Sunday, December 21, 2008

ಈ ಓಟ ಬರಿಯ ಕಾಲದೊಂದಿಗೇನಾ?

ಕಾಲಜಿಂಕೆ ಕೆ.ಸತ್ಯನಾರಾಯಣರ ಐದನೆಯ ಕಾದಂಬರಿ. ಸನ್ನಿಧಾನ(೧೯೯೭) ಕಾದಂಬರಿ ಪ್ರಕಟವಾದ ಏಳೆಂಟು ವರ್ಷಗಳ ಬಳಿಕ ಬಂದ ಕಾಲಜಿಂಕೆ ಹಲವಾರು ಕಾರಣಗಳಿಗೆ ಮಹತ್ವದ ಕಾದಂಬರಿ.

ಸತ್ಯನಾರಾಯಣರ ಹಿಂದಿನ ಕಾದಂಬರಿಗಳನ್ನು, ಕತೆ ಪ್ರಬಂಧಗಳನ್ನು ಗಮನಿಸುತ್ತ ಬಂದವರಿಗೆ ಇಲ್ಲಿ ಅವರ ಬರವಣಿಗೆಯ ಸ್ವರೂಪದಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ಕಾಣದಿರಲು ಸಾಧ್ಯವಿಲ್ಲ. ಮೊದಲನೆಯದಾಗಿ ಸತ್ಯನಾರಾಯಣರು ಇದೇ ಮೊದಲ ಬಾರಿಯೆಂಬಂತೆ ಹೆಸರಿನಿಂದ ತೊಡಗಿ ಕಾದಂಬರಿಯ ಉದ್ದಕ್ಕೂ ರೂಪಕಗಳನ್ನು ಬಳಸಿಕೊಂಡಿರುವುದು ಗಮನಾರ್ಹ. ಹಾಗೆಯೇ ತಮ್ಮ ಕತೆಗಳಲ್ಲಿ ಬದುಕು ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಕತೆಗಳನ್ನೂ ಆ ಕತೆಗಳ ಒಡಲಿನಲ್ಲಿರುವ ಸತ್ಯಗಳನ್ನೂ ಶೋಧಿಸುವುದರತ್ತಲೇ ತಮ್ಮೆಲ್ಲಾ ಗಮನವಿಟ್ಟಿದ್ದಾರೇನೋ ಅನಿಸುತ್ತಿದ್ದ ಹೊತ್ತಿನಲ್ಲೇ ಸತ್ಯನಾರಾಯಣರ ಕಾಲಜಿಂಕೆ ಎತ್ತುವ ಪ್ರಶ್ನೆಗಳು ಎರಡು ತಲೆಮಾರಿನ ಮೌಲ್ಯಗಳ ಸಂಘರ್ಷವಾಗಿಯೂ, ಇದನ್ನು ಮೀರಿದ ಸತ್ಯದ ಶೋಧವಾಗಿಯೂ ನಿಲ್ಲುವುದು ಕೂಡ ಕಾಲಜಿಂಕೆಯ ವೈಶಿಷ್ಟ್ಯ. ಇಲ್ಲಿ ಕಳೆದ ಎರಡು ದಶಕಗಳಲ್ಲಿ ನಮ್ಮ ಯುವ ಜನಾಂಗದ ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಮದುವೆ, ವ್ಯವಹಾರ, ಪ್ರಾಶಸ್ತ್ಯಗಳು, ಯಶಸ್ಸನ್ನು ಅಳೆಯುವ ಮಾನದಂಡಗಳು ಎಲ್ಲವೂ ವ್ಯಾಪಾರೀಕರಣ, ಜಾಗತೀಕರಣಗಳ ಹೆಸರಿನಲ್ಲಿ ಬದಲಾಗುತ್ತಿರುವಾಗಲೇ ಈ ಎಲ್ಲದರಾಚೆ ತಣ್ಣಗಿರುವಂತೆ, ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಂತೆ ಕಾಣುವ ನಮ್ಮ ಹಳ್ಳಿಗಳು, ಅಲ್ಲಿನ ಪರಿಸರ, ಜಾನಪದ, ಅಲ್ಲಿನ ಸಾಲ-ಉದ್ಯೋಗ, ಅಭಿವೃದ್ಧಿ, ಸ್ವಾಯತ್ತತೆಯ ಹಂಬಲ, ಅಲ್ಲಿನ ಸಾಂಸಾರಿಕ ಅನುಬಂಧ ಮತ್ತು ಮಾನವ ಸಂಬಂಧಗಳು -ಎರಡರ ತೌಲನಿಕ ಚಿತ್ರವಿದೆ. ಆದರೂ ಇಲ್ಲಿ ತೀರ್ಮಾನಗಳಿಲ್ಲ, ಆದ್ಯತೆಗಳಿಲ್ಲ, ಒಲವುಗಳಿಲ್ಲ. ಇಲ್ಲದಿರುವುದೇ ಈ ಕಾದಂಬರಿ ಓದಿ ಮುಗಿಸಿದ ಮೇಲೂ ಓದುಗನ ಮನಸ್ಸಿನಲ್ಲಿ ಬೆಳೆಯುತ್ತಲೇ ಉಳಿಯುವುದರ ಹಿನ್ನೆಲೆಯಾಗಿದೆ ಅನಿಸುತ್ತದೆ. ರಂಗನಾಥನ ಮಗ ವಿಕ್ರಂ ಮತ್ತು ಮಗಳು ಪ್ರಾರ್ಥನಾ ಎತ್ತುವ ಪ್ರಶ್ನೆಗಳು ಹಾಗೆ ಸರಳವಾದ ಉತ್ತರಗಳಿಗೆ, ನಿಲುವುಗಳಿಗೆ ಬರಲು ಸಾಧ್ಯವಿರುವಂಥವುಗಳಲ್ಲ. ಕಾದಂಬರಿ ಇಂಥ ಪ್ರಶ್ನೆಗಳನ್ನು ಎತ್ತಬಲ್ಲ ಹಂತಕ್ಕೆ ತನ್ನ ಒಡಲಿನ ಸಂದರ್ಭದಲ್ಲೇ ಏರುವುದಿದೆಯಲ್ಲ, ಅದೇ ಸತ್ಯನಾರಾಯಣರ ಕಲೆಗಾರಿಕೆಯ ಯಶಸ್ಸು ಎಂದು ನಿರ್ವಿವಾದವಾಗಿ ಹೇಳಬಹುದು. ಹಾಗೆ ಸತ್ಯನಾರಾಯಣರ ಕತೆಯೊಳಗಿನ ಕತೆಗಳ, ಉಪಕತೆಗಳ ಹಂದರ ಇಲ್ಲಿ ಹದವಾಗಿ, ಕೇಂದ್ರದಿಂದ ದೂರಕ್ಕೆ ಸರಿಯದೆ, ವಿಕ್ರಂ ಮತ್ತು ಪ್ರಾರ್ಥನಾರ ಪ್ರಶ್ನೆಗಳಿಗೆ ಯಾವುಯಾವುದೋ ನಿಟ್ಟಿನಿಂದ ಪರಿಪ್ರೇಕ್ಷ್ಯಗಳನ್ನು ಒಡ್ಡುತ್ತಿರುವಂತೆ ಒಗ್ಗೂಡಿ ನಿಲ್ಲುತ್ತವೆ.

ಪವಿತ್ರಾ ಮತ್ತು ಸ್ವಾಮಿನಾಥ ಇಬ್ಬರ ವ್ಯಕ್ತಿಗತ ವಿವರಗಳೂ ವೈವಾಹಿಕವಾಗಿ ಅವರ ಯಶಸ್ಸೂ ಇಂಥ ಒಂದು ಕತೆಯಾದರೆ ಸ್ವಾಮಿನಾಥನ ತಂದೆ ನಾರಾಯಣ ಮೂರ್ತಿಗಳ ಡಾಯರಿ ಮೂಲಕ ಬಿಚ್ಚಿಕೊಳ್ಳುವ ಕತೆ ಮತ್ತು ಅದನ್ನು ಪ್ರಕಟಿಸುವ ಸ್ವಾಮಿನಾಥನ ಉದ್ದೇಶ ಎರಡೂ ಪರಂಪರೆಯ ಮಿತಿ ಮತ್ತು ಅದನ್ನು ಕೊಂಡಾಡುವರ ಭ್ರಮೆಗಳನ್ನು ತೆರೆದು ತೋರುವಂಥದು. ಇಲ್ಲಿ ವಿಕ್ರಂ ಎತ್ತುವ ಅನೇಕ ಆಪಾದನೆಗಳಿಗೆ ಪರೋಕ್ಷ ಉತ್ತರಗಳಿವೆ. ಶಂಕರ ಮತ್ತು ಭಾರತಿಯ ಕತೆ, ಅದಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಳ್ಳುವ ಮಂಜರಿ ಅಗರವಾಲ್ ಕೂಡ ಕೊನೆಯಲ್ಲಿ ಶಂಕರ ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಸ್ವತಃ ರಂಗನಾಥನಿಗೇ ತಾನು ಸವೆಸಿದ ಬದುಕಿನ ಕುರಿತು ಒಳನೋಟ ನೀಡಬಲ್ಲಷ್ಟು ಕಸುಹೊಂದಿರುವಂಥಾದ್ದು. ಪರೋಕ್ಷವಾಗಿಯಾದರೂ ಶಂಕರನ ನಿರ್ಧಾರಕ್ಕೆ ಕಾರಣರಾದವರು ಕೋಚಿಂಗ್ ಕೊಡುತ್ತಿದ್ದ ಮೇಷ್ಟ್ರು ಬೆಳವಾಡಿ ರಾಮಚಂದ್ರಪ್ಪ ಎನ್ನುವುದು ಇಲ್ಲಿ ಧ್ವನಿಪೂರ್ಣ. ಹಾಗೆಯೇ ನೇರವಾಗಿಯಲ್ಲದಿದ್ದರೂ ನೆರಳಿನಂತೆ ಸುಳಿಯುವ ಡೇನಿಯಲ್, ಗೂಗ್ಲಿ ಬೌಲರ್ ಚಂದ್ರಶೇಖರ್, ಶ್ರೀನಿವಾಸ‍, ಅವನ ತಂದೆ, ಪ್ರಭಾದೇವಿ ರೆಡ್ಡಿ ಕೂಡ ಕಥಾನಕದ ಕೇಂದ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾರೆ, ಸಾಂದರ್ಭಿಕವಾಗಿ. ಆದಾಗ್ಯೂ ಪರಮೇಶ್ವರಿಯ ನಾಗೇಂದ್ರನ ಜೊತೆಗಿನ ಮದುವೆ ಮತ್ತು ನಂತರ ನಾಗರಾಜನೊಂದಿಗಿನ ವೈಫಲ್ಯದ ಅನುಬಂಧ ಯಾವ ಬಗೆಯಲ್ಲೂ ಕಥಾನಕದ ಕೇಂದ್ರಕ್ಕೆ ಹೆಚ್ಚುವರಿಯಾಗಿ ಯಾವುದೇ ಕಾಣ್ಕೆ ನೀಡಬಲ್ಲ ಕಸು ಹೊಂದಿರುವ ಕತೆ ಎನಿಸುವುದಿಲ್ಲ.

ರಂಗನಾಥನ ಬದುಕಿನ ಮೂಲ ಎಳೆಗೆ ಮೇಲೆ ಹೇಳಿದ ಬಗೆಯಲ್ಲಿ ಹಲವು ಇತರ ಕತೆಗಳು ಬೇರೆ ಬೇರೆ ಆಯಾಮಗಳಿಂದ ಒಳನೋಟ ದೊರಕಿಸಿಕೊಡಲು ಪ್ರಯತ್ನಿಸುತ್ತವಾದರೂ ರಜನಿ ರಾಯ್ ಮತ್ತು ವಿನೋದ್ ಜೋಡಿಯ ವಿವರ, ಕತೆ ಮಾತ್ರ ಪ್ರಧಾನವಾದ ಇನ್ನೊಂದು ಎಳೆಯಾಗಿಯೇ ಮನಸ್ಸಿನಲ್ಲಿ ನಿಲ್ಲುತ್ತದೆ. ವಿಕ್ರಂ ಮತ್ತು ಪ್ರಾರ್ಥನಾ ಎತ್ತುವ ಪ್ರಶ್ನೆಗಳಿಗೂ ರಜನಿ ರಾಯ್ ಅವರ ಬದುಕಿಗೂ ಒಂದು ಕೊಂಡಿ ಏರ್ಪಡುವುದು ಗಮನಿಸಬೇಕಾದ ಅಂಶ.

ತನ್ನ ಆಶಯದಲ್ಲಿ ಈ ಕೃತಿ ಯು ಆರ್ ಅನಂತಮೂರ್ತಿಯವರ ದಿವ್ಯದೊಂದಿಗೆ ನಿಲ್ಲುತ್ತದೆ. ಆದರೆ ಅನಂತಮೂರ್ತಿಯವರು ಸಂಘರ್ಷದ ಪೂರ್ವಪಕ್ಷವಾಗಿ ಬಳಸಿಕೊಳ್ಳುವ ಆಧ್ಯಾತ್ಮ, ಮಿಥ್, ಜ್ಯೋತಿಷ್ಯ, ಅನೂಹ್ಯ ಜಗದ ನಾಟಕೀಯತೆ, ಪುರಾಣದ ಮಟ್ಟಕ್ಕೇರುವ ಒಂದು ಸರ್ರಿಯಲಿಸ್ಟಿಕ್ ಪಾತಳಿಯನ್ನು ಕಾಲಜಿಂಕೆ ಆಶ್ರಯಿಸುವುದಿಲ್ಲ ಎನ್ನುವುದನ್ನು ಬಿಟ್ಟರೆ ಎರಡೂ ಕಾದಂಬರಿಗಳು ಮುಖಾಮುಖಿಯಾಗುತ್ತಿರುವ ವಿದ್ಯಮಾನ ಒಂದೇ. ಅನಂತಮೂರ್ತಿಯವರು ದಿವ್ಯವನ್ನು ಅತಿಯಾಗಿ ಸಂಕೀರ್ಣಗೊಳಿಸಿದ್ದರ ಫಲ ಅದು ಹೆಚ್ಚಿನವರನ್ನು ತಲುಪಬೇಕಾದ ಸ್ತರದಲ್ಲಿ ತಲುಪಲೇ ಇಲ್ಲ. ದಿವ್ಯದ ಕುರಿತ ಬಂದ ವಿಮರ್ಶೆಗಳೂ ಸಿಕ್ಕ ಸಿಕ್ಕ ಜಾಡಿನಲ್ಲಿ ಹರಡಿ ಓದುಗರನ್ನು ಹಾದಿ ತಪ್ಪಿಸಿದ್ದು ಕೂಡ ಸತ್ಯ. ಹಾಗಿರುತ್ತ ಕಾಲಜಿಂಕೆ ಕಾದಂಬರಿ ಮತ್ತೆ ದಿವ್ಯ ಎತ್ತುವ ಸಂಘರ್ಷಗಳ ಚಿಂತನೆಗೆ ಕಾರಣವಾಗಬಹುದೇನೋ ಅನಿಸುವಂತೆ ಮಾಡಿದೆ.

ಕಾಲಜಿಂಕೆಯ ಪ್ರಧಾನ ಆಶಯ ಪಾತ್ರ ಪ್ರಾರ್ಥನಾಳ ಸ್ವಗತ, ಪತ್ರದ ಮಾತು ಗಮನಿಸಿ:

"ನಾಲ್ಕಾರು ವರ್ಷಗಳಿಂದ ಹೀಗೇ ಒಂದಲ್ಲ ಒಂದು ಪರೀಕ್ಷೆ, ಸಂದರ್ಶನಕ್ಕೆ ಅಂತ ಓದುತ್ತಲೇ ಇದೀನಿ. ನನ್ನ ಸಹಪಾಠಿಗಳು, ರೂಮ್‍ಮೇಟ್‍ಗಳೂ ಅಷ್ಟೇ. ನಾನು ಯಾರು, ನನಗೇನು ಬೇಕು, ನನ್ನ ವ್ಯಕ್ತಿತ್ವ ಎಂತಹುದು ಎಂಬುದು ಗೊತ್ತೇ ಇಲ್ಲ. ಮ್ಯಾನೇಜ್‍ಮೆಂಟ್ ಪರೀಕ್ಷೆಗಳು, ಸಿವಿಲ್ ಸರ್ವೀಸ್ ಕೋಚಿಂಗ್, ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳು - ಹೀಗೆ ಎಲ್ಲವನ್ನೂ ಹಚ್ಚಿಕೊಂಡು ಬರೆಯುತ್ತಿರುವ ನನ್ನ ಸಹಪಾಠಿಗಳನ್ನು ನೋಡಿದರೆ ಭಯವಾಗುತ್ತೆ. ಇವರೆಲ್ಲ ಎಲ್ಲಾದರೂ ಹೇಗಾದರೂ ಎಂದಾದರೂ ಗೆದ್ದೇ ಬಿಡುತ್ತಾರೆ - ನಿಜಕ್ಕೂ. ಆದರೆ ಮೂರು ನಾಲ್ಕು ವರ್ಷಗಳ ದೆಹಲಿ ಅನುಭವದಲ್ಲಿ, ಒಡನಾಟದಲ್ಲಿ ತಿಳಿದಂತೆ ಇವರಾರಿಗೂ ಇನ್ನೊಬ್ಬರ ಬಗ್ಗೆ ಪ್ರೀತಿಯಿಲ್ಲ. ಎಲ್ಲರೂ ಸ್ವಮಗ್ನರೇ. ನಾಲ್ಕಾರು ವರ್ಷ ಒಟ್ಟಿಗೇ ಕಳೆದರೂ ಒಬ್ಬರಿಗೊಬ್ಬರು ಸ್ನೇಹಿತರಾಗೋಲ್ಲ. ಯಾರಿಗೂ ಯಾರ ಸ್ನೇಹವೂ ಬೇಕಿಲ್ಲ. ಎಲ್ಲರ ಮುಖವೂ ಮುಗುಳ್ನಗೆಯೂ ಚೆನ್ನಾಗಿರುತ್ತೆ. ಯಾರು ಯಾರೊಡನೆಯೂ ತಮ್ಮ ಗುಟ್ಟುಗಳನ್ನು, ಆತ್ಮೀಯ ಅನುಭವಗಳನ್ನು ಹೇಳಿಕೊಳ್ಳುವುದಿಲ್ಲ. ಹಾಗೆ ಹೇಳಿಕೊಳ್ಳುವವರು ಮಾನಸಿಕವಾಗಿ ದುರ್ಬಲರಂತೆ. ಕೊಳ್ಳೇಗಾಲ, ಮಂಡ್ಯ, ಬೆಂಗಳೂರಿನ ಗಾಂಧಿಬಜಾರ್‌ಗಳಲ್ಲಿ ಬೆಳೆದ ನನಗೆ ಇಂತವರೊಡನೆ ಹೊಂದಿಕೊಳ್ಳಲಾಗದೆ, ಸ್ಪರ್ಧಿಸಲಾಗದೆ ಕೀಳಿರಿಮೆಯಿಂದ ಈ ಭಾವನೆ ಬಂದಿರಬಹುದೆ ಅಂತಾ ಅದೆಷ್ಟೋ ರಾತ್ರಿ ನಿದ್ದೆಗೆಟ್ಟು, ರೂಮಿನ ಪುಟ್ಟ ಹಾಸಿಗೆಯಲ್ಲಿ ಬೆನ್ನು ನೋವು ಬರುವ ತನಕ ಹೊರಳಾಡಿ, ದಿಂಬಿನ ಹತ್ತಿಯನ್ನೆಲ್ಲ ಹಿಸುಕಿ ಹಿಸುಕಿ ನನ್ನನ್ನು ನಾನೇ ಕೇಳಿಕೊಂಡಿದ್ದೀನಿ. ಇಲ್ಲ ಇಲ್ಲ ಇವರೆಲ್ಲ ಈ ದೇಶದ ದೊಡ್ಡ ದೊಡ್ಡ ಹುದ್ದೆ, ಸ್ಥಾನಮಾನಗಳನ್ನು ಅಲಂಕರಿಸುತ್ತಾರೆ. ನೂರಕ್ಕೆ ನೂರೊಂದರಷ್ಟು ಗ್ಯಾರೆಂಟಿಯಾಗಿ. ಉಹು. ಆದರೆ ಯಾರ ಮೇಲೂ ಪ್ರೀತಿಯಿಲ್ಲದೆ, ಯಾರೊಡನೆಯೂ ಬೆರೆಯಲಾಗದ ಇಂತವರಿಂದ ಸಮಾಜಕ್ಕೆ ಏನೂ ಆಗೋಲ್ಲ ಅಂತಾನೆ ಅನಿಸುತ್ತೆ. ಇಲ್ಲ, ಇಲ್ಲ ನನಗೆ ಗೆಲ್ಲುವ ಆಸೆಯಿಲ್ಲದ್ದರಿಂದ, ನನ್ನದು ಛಲಹೀನ ವ್ಯಕ್ತಿತ್ವವಾದ್ದರಿಂದ ಹೀಗನ್ನಿಸುತ್ತಿದೆಯೆ ಅನ್ನುವ ಅನುಮಾನವೂ ಬರುತ್ತೆ. ಏನೇ ಆದರೂ ಇದನ್ನೆಲ್ಲ ನಾನೇ ಕೂಲಂಕಷ ಯೋಚಿಸಿ ತಿಳಕೊಬೇಕು."

ಈ ಪ್ರಾರ್ಥನಾಳ ತಂದೆ ರಂಗನಾಥ ಸ್ವತಃ ತನ್ನ ಮಗಳ ಪತ್ರ ಸೂಚಿಸುವ ಸ್ಪರ್ಧಾತ್ಮಕ ಜಗತ್ತಿಗೆ ಇಂದಿನ ಯುವ ಜನಾಂಗ ಹೇಗೆ ಮುಖಾಮುಖಿಯಾಗಬೇಕೆಂಬುದನ್ನು ಕಲಿಸುವ ಕೋಚಿಂಗ್ ಸೆಂಟರಿನ ಡೆಪ್ಯುಟಿ ಕರೆಸ್ಪಾಂಡೆಂಟ್. ತಾಯಿ ಕೂಡ ಶಿಕ್ಷಕಿ. ಹಾಗಾಗಿ ಮಗಳ ಈ ಆತ್ಮನಿರೀಕ್ಷೆಯ ಅವಧಿ ಎಂದರೆ ಅವರಿಗೆ ಅವಕಾಶಗಳಿಂದ ವಂಚಿತಳಾಗುವುದಷ್ಟೇ ಅನಿಸುತ್ತದೆ.

ಆದರೆ ಈ ಕಥಾನಕದ ಉದ್ದಕ್ಕೂ ತಾವು ಬದುಕಿ ಸವೆಸಿದ ಬದುಕಿನ ಕುರಿತ ಆತ್ಮನಿರೀಕ್ಷೆಯನ್ನು ಇಲ್ಲಿಯ ಪುಟ್ಟ ಕುಟುಂಬದ ಪ್ರತಿಯೊಂದು ಪಾತ್ರವೂ ತನ್ನದೇ ಆದ ರೀತಿಯಲ್ಲಿ ನಡೆಸುತ್ತದೆಂಬುದು ವಿಶೇಷ.

ರಂಗನಾಥನ ಇಡೀ ಬಂಧು ಬಳಗ ದಾಯಾದಿಗಳೆಲ್ಲ ಉಳಿದ ಅಣ್ಣತಮ್ಮಂದಿರ ಜೊತೆಗೇ ಮದ್ದೂರಿಗೆ ಹೋಗಿ ಮನೆ ದೇವರಾದ ಲಕ್ಷ್ಮೀ ನರಸಿಂಹಸ್ವಾಮಿ ದೇವರ ತೇರಿನ ದಿವಸ ಹಿರಿಯರ ಹೆಸರಿನಲ್ಲಿ ಸೇವೆ ಮಾಡಿಸುತ್ತಿದ್ದುದು, ದಾನ ಧರ್ಮ ಮಾಡುತ್ತಿದ್ದುದು ಎಲ್ಲ ಈಚೆಗೆ ಕಡಿಮೆಯಾಗಿದೆ. ಹೇಗಿದ್ದರೂ ಈಗ ಕೊರಿಯರ್‌ನಲ್ಲಿ ಪ್ರಸಾದ, ಕುಂಕುಮವೆಲ್ಲ ಬರುತ್ತದೆ. `ಎಲ್ಲರಿಗೂ ಏನೋ ಕೆಲಸ, ಏನೋ ತರದೂದು, ಎಲ್ಲೋ ಪ್ರಯಾಣ, ಏನೋ ನೆನಗುದಿ; ಯಾವುದಕ್ಕೋ ತಹತಹ. ಒಟ್ಟಿನಲ್ಲಿ ನೆಮ್ಮದಿಯಿಂಬುದು ಆಕಾಶ ಬುಟ್ಟಿ.'

ಕೊಡೈಕೆನಾಲ್‍ನಿಂದ ಕಾರಿನಲ್ಲಿ ವಾಪಾಸ್ಸು ಬರುತ್ತಿರುವಾಗ ಹಾದಿಯಲ್ಲಿ ಕರೂರ್ ಹತ್ತಿರ ನಡುಹಗಲಿನಲ್ಲೇ ನಡೆದ ಒಂದು ಅಪಘಾತದ ಸನ್ನಿವೇಶ ಎಲ್ಲರ ಮನಕಲಕುವಂತಿರುತ್ತದೆ. ಕಣ್ಣು ಬಿಡಲಾಗದ ಪ್ರಖರ ಬಿಸಿಲಿನಲ್ಲಿ ಬಿಸಿಲಿಗೆ ಹೊಳೆಯುತ್ತಿರುವ ಟಾರಿನ ಝಳದ ಹಿನ್ನೆಲೆಯಲ್ಲಿ ರುಂಡ ಮುಂಡವೆಲ್ಲ ಚೆಲ್ಲಾಪಿಲಿಯಾಗಿ ರಸ್ತೆ ತುಂಬಾ ಹರಡಿಕೊಂಡು ವಿಚಿತ್ರವಾಗಿ ಹೊಳೆಯುತ್ತಾ ಇರುವ ದೇಹಗಳು, ಐಬ್ಬರು ಪುಟ್ಟ ಹೆಣ್ಣುಮಕ್ಕಳ ಜಡೆ, ಝುಮಕಿ, ಉಂಗುರ...ಎಂದೆಲ್ಲ ವಿವರಿಸುವಾಗ ಇದೇ ಪ್ರಾರ್ಥನಾ ತಾನು ಈಗಲೇ ಹೋಗಿ ಆ ಮಕ್ಕಳನ್ನೆಲ್ಲ ನೋಡಬೇಕು ಎಂದು ಹಠ ಹಿಡಿಯುತ್ತಾಳೆ. ತಂದೆ ನೀನು ತುಂಬಾ ಚಿಕ್ಕವಳು, ಅದನ್ನೆಲ್ಲ ನೋಡಬಾರದು ಎಂದು ಗದರುತ್ತಾನೆ. ಈ ಸನ್ನಿವೇಶ ಅವಳ ಮನಸ್ಸಿನಲ್ಲಿ ಎಂಥಾ ಪರಿಣಾಮ ಬೀರುತ್ತದೆಂದರೆ ಅವಳು ಮುಂದೆ "Niether they were young" ಎನ್ನುವ ಪ್ರಬಂಧ ಬರೆಯುತ್ತಾಳೆ. ಪ್ರಾರ್ಥನಾಳ ವ್ಯಕ್ತಿತ್ವದಲ್ಲೇ ಇರುವ ಈ ಮಾನವೀಯ ಅನುಕಂಪದ ಸೆಲೆಯನ್ನು ಬಾಲ್ಯದ ಒಂದು ಘಟನೆಯಿಂದಲೇ ರಂಗನಾಥ ಕೂಡ ಗಮನಿಸುತ್ತಾನಾದರೂ ಅವನಿಗೆ ತನ್ನ ಮಗಳು ಯಾತಕ್ಕಾಗಿ ಆಧುನಿಕ ಜಗತ್ತಿನ ಸಹಜ ವಿದ್ಯಮಾನಗಳಿಂದ ವಿಮುಖಳಾಗುತ್ತಿದ್ದಾಳೆಂಬ ಸೂಕ್ಷ್ಮ ಅರಿವಿಗೆ ನಿಲುಕುವುದಿಲ್ಲ. ನಿಲುಕದಂತೆ ಬಹುಷಃ ರಂಗನಾಥ ತೊಡಗಿಕೊಂಡಿರುವ ಬದುಕು ಮಾಡಿರಬಹುದೆ ಎಂಬುದು ಇಲ್ಲಿನ ಹಲವಾರು ಅನುಮಾನಗಳೊಂದಿಗೇ ಉಳಿಯುವ ಒಂದಾನೊಂದು ಅನುಮಾನ. ಕಾದಂಬರಿ ಉದ್ದಕ್ಕೂ ಕೆಲವು ಅಂತಿಮ ತೀರ್ಮಾನಗಳಿಲ್ಲದ ಅನುಮಾನ, ಗೊಂದಲಗಳ ಎಳೆಯನ್ನು ಹಾಗೆಯೇ ಬಿಟ್ಟುಬಿಡುತ್ತದೆ. ಸಹಜವಾಗಿಯೇ ಇವುಗಳಿಗೆ ಉತ್ತರಿಸುವುದರಿಂದ ಕಾದಂಬರಿಯ ಪ್ರಶ್ನೆಗಳಿಗೆ ಮಿತಿ ತೊಡಿಸಿದಂತಾಗುತ್ತಿತ್ತು. ಹಾಗಾಗಿಯೂ ಇಲ್ಲಿನ ಪ್ರಶ್ನೆಗಳು ಜೀವಂತವಾಗಿ ಉಳಿದು ನಮ್ಮನ್ನು ಓದಿನ ನಂತರವೂ ಕಾಡುತ್ತ ಉಳಿಯುತ್ತವೆ.

ಕಾದಂಬರಿಯ ಹೆಸರು ಕಾಲಜಿಂಕೆ. ಜಿಂಕೆ ಎಂಬುದು ವೇಗವನ್ನು, ಮಾಯಾಮೃಗದ ಭ್ರಮೆಯನ್ನು, ಎಲ್ಲ ವೇಗ ಕೊನೆಯಾಗಬಹುದಾದ ಮೃಗಜಲದ ನಿರಾಶಾದಾಯತ್ವವನ್ನು ಪ್ರತಿನಿಧಿಸುತ್ತ ಮನಸ್ಸಿನಲ್ಲಿ ಕಾಲ ಎಂಬ ನಿಷ್ಠುರ ಸಂಗತಿ ಯಾವುದನ್ನು ಎದುರಿಸ ಬೇಕಾಗಿದೆ ಎಂಬುದರ ಕುರಿತ ಅಸ್ಪಷ್ಟ ಬಿಂಬವೊಂದನ್ನು ಮೂಡಿಸಿಬಿಡುತ್ತದೆ. ವಿಚಿತ್ರವೆಂದರೆ ಕಾಲಕ್ಕೆ ಮೂರು ಗತಿಗಳಿವೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತು ಅದರ ಗತಿ. ಮೂರೂ ಕಡೆ ಒಂದು ವಿಧವಾದ ವೇಗ, ಆವೇಗ ಇತ್ತು, ಇದೆ ಮತ್ತು ಇರುತ್ತದೆ ಕೂಡ. ಕಾದಂಬರಿ ಇದನ್ನು ಗುರುತಿಸಿರುವುದು ಮತ್ತು ಕಲಾಪೂರ್ಣವಾಗಿ ಚಿತ್ರಿಸಿರುವುದು ಮನಸ್ಸಿಗೆ ಬರುತ್ತದೆ. ಇಲ್ಲಿನ ನಾರಾಯಣಮೂರ್ತಿಗಳ ರಾಜಕೀಯ ಬದುಕಿನ ಏಳು ಬೀಳು, ಅವರ ಎದ್ದು ಕಾಣುವ ಮತ್ತು ಅಂತರಂಗದ ಅಜೆಂಡಾಗಳು, ಅವರ ಬದುಕಿನಲ್ಲಿ ಒಬ್ಬೊಬ್ಬರೇ ಹಿತೈಷಿಗಳೂ ಮತ್ತು ಹಿತಶತ್ರುಗಳೂ ಆಗಿ ಬದಲಾಗುತ್ತ ಕಲಿಸುವ ಪಾಠಗಳು ಒಂದು ಭೂತಕಾಲದ ಚಿತ್ರ ನೀಡಿದರೆ ಕೇವಲ ಇಪ್ಪತ್ತು ಸಾವಿರ ರೂಪಾಯಿಗೆ ಇನ್ನೂರು ಮುನ್ನೂರು ವರ್ಷಗಳಿಂದ ಹಿರಿಯರು ಬಾಳಿ ಬದುಕಿದ ಹಳ್ಳಿಯ ಮನೆಯನ್ನು ಮಾರಬಾರದಿತ್ತು ಎನ್ನುವ ಪ್ರರ್ಥನಾ ಮತ್ತು ದೇವರು, ದಿಂಡರು, ಜ್ಯೋತಿಷ್ಯ, ಹೋಮ, ಹವನ, ಪೂಜೆ, ಪುನಸ್ಕಾರ, ಜಾತಕ ಇವುಗಳಲ್ಲಿ ನಂಬಿಕೆ ಇರಲಿ, ಕುತೂಹಲ ಮೂಡುವಂತಹ ವಾತಾವರಣ ಕೂಡ ನಮ್ಮ ಮನೆಯಲ್ಲಿರಲಿಲ್ಲ ಎಂದು ಆಪಾದಿಸುವ ಮಗ ವಿಕ್ರಂ ಇಬ್ಬರನ್ನೂ ಇಬ್ಬರ ಆಪಾದನೆಗಳನ್ನೂ ಎದುರಿಸುವ ರಂಗನಾಥ ಅದೇ ಭೂತಕಾಲದ ಇನ್ನೊಂದು ಪಾತಳಿಯನ್ನು ಕಾಣಿಸುತ್ತಾನೆ ನಮಗೆ. ಇಲ್ಲಿಯೇ ಭೂವರಾಹ ಮೂರ್ತಿಯ ಪೂಜೆ ನಿಲ್ಲಿಸಿ ಅದನ್ನು ಕಿತ್ತು ಶೋಕೇಸಿನಲ್ಲಿಡುವ "ದಿವ್ಯ"ದ ಘನಶ್ಯಾಮನನ್ನೂ, ದೈವದ ಸೆಮಿ ಅವತಾರವೇ ಆದ ಮಂಗಳ ಗೌರಿಯನ್ನೂ ನೆನೆಯುವುದು ಉತ್ತಮ.

ವರ್ತಮಾನಕ್ಕೆ ಬಂದರೆ ಅಲ್ಲಿ ಎಷ್ಟೊಂದು ಚಿತ್ರಗಳಿವೆ! ಸ್ವತಃ ಯುವಜನಾಂಗವನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುತ್ತಿರುವ ರಂಗನಾಥ, ಜಗತ್ತನ್ನೇ ರಿಯಲ್ ಎಸ್ಟೇಟ್ ರಂಗಭೂಮಿಯನ್ನಾಗಿಸಿಬಿಟ್ಟಿರುವ ಸ್ವಾಮಿನಾಥ, ಪವಿತ್ರಾ, ಕೊನೆಯಲ್ಲಿ ಬದಲಾದರೂ ಅಂಥದೇ ಜೀವನಶೈಲಿಯಲ್ಲಿದ್ದ ಶಂಕರ, ಯಾವುದರಿಂದ ದೂರವಿರಬಯಸಿದ್ದನೋ ಅಂಥದ್ದಕ್ಕೇ ಬಲಿಯಾಗಲಿರುವ ವಿನೋದ್...

ಭವಿಷ್ಯತ್ತಿನ ಕಡೆ ಮುಖ ಮಾಡಿನಿಂತ ಪಾತ್ರ ಪ್ರಾರ್ಥನಾ. ಇವಳಿಗೆ ಪರಂಪರೆಯ ಮೌಲ್ಯಗಳ ಬಗ್ಗೆ ಮತ್ತು ಕಳಚಿಕೊಳ್ಳಬೇಕಾದ ಅದರ ಜಡತ್ವಗಳ ಬಗ್ಗೆ ಸ್ಪಷ್ಟ ಅರಿವಿದೆ. ಅವಳ ಮನಸ್ಸಿನಲ್ಲಿ ನಾರಾಯಣಮೂರ್ತಿಗಳ ಬಗ್ಗೆ, ಸ್ವಾಮಿನಾಥನ ಬಗ್ಗೆ ಮತ್ತು ರಜನಿ ರಾಯ್ ಬಗ್ಗೆ ನಿಖರವಾದ ಅಭಿಪ್ರಾಯಗಳಿವೆ. ಹಾಗೆಯೇ ಉದುರುವ ಎಲೆ, ಹರಿವ ನೀರು, ಚಲಿಸುವ ಮೋಡ ಮತ್ತು ಹಾರುವ ಹಕ್ಕಿಗಳನ್ನು ಗಮನಿಸಿ ಬದುಕಿಗೆ ಬೇಕಾದದ್ದೆಲ್ಲವನ್ನೂ ಕಲಿಯಬಹುದೆಂಬುದನ್ನು ಅಚ್ಚರಿಯಿಂದಲೇ ಅರಿತಿದ್ದಾಳೆ.

ಇಲ್ಲಿಯೇ ರಂಗನಾಥನ ಚಿಕ್ಕಮ್ಮನ ಕತೆ ಬರುತ್ತದೆ. ಪ್ರಾರ್ಥನಾ ಹುಡುಕಿಕೊಂಡು ಹೋಗುವ ಹಳ್ಳಿಯ ಮನೆ, ಆಸ್ತಿ ಮತ್ತು ಅದರ ಸಲುವಾಗಿಯೇ ಹುಟ್ಟಿಕೊಳ್ಳುವ ಜಗಳದಿಂದ ಶಾಪ ಹಾಕುತ್ತಲೇ ಬೇರೆ ಹೋದ ಚಿಕ್ಕಮ್ಮ, ಅಂದಿನಿಂದಲೂ ಅರ್ಧ ಮರದಲ್ಲಿ ಮಾತ್ರ ಹಣ್ಣು ಬಿಡುವ ದಾಳಿಂಬೆ ಮರ, ಮನೆ, ಆಸ್ತಿ ಮಾರಿದ ಮೇಲೆ ಪೂರ್ತಿ ಮರದ ತುಂಬ ಬಿಡುವ ಹೂ ಹಣ್ಣುಗಳ ರೂಪಕ ಎಲ್ಲ ಇಲ್ಲಿದೆ. ಕಾದಂಬರಿಯ ಕೊನೆಯಲ್ಲಿ ಆಕಾಶದಿಂದ ಇಳಿಯುವ ರಂಗನಾಥನ ತಂದೆ ತಾಯಿ ಕೂಡ ಕೇಳುವ ಪ್ರಶ್ನೆಗಳು ರಂಗನಾಥನ ಚಿಕ್ಕಮ್ಮನ ಕುರಿತಾಗಿ, ಅವಳ ಮಗ, ಸೊಸೆಯ ಕುರಿತಾಗಿಯೇ ಇರುವುದನ್ನು ಗಮನಿಸಬೇಕು. ಪ್ರಾರ್ಥನಾ ಕೂಡ ಆ ಹಳ್ಳಿ ಮನೆಯಲ್ಲಿ ಸಿಕ್ಕಿದ ಕಾಗದ ಪತ್ರಗಳನ್ನಿಟ್ಟುಕೊಂಡು ಕಾದಂಬರಿ ಬರೆಯಲು ತೊಡಗುತ್ತಾಳೆ. ಬರೆಯುತ್ತ ಬರೆಯುತ್ತ ಅವಳಿಗೆ ಸ್ಪಷ್ಟವಾಗುವ ಒಂದು ವಿಚಾರ ಬಹಳ ಮುಖ್ಯವಾದದ್ದು. ಅವಳು ನೇರವಾಗಿ ರಂಗನಾಥನನ್ನು ದೂರುತ್ತಾಳೆ. "ನೀನು ಅಮ್ಮನನ್ನು ತುಂಬಾ ಎಕ್ಸ್‌ಪ್ಲಾಯಿಟ್ ಮಾಡಿದ್ದೀಯೆ". ಇದು ಎಲ್ಲರೂ ತಿಳಿದಂಥ ಶೋಷಣೆಯಲ್ಲ. ಆದರೆ ಎಲ್ಲರೂ ತಿಳಿದೋ ತಿಳಿಯದೆಯೋ ಮಾಡುತ್ತಲೇ ಬಂದ ಶೋಷಣೆ ಎಂಬುದಂತೂ ಖಂಡಿತ. ಹಾಗಾಗಿಯೇ ರಂಗನಾಥನಿಗೆ ಪತ್ರ ಓದಿ ಮುಗಿಸುತ್ತಲೇ ಹೊಟ್ಟೆಯಲ್ಲಿ ಕಲಸಿದಂತಾಗಿ ನೀನು ಸಾಯಿ, ನೀನು ಸಾಯಿ ಎಂದು ಕೂಗಿ ಕೂಗಿ ಹೇಳಿದಂತಾಗುವುದು. ರಂಗನಾಥನಿಗೆ ಅರಿಯುವ ಸೂಕ್ಷ್ಮ ಇದೆ, ಆದರೆ ಅರ್ಥಮಾಡಿಕೊಳ್ಳಬಲ್ಲ ವ್ಯವಧಾನ ಕಡಿಮೆ. ನಿಧಾನಗತಿಯದ್ದು. ಪ್ರಾರ್ಥನಾಳ ಮುಂದಿನ ಮಾತುಗಳು ಹೀಗಿವೆ.

"ಇದರಿಂದೆಲ್ಲ ಮುಖ್ಯವಾಗಿ ನಿನ್ನ ಬೆಳವಣಿಗೆಗೆ, ಆರೋಗ್ಯಕ್ಕೇ ತೊಂದರೆಯಾಗಿದೆ. ಯಾವಾಗಲೂ ಜೊತೆಯಲ್ಲಿರುವವರು, ಆತ್ಮೀಯರಾಗಿರುವವರು ನಮ್ಮಷ್ಟೇ ಅಥವಾ ನಮಗಿಂತ ಹೆಚ್ಚಿಗೆ ಬೆಳೆದಿದ್ದರೆ ಮಾತ್ರ ನಾವು ಅಂತರಂಗದಲ್ಲಿ ಗಟ್ಟಿಯಾಗಬಹುದು. ಇಂತಹ ಅವಕಾಶವನ್ನು ಇಬ್ಬರೂ ಕಳೆದುಕೊಂಡಿರುವಿರಿ."

ಪ್ರಾರ್ಥನಾ ಹೇಳುವ ಶೋಷಣೆ ಇದು. ಇದು ಬರಿಯ ಗಂಡ ಹೆಂಡಿರ ಸಂಬಂಧಕ್ಕೆ ಮಾತ್ರ ಅನ್ವಯಿಸುವುದಲ್ಲ ಮತ್ತೆ ಎಂಬುದೇ ಈ ಮಾತಿನ ಅರ್ಥವನ್ನು ವಿಸ್ತರಿಸುವಂಥಾದ್ದು. ಇಂಥ ಕಾರಣಗಳಿಗಾಗಿಯೇ ಸತ್ಯನಾರಾಯಣರ ಈ ಕಾದಂಬರಿ ಕೇವಲ ಜಾಗತೀಕರಣ ಅಥವಾ ಸಮಕಾಲೀನ ಕುಟುಂಬದೊಳಗಿನ ತಲೆಮಾರಿನ ಅಂತರ ಸೃಷ್ಟಿಸುವ ಸಮಸ್ಯೆಗಳಾಚೆ ಬೆಳೆಯುತ್ತದೆ, ಬೆಳೆಯುತ್ತಲೇ ಉಳಿಯುತ್ತದೆ. ವಿಕ್ರಂ ಎತ್ತುವ ಪ್ರಶ್ನೆಗಳಿಗಾಗಲೀ, ಪ್ರಾರ್ಥನಾ ಎತ್ತುವ ಪ್ರಶ್ನೆಗಳಿಗಾಗಲೀ ಕಾದಂಬರಿ ನೇರವಾಗಿ ಪ್ರತಿಕ್ರಿಯಿಸುವುದೇ ಇಲ್ಲ. ಆ ಪ್ರಶ್ನೆಗಳಿಗೆ ರಂಗನಾಥ ಅಥವಾ ಅವನ ಹೆಂಡತಿ ಸುಧಾ ಮುಖಾಮುಖಿಯಾಗುವುದು ಕೂಡ ಕೇವಲ ಭಾವನಾತ್ಮಕ ನೆಲೆಯಲ್ಲಿಯೇ ಹೊರತು ವೈಚಾರಿಕವಾಗಿ ಅಥವಾ ತಾರ್ಕಿಕವಾಗಿ ಅವರು ಏನನ್ನೂ ಸಮರ್ಥಿಸಿಕೊಳ್ಳುವುದೂ ಇಲ್ಲ, ನಿರಾಕರಿಸುವುದೂ ಇಲ್ಲ ಎಂಬುದನ್ನು ಕಾಣಬಹುದು. ಬದಲಿಗೆ ಬೇರೆ ಕೆಲವು ಹೊರಗಿನ ಕಥಾನಕಗಳು, ಘಟನೆಗಳು ಈ ಸಂಘರ್ಷದ ಇನ್ನೊಂದು ಮುಖವನ್ನು ನಮಗೆ ಕಾಣಿಸುತ್ತ ಓದುಗನನ್ನು ಮುನ್ನಡೆಸುವಂತಿವೆ.

ರಜನಿ ರಾಯ್ ಈ ಕಾದಂಬರಿಗೆ ಒದಗಿಸುವ ಬಹುಮುಖ್ಯ ಆಯಾಮ ವಿಭಿನ್ನವಾದದ್ದು. ರಂಗನಾಥ ಮತ್ತು ಅವನ ಓರಗೆಯವರ ಬದುಕಿನೊಂದಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳ ವಕ್ತಾರರಾಗಿ ಸಂಘರ್ಷಗಳನ್ನೊಡ್ಡುವ ಅನೇಕ ಪಾತ್ರಗಳಿಗೆ ಹೋಲಿಸಿದರೆ ರಜನಿ ರಾಯ್ ನಿರ್ವಹಿಸುವ ಭೂಮಿಕೆ ಅವಕ್ಕೆಲ್ಲ ತೀರ ಹೊರತಾದದ್ದು. ಆದರೂ ಇದೆಲ್ಲದ್ದಕ್ಕೆ ಹೇಗೋ ಸಂಬಂಧಿಸಿದ್ದು.

ತುಂಬ ಪ್ರಭಾವ-ಸಂಪರ್ಕವೆಲ್ಲ ಇದ್ದ, ದೊಡ್ಡ ಅಭಿವೃದ್ಧಿ ಬ್ಯಾಂಕೊಂದರ ಅಂಗ ಸಂಸ್ಥೆಯಲ್ಲಿ ದುಡಿಯುತ್ತಿದ್ದ ರಜನಿ ಕ್ರಮೇಣ ಸಾಮಾಜಿಕ ಕಾರ್ಯಕರ್ತೆಯಾಗಿ ರೈಟ್ ಟು ಲೈವ್ಲಿಹುಡ್ ಪ್ರಶಸ್ತಿ ಪಡೆಯುವವರೆಗೆ ಬೆಳೆದವರು. ಅವರ ಚಿಂತನಾ ಕ್ರಮ, ಬದುಕಿನಲ್ಲಿ ಅವರು ಯಾವುದಕ್ಕೆ ಮಹತ್ವ ನೀಡುತ್ತಾರೆಂಬ ಅವರ ಜೀವನ ದೃಷ್ಟಿ, ಇಂದಿನ ಯುವ ಜನಾಂಗದ ಆಸಕ್ತಿ, ಅವರ ಸ್ಪರ್ಧಾ ಮನೋಭಾವ, ಅದಕ್ಕಾಗಿ ಅವರು ನಡೆಸುವ ಕಸರತ್ತು ಮತ್ತು ಕ್ರಮೇಣ ಅವರು ಈ ಬಗೆಯ ಜೀವನ ಶೈಲಿಯಿಂದಲೇ ಸುಸ್ತಾಗಿ ಬಿಡಬಹುದಾದ ಆತಂಕ ಎಲ್ಲ ಸ್ವಲ್ಪ ವಿವರವಾಗಿಯೇ ಕಾದಂಬರಿಯಲ್ಲಿ ಬಂದಿದೆ. "ಪ್ರತಿಯೊಬ್ಬರಿಗೂ ಅವರವರ ವೃತ್ತಿಗೂ ಸಮಾಜಕ್ಕೂ ಏನು ಸಂಬಂಧ, ತನಗೂ ಸಮಾಜದ ಒಟ್ಟು ಒಳಿತಿಗೂ ಏನು ಸಂಬಂಧ ಅಂತ ಗೊತ್ತಾಗಿದ್ದರೆ ಸಾಕು" ಎಂಬ ಅವರ ಮಾತುಗಳಿಗೂ "ಯಾವುದೇ ವೃತ್ತಿ ಆಗಲಿ, ಆಸಕ್ತಿ ಆಗಲೀ ನಲವತ್ತು-ಐವತ್ತು ವರ್ಷ ನಮ್ಮ ಗಮನವನ್ನೆಲ್ಲ ಉಳಿಸಿಕೊಳ್ಳುತಾ? ಹಾಗಲ್ಲದೇ ಹೋದರೆ ನಾವು ಮೊದಲು ಏನೋ ಒಂದು ಆಯ್ಕೆ ಮಾಡಿ ಕ್ರಮೇಣ ಅದರಲ್ಲಿ ಆಸಕ್ತಿ ಕಳೆದುಕೊಂಡು, ಅಮೇಲೂ ಅದಕ್ಕೆ ಗಂಟು ಹಾಕಿಕೊಂಡು ಬದುಕಬೇಕಾ?" ಎಂಬ ಪ್ರಾರ್ಥನಾಳ ಪ್ರಶ್ನೆಗೂ ಸಂಬಂಧ ಇದೆ ಅನಿಸುತ್ತದೆ. ಆರಂಭದಲ್ಲೇ ಗಮನಿಸಿದ ಪ್ರಾರ್ಥನಾಳ ಪತ್ರದಲ್ಲಿ ಬರುವ "ಆದರೆ ಯಾರ ಮೇಲೂ ಪ್ರೀತಿಯಿಲ್ಲದೆ, ಯಾರೊಡನೆಯೂ ಬೆರೆಯಲಾಗದ ಇಂತವರಿಂದ ಸಮಾಜಕ್ಕೆ ಏನೂ ಆಗೋಲ್ಲ ಅಂತಾನೆ ಅನಿಸುತ್ತೆ" ಎಂಬ ಮಾತುಗಳನ್ನು ನೋಡಿ. ರಜನಿ ಮೇಡಂಗೆ ತನ್ನ ಕೆಲಸದಲ್ಲಿರುವ ಬದ್ಧತೆಗಾಗಿಯಾದರೂ ಪ್ರಾರ್ಥನಾ ಅವರನ್ನು ಮೆಚ್ಚುತ್ತಾಳೆ, ಅವರ ವಿಪರೀತ ಬುದ್ಧಿವಾದ ಇಷ್ಟವಾಗದಿದ್ದರೂ.

ಕಾದಂಬರಿಯಲ್ಲಿ ಎರಡು ಕಡೆ ಜಿಂಕೆಯ ಪ್ರವೇಶವಿದೆ. ರಜನಿ ಮೇಡಮ್ಮನ್ನು ರಂಗನಾಥ ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಒಂದು ಜಿಂಕೆ ಕಂಡಿತೇ ಅಥವಾ ಅದನ್ನು ಕಂಡ ಭ್ರಮೆ ತಮಗಾಯಿತೇ ಎಂಬುದೂ ತಿಳಿಯದ ಹಾಗೆ, ತೀರ ದೂರದಲ್ಲಿ, ಬಿಸಿಲಿನ ಝಳದಲ್ಲಿ ಮಿಂಚಿನ ವೇಗದಲ್ಲಿ ನೆಗೆನೆಗೆದು ಓಡುತ್ತ, ಇಗೋ ನೋಡಿದೆ ಎನ್ನುವಷ್ಟರಲ್ಲಿ ಮಾಯವಾಗುತ್ತ, ಮಾಯವಾಯಿತೆನ್ನುವಾಗ ಇನ್ನೆಲ್ಲೊ ಮಿಂಚುತ್ತ ಭ್ರಮೆಯೋ ನಿಜವೋ ತಿಳಿಯದ ಹಾಗೆ ಜಿಂಕೆಯ ಪ್ರವೇಶವಿದೆ. ಮುಂದೆ ರಂಗನಾಥ ಇದೇ ರಜನಿ ಮೇಡಂ ಜೊತೆ ಮೇಸನಾದ ಅವರ ಮನೆಯಲ್ಲೇ ಮಾತನಾಡುತ್ತ ಕುಳಿತಿದ್ದ ಸಂದರ್ಭದಲ್ಲಿ ಕುರಿಯೊಂದನ್ನು ಓಡಿಸಿಕೊಂಡು ಜಿಂಕೆಯೊಂದು ಪ್ರವೇಶಿಸುತ್ತದೆ. ಇಲ್ಲಿ ಜಿಂಕೆ ಮನೆವಾರ್ತೆಯ ಪ್ರಾಣಿಗಳು, ಜಾನುವಾರುಗಳ ಹಾಗೆ ಎಂಬ ವಿವರಣೆಯೂ ಸಿಗುತ್ತದೆ. ಇಲ್ಲಿನ ಬಿಷ್ಣೋಯಿಗಳಿಗೆ ಜಿಂಕೆಗಳು ಶಿವ, ವಿಷ್ಣು, ಗಣೇಶ ಎಲ್ಲವೂ, ಅಷ್ಟು ಪೂಜ್ಯ ಎಂಬ ವಿವರವೂ. ಎರಡೂ ಘಟನೆಗಳಿಗೆ ನಾಲ್ಕು ವರ್ಷಗಳಷ್ಟು ಅಂತರವಿದೆ. ಮೊದಲ ಘಟನೆಯ ವೇಳೆಗೆ ರಜನಿ ಮೇಡಂ ಸಮಾಜ ಸೇವಾ ಕಾರ್ಯಕರ್ತೆಯಾಗಿ ಹೆಚ್ಚೇನೂ ಪ್ರಸಿದ್ಧಿ ಪಡೆದಿರುವಂತೆ ಕಾಣುವುದಿಲ್ಲ. ಆದರೆ ಎರಡನೆಯ ಘಟನೆಯ ವೇಳೆ ಆಕೆ ತುಂಬ ಮಾಗಿದಂತೆ, ತನ್ನ ಕಾರ್ಯಕ್ಷೇತ್ರದಲ್ಲಿ ಬಹಳ ಮುಂದೆ ಸಾಗಿಬಿಟ್ಟಿರುವಂತೆ, ನಡುವಿನ ಕಾಲಮಾನ ಕೇವಲ ನಾಲ್ಕು ವರ್ಷ ಅಲ್ಲವೇನೋ ಎಂಬಂತಿದೆ. ಆಕೆಗೆ ರೈಟು ಲೈವ್ಲಿಹುಡ್ ಪ್ರಶಸ್ತಿ ಕೂಡಾ ಬಂದಿರುತ್ತದೆ. ಇಂಥಲ್ಲಿ ಸತ್ಯನಾರಾಯಣರು, ಕಾಲ ಮತ್ತು ಬದುಕಿನ ಸಾರ್ಥಕತೆಯನ್ನು ಎರಡೂ ಒಂದು ಮಿಂಚಿನ, ಮಾಯಕದ ಜತೆಯೋಟದಲ್ಲಿ ತೊಡಗಿರುವಂತೆ ಕಾದಂಬರಿಯ ಉದ್ದಕ್ಕೂ ತೋರಿಸುತ್ತ, ಈ ಓಟದಲ್ಲಿ ಒಂದು ಇನ್ನೊಂದನ್ನು ಎಲ್ಲಿ ಹೇಗೆ ಸಂಧಿಸುವುದೋ ಎಂಬ ಉದ್ವೇಗವನ್ನೆ ಚಿತ್ರಿಸುವುದನ್ನು ಗುರುತಿಸಬಹುದಾಗಿದೆ. ಕಾದಂಬರಿಯ ಅಂತಃಸ್ಸತ್ವ ಹೀಗೆ ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ದುಡಿಯುತ್ತ, ಓದುಗನನ್ನು ಬಹುಕಾಲ ಕಾಡುತ್ತ ಉಳಿಯುತ್ತದೆ. ಇಂಥ ಒಂದು ವಿಶಿಷ್ಟ ಅನುಭವಕ್ಕೆ ಎದುರಾಗುವುದಕ್ಕಾಗಿಯಾದರೂ ಇದೊಂದು ಓದಲೇ ಬೇಕಾದ ಕಾದಂಬರಿ.
(ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ ಲೇಖನ)

2 comments:

Anonymous said...

ನಮಸ್ತೇ.

ನಿಜಕ್ಕೂ ಇದು ಕನ್ನಡದ ವೈಶಿಷ್ಟ್ಯಪೂರ್ಣ ಬ್ಲಾಗ್. ಎಷ್ಟೊಂದು ಓದು! ಎಷ್ಟೊಂದು ಮಾಹಿತಿಗಳು!!
ನಾನಂತೂ ಇದರ ಸಂಪೂರ್ಣ ಪ್ರಯೋಜನ ಪಡ್ಕೊಳ್ತಿದೇನೆ.
ತುಂಬಾ ತುಂಬಾ ಥ್ಯಂಕ್ಸ್ ನಿಮಗೆ.

ವಂದೇ,
ಚೇತನಾ ತೀರ್ಥಹಳ್ಳಿ

ನರೇಂದ್ರ ಪೈ said...

ಆತ್ಮೀಯ ಚೇತನಾ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಓದುವ ಹವ್ಯಾಸ ಬೆಳೆಯಲಿ, ಒಳ್ಳೊಳ್ಳೆ ಪುಸ್ತಕಗಳು ನಮ್ಮನ್ನೆಲ್ಲ ಬೆಳೆಸಲಿ, ಪೊರೆಯಲಿ.