Thursday, December 18, 2008

ಅಶೋಕ ಹೆಗಡೆಯವರ `ಅಶ್ವಮೇಧ'

ಉತ್ತರಕನ್ನಡದ ಬಹುತೇಕ ಎಲ್ಲ ಕತೆಗಾರರಲ್ಲಿ ಕಾಣಸಿಗುವ ಗ್ರಾಮೀಣ ಬದುಕಿನ ತಾಜಾತನ, ಸೂಕ್ಷ್ಮ ಸಂವೇದನೆ ಮತ್ತು ಪರಿಸರದ್ದೇ ಕಾಣ್ಕೆಯಾದ ವೈಶಿಷ್ಟಗಳು ಇಲ್ಲಿನ ಕತೆಗಾರರ ಕತೆಗೆ ವಿಶೇಷ ಸೊಗಡು, ಆಪ್ತ ಧಾಟಿ ಒದಗಿಸಿಕೊಟ್ಟಿದೆ. ಮೂಲಭೂತವಾಗಿ ಅಶೋಕರ ಬರವಣಿಗೆಯ ಜಾಡು ಕೂಡ ಇದೇ ಸೊಗಡು ಪಡೆದು ಬಂದಿರುವಂಥದ್ದು. ಅಶೋಕರ ಮೊದಲ ಕಥಾ ಸಂಕಲನದಲ್ಲಿನ(`ಒಂದು ತಗಡಿನ ಚೂರು') ಬಹುತೇಕ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ ಪ್ರತಿ ಸಂಕಲನದಲ್ಲೂ ಅಶೋಕರು ವಿಭಿನ್ನ ಪಾತಳಿಯಲ್ಲಿನ ಕತೆಗಳನ್ನು ಕೊಟ್ಟಿರುವುದು ಗಮನಾರ್ಹ. `ಒಂದು ತಗಡಿನ ಚೂರು' ಸಂಕಲನದ ಒಂದು ವರ್ಗದ ಕತೆಗಳು ಉತ್ತರಕನ್ನಡದ ಜನಜೀವನ, ಸಾಂಸಾರಿಕತೆ, ಪ್ರೇಮ, ಕಾಮ, ತಲೆಮಾರು ಮತ್ತು ನಗರ ಜೀವನ ತರುವ ತಲ್ಲಣಗಳ ಸುತ್ತ ಇದ್ದರೆ ಇಲ್ಲಿನ ದೂರ ಸಮುದ್ರದ ಕಾಡು, ಗಡಿಯಾರ ಗೋಪುರದ ಇತಿಹಾಸವು, ಒಂದು ತಗಡಿನ ಚೂರು ಕತೆಗಳಲ್ಲಿ ಅಶೋಕರು ತಮ್ಮ ಕತೆಗಾರಿಕೆಯ ಬೇರೆಯೇ ಮಜಲಿನ ಸಾಧ್ಯತೆಗಳತ್ತ ಹೊರಳಿರುವುದನ್ನು ಕಾಣುತ್ತೇವೆ. ಅದೇ ರೀತಿ ತಮ್ಮ ಎರಡನೆಯ ಕಥಾ ಸಂಕಲನಕ್ಕೆ (ಒಳ್ಳೆಯವನು) ಬರುವಾಗ ನಮಗೆ ಎದುರಾಗುವುದು ವಿಭಿನ್ನ ಬಗೆಯ ಕತೆಗಳು. ಇಲ್ಲೂ ವಸ್ತು, ಶೈಲಿ, ತಂತ್ರ ಮತ್ತು ಆಶಯಗಳಲ್ಲಿ ವೈವಿಧ್ಯ ಇದೆ. ಅನೇಕ ಕಡೆ ಇವರು ತಮ್ಮದೇ ಹಳೆಯ ಮಾರ್ಗದಿಂದ ಹೊರಳಿ ನಡೆದುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಆಲಿಕಲ್ಲು, ನೀಲಿ ಬಾನಿನಲ್ಲಿ ನಗುವ ಚಂದಿರ, ಹೊಳೆದದ್ದೆ ತಾರೆ, ನಿನ್ನ ಹೆಸರಿನಲ್ಲಿ ಒಂದು ತೆರೆ ಹುಟ್ಟಲಿ, ಉಳಿದಿದ್ದೆ ದಾರಿ ಕತೆಗಳು ಅಂಥ ಹಂಬಲವನ್ನು ತಮ್ಮೊಳಗೆ ಹೊಂದಿದ್ದ ಕತೆಗಳೇ. ಆದರೆ ಅವು ಪೂರ್ತಿಯಾಗಿ ತಾತ್ವಿಕ ಆಯಾಮಗಳಿಗೆ ಶರಣಾಗುವುದಿಲ್ಲ. ಬಹುಷಃ ಈ ಹೆಸರುಗಳೇ ಅದನ್ನೆಲ್ಲ ಸೂಚಿಸುತ್ತಿರುವಂತಿದೆ! ಹಾಗೆಯೇ ಈ ಕತೆಗಳು ಕೇವಲ `ಭಾವ' ನಿರ್ಮಿತಿಯೊಂದಿಗೆ ನಿಲ್ಲುವುದೂ ಇಲ್ಲ.ಅಶೋಕರ ಅತ್ಯುತ್ತಮ ಕತೆಗಳು ಈ ಎರಡು ಬಗೆಯ ಕತೆಗಳಲ್ಲೇ ಸಿಗುತ್ತವೆ. ಅಂತರದಂಗೆಯಂಥ ಕತೆಯಲ್ಲಿ ಸಮಕಾಲೀನ ವಸ್ತು, ವಿವರಗಳಿಂದ ಜಾಗತೀಕರಣ, ಮುಕ್ತ ವ್ಯಾಪಾರ ನೀತಿ, ಕ್ಷಿಪ್ರ ಆರ್ಥಿಕತೆಗಳೆಲ್ಲಾ ಸೇರಿ ಸಾಮಾನ್ಯ ಮನುಷ್ಯನೊಬ್ಬನ ಭ್ರಮಾತ್ಮಕ ಹೊಸ ಜಗತ್ತೊಂದು ಏಕಾಎಕಿ ತೆರೆದುಕೊಳ್ಳುವುದನ್ನೂ ಮತ್ತು ಅದು ಅಷ್ಟೇ ಬೇಗ ಬಿಳಿಚಿಕೊಂಡು ಯೂಸ್ ಎಂಡ್ ಥ್ರೋ ತರದ ಬದುಕನ್ನೆ ಅವನ ಪಾಲಿಗೆ ನಿರ್ಮಿಸಿಕೊಡುವುದನ್ನೂ ಅದ್ಭುತವಾಗಿ ಚಿತ್ರಿಸಿದೆ. ಆದರೆ ಅಂತರದಂಗೆ, ಒಳ್ಳೆಯವನು, ಕೈಹಿಡಿದವರು ಕತೆಗಳು ಅಶೋಕರ ಎಂದಿನ ಶೈಲಿಯಿಂದ ತೀರ ಭಿನ್ನವಾಗಿಯೇ ನಿಲ್ಲುತ್ತವೆ.

ಈ ಹಿನ್ನೆಲೆಯನ್ನು ಗಮನಿಸಿಯೇ ಅಶೋಕರ ಕಾದಂಬರಿ 'ಅಶ್ವಮೇಧ'ವನ್ನು ಕುರಿತು ಮಾತನಾಡುವುದು ಸೂಕ್ತ. ಯಾಕೆಂದರೆ ಮೇಲ್ನೋಟಕ್ಕೆ ಸುಮಾರು ಮೂರು ನಾಲ್ಕು ದಶಕದಷ್ಟು ಹಿಂದಿನ ಕಾಲಮಾನದ ಒಂದು ಕತೆಯನ್ನು ಅಶೋಕರು ಇಲ್ಲಿ ನಮಗೆ ಹೇಳುತ್ತಿದ್ದಾರೆ. ಇವತ್ತಿಗೆ ಇದು ಹೇಗೆ ಮತ್ತು ಯಾಕೆ ಪ್ರಸ್ತುತ ಎಂಬ ಪ್ರಶ್ನೆಯ ಜೊತೆಗೇ ಅಶೋಕರ ಸಾಹಿತ್ಯಕ್ಕೆ ಕಾಲಕಾಲಕ್ಕೆ ದಕ್ಕಿದ ವಸ್ತು ವೈವಿಧ್ಯ, ನಿರೂಪಣೆಯ ವಿಧಾನದಲ್ಲಿ ಅವರು ನಡೆಸಿದ ಪ್ರಯೋಗ ಮತ್ತು ಅವರ ದೃಷ್ಟಿಕೋನದಲ್ಲಿ ಸಮಕಾಲೀನ ಸಂಗತಿಗಳಿಗೆ ಸಿಕ್ಕುತ್ತ ಬಂದ ಪ್ರಾಧಾನ್ಯಗಳು ಸರಿ ಸುಮಾರು ಈ ಒಂದು ದಶಕದಲ್ಲಿ ಅವು ಪಡೆದುಕೊಂಡ ತಿರುವುಗಳನ್ನು ಕೂಡ ಗಮನಿಸುವುದು ಆಗ ಮಾತ್ರ ನಮಗೆ ಸಾಧ್ಯವಾಗಬಹುದು.

ಸುಬ್ರಾಯ ಹೆಗಡೆ, ಸೀತಾರಾಮ ಭಟ್ಟ, ಅಷ್ಟಾಗಿ ಕತೆಯ ಮುಖ್ಯ ಭೂಮಿಕೆಗೆ ಬರದ ಚಂದ್ರಹಾಸ ಭಟ್ಟ, ಶಂಭು ಹೆಗಡೆ, ಪುರುಷೋತ್ತಮ, ಮಠದ ಸ್ವಾಮಿ ಒಂದು ಕಡೆ, ಬಹುತೇಕ ಒಂಟಿಯಾಗಿಯೇ ರಾಮಾನಾಯ್ಕ ಇನ್ನೊಂದು ಕಡೆ ಇದ್ದರೂ, ಸುಬ್ರಾಯ ಹೆಗಡೆಯನ್ನು ಉಪಾಯವಾಗಿ ಮಣಿಸುವ ಅವರದೇ ಗುಂಪು, ರಾಮಾನಾಯ್ಕನನ್ನು ಬಳಸಿಕೊಳ್ಳುವ ಅವನದೇ ಗುಂಪು (ರಾಜಕಾರಣಿ), ಎರಡೂ ಪಕ್ಷಗಳಲ್ಲಿ ಆಂತರಿಕವಾಗಿ ಈ ಸಂಕೀರ್ಣ ಪರಿಸ್ಥಿತಿಯಲ್ಲೇ ಉಗಮವಾಗುವ ಚರ್ಚು ಮತ್ತು ಬೇರೊಂದು ಮಠ ಸ್ಥಾಪನೆಯ ಯೋಜನೆ, ಅಂಥವುಗಳ ತಯಾರಿಯಲ್ಲೇ ತಮ್ಮ ತಮ್ಮ ಅಜೆಂಡಾ ವಿಸ್ತರಣೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲು ಕಾದಿರುವ ಮಂದಿ ಮತ್ತು ಅವರೇ, ಅಂದರೆ ಈ ಎರಡೂ ಕಡೆಯ ಮಂದಿಯೇ ತಮಗೇ ತಿಳಿಯದ ಹಾಗೆ ಅದಕ್ಕೆ ಬಲಿಬೀಳುವುದು ಎಲ್ಲವೂ ಕತೆಗೆ ಅಗತ್ಯವಾದ ಸಂಕೀರ್ಣತೆಯನ್ನು ತಂದುಕೊಡುವಲ್ಲಿ ಸಫಲವಾಗಿದೆ. ನಡುವಲ್ಲಿ ನಿಂತಂತೆ ಕಾಣುವ ರಾಜೀವ ಗಾಯತೊಂಡೆ ಕೂಡ ಇಲ್ಲಿ ನಾಯಕನಲ್ಲ. ಒಂದು ರೀತಿ ಹಳ್ಳಿಗೆ ಬರುವ ಆದರ್ಶವಾದಿ ಪಟ್ಟಣಿಗನಂತೆ ಈ ರಾಜೀವ ಗಾಯತೊಂಡೆ ಓದುಗರ ಮನದಲ್ಲಿ ಮೂರ್ತಿಯಾಗುವ ಮೊದಲೇ ಅವನನ್ನೂ ಒಬ್ಬ ಸಾಧಾರಣ ಅವಕಾಶವಾದಿಯೆಂಬಂತೆ ಚಿತ್ರಿಸಿ, ಅದು ಅಳಸಿಹೋಗುವ ಮೊದಲೇ ಅವನನ್ನು ಮತ್ತೆ ಮೊದಲಿನ ಚಿತ್ರಕ್ಕೆ ತಂದಿರುವುದರಲ್ಲಿ ತುಂಬ ಔಚಿತ್ಯಕಾಣುತ್ತದೆ. ಈ ಪಾತ್ರ ಊರಿನ ಜಡ, ಚಲಿಸದ ನೀರಿನಂತಿದ್ದ ಜೀವಂತಿಕೆಗೆ ಚಲನೆಯನ್ನು ತರುವುದಂತೂ ಸತ್ಯ. ಹಾಗೆಯೇ ಇಲ್ಲಿನ ನಿಜವಾದ ಅಶ್ವಮೇಧದ 'ಕುದುರೆ' ಕೂಡಾ ಇವನೇ ಎಂಬುದೂ ಸತ್ಯ. ಕಥಾನಕದ ಕೊನೆಯಲ್ಲಿ ಬರುವ ಮಠದ ಸ್ವಾಮಿಯ 'ಸಾಮ್ರಾಜ್ಯ' ವಿಸ್ತರಣೆಯ ದಾಹ ಬ್ರಾಹ್ಮಣರ ದಾಹ ಕೂಡ ಆಗಿ ಅಶ್ವಮೇಧದ ತಯಾರಿ ಸುರುವಾದರೂ ಅಲ್ಲಿ ಪೂರ್ಣಾಹುತಿ ನಡೆಯುವುದಕ್ಕೂ ಮುನ್ನ ರಾಜೀವ ಗಾಯತೊಂಡೆಯ ವಧೆಯಾಗಬೇಕೆಂಬ ಸಂಚು ರೂಪುಗೊಂಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಮಠದ ಸಾಮ್ರಾಜ್ಯ ವಿಸ್ತರಣೆಯ ದಾಹ ಹೇಗೆ ಊರ ಬ್ರಾಹ್ಮಣ ಭೂಮಾಲೀಕರ ದಾಹ ಕೂಡಾ ಆಗಿತ್ತೆಂಬುದನ್ನೂ ಮತ್ತೆ ರಾಜೀವ ಗಾಯತೊಂಡೆ ಅದನ್ನು ಎದುರಿಸುವ ನೇರ ಮಾರ್ಗವನ್ನೂ ಕಾದಂಬರಿಕಾರರು ಬೀಜ ರೂಪದಲ್ಲಿ ಕೊಡಲು ಸುಬ್ರಾಯ ಹೆಗಡೆಯ ಕಪಾಳ ಮೋಕ್ಷದ ಪ್ರಕರಣವನ್ನು ಬಳಸಿಕೊಳ್ಳುತ್ತಾರೆ. ಇಡೀ ವ್ಯವಸ್ಥೆಯಲ್ಲಿ ಹೊಸತನ, ಬದಲಾವಣೆ ಮತ್ತು ಅಭಿವೃದ್ದಿಗಳನ್ನು ವಿರೋಧಿಸುವ ಒಂದು ಪಂಗಡ ಮತ್ತು ಅಂಥ ಪ್ರತಿರೋಧವನ್ನು ಮೆಟ್ಟಿನಿಂತು ಮುನ್ನೆಡೆವ ಛಾತಿ ಪ್ರದರ್ಶಿಸಲೇ ಬೇಕಾದ ಆದರೆ ತೀರ ದುರ್ಬಲವಾದ ಇನ್ನೊಂದು ಪಂಗಡ ಇಲ್ಲಿರುತ್ತ ಪರಿಸ್ಥಿತಿ ಅಂಥ ಒಂದು ಸಾಧ್ಯತೆಯನ್ನೇ ಅನುಮಾನಿಸುವಂತಿರುತ್ತದೆ. ರಾಮಾನಾಯ್ಕನಂಥವರ ನಾಯಕತ್ವದ ಗುರುತ್ವ ಅಡಗಿರುವುದು ಈ ಹಿನ್ನೆಲೆಯಲ್ಲಿ. ಪ್ರತಿರೋಧದ ಮೊದಲ ಸ್ವರ ಏಳುವುದಕ್ಕೆ ಸಜ್ಜುಗೊಂಡಿರುವ ಒಂದು ವಿಸ್ಫೋಟಕ ವಸ್ತುಸ್ಥಿತಿ ಮತ್ತು ಅದನ್ನು ಅನಿವಾರ್ಯಗೊಳಿಸುವಂಥ ಅದೇ ಸಮಾಜದ ಅಂತರ್ಗತವೂ ಸಂಘರ್ಷಕವೂ ಆದ ಅಂಶಗಳು ಅನೇಕ ಬಾರಿ ಯಾರ ಗಮನಕ್ಕೂ ಬರದೆ ಹೋಗುತ್ತವೆ. ಇದು ಒಂದು ಸಂಕ್ರಮಣದ ಘಟ್ಟ. ಅದು ರೂಪುಗೊಂಡ ಚರಿತ್ರೆ ಹಾಗಾಗಿ ಬಹಳ ಮುಖ್ಯ ಮತ್ತು ಯಾವ ಕಾರಣಕ್ಕೂ ಅವಜ್ಞೆಗೆ ತುತ್ತಾಗಬಾರದ ಸಂಗತಿ. ಕಾದಂಬರಿಯ ಗಮ್ಯ ಮತ್ತು ಮಹತ್ವ ಇರುವುದು ಇಲ್ಲಿ.

ರಾಮಾನಾಯ್ಕನ ಕುದುರೆ ಕಟ್ಟುವ ಕ್ರಿಯೆ ಹಲವಾರು ಸಂಗತಿಗಳನ್ನು ಧ್ವನಿಸುವುದು ಗಮನಾರ್ಹ. ಅಶ್ವಮೇಧದ ಕುದುರೆಯನ್ನು ಕಟ್ಟುವುದು ಸಾರ್ವಭೌಮತ್ವವನ್ನು ಪ್ರಶ್ನಿಸುವುದರ ಜೊತೆಜೊತೆಗೇನೆ ಕುದುರೆಗೆ ರಕ್ಷಣೆ ಕೊಡುವ ಕ್ರಿಯೆ ಕೂಡ. ಹಾಗಾಗಿಯೇ ವೈರಿಗಳ ಕೊಲೆಯ ಸಂಚಿಗೆ ಗುರಿಯಾಗಿರುವ ರಾಜೀವ ಗಾಯತೊಂಡೆಯನ್ನು ರಾಮಾನಾಯ್ಕ ರಕ್ಷಿಸಿಕೊಳ್ಳುವನೆ ಅಥವಾ ಅವನ ಸಾವು ಇಡೀ ಹೋರಾಟಕ್ಕೆ ನೀಡಬೇಕಾದ ಬಲಿಯಾಗುವುದೆ ಎಂಬ ಪ್ರಶ್ನೆಗಳು ಓದುಗನನ್ನು ಕಾಡುತ್ತ ಉಳಿಯುತ್ತವೆ.

ಫ್ಯೂಡಲ್ ಅನಿಸದ ಬ್ರಾಹ್ಮಣ ಭೂಮಾಲೀಕ ವರ್ಗ ನಡೆಸುತ್ತ ಬಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಶೋಷಣೆ ಅದರ ಒಟ್ಟಾರೆ ಸ್ವರೂಪ ಮತ್ತು ಅದರ ದೂರಗಾಮಿ ಪರಿಣಾಮಗಳು ಅಷ್ಟಾಗಿ ತಟ್ಟದಂತಿರುವ ಅಥವಾ ತಟ್ಟಿಯೂ ಅದರ ಅರಿವಿಲ್ಲದ ಈ ಪುಟ್ಟ ಹಳ್ಳಿಯಲ್ಲಿಯಂಥ ಹಳ್ಳಿಯಲ್ಲಿ ಚಲನೆ ಹೀಗೆಯೇ ಬರಬೇಕೆ, ನಮ್ಮ ಸಮುದಾಯಗಳು ಪರ ವಿರೋಧಿ ನೆಲೆಗಳನ್ನು ಮೀರಿ ನಡೆಯಬೇಕಾಗಿರುವಲ್ಲಿಯೂ ಯಾಕೆ ಸಣ್ಣತನ, ಭೇದ, ಹುನ್ನಾರುಗಳಿಂದ ಛಿದ್ರಗೊಳ್ಳುತ್ತವೆ ಮತ್ತು ಅದೆಲ್ಲದರಿಂದ ವಿನಾಶದ ಹಾದಿಯನ್ನು ತುಳಿಯುತ್ತವೆ ಎಂಬ ಬಹಳ ಪ್ರಸ್ತುತವೂ ಗಹನವೂ ಆದ ಪ್ರಶ್ನೆಗಳೆದುರು ನಮ್ಮನ್ನು ಕಾದಂಬರಿ ನಿಲ್ಲಿಸುವುದು ಕೂಡಾ ಈ ರಾಜೀವನ ಪಾತ್ರದ ಮೂಲಕವೇ. ಇಲ್ಲಿ ಕಾದಂಬರಿ ಸಮಕಾಲೀನ ಸಮಸ್ಯೆಯೊಂದಿಗೆ ಮೂಖಾಮುಖಿಯಾಗ ಬೇಕಾಗುತ್ತದೆ. ಕಾದಂಬರಿಯ ಕಾಲಮಾನದಲ್ಲಿ ಬಹಳ ಮುಖ್ಯವಾಗಿದ್ದ ಜಾತಿ ಸಮಸ್ಯೆಗೆ ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಮುಖಗಳಿದ್ದವೋ ಹಾಗೆಯೇ ಇವತ್ತಿನ ಕೋಮುವಾದಕ್ಕೂ ಈ ಬಗೆಯ ಸಂಕೀರ್ಣ ಸಮಸ್ಯೆಗಳ ಕೊಂಡಿ ಇದ್ದೇ ಇದೆ. ಇವೆರಡೂ ಪ್ರಶ್ನೆಗಳು ಏಕಕಾಲಕ್ಕೆ ಭಿನ್ನ ಬಗೆಯ ನಿಲುವನ್ನು ನಮ್ಮ ಜಾತೀವಾದಿಗಳಲ್ಲೂ ಕೋಮುವಾದಿಗಳಲ್ಲೂ ತರುತ್ತಿರುವುದು ಕುತೂಹಲಕರ. ಆದರೆ ಕಾದಂಬರಿಯಲ್ಲೇ ಬರುವ ಚರ್ಚಿನವರ ಶಾಲೆ ಇಂಥ ಯಾವುದೇ ಪ್ರಶ್ನೆಗಳ ಎದುರು ನಿಲ್ಲುವುದಿಲ್ಲ. ದೇವಸ್ಥಾನಗಳು, ಮಠ ಸ್ಥಾಪನೆ ಮುಂತಾದ ಕ್ರಿಯೆಯಲ್ಲಿ ಇರುವ ಆರ್ಥಿಕ, ರಾಜಕೀಯ ಒಳ ಉದ್ದೇಶಗಳೇ ಇಲ್ಲಿ ಶಾಲೆಯೊಂದಿಗೆ ಬರುವ ಚರ್ಚು ಅಥವಾ ಚರ್ಚಿನೊಂದಿಗೆ ಬರುವ ಶಾಲೆಗೂ ಇರುವುದನ್ನು ಕಾದಂಬರಿ ಪ್ರಶ್ನಿಸದೇ ಬಿಟ್ಟಂತಿದೆ. ಅದಕ್ಕೆ ಆ ಕಾಲ ಎಷ್ಟು ಕಾರಣವೋ ಕಾದಂಬರಿಕಾರರ ಕೃತಿನಿಷ್ಠ ನಿಲುವು ಕೂಡಾ ಅಷ್ಟೇ ಕಾರಣವಿರಬಹುದೇ? ಯಾಕೆಂದರೆ ಅಶೋಕರು ಇಲ್ಲಿ ಶಾಲೆಯೊಂದಿಗೇ ಚರ್ಚು ಕೂಡಾ ಬರುವುದನ್ನು ಗಮನಿಸಿದ್ದಾರೆ!

ಜಾತಿಯ ನೆಲೆಯಲ್ಲಿ ಹುಟ್ಟುವ ಸಂಘರ್ಷಗಳು ಧರ್ಮದ ನೆಲೆಯ ಪ್ರಶ್ನೆಗಳ ಎದುರು ಹೆಚ್ಚು ಸಂಕೀರ್ಣವೂ, ವೈರುಧ್ಯಮಯ ನಿಲುವಿಗೆ ಕಾರಣವಾಗುವಂಥದ್ದೂ ಆಗಿರುತ್ತ, ಪ್ರಸ್ತುತ ಸಮಕಾಲೀನ ಜಗತ್ತಿನಲ್ಲೇ ವರ್ಗ ಸಂಘರ್ಷ ಮತ್ತು ಜಾತೀವಾರು ಸಂಘರ್ಷಗಳು ಈ ಧಾರ್ಮಿಕ ನೆಲೆಯಲ್ಲಿ ಪಡೆದುಕೊಳ್ಳುತ್ತಿರುವ ವಿಚಿತ್ರ ನೆಲೆಗಳನ್ನು ನಾವು ಪ್ರತಿನಿತ್ಯ ಕಾಣುತ್ತಿರುವಾಗಲೂ (ಉದಾ: ಕನಕ ಗೋಪುರದ ವಿಚಾರದಲ್ಲಿ ನಮ್ಮ ಕುರುಬರು ಮತ್ತು ಉಡುಪಿಯ ವೈದಿಕ ಬ್ರಾಹ್ಮಣರು ತಳೆಯುವ ನಿಲುವು ಮತ್ತು ಧೋರಣೆಗಳು ಆಂತರಿಕ ಭಿನ್ನತೆಯಿಂದ ಇರುತ್ತ ಹಿಂದೂ ಮುಸ್ಲಿಂ ಪ್ರಶ್ನೆಯ ಎದುರು ಎರಡೂ ವರ್ಗದವರಲ್ಲಿ ಅದು ತಳೆಯುವ ರೂಪಾಂತರ; ಅಮೆರಿಕದ ಆಕ್ರಮಣಕಾರೀ ಧೋರಣೆಯ ಬಗ್ಗೆ ಸಾಮಾನ್ಯವಾಗಿ ಸಿಗುವ ಮುಸ್ಲಿಂ ವಿರೋಧಿ ಸಮರ್ಥನೆ ಮತ್ತು ಅಮೆರಿಕದಿಂದ ಅಂಥದೇ ಆಕ್ರಮಣವನ್ನು ಎದುರಿಸುತ್ತಿರುವ ಕೆಲವು ಕರಿಯ ಮತ್ತು ತೈಲ ಉತ್ಪಾದಿಸುತ್ತಿರುವ ರಾಷ್ಟ್ರಗಳ ಸಂದರ್ಭದಲ್ಲಿ ಅದು ಪಡೆಯುತ್ತಿರುವ ವಿರೋಧ ಇತ್ಯಾದಿ) ಅಂಥ ಸಂದರ್ಭಗಳೆದುರು ಕಾದಂಬರಿ ಕಾಲಾತೀತವಾಗಲಾರದ ನಿಷ್ಠುರತೆಯನ್ನೂ ಬದ್ಧತೆಯನ್ನೂ ಕಾಪಾಡಿಕೊಂಡು ಬಂದಿರುವುದು ಕೃತಿಯ ಹೆಚ್ಚುಗಾರಿಕೆಯನ್ನಾಗಿಯೂ ಮಿತಿಯನ್ನಾಗಿಯೂ ಕಾಣುವುದು ಸಾಧ್ಯವಿದೆ. ಕೃತಿಯ ಸಮಕಾಲೀನತೆಯ ಪ್ರಶ್ನೆಯನ್ನು ಚರ್ಚಿಸುವಾಗ ಕೃತಿ, ಕೃತಿಯ ಕಾಲಮಾನಕ್ಕೆ ಸಮಕಾಲೀನವಾಗಿರಬೇಕೆ, ಓದುಗನ ಓದಿನ ಕಾಲಕ್ಕೆ (ಅಥವಾ ಅದು ಪ್ರಕಟವಾದ ಕಾಲಕ್ಕೆ) ಸಮಕಾಲೀನವಾಗಿರಬೇಕೆ ಎನ್ನುವ ಪ್ರಶ್ನೆ ಇದೆ. ಈ ಪ್ರಶ್ನೆಯನ್ನು ಇವತ್ತು ಪ್ರಕಟವಾಗುತ್ತಿರುವ ಇತರ ಕಾದಂಬರಿ, ಸಣ್ಣಕತೆಗಳನ್ನು ಗಮನದಲ್ಲಿಟ್ಟುಕೊಂಡು ನೋಡುವಾಗ ಇನ್ನೂ ಕೆಲವು ಹೊಸ ಆಯಾಮಗಳೂ ನಮ್ಮ ಚಿಂತನೆಗೆ ಒದಗಿ ಬರಬಹುದಾಗಿದೆ. ಇವತ್ತು ಕಾರಂತರಾದಿಯಾಗಿ ಅಡಿಗರ, ಶಾಂತಿನಾಥ ದೇಸಾಯರ ಕಾದಂಬರಿಗಳು ಮತ್ತೆ ಮುದ್ರಣಗೊಳ್ಳುತ್ತಿವೆ. ಹಿಂದೆಂದಿಗಿಂತ ಹೆಚ್ಚಾಗಿ ಹಲವಾರು ಪ್ರಮುಖ ಅನ್ಯಭಾಷಾ ಕೃತಿಗಳು ಕನ್ನಡಕ್ಕೆ ಬರುತ್ತಿವೆ. ಆತ್ಮ ಚರಿತ್ರೆಗಳು, ಜೀವನ ಚರಿತ್ರೆಗಳು ಹೆಚ್ಚು ಹೆಚ್ಚಾಗಿ ಅಚ್ಚಾಗುತ್ತಿವೆ. ತೇಜಸ್ವಿ(ಮಾಯಾಲೋಕ), ಕೆ ಸತ್ಯನಾರಾಯಣ (ಕಾಲಜಿಂಕೆ), ಕುಸುಮಾಕರ ದೇವರಗೆಣ್ಣೂರು (ಬಯಲ ಬಸಿರು), ಬಾಳಾಸಾಹೇಬ ಲೋಕಾಪುರ(ಉಧೋಉಧೋ), ಚಂದ್ರಕಾಂತ ಕುಸನೂರು (ಕೆರೂರುನಾಮಾ), ವಿವೇಕ ಶಾನಭಾಗ(ಇನ್ನೂಒಂದು ಮತ್ತು ಒಂದು ಬದಿ ಕಡಲು), ಶ್ರೀನಿವಾಸ ವೈದ್ಯ (ಹಳ್ಳ ಬಂತು ಹಳ್ಳ), ಎಸ್ ಸುರೇಂದ್ರನಾಥ್ (ಎನ್ನ ಭವದ ಕೇಡು) ಮುಂತಾಗಿ ವಿಭಿನ್ನವೂ ವಿಶಿಷ್ಟವೂ ಆದ ಕೆಲವು ಮಹತ್ವದ ಕಾದಂಬರಿಗಳು ಹೊಸದಾಗಿ ನಮ್ಮೆದುರಿಗಿವೆ.

ಹೊಸ ಕಾದಂಬರಿಗಳನ್ನಷ್ಟೇ ಗಮನಿಸಿದರೂ ಪ್ರಸ್ತುತ ಕನ್ನಡ ಕಾದಂಬರೀ ಲೋಕ ಏಕಕಾಲಕ್ಕೆ ಮುವ್ವತ್ತು ನಲವತ್ತು ವರ್ಷಗಳಷ್ಟು ಹಿಂದಕ್ಕೂ ವರ್ತಮಾನಕ್ಕೂ ತುಯ್ಯುವ ಜಾಯಮಾನ ಹೊಂದಿರುವುದು ಕಾಣಿಸುತ್ತದೆ. ಈ ಹಿನ್ನೆಲೆಯಲ್ಲೂ ನಾವು ಸಮಕಾಲೀನ ಪ್ರಶ್ನೆ ಎತ್ತುವಾಗ ಏನನ್ನು ಧ್ವನಿಸುತ್ತಿದ್ದೇವೆ ಅಥವಾ ನಿರೀಕ್ಷಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ಬಹಳ ಮುಖ್ಯ.

ಇಡೀ ಕಾದಂಬರಿಯ ಆಶಯ ಕರ್ನಾಟಕದ ಮತ್ತು ಅದರಂತೆ ದೇಶದ ಉಳಿದ ಅನೇಕ ಭಾಗಗಳಿಂದ ಸರಿಸುಮಾರು ಇದೇ ಕಾಲಘಟ್ಟದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಅಸ್ಪೃಶ್ಯ ಮತ್ತು ಅರೆ ಅಸ್ಪೃಶ್ಯ ಕೆಳವರ್ಗದಿಂದ ನಾಯಕರಾಗಿ ಹೊರಹೊಮ್ಮಿದ ಕೆಲವರ ದಿಟ್ಟತನ ಪ್ರಕಟಗೊಂಡ ಸಂದರ್ಭ ಮತ್ತು ಅದರ ಸಂದಿಗ್ಧಗಳನ್ನು ದಾಖಲಿಸುವುದೇ ಆಗಿತ್ತು ಅನಿಸುತ್ತದೆ. ಇದೇ ಅರ್ಥದಲ್ಲಿ ಇಲ್ಲಿನ ನಿರ್ಮಲೆ ಮತ್ತು ಕೃಷ್ಣನ ಪ್ರೇಮ(?) ಪ್ರಕರಣವನ್ನು ನೋಡುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ನಿರ್ಮಲೆಯ ನಿರ್ಧಾರಗಳು ತೀರ ಅಪಕ್ವ ಎನಿಸುತ್ತವೆ. ಅವಳು ತನ್ನ ತಪ್ಪುಗಳನ್ನು ಗುರುತಿಸಿಕೊಳ್ಳುವಲ್ಲಿ ಮತ್ತು ಅದರಿಂದಾದ ವಿಪರೀತ ಪರಿಣಾಮಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವಿಫಲಳಾಗುತ್ತಾಳೆ ಮಾತ್ರವಲ್ಲ ಈ ಪಾತ್ರದ ನಡೆ ಕಾದಂಬರಿಕಾರರ ನಿಯಂತ್ರಣದಿಂದ ಹೊರಗೆ ಸ್ವತಂತ್ರವಾಗಿತ್ತು ಎಂದು ಕೂಡ ಮನಸ್ಸು ಒಪ್ಪುವುದಿಲ್ಲ.

ತನ್ನ ಮನೆಗೆಲಸದ ಕೃಷ್ಣನೊಂದಿಗೆ ನಿರ್ಮಲೆಯದು ಬಾಲ್ಯದಿಂದಾರಂಭವಾದ ಸಖ್ಯ. ಅವಳು ತಾಲೋಕಿನಲ್ಲೆಲ್ಲಾ ಸಂಪ್ರದಾಯಸ್ಥ ಕುಟುಂಬದವರೆಂದು ಹೆಸರಾದ ಗಣೇಶ ಹೆಗಡೆಯವರ ಮಗಳಾದರೆ ಅವನು ಅಸ್ಪೃಶ್ಯ. ಶುದ್ಧಾಚಾರಕ್ಕೆ ತನ್ನ ಬಟ್ಟೆ ಬಿಚ್ಚಿಟ್ಟು ಅವಳೊಂದಿಗೆ ಆಡಿ ಬೆಳೆದ ಅವನಿಗೆ ಮುಂದೆ ತನ್ನನ್ನು ಪ್ರೇಮಿಸಿ, ಮದುವೆಯ ದಿನದಂದು ಕದ್ದು ಓಡಿ ಬಂದು ಸಂಸಾರ ಹೂಡುವ ಧೈರ್ಯ ಮಾಡಿದ ಇದೇ ನಿರ್ಮಲೆ ತನ್ನೆದುರು ಬೆತ್ತಲಾದಾಗ ಅವಳನ್ನು ಎದುರಿಸುವುದು ಸಾಧ್ಯವಾಗುವುದಿಲ್ಲ. ಪ್ರೇಮದಿಂದ ತನ್ನ ಹಿಂದೆ ಬಂದು ಇದೀಗ ಬೆತ್ತಲಾಗಿ ತನ್ನೆದುರು ನಿಂತು ಆಹ್ವಾನಿಸುತ್ತಿರುವ ನಿರ್ಮಲೆಯೆದುರು ಭಕ್ತಿಭಾವದಿಂದ ಗುಡ್ದೆಯಾಗಿ ಬೀಳುವ ಕೃಷ್ಣನಲ್ಲಿ ಮೈಲಿಗೆ ಮಾಡಿದೆ ಎನ್ನುವ ತಪ್ಪಿನ ಅನಿಸಿಕೆ ಹುಟ್ಟುಹಾಕಿದ್ದು ಬೇರೇನಲ್ಲ, ಶತಶತಮಾನದ ಪರಂಪರಾನುಗತ ಸ್ವೀಕೃತ ಮೌಲ್ಯಗಳಾದ ಹಿಂಜರಿಕೆ, ಭಯ, ಹೇಡಿತನ. ಇದನ್ನೇ ರಾಮಾನಾಯ್ಕ ಮುಂದೆ ಮೀರಲಿರುವುದು. ರಾಮಾನಾಯ್ಕನ ನಿಜವಾದ ಲಂಘನದ ಪ್ರಾಮುಖ್ಯತೆ ಇರುವುದೇ ಇಲ್ಲಿ. ಕಾದಂಬರಿಯಲ್ಲಿ ಮುಂದೆಂದೂ ಕಾಣಬರದ ಕೃಷ್ಣ ರಾಮಾನಾಯ್ಕನ ಪೂರ್ವಾಶ್ರಮದಂತೆ ಗೋಚರವಾಗುತ್ತಾನೆ ಮತ್ತು ಕಾದಂಬರಿ ರಾಮಾನಾಯ್ಕನ ಆಂತರಿಕ ವಿಕಾಸದ ಹೆಜ್ಜೆಗುರುತುಗಳನ್ನು ಇಲ್ಲಿಂದಲೇ ದಾಖಲಿಸುತ್ತದೆ, ಸುಪ್ತವಾಗಿ.

ಆದರೆ ನಿರ್ಮಲೆ ಕಾದಂಬರಿಯ ಉದ್ದಕ್ಕೂ ತರ್ಕಾತೀತವೆನಿಸುವ ನಡೆಯನ್ನೇ ತೋರುತ್ತಾಳೆ. ನಿರ್ಮಲೆಯ ಒಂದು ದುಡುಕಿನದ್ದಾಗಿಯೇ ಕಾಣುವ ನಿರ್ಧಾರ ಕೃಷ್ಣನ ಮತ್ತು ಅವನ ತಾಯಿಯ ಬದುಕನ್ನು ಗಣೇಶ ಹೆಗಡೆಯ ಬದುಕಿನೊಂದಿಗೇ ದುರಂತಕ್ಕೆ ತಳ್ಳುತ್ತದೆ. ಇಷ್ಟೆಲ್ಲ ಆದ ಮೇಲೂ ನಿರ್ಮಲೆ ಮತ್ತೆ ಊರಿಗೇ ಬರುವುದು ವಿಚಿತ್ರ ಎನಿಸುತ್ತದೆ. ಆದರೆ ಕತೆಯ ದೃಷ್ಟಿಯಿಂದ ಅವಳ ಪುನರಾಗಮನ ಅನಿವಾರ್ಯ. ಮನೋಭ್ರಾಂತಿಗೆ ಒಳಗಾದ ಅಪ್ಪ 'ನೀನು ಬೆಳ್ಳಿ' ಎಂದದ್ದೇ ಅದನ್ನು ಒಪ್ಪಿಕೊಳ್ಳುವ ಅವಳು ಕೃಷ್ಣನ ತಾಯಿ ದೇವಿಯೊಂದಿಗೇ ನೆಲೆಸುತ್ತಾಳೆ. ಅಂದರೆ ಆಗಲೂ ಅವಳು ಕೃಷ್ಣನ ಕುರಿತು ತಾನು ತನ್ನಷ್ಟಕ್ಕೇ ಕಟ್ಟಿಕೊಂಡ ಒಂದು ಭ್ರಾಂತಿಯಿಂದ ಮುಕ್ತಳಾಗುವುದಿಲ್ಲ. ಮುಕ್ತಿ ಸಿಗದಂತೆ ಸ್ವತಃ ಅವಳೇ ಇದ್ದಳು ಮತ್ತು ಹಾಗಿರು ಎಂದು ಅವಳ ಸನಾತನಿ ಅಪ್ಪ ನೀಡಿದ ನಿರ್ದೇಶವನ್ನು ಪ್ರಶ್ನಿಸದೇ ಒಪ್ಪಿಕೊಂಡು ಬಿಡುವುದಕ್ಕೆ ಅದೇ ಅವಳನ್ನು ಪ್ರೇರೇಪಿಸಿತು ಎಂದು ನಾವು ತಿಳಿಯಬೇಕಾಗುತ್ತದೆ. ಅದೇ ರೀತಿ ಗಣೇಶ ಹೆಗಡೆ ಅರೆ ಭ್ರಾಂತಿಯಲ್ಲಿರುವಾಗ ಆತ ಹಾಗಿರುವುದೇ ಸರಿ ಎಂದು ಅವಳನ್ನೂ ಸೇರಿ ಊರವರೆಲ್ಲ ತಿಳಿದುಕೊಂಡಂತೆ ವರ್ತಿಸುತ್ತಾರೆ. ಇದು ಅವಳಲ್ಲಿ ಅದುವರೆಗೆ ಕಾಣಬರುವ ಕ್ರಾಂತಿಕಾರಕ ನಿಲುವನ್ನು ಪೇಲವಗೊಳಿಸುತ್ತದೆ. ಅವಳು ಬೆಳ್ಳಿಯಾಗಿ ಶೂದ್ರರ ಕೇರಿಯಲ್ಲಿ ನೆಲೆಯಾಗುವುದಾಗಲೀ, ಮತ್ತೆ ನಿರ್ಮಲೆಯಾಗಿ ಬ್ರಾಹ್ಮಣರ ಕೇರಿಗೆ ಶೂದ್ರಳ ಸಹಿತವಾಗಿ ಬಂದು ನೆಲೆ ನಿಲ್ಲುವುದಾಗಲೀ ಅಂತಹುದಕ್ಕೆ ವಿರೋಧವಿದೆ ಎಂಬ ಕಾರಣಕ್ಕೇ (ಕೊಟ್ಟ) ಮಾಡಿದ ನಡೆ ಎನಿಸುತ್ತದೆಯೇ ಹೊರತು ಅಂಥ ನಿರ್ಧಾರಗಳ ಹಿಂದೆ ನಿರ್ಮಲೆಯ ಪ್ರಜ್ಞಾಪೂರ್ವಕ ಸಿದ್ಧಾಂತ ಒಂದಿದೆ ಅನಿಸುವುದೇ ಇಲ್ಲ. ಇದ್ದಿದ್ದರೆ ಯಾಕೆ ಅವಳು ಅದೇ ಕ್ರಿಯೆಯನ್ನು ಗಣೇಶ ಹೆಗಡೆ ಸಾಯುವ ಮೊದಲೇ ಮಾಡುವುದಿಲ್ಲ ಎಂಬ ಪ್ರಶ್ನೆಯೂ ಇದೆ. ಸರಳ ಉತ್ತರ ತಂದೆಯ ಕೈಯಲ್ಲಿದ್ದ ಬೆಣ್ಣೆ ಹೂವಿನ ಎಸಳು ಅವಳನ್ನು ಕ್ಷಮಿಸಿದ್ದರ ಪ್ರತೀಕವಾಗಿರುವುದರಿಂದ ಅವಳಿಗೆ ಆ ಧೈರ್ಯ ಬಂತು ಎಂಬುದಾದರೂ ಆಕೆ ಅತ್ತ ಸನಾತನಿಯೂ ಅಲ್ಲದ ಇತ್ತ ವೈಚಾರಿಕ ಸ್ಪರ್ಶವೂ ಇಲ್ಲದ ಪಾತ್ರವಾಗಿಯೆ ಉಳಿಯುತ್ತಾಳೆ. ಮುಂದೆಲ್ಲೋ ಅವಳ ಮತ್ತು ಅವಳ ತಂದೆಯ ಭ್ರಮೆಗಳು ಒಟ್ಟಿಗೇ ಹರಿದಂತೆ ಕಂಡರೂ ಅದಕ್ಕೂ ತಾರ್ಕಿಕ ನೆಲೆ ಇಲ್ಲ. ರಾಜೀವ ಗಾಯತೊಂಡೆಯಿಂದ ನಿರ್ಮಲೆಗೆ ಅದು ಬಂತೆ? ಗಣೇಶ ಹೆಗಡೆಗೆ ಎಲ್ಲಿಂದ ಬಂತು ಎನ್ನುವುದಕ್ಕೆ ಉತ್ತರವಿಲ್ಲ. ಈ ಎಲ್ಲ ಕಾರಣಗಳಿಂದ ಅವಳ ಇಡೀ ವ್ಯಕ್ತಿತ್ವವನ್ನು ಗ್ರಹಿಸಿದ ಬಳಿಕವಂತೂ ಅವಳ ಪ್ರೇಮ ಮತ್ತು ಅನಂತರದ ಎಲ್ಲ ನಡೆಗಳು ಕಾಣಿಸಬಹುದಾಗಿದ್ದ ಕ್ರಾಂತಿಕಾರಕತೆಯ ವಿಚಾರದಲ್ಲಿ ಸೋಲುತ್ತದೆ. ಹಾಗಿದ್ದೂ ಈ ಕಾದಂಬರಿ ಕೇವಲ ಒಂದು ಸಾಮಾಜಿಕ ಕ್ರಾಂತಿ ಅಥವಾ ಪರಿವರ್ತನೆಯ ದಾಖಲೆಯಾಗದೆ ತನ್ನ ಸಂದರ್ಭ ಮತ್ತು ಪರಿಸರದಲ್ಲಿ ಸಾಧ್ಯವಿರಬಹುದಾದ ಅನನ್ಯ ಸ್ವಾಭಾವಿಕತೆಯನ್ನು ಪಡೆದುಕೊಂಡು ಕಲಾಕೃತಿಯಾಗುವುದಕ್ಕೆ ಕಾರಣವಾದ ಸಂಗತಿಗಳು ಇಂಥವೇ ಆಗಿವೆ! ನಿರ್ಮಲೆಯ ನಡೆಯನ್ನು ನಮ್ಮ ನಿರೀಕ್ಷೆಗಳ ಮಾನದಂಡಗಳಿಂದ ನಿರ್ದೇಶಿಸದೆ ನೋಡಿದಾಗ ಇದು ನಮಗೆ ಗೋಚರವಾಗದಿರದು.

ತನ್ನ ಮಗಳು ಅಸ್ಪೃಶ್ಯ ಮನೆಗೆಲಸದವಳ ಮಗನೊಂದಿಗೆ ಮದುವೆಯ ದಿನವೇ ಓಡಿ ಹೋದುದು ಅರಿವಿಗಿಳಿಯುತ್ತಲೇ ಅರೆಹುಚ್ಚನಂತಾಗುವ ಗಣೇಶ ಹೆಗಡೆ ಧಾರ್ಮಿಕ ಜಿಜ್ಞಾಸೆಗೆ ತೊಡಗುವುದಾಗಲೀ ತನಗಿರುವ ಆರ್ಥಿಕ, ರಾಜಕೀಯ ಗುರುತ್ವಗಳನ್ನು ಬಳಸಿಕೊಂಡು ದಲಿತನನ್ನು ಕೊಚ್ಚಿಹಾಕುವ ಹೆಜ್ಜೆ ಇಡುವ ಪ್ರಮೇಯವಾಗಲೀ ಬರುವುದೇ ಇಲ್ಲ. ಆದರೆ ಇದೆಲ್ಲಕ್ಕಿಂತ ಹೆಚ್ಚಿನದನ್ನು ಈ ಪಾತ್ರದ ಮೂಲಕ ಅಶೋಕರು ಆಗಗೊಡುವುದನ್ನು ಗಮನಿಸಬೇಕು. ಅದು, ತಾನು ನೆಚ್ಚಿ ಓಡಿ ಹೋದ ಕೃಷ್ಣನಿಂದ ಏನನ್ನೂ ಪಡೆಯಲಾರದ ನಿರ್ಮಲೆ ಮತ್ತೆ ಊರಿಗೇ ಹಿಂದಿರುಗಿ ಬಂದ ಸಂದರ್ಭದಲ್ಲಿ ಈ ಗಣೇಶ ಹೆಗಡೆ ಮತ್ತು ಊರಿನ ಹತ್ತು ಸಮಸ್ತರು (ಬ್ರಾಹ್ಮಣರೇ ಎಂದು ಹೇಳಬೇಕಾದ್ದಿಲ್ಲ ಅನಿಸುತ್ತದೆ) ಅವಳನ್ನು ಎದುರಿಸುವ ರೀತಿ. ಗಣೇಶ ಹೆಗಡೆ ನಿರ್ಮಲೆಯನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಸಂದರ್ಭ ಒಂದು. ಊರಿನ ಇತರ ಪ್ರಭಾವೀ ಬ್ರಾಹ್ಮಣರಿಗೆ ಇದು ಕೇವಲ ಗಣೇಶ ಹೆಗಡೆಯವರ ತೋಟದ ಪ್ರಶ್ನೆಯಾಗಿ ಮಾತ್ರ ಕಾಡುವುದು ಇನ್ನೊಂದು. ಇವೆರಡರ ನಡುವೆ ಒಂದಕ್ಕೊಂದು ಸಂಬಂಧ ಇದೆ. ಗಣೇಶ ಹೆಗಡೆಯ ಅರೆ ಹುಚ್ಚು ನಿಗೂಢವಾಗುವುದು ಇಂಥಲ್ಲೇ. ಇಂಥ ಇನ್ನೊಂದು ಸಂದರ್ಭ, ಸಾಯುವ ಮುನ್ನ ಆತ ನಿರ್ಮಲೆಯ ಕೈಗೆ ಕೊಡಲೆಂದೇ ಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಬೆಣ್ಣೆ ಹೂವು. ಮಗಳನ್ನು ದೇವಿಯ ಮಗಳು ಬೆಳ್ಳಿ ಎಂದು ಗುರುತಿಸುವ ಗಣೇಶ ಹೆಗಡೆಗೆ ತನ್ನ ಮಗಳು ನಿರ್ಮಲೆಗೆ ಬೆಣ್ಣೆ ಹೂವೆಂದರೆ ಪಂಚಪ್ರಾಣ ಎಂಬುದು ತಿಳಿದಿತ್ತು! ತನ್ನ ದೇಶ ಕಾಲದ ಪರಿಮಿತಿಯಲ್ಲಿ ಸನಾತನಿಯಾದ, ಬ್ರಾಹ್ಮಣನಾದ ಮತ್ತು ಮನುಷ್ಯನೂ ಆದ ಗಣೇಶ ಹೆಗಡೆ ವರ್ತಿಸುವ ರೀತಿ ಎಷ್ಟು ಸೂಕ್ಷ್ಮವಾಗಿದೆ, ಅರ್ಥಪೂರ್ಣವಾಗಿದೆ ಎಂಬುದನ್ನು ಗಮನಿಸಿದರೆ ಗಣೇಶ ಹೆಗಡೆಯ ಈ ಅರೆಹುಚ್ಚಿಗೆ ಬೇರೆಯೇ ಒಂದು ಅರ್ಥಪರಂಪರೆ ಇದ್ದಿರಬಹುದಾದ ಸಾಧ್ಯತೆ ನಮಗೆ ಗೋಚರಿಸದೇ ಇರುವುದಿಲ್ಲ. ಬ್ರಾಹ್ಮಣ ಸನಾತನಿಗಳ ಕ್ರೌರ್ಯದಿಂದ ಗಣೇಶ ಹೆಗಡೆ ತನ್ನನ್ನು ಮತ್ತು ತನ್ನ ಮಗಳನ್ನು ರಕ್ಷಿಸಲು ಹೀಗೆ ಮಾಡಿರಬಹುದೆ? ಅದು ನಿರ್ಮಲೆಗೂ ಸ್ಪಷ್ಟವಾಗಿ ಅಲ್ಲದಿದ್ದರೂ ಸುಪ್ತವಾಗಿಯಾದರೂ ತತ್ಕಾಲಕ್ಕೆ ಸರಿಯಾದ ನಡೆ ಅನಿಸಿರಬಹುದೆ?

ಕಾದಂಬರಿಯಲ್ಲಿ ತುಂಬ ಇಷ್ಟವಾಗುವುದು ಖಾಸಿಂ ಸಾಬಿಯ ಕತೆ. ತೇಜಸ್ವಿಯವರ, ಕುವೆಂಪುರವರ ಕಾದಂಬರಿಯೊಂದರ ಪಾತ್ರ ಧುತ್ತನೆ ಇಲ್ಲಿ ಎದುರಾದಂತೆ ಅನಿಸಿದರೆ ಅಚ್ಚರಿಯಿಲ್ಲ. ಕಾದಂಬರಿಯ ಕತೆಗೆ ಒಂದು ಓಟ ಮತ್ತು ಲಾಲಿತ್ಯ ಒದಗುವುದೇ ಈ ಪಾತ್ರ ಬಂದ ನಂತರ. ಅಲ್ಲಿಯ ತನಕ ಕಾದಂಬರಿಯಲ್ಲಿ ಕತೆ ತೊಡಗುವುದು ತೀರ ನಿಧಾನ ಅನಿಸುತ್ತಿರುತ್ತದೆ. ಊರಿನ ವಿವರಗಳು, ಜಾತ್ರೆಯ ನಡಾವಳಿಯ ವಿವರಗಳು, ಅಲ್ಲಿನ ಮಂದಿಯ ಕುರಿತಾದ ವಿವರಗಳು ಕತೆಯ ನಿರೀಕ್ಷೆಯಲ್ಲಿರುವ ಓದುಗರಿಗೆ ಕೊಂಚ ಭಾರ ಅನಿಸಿದರೆ ಅಚ್ಚರಿಯಿಲ್ಲ. ಯಾಕೆಂದರೆ ಕತೆಯ ಒಂದು ನಡೆ, ಗೊತ್ತು, ಗುರಿಗಳ ಹೊಳಹು ಕೂಡಾ ಅಲ್ಲಿಯ ತನಕ ನಮಗೆ ಸಿಗುವುದಿಲ್ಲವಾಗಿ, ಅಷ್ಟು ಹೊತ್ತಿಗೆ ಓದುಗನನ್ನು ಮುಂದಿನ ಓದಿಗೆ ಹಿಡಿದಿಟ್ಟುಕೊಳ್ಳಲು ಬೇಕಾದ ಅಂಶಗಳ ಕೊರತೆ ಕಾಣಿಸುತ್ತದೆ. ಆದರೆ ಸಾಬಿಯ ಪ್ರವರಗಳೆಲ್ಲ ಕತೆಯ ಮೂಲ ಎಳೆಗೆ ಹೊರಗಿನದಾಗಿ ನಿಂತರೂ ಕಾದಂಬರಿಯನ್ನು ಆಪ್ತವಾಗಿಸಿಬಿಡುವ ಕಸು ಹೊಂದಿದೆ.

ರಾಮಾನಾಯ್ಕ ಊರ ಬ್ರಾಹ್ಮಣರಿಗೆ ಸೆಡ್ಡು ಹೊಡೆದು ನಿಲ್ಲುವ ನಿರ್ಧಾರಕ್ಕೆ ಬರಲು ಸಹ ರಾಜೀವ ಗಾಯತೊಂಡೆ, ಕ್ರೈಸ್ತ ಪಾದರಿಗಳ ಪರೋಕ್ಷ ಬೆಂಬಲವೇ ಕಾರಣವೆನಿಸಿದರೂ ಅಂಥ ಒಂದು ನಡೆಗೆ ಬೇಕಾದ ಎಲ್ಲ ಮೂಲದ್ರವ್ಯವೂ ರಾಮಾನಾಯ್ಕನಲ್ಲಿತ್ತು ಮತ್ತು ಅವನ ಪರಿಸರದಿಂದಲೇ ಅವನದನ್ನು ಪಡೆದುಕೊಂಡಿದ್ದ ಎಂಬುದನ್ನು ಕಾದಂಬರಿ ಅದ್ಬುತವಾಗಿ ಚಿತ್ರಿಸಿದೆ. ನಿಜವಾದ ಕತೆ ತೊಡಗುವುದು ಇಲ್ಲಿಂದಲೇ ಎನ್ನಬಹುದೇನೊ.

ಅಷ್ಟೇ ಗಮನ ಸೆಳೆಯುವ ಇನ್ನೊಂದು ಅಂಶವೂ ಈ ಕಾದಂಬರಿಯ ಹೆಚ್ಚುಗಾರಿಕೆ ಎನ್ನಬೇಕು. ಅದು ಅಶೋಕರು ಇಡೀ ಕಾದಂಬರಿಯಲ್ಲಿ ಕಾಲಮಾನವನ್ನು, ವಯೋಮಾನವನ್ನು ಮತ್ತು ದೇಶಮಾನವನ್ನು (ಸ್ಥಳ, ಸನ್ನಿವೇಶ ಅಥವಾ ಪರಿಸರ) ಬಳಸಿಕೊಳ್ಳುವ ರೀತಿ. ಇಲ್ಲಿ ಕೆಲವೊಂದು ಘಟನೆಗಳು ಇಬ್ಬನಿ ಮುಸುಕಿದ ಮುಂಜಾನೆಯ ಮಬ್ಬಿನಲ್ಲಿ ನಡೆಯುತ್ತವೆ. ಇನ್ನು ಕೆಲವು ಬಿಸಿಲೇರಿದ ಪೂರ್ವಾಹ್ನ. ಮತ್ತೆ ಕೆಲವು ಮಟಮಟ ಮಧ್ಯಾಹ್ನದ ರಣರಣ ಬಿಸಿಲಿನಲ್ಲಿ. ಇಳಿಹೊತ್ತಿನಲ್ಲಿ ಮುಸ್ಸಂಜೆಗೂ ಮುನ್ನ ಕೆಲವು ನಡೆದರೆ ತೀರ ಮುಸ್ಸಂಜೆಯ ಚಿತ್ರಗಳು ಇನ್ನು ಕೆಲವು. ರಾತ್ರಿ ಕವಿಯುವ ಮುನ್ನ ಇನ್ನು ಕೆಲವು ನಡುರಾತ್ರಿಯಲ್ಲಿ ನಡೆಯುವ ಸಂಗತಿಗಳು ಉಳಿದ ಒಂದಷ್ಟು. ಅಷ್ಟೇ ಯಾಕೆ, ಅಶೋಕರು ದಿನದ ಯಾವ ಜಾವವನ್ನೂ ಬಿಡದಂತೆ ನಟ್ಟಿರುಳು ಕಾಡಿನ ಗಾಢಾಂಧಕಾರದಲ್ಲೂ ಕುಳ್ಳು ಗಡ್ಡದ ಭೂತಗಳನ್ನು ತಂದಿಡುತ್ತಾರೆ! ದಿನದ ವಿಭಿನ್ನ ವೇಳೆಗಳಲ್ಲಿ ಮನುಷ್ಯನ ಮನಸ್ಸು, ಭಾವನೆ ವಿಭಿನ್ನವಾಗಿರುವುದರ ಸೂಕ್ಷ್ಮದೊಂದಿಗೇ ಇಲ್ಲಿನ ಪಾತ್ರಗಳು, ಸನ್ನಿವೇಶ ನಮ್ಮ ಮನಸ್ಸಿನಲ್ಲಿ ಊರಿ ನಿಲ್ಲುತ್ತವೆ. ಈ ಸಣ್ಣಪುಟ್ಟ ವಿವರಗಳಲ್ಲೇ ನಮ್ಮ ಚಿತ್ತದಲ್ಲಿ ಉತ್ತರಕರ್ನಾಟಕದ ಹಳ್ಳಿಯೊಂದರ ಸಮಗ್ರ ಚಿತ್ರವನ್ನು ಅಶೋಕರು ಬಿಡಿಸುತ್ತಾರೆ, ನಿರುದ್ದಿಶ್ಯ ಎನಿಸುವಂತೆ!

ಇದರೊಂದಿಗೇ, ಇಲ್ಲಿ ಪುಟಾಣಿಗಳಿಂದ ಹಿಡಿದು ಮೃತ್ಯುಶಯ್ಯೆಯಲ್ಲಿರುವ ವೃದ್ಧರವರೆಗೆ ಎಲ್ಲರೂ ಒಳಗೊಂಡು ಕಥಾನಕವನ್ನು ಕೊಂಡೊಯ್ಯುವ ಪರಿ ಕೂಡ ಅನನ್ಯವಾಗಿ ಪಡಿಮೂಡಿದೆ. ಅದೇ ರೀತಿ, ಈ ಕಥಾನಕದ ವಿದ್ಯಮಾನಗಳು ನಡೆಯುವ ಸ್ಥಳ, ಸನ್ನಿವೇಶಗಳೂ ಅಷ್ಟೇ ವಿಶಿಷ್ಟ ಮತ್ತು ಸಮಗ್ರ. ಮನೆಯ ಅಡುಗೆ ಕೋಣೆ, ಮಲಗುವ ಕೋಣೆ, ಪಡಸಾಲೆ, ಉಪ್ಪರಿಗೆ, ದನದ ಕೊಟ್ಟಿಗೆ, ಅಂಗಳ, ದೊಡ್ಡ ದೊಡ್ಡ ಮರದ ಬೇರುಗಳು ಎದ್ದು ನಿಂತ ಕಾಲು ದಾರಿ, ಗದ್ದೆ ಬಯಲು, ಕೆರೆಯ ದಂಡೆ, ತೋಟ, ಹಿತ್ತಿಲು, ಕಾಡಿನ ಸೆರಗು, ದಟ್ಟ ಕಾಡಿನ ಮರಗಳು, ಮಠದ ವಿವಿಧ ಪ್ರಾಂಗಣಗಳು, ಓಡುತ್ತಿರುವ ಕಾರು, ನಿಂತು ಬಿಟ್ಟ ಒಂದು ಜೀಪು ಎಲ್ಲವೂ ಇಲ್ಲಿನ ಕಥಾನಕದ ಅನಿವಾರ್ಯ ಮತ್ತು ಸನ್ನಿವೇಶದಿಂದ ಪ್ರತ್ಯೇಕಿಸಲಾರದ ಪಾತ್ರಗಳೇ ಆಗಿ ಬಿಡುವುದನ್ನು ಅಧ್ಭುತ ಎನಿಸುವಂತೆ ಚಿತ್ರಿಸಿದ್ದಾರೆ. ಎಲ್ಲವನ್ನೂ ಸಹಜ ಸ್ವಾಭಾವಿಕ ಸೌಂದರ್ಯದೊಂದಿಗೆ ಕಣ್ಮುಂದೆ ಬರುವಂತೆ ಸೂಕ್ಷ್ಮ ವಿವರಗಳಲ್ಲಿ ಕಟ್ಟಿಕೊಟ್ಟಿರುವುದು ಮನಸೆಳೆಯುತ್ತದೆ.

ಕೃತಿಕಾರನ ಪ್ರಜ್ಞಾಪೂರ್ವಕವಾದ ಈ ಸೂಕ್ಷ್ಮ ಸಂಯೋಜನೆ ಸಂತುಲಿತ ಕಥಾನಕಕ್ಕೆ ಪರೋಕ್ಷವಾಗಿ ನೀಡುವ ಕಾಣ್ಕೆಯ ಕುರಿತು ಯೋಚಿಸಬೇಕೆನಿಸುತ್ತದೆ. ಅಶೋಕರು ತಮ್ಮ ಕಾದಂಬರಿಯಲ್ಲಿ ಇಂಥ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ. ಅದು ಮಂಜ ಮತ್ತು ದೀಕ್ಷಿತರ ಪ್ರಸಂಗ ಇರಬಹುದು, ಮಠದ ಜೀಪಿನ ವ್ಯವಹಾರ ಇರಬಹುದು, ಖಾಸಿಂ ಸಾಬಿಯ ಡಾಲರ್ ವ್ಯವಹಾರವೇ ಇರಬಹುದು ಎಲ್ಲವೂ ಒಂದರೊಳಗೊಂದು ಸೇರಿಕೊಂಡಂತಿದ್ದೂ ಮುಖ್ಯ ಕಥಾನಕದ ಪೋಷಣೆ ಮಾಡುವ ರೀತಿ ನಮ್ಮ ಸಾಹಿತ್ಯಾಭ್ಯಾಸಿಗಳು ಗಮನಿಸ ಬೇಕಾದ ಪ್ರಯೋಗ ಎಂಬುದಂತೂ ನಿಶ್ಚಯ.

ಅತ್ಯಂತ ನವಿರಾದ ನಿರೂಪಣೆಯಲ್ಲಿ ಆಪ್ತವಾಗುವ ಶ್ರೀಧರ ಕುಸುಮಾರ ಸಂಬಂಧ ಕಾದಂಬರಿಯ ಆಶಯದ ದೃಷ್ಟಿಯಿಂದ ಬಹಳ ಮುಖ್ಯವಾದ ವಿವರವಾಗಿ ನಿಲ್ಲುತ್ತದೆ. ಶ್ರೀಧರನಿಗೆ ಕಾಡಿನಲ್ಲಿ ರಾತ್ರಿಹೊತ್ತಿನಲ್ಲಿ ಕನಸೋ ಭ್ರಮೆಯೋ ತಿಳಿಯದ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಬಿಳೀ ಗಡ್ಡದ ಕುಳ್ಳು ಭೂತಗಳು, ಅವು ಆಡಿಕೊಳ್ಳುವ ಮಾತುಗಳು ಅಶೋಕರ ಕುಶಲ ತಂತ್ರಗಾರಿಕೆಯನ್ನು ಕಾಣಿಸುವುದರೊಂದಿಗೇ ಕಥನಗಾರಿಕೆಗೆ ಒಂದು ಮೆರುಗನ್ನು ತಂದಿವೆ. ಗ್ರಾಮಾಯಣದ ಪಡದಯ್ಯನನ್ನು ನೆನಪಿಸುವ ಮಠದ ಸ್ವಾಮಿ ಮತ್ತವನ ಪಟಾಲಂ, ವದಂತಿಗಳಿಂದ ದಂತಕತೆಯಾದಂತಿರುವ ಮಂಜ, ವಿಶಿಷ್ಟ ಸಂದರ್ಭಗಳಲ್ಲಿ ಕಾಣಿಸಿಕೊಂಡು 'ಕೆಂಪು ನೀರು... ಭೋರ್ಗರೆತ....ಕೆಂಪುನೀರು' ಎನ್ನುವ ಗಣೇಶ ಹೆಗಡೆ, ರೂಪಕದಂತಿರುವ ಕೋರ್ಟ್ ತಿಮ್ಮಪ್ಪ ಮತ್ತು ವಿಪರ್ಯಾಸದಂತಿರುವ ಅವನ ನ್ಯಾಯಾಲಯದ ನ್ಯಾಯದ ಕುರಿತ ನಿಷ್ಠೆ, ಪರೀಕ್ಷೆಯ ಭೀತಿಯ ಸುಬ್ರಾಯಹೆಗಡೆಯ ಮುದಿತಂದೆ, ಕಾದಂಬರಿಯ ಕೇಂದ್ರ ಬಿಂದುವೇ ಆಗಿರುವ ಅಶ್ವಮೇಧದ ಪರಿಕಲ್ಪನೆ, ಕಾದಂಬರಿಯ ಉದ್ದಕ್ಕೂ ಇಂಥ ಪ್ರತಿಮೆಗಳನ್ನು ಅತ್ಯಂತ ವಿವೇಚನಾ ಯುಕ್ತವಾಗಿ ಅಶೋಕ್ ಬಳಸುತ್ತಾರೆ. ಕಾದಂಬರಿಗೆ ತನ್ನ ಕೇಂದ್ರ ಕಾಳಜಿಯನ್ನು ಮೀರಿದ ವಿಭಿನ್ನ ಆಯಮಗಳನ್ನು ಇಂಥ ಸೂಕ್ಷ್ಮ ವಿವರಗಳು ಅಲ್ಲಲ್ಲಿ ದೊರಕಿಸಿಕೊಡುತ್ತ ಕಾದಂಬರಿ ತನ್ನ ಒಡಲಲ್ಲಿ ಹೊಸ ಒಳನೋಟಗಳನ್ನು ಒಳಗೊಳ್ಳುವುದು ಸಾಧ್ಯವಾಗಿದೆ. ಇದು ಇಡೀ ಕಾದಂಬರಿಗೆ ಒಂದು ಗುರುತ್ವವನ್ನೂ ಆಕರ್ಷಣೆಯನ್ನೂ ತಂದಿದೆ. ಹಾಗೆಯೇ ಅಮೂರರು ಹೇಳುವ ತನ್ನದೆ ಆದ ವಿಶ್ವಸನೀಯ ಜಗತ್ತನ್ನು ಸೃಷ್ಟಿಸುವ ಕೆಲಸಕ್ಕೂ ಇದೆಲ್ಲ ಪೂರಕವಾಗಿದೆ.
(ಸಂಕ್ರಮಣ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)

No comments: