Friday, December 12, 2008

ಜೀವನ್ಮುಖೀ ಧೋರಣೆಯ ಕೆರೂರುನಾಮಾ

ಚಂದ್ರಕಾಂತ ಕುಸನೂರರ ಕೆರೂರುನಾಮಾ ಹಲವಾರು ಕಾರಣಗಳಿಗಾಗಿ ಒಂದು ಪ್ರಮುಖ ಕಾದಂಬರಿ.

ಮೊದಲಿಗೆ ಈ ಕಾದಂಬರಿಗೆ ಯಾವುದೇ ಒಂದು ನಿಶ್ಚಿತ ಪ್ರಣಾಳಿಕೆ ಇಲ್ಲ. ಇದು ಶುದ್ಧ ಬದುಕನ್ನು ಕುರಿತು ಹಂಚಿಕೊಳ್ಳುವ ಸಹಜ ಆಸೆಯಿಂದ ಹೊರಟಂತೆ ತೊಡಗುವ ಕಾದಂಬರಿ. ಹಾಗಾಗಿಯೇ ಇದರ ಓದು ನಮಗೆ ಕಾರಂತರ ಕಾದಂಬರಿಗಳು ಕೊಡುವಂಥ ಒಂದು ಅಪ್ಪಟವಾದ ಜೀವನಾನುಭವವನ್ನು ಕೊಡುತ್ತದೆ. ಅದು ನಮ್ಮದಲ್ಲದ ಒಂದು ಬದುಕನ್ನು ನಾವು ಬದುಕಿ ಬಂದ ಅನುಭವ. ಹಾಗೆಯೇ ಕಾದಂಬರಿ ಓದಿ ಮುಗಿಸಿದರೂ ಇಲ್ಲಿನ ತುಳಸಕ್ಕ, ಅಂಬಕ್ಕ, ಮೌಲಾಲಿ, ಕಿಶನರಾಯ, ಪಂಢರಿ, ನಾನ್ಯಾ, ಮಠದ ಸ್ವಾಮಿ, ಊರ ಗೌಡ, ರಾಮಾಚಾರಿಗಳೆಲ್ಲ ಓಡಾಡಿದ ಕೆರೂರಿನಿಂದ ಹೊರಬರಲು ಮನಸ್ಸೇ ಬರುವುದಿಲ್ಲ. ಅಂಥ ಒಂದು ಗುಂಗು ಹಿಡಿಸಬಲ್ಲ ವಾತಾವರಣವನ್ನೇ ಕುಸನೂರರು ನಿರ್ಮಿಸಿದ್ದಾರೆ. ಕಾದಂಬರಿ ತನ್ನ ಅಂತಃಸ್ಸತ್ವದಲ್ಲಿ ಹೇಳುವ ಅಥವಾ ಹೇಳಬಯಸುವ ತಾತ್ವಿಕ ಆಯಾಮಗಳ ಕುರಿತೆಲ್ಲ ತಲೆ ಕೆಡಿಸಿಕೊಳ್ಳದೆಯೂ ಕೇವಲ ಓದುವ ಮಜಕ್ಕಾಗಿಯಾದರೂ ಓದಲು ಈ ಕಾದಂಬರಿ ಅತ್ಯುತ್ತಮವಾಗಿದೆ. ಅದು ಇದೆಲ್ಲದರ ಜೊತೆಜೊತೆಗೇ ಇಂಟೆಲಿಜೆಂಟ್ ಎಂಟರ್ಟೈನ್‌ಮೆಂಟ್ ಕೂಡ ಆಗಿರುವುದು ಕುತೂಹಲಕರ.

ಈ ಕಾದಂಬರಿಗೆ ಹಲವು ಪಾತಳಿಗಳಲ್ಲಿ ಸತ್ಯದ ವಿಭಿನ್ನ ಆಯಾಮಗಳನ್ನು ಮುಟ್ಟುವ ಶಕ್ತಿ ಇದೆ. ಉದಾಹರಣೆಗೆ ತುಳಸಕ್ಕ, ಅಂಬಕ್ಕ ಮತ್ತು ನಿಂಗಿ - ಈ ಮೂವರ ಬದುಕನ್ನೇ ನೋಡಿ. ಇವರ ಜೀವನದೃಷ್ಟಿ, ನಡವಳಿಕೆಗಳು, ಅಂತರಂಗದ ಸತ್ಯಗಳು ಮತ್ತು ಅವುಗಳೊಂದಿಗೆ ಇವರು ಮುಖಾಮುಖಿಯಾಗುವ ಸನ್ನಿವೇಶ ಎಲ್ಲವನ್ನೂ ಗಮನಿಸಿದರೆ ಈ ಮೂರೂ ಪ್ರಮುಖ ಸ್ತ್ರೀಪಾತ್ರಗಳು ಪ್ರತಿನಿಧಿಸುವ ಬದುಕು ಒಂದೇ ಆಗಿರುತ್ತ, ಅಂಥ ಒಂದು ಬದುಕಿನ ವಿಭಿನ್ನ ಸಾಧ್ಯತೆಗಳನ್ನು ಪರೀಕ್ಷಿಸುವುದಕ್ಕಾಗಿಯೇ ಅವುಗಳ ರಚನೆಯಾದಂತಿದೆ. ಆದರೆ ಅದು ನಿಜವಲ್ಲ. ಈ ಮೂವರೂ ಮೂವರಾಗಿ ಇದ್ದಾಗಲೇ ಕೆರೂರು ನಮ್ಮಲ್ಲಿ ಉದ್ದೀಪಿಸುವ ಚಿಂತನೆ ಸಾಧ್ಯವಾಗುವುದು.

ತುಳಸಕ್ಕ ಒಂದು ವಿಧದಲ್ಲಿ ಬಾಲವಿಧವೆ. ಅಂಬಕ್ಕನ ಗಂಡ ಗಂಡಸುತನವಿಲ್ಲದವನು. ನಿಂಗಿಗೆ ಉಕ್ಕುವ ಹರೆಯ, ಮದುವೆ ದೂರದ ಕನಸು. ಇವರ ಬದುಕು ಮೂರು ರೀತಿಯಲ್ಲಿ ತನಗೆ ದಕ್ಕಿದ ಸ್ಥಿತಿಗೆ ಸ್ಪಂದಿಸುತ್ತದೆ.

ತುಳಸಕ್ಕ ಸೆಟೆದು ನಿಲ್ಲುತ್ತಾಳೆ, ದೈಹಿಕ ಅಗತ್ಯಗಳಿಗೆ ಬೆನ್ನುಹಾಕಿ ಸನಾತನಿಯಾಗುತ್ತಾಳೆ ಅಥವಾ ಆಗಲು ಬಯಸುತ್ತಾಳೆ ಅನಿಸುತ್ತದೆ. ಪ್ರಯತ್ನಿಸಿದರೆ ಅವಳಿಗೆ ಬಯಸಿದ್ದನ್ನು ಪಡೆಯುವುದು ಸಾಧ್ಯವಿತ್ತು. ಪ್ರಯತ್ನಿಸುವುದಿಲ್ಲ. ಮುಂದೆ ರಾಮಾಚಾರಿಯಿಂದ ಅತ್ಯಾಚಾರಕ್ಕೆ ಒಳಗಾದ ಅವಳು ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಗಂಡ ಸತ್ತ ಮೇಲೂ ಸಕೇಶಿಯಾಗಿ ನಿಲ್ಲುವ ಅವಳ ದಿಟ್ಟ ನಿರ್ಧಾರ ಗಮನಿಸಿದರೆ ಪಾಲು ಪಡೆದು, ತೋಟ ಮಾಡಿ, ಪೇಟೆ ಸುತ್ತಿ, ಸ್ವಶಕ್ತಿಯಿಂದ ಬದುಕನ್ನು ನೇರ್ಪುಗೊಳಿಸಿಕೊಂಡು, ಸಂಗೀತ ಕಲಿಯುವ ಮಟ್ಟಿಗೆ ಜೀವನಾಸಕ್ತಿ ಪ್ರದರ್ಶಿಸುವ ತುಳಸಕ್ಕ ತನ್ನ ತೀರ ಅಂತರಂಗದಲ್ಲಿ ಗೊಡ್ಡು ಸನಾತನಿಯಾಗಿಯೇ ಇದ್ದಳು ಎನಿಸುತ್ತದೆ. ಇದನ್ನು ನಿಂಗಿಯ ಪಾತ್ರ ಮತ್ತು ಅಂಬಕ್ಕನ ಪಾತ್ರ ಪರಸ್ಪರ ವಿರುದ್ಧವಾದ ಎರಡು ವಿಭಿನ್ನ ನೆಲೆಗಳಲ್ಲಿ ಪ್ರಶ್ನಿಸುತ್ತವೆ.

ಈ ನಿಂಗಿಯನ್ನು ನೋಡಿ. ಹುಚ್ಚು ಹರೆಯದ ರತಿ ರೂಪಿನ ಹುಡುಗಿ ಒಲಿಯುವುದು ಮದುವೆಯಾಗಿ ಮಕ್ಕಳಿಲ್ಲದ ಶಾಂತಾರಾಮನಿಗೆ. ನಿಂಗಿಯನ್ನು ನಮಗೆ ಪರಿಚಯಿಸುವ ಕುಸನೂರರ ಭಾಷೆ ಎಷ್ಟು ಸಶಕ್ತ ಎಂದು ತಿಳಿಯಲಿಕ್ಕಾದರೂ ಅವರ ಮಾತುಗಳನ್ನೇ ನಾವು ನೋಡಬೇಕು, ಅದರ ಕಾವ್ಯಶಕ್ತಿ ಮತ್ತು ಧ್ವನಿಶಕ್ತಿಗಾಗಿಯೂ.

"ತಾಮ್ರ ಬಣ್ಣದ ನಿಂಗಿ, ಭರಮಶಾನ ಮಗಳು. ನಡೆದರೆ ರಬ್ಬರ ಚೆಂಡು ಪುಟದ್ಹಾಂಗ ಪುಟೀತಿದ್ದಳು. ನಕ್ಕರೆ ಎಡಗಲ್ಲದ ಮ್ಯಾಲಗುಳಿ ಬೀಳತಿತ್ತು. ಕಣ್ಣು ಹ್ಯಾಂಗಿದ್ವಪಾಂದ್ರ, ಅಗದಿ ಸೌಂದತಿ ಯಲ್ಲಮ್ಮನ ಜಾತ್ರ್ಯಾಗ ಖರೀದಿಸಿದ ದೊಡ್ಡ ಕವಡಿ ಹಾಂಗಿದ್ದವು. ಭಲೇ, ಭಾಳ ಅಂದರ ಅಪರಂಪಾರ `ಬ್ಯೂಟಿ' ಆಗಿದ್ದಳು. ಇದೀಗೇ ಇಳಿಸಿದ ಜೇನಗೂಡಿನೊಳಗಿನ ತುಪ್ಪದ್ಹಾಂಗ ಮೈಬಣ್ಣ ಥಳಥಳಾ ಅಂತಿತ್ತು......ಭಾರಿ ಮಳೆ ಬಂದು, ಎರಡೂ ದಡಕ್ಕೆ ಡಿಕ್ಕಿ ಹೊಡಕೊಂಡು ಹೋಗೋ ಹಳ್ಳಕ್ಕ ಅಡ್ಡಗಾಲ ಹಾಕಿ ನಿಲ್ಲಸ್ತೀನಿ ಅಂದ್ರ ಹ್ಯಾಂಗಾದೀತು? ನಿಂಗೀ ಹಾಂಗ ಹರಿಬಂದ ಹಳ್ಳದ್ಹಾಂಗ ಹರೀಲಿಕತ್ತಿದ್ದಳು. ಆಯ್ತು, ಶಾಂತಾರಾಮನ ತ್ವಾಟಾದಾಗ ಹರಕೋತ ಮಡುವುಗಟ್ಟಿ ನಿಂತಂತೆ, ನಿಂಗೀ ನಿಂತು ಬಿಟ್ಟಿತ್ತು. ಶಾಂತಾರಾಮ ಆ ನೀರಿನ್ಯಾಗ ಕೈಕಾಲು ತೊಳಕೊಂಡು ಮಕಾ ತೊಳಕೊಂಡ, ಮೈನೂ ತೊಳಕೊಂಡ."

ಈ ನಿಂಗಿಗೆ ಮದುವೆಯೂ ಆಗುತ್ತದೆ. ಆದರೆ ಗಂಡ ಅವಳ ಅಪ್ಪನಂತೆಯೆ ಫಕೀರನಾಗುವುದರಲ್ಲೇ ಹೆಚ್ಚು ಆಸಕ್ತನಾಗುವುದರಿಂದ ಶಾಂತಾರಾಮ ನಿಂಗಿಯೆಂಬ ಹಳ್ಳದಲ್ಲೇ ಕೈಕಾಲು ಮಕ ಮತ್ತು ಮೈ ಕೂಡ ತೊಳೆದುಕೊಳ್ಳುತ್ತ ಇರುವುದು ತಪ್ಪುವುದಿಲ್ಲ. ಆದರೆ ಈ ನಿಂಗಿಗೆ ಕೆಲವು ನಿಯಮಗಳಿವೆ, ಅವಳದೇ ನಿಯತಿಗೆ ಅವಳ ಬದ್ಧತೆಯಿದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವಳ ಬಳಿ ಅವಳದೇ ಆದ ಒಂದು ತರ್ಕ, ಅಧ್ಯಾತ್ಮ ಮತ್ತು ತತ್ವ ಇದೆ. ಇದಾದರೆ ನಿಜವಾದ ಅಚ್ಚರಿ!

ತನ್ನನ್ನು ಕಂಡು ಜೊಲ್ಲುಸುರಿಸಿದ ಹೋಟೆಲಿನ ಮಾಣಿಕರಾವ ಫುಲಂಬರೇಕರನನ್ನು ನಾಯಿಗೆ ಹೋಲಿಸುವ ಅವಳು ತನ್ನ ಗಂಡ, ಬದುಕು, ದೇಹದ ಅಗತ್ಯಗಳು, ದೇವರು ಎಲ್ಲದರ ಕುರಿತು ಹೇಳುವ ಮಾತು ನೋಡಿ:

"ಕಿಟ್ಟಕ್ಕಾ, ನಿಂಗೇನ್ ಗೊತ್ತು. ಅಂವಾ ದೇವರ ಬೆನ್ನು ಹತ್ಯಾನ. ಛಂದನ ಸಂಸಾರ ಮಾಡಿಕೊಂಡಿದ್ದರ ಅಂಥಲ್ಲಿ ದೇವರಿರತಾನಂತ ಆ ಕಸಮೂಳಗ ಗೊತ್ತೇ ಇಲ್ಲ. ಹುಡುಕ್ಕೋಂತ ಹೊಂಟಾನ, ಹುಡಕಲಿ. ಇನ್ನ ನಂದ ಸ್ವಭಾವ ಹ್ಯಾಂಗಂತ ನಿಮ್ಗ ಗೊತ್ತೇ ಐತಿ. ಸಿಕ್ಕಿದ ಒಂದು ಸಲದ ದೇಹಕ್ಕ ಸಾಯೋದಕಿಂತ ಮುಂಚೆನೇ ಸುಡಗಾಡ ಕಾಣಿಸೋ ಸ್ವಭಾವ ನಂದಲ್ಲ. ಹೀಂಗ ಮಾಡೋದಂದ್ರ ದೇವರಿಗೇ ಅಪಚಾರ ಮಾಡದ್ಹಾಂಗತೈತಿ. ಅಂವಾ ಕೊಟ್ಟ ವಸ್ತು ಇದು. ಈ ಜಿಂವಾ, ಇದ್ಕ ಮರ ಮರಾಂತ ಮರಗಿಸೋದಂದ್ರ ಪಾಪ - ಪಾಪ ಮಾಡದ್ಹಾಂಗೇ. ತುಳಸಕ್ಕಾ, ನಿಮ್ಮ ಶಾಸ್ತ್ರ ಏನ್ ಹೇಳತೈತೀ ನನಗ ಗೊತ್ತಿಲ್ಲ. ಅದು ಮನುಷ್ಯನ ಸುಖಕ್ಕ ಅಡ್ಡಿ ಮಾಡುತ್ತಿತ್ತೂ ಅಂದ್ರ ಅಂಥ ಶಾಸ್ತ್ರ ನನಗ ಬೇಕಾಗಿಲ್ಲ. ಬೀಸುವ ಗಾಳಿಗಿ, ಹರಿಯೋ ನದಿಗಿ ನಿಂದ್ರಂದರ ಹ್ಯಾಂಗ ನಿಂತಾವು? ಹಕ್ಕಿಗಿ ಹಾರಬ್ಯಾಡಂತೀರ್ಯಾ? ಇದು, ಇದುರೀ, ಈ ಬದುಕು, ಇದನ್ನ ಛಂದ ಮಾಡ್ಕೊಂಡಿರಬೇಕರೀ ತಾಯಿ. ಮೈತುಂಬ ಬೂದಿ ಬಡಕೊಂಡು ಬೇವಾರ್ಸಿ ನಾಯಿ ಹಾಂಗ ತಿರಗತಿದ್ದರ ದೇವರು ಸಿಗ್ತಾನಂತ ನಂಬಿದರ, ದೇವರು ಸಿಗಾಣಿಲ್ಲ ಅಕ್ಕ, ದೆವ್ವೂ ಸಿಗಾಣಿಲ್ಲ, ಅಂಥವರ ಕೈಗೆ ಸಿಗೋದು ಬರೀ ಸುಡಗಾಡದ ಮಣ್ಣು"

ಆದರೆ ತನ್ನ ಹಾಗೇ ಎಲ್ಲರೂ ಯೋಚಿಸಿದರೆ ಸಮಾಜ ವ್ಯವಸ್ಥೆಯೇ ಸತ್ಯನಾಶವಾಗಿ ಹೋಗಬಹುದು ಎನ್ನುವ ತರ್ಕದ ಅರಿವೂ ನಿಂಗಿಗೆ ಇದೆ. ಅದಕ್ಕವಳು ಹೇಳುತ್ತಾಳೆ, ನಾವು ನಾವಾಗೇ ಉಳಿದಾಗ ನಿಮ್ಮ ಸಮಾಜ ಅಲ್ಲಿಗೇಕೆ ಬರುತ್ತದೆ, ಬರುತ್ತದೆಯೆ? ಈ ತರ್ಕದ ಹಿನ್ನೆಲೆಯಲ್ಲೇ ಅವಳಿಗೆ ಮಾಣಿಕರಾವ ಒಂದು ತರದ ನಾಯಿ, ವಿರಕ್ತನಾಗಿ ಮೈತುಂಬ ಬೂದಿಬಡಕೊಂಡವ ಇನ್ನೊಂದು ತರದ ನಾಯಿ!

ಇನ್ನು ಅಂಬಕ್ಕ ತನ್ನ ಹಾದರ ಊರ ಬಾಯಿಗೆ ಬಿದ್ದು ತಾನು ಬೀದಿಪಾಲಾಗುವ ಭಯಕ್ಕೇ ತನ್ನ ಮೈಮೇಲೆ ದೇವಿ ಬರುತ್ತಾಳೆ ಎಂಬ ಆಟ ಹೂಡುತ್ತಾಳೆ. ಇವಳಲ್ಲಿ ತುಳಸಕ್ಕನ ಸೆಟೆದುಕೊಳ್ಳುವ ಸನಾತನತ್ವವೂ ಇಲ್ಲ, ತೆರೆದುಕೊಳ್ಳುವ ನಿಂಗಿಯ ಸರಳತೆಯೂ ಇಲ್ಲ.

ಈ ಮೂರು ಸ್ತ್ರೀ ಪಾತ್ರಗಳಂತೆಯೇ ಮುಖ್ಯವಾದ ಇನ್ನೊಂದು ಸ್ತ್ರೀ ಪಾತ್ರ ಅಮರಾಂಬಿಕೆ. ಮಠದ ಸ್ವಾಮಿಯನ್ನು ಮದುವೆಯ ನಿರ್ಧಾರಕ್ಕೆ ಅಣಿಯಾಗಲು ಇವಳು ಹೂಡುವ ವಾದ, ಇವಳ ನಿರ್ಧಾರದ ಸ್ಪಷ್ಟ ಮತ್ತು ನಿಖರವಾದ ಗುರಿ, ಮುಂದಿನ ಯೋಜನೆ ಎಲ್ಲವೂ ಸೂಕ್ಷ್ಮವಾಗಿ ಕಾದಂಬರಿಗೆ ನೀಡುವ ಮೆರುಗು ಕುಸನೂರರ ತಂತ್ರ ಕೌಶಲಕ್ಕೆ ಉತ್ತಮ ಉದಾಹರಣೆ.

ಎರಡನೆಯದಾಗಿ ನಾನ್ಯಾ, ಶೇಷಾಚಲ, ಕಿಶನರಾಯ, ಪುಲಂಬ್ರೇಕರ, ಮೌಲಾಲಿಯಂಥವರ ವ್ಯಾವಹಾರಿಕ ಚಾಣಾಕ್ಷತೆಯೂ ಕಾಲಕ್ಕೆ ತಕ್ಕಂತೆ ಕೋಲಕಟ್ಟುವ ಬುದ್ಧಿಯೂ ಕೆರೂರಿನಂಥ ಗ್ರಾಮ್ಯ ಪರಿಸರದಲ್ಲಿ ಪಡೆದುಕೊಳ್ಳುವ ರೂಪವಿನ್ಯಾಸ ಮತ್ತು ಅದು ಕಾದಂಬರಿಯ ಶಿಲ್ಪಕ್ಕೆ ಒದಗಿಸುವ ವಿಶಿಷ್ಟ ತಿರುವುಗಳು ಗಮನಾರ್ಹ. ಇವರಿಗೆ ಹೊಟ್ಟೆಪಾಡು, ಊರಿನ ರಾಜಕೀಯ, ಗುಸುಗುಸು ಎಲ್ಲವೂ ಸಮಾನವಾಗಿ ಅನಿವಾರ್ಯ. ಅವಕಾಶ ಸಿಕ್ಕಿದರೆ ಸ್ವಲ್ಪ ಮಹತ್ವ ಪಡೆದುಕೊಳ್ಳುವ, ಅಷ್ಟಿಷ್ಟು ಗಂಟುಕಟ್ಟುವ ಆಸೆಯೂ ಉಂಟು. ಆದರೆ ದುಷ್ಟರಲ್ಲ. ಈ ಎಲ್ಲರಲ್ಲೂ ಮತ್ತು ಈ ಎಲ್ಲರನ್ನು ಸಹಿಸಿಕೊಳ್ಳುವ ಕೆರೂರಿನಲ್ಲೂ ಇರುವ ಮಾನವೀಯ ಒರತೆ ಕುಸನೂರರ ಪ್ರಮುಖ ಕಾಳಜಿಗಳಲ್ಲಿ ಒಂದು. ಜಯಂತ ಕಾಯ್ಕಿಣಿ ಮತ್ತು ಚಿತ್ತಾಲರ ಕತೆಗಳಲ್ಲಿ ಬಿಟ್ಟರೆ ಇತರೆಡೆ ಈ ಸಾಮಾನ್ಯನ ಅಸಾಮಾನ್ಯ ಔದಾರ್ಯದ ಚಿತ್ರಣ ಬಹಳ ಅಪರೂಪ. ಚಂದ್ರಕಾಂತ ಕುಸನೂರರಿಗೆ ಮನುಷ್ಯನ ನೀಚತನದ ಬೇರಿನಲ್ಲೂ ಸತ್ ಎಂಬುದರ ಒರತೆಯೊಂದು ಸದಾ ಸೆಲೆಯೊಡೆದು ಬತ್ತದ ಗಂಗೆಯಂತೆ ಜೀವಂತವಾಗಿರುತ್ತದೆ ಎಂಬುದರಲ್ಲಿ ಅಚಲವಾದ ವಿಶ್ವಾಸ. ಈ ಜೀವನ್ಮುಖೀ ಧೋರಣೆ, ಆಶಾವಾದದ ಚಿಗುರು ಅವರ ಕಾದಂಬರಿಯ ಉದ್ದಕ್ಕೂ ಲವಲವಿಕೆಯಿಂದ ಹರಿಯುವುದನ್ನು ಕಾಣಬಹುದು.

ಮುನ್ನುಡಿಯಲ್ಲಿ ಡಾ. ರಾಜಶೇಖರ ನೀರಮಾನವಿಯವರು ಹೇಳುವ ಮಾತುಗಳನ್ನು ಗಮನಿಸಿ:

"ಊರಿನ ಜನಗಳು ಸೇರಿಕೊಂಡು ಇಂದಮ್ಮ ಎನ್ನುವವಳ ಮದುವೆ ಮಾಡುತ್ತಾರೆ. ಆಗ ಶಂಕರಣ್ಣನೆಂಬಾತ "ಕೆರೂರಿನ ಜನಗಳ ಮನಸ್ಸು ಶ್ರೀಮಂತವಾಗಿದೆ, ನೀನು ಲಗ್ನ ನಿಶ್ಚಯ ಮಾಡಿದರೆ ನಿನ್ನ ಮಗಳ ಮದುವೆಯನ್ನು ಊರವರು ನಿಂತು ಮಾಡುತ್ತೇವೆ" ಎಂದು ಮೌಲಾಲಿಗೆ ಹೇಳುತ್ತಾನೆ. ಊರಿನ ಜನಗಳ ಸಮಷ್ಟಿ ಮನಸ್ಸು ಮೌಲಾಲಿಯ ಬದುಕಿಗೆ ಹೊಸದೊಂದು ಆಯಾಮ ನೀಡುತ್ತದೆ. ತನ್ನ ಜಾತಿ, ತನ್ನ ಧರ್ಮ, ತನ್ನ ಮುಲ್ಲಾ ಮಸೀದಿಗಳಿಂದ ಮುಕ್ತವಾದ ಪರಿಸರದಲ್ಲಿ ಪ್ರೀತಿಯಿಂದ ಬದುಕುವೆಡೆ ನಿಜ ಧರ್ಮವೆಂದು ಮೌಲಾಲಿಗೆ ಅನುಭವವಾಗುತ್ತದೆ."

ಕುಸನೂರರ ಜೀವನದೃಷ್ಟಿ ಇದಕ್ಕಿಂತ ಹಿರಿದಾದುದನ್ನು ಒಳಗೊಳ್ಳುವಂಥದ್ದು. ಯಾಕೆಂದರೆ ಅವರಿಗೆ ಕೆರೂರಿನ ಇನ್ನೊಂದು ಮುಖವೂ ಗೊತ್ತು. ಕಾದಂಬರಿಯಲ್ಲಿ ಈ ಊರಿನಲ್ಲೂ ಕೋಮುಗಲಭೆಯಂಥ ವಿದ್ಯಮಾನ ನಡೆಯುವ ಸಾಧ್ಯತೆಗಳಿವೆ ಎಂಬುದು ಸಿದ್ಧವಾಗುತ್ತದೆ. ಇಲ್ಲೂ ಮಾಟ ಮಂತ್ರ ಮಾಡಿಸುವುದು, ಬಿಡಿಸುವುದು, ದೇವಿ ಮೈಮೇಲೆ ಬರುವುದು ಎಲ್ಲ ನಡೆಯುತ್ತಿರುತ್ತದೆ. ಸ್ವಾಮೀಜಿಗಳ ಅಸೂಯೆ, ಒಳಜಗಳದ ಬಹಿರಂಗ ಪ್ರದರ್ಶನ, ಭಾಷಣ ಇದೆ. ಸರಕಾರೀ ದಾಖಲೆಗಳಲ್ಲಿ ಮಾತ್ರ ಇರುವ ಐದು ಕೊಳವೆ ಬಾವಿಗಳು, ಒಂದು ಸಮಾಜಮಂದಿರ, ನಾಲ್ಕು ಟಾರ್ ರಸ್ತೆಗಳು, ಒಂದು ಪಶುವೈದ್ಯಕೀಯ ಆಸ್ಪತ್ರೆ, ಸಣ್ಣ ಮತ್ತು ಏತ ನೀರಾವರಿ ವ್ಯವಸ್ಥೆ, ಹಳ್ಳಕ್ಕೆ ದೊಡ್ಡದೊಂದು ಸೇತುವೆ, ಅರಣ್ಯ ಇಲಾಖೆಯಿಂದ ಎರಡು ಲಕ್ಷ ಸಸಿ ನೆಟ್ಟಿದ್ದು ಹಾಗೂ ಐದು ವರ್ಷಗಳಿಂದಲೂ ಸ್ವಾಮಿಗಳ ಮಠದಲ್ಲಿ ನಡೆಯುವ ಸರಕಾರಿ ಗಂಡು ಮತ್ತು ಹೆಣ್ಣುಮಕ್ಕಳ ಶಾಲೆ ಯಾವುದೂ ವಾಸ್ತವದಲ್ಲಿ ಇಲ್ಲದ ಕಟು ಭ್ರಷ್ಟಾಚಾರದ ಬಲಿಪಶು ಕೆರೂರು. ಹೀಗಿರುತ್ತ ಕುಸನೂರರ ಆದರ್ಶ ಕೆಲಸ ಮಾಡಬೇಕಿದೆ ಮತ್ತು ಆದರ್ಶ ವಾಸ್ತವದಲ್ಲಿ ತನ್ನ ಜೀವಂತಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಈ ಕಾದಂಬರಿ ತನ್ನ ಸಾಮಾಜಿಕ ಅರ್ಥಪೂರ್ಣತೆಯನ್ನು ಅದರ ತಾತ್ವಿಕ ಆಯಾಮದೊಂದಿಗೇ ಇಲ್ಲಿ ಹೇಗೆ ಸಾಧಿಸುತ್ತದೆ ಎನ್ನುವುದೇ ಕಾದಂಬರಿಯ ಎದುರಿಗಿರುವ ಸವಾಲು ಮತ್ತು ಸಾಧನೆ.

ಬದುಕಿನ ಅನನ್ಯ ಜೀವನ್ಮುಖೀ ಧೋರಣೆ ಮತ್ತು ಅದರ ಸಾರ್ಥಕತೆ ಎಂದೂ ಸಹಜ ಸರಳ ಮಾರ್ಗಗಳಲ್ಲಿರುತ್ತದೆ ಎನ್ನುವ ಕುಸನೂರರ ಜೀವನದೃಷ್ಟಿಯನ್ನು ಪುಷ್ಟೀಕರಿಸುವ ಈ ಮಾತುಗಳನ್ನು ಗಮನಿಸಿ:

"ಸೃಷ್ಟಿ ಎಂದೂ ವೈರಾಗ್ಯದ ಮಾತು ಆಡಿಲ್ಲ. ದುಃಖ, ಸಾವು ನೋವಿನ ಮಾತುಗಳನ್ನೂ ಆಡಿಲ್ಲ. ಮನುಷ್ಯನ ಎಲ್ಲ ತರಹದ ಆಶೆ ಆಮಿಷಗಳಿಗೆ ಬಲಿಯಾದರೂ, ತನಗೆ ಹೀಗಾಯಿತೆಂದು ಹೇಳಿಲ್ಲ. ದಂಗೆಯಾಗುತ್ತವೆ, ಯುದ್ಧಗಳಾಗುತ್ತವೆ, ಬಾಂಬುಗಳ ಸುರಿಮಳೆಯಾಗುತ್ತದೆ. ನೆಲಸುಟ್ಟು ಬೂದಿಯಾಗುತ್ತದೆ, ಜೀವ ನಷ್ಟವಾಗಿ ಹೋಗುತ್ತದೆ. ಪಶುಪಕ್ಷಿಗಳು ಕಂಗಾಲಾಗುತ್ತವೆ, ಸತ್ತು ಹೋಗುತ್ತವೆ. ಮನುಷ್ಯನ ಮೂರ್ಖತನ, ಅವನ ಅಹಂಕಾರ, ಅವನ ದರ್ಪದಿಂದ ನೆಲ ತತ್ತರಿಸಿ ಹೋಗುತ್ತದೆ. ಬೆಳೆಸಿದ ಸಂಸ್ಕೃತಿ, ಕಟ್ಟಿದ ಧರ್ಮ, ಬಯಸಿದ ಉತ್ಸಾಹ ಎಲ್ಲವೂ ಇಲ್ಲದಂತೆಯಾಗುತ್ತವೆ. ಇದೆಲ್ಲವನ್ನು ಸಹಿಸಿಕೊಂಡೇ ಈ ಸೃಷ್ಟಿ ಮತ್ತೆ ಮತ್ತೆ ತನ್ನ ಜೀವನೋತ್ಸಾಹವನ್ನು ಪ್ರಕಟಗೊಳಿಸುತ್ತ, ಮತ್ತೆ ಅನಶ್ವರ ಆನಂದದ ಕಡೆಗೆ ಬೆರಳು ಮಾಡಿತೋರಿಸುತ್ತದೆ."

ಕುಸನೂರರ ಜೀವನದೃಷ್ಟಿಯೂ ಇದೇ ಆಗಿದೆ. ತೇಜಸ್ವಿಯವರ ಚಿದಂಬರ ರಹಸ್ಯ ಕೆಸರೂರಿನಂತೆ, ರಾವ್ ಬಹದ್ದೂರರ ಗ್ರಾಮಾಯಣ ಪಾದಳ್ಳಿಯಂತೆ ಅವನತಿಯ ಕಡೆಗೆ ಸಾಗುತ್ತಿದೆಯೇನೋ ಅನಿಸುವ ಕೆರೂರು ಅಲ್ಲಲ್ಲಿ ತನ್ನ ಅವನತಿಯ ಹಾದಿಯನ್ನು ತಿದ್ದಿಕೊಂಡು ಕೆಲವೇ ಪಾತ್ರಗಳ ಮಾಗುವಿಕೆಯ ಹೊಳಹಿನಲ್ಲೇ ಅದರ ಚಿಗುರುವಿಕೆಯನ್ನು ಕಾಣಿಸುತ್ತ ಜೀವನ್ಮುಖಿಯಾಗುವುದು ಇಲ್ಲಿನ ವಿಶೇಷ.

ಮೂರನೆಯದಾಗಿ ಊರಿನ ಮಠದ ಸ್ವಾಮಿ, ವೆಂಕಟರಮಣನ ಪೂಜಾರಿ ಶೇಷಾಚಲ, ಅಂಬಕ್ಕನ ಸಂಗದಿಂದಲೇ ಹಣ್ಣಾಗುವ ಕಿಶನರಾಯರ ಮುಖೇನ ವಿಕಾಸಗೊಳ್ಳುವ ಒಂದು ಉದಾತ್ತ ವೈಚಾರಿಕತೆ. ಇಲ್ಲಿ ನಿಂಗಿಯನ್ನೂ ಹಿನ್ನೆಲೆಯಲ್ಲಿಟ್ಟುಕೊಂಡೇ ನೋಡಬಹುದು. ಮಠದ ಸ್ವಾಮಿಗೆ ತಾನು ತನ್ನಂತೆ ಇರದೆ ನಾಟಕದ ಪಾತ್ರಧಾರಿಯಂತಿರುವುದರ ಅರಿವಿದೆ. ಈ ಅರಿವು ಅವರನ್ನು ಸಂನ್ಯಾಸತ್ಯಾಗದ ಮೂಲಕವೇ ಸಹಜ ಮನುಷ್ಯನಾಗುವತ್ತ ಸೆಳೆಯುತ್ತದೆ. ಶೇಷಾಚಲನಿಗೆ ತನ್ನ ಮೂರ್ತಿ ಪೂಜೆಯ ನಿರರ್ಥಕತೆ ಮತ್ತು ಅದರ ಸಂಭಾವ್ಯ ಸಾರ್ಥಕತೆಯ ಸಾಧ್ಯತೆಗಳ ಅರಿವಿದೆ. ಆದರೂ ತಾನು ಬದುಕುತ್ತಿರುವ ದೈನಂದಿನದ ಕ್ಷುದ್ರತೆಯಿಂದ, ತನ್ನದೇ ದೌರ್ಬಲ್ಯಗಳಿಂದ ಪಾರಾಗಲಾರದ ಅಸಹಾಯಕತೆ ಅವನಲ್ಲಿದೆ. ಇದೆಲ್ಲ ಇರುತ್ತ ಮಾಗುವ ಒಂದು ಹಾದಿಯಲ್ಲಿ ಅವನಿದ್ದಾನೆ. ಇನ್ನು ಕಿಶನರಾಯ ಗಂಡು ಹೆಣ್ಣು ಸಂಬಂಧವನ್ನು ಕೇವಲ ಕಾಮತೀವೃತೆಯ ಅಗತ್ಯವೆನ್ನುವ ಹಂತದಿಂದ ಮೇಲೇರಿ ಅದನ್ನು ತನ್ನ ಮಾಗಿದ ಮನಸ್ಸಿನಿಂದ ಹಿಂತಿರುಗಿ ನೋಡಬಲ್ಲವನಾಗುತ್ತಾನೆ. ಅವನ ಜನ್ಮಾಂತರದ ನಂಬುಗೆಗಳೇನಿದ್ದರೂ ಬದುಕನ್ನು ಮತ್ತು ಕ್ಷಣಭಂಗುರವಾದ ಬದುಕಿನ ಸುಖ, ಆನಂದ, ಇಂದ್ರಿಯಗಮ್ಯ ಅನುಭವ, ನೋವು, ನಲಿವು ಇವುಗಳನ್ನು ಅವುಗಳ ವ್ಯಕ್ತಿ-ಪರಿಸರ ಸಂಬಂಧಗಳ ನಿಟ್ಟಿನಿಂದ ಕಾಣಬಲ್ಲವನಾಗುತ್ತಾನೆ ಎಂಬುದೇ ಒಂದು ಮಹತ್ವದ ಘಟ್ಟ.

ಇದು ಕಾದಂಬರಿಗೆ ಒಂದು ಗುರುತ್ವವನ್ನು ಖಂಡಿತವಾಗಿಯೂ ಕೊಟ್ಟಿದೆ. ಆದರೂ, ನಿಂಗಿಯಂಥ ನಿಂಗಿಯ ಬಾಯಲ್ಲಿ, ಕಿಶನರಾಯನಂಥ ಕಿಶನರಾಯನ ಬಾಯಲ್ಲಿ ಬರುವ ಕೆಲವು ಪ್ರಬುದ್ಧ ಮತ್ತು ಗ್ರಾಂಥಿಕ ತತ್ವದ ಮಾತುಗಳು (`ಇರಲಿ ಬಿಡು ಈ ತಲೆಹರಟೆ' ಎಂದು ಒಂದು ಕಡೆ ಕಿಶನರಾವನೇ ತನ್ನ ವಾಚ್ಯ ತಾತ್ವಿಕತೆಗೆ ನಾಚಿದವನಂತೆ ಮಾತು ಮುಗಿಸುವುದನ್ನು ಗಮನಿಸಿ) ಕಾದಂಬರಿಯ ಸಹಜಸ್ಫೂರ್ತ ಆಯಾಮದ ಹೊರಗಿನವಾಗಿಯೇ ಉಳಿಯುವುದೂ, ಸನ್ನಿವೇಶಕ್ಕೆ ಕೊಂಚ ಭಾರವಾಗಿ ಬಿಡುವುದೂ ಸುಳ್ಳಲ್ಲ. ಕೆಲವು ಕಡೆ ಕಥಾನಕ ಮತ್ತು ಅದನ್ನು ಹೇಳುವ ವಿನ್ಯಾಸದಿಂದಲೇ ಓದುಗನಿಗೆ ತಲುಪಿಸಬಹುದಾದದ್ದನ್ನು (ಅಂಥ ಅದ್ಭುತ ಭಾಷೆ ಮತ್ತು ತಾಂತ್ರಿಕ ಕೌಶಲ ಕುಸನೂರರಲ್ಲಿ ಇದ್ದೂ) ವಾಚ್ಯವಾಗಿಯೇ ಹೇಳುವ ಶಬ್ದಮೋಹಕ್ಕೆ ಕುಸನೂರರು ಒಳಗಾಗಿರುವುದನ್ನು ಕಾಣಬಹುದಾಗಿದೆ.

ಕಾದಂಬರಿಯ ಮೂಲ ಸೆಲೆ ಇರುವುದೇ ಅದು ಈ ಎಲ್ಲ ತಾತ್ವಿಕ ಭಾರಗಳಿಂದ ಮುಕ್ತವಾಗಿ ನಿಲ್ಲಬಲ್ಲ ಕಸು ಮತ್ತು ಹೊಸತನದ ಚೈತನ್ಯ ಹೊಂದಿರುವುದರಲ್ಲೇ. ಕುಸನೂರರು ಕಾದಂಬರಿಯ ಆರಂಭದಲ್ಲೇ ಒಂದು ಮಾತು ಹೇಳುತ್ತಾರೆ. `ಕೆರೂರನಾಮಾ ಹೆಸರು ದೆಸೆ ಇಲ್ಲದ ಒಂದು ಕುಗ್ರಾಮದಲ್ಲಿ ವಾಸಿಸುವ ತುಂಬ ನಗಣ್ಯ ಜನರ ಜೀವ ಸ್ಪಂದನದ ಒಂದು ಕತೆ ಮಾತ್ರ. ಆದರೆ ಈ ತರದ ಕತೆ ಕಾದಂಬರಿಗಳು ಅವರ ತನಕ ತಲುಪುವುದೇ ಇಲ್ಲ.' ಹಾಗಿದ್ದಾಗ್ಯೂ ಇದು ಒಂದು ಇಂಟೆಲೆಕ್ಚುವಲ್ ಎಂಟರ್ಟೇನರ್ ಆಗಬೇಕೆನ್ನುವ ಉದ್ದೇಶ ಕುಸನೂರರಿಗೆ ಇದ್ದೇ ಇದೆ. ಬಹುಷಃ ಹಾಗಾಗಿಯೇ ಕುಸನೂರರಿಗೆ ಕಿಶನರಾಯ, ನಿಂಗಿಯ ತತ್ವಗಳೆಲ್ಲ ವಾಚ್ಯವಾಗಿ ಬರುವುದು ಕೂಡ ವಿಶೇಷವಾಗಿ ಗಮನಿಸಬೇಕಾದ ಸಂಗತಿಯಾಗಿ ಕಾಣಿಸದೇ ಹೋಗಿರಬಹುದು ಅನಿಸುತ್ತದೆ. ಅದೇನಿದ್ದರೂ ಅವರ ದೃಷ್ಟಿ ಇರುವುದು ಬದುಕನ್ನು ಅದರ ಸಮಗ್ರತೆಯಲ್ಲಿ ಹಿಡಿಯುವುದು ಅಥವಾ ಅಂಥ ಒಂದು ಪ್ರಯತ್ನ ಮಾಡುವುದು. ಅಂಥ ಪ್ರಯತ್ನದ ಖುಶಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದು. ಅಷ್ಟರಮಟ್ಟಿಗಂತೂ ಈ ಕಾದಂಬರಿ ಒಂದು ಅನನ್ಯ ಅನುಭವದ ಪಯಣ. ಕಾದಂಬರಿಯಲ್ಲೇ ಒಂದೆಡೆ ಬರುವ ಈ ಮಾತುಗಳು ಅದನ್ನೇ ಧ್ವನಿಸುವಂತಿವೆ.

"ಯಾವ ನಿಟ್ಟಿನಿಂದ ನೋಡಿದರೂ ಈ ಬದುಕಿನ ಸಮಗ್ರ ರೂಪ ಕಾಣಿಸುವುದೇ ಇಲ್ಲ. ಬಳೆ ಚೂರುಗಳನ್ನು ಹಾಕಿ ತಯಾರಿಸಿದ ಕಿಲಿಡಿಯಾಸ್ಕೋಪದಂತೇ ಈ ಜೀವನ. ತಿರುತಿರುಗಿಸಿ ನೋಡಿದಂತೆ, ತರತರದ ರಂಗುರಂಗಿನ ಪ್ಯಾಟರ್ನ್‌ಗಳು ಕಾಣಿಸುತ್ತವೆ. ಎಲ್ಲ ಭ್ರಮೆ."
(ವಿಜಯಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ)

No comments: