Tuesday, January 6, 2009

ನಟ ನಾರಾಯಣಿ: ಒಂದು ಕಾದಂಬರಿ ಒಂದು ನಾಟಕ

ಶಂಕರ ಮೊಕಾಶಿ ಪುಣೇಕರರ ಗಂಗವ್ವ ಗಂಗಾಮಾಯಿ ಅಥವಾ ಕೇಂದ್ರ ಸಾಹಿತ್ಯ ಆಕಾಡಮಿ ಪ್ರಶಸ್ತಿ ವಿಜೇತ ಅವಧೇಶ್ವರಿಯಷ್ಟು ನಟ ನಾರಾಯಣಿ ಖ್ಯಾತವಲ್ಲ. ಆದರೆ ನೀನಾಸಂ ತಿರುಗಾಟ ೨೦೦೮ರ ಎರಡು ನಾಟಕಗಳಲ್ಲಿ ಒಂದಾಗಿ ನಟನಾರಾಯಣಿ ರಂಗಕ್ಕೆ ಬಂದದ್ದು ಈ ಕಾದಂಬರಿಯ ಮರು ಓದಿಗೆ ಕಾರಣವಾಗಿರುವುದು ಮಾತ್ರ ಸತ್ಯ.

೧೯೮೮ರಲ್ಲಿ ಪ್ರಕಟವಾದ ಈ ವಿಶಿಷ್ಟ ಕಾದಂಬರಿಯನ್ನು ಸ್ವತಃ ಪುಣೇಕರರೇ ನವ್ಯೋತ್ತರ ಎಕ್ಸಿಸ್ಟೆಂಶಿಯಲಿಸ್ಟ್ ಪತ್ತೇದಾರಿ ಕಾದಂಬರಿ ಎಂದು ಕರೆದಿದ್ದಾರೆ. ಅಂದರೆ ನಾವು ನವ್ಯದ ಖಯಾಲಿಗಳನ್ನು, ಅಸ್ತಿತ್ವವಾದಿ (ಎಕ್ಸಿಸ್ಟೆಂಶಿಯಲಿಸ್ಟ್) ಎಂದು ಪುಣೇಕರರು ಮತ್ತೆ ಮತ್ತೆ ಹೇಳುತ್ತಿರುವುದು ಏನನ್ನು ಕುರಿತು ಎಂಬುದನ್ನು ಮತ್ತು ಆಸ್ತಿಕ-ನಾಸ್ತಿಕ ಮನೋಭಾವದೊಂದಿಗೆ ಈ ಅಸ್ತಿತ್ವವಾದಿಗಿರುವ ಗೊಂದಲಗಳನ್ನು ಕುರಿತು ಸ್ವಲ್ಪ ವಿಚಾರ ವಿಮರ್ಶೆ ಮಾಡಿಕೊಂಡಿರುವುದು ತೀರ ಅಗತ್ಯವಾದುದು. ಇಲ್ಲದಿದ್ದರೆ ನಟನಾರಾಯಣಿ ಕಾದಂಬರಿಯಾಗಿಯೂ ಒಂದು ರಂಗಕೃತಿಯಾಗಿಯೂ ನಮಗೆ ದಕ್ಕಬೇಕಾದ ರೀತಿಯಲ್ಲಿ ದಕ್ಕುವುದು ಕಷ್ಟ.

ಶಂಕರ ಮೊಕಾಶಿ ಪುಣೇಕರರ ಸಾಹಿತ್ಯ ಮತ್ತು ಅಭಿರುಚಿ ಹಾಗೂ ಅಪೂರ್ಣವರ್ತಮಾನಕಾಲ ಎಂಬ ಎರಡು ಸಂಕಲನಗಳನ್ನು ಗಮನಿಸಿದರೂ ನಮಗೆ ಅವರ ವೈಚಾರಿಕ ನೆಲೆಯ ಸ್ಥೂಲ ಪರಿಚಯ ಸಿಗುತ್ತದೆ. ಶಿಕ್ಷಣ, ಪಠ್ಯ ಮತ್ತು ಪಾಶ್ಚಾತ್ಯ ಪ್ರಭಾವದ ಜ್ಞಾನ ಪ್ರಣೀತ ಸಾಹಿತ್ಯದ ಬಗ್ಗೆ ಪುಣೇಕರರಿಗೆ ತಿರಸ್ಕಾರವಿದೆ. ಅವರು ಜೀವನಾನುಭವಕ್ಕೆ, ಪರಿಸರದ ಅವಲೋಕನಕ್ಕೆ ಒತ್ತು ಕೊಟ್ಟು ರಚಿಸಿದ, ಶ್ರೇಷ್ಠತೆಯ ವ್ಯಸನವಿಲ್ಲದ ದ್ವಿತೀಯ ಶ್ರೇಣಿಯ ಸಾಹಿತ್ಯದ ಕುರಿತು ಎಂಥ ಒಲವು ತಾಳಿದ್ದರೆಂಬುದು ಕೂಡ ಜನಜನಿತ ವಿಚಾರವೇ. ಅಂದ ಮಾತ್ರಕ್ಕೆ ಅವರಿಗೆ ಪ್ರಥಮ ಶ್ರೇಣಿಯ ರಚನೆಗಳ ಬಗ್ಗೆ ಅಸಹನೆ ಇತ್ತೆಂದು ತಿಳಿಯಬೇಕಾಗಿಲ್ಲ. ಆದರೆ ಪಾಶ್ಚಾತ್ಯ ಸಾಹಿತ್ಯದಿಂದ ನಾವು ವ್ಯಕ್ತಿಪ್ರಾಧಾನ್ಯ ಕಲಿತೆವು ಎನ್ನುವ ಪುಣೇಕರರು ನಮ್ಮ ನವ್ಯ ಸಾಹಿತ್ಯ ಅಂಥ ಸಾಹಿತ್ಯದ ಅಂಧಾನುಕರಣೆಯನ್ನು ಮಾಡುತ್ತಿದೆ ಎಂದು ತಿಳಿದಿದ್ದರು. ಅಂಥ ವಿಶಿಷ್ಟ ಸಂದರ್ಭದಲ್ಲಿ ಅವರು ಎರಡನೆಯ ಶ್ರೇಣಿಯ ಸಾಹಿತ್ಯ ವಿಪುಲವಾಗಿ ಬಂದರೆ ಅದಾದರೂ ಈ ಪಿಡುಗಿಗೆ ಕೊಂಚ ತಡೆಯೊಡ್ಡೀತೆಂದು ನಿರೀಕ್ಷಿಸಿದಂತಿದೆ.

ಅಸ್ತಿತ್ವವಾದಿಯೊಬ್ಬ ಆಸ್ತಿಕನಾಗಿರಲು ಸಾಧ್ಯ ಮತ್ತು ಎಕ್ಸಿಸ್ಟೆಂಶಿಯಲಿಸ್ಟ್ ಅವಸ್ಥೆಗೆ ವೈಚಾರಿಕ ನೆಲೆಯಲ್ಲಿ ಉತ್ತರವಿಲ್ಲ ಎಂದು ಮೊದಲಬಾರಿಗೆ ತೋರಿದ ಕಿಕೆಗಾರ್ಡ್ ನೀಡುವ ಭಯಜನ್ಯ ಶರಣಾಗತಿಯ ಪರಿಹಾರಕ್ಕಿಂತ ಭಾರತ ಪಾರಂಪರಿಕವಾಗಿ ಕಂಡುಕೊಂಡಿದ್ದ ಭಕ್ತಿಜನ್ಯ ಶರಣಾಗತಿಯೇ ಹೆಚ್ಚು ಸೂಕ್ತವಾದ ಮತ್ತು ಆರೋಗ್ಯಕರವಾದ ಪರಿಹಾರ ಎನ್ನುವುದು ಶಂಕರ ಮೊಕಾಶಿ ಪುಣೇಕರರ ವಾದ. ಅದು ಹೇಗೆ ಎಂಬ ಕುತೂಹಲ, ಪ್ರಶ್ನೆ, ಅನುಮಾನ ನಿಮಗಿದ್ದರೆ ನಟನಾರಾಯಣಿ ಕಾದಂಬರಿಯನ್ನು ಓದಬಹುದು. ಸಾಧ್ಯವಾದರೆ ನೀನಾಸಂ ತಿರುಗಾಟ ನಾಟಕವನ್ನೂ ನೋಡಬಹುದು. ಕಾದಂಬರಿಯ ಸಾರಸತ್ವವನ್ನೆಲ್ಲ ಎಷ್ಟು ಅದ್ಭುತವಾಗಿ ಮತ್ತು ಸಮರ್ಪಕವಾಗಿ ಈ ನಾಟಕ ಹಿಡಿದಿಟ್ಟಿದೆಯೆಂದರೆ, ಕಾದಂಬರಿಯ ಓದಿಗೆ, ಅರ್ಥೈಸುವಿಕೆಗೆ ಅಗತ್ಯವಾದ ಒಂದು ಮನಸ್ಥಿತಿಯನ್ನು ನೋಡುಗನಲ್ಲಿ ಮೂಡಿಸಲು ಬೇಕಾದ ದೃಶ್ಯ, ಶ್ರಾವ್ಯ ಪರಿಕರಗಳನ್ನು ಕೂಡ ರಂಗಕೃತಿಯ ಚೌಕಟ್ಟಿನಲ್ಲೇ ಒಳಗೊಂಡ ಒಂದು ರಚನೆಯನ್ನು ನಟರಾಜ ಹೊನ್ನವಳ್ಳಿ ನೀಡಿದ್ದಾರೆ. ಅವರ ಈ ಜಾಣ್ಮೆಯನ್ನು ಯಾರಾದರೂ ಮೆಚ್ಚಲೇ ಬೇಕು.

ನಾಣ ಎಂಬ ಅನಾಥ ಬಾಲಕ ಹಾಡಿನ ಪ್ಲೇಟುಗಳನ್ನು ಕೇಳಿಯೇ ಸಂಗೀತಗಾರನ ಸೋಗು ತೋರಬಲ್ಲ ಚಾಣಾಕ್ಷ. ಇದನ್ನು ತಮ್ಮ ನಾಟಕ ಕಂಪನಿಯ ಸ್ತ್ರೀಪಾತ್ರಕ್ಕೆ ನಾಣನಂಥವನೊಬ್ಬನ ತುರ್ತು ಅಗತ್ಯವುಳ್ಳ ದುಂಡೇಶ್ವರ ನಾಟಕ ಕಂಪನಿಯ ಶೆಟ್ಟರು ಗಮನಿಸಿ ಅವನನ್ನು ಕರೆದೊಯ್ಯುತ್ತಾರೆ. ಪ್ರಸಿದ್ಧಿಯ ಹಂಬಲ, ಹಣದ ದುರಾಶೆ ಮತ್ತು ಮಹತ್ವಾಕಾಂಕ್ಷೆ ನಾಣನಲ್ಲಿ ಎದ್ದು ಕೂರುವುದು ಇಲ್ಲಿಂದಲೇ. ನಾಟಕ ಒಂದು ಕಲೆ ಹೇಗೋ ವ್ಯಾಪಾರ ಕೂಡ ಹೌದು. ಅಲ್ಲಿನ ನಟವರ್ಗ ಒಂದು ಕುಟುಂಬ ಹೇಗೋ ಒಂದು ಜಗತ್ತು ಕೂಡ ಹೌದು. ಹಾಗಾಗಿ ಜಿದ್ದಾ ಜಿದ್ದಿ, ಸಣ್ಣತನ, ದುರ್ಬಳಕೆ, ಅಸೂಯೆ, ಮೋಸ ಅಲ್ಲಿಗೆ ಹೊಸದೂ ಅಲ್ಲ ಅಪರಿಚಿತವೂ ಅಲ್ಲ. ಇದೆಲ್ಲ ಇರುವಾಗಲೇ ಸಿನಿಮಾದ ಆಗಮನ ಇಡೀ ರಂಗಭೂಮಿಗೇ ಹೊಡೆತ ನೀಡಿ ನಾಟಕ ಕಂಪನಿಗಳಿಗೆ ದುರ್ದೆಸೆ ತಂದಿಡುವ ಸಂದರ್ಭ ಬರುತ್ತದೆ. ನಾಣ ಬ್ರಹನ್ನಳೆಯಂತೆ ಸ್ತ್ರೀವೇಷ ತೊಟ್ಟು ಪ್ರಸಿದ್ಧನಾದಂತೆಯೇ ಸಿರಿವಂತರ, ಬ್ರಿಟಿಷ್ ಸೈನ್ಯಾಧಿಕಾರಿಗಳ ತೆವಲಿಗೂ ಕೊಟ್ಟುಕೊಳ್ಳುವುದರ ಮೂಲಕ ಸಂಪಾದಿಸುವ ಒಂದು ಹೊಸ ಮಾರ್ಗ ಕಂಡುಕೊಳ್ಳುತ್ತಾನೆ. ಹೆಣ್ಣಿನ ವಯ್ಯಾರ ಇಂಥ ಧನವಂತರನ್ನು ತಣಿಸುವುದಕ್ಕೆ, ಅಫೀಮಿನ ಮಾರಾಟ ನಾಣನ ಧನದಾಹವನ್ನು ತಣಿಸುವುದಕ್ಕೆ. ಇಲ್ಲಿಯೂ ಕಣ್ಣಪ್ಪನಂಥವರು ನಾಣನನ್ನು ಬಳಸಿಕೊಂಡರೇ, ಸಂದರ್ಭ ನಾಣನನ್ನು ಅಂಥ ದಾರಿಯಲ್ಲಿ ನಡೆಸಿತೇ ಅಥವಾ ಸ್ವತಃ ನಾಣನ ವ್ಯಕ್ತಿತ್ವದಲ್ಲೇ ಅಂಥ ಕಳಂಕಿತ ಮಾರ್ಗದ ಧನಾರ್ಜನೆಯ ಹಸಿವೆಯಿತ್ತೇ ಎಂಬುದಕ್ಕಿಂತ ಮುಖ್ಯವಾದದ್ದು ಬದುಕು ಇಂಥ ಪ್ರಶ್ನೆಗಳೊಂದಿಗೆ ನಿಲ್ಲುವುದಿಲ್ಲ ಎಂಬ ಅಸ್ತಿತ್ವವಾದವೇ.

ರಂಗೂನಿನ ಸೈನ್ಯಾಧಿಕಾರಿಯೊಬ್ಬ ಹೃದಯಾಘಾತದಿಂದ ಸತ್ತ ಸ್ವಲ್ಪ ಸಮಯದ ಮೊದಲು ಆತ ನಾಣ (ಹೆಣ್ಣಾಗಿ ಈತ ಚಮೇಲಿ!)ನೊಂದಿಗಿದ್ದ ಎನ್ನುವ ಒಂದು ಸಣ್ಣ ಎಳೆ ನಾಣನನ್ನು ಜೈಲಿಗೆ ಅಥವಾ ಗಲ್ಲಿಗೆ ಎಳೆಯಬಲ್ಲ ಹಗ್ಗದ ಕುಣಿಕೆಯಾಗಿ ಅವನನ್ನು ಹಿಂಬಾಲಿಸತೊಡಗುವಲ್ಲಿ ಈ ಕಾದಂಬರಿಗೆ ಪತ್ತೇದಾರಿ ಕಥಾನಕದ ರಂಗು ಬರುತ್ತದೆ. ನಾಟಕ ಇಲ್ಲಿಂದಲೇ ತೊಡಗುತ್ತದೆ. ಒಂದರ್ಥದಲ್ಲಿ ನಾಟಕ ಕಾದಂಬರಿಯ ಫ್ಲ್ಯಾಶ್‌ಬ್ಯಾಕ್! ಕೊಲೆಯ ಆರೋಪ, ಅಫೀಮಿನ ದಂಧೆ ಎರಡರಲ್ಲೂ ಇರುವ `ಧರ್ಮ ಸೂಕ್ಷ್ಮ' ಇಡೀ ಕಾದಂಬರಿ ಪ್ರತಿಪಾದಿಸುವ ಭಕ್ತಿಜನ್ಯ ಶರಣಾಗತಿಯ ತಿರುಳು. ಮೈ ಮಾರಿಕೊಂಡು ಸಂಪಾದಿಸುವುದು ಮತ್ತು ಅಫೀಮಿನ ಸೇವನೆ, ಮಾರಾಟ ಕೆಟ್ಟದು. ಅಂದಮೇಲೆ ಅದರ ನಿಯಂತ್ರಿತ ಮಾರಾಟಕ್ಕೆ ಸರಕಾರ ಮಾಡುವ ಕಾನೂನಿಗೇ ಅರ್ಥವಿಲ್ಲ. ಯಾವುದು ಹಾನಿಕಾರಕವೋ ಅದನ್ನು ಕಾನೂನು ರೀತ್ಯ ಮಾಡಿದರೂ ಹಾನಿಕಾರಕವೇ ಕಾನೂನು ಬಾಹಿರವಾಗಿ ಮಾಡಿದರೂ ಹಾನಿಕಾರಕವೇ ಎಂಬುದನ್ನು ಒಪ್ಪುತ್ತೀರಾದರೆ ಕೇವಲ ಕಾನೂನು ಬಾಹಿರವಾಗಿ ಮಾಡಿದ ಎಂಬ ಕಾರಣಕ್ಕೇ ಒಬ್ಬನನ್ನು ಶಿಕ್ಷಿಸುವುದು ಮಹತ್ಕಾರ್ಯವಲ್ಲ. ಹಾಗಾಗಿ ಶಿಕ್ಷಿಸದೇ ಬಿಟ್ಟುಬಿಟ್ಟರೂ ಅದು ಗುರುತರವಾದ ತಪ್ಪಲ್ಲ ಎನ್ನುವ ಪ್ರಮೇಯ ಈ ಕೊಲೆ ಮತ್ತು ಅಫೀಮಿನ ದಂಧೆಯಲ್ಲಿ ನಾಣನನ್ನು ಸಿಕ್ಕಿಸಲು ನೇಮಕಗೊಂಡ ಪತ್ತೇದಾರ, ಆಧುನಿಕ ದ್ವಾರಕಾಧೀಶ ಉರುಫ್ ಕಲಿಯುಗ ಕೃಷ್ಣ ಡೆರಿಕ್ ಡಿಸೋಜನದು. ಇಂಥ ತರ್ಕ ನಾಣನನ್ನು ಕಾನೂನು ಬದ್ಧಗೊಳಿಸುವುದು (ಅಕ್ರಮ ಸಕ್ರಮದೋಪಾದಿಯಲ್ಲಿ!) ಅಸ್ತಿತ್ವವಾದಿಯ ಆಸ್ತಿಕತನವನ್ನೂ, ಅಸ್ತಿತ್ವವಾದಿಯ ದ್ವಂದ್ವದಿಂದ ಅವನನ್ನು ಬಚಾವಾಗಿಸಬಲ್ಲ ಸರಳ ಆರೋಗ್ಯಕರ ಮಾರ್ಗ ಭಕ್ತಿಜನ್ಯ ಶರಣಾಗತಿ ಎನ್ನುವ ತತ್ವವನ್ನೂ ತಾರ್ಕಿಕವಾಗಿ ಸಂಬದ್ಧಗೊಳಿಸುವುದಕ್ಕೆ. ಆದರೂ ಇದು ಅಂಥ ಒಂದು ಅಜೆಂಡಾಕ್ಕಾಗಿಯೇ ನಿಯಂತ್ರಿಸಲ್ಪಟ್ಟ ಕಥಾನಕವೆಂದು ತಿಳಿಯಬೇಕಾಗಿಲ್ಲ. ಅದು ಕೊಂಚ ಉದ್ಧಟತನದ ತೀರ್ಮಾನ ಕೂಡ ಆದೀತು. ಒಂದು ತರ್ಕ, ಒಂದು ನಿಯಮ, ಒಂದು ತತ್ವ ಬದುಕಿನ ಸೂಕ್ಷ್ಮ ಅವಗಾಹನೆಯಿಂದ ಹುಟ್ಟುತ್ತದೆಯೇ ಹೊರತು ಬದುಕು ಯಾವುದೇ ತತ್ವದ ಹಂಗಿನಲ್ಲೋ ನಿಯಂತ್ರಣದಲ್ಲೋ ಇರುವುದಿಲ್ಲ ಎನ್ನುವುದನ್ನು ಅರಿತವರಿಗೆ ಈ ಸಮಸ್ಯೆ ಕಾಡುವುದಿಲ್ಲ.

ನಾಣನ ಅರ್ಧನಾರೀ ಪಾತ್ರಗಳು, ನಾಣನಾಗಿ, ನಟನಾರಾಯಣಿಯಾಗಿ ಮತ್ತು ಚಮೇಲಿಯಾಗಿ ಅವು ನೀಡುವ ಒಳನೋಟಗಳು; ಬ್ರಹನ್ನಳೆ-ದ್ವಾರಕಾಧೀಶರ ರೂಪಕ; ವ್ಯಕ್ತಿತ್ವದ ಸೀಳು ಮತ್ತು ಮನಸ್ಸಿನಲ್ಲಿ ಹುಟ್ಟುವ ಅಧಃಪತನದ ಭಯ, ಪಾಪಭೀತಿ, ಆತ್ಮನಿರೀಕ್ಷಣೆಯ ತಲ್ಲಣ ಇವುಗಳಿಗೆ ಭಕ್ತಿಜನ್ಯ ಶರಣಾಗತಿಯಲ್ಲದೆ ಅನ್ಯ ಚಿಕಿತ್ಸೆಯಿಲ್ಲ ಎಂಬ ತತ್ವದ ಸೂಕ್ಷ್ಮ ಚಿತ್ರಣ ಕಾದಂಬರಿಯ ಹೈಲೈಟ್.

ನಾಟಕವಾಗಿ ಇದನ್ನು ರಂಗಕ್ಕೆ ತರಬಹುದೆಂಬ ಪರಿಕಲ್ಪನೆಯೇ ಒಂದು ಸವಾಲಿನದು. ಇನ್ನು ರಂಗಕೃತಿಯಾಗಿ, ಒಂದು ಟೆಕ್ಸ್ಟ್ ರಚಿಸಿಕೊಳ್ಳುವಲ್ಲಿ ನಟರಾಜ ಹೊನ್ನವಳ್ಳಿ ತೋರಿಸಿರುವ ಜಾಣ್ಮೆ ಮತ್ತು ಕೌಶಲ್ಯ ತುಂಬ ಔಚಿತ್ಯಪೂರ್ಣವಾಗಿದೆ. ಅನೇಕ ಕಡೆ ಹೊನ್ನವಳ್ಳಿಯವರು ಮರುಸಂಕಲನ ಮಾಡಿರುವ ರೀತಿ ಮತ್ತು ಹಾಗೆ ಮಾಡಿ ಕಾದಂಬರಿಯ ಅಂಗಾಂಗಗಳನ್ನು ಸ್ವರೂಪ ಕೆಡಿಸದೇ ಮರುಜೋಡಿಸಿಕೊಟ್ಟ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ. ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ, ರಂಗ ಚಲನೆ, ಸಂಗೀತ, ಧ್ವನಿಯ ಯಥೋಚಿತ ಬಳಕೆಯ ವಿಧಾನಗಳು, ಆಂಗಿಕ ಭಾಷೆ ಎಲ್ಲದರಲ್ಲೂ ನೀನಾಸಂ ಕಲಾವಿದರು ಪಳಗಿದವರೇ, ನಿರಂತರ ಪ್ರಯೋಗಶೀಲರೇ. ಅವುಗಳ ಕುರಿತು ಹೊಸದಾಗಿ ಹೇಳುವುದಕ್ಕೇನೂ ಇಲ್ಲ. ಆದರೆ ಈಚೆಗೆ ನೀನಾಸಂ ಕೈಗೆತ್ತಿಕೊಳ್ಳುತ್ತಿರುವ ರಚನೆಗಳೇ ಪ್ರೇಕ್ಷಕರನ್ನು ರಂಜಿಸುತ್ತ ಅರಳಿಸುವ ಕಸು ಹೊಂದಿಲ್ಲದೇ ಇರುವುದು ಗಮನಾರ್ಹ ಅಪಾಯವಾಗಿ ಕಾಣಿಸುತ್ತಿದೆ. ನೀನಾಸಂ ರಂಗಕ್ಕೆ ತಂದ ಹಿಂದಿನ ನಾಟಕಗಳನ್ನು ಗಮನಿಸಿದರೆ ಅವು ಕಣ್ಣು ಮನ ರಂಜಿಸುತ್ತಲೇ ಪ್ರೇಕ್ಷಕನನ್ನು ಹೊಸದೇ ಆದ ಒಂದು ಅರಿವಿನ ಹೆಬ್ಬಾಗಿಲಲ್ಲಿ ನಿಲ್ಲಿಸುವಂತಿರುತ್ತಿದ್ದವು. ನಾಟಕ ನೋಡಿ ಮನೆಗೆ ಬಂದ ನಾವು ನಾವಾಗಿರುತ್ತಿರಲಿಲ್ಲ. ತಿಂಗಳುಗಳ ಕಾಲ ಆ ನಾಟಕಗಳು ನಮ್ಮ ಅಂತಃಸ್ಸತ್ವವನ್ನು ಕದಡುತ್ತಿದ್ದವು, ಕಾಡುತ್ತಿದ್ದವು. ಈಗ ಹಾಗೇಕೆ ಆಗುತ್ತಿಲ್ಲವೋ ಅನಿಸುತ್ತದೆ. ಇದಕ್ಕೆ ನೀನಾಸಂ ಕಾರಣವೋ ನಮ್ಮ ಮನಸ್ಥಿತಿಯೇ ಹಾಗೆ ಬದಲಾಗಿದೆಯೋ ತಿಳಿಯುತ್ತಿಲ್ಲ.

No comments: