
ಇದು ಒಬ್ಬ ಹದಿನೈದು ಹದಿನಾರರ ಹುಡುಗಿಯ ಆತ್ಮನಿವೇದಕ ಶೈಲಿಯಲ್ಲಿರುವ ಕಾದಂಬರಿ. ಮೂಲತಃ ನೈಜೀರಿಯಾದ ಆಫ್ರಿಕನ್ ಬುಡಕಟ್ಟಿಗೆ ಸೇರಿದ ಈ ಹುಡುಗಿಯ ತಂದೆ ಮತಾಂತರಗೊಂಡಿರುವ ಕಟ್ಟಾ ಕ್ಯಾಥಲಿಕ್ ಕ್ರಿಶ್ಚಿಯನ್. ಈ ಕಟ್ಟಾ ಧಾರ್ಮಿಕರ ಉಪಟಳಗಳು, ತಿಕ್ಕಲುತನಗಳು ನಮಗೆ ಪರಿಚಯವಾಗುವ ಬಗೆಯೇ ಒಂದು ಚೋದ್ಯ. ವಿಭಿನ್ನ ಮನೋಧರ್ಮದವರಿಗೆ ವಿಭಿನ್ನವಾಗಿ ಕಾಣುವ ಇಂಥವರ ವ್ಯಕ್ತಿತ್ವ ಚಿತ್ರಣದಲ್ಲಿ ಈ ಕಾದಂಬರಿಯ ಕಲಾತ್ಮಕ ನೇಯ್ಗೆ ಮೆಚ್ಚುಗೆ ಹುಟ್ಟಿಸುವಂತಿದೆ. ಭೂತ-ದೈವಗಳನ್ನು ನಂಬುವ ಮನೆತನದಿಂದಲೇ ಬಂದಿರುವ ಈತ ಈಗ ಅವಕ್ಕೆಲ್ಲ ಬೆನ್ನು ಹಾಕಿ ಪಾಶ್ಚಾತ್ಯ ಸಂಸ್ಕೃತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವುದು ಮಾತ್ರವಲ್ಲ ತನ್ನ ಹೆಂಡತಿ ಮಕ್ಕಳನ್ನು ಕೂಡ ಅದೇ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾನೆ. ಈತನ ತಂದೆ ಇನ್ನೂ ದೈವ-ಸ್ಪಿರಿಟ್ಗಳನ್ನು ನಂಬುವ, ಈ ಮಗನ ದ್ರಷ್ಟಿಯಲ್ಲಿ ಒಬ್ಬ ಹಿದನ್ ಅನಿಸಿಕೊಂಡಿರುವ ಮುದಿಯ. ಈ ಮುದಿಯಾಗಿ ಸಾಯಲು ಬಿದ್ದಿರುವ ಬಡ ತಂದೆಯನ್ನೇ ಆತ ಕ್ರಿಶ್ಚಿಯನ್ನಾಗಿ ಕನ್ವರ್ಟ್ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ತನ್ನ ಮನೆಯ ಕಾಂಪೌಂಡಿನ ಒಳಗೆ ಕಾಲಿಡಲು ಬಿಡದ ಮಗ ಭಾರೀ ಸಿರಿವಂತ. ಹಲವಾರು ಫ್ಯಾಕ್ಟರಿಗಳ, ಬಂಗಲೆ, ಕಾರುಗಳ ಒಡೆಯ.
ಈ ಸಿರಿವಂತ ತನ್ನ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಮತ್ತು ಕರ್ಮಠ ಧಾರ್ಮಿಕ ರೀತಿನೀತಿಯಲ್ಲಿ ಬೆಳೆಸಿರುತ್ತಾನೆ. ಈತ ನಿಷ್ಠುರವಾದ Puritan concept ಗೆ ತನ್ನನ್ನು ತಾನು surrender ಮಾಡಿಕೊಂಡವನು. ಮಡಿ-ಮೈಲಿಗೆ, ಪಾಪ-ಪುಣ್ಯ, ಸ್ವರ್ಗ-ನರಕ ಇವುಗಳ ಕುರಿತಂತೆ ತನ್ನದೇ ಆದ ಪ್ರಾಮಾಣಿಕವೂ ಅಚಲವೂ ಆದ ನಂಬುಗೆ ಇರುವ ಈತ ತನ್ನ ಮಕ್ಕಳನ್ನೂ ಅದೇ ಹಾದಿಯಲ್ಲಿ ಬೆಳೆಸಿದ್ದಾನೆ. ತನ್ನ ಮಕ್ಕಳು ಕ್ಲಾಸಿನಲ್ಲಿ ಪ್ರತಿ ಬಾರಿ ಮೊದಲಿಗರಾಗಿಯೇ ಬರಬೇಕು, ಸಮಯಕ್ಕೆ ಸರಿಯಾಗಿ ತಾನು ಪೆನ್ಸಿಲಿನಿಂದ ಗುರುತಿಸಿದ ಶೆಡ್ಯೂಲ್ ಪ್ರಕಾರ ಆಯಾ ಕೆಲಸ ಮಾಡಬೇಕು, ಎಲ್ಲಿಯೂ ಯಾವುದೂ ಕೆಲವೇ ಕ್ಷಣಗಳಷ್ಟು ಆಚೀಚೆಯಾಗುವಂತಿಲ್ಲ ಇತ್ಯಾದಿ. ಪ್ರತಿ ತಪ್ಪಿಗೂ ವಿಲಕ್ಷಣವಾದ, ಕ್ರೂರವಾದ ಶಿಕ್ಷೆಗಳನ್ನು ನೀಡುವ, ನಂತರ ಅದಕ್ಕಾಗಿ ತಾನೇ ಪರಿತಪಿಸಿ ಅಳುವ, ದೇವರ ಕೆಲಸಗಳನ್ನೆಲ್ಲ ತಾನೇ ವಹಿಸಿಕೊಂಡವನಂತೆ ವರ್ತಿಸುವ ಈತನನ್ನು ನಾವು ಒಬ್ಬ ಮಾನಸಿಕ ರೋಗಿ ಎಂದು ಸುಲಭವಾಗಿ ತೀರ್ಮಾನಿಸಿ ಬಿಡಬಹುದು. ಅದು ಸರಳ. ಆದರೆ ನಿಮಗೆ ಗೊತ್ತು, ನಮಗೆ ಇಂಥ ಒಬ್ಬ ಅಪ್ಪನೋ ಅಜ್ಜನೋ ಮಾವನೋ ಇದ್ದರೆ, ಅಂಥವರೊಂದಿಗೆ ಬದುಕುವುದು, ದಿನದಿನದ ಕ್ಷಣ ಕ್ಷಣಗಳನ್ನು ಕಳೆಯುವುದು ಅಷ್ಟು ಸರಳವಾಗಿರುವುದಿಲ್ಲ. ಇದನ್ನು ನಾವು ಕೊಂಚ ಸಹಾನುಭೂತಿಯಿಂದ ಕಂಡು ಗ್ರಹಿಸುವ ಅಗತ್ಯವಿದೆ. ಅಪ್ಪನನ್ನು ಅತ್ಯಂತ ಪ್ರೀತಿಸುವ ಮಗಳೇ ಇಲ್ಲಿ ನಿರೂಪಕಿಯಾಗಿರುವುದರ ದೊಡ್ಡ ಲಾಭ ಎಂದರೆ ಇದೇ. ತನ್ನ ಕೃತಿಯ ಎಲ್ಲಾ ಪಾತ್ರಗಳನ್ನೂ ಒಬ್ಬ ಸೃಜನಶೀಲ ಲೇಖಕ ಪ್ರೀತಿ-ಸಹಾನುಭೂತಿಯಿಂದಲೇ ಕಾಣಬೇಕು, ಚಿತ್ರಿಸಬೇಕು ಎಂಬ ಅನನ್ಯ ಪ್ರಜ್ಞೆ ಲೇಖಕಿಗಿರುವುದರಿಂದ ಇಲ್ಲಿ ಸರಳವಾಗಿ ಒಬ್ಬ ಖಳನಾಯಕ ಅನಿಸಿ ಬಿಡಬಹುದಾಗಿದ್ದ ಯುಜೆನೆ ಹಾಗಾಗದೆ ನಮ್ಮನ್ನು ಕಾಡುವುದು ಸಾಧ್ಯವಾಗಿದೆ.
ತೇಜಸ್ವಿಯವರ ‘ಸ್ವರೂಪ’ ಕತೆಯಲ್ಲಿ ಈರಪ್ಪ ಎಂಬ ಹೆಸರಿನ ಒಂದು ಪಾತ್ರದ ಬಗ್ಗೆ ಶ್ರೀನಿವಾಸ ಹೇಮಂತನಿಗೆ ವಿವರಿಸುತ್ತಾನೆ. ಅದೂ ಕಾಡಿನಲ್ಲಿ ಹಂದಿ ಶಿಕಾರಿಗೆ ಅಡಗಿ ಕೂತಲ್ಲಿ ಹೇಮಂತ ಒಂದು ಮರದ ಬುಡಕ್ಕೆ ಉಗಿದ ಸಂದರ್ಭದಲ್ಲಿ. ಅದು ಭೂತದ ಮರವಂತೆ! ಈ ಭೂತ-ದೈವಗಳ ನಂಬಿಕೆಯ ಕುರಿತಂತೆಯೇ ಶ್ರೀನಿವಾಸ ಈ ಈರಪ್ಪನ ಕತೆ ಹೇಳುತ್ತಾನೆ. ಮಹಾ ಜಿಪುಣನೆಂದು ಹೆಸರು ಮಾಡಿದ್ದ ಈ ಈರಪ್ಪ ಭೂತ ಶಿಳ್ಳು ಹೊಡೆಯುತ್ತಿರುವುದರಿಂದ ಎರಡು ಕುರಿಗಳ ಬಲಿ ಕೊಡುವುದು ಅಗತ್ಯ ಎಂದು ಶ್ರೀನಿವಾಸನಿಗೆ ಹಿತವಚನ ಹೇಳಲು ಬಂದಾಗ ಶ್ರೀನಿವಾಸ ಆತನ ಉದ್ದೇಶವನ್ನೇ ಅನುಮಾನದಿಂದ ಕಂಡು ನಗುತ್ತಾನೆ. ಊರವರನ್ನು, ಕೆಲಸಗಾರರನ್ನು ಹೆದರಿಸಲು ಈ ಕ್ಯಾಪಿಟಲಿಸ್ಟ್ ಭೂತಗಳು ಬೇಕಾಗುತ್ತವೆ ಎಂದೂ ಯೋಚಿಸುತ್ತಾನೆ. ಆದರೆ ಊರಿಗೆ ದಾಕು ಹಾಕಿಸಲು ಬಂದವರ ಎದುರು ಅವರ ಬಲಾತ್ಕಾರಕ್ಕೆ ಮಣಿದು ಈರಪ್ಪನೂ ತನ್ನ ಅಂಗಿಯ ತೋಳನ್ನು ಮಡಚಿದಾಗ ಶ್ರೀನಿವಾಸ ದಂಗಾಗುತ್ತಾನೆ.
"ಅವರು ತೋಳಿಗೆ ನಾನಾ ತರದ ಇಪ್ಪತ್ತು ತಾಯಿತಗಳನ್ನು ಕಟ್ಟಿಕೊಂಡಿದ್ದರು. ಆ ದಾರಗಳು ಎಷ್ಟೊಂದು ಹಿಂದೆ ಕಟ್ಟಿದ್ದವೋ ಏನೋ! ಚರ್ಮ ಹರಿದು ಮಾಂಸ ಗೋಚರವಾಗುತ್ತಿತ್ತು ಅನೇಕ ಕಡೆ. ನಾನು ಅದನ್ನು ನೋಡಿದ್ದನ್ನು ಈರಪ್ಪನವರು ನೋಡಲಿಲ್ಲ. ಕ್ರಮೇಣ ಕ್ರಮೇಣ ಆ ಬಗ್ಗೆ ಆಲೋಚಿಸಿದಂತೆ ಅವರ ಚಿತ್ತಸ್ಥಿತಿ ನಿಧಾನಕ್ಕೆ ಅರ್ಥವಾಗುತ್ತಾ ಬಂದಿತು. ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?"
ಸಿಬಿ ಕಟ್ಟಿಸಿಕೊಂಡು ಹಗ್ಗಕ್ಕೆ ಜೋತು ಬೀಳುವವರು, ಬೆತ್ತಲೆ ಸೇವೆ ಮಾಡುವವರು, ಎಂಜಲೆಲೆಯ ಮೇಲೆ ಮಡೆಸ್ನಾನ (ಉರುಳಾಡುವುದು) ಮಾಡುವವರು, ನಗ್ನ ಲೆಗ್ಬಾಬಾನ ಎದುರು ಕ್ಯೂ ನಿಂತು ಲಾತ ಹೊಡೆಸಿಕೊಳ್ಳುವವರು - ಇವರನ್ನೆಲ್ಲ ಕಂಡು ತುಟಿಯಂಚಿನಲ್ಲಿ ನಗುವುದು ಟೀವಿ ಎದುರು ಕುಳಿತಾಗಲಷ್ಟೇ ಸರಳ, ಸುಲಭ ಇದ್ದೀತೆ?
ಒಮ್ಮೆ ಬೆಳಗ್ಗಿನ ಮಾಸ್ಗೆ ಹೊರಟಾಗಲೇ ಮುಟ್ಟಾಗುವ, ಅದರಿಂದಾಗಿ ವಿಪರೀತ ಹೊಟ್ಟೆನೋವಿಗೆ ತುತ್ತಾಗುವ ಈ ಪುಟ್ಟ ಹುಡುಗಿ ಕಾಂಬಿಲಿಗೆ (ನಿರೂಪಕಿ) ತಾಯಿ ಹಾಲಿನಲ್ಲಿ ಕಾರ್ನ್ ಫ್ಲೇಕ್ಸ್ ತಿನ್ನಲು ಕೊಡುತ್ತಾಳೆ, ತಂದೆ ಅಷ್ಟರಲ್ಲಿ ಬರಲಿಕ್ಕಿಲ್ಲ ಎನ್ನುವ ನಂಬುಗೆಯಿಂದ. ನೋವು ಬೇರೆ ಸಹಿಸಲಿಕ್ಕಾಗುತ್ತಿಲ್ಲ. ಅವಳು ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವಂತಿಲ್ಲ ಎಂಬ ಕಾರಣಕ್ಕೆ. ಆದರೆ ಅಷ್ಟರಲ್ಲಿ ಅಪ್ಪ ಬಂದೇ ಬಿಡುತ್ತಾನೆ, ಎಲ್ಲರೂ ಸಿಕ್ಕಿಬೀಳುತ್ತಾರೆ. ಕಾಂಬಿಲಿಗೆ, ತಂಗಿಯನ್ನು ಕಾಪಾಡಲು ಸುಳ್ಳು ಹೇಳಿದ ಅಣ್ಣನಿಗೆ, ತಾಯಿಗೆ ಕೂಡ ಕಟು ಶಿಕ್ಷೆ, ಬೆಲ್ಟ್ ತೆಗೆದು ಬಾರಿಸುತ್ತಾನೆ. ಮಾಸ್ಗೆ ಒಂದು ಗಂಟೆ ಮುನ್ನ ಏನೂ ತಿನ್ನಬಾರದು ಎನ್ನುವುದು ಕಟ್ಟಳೆ. ತಿಂದಿದ್ದು ದೈವ ದ್ರೋಹ. ಅನಾನುಕೂಲವಾದರೂ ಎರಡನೆಯ ಮಾಸ್ಗೆ ಹೋಗುತ್ತಾರೆ, ಧರಿಸಿದ ಬಟ್ಟೆಯ ಒಳಗೆ ಬಾಸುಂಡೆ ಬಾತು ಉರಿಯುತ್ತಿದ್ದರೂ. ಇನ್ನೊಮ್ಮೆ ಮಗನ ಬೆರಳು ಹೇಗೆ ಜಜ್ಜಿರುತ್ತಾನೆಂದರೆ ಜೀವನಪೂರ್ತಿ ಅದು ಜೀವವಿಲ್ಲದ ಒಂದು ಅಂಗವಾಗಿ ನೇಲುತ್ತ ಉಳಿಯುತ್ತದೆ. ಅವರಿವರು ಕೇಳಿದಾಗ ಹೇಗಾಯ್ತು ಎಂದು ಹೇಳುವುದಕ್ಕೂ ಆಗದ ಹಾಗೆ! ಕ್ಲಾಸಿನಲ್ಲಿ ಫಸ್ಟ್ ಬರಲಿಲ್ಲ ಎನ್ನುವುದು ಈ ಶಿಕ್ಷೆಗೆ ಕಾರಣ. ಮುಂದೆ ಬರೆಯಲು ಬೇಕೆಂಬ ಕಾರಣಕ್ಕೆ ಬಲಗೈಗೆ ವಿನಾಯಿತಿ ಕೊಟ್ಟು ಎಡಗೈಯ ಬೆರಳನ್ನು ಜಜ್ಜಿರುತ್ತಾನೆ ಅಷ್ಟೆ. ಮಗಳನ್ನು ಒಮ್ಮೆ ಬಾತ್ ಟಬ್ನಲ್ಲಿ ನಿಲ್ಲಿಸಿ ಕುದಿಯುವ ನೀರು ಸುರಿದು ಎರಡೂ ಕಾಲುಗಳಿಗೆ ವಾರಗಟ್ಟಲೆ ಬ್ಯಾಂಡೇಜ್ ಬಿಗಿಯುವಂತಾಗುತ್ತದೆ. ಇಂಥದ್ದೇ ಶಿಕ್ಷೆ ಮಗನಿಗೂ ಆಗುತ್ತದೆ. ಈತ ತಣ್ಣಗೇ ಪ್ರಶ್ನೆಗಳನ್ನು ಕೇಳುತ್ತ, ತಪ್ಪಿತಸ್ಥ ಮಗುವಿನ ಬಾಯಲ್ಲೇ ತನ್ನ ತಪ್ಪುಗಳನ್ನು ಹೇಳಿಸುತ್ತ ಶಿಕ್ಷಿಸುವ ವಿಧಾನವೇ ನಮ್ಮ ಉಸಿರುಗಟ್ಟಿಸುವಂತಿದೆ. ಆ ಕ್ಷಣಗಳಲ್ಲಿ ಮಗುವು ಅಪ್ಪ ಏನನ್ನು ಮಾಡಲಿದ್ದಾನೊ ಗೊತ್ತಾಗದೆ ಕಂಗಾಲಾಗಿ ಬಟ್ಟೆಯೊಳಗೇ ಉಚ್ಚೆ ಹೊಯ್ದುಕೊಳ್ಳುವ ಸ್ಥಿತಿ ಇದೆಯಲ್ಲ, ನಮ್ಮ ವೈರಿಗೂ ಬೇಡ. ಇನ್ನೊಮ್ಮೆ ಆರು ವಾರಗಳ ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಮರದ ಸ್ಟೂಲಿನಿಂದ ಹೊಡೆದು ರಕ್ತಪಾತ ನಿಲ್ಲದೆ ಆಕೆ ಸಾಯುವ ಸ್ಥಿತಿ ತಲುಪುತ್ತಾಳೆ. ಮುಂದೆ ಎಂದೋ ಇದನ್ನು ಹೇಳುವಾಗ ಮಗುವನ್ನು ಬದುಕಿಸುವುದು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುವ ತಾಯಿ ನಮ್ಮೆದುರಿಗಿದ್ದಾಳೆ. ಮಗಳು ಕಾಂಬಿಲಿ ಕೂಡ ಒಮ್ಮೆ ಶೂಸು, ಬೆಲ್ಟಿನ ಪ್ರಹಾರ ತಡೆಯಲಾಗದೆ ಸಾವಿನ ಕದ ತಟ್ಟಿ ಈಚೆ ಬರುತ್ತಾಳೆ, ಈತನ ಶಿಕ್ಷೆಯ ತೀವ್ರತೆಯಿಂದ. ಇದು ಕೇವಲ, ಇವನಿಗೇ ಜನ್ಮಕೊಟ್ಟ ತಂದೆಯ ಜೊತೆ ಒಂದೇ ಸೂರಿನಡಿ ಇದ್ದುದಕ್ಕಾಗಿ, ಆ ತಂದೆಯ ಒಂದು ಚಿತ್ರವನ್ನು ತನ್ನ ಬಳಿ ಇರಿಸಿಕೊಂಡಿದ್ದಕ್ಕಾಗಿ! ತಂದೆ ಕ್ರಿಶ್ಚಿಯನ್ ಆಗಲೊಲ್ಲದ ಮೂರ್ತಿಪೂಜಕ ಅನಾಗರಿಕ ಹಿದನ್ ಅಲ್ಲವೆ! ಅಂಥವರ ನೆರಳಿನಲ್ಲಿರುವುದು ಕೂಡ ಮಹಾಪಾಪ. ಪರಿಶುದ್ಧರಾಗಲು ಶಿಕ್ಷೆ ಹಾದಿ. ಅದನ್ನು ನಿಯೋಜಿಸುವ ಪವಿತ್ರ ಕರ್ತವ್ಯ ಈತನಿಗೆ ವಹಿಸಲಾಗಿದೆ! ಆದರೆ, ಪ್ರತಿ ಶಿಕ್ಷೆಯ ಪ್ರಹಸನದ ನಂತರವೂ ಈತ ಸ್ವತಃ ಅಸುಖಿ. ತನ್ನ ವಿಧಿಗಾಗಿ, ತನ್ನ ಕೃತ್ಯದ ಕ್ರೂರ ಮುಖಕ್ಕಾಗಿ ವ್ಯಥಿಸುವ ಈ ನಿತ್ಯ ದುಃಖಿಗೆ ತಾನು ಮಾಡುತ್ತಿರುವುದು ಏಸುವಿನ ಪ್ರೀತಿಗಾಗಿಯೇ ಎಂಬ ಭ್ರಮೆ!
ಇಷ್ಟೆಲ್ಲ ಇದ್ದೂ ಇದು ಕೇವಲ ಈತನ ಒಂದು ಮುಖ.
ಇನ್ನೊಂದು ಮುಖವಿದೆ. ಅದು, ಕೆಲವು ಚರ್ಚುಗಳು ಈತನ ಹಣಕಾಸಿನ ನೆರವಿನಿಂದಲೇ ನಡೆಯುತ್ತಿರುತ್ತವೆ. ನೂರಾರು ಬಡ ಮಕ್ಕಳಿಗೆ ಶಿಕ್ಷಣ-ವಸತಿ-ಆಹಾರದ ವ್ಯವಸ್ಥೆಯನ್ನು ಈತನೇ ಸ್ವತಃ ಮಾಡಿರುತ್ತಾನೆ. ದೇಶದ ಒಳಿತಿಗಾಗಿ ಪ್ರಭುತ್ವವನ್ನೇ ಎದುರು ಹಾಕಿಕೊಂಡು ಪತ್ರಿಕೆಯೊಂದನ್ನು ನಡೆಸುತ್ತಿರುವ ಈತ ಎಂದೂ ಲಂಚ ನೀಡದೆ, ನೀತಿಯನ್ನು(?) ಮೀರದೆ ಇರುವ ವ್ಯಕ್ತಿ. ಈತನ ಹಳ್ಳಿಯಲ್ಲಿ ಎಲ್ಲರೂ ಈತನನ್ನು ಆರಾಧಿಸುತ್ತಿದ್ದಾರೆ, ಬಡಬಗ್ಗರಿಗೆ ಅಷ್ಟೊಂದು ಸಹಾಯ ಈತ ಮಾಡಿದ್ದಾನೆ. ಆದರೆ ಅನ್ನಕ್ಕಿಲ್ಲದೆ ಸಾಯುತ್ತಿರುವ ಮುದಿ ತಂದೆಗೆ ಕನ್ವರ್ಟ್ ಆದಲ್ಲಿ ಮಾತ್ರ ಸಹಾಯ ಎಂದು ವಿಧಿಸಿರುತ್ತಾನೆ. ಪ್ರಾಮಾಣಿಕವಾಗಿ ಈತ ಧರ್ಮಭೀರುವೇ. ತಾನು ಏನು ಮಾಡುತ್ತಿದ್ದಾನೆಯೋ ಅದನ್ನು ದೇವರ ಪರವಾಗಿಯೇ ಮಾಡುತ್ತಿದ್ದೇನೆಂದೂ, ಯಾರನ್ನು ಶಿಕ್ಷಿಸುತ್ತಿದ್ದೇನೊ ಅವರ ಒಳಿತಿಗಾಗಿಯೇ ಅದನ್ನು ಮಾಡುತ್ತಿದ್ದೇನೆಂದೂ ಪ್ರಾಮಾಣಿಕವಾಗಿಯೇ ನಂಬಿರುವ ವ್ಯಕ್ತಿ ಈತ. ಹಾಗಾಗಿ ಈತನದು ಪಾಪಪ್ರಜ್ಞೆಯಿಂದ ಮುಕ್ತವಾದ ಮನಸ್ಥಿತಿಯೇ. ಆದರೂ ಈತನಿಗೆ ತನ್ನ ಹೆಂಡತಿ, ತನ್ನ ಮಕ್ಕಳು ಎಂಬ ವಿಪರೀತವಾದ ಮೋಹವಿದೆ. ದೂರವಿರುವಾಗ ಈ ಮಕ್ಕಳಿಗಾಗಿ ಹಂಬಲಿಸುತ್ತಾನೆ. ಪ್ರತಿಬಾರಿಯೂ ಶಿಕ್ಷೆಯ ತೀವ್ರತೆ ಅತಿರೇಕಕ್ಕಿಳಿದು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವಾಗಲೂ, ಅವರ ಶುಶ್ರೂಷೆಯಲ್ಲಿಯೂ ಈತ ಅತ್ಯಂತ ಪ್ರೀತಿಯ ಅಪ್ಪನೇ. ಮಕ್ಕಳ ಪ್ರೀತಿ ಕೂಡ ಈತನ ಕ್ರೌರ್ಯದೆದುರು ಕರಗುವುದಕ್ಕೆ ಕಷ್ಟವೆನಿಸುವಷ್ಟು ಒಳ್ಳೆಯ ಅಪ್ಪ! ಆದರೆ ಒಳ್ಳೆಯ ಮಗನಲ್ಲ.
ಈತನ ತಂಗಿ ವೈಚಾರಿಕವಾಗಿ ಮಧ್ಯಮ ನೆಲೆಯಲ್ಲಿರುವಾಕೆ. ತಾನು ಅಣ್ಣನಂತೆಯೇ ಕ್ರಿಶ್ಚಿಯನ್ ಆಗಿದ್ದೂ ತನ್ನ ತಂದೆಯ ನಂಬಿಕೆ, ಶ್ರದ್ಧೆಯನ್ನು ಸಹಿಸುವ, ಅವನನ್ನು ಪ್ರೀತಿಸುವ, ಆತನ ಈ ಕೊನೆಗಾಲದ ಬೇಕು ಬೇಡಗಳಿಗೆ ಒದಗುವ ಈಕೆ ಯೂನಿವರ್ಸಿಟಿಯಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕಿ. ಅತ್ತ ಅಣ್ಣನ ಜೊತೆಗೂ ಇತ್ತ ಅಪ್ಪನ ಜೊತೆಗೂ ತನ್ನ ಸಂಬಂಧವನ್ನು ಒಂದು ವಿಲಕ್ಷಣ ಬಿಂದುವಿನಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಈಕೆ ಆಂತರಿಕವಾಗಿಯೂ ಹೊರಗೂ ಮಹಾ ಸಂಘರ್ಷಗಳಲ್ಲಿ ನಲುಗುತ್ತಿರುವಾಕೆ. ಗಂಡನನ್ನು ಅಪಘಾತವೊಂದರಲ್ಲಿ ಕಳೆದುಕೊಂಡು, ಗಂಡನನ್ನು ತಿಂದು ಹಾಕಿದವಳು ಎಂಬ ಆರೋಪಕ್ಕೆ ಸಹಜವಾಗಿಯೇ ತುತ್ತಾಗಿ, ಮೂವರು ಮಕ್ಕಳನ್ನು ಬಡತನ ಮತ್ತು ಹಲವು ಬಗೆಯ ಅನಾನುಕೂಲಗಳ ನಡುವೆಯೇ ನಿಭಾಯಿಸಿಕೊಂಡಿರುವಾಕೆ. ಸ್ವಾಭಿಮಾನಿ, ಹಠವಾದಿ ಮತ್ತು ಅವಕಾಶವಾದಿಯಾಗಲೊಲ್ಲದ ಹೆಂಗಸು. ನಿರೂಪಕಿಯ ವಯಸ್ಸಿನವರೇ ಆದ ಇವಳ ಮಕ್ಕಳು ಅಮಕಾ, ಒಬಿಯೋರಾ ಮತ್ತು ಪುಟ್ಟ ಚಿಮಾ ಬೆಳೆದ ಮುಕ್ತ ವಾತಾವರಣವೇ ನಿರೂಪಕಿ- ಬಾಲಕಿಯ ಮನಸ್ಸಿನ ಆರೋಗ್ಯಪೂರ್ಣ ಅರಳುವಿಕೆಗೆ ನೆರವಾಗುವುದು ಕಾದಂಬರಿಯ ಬೆಳವಣಿಗೆಯ ನಡೆ. ಆ ಚಿತ್ರಗಳೆಲ್ಲ ಆಪ್ತವಾಗಿವೆ, ಅತ್ಯಂತ ಸಹಜವಾಗಿವೆ.
ಇದನ್ನೇ ಸ್ವಲ್ಪ ಬೇರೆ ತರ ನೋಡಿ. ಸ್ವತಃ ನಾವು ಗಂಡಸರು-ಹುಡುಗರು ನಮ್ಮ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೊಡುವ ಸ್ವಾತಂತ್ರ್ಯ ಅಷ್ಟರಲ್ಲೇ ಇದೆ. ಕಾಲಿಗೆ ಗೆಜ್ಜೆ ಕಟ್ಟುವುದಕ್ಕೆ, ಜೀನ್ಸ್-ಟೀ ಶರ್ಟ್ ಹಾಕುವುದಕ್ಕೆ, ಹಣೆಗೆ ಬಿಂದಿ ಇಡದೇ ಇರುವುದಕ್ಕೆ, ಲಿಪ್ಸ್ಟಿಕ್ ಹಚ್ಚುವುದಕ್ಕೆ, ಹುಡುಗರೊಂದಿಗೆ ಟೂರು-ಪಿಕ್ನಿಕ್ಗಳಿಗೆ ಹೋಗುವುದಕ್ಕೆ, ಕೊನೆಗೆ ಮೊಬೈಲ್ ಹಿಡಿದು ಕಿಸಿ ಕಿಸಿ ನಗುತ್ತ ಮುಸಿ ಮುಸಿ ಮಾತನಾಡುವುದಕ್ಕೆ, ಇಪ್ಪತ್ತನಾಲ್ಕು ಗಂಟೆಯೂ ಅದರಲ್ಲಿ ಏನೋ ಒತ್ತುತ್ತ ಇರುವುದಕ್ಕೆ, ಟೀವಿ ನೋಡುವುದಕ್ಕೆ ಒಬ್ಬ ಅಪ್ಪನಾಗಿ, ಅಣ್ಣನಾಗಿ, ತಮ್ಮನಾಗಿಯೂ ಗುಟ್ಟಿನಲ್ಲಿ ನಮ್ಮ ಅಷ್ಟಿಷ್ಟು ವಿರೋಧವಿದೆ! ನಾವು ಕೂಡ ಅವರಿವರಿಗೆ ನಾಲ್ಕು ಗೋಡೆಯ ನಡುವೆ ಅದು ಮಾಡಬಾರದು, ಇದು ಮಾಡಬಾರದು ಎಂದೆಲ್ಲ ಕಟ್ಟುಕಟ್ಟಳೆ ಮಾಡುವವರೇ. ಅಷ್ಟರ ಮಟ್ಟಿಗೆ ಇವತ್ತಿನ ವಿಪರೀತದ ದಿನಗಳಲ್ಲಿ, ಎಗ್ಗಿಲ್ಲದೆ ನಡೆದುಕೊಳ್ಳುವ ಹುಡುಗ-ಹುಡುಗಿಯರಿಗೆ ‘ಕೊಂಚ’ ಲಂಗು-ಲಗಾಮು ಇರಬೇಕೆನ್ನುವ ವಿಚಾರಧಾರೆ ಇರುವವರಿಗೆ ಇದೆಲ್ಲ ಸರಿಯಲ್ಲವೆ ಅನಿಸುತ್ತಿರುತ್ತದೆ. ಆದರೆ ಈ ನಿಯಮಗಳನ್ನು ಯಾರಾದರೂ ತಪ್ಪಿ ನಡೆದುಕೊಂಡಾಗ, ಚಾಲೆಂಜ್ ಮಾಡಿದಾಗ, ವಿರೋಧಿಸಿದಾಗ, ಅಂಥ ಸನ್ನಿವೇಶದಲ್ಲಿ ಆಕೆಯ ತಂದೆ-ಅಣ್ಣ-ಕೆಲವೊಮ್ಮೆ ತಮ್ಮಂದಿರಲ್ಲಿ ಕೂಡ ತಮ್ಮ ಗಂಡು ‘ಇಗೋ’ ಸೈತಾನನಂತೆ ಎದ್ದು ಕೂರುತ್ತದೆ. ದೈಹಿಕ ಶಿಕ್ಷೆ ಕೊಡುವ ಮಟ್ಟಕ್ಕೆ ಎಷ್ಟೋ ನಾಗರಿಕ-ಸಭ್ಯ ಗ್ರಹಸ್ಥರೇ, ಹೊರಗೆ ನೀವು ಹಾಗೆಂದು ಹೇಳಿದರೆ ನಂಬಲಿಕ್ಕಿಲ್ಲ, ಅಂಥವರೇ, ಮುಂದಾಗುತ್ತಾರೆ.
ಮತ್ತೆ, ಖಂಡಿತ ಇವರು ತಮ್ಮ ಪ್ರೀತಿಪಾತ್ರರ ಮೇಲೆಯೇ ತಾವು ಗೈದಂಥ ತಮ್ಮದೇ ಹೇಯ ಕೃತ್ಯಗಳಿಗಾಗಿ ಮರುಗುತ್ತಾರೆ, ಸುಪ್ತವಾಗಿ ಅಳುತ್ತಾರೆ ಮತ್ತು ಕ್ಷಮೆಗೆ ಪ್ರಾರ್ಥಿಸುತ್ತಾರೆ. ಅಷ್ಟೆಲ್ಲ ಮಾಡಿ ತಾವು ಮಾಡುತ್ತಿರುವುದು ಅವರದೇ ಒಳ್ಳೆಯದಕ್ಕಾಗಿ ಎಂದು ಸಮರ್ಥಿಸಿಕೊಂಡು ಮತ್ತೆಯೂ ಅದನ್ನೇ ಮಾಡುತ್ತಾರೆ! ಅದು ಹೇಗಿರುತ್ತದೆಂದರೆ ಮೇಲ್ನೋಟಕ್ಕೆ ಯಾರಿಗಾದರೂ ಹೌದಲ್ಲವೆ ಮತ್ತೆ ಎನ್ನುವಂತಿರುತ್ತದೆ ಅದು. ಇನ್ನೇನು, ಮನೆಯ ಹೆಣ್ಣುಮಕ್ಕಳನ್ನು ಇಚ್ಛಾನುವರ್ತಿ ವರ್ತಿಸಲು ಬಿಟ್ಟುಬಿಡಬೇಕಿತ್ತೆ, ಹಾಗೆ ಮಾಡಿದರೆ ನಾಳೆ ಯಾರ ಬದುಕು ಹಾಳಾಗುವುದು ಎನ್ನುವ ಅರಿವಿದೆಯೆ ನಿಮಗೆ ಎಂದು ಕೇಳಿದರೆ ಅದೇ ನಿಟ್ಟಿನ ಉತ್ತರ ಕಷ್ಟ. ಇವಕ್ಕೆಲ್ಲ ಬೇರೆ ಬೇರೆ ಆಯಾಮಗಳಿವೆ. ಕೊನೆಗೂ ನಾಳೆ ಏನಾಗುತ್ತದೋ ಯಾರಿಗೆ ಗೊತ್ತು! ಸ್ವಲ್ಪ ಸರಳೀಕರಿಸಿ ಹೇಳುವುದಾದರೆ ನಮ್ಮ ಭಜರಂಗದಳ ಪಬ್ ಮೇಲೆ ಮಾಡಿದ ದಾಳಿಯನ್ನು ಇದೇ ಧಾಟಿಯಲ್ಲಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ನಿಮಗೆ ನೆನಪಿರಬಹುದು! ಅನೇಕರಿಗೆ ಈ ದಾಳಿ ಆ ನಿಟ್ಟಿನಿಂದ ಸರಿಯಾಗಿಯೇ ಇದೆ ಅನಿಸಿತ್ತು ಕೂಡ. ಅದಕ್ಕಿರುವ ಬೇರೆ ಬೇರೆ ಆಯಾಮಗಳನ್ನು ಮರೆತುಬಿಟ್ಟು ಹೇಳುತ್ತಿದ್ದೇನೆ ಇದನ್ನು. ಹೆಂಗಸರ ಸಂಘಟನೆಗಳಿಗೆ ಹೆದರಿ ಮಾಧ್ಯಮದವರ ಎದುರು ಮಹಾ ವಿಶಾಲಮನಸ್ಸಿನವರಂತೆ ಸ್ತ್ರೀಸ್ವಾತಂತ್ರ್ಯದ ಬಗ್ಗೆ ಮಾತನಾಡಿದವರೆಲ್ಲ ಮನೆಯ ಹೆಣ್ಣುಮಕ್ಕಳನ್ನು ಹಾಗೆಯೇ ನಡೆಸಿಕೊಂಡಿದ್ದರೆ ಅದು ಬೇರೆ ಮಾತು. ಬಿಡಿ ಅದನ್ನು.
ದೇವರ ತತ್ವವನ್ನು, ಆತನನ್ನು ಮನುಷ್ಯ ಯಾಕೆ ನಿರ್ಮಿಸಿಕೊಂಡ ಎನ್ನುವುದನ್ನು, ಮಾನವೀಯತೆಯ ಕೆಲವು ಸರಳ ಸತ್ಯಗಳನ್ನು ಮರೆತ ಈತ ಒಂದು ಪ್ರಾತಿನಿಧಿಕ ಪಾತ್ರ, ಅಷ್ಟೆ. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ನೈತಿಕವಾದದ್ದು, ಔದಾರ್ಯಪೂರ್ಣವಾದದ್ದು, ತನ್ನಂತೆಯೇ ಇತರರು ಎಂದು ಭಾವಿಸುವಂಥದ್ದು - ಇವೆಲ್ಲವೂ ದೈವಿಕವಾದದ್ದು. ಆದರ್ಶವಾಗಿ ಅಲ್ಲ, ನಮ್ಮ ದೈನಂದಿನದಲ್ಲಿ ನಮಗೆ ನಡೆಸುವುದು ಸಾಧ್ಯವಾಗುತ್ತದಾದರೆ. ಯಾವುದು ಸರಿ ಯಾವುದು ತಪ್ಪು ಎನ್ನುವ ಬಗ್ಗೆಯಾಗಲೀ, ಪಾಲಿಸಬೇಕಾದ ಆದರ್ಶಗಳ ಕುರಿತಾಗಲೀ ಯಾರಿಗೂ ಯಾರ ಉಪದೇಶವೂ ಅಗತ್ಯವಿಲ್ಲದ ಒಂದು ಯುಗವಿದು. ಭಾರತದಲ್ಲಂತೂ ತೀರಾ ಅಗ್ಗವಾಗಿ ಸಿಗುವುದೆಂದರೆ ಅದೇ, ಮತ್ತು ಅದೊಂದೇ! ಆದರೆ ಒಂದು ಪುಟ್ಟ ಮನೆಯಲ್ಲೇ ಕೆಲವೊಮ್ಮೆ ನಾವು ಅಪರಿಚಿತರಂತೆ, ಒಬ್ಬರನ್ನು ಒಬ್ಬರು ಆಳುವುದಕ್ಕೇ ಬಂದವರಂತೆ, ಸರ್ವಾಧಿಕಾರಿಯಂತೆ ಹಿಂಸೃಕರಾಗಿ ವರ್ತಿಸುತ್ತೇವೆ. ಅದು ಅನಿವಾರ್ಯವಾಗಿರುತ್ತದೆ ಎಂದು ನಂಬುತ್ತೇವೆ ಕೂಡ. ಯುಜೆನೆ ನಮಗೆ ತೀರ ದೂರದವನಲ್ಲ, ನಾವೇ ಅವನಾಗಿರುವ ಸಾಧ್ಯತೆ ತೀರ ದೂರದ್ದಲ್ಲ.
ಈ ಪುಟ್ಟ ಬಾಲಕಿ ತನ್ನ ತಂದೆಯನ್ನು ಎಷ್ಟೊಂದು ಪ್ರೀತಿಸುತ್ತಾಳೆ ಮತ್ತು ಕೊನೆ ತನಕ ಅವನ ತತ್ವ-ಆದರ್ಶಗಳು ಸರಿಯಿರಬಹುದೆಂದು ನಂಬುತ್ತಾಳೆಂದರೆ ಮೊದ ಮೊದಲು ಅಂಥ ಅಚಲವಾದ ತನ್ನದೇ ನಂಬುಗೆಗಳಿಂದ ಹೊರಬರುವುದಕ್ಕೇ ಇವಳಿಗೆ ಕಷ್ಟವಾಗುತ್ತದೆ. ಸದಾ ಒಬ್ಬನ ಆಶ್ರಿತ ವ್ಯಕ್ತಿತ್ವವೇ ಆಗಿ ಉಳಿಯುವುದನ್ನು, ಮಾನಸಿಕ ಪರಾವಲಂಬಿತ್ವವನ್ನು ಬಯಸುವ ದುರ್ಬಲ ವ್ಯಕ್ತಿತ್ವದ ಹಂಬಲು ಇದು. ಒಂದು ಹಂತದಲ್ಲಿ ಈ ಕರ್ಮಠ ಅಪ್ಪನ ಇನ್ನೊಂದು ತುದಿಯಂತೆ ಕಾಣುವ ಅತ್ತೆಯ ಉಡಾಫೆ ಮತ್ತು ಸ್ವಚ್ಛಂದ ಈ ಮುಗ್ಧ ಹುಡುಗಿಯ ಪರಿಸ್ಥಿತಿಯ ಸರಿಯಾದ ಅರಿವಿಲ್ಲದೇ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಸುತ್ತದೇನೋ ಎಂಬ ಆತಂಕ ಓದುಗನನ್ನೇ ಕಾಡಿದರೆ ಅಚ್ಚರಿಯಿಲ್ಲ. ಆದರೆ ಹಾಗೇನೂ ಆಗುವುದಿಲ್ಲ ಅಥವಾ ಆದರೂ ಅದರ ಒಟ್ಟಾರೆ ಪರಿಣಾಮ ಒಳ್ಳೆಯದೇ ಆಗುತ್ತದೆ. ಕಿಷ್ಕಿಂಧೆಯಂಥ ಅತ್ತೆಯ ಮನೆಯಲ್ಲಿ, ಯಾವೊಂದು ಅನುಕೂಲಗಳೂ ಇಲ್ಲದೆ, ತನ್ನದೇ ವಯಸ್ಸಿನ ಕಸಿನ್ ಅಮಾಕಳ ಚುಚ್ಚುಮಾತು, ಅಣಕಗಳ ಮಧ್ಯೆ ಓಡಿ ಹೋಗುವ ಅನಿಸುವ ಹಾಗಿರುತ್ತದೆ ಮೊದಮೊದಲು. ಆದರೆ ಅತ್ತೆ ಇಫೆಕಾಳ ಉಡಾಫೆ, ಧೈರ್ಯ, ಫಾದರ್ ಅಮಾದಿಯ ಮೆದುಮಾತಿನ ಮೋಹಕತೆ ಎಲ್ಲವೂ ನಿಧನಿಧಾನವಾಗಿ ಇವಳ ಜಗತ್ತನ್ನು ವಿಸ್ತರಿಸಿದಂತೆ, ದೇವರು-ಮಾನವೀಯತೆ, ಪಾವಿತ್ರ್ಯ- ಪ್ರಕೃತಿ, ಆದರ್ಶ-ಸ್ವಭಾವಗಳ ವೈರುಧ್ಯದ ವಿರಾಟ್ ದರ್ಶನ ಇವಳಿಗೆ ಸಿಗುತ್ತ ಹೋದಂತೆ, ಸಪ್ಪೆಯೆನಿಸುವ ಸಿರಿತನದ ಎದುರು ಬಡತನದ ಜೀವಂತಿಕೆಯೇ ಇವಳಿಗೆ ಆಪ್ಯಾಯಮಾನವಾಗುತ್ತ ಹೋದಂತೆ, ತನ್ನ ಅಪ್ಪ ನೀಡುವ ಅಮಾನವೀಯ ಶಿಕ್ಷೆಯ ತೀವ್ರತೆ ಮತ್ತು ಅದರ ಒಟ್ಟಾರೆ ಅಸಹಜತೆಯ ಅರಿವು ಹುಟ್ಟಿ ಆ ಅಪ್ಪನ ಬಗ್ಗೆ ಸ್ವಲ್ಪವಾದರೂ ವಿಮರ್ಶಕ ದೃಷ್ಟಿಯ ನೋಟ ಬೀರುವುದು ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಇಲ್ಲಿ ಬಂದಿರುವ ಯೂನಿವರ್ಸಿಟಿ ಕ್ಯಾಂಪಸ್ಸಿನ ಸಾಮಾನ್ಯ ವರ್ಗದ ದೈನಂದಿನ ಜೀವನದ ನವಿರಾದ ನಿರೂಪಣೆ ಮನಸೆಳೆಯುತ್ತದೆ. ಕಾಂಬಿಲಿಯ ಬದುಕಿನಲ್ಲಿ ಅವಳು ಇಲ್ಲಿನ ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಕಳೆದ ಕೆಲವೇ ದಿನಗಳಿಗೆ ಇರುವ ಮಹತ್ವ ಬಹಳ ಹೆಚ್ಚು. ಅವಳು ಮುಂದೆಯೂ ಅಲ್ಲಿಗೆ, ತನ್ನ ನೆನಪುಗಳಿಗೆ ಸಂಬಂಧಿಸಿದ ಯಾರೂ ಅಲ್ಲಿ ಇಲ್ಲದಿದ್ದಾಗಲೂ ಭೇಟಿ ಕೊಡುವುದನ್ನು ಮುಂದುವರಿಸುವುದೇ ನಮಗಿದನ್ನು ತಿಳಿಸುತ್ತದೆ. ಮುಖ್ಯವಾಗಿ ಅಲ್ಲಿನ ಚಿಕ್ಕಪುಟ್ಟ ಮಕ್ಕಳ ಬದುಕಿನ ಸಂಭ್ರಮವೇ ಕಾಂಬಿಲಿಯ ಮನಸ್ಥಿತಿಗೆ ಒಂದು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.
ಸರಿ ಸುಮಾರು ಇವಳದೇ ವಯೋಮಾನದ ಈಕೆಯ ಅಣ್ಣ ಜಾಜಾಗೆ ಅದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಕುರಿತಾಗಲೀ, ಇಂಥವನ ಜೊತೆ ತಾಯಿ ಅದು ಹೇಗೆ ಅಷ್ಟು ಕಾಲ ದಾಂಪತ್ಯ ನಡೆಸಿದಳೆನ್ನುವ ಕುರಿತಾಗಲೀ, ಅದೇ ಮೂಲದಿಂದ ಬಂದ ತನ್ನ ಅತ್ತೆಗೆ ಹೇಗೆ ಈ ಅಣ್ಣನ ನಿರ್ಬಂಧಗಳ ಜಗತ್ತಿನಿಂದ ಪಾರಾಗಿ ಸ್ವತಂತ್ರ ವ್ಯಕ್ತಿತ್ವವೊಂದನ್ನು ಹೊಂದುವುದು ಸಾಧ್ಯವಾಯಿತೆನ್ನುವ ಕುರಿತಾಗಲೀ, ನಿಜಕ್ಕೂ ಈ ಕರ್ಮಠ ಧರ್ಮನಿಷ್ಠನಿಗೆ ತನ್ನ ವ್ಯಕ್ತಿತ್ವದೊಳಗಿನವೇ ಆದ ದ್ವಂದ್ವಗಳಿರಲಿಲ್ಲವೇ ಎನ್ನುವ ಕುರಿತಾಗಲೀ ಕಾದಂಬರಿ ಕಣ್ಣಲ್ಲಿ ಕಣ್ಣಿಟ್ಟು ಕಾಣುವುದಿಲ್ಲ. ಇದು ಕೆಲಮಟ್ಟಿಗೆ ಕಾದಂಬರಿಯ ತಂತ್ರದ ಮಿತಿ. ಆದರೆ ಅಂಥ ನಿಟ್ಟಿನಲ್ಲಿ ನಾವು ಯೋಚಿಸುವಂತೆ ಮಾಡುವಲ್ಲಿ ಕಾದಂಬರಿಯ ಮೌನ ನಮ್ಮನ್ನು ಪ್ರೇರೇಪಿಸಬಹುದು! ಕಾದಂಬರಿಯ ಕೊನೆಯ ಭಾಗದ ಅಚಾನಕವಾದ ತಿರುವುಗಳು ಬಹುಷಃ ಅಂಥ ಉದ್ದೇಶವನ್ನೇ ಹೊಂದಿರುವಂತೆ ಕಾಣುತ್ತವೆ.
ನಿರೂಪಕಿ ಕಾಂಬಿಲಿ ಮತ್ತು ಇವಳ ಕಸಿನ್ ಅಮಾಕಾರ ಸಂಬಂಧ ನಮ್ಮ ಗಮನ ಸೆಳೆಯುವ ಇನ್ನೊಂದು ವಿದ್ಯಮಾನ. ಒಬ್ಬ ವ್ಯಕ್ತಿಯನ್ನು ನಾವು ನಮ್ಮದೇ ಪೂರ್ವಾಗ್ರಹಗಳಲ್ಲಿ ಕಟ್ಟಿಕೊಂಡು ಆತನೊಂದಿಗೆ ವರ್ತಿಸುತ್ತೇವೆ. ಬ್ರಾಹ್ಮಣರು ಹೀಗೆ, ಕೊಂಕಣರು ಹೀಗೆ, ಮುಸ್ಲಿಮರು ಹಾಗೆಯೇ, ಹೆಂಗಸರೇ ಹಾಗೆ ಎಂಬ ಪೂರ್ವಾಗ್ರಹಗಳೂ ಈ ತರದವೇ. ಅಂಥ ಪೂರ್ವಗ್ರಹೀತ ವ್ಯಕ್ತಿತ್ವಕ್ಕೂ ಆತ ನಿಜಕ್ಕೂ ಏನಾಗಿದ್ದಾನೋ ಅದಕ್ಕೂ ಇರುವ ವ್ಯತ್ಯಸವನ್ನು ಎಷ್ಟೋ ಬಾರಿ ನಮ್ಮ ಕಣ್ಣು - ಮನಸ್ಸು ಗ್ರಹಿಸಲು ನಿರಾಕರಿಸುತ್ತದೆ. ನಮ್ಮ ಗ್ರಹಿಕೆಗಳ ಮೇಲಿನ ಮೋಹವಿದು. ಇಲ್ಲಿ ಅಮಾಕಾ ಅದನ್ನು ಮೀರುವುದು ಗಮನಾರ್ಹ ಬೆಳವಣಿಗೆಯೇ. ಕಡು ಬಡತನ, ಶ್ರಮದ ಬದುಕು ಮತ್ತು ವಯೋಸಹಜವಾದ ಆಸೆ ಆಕಾಂಕ್ಷೆಗಳೆಲ್ಲ ಇರುವ ಪ್ರಬುದ್ಧ ಅಮಾಕಾಗೆ ಮೊದಲು ಈ ಆಗರ್ಭ ಸಿರಿವಂತೆ, ಮೊದ್ದುಮಣಿ, ಸುಂದರಿ ಕಾಂಬಿಲಿ ಒಬ್ಬ ಪ್ರತಿಸ್ಪರ್ಧಿಯಂತೆ, ಶ್ರೀಮಂತ ವೈರಿಯಂತೆ ಕಾಣುತ್ತಾಳೆ. ತುಸು ಮಟ್ಟಿಗೆ ಎಲ್ಲ ಸಿರಿವಂತರು ಬಡವರಿಗೆ ಶೋಷಕರಂತೆ, ಕೆಟ್ಟವರಂತೆ ಕಾಣುತ್ತಾರಲ್ಲ, ಹಾಗೆಯೇ ಅಮಾಕಗೂ ಕಾಣುತ್ತಾಳೆ ಎಂಬುದು ನಿಜ. ಆದರೆ ಕಾಂಬಿಲಿ ಮುಗ್ಧೆ ಮತ್ತು ಅಮಾಕಾಳ ಮಾನದಂಡಗಳಲ್ಲಿ ಪೆದ್ದು ಎಂಬುದು ನಿಜವಾದರೂ ಅಹಂಕಾರಿಯಲ್ಲ, ಸಿರಿವಂತಿಕೆಯ ಹಮ್ಮು-ಬಿಮ್ಮು ಉಳ್ಳವಳಲ್ಲ ಎನ್ನುವುದು ಅಮಾಕಾಗೂ ಅರ್ಥವಾಗುವುದಕ್ಕೆ ಕೆಲ ಸಮಯ ಹಿಡಿಯುತ್ತದೆ. ಅಷ್ಟು ಕಾಲ ಅಮಾಕಾಳ ನಿಂದೆ, ಅಪಹಾಸ್ಯ, ಚುಚ್ಚುಮಾತು ಕಾಂಬಿಲಿಯ ಕಣ್ಣೀರಿಗೆ ಕಾರಣವಾಗುತ್ತ ಓದುಗನನ್ನು ಕೂಡ ಹಿಂಸಿಸುತ್ತದೆ. ಅತ್ತ ಹೋದರೆ ಅಪ್ಪನ ಹಿಂಸೆ, ಜೈಲುವಾಸದಂಥ ಬದುಕು, ಇತ್ತ ಬಂದರೆ ಈ ಅಮಾಕಾಳ ಚುಚ್ಚು ಮಾತುಗಳು ಕೊಡುವ ಹಿಂಸೆ. ಇದು, ಈ ಪರಿಸ್ಥಿತಿ ತಿಳಿಯಾಗುತ್ತದೆ ಮತ್ತು ಅಮಾಕಾಗೂ, ಕಾಂಬಿಲಿಗೂ ಬದುಕು ತನ್ನ ನಿಜವರ್ಣದಲ್ಲಿ ತೆರೆದುಕೊಂಡು ಇಬ್ಬರೂ ಸಹಜವಾಗುತ್ತಾರೆ, ಆತ್ಮೀಯರಾಗುತ್ತಾರೆ.
ರಾಜಕೀಯ ಸಂಚುಗಳು, ಭ್ರಷ್ಟ ಆಡಳಿತ ಮತ್ತು ಕ್ರಾಂತಿಯ ಹುನ್ನಾರಗಳ ನಡುವೆಯೇ ಮನೆಯೊಳಗಿನ ಈ ಧಾರ್ಮಿಕ ಕರ್ಮಠತನದ ಪರಿಣಾಮಗಳು ನಮಗೆ ಕಾಣಿಸುತ್ತವೆ. ಸಿರಿತನ, ಶಿಸ್ತು, ಧರ್ಮ ಇವು ನಿರ್ಮಿಸಿದ ಒಂದು ಜೈಲಿನಿಂದ ಹೊರಬಿದ್ದಿದ್ದೇ ಕ್ರಮೇಣ ಹೊಸ ಹೊಸ ಮಾನವೀಯ ಸಂಬಂಧಗಳ ಬೆಸುಗೆಯಾಗಿ, ಪ್ರೇಮದ ಹೊಸ ಸಾಧ್ಯತೆಗಳಾಗಿ, ಮನುಷ್ಯ ಸಂಬಂಧಗಳ ಕೊಂಡಿಗಳು ಬೆಸೆಯುತ್ತಾ, ಹಾಗೆ ಬೆಸೆದಂತೆಲ್ಲ ಮನಸ್ಸು ಸ್ವತಂತ್ರಗೊಂಡು ಅರಳುತ್ತಾ ಹೋಗುತ್ತದೆ. ಆದರೆ ಅದೇ ಬದುಕಲ್ಲ ಎನ್ನುವ ಒಂದು ಅರಿವಿದೆ ಇಲ್ಲಿ. ಹಾಗಾಗಿಯೇ, ಬೆನ್ನಲ್ಲೇ ಬರುವ ವಿಯೋಗ, ಕೊಲೆ, ದೇಶಾಂತರ, ಜೈಲು ಮುಂತಾದ ವಿಘಟನೆಯ ಸಾಲೂ ಇಲ್ಲಿದೆ. ಈ ಎಲ್ಲದರ ಮೂಲಕ ಬದುಕು ಹಾಯುತ್ತಾ ಪರಿಪಕ್ವಗೊಳ್ಳುವ ಕಥಾನಕವಿದು, ಒಂದು ಅರ್ಥದಲ್ಲಿ. ಆರಂಭದಲ್ಲೇ ಹೇಳಿದಂತೆ ಕಾದಂಬರಿಯಾಗಿ ಅಷ್ಟೇನೂ ತೃಪ್ತಿ ನೀಡದಿದ್ದರೂ ಗುಂಗು ಹಿಡಿಸಬಲ್ಲ ಆತ್ಮೀಯ ಸ್ಪರ್ಶವೊಂದು ಇಲ್ಲಿದ್ದೇ ಇದೆ. ಹಾಗೆಯೇ ಇಲ್ಲಿ ಕಂಡು ಬರುವ, ಬೆಚ್ಚಿ ಬೀಳಿಸುವ ವೈರುಧ್ಯಗಳಿರುವ ಕೆಲವೊಂದು ಮನಸ್ಸುಗಳು ನಮ್ಮನ್ನು ಕೆಲಕಾಲವಾದರೂ ಆವರಿಸಿ ಚಿಂತನೆಗೆ ಕಾರಣವಾಗುತ್ತವೆ.
ಕಾದಂಬರಿಯ ಒಂದು ತಾಂತ್ರಿಕ ಮಿತಿಯ ಕುರಿತು ಇನ್ನೂ ಸ್ವಲ್ಪ ಕೊರೆಯುವುದಿದೆ, with your permission!
ಇಲ್ಲಿ ಒಂದು ಪಾತ್ರ ಆತ್ಮನಿವೇದಕ ನಿಟ್ಟಿನಿಂದ ಇಡೀ ವಿದ್ಯಮಾನವನ್ನು ಗಮನಿಸಿ ನಿರೂಪಿಸುವುದರಿಂದ ಮತ್ತು ಈ ನಿರೂಪಕ ಪಾತ್ರ ಹದಿನೈದು-ಹದಿನಾರರ ವಯಸ್ಸಿನ, ವಿಲಕ್ಷಣ ವಾತಾವರಣವೊಂದರಲ್ಲಿ ಬೆಳೆದ ಮುಗ್ಧ ಹುಡುಗಿ ಕೂಡ ಆಗಿರುವುದರಿಂದ ಇಲ್ಲಿ ನಾವು ಮುಖಾಮುಖಿಯಾಗುವ ಹೆಚ್ಚಿನ ಪಾತ್ರಗಳು ಸ್ಕೆಚಿ ಎನ್ನುವಂತಿವೆ. ಇದಕ್ಕೆ ಇಲ್ಲಿ ನಿರೂಪಿಸಲ್ಪಡುತ್ತಿರುವ ವ್ಯಕ್ತಿತ್ವಗಳ ಸಂಕೀರ್ಣ ಮಾನಸಿಕ ಸ್ಥಿತಿ ಕೂಡ ಒಂದು ಕಾರಣ. ಹಾಗಾಗಿ, ವ್ಯಕ್ತಿತ್ವದ ಅಪೂರ್ಣ ಚಿತ್ರವೊಂದನ್ನು ಮಾತ್ರ ಭಾಷೆಯಲ್ಲಿ ಕಟ್ಟಿಕೊಡುವ ಇಲ್ಲಿನ ನಿರೂಪಣೆ ಅದರ ಪರಿಪೂರ್ಣತೆಗೆ ಅಗತ್ಯವಿರುವ ಇನ್ನುಳಿದ ವಿವರಗಳಿಗೆ ಕೆಲವು ಹೊಳಹುಗಳನ್ನಷ್ಟೇ ನೀಡುವ ತಂತ್ರವನ್ನು ನೆಚ್ಚುತ್ತದೆ. ಕಥಾನಕದ ಮತ್ತು ಇಲ್ಲಿನ ಪಾತ್ರಗಳ ವ್ಯಕ್ತಿತ್ವದಲ್ಲೇ ಅಂತರ್ಗತವಾಗಿರುವ ವೈರುಧ್ಯಗಳನ್ನು ಗಮನಿಸುವಾಗ ಈ ತಂತ್ರ ಅಷ್ಟಾಗಿ ಫಲಿಸದ ಅನುಭವವಾಗುತ್ತದೆ. ಆಲನಹಳ್ಳಿಯವರ ಕಾಡು ಕಾದಂಬರಿಯ ಕಿಟ್ಟಿಯಾಗಲೀ, ಘಟಶ್ರಾದ್ಧದ ಪುಟ್ಟ ನಾಣಿಯಾಗಲೀ ಬದುಕುತ್ತಿರುವ ಬದುಕಿನಲ್ಲಿ, ಅವು ಓದುಗನಿಗೆ ಮುಖಾಮುಖಿಯಾಗಿಸುವ ಪಾತ್ರಪ್ರಪಂಚದಲ್ಲಿ ಕೆಲವು ಗಂಡು-ಹೆಣ್ಣು ಸಂಬಂಧಗಳ ಒಂದು ನೇಯ್ಗೆ ಒಡ್ಡುವ ಸಂಘರ್ಷಗಳೇ ಮುಖ್ಯವಾಗಿವೆ. ಅಲ್ಲಿ ಅದಕ್ಕೆ ತಕ್ಕ ಕೆಲವು ಸಾಂಸಾರಿಕ - ಭಾವನಾತ್ಮಕ ಒಪ್ಪಂದಗಳಿವೆ. ಅಲ್ಲದೆ ಈ ಕಾದಂಬರಿಯಲ್ಲಿ ನಾವು ಕಾಣುವ ಸನ್ನಿವೇಶಗಳಲ್ಲಿ ಮತ್ತು ಪಾತ್ರಗಳಲ್ಲಿ ಇರುವ ಸಂಕೀರ್ಣ ವೈರುಧ್ಯಗಳು ಕೂಡ ಅಲ್ಲಿ ಇಲ್ಲ. ಯಾಕೆಂದರೆ, ಕಾಡು ಮತ್ತು ಘಟಶ್ರಾದ್ಧ - ಎರಡೂ ಕೃತಿಗಳ ಮೂಲ ಎಳೆ ಲೈಂಗಿಕ ವಿದ್ಯಮಾನದ ಸುತ್ತ, ಗಂಡು-ಹೆಣ್ಣು ಸಂಬಂಧದ ಸುತ್ತ ಇರುತ್ತ, ಬಾಲ್ಯದ ಮುಗ್ಧ ಗ್ರಹಿಕೆ ನಮಗೆ ಒಡ್ಡುವ ಅಮೂರ್ತ ಚಿತ್ರಗಳು ಓದುಗನ ಕಲ್ಪನೆಗೆ ಬೇಕಾಗುವಷ್ಟು ವಿವರಗಳನ್ನು ಒದಗಿಸುವುದು ಅಲ್ಲಿ ಸುಲಭವಾಗುತ್ತದೆ. ಆದರೆ ಇಲ್ಲಿ ಅಂಥ ಅನುಕೂಲವೇನಿಲ್ಲ ಮತ್ತು ಇಲ್ಲಿನ ವಿಲಕ್ಷಣ ಸನ್ನಿವೇಶಗಳಾಗಲೀ ವೈರುಧ್ಯ ಪ್ರಧಾನ ಮಾನಸಿಕ ಪಾತಳಿಯ ಪಾತ್ರಗಳಾಗಲೀ ತೀರ ಸಹಜವಾದ ಬಗೆಯವೋ, ನಾವು ದಿನನಿತ್ಯ ನೋಡುವ ಬಗೆಯವೋ - ಅಲ್ಲ. (ಕಾದಂಬರಿ ಕೆಲವೊಂದು ಸಂಘರ್ಷಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣುತ್ತಿಲ್ಲ ಎಂದು ಬರೆದ ಪಾರಾ ಗಮನಿಸಿ) ಹಾಗಾಗಿ ಇಲ್ಲಿ ಲೇಖಕಿ ಎದುರಿಸುತ್ತಿರುವ ಸವಾಲು ಹೆಚ್ಚು ಕ್ಲಿಷ್ಟಕರವಾದದ್ದು ಮತ್ತು ತಾನು ಆಯ್ದುಕೊಳ್ಳುತ್ತಿರುವ ಆತ್ಮನಿರೂಪಣೆಯ ತಂತ್ರ ಒಡ್ಡುವ ಸವಾಲುಗಳು ಅದರ ಕೆಲವು ಅನುಕೂಲತೆಗಳೊಂದಿಗೇ, ಒಟ್ಟಾರೆಯಾಗಿ ಕೃತಿ ನೀಡಬೇಕಾದ ಅನುಭವಕ್ಕೆ ಪೂರಕವೇ ಅಥವಾ ಮಾರಕವೇ ಎಂದು ನಿರ್ಧರಿಸುವಲ್ಲಿ ಇರುವ ಸವಾಲು ಎರಡೂ ದೊಡ್ಡವು. ಈ ವಿಚಾರ ನಮ್ಮ ಮನಸ್ಸಿನಲ್ಲಿದ್ದರೆ ಒಳ್ಳೆಯದು ಅನಿಸುತ್ತದೆ.
ಈ ಇತಿಮಿತಿಗಳಲ್ಲಿ ಚಿತ್ರಿತವಾದ ಕಾದಂಬರಿಗೆ ತಾಂತ್ರಿಕವಾದ ಇನ್ನೂ ಕೆಲವು ತೊಡಕುಗಳಿವೆ. ಕತೆಯನ್ನು ಗಮನಿಸಿದರೆ, ಒಂದು ವ್ಯಕ್ತಿತ್ವವನ್ನು ಕಟ್ಟಿಕೊಡುವ ಬೇರೆ ಬೇರೆ ಹಂತಗಳು ಎಷ್ಟು ಸೂಕ್ಷ್ಮ ಮತ್ತು ಮುಖ್ಯ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಒಂದೇ ವ್ಯಕ್ತಿತ್ವದ ವೈರುಧ್ಯಗಳನ್ನು ಹೇಳುವಾಗ ಅವುಗಳಲ್ಲಿ ಯಾವುದರ ಚಿತ್ರವನ್ನು ನೀವು ಮೊದಲು ಕಟ್ಟಿ ಕೊಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಒಮ್ಮೆ ಮಾಡಿಕೊಂಡ ಆಯ್ಕೆಯಿಂದ ಹಿಂದಕ್ಕೆ ಬರುವ ಮಾತೇ ಇಲ್ಲದಿರುತ್ತ ವೈರುಧ್ಯವನ್ನು ಸಂದರ್ಭ-ಸನ್ನಿವೇಶಗಳ ಕಾಣ್ಕೆಯಾಗಿಸದೆ ವ್ಯಕ್ತಿತ್ವದ್ದೇ ಭಾಗವನ್ನಾಗಿಸಿ ಆ ವ್ಯಕ್ತಿಯನ್ನು ಕಟ್ಟಿಕೊಡುವುದು ಅಷ್ಟು ಸುಲಭವಲ್ಲ.
ಈ ಎಲ್ಲ ಕಾರಣಗಳಿಂದ ಇರಬಹುದೇನೊ, ಇಲ್ಲಿನ ಪಾತ್ರಗಳು ರಕ್ತ ಮಾಂಸ ಸಹಿತ ಜೀವಂತ ವ್ಯಕ್ತಿಗಳಾಗಿ ನಮ್ಮನ್ನು ಕಾಡುವುದಕ್ಕೆ ಇನ್ನೂ ಹೆಚ್ಚಿನ, ಸುಪುಷ್ಟವಾದ ಚಿತ್ರಣ ಇದ್ದಿದ್ದರೆ ಚೆನ್ನಿತ್ತು ಎಂದು ನಮ್ಮ ಮನಸ್ಸು ಬಯಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ