Monday, November 3, 2008

ವಿವೇಕ್ ಶಾನಭಾಗರೊಡನೆ...

(ಸಂಪದ ಡಾಟ್ ನೆಟ್ ತಾಣದ ಪಾಡ್‌ಕಾಸ್ಟ್‌ಗಾಗಿ ವಿವೇಕ ಶಾನಭಾಗರನ್ನ ಸಂದರ್ಶಿಸುವ ಅವಕಾಶ, ಹರಿಪ್ರಸಾದ್ ನಾಡಿಗರ ಔದಾರ್ಯದಿಂದ ನನಗೆ ಲಭಿಸಿತ್ತು. ಈಗಲೂ ಆಡಿಯೋ ಕೇಳುಗರಿಗೆ ಅಲ್ಲಿ ಲಭ್ಯವಿರುವ ಈ ಸಂದರ್ಶನದ ಎರಡು ಭಾಗಗಳನ್ನು ಬರಹರೂಪದಲ್ಲಿ ತರಬೇಕೆಂಬ ಒಂದು ಆಸೆ ನನ್ನ ಆಲಸ್ಯ, ಸೋಮಾರಿತನದಿಂದಾಗಿ ಹಾಗೆಯೇ ಉಳಿದಿತ್ತು. ಈ ನವೆಂಬರ್ ತಿಂಗಳಿನಲ್ಲಿ ಈ ಸಂದರ್ಶನವನ್ನು ಮತ್ತೊಮ್ಮೆ ಗಮನಿಸುವುದು ಯುಕ್ತ ಅನಿಸುತ್ತಿದೆ. ಹಾಗೆಯೇ ವಿವೇಕ ಶಾನಭಾಗರ ಎಲ್ಲಾ ಕೃತಿಗಳ ಒಂದು ಸ್ಥೂಲ ಪರಿಚಯವನ್ನೂ ಇಲ್ಲಿ ಹಂತಹಂತವಾಗಿ ಕಾಣಿಸುವ ಉದ್ದೇಶವಿದೆ. ಸಂಪದಕ್ಕಾಗಿ ಮಾಡಿದ, ಸಂಪದದಿಂದಲೇ ಸಾಧ್ಯವಾದ ಈ ಸಂದರ್ಶನದ ಬರಹ ರೂಪ ಮೊದಲು ಅಲ್ಲೇ ಕಾಣಬೇಕು ಅಂತ ತುಂಬ ಅನಿಸಿದರೂ ಅನಿವಾರ್ಯವಾಗಿ ಇಲ್ಲೇ post ಮಾಡುತ್ತಿದ್ದೇನೆ. ಇದಕ್ಕಾಗಿ ಹರಿಪ್ರಸಾದ್ ನಾಡಿಗರನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿ, ಮಾಡಿ ಎಂದು ಬೆಂಬಲಿಸಿದ್ದಾರೆ. ನನ್ನ ಬಹುದಿನಗಳ ಕನಸೊಂದನ್ನು ಸಾಕಾರಗೊಳಿಸಿದ ಅವರಿಗೆ ನನ್ನ ಪ್ರೀತಿಯ ಕೃತಜ್ಞತೆಗಳು ಸಲ್ಲಬೇಕು. ಸಂದರ್ಶನದ ಮೊದಲನೆಯ ಭಾಗ ಇಲ್ಲಿದೆ. ವಿವೇಕರ ಸಾಹಿತ್ಯದ ಕುರಿತ ಚರ್ಚೆ ಇರುವ ಸಂದರ್ಶನದ ಎರಡನೆಯ ಭಾಗವನ್ನು ವಿವೇಕರ ಕಥಾ ಜಗತ್ತಿನ ಒಂದು ಪರಿಚಯದ ನಂತರ ಕಾಣಿಸುತ್ತೇನೆ.)

ಇವತ್ತಿನ ನಮ್ಮ ಕನ್ನಡ ಸಾಹಿತ್ಯ ಪರಿಸರವನ್ನು ನೋಡುವಾಗ ಅದರಲ್ಲಿ ತುಂಬ ಸಣ್ಣತನ, ಗುಂಪುಗಾರಿಕೆ, ಒಂದು ರೀತಿಯ ಅನಾರೋಗ್ಯಕರ ಸ್ಪರ್ಧೆ, ಜಾತೀಯತೆ -ಇದೆಲ್ಲ ಸಾಹಿತಿಗಳ ನಡುವೆ ಹೆಚ್ಚುತ್ತಾ ಇದೆ ಮತ್ತು ಸಾಮಾನ್ಯ ಜನರಿಗಿಂತ ಸಾಹಿತಿಗಳಲ್ಲೆ ಇದು ಸ್ವಲ್ಪ ಹೆಚ್ಚಿದೆ ಅನ್ನುವಂಥ ಒಂದು ವಾತಾವರಣ ಕಾಣ್ತಾ ಇದೆ. ಮುಕ್ತವಾದ ಸಂವಾದ ಸಾಧ್ಯವೇ ಇಲ್ಲವೇನೋ ಅನ್ನುವಂಥ ಪರಿಸ್ಥಿತಿ ಕೂಡಾ ಇದೆ. ಇದನ್ನು ಗಮನಿಸುವಾಗ ಒಬ್ಬ ಉದಯೋನ್ಮುಖ ಸಾಹಿತಿಗೆ ಸಾಹಿತ್ಯದ ಬಗ್ಗೆಯೇ ಒಂದು ರೀತಿಯ ಭ್ರಮನಿರಸನ ಹುಟ್ಟಬಹುದಾದ ಪರಿಸ್ಥಿತಿ ಇದೆ ಅಂತ ಅನಿಸುತ್ತದೆ. ಇದರ ಬಗ್ಗೆ ನಿಮಗೇನನಿಸುತ್ತದೆ?

ಅಂದ್ರೆ, ಈ ಸಾಹಿತಿಗಳು ಬೇರೆ ಕ್ಷೇತ್ರದ ಜನರಿಗಿಂತ ಹೆಚ್ಚು ಉತ್ತಮ ಅಥವಾ ಕಡಿಮೆ ಅಂತ ತಿಳಿದುಕೊಳ್ಳುವುದರ ಬಗ್ಗೇನೆ ನನಗೆ ಭಿನ್ನಾಭಿಪ್ರಾಯ ಇದೆ. ನಾನು ಹಾಗೇನೂ ತಿಳಿದುಕೊಳ್ಳುವುದಿಲ್ಲ. ಯಾಕಂದ್ರೆ ಅದು, ಯಾವುದೇ ಕ್ಷೇತ್ರದಲ್ಲಿದ್ರೂ ಸಾಹಿತ್ಯವೂ ಬೇರೆ ಎಲ್ಲಾ ಕಲೆಗಳ ಹಾಗೆ ಒಂದು ಕ್ಷೇತ್ರ. ಸೊ, ಸಾಹಿತಿಗಳು ಉತ್ತಮವಾಗಿರಬೇಕು, ಅಥವಾ ಅವರು ಎಲ್ಲರಿಗಿಂತ ಹೆಚ್ಚಿನವರಾಗಿರ್ಬೇಕು ಅಂತ ನಾನೇನೂ ಖಂಡಿತವಾಗಿ ತಿಳ್ಕೊಳ್ಳೋದಿಲ್ಲ. ಆಮೇಲೆ ಎಲ್ಲಾ ಕ್ಷೇತ್ರದಲ್ಲಿದ್ದಂತೆ ಸಾಹಿತ್ಯ ಕ್ಷೇತ್ರದಲ್ಲೂ ಈ ತರ ಕೆಲವು ಸಮಸ್ಯೆಗಳು ಇದ್ದಾವೆ.

ಆದ್ರೆ, ಇನ್ನೂ ಮುಖ್ಯವಾಗಿ ಹೇಳ್ಬೇಕಂದ್ರೆ, ಸಾಹಿತ್ಯ ಅಥವಾ ಬೇರೆ ಕಲೆಗಳಿಗೆ ಸಂಬಂಧ ಪಟ್ಟ ಹಾಗೆ ಒಟ್ಟು ಇವತ್ತಿನ ವಾತಾವರಣದಲ್ಲಿ ನಮ್ಮ ಮನಸ್ಸಿನ ನೆಮ್ಮದಿಗೆ ಯಾವುದು ಅಗತ್ಯ ಅಂತ ನಾವೇನು ತಿಳ್ಕೊಂಡಿದ್ದೆವು ಇಷ್ಟು ವರ್ಷ, ಆ ಕಲ್ಪನೆಗಳು ಬದಲಾಗ್ತಾ ಇದ್ದಾವೆ. ಉದಾಹರಣೆಗೆ ಈಗ, ಹಿಂದೆ ಯಾರಾದ್ರೂ ನೀವು ಹೇಗಿದೀರ ಅಂತ ಕೇಳಿದ್ರೆ, ನಮ್ಮ ಆರೋಗ್ಯ ಚೆನ್ನಾಗಿದೆ, ಮನೇಲೆಲ್ಲ ಚೆನ್ನಾಗಿದ್ದೀವಿ ಅಥವಾ ಈ ತರದ್ದೊಂದು ಮಾತು ಕೇಳಿದ ಹಾಗೆ ಆಗ್ತಾ ಇತ್ತು. ಈಗೆಲ್ಲ ನೀವು ಹೇಗಿದ್ದೀರ ಅಂದ್ರೆ, ಏನು ಕೆಲ್ಸ ಮಾಡ್ತಾ ಇದೀರಿ, ಎಷ್ಟು ಗಳಿಸ್ತಾ ಇದೀರಿ, ಎಲ್ಲಿ ಮನೆ ಮಾಡಿದೀರಿ - ಆ ತರದ ಕೆಲವು ಉದ್ದೇಶಪೂರ್ವಕ ಅಲ್ದಿದ್ರೂ ಅದರ ಹಿಂದೆ ಕೆಲವು ಈ ತರದ ಧ್ವನಿ ಬರುವಂಥ ಕೆಲವು ಪ್ರಶ್ನೆಗಳಿದಾವೆ. ಅಂದ್ರೆ, ಒಟ್ಟು ವಾತಾವರಣದಲ್ಲಿ ಈಗ ಎರಡು ಮೂರು ರೀತಿಯ ದೊಡ್ಡ ಬದಲಾವಣೆಗಳಾಗಿದಾವೆ.

ಒಂದು, ಈ ಮಾರ್ಕೆಟ್ ಡ್ರಿವನ್ ಅಂತ ಏನು ಹೇಳ್ತಾ ಇದೀವಿ, ಮಾರುಕಟ್ಟೆಯಿಂದ ಪ್ರಣೀತವಾದ ಕೆಲವು, ದಿನಾ ನಮ್ಮ ಕಣ್ಣಿಗೆ ಬೀಳ್ತಾ ಇರುವಂಥ ಸಂಗತಿಗಳು; ನಾವು ಟೀವಿ ನೋಡ್ಲಿ, ಪೇಪರ್ ನೋಡ್ಲಿ, ಎಲ್ಲಿ ನೋಡಿದ್ರೂ ಈ ತರದ ಒಂದು ಭಾಷೆ ಇದೆ. ಒಂದು ಮಾರ್ಕೆಟಿನ ಒಂದು ಲ್ಯಾಂಗ್ವೇಜ್ ಇದೆ. ಆ ಲ್ಯಾಂಗ್ವೇಜಿಂದ ನಮ್ಮ ಸೆನ್ಸಿಬಿಲಿಟೀನೆ ಬದಲಾಗ್ತಾ ಇದೆ. ಅಂದ್ರೆ ಯಾವುದನ್ನ ನಾವು ಅನುಭವಿಸಿ, ನಮ್ಮ ಅನುಭವದಿಂದ, ವಯಸ್ಸಿನಿಂದ ನಾವು ಪ್ರಬುದ್ಧರಾಗ ಬೇಕಿತ್ತೋ ಅದು ನಿಮಗೆ ಯಾವ್ದೋ ಒಂದು ಉತ್ಪಾದನೆ ಮತ್ತು ಯಾವ್ದೋ ಒಂದು ಉತ್ಪನ್ನವನ್ನ ಉಪಯೋಗಿಸುವುದರಿಂದ ಸಿಗುತ್ತೋ ಏನೋ ಅನ್ನುವಂಥ ಒಂದು ಭ್ರಮೆ. ಉದಾಹರಣೆಗೆ ಅಧ್ಯಾತ್ಮ ಅಂದ್ರೆ ಒಂದು ವಾರದಲ್ಲಿ ನೀವದನ್ನ ಗಳಿಸ್ಕೋಬಹುದು ಅನ್ನುವಂಥಾದ್ದು. ಸೊ, ಹಾಗಾದಾಗ ಏನಾಗುತ್ತೆ, ಅದರ ಇಡೀ ಒಂದು ಪ್ರಕ್ರಿಯೆಯಲ್ಲಿರುವಂಥಾ ಒಂದು ಅನುಭವ ಮತ್ತು ಅದನ್ನ ಪಡೀಲಿಕ್ಕೆ ಬೇಕಾದ ರಿಗರ್ - ಅಥವಾ ಕಷ್ಟ ಏನಿದೆ ಅದೇನೂ ಇಲ್ದೇನೆ ಸುಲಭವಾಗಿ ಇದು ಸಿಗುತ್ತೆ ಅನ್ನುವಂಥ ಒಂದು ಭ್ರಮೆ ಇದೆ. ಅದು ಸಿಗುತ್ತೆ ಅಂತೇನೂ ನಾನು ಹೇಳ್ತಾ ಇಲ್ಲ, ಆ ತರದ ಒಂದು ಭ್ರಮೆಯನ್ನು ಮಾರುಕಟ್ಟೆ, ಮಾರುಕಟ್ಟೆಯ ಭಾಷೆ ಸೃಷ್ಟಿಸ್ತಾ ಇದೆ. ಅದು ನಮ್ಮ ಮೊದಲ್ನೇ ಪ್ರಾಬ್ಲೆಮ್ಮು. ಹಂಗಾಗಿ ನಾವೆಲ್ಲ ಏನ್ಮಾಡ್ತೀವಿ, ಅದಕ್ಕೆ ಬಹಳ ಬೇಗ ಬಲಿಯಾಗಿ ಬಿಡ್ತೀವಿ.

ಎರಡ್ನೇದು, ಈ ಉದ್ಯೋಗ ಅನ್ನೋದಿದ್ಯಲ್ಲ, ಅದ್ರಲ್ಲೆ ತುಂಬ ಮೂಲಭೂತವಾದ ಬದಲಾವಣೆ ಆಗಿದೆ. ಉದ್ಯೋಗ ಅನ್ನೋದು, ಅದ್ರಲ್ಲಿ ನಿಮ್ಗೆ, ಉದ್ಯೋಗದಲ್ಲು ಒಂದು ತೃಪ್ತಿ, ಉದ್ಯೋಗದಲ್ಲು ಒಂದು ಖುಶಿಯಿದೆ ಅನ್ನೋದು, ಅದು ತುಂಬಾ, ಅದು... ಹೋಗ್ತಾ ಇದೆ. ಅಂದ್ರೆ ಯಾರಿಗೂ ಅದ್ರಲ್ಲಿ ತಮಗೆ, ತಮ್ಮ ಸ್ವಂತ ಖುಶಿಗೆ, ತಮ್ಮ ಸ್ವಂತ ವ್ಯಕ್ತಿತ್ವವನ್ನು ಒಳಗೊಂಡು ಅದ್ರಲ್ಲಿ ಮಾಡ್ಬೇಕು ಅನ್ನುವಂಥ ಯಾವುದೇ ತೀವೃತೆ...ಅದೆಲ್ಲ ಕಡಿಮೆಯಾಗ್ತಾ ಇದೆ. ಹಾಗಾಗಿ ಏನಾಗ್ತ ಇದೆ, ಉದ್ಯೋಗ ಅನ್ನೋದು ಬರೇ ಹಣಗಳಿಕೆಯ ಒಂದು ಮಾರ್ಗವಾಗಿ ಬಿಟ್ಟಿದೆ. ಹಾಗಾದಾಗ ಅದ್ರ ಬಗ್ಗೆ ನಮ್ಗೆ ಒಂದು passion ಅಂತ ಏನು ಹೇಳ್ತೀವಿ, ನಮಗೊಂದು attachment ಅಥವಾ ಅದ್ರ ಬಗ್ಗೆ ಇರೋ ಒಂದು ಸಂಬಂಧ, ಇರೋದೇ ಇಲ್ಲ. ಆ ಸಂಬಂಧ ಬೇರೆ ತರದ ಸಂಬಂಧ ಆಗಿದೆ. ಅದೊಂದು ಹಣವನ್ನು ಗಳಿಸುವಂಥ ಒಂದು ಸಂಬಂಧ ಆಗಿದೆ. ಹಾಗಾಗಿ ಅದು ಮನಸ್ಸಿನ ಮೇಲೆ ತುಂಬಾ ಪರಿಣಾಮ ಮಾಡುತ್ತೆ.

ಈ ಎರಡು ಸಂಗತಿಗಳಿಂದಾಗಿ ನಮ್ಮ ಉಳಿದ ಕ್ಷೇತ್ರಗಳು, ಅಂದ್ರೆ, ಕಲೆಯಿಂದ ನಾವೇನನ್ನು ಪಡೆಯಬೇಕಿತ್ತು, ಸಾಹಿತ್ಯದಿಂದ ಏನನ್ನ ಪಡೆಯಬೇಕಿತ್ತು, ಅದೆಲ್ಲ ನಾವು ಅಷ್ಟು ಮಹತ್ವದ್ದಲ್ಲ ಅಂತ ಈಗ ತಿಳ್ಕೋತ ಇದೀವಿ. ಅದು ಒಳ್ಳೆಯ ಒಂದು ಬೆಳವಣಿಗೆ ಅಲ್ಲ ಅಂತ ನನಗನಿಸ್ತಾ ಇದೆ. ಇದು ಮುಖ್ಯವಾದ, ನಾನು ಗಮನಿಸ್ತಾ ಇರೋ ರೀತಿಯಲ್ಲಿ, ಆಗಿರೋ ಒಂದು shift ಅಂತ ಹೇಳ್ಬೋದು, ಈಗಿನಿದಕ್ಕೆ. ಆ ಮೇಲೆ ಅದಕ್ಕೇನೆ ಪೂರಕವಾಗಿ ಇನ್ನೇನೇನೋ ಆಗ್ತಾ ಇದೆ. ಅಂದ್ರೆ ನಗರ ಜೀವನ, ಅದಕ್ಕೆ ಸಮಯ ಇಲ್ದೆ ಇರೋದು ಅಥವಾ ಈ ಟ್ರಾಫಿಕ್ಕಿನ ಪ್ರಾಬ್ಲೆಮ್ಸು, ಎಲ್ಲವೂ ಅದಕ್ಕೆ ಸೇರಿಕೊಳ್ತಾ ಹೋಗುತ್ತೆ. ಹಾಗಾಗಿ ಈ ಮನಸ್ಸಿನ ಒಂದು space ಇದ್ಯಲ್ಲ, ಮನಸ್ಸಿನ ಒಂದು ಜಾಗ, ಅದ್ರಲ್ಲಿ ನಮಗೆ ಇಷ್ಟವಾದ್ದನ್ನೆ ಮಾಡ್ಕೊಂಡಿರೋದು, ನಮಗೆ ಇಷ್ಟವಾದ, ನಮ್ಮೊಡನೇ ನಾವಿರೋದು, ಏನೂ ಮಾಡ್ದೆ ಇರೋದು, ಮೌನದಲ್ಲಿರೋದು, ಇದೆಲ್ಲದ್ರ ಮೇಲೆ ತುಂಬ ಒತ್ತಡ ಬೀಳ್ತಾ ಇರುತ್ತೆ. ಯಾಕಂದ್ರೆ, ಯಾವಾಗ್ಲೂ ನಮ್ಮ ಕಣ್ಣಿಗೆ, ಕಿವಿಗೆ, ಎಲ್ಲ ಕಡೆಯಿಂದಲೂ ಒಂದ್ರೀತಿಯ ಶಬ್ದಗಳು, ಧ್ವನಿ, ಈ ಮಾರುಕಟ್ಟೆಯ ಭಾಷೆ, ಎಲ್ಲವೂ ಒಂದು ರೀತಿಯ ಆಕ್ರಮಣ ಮಾಡ್ತಾ ಇರುತ್ತೆ. ಅದು ಹೆಚ್ಚು ಅಪಾಯಕಾರಿ ಅಂತ ನನಗನಿಸ್ತದೆ.

ಅದೇ ರೀತಿ ಸಾಹಿತ್ಯದಲ್ಲಿ ಶ್ರೇಷ್ಠತೆ ಬಗ್ಗೆ ಕೆಲವು ಪ್ರಶ್ನೆಗಳು. ಯೂನಿವರ್ಸಿಟಿ ಲೇಖಕರ ಒಂದು ಕಾಲ ಇದ್ದ ಹಾಗೇ ಇವತ್ತು ಪತ್ರಕರ್ತ ಸಾಹಿತಿಗಳ ಒಂದು ಕಾಲದಲ್ಲಿ ಇದ್ದೇವೆ ಅನಿಸ್ತದೆ. ಇಲ್ಲಿ ಸಾಹಿತ್ಯದಲ್ಲಿ ಶ್ರೇಷ್ಠತೆ ಎನ್ನುವುದು, ಸುಬ್ಬಣ್ಣನವರೇ ಹೇಳಿಬಿಟ್ಟಿದ್ದಾರೆ, ಅದು ಒಂದು ವ್ಯಸನ, ಶ್ರೇಷ್ಠತೆ ಎನ್ನುವುದು ಮಾನದಂಡ ಆಗಬಾರದು, ಜನಪ್ರಿಯವಾದದ್ದು ಶ್ರೇಷ್ಠ ಅಲ್ಲ ಎನ್ನುವ ನಿಲುವು ಸರಿಯಲ್ಲ, ಎನ್ನುವಂಥದ್ದು ಒಂದು. ಇನ್ನೊಂದು, ಬೇರೆಯೇ ಕೆಲವೊಂದನ್ನ ಶ್ರೇಷ್ಠ ಅಂತ ಬಿಂಬಿಸುವ ಪ್ರಯತ್ನ ನಡೀತಿರುವುದು. ಹೀಗಿರುತ್ತ, ದೇಶಕಾಲದಂಥ ಒಂದು ಪತ್ರಿಕೆಯ ಸಂಪಾದಕರಾಗಿ, ಕೆಲವೊಂದು ಮಾನದಂಡಗಳನ್ನಿಟ್ಟುಕೊಂಡು ಲೇಖನಗಳನ್ನ ಕೊಡುತ್ತಾ ಇರುವ ನಿಮಗೆ, ಶ್ರೇಷ್ಠತೆಯ ಪ್ರಶ್ನೆ ಎಷ್ಟರ ಮಟ್ಟಿಗೆ ಸೂಕ್ತ ಅಥವಾ ಅಲ್ಲ ಅಂತ ಅನಿಸುತ್ತದೆ?

ಈ ಸುಬ್ಬಣ್ಣನವರು ಹೇಳಿದ ಶ್ರೇಷ್ಠತೆಯ ಮಾತುಗಳನ್ನ ನಾನು ಒಪ್ತೀನಿ. ಅಂದ್ರೆ, ಅವ್ರು, ಅವ್ರೇನು ಹೇಳಿದ್ದಾರೆಂದ್ರೆ, ಶ್ರೇಷ್ಠತೆ ಕೆಟ್ಟದ್ದು ಅಂತ ಅವ್ರು ಹೇಳಿದ್ದಲ್ಲ; ಶ್ರೇಷ್ಠತೆ ವ್ಯಸನ ಆದಾಗ ಅದು ಮೇಲು ಕೀಳನ್ನ ಸೃಷ್ಟಿ ಮಾಡುತ್ತೆ, ಆಮೇಲೆ ಅದು ಕೇಂದ್ರೀಕೃತ ವ್ಯವಸ್ಥೆಯನ್ನ ಉಂಟು ಮಾಡುತ್ತೆ, ಮತ್ತು ಯಾವುದೇ ಒಂದು ವ್ಯವಸ್ಥೆಗೆ ಒಂದು ನಿಯಮ ಅಂತ ಇದ್ದ ಕೂಡ್ಲೇನೆ ಅದು ಒಂದು ರೀತಿಯ ಜಡತ್ವವನ್ನ ಸೃಷ್ಟಿ ಮಾಡುತ್ತೆ - ಅದು ಅವರ ಮಾತಿನ ತಾತ್ಪರ್ಯ. ಸೊ, ಅದನ್ನ ನಾನು ಖಂಡಿತಾ ಒಪ್ತೇನೆ. ಅದ್ರ ಜೊತೆಗೇನೆ ಅವ್ರು ಆ ಮಾತನ್ನ ಆಡ್ಬೇಕಾದ್ರೆ ಇನ್ನೊಂದು ಮಾತನ್ನ ಹೇಳಿದ್ದಾರೆ. ಶ್ರೇಷ್ಠತೆ ಸಹಜವಾದ ಗುಣವಾಗೋದು ಮುಖ್ಯ ಅಂತ. ಅದನ್ನ ನಾವು ಮರೆತು ಬಿಟ್ಟಿದ್ದೇವೆ. ಅದು ಸಹಜವಾಗಿ, ಅಂದ್ರೆ, ಒಬ್ಬ ಬಡಗಿ ಕೆಲಸ ಮಾಡ್ಬೇಕಾದ್ರೆ, ಅಥವಾ ಒಬ್ಬ ಮನೆ ಕಟ್ಟೋವ್ನು ಒಂದು ಕೆಲಸ ಮಾಡ್ಬೇಕಾದ್ರೆ ಅದ್ರಲ್ಲಿ ಒಂದು ಶ್ರೇಷ್ಠತೆ ಇದೆ. ಅದ್ರಲ್ಲು ಅವ್ನು ಒಂದು expertise ಅಂತೇನಿದೆ ಅದ್ರಲ್ಲು ಅವ್ನು ಮಾಡ್ಬೇಕು; ಅದನ್ನ ಎಲ್ರೂ, ನಾವು ನಮ್ಮನಮ್ಮ ಕ್ಷೇತ್ರಗಳಲ್ಲಿ ನಾವು ಮಾಡ್ಬೇಕು. ಅದ್ರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆಮೇಲೆ, ಈಗ ನೀವು ಶ್ರೇಷ್ಠ ಸಾಹಿತ್ಯ, ಜನಪ್ರಿಯ ಸಾಹಿತ್ಯ ಅಂತೆಲ್ಲ ಹೇಳ್ತೇವಲ್ಲ; ಜನಪ್ರಿಯ ಅಂದ್ರೆ, ನಾನು ಜನಪ್ರಿಯತೆಗೆ ವಿರೋಧಿಯಲ್ಲ. ಆದ್ರೆ ಜನಪ್ರಿಯತೆಯ ಒಂದು ಮುಖ್ಯ ಗುಣ ಅಂದ್ರೆ, ಅದು passive ಆಗಿ ಜನರನ್ನ involve ಮಾಡ್ಕೊಳ್ಳುತ್ತೆ. ಯಾಕಂದ್ರೆ, ನೀವು ಟೀವಿ ಟೀವಿ ಸೀರಿಯಲ್ ನೋಡಿದ್ರೆ, ಉದಾಹರಣೆಗೆ, ನೀವೇನು ಅದ್ರಲ್ಲಿ ತೊಡಗಬೇಕಾಗಿಲ್ಲ. ನೀವು ಸುಮ್ನೆ ನೋಡ್ತಾ ಇದ್ರೆ ನಿಮ್ ಕಣ್ಣೆದ್ರಿಗೆ ಹೋಗ್ತಾ ಇರುತ್ತೆ ಅದು. ಅದೇ ರೀತಿ ಜನಪ್ರಿಯವಾದ ಸಾಹಿತ್ಯ ಏನಿರುತ್ತೆ, ಅದು, ಹೆಚ್ಚು ಪಾಲು ಸಾಹಿತ್ಯ-ಜನಪ್ರಿಯವಾದದ್ದರಲ್ಲಿ, ಅದು, ನೀವು ಓದ್ತಾ ಇದ್ರೆ, ಅದು ನಿಮ್ಮಿಂದೇನನ್ನೂ ಬೇಡಲ್ಲ ಅದು. ನಿಮ್ಮ ಮನಸ್ಸಿಗೆ ಖುಶಿಯನ್ನ ಕೊಡುತ್ತೆ, ನಿಮ್ಗೊಂದೊಳ್ಳೆ ಕಚಗುಳಿ ಇಡುವಂಗಿರುತ್ತೆ, ಅಥವಾ ನಿಮ್ಮನ್ನಗಿಸುತ್ತೆ; ನಿಮ್ಮಿಂದೇನನ್ನೂ ಬೇಡಲ್ಲ ಅದು. ಅದು passive ಆದ involvement ಅದು. ಆದ್ರೆ ಒಂದು ಗಾಢವಾದ ಸಾಹಿತ್ಯವೇನಿದೆ, ಅದು ತುಂಬ passive ಆದ involvementಗಿಂತ ಹೆಚ್ಚಿಗೆ ಇರ್ಬೇಕು. ಯಾಕಂದ್ರೆ ಅದು ನಿಮ್ಮನ್ನ active ಆಗಿ ನಿಮ್ಮನ್ನ ಅದ್ರ ಒಳ್ಗಡೆ ಎಳ್ಕೋಬೇಕು. ಅದು ನಿಮ್ಗೆ ಅದು ತನ್ನಿಂದಲ್ದೇನೆ ಇನ್ನೊಂದೇನ್ನನೋ ಹೇಳ್ಬೇಕು. ಮತ್ತು ನಿಮ್ಗೆ ಏನಾದ್ರು ಅದ್ರಿಂದ ದೊರಕ್ಬೇಕಂದ್ರೆ, ನಾವೇನೂ ಕಷ್ಟ ಪಡದೆ ನಮ್ಗೆ ಏನೂ ಸಿಗೋದಿಲ್ಲ. ಓದ್ಬೇಕಾದ್ರು ಅಷ್ಟೆ. ಅದ್ರಲ್ಲಿ active ಆಗಿ ನೀವು involve ಆಗ್ಬೇಕಾಗುತ್ತೆ. ಸೊ, ಒಳ್ಳೆಯ ಸಾಹಿತ್ಯ ಯಾವಾಗ್ಲೂ ನಮ್ಮನ್ನ active ಆಗಿ involve ಮಾಡ್ಲಿಕ್ಕೆ ನಮ್ಮನ್ನ ಆಹ್ವಾನ ಮಾಡುತ್ತೆ. ಅದು ಓದಿದ್ಮೇಲೆ ಇನ್ನೇನೋ ಇದೆ ಅಂತ ಅನ್ಸುತ್ತೆ, ನಿಮ್ಮನ್ನ ಯೋಚನೆಗೆ ಹಚ್ಚುತ್ತೆ ಅಥವಾ ನಿಮ್ಮ ಮನಸನ್ನ ಕಲಕ್ಸತ್ತೆ ಅಥವಾ ಇನ್ನೇನೊ. ಒಟ್ನಲ್ಲಿ ಅದು active ಆದ ಒಂದು involvementನ್ನ ಬೇಡತ್ತೆ. ಅದೊಂದೆ ಕಾರಣಕ್ಕೆ ನಾನು ಜನಪ್ರಿಯತೆಯ, ಜನಪ್ರಿಯ ಸಾಹಿತ್ಯನ್ನ ಅಂತಲ್ಲ, ನಾನು ಜನಪ್ರಿಯ ಸಾಹಿತ್ಯಾನ ಬರೀಬೇಕು ಅನ್ನುವಂಥ ಉದ್ದೇಶ ಇರೋದು ಒಬ್ಬ ಕೃತಿಕಾರನಿಗೆ ಒಳ್ಳೇದಲ್ಲ ಅಂತ ನಾನು ಹೇಳ್ತೇನೆ. ಯಾಕಂದ್ರೆ, ಆ ಉದ್ದೇಶ ಆ ಕೃತಿಕಾರನಿಗೆ ಇದ್ರೆ, ಬರಿಯೋ ಹೊತ್ತಿಗೇನೇನೆ ಇದ್ರೆ, ಅವ್ನು ಆದಷ್ಟೂ ಸರಳವಾದ ಸಂಗತಿಗಳನ್ನ ಹೇಳ್ತಾನೆ. ಅಂದ್ರೆ ಸರಳವಾಗಿ ಹೇಳೋದಲ್ಲ, ಅವನು ಸರಳಗೊಳಿಸಿ ಹೇಳ್ತಾನೆ. ಅಂದ್ರೆ, ಆವಾಗವನಿಗೆ ಏನನಿಸುತ್ತೆ, ಸಾವಿರಾರು ಜನ ತನ್ನನ್ನ ಓದ್ಬೇಕು ಅಂತ ಅನಿಸಿದಾಗ, ಅವನು ಎಲ್ಲರಿಗೂ ಮುಟ್ಟೋ ಹಂಗೆ ಹೇಳ್ಲಿಕ್ಕೆ ಹೋದಾಗ, ಅಂದ್ರೆ ಬರೆಯೋ ಕ್ಷಣದಲ್ಲೆ ಅದಿದ್ರೆ, ಆವಾಗ ಅವನು ಇನ್ನಷ್ಟು ಅದನ್ನ ಸಿಂಪ್ಲಿಫೈ ಮಾಡ್ತಾನೆ ಅದನ್ನ. ಸಿಂಪಲ್ ಆಗಿ ಹೇಳೋದ್ಬೇರೆ ಸಿಂಪ್ಲಿಫೈ ಮಾಡೋದ್ಬೇರೆ. ಸರಳಗೊಳಿಸಿ ಹೇಳೋದ್ಬೇರೆ, ಸರಳವಾಗಿ ಹೇಳೋದ್ಬೇರೆ. ಹಾಗ್ಮಾಡ್ತಾನೆ ಅಲ್ಲಿ. ಅದು ಯಾವ ರೀತೀಲೂ ಒಳ್ಳೇದಲ್ಲ. ಯಾಕಂದ್ರೆ ಅದು ಸಾಹಿತ್ಯಾನೆ ಇರ್ಲಿ ಕಲೇನೆ ಇರ್ಲಿ ಯಾವ್ದಕ್ಕೂ ಅದು, ಅಥವಾ ಸಂಗೀತಾನೆ ಇರ್ಲಿ. ಅಂದ್ರೆ, ಉದಾಹರಣೆಗೆ, ಸುಗಮ ಸಂಗೀತದ ತರ ಅದು. ಒಂದು ರೀತಿಯ ಸುಗಮ ಸಾಹಿತ್ಯ ಅದು. ಸಂಗೀತದಲ್ಲಿ ನಿಮಗೆ ಒಳ್ಳೇ ಸಂಗೀತನು ಇದೆ, ಕ್ಲಾಸಿಕಲ್ ಸಂಗೀತನು ಇದೆ, ಆಮೇಲೆ ಸುಶ್ರಾವ್ಯವಾದ ಸುಗಮ ಸಂಗೀತನು ಇದೆ. ಆದ್ರೆ, ಅದನ್ನು ಯಾರು ಹೇಗೆ ಹಾಡ್ತಾರೆ ಅನ್ನೋದ್ರ ಮೇಲೆ ಅದು depend ಆಗಿರುತ್ತೆ. ಅಂದ್ರೆ ಸುಗಮ ಸಂಗೀತವೂ, ನಾನು ಸುಗಮ ಸಂಗೀತದ ವಿರೋಧಿಯಲ್ಲ, infact, ನಾನು ಸುಗಮ ಸಂಗೀತವನ್ನ, ಬಹಳ ಸಂತೋಷದಿಂದ ಅದನ್ನ ಕೇಳ್ತೇನೆ. ಆದ್ರೆ, ಅದು ಶೃತಿ ಬರದೇ ಇರೋರೇ ಅದನ್ನ ಹಾಡ್ಲಿಕ್ಕೆ ಸುರುಮಾಡಿದ್ರೆ ಆವಾಗ ಅದು ಯಾರಾದ್ರೂ ಹಾಡ್ಬಹುದು ಅನ್ನೋ ತರ ಆಗ್ಬಿಟ್ಟಿದೆ ಈಗ ಸುಗಮ ಸಂಗೀತ. ಯಾರಾದ್ರೂ ಹಾಡ್ಬಹುದು ಅಲ್ಲ; ಸಂಗೀತ ಗೊತ್ತಿದ್ದವ್ರು ಹಾಡಿದಾಗ್ಲೇ ಅದಕ್ಕೊಂದು ಕಳೆ ಇರೋದು, ಅದರಲ್ಲೊಂದು ಸಂತೋಷ ಇರೋದು. ಅದನ್ನೆ ನಾನು ಹೇಳ್ತಾ ಇರೋದು, ಆದ್ರಿಂದ, ನಾನು ಶ್ರೇಷ್ಠತೆ ಅಥವಾ ಜನಪ್ರಿಯತೆ ಅನೋದ್ರ ಬಗ್ಗೆ ನಾನು, ನನ್ನ ದೃಷ್ಟಿಯೇನಿದೆ, ಅದು ಒಂದು ಮಾಧ್ಯಮದ ಅಥವಾ ಕ್ಷೇತ್ರದ ಪರಿಣತಿಗೆ ಸಂಬಂಧ ಪಟ್ಟಿದ್ದು ಹೊರತು ಅದು ಒಂದು ರೀತಿಯ ಮೇಲು ಕೀಳನ್ನ ಉಂಟು ಮಾಡುವಂಥದ್ದು ಆಗಬಾರದು ಅಂತ ನನ್ನ ಅಭಿಪ್ರಾಯ.

ಆಗಲೇ ನೀವು ಹೇಳಿದ ಹಾಗೆ ಮನಸ್ಸಿನ space create ಮಾಡುವಂಥ ಒಂದು ಸಾಹಿತ್ಯವಾಗಲಿ, ಶ್ರೇಷ್ಠತೆ ಎಲ್ಲಿ ಕ್ರಿಯಾಶೀಲವಾಗಿರಬೇಕು ಅಂತ ಹೇಳಿದಂಥ ಸಾಹಿತ್ಯವಾಗಲಿ, ತರದ ಸಾಹಿತ್ಯದ ಓದಿಗೆ ಇವತ್ತಿನ market oriented ಪರಿಸರದಲ್ಲಿ ಎಷ್ಟರ ಮಟ್ಟಿಗೆ ಭವಿಷ್ಯ ಇದೆ ಅನಿಸುತ್ತದೆ? ಅಂಥ ಓದಿಗೆ ಭವಿಷ್ಯ ಇದೆಯ?

ನನಗಂತೂ ಇದೆ ಅಂತನೆ ಅನ್ಸುತ್ತೆ. ಯಾಕಂದ್ರೆ ಈಗ ನಾನು ನೀವು ಕೂತ್ಕೊಂಡು ಮಾತಾಡ್ತ ಇರೋದೆ ಅದಕ್ಕೊಂದು ಸೂಚನೆ. ಆಮೇಲೆ ಇದು, ಇದೇನು ನಮ್ಮ ಕಾಲಕ್ಕೆ ಮಾತ್ರಾನೆ ಇದು ಹೊಸದು ಅಂತ ಅಲ್ಲ. ಅಥವಾ ಎಲ್ಲ - ಕಾಲ ಕೆಟ್ಟೋಗಿದೆ, ಹಿಂದೆಲ್ಲ ಹಿಂಗಿರ್ಲಿಲ್ಲ - ಅಂತಲ್ಲ. ಇದು ಎಲ್ಲಾ ಕಾಲ್ದಲ್ಲು ಹಿಂಗೇ ಇತ್ತು. ಆಮೇಲೆ ಈ ರೀತಿಯ ಒಂದು ಗಂಭೀರವಾದ ಸಾಹಿತ್ಯಕ್ಕೆ ಯಾವಾಗ್ಲು ಜನ ಕಡಿಮೇನೆ ಇದ್ರು. ಅದನ್ನ ಇದು ಒಂದು, ಅದೇ ನಾನು ಕ್ಲಾಸಿಕಲ್ ಮ್ಯೂಸಿಕ್ ಅಂತ ಹೇಳಿದ್ನಲ್ಲ, ಆ ತರ ಒಂದು; ಈ ಒಂದು ಕ್ಷೇತ್ರ, ಲಕ್ಷಾಂತರ ಜನ ಇದನ್ನ ಓದ್ಬೇಕು, ಮಾಡ್ಬೇಕು ಅಥವಾ ಇದನ್ನ ಎತ್ತಿ ಕೊಂಡಾಡ್ಬೇಕು ಅಂತ ಅನ್ನೋದೆಲ್ಲ ಇದ್ಯಲ್ಲ, ಆ ಅಪೇಕ್ಷೇನೇ ತಪ್ಪು. ಯಾಕಂದ್ರೆ, ಆ ಅಪೇಕ್ಷೆ ಬಂದದ್ದೆಲ್ಲಿಂದ? ಆ ಅಪೇಕ್ಷೆ ಬಂದಿದ್ದು ಈ ಮಾರುಕಟ್ಟೆಯಿಂದ ಪ್ರಣೀತವಾದ ಒಂದು ವಾತಾವರಣದಿಂದ. ಅದಿಲ್ದೆ ಇರೋವಾಗ, ನಾವು ಯಾವಾಗ್ಲು ಅದನ್ನು ಸಾವಿರ ಜನಾನೆ ಓದ್ತಾರೆ ಅಂತ ತಿಳ್ಕೊಂಡಿದ್ರೆ ಆ ಸಮಸ್ಯೆನೆ ಬರ್ತಿರಲಿಲ್ಲ. ನಾವು ಈ ಕ್ಷೇತ್ರವನ್ನ ಬೇರೆ ಕ್ಷೇತ್ರದ ಜೊತೆಗೆ, ಅಂದ್ರೆ ಅದು ಈ ಪುಸ್ತಕ ಮಾರಾಟವನ್ನ ನಾವು ಬಟ್ಟೆ ಮಾರಾಟದ ಜೊತೆಗೆ ಅಥವಾ ಏನೋ ಇನ್ನೊಂದು ಉತ್ಪನ್ನದ ಮಾರಾಟದ ಜೊತೆಗೆ ಹೋಲಿಸಿದಾಗ, ಆವಾಗ ನಮಗೆ ನಮ್ಮ ಪುಸ್ತಕಗಳು ಜಾಸ್ತಿ ಖರ್ಚಾಗ್ತ ಇಲ್ಲ ಅಂತ ಅನಿಸಬಹುದು. ಆದ್ರೆ, ನಿಜವಾಗ್ಲು ಒಬ್ಬ ಲೇಖಕನಿಗೆ, ಅವ್ನಿಗೆ ಹಿಂದೇನೂ ಗೊತ್ತಿತ್ತು ಮತ್ತು ಇವತ್ತೂ ಗೊತ್ತಿದೆ, ಅದನ್ನ ಓದೋ ಜನ ಯಾವಾಗ್ಲೂ ಕಮ್ಮಿ ಇರ್ತಾರೆ ಮತ್ತು ಅದು ಕಾಲಾಂತರದಲ್ಲಿ ಜನಪ್ರಿಯವಾಗುತ್ತೆ, ಕಾಲಾಂತರದಲ್ಲಿ ಅದರ ಒಂದು, ಅದನ್ನ ಓದುವವರ ಸಂಖ್ಯೆ, ಅದನ್ನ ಚರ್ಚಿಸುವವರ ಸಂಖ್ಯೆ, ಅದನ್ನ ಅಥವಾ ಅದರ impact, ಅದರ ಪರಿಣಾಮ ಏನನ್ನೋದರ ಬಗ್ಗೆ ಕಾಲಾಂತರದಲ್ಲಿ ಗೊತ್ತಾಗುತ್ಯೆ ಹೊರತು ಯಾವಾಗ್ಲು ಅದು immediateಆಗಿ ಗೊತ್ತಾಗುವಂಥದ್ದಲ್ಲ. ಹಂಗಾಗಿ ಅದ್ರ ಬಗ್ಗೆ ನನಗೆ ನಿಜವಾಗ್ಲು ನಿರಾಸೆ ಅಂತೇನು ಇಲ್ಲ. ತುಂಬ ಜನ ಓದ್ತಾರೆ, ಓದದೇನೂ ಇರ್ತಾರೆ. ಓದೋವ್ರು ತುಂಬ ಜನ ಈಗ ಬರ್ತಾನು ಇದಾರೆ. ಆದ್ರೆ, ಒಂದೇನಂದ್ರೆ, ದೊಡ್ಡ ನಗರಗಳಲ್ಲಿ, ಉದಾಹರಣೆಗೆ ಬೆಂಗ್ಳೂರಿನಂಥ ಊರುಗಳಲ್ಲಿ, ಈ ಕನ್ನಡ ಮಾಧ್ಯಮ ಇಲ್ದೇ ಇರೋದಿದ್ಯಲ್ಲ, ಅದ್ರಿಂದಾಗಿ ಎಷ್ಟೋ ಜನ ಹೊಸ ಓದುಗ್ರು ನಮಗೆ ಕಳೆದುಹೋಗ್ತಿದಾರೆ. ಅದು, ನಿಜವಾಗ್ಲು ಅದು ನಾವು ಯೋಚ್ನೆ ಮಾಡಬೇಕಾದ ವಿಷ್ಯ. ಅದು ಯಾಕಂದ್ರೆ, ಅವ್ರು ಅವ್ರ ಪರ್ಸೆಂಟೇಜ್ ಏನಿದೆ, ಒಟ್ಟು ಒಂದು ಸಮುದಾಯದಲ್ಲಿ ಓದುವ ಜನ, ಅದು ಅಷ್ಟರಮಟ್ಟಿಗೆ ನಮ್ಮ ಬೆಂಗಳೂರಿನಲ್ಲಿ ಕಡಿಮೆಯಾಗಿದಾರೆ ಅಂತ ಹೇಳ್ಬೇಕು. ಯಾಕಂದ್ರೆ ಅಷ್ಟರಮಟ್ಟಿಗೆ ನಮ್ಮ ಶಾಲೆಗಳಲ್ಲಿ ಕನ್ನಡ ಇಲ್ಲ, ಮಾಧ್ಯಮದಲ್ಲಿ ಕನ್ನಡ ಇಲ್ಲ. ಅದೆಲ್ಲವು-ಅದ್ರಿಂದ ಖಂಡಿತಾ ಅದಕ್ಕೆ ಒಂದು ಪರಿಣಾಮ ಇದೆ.

ಮಾಹಿತಿ, ಸಾಮಾನ್ಯ ಜ್ಞಾನ, ವ್ಯಕ್ತಿತ್ವ ವಿಕಸನ, ಸರಳ ಸಲಹೆ ಇತ್ಯಾದಿ ತರದ್ದನ್ನೆಲ್ಲ ಕೊಡುವ ಸಾಹಿತ್ಯ ಅಥವಾ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಾ ಇರುವ ಪರಿಸ್ಥಿತಿಯಲ್ಲೆ fictionಗಳ ಕಾಲ ಮುಗಿದು ಹೋಗಿದೆ ಅನ್ನುವಂಥ ಒಂದು ಅಭಿಪ್ರಾಯನೂ ಇದೆ. ಅದರ ಒಂದು ವೃತ್ತ ಏನಿದೆ ಅದು ಪರಿಪೂರ್ಣವಾಗಿದೆ, ಅದರ ಕಾಲ ಮುಗಿದಿದೆ ಎನ್ನುವುದು. ಬಗ್ಗೆ ಕೆಲವು ಸೆಮಿನಾರ್ಗಳಲ್ಲಿ ಚರ್ಚೆಯಾಗಿದ್ದು ಕೂಡ ಇದೆ. ನಿಮಗೇನನಿಸುತ್ತೆ, fiction ಗಳಿಗೆ ಭವಿಷ್ಯ ಇದೆ ಅಂತ ಅನಿಸುತ್ತಾ?

ಇದು, ಸಾಹಿತ್ಯ ಮತ್ತು ಸಾಕ್ಷರತೆಗೆ ವ್ಯತ್ಯಾಸ ಇದೆ. ಅದ್ರಿಂದ ನಾವು ಜನಪ್ರಿಯ ಬೇರೆ ಪುಸ್ತಕಗಳೇನಿರ್ತಾವೆ, ಯಾವ್ದು, ನಿಮ್ಮ... ಏನೇನೊ ಹೇಳಿದ್ರಿ ಈಗ ನೀವು, ನಿಮ್ಮ ವ್ಯಕ್ತಿತ್ವ ವಿಕಸನ, ಮಾಹಿತಿ...ಅದೆಲ್ಲವು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಗ್ಬೇಕು, ಹೆಚ್ಚೆಚ್ಚು ಜನ ಅದನ್ನ ತಗೋಬೇಕು. ಯಾಕಂದ್ರೆ ಅದು ನಮ್ಮ ಕನ್ನಡದಲ್ಲಿ ಬರ್ತಾ ಇದೆ, ಅದು ಜನರಿಗೆ ತಲುಪಬೇಕು. ಅದು ಮತ್ತು ನಮ್ಮ ಸಾಹಿತ್ಯ ಎರಡೂ ಬೇರೆ ಬೇರೆ ಅಂತ ನಾನು ತಿಳ್ಕೊಂಡಿದೀನಿ. ಅದ್ಕೆ ನಾನು ಸಾಕ್ಷರತೆ ಮತ್ತು ಸಾಹಿತ್ಯ - ಬೇರೆ. ಅಕ್ಷರ ಬಲ್ಲವರೆಲ್ಲ ಒಳ್ಳೆಯ ಸಾಹಿತ್ಯವನ್ನ ಓದ್ಲಿಕ್ಕೆ ಅಥವಾ ಬರೀಲಿಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ನೀವು ಸಿನ್ಮಾ ನೋಡಿದ್ರೆ ಅದ್ರಲ್ಲಿ ಒಳ್ಳೆಯ ಸಿನಿಮಾನು ಇರುತ್ತೆ, ಕೆಟ್ಟ ಸಿನಿಮಾನು ಇರುತ್ತೆ. ಸೊ, ನೋಡ್ಲಿಕ್ಕೆ ಬರುತ್ತೆ ಅನ್ನುವ ಒಂದೇ ಕಾರಣಕ್ಕೆ ನಾವು ಅದನ್ನ ಒಂದೇ ಗುಂಪಿಗೆ ಸೇರಿಸೋದಿಲ್ಲ. ಅದೇ ರೀತಿ ಸಾಹಿತ್ಯಾನು ಅಷ್ಟೆ. ಸಾಕ್ಷರತೆ ಮತ್ತು ಸಾಹಿತ್ಯ ಬೇರೆ ಬೇರೆ. ಇನ್ನು fictioinಗೆ, ನನಗಂತೂ ಅದು ಕಾಲ ಮುಗ್ದಿದೆ ಅಂತ ಅನ್ಸೋದೆ ಇಲ್ಲ, ಆಮೇಲೆ ಅದು ಮುಗಿಯುತ್ತೆ ಅಂತ್ಲೂ ಅನ್ಸೋದಿಲ್ಲ. ಯಾಕಂದ್ರೆ ನೀವು ಯಾವ್ದೋ ಒಂದು, ಉದಾಹರಣೆಗೆ, ಒಂದು ಪ್ರೇಮಕತೆಯನ್ನೆ ತಗೊಂಡ್ರೆ, ಸಾವಿರಾರು ವರ್ಷದ ಹಿಂದಿನ ಪ್ರೇಮಕತೆಗಳೂ ಇರ್ತಾವೆ, ಇವತ್ತು ಬರೆಯೋದು ಇರುತ್ತೆ. ಆಮೇಲೆ ಇವತ್ತು ಬರೆದ ಪ್ರತಿಯೊಂದು ಹೊಸಾ ಕತೇನೂ ನಮ್ಗೆ ಹೊಸತರನೇ ಕಾಣಿಸ್ತಾ ಇರುತ್ತೆ. ಆಮೇಲೆ ಸಾಹಿತ್ಯ ಯಾವಾಗ್ಲು ಏನಾಗುತ್ತೆ, ಯಾವಾಗ್ಲು ಅದು ಒಂದು ಹೇಳಿಕೆಯನ್ನ ಹೇಳ್ತಾ ಇರೋದಿಲ್ಲ. ಈಗ ಪ್ರೇಮ ಅಮರ ಅಂತ ಹೇಳಿದ ಒಂದು, ಉದಾಹರಣೆಗೆ ಒಂದು ತಗೊಳ್ಳೋಣ, ಅದನ್ನ ಈ ಸಾಹಿತ್ಯ ಮತ್ತೆ ಮತ್ತೆ ಅದನ್ನೆ ಹೇಳ್ತಾ ಇದ್ರೆ ಆವಾಗ ಅದ್ರ ಕಾಲ ಮುಗೀತು ಅಂತ. ಆದ್ರೆ ಅದು ನಿಮ್ಮ ಅನುಭವಕ್ಕೆ ತರೋದಿದ್ಯಲ್ಲ, ಅದೇನೆ ಮುಖ್ಯ. ಅದು ಐದುನೂರು ವರ್ಷಗಳ ಹಿಂದೆ ಯಾವ ಅನುಭವ ನಿಮಗೆ ಕೊಡ್ತಾ ಇತ್ತು, ಇನ್ನೂರು ವರ್ಷದ ಹಿಂದೆ ಏನು ಕೊಡ್ತಾ ಇತ್ತು, ನೂರು ವರ್ಷದ ಹಿಂದೆ ಏನು ಕೊಡ್ತಿತ್ತು, ಇವತ್ತು ಏನು ಕೊಡ್ತಾ ಇದೆ, ನಾಳೆ ಏನು ಕೊಡುತ್ತೆ... ಅದಿದ್ಯಲ್ಲ, ಅದು ಸಾಹಿತ್ಯದ ವಿಶೇಷ. ಅದು ನಿಮಗೆ ಹೊಸ ಅನುಭವಗಳನ್ನ ಕೊಡುತ್ತೆ, ಹೇಳಿಕೆಯನ್ನಲ್ಲ. ಅದೇ ಹೇಳಿಕೆಯನ್ನ ಬೇರೆ ಒಂದು ನೂರಾರು ಜನ, ಬೇರೆ ಬೇರೆ ರೀತಿಯ ಅನುಭವ ಕೊಡುವ ಹಾಗೆ ಬರೀತಾರೆ. ಆದ್ರಿಂದ fictionಗೆ ಕೊನೇನೆ ಇಲ್ಲ ಅಂತನ್ಸುತ್ತೆ ನನಗೆ. ಅಂದ್ರೆ ಪ್ರತಿಯೊಂದು ಮನುಷ್ಯನಿಗೂ ಒಂದು ಕತೆ ಹೇಳುವ ಬಯಕೆ, ಮತ್ತು ಕೇಳುವ ಆಸೆ ಇರೋವರ್ಗೂ fictionಗೆ ಸಾವು ಅಂತನ್ನೋದೆ ಇಲ್ಲ.

ಬಹುಷಃ ಇದು ಪ್ರಕಟನೆ/ವಿತರಣೆಯ ಸಮಸ್ಯೆ ಅನಿಸ್ತದೆ, ಆದರೂ ಎಷ್ಟೋ ಸಲ ಒಳ್ಳೆಯ ಲೇಖಕರ ಪುಸ್ತಕಗಳು ಅಥವಾ ಅನಾಮಿಕರ ಒಳ್ಳೆಯ ಪುಸ್ತಕಗಳು ಕೂಡ, ಓದಬೇಕು ಅಂತ ಇರುವವರ ಕೈಗೆ ಎಷ್ಟೊ ಸಲ ಸಿಗುವುದಿಲ್ಲ. ಅವುಗಳನ್ನ ಹುಡುಕಿಕೊಂಡು ಹೋದರೂ ಸಿಗದಂಥ ಒಂದು ಪರಿಸ್ಥಿತಿ ಇದೆ. ಇದರ ಜೊತೆಜೊತೆಗೇ ಇವತ್ತು ಪುಸ್ತಕ ಪ್ರಕಟನೆ ತುಂಬ ಸುಲಭವಾಗಿರುವುದರಿಂದಲೂ ಇರಬಹುದು, ಒಳ್ಳೆಯ ಪುಸ್ತಕಗಳಿಗಿಂತ ಜಳ್ಳಾದ ಪುಸ್ತಕಗಳೇ ವಿಪರೀತ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರ್ತಾ ಇವೆ ಅನಿಸ್ತದೆ. ಇದನ್ನು ಗಮನಿಸುವಾಗ, ಒಟ್ಟಾರೆಯಾಗಿ ಸಾಹಿತ್ಯದ ಪರಿಸರದ ಮೇಲೆ ಇದರ ಪರಿಣಾಮ ಏನು ಅಂತ ಹೇಳಬಹುದು?

ಈಗೇನಾಗುತ್ತೆ, ಸರ್ಕಾರದ ಕೆಲವು ಯೋಜನೆಗಳಿಂದ, ತುಂಬ ದುಡ್ದು ಯಾವ್ಯಾವ್ದೋ ಪುಸ್ತಕಗಳಿಗೆ ಹೋಗ್ತಾ ಇದೆ. ಹಾಗಾಗಿ ಅದು ಒಂದು ಸಮಸ್ಯೆ ನಮಗಿರೋದು. ಅಂದ್ರೆ ಸರ್ಕಾರ ಏನ್ಮಾಡ್ತಾ ಇದೆ, ತಾನೇ ಅದನ್ನ ಪ್ರಾಧಿಕಾರದ ಮೂಲಕ ಪ್ರಕಟಮಾಡಿ, ಅಥವಾ ಲೈಬ್ರರಿಗಳ ಮೂಲಕ ತಗೊಂಡು, ಸೊ ಒಟ್ನಲ್ಲಿ ಅದು ಈ ಒಂದು ವ್ಯಾಪಾರ ಏನಿದೆ, ಅದ್ರಲ್ಲಿ ನೇರವಾಗಿ ಕೈ ಹಾಕ್ಲಿಕ್ಕೆ ಹೋಗಿ ತುಂಬಾ ಅದ್ರಲ್ಲಿ ಅಧ್ವಾನಗಳು ಆಗಿದಾವೆ. ಆದ್ರಿಂದ ಪುಸ್ತಕಗಳು ಸಿಗೋದಿಲ್ಲ, ಏನೇನೋ ಆಗಿದೆ. ಇದೆಲ್ಲ, ಹೀಗೆಲ್ಲ ಒಂದು, ಇಷ್ಟೊಂದು ದುಡ್ಡಿರೋದ್ರಿಂದ ಅದ್ರ ಸುತ್ತ, ಪ್ರಕಾಶಕರು -ಏನಾಗಿದೆ, ತಮಗೆ ಲಾಭ ಬರುವ ಸುಲಭ ಮಾರ್ಗಗಳಿರುವಾಗ -ಅವ್ರು ಈ ಪುಸ್ತಕಗಳನ್ನ ಎಲ್ಲಾ ಜಿಲ್ಲೆಗಳಲ್ಲಿ, ತಾಲೋಕುಗಳಲ್ಲಿ ವಿತರಣೆ ಮಾಡುವತ್ತ ಗಮನಾನೆ ಹರಿಸ್ಲಿಲ್ಲ. ಯಾಕಂದ್ರೆ ಅವ್ರಿಗೆ ಸರ್ಕಾರವೇ ಮುನ್ನೂರು ಕಾಪಿ ತಗೊಂಡ್ರೆ ಯಾಕಿನ್ನು ಅವ್ರು ಊರೂರಿಗೆ ಮಾರಾಟ ಮಾಡ್ಬೇಕು. ಸೊ, ಆ ಮುನ್ನೂರು ಕಾಪಿ ಹೆಂಗೆ ತಗೊಳ್ಳೋದು, ಸರ್ಕಾರ ಹೆಂಗೆ ತಗೊಳ್ಳುತ್ತೆ ಅನ್ನೋದರತ್ತನೆ ಅವರು ಲಕ್ಷ್ಯ ಮಾಡ್ತಾ ಇದ್ದಾರೆ. ಇದು ಒಟ್ಟಾರೆಯಾಗಿ, ಒಂದು ಒಳ್ಳೆಯ ಪುಸ್ತಕಕ್ಕೆ ಇದು ತುಂಬಾ ದುರದೃಷ್ಟಕರ ಅಂತ್ಲೇನೆ ಹೇಳಬಹುದು. ಯಾಕಂದ್ರೆ ಎಷ್ಟೋ ಒಳ್ಳೆಯ ಪುಸ್ತಕಗಳು, ನಾನೂ ಆ ಕಷ್ಟ ಅನುಭವಿಸಿದೀನಿ, ಅದನ್ನ ತಗೋಳ್ಬೇಕಾದ್ರೆ ನೀವು ಪ್ರಕಾಶಕರತ್ರಾನೇ ಹೋಗ್ಬೇಕು, ಅಂದ್ರೆ ಯಾರದನ್ನ publish ಮಾಡಿದಾರೋ ಅವರತ್ರನೆ ಹೋಗಿ ತಗೊಳ್ಳೋವಂಥ ಒಂದು ಪರಿಸ್ಥಿತಿ ಇದೆ. ಆಮೇಲೆ ನಮ್ಮ ತಾಲೋಕು ಕೇಂದ್ರ ಅಷ್ಟೇ ಯಾಕೆ, ಜಿಲ್ಲಾ ಕೇಂದ್ರಗಳಲ್ಲೂ ನಮಗೆ ಒಳ್ಳೆಯ ಪುಸ್ತಕ ಮಾರಾಟದ ವ್ಯವಸ್ಥೆ ಇಲ್ಲ. ನಮಗೆ ಮಾದರಿಯಾಗಿ ಕೇರಳದಲ್ಲಿ ಒಂದು ಒಳ್ಳೆಯ ಒಂದು ಈ ತರದ ಮಾರಾಟಜಾಲ ಇದೆ; ಆದ್ರೆ, ಅಲ್ಲಿ ಓದುವ ಹವ್ಯಾಸವೂ ತುಂಬಾ ಇದೆ, ನಮ್ಮ ಜನರಿಗಿಂತ ತುಂಬ ತುಂಬ ಪಟ್ಟು ಜಾಸ್ತಿ ಇದೆ. ಹಾಗಾಗಿ ಇದೊಂದು ಸಮಸ್ಯೆ, ಇದನ್ನ ಪರಿಹರಿಸ್ಬೇಕು, ಹೇಗೆ ಅಂತ ಇನ್ನೂ ನನಗೆ ಗೊತ್ತಿಲ್ಲ ಅದು.

ಬರಹಗಾರನ commitment ಬಗ್ಗೆ ಒಂದೆರಡು ಮಾತುಗಳು?

commitment ಅಂದ್ರೆ, ಎರಡು ತರ ಇರುತ್ತೆ. ಒಂದಂದ್ರೆ, ನಾನು ಒಂದು ಬರೆಯುವಾಗ, ಬರೆಯುವ ಸ್ಥಿತಿಯೇನಿದೆಯಲ್ಲ, ಅದು ತುಂಬ ನಮಗೆ ಒಂದು ಅವಕಾಶ ಅಂತ ನಾನು ತಿಳ್ಕೊಂಡಿದೀನಿ. ಅಂದ್ರೆ ಅದು ನಮಗೆ ನಾವೇ ಪ್ರಾಮಾಣಿಕವಾಗಿ ಇರ್ಲಿಕ್ಕೆ ಸಾಧ್ಯವಿರುವಂಥ ಒಂದು ಅವಕಾಶ ಅದು. ಅದು, ಲೇಖಕರಿಗೆ ಅದೃಷ್ಟವಶಾತ್ ಅದು ಸಿಗುತ್ತೆ. ಅಂದ್ರೆ ನಾವು ಲೇಖಕರಾಗಿರೋದ್ರಿಂದ ನಮ್ಗೆ ಆ ತರದ್ದೊಂದು ಅವಕಾಶ. ಎಲ್ರಿಗೂ ಆ ಅವಕಾಶ ಇಲ್ಲ. ಆಮೇಲೆ ಅದ್ರಿಂದಾಗಿ ತುಂಬ, ಯಾಕಂದ್ರೆ, ಯಾಕೆ ನಾವು ಬರೀತೀವಿ ಅಂತ ಕೇಳ್ಕೊಂಡ್ರೆ ನೀವೊಂದು ನಿಮ್ಮ ಅನುಭವವನ್ನ ಮತ್ತೆ ಮತ್ತೆ ಅದನ್ನ ಅರ್ಥ ಮಾಡ್ಕೊಳ್ಳಿಕ್ಕೆ, ಅದನ್ನ ಗ್ರಹಿಸಲಿಕ್ಕೆ, ನಾವು ಬರೀತೀವಿ. ಒಂದು ಅತ್ಯಂತ ಸರಳವಾದ ಉದಾಹರಣೆ ಅಂದ್ರೆ, ನೀವು ಒಂದು ಪ್ರವಾಸಕ್ಕೆ ಹೋಗ್ಬಂದ್ರೆ, ಆ ಪ್ರವಾಸಾನ ನಿಮ್ಮ ಮನೆಯವ್ರಿಗೆ ವಿವರಿಸ್ತೀರಲ್ಲ, ಆ ವಿವರಣೆಯಲ್ಲೆ ಒಂದು ಕತೆಯಿದೆ. ಆ ವಿವರಣೆಯಲ್ಲೆ ಒಂದು ಕಥನ ಇದೆ. ಆಮೇಲೆ ನೀವದನ್ನ ಹೇಳುವಾಗ್ಲೇನೆ, ನಿಮ್ಗೇ ಗೊತ್ತಾಗುತ್ತೆ, ಅದು ಹೇಳುವಾಗ್ಲೆನೆ ನೀವು ಸ್ವತಃ ನೀವು ಅನುಭವಿಸಿದಾಗ ನೋಡದೆ ಇರೋ ಎಷ್ಟೋ ಸಂಗತಿಗಳನ್ನ ನೀವು ಮತ್ತೆ ಹೇಳ್ತೀರಿ. ಯಾವ್ದನ್ನೋ ನೀವು ಒಂದು ಕ್ಷಣ ನೋಡಿರ್ಬೋದು, ಅದನ್ನ ನೀವು ಐದ್ನಿಮಿಷ ಅದ್ರ ವಿವರಣೆ ಮಾಡ್ತೀರಿ. ಇನ್ನೊಂದು ಕಡೆ ನೀವು ಅರ್ಧ ಗಂಟೆ ಕಳೆದಿರ್ಬೋದು, ಅದನ್ನ ನೀವು ಹೇಳ್ದೇನೆ ಹೋಗ್ಬಹುದು. ಈ choice ಇದ್ಯಲ್ಲ, ಅಂದ್ರೆ ಯಾವ್ದನ್ನ ಹೇಳ್ತೀರಿ ಯಾವ್ದನ್ನ ಹೇಳುವುದಿಲ್ಲ, ಅದು ಒಂದು ರೀತಿಯ ಕಥನವನ್ನ ಕಟ್ಟುತ್ತೆ. ಅದ್ರಿಂದ, ಅದರಲ್ಲಿ ಪ್ರಾಮಾಣಿಕತೆ ಅಂತಲ್ಲ ಅದು. ಯಾಕಂದ್ರೆ ಸಾಹಿತ್ಯ ಅನ್ನೋದು ವರದಿಯಲ್ಲ. ಇರೋದನ್ನ ಹೇಳೋದಲ್ಲ. ಸಾಹಿತ್ಯ ನೀವು ಗ್ರಹಿಸಿದ್ದನ್ನ ಹೇಳೋದು. ಆದ್ರಿಂದ ಆ ಗ್ರಹಿಕೆಯ ಕ್ರಮ ಇದ್ಯಲ್ಲ, ಅದನ್ನೆ ಒಂದು joy ಅದು. ಅದ್ರಿಂದ ಈ ರೀತಿಯ ಒಂದು ಸಂತೋಷದಲ್ಲಿ ನಾವು ಹೆಚ್ಚೆಚ್ಚು ಪ್ರಾಮಾಣಿಕವಾಗಿರ್ರ್ಬೇಕು ಅಂತನ್ನೋದೇ ಒಂದು... ಪ್ರಾಮಾಣಿಕತೆ ಅಂತನ್ನೋದು, ಆ ಪ್ರಾಮಾಣಿಕತೆಯಿಂದ ಹೆಚ್ಚೆಚ್ಚು ಸಂತೋಷ ಸಿಗುತ್ತೆ. ಆಮೇಲೆ ಪ್ರಾಮಾಣಿಕತೆ ಅನ್ನೋದಿಕ್ಕೆ ನೀವು ಅದು factual ಅನ್ನೋ ಅರ್ಥ ಕೊಡ್ಬಾರ್ದು. ಅಥವಾ realistic ಅನ್ನೋ ಅರ್ಥ ಕೊಡ್ಬಾರ್ದು. ಪ್ರಾಮಾಣಿಕತೆಯನ್ನೋದು ಒಂದು ನೀವದ್ರ ಅರ್ಥ ಹುಡುಕುವಾಗ, ಆ ಸತ್ಯಗಳನ್ನ ಎದುರಿಸೋವಾಗ ನೀವದನ್ನ ಹಿಂಜರಿಯದೆ ನೋಡುವಂಥಾದ್ದು. ಆಮೇಲೆ ಎಷ್ಟೋ ಸಂದರ್ಭಗಳಲ್ಲಿ ಅದು ಯಾವುದನ್ನ ಹೇಳ್ಬೇಕು, ಯಾವುದನ್ನ ಹೇಳ್ಬಾರ್ದು ಅನ್ನುವ ಒಂದು ತಾರತಮ್ಯ ಜ್ಞಾನ-ಅದೆಲ್ಲ ಇದ್ಯಲ್ಲ-ಅದೆಲ್ಲವೂ ಸೇರಿ ಒಂದ್ರೀತಿಯ ಪ್ರಾಮಾಣಿಕತೆ ಅಂತ ಹೇಳ್ತೇನೆ ನಾನು.

ಆಮೇಲೆ commitment ಅಂತ ನೀವು ಉಪಯೋಗಿಸಿದ್ರಿ, ಅದನ್ನೂ ಅಂದ್ರೆ, commitment ಅಂತನ್ನೋದು, commitment ಯಾವಾಗಿರುತ್ತೆ ಅಂದ್ರೆ, ನಿಮ್ಗೆ ಅದಕ್ಕೆ ತುಂಬಾ, ನಿಮ್ಮ ಮನಸ್ಸಿನಲ್ಲಿ-ನಿಮ್ಮ ಹೃದಯದಲ್ಲಿ ಅದಕ್ಕೆ ತುಂಬಾ ಎತ್ತರದ ಸ್ಥಾನ ಇರ್ಬೇಕು. ಅಂದ್ರೆ, ಈಗ, ಸಾಹಿತ್ಯಕ್ಕೆ ನಿಮ್ಮ ಹೃದಯದಲ್ಲಿ ಮೊದಲ್ನೇ ಸ್ಥಾನ ಇಲ್ದೇ ಇದ್ರೆ, ನಿಮಗೆ ಅದರ ಬಗ್ಗೆ commitment ಇಲ್ಲ. ಯಾಕಂದ್ರೆ, ಜೀವನದಲ್ಲಿ ನಮಗೆ ಮಾಡ್ಲಿಕ್ಕೆ ಎಷ್ಟೋ ಸಂಗತಿಗಳಿರ್ತಾವೆ. ನಾವು ಕೆಲವೊಂದು ಮಾಡ್ತೀವಿ, ಕೆಲವೊಂದು ಮಾಡಲ್ಲ. ಯಾಕೆ ಕೆಲವೊಂದು ಮಾಡೋದಿಲ್ಲ ಅಂದ್ರೆ ಅದಕ್ಕೆ ನಮ್ಮ ಹೃದಯದಲ್ಲಿ ಎತ್ತರದ ಸ್ಥಾನ ಇಲ್ಲ ಅಂತರ್ಥ ಅಷ್ಟೆ ಅದಕ್ಕೆ. ಅದೇನು ನಾವು ಸಮಯ ಸಿಗಲ್ಲ, ಅದ್ಮಾಡಲ್ಲ, ನೂರಾ ಎಂಟು ಕಾರಣಗಳನ್ನ ನಾವು ಹೇಳ್ಕೋಬೌದು. ಆದ್ರೆ ಅದ್ಯಾವ್ದು ನಿಜವಾದ ಕಾರಣ ಅಲ್ಲ. ನಮಗೆ, ಹೃದಯದಲ್ಲಿ ಅದಕ್ಕೆ ಮೊದಲ್ನೇ ಸ್ಥಾನ ಇದ್ರೆ, ಆ ಸಂಗತೀನ ನೀವು ಮಾಡೇ ಮಾಡ್ತೀರಿ. ನೀವೆಷ್ಟೇ ಕಷ್ಟ ಬಂದ್ರು ಅದನ್ನ ಮಾಡ್ತೀರಿ. ಅದು, ನನಗದು commitment ಅಂತನ್ಸುತ್ತೆ.

(ವಿವೇಕ್ ಕಥಾಜಗತ್ತನ್ನು ಕುರಿತಂತೆ ಕೇಳಿದ ಇನ್ನಷ್ಟು ಪ್ರಶ್ನೆ, ಉತ್ತರಗಳನ್ನು ವಿವೇಕರ ಕಥಾಜಗತ್ತಿಗೆ ಒಂದು ಸುತ್ತು ಹಾಕಿ ಬಂದ ನಂತರ ಇಲ್ಲಿ ಕಾಣಿಸುತ್ತೇನೆ)

(ಫೋಟೋ ಕೃಪೆ: ಸಂಪದ ಡಾಟ್ ನೆಟ್ ಮತ್ತು ಜಯಂತ ಕಾಯ್ಕಿಣಿಯವರ ಸಂಗ್ರಹದಿಂದ)

4 comments:

shreedevi kalasad said...

worthwhile interview. thanks

ನರೇಂದ್ರ ಪೈ said...

ಥ್ಯಾಂಕ್ಸ್ ಯಾಕೆ ಶ್ರೀದೇವಿಯವರೆ, ಇದನ್ನು ಎಲ್ಲರಿಗೂ ತಲುಪಿಸುವುದು ನನ್ನ ಕರ್ತವ್ಯವಷ್ಟೇ ಆಗಿತ್ತು. ನಿಮಗೆ ಯುಕ್ತವಾದದ್ದು ಅನಿಸಿತಲ್ಲ, ಅದು ಸಂತೋಷ. ಸಾಧ್ಯವಾದರೆ ವಿವೇಕರ ಧ್ವನಿಯಲ್ಲೇ ಈ ಸಂದರ್ಶನವನ್ನು ಕೇಳಿ, ಚೆನ್ನಾಗಿರುತ್ತದೆ.

sunanda said...

tumba olleya kelasa narendra, munduvaresu. all the best.
-sunandakadame

ನರೇಂದ್ರ ಪೈ said...

ಥ್ಯಾಂಕ್ಯೂ ಸುನಂದಾ. ಹೀಗೆ ಓದುವುದು, ಬರೆಯುವುದು ನನ್ನ ಕಲಿಕೆಯ ರೀತಿಯಷ್ಟೇ, ಇನ್ನೇನಲ್ಲ. ನಮ್ಮ ಬರಹಗಾರರು ಕನಿಷ್ಠ ನೂರು ಮಂದಿ ಅತ್ಯುತ್ತಮವೆನಿಸಿದ ಲೇಖಕರನ್ನು ಪೂರ್ತಿಯಾಗಿ ಓದಿಕೊಂಡಿರಬೇಕು ಎಂದಿದ್ದರು ವಿವೇಕ್. ನನ್ನ ತಲೆಮಾರಿಗೆ ಇದು ಸಾಧ್ಯವೇ, ಗೊತ್ತಿಲ್ಲ. ಅವರು ತೋರಿಸಿದ ಹಾದಿ ಅದ್ಭುತ ಎನಿಸಿದ್ದಂತೂ ಸತ್ಯ. ಅಷ್ಟಿಷ್ಟು ಪ್ರಯತ್ನಿಸುತ್ತಿದ್ದೇನೆ.