕಿಯಂಥ ಜೀಜಾಬಾಯಿ ಇಬ್ಬರ ವ್ಯಕ್ತಿತ್ವವನ್ನು ಇಲ್ಲಿ ಕಟ್ಟಿಕೊಡುವ ವಿವೇಕರ ವಿಧಾನ ವಿನೂತನವಾದದ್ದು. ಇದು ಹೆಚ್ಚು ನೇರ ಮತ್ತು ವಾಚ್ಯವಾಗಿಯೇ ಹೇಳುತ್ತ ಹೋಗುವ ವಿಧಾನವಾಗಿದ್ದೂ ಅಷ್ಟೇ ಅಲ್ಲ ಅನಿಸುವಂತೆ ಮಾಡುವ ವಿಧಾನ. ಇದನ್ನು ಲಂಕೇಶ್ ಬಳಸಿದಷ್ಟು ಚೆನ್ನಾಗಿ ಬೇರೆ ಯಾರೂ ಬಳಸಿದಂತಿಲ್ಲ. ವಿವೇಕ್ ತಮ್ಮದೇ ಧಾಟಿಯಲ್ಲಿ ಅದನ್ನು ಮಾಡಿದ್ದಾರೆ. ಕೊಂಚ ಉಡಾಫೆಯ ಲಘು ಧಾಟಿಯಲ್ಲೇ ಸುಬ್ಬರಾಯರ ವಿವರಗಳನ್ನು ವಿವೇಕ್ ತೊಡಗಿದರೂ ಅಂಚು ಕಥೆಯ ಕೊನೆಯ ಪಾರಾ ಇಡೀ ವಿದ್ಯಮಾನವನ್ನು ಹೊಸದೇ ಆದ ಆಯಾಮದ ಪಾತಳಿಯಲ್ಲಿಟ್ಟು ಏನೋ ಕಳಕೊಂಡ, ಅನಾಥ ಭಾವವನ್ನು ಸುಬ್ಬರಾಯ ಮತ್ತು ಓದುಗರಲ್ಲಿ ಸಮಾನವಾಗಿ ಉಳಿಸುವುದು ಜೀಜಾಬಾಯಿಯ ಬಗ್ಗೆಯೇ ಅಥವಾ ನಮ್ಮದೇ ಬದುಕಿನ ಬಗ್ಗೆಯೇ ಎನಿಸುವಂತಾಗುವುದು ವಿಚಿತ್ರ. ಸುಬ್ಬರಾಯ ಬಾಗಿಲಿನ ಚಿಲಕ ಹುಡುಕುವ ಪ್ರಸಂಗವನ್ನು ಮನಸ್ಸು ಚಿತ್ತಾಲರ ಸೆರೆ ಕಥೆಯ ಬರ್ಮಾಚಾರಿಯ ಬಾಗಿಲಿನೊಂದಿಗೆ ಜೋಡಿಸುವುದು ಕೂಡ ಕಥೆಗೆ ಹೊಸ ಆಯಾಮ ಒದಗಿಸುವುದು ಇಲ್ಲಿನ ಚೋದ್ಯ!

ಕೆಲವು ತತ್ವಗಳ ಸಲುವಾಗಿ ಕಥೆಯ ಘನಶ್ಯಾಮನ ವ್ಯಕ್ತಿತ್ವದ ಟೊಳ್ಳುತನ ಅರ್ಚನಾ ಮತ್ತು ರಾಮದಾಸನ ಮೂಲಕವೇ ತೆರೆದುಕೊಳ್ಳುತ್ತ ಹೋಗುವುದಾದರೂ ಈ ಎರಡೂ ಪಾತ್ರಗಳ ತೀರಾ ತೆಳ್ಳನೆಯ ಚಿತ್ರಣ ಕಥೆಗೆ ಬೇಕಾದ ಗುರುತ್ವ ಒದಗಿಸುವಲ್ಲಿ ಸೋತಿದೆ ಅನಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇಂಥ ಪರಿಣಾಮವನ್ನು ವಿವೇಕರ ಮೊದಲ ಸಂಕಲನದ ಕಥೆ ಚಿಪ್ಪುಗಳು ಚೆನ್ನಾಗಿಯೇ ಸಾಧಿಸಿತ್ತು ಅನಿಸುತ್ತದೆ.

ಸರಹದ್ದು ಕಥೆ ಮೇಲ್ನೋಟಕ್ಕೆ ಸರಳವಾದ ಕಥೆಯಂತೆ ಕಂಡರೂ ಆಳವಾದ ಒಂದು ಒಳನೋಟ ಈ ಕಥೆಯಲ್ಲಿದೆ. ಜನ್ನ ಕನಸುಗಳ ಮೂಲಕ, ಕಲ್ಪನೆಯೇ ವಾಸ್ತವ ಎಂಬಂತೆ ತನ್ನ ಸುತ್ತಲಿನ ಸಮಾಜದೊಂದಿಗೆ ವ್ಯವಹರಿಸುತ್ತಾನಾದರೂ ಅವನು ಇದನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತಿರುವುದು ಅನಿಸುತ್ತದೆ. ಮತ್ತು ಹಾಗಾಗಿ ಅವನು ಸುಂದರಿಯ ಬಗ್ಗೆ ಹೇಳುವ ಕಥೆ, ಕಲ್ಪನೆಗಳಿಂದ ಏನನ್ನೋ ಮುಚ್ಚಿಡುತ್ತಿರುವುದು ಸ್ಪಷ್ಟವಾಗುವುದಾದರೂ ಅದರ ಹಿಂದೆ ಘನವಾದ ಒಂದು ಉದ್ದೇಶವಿರಬಹುದೆಂಬ ಅನುಮಾನವೂ ಬರುತ್ತದೆ. ಆದರೆ ಸುತ್ತಲಿನ ಸಮಾಜ ಅವನ ಕಲ್ಪನೆ, ಕನಸುಗಳ ಅಸಂಗತ ವಿವರಗಳಾಚೆ ಏನನ್ನೂ ಅರ್ಥಮಾಡಿಕೊಳ್ಳುವ ಸೂಕ್ಷ್ಮಜ್ಞತೆ ತೋರಿಸುವುದಿಲ್ಲ. ಇದರಿಂದ ಒಂದು ರೀತಿಯಲ್ಲಿ ಭ್ರಮಿತ ವರ್ಗ ಜನ್ನನಂಥವರದ್ದಾಗಿರದೇ ಶೇಷ ಜಗತ್ತಿನದೇ ಅನಿಸಿದರೆ ಅಚ್ಚರಿಯಿಲ್ಲ. ಕೊನೆಯಲ್ಲಿ ಬರುವ ಪೋಲೀಸರ ನಡವಳಿಕೆ ಇದನ್ನು ಸ್ಪಷ್ಟ ಕಾಣಿಸುವಂತಿದೆ. ಇಲ್ಲಿ ಯಾರು ತಮ್ಮ ಸರಹದ್ದುಗಳನ್ನು ಗುರುತಿಸಿಕೊಂಡವರು ಎಂಬುದೇ ಪ್ರಶ್ನೆಯಾಗಿ ಉಳಿಯುವುದು ಕಥೆಯ ಘನತೆ ಹೆಚ್ಚಿಸಿದೆ.

ಕಾಂತಾಸಮ್ಮಿತ ಒಂದು ವಿಲಕ್ಷಣ ದಾಂಪತ್ಯಕ್ಕೆ ಸಂಬಂಧಿಸಿದ್ದು. ಅವನತಿಯ ಕೊನೆಯ ಹಂತದಲ್ಲಿರುವ ವ್ಯಾಪಾರಸ್ತರ ಒಂದು ಸಾರಸ್ವತ ಕುಟುಂಬದ ಚಿತ್ರ ವಿವೇಕರ ಅನೇಕ ಕಥೆಗಳಲ್ಲಿ ಕಂಡುಬರುತ್ತದೆ. ಆದರೆ ಪ್ರತಿಬಾರಿಯೂ ಈ ಸ್ಥಾಯಿಯಾದ ಚಿತ್ರದಿಂದ ವಿವೇಕ್ ಕಟ್ಟಿಕೊಡುವ ಬದುಕು ಭಿನ್ನವಾಗಿಯೇ ಇರುತ್ತದೆ ಮತ್ತು ಒಟ್ಟಾರೆಯಾಗಿ ಕಥೆ ನಮ್ಮನ್ನು ಕಲಕುವುದು ಬೇರೆ ಬೇರೆ ಕಾರಣಗಳಿಗಾಗಿಯೇ ಆಗಿರುತ್ತದೆ. ಆದರೆ ಅಂಥ ಒಂದು ಸೂಕ್ಷ್ಮ ಸಂವೇದನೆಗೆ ಬೇಕಾದ ಮನಸ್ಥಿತಿಯನ್ನು ಇಂಥ ವಿವರಗಳು ಉದ್ದೀಪಿಸುತ್ತವೆ. ಇಲ್ಲಿಯೂ ಜಯವಂತ-ಸುಶೀಲೆ ಮತ್ತು ಅದಕ್ಕೆ ಸಂವಾದಿಯಾಗಿ ಸುರೇಶ-ಮಡಗಾಂವಕರ್ ಸಂಬಂಧ ಕಾಣಿಸುವ ದರ್ಶನ ಭಿನ್ನ. "ಕುಟುಂಬ ಎನ್ನುವುದು ಕಾಮ, ಪ್ರೇಮ, ತಂದೆ ತಾಯಿ, ಮಕ್ಕಳು, ಮನೆತನ, ಪರಸ್ಪರ ಅನಿವಾರ್ಯತೆ, ಅವಲಂಬನೆ ಇದೆಲ್ಲದರ ಒಂದು ಅವಿನಾಭಾವ ಒಕ್ಕೂಟವೆಂದು ಅವಳಿಗೆ ಪದೇಪದೇ ಅನಿಸುವುದು." - ಈ ಮಾತು ಒಂದು ಶಿಲ್ಪವಾಗಿ ಈ ಕಥಾನಕದಲ್ಲಿ ಬಂದಿದೆ. ಜಯವಂತ ತನ್ನ ಮೇಲೆ ಕೈಯೆತ್ತಿದ್ದನ್ನೂ ಶುಭಸೂಚಕವೆಂದು ಕಾಣುವ ಸುಶೀಲೆಯ ಮನೋಭಾವದಲ್ಲಿ, ಹೊಡೆಯುವುದರ ಮೂಲಕವೇ ಈ ತನ್ನ ವಿಲಕ್ಷಣ ಸಂಬಂಧದ ಬಗ್ಗೆ ಅಡಗಿಸಿಟ್ಟ ತನ್ನ ಭಾವನೆಯನ್ನೆಲ್ಲ ಮೊತ್ತಮೊದಲ ಬಾರಿಗೆಂಬಂತೆ ಪ್ರಕಟಪಡಿಸಿದ ಜಯವಂತನ ವರ್ತನೆಯಲ್ಲಿ ತೆರೆದುಕೊಳ್ಳುವ ಸತ್ಯ ಬದುಕು ತನ್ನ ನಿಗೂಢ ಮಜಲುಗಳಲ್ಲಿ ಅಡಗಿಸಿಟ್ಟುಕೊಳ್ಳುವ ಗುಟ್ಟುಗಳ ಬಗ್ಗೆ ಆಘಾತ ಉಂಟುಮಾಡುವಂಥದು.

ಮಂಡಲ ಕಥೆ ಒಂದು ಹಂತದ ವರೆಗೆ ತಂತ್ರವನ್ನೇ ಆಧರಿಸಿಕೊಂಡಿರುವ ಕಥೆಯಾದರೂ ಮುಂದೆ ಮಾನವೀಯ ನೆಲೆಗಟ್ಟಿನಲ್ಲಿ ತನ್ನ ಬಾಹುಗಳನ್ನು ಚಾಚುತ್ತದೆ. ಈ ಕಥೆ ತನ್ನ ಬಸಿರಲ್ಲಿ ಉಳಿಸಿಕೊಳ್ಳುವ ಗುಟ್ಟುಗಳಲ್ಲಿ ಉಳಿದೇ ಹೋಗುವ ಸಾಧ್ಯತೆಗಳ ಒಂದು ಜಗತ್ತು ಕಥೆಗೆ ಒಂದಕ್ಕಿಂತ ಹೆಚ್ಚು ಆಯಾಮಗಳ ನೋಟವನ್ನು ಸಾಧ್ಯವಾಗಿಸುತ್ತ ಕಥೆಯನ್ನು ಅನೂಹ್ಯತೆಯೊಂದಿಗೆ ಐಕ್ಯಗೊಳಿಸಿದೆ. ಚಂದ್ರಿಕಾಳ ಬಸುರಿಗೆ ಕಾರಣರಾದವರು ಯಾರು ಎಂಬುದು ಅವಳ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗಿ ಕಂಡರೂ ಆ ಗುಟ್ಟನ್ನು ಅವಳು ಬಿಟ್ಟುಕೊಡದಿರುವುದು ಅವಳಿಗೇ ಅದು ಯಾರೆಂದು ತಿಳಿಯದೇ ಇರುವುದರಿಂದಲೂ ಇರಬಹುದು ಎನ್ನುವುದು ಆ ಶೋಧವನ್ನು ಕೈಬಿಟ್ಟು ಈ ವಿದ್ಯಮಾನದ ಇತರೆ ಸಾಧಕ ಬಾಧಕಗಳತ್ತ ನೋಡುವಂತೆ ಮಾಡುತ್ತದೆ ಎಂಬುದೇನೋ ನಿಜವೇ. ಆದರೆ, ಮಹಿಮಯ್ಯನ ಅಧಿಕೃತ ಹೆಂಡತಿಯಲ್ಲಿ ಹುಟ್ಟಿದ ಮಗನೇ ಆ ವ್ಯಕ್ತಿಯಾಗಿದ್ದರೆ ಎಂಬ ಒಂದು ಊಹೆ ಬಿಟ್ಟುಕೊಡುವ ಅರ್ಥಗಳು ಬೇರೆಯೇ ಆಗಿರುತ್ತ ಮಹಿಮಯ್ಯ ಕಥೆಯಲ್ಲಿ ಕೊನೆಗೂ ಅಂತ್ಯವಿಲ್ಲದ ಒಂದು ತೊಳಲಾಟಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯಕ್ಕೆ ತಲುಪುವುದರೊಂದಿಗೆ ಅವನು ನಿಜವಾದ ಅಭೇದ್ಯ ಮಂಡಲವೊಂದರ ಎದುರು ನಿಂತಿರುತ್ತಾನೆ.

ಥೂ ಕೃಷ್ಣ ಒಂದು ಹೊಸ ಬಗೆಯ ಪ್ರಯೋಗಶೀಲತೆಯನ್ನು ಕಾಣಿಸುವ ಹಂಬಲ ಹೊಂದಿದೆ. ಈ ಕಥೆಯ ನಾಲ್ಕು ಭಾಗಗಳಲ್ಲಿ ಪ್ರತಿಭಾಗದ ಒಂದಲ್ಲಾ ಒಂದು ಪಾತ್ರದಲ್ಲಿ ಅದರ ಹಿಂದಿನ ಭಾಗದ ಇನ್ಯಾವುದೋ ಒಂದು ಪಾತ್ರದ ಹೊಳಹುಗಳು ಕಾಣಿಸಿದರೂ ಅದು ಇದೇ ಅಲ್ಲ ಅನಿಸುವಂತೆ ಕಥಾನಕ ಮುಂದುವರಿಯುತ್ತದೆ. ಇದು ಒಂದು ಬಗೆಯ ಗೊಂದಲಕ್ಕೆ ನಮ್ಮನ್ನು ತಳ್ಳುವಾಗಲೂ ಒಂದು ನಿರ್ದಿಷ್ಟ ವಿಧಾನದಲ್ಲಿ ಜೋಡಿಸಿಟ್ಟ ಗಾಜಿನ ಪಟ್ಟಕದಲ್ಲಿನ ಬಿಂಬ ಪ್ರತಿಬಿಂಬಗಳೆಲ್ಲ ಸೇರಿ ನಿರ್ಮಿಸುವ ವಿಚಿತ್ರ ಚಿತ್ರದಲ್ಲೂ ಒಬ್ಬ ನುರಿತ ವಿನ್ಯಾಸಕಾರನ ಕೈವಾಡವಿರುವಂತೆ ಕಾಣಿಸುವ ಹಾಗೆಯೇ ಎಲ್ಲ ಗೊಂದಲಗಳನ್ನು ಮೀರಿ ಓದುಗನ ಮನಸ್ಸು ಒಂದು ವಿನ್ಯಾಸಕ್ಕೆ, ಜೋಡಣೆಗೆ ತುಡಿಯುತ್ತದೆ.

ಇಲ್ಲಿ ನಮಗೆ ಮತ್ತೆ ವಿವೇಕರ ನಿಲುಕು, ಇನ್ನೂ ಒಂದು, ಮತ್ತೊಬ್ಬನ ಸಂಸಾರ ಕಥೆ/ಕಾದಂಬರಿಗಳಲ್ಲಿ ಕಂಡುಬರುವ ಸಂಬಂಧವಿಲ್ಲದ ವ್ಯಕ್ತಿಗಳ ಮತ್ತು ಘಟನೆಗಳ ನಡುವೆಯೂ ಯಾವುದೋ ತಂತುವೊಂದು ಸುಪ್ತವಾಗಿ ಗುಪ್ತವಾಗಿ ಕೆಲಸ ಮಾಡುತ್ತಿರಬಹುದಾದ ಅನೂಹ್ಯ ಸಾಧ್ಯತೆಯೊಂದರ ಕಡೆಗೆ ಮುಖಮಾಡಿರುವುದರ ಮುಖಾಮುಖಿಯಾಗುತ್ತದೆ. ಇಂಥ ಒಂದು ಅನೂಹ್ಯ ಸಾಧ್ಯತೆಯನ್ನು ಬಹುಷಃ ಕನ್ನಡದಲ್ಲಿ ಮತ್ತೆ ಮತ್ತೆ ದುಡಿಸಿಕೊಂಡ ಇನ್ನೋರ್ವ ಕಥೆಗಾರ ವಿವೇಕರ ಮೆಚ್ಚಿನ ಯಶವಂತ ಚಿತ್ತಾಲರೇ ಅನಿಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, November 20, 2008

ವಿವೇಕ್ ಶಾನಭಾಗರ ಮೊದಲ ಕಾದಂಬರಿ : ಇನ್ನೂ ಒಂದು (2001)

ಇಲ್ಲಿ ಎರಡು ಜಗತ್ತುಗಳು ಪರಸ್ಪರ ಮುಖಾಮುಖಿಯಾಗುತ್ತ, ಸಮಾನಾಂತರವಾಗಿ ಚಲಿಸುತ್ತ, ತಿಕ್ಕಾಟಕ್ಕೂ ಸಮನ್ವಯಕ್ಕೂ ಸ್ಪಂದಿಸುತ್ತ ಸಾಗುತ್ತವೆ. ಆಧುನಿಕ ಜಗತ್ತಿನ ಜಾಹೀರಾತು ಕ್ಷೇತ್ರದಲ್ಲಿ ಕೆಲಸಮಾಡುವ ಮನೋಹರ್ ಮತ್ತು ಸ್ವಾತಿ, ಕೀಟಶಾಸ್ತ್ರಜ್ಞ ಎಂ.ಆರ್.ಕಶ್ಯಪ್, ಸ್ವಾತಿಯ ಹಿಂದೆ ಬೀಳುವ ಶಂಕರ್, ಸ್ವಾತಿಯ ಅಮ್ಮ ನಿರುಪಮಾ ಮತ್ತು ಇವರ ನಗರ ಜೀವನದ ವಿವರಗಳು ಈ ಆಧುನಿಕ ನಾಗರಿಕ ಜಗತ್ತಿನ ಮುಖಗಳನ್ನು ನಮಗೆ ಕಾಣಿಸುವ ಪ್ರಮುಖ ನೆಲೆ. ಹಾಗೆಯೇ ಕಾಶೀಶನ ಬಾಲ್ಯದ ವಿವರಗಳು, ನಿಗೂಢವಾಗಿ ಕಾಣುವ ಚಂಪಾ, ಯಶವಂತ ಚಿಕ್ಕಪ್ಪ ಮತ್ತು ಅವಳ ಸಂಬಂಧ, ಗೋವಾದ ಕಾಡಿನಂಚಿನ ಊರು, ಅಲ್ಲಿ ಸಿಗುವ ಲೋಲಾ, ಕಾಶೀಶನ ಯಶವಂತ ಚಿಕ್ಕಪ್ಪ, ಅವನ ಹೆಂಡತಿ ಮತ್ತು ಮಗಳಿಗೆ ಸುರುವಾದ ಚಂಪಾ ಚಿಂತೆಯೊಂದಿಗೇ ಮೇಲೆದ್ದು ಬರುವ ಮದುವೆ ಸೀರೆಯ ಗಲಾಟೆಗಳು, ವಸಂತ ನಡೆಸುವ ಕಾಶೀಶನ ಶೋಧ, ದಿನೂ ಅಂಕಲ್ ತೆರೆದಿಡುವ ಪುಟಗಳು, ಚಂದ್ರಹಾಸನ ಆಸ್ತಿ ಸಮಸ್ಯೆ, ಇವೆಲ್ಲ ಇನ್ನೊಂದೆಡೆ ಅಷ್ಟು ನಾಗರಿಕ ಬಣ್ಣಗಾರಿಕೆಯಿಲ್ಲದ ಒಂದು ಸಹಜ ಜಗತ್ತಿನ ನೆಲೆಯನ್ನು ನಮಗೆ ಒದಗಿಸುತ್ತವೆ. ಈ ಎರಡೂ ಜಗತ್ತಿನ ವೈರುಧ್ಯ, ಮಿತಿ, ಸವಾಲುಗಳು ಮತ್ತು ಸಾಧ್ಯತೆಗಳ ಅನಂತ ಆಯಾಮಗಳದ್ದೇ ಒಂದು ಕತೆ. ಇನ್ನೂ ಒಂದು ಕಾದಂಬರಿಯ ಸ್ಥಾಯೀ ಗುರುತ್ವ ಇದು, ಆದರೆ ಈ ಕಾದಂಬರಿಯ ಮಹತ್ವ ಇದಿಷ್ಟೇ ಆಗಿಲ್ಲದಿರುವುದು ಅದರ ಹೆಚ್ಚುಗಾರಿಕೆಯಾಗಿದೆ!

ಇದನ್ನು ಹೀಗೆ ನೋಡುವಂತೆ ಮಾಡುವುದು ಒಂದು ಜಗತ್ತಿನಿಂದ ಇನ್ನೊಂದಕ್ಕೆ ಯಾವುದೇ ಹೆಜ್ಜೆಗುರುತುಗಳನ್ನು ಉಳಿಸದೇ ಪಲಾಯನ ಮಾಡಿರಬಹುದಾದ ಒಂದು ಪಾತ್ರ; ಅದು ಈ ಕಶ್ಯಪ್ ಇರಬಹುದೆ ಎಂಬ ಅನುಮಾನ. ಅದು ನಿಜವೆಂತಲೂ, ಇದ್ದಿರಲಾರದು ಎಂತಲೂ ಇಬ್ಬಗೆಯಲ್ಲಿ ಕಾಣಿಸುತ್ತ ಇರುವಾಗಲೂ ಕಾದಂಬರಿ ಈ ಎರಡೂ ಪಾತಳಿಯ ವಿವರಗಳನ್ನು ಕಟ್ಟಿಕೊಡುತ್ತ ಹೌದಾಗಿದ್ದರೂ ಅಲ್ಲವಾಗಿದ್ದರೂ ಓದುಗ ಕಂಡುಕೊಳ್ಳಬಹುದಾಗಿದ್ದ ಸತ್ಯದ ಬಳಿಗೇ ಅವನನ್ನು ಕೊಂಡೊಯ್ಯುವುದೇ ಈ ಕಾದಂಬರಿಯ ವೈಶಿಷ್ಟ್ಯವಾಗಿದೆ.

ಈ ಎರಡೂ ಲೋಕಗಳು ಕೇವಲ ಬದಲಾದ ಜೀವನ ಕ್ರಮ, ಆದ್ಯತೆಗಳು, ಮನೋಧರ್ಮಗಳನ್ನು ಮಾತ್ರ ಬಿಂಬಿಸುತ್ತಿಲ್ಲ; ತನ್ನ ಹಿಂದಿನದನ್ನು ಇರಲೇ ಇಲ್ಲ ಎಂಬ ಮಟ್ಟದಲ್ಲಿ ನಿರಾಕರಿಸುವ, ಸಂಪೂರ್ಣವಾಗಿ ಅದನ್ನು ತೊಡೆದೇ ಹಾಕುವ ಪ್ರವೃತ್ತಿಯನ್ನು ಹಿಂದಿನದರಲ್ಲಿ ಇರಬಹುದಾದ ಕೊರತೆಗಳು ಅಥವಾ ಆಧುನಿಕತೆಯಲ್ಲಿ ಇರಬಹುದಾದ ಸವಲತ್ತುಗಳು ಹುಟ್ಟಿಸಬಹುದೇ ಎಂಬ ಒಂದು ಅನುಮಾನ ಮತ್ತು ಇಂಥ ಆಮಿಷವನ್ನು ಒಡ್ಡಬಲ್ಲ ಮೋಹಕತೆ, ಅದೆಷ್ಟೇ ಸವಲತ್ತುಗಳನ್ನು ಒದಗಿಸಲಿ, ಆಧುನಿಕ ಜೀವನ ಕ್ರಮದಲ್ಲಿ ಇರುವುದೇ ಆದಲ್ಲಿ ಅದು ಇವತ್ತು ನಮಲ್ಲಿ ಹುಟ್ಟಿಸುವ ಅಸುಖ, ಅಂಥ ಅಸುಖದ ಭಾವಕ್ಕೆ ಇದ್ದಿರಬಹುದಾದ ಅಸ್ಪಷ್ಟ ಕಾರಣಗಳು - ಇದನ್ನು ಈ ಕಾದಂಬರಿ ಅಧ್ಭುತವಾಗಿ ತಟ್ಟಿದೆ.

ಕಶ್ಯಪ್ ತಾನು ಕಾಶೀಶನೇ ಹೌದೆಂದು ಒಪ್ಪಿದ್ದರೆ ಎಂಬ, ಒಪ್ಪಲಿ, ಒಪ್ಪುತ್ತಾನೆ ಎಂಬ ಒಂದು ನಿರೀಕ್ಷೆಯನ್ನು ವಿವೇಕ್ ಓದುಗನಲ್ಲಿ ಹುಟ್ಟಿಸುವ ಹಾಗೆ ಇಲ್ಲಿ ಶೋಧ ಮತ್ತು ಕಥಾನಕದ ನಡೆ ಇದೆ. ಅದಕ್ಕೂ ಹೆಚ್ಚಾಗಿ, ಅದೊಂದರಿಂದಲೇ ಅಂಥ ಮಹಾನ್ ವಿದ್ಯಮಾನವೇನೂ ಘಟಿಸಲು ಕಾದುಕುಳಿತಿಲ್ಲ ಎಂಬುದು ನಿಜವಾದರೂ ಕಶ್ಯಪ್ ಮತ್ತೆ ತಾನು ಅಂಕೋಲೆಯ ಕಾಶೀಶನೇ ಎಂಬುದನ್ನು ಒಪ್ಪುವ ಪ್ರಕ್ರಿಯೆಯೇ ದಿನೂ ಅಂಕಲ್, ಚಂದ್ರಹಾಸ, ಚಂಪಾ ಮತ್ತು ಇಷ್ಟೆಲ್ಲ ಶೋಧದ ಬೆನ್ನು ಹಿಡಿದ ಮನೋಹರ ಎಲ್ಲರ ಬದುಕಿಗೂ ತರಬಲ್ಲ ಒಂದು ಸಮಾಧಾನ, ಸಂತುಲನ ಏನಿದೆ ಅದು ಸಣ್ಣ ಸಂಗತಿಯಲ್ಲ. ಅದನ್ನು ಓದುಗನ ಅನುಭವವಾಗಿಸುತ್ತಾರೆ ವಿವೇಕ್.

ಇದರ ಒತ್ತಿಗೇ ವಿವೇಕರ ಈ ಕಾದಂಬರಿ ಇನ್ನೂ ಕೆಲವು ಪಾತಳಿಗಳಲ್ಲಿ ಕೆಲಸ ಮಾಡಿದೆ. ಒಂದು, ಸ್ವಾತಿಯ ವೈಯಕ್ತಿಕತೆ ಅಥವಾ ಖಾಸಗೀತನದ ಇಚ್ಛೆ, ಅದರ ಪರಿಕಲ್ಪನೆಯ ಸೂಕ್ಷ್ಮಗಳನ್ನು ವಿವೇಕ್ ಕಟ್ಟಿಕೊಟ್ಟ ವಿನ್ಯಾಸ, ವಿವರಗಳಲ್ಲಿ ಅದನ್ನು ಅವರು ಹಿಡಿದಿಟ್ಟ ರೀತಿ ಅನನ್ಯವಾಗಿದೆ. ಸ್ವಾತಿಯ ತಾಯಿ ಒಂದು ಘಟ್ಟದಲ್ಲಿ ಅವಳ ನೋಟ್ ಬುಕ್ಕು, ಡ್ರಾ, ಟೇಬಲ್ಲು ಎಲ್ಲ ಹುಡುಕುವುದು, ಮಗಳ ಬದುಕಿನಲ್ಲಿ ಇದ್ದರೂ ಇದ್ದಿರಬಹುದಾದ ನಿಗೂಢ ವಲಯಗಳನ್ನು ಪ್ರವೇಶಿಸಲು, ಅದನ್ನು ತಿಳಿದುಕೊಳ್ಳಲು ಬಯಸುವುದು, ಮತ್ತೆ ಮುಂದೆ ಇದೇ ಸ್ವಾತಿ ಶಂಕರನನ್ನು ಅಂಥದೇ ಪರೀಕ್ಷೆಗೆ ಒಡ್ಡುವುದು ಕುತೂಹಲಕರವಾಗಿದೆ. ಇವರು ಹುಡುಕುವುದೇನನ್ನು ಮತ್ತು ಸ್ವಾತಿ ಮುಚ್ಚಿಡಲು ಬಯಸುವುದಾದರೂ ಏನನ್ನು ಎಂಬ ಪ್ರಶ್ನೆಗೆ ಏನೂ ಇಲ್ಲ ಎಂಬ ಉತ್ತರ ಒಂದು ಇರುವುದನ್ನು ಗಮನಿಸಿದರೆ ಇದರ ನಿಜವಾದ ಅರ್ಥ ನಮಗಾಗಲು ಸಾಧ್ಯ. ಇದು ಆಘಾತಕಾರಿಯಾದರೂ ನಿಜ. ಪುಟ 62-63ರಲ್ಲಿ ಬರುವ ಈ ಪ್ಯಾರಾ ಗಮನಿಸಿ:

"ಒಂದು ರಾತ್ರಿ ನಿರುಪಮಾ ನೃತ್ಯ ಕಾರ್ಯಕ್ರಮದಿಂದ ಸುಸ್ತಾಗಿ ಹಿಂತಿರುಗಿ ಬಂದಾಗ ಅವಳ ಮೋರೆಯ ಮೇಲೆ ಆಯಾಸವೂ, ಯಾವುದೋ ನಿರರ್ಥಕತೆಯ ಭಾವವೂ ಇದ್ದ ಹಾಗೆ ಸ್ವಾತಿಗೆ ಅನಿಸಿತು. ಮುಖದ ಮೇಕಪ್, ಕಣ್ಣಿನ ಕಾಡಿಗೆ, ಬಿಗು ಕಳೆದುಕೊಂಡ ಮೋರೆಯ ಚರ್ಮ ಕಂಡು ಸ್ವಾತಿಗೆ ಅಮ್ಮನ ಒಂಟಿತನ ಫಕ್ಕನೆ ಅರಿವಿಗೆ ಬಂದಂತಾಯಿತು. ನೃತ್ಯಕ್ಕೆ ಬಳಸುವ ವಿಶೇಷ ಸೀರೆಯನ್ನು ಕೂಡ ಬದಲಾಯಿಸದೇ ಆವತ್ತು ಅವಳು ಹಿಂತಿರುಗಿದ್ದಳು. ಬಂದವಳೇ ಸೋಫಾದ ಮೇಲೆ ಕುಸಿದು ಕೂತಳು. ಕೂತು ನೀರು ಕುಡಿದಳು. ಅಮ್ಮನನ್ನು ಮಾತಿಗೆಳೆಯಲು ಸ್ವಾತಿ 'ಈವತ್ತು ಯಾವುದು ಮಾಡಿದೆಯಮ್ಮ?' ಅಂದಳು. 'ಕಂಡೆಯ ಕೃಷ್ಣನ.....' ಎಂದು ಅವಳಂದಾಗ ಹಿಂದೊಮ್ಮೆ ಆ ನೃತ್ಯವನ್ನು ತಾನು ನೋಡಿದ್ದು ಸ್ವಾತಿಗೆ ನೆನಪಾಯಿತು. ಮುದ್ರೆ, ಭಂಗಿ, ಅಂಗಚಲನೆ ಎಲ್ಲವೂ ಇದ್ದರೂ ತನ್ನ ಅಮ್ಮ ಯಾವ ಭಾವೋದ್ದೀಪನವೂ ಇಲ್ಲದೇ, ಈ ವಯಸ್ಸಿನಲ್ಲಿ, ಕೃಷ್ಣನನ್ನು ಹುಡುಕುವ ನೃತ್ಯ ಮಾಡುವುದರ ಬಗ್ಗೆ ಅಯ್ಯೋ ಅನಿಸಿತು. ಕಣ್ಣುಗಳನ್ನು ಅರಳಿಸಿ ಕಂಡೆಯಾ ಕಂಡೆಯಾ ಅನ್ನುತ್ತ ರಂಗಮಂಚದ ತುದಿಯಿಂದ ತುದಿಗೆ ಹೋಗುವ ದೃಶ್ಯ ಕಲ್ಪಿಸಿ ಸಂಕಟವಾಯಿತು. ಇಂಥದ್ದನ್ನೆಲ್ಲ ಮಾಡುವುದನ್ನು ಬಿಡು ಎಂದು ಹೇಳಲು ಬಾಯಿಬಿಡುವಷ್ಟರಲ್ಲಿ ಅವಳು 'ಈವತ್ತಿನದು ಚೆನ್ನಾಗಿತ್ತೆಂದು ಬಹಳ ಜನ ಹೇಳಿದರು' ಅಂದಳು. ಯಾರು ಯಾರು ತನ್ನನ್ನು ಹೊಗಳಿದರೆಂಬುದನ್ನು ಹೇಳತೊಡಗಿದಳು. ಆ ಕ್ಷಣ ಸ್ವಾತಿಗೆ ತಮ್ಮ ನಡುವಿನ ಕಂದರ ಎದುರೇ ಕಂಡಂತಾಯಿತು. ಅವಳು ಈ ನಿಖರ ಮುದ್ರೆ ಭಂಗಿಗಳಲ್ಲಿ ಬಂದಿಯಾಗಿದ್ದಾಳೆ, ತಾನು ಕಟ್ಟಿಕೊಂಡ ಜಗತ್ತನ್ನು ಒಡೆದು ಬರಲು ಸಾಧ್ಯವಾಗದಷ್ಟು ದೂರ ಹೋಗಿದ್ದಾಳೆ ಎಂದೂ ಅನಿಸಿತು."

ಎರಡನೆಯದಾಗಿ, ಕಟ್ಟಿಕೊಂಡ ಸುಳ್ಳು ಜಗತ್ತೊಂದನ್ನು ಈ ರೀತಿಯಾಗಿ ವಿವೇಕ ಸ್ಪರ್ಶಿಸುವಾಗಲೇ ಅತ್ತ ಕಶ್ಯಪ್ - ಕಾಶೀಶರ, ಯಶವಂತ-ಯಶೋದ-ಚಂಪಾರ ಒಂದು ಜಗತ್ತನ್ನೂ, ದಿನೂ ಅಂಕಲ್-ಚಂದ್ರಹಾಸರ ಒಂದು ಜಗತ್ತನ್ನೂ ಚಿತ್ರಿಸುತ್ತಾರೆ. ಸತ್ಯ ಎಂದು ಕಾಣಿಸುವ ಸುಳ್ಳುಗಳ ಮತ್ತು ಸುಳ್ಳೆಂದು ಕಾಣಿಸುವ ಸತ್ಯವೇ ಇರಬಹುದಾದ ಸೂಕ್ಷ್ಮಗಳ ಒಂದು ನವಿರು ಹಂದರ ಕಾದಂಬರಿಯುದ್ದಕ್ಕೂ ನಮಗೆ ಸಿಗುವುದು ಗಮನಾರ್ಹ. ಇದನ್ನು ಅತ್ಯಂತ ಕಲಾತ್ಮಕವಾಗಿ ಕಟ್ಟಿಕೊಡುವ ಭಾಗ ಪುಟ 106-107ರಲ್ಲಿ ಬರುತ್ತದೆ.

"ಒಂದಕ್ಕೊಂದು ಸಂಬಂಧವಿಲ್ಲದ ಹಾಗೆ ತೋರುವ, ಆದರೂ ಒಳಗೆಲ್ಲೋ ಸಂಬಂಧ ಇರುವ ಸಾಲುಗಳನ್ನು ಓದುತ್ತ ಸ್ವಾತಿಗೆ ಸುಸ್ತಾಯಿತು. ಶಂಕರ ಯಾವುದನ್ನು ಮೊದಲು ಓದಿದ, ಯಾವ ಕ್ರಮದಲ್ಲಿ ಓದಿದ? ಓದುವ ಕ್ರಮ ಬೇರೆಯಾದರೆ ಇದೆಲ್ಲ ಬೇರೆಯದೇ ಗ್ರಹಿಕೆಯನ್ನು ಕೊಡುತ್ತದಲ್ಲವೇ? ಈ ಪುಸ್ತಕಗಳ ಬದಲು ಬೇರೆ ಯಾವುದೋ ಕೆಲವನ್ನು ಎತ್ತಿ ಅಲ್ಲಿ ಗೆರೆ ಎಳೆದದ್ದನ್ನು ಓದಿದ್ದರೆ ಹೇಗೆ ಕಾಣಿಸುತ್ತಿತ್ತು? ಇನ್ನೊಬ್ಬರನ್ನು ಮುಟ್ಟಲು ಎಷ್ಟೇ ಪ್ರಯತ್ನಿಸಿದರೂ, ಘಟನೆ ಮತ್ತು ಮಾತುಗಳ ಸಂಯೋಜನೆಯಲ್ಲಿ, ನಮ್ಮ ಕೈಮೀರಿದ ಗಳಿಗೆಗಳಲ್ಲಿ ಉಂಟಾಗುವ ಏರುಪೇರುಗಳಿಂದ ಎಲ್ಲವೂ ಬೇರೆಯಾಗಿ ಕಾಣಿಸಿಬಿಡಬಹುದು. ಎಲ್ಲರೂ ತಮತಮಗೆ ತೋಚಿದ ರೀತಿಯಲ್ಲಿ, ಕ್ರಮದಲ್ಲಿ ಓದುತ್ತಾರೆ. ತನ್ನ ಅಮ್ಮನೂ ಹೀಗೇ ಯಾವುದೋ ಕೆಲವು ಎಳೆಗಳನ್ನು ಹಿಡಿದು ತನ್ನೊಳಗೆ ಹೋಗಲು ನೋಡಿದಳೆಂದು ಸ್ವಾತಿಗೆ ಅನಿಸಿತು."

ಮೂರನೆಯದಾಗಿ, ಕಥಾನಕದ ಚೌಕಟ್ಟಿನಲ್ಲೇ ಬದುಕನ್ನು ಗ್ರಹಿಸುವ ಮತ್ತು ಹಾಗೆ ಗ್ರಹಿಸಿದ್ದನ್ನು ಇನ್ನೊಂದು ಜೀವಿಗೆ ವಿವರಗಳಲ್ಲಿ, ಭಾಷೆಯಲ್ಲಿ ತಲುಪಿಸುವ ಹಂತದ ಸಂಕಟಗಳನ್ನು ಸೂಕ್ಷ್ಮವಾಗಿ ತೆರೆದಿಡುವುದರ ಜೊತೆಗೇ ಸ್ವತಃ ವಿವೇಕರ ಬರವಣಿಗೆಯ ಕುರಿತ ಗ್ರಹಿಕೆಗಳನ್ನು ನಮಗೆ ಕಾಣಿಸಬಲ್ಲ ಒಂದು ಮಾತೂ ಪುಟ 101ರಲ್ಲಿ ನಮಗೆ ಸಿಗುತ್ತದೆ.

"ನೆನಪುಗಳನ್ನು ಹೇಗೆ ಗ್ರಹಿಸಿದ್ದೇವೆ ಅನ್ನುವುದೂ ಮುಖ್ಯ. ನನಗೆ ನನ್ನ ಅಮ್ಮನ ಜೊತೆ ಒಂದು ವಿಚಿತ್ರ ಸಂಬಂಧ ಇತ್ತು. ಅದು ಏನು ಅನ್ನುವುದು ನಾವಿಬ್ಬರೂ ಅದನ್ನು ಗ್ರಹಿಸಿದ ರೀತಿಯಲ್ಲಿ ನೋಡಿದಾಗ ಮಾತ್ರ ಅರ್ಥಪೂರ್ಣ ಅನಿಸುತ್ತದೆಯೇ ಹೊರತು ಬರೀ ನಡೆದದ್ದನ್ನು ಹೇಳಿದಾಗ ಅಲ್ಲ."

ಇನ್ನೂ ಒಂದು ಕಾದಂಬರಿಯ ಕೊನೆಯ ಸಾಲು ಕೂಡ ಇಡೀ ಕಥಾನಕಕ್ಕೆ ಹೊಸ ಆಯಾಮ ದೊರಕಿಸಿಕೊಡಲು, ಅದನ್ನು ನೋಡಬಹುದಾದ ಇನ್ನೊಂದೇ ಪಾತಳಿಯನ್ನು ಸೃಷ್ಠಿಸಿಕೊಡಲು ಯತ್ನಿಸುತ್ತದೆ. ಆದಾಗ್ಯೂ ಈ ಕಾದಂಬರಿ ಕನ್ನಡ ಸಾರಸ್ವತ ಲೋಕದಲ್ಲಿ ಹೆಚ್ಚಿನ ಚರ್ಚೆಗೆ ಭಾಜನವಾಗಲಿಲ್ಲ ಎನ್ನುವುದು ಕನ್ನಡ ಕಾದಂಬರಿ ಸಾಹಿತ್ಯ ಇಂಥ ಲಂಘನಕ್ಕೆ ಇನ್ನೂ ಸಿದ್ಧವಾಗಿರಲಿಲ್ಲವೇನೋ ಅನಿಸುವಂತೆ ಮಾಡಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, November 16, 2008

ವಿವೇಕ್ ಶಾನಭಾಗರ ಮೊದಲ ನಾಟಕ ಸಕ್ಕರೆ ಗೊಂಬೆ (1999)


ಸಕ್ಕರೆಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ತನ್ನ ತೆಕ್ಕೆಯೊಳಗಿನದೇ ಆಗಿಬಿಟ್ಟ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಬದುಕನ್ನು ಪ್ರಭಾವಿಸುವುದು ಮತ್ತು ನಿಯಂತ್ರಿಸುವುದು ಒಂದೆಡೆಯಿರುತ್ತ ಅದೇ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದರ ಸಂತುಲಿತ ಮನೋಭಾವದ ಗಮನಿಸುವಿಕೆ ಈ ನಾಟಕದಲ್ಲಿದೆ. ಸ್ಥೂಲವಾಗಿ ಕಂತು ಕಥೆ ಮಾರುಕಟ್ಟೆಯ ಸೆಳೆತ ಹಳ್ಳಿಯ ಬದುಕನ್ನು ಹೇಗೆ ತಲ್ಲಣಗೊಳಿಸಬಲ್ಲದು ಎಂಬುದನ್ನು ಹೇಳಿದರೆ, ಪ್ರತ್ಯಕ್ಷ ಕಥೆ ತೀರಾ ಅಂತರಂಗದ್ದಾಗಬಹುದಾದ ಗಂಡು ಹೆಣ್ಣು ಸಂಬಂಧ, ಕೊನೆಗೆ ಕಾಮವನ್ನು ಕೂಡ ಅದು ತನ್ನ ಪ್ರಭಾವಳಿಯ ಒಳಗೆ ಸೆಳೆದುಕೊಳ್ಳುವ ಆಘಾತಕಾರಿ ಚಿತ್ರ ನೀಡುತ್ತದೆ. ಹುಲಿ ಸವಾರಿ ಕಾರ್ಪೋರೇಟ್ ಜಗತ್ತಿನ ಆಂತರಿಕ ವರ್ಗವನ್ನು ಹೇಗೆ ಮಾರುಕಟ್ಟೆಯೇ ಆವರಿಸಿಕೊಂಡು ಅವರ ಚಿಂತನಾ ಶೈಲಿ, ಬದುಕಿನ ಆದ್ಯತೆಗಳನ್ನು ಬದಲಿಸಬಲ್ಲದು ಎಂಬುದರತ್ತ ಹೆಚ್ಚು ಗಮನ ನೀಡಿದೆ. ಆದರೆ ಸಕ್ಕರೆಗೊಂಬೆ ಈ ಎಲ್ಲ ಬಗೆಯ ಮನುಷ್ಯರನ್ನು ಕೇವಲ ಮನುಷ್ಯರನ್ನಾಗಿಯೇ ಗ್ರಹಿಸುತ್ತ ಅವರ ಮನುಷ್ಯತ್ವವನ್ನು ಈ ಕಾರ್ಪೋರೇಟ್ ಸಂಸ್ಕೃತಿ ಹಲವು ಪಾತಳಿಗಳಲ್ಲಿ ಹೇಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೇ ಸೂಕ್ಷ್ಮವಾಗಿ ಸೂಚಿಸುವಂತಿದೆ.

ಇಲ್ಲಿ ಬರುವ ಮುತ್ಯಾನ ಪಾತ್ರ ಗಮನಿಸಿ. ಇದು ಈ ನಾಟಕದ ಒಂದಾನೊಂದು ಆಯಾಮವನ್ನು ಸೂಚಿಸುವ ಬಹು ಮುಖ್ಯಪಾತ್ರ. ಅದೇ ರೀತಿ ನಂದಕುಮಾರನ ಪಾತ್ರ ಕೂಡ ತುಂಬ ನಾಜೂಕಾದದ್ದು. ಎಲ್ಲ ನಾಟಕೀಯತೆಯನ್ನು ಹೊಂದಿರುವಂಥದ್ದು. ಈತ ಬೇಕಾದಾಗ ಬೇಕಾದ ಹಾಗೆ ಕಾಣಿಸಿಕೊಳ್ಳಬಲ್ಲ ಸಾಧ್ಯತೆಯನ್ನು ಉಳಿಸಿಕೊಂಡಿರುವುದೇ ಈ ನಾಟಕದ ಮಹತ್ವದ ಅಂಶ. ಪಾರ್ಶ್ವವಾಯುವಿನಿಂದ ಓಡಾಡಲಾರದ, ಮಾತನಾಡಲಾರದ ಈತ ನ್ಯಾಯಾಲಯದ ಒಂದು ದೃಶ್ಯದಲ್ಲಿ ಮಾತಿಲ್ಲದೆ ನಿಂತು ತನ್ನ ಹಿಯರಿಂಗಿಗೆ ಸಾಕ್ಷಿಯಾಗುವ ಪ್ರಸಂಗವಿದೆ. ಅಲ್ಲಿ ಬರುವ ಆತನ ಮೇಲಿನ ಮಗನ ಆರೋಪಗಳು, ಅವನದೇ ಆದ ದೃಷ್ಟಿಕೋನದ ಸಮರ್ಥನೆ ಏನೇ ಇದ್ದರೂ ಈ ದೃಶ್ಯದ ಪರಿಕಲ್ಪನೆ ಬಹಳ ಕುತೂಹಲಕರ ಮತ್ತು ಅದರ ನಾಟಕೀಯತೆಗಾಗಿಯೇ ಅದು ಇಷ್ಟವಾಗುವಂಥದ್ದು. ಹಾಗೆಯೇ ನಾಟಕ ಅನೇಕ ಕಡೆಗಳಲ್ಲಿ ನಂದಕುಮಾರನ ಕಬಂಧ ಬಾಹುಗಳು ಎಲ್ಲೆಲ್ಲೂ ಚಾಚಿರುವುದನ್ನು ಸೂಚ್ಯವಾಗಿಯೇ ಕಾಣಿಸಿರುವ ರೀತಿ ಕೂಡ ಬಹಳ ಮೊನಚಾಗಿ, ಪ್ರೇಕ್ಷಕನನ್ನು ತಟ್ಟುವಂತೆ ಬಂದಿದೆ. ಇನ್ನು ಡೈರೆಕ್ಟರುಗಳು, ಅವರ ಮಾತುಕತೆ, ವ್ಯವಹಾರದಲ್ಲಿ ಮೇಲ್ನೋಟಕ್ಕೆ ಕಾಣುವಂಥ ವಿಶೇಷವೇನಿಲ್ಲ. ಆದರೆ ಅವರೆಲ್ಲ ಒಂದು ವರ್ಗದೊಳಗಿನ ಆಂತರಿಕ ಜಗತ್ತನ್ನು ನಮಗೆ ಕಾಣಿಸುತ್ತ ಇಡೀ ನಾಟಕ ಕೇವಲ ಕಾರ್ಪೊರೇಟ್ ಜಗತ್ತಿನ ಕುರಿತಾಗಿಲ್ಲ, ಅದು ಮನುಷ್ಯನ ಕುರಿತಾಗಿದೆ ಎನಿಸುವಂತೆ ಮಾಡುವುದು ಗಮನಾರ್ಹವಾಗಿದೆ. ಇಂಥ ಒಂದು ಆಯಾಮ ಈ ನಾಟಕಕ್ಕೆ ದಕ್ಕಿರುವುದು ಈ ಪಾತ್ರಗಳ ನಡೆ ನುಡಿಯ ಮೂಲಕವೇ. ಹಾಗೆಯೇ ಇಲ್ಲಿ ಬರುವ ಶರ್ವಿಲಕನ ಗೀತೆ ಎಂಬ ಕಥೆಯ ಯಥೋಚಿತ ಬಳಕೆ. ಬಹುಷಃ ಇಡೀ ನಾಟಕದ ತಲ್ಲಣಗಳನ್ನು, ಆಘಾತಗಳನ್ನು ನಾಟಕದ ಈ ಅಂಕ ಅತ್ಯಂತ ಸುಪುಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ. ನಾಟಕದ ಹೆಸರೇ ಸೂಚಿಸುವಂತೆ ಈ ಸಕ್ಕರೆಗೊಂಬೆಯ ಪ್ರಕರಣ ಕಾರ್ಪೊರೇಟ್ ಜಗತ್ತಿನ ಮೂಲಭೂತ ಸಿದ್ಧಾಂತವನ್ನು ಮತ್ತು ಅದರ ಅನಿವಾರ್ಯತೆಯನ್ನು ಜೊತೆಜೊತೆಯಾಗಿಯೇ ಪ್ರಸ್ತುತಪಡಿಸಿ ದಂಗುಬಡಿಸುವ ರೀತಿಯೇ ನಾಟಕದ ಯಶಸ್ಸನ್ನು ನಿರ್ಧರಿಸಿಬಿಟ್ಟಿರುವಂತಿದೆ.

ಬೊಂಬೆ ಸಕ್ಕರೆಯದು. ಸಕ್ಕರೆಯನ್ನು ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ಹಂಚುವುದು ಇಲ್ಲಿನ ರಿಚ್ಯುಯಲ್; ಅದನ್ನು ಹಂಚಿಕೊಳ್ಳುವವರಿಗೆ, ಹಂಚಿಕೊಳ್ಳಲು ಉತ್ಸುಕರಾಗಿ ಕಾದು ನಿಂತವರಿಗೆ. ಅವರಿಗೆಲ್ಲ ಅದರ ಆಚೆ ಈ ರಿಚ್ಯುಯಲ್ ಕುರಿತು ಯಾವುದೇ ಸಂವೇದನೆಗಳಾಗಲೀ ಆಸಕ್ತಿಯಾಗಲೀ ಇಲ್ಲ. ಆದರೆ ಅದನ್ನು ಹಂಚುವವರು ಅದನ್ನು ಸಂಪಾದಿಸುವುದಕ್ಕೆ ಅನುಸರಿಸುವ ಮಾರ್ಗಗಳಿಗೆ ಪ್ರತಿಮಾ ವಿಧಾನವನ್ನು ಕಲ್ಪಿಸುವ ಒಂದು ರಿಚ್ಯುಯಲ್ ಕೂಡಾ ಇಲ್ಲಿ ಇದೆ. ಅದರ ಬಗ್ಗೆ ಕೂಡಾ ಸಂಪಾದನೆಯ, ವಿತರಣೆಯ ಹೊಣೆಹೊತ್ತವರಿಗೆ ಕುತೂಹಲವಿಲ್ಲ, ಸಂವೇದನೆಗಳಿಲ್ಲ. ಹೀಗೆ ಈ ರಿಚ್ಯುಯಲ್‌ಗಳ ಬಗ್ಗೆ ಅದರ ಅಧ್ವರ್ಯುಗಳಿಗಾಗಲೀ, ಫಲಾನುಭವಿಗಳಿಗಾಗಲೀ ತಿಳಿದುಕೊಳ್ಳುವ ಕುತೂಹಲವೇ ಇಲ್ಲದಿರುವುದು, ಅದರ ಯುಕ್ತಾಯುಕ್ತ ವಿಚಾರದ ಕಡೆ ಯಾವುದೆ ಸಂವೇದನೆಗಳಿಲ್ಲದಿರುವುದು ಮಹತ್ವದ ಅಂಶ. ಈ ರಿಚ್ಯುಯಲ್‌ನ ಮರ್ಮಗಳನ್ನು ಬಲ್ಲವರೇ ಬಲ್ಲರು. ಇದನ್ನು ಒಂದು ರೂಪಕದ ಮಾದರಿಯಲ್ಲಿ ತೆರೆದಿಡುವುದು ನಾಟಕದ ಕಲಾತ್ಮಕತೆಗೆ, ನಾಟಕೀಯತೆಗೆ ಜೊತೆಜೊತೆಯಾಗಿಯೇ ಪುಷ್ಟಿ ನೀಡಿದೆ ಮಾತ್ರವಲ್ಲ ನಾಟಕದ ಪರಿಣಾಮಕಾರತ್ವವನ್ನೂ ಹೆಚ್ಚಿಸಿದೆ. ನಾಟಕ ತೀವೃವಾಗಿ ತಟ್ಟುವಲ್ಲಿ ಎಷ್ಟು ಯಶಸ್ವಿಯಾಗಿದೆ ಎಂದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳದ್ದು ಒಂದು ತೂಕವಾದರೆ ಈ ನಾಟಕದ್ದೇ ಇನ್ನೊಂದು ತೂಕ ಎನ್ನಬೇಕು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, November 12, 2008

ವಿವೇಕ್ ಶಾನಭಾಗರ ಮೂರನೆಯ ಕಥಾಸಂಕಲನ : ಹುಲಿಸವಾರಿ (1995)


ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳೂ ವ್ಯಾವಹಾರಿಕ ಆಯಾಮವೊಂದು ಮನುಷ್ಯ ಸಂಬಂಧಗಳ ನಡುವೆ ನುಸುಳುವ, ಎಲ್ಲೋ ಭಾವನಾತ್ಮಕ ಸಂಬಂಧಗಳಿಗಿಂತ ವ್ಯವಹಾರವೇ ಮುಖ್ಯವಾಗುವ, ಸಾಮಾಜಿಕ ಸ್ತರದಲ್ಲಿ ಇದರಿಂದಾಗಿ ಮೌಲ್ಯಗಳು ಕುಸಿಯುವ ಮತ್ತು ಅಂತಿಮವಾಗಿ ಮನುಷ್ಯನೇ ತನ್ನ ಅಂತರಂಗದಲ್ಲಿ ಹೆಚ್ಚು ಹೆಚ್ಚು ಟೊಳ್ಳಾಗುತ್ತ ಹೋಗುವುದರ ಚಿತ್ರಣವಿದೆ. ವಿವೇಕರ ಇದುವರೆಗಿನ ಕಥಾಲೋಕಕ್ಕೆ ಹೋಲಿಸಿದರೆ ಇದು ತೀರಾ ಹೊಸತನ ಮತ್ತು ಹೆಚ್ಚು ಸಮಾಜಮುಖಿಯೂ ಸಮಕಾಲೀನ ವ್ಯಾವಹಾರಿಕ ಜಗತ್ತಿಗೆ ಸ್ಪಂದಿಸುವಂಥವೂ ಆಗಿರುವ ಕತೆಗಳನ್ನು ಹೊಂದಿರುವ ಸಂಕಲನ. ಕಂತು ಮತ್ತು ಜಾಮೀನು ಸಾಹೇಬ ಹಳ್ಳಿಯ ಹಿನ್ನೆಲೆಯನ್ನೇ ಹೊಂದಿದ್ದರೆ, ಹುಲಿಸವಾರಿ ಸಂಪೂರ್ಣವಾಗಿ ಕಾರ್ಪೊರೇಟ್ ಜಗತ್ತಿನ ಕಥೆ ಹೇಳುತ್ತದೆ. ಸಶೇಷ ಕಥೆ ಇವೆರಡನ್ನೂ ಸಂತುಲನಗೊಳಿಸುವ ಪ್ರಯತ್ನದಂತಿದೆ. ನೂಲಿನ ಏಣಿ ಮತ್ತು ಪ್ರತ್ಯಕ್ಷ ಕಥೆಗಳಲ್ಲಿ ಸುತ್ತಲಿನ ಸಮಾಜದ ಬದಲಾದ ರೀತಿನೀತಿ, ಮೌಲ್ಯಗಳು ಮನುಷ್ಯನ ಆಂತರಿಕ ಜಗತ್ತನ್ನು ಕೂಡ ಟೊಳ್ಳಾಗಿಸುತ್ತ ಸಾಗಿದ ಚಿತ್ರ ಇದೆ.

ಕಂತು ಬಹುಷಃ ವಿವೇಕರ ಅತ್ಯುತ್ತಮ ಕಥೆಗಳಲ್ಲಿ ಇನ್ನೊಂದು. ಇದು ಒಂದು ನೀಳ್ಗತೆಯಾಗಿದ್ದರೂ ಕಾದಂಬರಿಯ ಹರವು ಪಡೆದಿರುವುದು ಮತ್ತು ಅಂಥ ವಾತಾವರಣವನ್ನು ಸಶಕ್ತವಾಗಿ ನಿರ್ಮಾಣಮಾಡಿರುವುದು ಗಮನಾರ್ಹ. ಮಾವಿನೂರಿನಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಲು ಸಿಗುತ್ತದೆ ಎಂಬ ಒಂದು ಸಂಗತಿ ಊರಿನ ಹಲವು ಹತ್ತು ಬಗೆಯ ಜನರನ್ನು ಮತ್ತು ಊರ ಸಹಜ ವಿದ್ಯಮಾನಗಳನ್ನು ಬಗೆಬಗೆಯಲ್ಲಿ ತಟ್ಟುವ ವಿವರಗಳಲ್ಲೇ ವಿವೇಕ ಊರಿನ ಚಿತ್ರ ಕಟ್ಟಿಕೊಡುತ್ತಾರೆ. ಮಾತ್ರವಲ್ಲ ಅದರಿಂದಲೇ ಅಲ್ಲಿ ಸುಪ್ತವಾಗಿರುವ ತಲ್ಲಣಗಳ ಅನುಭೂತಿಯನ್ನೂ ಓದುಗನಿಗೆ ತಲುಪಿಸುತ್ತಾರೆ.

ಪೇಪರು ಹಂಚುವ ಬುಗುರಿ, ಸದಾನಂದ ಮಾಸ್ತರ, ಅವರ ಹೆಂಡತಿಯ ವಿಚಿತ್ರ ಮಾನಸಿಕ ಕಾಯಿಲೆ ಮತ್ತು ಅದಕ್ಕೂ ಗ್ರಹಗತಿಗಳಿಗೂ ಇದ್ದಿರಬಹುದಾದ ನಂಟು, ಈ ಮಾಸ್ತರರ ಅರೆಬರೆಯಾದ ವೈಜ್ಞಾನಿಕ ಅಧ್ಯಯನ ಮತ್ತು ಊರ ಜ್ಯೋತಿಷಿ ತರ್ಕಶಾಸ್ತ್ರಿಯೊಂದಿಗಿನ ಅವರ ಹುಂಬ ಜಗಳ, ಊರಿನ ಮುಳುಗಡೆ ಸಾಧ್ಯತೆ ಮತ್ತು ಅದನ್ನು ವಿಧವಿಧವಾದ ಕಾರಣಗಳಿಗಾಗಿ ವಿರೋಧಿಸುವ ಅಥವಾ ಬೆಂಬಲಿಸುವ ಜಗನ್ನಾಥನಂಥ, ಗಂಗಾಧರನಂಥ ಮಂದಿ, ಗಂಗಾಧರನ ನಿಧಿಯ ಹುಡುಕಾಟ ಅವನ ಬದುಕನ್ನೇ ಆವರಿಸುವ ವಿಲಕ್ಷಣ ಬಗೆ, ಪಾಳುಭೂಮಿ ಖರೀದಿಸಿ ಮುಳುಗಡೆಯ ಪರಿಹಾರದಿಂದ ಲಾಭ ಮಾಡಲು ಹೊರಟ ಜಗನ್ನಾಥ, ಅವನ ಕಾಯಿಲೆ ಮತ್ತು ಸಾವು, ದಿವಾಳಿಯಂಚಿಗೆ ತಲುಪಿದ ಪಾಂಡುರಂಗ ಈ ಗ್ರಹಣ ಕಾಲದಲ್ಲಿ ಹಣ ಸಂಪಾದಿಸಲು ಕಂಡುಕೊಳ್ಳುವ ಮಾರ್ಗಗಳು, ಎಲ್ಲೋ ಯಾರೋ ಮರದ ಕೆತ್ತನೆಯ ಬಾಗಿಲು, ಹಳೆಯ ಕೆಲವು ವಸ್ತುಗಳನ್ನು ಖರೀದಿಸಿದ್ದೇ ಮನೆಯಲ್ಲಿದ್ದ ಸಾಮಾನನೆಲ್ಲ ಹೊರಗಿಟ್ಟು ವಿದೇಶೀಯರು ಅದನ್ನು ಖರೀದಿಸಬಹುದೇ ಎಂದು ಆಸೆಪಡುವ ಮಂದಿ, ಎಲ್ಲದಕ್ಕೂ ಕಳಸವಿಟ್ಟಂತೆ ಕಾಣಿಸುವ ಕಾವೇರಿಯ ಹುಚ್ಚು ಈ ಕಥೆಗೆ ಹಲವು ಆಯಾಮಗಳನ್ನೂ, ಸಹಜತೆಯನ್ನೂ ಏಕಕಾಲಕ್ಕೆ ಒದಗಿಸಿದೆ. ಹಾಗಾಗಿ ಇದು ಹಲವು ಸಾರ್ಥಕ ಪ್ರತಿಮೆಗಳ ವಿಶಿಷ್ಟ ಕತೆಯಾಗಿ ಓದುಗನನ್ನು ಗಾಢವಾಗಿ ಕಲಕುವ ಅಂತಃಶ್ಶಕ್ತಿ ಹೊಂದಿರುವ ಸವಾಲೊಡ್ಡುವ ಕಥೆ.

ಜಾಮೀನು ಸಾಹೇಬ ಮತ್ತು
ಶೇಷ ಕಥೆಗಳು ಮಾನವೀಯತೆ, ಮನುಷ್ಯ ಸಂಬಂಧಗಳು ಮತ್ತು ಮನಸ್ಸಿನ ಭಾವವಲಯ ಎಲ್ಲವೂ ಒಂದು ಹಂತದಲ್ಲಿ ಲೆಕ್ಕಾಚಾರಗಳಾಗಿ, ಹಣ ಮತ್ತು ಕಾನೂನು (ಯಾಂತ್ರಿಕ ನಿಯಮ ಬದ್ಧತೆ)ಗಳಷ್ಟೇ ಆಗಿ ಇವು ಮತ್ತೆ ಬಯಸಿದರೂ ಹೊರಬರಲಾರದ ಚಕ್ರವ್ಯೂಹಗಳಾಗಿ ಬಿಡುವ ದುರಂತವನ್ನು ಧ್ವನಿಪೂರ್ಣವಾಗಿ ನಿರೂಪಿಸುತ್ತವೆ. ಈ ಕಥೆಗಳಲ್ಲಿ ವಿವೇಕ್ ಬಳಸಿಕೊಳ್ಳುವ ರೂಪಕಗಳು ವಿಶೇಷ ಗಮನಕ್ಕೆ ಅರ್ಹವಾಗಿವೆ. ನ್ಯಾಯಾಲಯದ ಮುಂದೆ ಆರೋಪಿಗಳಾಗಿ ಹಾಜರಾಗುವವರಿಗೆ ಜಾಮೀನು ನಿಲ್ಲುವುದೇ ಒಂದು ಹೊಟ್ಟೆಪಾಡಿನ ಮಾರ್ಗವಾಗುವುದು ಮತ್ತು ಅದು ವ್ಯವಹಾರವಾಗಿ ಕುದುರಿದಂತೆಲ್ಲ ಮನುಷ್ಯ ಸಂಬಂಧ, ಅಂತಃಕರಣಗಳನ್ನೂ ಮೀರಿ ಹಣದ ಲೆಕ್ಕಾಚಾರವಷ್ಟೇ ಉಳಿಯುವುದು ಒಂದು ಕತೆಯಾದರೆ, ದಿನದ ಲೆಕ್ಕ ತಾಳೆಯಾಗದೆ ಹನ್ನೆರಡು ರೂಪಾಯಿ ವ್ಯತ್ಯಾಸವಾಗಿರುವುದೇ ಒಂದು ಜೀವದ ಜೀವಮಾನದ ಚಿಂತೆಗೆ ಕಾರಣವಾಗುವುದನ್ನು ಹೇಳುತ್ತದೆ ಇನ್ನೊಂದು ಕಥೆ.

ಹುಲಿಸವಾರಿ ಕೂಡ ವಸ್ತು ಮತ್ತು ತಂತ್ರಗಳ ದೃಷ್ಟಿಯಲ್ಲಿ ಇವೇ ಕಥೆಗಳನ್ನು ಹೋಲುತ್ತದಾದರೂ ಅದು ಹೆಚ್ಚು ಪರಿಣಾಮಕಾರಿಯಾಗಿಯೂ, ಕಾರ್ಪೊರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಈ ಎರಡು ಕತೆಗಳಿಗಿಂತ ಹೆಚ್ಚು ವಿಶಾಲವಾದ ವ್ಯಾಪ್ತಿಯುಳ್ಳದ್ದೂ ಆಗಿರುವುದರಿಂದ ಹೆಚ್ಚು ಆಳವಾದ ಸಾಮಾಜಿಕವಾದ ಆಯಾಮವನ್ನು ಹೊಂದಿದೆ. ಹುಲಿಸವಾರಿ ಕತೆಯಲ್ಲಿ ಕೂಡ ವಿವೇಕ್ ಬಳಸಿಕೊಳ್ಳುವ ರೂಪಕಗಳು ವಿಶಿಷ್ಟವಾಗಿವೆ. ಏಕಕಾಲಕ್ಕೆ ಧ್ವನ್ಯಾರ್ಥವನ್ನೂ ವಾಚ್ಯಾರ್ಥವನ್ನೂ ಹೊಂದಿರುವ ಇಲ್ಲಿನ ತರಬೇತಿಯ ಹಂತದ ಆಟಗಳು ಮತ್ತು ಅವುಗಳಿಗೆ ಭಿನ್ನವಾಗಿ ಸ್ಪಂದಿಸುವ ಉಚೆ, ಜೆಫ್ ಮತ್ತು ನಿರೂಪಕ, ಕಥೆಗೆ ನೀಡಿರುವ ಹುಲಿಸವಾರಿ ಎಂಬ ಹೆಸರು ಎಲ್ಲವೂ ಕಥೆಯ ಪರಿಣಾಮದ ತೀವೃತೆಯನ್ನು ಹೆಚ್ಚಿಸಿವೆ. ಜಾಗತೀಕರಣ ಮತ್ತು ತದನಂತರದ ಮಧ್ಯಮವರ್ಗದ ಕೊಳ್ಳುಬಾಕ ಸಂಸ್ಕೃತಿಯ ಫಲ-ಪರಿಣಾಮಗಳ ಕುರಿತು ಬಹಳಷ್ಟು ಕಥೆಗಳು ಇವತ್ತು ಬಂದಿವೆಯಾದರೂ ಈ ಕಥೆಗಳು 1992ರಲ್ಲಿ ಬಂದವು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಇವುಗಳನ್ನು ನೋಡಬೇಕಾಗುತ್ತದೆ. ಅಲ್ಲದೆ ಇಲ್ಲಿ ಬದಲಾಗುವ ವ್ಯಕ್ತಿಗತ ಬದುಕಿನ ಹಲವು ಅಂಶಗಳು ಮತ್ತು ಅಂಥ ಬದಲಾವಣೆಗೆ ಕಥೆಗಾರರು ಸೂಚಿಸುವ ಕಾರಣಗಳು ಹೌದೋ ಅಲ್ಲವೋ ಎನ್ನುವಂತಿರುವುದು ಅನಿವಾರ್ಯವೇ ಆಗಿರುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನಾವು ಮತ್ತೆ ವಿವೇಕರ ಶರವಣ ಸರ್ವಿಸಸ್ ಕಥೆಯನ್ನೇ ಗಮನಿಸಬೇಕು. ಆದರೆ ಕಂತು ಕಥೆ ಈ ಮಿತಿಯನ್ನು ಮೀರಿ ನಿಲ್ಲುವುದು ವಿಶೇಷವಾಗಿದೆ. ಇಲ್ಲಿ ವಿವೇಕ್ ಏಕಕಾಲಕ್ಕೆ ಸಮಾಜದ ಬಿಡಿಬಿಡಿ ಘಟಕಗಳನ್ನೂ, ಒಟ್ಟಾರೆ ಊರಿನ ಬದುಕನ್ನೂ ಒಂದು ಇನ್ನೊಂದರ ಮೇಲೆ ಬೀರುವ ಪರಸ್ಪರ ಪರಿಣಾಮವನ್ನು ಸಮರ್ಥವಾಗಿ ಗ್ರಹಿಸುತ್ತ ತಮ್ಮ ಕಥಾನಕವನ್ನು ಬೆಳೆಸುತ್ತಾರೆ. ಹಾಗೆಯೇ ಹುಲಿಸವಾರಿ ಪೂರ್ತಿಯಾಗಿ ಕಾರ್ಪೊರೇಟ್ ಜಗತ್ತನ್ನೇ ಕುರಿತಿದ್ದಾದ್ದರಿಂದ ವ್ಯಕ್ತಿಗತ ನೆಲೆಯ ಬದಲಾವಣೆಗಳ ಕಾರ್ಯ ಕಾರಣ ಸಂಬಂಧದ ಅನಿಶ್ಚಯತೆಯ ಗೊಂದಲದಿಂದ ಬಚಾವಾಗಿದೆ. ಸಶೇಷ ಕಥೆ ತನ್ನ ರೂಪಕದಂಥ ಪ್ರತಿಮೆಯ ಹೊರತಾಗಿಯೂ ಆಳದಲ್ಲಿ ತಟ್ಟಬಲ್ಲ ಕಥೆಯಾಗಿಯೇ ಇವತ್ತಿಗೂ ಉಳಿದಿಲ್ಲ ಎನಿಸುತ್ತದೆ. ಮೇಲ್ನೋಟಕ್ಕೆ ನೂಲಿನ ಏಣಿ ಕಥೆ ಕೂಡ ಇದೇ ಸಾಲಿಗೆ ಸೇರುವುದಿಲ್ಲವೆ ಎನಿಸಿದರೂ ಹಾಗೆ ಹೇಳುವುದು ಸಾರಾಸಗಟು ದೃಷ್ಟಿಕೋನವಾಗುವ ಅಪಾಯವಿದೆ. (ಹುಲಿ ಸವಾರಿ ಕಥೆಯನ್ನು ಇತ್ತೀಚೆಗೆ ಸಾಗರದ ಎಸ್.ಮಾಲತಿಯವರು ನಾಟಕ ರೂಪಕ್ಕೆ ಪರಿವರ್ತಿಸಿದ್ದು ಇದನ್ನು ಈ ಬಾರಿಯ (2008) ವಿಜಯಕರ್ನಾಟಕದ ದೀಪಾವಳಿ ಸಂಚಿಕೆಯಲ್ಲಿ ಕಾಣಬಹುದಾಗಿದೆ.)

ಈ ಮಾತು ನೂಲಿನ ಏಣಿ ಕಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಗಾಂಧಿವಾದ ಸ್ವಾತಂತ್ರ್ಯಾನಂತರ ನೆಹರೂವಾದದ ನೆರಳಿನಲ್ಲಿ ಕ್ರಮೇಣ ಶಿಥಿಲವಾಗುತ್ತ ಹೋದುದರ ಚಿತ್ರಣವಿದೆ. ಅದು ಒಂದು ಸ್ತರದಲ್ಲಿ ಹೇಗೆ ಅನಿವಾರ್ಯವಾಗಿತ್ತು ಎನ್ನುವುದನ್ನು ಕಾಣಿಸುತ್ತಲೇ ಅದರ ನೋವುಗಳನ್ನೂ ವಿವೇಕ್ ಮೀಟಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಸುಪ್ತವಾಗಿರುವ ಕ್ರೌರ್ಯವನ್ನು, ಕಳೆದುಕೊಳ್ಳುತ್ತಿರುವುದರ ಕುರಿತ ದ್ವಂದ್ವವನ್ನು ವಿವೇಕ್ ಬಹಳ ನವಿರಾಗಿ ಹಲವು ಆಯಾಮಗಳಲ್ಲಿ ಮುಟ್ಟುತ್ತಾರೆ. ಇಲ್ಲಿ ಬರುವ ವಿಶ್ವನಾಥ ಮತ್ತು ಅವನ ಸಾವಿನ ವಿಲಕ್ಷಣ ವಿವರಗಳಲ್ಲಿ ಚರಕ ಮತ್ತು ಯಂತ್ರದ ಪರಿಕಲ್ಪನೆಗಳು ಕೆಲಸ ಮಾಡುತ್ತವೆ. ಅದೇ ರೀತಿ ಮಕ್ಕಳಿಗೆ ನೀಡಿದ ಉನ್ನತ ವ್ಯಾಸಂಗದ ಕುರಿತು, ಅದರಿಂದಲೇ ಅವರು ತನ್ನಿಂದ ದೂರಾದರು ಎನ್ನುವ ಬಗ್ಗೆ ಒಳಗೊಳಗೇ ಕೊರಗುವ ವಿಶ್ವನಾಥನ ಗೊಂದಲಗಳಲ್ಲಿ, ನಾಗರಾಜ ಸರಕಾರಿ ನೌಕರಿಯಲ್ಲಿದ್ದು ಲಂಚದಿಂದ ದೊಡ್ಡಮನುಷ್ಯನಾಗುವ, ರಾಜಾರಾಮ ಕಿಣಿಯ ದುಡ್ಡುಮಾಡುವ ಕ್ರಮವನ್ನು ಜನಸಾಮಾನ್ಯರು ಸಹಜ ಎಂದು ಸ್ವೀಕರಿಸುವ ಪ್ರಕ್ರಿಯೆಯಲ್ಲೇ ಇರುವ ವೈರುಧ್ಯಗಳಲ್ಲಿ ವಿವೇಕ್ ನಮಗೆ ಸ್ವಾತಂತ್ರ್ಯಾನಂತರದ ಬದುಕಿನ ಆದ್ಯತೆಗಳು ಬದಲಾಗುತ್ತ ಬಂದ ಸಂದರ್ಭದ ಸಂಕೀರ್ಣ ಪಲ್ಲಟಗಳನ್ನು ಸೂಕ್ಷ್ಮವಾಗಿ ಕಾಣಿಸುತ್ತಾರೆ. ಈ ಕಥೆಯ ಕೊನೆಯಲ್ಲಿ ಬರುವ ಒಂದು ಮೆರವಣಿಗೆ ಮತ್ತು ಬಸ್ಸಿನಲ್ಲಿ ಕುಳಿತಿದ್ದ ಪಾಟೀಲರು ಅದಕ್ಕೆ ಸ್ಪಂದಿಸುವ ಒಂದು ತುಂಡು ಕ್ಷಣದಲ್ಲಿ ದಾಖಲಾಗುವ ವೈರುಧ್ಯ ವಿವೇಕರ ಸೂಕ್ಷ್ಮ ಅವಲೋಕನ ಪ್ರಜ್ಞೆಯನ್ನೂ, ಕತೆಗಾರಿಕೆಯ ಕುಸುರಿಕಲೆಯನ್ನೂ ತೆರೆದು ತೋರಿಸುತ್ತದೆ.

ಕಾರ್ಪೊರೇಟ್ ಜಗತ್ತನ್ನೂ, ಮನುಷ್ಯ ಸಹಜ ಮಾನವೀಯ, ಭಾವನಾತ್ಮಕ, ಸಂಬಂಧಗಳ ಒಂದು ಜಗತ್ತನ್ನೂ ಬೇರೆಯೇ ಒಂದು ಪಾತಳಿಯಲ್ಲಿ ಮುಖಾಮುಖಿಯಾಗಿಸಿದ ಮತ್ತು ಹಾಗೆ ಮಾಡಿ ಯಶಸ್ವಿಯಾದ ಕಥೆ ಪ್ರತ್ಯಕ್ಷ. ಹುಲಿಸವಾರಿ ಕಥೆಯನ್ನು ಈ ಕಥೆಯ ಎದುರಿಟ್ಟು ನೋಡಿದರೆ ತಾಂತ್ರಿಕವಾಗಿ ಹುಲಿಸವಾರಿ ಹೆಚ್ಚನ್ನು ಸಾಧಿಸಿದ್ದರೂ ಪರಿಣಾಮಲ್ಲಿ ಪ್ರತ್ಯಕ್ಷ ಹೆಚ್ಚು ತಟ್ಟುವಂತೆ ಮೂಡಿಬಂದಿದೆ. ಇಲ್ಲಿ ಸಹಜವಾಗಿ ಎಂಬಂತೆ ಬರುವ ಗಂಡು ಹೆಣ್ಣು ಸಂಬಂಧಗಳು ಈ ಕಾರ್ಪೊರೇಟ್ ಜಗತ್ತಿನ ವಿದ್ಯಮಾನಗಳ ಒಂದಂಗವೇ ಆಗಿರಬಹುದೇ ಎಂಬ ಅನುಮಾನ ಬರುವಂತೆ ಕಾಣಿಸಿಕೊಳ್ಳುವುದರಲ್ಲೇ ಕಥೆಯ ಯಶಸ್ಸು ಇದೆ. ಈ ಕಾರಣದಿಂದಾಗಿಯೋ ಏನೋ ಕೌಶಿಕನಂಥ, ರೇಖಾಳಂಥ ಪಾತ್ರಗಳು ಬಹಳ ಕಾಲ ಮನಸ್ಸಿನಲ್ಲಿ ನಿಲ್ಲುತ್ತವೆ ಮಾತ್ರವಲ್ಲ ಆಳದಲ್ಲಿ ವಿಚಿತ್ರ ಭಯವನ್ನೂ ಹುಟ್ಟಿಸುತ್ತವೆ! ಅದೇ ಸವಿತಾ ಪಾತ್ರ ರೇಖಾ ಪಾತ್ರಕ್ಕೆ ಅನೇಕ ಬಗೆಯಲ್ಲಿ ಸಂವಾದಿಯಾಗಿದ್ದರೂ ಅದನ್ನು ಮನಸ್ಸು ಸ್ವೀಕರಿಸುತ್ತದೆ. ರೇಖಾ ಮತ್ತು ಸವಿತಾ ಬದುಕಿನಲ್ಲಿ ದೀಪಕನನ್ನು ಮುಖಾಮುಖಿಯಾಗುವ ವಿಧಾನದಲ್ಲೇ ಈ ವ್ಯತ್ಯಾಸ ಇರುವುದು ಗಮನಾರ್ಹ. ಒಂದು ಮನುಷ್ಯ ಸಂಬಂಧಗಳ ಪಾತಳಿಯಲ್ಲಿ ವ್ಯವಹರಿಸುತ್ತಿದ್ದರೆ ಇನ್ನೊಂದು ವ್ಯವಹಾರದ ಮಟ್ಟದಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ವಿಪರ್ಯಾಸವೆಂದರೆ, ಮಾನವೀಯ ಸಂಬಂಧದ ನೆಲೆಯಲ್ಲಿ ವ್ಯಾವಹಾರಿಕ ನೆರಳಿನ ಭೀತಿಯಿದೆ ಮತ್ತು ವ್ಯಾವಹಾರಿಕ ಸಂಬಂಧದ ನೆಲೆಯಲ್ಲಿ ಮಾನವೀಯ ಸೆಲೆಗಳೇ ಬತ್ತಿಹೋಗಿವೆ. ವಿವೇಕ್ ಇದನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

1985ರಲ್ಲಿ ಬಂದ ಅಂಕುರದಲ್ಲಿ ವಿವೇಕರು ಮನುಷ್ಯ ಸಂಬಂಧಗಳನ್ನು ಬದುಕಿನ ಪ್ರಧಾನ ಅಂಗವಾದ ಕಾಮದ ನೆಲೆಯಲ್ಲಿ ಗುರುತಿಸುತ್ತ ಹೋದರು. ಏಳು ವರ್ಷಗಳ ಬಳಿಕ 1992ರಲ್ಲಿ ಬಂದ ಲಂಗರು ಕಥಾಸಂಕಲನದಲ್ಲಿ ಮನುಷ್ಯ ಸಂಬಂಧಗಳ ತಲ್ಲಣ-ಪಲ್ಲಟಗಳೇ ಪ್ರಧಾನ ಧಾರೆಯಾಗಿತ್ತು. ಹಣ, ಆಸ್ತಿ, ಕಾಮ, ವೃದ್ಧಾಪ್ಯದ ಹಿನ್ನೆಲೆಯಿದ್ದರೂ ವಿವೇಕರ ಪ್ರಧಾನ ಕಾಳಜಿಯಿದ್ದುದು ಮನುಷ್ಯ ಸಂಬಂಧಗಳಲ್ಲಿ ಅನಿಸುತ್ತದೆ. ಹಾಗಾಗಿ ಇಲ್ಲಿ ಅವರು ಮನುಷ್ಯ ಯಾಕೆ ಸಂಬಂಧಗಳ ಬಗ್ಗೆ ಇಷ್ಟು ಚಂಚಲನಾಗುತ್ತಾನೆ ಎಂಬುದರ ಜಾಡನ್ನೇ ಅರಸಿಹೊರಟಂತೆ ಕಂಡರೆ ಅಚ್ಚರಿಯಿಲ್ಲ. ಆದರೆ ಆನಂತರ ಮೂರೇ ವರ್ಷಗಳ ಅಂತರದಲ್ಲಿ 1995ರಲ್ಲಿ ಬಂದ ಹುಲಿರಾಯ ಸಂಕಲನದಲ್ಲಿ ಪೂರ್ತಿಯಾಗಿ ಆಧುನಿಕತೆ ಮತ್ತು ವ್ಯಾವಹಾರಿಕ ಮೋಹಗಳೇ ವಿಜೃಂಭಿಸಿವೆ. ವಿಚಿತ್ರವೆಂದರೆ ಈ ಸಂಕಲನದ ಕಥೆಗಳ ಮಿತಿ ಕೂಡ ಇದೇ ಆಗಿರುವುದು. ಬಹುಷಃ ವಿವೇಕರಿಗೂ ಇದು ಅರಿವಾಗಿರಬೇಕೆನಿಸುತ್ತದೆ. 2001ರಲ್ಲಿ ಬಂದ ಕಾದಂಬರಿ ಇನ್ನೂ ಒಂದು ಗಮನಿಸಿದಾಗ 1990ರಲ್ಲಿ ವಿವೇಕ್ ಬರೆದ ನಿಲುಕು ಮತ್ತು 2003ರಲ್ಲಿ ಬರೆದ ಕತೆ ಮತ್ತೊಬ್ಬನ ಸಂಸಾರ ಎರಡೂ ಅವರನ್ನು ಇನ್ನೂ ಅಷ್ಟಿಷ್ಟು ಕಾಡುತ್ತಿರುವುದರ ಅರಿವಾಗುತ್ತದೆ. ಇದರ ಹೊರತಾಗಿಯೂ 2005ರ ಸಂಕಲನ ಮತ್ತೊಬ್ಬನ ಸಂಸಾರ ವಿವೇಕರ ಕಥಾಜಗತ್ತಿನ ಸಂಪೂರ್ಣ ಭಿನ್ನವಾದ, ಹೊಸತೇ ಮಜಲನ್ನು ತೆರೆದು ತೋರುತ್ತದೆ ಎಂಬುದು ಕೂಡ ಈ ಎಲ್ಲ ಹಿನ್ನೆಲೆಯಲ್ಲಿ ಕುತೂಹಲಕರ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ